Wednesday, September 27, 2023

ಲೋಕಸಭೆಗಾಗಿ ಮೈತ್ರಿ, ಜೆಡಿಎಸ್ ಅಂತ್ಯಕ್ಕೆ ನಾಂದಿ

 


ಜೆಡಿಎಸ್  ಪ್ರಬಲ ಕ್ಷೇತ್ರಗಳತ್ತ ಬಿಜೆಪಿ ಕಣ್ಣು | ಸಿದ್ಧಾಂತ ಮೀರಿದ್ದೇಕೆ ಹಿರಿಗೌಡ್ರು ?

ಎಲ್ಲಾ ರಾಜಕೀಯ ಮೈತ್ರಿಯೆ ಹಾಗೆ. ರಾಜಕೀಯ ಮೈತ್ರಿಗಳು ಉಂಟಾಗುವಾಗ ಸೈದ್ಧಾಂತಿಕ ಬದ್ಧತೆಗಳೆಲ್ಲಾ ಸಾಮಾನ್ಯವಾಗಿ ಮೂಲೆಗೆ ಸರಿಯುತ್ತವೆ. ಹಲವು ಸಂದರ್ಭಗಳಲ್ಲಿ ಅಧಿಕಾರಕ್ಕಾಗಿ  ಮೈತ್ರಿಯಾಗುವುದು ರಾಜಕೀಯದಲ್ಲಿ ಅತ್ಯಂತ ಸಹಜ ಮತ್ತು ಸಾಮಾನ್ಯ. ಆದರೇ, ಚುನಾವಣಾ ಪೂರ್ವ ಮೈತ್ರಿಯಾಗುವುದು ತೀರಾ ಅಪರೂಪ. ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಪೂರ್ವ ಜೆಡಿಎಸ್‌ ಮತ್ತು ಬಿಜೆಪಿ ನಡುವಿನ ಮೈತ್ರಿ ಈಗ ರಾಷ್ಟ್ರಮಟ್ಟದ ಸುದ್ದಿ. ಬಿಜೆಪಿಯೊಂದಿಗೆ ಸೈದ್ಧಾಂತಿಕ ಹೊಂದಾಣಿಕೆಯೇ ಇಲ್ಲದ ಜನತಾದಳ(ಜಾತ್ಯತೀತ) ಮೋದಿ ನೇತೃತ್ವದ ಆಡಳಿತರೂಢ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಎನ್‌ಡಿಎ ಮಿತ್ರಪಕ್ಷಗಳ ಪೈಕಿಗೆ ಈಗ ಜೆಡಿಎಸ್‌ ಸೇರ್ಪಡೆಗೊಂಡಿದೆ.

೨೦೦೬ರಲ್ಲಿ ಎಚ್‌.ಡಿ ಕುಮಾರಸ್ವಾಮಿ ಬಿ.ಎಸ್‌ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿಯೊಂದಿಗೆ ಅಂದು ಮೈತ್ರಿ ಮಾಡಿಕೊಂಡು ಸರ್ಕಾರ ಎಚನೆ ಮಾಡಿದ್ದವು. ಪ್ರಾದೇಶಿಕವಾಗಿ ಒಂದು ರೀತಿಯ ತೀರಾ ಭಿನ್ನ ಅಧ್ಯಾಯವನ್ನು ಕಂಡ ಜೆಡಿಎಸ್‌ ಸೀಮಿತ ಪರೀಧಿಯೊಳಗೆ ಈಗ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರ ಅನುಭವಿಸಿದ್ದು ಇದ್ದರೆ ಅದು ಮೈತ್ರಿ ರಾಜಕಾರಣದಿಂದಲೇ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಅಲ್ಲಿಯವರೆಗೆ ಜೆಡಿಎಸ್‌ ಗಟ್ಟಿ ಇದ್ದಿದ್ದು ಹಳೆ ಮೈಸೂರು ಪ್ರಾಂತ್ಯಗಳಲ್ಲಿ ಮಾತ್ರ.

ಸದ್ಯಕ್ಕೆ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಪೋಸ್ಟ್‌-ಪೋಲ್‌ ಚೌಕಾಶಿಗೆ ಮುಂದಾಗಿರುವ ಜೆಡಿಎಸ್‌ ಯಾವಾಗಲೂ ಅಧಿಕಾರಕ್ಕಾಗಿ ಮತ್ತು ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಮೈತ್ರಿಯನ್ನೇ ಆಧರಿಸಿಕೊಂಡು ಬಂದ ಪಕ್ಷ. ಕರ್ನಾಟಕದಲ್ಲಿ ಮೈತ್ರಿಯ ಕಾರಣದಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೇರಿದ ಎಚ್‌. ಡಿ ಕುಮಾರಸ್ವಾಮಿ ಈ ಮೈತ್ರಿಗೆ ಮೊದಲು ಮುಂದಡಿ ಇಟ್ಟಿದ್ದು, ೨೦೦೬ರಲ್ಲಿ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ತಂದೆ ದೇವೆಗೌಡರಿಗೆ ಅಸಮಾಧಾನ ಇದ್ದರೂ ಅವರ ಮಾತು ಮೀರಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿಯೊಂದಿಗೆ ೨೦೦೬ರಲ್ಲಿ ಮೈತ್ರಿ ಮಾಡಿಕೊಂಡರು. ಎಲ್ಲಿ ಮೈತ್ರಿಯ ʼ೨೦:೨೦ʼ ಒಪ್ಪಂದದ ಅವಧಿ ಮುಗಿಯಿತೋ, ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಂದದಂತೆ ಯಡಿಯೂರಪ್ಪ ಅವರಿಗೆ ಬಿಟ್ಟುಕೊಡಬೇಕಾಗಿ ಬಂದಾಗ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡರು. ೨೦೧೯ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಚುನಾವಣೆಗೆ ಸ್ಪರ್ಧಿಸಿದರು. ಅಂದು ಜೆಡಿಎಸ್‌ನ ೩೭ ಶಾಸಕರು ಹಾಗೂ ಕಾಂಗ್ರೆಸ್‌ನ ೮೦ ಶಾಸಕರನ್ನು ಒಳಗೊಂಡ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಲೋಕಸಭೆಯಲ್ಲಿ ಕೆಲವು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಂತೂ ಎರಡೂ ಪಕ್ಷಗಳ ಶಾಲು ಮತ್ತು ಚಿನ್ಹೆಗಳೊಂದಿಗೆ ಲೋಕಸಭಾ ಕಣಕ್ಕಿಳಿದಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಜೆಡಿಎಸ್‌ ಈವರೆಗೆ ಅಧಿಕಾರ ಅನುಭವಿಸಿದೆ ಎಂದರೆ ಅದು ಮೈತ್ರಿಯ ಕೊಡುಗೆ.

ಜೆಡಿಎಸ್‌ ತನ್ನ ಪ್ರಾದೇಶಿಕ ಶಕ್ತಿಯನ್ನೂ ಕೂಡ ಕಳೆದುಕೊಂಡಿರುವುದು ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಣಬಹುದಾಗಿದೆ. ಕೇವಲ ೧೯ ಸ್ಥಾನಗಳಿಗೆ, ಶೇ.೧೩ರಷ್ಟು ಮತ ಹಂಚಿಕೆಯೊಂದಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದ್ದು, ಜೆಡಿಎಸ್‌ ಕಳೆದುಕೊಂಡ ಸೈದ್ಧಾಂತಿಕ ವಿಶ್ವಾಸಾರ್ಹತೆಯನ್ನು ಎತ್ತಿ ತೋರಿಸುತ್ತದೆ. ಹಾಗಾಗಿ ಕಳೆದುಕೊಂಡ ಪ್ರಾದೇಶಿಕ ಶಕ್ತಿಯನ್ನು ಮರು ಸ್ಥಾಪಿಸುವ ಉದ್ದೇಶದಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೇ, ಜೆಡಿಎಸ್‌ನ ಪ್ರಾದೇಶಿಕತೆಗೆ ಒತ್ತು ಕೊಟ್ಟು ಅಂದು ಬೆಂಬಲಿಸಿದ ಮತದಾರರು ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮೇಲೆಯೂ ಅದೇ ಬೆಂಬಲವನ್ನು ಮುಂದುವರಿಸುವುದಕ್ಕೆ ಸಾಧ್ಯವಿದೆಯೇ ? ಎನ್ನುವ ಪ್ರಶ್ನೆ ಸಹಜವಾಗಿ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ೨೦೦೪ರಿಂದ ಎಲ್ಲಾ ಲೋಕಸಭಾ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು (ಕನಿಷ್ಟ ೧೭) ಬಿಜೆಪಿ ಪಡೆದುಕೊಂಡಿದೆ. ೨೦೨೪ರ ಲೋಕಸಭಾ ಚುನಾವಣೆಯಲ್ಲಿಯೂ ೨೮ ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿಯೇ ಪಡೆದುಕೊಳ್ಳುತ್ತದೆ ಎಂಬ ರಾಜಕೀಯ ವಲಯದ ಭವಿಷ್ಯದ ನಡುವೆಯೂ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಬಲವಾದ ಕಾರಣವಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.   ಬಿಜೆಪಿಯಂತಹ ಒಂದು ರಾಷ್ಟ್ರೀಯ ಪಕ್ಷ ಈ ಮೈತ್ರಿಗೆ ಒಪ್ಪುವುದಕ್ಕೂ ಬಲವಾದ ಪ್ರಾದೇಶಿಕ ಕಾರಣಗಳಿವೆ. ಸಾಂಪ್ರದಾಯಿಕವಾಗಿ, ಕರ್ನಾಟಕದಲ್ಲಿ ಬಿಜೆಪಿಯ ದುರ್ಬಲ ಸ್ಥಾನಗಳು ಜೆಡಿಎಸ್  ಭದ್ರಕೋಟೆಯಾಗಿದೆ ಮತ್ತು ಪ್ರಾದೇಶಿಕ ಪಕ್ಷದ ಕೋರ್ ಒಬಿಸಿ ಒಕ್ಕಲಿಗ ಜಾತಿ ಮತಗಳ ಮೂಲವಾಗಿದೆ ಎಂಬುವುದು ತಿಳಿದಿರುವ ಸಂಗತಿ.

ಉದಾಹರಣೆಗೆ, ಬಿಜೆಪಿ ೨೦೧೯ರಲ್ಲಿ ೨೮ ಸಂಸದರ ಪೈಕಿ ೨೫ ಸ್ಥಾನಗಳನ್ನು ಗೆದ್ದಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನ ಡಿಕೆ ಸುರೇಶ್ ಗೆದ್ದಿದ್ದರು, ಮಂಡ್ಯದಲ್ಲಿ ಕಾಂಗ್ರೆಸ್ನಿಂದ ಬಂಡಾಯ ಎದ್ದು  ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಗೆದ್ದರೇ, ಮತ್ತು ಹಾಸನದಲ್ಲಿ ಎಚ್‌.ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದು ಸಂಸತ್ತನ್ನು ಪ್ರವೇಶಿಸಿದ್ದಾರೆ.

ಬಹಳ ಪ್ರಮುಖವಾಗಿ ಇಲ್ಲಿ ಗಮನಿಸಲೇಬೇಕಾದ ವಿಚಾರ ಏನೆಂದರೇ, ೨೦೧೯ರಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಬಂಡಾಯ ಎದ್ದು ಬಂದ ಎ. ಮಂಜು, ಪ್ರಜ್ವಲ್‌ ರೇವಣ್ಣ ವಿರುದ್ಧ ಪರಾಜಯಗೊಂಡರು. ಮತ್ತೆ ಎ. ಮಂಜು ಜೆಡಿಎಸ್‌ಗೆ ಮರಳಿದರು ಕೂಡ. ಹಾಸನ ವಿಧಾನಸಭಾ ಕ್ಷೇತ್ರದಿಂದ ೨೦೨೩ರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಗೆದ್ದರು. ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯವನ್ನು ಹೊಂದಿಲ್ಲ.  

ಈ ಮೂರು ಸ್ಥಾನಗಳು ಮತ್ತು ಇನ್ನೂ ಐದು ಸ್ಥಾನಗಳಲ್ಲಿ ಜೆಡಿಎಸ್‌ ಪ್ರಾಬಲ್ಯವನ್ನು ಹೊಂದಿದೆ. ಈ ಎಂಟು ಲೋಕಸಭಾ ಕ್ಷೇತ್ರಗಳು ವಿಧಾನಸಭಾ ಚುನಾವಣೆಯಲ್ಲಿ ಸುಮಾರು ೫೦ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿವೆ. ಬಿಜೆಪಿಯ ಈ ಮೈತ್ರಿ ಸಾಧನೆಯು, ಜೆಡಿಎಸ್‌ ಜೊತೆಗಿನ ಮೈತ್ರಿಯು ೨೦೨೪ರ ಲೋಕಸಭಾ ಚುನಾವಣೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ದೂರದೃಷ್ಟಿಯೂ ಆಗಿದೆ. ರಾಜಕೀಯ ಲೆಕ್ಕಾಚಾರದಲ್ಲಿ ಬಿಜೆಪಿ ನೇತೃತ್ವದಲ್ಲಿ ರಾಜ್ಯದಲ್ಲಿ ಸರ್ಕಾರವನ್ನು ಮರಳಿ ಸ್ಥಾಪಿಸುವ ಮೊದಲ ಹೆಜ್ಜೆಯಂತೆ ಕಾಣಿಸುತ್ತಿದೆ. ಜೆಡಿಎಸ್‌ ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಕಾಂಗ್ರೆಸ್‌ ಕಡೆಗೆ ವಾಲುವ ಒಕ್ಕಲಿಗ ಮತಗಳನ್ನು ಈ ಮೈತ್ರಿ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತದೆ ಎನ್ನುವುದು ನಿಶ್ಚಿತವಾಗಿದೆ. ಆದರೇ, ಇಲ್ಲಿ ಜಾತಿ ಗಣನೆಗೆ ಬರುತ್ತೋ ಅಥವಾ ಜೆಡಿಎಸ್‌ ಮತ್ತು ಬಿಜೆಪಿಯ ಸೈದ್ಧಾಂತಿಕತೆಯನ್ನು ಒಪ್ಪುತ್ತದೆಯೆ ಎನ್ನುವುದು ಇಲ್ಲಿ ಪ್ರಶ್ನಾರ್ಹ ವಿಷಯ.  

ಬಿಜೆಪಿಯನ್ನು ಈಗಾಗಲೇ ಕರ್ನಾಟಕದ ಲಿಂಗಾಯತ ಸಮುದಾಯದ ಪಕ್ಷ ಎಂಬಂತೆ ಬಿಂಬಿಸಲಾಗಿದೆ. ಜೆಡಿಎಸ್‌ ಪರವಾಗಿರುವ ಒಬಿಸಿ ಕ್ಕಲಿಗ ಸಮುದಾಯವು ಕರ್ನಾಟಕದ ಎರಡನೇ ಅತಿ ದೊಡ್ಡ ಮತಗಳನ್ನು ಹೊಂದಿರುವ ಸಮುದಾಯವಾಗಿದೆ. ಲಿಂಗಾಯತರು ಕರ್ನಾಟಕದಾದ್ಯಂತ ಇದ್ದರೂ, ಒಕ್ಕಲಿಗರು ಜೆಡಿಎಸ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ಹೆಚ್ಚಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಮತಗಳನ್ನು ಈ ಮೈತ್ರಿಯತ್ತ ಸೆಳೆದುಕೊಳ್ಳುವುದು ಹೇಳಿದಷ್ಟು ಸುಲಭವಿಲ್ಲ. ಈ ಎರಡು ಸಮುದಾಯಗಳು ಹೆಚ್ಚಿರುವ ಪ್ರದೇಶಗಳಲ್ಲಿ ಅಂತ ಸಮುದಾಯದ ನಾಯಕರೆನ್ನಿಸಿಕೊಂಡವರೂ ಇಲ್ಲ. ಈ ವಿಚಾರವನ್ನು ಮುಂದಿಟ್ಟುಕೊಂಡು ಮೈತ್ರಿಯ ಸೀಟು ಹಂಚಿಕೆ ಹೇಗಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರೂ ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಸರಳ ಬಹುಮತ ಗಳಿಸದಿರಲು ಜೆಡಿಎಸ್ ಹೃದಯ ಭಾಗದಲ್ಲಿರುವ ದುರ್ಬಲತೆಯೂ ಒಂದು ಕಾರಣ. ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಹೋರಾಟ ಜೆಡಿಎಸ್ ಕಣದಲ್ಲಿ ಯಾವಾಗಲೂ ಕಾಂಗ್ರೆಸ್‌ಗೆ ಲಾಭದಾಯಕವಾಗಿದೆ ಎನ್ನುವುದನ್ನು ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಗಮನಿಸಬಹುದಾಗಿದೆ.

ಇನ್ನು, ಕರ್ನಾಟಕದ ವಿಚಾರದಲ್ಲಿ ಕಾಂಗ್ರೆಸ್‌ ನ ಕೇಂದ್ರ ನಾಯಕತ್ವ ಎಚ್ಚರಿಕೆ ವಹಿಸಲು ಈ “ಹೊಂದಾಣಿಕೆ ರಾಜಕೀಯ”ವೂ ಕಾರಣ. ಉದಾಹರಣೆಗೆ, ೨೦೧೯ ರಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪತನವಾದಾಗ, ಬಿಎಸ್ ಯಡಿಯೂರಪ್ಪ ಅವರನ್ನು ಬೆಂಬಲಿಸಲು ೧೩ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು , ಅವರಲ್ಲಿ ಅನೇಕರು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಷ್ಠಾವಂತರು ಎಂದು ಪರಿಗಣಿಸಲ್ಪಟ್ಟರು. ಕೆಲವು ಶಾಸಕರು ಈಗ ಕಾಂಗ್ರೆಸ್‌ಗೆ ಮರಳುವತ್ತ ಪ್ರಯತ್ನದಲ್ಲಿದ್ದಾರೆ ಎಂಬ ಸುದ್ದಿ ಇದೆ.  

೨೦೨೪ಲೋಕಸಭೆಗಾಗಿ ನಡೆಯುವ ಈ ಮೈತ್ರಿ ಪ್ರಯೋಗವು ಜೆಡಿಎಸ್‌ ಗಿಂತ ಹೆಚ್ಚು ಬಿಜೆಪಿಗೆ ಲಾಭವಾಗಿರಲಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಈ ಮೈತ್ರಿ ಕೆಲಸ ಮಾಡಿದರೆ, ಜೆಡಿಎಸ್ ಮತವನ್ನು ಸೆಳೆದುಕೊಳ್ಳುವಲ್ಲಿ ಬಿಜೆಪಿ ಖಂಡಿತ ಮುಂದಡಿಯಿಡುತ್ತದೆ. ಜೆಡಿಎಸ್‌ಗೆ ಇದು ಮುಂದೆ ದೊಡ್ಡ ಸವಾಲಾಗಿ ಪರಿಣಮಿಸುವುದರಲ್ಲಿ ಸಂಶಯವೇ ಇಲ್ಲ. ದೇವೇಗೌಡರ ಕುಟುಂಬದಲ್ಲಿ ಹಲವು ಬಣಗಳಿವೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಕಾಂಗ್ರೆಸ್‌ ಗೆ ಒಂದು ತರದಲ್ಲಿ ಸಾಫ್ಟ್‌ ಮನೋಧೋರಣೆ ತೋರಿಸುತ್ತಾ ಬಂದಿರುವುದು ಗೊತ್ತಿರುವ ವಿಷಯ. ೨೦೨೪ರ ನಂತರ ಜೆಡಿಎಸ್ ವಿಭಜನೆಯಾದರೆ, ವಿವಿಧ ಬಣಗಳು ವಿಭಿನ್ನ ರೀತಿಯಲ್ಲಿ ತಲೆ ಎತ್ತಬಹುದು ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಇದೆ.

೨೦೦೬ರಲ್ಲಿ ಬಿಜೆಪಿಯೊಂದಿಗೆ ಕುಮಾರಸ್ವಾಮಿ ಮೈತ್ರಿ ಮಾಡಿಕೊಳ್ಳಲು ಹೊರಟಾಗ ವಿರೋಧಿಸಿದ್ದ ಜೆಡಿಎಸ್‌ ವರಿಷ್ಠ ದೇವೇಗೌಡ್ರು, ಈಗ ಬಿಜೆಪಿಯೊಂದಿಗೆ ಸೇರಿಕೊಳ್ಳುವುದಕ್ಕೆ ತೋರಿಸಿದ ಉತ್ಸಾಹ ನಿಜಕ್ಕೂ ಆಶ್ಚರ್ಯವೇ ಸರಿ. ವೈಯಕ್ತಿಕ ಲಾಭಕ್ಕೆ ಮತ್ತು ಕುಟುಂಬದ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ತಮ್ಮ ಸಿದ್ಧಾಂತವನ್ನೇ ಮರೆತು ತಮ್ಮ ವಿರುದ್ಧ ಸಿದ್ಧಾಂತವನ್ನು ಪಾಲಿಸುವ ಒಂದು ಪಕ್ಷದೊಂದಿಗೆ ಸೇರಿಕೊಂಡಿರುವುದರ ಹಿಂದಿನ ಬಲವಾದ ಉದ್ದೇಶವೇನು ಎಂಬುವುದು ಪ್ರಶ್ನೆಯಾಗಿಯೆ ಉಳಿದಿದೆ. ದೇವೇಗೌಡರಿಗೆ ಬಿಜೆಪಿಯಿಂದ ರಾಷ್ಟ್ರಮಟ್ಟದಲ್ಲಿ ಒಂದು ದೊಡ್ಡ ಮಟ್ಟದ ಮನ್ನಣೆ, ಗೌರವ, ಸನ್ಮಾನವೇನೋ ದೊರಕಬಹುದು ಆದರೇ, ಜೆಡಿಎಸ್‌ ನ ಭವಿಷ್ಯ ? ಕಾದು ನೋಡೋಣ.

-ಶ್ರೀರಾಜ್  ವಕ್ವಾಡಿ 

Thursday, September 21, 2023

ʼಬ್ರ್ಯಾಂಡ್‌ ಮೋದಿʼ ಮತ್ತು ʼಬ್ರ್ಯಾಂಡ್‌ ರಾಹುಲ್‌ʼ ನಡುವಿನ ರಾಜಕೀಯ

ಕಾಂಗ್ರೆಸ್‌ ಕಳೆದ 10 ವರ್ಷಗಳಲ್ಲಿ ಬಿಜೆಪಿಗೆ ಒಂದು ಸವಾಲಾಗಿಯೇ ಕಾಣಿಸಿಕೊಂಡಿಲ್ಲ !

ತನ್ನಲ್ಲಿನ ಎಲ್ಲಾ ಆಂತರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ರಾಜಕೀಯ ಗುಣಮಟ್ಟ, ಪ್ರತಿಕ್ರಿಯೆ, ನಡೆಗಳನ್ನು ಕಾಲಾಂತರದಲ್ಲಿ ಸುಧಾರಿಸುವ ನೈಜ ಕಾಳಜಿ ಇಟ್ಟುಕೊಂಡು ಒಂದು ಪಕ್ಷ ಈಗ ಲೋಕಸಭೆಗಾಗಿ ಎದುರುಗಾಣುತ್ತಿದೆ ಎಂದರೇ ಅದು ಕಾಂಗ್ರೆಸ್.‌ ಲೋಕಸಭೆಗೆ ಟೀಮ್‌ ʼಇಂಡಿಯಾʼ ಮೈತ್ರಿ ಜೊತೆಯಾಗಿ ಕಣಕ್ಕಿಳಿಯುವುದಾದರೂ, ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್‌ ರಾಜಕೀಯವಾಗ ಸೃಷ್ಟಿ ಮಾಡಲಾದ ಟೀಕೆಗಳಿಗೆ ಎದುರು ನಿಂತು ಬಂದಿರುವುದು ಮತ್ತು ಕೆಲವೇ ಕೆಲವು ಗೆಲುವು, ತುಸು ಹೆಚ್ಚೇ ಆವರಿಸಿಕೊಂಡ ಸೋಲು ಬಹುಶಃ ಕಾಂಗ್ರೆಸ್‌ ನನ್ನು ಸದೃಢವನ್ನಾಗಿಸಿದೆ ಎಂದು ಕಾಣಿಸುತ್ತಿದೆ. ಒಂದು ವರ್ಗವನ್ನು ಹೊರತುಪಡಿಸಿದರೇ, ಕಾಂಗ್ರೆಸ್‌ ಗೆ ಈಗ ಪರವಾಗಿ ನಿಲ್ಲುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುವುದು ಕೂಡ ಸತ್ಯ.

ದೇಶದ ರಾಜಕೀಯದಲ್ಲಿ ʼಬ್ರ್ಯಾಂಡ್‌ ಮೋದಿʼ ಮತ್ತು ʼಬ್ರ್ಯಾಂಡ್‌ ರಾಹುಲ್‌ʼ ಮಾಡುವ ಪ್ರಯತ್ನವನ್ನು ಉಭಯ ಪಕ್ಷಗಳು ಸರ್ವ ಪ್ರಯತ್ನದಲ್ಲಿವೆ. ʼಬ್ರ್ಯಾಂಡ್‌ ಮೋದಿʼ ಕಾನ್ಸೆಪ್ಟ್‌ ನನ್ನು ಬಿಜೆಪಿ ಕಳೆದ ಕೆಲವು ವರ್ಷಗಳಿಂದಲೇ ಜಾರಿಯಲ್ಲಿ ಇರಿಸಿತ್ತು. ಆದರೇ ಕಾಂಗ್ರೆಸ್‌ ಇಂತಹ ಸೆಲ್ಫ್ ಮಾರ್ಕೇಟಿಂಗ್‌ ಮಾಡಿಕೊಳ್ಳುವ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಬಿಜೆಪಿಗಿಂತ ಹಿಂದೆಯೇ ಇದೆ ಎನ್ನುವುದು ಸತ್ಯ. ಕಾಂಗ್ರೆಸ್‌, ರಾಹುಲ್‌ ಗಾಂಧಿಯನ್ನು ʼಬ್ರ್ಯಾಂಡ್‌ ಮೆಟಿರಿಯಲ್‌ʼ ಮಾಡುವುದಕ್ಕೆ ಆರಂಭಿಸಿದ್ದೇ ಇತ್ತೀಚೆಗೆ. ಭಾರತ್‌ ಜೋಡೋ ಯಾತ್ರೆ ಬಳಿಕವಷ್ಟೇ ರಾಹುಲ್‌ ಗೆ ಒಂದಿಷ್ಟು ರಾಜಕೀಯ ವಲಯದಲ್ಲಿ ʼಮಾರ್ಕೇಟ್‌ʼ ಮಾಡುವುದಕ್ಕೆ ಆರಂಭಿಸಿದ್ದು. ೨೦೧೪ರ ಮೋದಿ ಆಡಳಿತ ಮತ್ತು ʼಬ್ರ್ಯಾಂಡ್‌ ಮೋದಿʼ ರಾಜಕೀಯ ತಂತ್ರಗಾರಿಕೆಯ ನಡುವೆ ರಾಹುಲ್‌ ‌ʼಪಾಲಿಟಿಕಲ್ ಮಾರ್ಕೇಟ್‌ʼ ಕುಸಿದಿತ್ತು. ರಾಹುಲ್‌ ಗೆ ರಾಜಕೀಯದಲ್ಲಿ ಸ್ವಲ್ಪ ಮಟ್ಟಿಗೆ ʼಮಾರ್ಕೆಟ್‌ ವಾಲ್ಯೂʼ ಸೃಷ್ಟಿ ಆಗಿದೆ ಅಂತಾದರೇ ಅದು ಭಾರತ್‌ ಜೋಡೋ ಕಾರಣದಿಂದಾಗಿ ಮತ್ತು ಕಾಂಗ್ರೆಸ್‌ ಮತ್ತು ಭಾರತ್‌ ಜೋಡೋ ಹಿಂದಿರುವ ರಾಜಕೀಯ ತಂತ್ರಗಾರರ ಶ್ರಮದಿಂದಾಗಿ.  

ಒಬ್ಬ ಸಿನೆಮಾ ನಟನ ಅಥವಾ ರಾಜಕೀಯ ನಾಯಕನ ʼಬ್ರ್ಯಾಂಡ್‌ ವಾಲ್ಯೂʼ ಕುಸಿಯುವುದು ಒಂದು ಎತ್ತರವನ್ನು ತಲುಪಿದ ನಂತರ ʼಏನ್‌ ಮಾಡಿದ್ರೂ ನಡೆಯುತ್ತದೆʼ ಎಂಬ ಧೋರಣೆಯಲ್ಲಿ ಮಾತ್ರ. ಬಿಜೆಪಿಗೆ ಮತ್ತು ಮೋದಿಗೆ ಈಗ ಅದೇ ಆಗಿದ್ದು/ಆಗುತ್ತಿರುವುದು. ಪ್ರತಿಪಕ್ಷಗಳ ಬಗೆಗಿನ ಕ್ಷುಲ್ಲಕ ನೋಟ, ಪ್ರತಿಪಕ್ಷಗಳ ಪ್ರಮುಖ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಗುರುತಿಸಲ್ಪಡುತ್ತಿರುವ ರಾಹುಲ್‌ ಗಾಂಧಿ ಬಗ್ಗೆ ದಿವ್ಯ ನಿರಾಕರಣೆ, ಹಿಂದುತ್ವವೇ ಎಲ್ಲಾ ರಾಜಕೀಯ ಮೈಲೇಜ್‌ಗೆ ಕಾರಣ ಎಂಬ ಬಿಜೆಪಿಯಲ್ಲಿನ ಸ್ಥಾಪಿತ ಮನಸ್ಥಿತಿ, ಅತಿಯಾದ ಆತ್ಮ ವಿಶ್ವಾಸ ಇವೆಲ್ಲವೂ ಒಂದು ತರದಲ್ಲಿ ಬಿಜೆಪಿಯ ʼಬ್ರ್ಯಾಂಡ್‌ ವಾಲ್ಯೂʼವನ್ನು ಕಡಿಮೆ ಮಾಡಿಸುತ್ತಿದೆ ಎಂದು ಕಾಣಿಸುತ್ತಿದೆ. ಟಿವಿ ಮಾಧ್ಯಮಗಳ ವೈಭವೀಕರಣ, ಸಾಮಾಜಿಕ ಜಾಲತಾಣಗಳ ರಂಜನೆ ಇವೆಲ್ಲಾ ಹಳೆ ಗೋಡೆಗೆ ಬಣ್ಣ ಹಚ್ಚುವ ಕೆಲಸವಷ್ಟೆ. ಅವು ಈ ರಾಜಕೀಯ ಆಂತರಿಕ ವ್ಯತ್ಯಾಸಗಳ ಬಗ್ಗೆ ಎಂದೂ ತೋರಿಸಲಾರವು. ಕಾಣುತ್ತಿರುವ ಪದರವಷ್ಟೇ ನಿಜವಾದ ರಾಜಕೀಯದ ಸ್ಥಿತಿ ಅಲ್ಲ. ಕಾಣದೆ ಉಳಿದಿರುವುದು ಕೂಡ ಹೌದು ಎನ್ನುವುದು ಇಲ್ಲಿ ಬಹಳ ಮುಖ್ಯ.

“ಪ್ರಧಾನಿ ನರೇಂದ್ರ ಮೋದಿಯವರ ನಿಲುವು ಮತ್ತು ವೈಯಕ್ತಿಕ ಜನಪ್ರಿಯತೆಗೆ ಸರಿಹೊಂದಲು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಇನ್ನಷ್ಟು ಶ್ರಮವಹಿಸಬೇಕಿದೆ ಎಂಬುದು ನಿಜವಾಗಿದ್ದರೂ, ಅವರು ಖಂಡಿತವಾಗಿಯೂ ಅವರಿಬ್ಬರ  ನಡುವಿನ ಅಂತರವನ್ನು ಕಡಿಮೆ ಮಾಡಿಕೊಂಡಿದ್ದಾರೆ ಎನ್ನುವುದಂತೂ ಸತ್ಯ. ಒಂದೇ ʼಮಾರ್ಕೇಟ್‌ʼ ಸರ್ವ ಕಾಲಕ್ಕೂ ಇರುವುದಿಲ್ಲ. ಒಂದು ಕೆಟ್ಟ ತಂತ್ರ ಆ ʼಮಾರ್ಕೆಟ್ ವಾಲ್ಯೂʼನನ್ನು ಕುಗ್ಗಿಸಬಹುದು. ಮತ್ತು ಆ ತಪ್ಪು ಹೆಜ್ಜೆಗಳೆ ಮುಂದಿನ  ತಂತ್ರಗಾರಿಕೆಗೆ ಸಹಾಯ ಮಾಡುವುದಕ್ಕೆ ಖಂಡಿತ ಸಾಧ್ಯವಿದೆ. ಇನ್ನಷ್ಟು ನಿಖರವಾಗಿ ಹೇಳುವುದಾದರೇ ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿಗೆ  ಬಹುತೇಕ ಈ ಸುದೀರ್ಘ ಸಂಪೂರ್ಣ ಹತ್ತು ವರ್ಷ ಕಲಿಸಿದ್ದು ಇದನ್ನೆ.

ಸವಾಲು ಎಸೆಯುವವರು ಎಲ್ಲಾ ಸಂದರ್ಭದಲ್ಲಿ ಪಂದ್ಯದಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಒಳ್ಳೆಯ ನಾಯಕನೋರ್ವ ಎಲ್ಲಾ ಸವಾಲನ್ನು ಎದುರಿಸಿ ಪಂದ್ಯವನ್ನು ಗೆಲ್ಲಿಸಿಕೊಡಬಹುದು. ಕಾಂಗ್ರೆಸ್‌ ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಗೆ ಒಂದು ದೊಡ್ಡ ಸವಾಲಾಗಿಯೇ ಕಾಣಿಸಿಕೊಂಡಿಲ್ಲ ಎಂಬುವುದನ್ನು ಕಾಂಗ್ರೆಸ್‌ ಕೂಡ ಅರಿತುಕೊಳ್ಳಬೇಕಿದೆ. ಅದು ಕಾಂಗ್ರೆಸ್‌ ನ ಆಂತರಿಕ ವೈಫಲ್ಯವೂ ಕೂಡ ಹೌದು. ಮೋದಿ ಅಂತಹ ಒಬ್ಬ ನಾಯಕ ಎದುರಾಳಿಯ ವೈಫಲ್ಯವನ್ನೇ ಬಳಸಿ ತನ್ನ ತಂತ್ರಗಾರಿಕೆಯಿಂದ ಎರಡೆರಡು ಬಾರಿ ಗೆದ್ದು ಬೀಗಿದರು. ಏನೇನೋ ವ್ಯಾಖ್ಯಾನಗಳು ಈ ಬಗ್ಗೆ ಹುಟ್ಟಿಕೊಂಡವಾದರೂ ಕಾಂಗ್ರೆಸ್‌ ಇಲ್ಲಿ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಲೇಬೇಕಿದೆ. ಪಂದ್ಯದಲ್ಲಿ ಹಾಗೆ, ಒಂದಿಷ್ಟು ಚೌಕಟ್ಟಿರುತ್ತದೆ, ಆ ಚೌಕಟ್ಟಿನೊಳಗೆ ಮಾಡಬಹುದಾದ ಎಲ್ಲಾ ಸಾಧ್ಯತೆಗಳನ್ನು ಮಾಡಿ ಗೆಲ್ಲಬಹುದು. ಸೋತ ಮೇಲೆ ಮೋಸ ಎಂದು ಹೇಳಿದರೆ ಇಲ್ಲಿ ಕೇಳುವವರು ಯಾರೂ ಇಲ್ಲ. ಬಿಜೆಪಿ ಚಾಣಾಕ್ಷ್ಯತನವನ್ನು ತೋರಿಸಿ ಎರಡು ಬಾರಿ ಗೆದ್ದಿತು. ಕಾಂಗ್ರೆಸ್‌ ಪರಾಭವಗೊಂಡಿತು. ಸದ್ಯದ ಸ್ಥಿತಿ ಹಾಗಿಲ್ಲ. ಕಾಂಗ್ರೆಸ್‌ ಕೂಡ ತನ್ನ ಸ್ಥಿತಿಯನ್ನು ಅವಲೋಕಿಸಿಕೊಂಡಿದೆ. ಬಿಜೆಪಿಗೆ ಒಂದು ಸಿಂಹ ಸ್ವಪ್ನವಾಗುವವರಗೆ ತನ್ನ ರಾಜಕೀಯ ತಂತ್ರಗಾರಿಕೆ ಹೆಣೆಯುವುದಕ್ಕೆ ಆರಂಭಿಸಿದೆ ಎನ್ನುವುದಕ್ಕೆ ದೊಡ್ಡ ಉದಾಹರಣೆಯೆ ಟೀಂ ʼಇಂಡಿಯಾʼ.  

ಇದು ಚಾಲೆಂಜರ್‌ ಅಥವಾ ಸವಾಲು ಹಾಕುತ್ತಿರುವ ಪ್ರತಿ ಬ್ರ್ಯಾಂಡ್‌ ಬಗ್ಗೆ ಯೋಚನೆಗೆ ಚಿಂತನೆ ಹಚ್ಚುವಂತೆ ಮಾಡಿದೆ ಎನ್ನುವುದು ದೇಶದ ರಾಜಕೀಯ ವಲಯದಲ್ಲಿನ ಸದ್ಯದ ಬೆಳವಣಿಗೆ. ಪ್ರತಿಪಕ್ಷಗಳನ್ನು ಸೋಲಿಸುವುದಕ್ಕೆ ತಾನೋಬ್ಬನೇ ಸಾಕು ಎಂದು ಸಂಸತ್ತಿನಲ್ಲಿ ಪ್ರತಿಪಾದಿಸಿದ ಮೋದಿ ಟೀಂ ʼಇಂಡಿಯಾʼ ರಚನೆಯಾಗುವಷ್ಟರಲ್ಲಿ ನಮಗೂ ಟೀಂ ಇದೆ, ನಮ್ಮ ಟೀಂ ನಿಮಗಿಂತ ದೊಡ್ಡ ಸಂಖ್ಯೆಯಿಂದ ಕೂಡಿದೆ ಎಂದು ತೋರಿಸಿಯೂ ಕೊನೆಗೆ ಹತಾಶರಾಗಿರುವುದು ಯಾಕೆ ಹಾಗಾದರೆ ? ಇದಕ್ಕೆ ʼಚಾಲೆಂಜಿಂಗ್‌ ಬ್ರ್ಯಾಂಡ್‌ʼ ಹಾಕಿದ ಸವಾಲೇ ಕಾರಣ. ʼಚಾಲೆಜಿಂಗ್‌ ಬ್ರ್ಯಾಂಡ್‌ʼ ಸಾಮಾನ್ಯವಾಗಿ ಟ್ರೆಡಿಷನಲ್‌ ಸೋರ್ಸ್‌ ಪೋಲ್‌ ಗಿಂತ ದೊಡ್ಡ ಮಹತ್ವಾಕಾಂಕ್ಷೆಗಳನ್ನು ಹೊಂದಿರುವುದಷ್ಟೆ ಅಲ್ಲದೆ, ಆತ್ಮವಿಶ್ವಾಸದಿಂದ ಮುನ್ನಡೆಯುವುದಕ್ಕೆ ಸಿದ್ಧವಾಗಿರುತ್ತದೆ. ಆದಾಗ್ಯೂ, ಚಾಲೆಂಜರ್ ಬ್ರ್ಯಾಂಡ್‌ ಗಳಾಗಿ  "ಯಾರು" ಸವಾಲು ಮಾಡುತ್ತಿದ್ದಾರೆ ಎಂಬುದಕ್ಕಿಂತ ಹೆಚ್ಚಾಗಿ "ಯಾವುದನ್ನು" ಅವರು ಸವಾಲು ಮಾಡುತ್ತಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.  

ಭಾರತದಲ್ಲಿ ಸದ್ಯ ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ʼಚಾಲೆಂಜರ್‌ ಬ್ರ್ಯಾಂಡ್‌ʼ. ʼಲಿಡರ್‌ ಬ್ರ್ಯಾಂಡ್‌ʼ ಪ್ರಧಾನಿ ಮೋದಿ. ರಾಹುಲ್‌ ಕಳೆದ ಕೆಲವು ವರ್ಷಗಳ ಹಿಂದೆ ಇದ್ದ ಹಾಗಿಲ್ಲ. ಅವರ ರಾಜಕೀಯ ಅನುಭವ ವೃದ್ಧಿಸಿದೆ. ರಾಜಕೀಯದಲ್ಲಿನ ಅವರ  ʼಫಂಬ್ಲಿಂಗ್ ಎಕ್ಸ್‌ಪಿರಿಯನ್ಸ್‌ʼ ಅಥವಾ ಅನುಭವದ ಕೊರತೆ ಅವರನ್ನು ಟೀಕೆಗೆ ಒಳಪಡಿಸಿರುವುದನ್ನು ಇಡೀ ದೇಶ ಕಂಡಿದೆ.  ವೈಯಕ್ತಿಕವಾಗಿ ರಾಜಕೀಯದಲ್ಲಿ ರಾಹುಲ್‌ ಗಾಂಧಿ ಎಷ್ಟು ಸಮರ್ಥರೋ ಅಥವಾ ಅಸಮರ್ಥರೋ ಅದು ಎರಡನೇ ಹಂತದ ಚರ್ಚೆ. ಆದರೇ, ಅವರ ಹಿಂದೆ ಕೆಲಸ ಮಾಡುತ್ತಿರುವ ರಾಜಕೀಯ ತಂತ್ರಗಾರಿಕೆ ನಿಜಕ್ಕೂ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ದೊಡ್ಡ ಸವಾಲನ್ನೇ ಎಸೆಯುತ್ತಿದೆ ಎನ್ನುವುದಂತೂ ಅಕ್ಷರಶಃ ಸತ್ಯ. ‌ಪ್ರಸ್ತುತ ಸರ್ಕಾರದ ಕಾರ್ಯಕ್ಷಮತೆ, ನೋಟು ಅಮಾನ್ಯೀಕರಣ, ಜಿಎಸ್‌.ಟಿ, ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆ, ಆರ್ಥಿಕ ಅಸಮತೋಲನದಂತಹ ವಿಷಯಗಳ ಬಗ್ಗೆ ರಾಹುಲ್‌ ಗಾಂಧಿ ಪದೆ ಪದೆ ಜನರ ಮುಂದೆ ಇರಿಸುತ್ತಿರುವುದು ಮತ್ತು ಅವನ್ನು ತಮ್ಮ ಅಜೆಂಡಾವನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವುದು ಒಂದು ತರದ ಜಾಣ್ಮೆಯ ನಡೆಯೂ ಹೌದು. ಮತ್ತಿವು ರಾಹುಲ್‌ ಸಮರ್ಥರಾಗಿದ್ದಾರೆ ಎನ್ನುವ ಸಂಕೇತವೂ ಹೌದು.

ರಾಜಕೀಯದ ನಿರೀಕ್ಷೆಗಳನ್ನು ಮೀರಿ ನಡೆಯುವುಕ್ಕೆ ವಾಸ್ತವ ಸ್ಥಿತಿ ಇಲ್ಲಿ ಸಾಧ್ಯಮಾಡಿಕೊಡುವುದಿಲ್ಲ. ಅವಾಸ್ತವಿಕವಾಗಿ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದರಿಂದಲೂ ಎಲ್ಲಾ ರಾಜಕೀಯ ಲೆಕ್ಕಾಚಾರಗಳು ಮೇಲು ಕೇಳಗಾಗುತ್ತದೆ. ಅವಾಸ್ತವಿಕವಾಗಿ ನಡೆದುಕೊಳ್ಳುವ ನಾಯಕ ʼಭರವಸೆಯ ನಾಯಕʼ ಎಂದು ಕರೆಸಿಕೊಳ್ಳಲಾರ. ಇದು ನಿಸ್ಸಂದೇಹವಾಗಿ ಆತನ ವಿಶ್ವಾಸಾರ್ಹತೆ ಮತ್ತು ಜನಪ್ರಿಯತೆಗಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಇಲ್ಲಿ ಆಗಿರುವುದು ಇಷ್ಟೆ. ರಾಹುಲ್‌ ಗಾಂಧಿಯ ರಾಜಕೀಯ ವರ್ಚಸ್ಸು ಕುಂದುತ್ತಾ ಪಾತಾಳಕ್ಕೆ ಹೋಯ್ತು, ಮೋದಿ ರಾಜಕೀಯ ವರ್ಚಸ್ಸು ಗಗನಕ್ಕೇರಿತು. ʼಲೀಡರ್‌ ಬ್ರ್ಯಾಂಡ್‌ʼ ಇಡೀ ಮಾರ್ಕೇಟ್‌ ನನ್ನು ಸೆಳೆಯುವ ತಾಕತ್ತನ್ನು ಹೊಂದಿರಬೇಕಾಗುತ್ತದೆ. ಇಲ್ಲಿ ʼಚಾಲೆಂಜರ್‌ ಬ್ರಾಂಡ್‌ʼ ಮತ್ತು ʼಲೀಡರ್‌ ಬ್ರ್ಯಾಂಡ್‌ʼ ನಡುವಿನ ಸರಾಸರಿಯನ್ನು ಪರಿಗಣಿಸಿ ನೋಡಲಾಗುತ್ತದೆ. ಯಾವುದು ಹೆಚ್ಚು ಭಾರ ತೂಗುತ್ತದೋ ಅದಕ್ಕೆ ಮಾನ್ಯತೆ ದೊರೆಯುತ್ತದೆ. ಒಟ್ಟಿನಲ್ಲಿ, ʼಬ್ರ್ಯಾಂಡ್‌ ಮೋದಿʼ ಮತ್ತು ʼಬ್ರ್ಯಾಂಡ್‌ ರಾಹುಲ್ʼ ನಡುವೆ ಒಂದು ಸ್ಪರ್ಧೆಯೇ ಈಗ ಒಂದು ರೀತಿಯಲ್ಲಿ ಅಧಿಕೃತವಾಗಿ ಆರಂಭವಾಗಿದೆ. ಒಂದೆಡೆ ʼಬ್ರ್ಯಾಂಡ್‌ ಮೋದಿʼಯನ್ನು ಹಿಂದುತ್ವ, ರಾಮ ಮಂದಿರ, ಅಭಿವೃದ್ಧಿ, ಗ್ಲೋಬಲ್‌ ಲೀಡರ್‌ ಎಂಬಂತೆಲ್ಲಾ ಬಿಂಬಿಸಲಾಗುತ್ತಿದ್ದರೆ, ಮತ್ತೊಂದಡೆ ʼಬ್ರ್ಯಾಂಡ್‌ ರಾಹುಲ್‌ʼ ನನ್ನು ಪ್ರಗತಿಪರ, ಜಾತ್ಯತೀತ, ಸಹಾನುಭೂತಿಯುಳ್ಳ ನಾಯಕ, ಜನಪರ ಎಂಬಂತೆಲ್ಲಾ ಬಿಂಬಿಸಲಾಗುತ್ತಿದೆ. ಇಲ್ಲಿ ಎರಡೂ ಬ್ರಾಂಡ್‌ ಗಳು ತನ್ನದೇ ಆದ ಸೆಳೆತ ಮತ್ತು ವಿಶೇಷತೆಯನ್ನು ಹೊಂದಿವೆ.

ನಿಸ್ಸಂಶಯವಾಗಿ ಜನಪ್ರಿಯತೆಯ ಆಧಾರದಲ್ಲಿ ʼಬ್ರ್ಯಾಂಡ್‌ ಮೋದಿʼ ಬಲಿಷ್ಠವಾಗಿದೆ. ʼಬ್ರ್ಯಾಂಡ್‌ ರಾಹುಲ್‌ʼ ಕಳೆದುಕೊಂಡ ವರ್ಚಸ್ಸನ್ನು ಮರಳಿ ಪಡೆಯುವ ಯತ್ನದಲ್ಲಿದೆ.  ʼಚಾಲೆಂಜರ್ ಬ್ರ್ಯಾಂಡ್‌ʼ ಮತ್ತು ʼಲೀಡರ್‌ ಬ್ರ್ಯಾಂಡ್‌ʼ ಗಳ ಅಂತರ ಈಗ ಹೆಚ್ಚೇನೂ ಇಲ್ಲ. ‌ʼಪಾಲಿಟಿಕಲ್ ಮಾರ್ಕೆಟ್‌ʼ ಹೇಗೂ ಬದಲಾಗಬಹುದು. ಲೋಕಸಭೆ ಬರ್ತಿದೆ, ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ

Wednesday, September 13, 2023

ʼಇಂಡಿಯಾʼ ಮತ್ತು ʼಭಾರತʼ ಎರಡೂ ನಮ್ಮನ್ನು ಗುರುತಿಸಿವೆ

 

ʼಭಾರತʼ ಎನ್ನುವವರಷ್ಟೆ ದೇಶಪ್ರೇಮಿಗಳೆನ್ನುವವರು “ಐʼಮ್‌ ಇಂಡಿಯನ್‌” ಅಂತ ಹೇಳ್ತಿದ್ರು ! 

ಬಹು ಸಂಸ್ಕೃತಿಯನ್ನು ಹೊಂದಿರುವ ಈ ದೇಶಕ್ಕೆ 'ಇಂಡಿಯಾ' ಎಂಬ ಹೆಸರು ಯೋಗ್ಯವಾಗಿದೆಯೆ  ಅಥವಾ 'ಭಾರತ್' ನ್ನುವುದೇ ಸೂಕ್ತವೆ ಎನ್ನುವ ವಿಚಾರ ಮುಂದಿಟ್ಟುಕೊಂಡು ವಾದ ಮಾಡುವುದಕ್ಕೆ ನಾನು ಮುಂದುವರಿಯುವುದಿಲ್ಲ, ಆ ಅಗತ್ಯವೂ ನನಗಿಲ್ಲ. ಯಾಕೆಂದರೆ ಈವರೆಗೆ ನಾನು ಇವೆರಡನ್ನೂ ಬಳಸುತ್ತಾ ಬಂದಿದ್ದೇನೆ. ಮಾತೃ ಭಾಷೆಯಲ್ಲಿ ʼಭಾರತʼ ಎಂದು ಕರೆದಿದ್ದೇನೆ. ಕೆಲವು ಕಡೆ ಸರ್ಕಾರಿ ದಾಖಲೆಗಳಲ್ಲಿ, ಖಾಸಗಿ ಅರ್ಜಿಗಳಿಗಾಗಿ ʼಇಂಡಿಯನ್‌ʼ ಎಂದು ʼನ್ಯಾಷನ್ಯಾಲಿಟಿʼ ಯಾವುದು ಎಂಬ ಪ್ರಶ್ನೆಗೆ ಬರೆದಿದ್ದೇನೆ. ಹಾಗಾಗಿ ʼಭಾರತʼ ಮತ್ತು ʼಇಂಡಿಯಾʼ ಎರಡೂ ನನ್ನನ್ನು ಗುರುತಿಸಿವೆ. ನಿಮ್ಮನ್ನೂ ಗುರುತಿಸಿದೆ.  

ಒಂದನ್ನು ಆಯ್ಕೆ ಮಾಡುವ ವಾದವು ಸಮಸ್ಯಾತ್ಮಕವಾಗಿದೆ ಎಂಬ ಸರಳ ಕಾರಣಕ್ಕಾಗಿ, ಒಬ್ಬರು 'ಇಂಡಿಯಾ' ಎಂದು ಹೇಳಿದರೆ, ಇತನೊಬ್ಬ 'ಬ್ರಿಟಿಷ್ ಮನಸ್ಥಿತಿ' ಹೊಂದಿರುವ 'ದೇಶವಿರೋಧಿ' ಎಂದು ಬ್ರ್ಯಾಂಡ್ ಮಾಡುವ ವಾತಾವರಣವೂ ಸಾಮಾಜಿಕ ವಲಯದಲ್ಲಿ ಸೃಷ್ಟಿಯಾಗಿದೆ. ʼಭಾರತʼ ಎಂದು ಇನ್ಮೇಲೆ ಹೇಳುವವನು ʼದೇಶ ಪ್ರೇಮಿʼ, ʼರಾಷ್ಟ್ರೀಯವಾದಿʼ ಎಂದು ಗುರುತಿಸಿಕೊಳ್ಳುತ್ತಾನೆ. ಆದರೆ, ಈ ದೇಶವನ್ನು ʼಭಾರತʼ ಎಂದು ಇನ್ಮೇಲೆ ವಿಶೇಷವಾಗಿ ಹೆಮ್ಮೆ ಇಂದ ಹೇಳುತ್ತೇನೆ ಎನ್ನುವವರು ಕೂಡ ʼಇಂಡಿಯಾʼ ಎಂದು ಎಷ್ಟೋ ಸಂದರ್ಭದಲ್ಲಿ ಬಳಸಿರುತ್ತಾರೆ ಎನ್ನುವುದು ವಾಸ್ತವ ಸತ್ಯಾಂಶವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ʼಗುಲಾಮ ಗಿರಿʼ, ‌ʼಬಿಟಿಷ್  ಮನಸ್ಥಿತಿʼ ಎಲ್ಲವೂ ಇಲ್ಲಿ ರಾಜಕೀಯಕ್ಕಾಗಿ ಸೃಷ್ಟಿಯಾದ ಒಂದು ವಾದ ಬಿಟ್ಟರೇ, ಮತ್ತೇನೂ ಅಲ್ಲ. ಒಂದು ದೇಶದ ಹೆಸರನ್ನು ಬದಲಾಯಿಸುವುದಕ್ಕೂ ಮುನ್ನ ಸಾಂವಿಧಾನಿಕವಾಗಿ ಮಸೂದೆ ಮಂಡಿಸಬೇಕು, ಸಂಸತ್ತಿನಲ್ಲಿ ಅದು ಅಂಗೀಕಾರಗೊಂಡ ಮೇಲಷ್ಟೆ ಅದನ್ನು ಅಧಿಕೃತವಾಗಿ ಬಳಸಲ್ಪಡಬೇಕು ಎನ್ನುವ ಅರಿವಿಲ್ಲದೇ ಅಥವಾ ಸಾಮಾನ್ಯ ಅರಿಕೆಯನ್ನೂ ತೋರಿಸದೆ ಕೇಂದ್ರ ಸರ್ಕಾರ ತಾನು ಮಾಡಿದ್ದೆಲ್ಲವೂ ಸರಿ ಎಂಬಂತೆ ನಡೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ದೇಶದ ಚೌಕಟ್ಟು ಒಪ್ಪುವ ವಿಚಾರವಲ್ಲ. ರಾಜಕೀಯವಾಗಿ ಈಗ ʼಇಂಡಿಯಾʼ ಮತ್ತು ʼಭಾರತʼವನ್ನು ವಿಭಜಿಸುವ ವಿಷಯಗಳನ್ನಾಗಿ ಬಿಂಬಿಸುವಷ್ಟರ ಮಟ್ಟಿಗೆ ಈ ದೇಶದ ಬೌದ್ಧಿಕ ಮಟ್ಟ ಕುಸಿದಿದೆ ಎನ್ನುವುದು ದುರಂತವೇ ಸರಿ.

ಇದು ಖಂಡನೀಯ ಮಾತ್ರವಲ್ಲ, ಅಸಹ್ಯಕರವೂ ಆಗಿದೆ. ಗೂಗಲ್‌, ವಿಕಿಪೀಡಿಯಾದ ಕೆಲವು ಪ್ಯಾರಾಗಳ ಮಾಹಿತಿಯಷ್ಟನ್ನು ಮಾತ್ರ ಓದಿದ ಮೇಲೆ ಇಲ್ಲಿ ಕೆಲವರು ದೇಶದ ಹೆಸರಿನ ಮೇಲೆ ರಾತ್ರೋರಾತ್ರಿ ಪಂಡಿತರಂತೆ ವರ್ತಿಸುತ್ತಿರುವುದು ಹಾಸ್ಯ ಪ್ರಸಂಗ. ವಿಷಯದ ಬಗ್ಗೆ ಯಾವುದೇ ಆಳವಾದ ತಿಳುವಳಿಕೆಯಿಲ್ಲದೆ, ಇದೇ ಸರಿ ಎಂದು ತೀರ್ಪು ನೀಡುವವರೆಗೆ ವಾತಾವರಣ ಸೃಷ್ಟಿಯಾಗಿದೆ. ಈ ʼಇಂಡಿಯಾʼ ಮತ್ತು ʼಭಾರತʼ ಚರ್ಚೆಯು ಕೇಂದ್ರ ಸರ್ಕಾರದ ಪ್ರಾಯೋಜಿತವಾಗಿರುವುದು ಇನ್ನೂ ಹೆಚ್ಚು ನಿರಾಶದಾಯಕ ಸಂಗತಿಯಾಗಿದೆ.  

ಲಂಡನ್‌ ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಇಲ್ಲಿ ಸಂದರ್ಭಾನುಸಾರ ಮೇಲೆ ತಂದು ಉಲ್ಲೇಖಿಸಲಾಗಿದೆ ಮತ್ತು ಅವರು ವಿದೇಶದಲ್ಲಿದ್ದಾಗಲೆಲ್ಲ ಭಾರತವನ್ನು ಅವಮಾನಿಸಲು ಇಷ್ಟಪಡುವ ವ್ಯಕ್ತಿ ಎಂದು ಅವರನ್ನು 'ಭಾರತ-ದ್ವೇಷಿ' ಎಂದು ಬ್ರ್ಯಾಂಡ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ರಾಹುಲ್ ಗಾಂಧಿ "ಭಾರತವನ್ನು ಅವಮಾನಿಸಿದ್ದಾರೆ" ಎಂದು ಟೀಕಿಸಿದ್ದಾರೆ. ಮತ್ತು ಪ್ರತಿಪಕ್ಷಗಳ ಮೈತ್ರಿಗೆ ಇಟ್ಟ ಹೆಸರೇ, ಇಲ್ಲಿ ದೇಶದ ಹೆಸರು ಬದಲಾಯಿಸಲು ಮುಂದಾಗಿರುವುದಕ್ಕೆ ಕಾರಣ ಎಂದೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ದೇಶಕ್ಕೆ 'ಭಾರತ' ಎಂದು ಹೆಸರಿಸಬೇಕು ಎಂಬ ಚರ್ಚೆ ಈ ಹಿಂದೆಯೂ ನಡೆದಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ ವಿಚಾರ. ಕರಡು ಸಂವಿಧಾನದಲ್ಲಿ ಭಾರತ ಎಂಬ ಬಳಕೆಯೇ ಇರಲಿಲ್ಲ. ಇಂಡಿಯಾ ಎಂದೇ ಉಲ್ಲೇಖಿಸಲಾಗಿತ್ತು. ಒಂದನೇ ವಿಧಿಯನ್ನು ʼಡಿಸ್ಕ್ರಿಪ್ಶನ್ ಆಫ್‌ ಇಂಡಿಯಾʼ ಎಂದು ಉಲ್ಲೇಖಿಸಲಾಗಿತ್ತು. ೧೯೪೯ರ ಸಪ್ಟೆಂಬರ್‌ ೧೭ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಡಾ. ಬಿ. ಆರ್‌. ಅಂಬೇಡ್ಕರ್‌ ಒಂದು ತಿದ್ದಪಡಿಯನ್ನು ಮಂಡಿಸಿದರು ಅದರಲ್ಲಿ, ಒಂದನೇ ವಿಧಿಗೆ ʼಇಂಡಿಯಾ ಎಂದರೇ ಭಾರತʼ. ಅದು ರಾಜ್ಯಗಳ ಒಕ್ಕೂಟವಾಗಬೇಕು ಎಂದು ಪ್ರತಿಪಾದಿಸಿದ್ದರು. ಅದಾದ ಮೇಲೆಯೂ ಸಾಕಷ್ಟು ತಿದ್ದುಪಡಿಗಾಗಿ ಎಚ್. ವಿ ಕಾಮತ್‌, ಸೇಠ್‌ ಗೋವಿಂದ್ ದಾಸ್‌, ಕಮಲಪತಿ ತ್ರಿಪಾಠಿ ಮೊದಲಾದವರು ಸೂಚಿಸಿದರಾದರೂ ಪ್ರಯೋಜವಾಗಿಲ್ಲ. ಆದರೆ, ಭಾರತ ಎಂದು ದೇಶಕ್ಕೆ ಹೆಸರಿಡಬೇಕು ಎಂದು ಅಂದು ಪ್ರಸ್ತಾಪ ಮಾಡಿದವರು ಇದು ಬ್ರಿಟಿಷರ ವಸಾಹುತು ಕಾಲದ ಹೆಸರು ಎಂದು ʼಇಂಡಿಯಾʼ ಎಂಬ ಹೆಸರಿನ ಬಗ್ಗೆ ತಕರಾರು ಎತ್ತಿಲ್ಲ ಎನ್ನುವುದು ಇಲ್ಲಿ ಉಲ್ಲೇಖಿಸಲೇ ಬೇಕಾದ ವಿಚಾರ. ಯಾರು ʼಭಾರತʼ ಎಂದು ಹೆಸರಿಡಬೇಕು ಎಂದು ಹೆಸರಿಟ್ಟಿದ್ದರೋ ಅವರ ನಿರ್ಣಯಗಳನ್ನು ಮತಕ್ಕೆ ಹಾಕಿದ ನಂತರ ಅಗತ್ಯ ಮತಗಳನ್ನು ಪಡೆಯುವಲ್ಲಿ ವಿಫಲವಾದ ಕಾರಣ ಅಂಬೇಡ್ಕರ್‌ ಸೂಚಿದ್ದನ್ನೇ ಅಂಗೀಕರಿಸಲಾಯಿತು.   

ʼಇಂಡಿಯಾʼ ಮತ್ತು ʼಭಾರತʼ ಎರಡೂ ನಮ್ಮ ದೇಶದ ಇತಿಹಾಸದಲ್ಲಿ ಮೂಲವನ್ನು ಹೊಂದಿವೆ. ಅಲೆಕ್ಸಾಂಡರ್ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ ಸಮಯದಿಂದ 'ಇಂಡಿಯಾ' ಎಂಬ ಪದದ ಕುರುಹುಗಳು ಕಂಡುಬಂದರೆ, ಅದು ಸಿಂಧೂ (ಇಂಡಸ್) ನದಿಯ ದಡದಲ್ಲಿ ಅಥವಾ ಆಚೆಗೆ ವಾಸಿಸುವವರೆಲ್ಲರನ್ನು ಇಂಡೀಸ್ ಎಂದು ಉಲ್ಲೇಖಿಸಿರುವುದು ನಮಗೆ ಶಬ್ದಕೋಶಗಳಲ್ಲಿ ಮತ್ತು ಬೇರೆ ಬೇರೆ ಆಕಾರ ಗ್ರಂಥಗಳಲ್ಲಿ ಸಿಗುತ್ತವೆ. ಭಾರತ್ ಎಂಬ ಹೆಸರನ್ನು ನಮ್ಮ ಪೌರಾಣಿಕ ಹಿನ್ನಲೆಯಿಂದಲೂ ಕಾಣಬಹುದು. ಅದನ್ನು ಇಲ್ಲಿ ಪ್ರತ್ಯೇಕಿಸಿ ಹೇಳಬೇಕೆಂದೇನಿಲ್ಲ. ಈ ನೆಲದ ಇತಿಹಾಸವನ್ನು ನಿರ್ದಾಕ್ಷಿಣ್ಯವಾಗಿ ತಿರುಚಿದರೂ ರಾಜಕೀಯ ಉದ್ದೇಶಕ್ಕಾಗಿ ಒಬ್ಬರ ವಿರುದ್ಧ ಮತ್ತೊಬ್ಬರನ್ನು ತಿರುಗಿಸುವ ಯತ್ನ ಹೇಗೆ ಮತ್ತು ಏಕೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ಸಂವಿಧಾನ ಸಭೆಯಲ್ಲಿ ಒಂದು ದೊಡ್ಡ ಚರ್ಚೆಯ ನಂತರ "ಇಂಡಿಯಾವೇ ಭಾರತ" ಎಂದು ಒಪ್ಪಿಗೆಗೆ ಬಂದು ಅಳವಡಿಸಿಕೊಳ್ಳಲಾಯಿತು, ಅದು ಆ ಸಮಯದಲ್ಲಿ ಇದು ಸ್ಪಷ್ಟವಾದ ಸೈದ್ಧಾಂತಿಕ ವಿಭಜನೆ ಎಂದೇ ಗುರುತಿಸಲ್ಪಟ್ಟಿತು. ಅದೇನೇ ಇದ್ದರೂ, ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಈ ವಿಷಯವನ್ನು ಬಹಳ ಘನತೆಯಿಂದ ಪರಿಹರಿಸಲಾಯಿತು. "ಇಂಡಿಯಾವೇ ಭಾರತ" ಎನ್ನುವುದರ ಪರವಾಗಿ ಮತ ಚಲಾಯಿಸಿದ ಸಂವಿಧಾನ ಸಭೆಯ ಸದಸ್ಯರ ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಅನುಮಾನಿಸುವುದು ಮೂರ್ಖತನ. ಅವರಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ತ್ಯಾಗಗಳನ್ನು ಮಾಡಿದವರು, ಬ್ರಿಟಿಷ್ ಜೈಲುಗಳಲ್ಲಿ ವರ್ಷಗಳ ಕಾಲ, ದಶಕಗಳ ಕಾಲ ಸಹಿಸಿಕೊಂಡವರು ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಯ ದಬ್ಬಾಳಿಕೆಯ ಶಕ್ತಿಗಳನ್ನು ಎದುರಿಸಿದವರು. ಬಾಬಾ ಸಾಹೇಬ್ ಅಂಬೇಡ್ಕರ್, ರಾಜೇಂದ್ರ ಪ್ರಸಾದ್, ಚಕ್ರವರ್ತಿ ರಾಜಗೋಪಾಲಾಚಾರಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲದೆ ದೇಶದ ಏಳ್ಗೆಗಾಗಿ ಭದ್ರ ಬುನಾದಿ ಹಾಕಿಕೊಟ್ಟವರಾಗಿರುವುದರಿಂದ ನಮ್ಮ ದೇಶದ ಹಿನ್ನೆಲೆಯ ಬಗ್ಗೆ ಅವರ ತಿಳುವಳಿಕೆಯನ್ನು ಯಾರೂ ಪ್ರಶ್ನಿಸುವ ಧೈರ್ಯ ಮಾಡಲಿಲ್ಲ. ಅವರನ್ನು ಬ್ರಿಟಿಷ್‌ ದಾಸ್ಯಕ್ಕೆ ಒಳಗಾದವರು ಎಂದು ಬಿಂಬಿಸುವುದು ಮತ್ತು ಭಾವಿಸುವುದು ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ. ಇದು ದೇಶಕ್ಕಾಗಿ ಅವರು ಮಾಡಿದ ಮಹಾತ್ಯಾಗಕ್ಕೆ ಮಾಡುವ ಅವಮಾನವೇ ಸರಿ.

ಈ ದೇಶದ ಸ್ವಾತಂತ್ರ್ಯದ ಪರಂಪರೆಯನ್ನು ಹೈಜಾಕ್ ಮಾಡಲು ಪ್ರಯತ್ನಿಸಲಾಗುತ್ತಿದೆಯೇ ಎಂಬ ಅನುಮಾನವೂ ಈಗ ಹುಟ್ಟಲಾರಂಭಿಸಿದೆ. ಚಳುವಳಿ, ಸಂವಿಧಾನವನ್ನು ಒಪ್ಪದ, ತ್ರಿವರ್ಣ ಧ್ವಜದ ಬಗ್ಗೆ ಗೌರವ ಇಲ್ಲದಿರುವವರು ಇಂದು ʼದೇಶ ಭಕ್ತಿʼ / ʼದೇಶ ಪ್ರೇಮʼದ ಸರ್ಟಿಫಿಕೇಟ್‌ ಗಳನ್ನುಲ್ಲಿ ಇವರ ಧೋರಣೆಯನ್ನು ಪ್ರಶ್ನಿಸುವವರಿಗೆ  ಹಂಚುತ್ತಿದ್ದಾರೆ. "ತ್ರಿವರ್ಣ ಧ್ವಜಕ್ಕೆ ಮೂರು ಬಣ್ಣಗಳಿವೆ, ಅದು ಕೆಟ್ಟ ಶಕುನವಾಗಿದೆ ಮತ್ತು ಅದನ್ನು ಜನರು ಒಪ್ಪಿಕೊಳ್ಳುವುದಿಲ್ಲ" ಎಂದು ಅಂದು ಹೇಳಿದವರು ಈ ಮೇಲಿನ ಗುಂಪಿಗೆ ಸೇರದವರು ಎಂಬುದನ್ನು ಈ ದೇಶ ಖಂಡಿತ ಮರೆಯುವುದಕ್ಕೆ ಸಾಧ್ಯವಿಲ್ಲ.

ಒಟ್ಟಿನಲ್ಲಿ ಈಗ ದೇಶದ ಹೆಸರು ಬದಲಾವಣೆಯ ವಿಚಾರ ರಾಜಕೀಯವಾಗಿ ಬಣ್ಣ ಪಡೆದುಕೊಳ್ಳುತ್ತಿದೆ. ಪರ ವಿರೋಧ ಚರ್ಚೆಗಳು ತಾರರಕ್ಕೆ ಏರಿವೆ. ಏನೇ ಆಗಲಿ, ಆದರೇ, ಈ ರಾಜಕೀಯದ ಪ್ರತಿಷ್ಟೆಯ ನಡುವೆ ದೇಶದ ಘನತೆಗೆ, ಗೌರವಕ್ಕೆ ಧಕ್ಕೆಯಾಗದಿರಲಿ ಎನ್ನುವುದೇ ನಮ್ಮ ಉದ್ದೇಶ.

ಸರ್ಕಾರಕ್ಕೆ ಜನಾದೇಶವಿದೆ, ಮತ್ತು ಅದು ಬಯಸಿದರೆ ಬದಲಾವಣೆಯನ್ನು ತರಬಹುದು. ಆದಾಗ್ಯೂ, ಸ್ವಾತಂತ್ರ್ಯ ಚಳುವಳಿಯ ಸಾರ್ವತ್ರಿಕ ಮೌಲ್ಯಗಳನ್ನು ಬದಲಾಯಿಸುವ ಸ್ವಾತಂತ್ರ್ಯವನ್ನು ಹೊಂದಿಲ್ಲ, ಸಂವಿಧಾನವನ್ನು ಹೊಸತಾಗಿ ರಚಿಸುವ ಸ್ವಾತಂತ್ರ್ಯವನ್ನು ಹೊಂದಿಲ್ಲ, ನಮ್ಮ ಈ ದೇಶ ಅನುಸರಿಸಿಕೊಂಡು ಬಂದ ಪ್ರಜಾಪ್ರಭುತ್ವದ ಆಶಯವನ್ನು ಮರುವಿನ್ಯಾಸಗೊಳಿಸುವ ಸ್ವಾತಂತ್ರ್ಯನ್ನು ಹೊಂದಿಲ್ಲ. ಅದಕ್ಕೆ ಸಮಾಜದ ಸಾಮೂಹಿಕ ಒಪ್ಪಿಗೆಯೂ ಅಗತ್ಯವಿದೆ.  

-ಶ್ರೀರಾಜ್‌ ವಕ್ವಾಡಿ

 

Thursday, September 7, 2023

ಬಹುಪಕ್ಷಗಳಿರುವ ದೇಶದಲ್ಲಿ ʼಒಂದು ದೇಶ, ಒಂದು ಚುನಾವಣೆʼಯ ಕನಸು

 


ಇಂದಿರಾ ನೇತೃತ್ವದ ಸರ್ಕಾ೩೯ಬಾರಿ ೩೫೬ನೇ ವಿಧಿಯನ್ನು ನಿರ್ಲಜ್ಜವಾಗಿ ಬಳಸಿಕೊಂಡಿತ್ತು !

ಒಂದು ದೇಶ, ಒಂದು ಚುನಾವಣೆ. ೨೦೧೮ರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ ವಿಚಾರ ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಆಡಳಿತಾತ್ಮಕವಾಗಿ ಪೂರಕವಾಗುವಂತೆ ಮಾಡುವ ಉದ್ದೇಶದಿಂದ ಈ ಕಲ್ಪನೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವುದು ವಿಪಕ್ಷಗಳ ಕೆಂಗಣ್ಣಿಗೂ ಒಳಗಾಗಿದೆ. ಏಕಕಾಲದಲ್ಲಿ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು ಲೋಕಸಭಾ ಚುನಾವಣೆ ನಡೆಸಬೇಕು ಎನ್ನುವುದು ಮೋದಿ ನೇತೃತ್ವ ಸರ್ಕಾರದ ಉದ್ದೇಶವಾಗಿದೆ. ೨೦೧೮ರಲ್ಲಿ ಈ ಬಗ್ಗೆ ಒಂದಿಷ್ಟು ಅದ್ಯಯನ ಮಾಡುವ ಉದ್ದೇಶದಿಂದ ಕಾನೂನು ಸಮಿತಿಯನ್ನೂ ಕೂಡ ಮಾಡಲಾಗಿತ್ತು. ಆ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿಯನ್ನೂ ಒಪ್ಪಿಸಿತ್ತು. ಅದಾದ ಮೇಲೆ ಅಷ್ಟು ಸುದ್ದಿಯಲ್ಲಿ ಈ ವಿಚಾರ ಇದ್ದಿರಲಿಲ್ಲ. ಈಗ ಮತ್ತೆ ಮುನ್ನೆಲೆಗೆ ಬಂದಿದೆ.  

೧೯೫೨ರಲ್ಲಿ ಈ ದೇಶದಲ್ಲಿ ಮೊದಲ ಚುನಾವಣೆ ನಡೆದಿದ್ದು. ಅಲ್ಲಿಂದ ಸುಮಾರು ೧೯೭೦ರ ದಶಕದವರೆಗೂ (ನಿಖರವಾಗಿ ಹೇಳುವುದಾದರೇ, ೧೯೬೭ರ ಚುನಾವಣೆಯ ತನಕ) ಕೂಡ ಒಂದು ದೇಶ, ಒಂದು ಚುನಾವಣೆಯ ಕಲ್ಪನೆಯಲ್ಲಿಯೇ ಚುನಾವಣೆ ನಡೆದಿತ್ತು ಎನ್ನುವುದು ಇಲ್ಲಿ ಗಮನಾರ್ಹ ವಿಚಾರ. ಬಹುಷಃ ಅಲ್ಲಿಯವರೆಗೆ ಈ ದೇಶದಲ್ಲಿ ಇದ್ದದ್ದು ಕಾಂಗ್ರೆಸ್‌ ಪಕ್ಷವೊಂದೆ. ರಾಜ್ಯದಲ್ಲಿಯೂ ಕೇಂದ್ರದಲ್ಲಿಯೂ ಕಾಂಗ್ರೆಸ್‌ ಸರ್ಕಾರದ ಆಡಳಿತವೇ ಇದ್ದಿತ್ತು. ಹಾಗಾಗಿ ಈ ಕಲ್ಪನೆಯ ಚುನಾವಣೆ ಆ ಕಾಲಕ್ಕೆ ಸೂಕ್ತವಾಗಿತ್ತು ಮತ್ತು ಒಂದು ಹಂತದಲ್ಲಿ ಪೂರಕವೂ ಆಗಿತ್ತು. ಆದರೇ, ೧೯೬೭ರ ನಂತದ ದೇಶದ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟಿದವು, ಈ ಪ್ರಾದೇಶಿಕ ಪಕ್ಷಗಳ ಹುಟ್ಟಿನ ಕಾರಣದಿಂದಾಗಿ ಜನರಲ್ಲಿ ಕಾಂಗ್ರೆಸ್‌ ಮೇಲೆ ಇದ್ದ ಅಭಿಪ್ರಾಯ ಒಂದು ಹಂತದಲ್ಲಿ ಕಳೆಗುಂದುತ್ತಾ ಹೋಯಿತು. ಪ್ರಾದೇಶಿಕ ಚಿಂತನೆಗಳು ಮುನ್ನೆಲೆಗೆ ಬಂದವು. ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನು ಕಲೆದುಕೊಳ್ಳುತ್ತಾ ಬಂದಾಗ ಈ ಕಲ್ಪನೆ ಮೂಲೆಗೆ ಸರಿಯಿತು. ಮಾತ್ರವಲ್ಲದೇ, ೩೫೬ರ ವಿಧಿಯ ಹೇರಿಕೆಯ ನಂತರ ಏಕಕಾಲದಲ್ಲಿ ನಡೆಯುತ್ತಿದ್ದ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳ ಹಾದಿ ತಪ್ಪಿ ಹೋಯಿತು. ಇದು ಮುಂದೆ ಬರಬರುತ್ತಾ ಚುನಾವಣಾ ಆಯೋಗಕ್ಕೂ, ಜನರಿಗೂ ಹೊರೆಯಾಗುತ್ತಾ ಹೋಯಿತು. ಹಣ, ಸಮಯ, ಆಡಳಿತಾತ್ಮಕವಾದ ಅನುಕೂಲದ ದೃಷ್ಟಿಯಿಂದ ಈಗ ಮತ್ತೆ ಈ ಮಾದರಿಯ ಚುನಾವಣೆ ಆಗಬೇಕು ಎಂಬ ಸಂಕಲ್ಪವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದಕ್ಕಾಗಿ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರ ನೇತೃತ್ವದ ಸಮಿತಿಯೂ ಕೂಡ ರಚನೆಯಾಗಿದೆ.

ಈ ʼಒಂದು ದೇಶ, ಒಂದು ಚುನಾವಣೆʼ ಒಮ್ಮಿಂದೊಮ್ಮೆಲೆ ಮೇಲೆ ಬರುವುದಕ್ಕೆ ಕಾರಣವಾದರೂ ಏನು ಎನ್ನುವುದು ಈಗ ಚಿಂತನೆಗೆ ಗ್ರಾಸವಾಗಿದೆ. ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ತಿಂಗಳುಗಳು ಬಾಕಿ ಇರುವಾಗಲೇ ಈ ವಿಚಾರ ಮುನ್ನೆಲೆಗೆ ತಂದು ಮತ್ತೆ ಜನಾಭಿಪ್ರಾಯ ಹೇಗಿದೆ ಎಂದು ತಿಳಿದುಕೊಳ್ಳುವ ಉದ್ದೇಶದಿಂದಲೇ ಮುನ್ನೆಲೆಗೆ ತರುವಂತಹ ಪ್ರಯತ್ನ ಮಾಡಿದೆ ಅಂತನ್ನಿಸುತ್ತಿದೆ. ಕೇಂದ್ರದಲ್ಲಿ ಈಗ ಬಿಜೆಪಿ ಇರುವ ಕಾರಣದಿಂದ ಮತ್ತು ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯ ಪ್ರಭಾವ ಉಳಿದಿರುವ ರಾಜಕೀಯ ಪಕ್ಷಗಳಿಗಿಂತ ಹೆಚ್ಚಿರುವುದರಿಂದ ಮತ್ತೊಂದು ತರವಾಗಿ ರಾಜಕೀಯ ಲಾಭ ಮಾಡಿಕೊಳ್ಳುವ ಪ್ರಯತ್ನ ಮಾಡೀತೆ ಎನ್ನುವುದು ಇಲ್ಲಿರುವ ಪ್ರಶ್ನೆ. ವಿಪಕ್ಷಗಳು ಭದ್ರಗೊಳ್ಳುತ್ತಿರುವುದು ಒಂದೆಡೆಯಾದರೇ, ದೇಶದ ಚಿತ್ತವನ್ನು ಈ ಒಂದು ದೇಶ, ಒಂದು ಚುನಾವಣೆಯ ಕಲ್ಪನೆಯಡೆಗೆ ಸೆಳೆದು ಒಂದಿಷ್ಟು ರಾಜಕೀಯ ಚರ್ಚಗೆ ಕಾರಣವಾಗುವಂತೆ ಮಾಡಿ ವಿಪಕ್ಷಗಳ ಯೋಜನೆಗಳಿಗೆ ಅಡ್ಡಿ ತರುವಂತಹ ಪ್ರಯತ್ನ ಇದು ಇರಬಹುದೇ ಎನ್ನುವ ವಾದವೂ ಕೂಡ ರಾಜಕೀಯ ವಲಯದಲ್ಲಿ ಆಗುತ್ತಿದೆ. ಈ ವಿಚಾರವನ್ನು ಸಂಪೂರ್ಣವಾಗಿ ತಳ್ಳಿ ಹಾಕುವುದಕ್ಕೂ ಆಗುವುದಿಲ್ಲ ಎನ್ನುವುದಿಲ್ಲಿ ಮುಖ್ಯ.

ಬಹಳ ಪ್ರಮುಖವಾಗಿ ಈ ಹಿಂದೆ ನಡೆದ ಏಕಕಾಲದ ಚುನಾವಣೆಗಳಿಗೂ ಮತ್ತು ಈಗ ಕೇಂದ್ರ ಸರ್ಕಾರ ಅದೇ ಹಳೆಯ ಕಲ್ಪನೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಮಾಡುತ್ತಿರುವ ಪ್ರಯತ್ನಕ್ಕೂ ತಾಳೆ ಹಾಕಿ ನೋಡಬೇಕಾದ ಅನಿವಾರ್ಯತೆ ಇದೆ ಎಂದನ್ನಿಸುತ್ತದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿಪಕ್ಷಗಳ ಮೈತ್ರಿ ರಾಷ್ಟ್ರಮಟ್ಟದಲ್ಲಿ ದೊಡ್ಡದಾಗಿಯೇ ಸೃಷ್ಟಿಯಾಗಿದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾಬಲ್ಯ ಹೊಂದಿರುವ ಪ್ರಾದೇಶಿಕ ಪಕ್ಷಗಳ ಸಹಕಾರದಿಂದಲೇ ರಚನೆಯಾದ ಈ ಮೈತ್ರಿಯನ್ನು ಉಸಿರುಗಟ್ಟಿಸುವ ಯತ್ನ ಎಂದೆ ಹೇಳಲಾಗುತ್ತಿದೆ. ಏಕಪಕ್ಷೀಯ ಮಾದರಿಯ ಸರ್ಕಾರ ಈ ದೇಶವನ್ನು ಆಳುವ ಪರಿಕಲ್ಪನೆ ಇದರ ಹಿಂದಿದೆಯೇ ಎನ್ನುವುದು ಮತ್ತೊಂದು ಪ್ರಶ್ನೆ ಮತ್ತು ಚರ್ಚೆ ಎದ್ದಿದೆ.   

ಭಾರತ ಸಂಸದೀಯ ಮಾದರಿಯ ಸರ್ಕಾರವನ್ನು ಹೊಂದಿರುವ ದೇಶ. ನಮ್ಮದು ಅಧ್ಯಕ್ಷೀಯ ಮಾದರಿಯ ಸರ್ಕಾರವಲ್ಲ.  ಸಂಸದೀಯ ಮಾದರಿಯ ಸರ್ಕಾರದಲ್ಲಿ ಸಂಸತ್ತಿಗೂ ಮತ್ತು ಕಾರ್ಯಾಂಗಕ್ಕೆ ನೇರ ಸಂಬಂಧ ಇರುವ ಕಾರಣ ಸದ್ಯ ಭಾರತದಲ್ಲಿ ಒಂದು ದೇಶ, ಒಂದು ಚುನಾವಣೆ ಕಲ್ಪನೆಯನ್ನು ಜಾರಿಗೆ ತರುವುದಕ್ಕೆ ಸಾಧ್ಯವೇ ಇಲ್ಲ. ಸಂಸತ್ತಿನಲ್ಲಿ ಒಮ್ಮೆ ಸರ್ಕಾರ ವಿಶ್ವಾಸ ಕಳೆದುಕೊಂಡರೆ, ಮತ್ತೆ ಚುನಾವಣೆ ನಡೆಸಲೇ ಬೇಕಾಗುತ್ತದೆ. ಮಧ್ಯಾವಧಿ ಚುನಾವಣೆಯನ್ನು ಮಾಡಬೇಕಾಗುತ್ತದೆ. ಈ ಅನಿವಾರ್ಯತೆ ಇರುವುದು ನಮ್ಮ ಸಂವಿಧಾನದಲ್ಲಿ ಈ ದೇಶ ಕಂಡುಕೊಂಡಿದೆ. ಸರ್ಕಾರ ವಿಶ್ವಾಸ ಕಳೆದುಕೊಂಡಾಗ ಅಥವಾ ಬಹುಮತ ಕಳೆದುಕೊಂಡಾಗ ಎಷ್ಟೋ ಬಾರಿ ಮಧ್ಯಾವಧಿ ಚುನಾವಣೆ ನಡೆದಿದ್ದು ಕೂಡ ಇದೆ. ಅಧ್ಯಕ್ಷೀಯ ಮಾದರಿ ಸರ್ಕಾರ ಇರುವ ದೇಶಗಳಲ್ಲಿ ಹಾಗಲ್ಲ. ಶಾಸಕಾಂಗಕ್ಕೆ ಈ ಮಾದರಿಯಲ್ಲಿ ಯಾವುದೇ ಸಂಬಂಧವಿಲ್ಲ. ಒಬ್ಬ ಅಧ್ಯಕ್ಷ ಹುದ್ದೆಗೇರಿದ ಮೇಲೆ ಅಧ್ಯಕ್ಷಾವಧಿಯನ್ನು ಯಾವುದೇ ಅಡೆತಡೆಗಳಿಲ್ಲದೇ ಪೂರೈಸುತ್ತಾನೆ. ಆದ್ದರಿಂದ ಈ ಕಲ್ಪನೆಯನ್ನು ಭಾರತದ ಸಂವಿಧಾನದ ಚೌಕಟ್ಟಿಗೆ ತರುವುದಕ್ಕೆ ಸಾಧ್ಯವೇ ಇಲ್ಲ. ಪ್ರಾದೇಶಿಕ ಪಕ್ಷಗಳು ಈ ಕಲ್ಪನೆಯಲ್ಲಿ ಮಾನ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಸ್ಥಳೀಯ ಪಕ್ಷಗಳಿಗೆ ಈ ವ್ಯವಸ್ಥೆಯಲ್ಲಿ ಪ್ರಾಧಾನ್ಯತೆ ದೊರಕದೆ ಹೋಗಬಹುದು. ಬಹುಪಕ್ಷಗಳಿರುವ  ಈ ದೇಶದಲ್ಲಿ ಇಂತಹ ವ್ಯವಸ್ಥೆಯ ಜಾರಿಗೆ ತರುವುದು ಕೂಡ ಕಷ್ಟವಿದೆ.

ಒಂದು ದೇಶ, ಒಂದು ಚುನಾವಣೆಯ ಸವಾಲುಗಳೇನು ? :

ದೇಶದಲ್ಲಿ ಸಂಸದೀಯ ವ್ಯವಸ್ಥೆಯನ್ನು ಅನುಸರಿಸುವ ಸಂಪ್ರದಾಯಗಳನ್ನು ಮೀರಿ ಈ ಕಲ್ಪನೆಯನ್ನು ಇಲ್ಲಿ ಜಾರಿಗೆ ತರುವುದು ಅಷ್ಟು ಸುಲಭವಿಲ್ಲ. ಸರ್ಕಾರಗಳು ಅವಧಿಪೂರ್ಣಗೊಳ್ಳುವ ಮೊದಲೆ ಮುರಿದು ಬೀಳುವ ಸಾಧ್ಯತೆಗಳೂ ಇವೆ. ಮರು ಚುನಾವಣೆ ಅಥವಾ ಮಧ್ಯಾವಧಿ ಚುನಾವಣೆ ಮಾಡಬೇಕಾಗುತ್ತದೆ. ಈ ಕಲ್ಪನೆಗೆ ಪ್ರಾದೇಶಿಕ ಪಕ್ಷಗಳು ಒಪ್ಪುವುದು ಅಥವಾ ಆ ಎಲ್ಲಾ ಸ್ಥಳೀಯ ಪಕ್ಷಗಳ ಮನವೊಲಿಸುವುದು ಕೂಡ ಅಷ್ಟು ಸುಲಭವಿಲ್ಲ. ಇನ್ನು, ಏಕಕಾಲದಲ್ಲಿ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ನಡೆಸುವಾಗ ಭದ್ರತೆಯ ವಿಚಾರದಲ್ಲಿ, ಚುನಾವಣಾ ಸಿಬ್ಬಂಧಿಗಳ ನಿಯೋಜನೆಯ ವಿಚಾರದಲ್ಲಿಯೂ ಚುನಾವಣಾ ಆಯೋಗಕ್ಕೆ ದೊಡ್ಡ ಹೊರೆಯಾಗಲಿದೆ ಎನ್ನುವುದು ಸತ್ಯ.

 

ರಾಜ್ಯಗಳ ಮೇಲೆ ೩೫೬ನೇ ವಿಧಿಯ ದುರ್ಬಳಕೆ : 

ಪಾಕಿಸ್ತಾನದ ಸಂವಿಧಾನವನ್ನು ಹೊರತುಪಡಿಸಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ರಾಜ್ಯ ಸರ್ಕಾರವನ್ನು ವಜಾಗೊಳಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ೩೫೬ನೇ ವಿಧಿಯಂತಹ ನಿಬಂಧನೆಯನ್ನು ವಿಶ್ವದ ಯಾವುದೇ ಉದಾರ ಪ್ರಜಾಪ್ರಭುತ್ವ ಸಂವಿಧಾನ ಹೊಂದಿಲ್ಲ. ಭಾರತ ಮತ್ತು ಪಾಕಿಸ್ತಾನ ಎರಡೂ ಈ ನಿಬಂಧನೆಯನ್ನು ಭಾರತ ಸರ್ಕಾರದ ಕಾಯಿದೆ, ೧೯೩೫ ರಿಂದ ಎರವಲು ಪಡೆದಿವೆ.

೩೫೬ನೇ ವಿಧಿಯು ರಾಜ್ಯ ಸರ್ಕಾರಗಳ ಮೇಲೆ ತನ್ನ ಅಧಿಕಾರ ಚಲಾಯಿಸಲು ಕೇಂದ್ರ ಸರ್ಕಾರಕ್ಕೆ ವ್ಯಾಪಕ ಅವಕಾಶವನ್ನು ನೀಡಿದೆ. ಇದು ದೇಶದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡುವ ಸಾಧನವಾಗಿ ಮಾತ್ರ ಉದ್ದೇಶಿಸಲ್ಪಟ್ಟಿದ್ದರೂ, ಕೇಂದ್ರದಲ್ಲಿ ಅಧಿಕಾರವಿರುವ ಪಕ್ಷ, ರಾಜಕೀಯ ವಿರೋಧಿ ಪಕ್ಷಗಳಿಂದ ಅಧಿಕಾರ ನಡೆಸುತ್ತಿರುವ ರಾಜ್ಯ ಸರ್ಕಾರಗಳನ್ನು ಕಿತ್ತೊಗೆಯಲು ಇದನ್ನು ನಿರ್ಲಜ್ಜವಾಗಿ ಬಳಸಿಕೊಂಡಿದ್ದವು ಎಂಬ ಚರ್ಚೆಯು ಕೂಡ ಇದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಈ ವಿಧಿಯನ್ನು ೧೯೫೧ರಲ್ಲಿ ಪಂಜಾಬ್‌ನಲ್ಲಿ ಮೊದಲ ಬಾರಿಗೆ ಬಳಸಲಾಯಿತು. ೧೯೬೬ ಮತ್ತು ೧೯೭೭ ರ ನಡುವೆ, ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ಬೇರೆಬೇರೆ ರಾಜ್ಯಗಳ ವಿರುದ್ಧ ಸುಮಾರು ೩೯ಬಾರಿ ಈ ವಿಧಿಯನ್ನು ನಿರ್ಲಜ್ಜವಾಗಿ ಬಳಸಿಕೊಂಡಿತ್ತು.  ರಾಜ್ಯದಲ್ಲಿ ಎಸ್‌.ಆರ್ ಬೊಮ್ಮಾಯಿ ಪ್ರಕರಣದಲ್ಲಿ ( ೧೯೯೪), ಭಾರತದ ಸರ್ವೋಚ್ಚ ನ್ಯಾಯಾಲಯವು ವಿಧಿ ೩೫೬ ರ ಹೇರಿಕೆಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹಾಕಿತ್ತು.

ಇಂದಿರಾಗಾಂಧಿ ಈ ವಿಧಿಯನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಪ್ರತೀಕಾರವಾಗಿ, ಜನತಾ ಸರ್ಕಾರವು ಒಂಬತ್ತು ರಾಜ್ಯಗಳ ಕಾಂಗ್ರೆಸ್ ಸರ್ಕಾರಗಳ ಮೇಲೆ ಈ ವಿಧಿಯನ್ನು ದುರುಪಯೋಗ ಪಡಿಸಿಕೊಂಡಿರುವ ರಾಜಕೀಯ ಇತಿಹಾಸವಿದೆ. ಇದರ ಕಾರಣದಿಂದಾಗಿ ಜನತಾ ಸರ್ಕಾರ ಮೊದಲ ಬಾರಿಗೆ ೧೯೭೭ರಲ್ಲಿ ಸರ್ಕಾರವನ್ನು ರಚಿಸಿತ್ತು. ಮತ್ತೆ ಇಂದಿರಾ ಗಾಂಧಿಯವರು ೧೯೮೦ರಲ್ಲಿ ಅಧಿಕಾರಕ್ಕೆ ಮರಳಿದ ನಂತರ, ಒಂಬತ್ತು ವಿರೋಧ ಪಕ್ಷದ ಬಹುಮತದ ಸರ್ಕಾರಗಳ ಮೇಲೆ ಈ ವಿಧಿಯನ್ನು ದುರುಪಯೋಗ ಪಡಿಸಿಕೊಂಡರು. ಹೀಗೆ ನಂತರದ ಸರ್ಕಾರಗಳೂ ಇದೇ ಮಾದರಿಯಲ್ಲಿ ನಡೆದುಕೊಂಡವು ಎನ್ನುವುದು ಉಲ್ಲೇಖಾರ್ಹ ವಿಷಯ. ಒಟ್ಟಿನಲ್ಲಿ, ೩೫೬ನೇ ವಿಧಿಯು ರಾಜಕೀಯವಾಗಿ ಮತ್ತೆಮತ್ತೆ ದುರ್ಬಳಕೆಯಾಗುವುದನ್ನು ತಡೆಗಟ್ಟಲು ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳು ಮತ್ತು ಬಲವಾದ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ ಎನ್ನುವುದಂತೂ ಸತ್ಯ.

ಒಟ್ಟಿನಲ್ಲಿ ಒಂದು ದೇಶ, ಒಂದು ಚುನಾವಣೆ ಕಲ್ಪನೆಯ ಬಗ್ಗೆ ಪ್ರಾಯೋಗಿಕ ಸಾಧ್ಯತೆಗಳ ಬಗ್ಗೆ ಸರ್ಕಾರ ಮೊದಲು ಯೋಚಿಸಬೇಕಿದೆ. ಚುನಾವಣಾ ವ್ಯವಸ್ಥೆಯಲ್ಲಿ ಆಗಬೇಕಾಗಿರುವ ಸುಧಾರಣೆ ಇನ್ನೂ ಹಲವಿದೆ. ಆ ಸುಧಾರಣೆ ಮಾಡುವುದಕ್ಕಿಂತ ಮೊದಲು ಇಂತಹದ್ದೊಂದು ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಯತ್ನಿಸುತ್ತಿರುವುದು ಸರಿಯಲ್ಲ. ಚುನಾವಣಾ ತಜ್ಞರ ಅಭಿಪ್ರಾಯ ಪಡೆಯುವುದಷ್ಟೇ ಅಲ್ಲದೇ, ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆದ ಮೇಲಷ್ಟೇ ಈ ಬಗ್ಗೆ ಯೋಚಿಸಬಹುದಾಗಿದೆ.

-ಶ್ರೀರಾಜ್‌ ವಕ್ವಾಡಿ

 

ಸೂರ್ಯನೆಡೆಗೆ ಜಿಗಿದ ಇಸ್ರೋ

ಸೌರಮಂಡಲದ ಮಹಾ ನಕ್ಷತ್ರದ ಬಗ್ಗೆ ʼಆದಿತ್ಯʼ ಅನ್ವೇಷಣೆ

ಪ್ರತಿದಿನ ಸಂಭವಿಸುವ ಸೂರ್ಯೋದಯ, ಸೂರ್ಯಾಸ್ತವನ್ನು ನೋಡುವುದಕ್ಕಾಗಿಯೇ ಈ ಜಗತ್ತಿನುದ್ದಕ್ಕೂ ಪ್ರೇಕ್ಷಣೀಯ ಸ್ಥಳಗಳಿವೆ. ಸೂರ್ಯೋದಯ, ಸೂರ್ಯಾಸ್ತವನ್ನು ನೋಡಿ ಆನಂದಿಸುವುದಕ್ಕೆ ಜನ ಸಂತೆ ಸೇರುತ್ತಾರೆ. ಪರ್ವತ ಪ್ರದೇಶಗಳು, ಮಲೆನಾಡುಗಳು, ಕಡಲ ಕಿನಾರೆಗಳು, ನದಿ ತೀರಗಳಲ್ಲಿ ಸೂರ್ಯೋದಯ, ಸೂರ್ಯಾಸ್ತ ನೋಡುವುದಕ್ಕಾಗಿಯೇ ಎಲ್ಲೆಲ್ಲಿಂದಲೋ ಪ್ರವಾಸ ಕೈಗೊಳ್ಳುವ ಜನರಿದ್ದಾರೆ. ಆದರೇ, ಇದೇ ಜನರು ಮಧ್ಯಾಹ್ನದ ಸುಡು ಬಿಸಿಲೆಂದರೇ ದೂರ ಓಡಿ ಹೋಗ್ತಾರೆ. ಸೂರ್ಯ ಸಹನೆಯ ಬೆರಗೂ ಹೌದು, ಅಸಹನೀಯ ಕೊರಗೂ ಹೌದು. ಅಕಾಲಿಕ ಮಳೆ, ನೈಸರ್ಗಿಕ ವಿಕೋಪ, ನೆರೆ, ಪ್ರವಾಹ ಇವೆಲ್ಲದಕ್ಕೂ ಹಾಗೂ ಸೂರ್ಯನಿಗೂ ಸಂಬಂಧವಿದೆಯೇ ? ಇದ್ದರೇ ಅದು ಯಾಕಾಗಿ ? ಅದಕ್ಕೆ ಪರಿಹಾರವಿದೆಯೇ ? ಇವೆಲ್ಲದರ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೂರ್ಯನೆಡೆಗೆ ಆದಿತ್ಯ ಎಲ್‌-೧ ವೀಕ್ಷಣಾಲಯವನ್ನು ಶ್ರೀಹರಿಕೋಟಾದಿಂದ ಪಿ ಎಸ್‌ ಎಲ್‌ ವಿ ಸಿ-೫೭ ರಾಕೇಟ್‌ ಮೂಲಕ ಉಡಾವಣೆ ಮಾಡಿದೆ. ಇಂತಹದ್ದೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ದೇಶವಾಗಿದೆ ಎನ್ನುವುದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಷಯ.  

ತಿಂಗಳನ ಅಂಗಳಕ್ಕೆ ಕಾಲಿಟ್ಟು ಅಧ್ಯಯನ ನಡೆಸುತ್ತಿರುವ ಇಸ್ರೋ ಈಗ ಸೌರಮಂಡಲದ ಮಹಾ ನಕ್ಷತ್ರ ಸೂರ್ಯನ ಅಧ್ಯಯನಕ್ಕೆ ದಾಪುಗಾಲಿಟ್ಟಿದೆ. ಪ್ರಪಂಚದ ವಿಸ್ಮಯಕಾರಿ ವಿಷಯಗಳ ಅಧ್ಯಯನಕ್ಕೆ ಇಸ್ರೋ ಇಡುತ್ತಿರುವ ಹೆಜ್ಜೆ ನಿಜಕ್ಕೂ ಶ್ಲಾಘನೀಯ. ಸುಮಾರು ೧೩ ಲಕ್ಷ ಭೂಮಿಗಳನ್ನು ಕೂಡಿಡಬಹುದಾದಷ್ಟು ಮಹಾ ಗಾತ್ರದ ನಕ್ಷತ್ರವೊಂದರ (ಸೂರ್ಯ) ಅಧ್ಯಯನಕ್ಕೆ ಇಸ್ರೋ ಮುಂದಾಗಿರುವುದು ಅಚ್ಚರಿಯೇ ಸರಿ. ಭೂಮಿಯಲ್ಲೇ ಇದ್ದುಕೊಂಡು ಸೂರ್ಯ ಉಗುಳುವ ತಾಪವನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ, ಅಂತದರಲ್ಲಿ ಸೂರ್ಯನಲ್ಲಿಗೆ ಒಂದು ಉಪಗ್ರಹವನ್ನು ಕಳುಹಿಸುವುದೆಂದರೇ ತಮಾಷೆನಾ ? ಅಂತ ನಾವು ನೀವು ಎಲ್ಲರೂ ನಮ್ಮೊಳಗೆ ಕೇಳಿಕೊಂಡಿದ್ದೇವೆ. ಇಲ್ಲ ಅಂತಂದ್ರೆ ಅದು ಆತ್ಮವಂಚನೆಯೇ ಸರಿ. ಆದರೇ, ಇದು ಖಂಡಿತ ಸಾಧ್ಯವಿದೆ ಎನ್ನುವುದನ್ನು ವಿಜ್ಙಾನ ಮಾಡಿ ತೋರಿಸುತ್ತಿದೆ.

ಭೂಮಿಯಿಂದ ಸುಮಾರು ೧೫೦ ಮಿಲಿಯನ್‌ ದೂರದಲ್ಲಿರುವ ಕುದಿಯುವ, ಕೆಂಪಾಗಿ ಹೊಳೆಯುವ ಹೈಡ್ರೋಜನ್‌ ಚೆಂಡಿನಂತಿರುವ ಮತ್ತು ಹೀಲಿಯಂ ಅನಿಲಗಳಿಂದ ಸುಠಿ ಬಿಸಿಯನ್ನು ಹೊರಗುಗುಳುವ ಸೂರ್ಯನನ್ನು ಅಧ್ಯಯನ ಮಾಡುವ ಸಾಹಸಕ್ಕೆ ಕೈ ಹಾಕಿದ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ದೇಶ ಎನ್ನುವುದು ಭಾರತೀಯರಿಗೆ ಹೆಮ್ಮೆ ತರುವ ವಿಷಯ. ಈಗಾಗಲೇ ನಾಸಾ, ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ, ಜಪಾನಿನ ಜಾಕ್ಸಾ ಸಂಸ್ಥೆಗಳು ಸೂರ್ಯನೆಡೆಗೆ ಉಪಗ್ರಹಗಳನ್ನು ಕಳುಹಿಸಿ ಅಧ್ಯಯನ ನಡೆಸಿವೆ.

ʼಕೋರ್‌ʼ ಎಂದು ಕರೆಯಲ್ಪಡುವ ಸೂರ್ಯನ ಮಧ್ಯಪ್ರದೇಶದಲ್ಲಿ ತಾಪಮಾನ ಸುಮಾರು ೧೫ ಮಿಲಿಯನ್‌ ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಬಹುದು, ಈ ತಾಪಮಾನದ ಸಂದರ್ಭದಲ್ಲಿ ನ್ಯೂಕ್ಲಿಯರ್‌ ಫ್ಯೂಶನ್‌ ಎಂಬ ಪ್ರಕ್ರಿಯೆ ನಡೆಯುತ್ತದೆ ಇದು ಸೂರ್ಯನಿಗೆ ಮತ್ತಷ್ಟು ಶಕ್ತಿ ತುಂಬಿಸುತ್ತದೆ ಎಂದು ಹೇಳುತ್ತದೆ ವಿಜ್ಙಾನ. ದ್ಯುತಿಗೋಳ ಎಂದು ಕರೆಯಲ್ಪಡುವ ಸೂರ್ಯನ ಗೋಚರ ಮೇಲ್ಮೈ ತುಲನಾತ್ಮಕವಾಗಿ ತಂಪಾಗಿರುತ್ತದೆ ಮತ್ತು ಸುಮಾರು ೫,೫೦೦ ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿರುತ್ತದೆ. ಇಷ್ಟು ತಾಪಮಾನವನ್ನು ಹೊಂದಿರುವ ಸೌರ ಮಡಲದ ಮಹಾ ನಕ್ಷತ್ರದ ಲಾಂಗ್ರೇಜ್ ಎಲ್ ಒನ್ ಬಿಂದುವಿನಲ್ಲಿ ಇಸ್ರೋ ಕಳುಹಿಸಿದ ಆದಿತ್ಯ ಎಲ್ -1 ಉಪಗ್ರಹದ ಅಂತರಿಕ್ಷ ವೀಕ್ಷಣಾಲಯ ಅಥವಾ ಒಬ್ಸರ್ವೇಟರ್‌ ನನ್ನು ಇರಿಸಿ, ಸೌರ ಚಟುವಟಿಕೆಗಳ ಅಧ್ಯಯನ ಮಾಡಲಾಗುತ್ತದೆ. ಏಳು ಪ್ರತ್ಯೇಕ ಉಪಕರಣಗಳನ್ನು ಕೊಂಡೊಯ್ಯುವ ಆದಿತ್ಯ ಎಲ್‌ -೧ ಸೂರ್ಯನ ಪ್ರಭಾಗೋಳ, ವರ್ಣಗೋಳ, ಕೊರೋನಾ(ಕಿರೀಟ)ದ ಅಧ್ಯಯನವನ್ನು ಮಾಡುವುದು ಮಾತ್ರವಲ್ಲದೆ, ಮೂರು ಉಪಕರಣಗಳು ಆಯಸ್ಕಾಂತೀಯ ವಲಯ ಮತ್ತು ಕಣ ಪ್ರವಾಹದ ವೀಕ್ಷಣೆ ಮಾಡಲಿದೆ.

ಸೂರ್ಯನ ಅಧ್ಯಯನ ಮಾಡುತ್ತಿರುವುದು ಯಾಕೆ ?

ಸೌರ ಮಂಡಲದಲ್ಲಿ ಇರುವ ನಕ್ಷತ್ರಗಳಲ್ಲಿ ಸೂರ್ಯ ಭೂಮಿಗೆ ಹತ್ತಿರ ಇರುವುದರಿಂದ ಸೌರ ಮಂಡಲದ ಇತರ ಗ್ರಹಗಳ ಅಧ್ಯಯನಕ್ಕೂ ಇದು ದಾರಿ ಮಾಡಿಕೊಡಬಹುದು ಎಂಬ ವಿಶ್ವಾಸವಿದೆ. ಸೂರ್ಯನನ್ನು ಅಧ್ಯಯನ ಮಾಡುವುದರಿಂದ ನಮ್ಮ ಕ್ಷೀರ ಪಥದಲ್ಲಿರುವ (ಮಿಲ್ಕಿ ವೇ) ಇತರೆ ನಕ್ಷತ್ರಗಳ ಬಗ್ಗೆಯೂ ಮತ್ತು ಬೇರೆ ಬೇರೆ ಗ್ಯಾಲಕ್ಸಿಗಳಲ್ಲಿರುವ ಇತರೆ ನಕ್ಷತ್ರಗಳ ಅಧ್ಯಯನದ ಮುಂದಿನ ಪ್ರಯತ್ನಕ್ಕೂ ಇದು ಸುಲಭ ದಾರಿ ಹೆಣೆದು ಕೊಡಬಹುದಾಗಿದೆ.

ಸೂರ್ಯ ಸೌರಮಂಡಲದ ಡೈನಾಮಿಕ್‌ ಸ್ಟಾರ್‌ ಆಗಿರುವುದರಿಂದ ನಾವು ಏನನ್ನು ಅಧ್ಯಯನ ಮಾಡುವುದಕ್ಕೆ ಪ್ರಯತ್ನಿಸುತ್ತೇವೆಯೋ ಅದಕ್ಕಿಂತಲೂ ಹೆಚ್ಚಿನ ಅಧ್ಯಯನ ಪೂರಕವಾದ ಮಾಹಿತಿ ಒದಗಿಸಿಕೊಡಬಹುದು ಎಂಬ ನಿರೀಕ್ಷೆ ವೈಜ್ಙಾನಿಕ ವಲಯದಲ್ಲಿದೆ. ಸೂರ್ಯನ ಸಹಜ ಚಟುವಟಿಕೆಗಳಾದ ಸೌರ ಮಾರುತಗಳ ಅಲೆ, ಸೌರ ಜ್ವಾಲೆಗಳು ಭೂಮಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಪ್ರಭಾಗೋಳದ ಗುರತ್ವ, ವರ್ಣಗೋಳ, ಕೊರೋನಾ(ಕಿರೀಟ)ದ ಅಧ್ಯಯನವನ್ನು ಇಸ್ರೋ ಪಿಎಸ್‌ಎಲ್‌ ವಿಸಿ-೫೭ ರಾಕೇಟ್‌ ಮೂಲಕ ಉಡಾವಣೆ ಮಾಡಿದ ಆದಿತ್ಯ ಎಲ್‌ ೧ ಮಾಡಲಿಕ್ಕಿದೆ. ವಿವಿಧ ರೀತಿಯಲ್ಲಿ ಚಿಮ್ಮುವ ಸೂರ್ಯನ ಉಷ್ಣ ಮತ್ತು ಕಾಂತೀಯ ವಿದ್ಯಮಾನಗಳು ಸೂರ್ಯನ ಸ್ವಾಭಾವಿಕ ಸ್ವಭಾವಗಳಾಗಿವೆ. ಹೀಗಾಗಿ, ಸೂರ್ಯನ ಅಧ್ಯಯನಕ್ಕೆ ಸೂರ್ಯ ಕೂಡ ಸಹಕರಿಸುತ್ತಾನೆ ಎಂಬ ನೀರೀಕ್ಷೆ ಇದೆ. ಪ್ರಯೋಗಾಲಯಗಳಲ್ಲಿ ಅರಿತುಕೊಳ್ಳುವುದಕ್ಕೆ ಸಾಧ್ಯವಿಲ್ಲದ ವಿಚಾರಗಳನ್ನು ಅಧ್ಯಯನ ಮಾಡುವುದಕ್ಕಾಗಿ ಸೂರ್ಯನಲ್ಲಿಗೆ ಆದಿತ್ಯ ಎಲ್‌-೧ ಪಯಣ ಬೆಳೆಸಿದೆ.

ಪ್ರಮುಖ ಉದ್ದೇಶಗಳೇನು :

·        *  ಕರೋನಲ್ ಹೀಟಿಂಗ್ ಮತ್ತು ಸೌರ ಮಾರುತಗಳು ಚಿಮ್ಮುವ ವೇಗದ ಅಧ್ಯಯನ.

·         * ಕರೋನಲ್‌ ಮಾಸ್‌ ಎಜೆಕ್ಷನ್‌ (ಸಿಎಮ್‌ಇ) ಅಧ್ಯಯನ ಮತ್ತು ಸೌರ ಜ್ವಾಲೆಗಳು, ಭೂಮಿಯ ಸಮೀಪದ ಭಾಹ್ಯಾಕಾಶದ ಹವಾಮಾನ ಪರೀಕ್ಷೆ.

·       *   ಸೌರಶಕ್ತಿಯ ಜೋಡಣೆ(ಸೋಲಾರ್‌  ಕಪಲಿಂಗ್) ಮತ್ತು ಸೌರ ವಾತಾವರಣದ ಡೈನಾಮಿಕ್ಸ್ ನ ಅಧ್ಯಯನ.

·       *  ಸೌರ ಮಾರುತಗಳ ಚಿಮ್ಮುವಿಕೆ ಮತ್ತು ಸೌರ ತಾಪಮಾನ, ಉಷ್ಣವಲಯದಧ್ಯಯನಕ್ಕಾಗಿ.

ಆದಿತ್ಯ ಎಲ್‌- ೧ : ವಿಶೇಷತೆಗಳೇನು ?

ಆದಿತ್ಯ ಎಲ್‌ -೧ ಮಿಶನ್‌ ದೇಶದಲ್ಲಿ ನಿರ್ಮಿಸಿದ್ದಾಗಿದ್ದು. ಸೂರ್ಯನ ಅಧ್ಯಯನಕ್ಕಾಗಿ ಏಳು ಉಪಕರಣಗಳನ್ನು ಅಥವಾ ಪೆಲೋಡ್‌ ಗಳನ್ನು ಸೂರ್ಯನೆಡೆಗೆ ಕೊಂಡೊಯ್ಯುತ್ತಿದೆ.

೧. ವಿಸಿಬಲ್‌ ಎಮಿಸನ್‌ ಲೈನ್ ಕೊರೊನಾಗ್ರಾಫ್‌(ವಿಇಎಲ್‌ ಸಿ) ೨. ಸೋಲಾರ್‌ ಅಲ್ಟ್ರಾ ವೈಲೆಟ್‌ ಇಮೆಜಿಂಗ್‌ ಟೆಲಿಸ್ಕೋಪ್‌ (ಏಸ್ ಯುಐಟಿ) ೩. ಆದಿತ್ಯ ಸೋಲಾರ್‌ ವಿಂಡ್‌ ಪ್ರಾಕ್ಟಿಕಲ್‌ ಎಕ್ಸಪರಿಮೆಂಟ್‌ (ಎಎಸ್‌ ಪಿಇಎಕ್ಸ್) ೪. ಪ್ಲಾಸ್ಮಾ ಅನಾಲೈಸರ್‌ ಬಪ್ಯಾಕೇಜ್‌ ಫಾರ್‌ ಆದಿತ್ಯ (ಪಿಎಪಿಎ) ೫. ಸೋಲಾರ್‌ ಲೋ ಎನರ್ಜಿ ಎಕ್ಸ್‌ ರೇ ಸ್ಪೆಕ್ಟ್ರೋಮೀಟರ್ (ಸೊಲಾರ್‌ ಎಲ್‌ ಇ ಎಕ್ಸ್‌ ಎಸ್) ೬. ಹೈ ಎನೆರ್ಜಿ ಎಲ್‌- ೧ ಆರ್ಬಿಟಿಂಗ್‌ ಎಕ್ಸ್‌ ರೆ ಸ್ಪೆಕ್ಟ್ರೋ ಮೀಟರ್‌ (ಎಚಿಎಲ್‌೧ಒಎಸ್)  ೭. ಮ್ಯಾಗ್ನೆಟೋಮೀಟರ್‌ ಉಪಕರಣಗಳನ್ನು ಕೊಂಡೊಯ್ಯುತ್ತಿದ್ದು, ಇವುಗಳು ಸೂರ್ಯನ ಪ್ರಭಾಗೋಳ, ವರ್ಣಗೋಳ, ಕೊರೋನಾ(ಕಿರೀಟ)ದ ಅಧ್ಯಯನ ಹಾಗೂ ಸೂರ್ಯನ ಆಯಸ್ಕಾಂತೀಯ ವಲಯ ಮತ್ತು ಕಣ ಪ್ರವಾಹದ ವೀಕ್ಷಣೆ ಮಾಡಲಿವೆ.‌

ಆದಿತ್ಯ ಎಲ್‌ -೧ ನಲ್ಲಿರುವ ಎಲ್ಲಾ ಉಪಕರಣಗಳನ್ನು ಸ್ಥಳೀಯವಾಗಿಯೇ ತಯಾರಿಸಲಾಗಿದೆ ಎನ್ನುವುದು ಮತ್ತೊಂದು ವಿಶೇಷ. ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್ ಬೆಂಗಳೂರಿನಲ್ಲಿ ವಿಇಎಲ್‌ ಸಿ ನನ್ನು, ಪುಣೆಯ ಇಂಟರ್‌ ಯೂನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರೋನಾಮಿ ಅಂಡ್‌ ಆಸ್ಟ್ರೋಫಿಸಿಕ್ಸ್‌ ನಲ್ಲಿ  ಏಸ್ ಯುಐಟಿ ಉಪಕರಣವನ್ನು, ಫಿಸಿಕಲ್‌ ರಿಸರ್ಚ್‌ ಲ್ಯಾಬೋರೇಟರಿ ಅಹಮದಾಬಾದ್‌ ನಲ್ಲಿ ಎಎಸ್‌ ಪಿಇಎಕ್ಸ್ ಉಪಕರಣವನ್ನು, ತಿರುವನಂತಪುರದ ವಿಕ್ರಮ್ ಸಾರಾಭಾಯ್‌ ಸ್ಪೇಸ್‌ ಸೆಂಟರ್‌ ನ ಲ್ಯಾಬೋರೇಟರಿಯಲ್ಲಿ ಪಿಎಪಿಎ ಪೆಲೋಡ್‌ ನನ್ನು, ಯು ಆರ್‌ ರಾವ್‌ ಸ್ಯಾಟಲೈಟ್‌ ಸೆಂಟರ್‌ ಬೆಂಗಳೂರಿನಲ್ಲಿ ಸೊಲಾರ್‌ ಎಲ್‌ ಇ ಎಕ್ಸ್‌ ಎಸ್ ಮತ್ತು ಎಚ್‌ ಇಎಲ್‌೧ಒಎಸ್ ಪೆಲೋಡ್‌ ಗಳನ್ನು ಹಾಗೂ ಬೆಂಗಳೂರಿನ ಎಲೆಕ್ಟ್ರೋ ಆಪ್ಟಿಕ್ಸ್‌ ಸಿಸ್ಟಮ್ಸ್‌ ನ ಲ್ಯಾಬರೋಟರಿಯಲ್ಲಿ ಮ್ಯಾಗ್ನೆಟೋಮೀಟರ್‌ ಪೆಲೋಡ್‌ ನನ್ನು ಇಸ್ರೋ ಸಂಸ್ಥೆಯ ಮಾರ್ಗದರ್ಶನದೊಂದಿಗೆ ತಯಾರಿಸಲಾಗಿದೆ.

-ಶ್ರೀರಾಜ್ ವಕ್ವಾಡಿ

 

ʼಸೂರಿ ಮಾಣಿʼಯ ಹೋಟೆಲ್ ಬದುಕು ಮತ್ತು ಅವತಾರಗಳು

 


ನಷ್ಯ ಲೋಕ ಜೀವಿ. ಯಾರೇ ಆಗಲಿ ಲೋಕದಲ್ಲಿ ತನ್ನ ಬದುಕಿನಲ್ಲಿ ಏಳು ಬೀಳುಗಳನ್ನು ಕಾಣಲೇ ಬೇಕು. ಕಾಣುತ್ತಾನೆ ಕೂಡ. ಇದು ಈ ಲೋಕದಲ್ಲಿ ಅನಿವಾರ್ಯ. ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ನಾವು ನೀವು ಎಲ್ಲರೂ ಇಲ್ಲಿ ಒಂದೊಂದು ಬದುಕನ್ನು ಕಂಡವರು, ಒಂದೊಂದು ಅನುಭವ ಕಂಡವರು. ಒಬ್ಬೊಬ್ಬರ ಬದುಕು, ಅನುಭವಗಳಿಂದ ಒಂದು ಪುಸ್ತಕವೇ ರಚಿಸಿ ಬಿಡಬಹುದು. ಅಂತದಕ್ಕೆ ಒಂದು ಒಳ್ಳೆಯ ಉದಾಹರಣೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ, ಸಹೃದಯರೂ ಆದ ನೀಲಾವರ ಸುರೇಂದ್ರ ಅಡಿಗರು ಇತ್ತೀಚೆಗೆ ಬರೆದ ʼಸೂರಿ ಮಾಣಿʼ ಪುಸ್ತಕ.

ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಬೆಂಗಳೂರಿನ ʼಹೋಟೆಲ್ ಬದುಕಿನʼ ಅನುಭವಗಳನ್ನು ಹೃದಯಸ್ಪರ್ಶಿಯಾಗಿ ಅಡಿಗರು ಇಲ್ಲಿ ಹೆಣೆದಿದ್ದಾರೆ. ಒಬ್ಬ ಹೋಟೆಲ್ ಮಾಲೀಕ, ಹೋಟೆಲ್‌ ಕಾರ್ಮಿಕ ಹಾಗೂ ಹೋಟೆಲ್ ಗ್ರಾಹಕನ ದೃಷ್ಟಿಯಿಂದ ಅಡಿಗರು ನೋಡಿದ ನೋಟ ಈ ಕೃತಿಯಲ್ಲಿದೆ. ಹುಟೂರನ್ನು ಬಿಟ್ಟು ಇನ್ನೆಲ್ಲಿಗೊ ಉದ್ಯೋಗ ಅರಸಿ ಹೋಗುವವರ ಪಾಡು , ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಅವೆಲ್ಲಾ ಹೇಳಿ ತೀರಲಾಗದ ಸಂಕಟವೂ ಹೌದು. ಮನುಷ್ಯ ತನ್ನ ಬದುಕಿನಲ್ಲಿ ಯಾವುದರಿಂದ ಮುಕ್ತನಾದರೂ ಸಂಕಟಗಳಿಂದ ಬಹುಷಃ ಮುಕ್ತನಾಗಲಾರ. ಹಂತ ಹಂತಕ್ಕೆ ಆತನ ಬದುಕಿನ ಸ್ಥಿತಿ ಚೇತರಿಸಿಕೊಂಡರು ಸಂಕಟಗಳು ಆತನನ್ನು ಬಿಟ್ಟು ಬಿಡುವುದಿಲ್ಲ. ಅದರ ಸ್ವರೂಪ ಬೇರೆಯಾಗಿ ಆತನೊಂದಿಗೆ ಇರುತ್ತದೆ. ಇಲ್ಲಿನ ಪ್ರತಿ ಪುಟಗಳಲ್ಲಿ ಅಂತಹ ಸಂಕಟಗಳೇ ಹೆಚ್ಚು ಜಾಗ ಪಡೆದುಕೊಂಡಿವೆ. ಅಡಿಗರ ಅನುಭವದ ಧಾರೆ ಇಲ್ಲಿ ಓದುಗನಿಗೆ ಬದುಕು ಹೀಗೂ ಇರಬಹುದಾ ಅಂತನ್ನಿಸಿ ಕಣ್ಣೋಳಗೆ ಭಾವತೀವೃತೆಯನ್ನು ಹೆಚ್ಚು ಹೊತ್ತು ಕಾಲ ಉಳಿಸಿಕೊಳ್ಳದೆ ಹೊರ ಹಾಕದೇ ಇರಲಾಗದು ಎನ್ನುವುದಂತೂ ಪದಶಃ ಸತ್ಯ ಎನ್ನುವುದು ಅತಿಶಯೋಕ್ತಿ ಅಲ್ಲ.

ಶ್ರೀ ರಾಘವೇಂದ್ರ ಸ್ವಾಮಿ ಪ್ರಸನ್ನ ಹೋಟೆಲ್, ಹೊಟೇಲ್‌ ರಜನಿ, ಶೀ ದುರ್ಗಾ ರಿಫ್ರೆಶ್‌ ಮೆಂಟ್‌ ಹೊಟೇಲ್‌ ಗಳಲ್ಲಿ ಅಡಿಗರು ಕಂಡ ಅನುಭವಗಳೇ ಇಲ್ಲಿ ಒಬ್ಬ ಓದುಗನನ್ನು ಹೋಟೆಲ್ ತಿಂಡಿಗಳ ಸವಿಯ ಜೊತೆಗೆ ದುಃಖವನ್ನು ಉಣಬಡಿಸುತ್ತದೆ. ಹೋಟೆಲ್ ಕೆಲಸಕ್ಕೆ ಸೇರಿದ್ದರಿಂದ ಹಿಡಿದು, ತುಳಸಿ ಪಾರ್ಕ್‌ ಒಳಗಿರುವ ಬದುಕುಗಳ ವಿಹಂಗಮ ನೋಟ, ಕಾರ್ಮಿಕರ ಕಷ್ಟ, ವೃತಿ ಬದುಕಿನಲ್ಲಿ ಸಹದ್ಯೋಗಿಗಳೊಂದಿಗಿನ ಸಹಜ ವೈಮನಸ್ಸು, ಬೈಗುಳ, ವೃತ್ತಿ ನಿಷ್ಠೆ, ಸಿಟ್ಟು, ಸೆಡವು, ಸಾತ್ವಿಕ ಕೋಪ, ತಾಳ್ಮೆ, ಸಹನೆ, ಕಲಿಕೆ, ಬದುಕು ಎಲ್ಲವೂ ಇಲ್ಲಿ ಒಟ್ಟು ಸೇರಿವೆ. ಇದರೊಂದಿಗೆ ಹದಗೆಟ್ಟ ಮೈಸೂರು ಪಾಕ್‌ ನಿಂದ ತಯಾರಿಸುವ ʼಮಕ್ಮಲ್‌ ಪೂರಿʼ, ಬೆಳಗ್ಗೆ ಉಳಿದ ಚಿತ್ರಾನ್ನದಿಂದ ತಯಾರಿಸುವ ʼಮೋಹನ್‌ ಬಾತ್ʼ ಮತ್ತು ʼಬಾತ್‌ ಮಸಾಲʼ ಎಂಬ ಹೊಸ ಮಾದರಿಯ ಮಸಾಲೆ ದೋಸೆಗಳ ಆವಿಷ್ಕಾರಗಳನ್ನು ನೋಡಿದರೇ, ಇನ್ಮುಂದೆ ಹೋಟೆಲಿಗೆ ಹೋಗಿ ಹೊಸ ಬಗೆಯ ತಿಂಡಿ ಆರ್ಡರ್‌ ಮಾಡುವಾಗ ಈ ಪುಸ್ತಕ ನೆನಪಾಗಿ, ಒಮ್ಮೇ ಆ ತಿಂಡಿಯ ತಯಾರಿ ಯಾವುದರಿಂದಾಗಿರಬಹದು ಎಂಬುವುದನ್ನು ಯೋಚಿಸುವಂತೆ ಮಾಡದೆ ಇರಲಾರದು ಎನ್ನುವುದಂತೂ ಸತ್ಯ.

ಹೋಟೆಲು ಕಾರ್ಮಿಕನಾಗಿ, ಸಂಜೆ ಕಾಲೇಜಿನಲ್ಲಿ ಓದು ಮುಗಿಸಿ, ಕನ್ನಡ ಸಾಹಿತ್ಯದ ಬಗ್ಗೆ ಒಲವು ಇಟ್ಟುಕೊಂಡು, ಅದಕ್ಕಾಗಿ ಶ್ರಮವಹಿಸಿ, ಅದ್ಯಾಪಕರಾಗಿ, ಮಕ್ಕಳ ಪ್ರೀತಿಯ ಮೇಷ್ಟ್ರಾಗಿ, ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗುವ ತನಕ ಬೆಳೆದಿರುವುದು, ಬೆಳೆದು ಮಾದರಿಯಾಗಿಯೂ ಇರುವುದು ನಿಜಕ್ಕೂ ಶ್ಲಾಘನೀಯ. ಅವರ ಅಷ್ಟೂ ಅನುಭವವೇ ಇವತ್ತು ಇಷ್ಟು ಎತ್ತರವನ್ನು ಏರುವುದಕ್ಕೆ ಸಹಕಾರಿಯಾಗಿದೆ ಅಂತ ನನಗನ್ನಿಸುತ್ತದೆ. ಹೋಟೆಲು ಜೀವನದಲ್ಲಿ ಬರೇ ಹೋಟೆಲು ಕೆಲಸವಲ್ಲ, ಓದು, ಸಾಹಿತ್ಯ, ಕನಸು ಎಲ್ಲವೂ ಸೇರಿ ʼಸೂರಿ ಮಾಣಿʼ ಹೊರ ಬಂದಿದೆ.   

ಸುರೇಂದ್ರ ಅಡಿಗರ ಬರವಣಿಗೆ ಅವರ ಮಾತಿನಂತೆಯೇ ಸರಳ ಸುಂದರ. ಯಾರು ಬೇಕಾದರೂ ಓದಿ ಅರ್ಥೈಸಿಕೊಳ್ಳಬಹುದು. ಹಾಗೆಂದ ಮಾತ್ರಕ್ಕೆ ಪುಸ್ತಕದಲ್ಲಿ ಏನೂ ಇಲ್ಲ, ಗಟ್ಟಿತನವಿಲ್ಲ ಅಂತಲ್ಲ. ಹೇಳಬೇಕಾಗಿರುವುದನ್ನು ಸರಳೀಕರಿಸಿ, ಮನ ಮುಟ್ಟುವಂತೆ ಮಾಡುವ ಅವರ ಬರವಣಿಗೆ ಶೈಲಿ ಎಲ್ಲಾ ವಯಸ್ಸಿನ ಓದುಗರಿಗೂ ಹಿಡಿಸುತ್ತದೆ. ಮತ್ತು ತಲುಪುತ್ತದೆ. ʼಸೂರಿ ಮಾಣಿʼ ಇಲ್ಲಿ ಕಂಡಿದ್ದು ಕಷ್ಟವೇ ಇರಬಹುದು, ಆದರೆ.. ಎಂತಹ ಕಷ್ಟದಲ್ಲಿಯೂ ಪ್ರಯತ್ನ ಬಿಡಬಾರದು, ಕನಸು ಸುಟ್ಟುಕೊಳ್ಳಬಾರದು, ನಿರಂತರ ಶ್ರಮವಿದ್ದರೇ, ಜಯ ಕಂಡಿತ ಸಿಗುತ್ತದೆ ಎಂಬುವುದನ್ನು ಮಾರ್ಮಿಕವಾಗಿ ಈ ಕೃತಿಯಲ್ಲಿ ಹೇಳಿದ್ದಾರೆ. ಕೃತಿ ಓದಿಸಿಕೊಂಡು ಹೋಗುತ್ತದೆ. ನೀವೂ ಓದಿ.

-ಕಾವ್ಯ ಬೈರಾಗಿ
(ಶ್ರೀರಾಜ್‌ ವಕ್ವಾಡಿ)

Sunday, September 3, 2023

ಅಪ್ರಮೇಯ ಪ್ರೀತಿಯ ವಿರಹ ಗೀತೆ : ಸಪ್ತ ಸಾಗರದಾಚೆ ಎಲ್ಲೋ

ಪ್ರೀತಿಯ ಕೊನೆಯ ಉದ್ದೇಶ ಏನು? ಪ್ರೀತಿಸಿದವರನ್ನು ಚೆನ್ನಾಗಿ ಇಡಬಯಸುವುದಕ್ಕೆ ಆ ಸಂಬಂಧದಿಂದ ದೂರ ಹೋಗುವುದೇ ನಿಜವಾದ ಪ್ರೀತಿಯೇ ? ಪ್ರಿಯಾಳ ಮುಷ್ಟಿಯಷ್ಟೇ ಗಾತ್ರದ ಹೃದಯದಲ್ಲಿ ಸಾಗರದಷ್ಟು ಪ್ರೀತಿಯನ್ನು ಕಂಡ ಮನು. ಮನುಗಾಗಿ ಕಾಯುವ ಪ್ರಿಯಾ ಜೋಡಿಯ ಅಪ್ರಮೇಯ ಪ್ರೀತಿಯ ವಿರಹ ಗೀತೆ "ಸಪ್ತ ಸಾಗರದಾಚೆ ಎಲ್ಲೋ". 

ಮನು ಮತ್ತು ಪ್ರಿಯಾ ಪರಸ್ಪರ ಹಂಚಿಕೊಳ್ಳುವ ಅಥವಾ ಬದಲಾಯಿಸಿಕೊಳ್ಳುವ ಈ ಶುದ್ಧ ನಿರುಮ್ಮಳ ಪ್ರೀತಿಯನ್ನು ವೀಕ್ಷಕ ತನ್ನ ಕಣ್ಣೊಳಗೆ ಹೆಚ್ಹೊತ್ತು ಇಟ್ಟುಕೊಳ್ಳಲಾರ. ಇದೇ ಈ 'ಸಪ್ತ ಸಾಗರದಾಚೆ ಎಲ್ಲೋ'  ಸಿನೆಮಾದ 'ಸೈಡ್ ಎ' ನ ಹೆಚ್ಚುಗಾರಿಕೆ.‌ ಭಾವನೆಗಳು ಮತ್ತು ಸನ್ನಿವೇಶಗಳ ನಡುವೆ, ಪ್ರಯತ್ನ ಮತ್ತು ಸೋಲುಗಳ ನಡುವೆ, ಪ್ರೀತಿ ಮತ್ತು ಕನಸುಗಳ ನಡುವೆ, ಬದುಕು ಮತ್ತು ಬದುಕನ್ನು ಜೀವಿಸುವ ಬಯಕೆಗಳ ನಡುವೆ ನಡೆಯುವ ಸ್ಪರ್ಧೆಗಳನ್ನು ಪ್ರತಿ ದೃಶ್ಯಗಳಲ್ಲಿ ಕಣ್ತುಂಬಿಕೊಳ್ಳಬಹುದು. ಕಣ್ಣುಗಳಲ್ಲೇ ಮನು ಪ್ರಿಯಾ ಜೋಡಿ ಹಂಚಿಕೊಳ್ಳುವ ಪ್ರೀತಿ, ಬೆರಳುಗಳ ಹಿತವಾದ ಸ್ಪರ್ಶಗಳಲ್ಲೇ ಪುಳಕಗೊಳ್ಳುವ ಭಾವಗಳಲ್ಲೇ ಈ ಜೋಡಿ ತೆರೆ ಮೇಲೆ ಹೆಣೆದುಕೊಂಡಿವೆ. 

ಅಮಾಯಕನೋರ್ವ ಹೀಗೆ ಅನ್ಯಾಯಕ್ಕೊಳಗಾಗುವುದು ದಿನ ನಿತ್ಯ ಕಾಣುತ್ತಿರುವ ಸಂಗತಿ. ಅವನ ಪ್ರಯತ್ನಕ್ಕೆ ಪದೆ ಪದೆ ಬದುಕು ಸವಾಲುಗಳನ್ನು ಎಸೆಯುವುದು, ಎಲ್ಲಾ ಪ್ರಯತ್ನಗಳಿಗೆ ಸೋಲುಂಟಾಗುವುದು, ನಂಬಿಕೆಗಳು ಮರೆಯಾಗುವುದು, ಭರವಸೆಗಳು ಸುಳ್ಳಾಗುವುದು, ಹಣ  ಎಲ್ಲಾ ಅಹಂಕಾರವನ್ನು ಮೆರೆಯುವುದು, ಅನ್ಯಾಯವೇ ಗೆಲ್ಲುವುದು, ಸಾಕ್ಷಿಗಳು ಸುಳ್ಳು ಹೇಳುವುದು... ಇಂತವುಗಳಿಗೆ ಕೊನೆಯೇ ಇಲ್ಲವೇ ? ಅಂತನ್ನಿಸಿ ಬಿಡುತ್ತದೆ. ಪ್ರೀತಿಯ ಜೊತೆಗೆ ವೇದನೆ, ವ್ಯಥೆ, ನೋವು, ವಿರಹಗಳು, ಬದುಕಿಗಾಗಿ ಪರದಾಟ, ಹೋರಾಟ ಇಲ್ಲಿ ಹೆಚ್ಚು ಜಾಗ ಪಡೆದುಕೊಂಡಿವೆ. 

ನಿರ್ದೇಶಕ ಹೇಮಂತ್, ಮನು ಮತ್ತು ಪ್ರಿಯಾ ಜೋಡಿಯ ಪ್ರೀತಿಯ ಮೂಲಕ ಹೇಳಲು ಹೊರಟ ವಸ್ತು/ವಿಷಯ 'ಸೈಡ್ ಎ' ನಲ್ಲಿ ಬಹಳ ಸಾಮಾನ್ಯದ್ದನ್ನಿಸಿ ಬಹಳ ಸುದೀರ್ಘವಾಗಿ ಕಟ್ಟಿ ಕೊಟ್ಟಿದ್ದು ಕೆಲವು ಕಡೆ ಶುಷ್ಕ ಅಂತನ್ನಿಸುತ್ತದೆ. ಜೈಲು ಸನ್ನಿವೇಶಗಳು ಜಾಸ್ತಿ ಆಯ್ತು ಅಂತನ್ನಿಸುತ್ತದೆ. ಈ ದೃಶ್ಯಕಾವ್ಯದಲ್ಲಿ ಪ್ರೀತಿ, ಪ್ರೇಮ, ಕನಸುಗಳೊಂದಿಗೆ ಇನ್ನೂ ಏನೋ ಮಾಡಬಹುದಿತ್ತು ಎನ್ನುವುದನ್ನು ನಿರ್ದೇಶಕರು ತಳ್ಳಿಹಾಕಿದರೇನೋ ಅಂತನ್ನಿಸುತ್ತದೆ.  ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಕಣ್ಣು ತುಂಬಿಸುವಷ್ಟು ನಟಿಸಿದ್ದಾರೆ. ಎಲ್ಲಾ ಪೋಷಕ ಪಾತ್ರಗಳು ಜೀವ ತುಂಬಿಸಿವೆ. ಛಾಯಾಗ್ರಹಣ ಚೆನ್ನಾಗಿದೆ. 

'ಸೈಡ್ ಬಿ' ಬಗ್ಗೆ ನಿರ್ದೇಶಕರು ವೇಗದಲ್ಲೇ ಜಂಪ್ ಮಾಡಿರುವುದು 'ಸೈಡ್ ಎ' ನಲ್ಲೆ ಕಾಣಿಸುತ್ತದೆ. ಮುಂದೆ ಮನು ಮತ್ತು ಸುರಭಿ (ಚೈತ್ರಾ ಜೆ. ಆಚಾರ್ )ಜೋಡಿಯ ಬಗ್ಗೆ ಕುತೂಹಲವಿದೆ. 

- ಶ್ರೀರಾಜ್ ವಕ್ವಾಡಿ

Thursday, August 31, 2023

ಮತ್ತೆ ಮತ್ತೆ ಕಾಡುವ ಸೌಜನ್ಯ ಪ್ರಕರಣ

ಸಾಮಾಜಿಕ ವ್ಯವಸ್ಥೆಯ ʼಪುರುಷತ್ವʼ & ʼಹೆಣ್ತನʼದ ಹೇರಿಕೆಯೆ ಅಭದ್ರತೆಗೆ ಕಾರಣ !

ಮತ್ತೆ ಮತ್ತೆ ಸೌಜನ್ಯ ಪ್ರಕರಣ ಹಲವು ರೀತಿಯಲ್ಲಿ ಅನುಮಾನ ಹುಟ್ಟಿಸುತ್ತಿದೆ. ಸಂತೋಷ್‌ ರಾವ್‌ ಈ ಪ್ರಕರಣದಿಂದ ಖುಲಾಸೆಗೊಂಡ ಮೇಲೆ ಮತ್ತೆ ಪ್ರಕರಣ ಇನ್ನಷ್ಟು ಕಾವು ಪಡೆದುಕೊಂಡಿದೆ. ಸಾರ್ವಜನಿಕ ವಲಯದಲ್ಲಿ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಗ್ರಾಮ ಗ್ರಾಮಗಳಲ್ಲೂ, ಊರು ಊರುಗಳಲ್ಲೂ ಒಂದು ರೀತಿಯಲ್ಲಿ ಚಳುವಳಿಯಂತೆ ಮೂಡಿ, ಮನೆ ಮನೆಯಲ್ಲೂ ನಂಬಿಕೊಂಡು ಬಂದ ಒಂದು ಧಾರ್ಮಿಕ ಪವಿತ್ರ ಕ್ಷೇತ್ರದ ಆಡಳಿತ ವರ್ಗದ ಮೇಲೆ ಅನುಮಾನ ಹುಟ್ಟಿಸುವಂತೆ ಮಾಡಿದ ಪ್ರಕರಣವಿದು. ಈಗ ಈ ಸೌಜನ್ಯ ಪ್ರಕರಣದ ದಿಕ್ಕು ತಪ್ಪಿಸಿದ್ದೇ ಈ ಪ್ರಕರಣದ ಪ್ರಾಥಮಿಕ ತನಿಖಾ ಅಧಿಕಾರಿಗಳು ಎಂಬುವ ಸತ್ಯ ತೆರೆದುಕೊಳ್ಳುತ್ತಿದೆ ಅಂತನ್ನಿಸುತ್ತಿದೆ.

ಸಮಾಜದಲ್ಲಿ, ದೇಶದಲ್ಲಿ ಈವರೆಗೆ ಲೆಕ್ಕವನ್ನು ಮೀರಿ ಇಂತಹ ಪ್ರಕರಣಗಳು ನಡೆದಿವೆ. ಇಂತಹ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಏನಾಗುತ್ತದೆ ಎಂದರೇ, ಪ್ರಕರಣ  ಘಟಿಸಿದ ಮೇಲೆ ಒಂದು ದಿನದ ನಂತರವೋ ಅಥವಾ ಕೆಲವು ದಿನಗಳ ನಂತರವೋ ಪೊಲೀಸರು ಯಾರನ್ನು ಆರೋಪಿ ಎಂದು ಬಂಧಿಸುತ್ತಾರೋ ಅವರನ್ನೇ ನಿಜವಾದ ಅಪರಾಧಿಗಳೆಂದು ಸಂತ್ರಸ್ತ ಕುಟುಂಬ ನಂಬಿ, ಕೊನೆಯ ಪಕ್ಷ ಅಪರಾಧಿಗೆ ಶಿಕ್ಷೆಯಾಯಿತು ಅಂತ ಸುಮ್ಮನಾಗಿ ಬಿಡುತ್ತದೆ. ಆದರೇ, ಧರ್ಮಸ್ಥಳದ ಈ ಪ್ರಕರಣದಲ್ಲಿ ಹಾಗಾಗದಿರುವುದೇ ವಿಶೇಷ. ಸೌಜನ್ಯಳ ತಾಯಿ ಮತ್ತು ಅವರ ಕುಟುಂಬ ಅಂದಿನಿಂದ ಇಲ್ಲಿಯವರೆಗೆ ಹೇಳಿಕೊಂಡು ಬಂದಿದ್ದು ಮತ್ತು ಇವತ್ತಿಗೂ ಹೇಳುತ್ತಿರುವುದು ಸಂತೋಷ್‌ ರಾವ್‌ ಅತ್ಯಚಾರವೆಸಗಿದ್ದು ಅಲ್ಲವೇ ಅಲ್ಲ ಎಂದು. ಸೌಜನ್ಯ ಪರ ಹೋರಾಟಗಾರರೂ ಹೇಳುತ್ತಿರುವುದು ಇದನ್ನೇ. ನಿರ್ಭಯಾ, ಹತ್ರಾಸ್‌, ಆಂಧ್ರ ಪ್ರದೇಶದ ದಿಶಾ ಅತ್ಯಾಚಾರ ಪ್ರಕರಣದಂತಹ ಅನೇಕ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬ ಮತ್ತು ಸಾರ್ವಜನಿಕ ವಲಯವೂ ಕೂಡ ಪೊಲೀಸರು ಆರೋಪಿ ಎಂದು ಬಂಧಿಸಿದವರನ್ನೇ ಜರೆದಿದೆ, ದೋಷಿಗಳೆಂದು ಭಾವಿಸಿ ಗಲ್ಲು ಶಿಕ್ಷೆಗೂ ಆಗ್ರಹಿಸಿರುವುದನ್ನು ಇಡೀ ದೇಶ ಕಂಡಿದೆ. ಆದರೇ, ಈ ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ಪೊಲೀಸರು ಆರೋಪಿ ಎಂದು ಬಂಧಿಸಿದ ಸಂತೋಷ್‌ ರಾವ್‌ ನನ್ನು ಎಂದಿಗೂ ಕೂಡ ಅಪರಾಧಿ ಎಂಬ ಭಾವನೆಯಿಂದ ಸಂತ್ರಸ್ತ ಕುಟುಂಬವಾಗಲಿ, ಸೌಜನ್ಯ ಪರ ಹೋರಾಟಗಾರರಾಗಲಿ, ಸಾರ್ವಜನಿಕ ವಲಯವಾಗಲಿ ನೋಡಿಲ್ಲ. ಆತನನ್ನು ಅಪರಾಧಿ ಎಂದು ಒಪ್ಪಿಕೊಳ್ಳುವುದಕ್ಕೂ ತಯಾರಿಲ್ಲ. ಸಂತೋಷ್‌ ರಾವ್‌ ಒಬ್ಬ ಈ ಪ್ರಕರಣದಲ್ಲಿ ಅಮಾಯಕ, ಬಲಿಪಶು ಎಂದು ಹೇಳುತ್ತಲೇ ಬಂದಿದೆ. ಇಂದಿಗೂ ಅದನ್ನೇ ಮುಂದುವರಿಸಿದೆ. ಸಂತೋಷ್‌ ರಾವ್‌ ಖುಲಾಸೆಗೊಂಡಾಗ ಸೌಜನ್ಯಳ ತಾಯಿಯಾಗಲಿ, ಕುಟುಂಬವಾಗಲಿ ಒಂದಿನಿತೂ ಅಪರಾಧಿಯೊಬ್ಬನನ್ನು ಬಿಡುಗಡೆಗೊಳಿಸಲಾಗಿದೆ ಎಂದು ಕಾನೂನಿನ ವಿರುದ್ಧ ಮಾತನಾಡಿಲ್ಲ. ಒಂದಿನಿತೂ ಅಸಮಧಾನ ಪಟ್ಟುಕೊಂಡಿಲ್ಲ. ಇದೇ ಈ ಪ್ರಕರಣದ ಕುತೂಹಲ ತಿರುವು.  

ಗಮನಿಸಲೇ ಬೇಕಾದ ಮತ್ತೊಂದಿಷ್ಟು ಸಂಗತಿಗಳು ಇವೆ. ಸೌಜನ್ಯ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಾಕ್ಷಿಗಳ ಹೇಳಿಕೆಯ ಬಗ್ಗೆ ತನಿಖಾ ಸಂಸ್ಥೆ ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೆ ಕಾರಣವೇನು, ಕುತುಹೂಲದಿಂದ ಕಾಣದೇ ತನಿಖೆಯನ್ನು ಮುಗಿಸಿ ಬಿಟ್ಟಿತೆ ? ಸೌಜನ್ಯಳ ವೆಜಿನೈಲ್‌ ಸ್ವಾಬ್‌ ಬಗ್ಗೆ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಯಾಕೆ ? ಡಿ.ಎನ್‌.ಎ ತಜ್ಞ ಡಾ. ವಿನೋದ್‌ ಜೆ. ಲಕ್ಕಪ್ಪ ವಿಚಾರಣೆಯ ಸಂದರ್ಭದಲ್ಲಿ ಹೇಳಿಕೆ ಕೊಟ್ಟಿರುವ ಹಾಗೆ, ಸೌಜನ್ಯಳ ರಕ್ತದ ಮಾದರಿ ಹಾಗೂ ಆರೋಪಿಯ ಬಟ್ಟೆಯ ಸಾಕ್ಷ್ಯ ಮಾದರಿಯನ್ನು ಸಂಗ್ರಹಿಸುವಲ್ಲಿ ಪೊಲೀಸರು ವಿಫಲರಾಗಿದ್ಯಾಕೆ ? ಸೌಜನ್ಯ ಶವ ಪತ್ತೆಯಾಗುವ ಮುನ್ನಾ ದಿನವೇ ಧರ್ಮಸ್ಥಳದ ಧರ್ಮಾಧಿಕಾರಿಗಳು ಅಂದಿನ ಗೃಹಮಂತ್ರಿಗೆ ಯಾಕೆ ಫೋನ್‌ ಕಾಲ್‌ ಮಾಡಿ ತನಿಖೆ ನಡೆಸಿ ಅಂತ ಹೇಳಿದ್ದು ? ಈ ಪ್ರಕರಣ ಇಷ್ಟು ಮುಂದುವರಿಯುತ್ತದೆ  ಎಂದು ಮೊದಲೇ ಅವರಿಗೆ ಗೊತ್ತಿತ್ತೆ ಅಥವಾ ನೈಜ ಅತ್ಯಾಚಾರಿಗಳನ್ನು ರಕ್ಷಿಸುವುದಕ್ಕಾಗಿ ಪ್ರಭಾವ ಬೀರಿದರೆ ? ಹಾಗೂ ಇನ್ನೂ ಕೆಲವು ಅನುಮಾನಗಳ ಬಗ್ಗೆ ಆಕ್ರೋಶ ಸೌಜನ್ಯಳ ಪರ ಹೋರಾಟಗಾರರಲ್ಲಿ ಇದೆ, ಸೌಜನ್ಯಳ ಕುಟುಂಬಕ್ಕಿದೆ. ಸೌಜನ್ಯ ಎಂಬ ಕನಸು ಕಂಗಳ ಎಳೆಯ ಹೆಣ್ಣು ಮಗಳನ್ನು ಬಲವಂತವಾಗಿ ಕಾಮ ತೃಷೆಗೆ ಎಳೆದುಕೊಂಡರಲ್ಲಾ ಎಂಬ ಸಿಟ್ಟು ಈಗ ಸೌಜನ್ಯಳ ಕುಟುಂಬದಿಂದ ಇಡೀ ಸಾರ್ವಜನಿಕ ವಲಯಕ್ಕೆ ಹಬ್ಬಿದೆ. ಪ್ರಕರಣ ನಡೆದು ಹನ್ನೊಂದು ವರ್ಷಗಳಾದ ಮೇಲೂ ಇದು ಇನ್ನೂ ಹನ್ನೊಂದು ವರ್ಷಗಳ ಹಿಂದೆ ಇದ್ದ ಕಾವನ್ನೇ ಉಳಿಸಿಕೊಂಡಿದೆ.  ದಿನೇ ದಿನೆ ಚಳುವಳಿಯಂತೆ ಹಬ್ಬಿದ ಸೌಜನ್ಯ ಪರ ಹೋರಾಟ  ಮತ್ತಷ್ಟು ಹೆಚ್ಚು ಕಾವು ಪಡೆದುಕೊಳ್ಳುತ್ತಿದೆ.

ಇನ್ನು, ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಆರೋಪ ಇರುವವರು ಈಗ ಅಲ್ಲಿ ಇಲ್ಲಿ ಅಂತ ಧಾರ್ಮಿಕ ಪವಿತ್ರ ಕ್ಷೇತ್ರಗಳಲ್ಲಿ ಮಾಡುತ್ತಿರುವ ಪ್ರಾರ್ಥನೆ/ಪ್ರಮಾಣಗಳ ಬಗ್ಗೆ ಅನುಮಾನ ಕಾಡುತ್ತಿದೆ. ಅಣ್ಣಪ್ಪ ಸ್ವಾಮಿ ಎದುರು ಆರೋಪ ಇರುವ ʼಆʼ ಮೂವರು ಇತ್ತೀಚೆಗೆ ಮಾಡಿರುವ ಪ್ರಾರ್ಥನೆ/ಪ್ರಮಾಣದ ಬಗ್ಗೆಯೂ ಈಗ ಅನುಮಾನ ಹುಟ್ಟಿಸುತ್ತಿದೆ. “ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಕ್ಷೇತ್ರದಲ್ಲಿ ಒಂದು ʼದುರ್ಮರಣʼ ಆಗಿರುತ್ತದೆ. ಆ ದುರ್ಮರಣಕ್ಕೂ, ನಮ್ಮ ಮೂವರಿಗೂ ಯಾವುದೇ  ಸಂಬಂಧವಿಲ್ಲ ಅಂತ ಕಾನೂನು ಹಾಗೂ ನ್ಯಾಯಾಂಗದಲ್ಲಿ ಸಾಬೀತಾಗಿರುತ್ತದೆ. ಆದರೂ ನಮ್ಮ ಮೇಲೆ ವಿನಾಕಾರಣ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ಶಿಕ್ಷೆಯಾಗಬೇಕು ಅಂತ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ. ನಾವು ತಪ್ಪು ಮಾಡಿಲ್ಲ. ನಮ್ಮ ಬಗ್ಗೆ ಹೇಳುವವರಿಗೆ ಸರಿಯಾದ ಶಿಕ್ಷೆಯನ್ನು ಕೊಡಬೇಕು” ಎಂದು ʼಆʼ ಮೂವರು ಮಾಡಿರುವ ಪ್ರಾರ್ಥನೆಯಲ್ಲಿ ಸಾಕಷ್ಟು ಅನುಮಾನ ಕಾಡುತ್ತಿದೆ. ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಯಾಕೆ ʼಆʼ ಮೂವರು ಹೇಳಿಲ್ಲ ? ದುರ್ಮರಣ ಎನ್ನುವುದಕ್ಕೂ ಅತ್ಯಾಚಾರ ಮತ್ತು ಕೊಲೆ ಎನ್ನುವುದಕ್ಕೂ ದೊಡ್ಡ  ವ್ಯತ್ಯಾಸವಿದೆ. ನಮ್ಮ ಬಗ್ಗೆ ಅಪಪ್ರಚಾರ ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಕೇಳಿಕೊಂಡಿದ್ದರೆಯೇ ಹೊರತು ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲಿ ಅಂತ ಕೇಳಿಕೊಂಡಿಲ್ಲ ಯಾಕೆ ? ಅಲ್ಲಿ ಅವರು ಹೇಳಿರುವ ಆ ʼದುರ್ಮರಣʼ ಯಾವುದು ? ಅಣ್ಣಪ್ಪ ಸ್ವಾಮಿ ಎದುರು ʼಆʼ ಮೂವರು ಸುಳ್ಳು ಪ್ರಾರ್ಥನೆ/ಪ್ರಮಾಣ ಮಾಡಿದರೆ ? ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಅಂತ ಎಲ್ಲಿಯೂ ಅವರು ಬಳಸದಿರುವುದಕ್ಕೆ ಕಾರಣವೇನು ? ಈ ಆಣೆ ಪ್ರಮಾಣಗಳಿಂದ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನಕ್ಕೆ ಪ್ರಭಾವಿಗಳು ಮುಂದಾದರೆ ? ಎನ್ನುವುದು ಈಗ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿರುವ ಅನುಮಾನಗಳು. ಭಾರತದಂತಹ ದೇಶ ಹಿಂದಿನಿಂದಲೂ ದೇವರು, ನಂಬಿಕೆ, ಭಕ್ತಿ, ಶ್ರದ್ಧೆ, ಭಯ, ಭೀತಿ, ಆಚರಣೆಯನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬಂದಿದೆ. ಕಾನೂನು ನ್ಯಾಯ ಕೊಡದಿದ್ದರೂ ದೇವರು ನ್ಯಾಯ ಕೊಡುತ್ತಾನೆ ಎನ್ನುವ ನಂಬಿಕೆ. ಈ ಸೌಜನ್ಯ ಪ್ರಕರಣವೂ ಈ ಮುಖದೆಡೆಗೆ ತಿರುಗುವುದಕ್ಕೆ ಕಾರಣವೂ ಕಾನೂನಿನಲ್ಲಿನ ಅವಿಶ್ವಾಸ ಮತ್ತು ತನಿಖೆಗಳು ಪ್ರಭಾವಿಗಳನ್ನು ರಕ್ಷಿಸಿದ್ದಕ್ಕಾಗಿಯೇ ಹೋರತು ಬೇರೆ ಏನಿಲ್ಲ. ಆದರೇ, ಈ ನಂಬಿಕೆಗಳು ಕೂಡ ಈಗ ಮಾರಾಟವಾಗಿ ಬಿಟ್ಟಿದೆ. ಆಣೆ ಪ್ರಮಾಣಗಳು ದಿಕ್ಕು ತಪ್ಪಿಸುವ ಅಸ್ತ್ರವಾಗಿ ಬಿಟ್ಟಿವೆ. ಇವೆಲ್ಲಾ ಸಮಾಜ ತನಗಾಗಿ ಅಥವಾ ತನ್ನ ಹಿತಾಸಕ್ತಿಗಾಗಿ ಸೃಷ್ಟಿಸಿಕೊಂಡ ಮಾರ್ಗಗಳಾಗಿ ಬದಲಾದಂತಿವೆ. ಇಲ್ಲಿಯೂ ನ್ಯಾಯ ಇಲ್ಲ. ಇಲ್ಲಿಯೂ ಪ್ರಭಾವಿಗಳನ್ನು ರಕ್ಷಿಸುವ, ಇಲ್ಲದವರನ್ನು ಗೌಣವಾಗಿಸುವ ವ್ಯವಸ್ಥೆ ಇಲ್ಲಿ ಸೃಷ್ಟಿಯಾಗಿದೆ. ಇನ್ನೊಂದೆಡೆ ಸೌಜನ್ಯಳ ಕುಟುಂಬದ ಗೊಂದಲ ಹುಟ್ಟಿಸುವ ಹೇಳಿಕೆಗಳ ಬಗ್ಗೆ ಕೂಡ ಸಾಮಾಜಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಸೌಜನ್ಯಳ ತಾಯಿ ವೇದಿಕೆಯ ಮೇಲೆ ಆಡುವ ಮಾತುಗಳೆಲ್ಲಾ ಈಗೀಗ ನಾಟಕೀಯವಾಗಿ ಹೊರಬರುತ್ತಿವೆ. ಮಗಳು ಕೊಲೆ ಮತ್ತು ಅತ್ಯಚಾರವಾಗಿ ಮೃತರಾಗಿರುವುದಕ್ಕೆ ಎಂಥಾ ನೋವಿದ್ದರೂ, ಹೋರಾಟಗಾರರ ಬಲವಂತಕ್ಕೆ ಎಂಬಂತೆ ಆಕೆ ಮಾತಾಡುತ್ತಿದ್ದಾರೆ, ಕಣ್ಣೀರಿಲ್ಲದೆ ಅಳುವ ಧ್ವನಿ ಮಾಡಿ ಮಾತಾಡುತ್ತಾರೆ, ಸೆರಗು ಒಡ್ಡುತ್ತಾರೆ ಎಂಬ ಟೀಕೆಗಳೂ ಕೇಳಿ ಬರುತ್ತಿವೆ.                 

ಏನೇ ಇರಲಿ, ಹೀಗೆ ಯಾರದ್ದೋ ಕಾಮ ತೃಷೆಗೆ ಬಲಿಯಾಗಿ ಹೋದ ಹೆಣ್ಣು ಮಕ್ಕಳಿಗೆ ಸಿಗಬೇಕಾದ ನ್ಯಾಯಕ್ಕಾಗಿ ನಿಲ್ಲಬೇಕಾಗಿರುವವರು ಯಾರು ? ಇಡೀ ಸಮಾಜದ ಜವಾಬ್ದಾರಿ ಇದೆ. ಸಮಾಜದಲ್ಲಿ ಹೆಣ್ಣಿಗೆ ಸಿಗಲೇ ಬೇಕಾದ ನ್ಯಾಯದ ಬಗ್ಗೆ ಸದಾ ಚಿಂತನೆ ಮಾಡುವ ಸ್ತ್ರೀವಾದ ಈ ಪ್ರಕರಣದ ಬಗ್ಗೆ ಮಾತಾಡುವುದಕ್ಕೆ ಅಥವಾ ಹೋರಾಟ ಮಾಡುವುದಕ್ಕೆ ಹಿಂದ್ಹೆಜ್ಜೆ ಇಟ್ಟಿದ್ದು ಯಾಕೆ ಎನ್ನುವುದೇ ಒಂದು ಪ್ರಶ್ನೆಯಾಗಿ ಉಳಿದಿದೆ ಅಂತ ಅನ್ನಿಸುತ್ತದೆ. ಈ ಬಗ್ಗೆ ಹೇಳುವುದಕ್ಕೆ ಹೋದರೇ, ಒಂದು ಧಂಗೆಯೇ ಏಳಬಹುದೇನೋ ಆದರೇ, ಈ ಪ್ರಕರಣದಲ್ಲಿ ʼಸ್ತ್ರೀವಾದʼ ಮಾತು ಆಡಿದ್ದು ಕಡಿಮೆ ಎನ್ನುವುದು ಸತ್ಯ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ರೋಗವಿದೆ. ಪುರುಷತ್ವವನ್ನು ಈ ಸಮಾಜ ಹೇರುವುದನ್ನು ಕಲಿತು ಬಿಟ್ಟಿದೆ. ಇದು ಪುರುಷನೋರ್ವನ ಸಹಜ ಮನುಷ್ಯ ಗುಣಗಳ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಿದೆ ಮತ್ತು ಬೀರುತ್ತದೆ ಎಂಬುವುದನ್ನು ಈ ಸಾಮಾಜಿಕ ವ್ಯವಸ್ಥೆಯ ಸಿದ್ಧ ಮಾದರಿ ಸೃಷ್ಟಿಯಾಗುವುದಕ್ಕೂ ಮುನ್ನ ಅದರ ಪರೀಧಿಯೊಳಗೆ ಇದ್ದಿರಲಿಕ್ಕಿಲ್ಲ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಹೇಗೆ ಹೆಣ್ಣು ಹೆಣ್ಣಾಗಿ ಬದುಕಬೇಕು ಎಂಬ ಹೆಣ್ತನದ ವ್ಯಕ್ತಿತ್ವವನ್ನು ಹೇಗೆ ಬಲವಂತವಾಗಿ ಹೇರುವುದಕ್ಕೆ ಪ್ರಾರಂಭಿಸಿದಾಗ ಆಕೆಯ ವ್ಯಕ್ತಿ ಸಹಜ ಗುಣಗಳು ಒಳಗೆ ಅವಿತುಕೊಂಡು ಬದುಕುವಂತಾಯ್ತು. ಗಂಡಸು ʼಪುರುಷತ್ವʼ ತೋರಿಸಬೇಕು, ಹೆಣ್ಣು ʼಹೆಣ್ತನʼದಿಂದ ಬದುಕಬೇಕು ಎಂಬ ಈ ಸಾಮಾಜಿಕ ವ್ಯವಸ್ಥೆ ಸೃಷ್ಟಿಸಿದ ಸಿದ್ಧ ಮಾದರಿಯನ್ನು ಮೀರದಿದ್ದರೇ ಅಥವಾ ಒಡೆಯದಿದ್ದರೇ ಬಹುಶಃ ನಾಳೆಯ ದಿನಗಳು ಕಷ್ಟವಿದೆ ಅಂತನ್ನಿಸುತ್ತಿದೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಂತಹುದರಲ್ಲಿ ಇದೇ ʼಪುರುಷತ್ವʼ ತಾಂಡವ ಆಡುವುದು.  ಮತ್ತು ಆಡುತ್ತಿರುವುದು.

ಈ ಸಾಮಾಜಿಕ ವ್ಯವಸ್ಥೆಯಲ್ಲಿ ಇಂದಿಗೂ ಇದೊಂದು ಪಿಡುಗಾಗಿ ಉಳಿದಿರುವುದು ದುರಂತ.  ಆಧುನಿಕ ಯುಗದ ಸಮಾಜದಲ್ಲಿಯೂ, ಪ್ರಜಾಪ್ರಭುತ್ವದಲ್ಲಿಯೂ ಇಂತಹ ಪಿಡುಗನ್ನು ಬೇರು ಸಹಿತ ಕಿತ್ತು ಎಸೆಯುವ ವ್ಯವಸ್ಥೆ ಇಲ್ಲದಿರುವುದಕ್ಕಾಗಿಯೇ ಸೌಜನ್ಯ ಕೊಲೆ ಮತ್ತು ಅತ್ಯಾಚಾರದಂತಹ ಪ್ರಕರಣಗಳನ್ನು ಸಮಾಜದಲ್ಲಿ ನಿರಂತರವಾಗಿ ಘಟಿಸುತ್ತಿವೆ. ಈ ಸಮಾಜ ಅಭದ್ರ ಕೋಟೆಯಾಗಿಯೇ ಉಳಿದಿದೆ.

-ಶ್ರೀರಾಜ್‌ ವಕ್ವಾಡಿ.