ಮಧ್ಯಪ್ರದೇಶ, ರಾಜಸ್ಥಾನ : ತಂತ್ರಗಾರಿಕೆ ಅದಲುಬದಲು ಮಾಡಿಕೊಂಡ ಕಾಂಗ್ರೆಸ್, ಬಿಜೆಪಿ !
ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣಾ ತಂತ್ರಗಾರಿಕೆಗಳು ಎಂದಿಗೂ ಭಿನ್ನ. ವಿಧಾನಸಭಾ
ಚುನಾವಣೆಯಲ್ಲಿ ಯಶಸ್ಸು ಕಂಡ ಚುನಾವಣಾ ತಂತ್ರಗಾರಿಕೆ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕಾಲಕ್ಕೂ ಯಶಸ್ಸು
ಕಾಣುವುದಿಲ್ಲ ಎನ್ನುವುದು ಕೂಡ ಸತ್ಯ. ಈಗ ರಾಷ್ಟ್ರ ರಾಜಕಾರಣ ವಲಯದಲ್ಲಿ ರಾಜಸ್ಥಾನ, ಛತ್ತೀಸ್ ಗಢ, ಮಿಜೋರಾಂ, ಮಧ್ಯಪ್ರದೇಶ
ಮತ್ತು ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗಳ ಚರ್ಚೆ. ನವೆಂಬರ್ ೭
ರಿಂದ ೩೦ರವರೆಗೆ ಮತದಾನ ನಡೆಯುವ ಚುನಾವಣೆಯ ಜೊತೆಜೊತೆಗೆ ಲೋಕಸಭಾ ಚುನಾವಣೆಯ ಲೆಕ್ಕಾಚಾರವನ್ನು ಹಾಕುತ್ತಿವೆ.
ಬರುವ ಮಾರ್ಚ್ ತಿಂಗಳ ಅಂತಿಮ
ವಾರದಲ್ಲಿ ಅಥವಾ ಏಪ್ರಿಲ್ ನಿಂದ
ಪ್ರಾರಂಭವಾಗುವ ಸಾರ್ವತ್ರಿಕ ಚುನಾವಣೆಗೆ ನಾಲ್ಕೈದು ತಿಂಗಳ ಮೊದಲು ನಡೆಯಲಿರುವ ಈ ಚುನಾವಣೆಗಳ ಮೇಲೆ ರಾಷ್ಟ್ರದ ದೃಷ್ಟಿ ನೆಟ್ಟಿದೆ.
ಈ ಪಂಚರಾಜ್ಯ ಚುನಾವಣೆಗಳು ಒಂದು ರೀತಿಯಲ್ಲಿ ಲೋಕಸಭಾ ಚುನಾವಣೆಗೆ ಪ್ರವೇಶಿಸುವ ಮುನ್ನಾ ರಾಜ್ಯ ರಾಜಕಾರಣ
ವಲಯದಲ್ಲಿ ಸೆಮಿಫೈನಲ್. ಈ ಸುತ್ತಿನಲ್ಲಿ ಗೆಲ್ಲುವ ಪಕ್ಷವು ಉತ್ತಮ ಫಾರ್ಮ್‌ನಲ್ಲಿ ಫೈನಲ್ ಅಖಾಡಕ್ಕೆ
ಲಗ್ಗೆ ಇಡುತ್ತದೆ.
ಈ ಪಂಚರಾಜ್ಯ ಚುನಾವಣೆಗಳಿಗೆ ಕುತೂಹಲಕಾರಿಯಾದ ರಾಜಕೀಯ ಇತಿಹಾಸವಿದೆ ಎನ್ನುವುದನ್ನು ನಾವು ಇಲ್ಲಿ
ಗಮನಿಸಬೇಕು. ಈ ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹಾಗೂ ಲೋಕಸಭಾ ಚುನಾವಣೆಗಳು ಎಂದಿಗೂ
ಒಂದೇ ಪಕ್ಷಕ್ಕೆ ಬಹುಮತವನ್ನು ತಂದುಕೊಟ್ಟಿಲ್ಲ. ೨೦೦೩ರ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ
ಹಾಗೂ ಛತ್ತೀಸ್ ಗಢದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಹಿಡಿದಿತ್ತು. ಆದರೇ, ೨೦೦೪ರ ಸಾರ್ವತ್ರಿಕ
ಚುನಾವಣೆಯಲ್ಲಿ ಈ ಮೂರು ರಾಜ್ಯಗಳಲ್ಲಿ ಹಿಂದೆ ಬಿದ್ದು ಸೋಲು ಅನುಭವಿಸಿತು.
೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಿತು. ಆದರೇ, ರಾಜಸ್ಥಾನದಲ್ಲಿ
ಅಧಿಕಾರ ಕಳೆದುಕೊಂಡಿತು. ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಅನುಭವ ಕಂಡಿತು. ೨೦೧೩ಲ್ಲಿ
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಿತು,
ಮಾತ್ರವಲ್ಲದೇ ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಮೂರೂ ರಾಜ್ಯಗಳಲ್ಲಿ ಹೆಚ್ಚು ಸಂಸದೀಯ ಸ್ಥಾನಗಳನ್ನು
ತನ್ನದಾಗಿಸಿಕೊಂಡು ಐತಿಹಾಸಿಕ ಗೆಲುವು ಕಂಡಿತು. ಆದರೇ, ೨೦೧೮ರಲ್ಲಿ ತೆಲಂಗಾಣ ರಾಜ್ಯವನ್ನು ಒಳಗೊಂಡು
ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢ ವಿಧಾನಸಭಾ
ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡು ಅಧಿಕಾರವನ್ನು ಕಳೆದುಕೊಂಡಿತು. ೨೦೧೯ರ ಲೋಕಸಭಾ
ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಗೆದ್ದು ಬೀಗಿತ್ತು ಎನ್ನುವುದು
ಇಲ್ಲಿ ಉಲ್ಲೇಖಾರ್ಹ.
ಇನ್ನು, ಸಿ.ಎಸ್.ಡಿ.ಎಸ್ ಪೋಸ್ಟ್ ಪೋಲ್ ಸಮೀಕ್ಷೆ ಹೇಳುವ ಪ್ರಕಾರ ಚುನಾವಣೆಯ ಸಂದರ್ಭದಲ್ಲಿ
ಮತದಾರರ ನಿಲುವನ್ನು ನಿರ್ಧರಿಸುವುದು ಕಷ್ಟ, ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ಸಮೀಕ್ಷೆಯಲ್ಲಿ
ಹೇಳಿರುತ್ತಾರೋ, ಅದು ಅಂತಿಮ ಹಂತದಲ್ಲಿ ಬದಲಾಗುವ ಸಂಭವವೂ ಇರುತ್ತದೆ. ಶೇ.೧೨ರಿಂದ ೧೫ರಷ್ಟು ಮತದಾರರು
ಮತದಾನದ ದಿನ ಯಾರಿಗೆ ಮತ ಚಲಾಯಿಸುವುದು ಎಂದು ನಿರ್ಧರಿಸುತ್ತಾರೆ. ಇದು ರಾಜಕೀಯ ಪಕ್ಷಗಳ ನಿರೀಕ್ಷೆಯನ್ನು
ಕೆಲವೊಮ್ಮೆ ಬುಡಮೇಲು ಮಾಡುವುದಕ್ಕೆ ಸಾಧ್ಯವಿದೆ ಎಂದು ಈ ಸಮೀಕ್ಷಾ ವರದಿ ಹೇಳುತ್ತದೆ.
ಮುಂದಿನ ತಿಂಗಳಲ್ಲಿ ಬರಲಿರುವ ಈ ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶದಲ್ಲಿ
ಮಾತ್ರ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ
ಕಾಂಗ್ರೆಸ್ ಅಧಿಕಾರದಲ್ಲಿದೆ ಮತ್ತು ತೆಲಂಗಾಣ ಮತ್ತು ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳಾದ ಬಿ.ಆರ್.ಎಸ್ ಮತ್ತು ಎಂ.ಎನ್.ಎಫ್ ಅಧಿಕಾರದಲ್ಲಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಈಗ
ಈ ಎಲ್ಲಾ ರಾಜ್ಯಗಳಲ್ಲಿ ಸಕಾರಾತ್ಮಕವಾದಂತಹ ಒಂದು ರಾಜಕೀಯ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಬೇಕಾಗಿರುವ
ಅನಿವಾರ್ಯತೆ ಇದೆ ಎನ್ನುವುದು ಮುಖ್ಯಾಂಶ. ಲೋಕಸಭಾ ಚುನಾವಣೆಯ ಫಲಿತಾಂಶ ವಿಧಾನಸಭಾ ಚುನಾವಣೆಯ ಫಲಿತಾಂಶದ
ಆಧಾರದಲ್ಲಿ ಇರುವುದಿಲ್ಲದಾದ್ದರಿಂದ ಲೋಕಸಭೆಗಾಗಿ ಬೇರೆಯೇ ತಂತ್ರಗಾರಿಕೆಯನ್ನು ಮಾಡಿಕೊಂಡು ಮುನ್ನಡೆಯಬೇಕಾಗಿದೆ.
ಈ ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಕನಿಷ್ಟ ಮೂರು ರಾಜ್ಯಗಳಲ್ಲಿ ಹಾಗೂ ಬಿಜೆಪಿ ಕನಿಷ್ಟ ಎರಡು ರಾಜ್ಯಗಳಲ್ಲಿ
ಗೆಲ್ಲುವ ಪ್ರಯತ್ನದಲ್ಲಿವೆ. ರಾಷ್ಟ್ರೀಯ ಚುನಾವಣೆಯ ಸಂದರ್ಭದಲ್ಲಿ ದಕ್ಷಿಣ ಮತ್ತು ಈಶಾನ್ಯ ಭಾರತದಲ್ಲಿ ಪ್ರಸ್ತುತವಾಗಿ ಉಳಿಯಲು ಪ್ರಾದೇಶಿಕ ಶಕ್ತಿಗಳು
ತೆಲಂಗಾಣ ಮತ್ತು ಮಿಜೋರಾಂ ಅನ್ನು ಉಳಿಸಿಕೊಳ್ಳುವ ಅಗತ್ಯವಿದೆ.
ಸದ್ಯ ಪ್ರೀ ಪೋಲ್ ಸಮೀಕ್ಷೆ ಹೇಳುವ ಪ್ರಕಾರ, ಎಲ್ಲಾ ರಾಜ್ಯಗಳಲ್ಲಿ ಈಗ ಒಂದು ಉಸಿರು ಗಟ್ಟಿದ
ರಾಜಕೀಯ ವಾತಾವರಣವಿದೆ. ಎಲ್ಲಾ ರಾಜ್ಯಗಳಲ್ಲಿಯೂ ಯಾವ ಪಕ್ಷಕ್ಕೂ ಬಹುಮತ ಬರುವ ಸಾಧ್ಯತೆ ಕಡಿಮೆ ಇದೆ
ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಈ ಪಂಚರಾಜ್ಯ ಚುನಾವಣೆಗಳು ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಮುಖ್ಯ
ಎನ್ನಿಸಿಕೊಳ್ಳುತ್ತಿವೆ. ಸ್ಥಳೀಯ ರಾಜಕೀಯ ಮುಖವೇ ಇಲ್ಲಿ ಹೆಚ್ಚು ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗುತ್ತಿದೆ.
ಅಂದರೇ, ರಾಷ್ಟ್ರ ಮಟ್ಟದ ರಾಜಕೀಯ ವರ್ಚಸ್ಸು ಈ ರಾಜ್ಯಗಳಲ್ಲಿ ಎಷ್ಟೇ ಪ್ರಯತ್ನಮುಖವಾಗಿ ಕಾರ್ಯನಿರ್ವಹಿಸಿದರೂ
ಅದು ಕಾರ್ಯಕ್ಕೆ ಬರುವುದಿಲ್ಲ ಎನ್ನಲಾಗುತ್ತಿದೆ. ಇನ್ನು, ಸಿ.ಎಸ್.ಡಿ.ಎಸ್ ಪೋಸ್ಟ್ ಪೋಲ್ ೨೦೧೮ರಲ್ಲಿ
ಈ ಪಂಚರಾಜ್ಯಗಳಲ್ಲಿ ಮಾಡಿರುವ ಒಂದು ಸಮೀಕ್ಷೆಯ ಪ್ರಕಾರ, ಸುಮಾರು ಶೇ.೩೯ರಷ್ಟು ಮತದಾರರು ಪಕ್ಷವನ್ನು
ನೋಡಿ ಮತ ಚಲಾಯಿಸುವ ನಿರ್ಧಾರ ಮಾಡುವುದಾದರೇ, ಶೇ. ೨೧ರಷ್ಟು ಮತದಾರರು ಸ್ಥಳೀಯ ನಾಯಕತ್ವವನ್ನು ನೋಡಿ
ಮತ ಚಲಾಯಿಸಲು ನಿರ್ಧರಿಸುತ್ತಾರೆ. ಆದಾಗ್ಯೂ ಇಲ್ಲಿ ಭರದಿಂದ ರಾಜಕೀಯ ಪ್ರಚಾರ ಸಾಗುತ್ತಿದೆ ಎನ್ನುವುದು
ಉಲ್ಲೇಖಾರ್ಹ.
ಪಂಚರಾಜ್ಯ ಚುನಾವಣೆಗೆ ಬೇಕಾಗಿ ಬಿಜೆಪಿ ಪಕ್ಷದ ರಾಜಕೀಯ ತಂತ್ರಗಾರಿಕೆಯನ್ನು ಇಲ್ಲಿ ಬಹಳ ಎಚ್ಚರಿಕೆಯಿಂದ
ಮತ್ತು ದೂರದೃಷ್ಟಿ ಇಟ್ಟುಕೊಂಡು ಮಾಡಿದಂತೆ ಕಾಣಿಸುತ್ತಿದೆ. ತಾನು ವಿರೋಧ ಪಕ್ಷದ ಸ್ಥಾನದಲ್ಲಿರುವ
ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೇ ʼಮೋದಿ ಹವಾʼವನ್ನೇ ಬೀಸುತ್ತಿದೆ. ಮತ್ತು
ಇಲ್ಲಿ ತಮ್ಮದು ಸಾಮೂಹಿಕ ನಾಯಕತ್ವ ಎಂದೇ ಚುನಾವಣಾ ಕಣಕ್ಕೆ ಇಳಿಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ.
ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ತನ್ನ ಚುನಾವಣಾ ಫ್ರಂಟ್ ಲೈನ್ ಲೀಡರ್ ಎಂದು ಬಿಂಬಿಸುವುದರಿಂದ ದೂರ ಸರಿದಂತೆ ಕಾಣಿಸುತ್ತಿದೆ. ಅಲ್ಲಿಯೂ ಸಾಮೂಹಿಕ ನಾಯಕತ್ವವನ್ನೆ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದಂತಿದೆ. ಆದರೇ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿಯ
ಈ ತಂತ್ರಗಾರಿಕೆ ಫಲಿಸಲಿಲ್ಲ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ದುರ್ಬಲ ಮುಖ್ಯಮಂತ್ರಿ
ಎಂದು ಬಿಂಬಿಸಲಾಗುತ್ತಿರುವ ಶಿವರಾಜ್ ಚೌಹಾಣ್ ಅವರ ವಿರುದ್ಧ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕಮಲ್ ನಾಥ್ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿ
ಎಂದು ಘೋಷಿಸಿರುವುದು ಕುತೂಹಲಕರಿಯಾಗಿದೆ.
ವಿಧಾನಸಭಾ ಚುನಾವಣೆಗೂ ಮುನ್ನ ಹಿಮಾಚಲ (೨೦೨೨), ಕರ್ನಾಟಕ (೨೦೨೩), ರಾಜಸ್ಥಾನ,ಛತ್ತೀಸ್ ಗಢ,
ಮಧ್ಯಪ್ರದೇಶ (೨೦೧೮) ಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಕಾಂಗ್ರೆಸ್ ಘೋಷಿಸಿದೇ, ಅಧಿಕಾರದಲ್ಲಿದ್ದ
ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಏರಿತ್ತು. ಇದೇ ತಂತ್ರಗಾರಿಕೆಯನ್ನುಈಗ ಬಿಜೆಪಿ
ಮುಂದುವರಿಸಿದೆ ಎಂಬಂತೆ ಕಾಣಿಸುತ್ತಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ನಡೆದುಕೊಂಡಂತೆ,
ರಾಜಸ್ಥಾನದಲ್ಲಿ
ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಶೋಕ್ ಗೆಹ್ಲೋಟ್ ಅವರನ್ನು ಅಧಿಕೃತವಾಗಿ ಘೋಷಿಸಲಿಲ್ಲ. ಇದು ಬಹುಶಃ ಸಚಿನ್ ಪೈಲಟ್ ಅವರನ್ನು ಸಮಾಧಾನಪಡಿಸುವ ತಂತ್ರವೆನ್ನಲಾಗುತ್ತಿದೆ. ಛತ್ತೀಸ್ ಗಢದಲ್ಲಿ, ಭೂಪೇಶ್ ಬಾಘೇಲ್
ಮತ್ತು ಟಿಎಸ್ ಸಿಂಗ್ ದೇವ್ ಅವರ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ
ಸಜ್ಜಾಗುತ್ತಿದೆ.
ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು
ಸ್ವತಃ ಬಿಜೆಪಿಯೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿರುವುದು ಮತ್ತು ರಾಜಸ್ಥಾನದಲ್ಲಿ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಬರುವ ಚುನಾವಣೆಗೆ ತನ್ನ ಮುಖ್ಯಮಂತ್ರಿ
ಅಭ್ಯರ್ಥಿ ಎಂದು ಕಾಂಗ್ರೆಸ್ ಅಧಿಕೃತವಾಗಿ ಘೋಷಿಸದಿರುವುದನ್ನು ನೋಡಿದರೇ, ಉಭಯ ಪಕ್ಷಗಳಿಗೂ ತನ್ನ
ಮುಖ್ಯಮಂತ್ರಿಯ ಬಗ್ಗೆಯೇ ನಂಬಿಕೆ ಇಲ್ಲ ಎಂದು ಕಾಣಿಸುತ್ತಿದೆ. ಹೀಗಿರುವಾಗ ಅಲ್ಲಿನ ಮತದಾರರು ಇವರನ್ನು
ನಂಬುವುದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತಿದೆ.
ಇನ್ನು, ತೆಲಂಗಾಣದಲ್ಲಿ, ಕೆ ಚಂದ್ರಶೇಖರ್ ರಾವ್(ಕೆಸಿಆರ್) ಬಿ.ಆರ್.ಎಸ್ ನ ಮುಖ್ಯಮಂತ್ರಿ ಅಭ್ಯರ್ಥಿ. ಪಕ್ಷ ಗೆದ್ದರೆ
ಅಂತಿಮವಾಗಿ ಕೆಸಿಆರ್ ತನ್ನ ಮಗ ಕೆಟಿ ರಾಮರಾವ್ (ಕೆಟಿಆರ್)ಗೆ ಮುಖ್ಯಮಂತ್ರಿ ಹಸ್ತಾಂತರಿಸುವ ಸಾಧ್ಯತೆಯ ಬಗ್ಗೆ ಊಹಾಪೋಹಗಳಿವೆ. ಒಂದು
ವೇಳೆ ಹೀಗಾದಲ್ಲಿ ಪಕ್ಷದ ಹಿರಿಯ ನಾಯಕರು ಕೆಸಿಆರ್ ವಿರುದ್ಧ ತಿರುಗಿ ಬೀಳಬಹುದೆನ್ನಲಾಗುತ್ತಿದೆ.
ಈ ಕಾರಣಕ್ಕೆ ಕಾಂಗ್ರೆಸ್ ಅಥವಾ ಬಿಜೆಪಿಯತ್ತ ಮತದಾರರು ತಿರುಗಬಹುದು ಎಂದು ಹೇಳಲಾಗುತ್ತಿದೆ.
ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿ ಕೊಟ್ಟ ಗ್ಯಾರಂಟಿ ಯೋಜನೆಯ ಮಾದರಿಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಘೋಷಿಸಿದೆ. ಮಧ್ಯಪ್ರದೇಶ,
ತೆಲಂಗಾಣದಲ್ಲಿ ಮಹಿಳೆಯರು ಮತ್ತು ನಿರುದ್ಯೋಗಿ ಯುವಕರಿಗೆ ನಗದು ಹಣ, ಉಚಿತ ವಿದ್ಯುತ್, ಕೃಷಿ ಸಾಲ ಮನ್ನಾ
ಮತ್ತು ಹಳೆಯ ಪಿಂಚಣಿ ಯೋಜನೆ ಅನುಷ್ಠಾನವನ್ನು
ಮಾಡುವ
ಭರವಸೆ ನೀಡಿದೆ. ಇನ್ನು, ತೆಲಂಗಾಣದಲ್ಲಂತೂ ಮದುವೆಯಾಗುವ
ಹೆಣ್ಣುಮಕ್ಕಳಿಗೆ ಹತ್ತು ಗ್ರಾಮ್ ಚಿನ್ನ ಹಾಗೂ ಒಂದು ಲಕ್ಷ ರೂ. ನೀಡುವುದಾಗಿ ಆಶ್ವಾಸನೆ ನೀಡಿದೆ.
ಮಿಜೋರಾಂನಲ್ಲಿ ರೂ.೭೫೦ಕ್ಕೆ ಅಡುಗೆ ಅನಿಲ, ೧೫ಲಕ್ಷ ಆರೋಗ್ಯ ವಿಮೆಯ ಆಶ್ವಾಸನೆ ನೀಡಿದೆ. ವಿಶೇಷವಾಗಿ
ಮಧ್ಯಪ್ರದೇಶದಲ್ಲಿ ʼಸುಂದರಕಾಂಡ ಪಾರಾಯಣʼ ರಾಜಕೀಯಕ್ಕೆ ಮುಂದಾಗಿದೆ. ಛತ್ತೀಸ್ ಗಢದಲ್ಲಿ ಜಾತಿ ಸಮೀಕ್ಷೆಯ
ಭರವಸೆ ನೀಡಿದರೇ, ರಾಜಸ್ಥಾನದಲ್ಲಿ ೧೦೦ಯೂನಿಟ್ ವಿದ್ಯುತ್ ಫ್ರೀ ನೀಡುವುದಾಗಿ ಘೋಷಿಸಿದೆ.
ಮಿಜೋರಾಂ ರಾಜಕೀಯ ಇನ್ನೂ ಕುತೂಹಲವಾಗಿದೆ. ನೆರೆಯ ಮಣಿಪುರದ
ಪರಿಸ್ಥಿತಿಯಿಂದ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮಾತ್ರವಲ್ಲದೇ, ಝಡ್.ಪಿ.ಎಂ (ಝೋರಾಂ ಪೀಪಲ್ಸ್ ಮೂಮೆಂಟ್) ಈ ಬಾರಿ ಚುನಾವಣಾ ಕಣದಲ್ಲಿರುವುದು ಒಂದಿಷ್ಟು
ಬದಲಾವಣೆಯ ನಿರೀಕ್ಷೆಯಿದೆ.
ನಿರುದ್ಯೋಗ,
ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ಎಲ್ಲಾ ರಾಜ್ಯಗಳಲ್ಲಿರುವ ಪ್ರಮುಖ ಸಮಸ್ಯೆಗಳಾಗಿವೆ. ಈ ಸಮಸ್ಯೆಗಳು ಈ ರಾಜ್ಯಗಳ
ಚುನಾವಣೆಯಲ್ಲಿ ಹೇಗೆ ಪರಿಣಮಿಸುತ್ತವೆ ಎನ್ನುವುದನ್ನು ಕಾದುನೋಡಬೇಕಾಗಿದೆ.
-ಶ್ರೀರಾಜ್ ವಕ್ವಾಡಿ

No comments:
Post a Comment