Friday, April 3, 2020

ಮೇರಾ ಪ್ಯಾರ್ ದೇಶ್ ವಾಸಿಯೋ, ಲೈಟ್ ಆಫ್ ಮಾಡಿ ದೀಪ, ಮೊಂಬತ್ತಿ ಬೆಳಗಿ | ಮೋದಿ ಆಧ್ಯಾತ್ಮಿಕ ಮನವಿ..!


ಕೊರೋನಾ ವೈರಸ್ ದಿನನಿತ್ಯ ಹೆಚ್ಚುತ್ತಿದೆ. ಒಂದೆರಡು ದಿನಗಳ ಹಿಂದೆ ಸ್ವಲ್ಪ ಮಟ್ಟಿಗೆ ಕೊರೋನಾ ಹರಡುವುದು ನಿಯಂತ್ರಣದಲ್ಲಿತ್ತು ಎನ್ನುವಷ್ಟರಲ್ಲೇ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಮಾವೇಶದ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಸೋಂಕು ಭಾರತದಲ್ಲಿ 2400ರ ಗಡಿ ದಾಟುತ್ತಿದೆ. ಜನ ಬೆದರಿಹೋಗಿದ್ದಾರೆ. ಆರ್ಥಿಕ, ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.  ಈ ಸಂಕಷ್ಟದ ನಡುವೆಯಲ್ಲಿಯೂ ಬಲಚರ, ಎಡಚರ ಸಿದ್ಧಾಂತಗಳು ಬೇರೆ ತಲೆಬುಡವಿಲ್ಲದ್ದು.
ವೈರಸ್ ಹರಡುವುದನ್ನು ನಿಯಂತ್ರಣಕ್ಕೆ ತರುವ ವಿಚಾರಕ್ಕೆ ಸಂಬಂಧ ಪಟ್ಟಂತೆ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಗುರುವಾರ(ನಿನ್ನೆ) ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮೋದಿ, “ಲಾಕ್ಡೌನ್ ಅನಿವಾರ್ಯವಾಗಿತ್ತು, ಲಾಕ್ಡೌನ್ ಆದ ಬಳಿಕ ಜನರನ್ನು ರಸ್ತೆಗಿಳಿಯದಂತೆ ಮಾಡುವುದು ದೊಡ್ಡ ಸವಾಲು, ಈ ನಿಟ್ಟಿನಲ್ಲಿ ಏಕರೂಪದ ಯೋಜನೆ ಮಾಡಬೇಕು” ಎಂದು ಹೇಳುವುದರ ಜೊತೆಗೆ ಲಾಕ್ಡೌನ್ ಏಪ್ರಿಲ್ 14ಕ್ಕೆ ಕೊನೆಗೊಳಿಸುವ ಸಣ್ಣ ಸುಳಿವನ್ನು ಕೊಟ್ಟಿದ್ದನ್ನು ಗಮನಿಸಿ, ಇಂದಿನ, ಅಂದರೇ, ಕೊರೋನಾ ವಿಚಾರವಾಗಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ ಮೂರನೇ ಭಾಷಣ/ಸಂದೇಶದಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ ಏನಾದರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೇ, ಮೋದಿ ಆ ನಿರೀಕ್ಷೆಯನ್ನು ಮೀರಿ ಸಂದೇಶ ಕೊಟ್ಟಿದ್ದಾರೆ. ಜನರ ಸ್ಥಿತಿಗತಿಗಳ ಬಗ್ಗೆಯಾಗಲಿ, ವೈದ್ಯಕೀಯ ಸವಾಲುಗಳ ಬಗ್ಗೆಯಾಗಲಿ, ಆರ್ಥಿಕ ಸಮಸ್ಯೆಗಳ ಬಗ್ಗೆಯಾಗಲಿ ಏನೂ ಮಾತನಾಡಿಲ್ಲ ಎನ್ನುವುದೇ ವಿಷಾದನೀಯ.
ಗೋಡೆಯ ಮೇಲಿನ ಬಣ್ಣ ಮಾತ್ರ ಪ್ರಧಾನಿಯವರಿಗೆ ತುಂಬಾ ಚೆಂದವಾಗಿ ಕಾಣಿಸುತ್ತಿದೆ ಅಂತ ಅನ್ನಿಸುತ್ತಿದೆ. ಬಡವರು, ಹಸಿದು ಬೀದಿ ಪಾಲಾದವರ ಮುಂದೆ ನಮ್ಮನೆಯ ಬಾಲ್ಕನಿ ಹುಡುಕಿ ಏಪ್ರಿಲ್ 5 ಭಾನುವಾರದಂದು ರಾತ್ರಿ ಒಂಬತ್ತು ಗಂಟೆಗೆ, ಒಂಬತ್ತು ನಿಮಿಷಗಳ ಕಾಲ ಲೈಟ್ ಆಫ್ ಮಾಡಿ, ದೀಪ, ಮೊಂಬತ್ತಿ, ಮೊಬೈಲ್ ಟಾರ್ಚ್ ಆನ್ ಮಾಡಿ ಭಾರತ ಮಾತೆಯನ್ನು ಸ್ಮರಿಸುವ ಕಾಲ ಬಂದೊದಗಿದೆ...! ಮೋದಿಯವರ ಆಧ್ಯಾತ್ಮಿಕ ಮನವಿಗೆ  ದೇಶದೆಲ್ಲೆಡೆಯಿಂದ ‘ನಾವು ನಿಮ್ಮೊಂದಿಗಿದ್ದೇವೆ’ ಅಂತ ಹೆಚ್ಚಿನವರು ಹೇಳಿದ್ದಾರೆ ಎನ್ನುವುದು ಸಂತೋಷ. ಆದರೇ, ಇಲ್ಲಿ ಗಮನಿಸಬೇಕಾದ ಒಂದು ವಿಷಯವಿದೆ. ಸರ್ಕಾರ ಇದುವರೆಗೆ ಯಾವುದೇ ಕ್ರಿಯಾತ್ಮಕ ಯೋಜನೆಗಳನ್ನು ಕೈಗೊಂಡಿಲ್ಲವೆನ್ನುವುದೇ ದುರಂತ.  ಜಾಗಟೆ, ಶಂಖ, ಚಪ್ಪಾಳೆ ಆಯ್ತು ಈಗ ದೀಪ, ಮೊಂಬತ್ತಿ, ಮೊಬೈಲ್ ಟಾರ್ಚ್ ಬೆಳಗಿಸುವುದಂತೆ...! ವಿರೋಧಿಸುವವರ ಮುಂದೆ ಮತ್ತೆ ಮತ್ತೆ ಸರ್ಕಾರ ನಗೆಪಾಟಲಿಗೆ ತುತ್ತಾಗುತ್ತಿದೆ. ಭಾರತ ಮೂಲವಾಗಿ ಆಧ್ಯಾತ್ಮಿಕ ಪರಂಪರೆಯಲ್ಲಿ ಉದಯಿಸಿದ ದೇಶ ಹೌದು, ಆದರೇ ಇಂತಹ ಪರಿಸ್ಥಿತಿಯಲ್ಲಿ, ವೈದಕೀಯ ಸವಾಲುಗಳನ್ನು ಎದುರಿಸಬೇಕಾದ ಸ್ಥಿತಿಯಲ್ಲಿ ಸರ್ಕಾರ ಆ ಬಗ್ಗೆ ಹೆಚ್ಚು ತಲೆಕಡಿಸಿಕೊಳ್ಳದೇ ಆಧ್ಯಾತ್ಮಿಕ ಮೊರೆ ಹೋಗುವುದಕ್ಕೆ ಮನವಿ ಮಾಡಿಕೊಳ್ಳುತ್ತಿರುವುದು ವ್ಯಂಗ್ಯಕ್ಕೀಡಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.


ಅದಿರಲಿ, ಮೋದಿ ಜನತಾ ಕರ್ಫ್ಯೂ ಹೂಡಿ, ಜಾಗಟೆ, ಶಂಖ, ಚಪ್ಪಾಳೆ ತಟ್ಟಿ ವೈದಕೀಯ ವರ್ಗದವರಿಗೆ ಗೌರವ ಸಲ್ಲಿಸಿ ಎಂದಾಗಲೂ ದೇಶವ್ಯಾಪಿ ಎಡಚರು, ಬಲಚರು, ಧರ್ಮ, ಜಾತಿಗಳನ್ನು ಲೆಕ್ಕಿಸದೇ ಅದನ್ನು ಪಾಲಿಸಿದರು. ಅದರಂತೆಯೇ ಇದನ್ನೂ ಪಾಲಿಸುತ್ತಾರೆ. ಅದು ಸಂಶಯವಿಲ್ಲ ಬಿಡಿ. ಆದರೇ, ಅದಕ್ಕೂ ಮೀರಿ ಕೈಗೊಳ್ಳಬೇಕಾದ ಹಲವು ಕ್ರಮಗಳಿವೆ. ಅದರ ಬಗ್ಗೆ ಸರ್ಕಾರ ಗಮನಹರಿಸಬೇಕಾದ ತುರ್ತಿದೆ. ಅದು ಸರ್ಕಾರದ ಜವಾಬ್ದಾರಿ ಕೂಡ ಹೌದು.
ಭ್ರಮೆ ಹುಟ್ಟಿಸುವ ಮಾತುಗಳನ್ನಾಡುವ ಬದಲಾಗಿ ತುತ್ತು ಅನ್ನಕ್ಕಾಗಿ ವಲಸೆ ಕಾರ್ಮಿಕರು ದುಡಿಮೆಯಿಲ್ಲದೇ, ಕೈಯಲ್ಲಿ ಬಿಡುಗಾಸಿಲ್ಲದೇ ದೇಶದ ರಾಜಧಾನಿ ದೆಹಲಿಯನ್ನೂ ಒಳಗೊಂಡು ಕಲ್ಕತ್ತಾ, ಚೆನೈ, ಬೆಂಗಳೂರು, ಮುಂಬೈಗಳಂತಹ ಮಹಾನಗರಗಳಲ್ಲಿ ನೂರಾರು ಕೀಲೋಮೀಟರ್‌ಗಳಷ್ಟು ನಡೆದು ಸಾಗಿದರು. ಸರ್ಕಾರದ ಕಣ್ಣಿಗೆ ಬೀಳಲೇ ಇಲ್ಲ. ಆ ವಿಷಯ ವಿಶ್ವದೆಲ್ಲೆಡೆ ಸುದ್ದಿಯಾದಾಗ ಸರ್ಕಾರ ಅವರನ್ನು ಪಾರು ಮಾಡುವ  ಸಾಫ್ಟ್ ಕಾರ್ನರ್ ಧೋರಣೆ ಮಾಡೀತು ಬಿಟ್ಟರೇ ಮತ್ತೇನು ಮಾಡಲಿಲ್ಲ. ಇದೆಲ್ಲದಕ್ಕೂ ಮಾನ್ಯ ಪ್ರಧಾನಿಗಳು ಕಣ್ಣೀರು ಹಾಕುವಂತೆ ಮಾಡಿ ಕ್ಷಮೆಯಾಚಿಸಿದ ಪ್ರಸಂಗವೂ ಮುಗಿದು ಹೋಯ್ತು, ತಮ್ಮ ಕೊರೋನಾ ವಿಚಾರದ ಎರಡನೇ ಭಾಷಣದಲ್ಲಿ. ಬಹುಶಃ ಸಂಕಷ್ಟಕ್ಕೀಡಾಗಿರುವವರೆಲ್ಲರೂ ಮೋದಿಯವರನ್ನು ಕ್ಷಮಿಸಿರಬಹುದು. ಆದರೇ, ಬೀದಿಪಾಲು ಮಾಡಿದಕ್ಕೆ ಹಾಕಿದ ಶಾಪ ಮರುಪಡೆಯುವುದನ್ನಂತೂ ಅವರು ಮಾಡಿರಲಿಕ್ಕಿಲ್ಲ..! ಅವರ್ಯಾರೂ ಕೂಡ ಕಾರ್ಪೋರೇಟ್ ಕ್ಷೇತ್ರದ ದೊಡ್ಡ ದೊಡ್ಡ ಸಂಸ್ಥೆಗಳ ಒಡೆಯರೋ, ಅಥವಾ ಅಲ್ಲಿ ಲಕ್ಷಲಕ್ಷಕ್ಕಾಗಿ ದುಡಿಯುತ್ತಿರುವವರಲ್ಲ, ಅವರಲ್ಲಿ ಊಟಕ್ಕೆ ಇಲ್ಲದವರೇ ಹೆಚ್ಚು, ಅದೆಷ್ಟೋ ಮಂದಿ ನಮ್ಮಲ್ಲಿ ‘ಆಧಾರ್ ಕಾರ್ಡ್’ಗಳೇ ಇಲ್ಲ ಅಂತಂದ್ರು, ಇನ್ನು, ಮನೆಯೆಲ್ಲಿ..? ಬಾಲ್ಕನಿ ಎಲ್ಲಿ..?


ಸರ್ಕಾರ ಭವಿಷ್ಯದ ಚಿಂತನೆ ಮಾಡುವುದರ ಜೊತೆಜೊತೆಗೆ ವರ್ತಮಾನದ ಬಗ್ಗೆಯೂ ಗಮನಹರಿಸಬೇಕಾಗಿದೆ. ಮುಂದಿನ ಭಾಷಣದಲ್ಲಿ ಮತ್ತೆನನ್ನು ತಟ್ಟುವುದಕ್ಕೆ, ಊದುವುದಕ್ಕೆ ಹೇಳುತ್ತಾರೋ, ಮತ್ತೆ ಏನು ಹಚ್ಚುವುದಕ್ಕೆ ಹೇಳುತ್ತಾರೋ ಅಂದುಕೊಂಡು ಭ್ರಮನಿರಸನಕ್ಕೊಳಗಾಗದಂತೆ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಮಾಡಬೇಕಾದ ಸೂಕ್ತ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿ.



ಮೋದಿ ಹೇಳಿದ್ದೇನು..?
ಮೇರಾ ಪ್ಯಾರ್ ದೇಶ್ ವಾಸಿಯೋ
ಲಾಕ್ಡೌನ್ ಆಗಿ 9 ದಿನಗಳಾಗಿವೆ
ಕೊರೋನಾ ವಿರುದ್ಧ ಹೋರಾಟದಲ್ಲಿ ನೀವೂ ಭಾಗವಹಿಸಿದ್ದೀರಿ
ನಿಮ್ಮ ಸಹಕಾರಕ್ಕೆ ಧನ್ಯವಾದ
ಲಾಕ್ಡೌನ್ ಅನಿವಾರ್ಯ
ಏಪ್ರಿಲ್ 5ಕ್ಕೆ ಎಲ್ಲರೂ ಒಂದಾಗೋಣ
ಮಹಾಶಕ್ತಿ, ಮಹಾ ಸಂಕಲ್ಪದ ಪ್ರದರ್ಶನ ಮಾಡೋಣ
ಒಂಬತ್ತು ನಿಮಿಷಗಳ ಕಾಲ ಲೈಟ್ ಆಫ್ ಮಾಡಿ, ಮೊಂಬತ್ತಿ, ದೀಪ, ಮೊಬೈಲ್ ಟಾರ್ಚ್  ಬೆಳಗೋಣ
ಭಾರತ ಮಾತೆಯನ್ನು ಸ್ಮರಿಸೋಣ
ಕೋರೋನಾ ವಿರುದ್ಧ ಹೋರಾಡೋಣ
ದೀಪ ಬೆಳಗುವ ವೇಳೆಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ

-ಶ್ರೀರಾಜ್ ವಕ್ವಾಡಿ
 

No comments:

Post a Comment