Thursday, December 12, 2024

ಸಿದ್ದರಾಮಯ್ಯರ ʼಅಹಿಂದ ಬಲʼದ ನೆರಳಲ್ಲೇ ಡಿಕೆಶಿ ಮಾಸ್ಟರ್‌ ಪ್ಲ್ಯಾನ್‌

 


ʼಸಿಎಂ ಪದವಿ ಹಸ್ತಾಂತರʼ ವಿಶ್ವಾಸಾತ್ಮಕವಾಗಿ ನಡೆಯಬೇಕೆನ್ನುವುದೇ ಡಿಕೆಶಿ ಗುರಿ !

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ನಡುವೆ ʼಸಿಎಂ ಪದವಿʼ ಹಂಚಿಕೆಯ ಒಪ್ಪಂದ ಆಗಿರುವ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾರಿ ಬಹುಮತದೊಂದಿಗೆ ಗೆದ್ದು ಬೀಗಿದ ರಾಜ್ಯ ಕಾಂಗ್ರೆಸ್‌ ಸರ್ಕಾರದ ನೇತೃತ್ವ ವಹಿಸಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಹೈಕಮಾಂಡ್‌ ಮುಂದೆ ತಮ್ಮ ಪ್ರಭಾವ ತೋರಿಸಿದ್ದರು. ಡಿಕೆಶಿ ಅವರನ್ನು ಸಮಾಧಾನಗೊಳಿಸುವುದಕ್ಕೆ ಹೈಕಮಾಂಡ್‌ಗೆ ವಾರಕ್ಕೂ ಹೆಚ್ಚು ಕಾಲ ಬೇಕಾಯಿತು. ಕಾಂಗ್ರೆಸ್‌ ಒಳಗಿನ ಈ ಗೊಂದಲ ಪ್ರತಿಪಕ್ಷಗಳ ಪಾಲಿಗೆ ರಾಜಕೀಯ ಅಸ್ತ್ರವಾಗಿ ಸಿಕ್ಕಿತ್ತು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಡಿಕೆಶಿ ʼಸಿಎಂ ಪದವಿ ಹಂಚಿಕೆʼಯ ಒಪ್ಪಂದ ಆಗಿರುವುದರ ಬಗ್ಗೆ ಹೇಳಿಕೊಂಡಿದ್ದರಿಂದ ಆ ವಿಷಯ ಮತ್ತೆ ಮೇಲೆ ಬಂದಿದೆ. ಸಿಎಂ ಸಿದ್ದರಾಮಯ್ಯ ಇದನ್ನು ತಳ್ಳಿ ಹಾಕಿದ್ದಾರೆ. ಇನ್ನು, ಈಚೆಗೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮೂರಕ್ಕೆ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಅದರಲ್ಲೂ ಒಕ್ಕಲಿಗ ಪ್ರಾಬಲ್ಯವಿರುವ ಚೆನ್ನಪಟ್ಟಣದಲ್ಲಿ ಕಾಂಗ್ರೆಸ್‌ ಗೆದ್ದಿರುವುದು ಡಿಕೆಶಿ ಬಲ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪದವಿ ಒಪ್ಪಂದದ ದೊಡ್ಡ ರಾಜಕೀಯ ಪ್ರಹಸನಕ್ಕೆ ಮಾಜಿ ಪ್ರಧಾನಿ ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ನಡೆದ ಕಾಂಗ್ರೆಸ್ ನ ಬೃಹತ್ ಜನ ಕಲ್ಯಾಣ ಸಮಾವೇಶದ ಮೂಲಕ ಕಾಂಗ್ರೆಸ್‌ ಸಿದ್ಧತೆ ನಡೆಸಿದೆ ಎಂದೇ ಕಾಣಿಸುತ್ತಿದೆ.

ವಿಧಾನಸಭಾ ಚುನಾವಣೆಗೂ ಮುನ್ನಾ 2022ರಲ್ಲಿ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ನಡೆದಿತ್ತು. ದಾವಣಗೆರೆ ಸಮಾವೇಶದಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ಲಸ್‌ ಆಗಿತ್ತು. ಆದರೇ, ಅಧಿಕಾರ ಹಿಡಿದ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಲು ಸಾಲು ವಿವಾದಕ್ಕೀಡಾಗಿದೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ಅಬಕಾರಿ ಇಲಾಖೆ ಭ್ರಷ್ಟಾಚಾರ, ವಕ್ಫ್‌ ಭೂ ವಿವಾದ, ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಮರ, ಗುತ್ತಿಗೆದಾರರ ಕಮಿಷನ್‌ ಆರೋಪ, ಗ್ಯಾರಂಟಿ ಯೋಜನೆ ಮಿತಿ ವಿವಾದ, ರೇಷನ್‌ ಕಾರ್ಡ್‌ ರದ್ದು ವಿಚಾರ ಸೇರಿದಂತೆ ಹಲವು ವಿವಾದಗಳು ರಾಜ್ಯ ಸರ್ಕಾರಕ್ಕೆ ಕಾಡಿವೆ. ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಕಾಂಗ್ರೆಸ್‌ಗಿಂತ ಹೆಚ್ಚಾಗಿ ಸಿಎಂ ಸಿದ್ದರಾಮಯ್ಯ ಅವರನ್ನೇ ರಾಜಕೀಯವಾಗಿ ಟಾರ್ಗೇಟ್‌ ಮಾಡುವುದಕ್ಕೆ ಈ ಎಲ್ಲಾ ವಿವಾದಗಳು ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಕಾಂಗ್ರೆಸ್‌ಗೆ ಇವೆಲ್ಲವುಗಳಿಂದ ಹೊರ ಬರಲು ಉಪ ಚುನಾವಣೆಯ ಫಲಿತಾಂಶ ದೊಡ್ಡ ಮಟ್ಟದಲ್ಲೇ ಸಹಕರಿಸಿತು ಎಂದರೇ ತಪ್ಪಿಲ್ಲ. ಈ ಬೆನ್ನಲ್ಲೇ, ಕಾರ್ಯಕರ್ತರು, ಜನರ ವಿಶ್ವಾಸ ಮರಳಿ ಗಳಿಸಲು ಬೃಹತ್‌ ಮಟ್ಟದಲ್ಲಿಯೇ ಸರ್ಕಾರಿ ಹಾಗೂ ರಾಜಕೀಯ ಸಮಾವೇಶವನ್ನು ಮಾಜಿ ಪ್ರಧಾನಿ ದೇವೇಗೌಡರ ಕರ್ಮಭೂಮಿಯಲ್ಲೇ ಕಾಂಗ್ರೆಸ್ ನಡೆಸಿರುವುದರ ಹಿಂದೆ ಎರಡೆರಡು ಉದ್ದೇಶ ಎದ್ದು ಕಾಣುತ್ತಿವೆ.

2005ರಲ್ಲಿ ಸಿದ್ದರಾಮಯ್ಯ ಎಚ್.‌ ಡಿ. ದೇವೇಗೌಡರ ಜೆಡಿಎಸ್ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಸಿಟ್ಟಿಗೆದ್ದ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ಹುಬ್ಬಳ್ಳಿಯಲ್ಲಿ ಬೃಹತ್‌ ಅಹಿಂದ ಸಮಾವೇಶ ನಡೆಸುವ ಮೂಲಕ ಬಲಪ್ರದರ್ಶನ ತೋರ್ಪಡಿಸಿದ್ದರು. ಅಂದಿನ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ  ಕಾಂಗ್ರೆಸ್‌ ಪಕ್ಷಕ್ಕೆ ಸಿದ್ದರಾಮಯ್ಯ ಸೇರ್ಪಡೆಗೊಂಡಿದ್ದರು. ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಹೊಸ ಶಕೆ ಅಂದು ಆರಂಭವಾಗಿತ್ತು. ಕಾಂಗ್ರೆಸ್‌ ಮೂಲಕ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಏರಬಲ್ಲ ಎಲ್ಲಾ ಎತ್ತರವನ್ನು ಏರಿದ್ದರು. ಇದು ದೇವೇಗೌಡರ ಮುನಿಸಿಗೆ ಕಾರಣವಾಗಿತ್ತು. ಸಿದ್ದರಾಮಯ್ಯ ಅವರಲ್ಲಿಯೂ ದೇವೇಗೌಡರ ವಿರುದ್ಧ ಸಿಟ್ಟು ಬೂದಿಯೊಳಗಿನ ಕೆಂಡದಂತೆಯೇ ಎದೆಯೊಳಗಿತ್ತು. ಇನ್ನೊಂದೆಡೆ ಡಿಕೆಶಿಗೂ ಕುಮಾರಸ್ವಾಮಿ ಮೇಲೆ ಎಲ್ಲಿಲ್ಲದ ಹಠ. ಒಕ್ಕಲಿಗ ಸಮುದಾಯಕ್ಕೆ ತಾನೇ ನಾಯಕನಾಗಬೇಕೆಂಬ ಹಠವೂ ಅವರಲ್ಲಿದೆ. ಹಿಂದೊಮ್ಮೆ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿಗೆ ಡಿಕೆಶಿಯೇ ಮುಖ್ಯ ಕಾರಣವಾದರೂ, ಕುಮಾರಸ್ವಾಮಿ ʼಒಕ್ಕಲಿಗ ಸಮುದಾಯದ ನಾಯಕʼನಾಗಿ ಬೆಳೆಯುವುದು ಡಿಕೆಶಿಗೆ ಇಷ್ಟವಿರಲಿಲ್ಲ. ಸಿದ್ದರಾಮಯ್ಯ, ಡಿಕೆಶಿ ತಮ್ಮೆಲ್ಲಾ ಸಿಟ್ಟನ್ನು ಈಗ ತಮ್ಮ ಅಧಿಕಾರವಧಿಯಲ್ಲಿ ಭಾಗಶಃ ತೀರಿಸಿಕೊಂಡಿದ್ದಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದ ಸಿಎಂ ಸಿದ್ದರಾಮಯ್ಯರಿಗೆ ʼಕಾಂಗ್ರೆಸ್ ಜನ ಕಲ್ಯಾಣ ಸಮಾವೇಶʼ ಎಂಬ ಶೀರ್ಷಿಕೆಯಡಿಯಲ್ಲಿಯೇ, ಪಕ್ಷದ ವೇದಿಕೆಯೆಲ್ಲಿಯೇ ನಡೆಯಬೇಕು ಎಂದು ಹೈಕಮಾಂಡ್‌ ಖಡಕ್‌ ಆಗಿ ಹೇಳಿರುವುದು ಸಿದ್ದರಾಮಯ್ಯ ಅವರ ರಾಜಕೀಯಕ್ಕೆ ದೊಡ್ಡ ಮಟ್ಟದ ಆಘಾತವಾಗದಿದ್ದರೂ, ಒಂದು ಹಂತದ ಹಿನ್ನೆಡೆ ಎಂದೇ ಹೇಳಬಹುದು. ಪಕ್ಷದ ಕಾರ್ಯಕ್ರಮವೇ ಆಗಬೇಕು ಎಂದು ಎಲ್ಲಿಯೂ ರಾಜಕೀಯ ಸಂಘರ್ಷಕ್ಕೆ, ವಿವಾದಕ್ಕೆ ಎಡೆ ಮಾಡಿಕೊಡದೇ ಹೈಕಮಾಂಡ್‌ ಮಟ್ಟದಲ್ಲೇ ಇಂಥದ್ದೊಂದು ಸೂಚನೆ ಕೊಡಿಸುವಲ್ಲಿ ಡಿಕೆಶಿ ಗೌಪ್ಯವಾಗಿಯೇ ಯಶ ಕಂಡಿದ್ದರು. ಕೆಪಿಸಿಸಿ ನಿರ್ದೇಶನದಲ್ಲೇ ಕಾರ್ಯಕ್ರಮ ಆಗುವಂತೆ ಡಿಕೆಶಿ ಕಂಡುಕೊಂಡಿದ್ದರು. ಅರ್ಥಾತ್‌ ಪರೋಕ್ಷವಾಗಿ ತಮ್ಮ ಕೆಪಿಸಿಸಿ ಅಧ್ಯಕ್ಷತೆಯಲ್ಲೇ ಸಮಾವೇಶ ನಡೆದಿದೆ ಎನ್ನುವ ಹಾಗೆ ಮಾಡಿಕೊಳ್ಳುವುದರಲ್ಲಿಯೂ ಯಶಸ್ವಿಯಾದರು.

ಇನ್ನು, ಈ ಸಮಾವೇಶದ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ವರ್ಚಸ್ಸಿಗೆ ಅಂಟಿದ ಕೊಳೆಯನ್ನು ಭಾಗಶಃ ತೊಳೆದುಕೊಂಡಿದ್ದಲ್ಲದೇ, ದೇವೇಗೌಡರ ಕರ್ಮಭೂಮಿಯಲ್ಲೇ ಅವರ ಮೇಲಿದ್ದ ಸಿಟ್ಟನ್ನು ತೀರಿಸಿಕೊಂಡರು. ಜೊತೆಗೆ ಡಿಕೆಶಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ತಾನೇ ʼಒಕ್ಕಲಿಗ ಸಮುದಾಯದ ನಾಯಕʼ ಎಂದು ತೋರಿಸಿಕೊಳ್ಳುವುದರೊಂದಿಗೆ ಹೈಕಮಾಂಡ್‌ಗೆ ಮುಂದಿನ ʼಸಿಎಂ ಪದವಿʼ ತಮ್ಮ ಪಾಲಿಗೆ ಮೀಸಲು ಎನ್ನುವುದನ್ನು ಸೂಚ್ಯವಾಗಿ ಎತ್ತಿ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಈ ಮಟ್ಟಿಗೆ ಬೆಳೆಯುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಮಾತ್ರವಲ್ಲ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರ ಸಂಘಟನಾತ್ಮಕ ಶಕ್ತಿಯೂ ಮುಖ್ಯ ಕಾರಣ ಎನ್ನುವುದು ಡಿಕೆಶಿ ಅವರ ಬೆಂಬಲಿಗರು ಹೇಳುವ ಮಾತು. ಹಾಗಾಗಿ ಇದೂ ಕೂಡ ʼಮುಖ್ಯಮಂತ್ರಿ ಪದವಿ ಹಸ್ತಾಂತರʼದ ವಿಚಾರ ಆಗಾಗ್ಗೆ ಕಾಂಗ್ರೆಸ್‌ ವಲಯದಲ್ಲೇ ಕೇಳಿ ಬರುವುದಕ್ಕೆ ಮುಖ್ಯ ಕಾರಣ ಎಂದು ಹೇಳಬಹುದು.

ಸಮಾವೇಶದಲ್ಲಿ ಡಿಕೆಶಿ ಸಿಎಂ ಸಿದ್ದರಾಮಯ್ಯ ಪರ ಮಾತಾಡಿರುವುದರ ಹಿಂದೆಯೂ ಮಹತ್ತರವಾದ ದೂರದೃಷ್ಟಿ ಇದೆ. ಹೈಕಮಾಂಡ್‌ ದೃಷ್ಟಿಗೆ ಸಿದ್ದರಾಮ್ಯ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ ಎನ್ನುವ ವಿಚಾರ ತೋರಿಸುವ ತಂತ್ರವೂ ಇದಾಗಿದೆ. ಡಿಕೆಶಿ ತನ್ನ ಬೆಂಬಲವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎನ್ನುವುದು ಕೂಡ ʼಸಿಎಂ ಪದವಿ ಹಸ್ತಾಂತರʼ ವಿಶ್ವಾಸಾತ್ಮಕವಾಗಿಯೇ ನಡೆಯಲಿ ಎನ್ನುವುದೇ ಆಗಿದೆ. ಸಿಎಂ ಸಿದ್ದರಾಮಯ್ಯ ಅವರ ಹಿಂದೆ ʼಅಹಿಂದʼ ವರ್ಗದ ದೊಡ್ಡ ಬೆಂಬಲವಿದೆ. ಈ ಬೆಂಬಲದ ನೆರಳಲ್ಲೇ ಮುಂದಿನ ರಾಜಕೀಯ ಭವಿಷ್ಯವನ್ನು ಡಿಕೆಶಿ ಭದ್ರಗೊಳಿಸಿಕೊಳ್ಳುವ ಮುಖವಾಗಿ ತಮ್ಮ ಬುದ್ದಿವಂತಿಕೆಯನ್ನು ತೋರಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಜೆಡಿಎಸ್‌ ಬಿಜೆಪಿಯೊಂದಿಗೆ ಈಗ ಅರ್ಧ ವಿಲೀನ. ಜೆಡಿಎಸ್‌ ಪ್ರಾದೇಶಿಕ ಪಕ್ಷದ ಸಾಮರ್ಥ್ಯವನ್ನು ಸಂಪೂರ್ಣ ಕಳೆದುಕೊಳ್ಳುವುದರತ್ತ ಸಾಗುತ್ತಿದೆ. ಲೋಕಸಭೆಗಾಗಿ ಬಿಜೆಪಿಯೊಂದಿಗಿನ ಮೈತ್ರಿ ಕೆಲವು ಜೆಡಿಎಸ್‌ ನಾಯಕರಿಗೆ ಹಿಡಿಸಿಲ್ಲ. ಅತೃಪ್ತ ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಸೇರಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ದೇವೇಗೌಡರ ಕಾಲದ ನಂತರ ಜೆಡಿಎಸ್‌ ಬಿಜೆಪಿಯೊಂದಿಗೆ ಸಂಪೂರ್ಣ ವಿಲೀನ ಆಗುವ ಲಕ್ಷಣಗಳು ಕಾಣಿಸುತ್ತಿದೆ. ಹಾಗಾಗಿ ಈ ಸಂದರ್ಭವನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಎನ್ನುವ ಇಂಗಿತವೂ ಡಿಕೆಶಿಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಸಂಘಟನೆಯನ್ನು ಭದ್ರಗೊಳಿಸಿಕೊಳ್ಳುವುದು, ʼಒಕ್ಕಲಿಗ ಸಮುದಾಯ ನಾಯಕʼನಾಗಿ ಮತ್ತಷ್ಟು ಪ್ರಭಾವಿಯಾಗುವುದೇ ಡಿಕೆಶಿ ಮುಂದಿರುವ ಸದ್ಯದ ಗುರಿ. ಈ ಗುರಿಯನ್ನು ಯಶಸ್ವಿಯಾಗಿ ತಲುಪಿದರೇ, ಮುಂದೆ ಸುಲಭದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಬಹುದು ಎನ್ನುವುದು ಡಿಕೆಶಿ ಯೋಚನೆ. ಇನ್ನು, ಶಿವಕುಮಾರ್ ಹೇಳಿಕೆಯ ಕಾರಣಕ್ಕೆ ʼಮುಖ್ಯಮಂತ್ರಿ ಪದವಿ ಹಂಚಿಕೆʼಯ ಈ ಸಮರ ಕೊನೆಗೊಂಡಿತೆಂದೇನೂ ಅಲ್ಲ. ಅದು ಈಗಷ್ಟೇ ಶುರುವಾಗಿದೆ.

ಬಹುಶಃ ಕಾಂಗ್ರೆಸ್‌ನಲ್ಲಿ ಇನ್ನು ಮುಂದೆ ಆಗುವ ಬೆಳವಣಿಗೆ ಖಂಡಿತವಾಗಿ ರಾಜ್ಯ ರಾಜಕಾರಣದ ಭವಿಷ್ಯವನ್ನು ನಿರ್ಧರಿಸಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

-ಶ್ರೀರಾಜ್‌ ವಕ್ವಾಡಿ.  

Thursday, December 5, 2024

ಕಮಲ ದ್ವಿದಳ, ಬಣ ಜಗಳ ಉಲ್ಬಣ


ಯಡಿಯೂರಪ್ಪವಿಜಯೇಂದ್ರ ವರ್ಸಸ್‌ ಯತ್ನಾಳ್‌ ಮತ್ತು ಹೈಕಮಾಂಡ್‌ !

ಒಂದೆಡೆ ಅಪ್ಪನ ಹೆಸರಿನಲ್ಲಿ ರಾಜಕೀಯಕ್ಕೆ ಬಂದ ವಿಜಯೇಂದ್ರ ಯಡಿಯೂರಪ್ಪಮತ್ತೊಂದೆಡೆ ಸದಾ ಬಿಎಸ್‌ವೈ ಹಾಗೂ ವಿಜಯೇಂದ್ರ ವಿರುದ್ಧ ಟೀಕಿಸುತ್ತಲೇ ಬಂದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್. ಬಿಜೆಪಿಯೊಳಗಿನ ಈ ಆಂತರಿಕ ವೈಮನಸ್ಸು ಸದ್ಯದ ರಾಜಕೀಯ ಚರ್ಚೆ. ಶಾಸಕ ಯತ್ನಾಳ್‌ ಕಳೆದ ಒಂದು ವರ್ಷಕ್ಕಿಂತಲೂ ಹಿಂದಿನಿಂದ ಯಡಿಯೂರಪ್ಪ ಅವರ ವಿರುದ್ಧ ಗಂಭೀರ ಆರೋಪ ಹೊರಿಸುತ್ತಲೇ ಬಂದಿದ್ದಾರೆ. ಯತ್ನಾಳ್‌ ಅವರು ಯಡಿಯೂರಪ್ಪ ಅವರ ಮೇಲೆ ಹೊರಿಸಿರುವ ಕೋವಿಡ್‌ ಹಗರಣದ ಆರೋಪ ಆಡಳಿತರೂಢ ಕಾಂಗ್ರೆಸ್‌ ಪಕ್ಷಕ್ಕೆ ರಾಜಕೀಯ ಅಸ್ತ್ರವಾಗಿ ದೊರಕಿತು. ಪ್ರಕರಣ ತನಿಖೆಯ ಹಂತದವರೆಗೆ ಬಂದು ನಿಂತಿದೆ.

ಕಾಂಗ್ರೆಸ್‌ನ ನೆಪೊಟೀಸಂ ರಾಜಕಾರಣವನ್ನು ಸದಾ ಟೀಕಿಸುತ್ತಲೇ ಬಂದ ಬಿಜೆಪಿಯ ಹೈಕಮಾಂಡ್‌ಕರ್ನಾಟಕದ ವಿಚಾರದಲ್ಲಿಅದರಲ್ಲೂ ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ ಅವರ ವಿಚಾರದಲ್ಲಿ ಕೈಸೋತುಯಡಿಯೂರಪ್ಪರ ಎಲ್ಲಾ ಶಿಫಾರಸ್ಸಿಗೆಪ್ರಭಾವಕ್ಕೆರಾಜಕೀಯ ಬಂಡಾಯಕ್ಕೆ ಮಣಿದು ಕೂರಬೇಕಾಯಿತು. ಈಗ ಹೈಕಮಾಂಡ್‌ಗೆ ಯಡಿಯೂರಪ್ಪರನ್ನು ಸಮಾಧಾನ ಪಡಿಸಿ ಸುಸ್ತಾದಂತೆ ಕಾಣಿಸುತ್ತಿದೆ.

ವಿಜಯೇಂದ್ರ ಯಡಿಯೂರಪ್ಪ ಅವರ ಮೇಲೆ ಯತ್ನಾಳ್‌ಗೆ ಅಷ್ಟೇ ಅಲ್ಲ. ಒಂದು ದೊಡ್ಡ ವಿರೋಧ ಬಣವೇ ಇದೆ. ರಾಜ್ಯದ ಬಿಜೆಪಿ ಪಕ್ಷ ಸದ್ಯಕ್ಕೆ ವಿಜಯೇಂದ್ರ ಅವರ ಕೈಯಲ್ಲಿರುವುದರಿಂದ ಆ ಆಕ್ರೋಶ ಇನ್ನೂ ನೇರವಾಗಿ ಹೊರಬಂದಿಲ್ಲ ಅಷ್ಟೇ. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯತ್ನಾಳ್‌ ಗೆ ಅವಕಾಶ ದೊರಕಿಲ್ಲ ಎಂಬ ವಿಚಾರಕ್ಕೆ ಯತ್ನಾಳ್‌ ಬಂಡಾಯ ಆರಂಭಿಸಿದ್ದರು. ಯತ್ನಾಳ್‌ ಹಿಂದೆ ಒಂದಿಷ್ಟು ಮಂದಿ ಇದ್ದಾರೆ. ಅವರದ್ದೂ ವೈಯಕ್ತಿಕ ಪ್ರತಿಷ್ಠೆಗಳೇ ಆಗಿವೆ. ಇತ್ತ ವಿಜಯೇಂದ್ರ ನಾಯಕತ್ವವನ್ನು ಒಪ್ಪಿಕೊಂಡು ಇರುವವರದ್ದೂ ಕೂಡ ವೈಯಕ್ತಿಕ ಹಿತಾಸಕ್ತಿಯೇ ಆಗಿದೆ.

ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಭಿನ್ನಮತದ ಕಾರಣದಿಂದ ಕಾಂಗ್ರೆಸ್‌ ಸುಖಾಸುಮ್ಮನೆ ಆರೋಪ ಕೇಳುವ ಹಾಗಾಗಿದೆ. ಯಡಿಯೂರಪ್ಪವಿಜಯೇಂದ್ರ ನಿಷ್ಠರು ಕಾಂಗ್ರೆಸ್‌ ಪ್ರಾಯೋಜಕತ್ವದಲ್ಲಿ ಯತ್ನಾಳ್‌ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿರುವುದು ರಾಜಕೀಯ ತಿರುಚುವಿಕೆ ಎನ್ನುವುದರಲ್ಲಿ ಸಂಶಯವಿಲ್ಲ. ಅಷ್ಟಲ್ಲದೇ ವಿಜಯೇಂದ್ರ ಶಕ್ತಿ ಪ್ರದರ್ಶನಕ್ಕಾಗಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶವೊಂದಕ್ಕೆ ಮುಂದಾಗಿರುವುದು ಗಮನಿಸಿದರೇಹೈಕಮಾಂಡ್‌ ಅನ್ನು ಒಲಿಸಿಕೊಳ್ಳುವ ಪ್ರಯತ್ನವೇ ಆಗಿದೆ ಎಂದು ಕಾಣಿಸುತ್ತಿದೆ. ಒಳಗಿಂದೊಳಗೆ ರಾಜ್ಯ ಬಿಜೆಪಿಯ ಪೂರ್ಣ ಅಧಿಕಾರವನ್ನು ಯಡಿಯೂರಪ್ಪ ಅವರಿಗಾಗಲಿ ಅಥವಾ ವಿಜಯೇಂದ್ರರಿಗಾಗಲಿ ನೀಡುವುದಕ್ಕೆ ಸ್ವತಃ ಬಿಜೆಪಿ ಹೈಕಮಾಂಡ್‌ಗೆ ಇಷ್ಟವಿಲ್ಲ. ಲಿಂಗಾಯತ ಮತಗಳು ವಿಮುಖವಾಗುತ್ತವೆ ಎಂಬ ಕಾರಣಕ್ಕೆ ಯಡಿಯೂರಪ್ಪ ಹಾಗೂ ಮಗ ವಿಜಯೇಂದ್ರರಿಗೆ ಸದ್ಯಕ್ಕೆ ಬಿಜೆಪಿಯ ರಾಜಕೀಯ ವೃದ್ಧಿಯ ಹೊಣೆಗಾರಿಕೆಯನ್ನು ಹೈಕಮಾಂಡ್ ವಹಿಸಿದೆ. ಇನ್ನೊಂದೆಡೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್‌. ಸಂತೋಷ್‌ಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಹೈಕಮಾಂಡ್‌ ದೃಷ್ಟಿಗೆ ʼಪ್ರಭಾವಿʼಗಳಾಗಿ ಬೆಳೆಯುವುದು ಇಷ್ಟವಿಲ್ಲ. ಬಿ.ಎಲ್‌. ಸಂತೋಷ್‌ ಅವರ ಗೌಪ್ಯ ನಿರ್ದೇಶನದಲ್ಲೇ ಹೈಕಮಾಂಡ್‌ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿತ್ತು. ಅದರ ಪರಿಣಾಮದಿಂದ ಬಿಜೆಪಿ ಎದುರಿಸಿದ ಸಂಕಷ್ಟ ಅರಿವಾಗಿ ಮತ್ತೆ ಹೈಕಮಾಂಡ್‌ ಯಡಿಯೂರಪ್ಪ ಅವರ ಎಲ್ಲಾ ಶಿಫಾರಸ್ಸಿಗೆ ಅಸ್ತು ಎನ್ನುವುದಕ್ಕೆ ಆರಂಭಿಸಿತ್ತು. ವಿಜಯೇಂದ್ರ ಅವರನ್ನು ವಿಧಾನಸಭೆಗೆ ಕಳುಹಿಸಿದ್ದಲ್ಲದೇಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವಲ್ಲಿ ಯಶಸ್ವಿಯಾಗಿ ಪರೋಕ್ಷವಾಗಿ ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ತನ್ನ ಕೈಯೊಳಗೆ ಇರಿಸಿಕೊಂಡರು. ಇದು ಯತ್ನಾಳ್‌ ಮೊದಲಾದ ಅತೃಪ್ತ ಬಿಜೆಪಿಗರಿಗೆ ಹಿಡಿಸಿಲ್ಲ. ಬಂಡಾಯ ಆರಂಭವಾಯಿತು. ಹೈಕಮಾಂಡ್‌ಗೂ ತಲುಪಿತು. ಈಗ ಪರೋಕ್ಷವಾಗಿ ಯತ್ನಾಳ್‌ ಅವರನ್ನು ಸ್ವತಃ ಹೈಕಮಾಂಡೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಎತ್ತಿ ಕಟ್ಟಿದ ಹಾಗಿದೆ.

ವಿಜಯೇಂದ್ರ ಸುಲಭದಲ್ಲಿ ರಾಜಕೀಯ ಪ್ರವೇಶ ಮಾಡಿದವರು. ತಂದೆ ಹೆಸರು ವಿಜಯೇಂದ್ರ ಅವರ ರಾಜಕೀಯ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಶಿಕಾರಿಪುರ ವಿಧಾಸನಭಾ ಚುನಾವಣೆಯಲ್ಲಿ ವಿಜಯೇಂದ್ರ ಯಡಿಯೂರಪ್ಪ ಬಹಳ ದೊಡ್ಡ ಅಂತರದಿಂದೇನೂ ಗೆದ್ದವರಲ್ಲ. ಅಲ್ಲಿನ ಸ್ವತಂತ್ರ ಅಭ್ಯರ್ಥಿ ನಾಗರಾಜ ಗೌಡ ಅವರ ವಿರುದ್ಧ ಕೇವಲ 11,008 ಮತಗಳ ಅಂತರದಲ್ಲಿ ಗೆದ್ದಿದ್ದು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ವಿಜಯೇಂದ್ರ ಯಡಿಯೂರಪ್ಪಗೆ ಸ್ವಂತ ರಾಜಕೀಯ ವರ್ಚಸ್ಸು ಇಲ್ಲ ಎನ್ನುವುದು ಇದರ ಸೂಚ್ಯ ಅರ್ಥ. ಅಪ್ಪನ ಹೆಸರಿನಲ್ಲಿ ರಾಜಕೀಯ ಪ್ರವೇಶ ಪಡೆದು ಏನೂ ರಾಜಕೀಯ ಸಾಧನೆ ಇಲ್ಲದೇಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರಿರುವುದು ಬಿಜೆಪಿಯ ಬಹುತೇಕ ಪ್ರಭಾವಿ ನಾಯಕರಿಗೆ ಸಮಾಧಾನವಿಲ್ಲ. ಇನ್ನುಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ವಿಜಯೇಂದ್ರ ʼಸೂಪರ್‌ ಸಿಎಂʼ ಆಗಿ ಕೆಸಲ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ʼವಿಜಯೇಂದ್ರ ಅವರಪ್ಪನ ಸಹಿ ಮಾಡಿ ಕಡತಗಳನ್ನು ರವಾನಿಸಿರುವ ಉದಾಹರಣೆಗಳಿವೆ. ಈ ಬಗ್ಗೆ ಕಾಂಗ್ರೆಸ್‌ನ ಬಿ.ಕೆ ಹರಿಪ್ರಸಾದ್ ಆರೋಪ ಮಾಡಿದ್ದರುʼ ಎಂದು ಇತ್ತೀಚೆಗೆ ಯತ್ನಾಳ್ ಹೊಸ ಬಾಂಬ್‌ ಸಿಡಿಸಿದ್ದರು.

ಏನೇ ಇರಲಿರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲ ರಂಪಾಟ ನಡೆಯುತ್ತಿದ್ದರೂ ಹೈಕಮಾಂಡ್ ಕ್ರಮಕ್ಕೆ ಮುಂದಾಗದೇ ಮೌನವಹಿಸಿರುವುದು ಆಶ್ಚರ್ಯದ ಸಂಗತಿ. ಮೇಲ್ನೋಟಕ್ಕೆ ವಿಚಾರಣೆ ಅದುಇದು ನಡೆಸಿದ ಹಾಗೆ ಮಾಡಿದರೂ ಸದ್ಯಕ್ಕೆ ಕ್ರಮ ತೆಗೆದುಕೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಮಗು ಚಿವುಟಿತೊಟ್ಟಿಲು ತೂಗುವ ಕೆಲಸ ಪಕ್ಷದ ವರಿಷ್ಠರಿಂದ ನಡೆದಿದೆ ಎನ್ನುವುದು ರಾಜ್ಯ ಬಿಜೆಪಿಯ ಪ್ರಸ್ತುತ ಸ್ಥಿತಿಗೆ ಸಾರ್ಥಕವಾಗಿ ಒಪ್ಪುತ್ತದೆ.

ಇನ್ನುವಿಜಯೇಂದ್ರ ಪರ ನಿಷ್ಠರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದುಮಧ್ಯ ಕರ್ನಾಟಕದ ಕೇಂದ್ರವಾದ ದಾವಣಗೆರೆಯಲ್ಲಿ ಇದೀಗ ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಶಾಸಕ ಯತ್ನಾಳ್‌ ತಮ್ಮ ವಿರುದ್ಧ ಮೇಲಿಂದ ಮೇಲೆ ಆರೋಪ ಮಾಡುತ್ತಿದ್ದರೂ ಹೈಕಮಾಂಡ್‌ ಸುಮ್ಮನಿರುವುದರ ಹಿಂದೆ ಉದ್ದೇಶ ಬೇರೆ ಇದೆ ಎನ್ನುವ ಬಗ್ಗೆ ಸ್ವತಃ ಯಡಿಯೂರಪ್ಪ ಅವರಿಗೂ ತಿಳಿದಿದೆ. ಹಾಗಾಗಿ ಹೈಕಮಾಂಡ್‌ಗೆ ಕರ್ನಾಟಕದಲ್ಲಿ ʼಯಡಿಯೂರಪ್ಪರ ಬಲʼ ಏನೆಂದು ತೋರಿಸುವುದೇ ಈ ಸಮಾವೇಶದ ಮುಖ್ಯ ಗುರಿ ಎಂದನ್ನಿಸುತ್ತಿದೆ. ಈ ನಡುವೆ ವರಿಷ್ಠರ ಮೇಲಿನ ಸಿಟ್ಟಿಗೆ ಬಿಜೆಪಿಯನ್ನು ಮತ್ತೆ ಒಡೆಯುವುದಕ್ಕೂ ಯಡಿಯೂರಪ್ಪ ಹಿಂಜರಿಯುವವರಲ್ಲ. ಈ ಹಿಂದಿನ ಅವರ ರಾಜಕೀಯ ಇತಿಹಾಸ ತಿಳಿದೇ ಇದೆ. ಮತ್ತೆ ಮರಳಿ ಅದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ.

ಇನ್ನುವಕ್ಫ್ ಹಗರಣದ ವಿರುದ್ಧ ರಾಜ್ಯ ಬಿಜೆಪಿ ಡಿಸೆಂಬರ್ ನಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಸದ್ಯದಲ್ಲೇ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ವಕ್ಫ್‌ ಆಸ್ತಿ ವಿವಾದವನ್ನೇ ಪ್ರಮುಖ ಅಸ್ತ್ರವನ್ನಾಗಿಟ್ಟುಕೊಂಡು ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರಕ್ಕೂ ತಯಾರಿಯೂ ನಡೆದಿದೆ.

ಆರ್.‌ ಅಶೋಕ್‌ಗೂವಿಜಯೇಂದ್ರಗೂ ಅಷ್ಟಕ್ಕಷ್ಟೆ. ಆದರೂ ಅಧಿವೇಶನಗಳಲ್ಲಿ ಕೈಜೋಡಿಸುತ್ತಾರೆ. ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗಿದೆ. ಇದೇ ಹುಮ್ಮಸ್ಸಿನಲ್ಲಿ ಸದನದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಕಾಂಗ್ರೆಸ್‌ ಕೂಡ ಸಜ್ಜಾಗಿದೆ. ವಕ್ಪ್‌ ಆಸ್ತಿ ವಿವಾದದ ಬಗ್ಗೆ ಕಾಂಗ್ರೆಸ್‌ನಲ್ಲಿಯೂ ಬಿಜೆಪಿಯ ಅವಧಿಯಲ್ಲಾದ ಈ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಅಧೀವೇಶನ ಹೇಗೆ ತಿರುಗುತ್ತದೆ ಎನ್ನುವುದು ಊಹೆಗೂ ಸಿಲುಕುತ್ತಿಲ್ಲ. ಬಿಜೆಪಿಯ ಬಣ ರಾಜಕಾರಣವಕ್ಪ ಆಸ್ತಿ ವಿವಾದಮುಡಾ ಇವುಗಳ ವ್ಯರ್ಥ ಚರ್ಚೆಯಲ್ಲೇ ಮುಗಿಯುತ್ತದೇನೋ. 

ಇನ್ನು, ʼಬಸವಣ್ಣನವರು ಕೈಲಾಗದವರಂತೆ ಕೊನೆಗೆ ಕೈಚೆಲ್ಲಿ ಪ್ರಾಣ ಬಿಟ್ಟರು. ಅವರಂತೆಯೇ ಸಮಾಜದವರೆಲ್ಲಾ ಹೊಳೆಗೆ ಹಾರಿʼ ಎಂದು ಯತ್ನಾಳ್‌ ನೀಡಿರುವ ಹೇಳಿಕೆಯ ವಿರುದ್ಧ ಈಗ ಲಿಂಗಾಯತ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕೂಡ ವಿಜಯೇಂದ್ರ ಪ್ರಾಯೋಜಕತ್ವವೇ ಆಗಿದೆ ಎನ್ನುವುದು ನೇರವಾಗಿ ಕಾಣಿಸುತ್ತಿದೆ. ಇತ್ತ ಕಡೆ ಯತ್ನಾಳ್‌ ಪರವಾಗಿ ಇರುವವರ ಗುಂಪು ವರಿಷ್ಠರ ಭೇಟಿಯಲ್ಲೂ ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದಾರೆ. ಹೈಕಮಾಂಡ್‌ ಯತ್ನಾಳ್‌ ವಿರುದ್ಧ ತತ್‌ಕ್ಷಣದ ಕ್ರಮಕ್ಕೆ ಮುಂದಾಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಇದು ಯಡಿಯೂರಪ್ಪವಿಜಯೇಂದ್ರ ವಿರುದ್ಧ ಹೈಕಮಾಂಡ್‌ನ ಯೋಜಿತ ಕ್ರಮವೆಂದೇ ಕಾಣಿಸುತ್ತಿದೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಒಳ ಬೇಗುದಿ ಸ್ಪೋಟಗೊಂಡಿದೆ. ಮುಂದೇನಾಗಲಿದೆ ಎನ್ನುವುದು ಸದ್ಯದ ಕುತೂಹಲ.

-ಶ್ರೀರಾಜ್‌ ವಕ್ವಾಡಿ  


Thursday, November 28, 2024

ಆರೋಪಿ ಅದಾನಿಗೆ ಕೇಂದ್ರದ ಅಭಯ !?

 

ಪ್ರಧಾನಿ ಮತ್ತು ಉದ್ಯಮಿ ನಡುವಿನ ನಿಕಟ ಸಂಬಂಧ | ʼಮೋದಾನಿʼ ಸತ್ಯ ಬಯಲಾಗಲಿ

ಮೋದಿ ವಿಶ್ವಾಸಾರ್ಹತೆಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಅದಾನಿ ಮತ್ತು ಮೋದಿ ಇಬ್ಬರೂ ಒಂದೇ ಎಂದು ಪ್ರತಿಯೊಬ್ಬ ಭಾರತೀಯ ಯುವಕರಿಗೆ ಸಾಬೀತುಪಡಿಸುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ. ಅದಾನಿಯನ್ನು ಶೀಘ್ರದಲ್ಲೇ ಬಂಧಿಸಬೇಕು, ಸೆಬಿ ಅಧ್ಯಕ್ಷೆಯ ವಿರುದ್ಧ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿರುವುದು ದೇಶದಲ್ಲಿ ಪ್ರಸ್ತುತ ಚರ್ಚೆ. ಇದೇ ವಿಷಯದ ಚರ್ಚೆಯಿಂದಾಗಿ ಸಂಸತ್ತಿನ ಉಭಯ ಸದನಗಳನ್ನು ಮುಂದೂಡಲಾಯಿತು. ಅದಾನಿಯನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ ಎಂದು ರಾಹುಲ್ ಪುನರುಚ್ಚರಿಸಿದರು.  

ಅದಾನಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಏಳು ಹಿರಿಯ ಅಧಿಕಾರಿಗಳ ವಿರುದ್ಧ ಅಮೇರಿಕದ ಪ್ರಾಸಿಕ್ಯೂಟರ್ ಕ್ರಿಮಿನಲ್ ದೋಷಾರೋಪಣೆಯನ್ನು ಹೊರಡಿಸಿದ್ದಾರೆ ಮತ್ತು ನ್ಯೂಯಾರ್ಕ್‌ನ ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಸಿವಿಲ್ ದೂರು ದಾಖಲಾಗಿರುವುದು ಈಗ ಚರ್ಚೆಯ ವಿಚಾರ. ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ, ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿಯವರನ್ನು ನೆನಪಿಸಿಕೊಳ್ಳದ ದಿನವಿಲ್ಲ ಎಂದರೆ ತಪ್ಪಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಇಬ್ಬರು ʼಆನಿʼ(ಅದಾನಿ, ಅಂಬಾನಿ)ಗಳಿಗೋಸ್ಕರವಷ್ಟೇ ಮಾತ್ರ ಕೆಲಸ ಮಾಡುತ್ತಿದೆ ಎಂದು ದಿನನಿತ್ಯ ಆರೋಪಿಸುತ್ತಲೇ ಬಂದಿದ್ದಾರೆ.

ಮೋದಿ ನೇತೃತ್ವದ ಸರ್ಕಾರ 10 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಾಗಿನಿಂದ, ವಿದೇಶಿ ವ್ಯಾಪಾರ ಸಂಬಂಧವನ್ನು ಉತ್ತೇಜಿಸುವ, ಆರ್ಥಿಕ ಬೆಳವಣಿಗೆ, ಭದ್ರತೆ ಮತ್ತು ರಾಜತಾಂತ್ರಿಕತೆ ವಿಚಾರಕ್ಕೆ ಸಂಬಂಧಿಸಿದಂತೆ ಸದೃಢವಾದ ಪ್ರಗತಿ ಸಾಧಿಸುತ್ತಿದೆ ಎಂಬ ಅಭಿಪ್ರಾಯಗಳ ನಡುವೆ, ಪಾಶ್ಚಿಮಾತ್ಯ ಏಜೆನ್ಸಿಗಳು ತಯಾರಿಸಿದ ವರದಿಗಳು, ಭಾರತದ ಪ್ರಗತಿನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂಬ ಆರೋಪವೂ ಇಲ್ಲಿ ಚರ್ಚೆಯ ವಿಷಯ. ವಿದೇಶಿ ಏಜೆನ್ಸಿಗಳಿಂದ ಅಥವಾ ಭಾರತದಲ್ಲಿರುವ ತಮ್ಮ ಪ್ರಾಕ್ಸಿಗಳ ಮೂಲಕ ಭಾರತದ ವಿರುದ್ಧ ವರದಿಗಳು ಬರುತ್ತಿರುವುದು ದೇಶದ ಪ್ರಗತಿಯ ವರ್ಚಸ್ಸಿಗೆ ಧಕ್ಕೆ ಎನ್ನುವ ವಾದವಿದೆ. ಇಷ್ಟೆಲ್ಲದರ ನಡುವೆ ಆರೋಪಕ್ಕೆ ಗ್ರಾಸವಾಗಿರುವುದು ಕೂಡ ತಪ್ಪು ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲವಲ್ಲ!?

ಭಾರತದ ಆರ್ಥಿಕ ಪ್ರಗತಿಗೆ ಅಡ್ಡಿ ಮಾಡುವುದು, ಹೂಡಿಕೆದಾರರಲ್ಲಿ ಗೊಂದಲವನ್ನು ಬಿತ್ತುವುದು, ಸಾಮಾಜಿಕ ಅಶಾಂತಿಯನ್ನು ಸೃಷ್ಟಿಸುವುದು ಈ ಎಲ್ಲಾ ವಿದೇಶ ಮೂಲಗಳಿಂದ ಬರುತ್ತಿರುವ ದೂರುಗಳ ಗುರಿ ಎಂದು ಹೇಳುವ ಒಂದು ವರ್ಗವಿದೆ. ಮೋದಿ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವುದು ಇದರ ಗುರಿ ಎನ್ನುವ ವಾದ ಬಾಲಿಶ. ಇನ್ನು, ಪೆಗಾಸಸ್, ರಫೇಲ್ ಆರೋಪ, ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆಗಳು, ಸಿಎಎ ಪ್ರತಿಭಟನೆಗಳು, ಹಿಂಡೆನ್‌ಬರ್ಗ್ ವರದಿ ಇತ್ಯಾದಿಗಳಿಂದ ದೇಶದ ಪ್ರಗತಿಯ ವರ್ಚಸ್ಸನ್ನು ನಾಶ ಮಾಡುವುದಕ್ಕೆ ಬೇರೆ ಬೇರೆ ರೀತಿಯ ಪ್ರಯತ್ನಗಳು ನಡೆದಿವೆ ಎಂಬ ವಾದವೂ ಇದೆ.

ಭಾರತದ ರಾಜಕೀಯ ಇತಿಹಾಸಲ್ಲಿ ಪ್ರಧಾನಿ ಮತ್ತು ಉದ್ಯಮಿ ನಡುವಿನ ಸಂಬಂಧ ಮೋದಿ-ಅದಾನಿಯಂತೆ ಹಿಂದೆಂದೂ ಇರಲಿಲ್ಲ. ದೇಶದ ಒಬ್ಬ ಪ್ರಧಾನಿ ಮತ್ತು ಒಬ್ಬ ಉದ್ಯಮಿಯ ನಡುವೆ ಒಂದು ಅಂತರವಿತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ, ಈ ಅಂತರ ಕಾಣೆಯಾಗಿದೆ ಎಂಬ ಅಭಿಪ್ರಾಯ ವಿರೋಧ ಪಕ್ಷಗಳಲ್ಲಿದೆ. ಮೋದಿಗೆ ಅದಾನಿ ಅತ್ಯಾಪ್ತರಾಗಿದ್ದಾರೆ. ಮೋದಿ-ಅದಾನಿ ನಡುವಿನ ಸಂಬಂಧ, ಅದಾನಿಗಾಗಿ ಮೋದಿ ಕೆಲಸ ಮಾಡುತ್ತಿರುವ ಬಗೆಯನ್ನು ಜನರ ಮುಂದಿಡಲು ವಿಪಕ್ಷಗಳು 'ಮೋದಾನಿ' ಎಂದು ಹೇಳಿ ಟೀಕಿಸುತ್ತಿವೆ.

ಹೌದು, ಸರ್ಕಾರಕ್ಕೆ ನವೀಕರಿಸಬಹುದಾದ ವಿದ್ಯುತ್ ಪೂರೈಕೆ ಮಾಡಿ, 20 ವರ್ಷಗಳಲ್ಲಿ ಸುಮಾರು 17,000 ಕೋಟಿ ರೂ. ಲಾಭ ಗಳಿಸುವ ಉದ್ದೇಶ ಅದಾನಿಯದಾಗಿತ್ತು. ಈ ಬಹುಕೋಟಿ ರೂ. ಮೌಲ್ಯದ ಗುತ್ತಿಗೆ ಪಡೆಯಲು ಅದಾನಿ ಭಾರತೀಯ ಅಧಿಕಾರಿಗಳಿಗೆ ಬರೋಬ್ಬರಿ 2,029 ಕೋಟಿ ರೂ. ಲಂಚ ನೀಡಿದ್ದಾರೆ. ಲಂಚ ಪಾವತಿಸಲು ಅಮೆರಿಕದ ಉದ್ಯಮಿಗಳನ್ನು ವಂಚಿಸಿ, ಬಂಡವಾಳ ಸಂಗ್ರಹಿಸಿದ್ದಾರೆ. ಲಂಚಕ್ಕೆ ಹಣ ಪಡೆದು, ಅಮೆರಿಕದ ಹೂಡಿಕೆದಾರರಿಗೆ ವಂಚಿಸಿದ್ದಾರೆ ಎಂದು ಅಮೆರಿಕದ ನ್ಯೂಯಾರ್ಕ್ ಪೂರ್ವ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಅದಾನಿ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಹೊರಡಿಸಿದೆ. ವಾರೆಂಟ್ ಜಾರಿಯಾದ ಬೆನ್ನಲ್ಲೇ 'ಅದಾನಿ-ಮೋದಿ-ಸೆಬಿ' ಸಂಬಂಧದ ಚರ್ಚೆ ಮೇಲೆದ್ದಿದೆ.

2023ರ ಕೇಂದ್ರ ಬಜೆಟ್ ಅಧಿವೇಶನದಲ್ಲಿ "ಮೋದಿ-ಅದಾನಿ ಭಾಯಿ-ಭಾಯ್/ದೇಶ್ ಬೆಚ್ ಕೆ ಖಾಯೆ ಮಲೈ" ಮುಂತಾದ ಅನಪೇಕ್ಷಿತ ಘೋಷಣೆಗಳು ಕೇಳಿ ಬಂದಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕಿದೆ. ಹಾಗಾಗಿ, ಅಮೇರಿಕಾ ನ್ಯಾಯಾಲಯದ ಹೇಳಿರುವುದಕ್ಕೆ ಪೂರಕವೆಂಬಂತೆ ಅಧಿಕಾರಿಗಳಿಗೆ ನೀಡಿದ ಲಂಚ, ಒಪ್ಪಂದ ಹಾಗೂ ಬಿಡ್‌ಗಳಲ್ಲಿಯೂ ಮೋದಿ, ಸೆಬಿಯ ಪಾಲೂ ಇರಬಹುದು ಎಂಬ ಸಂಶಯ ಮೂಡುತ್ತಿದೆ. 

ಮೋದಿ ಗುಜರಾತ್ ನ ಮುಖ್ಯಮಂತ್ರಿಯಾಗಿರುವಾಗಿಂದಲೂ ಅದಾನಿಯೊಂದಿಗೆ ನಿಕಟ ಸಂಬಂಧ, ಸಂಪರ್ಕ ಹೊಂದಿದ್ದರು ಎನ್ನುವುದು ಲೋಕಸತ್ಯ. ಒಬ್ಬ ಉದ್ಯಮಿ ಹಾಗೂ ದೇಶದ ಪ್ರಧಾನಿಯ ನಡುವೆ ಇರುವ ಈ ರಾಜಕೀಯ ಸಂಬಂಧವನ್ನು ನಿರಂತರವಾಗಿ ಕಾಂಗ್ರೆಸ್ ಅಪವಿತ್ರ ಸಂಬಂಧವೆಂದು ಆರೋಪಿಸುತ್ತಲೇ ಬಂದಿದೆ. ಈ ಆರೋಪವನ್ನು ಬಿಜೆಪಿಗಾಗಲಿ, ಸ್ವತಃ ಪ್ರಧಾನಿ ಮೋದಿಗಾಗಲಿ ಅಲ್ಲಗಳೆಯುವುದಕ್ಕೆ ಸಾಧ್ಯವಾಗಿಲ್ಲ. ಚುನಾವಣೆಯ ಸಂದರ್ಭಗಳಲ್ಲಿ ಕಾಂಗ್ರೆಸ್‌, ಅದರಲ್ಲೂ ರಾಹುಲ್‌ ಗಾಂಧಿ ಅವರು ಮೋದಿ ಮತ್ತು ʼಆನಿʼಗಳ ಸಂಬಂಧವನ್ನು ಗಂಭೀರವಾಗಿ ಟೀಕಿಸುತ್ತಲೇ ಬಂದಿದ್ದರು.

ಮೋದಿ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಎಸ್‌ಇಝಡ್ ನಿರ್ಮಿಸಲು ಅದಾನಿಗೆ ಮೋದಿ ಅಗ್ಗದ ಬೆಲೆಗೆ (ಪ್ರತಿ ಚ ಮೀ.ಗೆ 1 ರೂ.ನಿಂದ 32 ರೂ.) ಭೂಮಿ ನೀಡಿದ್ದಾರೆ. ಇದೇ ಕಾರಣಕ್ಕೆ ಕಾರ್ಪೊರೇಟ್ ಹೌಸ್ ಮೋದಿಯನ್ನು ಉತ್ತಮ ಆಡಳಿತಗಾರನೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿರುವುದನ್ನೂ ನಾವು ಗಮನಿಸಬಹುದಾಗಿದೆ. ʼಮೋದಾನಿʼ ಸಂಬಂಧದ ಬಗ್ಗೆ ಸದಾ ಟೀಕಿಸುವ ರಾಹುಲ್, 'ದೇಶವನ್ನು ನಾಲ್ಕು ಮಂದಿ ಆಳುತ್ತಿದ್ದಾರೆ - ನರೇಂದ್ರ ಮೋದಿ ಮತ್ತು ಅಮಿತ್ ಶಾ, ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ- ಇವರದ್ದು ನಾವಿಬ್ಬರು ನಮಗಿಬ್ಬರು ಸೂತ್ರ'ವೆಂದು 2021ರಲ್ಲಿ ಲೋಕಸಭೆಯಲ್ಲೊಮ್ಮೆ ರಾಹುಲ್ ಗಂಭೀರವಾಗಿ ಟೀಕಿಸಿದ್ದರು.

ಮೋದಿ ಪ್ರಧಾನಿಯಾದ ನಂತರ ಉದ್ಯಮಿ ಅದಾನಿಯ ಆಸ್ತಿ ನಾಲ್ಕೈದು ಪಟ್ಟು ಹೆಚ್ಚಳವಾಗಿದೆ. 2022ರ ಏಪ್ರಿಲ್ ಹೊತ್ತಿಗೆ ಅದಾನಿ ವಿಶ್ವದ 2ನೇ ಅತೀದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡರು. ಅದಾನಿ ಆಸ್ತಿ 900 ಕೋಟಿ ಡಾಲರ್‌ಗೆ ಹೆಚ್ಚಳವಾಯಿತು. ಕಾಂಗ್ರೆಸ್‌ ವ್ಯಾಖ್ಯಾನದಂತೆ ʼಮೋದಿಯ ಅಭಯ ಹಸ್ತʼದ ಅಡಿಯಲ್ಲಿ ಅದಾನಿ ಕಂಡ ಈ ಬದಲಾವಣೆಯ ಬಗ್ಗೆ ರಾಹುಲ್ ಗಾಂಧಿ, ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಸಂಸತ್‌ನಲ್ಲಿ ಚರ್ಚೆಗೆ ಎಳೆದರು. ಭಾರತ ಮತ್ತು ವಿದೇಶಗಳಲ್ಲಿ ತನ್ನ ಸ್ನೇಹಿತ ಅದಾನಿಯನ್ನು ಬೆಳೆಸಲು ಮೋದಿ ಪ್ರಧಾನ ಮಂತ್ರಿ ಕಚೇರಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದೇ ಕಾರಣಕ್ಕೆ ರಾಹುಲ್‌ ಹಾಗೂ ಮೊಯಿತ್ರಾ ಅವರನ್ನು ಸಂಸತ್‌ನಿಂದ ಮೋದಿ ಸರ್ಕಾರ ಅಮಾನತುಗೊಳಿಸಿರುವುದನ್ನು ಇಡೀ ದೇಶ ಕಂಡಿದೆ.

ಇನ್ನು, ಈ ನಡುವೆ ಅದಾನಿ ಗ್ರೂಪ್‌ನ ದೊಡ್ಡ ಹಗರಣವನ್ನು ಹಿಂಡೆನ್ ಬರ್ಗ್‌ನ ತನಿಖಾ ವರದಿ ಬಟಾಬಯಲುಗೊಳಿಸಿತ್ತು. ಹಿಂಡನ್‌ ಬರ್ಗ್‌ ತನಿಖಾ ವರದಿಯನ್ನು ಆಧರಿಸಿ ʼಮೋದಾನಿʼ ಸಂಬಂಧದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕೆಂದು ವಿಪಕ್ಷಗಳು ಆಗ್ರಹಿಸಿದ್ದವು. ಮೋದಿ ಸರ್ಕಾರ ವಿಪಕ್ಷಗಳ ಆಗ್ರವಹವನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಚುನಾವಣಾ ಪ್ರಚಾರ ಸಭೆಗಳಲ್ಲಾಗಲಿ, ಅಥವಾ ಸಂಸತ್ತಿನಲ್ಲಾಗಲಿ, ಬೇರೆಡೆಯಲ್ಲಾಗಲಿ ಎಲ್ಲಿಯೂ ವಿಪಕ್ಷಗಳು ಹಾಗೂ ರಾಹುಲ್‌ ಗಾಂಧಿ ಹೊರಿಸುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡುವುದಕ್ಕೂ ಮೋದಿ ಪ್ರಯತ್ನಿಸಿಲ್ಲ.  ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಗೂ ಅವಕಾಶ ನೀಡಿಲ್ಲ.

ಇನ್ನು, 'ಪವನ ವಿದ್ಯುತ್‌ ಯೋಜನೆಯನ್ನು ಅದಾನಿಗೆ ನೀಡುವಂತೆ ತಮ್ಮ ಅಧ್ಯಕ್ಷರಿಗೆ ಮೋದಿ ಒತ್ತಡ ಹೇರುತ್ತಿದ್ದಾರೆ' ಎಂದು ಶ್ರೀಲಂಕಾದ ಅಧಿಕಾರಿಯೊಬ್ಬರು ನೇರವಾಗಿ ಮೋದಿ ವಿರುದ್ಧ ಆರೋಪಿಸಿದ್ದರು. ಬಾಂಗ್ಲಾದೇಶದಲ್ಲಿ ವಿದ್ಯುತ್‌ ಪೂರೈಕೆ ಒಪ್ಪಂದ ಅನ್ಯಾಯವೆಂದು ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಇಸ್ರೇಲ್ ನಡುವೆ ಅದಾನಿ ರಕ್ಷಣಾ ಒಪ್ಪಂದವೂ ನಡೆದಿದೆ. ಈ ಒಪ್ಪಂದಗಳನ್ನು ಮೋದಿ ನೆರವಿನಿಂದಲೇ ಅದಾನಿಗೆ ನೀಡಲಾಗಿದೆ ಎಂಬ ಆರೋಪವಿದೆ. ʼಮೋದಾನಿʼ ಸತ್ಯ ಹೊರ ಬರಲಿ.

ಈ ನಡುವೆ, ಅಮೇರಿಕಾ ಕೋರ್ಟ್ ಈಗ ಹೊಸ ಆರೋಪ ಮಾಡಿದೆ. ಇನ್ನಾದರೂ ಮೋದಿ ಬಾಯಿ ಬಿಟ್ಟು ಮಾತಾಡಬೇಕಿದೆ. ತಾವು ದೇಶದ ಪ್ರಧಾನಿ ಎಂಬುವುದನ್ನು ಅರಿತು ಕೆಲಸ ಮಾಡಬೇಕಿದೆ. ಕೊನೆಯ ಪಕ್ಷ ಈ ಸಂಬಂಧಿಸಿದಂತೆ ಸಂವಾದಕ್ಕಾದರೂ ಮೋದಿ ಮುಂದಾಗಬೇಕಿದೆ.

-ಶ್ರೀರಾಜ್‌ ವಕ್ವಾಡಿ  

Thursday, November 14, 2024

ಕ್ರಿಶ್ಚಿಯನ್ ಟ್ರಂಪ್ ಗೆಲುವಿಗೆ, ಭಾರತೀಯ ಹಿಂದುತ್ವವಾದಿಗಳ ಸಂಭ್ರಮ !

 

ಕಮಲಾ ಹ್ಯಾರಿಸ್‌ ಮತ್ತು ಭಾರತ ವಿಶ್ವಗುರು ಗುರಿಯೊಳಗಿನ ಸೈದ್ಧಾಂತಿಕ ಗೊಂದಲ !?

 ಟ್ರಂಪ್‌ ಭಾಷಣ ಮಾಡುತ್ತಿದ್ದ ಸ್ಥಳದಿಂದ ಕೇವಲ 150 ಮೀಟರ್‌ ದೂರದ ಕಟ್ಟಡದ ಮೇಲೆ ಕುಳಿತು ಯುವಕನೊಬ್ಬ ಗುಂಡಿನ ದಾಳಿಯನ್ನು ನಡೆಸಿದ್ದ. ಅಂದು ಟ್ರಂಪ್‌ ಪ್ರಾಣಾಪಾಯದಿಂದ ಪಾರಾಗಿದ್ದರು. ಇದು ಟ್ರಂಪ್‌ ಪಾಲಿಗೆ ಮರುಜೀವವೇ ಎಂಬಂತಾಗಿತ್ತು. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿನ ಬಗ್ಗೆ ಮೇಲ್ನೋಟಕ್ಕೆ ಅಷ್ಟೇನೂ ವಿಶ್ವಾಸವಿರಲಿಲ್ಲ. ಆದರೇ, ಅಮೇರಿಕಾದ ಬುದ್ದಿಜೀವಿಗಳು ಟ್ರಂಪ್‌ ಗೆಲುವಿಗೆ ಆಘಾತಕ್ಕೊಳಗಾಗಿದ್ದಾರೆ. ಟ್ರಂಪ್‌ ಗೆಲುವು ಪ್ರಜಾಪ್ರಭುತ್ವದ ನಿರಾಕರಣೆ ಎಂಬ ಮಟ್ಟಿಗೆ ಅಲ್ಲಿನ ರಾಜಕೀಯ ವಲಯದಲ್ಲಿ ಚರ್ಚೆ ಆಯ್ತು ಎಂದರೇ ಆಶ್ಚರ್ಯಪಡಬೇಕಿಲ್ಲ. ಅದಿರಲಿ, ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದ ಡೊನಾಲ್ಡ್‌ ಟ್ರಂಪ್‌ ಎನ್ನುವ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದ ಕಾರಣಕ್ಕೆ ಹಿಂದುತ್ವ ಸಿದ್ದಾಂತವನ್ನು ಒಪ್ಪುವ ವರ್ಗ ಸಂಭ್ರಮ ಪಟ್ಟಿದ್ದು ನಿಜಕ್ಕೂ ಆಶ್ಚರ್ಯದ ಸಂಗತಿ. ಭಾರತೀಯ ಮೂಲದ ಅಭ್ಯರ್ಥಿ ಕಮಲಾ ಹ್ಯಾರೀಸ್‌ ಸೋಲಿಗೆ ಶೋಕ ವ್ಯಕ್ತಪಡಿಸಬೇಕಿರುವ ಬದಲು, ʼಅಮೇರಿಕಾದ ಇವಾಂಜೆಲಿಕಲ್‌ ಚರ್ಚ್‌ ನ ಬೆಂಬಲಿತ ಒಬ್ಬ ಕ್ರಿಶ್ಚಿಯನ್‌ ಅಭ್ಯರ್ಥಿʼ ಗೆದ್ದಿರುವುದಕ್ಕೆ ಸಂಭ್ರಮ ಪಟ್ಟಿದೆ.  

ಭಾಂಗ್ಲಾದೇಶ ಮತ್ತು ಕೆನಾಡದಲ್ಲಿ ಹಿಂದೂಗಳ ಮೇಲೆ ಹತ್ಯೆ ನಡೆದಾಗ ಆಕ್ರೋಶಗೊಂಡ ಈ ವರ್ಗ, ಅಮೇರಿಕಾದಂತಹ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ, ಹಿಂದೂ ಮಹಿಳೆ ಕಮಲಾ ಹ್ಯಾರೀಸ್‌ ಸೋತಾಗ ವಿಜಯೋತ್ಸವ ಎಂಬಂತೆ ಸಂಭ್ರಮ ಪಟ್ಟಿರುವಂತೆ ಮನೋ ಧೋರಣೆಯನ್ನ ತೋರಿಸಿತ್ತೆನ್ನುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ʼಕಮಲಾ ದೇವಿ ಹ್ಯಾರೀಸ್‌ʼ ಹಿಂದೂ ಧರ್ಮದಿಂದ ಬಂದ ಮಹಿಳೆ. ಆಕೆ ತನ್ನ ಹಿಂದೂ ಧರ್ಮದ ಮೂಲದ ಬಗ್ಗೆ ಹೆಮ್ಮೆ ಪಡುತ್ತಾಳೆ. ಹಿಂದೂ ಧರ್ಮದ ಮಹಿಳೆಯೊಬ್ಬಳು ಅಮೇರಿಕಾದ ಹಾಲಿ ಉಪಾಧ್ಯಕ್ಷೆ. ಭಾರತೀಯ ಮೂಲದ ಒಬ್ಬ ಮಹಿಳೆ ಅಮೇರಿಕಾದಂತಹ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಇಲ್ಲದ ಸಂಭ್ರಮ, ಯುನೈಟೆಡ್‌ ಕಿಂಗ್ಡಮ್‌ ನಲ್ಲಿ ಭಾರತದ ಮೂಲದ ರಿಷಿ ಸುನಾಕ್‌ ಪ್ರಧಾನಿ ಆದಾಗ ಇಡೀ ದೇಶಕ್ಕೆ ದೇಶವೇ ಸಂಭ್ರಮಿಸಿತು ಎನ್ನುವಷ್ಟರ ಮಟ್ಟಿಗೆ ಈ ವರ್ಗ ಬಿಂಬಿಸಿತ್ತು. ಇದು ಲಿಂಗ ತಾರತಮ್ಯವೋ ಅಥವಾ ಸೈದ್ಧಾಂತಿಕ ಭಿನ್ನಮತವೋ ತಿಳಿಯುತ್ತಿಲ್ಲ.

ಕಮಲಾ ಹ್ಯಾರಿಸ್‌ ಹಿಲರಿ ಕ್ಲಿಂಟನ್‌ರಂತಲ್ಲ(2016 ಚುನಾವಣೆಯಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಮಹಿಳಾ ಅಭ್ಯರ್ಥಿ), ಕಮಲಾ ಕಠಿಣ ಪರಿಶ್ರಮದಿಂದ ಈ ಎತ್ತರಕ್ಕೆ  ಏರಿದ ಮಹಿಳೆ. ಈ ಕಾರಣಕ್ಕಾಗಿಯಾದರೂ ಭಾರತ ಸಣ್ಣ ಮಟ್ಟದ ಹೆಮ್ಮೆಪಡಬೇಕಿತ್ತು.

ಆದರೆ, ಕಮಲಾ ಅವರ ಸೋಲಿಗೆ ಹಿಂದುತ್ವ ಸಿದ್ದಾಂತವನ್ನು ಒಪ್ಪುವ ಜನರು ಯಾಕೆ ಸಂಭ್ರಮಿಸುತ್ತಿದ್ದಾರೆ? ಎನ್ನುವುದು ಆಶ್ಚರ್ಯ. ಭಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಕಮಲಾ ಧ್ವನಿ ಎತ್ತಿಲ್ಲ ಎನ್ನುವ ಕಾರಣಕ್ಕಾಗಿಯೇ ? ಅಥವಾ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಸದಾ ಮಾತನಾಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ? ಬಹುಮತದ ರಾಜಕಾರಣವನ್ನು ಆಕೆ ಬೆಂಬಲಿಸದ ಕಾರಣಕ್ಕಾಗಿಯೇ ? ಅಥವಾ ಟ್ರಂಪ್ ಮಾಡುವಂತೆ ಕಮಲಾ ಕ್ರೂರ ಮತ್ತು ಸೆಕ್ಸಿಸ್ಟ್ ಜೋಕ್‌ಗಳನ್ನು(ಅಶ್ಲೀಲ ಹಾಸ್ಯ)ಮಾಡದ ಕಾರಣಕ್ಕಾಗಿಯೇ? ಒಂದೂ ತಿಳಿಯುತ್ತಿಲ್ಲ.

ಟ್ರಂಪ್ ಕಾರಣಕ್ಕಾಗಿ ಮತ್ತು ಅವರ ಅಧ್ಯಕ್ಷ ಸ್ಥಾನದ ಕಾರಣಕ್ಕಾಗಿ ಭಾರತಕ್ಕೆ ಲಾಭವಾಗಲಿದೆ ಎಂದು ಭಾವಿಸಿ ಸಂಭ್ರಮಿಸುತ್ತಿರುವವರು ಮೂರ್ಖರೆಂದೇ ಹೇಳಬೇಕಾಗುತ್ತದೆ. ಟ್ರಂಪ್ ಒಬ್ಬ ಅಮೇರಿಕನ್ ಮತ್ತು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ವ್ಯಕ್ತಿ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ʼಮೇರಿಕಾವನ್ನು ಮತ್ತೆ ಶ್ರೇಷ್ಠವನ್ನಾಗಿ ಮಾಡುವುದು ಟ್ರಂಪ್ ಭರವಸೆ. ಭಾರತವನ್ನಲ್ಲʼ ಎನ್ನುವುದನ್ನು ಅರ್ಥೈಸಿಕೊಳ್ಳಬೇಕಿದೆ. ಅಮೇರಿಕಾವನ್ನು ಮತ್ತೊಮ್ಮೆ ಶ್ರೇಷ್ಠವನ್ನಾಗಿ ಮಾಡುವ ತನ್ನ ಭರವಸೆಯನ್ನು ಈಡೇರಿಸಲು ಟ್ರಂಪ್ ತೆಗೆದುಕೊಳ್ಳುವ ಯಾವುದೇ ಕ್ರಮಗಳು ಭಾರತದ ಮತ್ತು ಪ್ರಪಂಚದ ಇತರೆ ದೇಶಗಳ ಬೇರೆ ಬೇರೆ ಮೂಲದಿಂದ ಬರಬಹುದು. ಭಾರತದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾದರೆ, ಟ್ರಂಪ್‌ ಅದಕ್ಕೂ ಹಿಂಜರಿಯುವುದಿಲ್ಲ.

ಟ್ರಂಪ್ ಅವರ ರಾಜಕೀಯ ಸಿದ್ಧಾಂತವಲ್ಲ. ಅದೊಂದು ವಹಿವಾಟು. ಟ್ರಂಪ್‌ ಸೃಷ್ಟಿಸಿದ ಸಿನಿಕತನದ ಪರಿಣಾಮವನ್ನು ಭಾರತ ಶೀಘ್ರದಲ್ಲೇ ಎದುರಿಸಬಹುದು ಎಂಬ ಚರ್ಚೆ ಸ್ವತಃ ಭಾರತೀಯ ರಾಜಕೀಯ ವಲಯದಲ್ಲೇ ಇದೆ. ಟ್ರಂಪ್ ಯುನೈಟೆಡ್ ಸ್ಟೇಟ್ಸ್‌ಗೆ ಭಾರತೀಯರ ಪ್ರವೇಶದ ಮೇಲೆ ನಿರ್ಬಂಧಗಳನ್ನು ಹೇರುವ ಸಾಧ್ಯತೆಯಿದೆ, "ಸುಂಕಗಳನ್ನು ಕಡಿತಗೊಳಿಸುವಂತೆ" ಭಾರತ ಸರ್ಕಾರವನ್ನು ಒತ್ತಾಯಿಸಬಹುದು ಮತ್ತು "ಭಾರತೀಯ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಬಹುದು". ಯುಎಸ್‌ ನೊಂದಿಗಿನ ವ್ಯಾಪಾರ ವಹಿವಾಟು ಹೆಚ್ಚು ಸವಾಲಿನದಾಗಿರಬಹುದು ಎಂಬ ಚರ್ಚೆ ಇದೆ ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ. ಚುನಾವಣೆಯ ಪೂರ್ವದಲ್ಲಿ ನೀಡಿದ, ವಲಸಿಗರನ್ನು ಹೊರಹಾಕುವ ಭರವಸೆಯನ್ನು ಹೇಳಿದಂತೆಯೇ ಅನುಸರಿಸಿದರೆ, ಟ್ರಂಪ್‌ ನೀತಿಯಿಂದ ಭಾರತೀಯರೇನು ಹೊರಗುಳಿಯುವುದಿಲ್ಲ. 

ಇನ್ನು, ʼಕಮಲಾ ದೇವಿ ಹ್ಯಾರಿಸ್‌ʼ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ, ಅವರು ಕೂಡ ತಮ್ಮ ಭಾರತೀಯ ಪರಂಪರೆಯ ಹೊರತಾಗಿ ಅಮೇರಿಕಾದ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕಾಗಿತ್ತು/ನೀಡುತ್ತಿದ್ದರು. ಆದ್ದರಿಂದ, ಯಾರೇ ಗೆದ್ದರೂ ಭಾರತಕ್ಕೆ ಸಂಭ್ರಮಿಸಲು ಇದರಲ್ಲಿ ಯಾವುದೇ ಕಾರಣವಿಲ್ಲ. ಟ್ರಂಪ್‌ ಅಮೇರಿಕಾದ ಅಧ್ಯಕ್ಷರಾದರು ಎಂಬ ಕಾರಣಕ್ಕೆ ಸಂಭ್ರಮಿಸದೇ, ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವತ್ತ ಗಮನಹರಿಸಬೇಕು. ಆದಾಗ್ಯೂ, ಟ್ರಂಪ್ ಅಸ್ಥಿರ ಸ್ವಭಾವದ ಅನಿರೀಕ್ಷಿತ ವ್ಯಕ್ತಿಯಾಗಿದ್ದು, ಅವರ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಗುರುತರವಾಗಿ ಭಾರತಕ್ಕೇನೂ ಲಾಭವಾಗಿಲ್ಲ.

ಕ್ರಿಶ್ಚಿಯನ್ ಟ್ರಂಪ್, ಭಾರತೀಯ ಹಿಂದುತ್ವವಾದಿಗಳ ಸಂಭ್ರಮ !  

ಟ್ರಂಪ್ 2016ರಲ್ಲಿ ಶ್ವೇತಭವನವನ್ನು ಗೆದ್ದರು, "ಕ್ರಿಶ್ಚಿಯನ್ ಧರ್ಮಕ್ಕೆ ಅಧಿಕಾರವಿದೆ" ಎಂದು ಭರವಸೆ ನೀಡಿದ್ದರು. ಕ್ರಿಶ್ಚಿಯನ್ ವಿರೋಧಿ ಪಕ್ಷಪಾತದ ವಿರುದ್ಧ ಹೋರಾಡಲು ಕಾರ್ಯಪಡೆಯನ್ನು ಟ್ರಂಪ್‌ ರಚಿಸಿದ್ದರು. ಬಹಳ ಪ್ರಮುಖವಾಗಿ ಟ್ರಂಪ್‌ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಸಂಪ್ರದಾಯವಾದಿ ಕ್ರಿಶ್ಚಿಯನ್ ನಾಯಕರಿಗೆ ಅನುಕೂಲವಾಗುವ ಹಾಗೆ ಮಾಡುತ್ತೇನೆಂದು ಭರವಸೆ ನೀಡುತ್ತಾರೆ. ಹಾಗಾದರೇ, ಭಾರತದಲ್ಲಿ ಹಿಂದೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವವರು ಈಗ ಕ್ರಿಶ್ಚಿಯನ್ ರಾಷ್ಟ್ರೀಯತೆಯ ಉದಯವನ್ನು ಅನುಮೋದಿಸುತ್ತಿದ್ದಾರೆನ್ನುವುದು ಇದರ ಅರ್ಥವೇ? ಹಾಗಿದ್ದಲ್ಲಿ, ಹಿಂದುತ್ವದ ಪ್ರತಿಪಾದಕರು ಇಸ್ಲಾಂ ಧರ್ಮದ ಜೊತೆಗೆ ಕ್ರಿಶ್ಚಿಯನ್ ಧರ್ಮವನ್ನು ಭಾರತದ ಏಕತೆ ಮತ್ತು ಸಮಗ್ರತೆಗೆ ಬೆದರಿಕೆ ಹಾಕುವ ಶತ್ರು ಶಕ್ತಿಗಳು ಎಂದು ಯಾಕೆ ಟೀಕಿಸುತ್ತಾರೆ?, ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಲಕ್ಷಾಂತರ ಡಾಲರ್‌ಗಳನ್ನು ದೇಶದಲ್ಲಿರುವ ಕ್ರಿಶ್ಚಿಯನ್ ಮೆಷನರಿಗಳಿಗೆ ಹರಿಬಿಡುತ್ತಾರೆ ಎಂದು ಯಾಕೆ ಆರೋಪಿಸುತ್ತಾರೆ? ಈ ದ್ವಂದ್ವ ನಿಲುವಿನ ಬಗ್ಗೆ ಬಹಳಷ್ಟು ಗೊಂದಲಗಳಿವೆ.

ಮಾಧವ ರಾವ್‌ ಸದಾಶಿವರಾವ್ ಗೋಳ್ವಾಲ್ಕರ್ ಅವರು ಕ್ರಿಶ್ಚಿಯನ್ನರನ್ನು ಭಾರತದ ಶತ್ರುಗಳು ಎಂದು ಬಹಳ ಹಿಂದೆಯೇ ಹೇಳಿದ್ದರು. ಕ್ರಿಶ್ಚಿಯನ್ ಮಿಷನರಿಗಳು ಭಾರತವನ್ನು ಕ್ರಿಶ್ಚಿಯನ್ ಭೂಮಿಯನ್ನಾಗಿ ಪರಿವರ್ತಿಸಲು ನೆರವಿನ ನೆಪದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು ಎನ್ನುವುದನ್ನು ಗಮನಿಸಬೇಕು.

ಆದರೇ, ಕ್ರಿಶ್ಚಿಯನ್ ಮಿಷನರಿಗಳ ಬಗ್ಗೆ ಅಥವಾ ಅವರ ಸಿದ್ಧಾಂತದ ಬಗ್ಗೆ ಆರ್‌ಎಸ್‌ಎಸ್ ತನ್ನ ನಿಲುವನ್ನು ಈಗ ಬದಲಾಯಿಸಿದೆಯೇ ಎನ್ನುವುದು ತಿಳಿಯುತ್ತಿಲ್ಲ. ಆರ್‌ಎಸ್‌ಎಸ್ ಕ್ರಿಶ್ಚಿಯನ್ ರಾಷ್ಟ್ರೀಯತೆಯೊಂದಿಗೆ ಮೃದು ಒಪ್ಪಂದಕ್ಕೆ ತಲುಪಿದೆಯೇ ?. ನಿರಾಕರಿಸಲಾಗದ ಸಂಗತಿಯೆಂದರೆ, ಟ್ರಂಪ್‌ರ ಅಮೇರಿಕ ನಾಗರಿಕತೆಗಳ ಘರ್ಷಣೆ ಮತ್ತು ಹಿಂದೂ ರಾಷ್ಟ್ರೀಯತೆಯ ಹಿಂದುತ್ವದ ಸಿದ್ಧಾಂತವನ್ನು ದುರ್ಬಲಗೊಳಿಸದೆ ಟ್ರಂಪ್‌ರ ಕ್ರಿಶ್ಚಿಯನ್ ರಾಷ್ಟ್ರೀಯತೆಯ ಅಮೇರಿಕಾ ಬೆಳೆಯುವುದಿಲ್ಲ. ಆದಾಗ್ಯೂ, ಟ್ರಂಪ್‌ ಬಗ್ಗೆ ಯಾಕೆ ಇಷ್ಟು ಒಲವು ? ಚುನಾವಣೆಯ ಲಾಭಕ್ಕಾಗಿ, ಜಾಗತಿಕವಾಗಿ ಹಿಂದೂ ಹಿತಾಸಕ್ತಿಗಳನ್ನು, ಹಿಂದೂಗಳ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಿಕೆ ನೀಡಿರುವುದು ಒಂದೇ ಕಾರಣವೇ ? ಗೊತ್ತಿಲ್ಲ.

ಒಂದು ಕಡೆ, ಹಿಂದುತ್ವದ ಅನುಯಾಯಿಗಳು ಭಾರತದಲ್ಲಿ ಹಿಂದೂ ಐಕ್ಯಕ್ಕಾಗಿ ಘೋಷಣೆಯನ್ನು ಹೊರಡಿಸಿದರೆ, ಮತ್ತೊಂದೆಡೆ, ವಿದೇಶದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದ ಹಿಂದೂ ಮೂಲದ ಮಹಿಳೆ ಕಮಲಾ ದೇವಿ ಹ್ಯಾರಿಸ್‌ ಅವರನ್ನು ಬೆಂಬಲಿಸಲು ಸಿದ್ಧರಿಲ್ಲ. ಇದು, ಭಾರತವನ್ನು ಶ್ರೇಷ್ಠಗೊಳಿಸುವುದಾಗಿ ಮತ್ತು ಭಾರತವನ್ನು ವಿಶ್ವಗುರು ಎಂದು ಪ್ರತಿಪಾದಿಸುವ ಗುರಿಯೊಳಗಿನ ಒಂದು ರೀತಿಯ ಸೈದ್ಧಾಂತಿಕ ಗೊಂದಲ ಮತ್ತು ವಿರೋಧಾಭಾಸವನ್ನು ಇದು ಸೂಚಿಸುವುದಿಲ್ಲವೇ? ಈ ವಿಷಯ ಗಂಭೀರ ಚಿಂತನಾರ್ಹವಾಗಿದೆ.

-ಶ್ರೀರಾಜ್‌ ವಕ್ವಾಡಿ.

Thursday, November 7, 2024

ʼಸುʼ ಅಂದ್ರೆ ಸುಕ್ಕಿನುಂಡೆ ಎನ್ನುವ ಬಿಜೆಪಿ ಮತ್ತು ದುರ್ಬಲಗೊಂಡ ಕಾಂಗ್ರೆಸ್‌ !

 

ಉಪಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮುಂದಿದೆ ಮರ್ಯಾದೆ ಪ್ರಶ್ನೆ.

 ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗಾಗಿ ಉಪ ಚುನಾವಣೆ ನಡೆಯಲಿದ್ದು, ಚುನಾವಣೆಯ ಬಿಸಿ ಏರಿದೆ. ಆಡಳಿತರೂಢ ಕಾಂಗ್ರೆಸ್‌ ಗೆ ಇದು ಅಕ್ಷರಶಃ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಗೂ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೈತ್ರಿ ಸಂಬಂಧವನ್ನು ಹೊಂದಿರುವುದರಿಂದ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಸೀಟು ಹಂಚಿಕೆ ಹಾಗೂ ಚುನಾವಣಾ ಕಾರ್ಯತಂತ್ರದ ಬಗ್ಗೆ ಭಿನ್ನಾಭಿಪ್ರಾಯ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ.  

ಸಿಎಂ ಸಿದ್ದರಾಮಯ್ಯ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ, ವಾಲ್ಮೀಕಿ ಅಕ್ರಮ ಹಣ ವರ್ಗಾವಣೆ ವಿವಾದ, ವಕ್ಫ್‌ ಆಸ್ತಿ ವಿವಾದವನ್ನು ಎದರಿಸುತ್ತಿದೆ. ಆದಾಗ್ಯೂ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಉಪ ಚುನಾವಣೆಯನ್ನು ಸಮರ್ಥವಾಗಿ ಎದರಿಸಬೇಕೆಂಬ ನಿಟ್ಟಿನಲ್ಲಿ ಮುನ್ನುಗ್ಗುತ್ತಿದೆ.‌ ಕಾಂಗ್ರೆಸ್‌ ಪ್ರತಿಪಕ್ಷಗಳಿಂದ ದೊಡ್ಡ ಮಟ್ಟದ ಆರೋಪಗಳನ್ನು ಎದುರಿಸುತ್ತಿದ್ದರೂ, ಅತಿಯಾದ ಆತ್ಮ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ ಎಂಬಂತೆ ಕಾಣಿಸುತ್ತಿದೆ. ಆಡಳಿತರೂಢ ಪಕ್ಷ ಕಾಂಗ್ರೆಸ್‌ ನಲ್ಲಿನ ಕೆಲವು ವೈಫಲ್ಯವನ್ನು ಬಿಜೆಪಿ, ಜೆಡಿಎಸ್‌ ರಾಜಕೀಯವಾಗಿ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ಮಾಡಿದ ಸರ್ವ ಪ್ರಯತ್ನ ದೊಡ್ಡ ಮಟ್ಟದಲ್ಲೇನೂ ಪರಿಣಾಮಕಾರಿಯಾಗಿ ಪ್ರಭಾವಿಸಲಿಲ್ಲ.

ಈ ಉಪ ಚುನಾವಣೆಗೂ ವಿಪಕ್ಷಗಳು ಇವನ್ನೇ ಅಸ್ತ್ರಗಳನ್ನಾಗಿ ಬಳಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ʼಸು ಎಂದರೇ ಸುಕ್ಕಿನುಂಡೆ ಎನ್ನುವ ಬಿಜೆಪಿ ಎದುರು ಪಕ್ಷ ಸಂಘಟನೆಯಲ್ಲಿ ನಿತ್ಯ ದುರ್ಬಲಗೊಳ್ಳುತ್ತಿರುವ  ಕಾಂಗ್ರೆಸ್‌ ನಡುವಿನ ಈ ಪ್ರತಿಷ್ಠೆಯ ಹಣಾಹಣಿ ಬಾರಿ ಕುತೂಹಲ ಮೂಡಿಸಿದೆ. ಚನ್ನಪಟ್ಟಣ, ಶಿಗ್ಗಾಂವ್‌ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಮಟ್ಟದ ನಾಯಕರು ಬೀಡುಬಿಟ್ಟಿದ್ದಾರೆ. ಆರೋಪ ಪ್ರತ್ಯಾರೋಪಗಳ ನಡುವೆ ಉಪ ಚುನಾವಣೆ ರಂಗೇರುತ್ತಿದೆ.

ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಕೇಂದ್ರದಲ್ಲೇ ಕೂತು ಮೋದಿ ಬಾಣ ಬಿಟ್ಟಿದ್ದು, ದೊಡ್ಡ ಮಟ್ಟದಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಪರಿಣಾಮ ಬೀರದೆ ಇದ್ದರೂ, ಮೋದಿ ಹೇಳಿರುವ ಕಾರಣಕ್ಕೆ ಒಂದಿಷ್ಟು ಚರ್ಚೆಯಾಗುವ ಸಾಧ್ಯತೆ ಇದೆ. ಮೋದಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರಾದರೂ, ಕಾಂಗ್ರೆಸ್‌ ವೈಫಲ್ಯವೇ ಎದ್ದು ಕಾಣಿಸುತ್ತಿರುವುವಾಗ ಈ ಗ್ಯಾರಂಟಿ ಯೋಜನೆಗಳೂ ಈ ಬಾರಿಯ ಉಪ ಚುನವಣೆಯಲ್ಲಿ ಬಹಳ ದೊಡ್ಡ ಬದಲಾವಣೆ ತಂದುಕೊಡಲಿದೆ ಎಂದು ತೀರಾ ಸುಲಭದಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಮೂರು ಕ್ಷೇತ್ರಗಳಲ್ಲಿ ವೈಯಕ್ತಿಕ ಪ್ರತಿಷ್ಠೆಯ ಆರೋಪ, ಪ್ರತ್ಯಾರೋಪಗಳು ಆಗುತ್ತಿವೆ ಹೊರತು, ಬೇರೆ ಏನೂ ಆಗುತ್ತಿಲ್ಲ.

ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗಳು ಹಾಗೂ ವಿವಾದಗಳು ಮುಖ್ಯಮಂತ್ರಿ ಬದಲಾವಣೆಯವರೆಗೆ ತಂದು ನಿಲ್ಲಿಸಿರುವ ಕಾರಣಕ್ಕೆ ಈ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಕಾಂಗ್ರೆಸ್‌ ಪಾಲಿಗೆ ʼಮರ್ಯಾದೆ ಉಳಿಸಿಕೊಳ್ಳುವ ಚುನಾವಣೆʼ ಅಷ್ಟೇ ಅಲ್ಲದೇ, ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಎಂದೂ ಅಂಟದ ಕಳಂಕವನ್ನು ಅಳಿಸುವ ಚುನಾವಣೆಯೂ ಹೌದು. ಹಾಗಾಗಿ ಕಾಂಗ್ರೆಸ್‌ ತುಸು ಹೆಚ್ಚೇ ಹುಮ್ಮಸ್ಸಿನಿಂದ ಗೆಲುವಿಗಾಗಿ ಹೋರಾಡುತ್ತಿದೆ. ಪಂಚ ಗ್ಯಾರಂಟಿಗಳ ನಾಗಾಲೋಟದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್‌ ಸರ್ಕಾರಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ, ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ವಿವಾದ, ವಕ್ಫ್‌ ನೋಟೀಸ್‌ ಹಗರಣಗಳು ಕಾಂಗ್ರೆಸ್‌ ನ ಆಡಳಿತ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿವೆ. ಬಹುಮತದಲ್ಲಿ ಗೆದ್ದು ಅಧಿಕಾರಕ್ಕೆ ಏರಿದ ಕಾಂಗ್ರೆಸ್‌ ಗೆ ಈ ಮೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಸೋತರೂ ಸರ್ಕಾರವೇನೂ ಉರುಳಿ ಬೀಳುವುದಿಲ್ಲ. ಆದರೆ, ಒಂದು ಕ್ಷೇತ್ರದಲ್ಲಿ ಸೋತರೂ ಪ್ರತಿಪಕ್ಷಗಳು ಕಾಂಗ್ರೆಸ್‌ ಮೇಲೆ ರಾಜ್ಯದ ಜನರು ಇರಿಸಿದ ಅಭಿಪ್ರಾಯವನ್ನು ಬದಲಾಯಿಸುವಲ್ಲಿ ಶತ ಪ್ರಯತ್ನ ಮಾಡುವಲ್ಲಿ ಅನುಮಾನವಿಲ್ಲ. ಮಾತ್ರವಲ್ಲದೇ, ಸಿದ್ದರಾಮಯ್ಯ ಅವರ ಮೇಲಿದ್ದ ಅಭಿಪ್ರಾಯ ಕಾಂಗ್ರೆಸ್‌ ಹೈಕಮಾಂಡ್‌ ಅವರಲ್ಲಿಯೂ ಬದಲಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ ಎಂದು ಕಾಣಿಸುತ್ತಿದೆ.

ಉಪ ಚುನಾವಣೆಯ ಬಳಿಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಂದು ರಾಜಕೀಯ ವಲಯದಲ್ಲೇ ಗುಲ್ಲೆದ್ದಿದೆ. 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಿತ್ತು. ಎರಡುವರೆ ವರ್ಷಗಳ ಒಪ್ಪಂದದ ಮೇರೆಗೆ ಮುಖ್ಯಮಂತ್ರಿಯನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಾಗಿತ್ತು. ಆದರೇ, ಸಿದ್ದರಾಮಯ್ಯ ಅವರು ಅನೇಕ ಬಾರಿ ಐದು ವರ್ಷಗಳು ತಾವೇ ಮುಖ್ಯಮಂತ್ರಿಯಾಗಿ ಇರಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ ಮುಖ್ಯಮಂತ್ರಿ ಬದಲಾವಣೆ ವಿಚಾರ ಮೇಲೆ ಬಂದಿದೆ. ಕಾಂಗ್ರೆಸ್‌ ನ ಹೈಕಮಾಂಡ್‌ ಮುಖ್ಯಮಂತ್ರಿ ಬದಲಾವಣೆ ಮಾಡುವ ಯಾವ ಮನಸ್ಥಿತಿಯಲ್ಲಿ ಇಲ್ಲ ಎಂದೇ ಅನ್ನಿಸುತ್ತದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಆಗಲೇಬೇಕಾದರೂ ಮೊದಲು ಕಾಣಿಸುವುದು ಡಿಕೆಶಿ. ಡಿಕೆಶಿ ಹೊರತಾಗಿ ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ಡಮ್ಮಿ ಆಗಿಯೇ ಉಳಿಯುತ್ತಾರೆ. ಇದು ಕಾಂಗ್ರೆಸ್‌ ನ ವೈಫಲ್ಯ ಕೂಡ. ಸಿಎಂ ಸ್ಥಾನಕ್ಕೆ ಸೂಕ್ತವೆನ್ನುವ ಮಟ್ಟಕ್ಕೆ ಕಾಂಗ್ರೆಸ್‌ ಹೊಸ ನಾಯಕರನ್ನು ಬೆಳೆಸಿಲ್ಲ ಎನ್ನುವುದು ಸತ್ಯ. ಹಾಗಾಗಿ ಸದ್ಯಕ್ಕೆ, ಡಿಕೆಶಿ ಅವರಿಗಿಂತ ಸಿದ್ದರಾಮಯ್ಯ ಸಾವಿರ ಪಟ್ಟು ಓಕೆ ಎನ್ನುವ ಮನಸ್ಥಿತಿಯಲ್ಲೇ ಹೈಕಮಾಂಡ್‌ ಇದೆ. ಹಾಗಾಗಿ ಮುಡಾ ಹಗರಣದ ತೀರ್ಪು ಬರುವಲ್ಲಿಯವರೆಗೆ ಮುಖ್ಯಮಂತ್ರಿ ಬದಲಾವಣೆಯ ವಿಚಾರಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಗಮನ ನೀಡುವುದಿಲ್ಲ ಎನ್ನುವ ಎಲ್ಲಾ ಲಕ್ಷಣಗಳು ನೇರವಾಗಿಯೇ ಕಾಣಿಸುತ್ತಿದೆ. ಆದ್ದರಿಂದ ಉಪ ಚುನಾವಣೆ ಆದ ಬಳಿಕವೂ ಮುಖ್ಯಮಂತ್ರಿ ಬದಲಾವಣೆ ವಿಚಾರ ಕಾಂಗ್ರೆಸ್‌ ಪಾಲಿಗೆ ಅಪ್ರಸ್ತುತವಾಗಿಯೇ ಕಾಣಿಸಲಿದೆ ಎಂದೇ ಹೇಳಬಹುದು.

ಮೂರು ಕ್ಷೇತ್ರಗಳ ಪ್ಲಸ್‌ ಮೈನಸ್‌ :

ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರ್‌ ಸ್ವಾಮಿ ಪರ ಬಿಎಸ್‌ವೈ-ಹೆಚ್‌ಡಿಕೆ ಪ್ರಚಾರ ಜಂಟಿಯಾಗಿ ಪ್ರಚಾರ ನಡೆಸಿದ್ದರೂ ನಿಲುವು ಬಿಜೆಪಿಯಲ್ಲಿ ಈವರೆಗೂ ಅಷ್ಟಾಗಿ ಕಾಣಿಸುತ್ತಿಲ್ಲ. ಚೆನ್ನಪಟ್ಟಣದಲ್ಲಿ ಹಿರಿಗೌಡರ ಕುಟುಂಬ ವರ್ಸಸ್‌ ಡಿಸಿಎಂ ಶಿವಕುಮಾರ್‌ ಅವರ ನಡುವಿನ ಪ್ರತಿಷ್ಠೆಯ ಹೋರಾಟವಾಗಿಯೇ ಕಾಣಿಸುತ್ತಿದೆ. ಜೆಡಿಎಸ್‌ ಪ್ರಭಾವ ಹೆಚ್ಚಿದೆ ಎಂದು ಕಾಣಿಸಿಕೊಂಡರೂ, ಡಿಕೆಶಿ ಜಾತಿ ಪ್ರಭಾವವೂ ಚೆನ್ನಪಟ್ಟಣದಲ್ಲಿದೆ. ಒಕ್ಕಲಿಗ ಮತದಾರರ ಬಲ ಹೊಂದಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಎರಡನೇ ಸ್ಥಾನದಲ್ಲಿದ್ದರೆ ದಲಿತರು ಮೂರನೇ ಸ್ಥಾನದಲ್ಲಿದ್ದು ನಿರ್ಣಾಯಕವಾಗಿವೆ. ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ, ಒಕ್ಕಲಿಗರು, ಪರಿಶಿಷ್ಟ ಜಾತಿ, ಮುಸ್ಲಿಂ ಸಮುದಾಯ, ಲಿಂಗಾಯತರ, ಹಾಗೂ ಕುರುಬರು ಇಲ್ಲಿ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ ಯೋಗೇಶ್ವರ ಪರವಾದ ಒಲವು ಕಾಣಿಸುತ್ತಿದೆ. ಆದರೂ ನಿಖಿಲ್‌ ಕುಮಾರಸ್ವಾಮಿ ಅವರನ್ನು ತೀರಾ ಏನೂ ಅಲ್ಲ ಎಂಬಂತೆ ಅಲ್ಲಗಳೆಯುವಂತಿಲ್ಲ.

ಶಿಗ್ಗಾವಿಯಲ್ಲಿ ಪಂಚಮಸಾಲಿ ಲಿಂಗಾಯತರೇ ಬಿಜೆಪಿ ಮೇಲೆ ಮುನಿಸಿಕೊಂಡಿದ್ದಾರೆ. ಪ್ರಬಪಂಚಮಸಾಲಿ ಲಿಂಗಾಯತರ ಪ್ರಭಾವ ಹೆಚ್ಚಿರುವ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ಪುತ್ರ ಭರತ್‌ ಅಭ್ಯರ್ಥಿ, ಕಾಂಗ್ರೆಸ್‌ ನಿಂದ ಪಠಾಣ್‌ ಕಣದಲ್ಲಿದ್ದಾರೆ. ಸವಣೂರು ಹೋಬಳಿಯಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಮತ್ತು ಮುಸ್ಲಿಂ ಸಮುದಾಯ ಹೊರತುಪಡಿಸಿ ಇತರ ಸಮುದಾಯದವರ ಪ್ರಭಾವ ಇಲ್ಲಿ ಕಡಿಮೆ. ಲಿಂಗಾಯತ ಸಮುದಾಯದವರು, ಮುಸ್ಲಿಂ ಸಮುದಾಯದವರು, ಕುರುಬ ಸಮುದಾಯದವರು, ಎಸ್‌ಟಿ-ಎಸ್‌ಟಿ, ಲಂಬಾಣಿ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಾರಿ ಸ್ವಲ್ಪ ಮೇಲ್ನೋಟಕ್ಕೆ ಕಾಂಗ್ರೆಸ್‌ ಪರವಾದ ವಾತಾವರಣ ಕಾಣಿಸುತ್ತಿದೆ.

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಹಳೆ ದೋಸ್ತಿಗಳು ಈ ಬಾರಿ ಒಂದಾಗಿದ್ದಾರೆ. ಮಾಜಿ ಸಚಿವ ಜನಾರ್ದನ್‌ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮಲು ವೈಮನಸ್ಸು ಮುರಿದು ಒಂದಾಗಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದರಿಂದ ಬಿಜೆಪಿಯಲ್ಲಿ ಒಂದು ಸಣ್ಣ ವಿಶ್ವಾಸವಿದೆ. ಕಾಂಗ್ರೆಸ್‌ ಸಂಸದ ತುಕಾರಾಮ್‌ ಅವರಿಗೆ ತಮ್ಮ ಪತ್ನಿಯೇ ಅಭ್ಯರ್ಥಿಯಾಗಿರುವುದರಿಂದ ಗೆಲ್ಲಿಸಿಕೊಡಲೇಬೇಕಾದ ಅನಿವಾರ್ಯಕ್ಕೆ ಎದುರಾಗಿದ್ದಾರೆ. ಪರಿಶಿಷ್ಟ ಪಂಗಡದ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಇವರೇ ಬಹುಸಂಖ್ಯಾತರು. ಬಳಿಕ ದಲಿತ ಸಮುದಾಯ, ಮುಸಲ್ಮಾನ, ಈಡಿಗ, ಕುರುಬ ಸಮುದಾಯಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಒಟ್ಟಿನಲ್ಲಿ, ಈ ಉಪ ಚುನಾವಣೆ ಕೆಲವರ ಪ್ರತಿಷ್ಠೆ, ಮುಖ್ಯಮಂತ್ರಿ ಬದಲಾವಣೆ, ಕುಟುಂಬ ರಾಜಕಾರಣ, ಆಡಳಿತ ಸರ್ಕಾರ ಮತ್ತು ವಿಪಕ್ಷಗಳ ಮರ್ಯಾದೆ ಪ್ರಶ್ನೆಯನ್ನು ಮುಂದಿರಿಸಿದೆ. ಚುನಾವಣೆ ಮತ್ತು ಚುನಾವಣೆ ಬಳಿಕವೂ ನಡೆಯುವ ವಿದ್ಯಮಾನಗಳ ಬಗ್ಗೆ ಕುತೂಹಲವಂತೂ ಇದೆ. ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ