‘ಮೇಕ್ ಇನ್ ಇಂಡಿಯಾ’ ಅಂತ ಹೇಳುತ್ತಿದ್ದವರೇ, ಗುಜರಾತ್‌ನ ವಡೋದರಾ ನಗರದ 100 ಕಿ.ಮೀ ಅಂತರದ ಆಗ್ನೇಯ ಭಾಗದಲ್ಲಿರುವ ನರ್ಮದಾ ಅಣೆಕಟ್ಟಿಗೆ ಎದುರಾಗಿ ನಿರ್ಮಿಸಲಾದ ಸರದಾರ್ ವಲ್ಲಭಭಾಯ್ ಪಟೇಲರ ‘ಏಕತಾ ಪ್ರತಿಮೆ’ಗೆ ಚೀನಾದ ನಾಚಾಂಗ್ ಮೂಲದ ಜಿಯಾಂಗ್ಸಿ ಟೋಕಿನ್ ಕಂಪೆನಿಯ ಅಂಗಸಂಸ್ಥೆ, ಲಾರ್ಸೆನ್ ಮತ್ತು ಟರ್ಬೋ ಕಂಪೆನಿ ಟಿಕ್ಯೂ ಆರ್ಟ್ ಫೌಂಡ್ರಿ ಜತೆಗೆ ಒಪ್ಪಂದ ಮಾಡಿಕೊಂಡು ತಯಾರಿಸಿದ್ದನ್ನು ನಾವು ನೀವೆಲ್ಲರೂ ಕಂಡಿದ್ದೇವೆ. ಅದಕ್ಕೆ ವ್ಯಾಪಕ ಟೀಕೆಯೂ ಕೇಳಿಬಂತು.
ಅದಿರಲಿ, ಭಾರತದಲ್ಲಿ ಚೀನಾದ ಉತ್ಪನ್ನಗಳ ಬಳಕೆ ಇಲ್ಲದೇ ಬದುಕು ಮುನ್ನಡೆಯುವುದಿಲ್ಲ ಎನ್ನುವಷ್ಟರ ಮಟ್ಟಿಗೆ ವ್ಯಾಪಕವಾಗಿ ಚೀನಾದ ಸರಕುಗಳು ನಮ್ಮನ್ನು ಸುತ್ತುವರಿದುಕೊಂಡಿವೆ. ‘ಮೇಕ್ ಇನ್ ಇಂಡಿಯಾ’ ಎಷ್ಟೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕಂಡುಕೊಂಡರೂ, ಸದ್ಯದ ಮಟ್ಟಿಗೆ ಭಾರತದಲ್ಲಿ ನಡೆಯುತ್ತಿರುವುದು ಮತ್ತು ಮಾಡಲಾಗುತ್ತಿರುವುದು ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳ ಜೋಡಣೆ ಮಾತ್ರ. ಸ್ಮಾರ್ಟ್ ಫೋನ್ ತಯಾರಿಸಲು ಅಗತ್ಯವಿರುವ ಚಿಪ್, ಪ್ರೊಸೆಸರ್, ಡಿಸ್‌ಪ್ಲೆ, ಬ್ಯಾಟರಿ, ಮೆಮೋರಿ ಕಾರ್ಡ್ ಇತ್ಯಾದಿಗಳು ಚೀನಾದಲ್ಲಿಯೇ ಸಿದ್ಧಗೊಳ್ಳುತ್ತವೆ. ಇಡೀ ಪ್ರಪಂಚಕ್ಕೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಅತ್ಯಂತ ಕಡಿಮೆ ದರದಲ್ಲಿ ಚೀನಾ ರಫ್ತು ಮಾಡುತ್ತಿದೆ.
ಸೋಲಾರ್ ಪ್ಯಾನಲ್‌ಗಳು, ಮಾಹಿತಿ ತಂತ್ರಜ್ಙಾನಗಳಲ್ಲಿ ಬಳಕೆಯಾಗುತ್ತಿರುವ ಉಪಕರಣಗಳು, ಮಕ್ಕಳ ಆಟಿಕೆಗಳು, ಸಿದ್ಧ ಪ್ರದರ್ಶನ ವಸ್ತುಗಳಿಗಾಗಿ ಭಾರತ ಚೀನಾವನ್ನೇ ಅವಲಂಭಿಸಿದೆ. ಭಾರತದಿಂದ ಚೀನಾಗೆ, ಚೀನಾದಿಂದ ಭಾರತಕ್ಕೆ ಆಗುವ ಆಮದು, ರಫ್ತು ವಹಿವಾಟಿನಲ್ಲಿ ಬಹಳ ದೊಡ್ಡ ವ್ಯತ್ಯಾಸವಿದೆ. ಭಾರತ ಎದುರಿಸುತ್ತಿರುವ ಈ ವಹಿವಾಟಿನ ಕೊರತೆಯ ಮೌಲ್ಯ ಅಂದಾಜು 3.54 ಲಕ್ಷ ಕೋಟಿ ಎಂದು ರಾಷ್ಟ್ರೀಯ ಮಟ್ಟದ ವರದಿಯೊಂದು ಹೇಳುತ್ತದೆ. ಆಮದುವಿನ ಪ್ರಮಾಣವೇ ರಫ್ತಿಗಿಂತ ನಾಲ್ಕೈದು ಪಟ್ಟು ಹೆಚ್ಚಿದೆಯಂತೆ.
ಮಾತ್ರವಲ್ಲ, ಅದು ಎಂತದ್ದೇ ಬ್ರಾಂಡ್ ಆಗಲಿ, ಅದರ ತದ್ರೂಪ ಮಾಲ್‌ಗಳನ್ನು ತಯಾರಿಸಿ ರಫ್ತು ಮಾಡುವಲ್ಲಿ ಚೀನಾ ಎತ್ತಿದ ಕೈ. ಭಾರತದ ಪ್ರಮುಖ ನಗರ ಪ್ರದೇಶಗಳಲ್ಲಿ ಚೀನಾ ಮೂಲದ ಉತ್ಪನ್ನಗಳಿಗಂತಲೇ, ಪ್ರತ್ಯೇಕ ಮಾರುಕಟ್ಟೆಗಳೇ ಇವೆ. ಅಲ್ಲಿ ಬೇರೆಲ್ಲೆಡೆಗಳಿಗಿಂತ ಹೆಚ್ಚಿನ ವಹಿವಾಟು ನಡೆಯುತ್ತಿದೆ ಎನ್ನುವುದು ಅಪ್ಪಟ ಸತ್ಯ.
ಇಂದು, ಚೀನಾದಿಂದ ಬರೋಬ್ಬರಿ 6.5 ಲಕ್ಷ ಕೊರೋನಾ ಸೋಂಕಿನ ಪರೀಕ್ಷೆ ಮಾಡುವ ಕಿಟ್‌ಗಳನ್ನು ಭಾರತ ಸರ್ಕಾರ ಆಮದು ಮಾಡಿಕೊಂಡಿದೆ. ಭಾರತ ಎಷ್ಟು ಚೀನಾವನ್ನು ಅವಲಂಭಿಸಿದೆ ಎನ್ನುವುದು ಇದರಲ್ಲೇ ಸ್ಪಷ್ಟವಾಗುತ್ತದೆ.
ದೇಶದಲ್ಲಿ ಉತ್ಪನ್ನದ ಮಟ್ಟ ಹೆಚ್ಚಾಗಬೇಕು. ಆಗ ಮಾತ್ರ ಚೀನಾದ ಉತ್ಪನ್ನವನ್ನು ಬಹಿಷ್ಕರಿಸುವುದಕ್ಕೆ ಗಣನೀಯ ಪ್ರಮಾಣದಲ್ಲಿ ಸಾಧ್ಯವಾಗಬಗಹುದು. ಸದ್ಯದ ಮಟ್ಟಿಗಂತೂ ಭಾರತಕ್ಕೆ ಚೀನಾವನ್ನು ಅವಲಂಭಿಸದೇ ಇರಲು ಸಾಧ್ಯವಿಲ್ಲ ಎನ್ನುವುದು ವಾಸ್ತವಾಂಶ. ಅದನ್ನು ಸ್ವತಃ ತಜ್ಙರೇ ಹೇಳುತ್ತಾರೆ.
------------------------------------
-ಶ್ರೀರಾಜ್ ವಕ್ವಾಡಿ


No comments:
Post a Comment