Sunday, April 26, 2020

‘ಮಾನವ ಧರ್ಮ’ವೊಂದೇ ಸಾಕು, ಬಸವಣ್ಣನನ್ನು ಪೂರ್ತಿ ಒಪ್ಪಬೇಕಂತಿಲ್ಲ..!



ಮತ್ತೆ ಬಸವಣ್ಣ ಇಂದು ನೆನಪಾಗಿದ್ದಾರೆ. ಹೌದು, ಬಸವಣ್ಣನ ಜಯಂತಿ ಮತ್ತೆ ಬಂದಿದೆ. ಮಹಾ ಮಾನವತಾವಾದಿ ಬಸವಣ್ಣ ಬೇರೆ ಯಾವ ದಿನವೂ ನೆನಪಾಗುವುದಿಲ್ಲ. ಆತ ಪ್ರತಿಪಾದಿಸಿದ ಧರ್ಮ ಆಚರಣೆಗೆ ಬರುವುದಿಲ್ಲ. ಅದು ಬರುವುದಿದ್ದರೇ, ಆತನ ಜಯಂತಿ ದಿನ ಮಾತ್ರ ಅನ್ನುವಷ್ಟರ ಮಟ್ಟಿಗೆ ಕಾಲ ಬಂದೊದಗಿದೆ ಎನ್ನುವುದು ವಿಷಾದನೀಯ.

ಇಂದಿನ ಸಮಾಜದಲ್ಲಿ ಧರ್ಮ ಎನ್ನುವುದು ಅಪ್ಪಟ ರಾಜಕಾರಣವಾಗಿದೆ. ದೇವರನ್ನು ಮಾರುವ ಧರ್ಮವೇ ಶ್ರೇಷ್ಠ ಅನ್ನಿಸಿಕೊಂಡಿದೆ. ಧರ್ಮಾಚರಣೆಯೂ ಸಂಪೂರ್ಣವಾಗಿ ವ್ಯಾಪಾರೀಕರಣವಾಗಿದೆ ಎಂಬುವುದು ಸತ್ಯ.

ಬಸವಣ್ಣ ವಿಶ್ವ ಮಾನವತಾವಾದಿ. ಅಪ್ಪಟ ದಾರ್ಶನಿಕ. ಬಸವಣ್ಣ ಪ್ರತಿಪಾದಿಸಿದ ವಿಚಾರಗಳು ನನಗನ್ನಿಸುವ ಮಟ್ಟಿಗೆ ಇನ್ನೂ ಆಚರಣೆಗೆ ಬಂದಿಲ್ಲ. ಅದು ಕೇವಲ ವಚನಗಳಾಗಿಯೇ, ತತ್ವವಾಗಿಯೇ ಉಳಿದುಹೋಗಿದೆ ಅಂತನ್ನಿಸುತ್ತಿದೆ. ಜಾತಿ, ಮತ, ಧರ್ಮ, ಭೇದ ಭಾವಗಳಿಲ್ಲದೆ ಸಕಲ ಜೀವಿಗಳ ಕಲ್ಯಾಣ ಬಯಸಿದ್ದರು ಬಸವಣ್ಣ. ಸಾಮಾಜಿಕ ಸಮಾನತೆಯನ್ನು ಕಟ್ಟಲು ವೈಚಾರಿಕ ಕ್ರಾಂತಿಯನ್ನು ಬಸವಣ್ಣ ಮಾಡಿದ್ದರು. ಆದರೇ, ಬಸವಣ್ಣನನ್ನು ಗೌರವಿಸುವವರು, ಮಾನವೀಯತೆ, ಮನುಜ ಧರ್ಮದ ಬಗ್ಗೆ ಮಾತಾಡುವವರು ಇಂದು ಎಷ್ಟರ ಮಟ್ಟಿಗೆ ಬಸವಣ್ಣನ ತತ್ವವನ್ನು, ವಿಚಾರವನ್ನು ಪಾಲಿಸುತ್ತಿದ್ದಾರೆ ಎಂದು ಪ್ರಶ್ನೆ ಕೇಳಬೇಕಾದ ಅನಿವಾರ್ಯವಿದೆ. ಲಾಭಕ್ಕಾಗಿ ಎಲ್ಲವೂ ತೋರಿಕೆಯಾಗಿದೆ. ಸಮಾಜವಿಂದು ಜಾತೀಯತೆ, ಮತೀಯತೆಯಲ್ಲಿ ನಲುಗಿಹೋಗಿದೆ. ನೆಲದೆಲ್ಲೆಡೆ ಧರ್ಮ ದಳ್ಳುರಿಯ ಹೊಗೆಯಾಡುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ/ಮಾಡುವ ಮತಾಂಧರೇ, ಧರ್ಮ ಧರ್ಮಗಳ ನಡುವೆ ಗಲಭೆ ಎಬ್ಬಿಸುವವರೇ, ಪರಧರ್ಮದ ಬಗ್ಗೆ ತುಚ್ಛವಾಗಿ ಕಾಣುವವರೇ ಇಂದು ಬಸವಣ್ಣನ ಬಗ್ಗೆ ಮಾತಾಡುತ್ತಾರೆ. ಒಂದು ದಿನದ ಮಟ್ಟಿಗೆ ಬಸವಾನುಯಾಯಿಗಳಾಗುತ್ತಾರೆ. ನಿಜಕ್ಕೂ ತಮಾಷೆ ಅನ್ನಿಸುತ್ತದೆ. ಅಂತವರೆಲ್ಲಾ.. ‘ನಾನೇಷ್ಟು ಬಸವಣ್ಣನ ತತ್ವವನ್ನು ಪಾಲಿಸುತ್ತಿದ್ದೇನೆ’ ಅಂತ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು. ಬಸವಣ್ಣನ ಬಗ್ಗೆ ಮಾತಾಡುವುದಕ್ಕೆ ನೈತಿಕತೆ ಇಲ್ಲದವರು ಬಸವಣ್ಣನನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಾರೆ ಎಂದರೇ ಅದಕ್ಕಿಂತ ಅಸಹ್ಯವಾದದ್ದು ಮತ್ತಾವುದೂ ಇಲ್ಲ.

ಬಸವಣ್ಣ ಏಕದೇವೋಪಾಸನೆಯ ಧರ್ಮವನ್ನು ದೇಶದಲ್ಲಿ ಮೋದಲು ಸ್ಥಾಪಿಸಿದರು.  ನಂತರದಲ್ಲಿ ಹಿಂದೂ ಧರ್ಮ, ಜೈನ ಧರ್ಮ, ಬೌದ್ಧ ಧರ್ಮ, ಸಿಖ್ ಧರ್ಮ ಹೀಗೆ ಅನೇಕ ಧರ್ಮಗಳು ಬಂದವು. ದೇಶದಲ್ಲಿ ಮನುಸ್ಮತಿ ಮೊದಲಿನಿಂದಲೂ ಆಳುತ್ತಿದೆ. ಇವತ್ತಿಗೂ ಪರೋಕ್ಷವಾಗಿ ಆಳುತ್ತಿದೆ ಎನ್ನುವುದು ಸುಳ್ಳಲ್ಲ. ಅದನ್ನು ಒಪ್ಪಿಕೊಳ್ಳಲೇಬೇಕು.

ಮನುಸ್ಮತಿ ‘ಬ್ರಾಹ್ಮಣೋ ಧರ್ಮ ಮೂಲಃ’ ಎಂದು ಹೇಳುತ್ತದೆ. ಮನುಸ್ಮತಿ ದೇವರು ಧರ್ಮದ ಮೂಲ ಎಂದು ಹೇಳಲಿಲ್ಲ. ಬಸವಣ್ಣ ಇದನ್ನು ಒಪ್ಪಲಿಲ್ಲ. ಬ್ರಾಹ್ಮಣನೇ ಧರ್ಮದ ಮೂಲ ಎಂಬುವುದನ್ನು ತಿರಸ್ಕರಿಸಿದ ಬಸವಣ್ಣನನ್ನು ಸಮಾಜದಿಂದ ಹೊರದೂಡಲಾಯಿತು. “ದಯೆಯಿಲ್ಲದ ಧರ್ಮ ಯಾವುದಯ್ಯ..? ದಯಯೇ ಬೇಕು ಸಕಲ ಪ್ರಾಣಿಗಳಲ್ಲಿಯೂ. ದಯಯೇ ಧರ್ಮದ ಮೂಲವಯ್ಯ ಕೂಡಲಸಂಗಮದೇವ" ಎಂದು ಪ್ರತಿಪಾದಿಸುವುದರ ಮೂಲಕ ಮಾನವತಾವಾದಿಯಾಗಿ ಬಸವಣ್ಣ ದೈತ್ಯರಾದರು. ಸಮಾಜವನ್ನು ಜಾತಿಯ ಆಧಾರಗಳಲ್ಲಿ, ವರ್ಣದ ಆಧಾರಗಳಲ್ಲಿ ವರ್ಗೀಕರಣ ಮಾಡುವ ಸಿದ್ಧಾಂತದ ವಿರುದ್ಧ ಬಸವಣ್ಣ ನಿಂತರು. ಮಾನವೀಯ ಮೌಲ್ಯವನ್ನು ಜಗತ್ತಿಗೆ ಧಾರೆಯೆರೆದವರು ಬಸವಣ್ಣ. ಬಸವಣ್ಣ ಬಸವಣ್ಣನಾಗಿಯೇ ಉಳಿದರು.

ಇಂದಿಗೂ ಜಾತಿಯಿಂದಾಗಿ, ಧರ್ಮದಿಂದಾಗಿ, ವರ್ಣದಿಂದಾಗಿ ಭೇದ ಭಾವಗಳು ನಡೆಯುತ್ತಲೇ ಇದೆ. ಅದಕ್ಕೆ ಪೂರಕವಾದ ವಾತಾವರಣ ಬಹಳ ಗಟ್ಟಿಯಾಗಿ ಸೃಷ್ಟಿಯಾಗಿದೆ ಅನ್ನಿಸುತ್ತಿದೆ. ಬಸವಣ್ಣನನ್ನು ಪೂರ್ತಿಯಾಗಿ ಒಪ್ಪಬೇಕು ಎನ್ನುದನ್ನು ನಾನಿಲ್ಲಿ ಹೇಳಲಾರೆ. ಸ್ವಲ್ಪವೋ, ಪೂರ್ತಿಯೋ ಒಪ್ಪಬೇಕಂತನೂ ಕೂಡ ಇಲ್ಲ. ಅವೆಲ್ಲವೂ ಮನೋಧರ್ಮಕ್ಕೆ ಬಿಟ್ಟಿದ್ದು. ಆದರೇ, ಮಾನವೀಯತೆಯನ್ನು ಪಾಲಿಸಬಹುದು. ಮನುಜ ಧರ್ಮವನ್ನು ಅನುಸರಿಸಬಹುದು. ಆ ಮೂಲಕವೇ ಸಮಾಜದಲ್ಲಿ ನೆಮ್ಮದಿಯ ನಾಳೆಗಳನ್ನು ಕಾಣಬಹುದಲ್ಲವೇ..? ಸೌಹಾರ್ಧತೆಯ ಸಾಮುದಾಯಿಕ ಬದುಕು ಕಟ್ಟಿಕೊಳ್ಳಬಹುದಲ್ಲವೇ..? ರಾಗ ದ್ವೇಷಗಳ ವಿಜೃಂಭಿಸಿ ಸಮಾಜದ ನಾಶಕ್ಕೆ ಕಾರಣವಾಗುವ ಬದಲಾಗಿ ಸಮಾಜದ ಹಿತಚಿಂತನೆಗಾಗಿ ಸಮಾನತೆ ಪಾಲಿಸಬಹುದಲ್ಲವೇ..? ಪ್ರಶ್ನಿಸಿಕೊಳ್ಳಿ ತಮಗೆ ತಾವೇ. ಉತ್ತರ ಸಿಗಬಹುದು. 



ತಾನು ಬಸವಣ್ಣನನ್ನು ಅನುಸರಿಸುತ್ತೇನೆ ಅಂತ ಹೇಳಿಕೊಳ್ಳುತ್ತಿದ್ದರೇ, ಆತ ಬಸವಣ್ಣನ ಎಲ್ಲಾ ವಚನಗಳನ್ನು, ತತ್ವಗಳನ್ನು ತಿಳಿದುಕೊಳ್ಳುವುದೇನೂ ಬೇಕಾಗಿಲ್ಲ.

“ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಲು ಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮ ದೇವನೊಲಿಸುವ ಪರಿ”.

ಇದೊಂದೇ ಸಾಕಲ್ಲವೇ ಆತ್ಮೋದ್ಧಾರಕ್ಕೆ..? ಇದೊಂದೇ ಸಾಕಲ್ಲವೇ ಆತ್ಮಶುದ್ಧಿಗೆ..? ಮಾನವ ಧರ್ಮ ಇಲ್ಲಿಂದಲೇ ಆರಂಭ.
------------------------------
-ಶ್ರೀರಾಜ್ ವಕ್ವಾಡಿ 

No comments:

Post a Comment