Sunday, April 5, 2020

ದೀಪ ಹಚ್ಚುತ್ತೇನೆ..!



ದೀಪ ಬೆಳಗುತ್ತೇನೆ..
ಭಕ್ತಿಗೆ,
ಶೃದ್ಧಗೆ,
ಸಮೃದ್ಧಿಗೆ,
ಜ್ಞಾನಕ್ಕೆ,
ಭರವಸೆಗೆ..!

ದೀಪ ಜ್ವಲಿಸುತ್ತೇನೆ...
ಕರಗಿ ಹೋಗಲಿ
ಸಿದ್ಧಾಂತದಂಧತೆ..!
ಧರಾಶಾಯಿಯಾಗಲಿ
ಬೆಟ್ಟಗಾತ್ರದ ಅಜ್ಙಾನ..!
ಅಳಿಸಿಹೋಗಲಿ
ಗುಡ್ಡೆಕಟ್ಟಿದ ಭ್ರಷ್ಟಾಚಾರ..!
ಶೂನ್ಯವಾಗಲಿ
ಭೀಮಗಾತ್ರದ ಬಡತನ..!

ದೀಪ ಹಚ್ಚುತ್ತೇನೆ
ನವ್ಯತೆಗೆ,
ಭವ್ಯತೆಗೆ,
ಉತ್ಕಟ ರತಿಗೆ..!

ಬಿಂದು ಬೆಳಕು
ಜ್ವಲಿಸಲಿ,
ಉಜ್ವಲಿಸಲಿ,
ಉದ್ದಗಲ ಹರಡಲಿ..!

ದೀಪ ಹಚ್ಚುತ್ತೇನೆ
ನಂಬಿಕೆಗೆ,
ಪ್ರೀತಿಗೆ,
ಹಿತಕ್ಕೆ,
ನನ್ನೊಳಗಿನ ದಾಸಭಾವಕ್ಕೆ..
ಆದರೇ, ಯಾರ ಮನವಿಗಲ್ಲ..!

ದೀಪ ಪ್ರಜ್ವಲಿಸುತ್ತೇನೆ..!
ಪ್ರಾರ್ಥನೆಗೆ,
ಸಂಕಲ್ಪಕ್ಕೆ,
ಆದರೇ, ಕೋರಿಕೆಗಲ್ಲ..!
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)

3 comments:

  1. ನಾನು ಬೆಳಕನ್ನು ಆರಿಸಿ
    ದೀಪವ ಹಚ್ಚುವುದಿಲ್ಲ..
    ಹಸಿದು ಬಳಲಿದ ವಲಸಿಗ
    ನನ್ನ ಜನಗಳ ಬರಿಗಾಲ ನಡಿಗೆಗೆ
    ಅದು ತೊಂದರೆಯಾದೀತು..

    ನಾನು ಬೆಳಕನ್ನು ಆರಿಸಿ
    ಹಣತೆ ಹಚ್ಚುವುದಿಲ್ಲ
    ಹಸಿದು ಸಾವಿನ ದವಡೆಗೆ ಸಿಲುಕಿದ
    ನನ್ನ ಜನಗಳ ಆತ್ಮಗಳ ಬರಿಗಾಲ ಸಂಚಾರಕ್ಕೆ
    ಅದು ತೊಡಕಾದೀತು...

    ನಾನು ಇರುವ ಬೆಳಕ ಆರಿಸಿ
    ಮನೆಯ ಜಗಲಿಗೆ ಬಂದು
    ದೀಪವ ಹಚ್ಚುವುದಿಲ್ಲ..
    ವೈರಾಣುವಿಗಿಂತಲೂ ಭೀಕರ
    ಮತಾಂಧ ಕ್ರಿಮಿಗಳು
    ನನ್ನ ಮನೆಯ ಹಿಂಬಾಗಿಲಿನಿಂದ
    ಸೇರಿಕೊಳ್ಳಲೂ ಬಹುದು..

    ನಾನು ಬೆಳಕನ್ನು ಆರಿಸಿ
    ದೀಪ ಹಚ್ಚುತ್ತೇನೆ..
    ಟಾರ್ಚು, ಮೇಣದ ಬತ್ತಿ ಎನಗೆ ಬೇಕಿಲ್ಲ...
    ಅಜ್ಞಾನದ ಅಂಧಕಾರವು ನೀಗಲು
    ಸುಜ್ಞಾನ ದೀವಿಗೆ ಹಚ್ಚಬೇಕಿದೆ..
    ಆ ಬೆಳಕು ಜಗವೆಲ್ಲಾ ಪಸರಿಸಬೇಕಿದೆ..

    -ನಿಝಾಮ್ ಅನ್ಸಾರಿ

    ReplyDelete
    Replies
    1. ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ, ವಿಜ್ಞಾನದ ದೀವಿಗೆ ಹಿಡಿಯ ಬನ್ನಿ.

      Delete