Thursday, April 23, 2020

ಅಭಿವ್ಯಕ್ತಿ “ಸ್ವಾತಂತ್ರ್ಯ” ಸ್ವೇಚ್ಛಾಚಾರವಲ್ಲ..!



ಸಾಮಾಜಿಕತೆ ಅಂದಮೇಲೆ ಅಲ್ಲಿ ರಾಜಕೀಯ, ಜಾತಿ, ಧರ್ಮ ಎಲ್ಲವೂ ಇರುತ್ತದೆ. ಆಯಾಯ ಕ್ಷೇತ್ರಗಳಲ್ಲಿ, ಆಯಾಯ ಸಂದರ್ಭಗಳಲ್ಲಿ ಹುಟ್ಟಿಕೊಳ್ಳುವ ಆಶಯಗಳು ಒಂದು ರೀತಿಯಲ್ಲಿ ಸಹಜ, ಆದರೇ ಕೆಲವೊಮ್ಮೆ ನಾವು ನಮ್ಮದೇ ಆದ ವ್ಯಾಪ್ತಿಯಲ್ಲಿ ನಿರ್ಮಿಸಿಕೊಳ್ಳಬೇಕಾದ ಅಗತ್ಯವಿದೆ ಮತ್ತು ಸಾಮಾಜಿಕವಾಗಿ ಎಲ್ಲರ ಭಾವನೆಗಳಿಗೆ, ಎಲ್ಲಾ ಭಾವನೆಗಳಿಗೂ ಬೆಲೆ ಇದೆ ಎನ್ನುವುದು ಸತ್ಯ.

ಭಾರತೀಯ ಸಂವಿಧಾನದ 19(1)ಎ ಅನುಸೂಚಿಯಲ್ಲಿ ಭಾರತೀಯ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸಲಾಗಿದೆ ಮಾತ್ರವಲ್ಲ ಅದೇ ಪುಟದಲ್ಲಿ 19(2) ಅನುಸೂಚಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯನ್ನು, ಮಿತಿಗಳನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ಕೊಟ್ಟಿದೆ ಎಂದ ಮಾತ್ರಕ್ಕೆ ಇನ್ನೊಬ್ಬರ ಖಾಸಗಿತನವನ್ನು ಮನಬಂದಂತೆ ಪ್ರಶ್ನಿಸುವುದಾಗಲಿ, ಪ್ರತಿಭಟನೆ ಮಾಡುವುದಾಗಲಿ ಅಥವಾ ತಮ್ಮ ಮೂಗಿನ ನೇರಕ್ಕೆ ಮಾತನಾಡುವುದಾಗಲಿ ಅಥವಾ ವಾದಿಸುವುದಕ್ಕೆ ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅದರದ್ದೇ ಆದಂತಹ ರೀತಿ-ನೀತಿಗಳಿವೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಅಷ್ಟಕ್ಕೂ ಅಭಿವ್ಯಕ್ತಿ ಸ್ವಾತಂತ್ರರ ಭಾರತ ದೇಶ ನಮಗೆ ಕೊಟ್ಟಿರುವ ಹಕ್ಕುಗಳಲ್ಲಿ ಒಂದು ಎನ್ನುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು.

ವಿಜ್ಞಾನ ಮುಂದುವರಿದ ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಅಭಿವ್ಯಕ್ತಿ ಹೆಚ್ಚಾಗಿ ಬಳಕೆಯಲ್ಲಿವೆ ಎನ್ನುವುದು ಸಾಮಾನ್ಯ ವಿಚಾರ. ದಶಕಗಳ ಹಿಂದಿನ ದಿನಗಳಲ್ಲಿ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಮೇಲ್ವರ್ಗದ ಅಥವಾ ಬುದ್ಧಿ ಜೀವಿಗಳ ಪಾಂಡಿತ್ಯವೇ ಕಾಣಸಿಗುತ್ತಿದ್ದರಿಂದ ಸಾಮಾನ್ಯರಿಗೆ ವೈಯಕ್ತಿಕ ಪ್ರಚಾರ ಪಡೆದುಕೊಳ್ಳುವ ಭಾಗ್ಯ ಟಿವಿ ಮಾಧ್ಯಮಗಳಾಗಲಿ, ಪತ್ರಿಕಾ ಮಾಧ್ಯಮಗಳಾಗಲಿ ನೀಡಿರಲಿಲ್ಲ. ಆದರೇ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳು ಜೊತೆಗೆ ಮಾಧ್ಯಮಗಳು ಕೂಡ ಸಾಮಾನ್ಯರಿಗೂ ಅಭಿವ್ಯಕ್ತಿ ವೇದಿಕೆ ಕಲ್ಪಿಸಿಕೊಡುತ್ತಿವೆ. ಹಾಗೆಂದ ಮಾತ್ರಕ್ಕೆ ಬೇಕಾಬಿಟ್ಟಿಯಾಗಿ ಜಾಲತಾಣಗಳನ್ನು ಬಳಸಿಕೊಳ್ಳಬಹುದು ಎನ್ನುವ ಅರ್ಥವಲ್ಲ. ಸಾಮಾಜಿಕ ಜಾಲತಾಣಗಳಲ್ಲಾಗಲಿ, ಮಾಧ್ಯಮಗಳಲ್ಲಾಗಲಿ ನಮ್ಮ ಅಭಿವ್ಯಕ್ತಿಗಳು ಅಧಿಕೃತವಾಗಿ ದಾಖಲಾಗುವುದರಿಂದ ಅಭಿವ್ಯಕ್ತಿ ಪಡಿಸಿಕೊಳ್ಳುವ ಮುನ್ನ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದು ಪಾಲಲಿಸದವರ ಗತಿ ಏನಾಗಿದೆ ಎನ್ನುವುದು ಉದಾಹರಣೆ ನಮ್ಮು ಮುಂದಿದೆ. ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಂತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಶೀರ್ಷಿಕೆಯಡಿಯಲ್ಲಿ ಋಣಾತ್ಮಕ ಸುದ್ದಿಗಳ ಪ್ರಸಾರ ಮಾಡುವುದಾಗಲಿ, ತೇಜೋವಧೆ ಮಾಡುವುದಾಗಲಿ, ಮಾನಹಾನಿ ಮಾಡುವುದಾಗಲಿ, ರಾಜಕೀಯ, ಧರ್ಮ, ಜಾತಿಗಳ ಕುರಿತಂತೆ ಅವಹೇಳನಕಾರಿಯಾದ ಅಥವಾ ಸುಳ್ಳು ಸುದ್ದಿಗಳನ್ನು ಹರಡಿಸುವುದನ್ನು ಮಾಡಬಾರದು ಎನ್ನುವುದನ್ನು ಮರೆಯುವಂತಿಲ್ಲ.

 ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಹೊರಬರುವ ಭಿನ್ನ ಭಿನ್ನ ಅನಿಸಿಕೆ, ಅಭಿಪ್ರಾಯಗಳು ಒಂದು ವಿಷಯದ ಕುರಿತು ಹೊಸ ತರಹದ ದೃಷ್ಟಿಕೋನವನ್ನು ನೀಡುವಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕೂ ಹೌದು, ಜವಾಬ್ದಾರಿಯೂ ಹೌದು. ಆದ್ದರಿಂದ ಆ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವಾಗ ಪ್ರಜ್ಞೆಯೂ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಅದು ಬೇಕಾಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಮಾರ್ಗವಲ್ಲ ಎನ್ನುವುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಮುಖ್ಯವಾಗಿ ಪತ್ರಕರ್ತರು.

ಬಹಳ ಪ್ರಮುಖವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಆದಂತಹ ಅನುಕೂಲವನ್ನು ನಾವು ಗಮನಿಸುವುದಾದರೆ.. ಸಾಂಸ್ಕೃತಿಕ ಹೆಚ್ಚುಗಾರಿಕೆಯನ್ನು ಕಲೆ, ಸಂಪ್ರದಾಯ, ಸಾಹಿತ್ಯಗಳ ಶ್ರೀಮಂತಿಕೆಯನ್ನು ಹೆಚ್ಚಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾಜಕ್ಕೆ ಕೊಟ್ಟಂತಹ ಅತ್ಯಮೂಲ್ಯ ಕೊಡುಗೆ ಎನ್ನುವುದು ವೈಯಕ್ತಿಕ ಅಭಿಪ್ರಾಯ. ಕಲೆ, ಸಾಹಿತ್ಯ, ಸಂಪ್ರದಾಯಗಳು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಸಂಪೂರ್ಣವಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಇಂತಹ ಅಭಿವ್ಯಕ್ತಿಗಳು ಸಾಮಾಜಿಕ ಬದ್ಧತೆಯನ್ನು ಗಟ್ಟಿಗೊಳಿಸುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಗಳು ಈ ರೀತಿಯಲ್ಲಿ ಬಹಳ ಪರಿಣಾಮಕಾರಿಯಾಗಿ ಸಮಾಜಕ್ಕೆ ಪ್ರಭಾವ  ಬೀರಬೇಕಾಗಿದೆ. ಮತ್ತು ಅವನ್ನು ಬಳಸುವುದರಲ್ಲಿ ಸಾಮಾಜಿಕ ಜವಾಬ್ದಾರಿ ಇರುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ ಪೂರಕವಾಗಿ ಕೆಲಸ ಮಾಡುತ್ತದೆ ಎನ್ನುವುದು ಸತ್ಯ.




ಇಲ್ಲಿ ಯಾರೂ ಸರ್ವಸ್ವತಂತ್ರರಲ್ಲ. ಪತ್ರಿಕೋದ್ಯಮವೂ ಸರ್ವಸ್ವತಂತ್ರವಲ್ಲ. ಪತ್ರಿಕಾ ಸ್ವಾತಂತ್ರ್ಯವನ್ನು ವೈಯಕ್ತಿಕ ಪ್ರಚಾರದ ಗೀಳಿಗೆ ಬಳಸಿಕೊಂಡು ಪತ್ರಿಕೋದ್ಯಮದ ಮೂಲ ಆಶಯಕ್ಕೆ ಹೇಸಿಗೆ ಅಂಟಿಸುವವ ಪತ್ರಕರ್ತರೂ ನಮ್ಮ ನಿಮ್ಮ ನಡುವೆ ಇದ್ದಾರೆ ಎನ್ನುವುದೇ ದುರಂತ. ಆಯಾಯ ಕಾಲಘಟ್ಟಕ್ಕೆ ಅಂತವರಿಗೆ ಜನರಿಂದ, ಕಾನೂನಿಂದ ಸರಿಯಾದ ಪ್ರತಿ ಉತ್ತರವೂ ದೊರಕಿದೆ ಎನ್ನುವುದು ಸಮಾಧಾನಕರ ವಿಷಯ.

ಜನರ ಮುಖವಾಣಿಯಾಗಿ ಸಮಾಜದ ಓರೆಕೋರೆಗಳಿಗೆ ಕನ್ನಡಿ ಹಿಡಿಯುವ ಪತ್ರಿಕೋದ್ಯಮ ಅನೇಕ ವ್ಯಾಖ್ಯಾನ ಹಾಗೂ ವಿಶ್ಲೇಷಣೆ ನೀಡಿಕೊಂಡು ಬಂದಿದೆ. ‘ಪತ್ರಿಕೋದ್ಯಮವೆನ್ನುವುದು ಆಳದಲ್ಲಿ ಗಂಭೀರವಾದ ವ್ಯವಹಾರ. ಅನುಕೂಲಕರವಲ್ಲದ ಪ್ರಶ್ನೆಗಳೇ ಪತ್ರಿಕೋದ್ಯಮದ ಬುನಾದಿ. ಅಧಿಕಾರಸ್ಥರ ಜೊತೆ ಅನುಕೂಲಕರ ಸಾಂಗತ್ಯ. ಜಾಣತನದ ಬರವಣಿಗೆ ಅಥವಾ ಮಾತುಗಾರಿಕೆ ಮಾತ್ರವೇ ಪತ್ರಿಕೋದ್ಯಮವಲ್ಲ’. ವಿಶ್ವಾಸಾರ್ಹತೆ, ನೈತಿಕತೆಗಳು ಪತ್ರಿಕೋದ್ಯಮದ ಜೀವಾಳ. ಇದಕ್ಕೆ ಅಗತ್ಯವಾದದ್ದು ಮಾಧ್ಯಮ ಸ್ವಾತಂತ್ರ್ಯ. ಪತ್ರಕರ್ತನ ಸರ್ವಸ್ವತಂತ್ರ ಧೋರಣೆಯಲ್ಲ.

ಸರ್ಕಾರದ ಆಡಳಿತ ಮತ್ತು ಸಾರ್ವಜನಿಕ ನಡವಳಿಗೆಳ ಸರಿ ತಪ್ಪು ಒಪ್ಪುಗಳ ಕ್ರಿಯೆಗಳಿಗೆ , ಪಾರದರ್ಶಕತೆಯಿಂದ ಉತ್ತರದಾಯಿತ್ವ ಒದಗುತ್ತದೆ. ಈ ಅರಿವು ಮೂಡಿಸುವಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ಬಹುಮುಖ್ಯ. ಸೋವಿಯತ್ ರಷ್ಯಾದ ಲೇಖಕ ಸೋಲ್ಜೇನಿಟ್ಸನ್, ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸುವ ಮತ್ತು ಪರಾಮರ್ಶಿಸುವ ಪತ್ರಕರ್ತನನ್ನು ಶ್ರೇಷ್ಠ ಎಂದು ಹೇಳುತ್ತಾನೆ. ಮಾತ್ರವಲ್ಲದೇ, ಆತನನ್ನು ‘ಎರಡನೇ ಸರ್ಕಾರ’  ಎಂದು ಹೇಳುತ್ತಾನೆ. ಪತ್ರಕರ್ತನೊಬ್ಬನಿಗೆ ಇಡೀ ಸಮಾಜವೇ ಜವಾಬ್ದಾರಿ. ಅವನ ಎಲ್ಲಾ ಕಾರ್ಯಗಳು ಪ್ರಜೆಯ ಪರವಾಗಿಯೇ ಇರಬೇಕು. ಅವನು ಜನಪ್ರತಿನಿಧಿಯಾಗಿರಬೇಕೇ ಹೊರತು ಆಡಳಿತ ಸರ್ಕಾರದ ಪ್ರತಿನಿಧಿಯಾಗಿರಬಾರದು. ಆತ ಪ್ರತಿಪಾಧಿಸುವ ವಿಷಯಗಳಿಂದ ಸರ್ಕಾರ ತನ್ನ ತಪ್ಪುಗಳನ್ನು ಸರಿಮಾಡಿಸಿಕೊಳ್ಳಬೇಕು. ಅಂತಹ ತಾಕತ್ತು, ಗಟ್ಟಿತನ ಪತ್ರಕರ್ತನಲ್ಲಿರಬೇಕು. ಸರ್ಕಾರದ ಆಡಳಿವನ್ನು ಹೊಗಳುವುದೇ ಪತ್ರಕರ್ತನ ಕೆಲಸವಲ್ಲ. ಆಡಳಿತ ಸರ್ಕಾರದ ನ್ಯೂನ್ಯತೆಗಳನ್ನು ಸರಿ ಮಾಡುವುದೇ ಒಬ್ಬ ನಿಜವಾದ ಪತ್ರಕರ್ತನ ಜವಾಬ್ದಾರಿ ಎನ್ನುತ್ತಾನೆ ಸೋಲ್ಜೇನಿಟ್ಸನ್.

ಇಂತಹದ್ದೊಂದು ಜವಾಬ್ದಾರಿ ಈಗ ಪತ್ರಕರ್ತನಿಗಿದೆಯೇ..? ಎಂಬ ಪ್ರಶ್ನೆ ಕೇಳಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ. ವೈಯಕ್ತಿಕ ಸಿದ್ಧಾಂತಗಳನ್ನು, ನಿಲುವುಗಳನ್ನು ಜನರ ತಲೆ ಮೇಲೆ ಬಹಳ ನಾಜೂಕಾಗಿ ಹೇರುವುದೇ ಪತ್ರಿಕೋದ್ಯಮ ಎಂದು ಬದಲಾಗಿ ಬಿಟ್ಟಿದೆ ಎನ್ನುವುದು ವಿಷಾದನೀಯ. ಅದರ ಬಗ್ಗೆ ವಾಸ್ತವಾಂಶ ಅರಿಯದೇ ಒಪ್ಪಿಕೊಳ್ಳುವ ದೊಡ್ಡ ವರ್ಗವೂ ಇದೆ ಎನ್ನುವುದು ಬೇಸರದ ಸಂಗತಿ.

ಮಾಧ್ಯಮಗಳು ಆಡಳಿತ ಸಕಾರಕ್ಕೆ ಮಾರ್ಗದರ್ಶಿಯಾಗಿ ಕೆಲಸಮಾಡಬೇಕು. ಹೊಗಳು ಭಟರಾಗಿ ಕೆಲಸ ಮಾಡಬಾರದು. ಒಂದು ನಿಲುವಿಗೆ, ಸಿದ್ಧಾಂತಕ್ಕೆ ಸಿಲುಕಿ ಒಬ್ಬ ಪತ್ರಕರ್ತ ತನ್ನ ಅಭಿವ್ಯಕ್ತಿ ಹೊರಹಾಕುತ್ತಿದ್ದಾನೆ ಅಂದರೇ, ಆತ ನಿಜಕ್ಕೂ ಸರ್ವಸ್ವತಂತ್ರ ಧೋರಣೆ ಪಾಲಿಸುತ್ತಿದ್ದಾನೆ ಎಂಬರ್ಥ. ಆತನ ಪ್ರಶ್ನೆ ಸಮಯೋಚಿತವಾಗಿರಬೇಕು. ವಸ್ತನಿಷ್ಠವಾಗಿರಬೇಕು. ಅವೆಲ್ಲದಕ್ಕಿಂತ ಮಿಗಿಲಾಗಿ ಆತನ ಅಭೀವ್ಯಕ್ತಿ ಸ್ವಾತಂತ್ರ್ಯವನ್ನು ಮೀರಿಸುವಂತಿರಬಾರದು. ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತವನೇ ‘ಅಭಿವ್ಯಕ್ತಿ’ ಒಂದು ಸ್ವಾತಂತ್ರ್ಯ ಎನ್ನುವುದನ್ನು ಮರೆತು ಸ್ವೇಚ್ಛಾಚಾರ ಮೆರೆದರೆ..? ಸಾರ್ವಜನಿಕರೇನು ಮಾಡಿಯಾರು..? ಎಂಬೆಲ್ಲಾ ಪ್ರಶ್ನೆಗಳಿಗೆ ‘ಅಭಿವ್ಯಕ್ತಿ’ಯೇ ಉತ್ತರಿಸಬೇಕು.
ಒಟ್ಟಿನಲ್ಲಿ, ಸದಾ ವಿಕಾಸಗೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಮಾನವನ ಪ್ರಜ್ಞೆಯು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಸಾಮಾಜಿಕ ಜಾಗೃತಿಯನ್ನು ಜೊತೆಗೆ ಮಾನವೀಯತೆಯನ್ನು ಉಳಿಸಿಕೊಳ್ಳುವ ಪಾಠವನ್ನು ಕಲಿಯಬೇಕಾಗಿದೆ ಎನ್ನುವುದು ಪದಶಃ ಅಪ್ಪಟ.
----------------------------
-ಶ್ರೀರಾಜ್ ವಕ್ವಾಡಿ.

No comments:

Post a Comment