Wednesday, April 29, 2020

ಪ್ರೀತಿಯೆಂದರೇ, ಪೂರಿಯೊಳಗಿನ ಪಾನಿಯಂತೆ ಚೂರ‍್ಚೂರು ಖಾರ..!



ಪ್ರೀತಿಯೆಂದರೇ, ಹಲವರು, ಹಲವಾರು ರೀತಿಯಲ್ಲಿ ಡೆಫಿನೇಶನ್ ಕೊಡಬಲ್ಲರು. ಕೆಲವರು ರೋಮಿಯೋ ಜುಲಿಯೆಟ್‌ನ್ನು ವಿವರಿಸಬಹುದು, ಕೆಲವರು ಕೃಷ್ಣ ರಾಧೆಯರನ್ನು ಹಾಡಿ ಹೊಗಳಬಹುದು, ಕೆಲವರು ಶಹಜಾನ್ ಮುಮ್ತಾಜ್‌ನ್ನು ವರ್ಣಿಸಬಹುದು.

ಹಾಗಾದ್ರೇ.. ಈ ಪ್ರೀತಿ, ಪ್ರೇಮ ಪುರಾಣ ಅಂದ್ರೇ ಏನು..? ‘ಪ್ರೀತಿ’ಗೆ ಅಷ್ಟು ಸುಲಭವಾಗಿ ಡೆಫಿನೇಶನ್ ಕೊಡೋದಕ್ಕೆ ಸಾಧ್ಯವಿದೆಯಾ..?. ‘ಇಟ್ ಈಸ್ ಅನ್‌ಕಂಡೀಶನಲ್ ಅಫೆಕ್ಶನ್’ ಅಂತ ಅಪ್ಪಟ ಆಂಗ್ಲ ಭಾಷೆಯಲ್ಲಿ ಒಂದೇ ಸೆಂಟೆನ್ಸ್ ಅಲ್ಲಿ ಹೇಳಿ ಬಿಡಬಹುದು. ಆದರೇ ಅದು ಅದಕ್ಕಿಂತ ಮೀರಿದ್ದು ಎನ್ನುವುದು ಪ್ರೀತಿಯಷ್ಟೇ ಸತ್ಯ.

ಪ್ರೀತಿಯ ಸ್ವರೂಪ ಯಾವುದು..? ಅದು ಹೇಗೆ ವ್ಯಕ್ತವಾಗುತ್ತದೆ..? ಎನ್ನುವುದನ್ನು ಇದಮಿತ್ಥಂ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೇ, ಅದು ಹೇಳಲಾಗದ ಉತ್ಕಟಾನುಪಮ ಅನುಭವ. ನಾವು ಅದನ್ನು ಏನೆಂದು ತಿಳಿದುಕೊಂಡಿದ್ದೇವೋ ಅದಕ್ಕಿಂತ ಉನ್ನತವಾದ ಸೊಗಸದು. ಹಾಗಾಗಿ, ಪ್ರೀತಿಗೆ ಅರ್ಥ ಕಟ್ಟುವುದಕ್ಕೆ ಖಂಡಿತ ಆಗಲಾರದು.

ಪ್ರೀತಿಯ ಹುಟ್ಟು ಮತ್ತು ಅದು ವಿಸ್ತಾರಗೊಳ್ಳುವ ಬಗೆಯ ಕಥೆ ಹೇಗೆ ಇರಬೇಕು ಎನ್ನುವ ಹಕ್ಕು ಆ ಪ್ರೀತಿಗೆ ಗೊತ್ತಿದೆ. ಖುಷಿ, ಸಂತೋಷ, ಹಿತಾನುಭವ, ವೈಮಸ್ಸು, ದುಃಖ, ದುಮ್ಮಾನ, ಏಕಾಂತ ಎಲ್ಲವನ್ನೂ ಸಂಬಂಧದಲ್ಲಿ ಸಂಕಲಿಸುತ್ತದೆ ಪ್ರೀತಿ. ಅದು ಪ್ರೀತಿಯ ಖಚಿತ ಸಂಕೇತ. ಅನುಬಂಧದ ಅನಿಯಮಿತ ಮೇರೆಯನ್ನು ಮೀರುತ್ತಲೇ ಹಿತ ಕೊಡುವ ಶಕ್ತಿ ಇದೆ ಅಂದ್ರೇ ಅದು ಕೇವಲ ಪ್ರೀತಿಗೆ ಮಾತ್ರ.

‘ಬೇಡ ಎಂದರೂ ನಾ ಬಿಡೆ ಎನ್ನುವ ಮಮತೆ’, ‘ನೆನಪಿಸಲಿಚ್ಛಿಸದಿದ್ದರೂ ನೆನಪಿಸಿ ಕೊಡುವ ಸಂವೇದನೆ’, ‘ದೂರ ಸರಿದರೂ ಸನಿಹ ಬಯಸುವ ಭಾವನೆ’ ಇರುವುದು ಪ್ರೀತಿಗೆ ಮಾತ್ರ. ಸಣ್ಣ ಜಗಳವಾಡಿದ ಜೋಡಿಯಲ್ಲಿ ಮುನಿಸು ಆವರಿಸಿಕೊಂಡರೇ, ಕೆಲ ಹೊತ್ತಿನಲ್ಲೇ ಅವರಲ್ಲಿ ಯಾರಾದರೂ ಒಬ್ಬರು ಬಂದು ‘ಇನ್ನೂ ಕೋಪನಾ’ ಅಂತ ಕೇಳ್ತಾರೆ. ದೂರವಾಗಿದ್ರೇ, ‘ನಿನ್ನ ನೆನಪಾಗ್ತಿದೆ’ ಅಂತ ಮನಸ್ಸು ಹೇಳುತ್ತೆ. ಅದೇ ಪ್ರೀತಿಯ ವಿಶೇಷ. ಇದ್ದಾಗ ಅಮಿತ ಸಂಭ್ರಮವನ್ನಿತ್ತು ಹಿತ ಉಣಿಸುವ, ಇಲ್ಲದಿದ್ದಾಗ ಅಷ್ಟೇ ದುಃಖ ಕೊಟ್ಟು ಕಾಡಿಸುವ ಒಂದು ಅನುಭವ ನಮ್ಮಲ್ಲಾಗುತ್ತದೆ ಅಂದ್ರೇ ಅದು ನಿಜಕ್ಕೂ ಪ್ರೀತಿ.



ಇಲ್ಲಿ ಎಲ್ಲವೂ ಸಹ್ಯ. ಕೋಪ, ತಾಪ, ಮುನಿಸು, ದುಃಖ, ಎಲ್ಲವೂ. ಎಷ್ಟೇ ನೋವಾದರೂ, ‘ನನಗೆ ನೀನೇ ಬೇಕು’, ‘ಐ ವಿಲ್ ಹ್ಯಾಪಿ ವೀಥ್ ಯೂ’ ಅಂತ ಹೇಳಿ ಭಾವನೆಗಳ ಜೊತೆ ಮಾತಾಡಬಲ್ಲ ಮನಸ್ಸು ಪ್ರೀತಿಗಲ್ಲದೇ ಮತ್ತ್ಯಾವುದಕ್ಕೆ ಬರಲು ಸಾಧ್ಯ..?!

ಇಂತಹ ಪ್ರೀತಿಗೆ ಸಾವುಂಟೆ...? ಖಂಡಿತ ಇಲ್ಲ. ಪ್ರೀತಿ ಸತ್ತು ಹೋಗುವುದಿಲ್ಲ. ಅದಕ್ಕೆ ಸಾವೇ ಇಲ್ಲ. ಇರುವುದು ಅಂತರ ಮಾತ್ರ. ಒಮ್ಮೊಮ್ಮೆ ಯಾವುದೋ ಕಾರಣಕ್ಕೆ ಅಂತರ ಸೃಷ್ಟಿಯಾಗಬಹುದು.

ಪ್ರೀತಿ, ಯಾವುದೋ ಸಣ್ಣ ವಿಷಯಕ್ಕೆ ದೂರವಾಗುವುದು ಕೂಡ ಇದೆ. ‘ಟೈಮ್ ರೂಲ್ಸ್ ಎವರಿಥಿಂಗ್’, ‘ಟೈಮ್ ಚೇಂಜಸ್ ಎವರಿಥಿಂಗ್’ ಎನ್ನುವ ಮಾತುಗಳು ಪ್ರೀತಿಗೂ ಕೂಡ ಅನ್ವಯಿಸುತ್ತದೆ. ಅಂತರಗಳ ದೂರ ಆಗಬಹುದು. ಆದರೇ, ಎಂದಿಗೂ ಆ ಪ್ರೀತಿಯ ಒಳಧ್ವನಿ ದೂರವಾಗುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಅಲ್ಲವೇ ಅಂತಹದ್ದೊಂದು ಅನುಭವವನ್ನು ‘ಪ್ರೀತಿ’ ಅಂತ ಕರೆದಿದ್ದು...?!

‘ಪ್ರೀತಿ’ಗೆ ಹೇಗೆ ಹೇಳದೆ ಕೇಳದೆ ಆರಂಭಿಸುವ ಶಕ್ತಿ ಇದೆಯೋ, ಹಾಗೆ ಮುಕ್ತಾಯಗೊಳಿಸುವ ನಿಷ್ಕರುಣೆಯೂ ಕೂಡ ಇದೆ. ಅದು ನಾಳೆಯ ಒಳ್ಳೆಯದಕ್ಕೆ ಹೊರತು ಬೇರೆಯಾವುದಕ್ಕಲ್ಲ. ಅದು ಕೊನೆಗೆ ನೀಡುವುದು ವಿಶ್ರಾಂತ ನಸುನಗು ಅಷ್ಟೇ.

ಕೊನೆಗೆ ಒಳಗೇ ಇದ್ದು ಹೇಳುತ್ತೇ.. ಏನು ಗೊತ್ತಾ..?

“ನೀನು ಅನುಭವಿಸಿದ್ದೆಲ್ಲಾ ನಿನ್ನದಲ್ಲ,
ನಿನ್ನೊಳಗಿನ ದುಃಖ ನಿನ್ನದಲ್ಲ,
ಕಾಡುವ ನೆನಪು ನಿನ್ನದಲ್ಲ, 
ನಿನ್ನೊಳಗಿನ ನಿಡುಸುಯ್ಯುವಿಕೆ ನಿನ್ನದಲ್ಲ,
ನಿನ್ನೊಳಗೆ ಅವಿತಿಟ್ಟುಕೊಂಡಿರುವ ಶಕ್ತಿ ನೀನು,
ಅದನ್ನು ಹೊರಹಾಕಿ ಮುನ್ನಡೆಯುವ ಧೈರ್ಯ ನೀನು” ಅಂತ. 

...ವಾವ್ಹ್... ಅಲ್ವಾ..?

ಪ್ರೀತಿ ಅಂದರೇ, ಪೂರಿಯೊಳಗಿನ ಪಾನಿಯಂತೆ ಚೂರ‍್ಚೂರು ಖಾರ..!
---------------------------------
-ಶ್ರೀರಾಜ್ ವಕ್ವಾಡಿ




3 comments: