ಜನಸಂಖ್ಯೆ ಅಸಮತೋಲನಕ್ಕೆ ಹೆಣ್ಣಿನ ಮೇಲೆ
ಸರ್ಕಾರದ ಬಲವಂತದ ಕ್ರಮ ಸಲ್ಲದು !
ಎಷ್ಟು ಮಕ್ಕಳನ್ನು ಹೊಂದಬೇಕು ಎಂಬ ತೀರಾ
ಖಾಸಗಿ ಸ್ವಾತಂತ್ರ್ಯವನ್ನು ದಕ್ಷಿಣ ಭಾರತದ ಎರಡು ರಾಜ್ಯ ಸರ್ಕಾರಗಳು ಕಿತ್ತುಕೊಳ್ಳುವುದಕ್ಕೆ ಮುಂದಾಗಿವೆಯೇ ಎಂಬ ಪ್ರಶ್ನೆ ಎದ್ದಿರುವುದು ಈ ದೇಶದ ದೊಡ್ಡ ದುರಂತ. ಹೌದು, ತಮ್ಮ ರಾಜ್ಯದ ಜನರಿಗೆ ಹೆಚ್ಚು ಮಕ್ಕಳನ್ನು ಹೊಂದುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕೆ ಸ್ಟ್ಯಾಲಿನ್ ಕರೆ ನೀಡಿರುವುದು ದೇಶದಾದ್ಯಂತ ಹಲವು ಆಯಾಮಗಳಲ್ಲಿ
ಚರ್ಚೆಗೆ ಕಾರಣವಾಗಿದೆ.
ಜನಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬ ತೀರಾ
ಸಾಮಾನ್ಯ ಒಂದು ಆತಂಕ ದಿನೇದಿನೆ ಹೆಚ್ಚಳವಾಗುತ್ತಿದ್ದರೆ, ರಾಜಕೀಯದ ಪ್ರಾತಿನಿಧ್ಯಕ್ಕಾಗಿ ಜನಸಂಖ್ಯೆ ಪ್ರಮಾಣ ಕಡಿಮೆಯಾಗುತ್ತಿದೆ
ಎಂಬ ಕೂಗು ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ತಮ್ಮ ರಾಜ್ಯದ ಜನರಿಗೆ ಹೆಚ್ಚು ಮಕ್ಕಳನ್ನು ಹೊಂದುವಂತೆ
ಕರೆ ನೀಡಿರುವುದು ʼಹಿಂದಿ ಹೇರಿಕೆʼಗಿಂತಲೂ ಹೆಚ್ಚು ಘೋರವಾಗಿದೆ. ಒಬ್ಬ ಮಹಿಳೆಯ ಮೇಲೆ ಆಗುವ ಪರಿಣಾಮದ ಬಗ್ಗೆ
ಈ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಊಹಿಸಿರಲಿಕ್ಕಿಲ್ಲ. ಎಷ್ಟು ಮಕ್ಕಳನ್ನು ಮತ್ತು ಯಾವ ಸಮಯದಲ್ಲಿ
ಮಕ್ಕಳನ್ನು ಹೊಂದಬೇಕು ಎಂಬ ಒಂದು ದಾಂಪತ್ಯದ ಅಥವಾ ಕೌಟುಂಬಿಕ ಸಂಸಾರದ ಖಾಸಗಿ ಆಯ್ಕೆಗೆ ಈ ರೀತಿಯ
ಬಲವಂತಗಳು ನಿಜಕ್ಕೂ ವ್ಯತಿರಿಕ್ತವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ.
ಮದುವೆಯ ಬಳಿಕ ಹೆಣ್ಣು ಹೊರುವ ಜವಾಬ್ದಾರಿಗಳು
ಗರ್ಭಿಣಿಯಾಗುವುದು, ಬಾಣಂತಿತನ, ಮಕ್ಕಳ ಪಾಲನೆ-ಪೋಷಣೆ,
ಮಾನಸಿಕ, ಬೌದ್ದಿಕ ಮತ್ತು ಶಾರೀರಿಕ ಶಕ್ತಿ ಹೆಣ್ಣುಮಕ್ಕಳಲ್ಲಿ ಎಷ್ಟಂತ ಇರುತ್ತದೆ?
ಹಾಗಿರುವಾಗ ಅವರ ಮೇಲೆ ಸಾಮಾಜಿಕ ಒತ್ತಾಯವನ್ನು ಹೇರುವಂತಹ ಈ ನೀತಿಯು
ಬಹಳ ಅಶಾಸ್ತ್ರೀಯ ಮತ್ತು ಅಮಾನುಷವಾದುದಾಗಿದೆ ಎನ್ನುವುದೇ ಬಹಳ ಸೂಕ್ತವೆನ್ನಿಸುತ್ತದೆ. ಇಂತಹ ಒಂದು
ಬಲವಂತದ ಹೇರಿಕೆ ಹೆಣ್ಣಿನ ಮೇಲಾಗುವ ಪರಿಣಾಮವನ್ನು ಹೇಳಿದವರು ಮತ್ತು ಅದೇ ಅಭಿಪ್ರಾಯವನ್ನು ತಮ್ಮೊಳಗೆ
ಇರಿಸಿಕೊಂಡವರು ಅರ್ಥೈಸಿಕೊಳ್ಳಬೇಕಿರುವ ತುರ್ತಿದೆ. ʼಹೆಣ್ಣುʼ ಮಕ್ಕಳನ್ನು ಹೆರುವ ಯಂತ್ರವಲ್ಲ. ಸ್ತ್ರೀಯರ
ಲೈಂಗಿಕ ಸಂಬಂಧಿ ವಿಷಯಗಳಲ್ಲಿ ಅವರ ಅಡಚಣೆಗಳ ಬಗ್ಗೆ ಏನೂ ಒಂದಿನಿತೂ ತಿಳಿಯದೇ ಮಾತಾಡಿದ ಹಾಗೆ ಇಬ್ಬರೂ
ಮುಖ್ಯಮಂತ್ರಿಗಳು ಹೇಳಿರುವುದು ತೀರಾ ಅಸಹ್ಯವೇ ಸರಿ. ಇದೊಂದು ರೀತಿಯಲ್ಲಿ ಹೆಣ್ಣಿನ ಮೇಲೆ ಆಗುತ್ತಿರುವ
ಸಾಮಾಜಿಕ ಪೀಡನೆ ಎಂದರೆ ತಪ್ಪಲ್ಲ. ಈ ಹಿಂದೆ ಹೆಣ್ಣಿನ ವಿಷಯವಾಗಿ ʼವಿವಾಹಪೂರ್ವದಲ್ಲಿ ಕೌಮಾರ್ಯ ಬಂಧನ, ವಿವಾಹೋತ್ತರದಲ್ಲಿ ಪತಿ ನಿಷ್ಠಳಾಗಿʼ ಹೆಣ್ಣು ಬದುಕಬೇಕು ಎಂಬ ಮಾತಿತ್ತು. ಈಗ ಹೆಣ್ಣು ಸರ್ಕಾರಕ್ಕೆ ನಿಷ್ಠಳಾಗಿ
ಬದುಕಬೇಕೆ ? ಸರ್ಕಾರ ಹೆಚ್ಚು ಮಕ್ಕಳನ್ನು ಹೊಂದುವಂತೆ
ಆದೇಶಿಸಿದಾಗ ಹೆಣ್ಣು ಅದಕ್ಕೆ ತಯಾರಾಗುವುದು ಮತ್ತು ಜನಸಂಖ್ಯೆ ಹೆಚ್ಚಾದಾಗ ಒಂದೇ ಮಗು ಹೊಂದುವಂತೆ
ಹೇರುವ ನೀತಿಗೆ ಬದ್ಧರಾಗಿ ಬಾಳಬೇಕೆ ?
ಬಲಾತ್ಕಾರ, ಅತ್ಯಾಚಾರ, ಆತ್ಮಹತ್ಯೆಗೆ ಒಳಗಾಗುವಂತಹ ಪರಿಸ್ಥಿತಿಜನ್ಯ
ಸಂಕಷ್ಟಗಳಲ್ಲಿ ಸಿಲುಕಿಕೊಂಡಿರುವ ಸಾವಿರಾರು ಸ್ತ್ರೀಯರು ನಮ್ಮ ನಡುವೆ ಕಾಣಸಿಗುತ್ತಾರೆ. ಅದರೊಟ್ಟಿಗೆ
ಹೆಚ್ಚು ಮಕ್ಕಳನ್ನು ಹೊಂದುವಂತೆ ಹೇರುವ ಮನಸ್ಥಿತಿಯೂ ಕೂಡ ಹೆಣ್ಣಿನ ಮೇಲೆ ಆಗುತ್ತಿರುವ ಸಾಮಾಜಿಕ
ಸಾಮೂಹಿಕ ಅತ್ಯಾಚಾರವೇ ಆಗಿದೆ. ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಇದು ಸೂಕ್ತವಲ್ಲ. ಗರ್ಭಿಣಿಯಾಗುವುದು,
ಮಗುವಿಗೆ ಜನ್ಮನೀಡುವುದು, ಮಕ್ಕಳನ್ನು ಪೋಷಿಸುವುದರಲ್ಲಿಯೇ ಹೆಣ್ಣು ಜೀವನಪೂರ್ತಿ ಸಿಲುಕಿಕೊಂಡೇ ಇರುವ ಹಾಗೆ ಬದುಕುವಂತೆ ನೂಕುವ ಮನಸ್ಥಿತಿ ಎಂದೇ ಕಾಣಿಸುತ್ತದೆ.
ಈ ನಡುವೆ ಶಾರೀರಿಕ ಹಿಂಸೆ ಮತ್ತು ಮಾನಸಿಕ ಪೀಡನೆಗೆ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು
ಸಾಮಾನ್ಯ ಸಂಗತಿ. ವಂಶ ಅಥವಾ ಕುಲದ ಸಾಮಾಜಿಕ ಪ್ರತಿಷ್ಠೆ, ಕುಟುಂಬ, ತಾಯಿ ತಂದೆಯರ ಗೌರವವನ್ನು,
ವೈಯಕ್ತಿಕ ಗೌರವ ಕಾಪಾಡಿಕೊಳ್ಳುವುದಕ್ಕಾಗಿ ಅನೇಕ ಸ್ತ್ರೀಯರು ಎಲ್ಲವನ್ನು
ಸಹಿಸಿಕೊಳ್ಳುತ್ತಾ ಬಂದಿರುತ್ತಾರೆ. ಹಾಗೆಂದ ಮಾತ್ರಕ್ಕೆ ಆಕೆ ಅಸಹನೀಯ ನೋವಿಲ್ಲ ಎಂದಲ್ಲ. ಆಕೆಯಲ್ಲಿಯೂ
ಅನೇಕ ನುಂಗಲಾರದ ನೋವಿದೆ. ಒಂದು ವೇಳೆ ಇಂತಹ ಮನಸ್ಥಿತಿ ರಾಜಕೀಯ, ಸಾಮಾಜಿಕ ಸಮತೋಲನ ಎಂಬ ನೆಪದಲ್ಲಿ ಜಾರಿಗೆ ಬಂದರೇ,
ಹಸಿ ಗಾಯದ ಮೇಲೆ ಉಪ್ಪುದುರಿಸಿದರೇ ಅಥವಾ ಖಾರದ ಪುಡಿ ಉದುರಿಸಿದರೇ
ಹೇಗಾಗುತ್ತದೋ ಹಾಗೆ ಆಗುವ ನೋವಿದು ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಜನಸಂಖ್ಯೆ ಅಸಮತೋಲನ ಪರಿಹರಿಸಲು ಇದು ಮಾರ್ಗವೇ ?
ದಕ್ಷಿಣ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ
ಶಿಶುಗಳ ಜನನ ದರ ಕುಸಿಯುತ್ತಿದೆ ಎಂಬ ಅಭಿಪ್ರಾಯವಿದೆ. ಈ ಸಂಬಂಧಿಸಿದಂತೆ ಕೆಲವು ವರ್ಷಗಳ ಹಿಂದೆಯೇ
ಸಂಶೋಧಕರು ಎಚ್ಚರಿಕೆಯ ಗಂಟೆ ಭಾರಿಸಿದ್ದಾರೆ. ಇದು ಜನಸಂಖ್ಯೆ, ಆರ್ಥಿಕತೆ, ಸಾಮಾಜಿಕ ಸ್ಥಿತಿಗತಿ ಮತ್ತು ರಾಜಕೀಯ ಪ್ರಾತಿನಿಧ್ಯದ
ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎನ್ನುವ ಅಭಿಪ್ರಾಯವೂ ಈ ನಡುವೆ ಇದೆ. ಇದೇ ಕಾರಣಕ್ಕೆ ಹೆಚ್ಚು
ಮಕ್ಕಳನ್ನು ಹೊಂದಿ ಎನ್ನುವ ಒತ್ತಡವನ್ನು ಹೇರುವುದು ಎಷ್ಟು ಸರಿ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ.
ರಾಜಕೀಯ ಮತ್ತು ಚುನಾವಣೆಯ ಕಾರಣಕ್ಕೆ ನಮ್ಮ
ದೇಶದಲ್ಲಿ ಹೆಣ್ಣು ಅನೇಕ ಸಂದರ್ಭಗಳಲ್ಲಿ ದುರ್ಬಳಕೆಗೆ ಒಳಗಾಗಿದ್ದಾರೆ. ಎಲ್ಲಿಯವರೆಗೆ ಅಂದರೇ,
ಒಂದು ಪಕ್ಷ ಅಧಿಕಾರಕ್ಕೆ ಬಂದರೇ, ಹೆಣ್ಣಿನ ಮಂಗಳಸೂತ್ರವನ್ನು ಕಿತ್ತು ಮುಸ್ಲೀಮರಿಗೆ ಬಲವಂತವಾಗಿ ನೀಡಲಾಗುತ್ತದೆ
ಎಂದು ತೀರಾ ಹೇಸಿಗೆ ಎನ್ನುವ ಹಾಗೆ ಹೇಳುವುದರಿಂದ ಹಿಡಿದು, ಹೆಚ್ಚು ಮಕ್ಕಳನ್ನು ಹೊಂದುವಂತೆ ಬಲವಂತ ಮಾಡುವವರೆಗೆ ಹೆಣ್ಣನ್ನು ಈ ದೇಶದ
ರಾಜಕೀಯ ಬಳಸಿಕೊಂಡಿದೆ ಎಂದರೇ ತಪ್ಪಿಲ್ಲ. ಇಂತಹ ಮನಸ್ಥಿತಿಯೇ ಇಲ್ಲಿ ಹೆಣ್ಣೊಬ್ಬಳ ಜೀವನಕ್ಕೆ ಮಾರಕವಾಗಿ
ಕಾಡುತ್ತಿದೆ. ಭಯದ ವಾತಾವರಣವನ್ನು ಸೃಷ್ಟಿ ಮಾಡುತ್ತಿದೆ.
ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಜನನ ದರದಲ್ಲಿ
ರಾಷ್ಟ್ರೀಯ ಸರಾಸರಿ ಶೇ. 2.1ಕ್ಕಿಂತ ಕಡಿಮೆ ದರ ಹೊಂದಿದೆ. ತಮಿಳುನಾಡು ಶೇ. 1.4 ಕ್ಕಿಂತ ಕಡಿಮೆ,
ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಲ್ಲಿ ಕ್ರಮವಾಗಿ 1.5 ಮತ್ತು ಕರ್ನಾಟಕದಲ್ಲಿ
1.6 ಇದೆ. ಜನನ ದರ ಕಡಿಮೆಯಾದ ಪರಿಣಾಮದಿಂದಾಗಿ ಸಂಸತ್ತಿನಲ್ಲಿ ಈ ರಾಜ್ಯಗಳ ಜನಸಂಖ್ಯೆಶಾಸ್ತ್ರ,
ಆರ್ಥಿಕತೆ ಮತ್ತು ರಾಜಕೀಯ ಪ್ರಾತಿನಿಧ್ಯದ ಮೇಲೆ ದೀರ್ಘಕಾಲೀನ ಪರಿಣಾಮ
ಬೀರಲಿದೆ ಎಂಬ ವಾದವಿದೆ.
ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಹೆರುವ
ಮಕ್ಕಳ ಸಂಖ್ಯೆಯನ್ನು ಫಲವಂತಿಕೆ(ಟಿಎಫ್‍ಆರ್) ಎಂದು ಹೇಳಲಾಗುತ್ತದೆ. ಕೇಂದ್ರ ಸರ್ಕಾರ ಫಲವಂತಿಕೆಯ
ಮಟ್ಟವನ್ನು 2.1ಕ್ಕೆ ನಿಗದಿಪಡಿಸಿದೆ. ಏಕೆಂದರೆ ಇದು ಜನನ ಮತ್ತು ಮರಣಗಳ ನಡುವೆ ಸಮತೋಲನವನ್ನು ಕಾಪಾಡಲು
ಈ ಜನಸಂಖ್ಯೆಯ ಸರಾಸರಿ ಅಗತ್ಯವಿದೆ. ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸರಾಸರಿ ಹೆರುವ ಮಕ್ಕಳ
ಸಂಖ್ಯೆಯನ್ನು ಒಟ್ಟು ಫಲವಂತಿಕೆಯ ದರವನ್ನು ಒಂದು ಸರ್ಕಾರ ನಿರ್ಧರಿಸುವುದು ಕೂಡ ವ್ಯತಿರಿಕ್ತ ಪರಿಣಾಮ
ಬೀರುವುದೆ ಆಗಿದೆ. ಚೀನಾ ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾದಾಗ,
ಚೀನಾ ʼಕುಟುಂಬ/ಸಂಸಾರಕ್ಕೆ ಒಂದೇ ಮಗು ನೀತಿʼಯನ್ನು ಜಾರಿಗೆ ತಂದಿತ್ತು. ಆದರೇ, ಕಾಲಾಂತರದಲ್ಲಿ ಆ ಬಲವಂತದ ನೀತಿಯೂ ಹೆಣ್ಣಿನ
ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಿತ್ತು.
ಇನ್ನು, ಜನಸಂಖ್ಯಾ ಸ್ಫೋಟ ತಡೆಗೆ ಭಾರತದಲ್ಲಿ ಕುಟುಂಬ ಕಲ್ಯಾಣ ಯೋಜನೆ 1952ರಿಂದಲೂ
ಜಾರಿಯಲ್ಲಿದೆ. ಈ ನಡುವೆ, 2016ರಲ್ಲಿ ಕೇಂದ್ರ ಸರ್ಕಾರ ಮಿಷನ್ ಪರಿವಾರ್
ವಿಕಾಸ್ ಎಂಬ ಯೋಜನೆ ರೂಪಿಸಿ, ಗರ್ಭನಿರೋಧಕ ಹಾಗೂ ಕುಟುಂಬ ಕಲ್ಯಾಣ ಸೇವೆಗಳು
ಹೆಚ್ಚುಹೆಚ್ಚು ಲಭ್ಯವಾಗುವಂತೆ ನೋಡಿಕೊಂಡಿತು. ಹೆಚ್ಚು ಫಲವಂತಿಕೆಯ ದರ ಹೊಂದಿರುವ ಬಿಹಾರ,
ಉತ್ತರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ,
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಜಾರ್ಖಂಡ್‌ಗಳಿಗೆ ಒತ್ತು ನೀಡಲಾಯಿತು. ಎಲ್ಲ ಹಂತದಲ್ಲೂ ಗರ್ಭನಿರೋಧಕ ಸಿಗುವಂತೆ
ಮಾಡಲಾಯಿತು. ಸರ್ಕಾರದ ಯೋಚನೆಯ ಪ್ರಕಾರ ಫಲ ನೀಡಿತ್ತು. ಆದರೇ, ಇದರ ದೂರಗಾಮಿ ಪರಿಣಾಮಗಳ ಬಗ್ಗೆ ಯೋಚಿಸಿತ್ತೇ ?
ದಕ್ಷಿಣ ರಾಜ್ಯಗಳಲ್ಲಿ ಕಂಡಿರುವ ಜನನ ದರ
ಕುಸಿತದ ಕಾರಣದಿಂದ. ದೇಶದ ಜನಸಂಖ್ಯೆಯ ಅಸಮತೋಲನ ದಕ್ಷಿಣ ರಾಜ್ಯಗಳ ಮೇಲೆ ರಾಜಕೀಯವಾಗಿ ಪರಿಣಾಮ ಬೀರುತ್ತದೆ
ಎಂಬ ಕಾರಣಕ್ಕೆ ಮಕ್ಕಳನ್ನು ಜಾಸ್ತಿ ಹೊಂದಿ ಎನ್ನುವುದು ಪರಿಹಾರವೇ ? ಈ ಅಸಮತೋಲನದ ಕಾರಣದಿಂದಾಗುವ ರಾಜಕೀಯ ಸಮಸ್ಯೆಗಳಿಗೆ ಬೇರೆ ಮಾರ್ಗವನ್ನೇ
ಕಂಡುಕೊಳ್ಳಬೇಕೆ ಹೊರತು ಹೆಚ್ಚು ಮಕ್ಕಳನ್ನು ಹೊಂದಿ ಎನ್ನುವುದು ಮತ್ತು ಜನಸಂಖ್ಯೆ ಹೆಚ್ಚಳವಾದಾಗ ಗರ್ಭ ನಿರೋಧಕ ನೀತಿಯನ್ನು ಬಲವಂತವಾಗಿ ತರುವುದು
ಕೂಡ ಹೆಣ್ಣಿನ ಮೇಲೆ ಕೆಟ್ಟ ಪರಿಣಾಮವೇ ಆಗಿದೆ. ಯೋಚನೆ ಮಾಡಿ.
-ಶ್ರೀರಾಜ್ ವಕ್ವಾಡಿ.

No comments:
Post a Comment