ಸದ್ಯಕ್ಕೆ ದೇಶದಲ್ಲಿ ಮೇ 3ರ ತನಕ ಲಾಕ್ಡೌನ್ ಇದೆ. ಲಾಕ್ಡೌನ್ ಮುಂದುವರಿಯುತ್ತಾ..? ಅಥವಾ ಲಾಕ್ಡೌನ್ ಮುಗಿಯುತ್ತಾ..? ಸಡಿಲಗೊಳ್ಳುತ್ತದಾ..? ಲಾಕ್ಡೌನ್ ಒಂದು ವೇಳೆ ಮುಗಿದರೆ ಮುಂದೇನು..? ಎಂಬ ಪ್ರಶ್ನೆಗಳಿಗೆ ನಮ್ಮಲ್ಲಿ ಸರಿಯಾದ ಉತ್ತರಗಳಿಲ್ಲ. ಲಾಕ್ಡೌನ್ ಮೇ 3ರ ನಂತರ ಮುಗಿದರೂ ಕೂಡ ಸಾರಿಗೆ ವ್ಯವಸ್ಥೆಗಳನ್ನು, ವಾಜಿಜ್ಯ ಕ್ಷೇತ್ರಗಳಿಗೆ ಅಷ್ಟು ಸುಲಭವಾಗಿ ವಹಿವಾಟಿಗೆ ಬಿಡಲು ಸಾಧ್ಯವಿಲ್ಲ. ಆರ್ಥಿಕತೆಯೂ ಸುಧಾರಿಸುವುದೊಂದಿಗೆ ಜನ ಜೀವನವೂ ಸುಧಾರಣೆ ಮಾಡುವಂತಹ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಸೋಂಕಿತರ ಸಂಖ್ಯೆ, ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಮೇಲ್ಮುಖಗೊಳ್ಳುತ್ತಲೇ ಇದೆ. ಮೇ 3ರ ನಂತರ ಲಾಕ್ಡೌನ್ ಮುಗಿಸಿದರೇ ಹೇಗೆ ಸೋಂಕು ನಿಯಂತ್ರಣಕ್ಕೆ ಬರುತ್ತದೆ..? ಲಾಕ್ಡೌನ್ ಇರುವಾಗಲೇ ಸೋಂಕು ಪರಿಸ್ಥಿತಿ ಸುಧಾರಿಸುತ್ತಿಲ್ಲ. ಇನ್ನು ಲಾಕ್ಡೌನ್ ತೆರವುಗೊಳಿಸಿದರೇ ಏನಾಗಬಹುದು ಎಂಬ ಚಿಂತೆ ಕೇಂದ್ರ ಸರ್ಕಾರಕ್ಕೆ ಕಾಡುತ್ತಿದೆ. ಆದರೇ, ಕೇರಳ ಸರ್ಕಾರ ಮೇ 3ರ ನಂತರ ಏನು ಮಾಡಬೇಕು ಎಂಬ ಯೋಜನೆಯನ್ನು ಈಗಾಗಲೇ ರೂಪಿಸಿಕೊಂಡಿದೆ. ಅದೇ, ‘ರಿವರ್ಸ್ ಕ್ವಾರಂಟೈನ್’.
ಹೌದು, ‘ರಿವರ್ಸ್ ಕ್ವಾರಂಟೈನ್’ ಕೇರಳ ಸರ್ಕಾರದ ಮೇ 3ರ ನಂತರದ ಹೊಸ ಸೂತ್ರ. ಸೋಂಕು ನಿಯಂತ್ರಣಕ್ಕೆ ಬರಬೇಕು, ನಾಗರಿಕರ ಬದುಕು ಕೂಡ ಸಹಜ ಸ್ಥಿತಿಗೆ ಬರಬೇಕು ಎಂಬೆಲ್ಲಾ ಯೋಜನೆಗಳ ಬಗ್ಗೆ ಸಮಯೋಚಿತವಾಗಿ ಪ್ರಿ ಪ್ಲಾನಿಂಗ್ ಮಾಡುತ್ತಿದೆ ಕೇರಳ ರಾಜ್ಯ ಸರ್ಕಾರ. ಕೊರೋನಾ ಸೋಂಕನ್ನು ಬಡಿದೋಡಿಸಲು ಕೇರಳ ಚಿಂತನೆ ಮಾಡಿ ರಿವರ್ಸ್ ಕ್ವಾರಂಟೈನ್ ಮಾಡುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದಿದೆ ಕೇರಳ. 28 ದಿನಗಳ ಕ್ವಾರಂಟೈನ್ ಮಾಡಿಯಾದ ಮೇಲೂ ಮತ್ತೆ ರಿವರ್ಸ್ ಕ್ವಾರಂಟೈನ್ ಮಾಡುತ್ತದಾ..? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಆದರೇ ಈ ಕ್ವಾರಂಟೈನ್ ಸಂಪೂರ್ಣ ಭಿನ್ನ. ಸೋಂಕು ತಗಲಿದವರನ್ನು ಅಥವಾ ಅವರನ್ನು ಸಂಪರ್ಕಿಸಿದವರನ್ನು ಪ್ರತ್ಯೇಕಿಸಿ ಇಡುವುದು ಕ್ವಾರಂಟೈನ್ ಆದರೇ, ಸೋಂಕು ಇಲ್ಲದೇ ಇರುವವರನ್ನೂ ಪ್ರತ್ಯೇಕಿಸಿ ಇರಿಸುವುದೇ ಕೇರಳದ ಈ ರಿವರ್ಸ್ ಕ್ವಾರಂಟೈನ್‌ನ ಉದ್ದೇಶ. ಇಡೀ ದೇಶಕ್ಕೆ ದೇಶವೇ ಹೋಮ್ ಕ್ವಾರಂಟೈನ್‌ನಲ್ಲಿರುವಾಗ ಇದೇನು ವಿಶೇಷ ಅಲ್ಲ ಅಂತನ್ನಿಸಬಹುದು ನಿಮಗೆ. ಆದರೇ, ಕೇರಳ ಸರ್ಕಾರದ ಪ್ಲಾನಿಂಗ್ ಭಿನ್ನವಾಗಿದೆ.
ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಗುರುತಿಸಿ ಅವರನ್ನು ಯಾವುದೇ ರೀತಿಯಲ್ಲಿ ಸೋಂಕಿಗೆ ಒಳಗಾಗದಂತೆ ಮನೆಯಲ್ಲಿಯೇ ಪ್ರತ್ಯೇಕಿಸಿ ಇರಿಸುವುದೇ ಕೇರಳ ಸರ್ಕಾರದ ರಿವರ್ಸ್ ಕ್ವಾರಂಟೈನ್‌ನ ಯೋಜನೆ. ಕೇರಳದ ಒಟ್ಟು 3.47 ಕೋಟಿ ಜನಸಂಖ್ಯೆಯ ಪೈಕಿಯಲ್ಲಿ ಅಂದಾಜು 12 ರಿಂದ 13 ಶೇಕಡಾ ಜನರು ಅನಾರೋಗ್ಯದಿಂದಿದ್ದಾರೆ ಕೇರಳ ಸರ್ಕಾರ ಹೇಳುತ್ತದೆ. ಸ್ಥಳೀಯ ಮಟ್ಟದ ಆಡಳಿತಗಳ ಸಹಾಯದಿಂದ ಅಂತವರನ್ನೆಲ್ಲಾ ಪತ್ತೆಹಚ್ಚಿ ಅವರನ್ನು ಸುರಕ್ಷಿತವಾಗಿರಿಸುವ ಕೇರಳ ಸರ್ಕಾರದ ಯೋಚನೆಯಿದು. ಟ್ರ್ಯಾಕ್, ಟ್ರೇಸ್, ಟ್ರೀಟ್‌ಮೆಂಟ್ ಸೂತ್ರವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದಕ್ಕೆ ಕೇರಳ ಸರ್ಕಾರ ವೈದ್ಯಕೀಯ ಇಲಾಖೆಗಳ ಸಹಕಾರದೊಂದಿಗೆ ಒಂದು ಹೆಜ್ಜೆ ಮುಂದಿಟ್ಟಿದೆ ಎಂದರೇ ತಪ್ಪಲ್ಲ. ಮಾತ್ರವಲ್ಲದೇ, ಅವರಿಗೆ ಬೇಕಾದ ವೈದಕೀಯ ಸೌಲಭ್ಯಗಳನ್ನು ಒಳಗೊಂಡು ಅಗತ್ಯ ಸೌಲಭ್ಯಗಳನ್ನೂ ನೀಡುವುದಕ್ಕೆ ಕೇರಳ ಸರ್ಕಾರ ಮುಂದಾಗಿದೆ ಎನ್ನುವುದು ಸ್ತುತ್ಯಾರ್ಹ.
ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು, ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ನಿವಾರಿಸಲು ಹಾಗೂ ಸಾಮಾಜಿಕ ಜನ ಜೀವನವನ್ನು ಸಹಜ ಸ್ಥಿತಿಗೆ ಬರುವಂತೆ ಮಾಡುವ ಬಗ್ಗೆ ಕೇಂದ್ರ ಸರ್ಕಾರವನ್ನು ಒಳಗೊಂಡು ಎಲ್ಲಾ ರಾಜ್ಯ ಸರ್ಕಾರಗಳು ಮಾಡುತ್ತಿವೆ ಎನ್ನುವುದು ಖಂಡಿತ ಒಪ್ಪಿಕೊಳ್ಳಬೇಕು. ಇನ್ನು, ಕೇಲವು ಪ್ರದೇಶಗಳಲ್ಲಿ ಲಾಕ್ಡೌನ್ ಕೊಂಚ ಸಡಿಲಗೊಳಿಸುವುದನ್ನೂ ಕೆಲವು ರಾಜ್ಯ ಸರ್ಕಾರಗಳು ಮಾಡಿದೆ/ಮಾಡುತ್ತಿದೆ. ಕೆಲವು ಕಡೆಗಳಲ್ಲಿ ವಿಫಲವೂ ಆಗಿದೆ. ಆದರೇ, ಕೇರಳ ಸರ್ಕಾರ ಮಾತ್ರ ಮುಂದಾಲೋಚನೆಯಿಂದ ಆರ್ಥಿಕ ಸ್ಥಿತಿ ಸರಿದೂಗಿಸುವ ಯೋಚನೆಯೊಂದಿಗೆ ಇಂತಹದ್ದೊಂದು ನೂತನ ಸೋಂಕು ನಿಯಂತ್ರಣಕ್ಕೆ ತರುವ ಮಾರ್ಗದ ಪ್ರಯತ್ನಕ್ಕೆ ಅಲ್ಲಿನ ಸ್ಥಳಿಯ ಆಡಳಿತದ ಸಹಕಾರದಿಂದ ಮುಂದಾಗಿದೆ ಎನ್ನುವುದು ನಿಜಕ್ಕೂ ಶ್ಲಾಘನೀಯ.
ಈ ನಿರ್ಧಾರ ಹೇಳುವಷ್ಟು ಸುಲಭದ್ದಾ..? ಎಂಬ ಪ್ರಶ್ನೆಗೆ... ಸ್ಥಳಿಯಾಡಳಿತ, ವೈದ್ಯಕೀಯ ಇಲಾಖೆ ಸರ್ಕಾರದ ಜೊತೆಗಿದೆ, ಜನರೂ ಕೂಡ ಸಹಕರಿಸುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್.
ರಾಜಕೀಯ ಸಿದ್ಧಾಂತಗಳಲ್ಲಿ ಭಿನ್ನತೆ ಇದೆ ಎಂಬ ಕಾರಣದಿಂದ ಕೇರಳವನ್ನು ಬದಿಗೆ ದೂಡುವ ಧೋರಣೆಯೊಂದು ರಾಜಕೀಯ ವಲಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿದೆ. ಅವೆಲ್ಲವನ್ನೂ ದೂರ ಮಾಡಿ, ಸೋಂಕು ನಿವಾರಿಸುವುದಕ್ಕೆ ದೇಶದೆಲ್ಲೆಡೆ ಕೇರಳ ಕೈಗೊಂಡ ಮತ್ತು ಕೈಗೊಳ್ಳುತ್ತಿರುವ ಕ್ರಮಗಳನ್ನು ಯಾಕೆ ಪಾಲನೆಗೆ ತರಬಾರದು..? ಇಂತಹ ಸ್ಥಿತಿಯಲ್ಲಿಯೂ ರಾಜಕೀಯ ಅಡ್ಡಿಯಾಗುತ್ತದೆಯೇ..? ಗೊತ್ತಿಲ್ಲ.
ಕೇರಳ ಸರ್ಕಾರ ಸೋಂಕು ನಿವಾರಣೆಗೆ ಈ ಹಿಂದೆ ಕೈಗೊಂಡ ಕ್ರಮಗಳಿಂದ ಅಲ್ಲಿನ ಕೊರೋನಾ ಹೊಸ ಪ್ರಕರಣಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಿ ಜಗತ್ತಿಗೆ ತೋರಿಸಿದೆ. ಈ ಯೋಜನೆಯಲ್ಲಿಯೂ ಕೇರಳ ಯಶಸ್ವಿಯಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ...ಕೇರಳ, ಸೋಂಕು ನಿವಾರಣೆಗೆ ಕೈಗೊಂಡ ಯೋಜನೆಗಳು ಮಾದರಿಯಾಗಿ ಕಾಣಿಸುತ್ತಿದೆ ಎನ್ನುವುದು ಅಕ್ಷರಶಃ ನಿಜ.
-------------------------------------
-ಶ್ರೀರಾಜ್ ವಕ್ವಾಡಿ




No comments:
Post a Comment