Thursday, October 26, 2023

ಕಾಂಗ್ರೆಸ್‌ಗೆ ಎದೆಗಾರಿಕೆ ಇಲ್ಲವೇ ?

 ನಿರ್ಮಿತಿ ಕೇಂದ್ರದ ಮೇಲೆ ಹೊಣೆಗಾರಿಕೆ ಹಾಕಿ ಜಾರಿಕೊಳ್ಳುವ ಯತ್ನದಲ್ಲಿ ಶಾಸಕರಿದ್ದಾರೆಯೆ !?

ಅಧಿಕಾರಕ್ಕೆ ಬಂದರೇ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂಬ ಭರವಸೆಯನ್ನು ರಾಜ್ಯದ ಜನರ ಮುಂದೆ ಇಟ್ಟು ಸರ್ಕಾರ ರಚಿಸುವ ಕಾಂಗ್ರೆಸ್‌, ಪರಶುರಾಮ ಥೀಂ ಪಾರ್ಕ್‌ ನಲ್ಲಿ ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡು ಪರಶುರಾಮನ ನಕಲಿ ಮೂರ್ತಿ ಸ್ಥಾಪಿಸಲಾಗಿದೆ ಎಂದು ದಾಖಲೆ ಪೂರ್ಣ ಆರೋಪ ಮಾಡುತ್ತಿದ್ದರೂ ಅದರ ವಿರುದ್ಧ ಕ್ರಮಕ್ಕೆ ಮುಂದಾಗದೇ ಜಾಣ ಮೌನ ವಹಿಸಿ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ.

ಹೌದು, ಕಾರ್ಕಳದ ಯರ್ಲಪಾಡಿಯ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಡುವ ಉಮಿಕಲ್‌ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಂ ಪಾರ್ಕ ನ ಮೇಲೆ ಸ್ಥಾಪನೆ ಮಾಡಿರುವ ಪರಶುರಾಮ ವಿಗ್ರಹ ನಕಲಿ ಎಂಬ ವಿಚಾರದ ವಿರುದ್ಧ ಯಾವುದೇ ಕ್ರಮವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ತೆಗೆದುಕೊಳ್ಳದೇ ಉಳಿದಿರುವುದು ಜನರಿಗೆ ಅನುಮಾನ ಹುಟ್ಟಲಾರಂಭಿಸಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತರಾತುರಿಯಲ್ಲಿ ತನಗಿದ್ದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಶಾಸಕ ಸುನೀಲ್‌ ಕುಮಾರ್‌ ಅವರು ನಿರ್ಮಿತಿ ಕೇಂದ್ರದ ಮೇಲೆ ಒತ್ತಡ ಹೇರಿ ಮಾಡಿಸಿರುವ ಥೀಂ ಪಾರ್ಕ್‌ ನ ಪರಶುರಾಮನ ವಿಗ್ರಹ ನಕಲಿ ಎಂಬ ವಿಚಾರ ಈಗ ಬಟಾಬಯಲಾಗಿದೆ.     

ಈ ವಿವಾದದ ಸುತ್ತ ಹಲವು ಪ್ರಶ್ನೆಗಳಿವೆ.  ಹಿಂದೂ ಧರ್ಮ, ಧರ್ಮ ಸಂರಕ್ಷಣೆಯ ವಿಚಾರದಲ್ಲಿ ಒಂದು ಸಣ್ಣ ವ್ಯತ್ಯಾಸ ಆದರೂ ಬೀದಿಗಿಳಿದು ಹೋರಾಟ ಮಾಡುವ, ಪ್ರತಿಭಟಿಸುವ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು, ಹಿಂದೂ ಧರ್ಮದ ಪ್ರಮುಖ ದೇವರಾದ ಮಹಾವಿಷ್ಣುವಿನ ಆರನೇ ಅವತಾರ ಆಗಿರುವ ಪರಶುರಾಮನ ಹೆಸರಿನಲ್ಲಿ ಜನರನ್ನು ಧಾರ್ಮಿಕವಾಗಿ ನಂಬಿಸಿ ಮೋಸ ಮಾಡಲಾಗಿದೆ ಎಂದು ದಾಖಲೆ ಸಮೇತ  ಹೇಳಲಾಗುತ್ತಿರುವ ಆರೋಪದ ಬಗ್ಗೆ ಒಂದೇ ಒಂದು ಸಣ್ಣ ಮಾತೂ ಆಡುತ್ತಿಲ್ಲ ಯಾಕೆ ? ಕಂಚಿದ್ದೇ ಹೌದಾಗಿದ್ದರೇ ಸ್ಥಾಪನೆ ಮಾಡಲಾಗಿದ್ದ ಮೂರ್ತಿಯನ್ನು ಮರುವಿನ್ಯಾಸದ ನೆಪದಲ್ಲಿ ರಾತ್ರೋರಾತ್ರಿ ಅರ್ಧ ಕಡಿದು ತೆಗೆದುಕೊಂಡು ಹೋಗಿದ್ಯಾಕೆ ?  ಬಿಜೆಪಿಯವರು ಎಂದು ಗುರುತಿಸಿಕೊಂಡವರು, ಸುನೀಲ್‌ ಕುಮಾರ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು ಥೀಂ ಪಾರ್ಕ್‌ ಗೆ ಸಾರ್ವಜನಿಕ ನಿರ್ಬಂಧ ಇದ್ದರೂ ಅಲ್ಲಿಗೆ ಹೋಗಿ ಪರಶುರಾಮನ ಕಾಲಿಗೆ ಸುತ್ತಿಗೆಯಿಂದ ಹೊಡೆದು ಇದು ಕಂಚಿದ್ದು ಎಂದು ತೋರಿಸುವ ಅಗತ್ಯ ಏನಿತ್ತು ? ಅದು ಈಗ ನಕಲಿ ಮೂರ್ತಿ ಎಂದು ಸಾಬೀತಾದಾರೂ, ಅದನ್ನು ಹಿಂದೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜನರನ್ನು ಧಾರ್ಮಿಕವಾಗಿ ನಂಬಿಸಿ ಸ್ಥಾಪನೆ ಮಾಡಿದ್ದಲ್ಲವೇ ? ಸಾವಿರ ಶಂಖ ನಾದ, ಭಜನೆ ಎಲ್ಲವೂ ನಡೆದಿತ್ತಲ್ಲವೇ ? ಇದೇ ಸುನಿಲ್‌ ಕುಮಾರ್‌ ಇದೊಂದು ಧಾರ್ಮಿಕ ಕ್ಷೇತ್ರ ಎಂದು ಕೂಡ ಹೇಳಿದ್ದಾರಲ್ಲವೇ ? ಈಗ ಯಾಕೆ ತಮ್ಮ ಮಾತಿನ ವರಸೆ ಬದಲಾಯಿಸುತ್ತಿರುವುದು ? ಅವರ ನೇತೃತ್ವದಲ್ಲಿಯೇ ಈ ಥೀಂ ಪಾರ್ಕ್‌ ಆಗಿದ್ದಲ್ಲವೇ ? ರಾಜ್ಯದ ಎಲ್ಲಾ ದಿನ ಪತ್ರಿಕೆಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ತಮ್ಮ ನೇತೃತ್ವದಲ್ಲಿಯೇ ಆಗಿದ್ದು ಎಂದು ಕ್ರೆಡಿಟ್ಸ್‌ ತೆಗೆದುಕೊಂಡಿದ್ದಲ್ಲವೇ  ? ಈಗ ಯಾಕೆ ಇಲ್ಲಿನ ಯಾವುದೇ ತಾಂತ್ರಿಕ ಮಾಹಿತಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳುತ್ತಿರುವುದು ? ಎಲ್ಲಾ ಹೊಣೆಗಾರಿಕೆಯನ್ನು ಈಗ ನಿರ್ಮಿತಿ ಕೇಂದ್ರದ ಮೇಲೆ ಹಾಕಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಯಾಕೆ ? ಅದು ಯಾವ ಲೋಹಕ್ಕೆ ಫೈಬರ್‌ ಬೆಸುಗೆ ಹಾಕುವುದಕ್ಕೆ ಸಾಧ್ಯವಿದೆ ? ಅದು ಅಲ್ಲದೇ ೩೩ ಅಡಿಯ ೧೫ ಟನ್‌ ತೂಕದ ಕಂಚಿನ ಪ್ರತಿಮೆಗೆ ಅದು ಯಾವ ರೀತಿಯಲ್ಲಿ ಫೈಬರ್‌ ನಿಂದ ಬೆಸುಗೆ ಹಾಕಿ ಪರಶುರಾಮನ ಮೂರ್ತಿಯನ್ನು ನಿಲ್ಲಿಸಿದ್ದಾರೆ ? ಅದು ಯಾವ ತಂತ್ರಜ್ಞಾನ ಬಳಸಿ ಕಂಚಿನ ಪ್ರತಿಮೆಗೆ ಫೈಬರ್‌ ನಿಂದ ಬೆಸುಗೆ ಮಾಡಿದ್ದಾರೆ ? ಅವೆಲ್ಲವೂ ಇರಲಿ ಬಿಡಿ, ಇದರಲ್ಲಿ ತೊಡಗಿಕೊಂಡವರು ಸುಳ್ಳನ್ನು ರಂಜಿಸುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಶಾಸಕ ಸುನೀಲ್‌ ಕುಮಾರ್‌ ಅವರನ್ನು ಒಳಗೊಂಡು ಜಿಲ್ಲಾಧಿಕಾರಿ, ನಿರ್ಮಿತಿ ಕೇಂದ್ರದ ದ ಮ್ಯಾನೇಜಿಂಗ್‌ ಡೈರೆಕ್ಟರ್‌ ಅರುಣ್‌ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರು ಸೇರಿ ಇದರಲ್ಲಿ ಭಾಗಿಯಾದವರ ಮೇಲೆ ಪ್ರತಿಭಟನಾಕಾರರು ಲೋಕಾಯುಕ್ತದಲ್ಲಿ ಕಂಪ್ಲೆಂಟ್‌ ಕೊಟ್ಟಿದ್ದರಾದರೂ ಯಾಕೆ ಈ ಬಗ್ಗೆ ಲೋಕಾಯುಕ್ತವಾಗಲಿ, ಸರ್ಕಾರವಾಗಲಿ ಸಮಗ್ರ ತನಿಖೆ ನಡೆಸುವುದಕ್ಕೆ ಮುಂದಾಗುತ್ತಿಲ್ಲ ? ರಾಜ್ಯ ಕಾಂಗ್ರೆಸ್‌ ಸರ್ಕಾರ ಸುನೀಲ್‌ ಕುಮಾರ್ ಜೊತೆ ರಾಜಕೀಯ ಒಳ ಒಪ್ಪಂದ ಮಾಡಿಕೊಂಡಿದೆಯೇ  ?

ಇತ್ತೀಚೆಗೆ ಸುನೀಲ್‌ ಕುಮಾರ್‌ ನೇತೃತ್ವದಲ್ಲಿ ಅವರ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್‌ ರಾಷ್ಟ್ರೀಯತೆಗೆ ಮಾರಕ ಎಂಬಂತೆ ʼಫೀಡಿಂಗ್‌ʼ ಮಾಡಲಾಯಿತೇ ? ಖಂಡಿತ ಹೌದು. ಮಾಹಿತಿ ಹಕ್ಕಿನಿಂದ ಪಡೆಯಲಾದ ಮಾಹಿತಿಯಲ್ಲಿರುವ ವಿಷಯದ ಬಗ್ಗೆ ಪ್ರತಿಭಟನಾಕಾರರು ಕೇಳುತ್ತಿರುವ ಒಂದೇ ಒಂದು ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಅಲ್ಲಿ ಆಗಿಲ್ಲ. ಕಾಂಗ್ರೆಸ್‌ ಬಗ್ಗೆ, ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ,ಕಾಂಗ್ರೆಸ್‌ ಹಿಂದೂ ವಿರೋಧಿ ಎಂಬ ವಿಚಾರವನ್ನು ನೆರೆದವರಿಗೆ ʼಫೀಡ್‌ʼ ಮಾಡುವುದಕ್ಕೆ ಪ್ರಯತ್ನ ಮಾಡಲಾಗಿತ್ತೇ ಹೊರತು ವಿವಾದದ ಬಗ್ಗೆ ಮಾತಾಡಲೇ ಇಲ್ಲ. ಪ್ರತಿಭಟನೆ ಮಾಡುವವರು ಉಪವಾಸಕ್ಕೆ ಕೂತಾಗ ನಾನೂ ನಿಮ್ಮ ಜೊತೆಗೆ ನಿಲ್ತೇನೆ, ಈ ಬಗ್ಗೆ ಸಮಗ್ರ ತನಿಖೆ ಆಗಲಿ ಎಂದು ಅಂದೇ ಹೇಳಿದ್ದಿದ್ದರೇ, ಈಗ ನಿರ್ಮಿತಿ ಕೇಂದ್ರದ ಮೇಲೆ ಎಲ್ಲಾ ಹೊಣೆಗಾರಿಕೆಯನ್ನು ಹಾಕಿ ಜಾರಿಕೊಳ್ಳುವ ಪ್ರಯತ್ನ ಮಾಡಬೇಕಿತ್ತೆ ? ಎಲ್ಲಾ ರಾಜಕೀಯ ಹೊಂದಾಣಿಕೆ ಆದ ಮೇಲೆ ಕಾರ್ಯಕರ್ತರ ಸಭೆ ಕರೆಯುವುದೂ ಅಗತ್ಯವಿರಲಿಲ್ಲ, ಪ್ರತಿ ಮಾತಿನಲ್ಲೂ  ತಾನು ಹೇಳಿದ್ದನ್ನು ಒಪ್ಪಿಕೊಳ್ಳುವಂತೆ ಮಾಡುವ ಅನಿವಾರ್ಯತೆಯೂ ಬರುತ್ತಿರಲಿಲ್ಲ, ʼತನಿಖೆ ಮಾಡಿ ಮಾಡಿ ಮಾಡಿ ಅಂತ್ಹೇಳಿ ನೂರು ಸಲ ಹೇಳ್ತೇನೆʼ ಅಂತ ಧ್ವನಿ ಏರಿಸುವ ಸಂಭವವೂ ಬರುತ್ತಿರಲಿಲ್ಲ. ವ್ಯವಸ್ಥಿತವಾಗಿ ಇಲ್ಲೊಂದು ರಾಜಕೀಯ ಒಳ ಒಪ್ಪಂದ ನಡೆದಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಲೋಕಾಯುಕ್ತಕ್ಕೆ ಕಂಪ್ಲೆಂಟ್‌ ಕೊಟ್ಟಿದ್ದರೂ ಕೂಡ ಆ ಫೈಲ್‌ ಇನ್ನೂ ಇದ್ದಲ್ಲೇ ಇದೆ ಎಂದರೇ ಇಲ್ಲಿ ರಾಜಕೀಯ ಒತ್ತಡ ಇದೆ ಎಂದೇ ನೇರವಾಗಿ ಕಾಣಿಸುತ್ತಿದೆ.

ಮಾಹಿತಿ ಹಕ್ಕು ನೀಡಿರುವ ಪ್ರಕಾರ, ನಿರ್ಮಿತಿ ಕೇಂದ್ರದಿಂದ ಪರಶುರಾಮನ ವಿಗ್ರಹಕ್ಕೆ ವರ್ಕ್‌ ಆರ್ಡರ್‌ ಕೊಟ್ಟಿದ್ದೇ ೧೫. ಡಿಸೆಂಬರ್‌ ೨೦೨೨ರಂದು. ಪರಶುರಾಮ ಥೀಮ್‌ ಪಾರ್ಕ್‌ ಲೋಕಾರ್ಪಣೆಗೊಂಡಿದ್ದು ೨೭ ಜನವರಿ ೨೦೨೩ರಂದು. ಒಂದು ತಿಂಗಳ ಅಂತರದಲ್ಲಿ ೩೩ ಅಡಿ ಎತ್ತರದ ೧೫ ಟನ್‌ ಭಾರದ ಕಂಚಿನ ಪ್ರತಿಮೆ ಹೇಗೆ ನಿರ್ಮಾಣ ಆಗಿ ತಂದು ಇಲ್ಲಿ ಸ್ಥಾಪನೆ ಮಾಡುವುದಕ್ಕೆ ಸಾಧ್ಯವಿದೆ ? ಇಲ್ಲೇ ಈ ಬಗ್ಗೆ ಸಂದೇಹ ಇರುವುದು. ಪ್ರತಿಭಟನಾಕಾರರು ಇಷ್ಟೆಲ್ಲಾ ದಾಖಲೆ ಸಮೇತ ಆರೋಪ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಯಾಕೆ ಎನ್ನುವುದೇ ಈಗ ಸಂಶಯ. ಸುನೀಲ್‌ ಕುಮಾರ್‌ ರಾಜ್ಯ ಕಾಂಗ್ರೆಸ್‌ ಸರ್ಕಾರದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ರಾಜಕೀಯ ಒಲಯದಲ್ಲಿ ಕೇಳಿ ಬರುತ್ತಿದೆ. ಮಾತ್ರವಲ್ಲದೇ,  ಕರಾವಳಿ ಕರ್ನಾಟಕದ, ಅದರಲ್ಲೂ ಬೈಂದೂರು ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್‌ ಶಾಸಕರು ಪರೋಕ್ಷವಾಗಿ ಸುನೀಲ್‌ ಕುಮಾರ್‌ ಅವರಿಗೆ ʼಜಾತಿ ಸಪೋರ್ಟ್‌ʼ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿರ್ಮಿತಿ ಕೇಂದ್ರದಿಂದ ಸಲ್ಲಬೇಕಾಗಿರುವುದು ಸಲ್ಲಿಸಲಾಗಿದೆ ಎಂಬ ಮಾತು ಕೂಡ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಅಧಿಕಾರಿ ವರ್ಗವನ್ನು ಬಾಯಿ ಮುಚ್ಚಿಸಲಾಗಿದೆ ಎಂಬ ಅಪಸ್ವರ ಕೇಳಿ ಬರುತ್ತಿದೆ.

ಸರ್ಕಾರಿ ಹಣವನ್ನು ಇಷ್ಟೆಲ್ಲಾ ದುರುಪಯೋಗ ಮಾಡಿಕೊಂಡಿರುವುದರ ಬಗ್ಗೆ ಸೂಕ್ತವಾದ ತನಿಖೆ ನಡೆಸುವುದಕ್ಕೆ ಸರ್ಕಾರ ಯಾಕೆ  ಹಿಂದೇಟು ಹಾಕುತ್ತಿದೆ.? ಇದನ್ನೇ ಬಿಜೆಪಿ ಆಗಿದ್ದಿದ್ದರೇ, ಅದಾಗಲೇ ತನ್ನ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಬಳಸಿಕೊಳ್ಳುತ್ತಿತ್ತು. ಈ ಕಾಲದ ರಾಜಕೀಯಕ್ಕೆ ಕಾಂಗ್ರೆಸ್‌ ಔಟ್‌ ಡೇಟಡ್ ಎಂದು ಹೇಳುವುದು ಇದೇ ಕಾರಣಕ್ಕೆ. ನಂಬಿಕೆಯ ಹೆಸರಿನಲ್ಲಿ ನಡೆಯಲಾಗಿದೆ ಎಂದು ಹೇಳಲಾಗುವ ಈ ಭ್ರಷ್ಟ ರಾಜಕೀಯ ಮಾಡಿದವರಿಗೆ ಸೂಕ್ತವಾದ ಪಾಠ ಆಗಬೇಕು. ಈ ಸರ್ಕಾರದಿಂದಲೂ ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕೆ ಆಗದಿದ್ದರೇ ಅದು ನಾಚಿಕೆಗೇಡು. 

ಇದೆಂತಹ ಅಭಿವೃದ್ಧಿ ? ಇದೆಂತಹ ಹಿಂದುತ್ವ ? ಇದೆಂತಹ ರಾಜಕೀಯ ? ಪ್ರತಿಭಟನಾಕಾರರು ಕೇಳುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಮೌನವಹಿಸಿ ಆಟ ನೋಡುತ್ತಿದೆ. ತನ್ನನ್ನು ತಾನೇ ಟೀಕೆಗೆ ಒಳಪಡಿಸಿಕೊಳ್ಳುವುದು ಎಂದರೇ ಹೀಗೆ. ಕಾಂಗ್ರೆಸ್‌ ಯಾವಾಗಲೂ ರಾಜಕೀಯ ಮೈಲೆಜ್‌ ಕಳೆದುಕೊಳ್ಳುವುದು ಈ ಹಿಂದುತ್ವ ಹಾಗೂ ಹಿಂದೂ ಧರ್ಮದ ವಿಚಾರದಲ್ಲಿಯೇ. ಈಗ ಹಿಂದೂ ಧರ್ಮದ ಹೆಸರಿನಲ್ಲಿ ದ್ರೋಹ ಎಸಗಲಾಗಿದೆ ಎಂದು ಹೇಳಲಾಗುತ್ತಿರುವುದರ ಬಗ್ಗೆ ಕಾಂಗ್ರೆಸ್‌ ಒಂದು ಸೂಕ್ತ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡರೇ, ಎಲ್ಲಿ ತನ್ನ ರಾಜಕೀಯದ ವರ್ಚಸ್ಸು ಕಡಿಮೆ ಇದೆಯೋ ಅಲ್ಲಿ ಮರಳಿ ಪಡೆಯುವುದಕ್ಕೆ ಸಾಧ್ಯವಿದೆ. ಈ ಯೋಜನೆಗೆ ಪ್ರವಾಸೋದ್ಯಮ ಇಲಾಖೆಯಿಂದ 6.50 ಕೋಟಿ ರೂ. ಮಲೆನಾಡು ಅಭಿವೃದ್ಧಿ ಮಂಡಳಿಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಪಿಟಿಸಿಎಲ್ ಸಿಎಸ್‌ಆರ್ ನಿಧಿಯಿಂದ ತಲಾ 1 ಕೋಟಿ ರೂಗಳ ಅನುದಾನವನ್ನು ಪಡೆಯಲಾಗಿದೆ. ಹಾಗಾಗಿ ಇದೊಂದು ಸರ್ಕಾರಿ ಆಸ್ತಿ. ಸಾರ್ವಜನಿಕರ ಹಣ ಹೀಗೆ ಇಲ್ಲಿ ದುರ್ಬಳಕೆ ಆಗಿದೆಎಂದು ಆರೋಪ ಇದ್ದರೂ ಕೂಡ ಯಾಕೆ ರಾಜ್ಯ ಸರ್ಕಾರ ತನಿಖೆ ನಡೆಸಲು ಮುಂದಾಗುತ್ತಿಲ್ಲ ? ಕಾಂಗ್ರೆಸ್‌ ಗೆ ತಾಕತ್ತಿಲ್ಲವೇ ?

-ಶ್ರೀರಾಜ್‌ ವಕ್ವಾಡಿ

Thursday, October 19, 2023

ಲೋಕಸಭಾ ಚುನಾವಣೆಗೆ ಈ ಪಂಚರಾಜ್ಯ ಚುನಾವಣೆ ಸೆಮಿಫೈನಲ್‌ ಅಖಾಡ

 


ಮಧ್ಯಪ್ರದೇಶ, ರಾಜಸ್ಥಾನ : ತಂತ್ರಗಾರಿಕೆ ಅದಲುಬದಲು ಮಾಡಿಕೊಂಡ ಕಾಂಗ್ರೆಸ್‌, ಬಿಜೆಪಿ !

ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣಾ ತಂತ್ರಗಾರಿಕೆಗಳು ಎಂದಿಗೂ ಭಿನ್ನ. ವಿಧಾನಸಭಾ ಚುನಾವಣೆಯಲ್ಲಿ ಯಶಸ್ಸು ಕಂಡ ಚುನಾವಣಾ ತಂತ್ರಗಾರಿಕೆ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕಾಲಕ್ಕೂ ಯಶಸ್ಸು ಕಾಣುವುದಿಲ್ಲ ಎನ್ನುವುದು ಕೂಡ ಸತ್ಯ. ಈಗ ರಾಷ್ಟ್ರ ರಾಜಕಾರಣ ವಲಯದಲ್ಲಿ ರಾಜಸ್ಥಾನ, ಛತ್ತೀಸ್‌ ಗಢ, ಮಿಜೋರಾಂ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗಳ ಚರ್ಚೆ. ನವೆಂಬರ್‌ ೭ ರಿಂದ ೩೦ರವರೆಗೆ ಮತದಾನ ನಡೆಯುವ ಚುನಾವಣೆಯ ಜೊತೆಜೊತೆಗೆ ಲೋಕಸಭಾ ಚುನಾವಣೆಯ ಲೆಕ್ಕಾಚಾರವನ್ನು ಹಾಕುತ್ತಿವೆ. ಬರುವ ಮಾರ್ಚ್‌ ತಿಂಗಳ ಅಂತಿಮ ವಾರದಲ್ಲಿ  ಅಥವಾ ಏಪ್ರಿಲ್‌ ನಿಂದ ಪ್ರಾರಂಭವಾಗುವ ಸಾರ್ವತ್ರಿಕ ಚುನಾವಣೆಗೆ ನಾಲ್ಕೈದು ತಿಂಗಳ ಮೊದಲು ನಡೆಯಲಿರುವ ಈ ಚುನಾವಣೆಗಳ ಮೇಲೆ ರಾಷ್ಟ್ರದ ದೃಷ್ಟಿ ನೆಟ್ಟಿದೆ.

ಈ ಪಂಚರಾಜ್ಯ ಚುನಾವಣೆಗಳು ಒಂದು ರೀತಿಯಲ್ಲಿ  ಲೋಕಸಭಾ ಚುನಾವಣೆಗೆ ಪ್ರವೇಶಿಸುವ ಮುನ್ನಾ ರಾಜ್ಯ ರಾಜಕಾರಣ ವಲಯದಲ್ಲಿ ಸೆಮಿಫೈನಲ್‌. ಈ ಸುತ್ತಿನಲ್ಲಿ ಗೆಲ್ಲುವ ಪಕ್ಷವು ಉತ್ತಮ ಫಾರ್ಮ್‌ನಲ್ಲಿ ಫೈನಲ್‌ ಅಖಾಡಕ್ಕೆ ಲಗ್ಗೆ ಇಡುತ್ತದೆ.

ಈ ಪಂಚರಾಜ್ಯ ಚುನಾವಣೆಗಳಿಗೆ ಕುತೂಹಲಕಾರಿಯಾದ ರಾಜಕೀಯ ಇತಿಹಾಸವಿದೆ ಎನ್ನುವುದನ್ನು ನಾವು ಇಲ್ಲಿ ಗಮನಿಸಬೇಕು. ಈ ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹಾಗೂ ಲೋಕಸಭಾ ಚುನಾವಣೆಗಳು ಎಂದಿಗೂ ಒಂದೇ ಪಕ್ಷಕ್ಕೆ ಬಹುಮತವನ್ನು ತಂದುಕೊಟ್ಟಿಲ್ಲ. ೨೦೦೩ರ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ ಗಢದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಹಿಡಿದಿತ್ತು. ಆದರೇ, ೨೦೦೪ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಮೂರು ರಾಜ್ಯಗಳಲ್ಲಿ ಹಿಂದೆ ಬಿದ್ದು ಸೋಲು ಅನುಭವಿಸಿತು.

೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಹಾಗೂ ಛತ್ತೀಸ್‌ ಗಢದ ವಿಧಾನಸಭಾ ಚುನಾವಣೆಯಲ್ಲಿ  ಮತ್ತೆ ಬಿಜೆಪಿ ಅಧಿಕಾರ ಹಿಡಿಯಿತು. ಆದರೇ, ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡಿತು. ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಅನುಭವ ಕಂಡಿತು. ೨೦೧೩ಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ ಗಢದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಿತು, ಮಾತ್ರವಲ್ಲದೇ ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಮೂರೂ ರಾಜ್ಯಗಳಲ್ಲಿ ಹೆಚ್ಚು ಸಂಸದೀಯ ಸ್ಥಾನಗಳನ್ನು ತನ್ನದಾಗಿಸಿಕೊಂಡು ಐತಿಹಾಸಿಕ ಗೆಲುವು ಕಂಡಿತು. ಆದರೇ, ೨೦೧೮ರಲ್ಲಿ ತೆಲಂಗಾಣ ರಾಜ್ಯವನ್ನು ಒಳಗೊಂಡು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ ಗಢ ವಿಧಾನಸಭಾ  ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡು ಅಧಿಕಾರವನ್ನು ಕಳೆದುಕೊಂಡಿತು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಗೆದ್ದು ಬೀಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಇನ್ನು, ಸಿ.ಎಸ್‌.ಡಿ.ಎಸ್‌ ಪೋಸ್ಟ್‌ ಪೋಲ್‌ ಸಮೀಕ್ಷೆ ಹೇಳುವ ಪ್ರಕಾರ ಚುನಾವಣೆಯ ಸಂದರ್ಭದಲ್ಲಿ ಮತದಾರರ ನಿಲುವನ್ನು ನಿರ್ಧರಿಸುವುದು ಕಷ್ಟ, ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಿರುತ್ತಾರೋ, ಅದು ಅಂತಿಮ ಹಂತದಲ್ಲಿ ಬದಲಾಗುವ ಸಂಭವವೂ ಇರುತ್ತದೆ. ಶೇ.೧೨ರಿಂದ ೧೫ರಷ್ಟು ಮತದಾರರು ಮತದಾನದ ದಿನ ಯಾರಿಗೆ ಮತ ಚಲಾಯಿಸುವುದು ಎಂದು ನಿರ್ಧರಿಸುತ್ತಾರೆ. ಇದು ರಾಜಕೀಯ ಪಕ್ಷಗಳ ನಿರೀಕ್ಷೆಯನ್ನು ಕೆಲವೊಮ್ಮೆ ಬುಡಮೇಲು ಮಾಡುವುದಕ್ಕೆ ಸಾಧ್ಯವಿದೆ ಎಂದು ಈ ಸಮೀಕ್ಷಾ ವರದಿ ಹೇಳುತ್ತದೆ.

ಮುಂದಿನ ತಿಂಗಳಲ್ಲಿ ಬರಲಿರುವ ಈ ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ರಾಜಸ್ಥಾನ ಮತ್ತು ಛತ್ತೀಸ್‌ ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಮತ್ತು ತೆಲಂಗಾಣ ಮತ್ತು ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳಾದ ಬಿ.ಆರ್‌.ಎಸ್ ಮತ್ತು ಎಂ.ಎನ್‌.ಎಫ್ ಅಧಿಕಾರದಲ್ಲಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಈಗ ಈ ಎಲ್ಲಾ ರಾಜ್ಯಗಳಲ್ಲಿ ಸಕಾರಾತ್ಮಕವಾದಂತಹ ಒಂದು ರಾಜಕೀಯ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಬೇಕಾಗಿರುವ ಅನಿವಾರ್ಯತೆ ಇದೆ ಎನ್ನುವುದು ಮುಖ್ಯಾಂಶ. ಲೋಕಸಭಾ ಚುನಾವಣೆಯ ಫಲಿತಾಂಶ ವಿಧಾನಸಭಾ ಚುನಾವಣೆಯ ಫಲಿತಾಂಶದ ಆಧಾರದಲ್ಲಿ ಇರುವುದಿಲ್ಲದಾದ್ದರಿಂದ ಲೋಕಸಭೆಗಾಗಿ ಬೇರೆಯೇ ತಂತ್ರಗಾರಿಕೆಯನ್ನು ಮಾಡಿಕೊಂಡು ಮುನ್ನಡೆಯಬೇಕಾಗಿದೆ. ಈ ಪಂಚರಾಜ್ಯಗಳಲ್ಲಿ ಕಾಂಗ್ರೆಸ್‌ ಕನಿಷ್ಟ ಮೂರು ರಾಜ್ಯಗಳಲ್ಲಿ ಹಾಗೂ ಬಿಜೆಪಿ ಕನಿಷ್ಟ ಎರಡು ರಾಜ್ಯಗಳಲ್ಲಿ ಗೆಲ್ಲುವ ಪ್ರಯತ್ನದಲ್ಲಿವೆ. ರಾಷ್ಟ್ರೀಯ ಚುನಾವಣೆಯ ಸಂದರ್ಭದಲ್ಲಿ ದಕ್ಷಿಣ ಮತ್ತು ಈಶಾನ್ಯ ಭಾರತದಲ್ಲಿ ಪ್ರಸ್ತುತವಾಗಿ ಉಳಿಯಲು ಪ್ರಾದೇಶಿಕ ಶಕ್ತಿಗಳು ತೆಲಂಗಾಣ ಮತ್ತು ಮಿಜೋರಾಂ ಅನ್ನು ಉಳಿಸಿಕೊಳ್ಳುವ ಅಗತ್ಯವಿದೆ.

ಸದ್ಯ ಪ್ರೀ ಪೋಲ್‌ ಸಮೀಕ್ಷೆ ಹೇಳುವ ಪ್ರಕಾರ, ಎಲ್ಲಾ ರಾಜ್ಯಗಳಲ್ಲಿ ಈಗ ಒಂದು ಉಸಿರು ಗಟ್ಟಿದ ರಾಜಕೀಯ ವಾತಾವರಣವಿದೆ. ಎಲ್ಲಾ ರಾಜ್ಯಗಳಲ್ಲಿಯೂ ಯಾವ ಪಕ್ಷಕ್ಕೂ ಬಹುಮತ ಬರುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಈ ಪಂಚರಾಜ್ಯ ಚುನಾವಣೆಗಳು ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಮುಖ್ಯ ಎನ್ನಿಸಿಕೊಳ್ಳುತ್ತಿವೆ. ಸ್ಥಳೀಯ ರಾಜಕೀಯ ಮುಖವೇ ಇಲ್ಲಿ ಹೆಚ್ಚು ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗುತ್ತಿದೆ. ಅಂದರೇ, ರಾಷ್ಟ್ರ ಮಟ್ಟದ ರಾಜಕೀಯ ವರ್ಚಸ್ಸು ಈ ರಾಜ್ಯಗಳಲ್ಲಿ ಎಷ್ಟೇ ಪ್ರಯತ್ನಮುಖವಾಗಿ ಕಾರ್ಯನಿರ್ವಹಿಸಿದರೂ ಅದು ಕಾರ್ಯಕ್ಕೆ ಬರುವುದಿಲ್ಲ ಎನ್ನಲಾಗುತ್ತಿದೆ. ಇನ್ನು, ಸಿ.ಎಸ್.ಡಿ.ಎಸ್‌ ಪೋಸ್ಟ್‌ ಪೋಲ್‌ ೨೦೧೮ರಲ್ಲಿ ಈ ಪಂಚರಾಜ್ಯಗಳಲ್ಲಿ ಮಾಡಿರುವ ಒಂದು ಸಮೀಕ್ಷೆಯ ಪ್ರಕಾರ, ಸುಮಾರು ಶೇ.೩೯ರಷ್ಟು ಮತದಾರರು ಪಕ್ಷವನ್ನು ನೋಡಿ ಮತ ಚಲಾಯಿಸುವ ನಿರ್ಧಾರ ಮಾಡುವುದಾದರೇ, ಶೇ. ೨೧ರಷ್ಟು ಮತದಾರರು ಸ್ಥಳೀಯ ನಾಯಕತ್ವವನ್ನು ನೋಡಿ ಮತ ಚಲಾಯಿಸಲು ನಿರ್ಧರಿಸುತ್ತಾರೆ. ಆದಾಗ್ಯೂ ಇಲ್ಲಿ ಭರದಿಂದ ರಾಜಕೀಯ ಪ್ರಚಾರ ಸಾಗುತ್ತಿದೆ ಎನ್ನುವುದು ಉಲ್ಲೇಖಾರ್ಹ.

ಪಂಚರಾಜ್ಯ ಚುನಾವಣೆಗೆ ಬೇಕಾಗಿ ಬಿಜೆಪಿ ಪಕ್ಷದ ರಾಜಕೀಯ ತಂತ್ರಗಾರಿಕೆಯನ್ನು ಇಲ್ಲಿ ಬಹಳ ಎಚ್ಚರಿಕೆಯಿಂದ ಮತ್ತು ದೂರದೃಷ್ಟಿ ಇಟ್ಟುಕೊಂಡು ಮಾಡಿದಂತೆ ಕಾಣಿಸುತ್ತಿದೆ. ತಾನು ವಿರೋಧ ಪಕ್ಷದ ಸ್ಥಾನದಲ್ಲಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೇ ʼಮೋದಿ ಹವಾʼವನ್ನೇ ಬೀಸುತ್ತಿದೆ. ಮತ್ತು ಇಲ್ಲಿ ತಮ್ಮದು ಸಾಮೂಹಿಕ ನಾಯಕತ್ವ ಎಂದೇ ಚುನಾವಣಾ ಕಣಕ್ಕೆ ಇಳಿಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ.

ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ತನ್ನ ಚುನಾವಣಾ ಫ್ರಂಟ್‌ ಲೈನ್‌ ಲೀಡರ್‌ ಎಂದು ಬಿಂಬಿಸುವುದರಿಂದ ದೂರ ಸರಿದಂತೆ ಕಾಣಿಸುತ್ತಿದೆ.  ಅಲ್ಲಿಯೂ ಸಾಮೂಹಿಕ ನಾಯಕತ್ವವನ್ನೆ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದಂತಿದೆ. ಆದರೇ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿಯ ಈ ತಂತ್ರಗಾರಿಕೆ ಫಲಿಸಲಿಲ್ಲ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ದುರ್ಬಲ ಮುಖ್ಯಮಂತ್ರಿ ಎಂದು ಬಿಂಬಿಸಲಾಗುತ್ತಿರುವ ಶಿವರಾಜ್ ಚೌಹಾಣ್ ಅವರ ವಿರುದ್ಧ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕಮಲ್ ನಾಥ್ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದು ಕುತೂಹಲಕರಿಯಾಗಿದೆ.

ವಿಧಾನಸಭಾ ಚುನಾವಣೆಗೂ ಮುನ್ನ ಹಿಮಾಚಲ (೨೦೨೨), ಕರ್ನಾಟಕ (೨೦೨೩), ರಾಜಸ್ಥಾನ,ಛತ್ತೀಸ್‌ ಗಢ, ಮಧ್ಯಪ್ರದೇಶ (೨೦೧೮) ಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಕಾಂಗ್ರೆಸ್ ಘೋಷಿಸಿದೇ, ಅಧಿಕಾರದಲ್ಲಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಏರಿತ್ತು. ಇದೇ ತಂತ್ರಗಾರಿಕೆಯನ್ನುಈಗ ಬಿಜೆಪಿ ಮುಂದುವರಿಸಿದೆ ಎಂಬಂತೆ ಕಾಣಿಸುತ್ತಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ನಡೆದುಕೊಂಡಂತೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಶೋಕ್ ಗೆಹ್ಲೋಟ್ ಅವರನ್ನು ಅಧಿಕೃತವಾಗಿ ಘೋಷಿಸಲಿಲ್ಲ. ಇದು ಬಹುಶಃ ಸಚಿನ್ ಪೈಲಟ್ ಅವರನ್ನು ಸಮಾಧಾನಪಡಿಸುವ ತಂತ್ರವೆನ್ನಲಾಗುತ್ತಿದೆ. ಛತ್ತೀಸ್‌ ಗಢದಲ್ಲಿ, ಭೂಪೇಶ್ ಬಾಘೇಲ್ ಮತ್ತು ಟಿಎಸ್ ಸಿಂಗ್ ದೇವ್ ಅವರ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಸಜ್ಜಾಗುತ್ತಿದೆ.

ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸ್ವತಃ ಬಿಜೆಪಿಯೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿರುವುದು ಮತ್ತು ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಬರುವ ಚುನಾವಣೆಗೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಅಧಿಕೃತವಾಗಿ ಘೋಷಿಸದಿರುವುದನ್ನು ನೋಡಿದರೇ, ಉಭಯ ಪಕ್ಷಗಳಿಗೂ ತನ್ನ ಮುಖ್ಯಮಂತ್ರಿಯ ಬಗ್ಗೆಯೇ ನಂಬಿಕೆ ಇಲ್ಲ ಎಂದು ಕಾಣಿಸುತ್ತಿದೆ. ಹೀಗಿರುವಾಗ ಅಲ್ಲಿನ ಮತದಾರರು ಇವರನ್ನು ನಂಬುವುದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತಿದೆ.

ಇನ್ನು, ತೆಲಂಗಾಣದಲ್ಲಿ, ಕೆ ಚಂದ್ರಶೇಖರ್ ರಾವ್(ಕೆಸಿಆರ್)  ಬಿ.ಆರ್‌.ಎಸ್‌ ನ ಮುಖ್ಯಮಂತ್ರಿ ಅಭ್ಯರ್ಥಿ. ಪಕ್ಷ ಗೆದ್ದರೆ ಅಂತಿಮವಾಗಿ ಕೆಸಿಆರ್ ತನ್ನ ಮಗ ಕೆಟಿ ರಾಮರಾವ್ (ಕೆಟಿಆರ್)ಗೆ ಮುಖ್ಯಮಂತ್ರಿ ಹಸ್ತಾಂತರಿಸುವ ಸಾಧ್ಯತೆಯ ಬಗ್ಗೆ ಊಹಾಪೋಹಗಳಿವೆ. ಒಂದು ವೇಳೆ ಹೀಗಾದಲ್ಲಿ ಪಕ್ಷದ ಹಿರಿಯ ನಾಯಕರು ಕೆಸಿಆರ್‌ ವಿರುದ್ಧ ತಿರುಗಿ ಬೀಳಬಹುದೆನ್ನಲಾಗುತ್ತಿದೆ. ಈ ಕಾರಣಕ್ಕೆ ಕಾಂಗ್ರೆಸ್ ಅಥವಾ ಬಿಜೆಪಿಯತ್ತ ಮತದಾರರು ತಿರುಗಬಹುದು ಎಂದು ಹೇಳಲಾಗುತ್ತಿದೆ.

ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿ ಕೊಟ್ಟ ಗ್ಯಾರಂಟಿ ಯೋಜನೆಯ ಮಾದರಿಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಘೋಷಿಸಿದೆ. ಮಧ್ಯಪ್ರದೇಶ, ತೆಲಂಗಾಣದಲ್ಲಿ ಮಹಿಳೆಯರು ಮತ್ತು ನಿರುದ್ಯೋಗಿ ಯುವಕರಿಗೆ ನಗದು ಹಣ, ಉಚಿತ ವಿದ್ಯುತ್, ಕೃಷಿ ಸಾಲ ಮನ್ನಾ ಮತ್ತು ಹಳೆಯ ಪಿಂಚಣಿ ಯೋಜನೆ  ಅನುಷ್ಠಾನವನ್ನು ಮಾಡುವ ಭರವಸೆ ನೀಡಿದೆ. ಇನ್ನು, ತೆಲಂಗಾಣದಲ್ಲಂತೂ ಮದುವೆಯಾಗುವ ಹೆಣ್ಣುಮಕ್ಕಳಿಗೆ ಹತ್ತು ಗ್ರಾಮ್‌ ಚಿನ್ನ ಹಾಗೂ ಒಂದು ಲಕ್ಷ ರೂ. ನೀಡುವುದಾಗಿ ಆಶ್ವಾಸನೆ ನೀಡಿದೆ. ಮಿಜೋರಾಂನಲ್ಲಿ ರೂ.೭೫೦ಕ್ಕೆ ಅಡುಗೆ ಅನಿಲ, ೧೫ಲಕ್ಷ ಆರೋಗ್ಯ ವಿಮೆಯ ಆಶ್ವಾಸನೆ ನೀಡಿದೆ. ವಿಶೇಷವಾಗಿ ಮಧ್ಯಪ್ರದೇಶದಲ್ಲಿ ʼಸುಂದರಕಾಂಡ ಪಾರಾಯಣʼ ರಾಜಕೀಯಕ್ಕೆ ಮುಂದಾಗಿದೆ. ಛತ್ತೀಸ್‌ ಗಢದಲ್ಲಿ ಜಾತಿ ಸಮೀಕ್ಷೆಯ ಭರವಸೆ ನೀಡಿದರೇ, ರಾಜಸ್ಥಾನದಲ್ಲಿ ೧೦೦ಯೂನಿಟ್‌ ವಿದ್ಯುತ್‌ ಫ್ರೀ ನೀಡುವುದಾಗಿ ಘೋಷಿಸಿದೆ.

ಮಿಜೋರಾಂ ರಾಜಕೀಯ ಇನ್ನೂ ಕುತೂಹಲವಾಗಿದೆ. ನೆರೆಯ ಮಣಿಪುರದ ಪರಿಸ್ಥಿತಿಯಿಂದ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೇ, ಝಡ್‌.ಪಿ.ಎಂ (ಝೋರಾಂ ಪೀಪಲ್ಸ್‌ ಮೂಮೆಂಟ್‌) ಈ ಬಾರಿ ಚುನಾವಣಾ ಕಣದಲ್ಲಿರುವುದು ಒಂದಿಷ್ಟು ಬದಲಾವಣೆಯ ನಿರೀಕ್ಷೆಯಿದೆ.

ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ಎಲ್ಲಾ ರಾಜ್ಯಗಳಲ್ಲಿರುವ ಪ್ರಮುಖ ಸಮಸ್ಯೆಗಳಾಗಿವೆ. ಈ ಸಮಸ್ಯೆಗಳು ಈ ರಾಜ್ಯಗಳ ಚುನಾವಣೆಯಲ್ಲಿ ಹೇಗೆ ಪರಿಣಮಿಸುತ್ತವೆ ಎನ್ನುವುದನ್ನು ಕಾದುನೋಡಬೇಕಾಗಿದೆ. 

-ಶ್ರೀರಾಜ್‌ ವಕ್ವಾಡಿ  

Wednesday, October 11, 2023

ಸರ್ಕಾರದೊಂದಿಗೆ ಹೊಂದಾಣಿಕೆಗೆ ಒಪ್ಪಿ ಹೇಳುವುದಷ್ಟೆ ಸತ್ಯ ?

 


ಸತ್ಯವನ್ನು ಸುಳ್ಳು ಎಂದು ಬಿಂಬಿಸುವ ವ್ಯವಸ್ಥಿತ ಅಜೆಂಡಾಕ್ಕೆ ಬಲಿಯಾದ ಪತ್ರಿಕಾ ಸ್ವಾತಂತ್ರ್ಯ !

ಜಗತ್ತು ನೇರವಂತಿಗೆಯನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದಕ್ಕೆ ಎಂದೂ ಮುಂದಾಗುವುದಿಲ್ಲ. ಸತ್ಯವನ್ನು ಸತ್ಯವೆಂದೆ ಹೇಳುವ ಒಬ್ಬ ವ್ಯಕ್ತಿ ಅಥವಾ ಮಾಧ್ಯಮ ಇಲ್ಲಿ ಹಣೆ ಮೇಲೆ ಲೇಬಲ್‌ ಅಂಟಿಸಿಕೊಳ್ಳುವುದಕ್ಕೆ ಸಿದ್ಧವಾಗಿರಬೇಕು. ವ್ಯವಸ್ಥೆಯ ತಪ್ಪುಗಳನ್ನು, ಸರ್ಕಾರದ ದುರಾಡಳಿತವನ್ನು ಪ್ರಶ್ನಿಸುವುದನ್ನೇ ಇಲ್ಲಿ ದೇಶದ್ರೋಹ ಎಂದು ವ್ಯವಸ್ಥಿತವಾಗಿ ಬಿಂಬಿಸಲಾಗಿದೆ ಎಂದರೇ ನೀವು ನಂಬಲೇಬೇಕು.

ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಈ ದೇಶ ಉದಯಿಸುವುದಕ್ಕೂ ಹಿಂದಿನಿಂದ ಬಂದ ಒಂದು ಪದ್ಧತಿ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಒಂದು ರೀತಿಯಲ್ಲಿ ಮಾಧ್ಯಮಗಳ ಬಾಯಿಗೆ ಬೀಗ ಹಾಕುತ್ತಿದ್ದರೇ, ಈಗ ಮತ್ತೊಂದು ರೀತಿ. ಮಾಧ್ಯಮಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ.  ಸರ್ಕಾರದ ಬಗ್ಗೆ ಬಹಿರಂಗವಾಗಿ ಹೇಳಲು ಧೈರ್ಯ ಮಾಡುವವರ ಮೇಲೂ ಇಂತಹ ದಾಳಿಯನ್ನು ಮಾಡಲಾಗುತ್ತಿರುವುದು ಆತಂಕಕಾರಿಯಾಗಿದೆ. ಮಾಧ್ಯಮಗಳು ಸರ್ಕಾರದ ಕೈಗೊಂಬೆಗಳಲ್ಲ. ಆಡಳಿತದ ಪಕ್ಷದ ತೋಳಲ್ಲಾಡುವ ಮಗುವಲ್ಲ. 

ಸತ್ಯ ಹೇಳುವವರ ವಿರುದ್ಧ ಅವರ ಧ್ವನಿ ಅಡಗಿಸುವುದಕ್ಕೆ ಬೇಕಾಗಿ ಅವರದ್ದೇ ಆದ ಐಟಿ ಸೆಲ್‌ ಗಳಿವೆ, ಅದು ಒಂದು ಪ್ರಯೋಗಾಲಯದಂತೆ ಕಾರ್ಯ ನಿರ್ವಹಿಸುತ್ತದೆ. ಪ್ರಯೋಗಾಲ ಸೃಷ್ಟಿಸಿದ ಪ್ರಯೋಗಗಳು ಹೇಗಿವೆ ಎಂದು ಕೇಳಿದರೆ ʼವಾಟ್ಸ್ಯಾಪ್‌ ಯೂನಿವರ್ಸಿಟಿಗಳು ಕಲಿಸಲಾಗಿರುವ ಇತಿಹಾಸ ಎಷ್ಟಿದೆಯೆಂದರೇ, ದೇಶದ ಎಲ್ಲಾ ಇತಿಹಾಸಕಾರರು ಕಳೆದ ಎಪ್ಪತ್ತು ವರ್ಷಗಳಾವಧಿಯಲ್ಲಿ ಕಲಿಸಿದ ಇತಿಹಾಸಕ್ಕಿಂತಲೂ ಹೆಚ್ಚುʼ (ರವೀಶ್‌ ಕುಮಾರ್‌ ಅವರ ʼದಿ ಫ್ರೀ ವಾಯ್ಸ್‌ʼ ಕೃತಿಯಿಂದ). ಹೌದು, ಸತ್ಯ ಹೇಳಿದರೆ, ಇಲ್ಲಿನ ಎಲ್ಲಾ ದಾಖಲೆಗಳನ್ನು ಉಲ್ಲೇಖಿಸಿ ಹೇಳಿದರೂ ಅದನ್ನು ಒಪ್ಪದೇ ಇರುವಷ್ಟರ ಮಟ್ಟಿಗೆ ಇಲ್ಲಿ ಸುಳ್ಳನ್ನು ಸಾಮಾಜಿಕ ಬುದ್ಧಿಗೆ ಹೇರಲಾಗಿದೆ. ಸುಳ್ಳನ್ನು ಅತಿರಂಜಿಸಿ ಸಾಮಾಜಿಕ ಬುದ್ಧಿಯನ್ನೇ ನಿಷ್ಕ್ರಿಯೆಗೊಳಿಸಲಾಗಿದೆ.  

ಸರ್ಕಾರ ʼಸುಳ್ಳು ಹೇಳುವ ಮಾಧ್ಯಮಗಳನ್ನುʼ ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳುತ್ತಲೇ ಬಂದಿದೆ. ಮಾಧ್ಯಮಗಳು ಮತ್ತು ಸರ್ಕಾರಗಳ ಹೊಂದಾಣಿಕೆ ಹೇಗೆ ಬದಲಾಗಿದೆ ಎಂದರೆ, ʼನೀನು ಜಾಹೀರಾತು ಕೊಡು, ನಿನ್ನ ಪರವಾಗಿ ನಾನು ಇರುತ್ತೇನೆʼ ಎಂಬಂತೆ. ಹೀಗೆ ಆಗದೆ, ವಿರುದ್ಧ ನಡೆದರೆ ನಡೆಯುವುದು ಎಲ್ಲವೂ ಪ್ರತಿಕಾರ. ಆದಾಯ ತೆರಿಗೆ (ಐ.ಟಿ.), ಜಾರಿ ನಿರ್ದೇಶನಾಲಯ (ಇ.ಡಿ.) ಥರದ ಸಂಸ್ಥೆಗಳ ಮೂಲಕ ದಾಳಿ ನಡೆಯುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಇಂತಹ ವಿದ್ಯಮಾನಗಳು ಆಗಾಗ್ಗೆ ವರದಿಯಾಗುತ್ತಿವೆ.

ಕಳೆದ ವರ್ಷ ʼ2002ʼರ ಗುಜರಾತ್ ಹತ್ಯಾಕಾಂಡ ಮತ್ತು ಅಂದು ಅಲ್ಲಿದ್ದ ಮೋದಿ ನೇತೃತ್ವದ ಸರ್ಕಾರದ ಒಂದು ಸಿದ್ಧಾಂತದ ಪರವಾದ ಧೋರಣೆಯ ಬಗ್ಗೆ ಎರಡು ಭಾಗಗಳಲ್ಲಿ ಹೊರಬಂದ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಬಿಬಿಸಿ ನಿರ್ಮಿಸಿದ ಸಾಕ್ಷ್ಯಚಿತ್ರ (ಇಂಡಿಯಾ : ದಿ ಮೋದಿ ಕ್ವೆಶ್ಚನ್) ದೇಶದಲ್ಲಿ ಪ್ರಸಾರ ಆಗದಿರುವಂತೆ ನೋಡಿಕೊಳ್ಳಲಾಯಿತು. ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಒಳಗಾದ ಗುಜರಾತ್‌ ಹತ್ಯಾಕಾಂಡದ ಆಧಾರಿತ ಸಾಕ್ಷ್ಯಚಿತ್ರವನ್ನು  ನಿರ್ಮಿಸಿದ ಬಿಬಿಸಿ ಸಂಸ್ಥೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಸರ್ಕಾರವನ್ನು ಪ್ರಶ್ನಿಸುವ, ಸರ್ಕಾರದ ತಪ್ಪನ್ನು ಎತ್ತಿ ತೋರಿಸುವ ಮಾಧ್ಯಮಗಳನ್ನು ನಿರಂತರವಾಗಿ ಇಂತಹ ದಾಳಿಗಳಿಂದ ಉಸಿರು ಗಟ್ಟಿಸುತ್ತಿರುವುದು ವಿಷಾದನೀಯ. ಬಿಬಿಸಿ ಮೇಲಿನ ದಾಳಿಯನ್ನು ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆಗಳ ಅಕ್ರಮದ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದು, ಅದರಂತೆ ಬಿಬಿಸಿ ಮೇಲೂ ಆರೋಪ ಕೇಳಿಬಂದ ಕಾರಣದಿಂದ ದಾಳಿ ಮಾಡಲಾಗಿದೆ ಎಂದು ಸರ್ಕಾರ ಸಮರ್ಥನೆ ತೆಗೆದುಕೊಂಡಿತ್ತು. ಹೀಗೆ ಪತ್ರಕರ್ತರ ಬಂಧನ, ಪತ್ರಿಕಾ ಸಂಸ್ಥೆಗಳ ಮೇಲೆ ಐ.ಟಿ. ಮತ್ತು ಇ.ಡಿ. ದಾಳಿ ಮಾಡುತ್ತಲೇ ಬಂದಿದೆ.

ನ್ಯಾಷನಲ್ ಹೆರಾಲ್ಡ್‌ ಮೇಲೆ ಇ.ಡಿ. ರೈಡ್‌ ನನ್ನು ನಾವು ನೆನಪಿಸಿಕೊಳ್ಳಬೇಕು. ಬಳಕೆಯಲ್ಲಿ ಇಲ್ಲದ ಮಾಧ್ಯಮ ಸಂಸ್ಥೆಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸುಮಾರು 2,000 ಕೋಟಿ ರೂ ಲಾಭ ಹಾಗೂ ಆಸ್ತಿ ಸಂಪಾದಿಸಲು ಯಂಗ್ ಇಂಡಿಯಾ ಲಿ. ವಾಮಮಾರ್ಗ ಅನುಸರಿಸಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು.

ಕಾಂಗ್ರೆಸ್ ಪಕ್ಷ ಮಾಲೀಕತ್ವದ ಎಜೆಎಲ್ ಅನ್ನು 90.25 ಕೋಟಿ ರೂ ಮೌಲ್ಯದ ಆಸ್ತಿಯ ಹಕ್ಕಗಳನ್ನು ಪಡೆದುಕೊಳ್ಳಲು ವೈಐಎಲ್ ಕೇವಲ 50 ಲಕ್ಷ ರೂ ಪಾವತಿಸಿತ್ತು. ಸುದ್ದಿ ಪತ್ರಿಕೆ ಆರಂಭಿಸಲು ಸಾಲವಾಗಿ ಆರಂಭದಲ್ಲಿ ಈ ಹಣ ನೀಡಲಾಗಿತ್ತು. ಎಜೆಎಲ್‌ಗೆ ನೀಡಿದ ಸಾಲವು ಅಕ್ರಮವಾಗಿದೆ. ಏಕೆಂದರೆ ಅದನ್ನು ಪಕ್ಷದ ನಿಧಿಯಿಂದ ಬಳಸಲಾಗಿದೆ ಎಂದು ದೂರಿನಲ್ಲಿ ಅವರು ಹೇಳಿದ್ದರು.

ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮೇಲೆ ಇ.ಡಿ. ದಾಳಿ ಮಾಡಿತ್ತು. ಮನಿಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ವರ್ಷ ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿ ಮಾಡಿದ್ದರು. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಯವರು ವಿಚಾರಣೆಗೂ ಹಾಜರಾಗಿದ್ದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದ್ದು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಪ್ರಕಟಿಸುತ್ತಿದೆ. ಇದರ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜ್ಯಸಭೆಯ ವಿರೋಧ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಬನ್ಸಾಲ್ ಅವರನ್ನು ಪ್ರಶ್ನಿಸಿತ್ತು. ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್‌ ಗಾಂಧಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ದೇಶದಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಬೃಹತ್‌ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು.

ಇನ್ನು, ನ್ಯೂಸ್‌ ಕ್ಲಿಕ್ ಆದಾಯ ತೆರಿಗೆ ಅಧಿಕಾರಿಗಳು 2021ರ ಫೆಬ್ರುವರಿಯಲ್ಲಿಯೂ ಕಾರ್ಯಾಚರಣೆ ನಡೆಸಿದ್ದರು. ನ್ಯೂಸ್‌ ಕ್ಲಿಕ್ ವೆ‌ಬ್ ಪೋರ್ಟಲ್‌ 2018-19 ರ ಹಣಕಾಸು ವರ್ಷದಲ್ಲಿ ವರ್ಲ್ಡ್‌ವೈಡ್ ಮೀಡಿಯಾ ಹೋಲ್ಡಿಂಗ್ಸ್ ಎಲ್‌.ಎಲ್‌.ಸಿ ಯುಎಸ್‌ ಎಯಿಂದ 9.59 ಕೋಟಿ ವಿದೇಶಿ ನೇರ ಹೂಡಿಕೆಯನ್ನು (ಎಫ್‌ ಡಿಐ) ಪಡೆದಿದೆ ಎಂದು ಆರೋಪಿಸಿದ್ದ ದೆಹಲಿ ಪೊಲೀಸರು ‘ನ್ಯೂಸ್‌ ಕ್ಲಿಕ್‌’ ಮೇಲೆ ಫೆಬ್ರವರಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ತೆರಿಗೆ ವಂಚನೆಯ ಆರೋಪಗಳಿಗೆ ಸಂಬಂಧಿಸಿದಂತೆ  ಅಧಿಕಾರಿಗಳು ಇದನ್ನು “ಸರ್ವೆ” ಎಂದು ಕರೆದಿದ್ದು, “ದಾಳಿ” ಅಲ್ಲ ಎಂದು ಸಮರ್ಥಿಸಿಕೊಂಡಿದ್ದರು.  

ದೇಶದ ಹಳೆಯ ಮತ್ತು ಹೆಸರಾಂತ ಪತ್ರಿಕೆಗಳಲ್ಲಿ ಒಂದಾದ ʼದೈನಿಕ್‌ ಬಾಸ್ಕರ್‌ʼ ಪತ್ರಿಕೆಯ ಮೇಲೂ 2021ರ ಜುಲೈ 12ರಂದು ಐಟಿ ಇಲಾಖೆ ದಾಳಿ ನಡೆದಿತ್ತು ಎನ್ನುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬೇಕು. ಪ್ರಭುತ್ವ ಸಿದ್ಧಾಂತಕ್ಕೆ ಕ್ಯಾರೆ ಮಾಡುವುದಿಲ್ಲ ಎಂಬ ಧೋರಣೆಯಲ್ಲಿಯೇ ಈ ಪತ್ರಿಕೆ ನಡೆದುಕೊಂಡು ಬಂದಿರುವುದು ಸರ್ಕಾರದ ಕೆಂಗಣ್ಣಿಗೂ ಕಾರಣವಾಗಿತ್ತು.  12 ರಾಜ್ಯಗಳಲ್ಲಿ ಈ ಪತ್ರಿಕೆಯ ಆವೃತ್ತಿಗಳಿವೆ.ದೈನಿಕ್ ಭಾಸ್ಕರ್‌’ ಸಂಸ್ಥೆಯು ಆದಾಯ ತೆರಿಗೆ ಪಾವತಿಯಲ್ಲಿ ಅಕ್ರಮ ಎಸಗಿದೆ ಎಂಬ ಆರೋಪದ ಮೇಲೆ ಸಂಸ್ಥೆಯ ಪ್ರಧಾನ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗಳ ಮೇಲೆ ದೇಶದ ಒಟ್ಟು ಆರು ರಾಜ್ಯಗಳಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆದಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಗಂಗಾ ನದಿ ತಟದಲ್ಲಿ ಮೃತ ದೇಹಗಳನ್ನು ನಿಷ್ಕರುಣೆಯಿಂದ ಎಸೆಯಲಾಗಿದೆ. ಈ ಮೂಲಕ ಸರ್ಕಾರ  ಕೋವಿಡ್‌ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ. ಆದರೆ, ಗಂಗೆ ತನ್ನ ಒಡಲಲ್ಲಿ ಇರುವ ಹೆಣಗಳನ್ನು ಹೊರಹಾಕುತ್ತಿದ್ದಾಳೆ’ ಎಂದು ದೈನಿಕ್‌ ಭಾಸ್ಕರ್‌ ಪತ್ರಿಕೆಯು 2021ರ ಜೂನ್‌ ಕೊನೆಯ ವಾರದಲ್ಲಿ ವಿಸ್ತೃತವಾದ ತನಿಖಾ ವರದಿಯನ್ನು ಪ್ರಕಟಿಸಿದ್ದು ನಿಮಗೆ ನೆನಪಿರಬಹುದು. ಈ ವರದಿಯೇ ಸರ್ಕಾರ ಐಟಿ ಇಲಾಖೆಯಿಂದ ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸುವುದಕ್ಕೆ ಕಾರಣ ಎಂದು ಹೇಳಲಾಗಿತ್ತು.

ಇನ್ನು, “ಕೋವಿಡ್‌ ಕಾರಣಕ್ಕೆ ಸಂಭವಿಸಿದ ಸಾವುಗಳ ಸಂಖ್ಯೆಯನ್ನು ಉತ್ತರ ಪ್ರದೇಶ ಸರ್ಕಾರ ಮುಚ್ಚಿಟ್ಟಿದೆ. ಆಕ್ಸಿಜನ್‌ ಪೂರೈಕೆಯಲ್ಲಿ ಸರ್ಕಾರ ವಿಫಲವಾಗಿದೆ. ಈ ಕಾರಣದಿಂದಲೇ ಎರಡನೇ ಅಲೆಯಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ” ಎಂದು 2021ರ ಜೂನ್‌ ಮತ್ತು ಜುಲೈನಲ್ಲಿ ಪುಖಾಂನುಪುಂಖವಾಗಿ ವರದಿ ಮಾಡಿದ ಬೆನ್ನಿಗೆ ಆದಾಯ ತೆರಿಗೆ ಪಾವತಿಯಲ್ಲಿ ಮತ್ತು ಕಂಪನಿಗೆ ಸಂಬಂಧಿಸಿದ ಖರೀದಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ, ಈ ಪತ್ರಿಕೆಯ ಮೇಲೆ ಐಟಿ ದಾಳಿಗೆ ಮಾಡಲಾಗಿತ್ತು. ಕೋವಿಡ್‌ ಸಂದರ್ಭದಲ್ಲಿ ನಡೆದ ವೈದಕೀಯ ವೈಫಲ್ಯಗಳು, ಸರ್ಕಾರದ ಬೇಜವಾಬ್ದಾರಿಗಳ ಮೇಲೆ ಸರಣಿ ವರದಿಗಳ ಮೂಲಕ ಭಾರತ್‌ ಸಮಾಚಾರ್‌ ಬಯಲಿಗೆಳೆದಿತ್ತು. ಇದೇ ಕಾರಣಕ್ಕೆ ಐಟಿ ದಾಳಿ ನಡೆಸಲಾಗಿದೆ ಎಂದು ಕೂಡ ಹೇಳಲಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಈ ಐಟಿ ದಾಳಿ ಆದ ಬೆನ್ನಿಗೆ ʼನೀವು ಎಷ್ಟು ಬೇಕಾದರೂ ನಮ್ಮ ಧ್ವನಿ ಅಡಗಿಸಲು ಪ್ರಯತ್ನಿಸಿ, ನಾವೂ ಅಷ್ಟೇ ದೊಡ್ಡ ದನಿಯಲ್ಲಿ ಸತ್ಯ ಹೇಳುತ್ತೇವೆ. ಮೊದಲೂ ಹೆದರುತ್ತಿರಲಿಲ್ಲ, ಈಗಲೂ ಹೆದರುವುದಿಲ್ಲ’ ಎಂದು ʼಭಾರತ್ ಸಮಾಚಾರ್‌ʼ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿ ಮತ್ತೆ ತನ್ನ ಪತ್ರಿಕಾ ಸಿದ್ಧಾಂತವನ್ನು ಮುಂದುವರಿಸಿದ್ದು ಇಡೀ ದೇಶವೇ ಬೆರಗು ಕಣ್ಣಿಂದ ಕಾಣುವಂತೆ ಮಾಡಿತ್ತು.

ಈಗ ಮತ್ತೆ ನ್ಯೂಸ್‌ ಕ್ಲಿಕ್‌ ಮೇಲೆ ದಾಳಿ, ಮಾಧ್ಯಮ ಸ್ವಾತಂತ್ರ್ಯದ ಧಮನ. ಸಮರ್ಪಕ ತನಿಖಾ ಪ್ರಕ್ರಿಯೆಯನ್ನು ಅನುಸರಿಸಿ ತನಿಖೆ ನಡೆಸಿಲ್ಲ ಎಂಬ ಆರೋಪವೂ ಇದೆ. ಹೀಗೆ ಸತ್ಯ ಹೇಳುವವರ ವಿರುದ್ಧ, ಪ್ರಭುತ್ವವನ್ನು ವಿರೋಧಿಸುವ ಮತ್ತು ತಪ್ಪನ್ನು ಪ್ರಶ್ನಿಸುವ ಮಾಧ್ಯಮಗಳ ಮೇಲೆ ಹೀಗೆ ನಿರಂತರವಾಗಿ ಇಂತಹ ದಾಳಿಗಳು ನಡೆಯುತ್ತಿವೆ.  ಈಗ ಮತ್ತೊಮ್ಮೆ ದೇಶದಲ್ಲಿ ಲೋಕಸಭಾ ಚುನಾವಣೆ ಬರುತ್ತಿದೆ. ಸಾಮಾಜಿಕ ಜಾಲತಾಣ ಮತ್ತು ಮಾರಾಟಗೊಂಡ ಮಾಧ್ಯಮಗಳು ಪ್ರಭುತ್ವವನ್ನು ಮೆರೆಸಿವುದಕ್ಕೆ ತಯಾರಾಗಿವೆ, ದೇಶ ಮತ್ತೆ ಈ ಎಲ್ಲಾ ಅತಿರಂಜಿತ ಸುಳ್ಳುಗಳಿಗೆ ಮರುಳಾಗುವುದಕ್ಕೆ ತಯಾರಾದಂತಿದೆ. ಎಲ್ಲಿಯವರೆಗೆ ಸುಳ್ಳನ್ನೇ ಸತ್ಯವೆಂದು ಈ ದೇಶ ನಂಬುತ್ತದೆಯೋ ಅಲ್ಲಿಯ ತನಕ ಹೀಗೆ ಸತ್ಯವನ್ನು ಹೇಳುವ ಮಾಧ್ಯಮಗಳನ್ನು, ಪತ್ರಕರ್ತರನ್ನು ದೇಶದ್ರೋಹಿಗಳೆಂದು ಬಿಂಬಿಸುವುದರಲ್ಲಿ ಸರ್ಕಾರ ಮತ್ತು ಸರ್ಕಾರಿ ಪ್ರಾಯೋಜಿತ ಗುಂಪುಗಳು, ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ಪ್ರತ್ಯಕ್ಷ ಮತ್ತು ಪರೋಕ್ಷಾಗಿ ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಸರ್ಕಾರದೊಂದಿಗೆ ಹೊಂದಾಣಿಕೆಗೆ ಒಪ್ಪಿದವರು ಹೇಳುವುದನ್ನು ಸತ್ಯವೆಂದು, ಒಪ್ಪದವರು ಹೇಳುವುದನ್ನು ಸುಳ್ಳು ಎಂದು ಬಿಂಬಿಸುವ ವ್ಯವಸ್ಥಿತ ಅಜೆಂಡಾಕ್ಕೆ ಈ ದೇಶ ಇನ್ನೆಷ್ಟು ಬಲಿಯಾಗಬೇಕೋ ಗೊತ್ತಿಲ್ಲ.

-ಶ್ರೀರಾಜ್‌ ವಕ್ವಾಡಿ

Wednesday, October 4, 2023

ʼಗಾಂಧಿ ಆಗುವುದು ಅಷ್ಟು ಸುಲಭವಲ್ಲ ಬಿಡಿʼ

 


(ಸಾಂದರ್ಭಿಕ ಚಿತ್ರ) 

ಹೇಳಿದ್ದೆಲ್ಲಾ ಕೇಳುವುದಕ್ಕೆ ಸರ್ದಾರ್ ಪಟೇಲರು ಗಾಂಧಿಗೆ ಅಧೀನರಾಗಿದ್ದರೇ ?  

ಈ ದೇಶದಲ್ಲಿ ʼಅಹಿಂಸೆʼಯನ್ನೇ  ಗುಂಡು ಹೊಕ್ಕಿತ್ತು.  ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖರಾಗಿ ಕಾಣಿಸಿಕೊಂಡಿದ್ದ ಮಹಾತ್ಮ ಗಾಂಧಿ ಮೈ ನೆತ್ತರು ದೇಶದ ಮಡಿಲಿಗೆ ಚೆಲ್ಲಿತ್ತು. ಬಾಪೂವಿನೆದೆ ಸಾವಲ್ಲೂ ಸಂಭ್ರಮಿಸಿತ್ತು. ಈ ಕ್ಷಣಕ್ಕೆ ಭವ್ಯ ಭಾರತದ ಮಡಿಲಲ್ಲಿ ಕೆಟ್ಟದ್ದೊಂದು ಬೀಜ ಬಿತ್ತಿತ್ತು ಎನ್ನುವುದು ಈ ದೇಶದ  ದುರಂತಗಳಲ್ಲಿ ಒಂದು. "ಗಾಂಧಿ ನಮ್ಮನ್ನು ಕ್ಷಮಿಸಿ ಬಿಡಿ". ಗಾಂಧೀಜಿ ಸಾವು ಈ ದೇಶದಲ್ಲಿ ಸಿದ್ಧಾಂತಗಳಲ್ಲಿ ಒಡೆದು ಹೋಗಿರುವ ದೇಶದ ಮತ್ತೊಂದು ಮುಖವನ್ನು ತೆರೆದಿಟ್ಟಿತ್ತು. ಚಿಂತನಾಶೀಲ ಹಾಗೂ ಕ್ರೀಯಾಶೀಲವಾದ ಬಾಳ್ವೆಯೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ದೇಶದ ಉದ್ದಗಲಕ್ಕೂ ನಡೆದಾಡಿ ಉಪವಾಸಗಳನ್ನು, ಸತ್ಯಾಗ್ರಹವನ್ನು ಮಾಡಿದ ಗಾಂಧಿ ವಿರುದ್ಧವೂ ಕೂಡ ಸಿದ್ಧಾಂತದ ಆಧಾರದಲ್ಲಿ ದೇಶ ಅಳೆಯುವುದಕ್ಕೆ ಆರಂಭಿಸಿತ್ತು.‌ ಇತ್ತೀಚೆಗಿನ ವರ್ಷಗಳಲ್ಲಂತೂ ಅದು ತುಸು ಹೆಚ್ಚು ಸ್ಥಾನವನ್ನೇ ಪಡೆದುಕೊಂಡಿದೆ. ಗಾಂಧಿ ಒಬ್ಬರೇ ಸ್ವಾತಂತ್ರ್ಯ ತಂದುಕೊಟ್ಟರು ಎಂಬುವುದಲ್ಲ, ಸ್ವಾತಂತ್ರ್ಯಕ್ಕಾಗಿ ಅನೇಕರು ಶ್ರಮಿಸಿದ್ದಾರೆ. ಗಾಂಧಿ ನೇತೃತ್ವವನ್ನು ಗೌರವಿಸಲೇ ಬೇಕಲ್ಲವೇ ?

ಸಾಮಾಜಿಕ ಮಾಧ್ಯಮಗಳು ಈ ದೇಶದ ಮತ್ತೊಂದು ದುರಂತ. ಸಾಮಾಜಿಕ ಜಾಲತಾಣಗಳ ಅಗತ್ಯದ ಬಗ್ಗೆ ಆಕ್ಷೇಪ ಮಾಡುವುದಲ್ಲ. ಆದರೇ ಅದು ಇಲ್ಲಿ ಬಳಕೆಯಾಗಿರುವುದರ ಬಗೆಗಿನ ಆಕ್ಷೇಪ ಇದು. ಈಚೆಗೆ "ನಾನು ನಿಮಗೆ ಕಲಿಸಲು ಹೊಸದೇನೂ ಇಲ್ಲ, ಸತ್ಯ ಮತ್ತು ಅಹಿಂಸೆಯು ಬೆಟ್ಟದಷ್ಟು ಹಳೆಯದು." ಎಂದು ಸದಾ ಹೇಳುತ್ತಿದ್ದ ಮಹಾತ್ಮ ಗಾಂಧೀಜಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ದೂರುಗಳು ಬಂದಿದ್ದನ್ನು ಈ ದೇಶ ಕಂಡಿದೆ. ಸ್ವಾತಂತ್ರ್ಯಕ್ಕೆ ಸುಭಾಷ್ ಚಂದ್ರ ಬೋಸ್ ಕಾರಣರೇ ಹೊರತು ಗಾಂಧಿಯಲ್ಲ ಎಂದು ಕೆಲವರು ದೂರುತ್ತಾರೆ. ಕೆಲವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ದೇಶದ ಮೊದಲ ಪ್ರಧಾನಿಯಾಗವುದನ್ನು ತಡೆದವರು ಗಾಂಧಿ ಎಂದು ಭಿನ್ನ ಮಾತಾಡುತ್ತಾರೆ. ನೆಹರೂ ಪರವಾಗಿ ಇದ್ದು ಸರ್ದಾರ್ ಪಟೇಲ್ ರನ್ನು ಭಾರತದ ಮೊದಲ ಪ್ರಧಾನಿಯಾಗದಂತೆ ಮಾಡಿದ್ದೇ ಗಾಂಧೀಜಿ ಎಂದು ಹೇಳುತ್ತಾರೆ. ನೆಹರೂ ಅವರಿಗಿಂತ ಸರ್ದಾರ್ ಪಟೇಲ್ ಸಮರ್ಥರಾಗಿದ್ದರು ಎಂಬ ವಾದವೂ ಇದೆ. ಇದೇ ಕಾರಣಕ್ಕೆ ಸರ್ಧಾರ್‌ ವಲ್ಲಭಬಾಯಿ ಪಟೇಲ್‌ ಅವರ ಪ್ರತಿಮೆ ಗುಜರಾತ್‌ ನಲ್ಲಿ ತಲೆ ಎತ್ತಿ ನಿಂತಿಲ್ಲವೇ ? ಅಂದು ಗಾಂಧೀಜಿಯವರ ನಿರ್ಧಾರ ಸರಿಯೇ ಆಗಿತ್ತು ಎಂದು ಲೋಕವನ್ನು ತಿದ್ದುವ ಕೆಲಸವಿದಲ್ಲ. ಆದರೇ, ಅಂದು ನಡೆದದ್ದನ್ನೂ ಕೂಡ ಗಮನಿಸಬೇಕಾದದ್ದು ಈಗಿನ ತುರ್ತು.  ಗಾಂಧಿ ಸೂಚಿಸಿದಂತೆ ಸರ್ದಾರ್ ಪಟೇಲ್ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿಲ್ಲವೇ ? ಪಟೇಲ್ ಯಾಕೆ ಹೀಗೆ ಮಾಡಿದರು? ಸರ್ದಾರ್ ಪಟೇಲ್ ರಾಷ್ಟ್ರೀಯ ಹಿತಾಸಕ್ತಿಗಾಗಿ ರಾಜಿ ಮಾಡಿಕೊಂಡರೆ ? ಗಾಂಧಿ ಹೇಳಿದ್ದೆಲ್ಲವನ್ನು ಅನುಸರಿಸುವಷ್ಟು ಸರ್ದಾರ್ ಪಟೇಲ್ ಅವರು ಗಾಂಧಿಗೆ ಅಧೀನರಾಗಿದ್ದರೇ ? ಇಲ್ಲ ಎನ್ನುವವರು ಪಟೇಲರು ಗಾಂಧಿಯವರ ಸೂಚನೆಯನ್ನು ಒಪ್ಪಿದ್ದಕ್ಕಾಗಿ, ಆ ಸೂಚನೆಯು ಸರಿಯಾಗಿತ್ತು ಎಂದು ಯಾಕೆ ಹೇಳುವುದಿಲ್ಲ ? ಗಾಂಧಿ ಮುಸ್ಲಿಂ ಜನಾಂಗದ ಪರ ಮತ್ತು ಹಿಂದೂ ವಿರೋಧಿ ಎಂದು ಹಲವರು ದೂರುತ್ತಾರೆ. ಇತ್ಯಾದಿ ಇತ್ಯಾದಿ. ಸಾಮಾಜಿಕ ಜಾಲತಾಣಗಳ ಒಳಹೊಕ್ಕರೆ ಇಂತಹ ಹಲವು ದೂರುಗಳು ಕಾಣಬಹುದಾಗಿದೆ.

ಇಲ್ಲಿ ಹೇಳಲು ಹೊರಟಿರುವ ವಿಷಯಕ್ಕೆ ಬರುವುದಕ್ಕೆ ಯಾಕೆ ಇಷ್ಟೆಲ್ಲಾ ಹೇಳುತ್ತಿರುವುದು ಮತ್ತು ಮುಂದೆ ಹೇಳುವುದಕ್ಕೆ ಹೊರಟಿರುವುದೆಂದು ನಿಮಗೆ ಓದುವಾಗ ತಿಳಿಯುತ್ತದೆ. ಸನಾತನ ಧರ್ಮದ ವಿರುದ್ಧ ಮಾತನಾಡುವವರಿಗೆಲ್ಲಾ ಗಾಂಧಿವಾದಿಗಳು ಎಂದು ಕೂಡ ಈ ಸಮಾಜ ಕರೆದಿದೆ. ಈ ವಾದ ಈಗ ಬಲು ಜೋರಾಗಿಯೇ ಇದೆ. ಎಲ್ಲಿಯವರೆಗೆ ಅಂದರೇ, ಗಾಂಧೀಜಿ ಬಗ್ಗೆ ಮಾತಾಡಿದರಷ್ಟೇ ಸಾಕು, ಈತ ಹಿಂದೂ ಧರ್ಮದ ವಿರೋಧಿ ಎಂಬಷ್ಟರ ಮಟ್ಟಿಗೆ. ಆದರೇ, ರಾಷ್ಟ್ರಪಿತ ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರು ಆಗಾಗ್ಗೆ ಹೆಮ್ಮೆಯಿಂದ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದರು. ಕೇವಲ ಹಿಂದೂ ಅಲ್ಲ, ಹೆಮ್ಮೆಯ ಸನಾತನ ಹಿಂದೂ ಎಂದು ಕೂಡ ಹೇಳಿಕೊಳ್ಳುತ್ತಿದ್ದರು. ಅವರ ಆತ್ಮ, ಆಲೋಚನೆಗಳು ಮತ್ತು ಕ್ರಿಯೆಯಲ್ಲಿ, ಅವರು ಸನಾತನ ಹಿಂದೂ ಆಗಿದ್ದರು. ಅವರು ಸನಾತನ ಹಿಂದೂ ಧರ್ಮವನ್ನು ತಮ್ಮ ಜೀವನಕ್ಕೆ ಸ್ಫೂರ್ತಿಯಾಗಿ ಕಂಡುಕೊಂಡಿದ್ದರು.

ಗುಜರಾತ್‌ ನ ಪೋರಬಂದರ್‌ ನಲ್ಲಿ ಸಾಂಪ್ರದಾಯಿಕ ಹಿಂದೂ ಮೇಲ್ಜಾತಿ ಕುಟುಂಬದಲ್ಲಿ ಜನಿಸಿದ ಅವರು ಸನಾತನ ಸಂಸ್ಕೃತಿಯಲ್ಲಿ ಬೆಳೆದರು ಮತ್ತು ಸನಾತನ ಹಿಂದೂ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರು ಮತ್ತು ಅವರು ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮದ ಪ್ರಭಾವದಿಂದಲೇ ಜೀವಿಸಿದರೂ ಕೂಡ. ಒಮ್ಮೆ ʼಹರಿಜನʼ ಪತ್ರಿಕೆಯಲ್ಲಿನ ಅವರ ಲೇಖನದಲ್ಲಿ, ಸನಾತನವು ಈ ಭರತವರ್ಷದ ಭೂಮಿಯಲ್ಲಿ ವಿಕಸನಗೊಂಡ ಮನುಕುಲವನ್ನು ವ್ಯಾಪಿಸಿರುವ, ಕಾಲಾತೀತ ಮತ್ತು ಸಾರ್ವತ್ರಿಕ ಮೌಲ್ಯಗಳ ಸಮೂಹವಾಗಿದೆ ಎಂದು ಅವರು ಹೇಳುತ್ತಾರೆ. ಅವರಿಗೆ ಹಿಂದೂ ಧರ್ಮ ಮತ್ತು ಸನಾತನ ಎರಡೂ ಕೂಡ ಒಂದೇ ಆಗಿತ್ತು.

ಸನಾತನ ಹಿಂದೂ ಧರ್ಮವು ಸಂಕುಚಿತ ಗಡಿಗಳಲ್ಲಿ ವ್ಯಾಪ್ತಿಯೊಳಗಿನ ಧರ್ಮವೆಂದು ಅವರಿಗೆ ಕಾಣಿಸಲೇ ಇಲ್ಲ. ಅವರಿಗೆ ಅದು ಮಾನವ ಕುಲಕೋಟಿಯನ್ನು ಸ್ವೀಕರಿಸುವ ತತ್ವಶಾಸ್ತ್ರವಾಗಿತ್ತು. ಸನಾತನ ಹಿಂದೂ ಧರ್ಮವನ್ನು ಮಹಾನ್ ಸಾಗರ ಎಂದು ಗಾಂಧೀಜಿ ಕರೆದಿದ್ದಾರೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಸನಾತನ ಧರ್ಮವು ವಿಶಾಲವಾಗಿದೆ, ಸಮಗ್ರವಾಗಿದೆ ಮತ್ತು ಎಲ್ಲವನ್ನೂ ಒಳಗೊಂಡಿದೆ. ಇದೊಂದು ಧರ್ಮವಲ್ಲ, ಇದೊಂದು ಜೀವನ ವಿಧಾನ. ಇದು ಮಾನವಕುಲ. ʼಹರಿಜನʼ ಪತ್ರಿಕೆಯಲ್ಲಿನ ತನ್ನ ಪ್ರಸಿದ್ಧ ಲೇಖನವೊಂದರಲ್ಲಿ ಸನಾತನ ಹಿಂದೂ ಧರ್ಮವು ಜಗತ್ತಿನ ಅತ್ಯಂತ ಸಹಿಷ್ಣು ಧರ್ಮವಾಗಿದೆ ಎಂದು ಅವರು ಬರೆಯುತ್ತಾರೆ. "ಇದು ಕ್ರಿಶ್ಚಿಯನ್ನರಿಗೆ, ಯಹೂದಿಗಳಿಗೆ ಮತ್ತು ಪಾರ್ಸಿಗಳಿಗೆ, ಎಲ್ಲರಿಗೂ ಆಶ್ರಯ ನೀಡಿದೆ. ನಾನು ಈ ಸನಾತನ ಹಿಂದೂ ಧರ್ಮಕ್ಕೆ ಸೇರಿದವನು ಎಂದು ಹೆಮ್ಮೆಪಡುತ್ತೇನೆ. ಸನಾತನ ಧರ್ಮ ಎಲ್ಲವನ್ನೂ ಒಳಗೊಳ್ಳುವ ಮತ್ತು ಸಹಿಷ್ಣುತೆಯನ್ನು ಪ್ರತಿನಿಧಿಸುತ್ತದೆʼ ಎಂದು ಅವರು ಬರೆದಿದ್ದರು ಎನ್ನುವುದು ಇಲ್ಲಿ ಗಮನಾರ್ಹ ವಿಚಾರ.

ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದಂತಹ ದುಷ್ಪರಿಣಾಮಗಳನ್ನು ಸುಧಾರಿಸಲು ಬಯಸಿದ್ದರು, ಆದರೆ ಈ ಸುಧಾರಣೆಗಳನ್ನು ಸನಾತನದ ಮೂಲ ಮೌಲ್ಯಗಳನ್ನು ತ್ಯಜಿಸದೆ ಒಳಗಿನಿಂದ ಕೈಗೊಳ್ಳಬೇಕು. ಈ ಸಮಸ್ಯೆಗಳು ಹಿಂದೂ ಧರ್ಮದ ಮೂಲ ಮೌಲ್ಯಗಳಿಂದ ವಿಚಲನಗಳಾಗಿವೆ ಎಂದು ಅವರು ನಂಬಿದ್ದರು. ಹಿಂದೂ ಸಮುದಾಯದೊಳಗಿನ ಈ ಆಚರಣೆಗಳನ್ನು ಸುಧಾರಿಸಲು ಅವರು ಅವಿರತವಾಗಿ ಶ್ರಮಿಸಿದರು. ಮತ್ತೊಂದು ಕುತೂಹಲವಾದ ವಿಚಾರ ಏನೆಂದರೇ, ಗಾಂಧೀಜಿ ಭಾರತದಲ್ಲಿರುವವರೆಲ್ಲರನ್ನೂ ಸನಾತನ ಹಿಂದೂಗಳೆಂದೇ ಪರಿಗಣಿಸಿದ್ದರು.

ಅವರಿಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು ಅನುಸರಿಸುವುದೇ ಜೀವನದ ಉದ್ದೇಶವಾಗಿತ್ತು. ಬೇರೆ ಯಾವುದೇ ಪುಸ್ತಕ ಅಥವಾ ಗ್ರಂಥಗಳು ಗಾಂಧಿಯವರ ಮೇಲೆ ಪ್ರಭಾವ ಬೀರಲಿಲ್ಲ, ಅವರ ಬದುಕನ್ನು ರೂಪಿಸಲಿಲ್ಲ ಮತ್ತು ಅವರ ಜೀವನವನ್ನು ಭಗವದ್ಗೀತೆಯಂತೆ ಗಾಢವಾಗಿ, ಸೂಕ್ಷ್ಮವಾಗಿ ಮತ್ತು ಶಾಶ್ವತವಾಗಿ ಪರಿವರ್ತಿಸಲಿಲ್ಲ. ಅವರು ಓದಿದ ಅನೇಕ ಪುಸ್ತಕಗಳಲ್ಲಿ, ʼಗೀತೆʼ ಅವರ ಜೀವನದ ಕರಾಳ ಸಂದರ್ಭದಲ್ಲಿ ಅವರನ್ನು ಹೆಚ್ಚು ಪ್ರಭಾವಿಸಿತ್ತು. ಭಗವದ್ಗೀತೆಯನ್ನು ತನ್ನ "ಶಾಶ್ವತ ತಾಯಿ" (ಎಟರ್ನಲ್‌ ಮದರ್) ಎಂದು ಭಾವಿಸಿದ್ದರು. ʼಗೀತೆʼಯನ್ನು ಮಹಾತ್ಮ ಗಾಂಧಿ ತನ್ನ ಹೆತ್ತ ತಾಯಿಗಿಂತಲೂ ಹೆಚ್ಚು ಗೌರವಿಸುತ್ತಿದ್ದರು.

ʼಗೀತೆʼಯಿಂದ ಗಾಂಧೀಜಿ ತಾನು ಮಹತ್ತರವಾದದ್ದನ್ನು ಕಲಿತಿದ್ದೇನೆ ಎಂದು ಹೆಮ್ಮೆಯಿಂದ, ಗೌರವದಿಂದ ಹೇಳಿಕೊಳ್ಳುತ್ತಾರೆ. ಬದುಕಿನ ಕೌಶಲ್ಯವನ್ನು,  ಸ್ಥಿತಪ್ರಜ್ಞನಾಗಿದ್ದು ಯಶಸ್ಸು ಕಾಣುವ ದಾರಿಯನ್ನು ಮತ್ತು ವೈಫಲ್ಯದಲ್ಲಿ ಮತ್ತೆ ಚೇತರಿಸಿಕೊಳ್ಳುವುದನ್ನು ಮತ್ತೆ ಮರಳಿ ಮುಂದಾಗಿ ಪ್ರಯತ್ನಕ್ಕೆ ಸಜ್ಜಾಗುವುದನ್ನು ಕಲಿಸಿದೆ ಎಂದು ಹೇಳಿಕೊಳ್ಳುತ್ತಾರೆ. ಸತ್ಯವನ್ನು ಅನುಕರಿಸುವ ಅದೇ ಆಲೋಚನೆಯೊಂದಿಗೆ, ಗಾಂಧಿಯವರು ʼಗೀತೆʼಯನ್ನು ಅಕ್ಷರಶಃ ಪಾಲಿಸುವುದರೊಂದಿಗೆ ಬದುಕನ್ನು ರೂಪಿಸಿಕೊಂಡಿದ್ದರು. ʼಗೀತೆʼಯ ಆದರ್ಶಗಳಾದ ಸತ್ಯ, ಅಹಿಂಸೆ (ಅಹಿಂಸೆ), ಬ್ರಹ್ಮಚರ್ಯ (ಬ್ರಹ್ಮಚರ್ಯ)ವನ್ನು ಒಳಗೊಂಡು ಇತರೆ ನಿಯಮಗಳನ್ನು ಸ್ವೀಕರಿಸಿ ತಮ್ಮಲ್ಲಿ ಆಚರಣೆಗೆ ತಂದುಕೊಂಡರೂ ಕೂಡ. ಅವರ ದೈನಂದಿನ ಚಟುವಟಿಕೆಗಳು ಮತ್ತು ದಿನಚರಿ ಕೇವಲ ಸನಾತನ ಮೌಲ್ಯಗಳೇ ಆಗಿತ್ತು. ಅಹಿಂಸೆ ಮತ್ತು ಸತ್ಯಾಗ್ರಹ (ಸತ್ಯಕ್ಕಾಗಿ ಹೋರಾಟ, ಅಹಿಂಸೆಯ ನಡೆ) ಸನಾತನದ ಮೂಲ ಮೌಲ್ಯಗಳು.

ಸನಾತನ ಧರ್ಮ ಧಾರ್ಮಿಕ ಗಡಿಗಳನ್ನು ಮೀರಿದೆ ಮತ್ತು ಸತ್ಯದ ದಾರಿಯಲ್ಲಿ ಜನರನ್ನು ಪ್ರೇರೇಪಿಸುತ್ತದೆ ಎಂದು ಅವರು ನಂಬಿದ್ದರು. ಮಹಾತ್ಮ ಗಾಂಧೀಜಿಯವರಿಗಿಂತ ಸನಾತನ ಧರ್ಮವನ್ನು ಹೆಚ್ಚು ಗೌರವಿಸುವ ಮತ್ತು ಅನುಸರಿಸುವವರು ಇಲ್ಲವೇ ಇಲ್ಲ ಎಂದು ವಾದಿಸುವುದಕ್ಕಾಗಿ ಇಷ್ಟೆಲ್ಲಾ ವಿಚಾರವನ್ನು ನಾನು ಇಲ್ಲಿ ಪ್ರಸ್ತಾಪಿಸಿದ್ದಲ್ಲ ಅಥವಾ ಉಲ್ಲೇಖಿಸಿದ್ದಲ್ಲ. ಗಾಂಧೀಜಿ ಸತ್ಯ ಮತ್ತು ಅಹಿಂಸೆಯ ಜಗತ್ತನ್ನು, ದೇಶವನ್ನು ಕಾಣಬಯಸಿದವರು. ಅದಕ್ಕಾಗಿಯೇ ಅವರಿಗೆ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಇಂದಿಗೂ ಗೌರವವಿದೆ. ʼಸತ್ಯಕ್ಕಿಂತ ದೊಡ್ಡದಾದ ದೇವರು ಇಲ್ಲʼ ಎಂದು ಸದಾ ಗಾಂಧೀಜಿ ಹೇಳುತ್ತಿದ್ದರು. ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಮಾತ್ರ ಎಲ್ಲವನ್ನೂ ಒಳಗೊಳ್ಳುವುದಕ್ಕೆ ಸಾಧ್ಯ ಮತ್ತು ಶಾಶ್ವತವಾಗಿ ಎಲ್ಲರನ್ನೂ ಗೆಲ್ಲುವುದಕ್ಕೆ ಸಾಧ್ಯ ಎಂದು ಅವರು ಹೇಳುತ್ತಿದ್ದರು. ಇಂತಹ ಒಬ್ಬ ಮಹಾತ್ಮನನ್ನು ರಾಜಕೀಯಕ್ಕಾಗಿ ಮುಸ್ಲೀಂ ಪರವಾಗಿದ್ದರು, ಹಿಂದೂ ವಿರೋಧಿ ಎಂದು ಬಣ್ಣಿಸಿತ್ತು/ಇನ್ನೂ ಬಣ್ಣಿಸುತ್ತಲೇ ಇದೆ ಕೂಡ. ಗಾಂಧೀಜಿಯನ್ನು ಜರೆಯುವವರು ಗಾಂಧೀಜಿ ಬದುಕಿನ ಈ ಮುಖವನ್ನು ಖಂಡಿತ ನೋಡಿರುವುದಕ್ಕೆ ಸಾಧ್ಯವಿಲ್ಲ. ನೋಡಿಯೂ ಅದೇ ಭಿನ್ನ ಮಾತಾಡುತ್ತಾರೆಂದರೇ, ಅದು ರಾಜಕೀಯ ದುರುದ್ಧೇಶವೇ ಸರಿ. ʼಗಾಂಧಿ ಆಗುವುದು ಅಷ್ಟು ಸುಲಭವಲ್ಲ ಬಿಡಿʼ.

-ಶ್ರೀರಾಜ್‌ ವಕ್ವಾಡಿ

Wednesday, September 27, 2023

ಲೋಕಸಭೆಗಾಗಿ ಮೈತ್ರಿ, ಜೆಡಿಎಸ್ ಅಂತ್ಯಕ್ಕೆ ನಾಂದಿ

 


ಜೆಡಿಎಸ್  ಪ್ರಬಲ ಕ್ಷೇತ್ರಗಳತ್ತ ಬಿಜೆಪಿ ಕಣ್ಣು | ಸಿದ್ಧಾಂತ ಮೀರಿದ್ದೇಕೆ ಹಿರಿಗೌಡ್ರು ?

ಎಲ್ಲಾ ರಾಜಕೀಯ ಮೈತ್ರಿಯೆ ಹಾಗೆ. ರಾಜಕೀಯ ಮೈತ್ರಿಗಳು ಉಂಟಾಗುವಾಗ ಸೈದ್ಧಾಂತಿಕ ಬದ್ಧತೆಗಳೆಲ್ಲಾ ಸಾಮಾನ್ಯವಾಗಿ ಮೂಲೆಗೆ ಸರಿಯುತ್ತವೆ. ಹಲವು ಸಂದರ್ಭಗಳಲ್ಲಿ ಅಧಿಕಾರಕ್ಕಾಗಿ  ಮೈತ್ರಿಯಾಗುವುದು ರಾಜಕೀಯದಲ್ಲಿ ಅತ್ಯಂತ ಸಹಜ ಮತ್ತು ಸಾಮಾನ್ಯ. ಆದರೇ, ಚುನಾವಣಾ ಪೂರ್ವ ಮೈತ್ರಿಯಾಗುವುದು ತೀರಾ ಅಪರೂಪ. ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಪೂರ್ವ ಜೆಡಿಎಸ್‌ ಮತ್ತು ಬಿಜೆಪಿ ನಡುವಿನ ಮೈತ್ರಿ ಈಗ ರಾಷ್ಟ್ರಮಟ್ಟದ ಸುದ್ದಿ. ಬಿಜೆಪಿಯೊಂದಿಗೆ ಸೈದ್ಧಾಂತಿಕ ಹೊಂದಾಣಿಕೆಯೇ ಇಲ್ಲದ ಜನತಾದಳ(ಜಾತ್ಯತೀತ) ಮೋದಿ ನೇತೃತ್ವದ ಆಡಳಿತರೂಢ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಎನ್‌ಡಿಎ ಮಿತ್ರಪಕ್ಷಗಳ ಪೈಕಿಗೆ ಈಗ ಜೆಡಿಎಸ್‌ ಸೇರ್ಪಡೆಗೊಂಡಿದೆ.

೨೦೦೬ರಲ್ಲಿ ಎಚ್‌.ಡಿ ಕುಮಾರಸ್ವಾಮಿ ಬಿ.ಎಸ್‌ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿಯೊಂದಿಗೆ ಅಂದು ಮೈತ್ರಿ ಮಾಡಿಕೊಂಡು ಸರ್ಕಾರ ಎಚನೆ ಮಾಡಿದ್ದವು. ಪ್ರಾದೇಶಿಕವಾಗಿ ಒಂದು ರೀತಿಯ ತೀರಾ ಭಿನ್ನ ಅಧ್ಯಾಯವನ್ನು ಕಂಡ ಜೆಡಿಎಸ್‌ ಸೀಮಿತ ಪರೀಧಿಯೊಳಗೆ ಈಗ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರ ಅನುಭವಿಸಿದ್ದು ಇದ್ದರೆ ಅದು ಮೈತ್ರಿ ರಾಜಕಾರಣದಿಂದಲೇ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಅಲ್ಲಿಯವರೆಗೆ ಜೆಡಿಎಸ್‌ ಗಟ್ಟಿ ಇದ್ದಿದ್ದು ಹಳೆ ಮೈಸೂರು ಪ್ರಾಂತ್ಯಗಳಲ್ಲಿ ಮಾತ್ರ.

ಸದ್ಯಕ್ಕೆ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಪೋಸ್ಟ್‌-ಪೋಲ್‌ ಚೌಕಾಶಿಗೆ ಮುಂದಾಗಿರುವ ಜೆಡಿಎಸ್‌ ಯಾವಾಗಲೂ ಅಧಿಕಾರಕ್ಕಾಗಿ ಮತ್ತು ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಮೈತ್ರಿಯನ್ನೇ ಆಧರಿಸಿಕೊಂಡು ಬಂದ ಪಕ್ಷ. ಕರ್ನಾಟಕದಲ್ಲಿ ಮೈತ್ರಿಯ ಕಾರಣದಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೇರಿದ ಎಚ್‌. ಡಿ ಕುಮಾರಸ್ವಾಮಿ ಈ ಮೈತ್ರಿಗೆ ಮೊದಲು ಮುಂದಡಿ ಇಟ್ಟಿದ್ದು, ೨೦೦೬ರಲ್ಲಿ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ತಂದೆ ದೇವೆಗೌಡರಿಗೆ ಅಸಮಾಧಾನ ಇದ್ದರೂ ಅವರ ಮಾತು ಮೀರಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿಯೊಂದಿಗೆ ೨೦೦೬ರಲ್ಲಿ ಮೈತ್ರಿ ಮಾಡಿಕೊಂಡರು. ಎಲ್ಲಿ ಮೈತ್ರಿಯ ʼ೨೦:೨೦ʼ ಒಪ್ಪಂದದ ಅವಧಿ ಮುಗಿಯಿತೋ, ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಂದದಂತೆ ಯಡಿಯೂರಪ್ಪ ಅವರಿಗೆ ಬಿಟ್ಟುಕೊಡಬೇಕಾಗಿ ಬಂದಾಗ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡರು. ೨೦೧೯ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಚುನಾವಣೆಗೆ ಸ್ಪರ್ಧಿಸಿದರು. ಅಂದು ಜೆಡಿಎಸ್‌ನ ೩೭ ಶಾಸಕರು ಹಾಗೂ ಕಾಂಗ್ರೆಸ್‌ನ ೮೦ ಶಾಸಕರನ್ನು ಒಳಗೊಂಡ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಲೋಕಸಭೆಯಲ್ಲಿ ಕೆಲವು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಂತೂ ಎರಡೂ ಪಕ್ಷಗಳ ಶಾಲು ಮತ್ತು ಚಿನ್ಹೆಗಳೊಂದಿಗೆ ಲೋಕಸಭಾ ಕಣಕ್ಕಿಳಿದಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಜೆಡಿಎಸ್‌ ಈವರೆಗೆ ಅಧಿಕಾರ ಅನುಭವಿಸಿದೆ ಎಂದರೆ ಅದು ಮೈತ್ರಿಯ ಕೊಡುಗೆ.

ಜೆಡಿಎಸ್‌ ತನ್ನ ಪ್ರಾದೇಶಿಕ ಶಕ್ತಿಯನ್ನೂ ಕೂಡ ಕಳೆದುಕೊಂಡಿರುವುದು ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಣಬಹುದಾಗಿದೆ. ಕೇವಲ ೧೯ ಸ್ಥಾನಗಳಿಗೆ, ಶೇ.೧೩ರಷ್ಟು ಮತ ಹಂಚಿಕೆಯೊಂದಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದ್ದು, ಜೆಡಿಎಸ್‌ ಕಳೆದುಕೊಂಡ ಸೈದ್ಧಾಂತಿಕ ವಿಶ್ವಾಸಾರ್ಹತೆಯನ್ನು ಎತ್ತಿ ತೋರಿಸುತ್ತದೆ. ಹಾಗಾಗಿ ಕಳೆದುಕೊಂಡ ಪ್ರಾದೇಶಿಕ ಶಕ್ತಿಯನ್ನು ಮರು ಸ್ಥಾಪಿಸುವ ಉದ್ದೇಶದಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೇ, ಜೆಡಿಎಸ್‌ನ ಪ್ರಾದೇಶಿಕತೆಗೆ ಒತ್ತು ಕೊಟ್ಟು ಅಂದು ಬೆಂಬಲಿಸಿದ ಮತದಾರರು ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮೇಲೆಯೂ ಅದೇ ಬೆಂಬಲವನ್ನು ಮುಂದುವರಿಸುವುದಕ್ಕೆ ಸಾಧ್ಯವಿದೆಯೇ ? ಎನ್ನುವ ಪ್ರಶ್ನೆ ಸಹಜವಾಗಿ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ೨೦೦೪ರಿಂದ ಎಲ್ಲಾ ಲೋಕಸಭಾ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು (ಕನಿಷ್ಟ ೧೭) ಬಿಜೆಪಿ ಪಡೆದುಕೊಂಡಿದೆ. ೨೦೨೪ರ ಲೋಕಸಭಾ ಚುನಾವಣೆಯಲ್ಲಿಯೂ ೨೮ ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿಯೇ ಪಡೆದುಕೊಳ್ಳುತ್ತದೆ ಎಂಬ ರಾಜಕೀಯ ವಲಯದ ಭವಿಷ್ಯದ ನಡುವೆಯೂ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಬಲವಾದ ಕಾರಣವಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.   ಬಿಜೆಪಿಯಂತಹ ಒಂದು ರಾಷ್ಟ್ರೀಯ ಪಕ್ಷ ಈ ಮೈತ್ರಿಗೆ ಒಪ್ಪುವುದಕ್ಕೂ ಬಲವಾದ ಪ್ರಾದೇಶಿಕ ಕಾರಣಗಳಿವೆ. ಸಾಂಪ್ರದಾಯಿಕವಾಗಿ, ಕರ್ನಾಟಕದಲ್ಲಿ ಬಿಜೆಪಿಯ ದುರ್ಬಲ ಸ್ಥಾನಗಳು ಜೆಡಿಎಸ್  ಭದ್ರಕೋಟೆಯಾಗಿದೆ ಮತ್ತು ಪ್ರಾದೇಶಿಕ ಪಕ್ಷದ ಕೋರ್ ಒಬಿಸಿ ಒಕ್ಕಲಿಗ ಜಾತಿ ಮತಗಳ ಮೂಲವಾಗಿದೆ ಎಂಬುವುದು ತಿಳಿದಿರುವ ಸಂಗತಿ.

ಉದಾಹರಣೆಗೆ, ಬಿಜೆಪಿ ೨೦೧೯ರಲ್ಲಿ ೨೮ ಸಂಸದರ ಪೈಕಿ ೨೫ ಸ್ಥಾನಗಳನ್ನು ಗೆದ್ದಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನ ಡಿಕೆ ಸುರೇಶ್ ಗೆದ್ದಿದ್ದರು, ಮಂಡ್ಯದಲ್ಲಿ ಕಾಂಗ್ರೆಸ್ನಿಂದ ಬಂಡಾಯ ಎದ್ದು  ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಗೆದ್ದರೇ, ಮತ್ತು ಹಾಸನದಲ್ಲಿ ಎಚ್‌.ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದು ಸಂಸತ್ತನ್ನು ಪ್ರವೇಶಿಸಿದ್ದಾರೆ.

ಬಹಳ ಪ್ರಮುಖವಾಗಿ ಇಲ್ಲಿ ಗಮನಿಸಲೇಬೇಕಾದ ವಿಚಾರ ಏನೆಂದರೇ, ೨೦೧೯ರಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಬಂಡಾಯ ಎದ್ದು ಬಂದ ಎ. ಮಂಜು, ಪ್ರಜ್ವಲ್‌ ರೇವಣ್ಣ ವಿರುದ್ಧ ಪರಾಜಯಗೊಂಡರು. ಮತ್ತೆ ಎ. ಮಂಜು ಜೆಡಿಎಸ್‌ಗೆ ಮರಳಿದರು ಕೂಡ. ಹಾಸನ ವಿಧಾನಸಭಾ ಕ್ಷೇತ್ರದಿಂದ ೨೦೨೩ರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಗೆದ್ದರು. ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯವನ್ನು ಹೊಂದಿಲ್ಲ.  

ಈ ಮೂರು ಸ್ಥಾನಗಳು ಮತ್ತು ಇನ್ನೂ ಐದು ಸ್ಥಾನಗಳಲ್ಲಿ ಜೆಡಿಎಸ್‌ ಪ್ರಾಬಲ್ಯವನ್ನು ಹೊಂದಿದೆ. ಈ ಎಂಟು ಲೋಕಸಭಾ ಕ್ಷೇತ್ರಗಳು ವಿಧಾನಸಭಾ ಚುನಾವಣೆಯಲ್ಲಿ ಸುಮಾರು ೫೦ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿವೆ. ಬಿಜೆಪಿಯ ಈ ಮೈತ್ರಿ ಸಾಧನೆಯು, ಜೆಡಿಎಸ್‌ ಜೊತೆಗಿನ ಮೈತ್ರಿಯು ೨೦೨೪ರ ಲೋಕಸಭಾ ಚುನಾವಣೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ದೂರದೃಷ್ಟಿಯೂ ಆಗಿದೆ. ರಾಜಕೀಯ ಲೆಕ್ಕಾಚಾರದಲ್ಲಿ ಬಿಜೆಪಿ ನೇತೃತ್ವದಲ್ಲಿ ರಾಜ್ಯದಲ್ಲಿ ಸರ್ಕಾರವನ್ನು ಮರಳಿ ಸ್ಥಾಪಿಸುವ ಮೊದಲ ಹೆಜ್ಜೆಯಂತೆ ಕಾಣಿಸುತ್ತಿದೆ. ಜೆಡಿಎಸ್‌ ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಕಾಂಗ್ರೆಸ್‌ ಕಡೆಗೆ ವಾಲುವ ಒಕ್ಕಲಿಗ ಮತಗಳನ್ನು ಈ ಮೈತ್ರಿ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತದೆ ಎನ್ನುವುದು ನಿಶ್ಚಿತವಾಗಿದೆ. ಆದರೇ, ಇಲ್ಲಿ ಜಾತಿ ಗಣನೆಗೆ ಬರುತ್ತೋ ಅಥವಾ ಜೆಡಿಎಸ್‌ ಮತ್ತು ಬಿಜೆಪಿಯ ಸೈದ್ಧಾಂತಿಕತೆಯನ್ನು ಒಪ್ಪುತ್ತದೆಯೆ ಎನ್ನುವುದು ಇಲ್ಲಿ ಪ್ರಶ್ನಾರ್ಹ ವಿಷಯ.  

ಬಿಜೆಪಿಯನ್ನು ಈಗಾಗಲೇ ಕರ್ನಾಟಕದ ಲಿಂಗಾಯತ ಸಮುದಾಯದ ಪಕ್ಷ ಎಂಬಂತೆ ಬಿಂಬಿಸಲಾಗಿದೆ. ಜೆಡಿಎಸ್‌ ಪರವಾಗಿರುವ ಒಬಿಸಿ ಕ್ಕಲಿಗ ಸಮುದಾಯವು ಕರ್ನಾಟಕದ ಎರಡನೇ ಅತಿ ದೊಡ್ಡ ಮತಗಳನ್ನು ಹೊಂದಿರುವ ಸಮುದಾಯವಾಗಿದೆ. ಲಿಂಗಾಯತರು ಕರ್ನಾಟಕದಾದ್ಯಂತ ಇದ್ದರೂ, ಒಕ್ಕಲಿಗರು ಜೆಡಿಎಸ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ಹೆಚ್ಚಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಮತಗಳನ್ನು ಈ ಮೈತ್ರಿಯತ್ತ ಸೆಳೆದುಕೊಳ್ಳುವುದು ಹೇಳಿದಷ್ಟು ಸುಲಭವಿಲ್ಲ. ಈ ಎರಡು ಸಮುದಾಯಗಳು ಹೆಚ್ಚಿರುವ ಪ್ರದೇಶಗಳಲ್ಲಿ ಅಂತ ಸಮುದಾಯದ ನಾಯಕರೆನ್ನಿಸಿಕೊಂಡವರೂ ಇಲ್ಲ. ಈ ವಿಚಾರವನ್ನು ಮುಂದಿಟ್ಟುಕೊಂಡು ಮೈತ್ರಿಯ ಸೀಟು ಹಂಚಿಕೆ ಹೇಗಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರೂ ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಸರಳ ಬಹುಮತ ಗಳಿಸದಿರಲು ಜೆಡಿಎಸ್ ಹೃದಯ ಭಾಗದಲ್ಲಿರುವ ದುರ್ಬಲತೆಯೂ ಒಂದು ಕಾರಣ. ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಹೋರಾಟ ಜೆಡಿಎಸ್ ಕಣದಲ್ಲಿ ಯಾವಾಗಲೂ ಕಾಂಗ್ರೆಸ್‌ಗೆ ಲಾಭದಾಯಕವಾಗಿದೆ ಎನ್ನುವುದನ್ನು ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಗಮನಿಸಬಹುದಾಗಿದೆ.

ಇನ್ನು, ಕರ್ನಾಟಕದ ವಿಚಾರದಲ್ಲಿ ಕಾಂಗ್ರೆಸ್‌ ನ ಕೇಂದ್ರ ನಾಯಕತ್ವ ಎಚ್ಚರಿಕೆ ವಹಿಸಲು ಈ “ಹೊಂದಾಣಿಕೆ ರಾಜಕೀಯ”ವೂ ಕಾರಣ. ಉದಾಹರಣೆಗೆ, ೨೦೧೯ ರಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪತನವಾದಾಗ, ಬಿಎಸ್ ಯಡಿಯೂರಪ್ಪ ಅವರನ್ನು ಬೆಂಬಲಿಸಲು ೧೩ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು , ಅವರಲ್ಲಿ ಅನೇಕರು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಷ್ಠಾವಂತರು ಎಂದು ಪರಿಗಣಿಸಲ್ಪಟ್ಟರು. ಕೆಲವು ಶಾಸಕರು ಈಗ ಕಾಂಗ್ರೆಸ್‌ಗೆ ಮರಳುವತ್ತ ಪ್ರಯತ್ನದಲ್ಲಿದ್ದಾರೆ ಎಂಬ ಸುದ್ದಿ ಇದೆ.  

೨೦೨೪ಲೋಕಸಭೆಗಾಗಿ ನಡೆಯುವ ಈ ಮೈತ್ರಿ ಪ್ರಯೋಗವು ಜೆಡಿಎಸ್‌ ಗಿಂತ ಹೆಚ್ಚು ಬಿಜೆಪಿಗೆ ಲಾಭವಾಗಿರಲಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಈ ಮೈತ್ರಿ ಕೆಲಸ ಮಾಡಿದರೆ, ಜೆಡಿಎಸ್ ಮತವನ್ನು ಸೆಳೆದುಕೊಳ್ಳುವಲ್ಲಿ ಬಿಜೆಪಿ ಖಂಡಿತ ಮುಂದಡಿಯಿಡುತ್ತದೆ. ಜೆಡಿಎಸ್‌ಗೆ ಇದು ಮುಂದೆ ದೊಡ್ಡ ಸವಾಲಾಗಿ ಪರಿಣಮಿಸುವುದರಲ್ಲಿ ಸಂಶಯವೇ ಇಲ್ಲ. ದೇವೇಗೌಡರ ಕುಟುಂಬದಲ್ಲಿ ಹಲವು ಬಣಗಳಿವೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಕಾಂಗ್ರೆಸ್‌ ಗೆ ಒಂದು ತರದಲ್ಲಿ ಸಾಫ್ಟ್‌ ಮನೋಧೋರಣೆ ತೋರಿಸುತ್ತಾ ಬಂದಿರುವುದು ಗೊತ್ತಿರುವ ವಿಷಯ. ೨೦೨೪ರ ನಂತರ ಜೆಡಿಎಸ್ ವಿಭಜನೆಯಾದರೆ, ವಿವಿಧ ಬಣಗಳು ವಿಭಿನ್ನ ರೀತಿಯಲ್ಲಿ ತಲೆ ಎತ್ತಬಹುದು ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಇದೆ.

೨೦೦೬ರಲ್ಲಿ ಬಿಜೆಪಿಯೊಂದಿಗೆ ಕುಮಾರಸ್ವಾಮಿ ಮೈತ್ರಿ ಮಾಡಿಕೊಳ್ಳಲು ಹೊರಟಾಗ ವಿರೋಧಿಸಿದ್ದ ಜೆಡಿಎಸ್‌ ವರಿಷ್ಠ ದೇವೇಗೌಡ್ರು, ಈಗ ಬಿಜೆಪಿಯೊಂದಿಗೆ ಸೇರಿಕೊಳ್ಳುವುದಕ್ಕೆ ತೋರಿಸಿದ ಉತ್ಸಾಹ ನಿಜಕ್ಕೂ ಆಶ್ಚರ್ಯವೇ ಸರಿ. ವೈಯಕ್ತಿಕ ಲಾಭಕ್ಕೆ ಮತ್ತು ಕುಟುಂಬದ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ತಮ್ಮ ಸಿದ್ಧಾಂತವನ್ನೇ ಮರೆತು ತಮ್ಮ ವಿರುದ್ಧ ಸಿದ್ಧಾಂತವನ್ನು ಪಾಲಿಸುವ ಒಂದು ಪಕ್ಷದೊಂದಿಗೆ ಸೇರಿಕೊಂಡಿರುವುದರ ಹಿಂದಿನ ಬಲವಾದ ಉದ್ದೇಶವೇನು ಎಂಬುವುದು ಪ್ರಶ್ನೆಯಾಗಿಯೆ ಉಳಿದಿದೆ. ದೇವೇಗೌಡರಿಗೆ ಬಿಜೆಪಿಯಿಂದ ರಾಷ್ಟ್ರಮಟ್ಟದಲ್ಲಿ ಒಂದು ದೊಡ್ಡ ಮಟ್ಟದ ಮನ್ನಣೆ, ಗೌರವ, ಸನ್ಮಾನವೇನೋ ದೊರಕಬಹುದು ಆದರೇ, ಜೆಡಿಎಸ್‌ ನ ಭವಿಷ್ಯ ? ಕಾದು ನೋಡೋಣ.

-ಶ್ರೀರಾಜ್  ವಕ್ವಾಡಿ 

Thursday, September 21, 2023

ʼಬ್ರ್ಯಾಂಡ್‌ ಮೋದಿʼ ಮತ್ತು ʼಬ್ರ್ಯಾಂಡ್‌ ರಾಹುಲ್‌ʼ ನಡುವಿನ ರಾಜಕೀಯ

ಕಾಂಗ್ರೆಸ್‌ ಕಳೆದ 10 ವರ್ಷಗಳಲ್ಲಿ ಬಿಜೆಪಿಗೆ ಒಂದು ಸವಾಲಾಗಿಯೇ ಕಾಣಿಸಿಕೊಂಡಿಲ್ಲ !

ತನ್ನಲ್ಲಿನ ಎಲ್ಲಾ ಆಂತರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ರಾಜಕೀಯ ಗುಣಮಟ್ಟ, ಪ್ರತಿಕ್ರಿಯೆ, ನಡೆಗಳನ್ನು ಕಾಲಾಂತರದಲ್ಲಿ ಸುಧಾರಿಸುವ ನೈಜ ಕಾಳಜಿ ಇಟ್ಟುಕೊಂಡು ಒಂದು ಪಕ್ಷ ಈಗ ಲೋಕಸಭೆಗಾಗಿ ಎದುರುಗಾಣುತ್ತಿದೆ ಎಂದರೇ ಅದು ಕಾಂಗ್ರೆಸ್.‌ ಲೋಕಸಭೆಗೆ ಟೀಮ್‌ ʼಇಂಡಿಯಾʼ ಮೈತ್ರಿ ಜೊತೆಯಾಗಿ ಕಣಕ್ಕಿಳಿಯುವುದಾದರೂ, ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್‌ ರಾಜಕೀಯವಾಗ ಸೃಷ್ಟಿ ಮಾಡಲಾದ ಟೀಕೆಗಳಿಗೆ ಎದುರು ನಿಂತು ಬಂದಿರುವುದು ಮತ್ತು ಕೆಲವೇ ಕೆಲವು ಗೆಲುವು, ತುಸು ಹೆಚ್ಚೇ ಆವರಿಸಿಕೊಂಡ ಸೋಲು ಬಹುಶಃ ಕಾಂಗ್ರೆಸ್‌ ನನ್ನು ಸದೃಢವನ್ನಾಗಿಸಿದೆ ಎಂದು ಕಾಣಿಸುತ್ತಿದೆ. ಒಂದು ವರ್ಗವನ್ನು ಹೊರತುಪಡಿಸಿದರೇ, ಕಾಂಗ್ರೆಸ್‌ ಗೆ ಈಗ ಪರವಾಗಿ ನಿಲ್ಲುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುವುದು ಕೂಡ ಸತ್ಯ.

ದೇಶದ ರಾಜಕೀಯದಲ್ಲಿ ʼಬ್ರ್ಯಾಂಡ್‌ ಮೋದಿʼ ಮತ್ತು ʼಬ್ರ್ಯಾಂಡ್‌ ರಾಹುಲ್‌ʼ ಮಾಡುವ ಪ್ರಯತ್ನವನ್ನು ಉಭಯ ಪಕ್ಷಗಳು ಸರ್ವ ಪ್ರಯತ್ನದಲ್ಲಿವೆ. ʼಬ್ರ್ಯಾಂಡ್‌ ಮೋದಿʼ ಕಾನ್ಸೆಪ್ಟ್‌ ನನ್ನು ಬಿಜೆಪಿ ಕಳೆದ ಕೆಲವು ವರ್ಷಗಳಿಂದಲೇ ಜಾರಿಯಲ್ಲಿ ಇರಿಸಿತ್ತು. ಆದರೇ ಕಾಂಗ್ರೆಸ್‌ ಇಂತಹ ಸೆಲ್ಫ್ ಮಾರ್ಕೇಟಿಂಗ್‌ ಮಾಡಿಕೊಳ್ಳುವ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಬಿಜೆಪಿಗಿಂತ ಹಿಂದೆಯೇ ಇದೆ ಎನ್ನುವುದು ಸತ್ಯ. ಕಾಂಗ್ರೆಸ್‌, ರಾಹುಲ್‌ ಗಾಂಧಿಯನ್ನು ʼಬ್ರ್ಯಾಂಡ್‌ ಮೆಟಿರಿಯಲ್‌ʼ ಮಾಡುವುದಕ್ಕೆ ಆರಂಭಿಸಿದ್ದೇ ಇತ್ತೀಚೆಗೆ. ಭಾರತ್‌ ಜೋಡೋ ಯಾತ್ರೆ ಬಳಿಕವಷ್ಟೇ ರಾಹುಲ್‌ ಗೆ ಒಂದಿಷ್ಟು ರಾಜಕೀಯ ವಲಯದಲ್ಲಿ ʼಮಾರ್ಕೇಟ್‌ʼ ಮಾಡುವುದಕ್ಕೆ ಆರಂಭಿಸಿದ್ದು. ೨೦೧೪ರ ಮೋದಿ ಆಡಳಿತ ಮತ್ತು ʼಬ್ರ್ಯಾಂಡ್‌ ಮೋದಿʼ ರಾಜಕೀಯ ತಂತ್ರಗಾರಿಕೆಯ ನಡುವೆ ರಾಹುಲ್‌ ‌ʼಪಾಲಿಟಿಕಲ್ ಮಾರ್ಕೇಟ್‌ʼ ಕುಸಿದಿತ್ತು. ರಾಹುಲ್‌ ಗೆ ರಾಜಕೀಯದಲ್ಲಿ ಸ್ವಲ್ಪ ಮಟ್ಟಿಗೆ ʼಮಾರ್ಕೆಟ್‌ ವಾಲ್ಯೂʼ ಸೃಷ್ಟಿ ಆಗಿದೆ ಅಂತಾದರೇ ಅದು ಭಾರತ್‌ ಜೋಡೋ ಕಾರಣದಿಂದಾಗಿ ಮತ್ತು ಕಾಂಗ್ರೆಸ್‌ ಮತ್ತು ಭಾರತ್‌ ಜೋಡೋ ಹಿಂದಿರುವ ರಾಜಕೀಯ ತಂತ್ರಗಾರರ ಶ್ರಮದಿಂದಾಗಿ.  

ಒಬ್ಬ ಸಿನೆಮಾ ನಟನ ಅಥವಾ ರಾಜಕೀಯ ನಾಯಕನ ʼಬ್ರ್ಯಾಂಡ್‌ ವಾಲ್ಯೂʼ ಕುಸಿಯುವುದು ಒಂದು ಎತ್ತರವನ್ನು ತಲುಪಿದ ನಂತರ ʼಏನ್‌ ಮಾಡಿದ್ರೂ ನಡೆಯುತ್ತದೆʼ ಎಂಬ ಧೋರಣೆಯಲ್ಲಿ ಮಾತ್ರ. ಬಿಜೆಪಿಗೆ ಮತ್ತು ಮೋದಿಗೆ ಈಗ ಅದೇ ಆಗಿದ್ದು/ಆಗುತ್ತಿರುವುದು. ಪ್ರತಿಪಕ್ಷಗಳ ಬಗೆಗಿನ ಕ್ಷುಲ್ಲಕ ನೋಟ, ಪ್ರತಿಪಕ್ಷಗಳ ಪ್ರಮುಖ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಗುರುತಿಸಲ್ಪಡುತ್ತಿರುವ ರಾಹುಲ್‌ ಗಾಂಧಿ ಬಗ್ಗೆ ದಿವ್ಯ ನಿರಾಕರಣೆ, ಹಿಂದುತ್ವವೇ ಎಲ್ಲಾ ರಾಜಕೀಯ ಮೈಲೇಜ್‌ಗೆ ಕಾರಣ ಎಂಬ ಬಿಜೆಪಿಯಲ್ಲಿನ ಸ್ಥಾಪಿತ ಮನಸ್ಥಿತಿ, ಅತಿಯಾದ ಆತ್ಮ ವಿಶ್ವಾಸ ಇವೆಲ್ಲವೂ ಒಂದು ತರದಲ್ಲಿ ಬಿಜೆಪಿಯ ʼಬ್ರ್ಯಾಂಡ್‌ ವಾಲ್ಯೂʼವನ್ನು ಕಡಿಮೆ ಮಾಡಿಸುತ್ತಿದೆ ಎಂದು ಕಾಣಿಸುತ್ತಿದೆ. ಟಿವಿ ಮಾಧ್ಯಮಗಳ ವೈಭವೀಕರಣ, ಸಾಮಾಜಿಕ ಜಾಲತಾಣಗಳ ರಂಜನೆ ಇವೆಲ್ಲಾ ಹಳೆ ಗೋಡೆಗೆ ಬಣ್ಣ ಹಚ್ಚುವ ಕೆಲಸವಷ್ಟೆ. ಅವು ಈ ರಾಜಕೀಯ ಆಂತರಿಕ ವ್ಯತ್ಯಾಸಗಳ ಬಗ್ಗೆ ಎಂದೂ ತೋರಿಸಲಾರವು. ಕಾಣುತ್ತಿರುವ ಪದರವಷ್ಟೇ ನಿಜವಾದ ರಾಜಕೀಯದ ಸ್ಥಿತಿ ಅಲ್ಲ. ಕಾಣದೆ ಉಳಿದಿರುವುದು ಕೂಡ ಹೌದು ಎನ್ನುವುದು ಇಲ್ಲಿ ಬಹಳ ಮುಖ್ಯ.

“ಪ್ರಧಾನಿ ನರೇಂದ್ರ ಮೋದಿಯವರ ನಿಲುವು ಮತ್ತು ವೈಯಕ್ತಿಕ ಜನಪ್ರಿಯತೆಗೆ ಸರಿಹೊಂದಲು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಇನ್ನಷ್ಟು ಶ್ರಮವಹಿಸಬೇಕಿದೆ ಎಂಬುದು ನಿಜವಾಗಿದ್ದರೂ, ಅವರು ಖಂಡಿತವಾಗಿಯೂ ಅವರಿಬ್ಬರ  ನಡುವಿನ ಅಂತರವನ್ನು ಕಡಿಮೆ ಮಾಡಿಕೊಂಡಿದ್ದಾರೆ ಎನ್ನುವುದಂತೂ ಸತ್ಯ. ಒಂದೇ ʼಮಾರ್ಕೇಟ್‌ʼ ಸರ್ವ ಕಾಲಕ್ಕೂ ಇರುವುದಿಲ್ಲ. ಒಂದು ಕೆಟ್ಟ ತಂತ್ರ ಆ ʼಮಾರ್ಕೆಟ್ ವಾಲ್ಯೂʼನನ್ನು ಕುಗ್ಗಿಸಬಹುದು. ಮತ್ತು ಆ ತಪ್ಪು ಹೆಜ್ಜೆಗಳೆ ಮುಂದಿನ  ತಂತ್ರಗಾರಿಕೆಗೆ ಸಹಾಯ ಮಾಡುವುದಕ್ಕೆ ಖಂಡಿತ ಸಾಧ್ಯವಿದೆ. ಇನ್ನಷ್ಟು ನಿಖರವಾಗಿ ಹೇಳುವುದಾದರೇ ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿಗೆ  ಬಹುತೇಕ ಈ ಸುದೀರ್ಘ ಸಂಪೂರ್ಣ ಹತ್ತು ವರ್ಷ ಕಲಿಸಿದ್ದು ಇದನ್ನೆ.

ಸವಾಲು ಎಸೆಯುವವರು ಎಲ್ಲಾ ಸಂದರ್ಭದಲ್ಲಿ ಪಂದ್ಯದಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಒಳ್ಳೆಯ ನಾಯಕನೋರ್ವ ಎಲ್ಲಾ ಸವಾಲನ್ನು ಎದುರಿಸಿ ಪಂದ್ಯವನ್ನು ಗೆಲ್ಲಿಸಿಕೊಡಬಹುದು. ಕಾಂಗ್ರೆಸ್‌ ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಗೆ ಒಂದು ದೊಡ್ಡ ಸವಾಲಾಗಿಯೇ ಕಾಣಿಸಿಕೊಂಡಿಲ್ಲ ಎಂಬುವುದನ್ನು ಕಾಂಗ್ರೆಸ್‌ ಕೂಡ ಅರಿತುಕೊಳ್ಳಬೇಕಿದೆ. ಅದು ಕಾಂಗ್ರೆಸ್‌ ನ ಆಂತರಿಕ ವೈಫಲ್ಯವೂ ಕೂಡ ಹೌದು. ಮೋದಿ ಅಂತಹ ಒಬ್ಬ ನಾಯಕ ಎದುರಾಳಿಯ ವೈಫಲ್ಯವನ್ನೇ ಬಳಸಿ ತನ್ನ ತಂತ್ರಗಾರಿಕೆಯಿಂದ ಎರಡೆರಡು ಬಾರಿ ಗೆದ್ದು ಬೀಗಿದರು. ಏನೇನೋ ವ್ಯಾಖ್ಯಾನಗಳು ಈ ಬಗ್ಗೆ ಹುಟ್ಟಿಕೊಂಡವಾದರೂ ಕಾಂಗ್ರೆಸ್‌ ಇಲ್ಲಿ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಲೇಬೇಕಿದೆ. ಪಂದ್ಯದಲ್ಲಿ ಹಾಗೆ, ಒಂದಿಷ್ಟು ಚೌಕಟ್ಟಿರುತ್ತದೆ, ಆ ಚೌಕಟ್ಟಿನೊಳಗೆ ಮಾಡಬಹುದಾದ ಎಲ್ಲಾ ಸಾಧ್ಯತೆಗಳನ್ನು ಮಾಡಿ ಗೆಲ್ಲಬಹುದು. ಸೋತ ಮೇಲೆ ಮೋಸ ಎಂದು ಹೇಳಿದರೆ ಇಲ್ಲಿ ಕೇಳುವವರು ಯಾರೂ ಇಲ್ಲ. ಬಿಜೆಪಿ ಚಾಣಾಕ್ಷ್ಯತನವನ್ನು ತೋರಿಸಿ ಎರಡು ಬಾರಿ ಗೆದ್ದಿತು. ಕಾಂಗ್ರೆಸ್‌ ಪರಾಭವಗೊಂಡಿತು. ಸದ್ಯದ ಸ್ಥಿತಿ ಹಾಗಿಲ್ಲ. ಕಾಂಗ್ರೆಸ್‌ ಕೂಡ ತನ್ನ ಸ್ಥಿತಿಯನ್ನು ಅವಲೋಕಿಸಿಕೊಂಡಿದೆ. ಬಿಜೆಪಿಗೆ ಒಂದು ಸಿಂಹ ಸ್ವಪ್ನವಾಗುವವರಗೆ ತನ್ನ ರಾಜಕೀಯ ತಂತ್ರಗಾರಿಕೆ ಹೆಣೆಯುವುದಕ್ಕೆ ಆರಂಭಿಸಿದೆ ಎನ್ನುವುದಕ್ಕೆ ದೊಡ್ಡ ಉದಾಹರಣೆಯೆ ಟೀಂ ʼಇಂಡಿಯಾʼ.  

ಇದು ಚಾಲೆಂಜರ್‌ ಅಥವಾ ಸವಾಲು ಹಾಕುತ್ತಿರುವ ಪ್ರತಿ ಬ್ರ್ಯಾಂಡ್‌ ಬಗ್ಗೆ ಯೋಚನೆಗೆ ಚಿಂತನೆ ಹಚ್ಚುವಂತೆ ಮಾಡಿದೆ ಎನ್ನುವುದು ದೇಶದ ರಾಜಕೀಯ ವಲಯದಲ್ಲಿನ ಸದ್ಯದ ಬೆಳವಣಿಗೆ. ಪ್ರತಿಪಕ್ಷಗಳನ್ನು ಸೋಲಿಸುವುದಕ್ಕೆ ತಾನೋಬ್ಬನೇ ಸಾಕು ಎಂದು ಸಂಸತ್ತಿನಲ್ಲಿ ಪ್ರತಿಪಾದಿಸಿದ ಮೋದಿ ಟೀಂ ʼಇಂಡಿಯಾʼ ರಚನೆಯಾಗುವಷ್ಟರಲ್ಲಿ ನಮಗೂ ಟೀಂ ಇದೆ, ನಮ್ಮ ಟೀಂ ನಿಮಗಿಂತ ದೊಡ್ಡ ಸಂಖ್ಯೆಯಿಂದ ಕೂಡಿದೆ ಎಂದು ತೋರಿಸಿಯೂ ಕೊನೆಗೆ ಹತಾಶರಾಗಿರುವುದು ಯಾಕೆ ಹಾಗಾದರೆ ? ಇದಕ್ಕೆ ʼಚಾಲೆಂಜಿಂಗ್‌ ಬ್ರ್ಯಾಂಡ್‌ʼ ಹಾಕಿದ ಸವಾಲೇ ಕಾರಣ. ʼಚಾಲೆಜಿಂಗ್‌ ಬ್ರ್ಯಾಂಡ್‌ʼ ಸಾಮಾನ್ಯವಾಗಿ ಟ್ರೆಡಿಷನಲ್‌ ಸೋರ್ಸ್‌ ಪೋಲ್‌ ಗಿಂತ ದೊಡ್ಡ ಮಹತ್ವಾಕಾಂಕ್ಷೆಗಳನ್ನು ಹೊಂದಿರುವುದಷ್ಟೆ ಅಲ್ಲದೆ, ಆತ್ಮವಿಶ್ವಾಸದಿಂದ ಮುನ್ನಡೆಯುವುದಕ್ಕೆ ಸಿದ್ಧವಾಗಿರುತ್ತದೆ. ಆದಾಗ್ಯೂ, ಚಾಲೆಂಜರ್ ಬ್ರ್ಯಾಂಡ್‌ ಗಳಾಗಿ  "ಯಾರು" ಸವಾಲು ಮಾಡುತ್ತಿದ್ದಾರೆ ಎಂಬುದಕ್ಕಿಂತ ಹೆಚ್ಚಾಗಿ "ಯಾವುದನ್ನು" ಅವರು ಸವಾಲು ಮಾಡುತ್ತಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.  

ಭಾರತದಲ್ಲಿ ಸದ್ಯ ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ʼಚಾಲೆಂಜರ್‌ ಬ್ರ್ಯಾಂಡ್‌ʼ. ʼಲಿಡರ್‌ ಬ್ರ್ಯಾಂಡ್‌ʼ ಪ್ರಧಾನಿ ಮೋದಿ. ರಾಹುಲ್‌ ಕಳೆದ ಕೆಲವು ವರ್ಷಗಳ ಹಿಂದೆ ಇದ್ದ ಹಾಗಿಲ್ಲ. ಅವರ ರಾಜಕೀಯ ಅನುಭವ ವೃದ್ಧಿಸಿದೆ. ರಾಜಕೀಯದಲ್ಲಿನ ಅವರ  ʼಫಂಬ್ಲಿಂಗ್ ಎಕ್ಸ್‌ಪಿರಿಯನ್ಸ್‌ʼ ಅಥವಾ ಅನುಭವದ ಕೊರತೆ ಅವರನ್ನು ಟೀಕೆಗೆ ಒಳಪಡಿಸಿರುವುದನ್ನು ಇಡೀ ದೇಶ ಕಂಡಿದೆ.  ವೈಯಕ್ತಿಕವಾಗಿ ರಾಜಕೀಯದಲ್ಲಿ ರಾಹುಲ್‌ ಗಾಂಧಿ ಎಷ್ಟು ಸಮರ್ಥರೋ ಅಥವಾ ಅಸಮರ್ಥರೋ ಅದು ಎರಡನೇ ಹಂತದ ಚರ್ಚೆ. ಆದರೇ, ಅವರ ಹಿಂದೆ ಕೆಲಸ ಮಾಡುತ್ತಿರುವ ರಾಜಕೀಯ ತಂತ್ರಗಾರಿಕೆ ನಿಜಕ್ಕೂ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ದೊಡ್ಡ ಸವಾಲನ್ನೇ ಎಸೆಯುತ್ತಿದೆ ಎನ್ನುವುದಂತೂ ಅಕ್ಷರಶಃ ಸತ್ಯ. ‌ಪ್ರಸ್ತುತ ಸರ್ಕಾರದ ಕಾರ್ಯಕ್ಷಮತೆ, ನೋಟು ಅಮಾನ್ಯೀಕರಣ, ಜಿಎಸ್‌.ಟಿ, ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆ, ಆರ್ಥಿಕ ಅಸಮತೋಲನದಂತಹ ವಿಷಯಗಳ ಬಗ್ಗೆ ರಾಹುಲ್‌ ಗಾಂಧಿ ಪದೆ ಪದೆ ಜನರ ಮುಂದೆ ಇರಿಸುತ್ತಿರುವುದು ಮತ್ತು ಅವನ್ನು ತಮ್ಮ ಅಜೆಂಡಾವನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವುದು ಒಂದು ತರದ ಜಾಣ್ಮೆಯ ನಡೆಯೂ ಹೌದು. ಮತ್ತಿವು ರಾಹುಲ್‌ ಸಮರ್ಥರಾಗಿದ್ದಾರೆ ಎನ್ನುವ ಸಂಕೇತವೂ ಹೌದು.

ರಾಜಕೀಯದ ನಿರೀಕ್ಷೆಗಳನ್ನು ಮೀರಿ ನಡೆಯುವುಕ್ಕೆ ವಾಸ್ತವ ಸ್ಥಿತಿ ಇಲ್ಲಿ ಸಾಧ್ಯಮಾಡಿಕೊಡುವುದಿಲ್ಲ. ಅವಾಸ್ತವಿಕವಾಗಿ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದರಿಂದಲೂ ಎಲ್ಲಾ ರಾಜಕೀಯ ಲೆಕ್ಕಾಚಾರಗಳು ಮೇಲು ಕೇಳಗಾಗುತ್ತದೆ. ಅವಾಸ್ತವಿಕವಾಗಿ ನಡೆದುಕೊಳ್ಳುವ ನಾಯಕ ʼಭರವಸೆಯ ನಾಯಕʼ ಎಂದು ಕರೆಸಿಕೊಳ್ಳಲಾರ. ಇದು ನಿಸ್ಸಂದೇಹವಾಗಿ ಆತನ ವಿಶ್ವಾಸಾರ್ಹತೆ ಮತ್ತು ಜನಪ್ರಿಯತೆಗಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಇಲ್ಲಿ ಆಗಿರುವುದು ಇಷ್ಟೆ. ರಾಹುಲ್‌ ಗಾಂಧಿಯ ರಾಜಕೀಯ ವರ್ಚಸ್ಸು ಕುಂದುತ್ತಾ ಪಾತಾಳಕ್ಕೆ ಹೋಯ್ತು, ಮೋದಿ ರಾಜಕೀಯ ವರ್ಚಸ್ಸು ಗಗನಕ್ಕೇರಿತು. ʼಲೀಡರ್‌ ಬ್ರ್ಯಾಂಡ್‌ʼ ಇಡೀ ಮಾರ್ಕೇಟ್‌ ನನ್ನು ಸೆಳೆಯುವ ತಾಕತ್ತನ್ನು ಹೊಂದಿರಬೇಕಾಗುತ್ತದೆ. ಇಲ್ಲಿ ʼಚಾಲೆಂಜರ್‌ ಬ್ರಾಂಡ್‌ʼ ಮತ್ತು ʼಲೀಡರ್‌ ಬ್ರ್ಯಾಂಡ್‌ʼ ನಡುವಿನ ಸರಾಸರಿಯನ್ನು ಪರಿಗಣಿಸಿ ನೋಡಲಾಗುತ್ತದೆ. ಯಾವುದು ಹೆಚ್ಚು ಭಾರ ತೂಗುತ್ತದೋ ಅದಕ್ಕೆ ಮಾನ್ಯತೆ ದೊರೆಯುತ್ತದೆ. ಒಟ್ಟಿನಲ್ಲಿ, ʼಬ್ರ್ಯಾಂಡ್‌ ಮೋದಿʼ ಮತ್ತು ʼಬ್ರ್ಯಾಂಡ್‌ ರಾಹುಲ್ʼ ನಡುವೆ ಒಂದು ಸ್ಪರ್ಧೆಯೇ ಈಗ ಒಂದು ರೀತಿಯಲ್ಲಿ ಅಧಿಕೃತವಾಗಿ ಆರಂಭವಾಗಿದೆ. ಒಂದೆಡೆ ʼಬ್ರ್ಯಾಂಡ್‌ ಮೋದಿʼಯನ್ನು ಹಿಂದುತ್ವ, ರಾಮ ಮಂದಿರ, ಅಭಿವೃದ್ಧಿ, ಗ್ಲೋಬಲ್‌ ಲೀಡರ್‌ ಎಂಬಂತೆಲ್ಲಾ ಬಿಂಬಿಸಲಾಗುತ್ತಿದ್ದರೆ, ಮತ್ತೊಂದಡೆ ʼಬ್ರ್ಯಾಂಡ್‌ ರಾಹುಲ್‌ʼ ನನ್ನು ಪ್ರಗತಿಪರ, ಜಾತ್ಯತೀತ, ಸಹಾನುಭೂತಿಯುಳ್ಳ ನಾಯಕ, ಜನಪರ ಎಂಬಂತೆಲ್ಲಾ ಬಿಂಬಿಸಲಾಗುತ್ತಿದೆ. ಇಲ್ಲಿ ಎರಡೂ ಬ್ರಾಂಡ್‌ ಗಳು ತನ್ನದೇ ಆದ ಸೆಳೆತ ಮತ್ತು ವಿಶೇಷತೆಯನ್ನು ಹೊಂದಿವೆ.

ನಿಸ್ಸಂಶಯವಾಗಿ ಜನಪ್ರಿಯತೆಯ ಆಧಾರದಲ್ಲಿ ʼಬ್ರ್ಯಾಂಡ್‌ ಮೋದಿʼ ಬಲಿಷ್ಠವಾಗಿದೆ. ʼಬ್ರ್ಯಾಂಡ್‌ ರಾಹುಲ್‌ʼ ಕಳೆದುಕೊಂಡ ವರ್ಚಸ್ಸನ್ನು ಮರಳಿ ಪಡೆಯುವ ಯತ್ನದಲ್ಲಿದೆ.  ʼಚಾಲೆಂಜರ್ ಬ್ರ್ಯಾಂಡ್‌ʼ ಮತ್ತು ʼಲೀಡರ್‌ ಬ್ರ್ಯಾಂಡ್‌ʼ ಗಳ ಅಂತರ ಈಗ ಹೆಚ್ಚೇನೂ ಇಲ್ಲ. ‌ʼಪಾಲಿಟಿಕಲ್ ಮಾರ್ಕೆಟ್‌ʼ ಹೇಗೂ ಬದಲಾಗಬಹುದು. ಲೋಕಸಭೆ ಬರ್ತಿದೆ, ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ