ಯಡಿಯೂರಪ್ಪ, ವಿಜಯೇಂದ್ರ ವರ್ಸಸ್ ಯತ್ನಾಳ್ ಮತ್ತು ಹೈಕಮಾಂಡ್ !
ಒಂದೆಡೆ ಅಪ್ಪನ ಹೆಸರಿನಲ್ಲಿ ರಾಜಕೀಯಕ್ಕೆ ಬಂದ ವಿಜಯೇಂದ್ರ ಯಡಿಯೂರಪ್ಪ, ಮತ್ತೊಂದೆಡೆ ಸದಾ ಬಿಎಸ್‌ವೈ ಹಾಗೂ ವಿಜಯೇಂದ್ರ ವಿರುದ್ಧ ಟೀಕಿಸುತ್ತಲೇ ಬಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಬಿಜೆಪಿಯೊಳಗಿನ ಈ ಆಂತರಿಕ ವೈಮನಸ್ಸು ಸದ್ಯದ ರಾಜಕೀಯ ಚರ್ಚೆ. ಶಾಸಕ ಯತ್ನಾಳ್ ಕಳೆದ ಒಂದು ವರ್ಷಕ್ಕಿಂತಲೂ ಹಿಂದಿನಿಂದ ಯಡಿಯೂರಪ್ಪ ಅವರ ವಿರುದ್ಧ ಗಂಭೀರ ಆರೋಪ ಹೊರಿಸುತ್ತಲೇ ಬಂದಿದ್ದಾರೆ. ಯತ್ನಾಳ್ ಅವರು ಯಡಿಯೂರಪ್ಪ ಅವರ ಮೇಲೆ ಹೊರಿಸಿರುವ ಕೋವಿಡ್ ಹಗರಣದ ಆರೋಪ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಅಸ್ತ್ರವಾಗಿ ದೊರಕಿತು. ಪ್ರಕರಣ ತನಿಖೆಯ ಹಂತದವರೆಗೆ ಬಂದು ನಿಂತಿದೆ.
ಕಾಂಗ್ರೆಸ್‌ನ ನೆಪೊಟೀಸಂ ರಾಜಕಾರಣವನ್ನು ಸದಾ ಟೀಕಿಸುತ್ತಲೇ ಬಂದ ಬಿಜೆಪಿಯ ಹೈಕಮಾಂಡ್, ಕರ್ನಾಟಕದ ವಿಚಾರದಲ್ಲಿ, ಅದರಲ್ಲೂ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ವಿಚಾರದಲ್ಲಿ ಕೈಸೋತು, ಯಡಿಯೂರಪ್ಪರ ಎಲ್ಲಾ ಶಿಫಾರಸ್ಸಿಗೆ, ಪ್ರಭಾವಕ್ಕೆ, ರಾಜಕೀಯ ಬಂಡಾಯಕ್ಕೆ ಮಣಿದು ಕೂರಬೇಕಾಯಿತು. ಈಗ ಹೈಕಮಾಂಡ್‌ಗೆ ಯಡಿಯೂರಪ್ಪರನ್ನು ಸಮಾಧಾನ ಪಡಿಸಿ ಸುಸ್ತಾದಂತೆ ಕಾಣಿಸುತ್ತಿದೆ.
ವಿಜಯೇಂದ್ರ ಯಡಿಯೂರಪ್ಪ ಅವರ ಮೇಲೆ ಯತ್ನಾಳ್‌ಗೆ ಅಷ್ಟೇ ಅಲ್ಲ. ಒಂದು ದೊಡ್ಡ ವಿರೋಧ ಬಣವೇ ಇದೆ. ರಾಜ್ಯದ ಬಿಜೆಪಿ ಪಕ್ಷ ಸದ್ಯಕ್ಕೆ ವಿಜಯೇಂದ್ರ ಅವರ ಕೈಯಲ್ಲಿರುವುದರಿಂದ ಆ ಆಕ್ರೋಶ ಇನ್ನೂ ನೇರವಾಗಿ ಹೊರಬಂದಿಲ್ಲ ಅಷ್ಟೇ. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯತ್ನಾಳ್ ಗೆ ಅವಕಾಶ ದೊರಕಿಲ್ಲ ಎಂಬ ವಿಚಾರಕ್ಕೆ ಯತ್ನಾಳ್ ಬಂಡಾಯ ಆರಂಭಿಸಿದ್ದರು. ಯತ್ನಾಳ್ ಹಿಂದೆ ಒಂದಿಷ್ಟು ಮಂದಿ ಇದ್ದಾರೆ. ಅವರದ್ದೂ ವೈಯಕ್ತಿಕ ಪ್ರತಿಷ್ಠೆಗಳೇ ಆಗಿವೆ. ಇತ್ತ ವಿಜಯೇಂದ್ರ ನಾಯಕತ್ವವನ್ನು ಒಪ್ಪಿಕೊಂಡು ಇರುವವರದ್ದೂ ಕೂಡ ವೈಯಕ್ತಿಕ ಹಿತಾಸಕ್ತಿಯೇ ಆಗಿದೆ.
ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಭಿನ್ನಮತದ ಕಾರಣದಿಂದ ಕಾಂಗ್ರೆಸ್ ಸುಖಾಸುಮ್ಮನೆ ಆರೋಪ ಕೇಳುವ ಹಾಗಾಗಿದೆ. ಯಡಿಯೂರಪ್ಪ, ವಿಜಯೇಂದ್ರ ನಿಷ್ಠರು ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಯತ್ನಾಳ್ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿರುವುದು ರಾಜಕೀಯ ತಿರುಚುವಿಕೆ ಎನ್ನುವುದರಲ್ಲಿ ಸಂಶಯವಿಲ್ಲ. ಅಷ್ಟಲ್ಲದೇ ವಿಜಯೇಂದ್ರ ಶಕ್ತಿ ಪ್ರದರ್ಶನಕ್ಕಾಗಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶವೊಂದಕ್ಕೆ ಮುಂದಾಗಿರುವುದು ಗಮನಿಸಿದರೇ, ಹೈಕಮಾಂಡ್ ಅನ್ನು ಒಲಿಸಿಕೊಳ್ಳುವ ಪ್ರಯತ್ನವೇ ಆಗಿದೆ ಎಂದು ಕಾಣಿಸುತ್ತಿದೆ. ಒಳಗಿಂದೊಳಗೆ ರಾಜ್ಯ ಬಿಜೆಪಿಯ ಪೂರ್ಣ ಅಧಿಕಾರವನ್ನು ಯಡಿಯೂರಪ್ಪ ಅವರಿಗಾಗಲಿ ಅಥವಾ ವಿಜಯೇಂದ್ರರಿಗಾಗಲಿ ನೀಡುವುದಕ್ಕೆ ಸ್ವತಃ ಬಿಜೆಪಿ ಹೈಕಮಾಂಡ್‌ಗೆ ಇಷ್ಟವಿಲ್ಲ. ಲಿಂಗಾಯತ ಮತಗಳು ವಿಮುಖವಾಗುತ್ತವೆ ಎಂಬ ಕಾರಣಕ್ಕೆ ಯಡಿಯೂರಪ್ಪ ಹಾಗೂ ಮಗ ವಿಜಯೇಂದ್ರರಿಗೆ ಸದ್ಯಕ್ಕೆ ಬಿಜೆಪಿಯ ರಾಜಕೀಯ ವೃದ್ಧಿಯ ಹೊಣೆಗಾರಿಕೆಯನ್ನು ಹೈಕಮಾಂಡ್ ವಹಿಸಿದೆ. ಇನ್ನೊಂದೆಡೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್‌ಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಹೈಕಮಾಂಡ್ ದೃಷ್ಟಿಗೆ ʼಪ್ರಭಾವಿʼಗಳಾಗಿ ಬೆಳೆಯುವುದು ಇಷ್ಟವಿಲ್ಲ. ಬಿ.ಎಲ್. ಸಂತೋಷ್ ಅವರ ಗೌಪ್ಯ ನಿರ್ದೇಶನದಲ್ಲೇ ಹೈಕಮಾಂಡ್ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿತ್ತು. ಅದರ ಪರಿಣಾಮದಿಂದ ಬಿಜೆಪಿ ಎದುರಿಸಿದ ಸಂಕಷ್ಟ ಅರಿವಾಗಿ ಮತ್ತೆ ಹೈಕಮಾಂಡ್ ಯಡಿಯೂರಪ್ಪ ಅವರ ಎಲ್ಲಾ ಶಿಫಾರಸ್ಸಿಗೆ ಅಸ್ತು ಎನ್ನುವುದಕ್ಕೆ ಆರಂಭಿಸಿತ್ತು. ವಿಜಯೇಂದ್ರ ಅವರನ್ನು ವಿಧಾನಸಭೆಗೆ ಕಳುಹಿಸಿದ್ದಲ್ಲದೇ, ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವಲ್ಲಿ ಯಶಸ್ವಿಯಾಗಿ ಪರೋಕ್ಷವಾಗಿ ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ತನ್ನ ಕೈಯೊಳಗೆ ಇರಿಸಿಕೊಂಡರು. ಇದು ಯತ್ನಾಳ್ ಮೊದಲಾದ ಅತೃಪ್ತ ಬಿಜೆಪಿಗರಿಗೆ ಹಿಡಿಸಿಲ್ಲ. ಬಂಡಾಯ ಆರಂಭವಾಯಿತು. ಹೈಕಮಾಂಡ್‌ಗೂ ತಲುಪಿತು. ಈಗ ಪರೋಕ್ಷವಾಗಿ ಯತ್ನಾಳ್ ಅವರನ್ನು ಸ್ವತಃ ಹೈಕಮಾಂಡೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಎತ್ತಿ ಕಟ್ಟಿದ ಹಾಗಿದೆ.
ವಿಜಯೇಂದ್ರ ಸುಲಭದಲ್ಲಿ ರಾಜಕೀಯ ಪ್ರವೇಶ ಮಾಡಿದವರು. ತಂದೆ ಹೆಸರು ವಿಜಯೇಂದ್ರ ಅವರ ರಾಜಕೀಯ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಶಿಕಾರಿಪುರ ವಿಧಾಸನಭಾ ಚುನಾವಣೆಯಲ್ಲಿ ವಿಜಯೇಂದ್ರ ಯಡಿಯೂರಪ್ಪ ಬಹಳ ದೊಡ್ಡ ಅಂತರದಿಂದೇನೂ ಗೆದ್ದವರಲ್ಲ. ಅಲ್ಲಿನ ಸ್ವತಂತ್ರ ಅಭ್ಯರ್ಥಿ ನಾಗರಾಜ ಗೌಡ ಅವರ ವಿರುದ್ಧ ಕೇವಲ 11,008 ಮತಗಳ ಅಂತರದಲ್ಲಿ ಗೆದ್ದಿದ್ದು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ವಿಜಯೇಂದ್ರ ಯಡಿಯೂರಪ್ಪಗೆ ಸ್ವಂತ ರಾಜಕೀಯ ವರ್ಚಸ್ಸು ಇಲ್ಲ ಎನ್ನುವುದು ಇದರ ಸೂಚ್ಯ ಅರ್ಥ. ಅಪ್ಪನ ಹೆಸರಿನಲ್ಲಿ ರಾಜಕೀಯ ಪ್ರವೇಶ ಪಡೆದು ಏನೂ ರಾಜಕೀಯ ಸಾಧನೆ ಇಲ್ಲದೇ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರಿರುವುದು ಬಿಜೆಪಿಯ ಬಹುತೇಕ ಪ್ರಭಾವಿ ನಾಯಕರಿಗೆ ಸಮಾಧಾನವಿಲ್ಲ. ಇನ್ನು, ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ವಿಜಯೇಂದ್ರ ʼಸೂಪರ್ ಸಿಎಂʼ ಆಗಿ ಕೆಸಲ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ʼವಿಜಯೇಂದ್ರ ಅವರಪ್ಪನ ಸಹಿ ಮಾಡಿ ಕಡತಗಳನ್ನು ರವಾನಿಸಿರುವ ಉದಾಹರಣೆಗಳಿವೆ. ಈ ಬಗ್ಗೆ ಕಾಂಗ್ರೆಸ್‌ನ ಬಿ.ಕೆ ಹರಿಪ್ರಸಾದ್ ಆರೋಪ ಮಾಡಿದ್ದರುʼ ಎಂದು ಇತ್ತೀಚೆಗೆ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದರು.
ಏನೇ ಇರಲಿ, ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲ ರಂಪಾಟ ನಡೆಯುತ್ತಿದ್ದರೂ ಹೈಕಮಾಂಡ್ ಕ್ರಮಕ್ಕೆ ಮುಂದಾಗದೇ ಮೌನವಹಿಸಿರುವುದು ಆಶ್ಚರ್ಯದ ಸಂಗತಿ. ಮೇಲ್ನೋಟಕ್ಕೆ ವಿಚಾರಣೆ ಅದು, ಇದು ನಡೆಸಿದ ಹಾಗೆ ಮಾಡಿದರೂ ಸದ್ಯಕ್ಕೆ ಕ್ರಮ ತೆಗೆದುಕೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಮಗು ಚಿವುಟಿ, ತೊಟ್ಟಿಲು ತೂಗುವ ಕೆಲಸ ಪಕ್ಷದ ವರಿಷ್ಠರಿಂದ ನಡೆದಿದೆ ಎನ್ನುವುದು ರಾಜ್ಯ ಬಿಜೆಪಿಯ ಪ್ರಸ್ತುತ ಸ್ಥಿತಿಗೆ ಸಾರ್ಥಕವಾಗಿ ಒಪ್ಪುತ್ತದೆ.
ಇನ್ನು, ವಿಜಯೇಂದ್ರ ಪರ ನಿಷ್ಠರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಮಧ್ಯ ಕರ್ನಾಟಕದ ಕೇಂದ್ರವಾದ ದಾವಣಗೆರೆಯಲ್ಲಿ ಇದೀಗ ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಶಾಸಕ ಯತ್ನಾಳ್ ತಮ್ಮ ವಿರುದ್ಧ ಮೇಲಿಂದ ಮೇಲೆ ಆರೋಪ ಮಾಡುತ್ತಿದ್ದರೂ ಹೈಕಮಾಂಡ್ ಸುಮ್ಮನಿರುವುದರ ಹಿಂದೆ ಉದ್ದೇಶ ಬೇರೆ ಇದೆ ಎನ್ನುವ ಬಗ್ಗೆ ಸ್ವತಃ ಯಡಿಯೂರಪ್ಪ ಅವರಿಗೂ ತಿಳಿದಿದೆ. ಹಾಗಾಗಿ ಹೈಕಮಾಂಡ್‌ಗೆ ಕರ್ನಾಟಕದಲ್ಲಿ ʼಯಡಿಯೂರಪ್ಪರ ಬಲʼ ಏನೆಂದು ತೋರಿಸುವುದೇ ಈ ಸಮಾವೇಶದ ಮುಖ್ಯ ಗುರಿ ಎಂದನ್ನಿಸುತ್ತಿದೆ. ಈ ನಡುವೆ ವರಿಷ್ಠರ ಮೇಲಿನ ಸಿಟ್ಟಿಗೆ ಬಿಜೆಪಿಯನ್ನು ಮತ್ತೆ ಒಡೆಯುವುದಕ್ಕೂ ಯಡಿಯೂರಪ್ಪ ಹಿಂಜರಿಯುವವರಲ್ಲ. ಈ ಹಿಂದಿನ ಅವರ ರಾಜಕೀಯ ಇತಿಹಾಸ ತಿಳಿದೇ ಇದೆ. ಮತ್ತೆ ಮರಳಿ ಅದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ.
ಇನ್ನು, ವಕ್ಫ್ ಹಗರಣದ ವಿರುದ್ಧ ರಾಜ್ಯ ಬಿಜೆಪಿ ಡಿಸೆಂಬರ್ ನಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಸದ್ಯದಲ್ಲೇ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ವಕ್ಫ್ ಆಸ್ತಿ ವಿವಾದವನ್ನೇ ಪ್ರಮುಖ ಅಸ್ತ್ರವನ್ನಾಗಿಟ್ಟುಕೊಂಡು ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರಕ್ಕೂ ತಯಾರಿಯೂ ನಡೆದಿದೆ.
ಆರ್. ಅಶೋಕ್ಗೂ, ವಿಜಯೇಂದ್ರಗೂ ಅಷ್ಟಕ್ಕಷ್ಟೆ. ಆದರೂ ಅಧಿವೇಶನಗಳಲ್ಲಿ ಕೈಜೋಡಿಸುತ್ತಾರೆ. ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗಿದೆ. ಇದೇ ಹುಮ್ಮಸ್ಸಿನಲ್ಲಿ ಸದನದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಕಾಂಗ್ರೆಸ್ ಕೂಡ ಸಜ್ಜಾಗಿದೆ. ವಕ್ಪ್ ಆಸ್ತಿ ವಿವಾದದ ಬಗ್ಗೆ ಕಾಂಗ್ರೆಸ್‌ನಲ್ಲಿಯೂ ಬಿಜೆಪಿಯ ಅವಧಿಯಲ್ಲಾದ ಈ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಅಧೀವೇಶನ ಹೇಗೆ ತಿರುಗುತ್ತದೆ ಎನ್ನುವುದು ಊಹೆಗೂ ಸಿಲುಕುತ್ತಿಲ್ಲ. ಬಿಜೆಪಿಯ ಬಣ ರಾಜಕಾರಣ, ವಕ್ಪ ಆಸ್ತಿ ವಿವಾದ, ಮುಡಾ ಇವುಗಳ ವ್ಯರ್ಥ ಚರ್ಚೆಯಲ್ಲೇ ಮುಗಿಯುತ್ತದೇನೋ.
ಇನ್ನು, ʼಬಸವಣ್ಣನವರು ಕೈಲಾಗದವರಂತೆ ಕೊನೆಗೆ ಕೈಚೆಲ್ಲಿ ಪ್ರಾಣ ಬಿಟ್ಟರು. ಅವರಂತೆಯೇ ಸಮಾಜದವರೆಲ್ಲಾ ಹೊಳೆಗೆ ಹಾರಿʼ ಎಂದು ಯತ್ನಾಳ್ ನೀಡಿರುವ ಹೇಳಿಕೆಯ ವಿರುದ್ಧ ಈಗ ಲಿಂಗಾಯತ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕೂಡ ವಿಜಯೇಂದ್ರ ಪ್ರಾಯೋಜಕತ್ವವೇ ಆಗಿದೆ ಎನ್ನುವುದು ನೇರವಾಗಿ ಕಾಣಿಸುತ್ತಿದೆ. ಇತ್ತ ಕಡೆ ಯತ್ನಾಳ್ ಪರವಾಗಿ ಇರುವವರ ಗುಂಪು ವರಿಷ್ಠರ ಭೇಟಿಯಲ್ಲೂ ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದಾರೆ. ಹೈಕಮಾಂಡ್ ಯತ್ನಾಳ್ ವಿರುದ್ಧ ತತ್‌ಕ್ಷಣದ ಕ್ರಮಕ್ಕೆ ಮುಂದಾಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಇದು ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಹೈಕಮಾಂಡ್‌ನ ಯೋಜಿತ ಕ್ರಮವೆಂದೇ ಕಾಣಿಸುತ್ತಿದೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಒಳ ಬೇಗುದಿ ಸ್ಪೋಟಗೊಂಡಿದೆ. ಮುಂದೇನಾಗಲಿದೆ ಎನ್ನುವುದು ಸದ್ಯದ ಕುತೂಹಲ.
-ಶ್ರೀರಾಜ್ ವಕ್ವಾಡಿ

No comments:
Post a Comment