Thursday, October 31, 2024

ವಿವಾಹೋತ್ತರದಲ್ಲಿ ಪತಿ ಮತ್ತು ಸರ್ಕಾರಕ್ಕೆ ನಿಷ್ಠಳಾಗಿ ಹೆಣ್ಣು ಬದುಕಬೇಕೆ ?

 


ಜನಸಂಖ್ಯೆ ಅಸಮತೋಲನಕ್ಕೆ ಹೆಣ್ಣಿನ ಮೇಲೆ ಸರ್ಕಾರದ ಬಲವಂತದ ಕ್ರಮ ಸಲ್ಲದು !  

ಎಷ್ಟು ಮಕ್ಕಳನ್ನು ಹೊಂದಬೇಕು ಎಂಬ ತೀರಾ ಖಾಸಗಿ ಸ್ವಾತಂತ್ರ್ಯವನ್ನು ದಕ್ಷಿಣ ಭಾರತದ ಎರಡು ರಾಜ್ಯ ಸರ್ಕಾರಗಳು ಕಿತ್ತುಕೊಳ್ಳುವುದಕ್ಕೆ ಮುಂದಾಗಿವೆಯೇ ಎಂಬ ಪ್ರಶ್ನೆ ಎದ್ದಿರುವುದು ಈ ದೇಶದ ದೊಡ್ಡ  ದುರಂತ. ಹೌದು, ತಮ್ಮ ರಾಜ್ಯದ ಜನರಿಗೆ ಹೆಚ್ಚು ಮಕ್ಕಳನ್ನು ಹೊಂದುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕೆ ಸ್ಟ್ಯಾಲಿನ್‌ ಕರೆ ನೀಡಿರುವುದು ದೇಶದಾದ್ಯಂತ ಹಲವು ಆಯಾಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬ ತೀರಾ ಸಾಮಾನ್ಯ ಒಂದು ಆತಂಕ ದಿನೇದಿನೆ ಹೆಚ್ಚಳವಾಗುತ್ತಿದ್ದರೆ, ರಾಜಕೀಯದ ಪ್ರಾತಿನಿಧ್ಯಕ್ಕಾಗಿ ಜನಸಂಖ್ಯೆ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ತಮ್ಮ ರಾಜ್ಯದ ಜನರಿಗೆ ಹೆಚ್ಚು ಮಕ್ಕಳನ್ನು ಹೊಂದುವಂತೆ ಕರೆ ನೀಡಿರುವುದು ʼಹಿಂದಿ ಹೇರಿಕೆʼಗಿಂತಲೂ ಹೆಚ್ಚು ಘೋರವಾಗಿದೆ. ಒಬ್ಬ ಮಹಿಳೆಯ ಮೇಲೆ ಆಗುವ ಪರಿಣಾಮದ ಬಗ್ಗೆ ಈ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಊಹಿಸಿರಲಿಕ್ಕಿಲ್ಲ. ಎಷ್ಟು ಮಕ್ಕಳನ್ನು ಮತ್ತು ಯಾವ ಸಮಯದಲ್ಲಿ ಮಕ್ಕಳನ್ನು ಹೊಂದಬೇಕು ಎಂಬ ಒಂದು ದಾಂಪತ್ಯದ ಅಥವಾ ಕೌಟುಂಬಿಕ ಸಂಸಾರದ ಖಾಸಗಿ ಆಯ್ಕೆಗೆ ಈ ರೀತಿಯ ಬಲವಂತಗಳು ನಿಜಕ್ಕೂ ವ್ಯತಿರಿಕ್ತವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ.

ಮದುವೆಯ ಬಳಿಕ ಹೆಣ್ಣು ಹೊರುವ ಜವಾಬ್ದಾರಿಗಳು ಗರ್ಭಿಣಿಯಾಗುವುದು, ಬಾಣಂತಿತನ, ಮಕ್ಕಳ ಪಾಲನೆ-ಪೋಷಣೆ, ಮಾನಸಿಕ, ಬೌದ್ದಿಕ ಮತ್ತು ಶಾರೀರಿಕ ಶಕ್ತಿ ಹೆಣ್ಣುಮಕ್ಕಳಲ್ಲಿ ಎಷ್ಟಂತ ಇರುತ್ತದೆ? ಹಾಗಿರುವಾಗ ಅವರ ಮೇಲೆ ಸಾಮಾಜಿಕ ಒತ್ತಾಯವನ್ನು ಹೇರುವಂತಹ ಈ ನೀತಿಯು ಬಹಳ ಅಶಾಸ್ತ್ರೀಯ ಮತ್ತು ಅಮಾನುಷವಾದುದಾಗಿದೆ ಎನ್ನುವುದೇ ಬಹಳ ಸೂಕ್ತವೆನ್ನಿಸುತ್ತದೆ. ಇಂತಹ ಒಂದು ಬಲವಂತದ ಹೇರಿಕೆ ಹೆಣ್ಣಿನ ಮೇಲಾಗುವ ಪರಿಣಾಮವನ್ನು ಹೇಳಿದವರು ಮತ್ತು ಅದೇ ಅಭಿಪ್ರಾಯವನ್ನು ತಮ್ಮೊಳಗೆ ಇರಿಸಿಕೊಂಡವರು ಅರ್ಥೈಸಿಕೊಳ್ಳಬೇಕಿರುವ ತುರ್ತಿದೆ. ʼಹೆಣ್ಣುʼ ಮಕ್ಕಳನ್ನು ಹೆರುವ ಯಂತ್ರವಲ್ಲ. ಸ್ತ್ರೀಯರ ಲೈಂಗಿಕ ಸಂಬಂಧಿ ವಿಷಯಗಳಲ್ಲಿ ಅವರ ಅಡಚಣೆಗಳ ಬಗ್ಗೆ ಏನೂ ಒಂದಿನಿತೂ ತಿಳಿಯದೇ ಮಾತಾಡಿದ ಹಾಗೆ ಇಬ್ಬರೂ ಮುಖ್ಯಮಂತ್ರಿಗಳು ಹೇಳಿರುವುದು ತೀರಾ ಅಸಹ್ಯವೇ ಸರಿ. ಇದೊಂದು ರೀತಿಯಲ್ಲಿ ಹೆಣ್ಣಿನ ಮೇಲೆ ಆಗುತ್ತಿರುವ ಸಾಮಾಜಿಕ ಪೀಡನೆ ಎಂದರೆ ತಪ್ಪಲ್ಲ. ಈ ಹಿಂದೆ ಹೆಣ್ಣಿನ ವಿಷಯವಾಗಿ ʼವಿವಾಹಪೂರ್ವದಲ್ಲಿ ಕೌಮಾರ್ಯ ಬಂಧನ, ವಿವಾಹೋತ್ತರದಲ್ಲಿ ಪತಿ ನಿಷ್ಠಳಾಗಿʼ ಹೆಣ್ಣು ಬದುಕಬೇಕು ಎಂಬ ಮಾತಿತ್ತು. ಈಗ ಹೆಣ್ಣು ಸರ್ಕಾರಕ್ಕೆ ನಿಷ್ಠಳಾಗಿ ಬದುಕಬೇಕೆ ? ಸರ್ಕಾರ ಹೆಚ್ಚು ಮಕ್ಕಳನ್ನು ಹೊಂದುವಂತೆ ಆದೇಶಿಸಿದಾಗ ಹೆಣ್ಣು ಅದಕ್ಕೆ ತಯಾರಾಗುವುದು ಮತ್ತು ಜನಸಂಖ್ಯೆ ಹೆಚ್ಚಾದಾಗ ಒಂದೇ ಮಗು ಹೊಂದುವಂತೆ ಹೇರುವ ನೀತಿಗೆ ಬದ್ಧರಾಗಿ ಬಾಳಬೇಕೆ ?

ಬಲಾತ್ಕಾರ, ಅತ್ಯಾಚಾರ, ಆತ್ಮಹತ್ಯೆಗೆ ಒಳಗಾಗುವಂತಹ ಪರಿಸ್ಥಿತಿಜನ್ಯ ಸಂಕಷ್ಟಗಳಲ್ಲಿ ಸಿಲುಕಿಕೊಂಡಿರುವ ಸಾವಿರಾರು ಸ್ತ್ರೀಯರು ನಮ್ಮ ನಡುವೆ ಕಾಣಸಿಗುತ್ತಾರೆ. ಅದರೊಟ್ಟಿಗೆ ಹೆಚ್ಚು ಮಕ್ಕಳನ್ನು ಹೊಂದುವಂತೆ ಹೇರುವ ಮನಸ್ಥಿತಿಯೂ ಕೂಡ ಹೆಣ್ಣಿನ ಮೇಲೆ ಆಗುತ್ತಿರುವ ಸಾಮಾಜಿಕ ಸಾಮೂಹಿಕ ಅತ್ಯಾಚಾರವೇ ಆಗಿದೆ. ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಇದು ಸೂಕ್ತವಲ್ಲ. ಗರ್ಭಿಣಿಯಾಗುವುದು, ಮಗುವಿಗೆ ಜನ್ಮನೀಡುವುದು, ಮಕ್ಕಳನ್ನು ಪೋಷಿಸುವುದರಲ್ಲಿಯೇ ಹೆಣ್ಣು ಜೀವನಪೂರ್ತಿ ಸಿಲುಕಿಕೊಂಡೇ  ಇರುವ ಹಾಗೆ ಬದುಕುವಂತೆ ನೂಕುವ ಮನಸ್ಥಿತಿ ಎಂದೇ ಕಾಣಿಸುತ್ತದೆ. ಈ ನಡುವೆ ಶಾರೀರಿಕ ಹಿಂಸೆ ಮತ್ತು ಮಾನಸಿಕ ಪೀಡನೆಗೆ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಸಾಮಾನ್ಯ ಸಂಗತಿ. ವಂಶ ಅಥವಾ ಕುಲದ ಸಾಮಾಜಿಕ ಪ್ರತಿಷ್ಠೆ, ಕುಟುಂಬ, ತಾಯಿ ತಂದೆಯರ ಗೌರವವನ್ನು, ವೈಯಕ್ತಿಕ ಗೌರವ ಕಾಪಾಡಿಕೊಳ್ಳುವುದಕ್ಕಾಗಿ ಅನೇಕ ಸ್ತ್ರೀಯರು ಎಲ್ಲವನ್ನು ಸಹಿಸಿಕೊಳ್ಳುತ್ತಾ ಬಂದಿರುತ್ತಾರೆ. ಹಾಗೆಂದ ಮಾತ್ರಕ್ಕೆ ಆಕೆ ಅಸಹನೀಯ ನೋವಿಲ್ಲ ಎಂದಲ್ಲ. ಆಕೆಯಲ್ಲಿಯೂ ಅನೇಕ ನುಂಗಲಾರದ ನೋವಿದೆ. ಒಂದು ವೇಳೆ ಇಂತಹ ಮನಸ್ಥಿತಿ ರಾಜಕೀಯ, ಸಾಮಾಜಿಕ ಸಮತೋಲನ ಎಂಬ ನೆಪದಲ್ಲಿ ಜಾರಿಗೆ ಬಂದರೇ, ಹಸಿ ಗಾಯದ ಮೇಲೆ ಉಪ್ಪುದುರಿಸಿದರೇ ಅಥವಾ ಖಾರದ ಪುಡಿ ಉದುರಿಸಿದರೇ ಹೇಗಾಗುತ್ತದೋ ಹಾಗೆ ಆಗುವ ನೋವಿದು ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಜನಸಂಖ್ಯೆ ಅಸಮತೋಲಪರಿಹರಿಸಲು ಇದು ಮಾರ್ಗವೇ ? 

ದಕ್ಷಿಣ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಿಶುಗಳ ಜನನ ದರ ಕುಸಿಯುತ್ತಿದೆ ಎಂಬ ಅಭಿಪ್ರಾಯವಿದೆ. ಈ ಸಂಬಂಧಿಸಿದಂತೆ ಕೆಲವು ವರ್ಷಗಳ ಹಿಂದೆಯೇ ಸಂಶೋಧಕರು ಎಚ್ಚರಿಕೆಯ ಗಂಟೆ ಭಾರಿಸಿದ್ದಾರೆ. ಇದು ಜನಸಂಖ್ಯೆ, ಆರ್ಥಿಕತೆ, ಸಾಮಾಜಿಕ ಸ್ಥಿತಿಗತಿ ಮತ್ತು ರಾಜಕೀಯ ಪ್ರಾತಿನಿಧ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎನ್ನುವ ಅಭಿಪ್ರಾಯವೂ ಈ ನಡುವೆ ಇದೆ. ಇದೇ ಕಾರಣಕ್ಕೆ ಹೆಚ್ಚು ಮಕ್ಕಳನ್ನು ಹೊಂದಿ ಎನ್ನುವ ಒತ್ತಡವನ್ನು ಹೇರುವುದು ಎಷ್ಟು ಸರಿ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ.

ರಾಜಕೀಯ ಮತ್ತು ಚುನಾವಣೆಯ ಕಾರಣಕ್ಕೆ ನಮ್ಮ ದೇಶದಲ್ಲಿ ಹೆಣ್ಣು ಅನೇಕ ಸಂದರ್ಭಗಳಲ್ಲಿ ದುರ್ಬಳಕೆಗೆ ಒಳಗಾಗಿದ್ದಾರೆ. ಎಲ್ಲಿಯವರೆಗೆ ಅಂದರೇ, ಒಂದು ಪಕ್ಷ ಅಧಿಕಾರಕ್ಕೆ ಬಂದರೇ, ಹೆಣ್ಣಿನ ಮಂಗಳಸೂತ್ರವನ್ನು ಕಿತ್ತು ಮುಸ್ಲೀಮರಿಗೆ ಬಲವಂತವಾಗಿ ನೀಡಲಾಗುತ್ತದೆ ಎಂದು ತೀರಾ ಹೇಸಿಗೆ ಎನ್ನುವ ಹಾಗೆ ಹೇಳುವುದರಿಂದ ಹಿಡಿದು, ಹೆಚ್ಚು ಮಕ್ಕಳನ್ನು ಹೊಂದುವಂತೆ ಬಲವಂತ ಮಾಡುವವರೆಗೆ ಹೆಣ್ಣನ್ನು ಈ ದೇಶದ ರಾಜಕೀಯ ಬಳಸಿಕೊಂಡಿದೆ ಎಂದರೇ ತಪ್ಪಿಲ್ಲ. ಇಂತಹ ಮನಸ್ಥಿತಿಯೇ ಇಲ್ಲಿ ಹೆಣ್ಣೊಬ್ಬಳ ಜೀವನಕ್ಕೆ ಮಾರಕವಾಗಿ ಕಾಡುತ್ತಿದೆ. ಭಯದ ವಾತಾವರಣವನ್ನು ಸೃಷ್ಟಿ ಮಾಡುತ್ತಿದೆ.

ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಜನನ ದರದಲ್ಲಿ ರಾಷ್ಟ್ರೀಯ ಸರಾಸರಿ ಶೇ. 2.1ಕ್ಕಿಂತ ಕಡಿಮೆ ದರ ಹೊಂದಿದೆ. ತಮಿಳುನಾಡು ಶೇ. 1.4 ಕ್ಕಿಂತ ಕಡಿಮೆ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಲ್ಲಿ ಕ್ರಮವಾಗಿ 1.5 ಮತ್ತು ಕರ್ನಾಟಕದಲ್ಲಿ 1.6 ಇದೆ. ಜನನ ದರ ಕಡಿಮೆಯಾದ ಪರಿಣಾಮದಿಂದಾಗಿ ಸಂಸತ್ತಿನಲ್ಲಿ ಈ ರಾಜ್ಯಗಳ ಜನಸಂಖ್ಯೆಶಾಸ್ತ್ರ, ಆರ್ಥಿಕತೆ ಮತ್ತು ರಾಜಕೀಯ ಪ್ರಾತಿನಿಧ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಲಿದೆ ಎಂಬ ವಾದವಿದೆ.  

ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಹೆರುವ ಮಕ್ಕಳ ಸಂಖ್ಯೆಯನ್ನು ಫಲವಂತಿಕೆ(ಟಿಎಫ್‍ಆರ್) ಎಂದು ಹೇಳಲಾಗುತ್ತದೆ. ಕೇಂದ್ರ ಸರ್ಕಾರ ಫಲವಂತಿಕೆಯ ಮಟ್ಟವನ್ನು 2.1ಕ್ಕೆ ನಿಗದಿಪಡಿಸಿದೆ. ಏಕೆಂದರೆ ಇದು ಜನನ ಮತ್ತು ಮರಣಗಳ ನಡುವೆ ಸಮತೋಲನವನ್ನು ಕಾಪಾಡಲು ಈ ಜನಸಂಖ್ಯೆಯ ಸರಾಸರಿ ಅಗತ್ಯವಿದೆ. ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸರಾಸರಿ ಹೆರುವ ಮಕ್ಕಳ ಸಂಖ್ಯೆಯನ್ನು ಒಟ್ಟು ಫಲವಂತಿಕೆಯ ದರವನ್ನು ಒಂದು ಸರ್ಕಾರ ನಿರ್ಧರಿಸುವುದು ಕೂಡ ವ್ಯತಿರಿಕ್ತ ಪರಿಣಾಮ ಬೀರುವುದೆ ಆಗಿದೆ. ಚೀನಾ ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾದಾಗ, ಚೀನಾ ʼಕುಟುಂಬ/ಸಂಸಾರಕ್ಕೆ ಒಂದೇ ಮಗು ನೀತಿʼಯನ್ನು ಜಾರಿಗೆ ತಂದಿತ್ತು. ಆದರೇ, ಕಾಲಾಂತರದಲ್ಲಿ ಆ ಬಲವಂತದ ನೀತಿಯೂ ಹೆಣ್ಣಿನ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಿತ್ತು.   

ಇನ್ನು, ಜನಸಂಖ್ಯಾ ಸ್ಫೋಟ ತಡೆಗೆ ಭಾರತದಲ್ಲಿ ಕುಟುಂಬ ಕಲ್ಯಾಣ ಯೋಜನೆ 1952ರಿಂದಲೂ ಜಾರಿಯಲ್ಲಿದೆ. ಈ ನಡುವೆ, 2016ರಲ್ಲಿ ಕೇಂದ್ರ ಸರ್ಕಾರ ಮಿಷನ್‌ ಪರಿವಾರ್‌ ವಿಕಾಸ್‌ ಎಂಬ ಯೋಜನೆ ರೂಪಿಸಿ, ಗರ್ಭನಿರೋಧಕ ಹಾಗೂ ಕುಟುಂಬ ಕಲ್ಯಾಣ ಸೇವೆಗಳು ಹೆಚ್ಚುಹೆಚ್ಚು ಲಭ್ಯವಾಗುವಂತೆ ನೋಡಿಕೊಂಡಿತು. ಹೆಚ್ಚು ಫಲವಂತಿಕೆಯ ದರ ಹೊಂದಿರುವ ಬಿಹಾರ, ಉತ್ತರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಜಾರ್ಖಂಡ್‌ಗಳಿಗೆ ಒತ್ತು ನೀಡಲಾಯಿತು. ಎಲ್ಲ ಹಂತದಲ್ಲೂ ಗರ್ಭನಿರೋಧಕ ಸಿಗುವಂತೆ ಮಾಡಲಾಯಿತು. ಸರ್ಕಾರದ ಯೋಚನೆಯ ಪ್ರಕಾರ ಫಲ ನೀಡಿತ್ತು. ಆದರೇ, ಇದರ ದೂರಗಾಮಿ ಪರಿಣಾಮಗಳ ಬಗ್ಗೆ ಯೋಚಿಸಿತ್ತೇ ?

ದಕ್ಷಿಣ ರಾಜ್ಯಗಳಲ್ಲಿ ಕಂಡಿರುವ ಜನನ ದರ ಕುಸಿತದ ಕಾರಣದಿಂದ. ದೇಶದ ಜನಸಂಖ್ಯೆಯ ಅಸಮತೋಲನ ದಕ್ಷಿಣ ರಾಜ್ಯಗಳ ಮೇಲೆ ರಾಜಕೀಯವಾಗಿ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಮಕ್ಕಳನ್ನು ಜಾಸ್ತಿ ಹೊಂದಿ ಎನ್ನುವುದು ಪರಿಹಾರವೇ ? ಈ ಅಸಮತೋಲನದ ಕಾರಣದಿಂದಾಗುವ ರಾಜಕೀಯ ಸಮಸ್ಯೆಗಳಿಗೆ ಬೇರೆ ಮಾರ್ಗವನ್ನೇ ಕಂಡುಕೊಳ್ಳಬೇಕೆ ಹೊರತು ಹೆಚ್ಚು ಮಕ್ಕಳನ್ನು ಹೊಂದಿ ಎನ್ನುವುದು ಮತ್ತು ಜನಸಂಖ್ಯೆ  ಹೆಚ್ಚಳವಾದಾಗ ಗರ್ಭ ನಿರೋಧಕ ನೀತಿಯನ್ನು ಬಲವಂತವಾಗಿ ತರುವುದು ಕೂಡ ಹೆಣ್ಣಿನ ಮೇಲೆ ಕೆಟ್ಟ ಪರಿಣಾಮವೇ ಆಗಿದೆ. ಯೋಚನೆ ಮಾಡಿ.

-ಶ್ರೀರಾಜ್‌ ವಕ್ವಾಡಿ.

Thursday, October 24, 2024

ಸೌಜನ್ಯ ಸಾರ್ವಜನಿಕ ಬದುಕಿಗೆ ಬೇಕಾದ ಜರೂರು !

ಬಿಗ್‌ ಬಾಸ್‌ ಎಂಬ ಪರಿಕಲ್ಪನೆ ಮತ್ತು ಸುದೀಪ್‌ ಎಂಬ ಬೆಳ್ಳಿ ಬೆಳಕು

ಸಾಮಾಜಿಕ ಜಾಲತಾಣಗಳ ನಾಗಾಲೋಟದ ಪ್ರಗತಿ ನಮ್ಮ ನಿಮ್ಮನ್ನು ದಿನನಿತ್ಯ ಅಚ್ಚರಿಗೊಳಿಸುತ್ತಿದೆ. ಇಲ್ಲಿನ ವೈಭವವೇ ಸಾಧನೆ ಎಂದು ಒಪ್ಪುವ ಮನಸ್ಥಿತಿಗೆ ಜಗತ್ತು ಬಂದು ತಲುಪಿದೆ. ಬಹುಶಃ ಮನರಂಜನೆ ಎನ್ನುವುದು ವ್ಯಸನ ಆಗುವಷ್ಟರ ಮಟ್ಟಿಗೆ ತಂದಿರಿಸಿದ ದೊಡ್ಡ ಶ್ರೇಯ ಬಹುಶಃ ಸಲ್ಲಬೇಕಾಗಿರುವುದು ಸಾಮಾಜಿಕ ಜಾಲತಾಣಗಳಿಗೆ ಎಂದು ಅನ್ನಿಸುತ್ತದೆ. ಇದರಾಚೆಗೂ ಜಗತ್ತಿದೆ, ಬದುಕು ಉಳಿದಿದೆಯೇ ಎಂಬ ಪ್ರಶ್ನೆಯನ್ನು ಬಲವಂತವಾಗಿ ನಮ್ಮನ್ನು ನಾವು ಅಥವಾ ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ ಮತ್ತು ಉತ್ತರವನ್ನೂ ಹುಡುಕಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಜಗತ್ತು ನಮ್ಮ ನಿಮ್ಮನ್ನು ತಂದಿರಿಸಿದೆ ಎಂದು ಹೇಳಿದರೇ ಬಹುಶಃ ತಪ್ಪಾಗಲಿಕ್ಕಿಲ್ಲ. ಈ ನಡುವೆ ಮನುಷ್ಯ ನಿತ್ಯ ಸಂಕುಚಿತಗೊಳ್ಳುತ್ತಾ ಸಾಗುತ್ತಿದ್ದಾನೆ ಎನ್ನುವುದಕ್ಕೆ ಎಲ್ಲಿ ಹೇಗೆ ವರ್ತಿಸಬೇಕೆಂಬುವುದರಲ್ಲಿ ಕೊರತೆ ಕಾಣುತ್ತಿರುವುದೇ ದೊಡ್ಡ ಸಾಕ್ಷಿಯಾಗಿ ಮುಂದಿದೆ.

ಇಂತಹುದೇ ಹಲವು ಕೌತುಕದ ಆಲೋಚನೆ, ಬದುಕು, ವೇಗ, ಬದಲಾದ ಸಾಧನೆಯ ಮಾನ್ಯತೆಗಳ ಸುತ್ತ ಯೋಚನೆಗೆ ಹಚ್ಚುವ ಚಿಂತನೆಯೊಂದು ನಮ್ಮ ನಡುವೆ ಉಳಿದುಕೊಂಡಿದೆ ಎನ್ನುವುದೇ ಸಮಾಧಾನಕರ.

ಗೆಲ್ಲುವ ತುರ್ತಿನಲ್ಲಿ ಮತ್ತು ಗಳಿಸುವ ಹಪಾಹಪಿಯಲ್ಲಿ ಜ್ಞಾನದ ವಿಸ್ತಾರಕ್ಕೆ ಅಡಿಯಾಗುವ ನಮ್ಮೊಳಗಿನ ಅರಸುವಿಕೆಯ ಗುಣವನ್ನು ಬಲವಂತವಾಗಿ ಅದುಮುತ್ತೇವೋ ಅಲ್ಲಿಂದಲೇ ಮನುಷ್ಯ ಬೌದ್ಧಿಕವಾಗಿ ವಿಕಾರಗೊಳ್ಳುವುದಕ್ಕೆ ಕಾರಣವಾಗುತ್ತದೆ. ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ನಮ್ಮೊಳಗೆಯೇ ಇದೆಯಾದರೂ ಅದನ್ನು ಕಂಡುಕೊಳ್ಳುವುದಕ್ಕೂ ತಯಾರಿಲ್ಲ. ಇದೇ ನಿಜದ ದಾರಿ ಎಂದು ಹೇಳುವ ನಮ್ಮತನವನ್ನೇ ಅಲ್ಲಗಳೆಯುವ ಹೊಸ ದುರಂತವನ್ನು ನಾವು ನಾವಾಗಿಯೇ ಎದುರು ಹಾಕಿಕೊಂಡಿದ್ದೇವೆ. ಇಲ್ಲಿಯೇ ಮಾತು, ನಡೆ, ವ್ಯಕ್ತಿತ್ವ, ಬದುಕು ಸೋಲುತ್ತಿರುವುದು ಎಂದರೆ ತಪ್ಪಿಲ್ಲ‌. ಒಂದು ಬದುಕಿನ ಪೂರ್ತಿ ಇರುವಿಕೆಗೆ ಒಂದು ಸಿದ್ಧ ಮಾದರಿ 'ಇದೇ ಸರಿಯಾದದ್ದು' ಎನ್ನುವುದು ಬಹುಶಃ ಇಲ್ಲವೇನೋ. ಆದರೇ, ಎಲ್ಲಿ ಹೇಗೆ ವರ್ತಿಸಬೇಕೆಂಬುವುದಕ್ಕೆ, ಎಲ್ಲಿ ಹೇಗೆ ಇರಬೇಕೆನ್ನುವುದಕ್ಕೆ, ಎಲ್ಲಿ ಹೇಗೆ ಮಾತಾಡಬೇಕೆಂಬುವುದಕ್ಕೆ ಬಹುಶಃ ಒಂದು ಸಿದ್ಧ ಮಾದರಿ ಇದೆ. ಜಗತ್ತು ಇದಕ್ಕೆ ಇನ್ನಷ್ಟು ನಿಖರವಾಗಿ 'ಸಾರ್ವಜನಿಕ ಬದುಕು' ಎಂದು ಹೇಳಿದೆ.  ಒಬ್ಬ ವ್ಯಕ್ತಿ ಸಾರ್ವಜನಿಕ ಬದುಕಿನ ಸಿದ್ಧ ಮಾದರಿಯನ್ನು ಮೀರಿದಾಗಲೇ ಭಿನ್ನಾಭಿಪ್ರಾಯ, ವೈಮನಸ್ಸು, ಆಕ್ರೋಶ, ಸಿಟ್ಟು, ಕೋಪ ಎಲ್ಲವೂ ನಮ್ಮೊಳಗೆ ಮೊಳಕೆ ಒಡೆಯುವುದಕ್ಕೆ ಕಾರಣವಾಗುತ್ತದೆ ಅಂತ ಹೇಳಬಹುದೇನೋ.

ನಾವು ನೀವು ಬಹಳ ಪ್ರಮುಖವಾಗಿ ಗಮನಿಸಬೇಕಾಗಿರುವುದು ಏನೆಂದರೆ, ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವದ ಹಿಡಿತದ ಕಾರಣದಿಂದಷ್ಟೇ ಬದುಕಿ ಉಳಿಯುವುದಲ್ಲ. ಅದರ ಹೊರತಾಗಿಯೂ ಕೂಡ ಬದುಕುತ್ತಾನೆ ಮತ್ತು ಉಳಿಯುತ್ತಾನೆ. ಅದು ಹೇಗೆ ಎನ್ನುವುದು ಎರಡನೇ ಹಂತದ ಚರ್ಚೆ ಎಂದು ಪರಿಗಣಿಸಲ್ಪಡುತ್ತದೆ ಇರಬೇಕು. ಒಬ್ಬ ವ್ಯಕ್ತಿ ಬೆಳೆಯುತ್ತಿರುವ  ವಾಸ್ತವತೆಯನ್ನು ಗಮನಿಸಿದರೆ ಜಗತ್ತು ಮನುಷ್ಯನ ಬೆಳವಣಿಗೆಗೆ ತಾಯಿ ಅಷ್ಟೇ ಆಗಿ ಉಳಿದಿಲ್ಲ ಎಂಬುವುದನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಇಲ್ಲಿ ಜಗತ್ತು ಕೋಟ್ಯಾಂತರ ವ್ಯಕ್ತಿತ್ವಗಳನ್ನು ಕೋಟ್ಯಾಂತರ ಥರಗಳಲ್ಲಿ ಇರಿಸಿಲ್ಲವೇ ? ಅಥವಾ ಅಹಿತವೆನ್ನಿಸಿದಾಗ ತೀರಾ ನಿಕೃಷ್ಟವಾಗಿ ಕೊನೆಗೊಳಿಸಿಲ್ಲವೆ ? ಇಷ್ಟಾಗಿಯೂ ಜಗತ್ತಿನ ಎಲ್ಲಾ ಕಡೆಗಳಲ್ಲಿ ಎಲ್ಲಾ ಥರದ ವ್ಯಕ್ತಿತ್ವಗಳು ಇವೆ ಎಂದಾದರೆ ಅದು ಜಗತ್ತನ್ನು ಕೋಟ್ಯಾಂತರ ವ್ಯಕ್ತಿತ್ವಗಳು ಅಥವಾ ಕೋಟ್ಯಾಂತರ ವ್ಯಕ್ತಿತ್ವಗಳು ಜಗತ್ತನ್ನು ಒಗ್ಗಿಸಿಕೊಂಡಿದ್ದೆಂದೇ ಅರ್ಥೈಸಿಕೊಳ್ಳಬೇಕಲ್ಲವೆ ? ಹಾಗೆಂದಾದಲ್ಲಿ ಜಗತ್ತಿನಲ್ಲಿ ಇರುವುದು ಎಲ್ಲವೂ ಭಿನ್ನವಾಗಿದೆ ಅಥವಾ ಅನನ್ಯವಾಗಿದೆ ಎಂದು ಅರಿಯಬೇಕು. ಹಾಗಾದಾಗ ಮಾತ್ರ ಸಾಧ್ಯವಾದಷ್ಟು ಮಟ್ಟಿಗಾದರೂ ಚೆನ್ನಾಗಿ ಬದುಕುವುದಕ್ಕೆ ಆಗಬಹುದು.

ಇಷ್ಟೆಲ್ಲಾ ಆದಮೇಲೆ, ಒಂದಿಷ್ಟು ವ್ಯಕ್ತಿತ್ವಗಳನ್ನು ಒಂದು 'ಬಿಗ್ ಬಾಸ್ ಮನೆ'ಯೊಳಗೆ ಕಳುಹಿಸಿ ಅಲ್ಲಿ ಒಂದಿಷ್ಟು ಟಾಸ್ಕ್‌, ಜನಪ್ರಿಯತೆಯ ಆಧಾರದಲ್ಲಿ ಗೆಲ್ಲುವ ವ್ಯಕ್ತಿತ್ವವನ್ನು ಪರಿಪೂರ್ಣ ವ್ಯಕ್ತಿತ್ವ ಎಂದು ಬಿಂಬಿಸುವ ಹಾಗೆ ಮಾಡುವ ಒಂದು ವೇದಿಕೆ ಸೃಷ್ಟಿಯಾಗುವಷ್ಟರ ಮಟ್ಟಿಗೆ ಜಗತ್ತು ಬೆಳೆದಿದೆ ಎಂದರೆ ನಿಜಕ್ಕೂ ಆಶ್ಚರ್ಯವೇ ಸರಿ. ಈ ಪರಿಕಲ್ಪನೆ, ಬಿಗ್‌ ಬಾಸ್‌ ಅಂತಹ ಕಾರ್ಯಕ್ರಮ ತನ್ನ ಸೀಸನ್ ನಲ್ಲಿ ವಯಸ್ಸಿನ ಗಡಿ ಇಲ್ಲದೆ ಇಡೀ ಸಮುದಾಯವನ್ನೇ ಆವರಿಸಿಕೊಳ್ಳುತ್ತದೆ. ಸಾರ್ವಜನಿಕ ಬದುಕು ಹೇಗಿರಬೇಕೆಂಬ ಪಾಠ ಈ ಪರಿಕಲ್ಪನೆಯ ಒಳಗೆ ಅವಿತಿದೆ ಎನ್ನುವುದು ಸತ್ಯ. ಆದರೇ, ಅದು ಎಷ್ಟು ಪರಿಣಾಮಕಾರಿಯಾಗಿ ತಲಪಿದೆ ಅಥವಾ ತಲುಪಬೇಕಿದೆ ಎನ್ನುವುದು ಬಹುಶಃ ಪ್ರಶ್ನೆಯಾಗಿ ಉಳಿದಿದೆ. ಈ ಪರಿಕಲ್ಪನೆ ಬೇರೆ ಯಾವುದೋ ಭಾಷೆಯ ಕಾರ್ಯಕ್ರಮದಿಂದ ಎರವಲು ಪಡೆದುಕೊಂಡಿದ್ದಾದರೂ, ಕನ್ನಡದಲ್ಲಿ ಭಿನ್ನವಾಗಿಯೇ ತಲುಪಿದೆ. ಮಾತು ಸೋತಾಗ, ವ್ಯಕ್ತಿತ್ವ ಸೋತಾಗ, ನಡೆ ಸೋತಾಗ ತಿದ್ದುವ ಕೆಲಸ ಮಾಡುವ, ಉತ್ತೇಜಿಸುವ ಈ ಪರಿಕಲ್ಪನೆ ಅನೇಕ ಆಯಾಮಗಳಲ್ಲಿ ಸಾಮಾಜಿಕವಾಗಿ ಚರ್ಚೆಯಾಗಿದೆ ಎನ್ನುವುದು ಕೂಡ ಸತ್ಯ.

ಜಗತ್ತಿನ ಪ್ರಜ್ಞೆಯನ್ನು ತುಂಬಿರುವ ಸಹನೆ, ಪ್ರೀತಿಯನ್ನೇ ನಾವು ದೂರ ಮಾಡಿಕೊಳ್ಳುತ್ತಿರುವಾಗ ಅಥವಾ ಒಂದು ವ್ಯಕ್ತಿತ್ವ ಅಹಂ ಭಾವದಿಂದಲೇ ಮೆರೆಯುತ್ತಿರುವಾಗ ಅಲ್ಲಲ್ಲಿ 'ಇಲ್ಲ ಹೀಗಲ್ಲ ಬದುಕು, ಬದುಕುವ ರೀತಿ ಬೇರೆಯೇ ಇದೆ' ಎಂದು ತಿದ್ದಿ ಮಹತ್ವವಾದದ್ದನ್ನೇ ತಿಳಿಹೇಳುವ ಪರಿಕಲ್ಪನೆ ಸರಿಯಾಗಿದೆ ಎಂದು ಗ್ರಹಿಸಿಕೊಳ್ಳಬಹುದು. ಇನ್ನು, ಈ ಬಿಗ್ ಬಾಸ್ ಎಂಬ ಪರಿಕಲ್ಪನೆಯೊಳಗೆ ಬಿಡುವ ವಿವಾದಿತ ವ್ಯಕ್ತಿತ್ವಗಳ ಬಗ್ಗೆ ಬಹಳ ದೊಡ್ಡ ಚರ್ಚೆ ಸಾಮಾಜಿಕ ವಲಯದಲ್ಲಿ ಆಗಿದೆ. ಅದಕ್ಕೆ ಆಯೋಜಕ ಸಂಸ್ಥೆ ತೆಗೆದುಕೊಂಡ ಸಮಜಾಯಿಷಿಯ ಬಗ್ಗೆಯೂ ಚರ್ಚೆಯಾಗಿದೆ. ಆದರೇ, ನಟ, ನಿರೂಪಕ ಸುದೀಪ್ ನಿರ್ವಹಿಸುವ ರೀತಿಯಲ್ಲೇ ಈ ಒಂದು ಪರಿಕಲ್ಪನೆ  ಜನಪ್ರಿಯವಾಗಿ ಬೆಳೆದಿದೆ.

ಕಳೆದ ಸೀಸನ್‌ ನಲ್ಲಿ ಹೆಣ್ಣು ಮತ್ತು ಬಳೆಯ ವಿಚಾರ ಸಾಮಾಜಿಕವಾಗಿ ವಿವಾದಕ್ಕೆ ಒಳಗಾದಾಗ ಸುದೀಪ್‌ ಬಳೆಗೆ ಕಿಚ್ಚನ ಚಪ್ಪಾಳೆ ನೀಡುವುದರ ಮೂಲಕ ಹೆಣ್ಣನ್ನು ನಿಕೃಷ್ಟವಾಗಿ ಕಾಣುವ ಮನೋಭಾವಕ್ಕೆ ಪಾಠ ಹೇಳುವ ಪ್ರಯತ್ನ ಮಾಡಿದ್ದರು. ಮರುಕ್ಷಣವೇ ಸುದೀಪ್‌ ಅವರೇ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಅದೇ ವಿಚಾರದಲ್ಲಿ ಕಡಿಮೆ ಮಾಡಿ ಮಾತಾಡಿದ್ದ ಪೋಸ್ಟ್‌ ವೈರಲ್‌ ಆಗಿತ್ತು. ಈ ಸೀಸನ್‌ ನಲ್ಲಿ ಕಳೆದ ವಾರ ನಡೆದ ವಾರದ ಕಥೆ ಕಿಚ್ಚನ ಜೊತೆಯಲ್ಲಿಯೂ ದೊಡ್ಡ ಮಟ್ಟದಲ್ಲಿ ಗದ್ದಲ ಎಬ್ಬಿಸಿದ್ದ ಹೆಣ್ಣು, ಗಂಡು ಸ್ಥಾನಮಾನ, ಮರ್ಯಾದೆ, ಘನತೆ, ಭಾಷಾ ಬಳಕೆಗಳ ಬಗ್ಗೆ ಸುದೀಪ್ ಸೂಕ್ತವಾದ ರೀತಿಯಲ್ಲಿ ತಿಳಿಹೇಳುವ ಪ್ರಯತ್ನ ಮಾಡಿದ್ದರು. ಬಹುಶಃ ಸುದೀಪ್‌ ಆ ನೆಲೆಯಲ್ಲಿ ವಿಮರ್ಶಿಸಿ ಪಾಠ ಹೇಳುವ ಕೆಲಸ ಮಾಡದೆ ಇದ್ದಿದ್ದರೆ ಪ್ರೇಕ್ಷಕ ವರ್ಗವೇ ತಿದ್ದುವ ಕೆಲಸ ಮಾಡುತ್ತಿತ್ತೇನೋ. ಹೀಗೆ ನಿರಂತರವಾಗಿ ಈ ಬಿಗ್‌ ಬಾಸ್‌ ಎನ್ನುವ ಪರಿಕಲ್ಪನೆಯು ಒಳಗಿರುವ ಹಾಗೂ ಹೊರಗಿರುವವರಿಗೂ ತಿದ್ದುವ ಕೆಲಸ ಮಾಡುತ್ತಲೇ ಬಂದಿದೆ.

ಈ ಪರಿಕಲ್ಪನೆಯನ್ನು ತಿದ್ದುವ ಕೆಲಸವೂ ಪ್ರೇಕ್ಷಕ ವರ್ಗ ಅಥವಾ ಸಾಮಾಜಿಕ ವರ್ಗದಿಂದಲೂ ಆಗಿದೆ ಎನ್ನುವುದಕ್ಕೆ ಬಹುಶಃ ಇದು ಅನೇಕ ಚರ್ಚೆಗಳ ನಡುವೆಯೂ ಅನನ್ಯವಾಗಿ ಉಳಿದುಕೊಂಡಿದೆ. ತೀರಾ ಏನೂ ಇಲ್ಲ ಎಂಬ ಅಭಿಪ್ರಾಯದ ಜೊತೆಗೆ, ಸುದೀಪ್ ವೀಕೆಂಡ್ ಅಲ್ಲಿ ಮಾಡುವ ಸಮನ್ವಯ ಸಾಮಾಜಿಕ ಬದುಕಿಗೆ ಬೇಕಾದ ತುರ್ತು ಆಪ್ತ ಸಮಾಲೋಚನೆ ಇದು ಎಂಬ ರೀತಿಯಲ್ಲಿಯೂ ಅಭಿಪ್ರಾಯ ವ್ಯಕ್ತವಾಗಿರುವುದು ವಿಶೇಷವೆ ಸರಿ.  

ಆದಾಗ್ಯೂ ಸಾರ್ವಜನಿಕ ಬದುಕಿನಲ್ಲಿ ಶಿಸ್ತು, ಒಪ್ಪುವ ಮನಸ್ಥಿತಿಯೇ ಇಲ್ಲದ ಈ ಕಾಲಘಟ್ಟದಲ್ಲಿ ಈ ಪರಿಕಲ್ಪನೆ ಇನ್ನಷ್ಟು ಪರಿಣಾಮಕಾರಿಯಾಗಿ ದಾರಿ ತೋರುವ ವೇದಿಕೆಯಾಗಿ ಬೆಳೆಯಬೇಕಿದೆ. ಬಹುಶಃ ಈ ಕಾರ್ಯಕ್ರಮ ಸುದೀಪ್ ಅವರ ಸಮನ್ವಯದಲ್ಲಿ ಎಂತೆಂಥಹ ವಾಸ್ತವ ಚಿಂತನೆಗಳನ್ನು ಹೊರಹೊಮ್ಮಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದೆ. ಬಹುಶಃ ಇದು ಸುದೀಪ್ ಒಬ್ಬರು ಬೆಳ್ಳಿ ಬೆಳಕಾಗಿ, ಅವರ ಸಮನ್ವಯ ಪ್ರಯತ್ನದಿಂದಷ್ಟೇ ಸುದೀರ್ಘ ಕಾಲದವರೆಗೆ ಇದೇ ಅಭಿಪ್ರಾಯವನ್ನೇ ಉಳಿಸಿಕೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತದೆ. ಒಂದು ಸೂಕ್ತ ಚಿಂತನೆ ಆಯೋಜನೆಯ ಸಂದರ್ಭದಲ್ಲಿ ಬಹು ಆಯಾಮಗಳಲ್ಲಿ ಆಗಬೇಕಾದ ತುರ್ತನ್ನು ಗುರುತಿಸಿಕೊಂಡರೇ ಜನಪ್ರಿಯ ಕಾರ್ಯಕ್ರಮವಷ್ಟೇ ಅಲ್ಲ, ಜನಪ್ರೀತಿಯ ಕಾರ್ಯಕ್ರಮ ಅಥವಾ ಪರಿಕಲ್ಪನೆಯಾಗಿ ಬೆಳೆಯಬಹುದು.

ಈ ಪರಿಕಲ್ಪನೆ ಸಾಮಾಜಿಕ ಜಾಲತಾಣಗಳ ನಡುವೆ ಸಮೂಹಸನ್ನಿಯಾಗದೆ ಒಂದು ವ್ಯಕ್ತಿತ್ವ ಕಲಿಯುವ, ತಿಳಿಯುವ ಪರಿಕಲ್ಪನೆಯಾಗಿ ಬೆಳೆಯಬೇಕಿದೆ.  ವ್ಯಕ್ತಿತ್ವ ಮತ್ತು ಬೆಳವಣಿಗೆಯ ನಡುವೆ ಕಾಣೆಯಾಗಿರುವ ಸೌಜನ್ಯ ವೃದ್ದಿಸಿಕೊಳ್ಳುವಂತಾಗಿ ಸಾರ್ವಜನಿಕ ಬದುಕಿನ ಸವಾಲುಗಳಿಗೂ ಪರಿಹಾರ ತೋರಿಸುವ ಪರಿಕಲ್ಪನೆಯಾದರೆ ಇನ್ನಷ್ಟು ಜನ ಒಪ್ಪಬಹುದು.

-ಶ್ರೀರಾಜ್‌ ವಕ್ವಾಡಿ 


Thursday, October 17, 2024

ʼವಯನಾಡಿಂತೆ ಪ್ರಿಯಾಂಕರಿʼಗೆ ಪರಿಸರ ಸೂಕ್ಷ್ಮ ವಲಯದ ದೊಡ್ಡ ಸವಾಲು !

 


ಪ. ಸೂ ಪ್ರದೇಶಗಳ ಜನಪ್ರತಿನಿಧಿಗಳಿಗೆ ಸ್ಥಿತಿಗತಿಗಳ ವೈಜ್ಞಾನಿಕ ಅರಿವು ಮುಖ್ಯ

ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿರುವ ವಯನಾಡ್‌ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಕಾಂಗ್ರೆಸ್‌ಗೆ ಗಟ್ಟಿ ಪ್ರಾಬಲ್ಯದ ಕ್ಷೇತ್ರವೇ ಆಗಿರುವ ವಯನಾಡು ಈಗ ವಿಪತ್ತು ಪೀಡಿತ ಪ್ರದೇಶ. ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಹುಲ್‌ ಗಾಂಧಿ ಸಹೋದರಿ ಪ್ರಿಯಾಂಕ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್‌ ಗಾಂಧಿ ಈಗಾಗಲೇ ಘೋಷಣೆ ಮಾಡಿದೆ.

ವಯನಾಡು ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧೆಗೆ ಇಳಿಯುವ ಎಲ್ಲಾ ಅಭ್ಯರ್ಥಿಗಳಿಗೂ ದೊಡ್ಡ ಸವಾಲು ಮುಂದಿದೆ. ರಾಹುಲ್‌ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ. 64.7ರಷ್ಟು ಮತಗಳಿಸುವುದರ ಮೂಲಕ ತಮ್ಮ ಸಮೀಪದ ಅಭ್ಯರ್ಥಿ ಸಿಪಿಐನ ಅನ್ನಿ ರಾಜಾ ವಿರುದ್ಧ 3.64 ಲಕ್ಷಗಳ ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದ ಕೆ. ಸುರೇಂದ್ರನ್‌ 1.3 ಲಕ್ಷ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದರು. ಕಾಂಗ್ರೆಸ್‌ ಪಾಲಿಗೆ ಭದ್ರ ಕ್ಷೇತ್ರವಾಗಿರುವುದರಿಂದ ಸಹಜವಾಗಿ ಇಲ್ಲಿಂದ ಮತ್ತ ಕಾಂಗ್ರೆಸ್‌ ಅಭ್ಯರ್ಥಿಯೇ ಲೋಕಸಭೆಗೆ ಆಯ್ಕೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ರಾಹುಲ್‌ ಗಾಂಧಿ ಪಡೆದಷ್ಟು ಮತಗಳನ್ನು ಪ್ರಿಯಾಂಕ ಗಿಟ್ಟಿಸಿಕೊಳ್ಳದೇ ಇದ್ದರೂ, ಪ್ರಿಯಾಂಕಾ ಇಲ್ಲಿಂದ ಸಂಸದರಾಗಿ ಆಯ್ಕೆಯಾಗುವುದು ನಿಶ್ಚಿತ ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿದೆ. ಪ್ರಿಯಾಂಕಾ ಗಾಂಧಿ ಆಗಲಿ ಅಥವಾ ಎದರಿರುವ ಯಾರೇ ಆಗಲಿ ಸಂಸದರಾಗಿ ವಯನಾಡು ಕ್ಷೇತ್ರದಿಂದ ಆಯ್ಕೆಯಾದರೆ, ಕ್ಷೇತ್ರದ ಮುಂದಿರುವ ಬಹುದೊಡ್ಡ ಸವಾಲನ್ನು ಎದುರಿಸಲೇ ಬೇಕಿದೆ ಎನ್ನುವುದು ಅಕ್ಷರಶಃ ಸತ್ಯ. 

ವಯನಾಡು ಸಂಸದರ ಮುಂದಿರುವ ಸವಾಲುಗಳು :

ಮಲೆಗಳ ನಾಡು ಕೇರಳ. ಕೇರಳದ 14 ಜಿಲ್ಲೆಗಳಲ್ಲಿ 12 ಜಿಲ್ಲೆಗಳಲ್ಲಿರುವ ಸುಮಾರು 123 ಹಳ್ಳಿಗಳ ವ್ಯಾಪ್ತಿಯ 13,108 ಚ.ಕೀ ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಬೇಕು ಎಂದು ಪ್ರೊ. ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ಸಲ್ಲಿಸಿದ್ದ ವರದಿ ಮೂಲಕ ಶಿಫಾರಸ್ಸು ಮಾಡಿತ್ತು. ಇದರಲ್ಲಿ ಸುಮಾರು 60 ಹಳ್ಳಿಗಳು ಇಡುಕ್ಕಿ ಹಾಗೂ ವಯನಾಡು ಜಿಲ್ಲೆಗಳಲ್ಲೇ ಇವೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕೇರಳದ ಜನಪ್ರಿಯ ಪ್ರವಾಸಿ ತಾಣವಾಗಿರುವ ವಯನಾಡು ಕಳೆದ ಜುಲೈನಲ್ಲಿ ಭಾರಿ ಪ್ರಮಾಣದಲ್ಲಿ ಪ್ರಕೃತಿ ವಿಪತ್ತಿಗೆ ತುತ್ತಾಗಿತ್ತು. ಭೀಮ ಗಾತ್ರದ ಮಲೆ ಪ್ರದೇಶಗಳೇ ಕುಸಿದು ನದಿಯಾಗಿ ಹರಿದು ಹೋಗಿದ್ದವು. ಸಂಸದರಿಲ್ಲದ ಒಂದು ಲೋಕಸಭಾ ಕ್ಷೇತ್ರ ಅಕ್ಷರಶಃ ಅನಾಥವಾಗಿತ್ತು. ವಯನಾಡಿನ ದುರಂತ ಸುದ್ದಿ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಬಿತ್ತರವಾದ, ಪ್ರಸಾರವಾದ ವರದಿಗಳಿಗಿಂತಲೂ ಭೀಕರವಾಗಿತ್ತು ಎನ್ನುವುದು ಸತ್ಯ ಎನ್ನುವುದಕ್ಕೆ ಬಹುತೇಕ ನಾಮಾವಶೇಷದಂತೆಯೇ ಆಗಿ ಕಂಡ ವಯನಾಡಿನ ಮುಂಡಕ್ಕೈ, ಚೂರಲ್‌ ಮಲ, ಅಟ್ಟಮಲ ಹಾಗೂ ನೂಲ್ಪುಳ ಧರಾಶಾಹಿಯಾಗಿ ಬಿದ್ದ ಚಿತ್ರಣವೇ ಸಾಕ್ಷಿ.

ಈಗ ಇಲ್ಲಿನ ಸ್ಥಿತಿ ಬಹುತೇಕ ಚೇತರಿಸಿಕೊಂಡಿದೆ ಎನ್ನುವುದಕ್ಕಿಂತ ʼಬಾಹ್ಯವಾಗಿ ಅಳುವಿಲ್ಲದೆʼ ಹೇಗೋ ಮುಂದೆ ಸಾಗುತ್ತಿದೆ ಎನ್ನುವುದೇ ಯಥಾರ್ಥವಾಗಿ ಒಪ್ಪುತ್ತದೆ ಎಂದು ಹೇಳುವುದು ಸರಿ ಅನ್ನಿಸುತ್ತದೆ. ಮುಂದೆ ಈ ಲೋಕಸಭಾ ಕ್ಷೇತ್ರದ ಜವಾಬ್ದಾರಿಯನ್ನು ಹೊರಲಿರುವ ಸಂಸದರ ಮುಂದೆಯೂ ಇಲ್ಲಿನ ಸ್ಥಿತಿಗತಿಗಳ ದೊಡ್ಡ ಸವಾಲಿದೆ ಎನ್ನುವುದು ಸತ್ಯ.

ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳನ್ನು ರಕ್ಷಿಸಬೇಕು ಎಂಬ ದೃಷ್ಟಿಯಲ್ಲಿ ಅಧ್ಯಯನ ಮಾಡುವಂತೆ ಕೇಂದ್ರ ಸರ್ಕಾರ ನೇಮಿಸಿದ್ಧ ಪ್ರೊ. ಮಾಧವ ಗಾಡ್ಗೀಳ್‌ ನೇತೃತ್ವದ ಸಮಿತಿ ಹಾಗೂ ಪ್ರೊ. ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ಶಿಫಾರಸ್ಸು ಮಾಡಿದ ವರದಿಗಳನ್ನು ಕೇರಳ ಸರ್ಕಾರ ಸಂಪೂರ್ಣವಾಗಿ ವಿರೋಧಿಸಿತ್ತು. ಇಂತಹ ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಕ್ವಾರಿ, ಮರ ಕಡಿಯುವುದು ಹಾಗೂ ಕೈಗಾರಿಕೆ ಸ್ಥಾಪನೆಯಂತಹ ಚಟುವಟಿಕೆಗಳಿಗೆ ಕೇರಳ ಸರ್ಕಾರ (ಐದು ರಾಜ್ಯಗಳ ಸರ್ಕಾರಗಳು) ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವಾಗಿತ್ತು. ಇದೇ ಕಾರಣಕ್ಕೆ ಕೇರಳ ಅನೇಕ ಭಾರಿ ಈ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ವಿಪತ್ತನ್ನು ಕಂಡಿದೆ. ಇಷ್ಟಾಗಿಯೂ ಪಾಠ ಕಲಿತಿಲ್ಲ.

2018ರ ಆಗಸ್ಟ್‌ 14ರಿಂದ 19ರ ನಡುವೆ ಕೇರಳದಲ್ಲಿ ಸುರಿದ ಭಾರಿ ಮಳೆಗೆ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಪ್ರವಾ‌‌ಹ ಉಂಟಾಗಿತ್ತು. 480ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. 1924ರಲ್ಲಿ ಉಂಟಾಗಿದ್ದ ನೆರೆಯ ನಂತರ ಆ ಮಟ್ಟಿಗಿನ ಭೀಕರ ಪ್ರವಾಹ ಸ್ಥಿತಿಯನ್ನು ಕೇರಳ ಕಂಡಿರಲಿಲ್ಲ. ಇಡುಕ್ಕಿ ಜಲಾಶಯ ಸೇರಿದಂತೆ ರಾಜ್ಯದ ಎಲ್ಲ ಜಲಾಶಯಗಳಿಂದ ಅನಿವಾರ್ಯವಾಗಿ ಹೆಚ್ಚು ನೀರು ಹೊರಗೆ ಬಿಡಬೇಕಾಯಿತು. ಇದರೊಂದಿಗೆ ಮಳೆಯೂ ತೀವ್ರವಾಗಿದ್ದರಿಂದ ನೆರೆ ಸೃಷ್ಟಿಯಾಗಿ, ಭೂಕುಸಿತ ಸಂಭವಿಸಿತು. ಪೂತ್ತುಮಲ ಎನ್ನುವುದು ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಒಂದು ಹಳ್ಳಿ. 2019ರ ಆಗಸ್ಟ್ 8ರಂದು ಭಾರಿ ಮಳೆಯ ಪರಿಣಾಮದಿಂದಾಗಿ ಭೂಕುಸಿತ ಸಂಭವಿಸಿತ್ತು. ಅದು ಎಷ್ಟು ತೀವ್ರವಾಗಿತ್ತು ಎಂದರೆ, 20 ಹೆಕ್ಟೇರ್‌ನಷ್ಟು ಭೂಮಿಯು 2 ಕಿಮೀನಷ್ಟು ದೂರಕ್ಕೆ ಸರಿದಿತ್ತು. ಹೀಗೆ ಕೇರಳದ ಜನರನ್ನು ಮಳೆಗಾಲ ದುಸ್ವಪ್ನವಾಗಿ ಪ್ರತಿ ಭಾರಿಯೂ ಕಾಡುತ್ತದೆ.

ಪಶ್ಚಿಮ ಘಟ್ಟ ಜನ ಸಂರಕ್ಷಣಾ ಸಮಿತಿ ಮತ್ತು ಹೊಣೆಗಾರಿಕೆ :

ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟ ಕಸ್ತೂರಿ ರಂಗನ್‌ ವರದಿಯ ವಿರುದ್ಧ ಕೇರಳದಲ್ಲಿ ಬೃಹತ್‌ ಮಟ್ಟದಲ್ಲಿ ಪ್ರತಿಭಟನೆಯ ಕಾವು ಎದ್ದಿತ್ತು.

ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರವೂ ಕೂಡ ಪರಿಸರ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಿರುವ ಭಾಗಗಳಲ್ಲಿ ದಟ್ಟ ಜನವಸತಿ ಇದೆ. ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ವರದಿಯು ರೈತ ವಿರೋಧಿಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಅಭಿವೃದ್ಧಿ ಚಟುವಟಿಕೆಗಳಿಗೆ ತೊಡಕು ಉಂಟಾಗಲಿದೆ. ಪಶ್ಚಿಮ ಘಟ್ಟಗಳಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ವಾದ ಮಂಡಿಸಿತ್ತು. ಆದರೇ, ಪರಸರಕ್ಕೆ ಹಾನಿವುಂಟು ಮಾಡುವ ಗಣಿಗಾರಿಕೆ, ಕ್ವಾರಿ, ಮರ ಕಡಿಯುವುದು ಹಾಗೂ ಕೈಗಾರಿಕೆ ಸ್ಥಾಪನೆಯಂತಹ ಚಟುವಟಿಕೆಗಳ ಬಗ್ಗೆ ಗಮನವೇ ನೀಡಿಲ್ಲ. ಬಹುಶಃ ಗುಡ್ಡ ಕುಸಿತದಂತಹ ವಿಪತ್ತು ಸೃಷ್ಟಿಯಾಗುವುದು ಅಲ್ಲಿ ವಾಸವಿರುವ ಜನರಿಂದ ಅಲ್ಲ, ಅರಣ್ಯನಾಶ, ಅತಿಕ್ರಮಣ, ಅನಿಯಂತ್ರಿತ ನಿರ್ಮಾಣ ಚಟುವಟಿಕೆಗಳು ಹಾಗೂ ಗಣಿಗಾರಿಕೆಯಿಂದಾಗಿ ಪಶ್ಚಿಮಘಟ್ಟ ಪ್ರದೇಶಕ್ಕೆ ಎದುರಾಗಿರುವ ಅಪಾಯಗಳಿಂದಲೇ ಎನ್ನುವುದು ಅಕ್ಷರಶಃ ಸತ್ಯ. ಇಂತಹ ಪರಿಸರ ಸೂಕ್ಷ್ಮ ಪ್ರದೇಶವನ್ನು ಒಳಗೊಂಡಿರುವ ಚುನಾವಣಾ ಕ್ಷೇತ್ರಗಳ ಜನಪ್ರತಿನಿಧಿಗಳಿಗೆ ಇಲ್ಲಿನ ಸ್ಥಿತಿಗತಿಗಳ ವೈಜ್ಞಾನಿಕ ಆಳ ಅಗಲ ಅರಿವು ಮುಖ್ಯ.  

ಪ್ರತಿಭಟನೆ, ರಾಜಕೀಯ ಒತ್ತಡಗಳಿಗೆ ಮಣಿದು ಸರ್ಕಾರ ಕೂಡ ಶಿಫಾರಸ್ಸುಗಳನ್ನು ರಾಜ್ಯ, ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದೆ. ಜುಲೈನಲ್ಲಿ ನಡೆದ ವಯನಾಡಿನ ದುರಂತ ಇತರೆ ರಾಜ್ಯಗಳಿಗೂ, ಅಲ್ಲಿರುವ ಜನಪ್ರತಿನಿಧಿಗಳಿಗೂ ಪಾಠ. ಮುಂದೆ ʼವಯನಾಡಿಂತೆ ಪ್ರಿಯಾಂಕರಿʼಗೂ ಒಂದು ಎಚ್ಚರಿಕೆ. ಇಂತಹ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾಗುವ ಚಟುವಟಿಕೆಗಳಿಂದ ಪರಿಸರವನ್ನು ಸಂರಕ್ಷಿಸುವ ಹೊಣೆಗಾರಿಕೆ ಇದೆ. ಪ್ರಕೃತಿಯ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ಮಾನವ ದಾಳಿಯಿಂದ ಉಂಟಾಗುವ ಪರಿಣಾಮ ಕೆಟ್ಟದಾಗಿರುತ್ತದೆ ಎಂಬ ಎಚ್ಚರಿಕೆಯನ್ನು ಆಗಾಗ ಪರಿಸರವಾದಿಗಳು ನೀಡುತ್ತಲೆ ಬಂದಿದ್ದಾರೆ. ಈವರೆಗೆ ಸಂಬಂಧಪಟ್ಟ ಸರ್ಕಾರ, ಸ್ಥಳಿಯಾಡಳಿತ, ಜನಪ್ರತಿನಿಧಿಗಳು ಕೇಳಿಸಿಕೊಂಡಿಲ್ಲ. ಈ ಗಂಭೀರ ಎಚ್ಚರಿಕೆಯನ್ನು ಗೃಹಿಸಿಕೊಳ್ಳುವ ಸಂಸದರು ವಯನಾಡಿಗೆ ಬೇಕಿದೆ. ಅಥವಾ ಇತರೆ ರಾಜ್ಯದ ಎಲ್ಲಾ ಇಂತಹ ಪ್ರದೇಶಗಳ ವ್ಯಾಪ್ತಿಗೆ ಒಳಪಡುವ ಕ್ಷೇತ್ರದ ಜನಪ್ರತಿನಿಧಿಗಳಿಗೆ ತುರ್ತಿದೆ ಎನ್ನುವುದು ಸತ್ಯ.

-ಶ್ರೀರಾಜ್‌ ವಕ್ವಾಡಿ.

Thursday, October 10, 2024

ಗುಜರಾತ್‌ನ ಮುಖ್ಯಮಂತ್ರಿ ದೇಶದ ಪ್ರಧಾನಿಯಾಗಿ ದಶಕ ಪೂರ್ತಿ


ಅಪೌಷ್ಟಿತೆಯ ಗಂಭೀರತೆ : ಸಮಸ್ಯೆ ಸಮಸ್ಯೆಯಾಗಿ ಕಾಣದಿರುವ ದುರಂತ ! 

ಗುಜರಾತ್‌ ರಾಜ್ಯವನ್ನು ಈ ದೇಶದಲ್ಲಿ ಮಾದರಿ ರಾಜ್ಯ ಎಂಬೆಲ್ಲಾ ರೀತಿಯಲ್ಲಿ ಬಿಂಬಿಸಲಾಗಿತ್ತು. ಆದರೇಗುಜರಾತ್‌ ಹಾಗಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಹಳೆಯ ಗೋಡೆಗೆ ಬಣ್ಣ ಹಚ್ಚಿದ್ದನ್ನೇ ಅಭಿವೃದ್ಧಿ ಎಂದು ರಾಜಕೀಯವಾಗಿ ಬಿಂಬಿಸಲಾಗಿತ್ತು. ಗುಜರಾತ್‌ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಹೊರತಾಗಿ ದೇಶವನ್ನು ಮುನ್ನಡೆಸಲು ಇನ್ನು ಯಾರೂ ಇಲ್ಲ ಎಂಬಂತೆ ಅಭಿಪ್ರಾಯವನ್ನು ಮೂಡಿಸಲಾಯಿತು. ದೇಶದಲ್ಲಿ ಒಂದು ರಾಜ್ಯ ಗುಜರಾತ್‌ ಮಾದರಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಸೃಷ್ಟಿಸಲಾಯಿತು. ಕಾಲಾಂತರದಲ್ಲಿ ಗುಜರಾತ್‌ನ ನಿಜ ಬಣ್ಣ ಬಯಲಾಗುತ್ತಾ ಹೋಯಿತು. ಅದಕ್ಕೆ ದೇಶದ ನಾಗರಿಕರು ಸಾಕ್ಷಿಯಾಗುತ್ತಾ ಬಂದರು.  

ಗುಜರಾತ್‌ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ದಶಕ ಕಳೆದಿದೆ. ಆದಾಗ್ಯೂ ಗುಜರಾತ್ ನ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅವರು ಸಫಲವಾಗಿಲ್ಲ ಎನ್ನುವುದಕ್ಕೆ ನೀತಿ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿದ ೨೦೨೩-೨೪ರ ಸುಸ್ಥಿರ ಅಭಿವೃದ್ಧಿ ಗುರಿ(ಎಸ್‌ಡಿಜಿ) ವರದಿಯ ಪ್ರಕಾರಹಸಿವಿನ ವಿರುದ್ಧದ ಹೋರಾಟ ಮತ್ತು ಮಕ್ಕಳಲ್ಲಿ ಪೌಷ್ಟಿಕತೆ ಸುಧಾರಿಸುವಲ್ಲಿ ಗುಜರಾತ್‌ ಹಿಂದುಳಿದಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತದ ರಾಜ್ಯಗಳ ಪೈಕಿ ಗುಜರಾತ್‌ 25ನೇ ಸ್ಥಾನದಲ್ಲಿದೆ ಎಂಬ ವರದಿಯೇ ಸಾಕ್ಷಿ.

2012 ರಲ್ಲಿಗುಜರಾತ್ ಇಡೀ ದೇಶದಲ್ಲೆ ಕಡಿಮೆ ತೂಕ ಹೊಂದಿರುವ ಹೆಚ್ಚು ಮಕ್ಕಳನ್ನು ಹೊಂದಿದೆ ಎಂಬ ವರದಿಯೂ ಆಗಿತ್ತು. ಇದು ಗುಜರಾತ್‌ನ ಇಂದಿನ ಸಮಸ್ಯೆ ಅಲ್ಲ ಎನ್ನುವುದನ್ನು ಅರ್ಥೈಸಿಕೊಳ್ಳಬೇಕಿದೆ. ಕಳೆದ ಹದಿನೈದು ವರ್ಷಗಳಿಂದಲೂ ಗುಜಾರಾತ್‌ ಅಪೌಷ್ಟಿಕತೆಯನ್ನು ಎದುರಿಸುತ್ತಿದೆ ಎನ್ನುವುದನ್ನು ನಾವು ವರದಿಗಳಲ್ಲಿ ಗಮನಿಸಬಹುದಾಗಿದೆ. ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅಂದಿನ ಗುಜರಾತ್‌ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಈ ಆತಂಕಕಾರಿ ಅಂಕಿ ಅಂಶದ ಬಗ್ಗೆ ಕೇಳಿದಾಗಬೇಜವಾಬ್ದಾರಿ ಹೇಳಿಕೆಯೊಂದನ್ನು ನೀಡಿದ್ದರು. "ತಾಯಿ ತನ್ನ ಮಗಳಿಗೆ ಹಾಲು ಕುಡಿಯಲು ಹೇಳಿದರೇಮಗಳು ನಾನು ಹಾಲು ಕುಡಿಯುವುದಿಲ್ಲ ಎಂದು ಹೇಳುತ್ತಾಳೆ. ನಾನು ದಪ್ಪವಾಗುತ್ತೇನೆ ಎನ್ನುತ್ತಾಳೆ. ಅವರ ಬಳಿ ಹಣವಿದೆ. ಆದರೆ ಆಕೆ ಸೌಂದರ್ಯ ಪ್ರಜ್ಞೆಯುಳ್ಳವಳುಆರೋಗ್ಯದ ಬಗ್ಗೆ ಕಾಳಜಿ ಇಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. 

ಗುಜರಾತ್‌ ನ ಮುಖ್ಯಮಂತ್ರಿ ದೇಶದ ಪ್ರಧಾನಿಯಾಗಿ ದಶಕ ಕಳೆದಿದೆ. ಅದೇ ನಡವಳಿಕೆ ಇಂದಿಗೂ ಮುಂದುವರಿದಿದೆ ಎನ್ನುವುದಕ್ಕೆ ಪ್ರಧಾನಿ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದೆ ಸಾಕ್ಷಿ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಎವಿಪಿಡಿ (ಅವಾಯಿಡೆಂಟ್ ಪರ್ಸನಾಲಿಟಿ ಡಿಸಾರ್ಡರ್) ಎಂದು ಕರೆಯುತ್ತಾರೆ. ಬಿಜೆಪಿ ಸರ್ಕಾರದ 100 ದಿನಗಳ ಅಜೆಂಡಾ ಮತ್ತು ಹಣಕಾಸು ಸಚಿವರ ಬಜೆಟ್ ಭಾಷಣದಲ್ಲಿ ಒಮ್ಮೆಯೂ “ಹಸಿವು” ಮತ್ತು “ಪೌಷ್ಟಿಕತೆ” ಎಂಬ ಪದಗಳನ್ನು ಉಲ್ಲೇಖಿಸದಿರುವುದು ಆಶ್ಚರ್ಯ ಸಂಗತಿಯಲ್ಲದೇ ಮತ್ತೇನು ?  

ಬಾಯಿ ತೆರೆದರೆ ಆರ್ಥಿಕವಾಗಿ ಸ್ವಾಯತ್ತ ಸಾಧಿಸುತ್ತಿರುವ ಭಾರತವನ್ನು ಅಂತರಾಷ್ಟ್ರೀಯ ಶಕ್ತಿಗಳು ದುರ್ಬಲಗೊಳಿಸುವುದಕ್ಕೆ ಸಂಚು ರೂಪಿಸುತ್ತಿವೆ ಎಂದೆಲ್ಲಾ ರಾಜಕೀಯ ಮಾತನಾಡುವ ಪ್ರಧಾನಿಯವರಿಗೆ ದೇಶದ ಮತ್ತು ತಮ್ಮದೇ ತವರು ರಾಜ್ಯದ ಸಮಸ್ಯೆಗಳ ಅರಿವಾಗಿಲ್ಲ ಎನ್ನುವುದು ದುರಂತವೇ ಸರಿ. ವಿಶ್ವದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಮೂವರಲ್ಲಿ ಒಬ್ಬರು ಭಾರತದಲ್ಲಿದ್ದಾರೆ ಎನ್ನುವುದು ಕಟು ಸತ್ಯ. 2014-16 ರಲ್ಲಿ ದೀರ್ಘಕಾಲದ ಹಸಿವಿನಿಂದ ಬಳಲುತ್ತಿರುವ ಜನರ ಶೇಕಡಾವಾರು ಪ್ರಮಾಣ ಶೇ. 10ರಷ್ಟಿತ್ತು, 2021-23 ರಲ್ಲಿ ಈ ಪ್ರಮಾಣ  ಸುಮಾರು ಶೇ. 14 ರಷ್ಟಕ್ಕೆ ಏರಿದೆ. ಎನ್ನುವಲ್ಲಿಗೆ ಈ ಪ್ರಮಾಣ ಐದು ಕೋಟಿ ಜನರ ಹೆಚ್ಚಳವಾಗಿದೆ. ಶೇ. 70ರಷ್ಟು ಭಾರತೀಯರು ಮೂಲಭೂತಆರೋಗ್ಯಕರ ಆಹಾರವನ್ನು ಸೇವಿಸುವುದಕ್ಕೂ ತಮ್ಮ ಕೌಟುಂಬಿಕ ಹಾಗೂ ವೈಯಕ್ತಿಕ ಆದಾಯದ ಅಸಮಾನತೆಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಯೇ ಮೂಲ ಕಾರಣ ಎಂದು ವರದಿ ಹೇಳುತ್ತಿದೆ ಎಂದರೇ ಭಾರತದ ಅಪೌಷ್ಟಿಕತೆಯ ಗಂಭೀರತೆ ಕೇಂದ್ರ ಸರ್ಕಾರಕ್ಕೆ ಅರಿವಿಗೆ ಬಂದಿಲ್ಲ ಎನ್ನುವ ಅರ್ಥವಲ್ಲವೇ ?.

ಗ್ಲೋಬಲ್ ನ್ಯೂಟ್ರಿಷನ್ ವರದಿ 2024 ಹೇಳುವ ಪ್ರಕಾರ, "ರಿಪ್ರೊಡಕ್ಟೀವ್‌ ಏಜ್‌ (ಸಂತಾನೋತ್ಪತ್ತಿ ವಯಸ್ಸಿನ)ನ ಮಹಿಳೆಯರಲ್ಲಿ ರಕ್ತಹೀನತೆಯನ್ನು ಕಡಿಮೆ ಮಾಡುವ ಗುರಿಯನ್ನು ಸಾಧಿಸುವಲ್ಲಿ ಭಾರತ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ. ಶೇ. 32ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆಶೇ. 35ರಷ್ಟು ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗಿದೆ ಮತ್ತು ಶೇ. 59ರಷ್ಟು ಮಕ್ಕಳು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಶೇ. 53ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ವರದಿ ಕಾಣಿಸಲೇ ಇಲ್ಲ. ಪ್ರಧಾನಮಂತ್ರಿಯವರ ಹೆಸರಿನ ಬೃಹತ್ ಕ್ರಿಕೆಟ್ ಅಂಗಣವನ್ನು ಹೊಂದಿರುವ ರಾಜ್ಯ ಹಸಿವನ್ನು ನಿಭಾಯಿಸುವಲ್ಲಿ ಸೋತಿದೆ ಎನ್ನುವುದಕ್ಕೆ ಮತ್ತೆ ಯಾವ ಸಾಕ್ಷಿ ಬೇಕಿದೆ ?

ಇನ್ನುರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ,  ಸಂಸತ್ತಿನಲ್ಲಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿಶೇ. 13ರಷ್ಟು ಪ್ರಮಾಣ ಮಕ್ಕಳು ತೀವ್ರ ಅಪೌಷ್ಟಿಕತೆ ಹೊಂದಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಕಾಣಬಹುದಾಗಿದೆ. ಕೇಂದ್ರ ಸರ್ಕಾರವೇ ನೀಡುವ ಪೋಶನ್ ಟ್ರ್ಯಾಕರ್ ಪ್ರಕಾರದೇಶದಲ್ಲಿ 14 ಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಪೌಷ್ಟಿಕತೆಯಲ್ಲಿ ಪ್ರಗತಿ ಸಾಧಿಸಲು ಸಂಪೂರ್ಣವಾಗಿ ವಿಫಲವಾಗಿರುವ ಕೇಂದ್ರ ಸರ್ಕಾರಐದು ಅಂತರಾಷ್ಟ್ರೀಯ ಸಂಸ್ಥೆಗಳು ತಯಾರಿಸಿದ ʼಅಪೌಷ್ಠಿಕತೆʼಯ ಬಗ್ಗೆ ವರದಿಯನ್ನು ಬಿಡುಗಡೆ ಮಾಡಲು ವಿರೋಧ ವ್ಯಕ್ತಪಡಿಸಿದೆ. ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಪೌಷ್ಟಿಕತೆಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನುವ ಅರ್ಥ ಹೌದಲ್ಲವೆ ಅಥವಾ ಪರೋಕ್ಷವಾಗಿ ಅಪೌಷ್ಟಿಕತೆ ನಿವಾರಣೆಗೆ ಮಾಡುವಲ್ಲಿ ಸೋತಿದೆ ಎನ್ನುವುದನ್ನು ಒಪ್ಪಿಕೊಂಡಂತಾಯಿತಲ್ಲವೆ ?.

ಸ್ವಾತಂತ್ರ್ಯ ಪಡೆದಾಗಿನಿಂದ ಈವರೆಗೆ ಬಡತನ ಮತ್ತು ಹಸಿವು ನಿರ್ಮೂಲನೆ ಮಾಡುವ ಉದ್ದೇಶದಿಂದಲೇ ಅನೇಕ ಕಾರ್ಯಕ್ರಮಗಳನ್ನುಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಮ್ಮಿಕೊಂಡಿವೆಯಾದರೂ ಈ ಮೂಲಭೂತ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ಪ್ರಯತ್ನ ಪಟ್ಟಿಲ್ಲ ಎಂಬುವುದೇ ಆಗಿದೆ ಅಲ್ಲವೆ ? ‘ಗರೀಬಿ ಹಠಾವೊ’ದಿಂದ ಕರ್ನಾಟಕ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಂತಹ ಹಲವು ಯೋಜನೆಗಳು ಹಸಿವು ಮುಕ್ತ ಭಾರತ ಮಾಡುವ ಉದ್ದೇಶದಿಂದಲೇ ರೂಪುಗೊಂಡವುಗಳು. ಹಸಿವು ನಿರ್ಮೂಲನೆಯ ಉದ್ದೇಶದಿಂದಲೇ ರೂಪುಗೊಂಡಂತಹ ಇಂತಹ ಯೋಜನೆಗಳಿಂದಲೇ ಹಸಿವುಅಪೌಷ್ಟಿಕತೆ ಪ್ರಮಾಣಗಳು ಕಡಿಮೆಯಾಗುತ್ತಿಲ್ಲೆ ಎನ್ನುವುದಾದರೇಇಲ್ಲಿ ತಾಂತ್ರಿಕ ಸಮಸ್ಯೆಗಳಿವೆ ಎಂದಲ್ಲವೇಈ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸರ್ಕಾರಗಳಿಗೆ ಅರಿವಿಲ್ಲದೇ ಏನಲ್ಲ. ನಿವಾರಿಸುವ ಇಚ್ಛಾಶಕ್ತಿ ಇಲ್ಲ ಅಷ್ಟೆ. ಉಚಿತವಾಗಿ ಇಲ್ಲವೆ ರಿಯಾಯಿತಿ ದರದಲ್ಲಿ ದವಸ ಧಾನ್ಯ ವಿತರಿಸುವ ಪಡಿತರ ಯೋಜನೆಗಳು ಎಲ್ಲ ರಾಜ್ಯಗಳಲ್ಲಿವೆ ಬೇರೆ ಬೇರೆ ರೀತಿಯಲ್ಲಿ ಜಾರಿಯಲ್ಲಿವೆ. ಇಷ್ಟೆಲ್ಲ ಕಾರ್ಯಕ್ರಮಗಳುಯೋಜನೆಗಳು ಇದ್ದರೂ ಹಸಿವು ಮತ್ತು ಅಪೌಷ್ಟಿಕತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಸರ್ಕಾರದ ಯೋಜನೆಗಳು ಅರ್ಹರನ್ನು ತಲುಪುವಲ್ಲಿ ಯಶಸ್ವಿಯಾಗಿಲ್ಲ ಎಂಬುವುದೇ ಅಲ್ಲವೆ ?

ತಮಾಷೆಯೆಂದರೇಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ನ 14ನೇ ಮುಖ್ಯಮಂತ್ರಿಯಾಗಿ 2001ರ ಅಕ್ಟೋಬರ್‌ 7ರಂದು ಪ್ರಮಾಣವಚನ ಸ್ವೀಕರಸಿದ್ದರು. ಅದರ ಸ್ಮರಣಾರ್ಥ ಪ್ರತಿ ವರ್ಷ ಅಕ್ಟೋಬರ್‌ 7ರಂದು ʼವಿಕಾಸ ಸಪ್ತಾಹʼ ಆಯೋಜಿಸಲು ಗುಜರಾತ್ ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂತಹ ಸಮಸ್ಯೆಗಳು ರಾಶಿ ಇರುವಾಗ ಗುಜರಾತ್‌ ಯಾವುದರಲ್ಲಿ ವಿಕಾಸ ಹೊಂದಿದೆ ಎನ್ನುವುದು ಇಲ್ಲಿ ಪ್ರಶ್ನೆ ಎದ್ದಿದೆ. ಅಪೌಷ್ಟಿಕತೆಯ ಪ್ರಮಾಣ ಏರಿಕೆಯಾಗಿದ್ದನ್ನೇ ಗುಜರಾತ್ ಸರ್ಕಾರ ವಿಕಾಸ ಎಂದು ಭಾವಿಸಿದೆಯೇ ?‌ ಇವೆಲ್ಲಾ ಜನರಿಗೆ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಅರಿವಿಗೆ ಬಾರದೇ ಇರುವ ಹಾಗೆ ಮಾಡುವ ಯೋಜಿತ ಪ್ರಯತ್ನವಲ್ಲದೆ ಮತ್ತೇನು ?‌ ಯೋಚಿಸಿ ನೋಡಿ. 

-ಶ್ರೀರಾಜ್‌ ವಕ್ವಾಡಿ  

Thursday, October 3, 2024

ಸಿದ್ದರಾಮಯ್ಯ ರಾಜಕೀಯಕ್ಕೆ ಅಂಟಿದ ಕೊಳೆ !

ಮುಡಾ ತಂದ ಆಪತ್ತಿನಿಂದ ಕಾಂಗ್ರೆಸ್ಸಿನ ಸಂದಿಗ್ದತೆ    

ನಿಷ್ಕಳಂಕ ರಾಜಕೀಯ ವರ್ಚಸ್ಸನ್ನು ಹೊಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡವೆಂದರೂ ಬಂದು ಅಂಟಿಕೊಂಡ ಕೊಳೆ ಎಂದರೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ನಿವೇಶನ ಹಂಚಿಕೆ ವಿವಾದ. ಬಹುಶಃ ಸಿದ್ದರಾಮಯ್ಯ ಅವರು ಕಂಡ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ ಆರೋಪ ಹೊರುವ ಹಾಗೆ ಮಾಡಿ, ವಿಪಕ್ಷಗಳ ಬಾಯಿಗೆ ಆಹಾರ ಆಗಿದ್ದು ಇದೇ ಮೊದಲು ಅಂತನ್ನಿಸುತ್ತದೆ. ಕಾಂಗ್ರೆಸ್‌ನ ಹೈಕಮಾಂಡ್‌ ಸೇರಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೂ ಕೂಡ ಹೀಗೊಂದು ಅಪವಾದ ತನ್ನ ಮೇಲೆ ಬಂದು ಬಿಡುತ್ತದೆ ಎಂಬ ಯಾವ ಊಹೆಯಲ್ಲಿಯೂ ಇದ್ದಿರಲಿಕ್ಕಿಲ್ಲ.

ರಾಜಕೀಯ ವಲಯದಲ್ಲಿ ಸಿದ್ದಾಂತ ಹಾಗೂ ನಿಲುವು, ರಾಜಕೀಯ ನಡೆಗಳ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಒಂದಿಷ್ಟು ಭಿನ್ನ ಅಭಿಪ್ರಾಯಗಳಿದ್ದರೂ, ಈವರೆಗೆ ಭ್ರಷ್ಟಾಚಾರ ಆರೋಪವನ್ನು ಅವರು ಎದುರಿಸಿಲ್ಲ. ರಾಜಕೀಯ ವರ್ಚಸ್ಸಿಗೆ ಯಾವುದೇ ಧಕ್ಕೆ ಆಗದಿರುವ ಹಾಗೆ ಸಿದ್ದರಾಮಯ್ಯ ನೋಡಿಕೊಂಡಿದ್ದರು ಎನ್ನುವುದು ಕೂಡ ಸತ್ಯ. ರಾಜಕೀಯ ಅಂದಮೇಲೆ ಸಣ್ಣಪುಟ್ಟ ಆರೋಪಗಳು ಸಹಜ. ಅದು ರಾಜಕೀಯ ದುರುದ್ದೇಶದಿಂದಲೂ ಆಗಬಹುದು/ಆಗಿರಬಹುದು. ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಪ್ರಸಂಗಗಳು ಎದುರಾಗುವುದಕ್ಕೆ ಅವಕಾಶ ಮಾಡಿಕೊಟ್ಟವರಲ್ಲ. ಆದರೇ, ಇದೊಂದು ಪ್ರಕರಣ ಅವರರನ್ನು ಯಾವ ರೀತಿಯಲ್ಲಿ ಆವರಿಸಿಕೊಂಡಿತ್ತು ಎನ್ನುವ ಬಗ್ಗೆ ಅವರನ್ನು ವಿಪರೀತವಾಗಿ ಬೆಂಬಲಿಸುವ ವರ್ಗದವರಲ್ಲಿ ನಿಜಕ್ಕೂ ಆಶ್ಚರ್ಯ ಮೂಡಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನ್ಯಾಯಾಲಯದಲ್ಲಿ ಪ್ರಾಥಮಿಕ ಹಂತದಲ್ಲಿ ಭಾರೀ ಹಿನ್ನಡೆಯಾಗಿದೆ. ಅವರ ನೇತೃತ್ವದ ಸರ್ಕಾರಕ್ಕೆ ಇದೊಂದು ಕಪ್ಪು ಚುಕ್ಕಿಯೇ ಸರಿ. ಮೈಸೂರಿನಲ್ಲಿ ಸಿಎಂ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ರಾಜ್ಯಪಾಲರು ಆಗಸ್ಟ್ 16ರಂದು ಸಿಎಂ ವಿರುದ್ಧ ಕ್ರಮಕ್ಕೆ ಆದೇಶಿಸಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿರುವುದು ಸಿದ್ದರಾಮಯ್ಯ ಅಂತಹ ಮುತ್ಸದ್ದಿ ರಾಜಕಾರಣಿಯ ಪಾಲಿಗೆ ದೊಡ್ಡ ಹಿನ್ನಡೆಯೇ ಸರಿ.

ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ತಮಗೆ ಅನುಕೂಲಕರವಾಗಿ ಬರುವ ತೀರ್ಪಿನ ನಿರೀಕ್ಷೆಯಲ್ಲಿದ್ದರು. ಊಹೆಗೂ ಮೀರಿ ಹೈಕೋರ್ಟ್‌ ತೀರ್ಪು ಕೊಟ್ಟಿತ್ತು. ಈಗ ಇದು ರಾಷ್ಟ್ರಮಟ್ಟದ ಸುದ್ದಿಯಾಯಿತು. ವಿಧಾನಸಭಾ ಚುನಾವಣೆಯಾಗಲಿ ಅಥವಾ ಲೋಕಸಭಾ ಚುನಾವಣೆಯಾಗಲಿ ರಾಜ್ಯದ ಪಾಲಿಗೆ ಕಾಂಗ್ರೆಸ್‌ ವರ್ಸಸ್ ಬಿಜೆಪಿ ಎನ್ನುವುದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ವರ್ಸಸ್‌ ಮೋದಿ ಎನ್ನುವ ಹಾಗೆಯೇ ನಡೆದಿದ್ದವು. ಸಿದ್ದರಾಮಯ್ಯ ಎದರು ಬಿಜೆಪಿಯಲ್ಲಿ ಯಾವ ರಾಜಕೀಯದ ವರ್ಚಸ್ವಿ ಮುಖವಿಲ್ಲ ಎನ್ನುವುದು ಕೂಡ ಇದರ ಒಳಾರ್ಥ. ಈ ಮೂಲಕ ಸಿದ್ದರಾಮಯ್ಯ ರಾಷ್ಟ್ರಮಟ್ಟದಲ್ಲಿಯೂ ಪ್ರಭಾವಿ ನಾಯಕ ಎಂದು ಗುರುತಿಸಿಕೊಂಡಿದ್ದರು. ಹಾಗಾಗಿ ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸನ್ನು ಕುಗ್ಗಿಸಬೇಕೆಂಬ ಬಯಕೆ ಬಿಜೆಪಿಯಲ್ಲಿ ಸಹಜವಾಗಿತ್ತು, ಅದಕ್ಕೆ ಸರಿಯಾಗಿ ಎಂಬಂತೆ ಈ ಮುಡಾ ಹಗರಣ ಮುನ್ನೆಲೆಗೆ ಬಂದಿದ್ದು, ಬಿಜೆಪಿ ಪಾಲಿಗೆ ಸಿಕ್ಕ ದೊಡ್ಡ ಗ್ರಾಸವೇ ಆಯಿತು. 

ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್‌ಗೆ ಈ ಪ್ರಕರಣ ತಲೆನೋವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರು ಪ್ರಾಮಾಣಿಕರಿರಬಹುದು ಆದರೇ, ಆರೋಪವನ್ನು ತೀರಾ ಏನೂ ಇಲ್ಲ ಎನ್ನುವಂತೆ ತಳ್ಳಿ ಹಾಕುವಂತೆಯೂ ಇಲ್ಲವಲ್ಲ. ಸಿದ್ದರಾಮಯ್ಯ ಪ್ರಶ್ನಾತೀತರೂ ಅಲ್ಲವಲ್ಲ. ಹಾಗಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಈ ಪ್ರಕರಣವನ್ನು ಎದುರಿಸಲೇಬೇಕಿದೆ. ರಾಷ್ಟ್ರಮಟ್ಟದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮರಳಿ ಚೇತರಿಸಿಕೊಂಡ ಕಾಂಗ್ರೆಸ್‌ ಗೆ ತನ್ನದೇ ಸರ್ಕಾರ ಅಧಿಕಾರವಿರುವ ಕರ್ನಾಟಕದಲ್ಲಿ ಪಕ್ಷದ ಮುಖ್ಯಮಂತ್ರಿಯೇ ಇಂತಹದ್ದೊಂದು ಆರೋಪವನ್ನು ಎದರಿಸುತ್ತಿರುವುದು ಗಂಟಲಲ್ಲಿನ ಬಿಸಿ ತುಪ್ಪದಂತಾಗಿದೆ. ಸಿದ್ದರಾಮಯ್ಯ ಅವರನ್ನು ಹೊರತಾಗಿ ಅಷ್ಟೇ ಸಮರ್ಥವಾಗಿ ನಿಭಾಯಿಸಬಲ್ಲ ಅನುಭವಿ ರಾಜಕೀಯ ನಾಯಕರೂ ಕಾಂಗ್ರೆಸ್‌ನಲ್ಲಿ ಇಲ್ಲ ಎನ್ನುವುದು ಕೂಡ ಸತ್ಯ. ಸಿದ್ದರಾಮಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಬೇಕೆಂಬ ಪ್ರತಿಪಕ್ಷಗಳ ಒತ್ತಡದ ನಡುವೆಯೂ ಕಾನೂನಿನ ಸಮರಕ್ಕಿಳಿದಿರುವುದರಿಂದ ಕಾಂಗ್ರೆಸ್‌ ಹೈಕಮಾಂಡ್‌ ಗೂ ರಾಜೀನಾಮೆ ಕೊಡಿಸಿ ಕೆಳಗಿಳಿಸಿದರೇ, ಅದು ಇನ್ನೊಂದು ರಾಜಕೀಯ ತಿರುವು ಪಡೆದುಕೊಳ್ಳಬಹುದೆಂಬ ಭಯ ಒಳಗಿಂದಲೇ ಕಾಡುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. 

ಕಾಂಗ್ರೆಸ್ಸಿನ ಸಂದಿಗ್ಧ ಪರಿಸ್ಥಿತಿ :

ಕಾಂಗ್ರೆಸ್ ನಾಯಕತ್ವಕ್ಕೆ, ಈ ಬಿಕ್ಕಟ್ಟು ಅದರ ರಾಜಕೀಯ ತೀಕ್ಷ್ಣತೆಯ ಪರೀಕ್ಷೆಯಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸಿದ್ದರಾಮಯ್ಯ ಅವರಂತಹ ಹಿರಿಯ ʼಸಮುದಾಯ ನಾಯಕʼರನ್ನು ರಾಜೀನಾಮೆ ಕೊಡಿಸಿದರೇ, ಕಾಂಗ್ರೆಸ್‌ ಪಾಲಿಗೆ ಸಿದ್ದರಾಮಯ್ಯ ಅವರ ಕಾರಣಕ್ಕಾಗಿ ಬಹುದೊಡ್ಡ ಮಟ್ಟದಲ್ಲಿ ಮತದಾನದ ಮೂಲಕ ಪರವಾಗಿ ನಿಂತ ʼಅಹಿಂದʼ ವರ್ಗ ಮುನಿಸಿಕೊಳ್ಳಬಹುದು ಎಂಬ ಆತಂಕವಿದೆ. ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ರಾಜೀನಾಮೆ ನೀಡಿಸಿದರೇ, ಅದು ಇನ್ನಷ್ಟು ಪ್ರತಿಪಕ್ಷಗಳ ದಾಳಿಗೆ ಆಹ್ವಾನ ನೀಡುತ್ತದೆ. ಹಾಗೆ ಮಾಡದಿದ್ದರೆ, ಅದು ನೈತಿಕತೆಯ ಪ್ರಶ್ನೆಯಾಗಿಯೂ ಕಾಡುತ್ತದೆ. ರಾಜಕೀಯ ಅಸ್ಥಿರತೆಗೆ ತನ್ನನ್ನು ತಾನೇ ಮೈಯೊಡ್ಡಿ ನಿಂತಂತಾಗುತ್ತದೆ. ರಾಜಕೀಯದಲ್ಲಿ ಕಾಂಗ್ರೆಸ್‌ ಸಂಭಾವ್ಯ ಬಲುದೊಡ್ಡ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಎಲ್ಲದರ ನಡುವೆ ಕಾಂಗ್ರೆಸ್‌ ನಿಜಕ್ಕೂ ಸಂದಿಗ್ಧತೆಯನ್ನು ಎದುರಿಸುತ್ತಿದೆ.

ಯಾವುದೇ ಬಲವಂತದ ನಾಯಕತ್ವ ಬದಲಾವಣೆಯು ಸಿದ್ದರಾಮಯ್ಯನವರನ್ನು ಬೆಂಬಲಿಸುವ ಅಹಿಂದಾ (ಅಲ್ಪಸಂಖ್ಯಾತರು, ಒಬಿಸಿ ಮತ್ತು ದಲಿತ-ಸಂಕ್ಷಿಪ್ತ ರೂಪ) ಮತದಾರರನ್ನು ದೂರವಿಡಬಹುದು ಎಂಬ ಕಾರಣದಿಂದಾಗಿ ಇದು ಕಾಂಗ್ರೆಸ್‌ಗೆ ಸೂಕ್ಷ್ಮವಾದ ಹೈ ವೈರ್ ಆಕ್ಟ್ ಆಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗಿಂತ ಪಕ್ಷದ ಶಾಸಕರ ಬೆಂಬಲ ಸಿದ್ದರಾಮಯ್ಯ ಅವರ ಕಡೆಯಿದೆ. ಒಂದುವೇಳೆ ಕಾಂಗ್ರೆಸ್ ಮೂರನೇ ಆಯ್ಕೆಗೆ ಮುಂದಾದರೆ ಶಿವಕುಮಾರ್ ತಮ್ಮ ಜಾತಿ, ಸಂಘಟನಾ ಶಕ್ತಿ, ರಾಜಕೀಯ ಪ್ರಭಾವ ತೋರಿಸಬಹದು. ಸದ್ಯಕ್ಕೆ ಶಿವಕುಮಾರ್ ಒಗ್ಗಟ್ಟಾಗಿದ್ದೇವೆ, ಸಿದ್ದರಾಮಯ್ಯ ಪರವಾಗಿದ್ದೇವೆಂದು  ಸಾರ್ವಜನಿಕವಾಗಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದಾರೆ. ಪಕ್ಷವು "ಸಿದ್ದರಾಮಯ್ಯ ಅವರೊಂದಿಗೆ ನಿಂತಿದೆ" ಎನ್ನುವುದು ಸದ್ಯದ ಕಾಂಗ್ರೆಸ್ ನಿಲುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಹೋರಾಟಗಾರ, ಅವರಿಗೆ ಹೈಕಮಾಂಡ್ ಬೆಂಬಲವಿದೆ ಎಂದು ಅವರ ಆಪ್ತರು ಕೂಡ ವಿಶ್ವಾಸದಲ್ಲಿದ್ದಾರೆ.

ಇನ್ನು, ಸಿದ್ದರಾಮಯ್ಯ ಅವರ ಪತ್ನಿ ನಿವೇಶನ ವಾಪಾಸ್‌ ಮಾಡಿದ್ದು ಭಾವನಾತ್ಮಕವಾಗಿ ರಾಜಕೀಯವಾಗಿ ಹೇಗೆ ತಿರುವು ಪಡೆದುಕೊಳ್ಳುತ್ತದೆ ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರನ್ನು ಪ್ರಕರಣದ ಆರೋಪ ಪಟ್ಟಿಗೆ ಸೇರಿಸಿಕೊಳ್ಳಬೇಕೆಂಬ ಕೂಗೂ ಕೇಳಿಬಂದಿದೆ. ಯತೀಂದ್ರ ಅವರ ಮೇಲೆ ʼಸೂಪರ್ ಸಿಎಂʼ ಎಂಬ ಆರೋಪವು ಕೇಳಿ ಬಂದಿತ್ತು. ಸಿದ್ದರಾಮಯ್ಯ ಅವರ ಪಾಲು ಈ ಪ್ರಕರಣದಲ್ಲಿ ಇಲ್ಲದೇ ಇದ್ದರೂ, ಯತೀಂದ್ರ ಅವರ ಪ್ರಭಾವ ಇರಬಹುದು ಎಂಬ ಚರ್ಚೆ ಕೂಡ ಇದೆ. ಒಂದು ವೇಳೆ ಯತೀಂದ್ರ ಈ ಪ್ರಕರಣದಲ್ಲಿ ಪಾಲುದಾರರಾಗಿರುವುದು ಸಾಬೀತಾದರೇ, ಕಾಂಗ್ರೆಸ್‌ ಹೈಕಮಾಂಡ್‌, ಸಿದ್ದರಾಮಯ್ಯ ಅವರಿಗೆ ತೋರಿದ ಮೃದು ಧೋರಣೆಯನ್ನಂತೂ ತೋರಿಸುವುದಿಲ್ಲ ಎನ್ನುವುದು ದಿಟ.

ಕಾಂಗ್ರೆಸ್ ಅನ್ನು ಈ ವಿವಾದ ತುಸು ದುರ್ಬಲಗೊಳಿಸಿದೆ, ಸದ್ಯದ ಮಟ್ಟಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಯೇ ಉದ್ಭವಿಸದಿರಬಹುದು. ಆದರೆ, ಪಕ್ಷದಲ್ಲಿ ಕೆಲವು ಗೊಂದಲಗಳು ಎದುರಾಗುವ ಸಾಧ್ಯತೆಯಂತೂ ಎದ್ದು ಕಾಣಿಸುತ್ತಿದೆ. ಸಂದಿಗ್ದತೆಯಲ್ಲಿ ತನ್ನ ಕಾರ್ಯಕರ್ತರು ಮತ್ತು ಶಾಸಕರನ್ನು ಕಾಂಗ್ರೆಸ್‌ ಹೇಗೆ ನಿಯಂತ್ರಿಸುತ್ತದೆ ಎಂಬುದು ಪ್ರಶ್ನೆಯಾಗಿದೆ. ಈ ನಡುವೆ ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಮೇಲೆ ಸಿಎಂ ವಿರುದ್ಧ ಇಡಿ ಪ್ರಕರಣವೂ ದಾಖಲಾಗಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಕರ್ನಾಟಕದಲ್ಲಿ ಕಾಂಗ್ರೆಸ್‌ ಪಾಲಿಗೆ ದೂರಗಾಮಿ ಪರಿಣಾಮಗಳನ್ನು ಉಂಟುಮಾಡಬಹುದು. ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ, ಆರ್.‌ ಅಶೋಕ್‌ ಅವರ ಆರೋಪಗಳನ್ನೆಲ್ಲಾ ಸಿದ್ದರಾಮಯ್ಯ ಲೆಕ್ಕಕ್ಕೆ ತೆಗೆದುಕೊಳ್ಳದೇ ಹೋದರೂ, ಇದರಿಂದಾಗಿ ಕಾಂಗ್ರೆಸ್ ಸುದೀರ್ಘ ರಾಜಕೀಯ ಪರಿಣಾಮವನ್ನು ಅನುಭವಿಸಬಹುದು, ಪ್ರತಿಪಕ್ಷದ ಬಿಸಿ ಎದುರಿಸಬಹುದು. ಹಾಗಾಗಿ ತನ್ನ ಮುಂದಿರುವ ಸವಾಲುಗಳನ್ನು  ಎದುರಿಸಲು ಕಾಂಗ್ರೆಸ್‌ ತುರ್ತಾಗಿ ಕಾರ್ಯತಂತ್ರವನ್ನು ರೂಪಿಸಲೇಬೇಕಿದೆ.

-ಶ್ರೀರಾಜ್‌ ವಕ್ವಾಡಿ