ಸತ್ಯಾನ್ವೇಷಣೆಯ ಗೋಜಿಗೆ ಹೋಗದೇ ಪ್ರತಿಕ್ರಿಯಿಸುವುದು, ಬಾಯಿಗೆ ಬಂದ ಹಾಗೆ ಮಾತಾಡುವುದು, ರಾಜಕೀಯದ ಲೇಪ ಅಂಟಿಸುವುದು, ಕೋಮು ಬಣ್ಣ ಹಚ್ಚುವುದು ಇಂತವುಗಳೆಲ್ಲಾ ಕಾಲ, ಸ್ಥಿತಿ, ಸಂಬಂಧಗಳ್ಯಾವುದನ್ನು ಸುತರಾಂ ಒಂದಿನಿತು ನೋಡುವುದಿಲ್ಲ. ಅದಕ್ಕೂ ಮೀರಿ ಒಂದಿಷ್ಟಿವೆ ಎನ್ನುವುದು ಮರೆತಂತಿದೆ.
ಮಾಧ್ಯಮ ಬಿಡಿ, ಮಾರಾಟವಾಗಿದೆ. ಪತ್ರಕರ್ತರೆಲ್ಲಾ ಮಾಧ್ಯಮದಂಗಡಿಗಳ ಮಾಲೀಕರ ಕೆಲಸದಾಳುಗಷ್ಟೇ. ಅವರಿಗೆ.. ಚಪ್ಪಾಳೆ ಯಾರು ತಟ್ಟುತ್ತಾರೆ/ತಟ್ಟಿದ್ದಾರೆ..? ಜಾಗಟೆ ಯಾರು ಹೊಡೆಯುತ್ತಾರೆ/ಹೊಡೆದಿದ್ದಾರೆ..? ಶಂಖ ಯಾರು ಊದುತ್ತಾರೆ/ಊದಿದ್ದಾರೆ..? ದೀಪ, ಕ್ಯಾಂಡಲ್, ಮೊಬೈಲ್ ಟಾರ್ಚ್ ಒಂಬತ್ತು ಗಂಟೆಯಿಂದ ಒಂಬತ್ತು ನಿಮಿಷಗಳ ಕಾಲ ಸರಿಯಾಗಿ ಯಾರು ಬೆಳಗಿಸುತ್ತಾರೆ/ಬೆಳಗಿಸಿದ್ದಾರೆ..? ಚಪ್ಪಾಳೆ ತಟ್ಟುವುದಕ್ಕೆ, ದೀಪ ಬೆಳಗಿಸುವುದಕ್ಕೆ ಮುಸ್ಲೀಮರು, ಕ್ರಿಶ್ಚಿಯನ್ಸ್ ಕೈಜೋಡಿಸುತ್ತಾರಾ/ಕೈ ಜೋಡಿಸಿದ್ದಾರಾ..? ಅಜ್ಞಾನ ಅಳಿಸುವುದಕ್ಕೆ ಹಣತೆ ಹಚ್ಚುತ್ತಾರಾ/ಹಚ್ಚಿದ್ದಾರಾ..? ಎನ್ನುವ ವಿಷ ಬೀಜ ಬಿತ್ತುವ ಕೆಟ್ಟ ಕುತೂಹಲವನ್ನು ಬಿಟ್ಟರೇ ಬೇರೇನಿಲ್ಲ..!
ರಾಜ್ಯ ಮಟ್ಟದಲ್ಲಿನ ಮಾಧ್ಯಮದ ಹಿರಿಯ ಮಿತ್ರರೋರ್ವರಲ್ಲಿ(ಯಾರು..?, ಯಾವ ಚಾನೆಲ್ ನವರು..?, ಯಾವ ಪತ್ರಿಕೆಯವರು..? ಇಂತದಕ್ಕೆಲ್ಲಾ ಉತ್ತರ ನೀಡುವ ಅಗತ್ಯವಿಲ್ಲ) ಸುಮ್ಮನೇ ಹೀಗೆ ಪ್ರಶ್ನೆ ಮಾಡಿದೆ... “ಸರ್.. ನಿಜಾಮುದ್ದೀನ್ ಮರ್ಕಝ್ ಸಮಾವೇಶವನ್ನು ನಿಲ್ಲಿಸಿ ಎಂದು ಸರ್ಕಾರ ಆದೇಶ ನೀಡಿದರೂ, ಸಮಾವೇಶವನ್ನು ಮುಂದುವರಿಸಿದ್ದಾರೆ ಎನ್ನುವ ವರದಿಯಾಗಿದೆ. ಆ ಬಗ್ಗೆ ಎಲ್ಲಿಯೂ, ಯಾವ ಮಾಧ್ಯಮದಲ್ಲೂ ಚರ್ಚೆಯಾಗಿಲ್ಲ. ಕೇವಲ ‘ನಿಜಾಮುದ್ದೀನ್ ನಂಜು, ನಂಜು, ನಂಜು’ ಅಂತ ಮಾಧ್ಯಮ ಹೇಳಿದ್ದನ್ನು ಬಿಟ್ಟರೇ ಬೇರೇನೂ ಮಾಡಲಿಲ್ಲ. ಆ ಬಗ್ಗೆ ಯಾಕೆ ಚರ್ಚೆ ಮಾಡಲಿಲ್ಲ.? ಚರ್ಚೆ ಮಾಡಿ ಸರ್” ಅಂದಿದ್ದಕ್ಕೆ ಜಾಣ್ಮೆಯಿಂದ, “ಮಾಧ್ಯಮ, ಹೊರಗಿನಿಂದ ಬಂದವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ ಅಂತ ಕಾಳಜಿ ವಹಿಸಿದೆ, ಕ್ವಾರಂಟೈನ್‌ಗೆ ಒಳಗಾಗಿ ಎಂದು ಆಗ್ರಹಿಸಿದ್ದೇವೆ. ಸೋಂಕಿತರು, ರೋಗ ಹರಡಬೇಡಿ ಅಂತ ಕೇಳಿಕೊಂಡಿದ್ದೇವೆ..ರೋಗದ ಲಕ್ಷಣ ಹೊಂದಿದವರಲ್ಲಿ ಹೊರಗೆ ಬರಬೇಡಿ ಅಂತ ಕೇಳಿಕೊಂಡಿದ್ದೇವೆ. ಮಸೀದಿ ಮಾತ್ರವಲ್ಲ, ಯಾವುದೇ ದೇವಸ್ಥಾನಕ್ಕೆ ಹೋಗಿ ಕೊರೋನಾ ಸೋಂಕು ಅಂಟಿಸಿಕೊಂಡು ಊರೂರು ಸುತ್ತಿದವರು, ಅದು ಯಾವನೇ ಆಗಲಿ ಅವನು ಸಮಾಜ ಘಾತುಕ. ಅವರಿಗೆ ಶಿಕ್ಷೆಯಾಗಲೇ ಬೇಕು ಎಂದು ಮಾಧ್ಯಮ ಹೇಳಿದೆ. ಇಷ್ಟಾದ ಮೇಲೂ ಯಾವ ಜಾತಿ, ಧರ್ಮ ಲೆಕ್ಕಿಸದೇ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧವಾಗಿ ಮಾಧ್ಯಮ ಮಾತಾಡದಿದ್ದರೇ ಹೇಳಿ... ‘ಕೋಮು’ ಮಾಧ್ಯಮನಾ..? ನಿಮ್ಮ ಆಲೋಚನೆನಾ..?” ಅಂತ ನನ್ನನ್ನು ಮರಪ್ರಶ್ನಿಸಿದರು.
“ಸರ್.. ನೀವು ಇಲ್ಲಿ ಹೇಳಿದ ಹಾಗೆ ಮಾಧ್ಯಮದ ಪರದೆ ಮೇಲೆ ಯಾವ ಮಾಧ್ಯಮವೂ ಹೇಳಿಲ್ವಲ್ಲ ಸರ್.. ಹಾಗಾದರೇ, ಇದು ‘ಕೋಮು’ ಮಾಧ್ಯಮದ್ದೇ ಇರಬೇಕು..! ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಮಾಧ್ಯಮದ ಜವಾಬ್ದಾರಿಯೋ, ಅಥವಾ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವುದು ಮಾಧ್ಯಮದ ಕೆಲಸವೋ..? 'ರೈಟ್, ಲೆಫ್ಟ್, ಸೆಂಟ್ರಲ್'.. ತಗೊಳ್ಳಿ ಸರ್...” ಅಂತಂದಿದ್ದಕ್ಕೆ ಉತ್ತರ ಇದುವರೆಗೆ ಬಂದಿಲ್ಲ. ಒಬ್ಬ ಸಾಮಾಜಿಕ ಜವಾಬ್ದಾರಿಯುತ ಪತ್ರಕರ್ತನೇ ಈ ರೀತಿ ಮಾಡಿದರೇ, ಮತ್ತೆ ಸಾಮಾನ್ಯರ ಬಗೆಗೆ ಏನು ಹೇಳಲಿ..? ನಿಜಕ್ಕೂ ಇದು ವಿಷಮ ಸ್ಥಿತಿಯಲ್ಲದೇ ಮತ್ತೇನು..?
ಎಲ್ಲಾ ಧರ್ಮಗಳಲ್ಲಿಯೂ ದುರ್ಬೀಜಗಳು ಹೆಮ್ಮರವಾಗಿ ಬೆಳೆದು ವಿಷದ ಗಾಳಿ ಬೀಸುತ್ತಿವೆ. ಆ ದುರ್ಬೀಜಗಳನ್ನು ಮುಖಮೂತಿ ನೋಡದೇ ಕಿತ್ತೆಸೆಯುವ ಕಾನೂನು ದೇಶದಲ್ಲಿ ಬರಲಿ. ಆ ದುರ್ಬೀಜಗಳಿಂದಾಗಿ ಇಡೀ ಆ ಸಮುದಾಯದ, ಜಾತಿಯ, ಧರ್ಮದ ಮೇಲಿನ ದೃಷ್ಟಿ ಬದಲಾಗದಿರಲಿ. ‘ಸರ್ವಜನಾಂಗದ ಶಾಂತಿಯ ತೋಟ’ ಅಂತ ಹೇಳಿದರೇ ಮಾತ್ರ ಸಾಲದು. ಅದು ಪಾಲನೆಗೂ ಬೇಕು ಅನ್ನಿಸುತ್ತದೆ.
ಜಾತಿ, ಧರ್ಮ, ರಾಜಕೀಯ, ಸಿದ್ಧಾಂತಗಳಿಂದಾಗಿ ಸಾಮಾಜಿಕ ‘ಸ್ಥಿತಿ’, 'ದುಸ್ಥಿತಿ'ಯಾಗದಿರಲಿ.
ಇಲ್ಲಿರುವುದು ಎಲ್ಲರಿಗೂ ಅಲ್ಲ..!
-ಶ್ರೀರಾಜ್ ವಕ್ವಾಡಿ



No comments:
Post a Comment