Sunday, September 3, 2023

ಅಪ್ರಮೇಯ ಪ್ರೀತಿಯ ವಿರಹ ಗೀತೆ : ಸಪ್ತ ಸಾಗರದಾಚೆ ಎಲ್ಲೋ

ಪ್ರೀತಿಯ ಕೊನೆಯ ಉದ್ದೇಶ ಏನು? ಪ್ರೀತಿಸಿದವರನ್ನು ಚೆನ್ನಾಗಿ ಇಡಬಯಸುವುದಕ್ಕೆ ಆ ಸಂಬಂಧದಿಂದ ದೂರ ಹೋಗುವುದೇ ನಿಜವಾದ ಪ್ರೀತಿಯೇ ? ಪ್ರಿಯಾಳ ಮುಷ್ಟಿಯಷ್ಟೇ ಗಾತ್ರದ ಹೃದಯದಲ್ಲಿ ಸಾಗರದಷ್ಟು ಪ್ರೀತಿಯನ್ನು ಕಂಡ ಮನು. ಮನುಗಾಗಿ ಕಾಯುವ ಪ್ರಿಯಾ ಜೋಡಿಯ ಅಪ್ರಮೇಯ ಪ್ರೀತಿಯ ವಿರಹ ಗೀತೆ "ಸಪ್ತ ಸಾಗರದಾಚೆ ಎಲ್ಲೋ". 

ಮನು ಮತ್ತು ಪ್ರಿಯಾ ಪರಸ್ಪರ ಹಂಚಿಕೊಳ್ಳುವ ಅಥವಾ ಬದಲಾಯಿಸಿಕೊಳ್ಳುವ ಈ ಶುದ್ಧ ನಿರುಮ್ಮಳ ಪ್ರೀತಿಯನ್ನು ವೀಕ್ಷಕ ತನ್ನ ಕಣ್ಣೊಳಗೆ ಹೆಚ್ಹೊತ್ತು ಇಟ್ಟುಕೊಳ್ಳಲಾರ. ಇದೇ ಈ 'ಸಪ್ತ ಸಾಗರದಾಚೆ ಎಲ್ಲೋ'  ಸಿನೆಮಾದ 'ಸೈಡ್ ಎ' ನ ಹೆಚ್ಚುಗಾರಿಕೆ.‌ ಭಾವನೆಗಳು ಮತ್ತು ಸನ್ನಿವೇಶಗಳ ನಡುವೆ, ಪ್ರಯತ್ನ ಮತ್ತು ಸೋಲುಗಳ ನಡುವೆ, ಪ್ರೀತಿ ಮತ್ತು ಕನಸುಗಳ ನಡುವೆ, ಬದುಕು ಮತ್ತು ಬದುಕನ್ನು ಜೀವಿಸುವ ಬಯಕೆಗಳ ನಡುವೆ ನಡೆಯುವ ಸ್ಪರ್ಧೆಗಳನ್ನು ಪ್ರತಿ ದೃಶ್ಯಗಳಲ್ಲಿ ಕಣ್ತುಂಬಿಕೊಳ್ಳಬಹುದು. ಕಣ್ಣುಗಳಲ್ಲೇ ಮನು ಪ್ರಿಯಾ ಜೋಡಿ ಹಂಚಿಕೊಳ್ಳುವ ಪ್ರೀತಿ, ಬೆರಳುಗಳ ಹಿತವಾದ ಸ್ಪರ್ಶಗಳಲ್ಲೇ ಪುಳಕಗೊಳ್ಳುವ ಭಾವಗಳಲ್ಲೇ ಈ ಜೋಡಿ ತೆರೆ ಮೇಲೆ ಹೆಣೆದುಕೊಂಡಿವೆ. 

ಅಮಾಯಕನೋರ್ವ ಹೀಗೆ ಅನ್ಯಾಯಕ್ಕೊಳಗಾಗುವುದು ದಿನ ನಿತ್ಯ ಕಾಣುತ್ತಿರುವ ಸಂಗತಿ. ಅವನ ಪ್ರಯತ್ನಕ್ಕೆ ಪದೆ ಪದೆ ಬದುಕು ಸವಾಲುಗಳನ್ನು ಎಸೆಯುವುದು, ಎಲ್ಲಾ ಪ್ರಯತ್ನಗಳಿಗೆ ಸೋಲುಂಟಾಗುವುದು, ನಂಬಿಕೆಗಳು ಮರೆಯಾಗುವುದು, ಭರವಸೆಗಳು ಸುಳ್ಳಾಗುವುದು, ಹಣ  ಎಲ್ಲಾ ಅಹಂಕಾರವನ್ನು ಮೆರೆಯುವುದು, ಅನ್ಯಾಯವೇ ಗೆಲ್ಲುವುದು, ಸಾಕ್ಷಿಗಳು ಸುಳ್ಳು ಹೇಳುವುದು... ಇಂತವುಗಳಿಗೆ ಕೊನೆಯೇ ಇಲ್ಲವೇ ? ಅಂತನ್ನಿಸಿ ಬಿಡುತ್ತದೆ. ಪ್ರೀತಿಯ ಜೊತೆಗೆ ವೇದನೆ, ವ್ಯಥೆ, ನೋವು, ವಿರಹಗಳು, ಬದುಕಿಗಾಗಿ ಪರದಾಟ, ಹೋರಾಟ ಇಲ್ಲಿ ಹೆಚ್ಚು ಜಾಗ ಪಡೆದುಕೊಂಡಿವೆ. 

ನಿರ್ದೇಶಕ ಹೇಮಂತ್, ಮನು ಮತ್ತು ಪ್ರಿಯಾ ಜೋಡಿಯ ಪ್ರೀತಿಯ ಮೂಲಕ ಹೇಳಲು ಹೊರಟ ವಸ್ತು/ವಿಷಯ 'ಸೈಡ್ ಎ' ನಲ್ಲಿ ಬಹಳ ಸಾಮಾನ್ಯದ್ದನ್ನಿಸಿ ಬಹಳ ಸುದೀರ್ಘವಾಗಿ ಕಟ್ಟಿ ಕೊಟ್ಟಿದ್ದು ಕೆಲವು ಕಡೆ ಶುಷ್ಕ ಅಂತನ್ನಿಸುತ್ತದೆ. ಜೈಲು ಸನ್ನಿವೇಶಗಳು ಜಾಸ್ತಿ ಆಯ್ತು ಅಂತನ್ನಿಸುತ್ತದೆ. ಈ ದೃಶ್ಯಕಾವ್ಯದಲ್ಲಿ ಪ್ರೀತಿ, ಪ್ರೇಮ, ಕನಸುಗಳೊಂದಿಗೆ ಇನ್ನೂ ಏನೋ ಮಾಡಬಹುದಿತ್ತು ಎನ್ನುವುದನ್ನು ನಿರ್ದೇಶಕರು ತಳ್ಳಿಹಾಕಿದರೇನೋ ಅಂತನ್ನಿಸುತ್ತದೆ.  ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಕಣ್ಣು ತುಂಬಿಸುವಷ್ಟು ನಟಿಸಿದ್ದಾರೆ. ಎಲ್ಲಾ ಪೋಷಕ ಪಾತ್ರಗಳು ಜೀವ ತುಂಬಿಸಿವೆ. ಛಾಯಾಗ್ರಹಣ ಚೆನ್ನಾಗಿದೆ. 

'ಸೈಡ್ ಬಿ' ಬಗ್ಗೆ ನಿರ್ದೇಶಕರು ವೇಗದಲ್ಲೇ ಜಂಪ್ ಮಾಡಿರುವುದು 'ಸೈಡ್ ಎ' ನಲ್ಲೆ ಕಾಣಿಸುತ್ತದೆ. ಮುಂದೆ ಮನು ಮತ್ತು ಸುರಭಿ (ಚೈತ್ರಾ ಜೆ. ಆಚಾರ್ )ಜೋಡಿಯ ಬಗ್ಗೆ ಕುತೂಹಲವಿದೆ. 

- ಶ್ರೀರಾಜ್ ವಕ್ವಾಡಿ

No comments:

Post a Comment