Tuesday, September 8, 2026

ಬರʼಕ್ಕೆ ಮೋಡದ ಜೊತೆಗೆ ಮೌಢ್ಯವನ್ನೂ ಬಿತ್ತುತ್ತಿರುವ ಸರ್ಕಾರ!?

ಮೋಡ ಬಿತ್ತನೆಯ ಮೊದಲು ನೀರಿನ ರಾಜಕಾರಣ ಬದಲಾಗಬೇಕಿದೆ. ಮಳೆಗಾಗಿ ವಿಜ್ಞಾನ ಬೇಕು, ಆದರೆ ಮೌಢ್ಯವಲ್ಲ; ರೈತನ ಬದುಕಿಗೆ ತಾತ್ಕಾಲಿಕ ಪ್ರಯೋಗಗಳಿಗಿಂತ ದೀರ್ಘಕಾಲೀನ ನೀರಿನ ನೀತಿ ಅಗತ್ಯವಾಗಿ ಬೇಕಿದೆ. ಮಳೆ ಕೈಕೊಟ್ಟಾಗ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತದೆ. ರೈತ ಆತಂಕಕ್ಕೊಳಗಾಗುತ್ತಾನೆ. ಜಲಾಶಯಗಳು ಬರಿದಾಗುತ್ತವೆ. ಬೆಳೆಗಳು ಒಣಗುತ್ತವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಪರಿಹಾರ ಹುಡುಕುವುದು ಸಹಜ. ಆದರೆ ಪರಿಹಾರದ ಹೆಸರಿನಲ್ಲಿ ವಿಜ್ಞಾನ ಮತ್ತು ಮೌಢ್ಯವನ್ನು ಒಂದೇ ವೇದಿಕೆಯಲ್ಲಿ ನಿಲ್ಲಿಸುವುದು ಮಾತ್ರ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಮೋಡ ಬಿತ್ತನೆಗೆ ಮುಂದಾಗಿರುವ ಸರ್ಕಾರವೇ ಉತ್ತಮ ಮಳೆಯಾಗಲಿ ಎಂದು ಮಡಿಕೇರಿ ತಾಲ್ಲೂಕಿನ ಐತಿಹಾಸಿಕ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸುವುದು ಈ ವೈರುಧ್ಯವನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತದೆ. ಒಂದೆಡೆ ವಿಮಾನ ಹಾರಿಸಿ ಮೋಡಗಳ ಭೌತಿಕ ಗುಣಲಕ್ಷಣಗಳೊಂದಿಗೆ ವೈಜ್ಞಾನಿಕವಾಗಿ ಪ್ರಯೋಗ ನಡೆಸುವ ಸರ್ಕಾರ; ಮತ್ತೊಂದೆಡೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಳೆಯನ್ನೇ ಆಹ್ವಾನಿಸುವ ಪ್ರಯತ್ನ. ಜನರ ವೈಯಕ್ತಿಕ ನಂಬಿಕೆ ಬೇರೆ; ಸರ್ಕಾರದ ಅಧಿಕೃತ ನಿಲುವು ಮತ್ತು ಸಾರ್ವಜನಿಕ ನೀತಿ ಬೇರೆ. ಮಂತ್ರಿಗಳು, ಶಾಸಕರು ಮತ್ತು ಅಧಿಕಾರಿಗಳು ಇಂತಹ ಪೂಜೆಯಲ್ಲಿ ಅಧಿಕೃತವಾಗಿ ಪಾಲ್ಗೊಳ್ಳುವಾಗ ಅದು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯುವುದಿಲ್ಲ. ಸರ್ಕಾರದ ಸಾಂಕೇತಿಕ ಬೆಂಬಲವೂ ಅದಕ್ಕೆ ಸೇರುತ್ತದೆ. ಆಗ ಪ್ರಶ್ನೆ ಏಳುತ್ತದೆ: ಮಳೆ ಬರುವಂತೆ ಮಾಡುವ ವೈಜ್ಞಾನಿಕ ವಿಧಾನಗಳನ್ನೇ ಸರ್ಕಾರ ನಂಬುತ್ತದೆಯೇ, ಅಥವಾ ಮಳೆಯಿಗಾಗಿ ಧಾರ್ಮಿಕ ಆಚರಣೆಗಳನ್ನೂ ಸರ್ಕಾರಿ ಪರಿಹಾರದ ಭಾಗವೆಂದು ಪರಿಗಣಿಸುತ್ತದೆಯೇ? ಈ ಪ್ರಶ್ನೆ ಯಾವುದೇ ಧರ್ಮದ ವಿರುದ್ಧದ ಪ್ರಶ್ನೆಯಲ್ಲ. ಇದು ಆಧುನಿಕ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ವೈಜ್ಞಾನಿಕ ಹೊಣೆಗಾರಿಕೆಯ ಪ್ರಶ್ನೆ. ಮೋಡ ಬಿತ್ತನೆಯ ಮಿತಿಯನ್ನು ಒಪ್ಪಿಕೊಳ್ಳಬೇಕು. ಮೋಡ ಬಿತ್ತನೆ ಎಂದರೆ ಆಕಾಶದಲ್ಲಿ ಮೋಡಗಳೇ ಇಲ್ಲದಿದ್ದರೂ ಮಳೆ ಸೃಷ್ಟಿಸುವ ಯಾವುದೋ ಮಾಂತ್ರಿಕ ತಂತ್ರವಲ್ಲ. ಸೂಕ್ತವಾದ ಮೋಡಗಳಿದ್ದಾಗ ಅವುಗಳಲ್ಲಿನ ಮಳೆಯಾಗುವ ಪ್ರಕ್ರಿಯೆಯನ್ನು ಉತ್ತೇಜಿಸಲು ಕೆಲವು ಕಣಗಳನ್ನು ಬಳಸುವ ಪ್ರಯತ್ನವಷ್ಟೇ.

ಹೀಗಾಗಿ ‘ಮಳೆಯನ್ನೇ ಉತ್ಪಾದಿಸುವ ಶಕ್ತಿ ಮನುಷ್ಯನ ಕೈಗೆ ಬಂದಿದೆ’ ಎಂಬ ಭ್ರಮೆ ಅಪಾಯಕಾರಿ. ಪ್ರಕೃತಿ ಒಂದು ಸರಳ ಯಂತ್ರವಲ್ಲ. ಮಳೆಯ ಹಿಂದೆ ಸಮುದ್ರದ ತಾಪಮಾನ, ವಾತಾವರಣದ ಒತ್ತಡ, ಗಾಳಿಯ ಚಲನೆ, ಆರ್ದ್ರತೆ, ಮೋಡಗಳ ರಚನೆ, ಭೌಗೋಳಿಕ ಪರಿಸ್ಥಿತಿ ಸೇರಿದಂತೆ ಅನೇಕ ಅಂಶಗಳ ಸಂಕೀರ್ಣ ಸಂಬಂಧವಿದೆ. ಮನುಷ್ಯ ಕೆಲವು ಪ್ರಕ್ರಿಯೆಗಳನ್ನು ಪ್ರಭಾವಿಸಬಹುದು; ಆದರೆ ಮುಂಗಾರು ಮಳೆಯನ್ನು ತನ್ನ ಇಚ್ಛೆಯಂತೆ ಆನ್–ಆಫ್ ಮಾಡುವ ಹಂತಕ್ಕೆ ವಿಜ್ಞಾನ ಬಂದಿಲ್ಲ. ಆದ್ದರಿಂದ ಮೋಡ ಬಿತ್ತನೆಯ ಯಶಸ್ಸು, ಪರಿಣಾಮಕಾರಿತ್ವ, ಅದಕ್ಕಾಗಿ ಮಾಡಿದ ವೆಚ್ಚ ಮತ್ತು ಅದರ ಪರ್ಯಾಯಗಳ ಕುರಿತು ಪಾರದರ್ಶಕ ವೈಜ್ಞಾನಿಕ ಮೌಲ್ಯಮಾಪನ ಅಗತ್ಯ. ಪ್ರಯೋಗ ನಡೆಸುವುದೇ ತಪ್ಪಲ್ಲ. ಆದರೆ ಪ್ರಯೋಗವನ್ನು ಯಶಸ್ಸಿನ ಖಚಿತ ಭರವಸೆಯಂತೆ ಬಿಂಬಿಸುವುದು ತಪ್ಪು.  ಮಳೆ ಕಡಿಮೆಯಾದಾಗ ನಾವು ಆಕಾಶವನ್ನು ನೋಡುತ್ತೇವೆ. ಆದರೆ ಬರದ ಮೂಲ ಸಮಸ್ಯೆಗಳ ಬಹುಪಾಲು ನೆಲದ ಮೇಲೆಯೇ ಇರುತ್ತವೆ. ಕೆರೆಗಳ ಹೂಳು ತೆಗೆಯಲಾಗಿದೆಯೇ? ಕೆರೆಗಳಿಗೆ ನೀರು ಒದಗಿಸುವ ಕಾಲುವೆಗಳು ದುರಸ್ತಿಯಾಗಿವೆಯೇ? ಮಳೆನೀರು ಹರಿದುಹೋಗದೆ ಸ್ಥಳೀಯವಾಗಿ ಸಂಗ್ರಹವಾಗುವ ವ್ಯವಸ್ಥೆ ಎಷ್ಟಿದೆ? ಅಂತರ್ಜಲದ ಅತಿಯಾದ ಶೋಷಣೆಯನ್ನು ನಿಯಂತ್ರಿಸಲಾಗುತ್ತಿದೆಯೇ? ನಗರೀಕರಣದಿಂದ ನಾಶವಾಗುತ್ತಿರುವ ಜಲಮೂಲಗಳನ್ನು ರಕ್ಷಿಸಲಾಗುತ್ತಿದೆಯೇ? ಪಶ್ಚಿಮಘಟ್ಟ ಮತ್ತು ಇತರ ಜಲಾನಯನ ಪ್ರದೇಶಗಳ ಪರಿಸರ ಸಮತೋಲನವನ್ನು ಕಾಪಾಡಲಾಗುತ್ತಿದೆಯೇ? ಕಡಿಮೆ ನೀರು ಬೇಕಾಗುವ ಬೆಳೆಗಳಿಗೆ ರೈತರನ್ನು ವೈಜ್ಞಾನಿಕವಾಗಿ ಪ್ರೋತ್ಸಾಹಿಸಲಾಗುತ್ತಿದೆಯೇ? ಇವುಗಳಿಗೆ ಉತ್ತರಿಸದೆ ಆಕಾಶದ ಮೋಡಗಳ ಮೇಲೆ ಮಾತ್ರ ಭರವಸೆ ಇಡುವುದು ಸಮಸ್ಯೆಯ ಮೂಲವನ್ನು ತಪ್ಪಿಸುವಂತಾಗುತ್ತದೆ. ರೈತನಿಗೆ ಮಳೆ ಮಾತ್ರವಲ್ಲ, ನೀರಿನ ಹಕ್ಕು ಬೇಕು ಬರದ ಹೊರೆ ರೈತನೊಬ್ಬನ ಹೆಗಲಿಗೆ ಹಾಕುವುದು ಸುಲಭ. ಆದರೆ ನೀರಿನ ನಿರ್ವಹಣೆ ವೈಯಕ್ತಿಕ ರೈತನ ಸಾಮರ್ಥ್ಯದ ಪ್ರಶ್ನೆಯಲ್ಲ; ಅದು ಸಾರ್ವಜನಿಕ ನೀತಿಯ ಪ್ರಶ್ನೆ. ಒಂದು ಕಡೆ ಭೂಗರ್ಭಜಲದ ಮೇಲೆ ಒತ್ತಡ ಹೆಚ್ಚುತ್ತದೆ. ಮತ್ತೊಂದೆಡೆ ಮಳೆ ಬಂದಾಗ ಅಪಾರ ಪ್ರಮಾಣದ ನೀರು ಹರಿದುಹೋಗುತ್ತದೆ. ಮಳೆ ಇಲ್ಲದಾಗ ನೀರಿಗಾಗಿ ಹಾಹಾಕಾರ; ಮಳೆ ಬಂದಾಗ ಪ್ರವಾಹ—ಈ ಎರಡೂ ಪರಿಸ್ಥಿತಿಗಳು ಒಂದೇ ದುರ್ಬಲ ಜಲ ನಿರ್ವಹಣಾ ವ್ಯವಸ್ಥೆಯ ಎರಡು ಮುಖಗಳಾಗಿರಬಹುದು.

ಹೀಗಾಗಿ ಸರ್ಕಾರದ ಮೊದಲ ಆದ್ಯತೆ ‘ಮಳೆ ಬರಲಿ’ ಎಂದು ಕಾಯುವುದಲ್ಲ; ‘ಮಳೆ ಬಂದಾಗ ಒಂದು ಹನಿಯೂ ವ್ಯರ್ಥವಾಗದಂತೆ ನೋಡಿಕೊಳ್ಳುವುದು’ ಆಗಬೇಕು. ವಿಜ್ಞಾನಕ್ಕೆ ಹಣವಿದ್ದರೆ, ಜಲ ಸಂರಕ್ಷಣೆಗೆ ಏಕೆ ಇಲ್ಲ? ಮೋಡ ಬಿತ್ತನೆಗೆ ಸರ್ಕಾರ ಹಣ ಖರ್ಚು ಮಾಡುತ್ತಿದೆ ಎಂದರೆ ಅದರ ಪರಿಣಾಮಕಾರಿತ್ವವನ್ನು ಪ್ರಶ್ನಿಸುವ ಹಕ್ಕು ಸಾರ್ವಜನಿಕರಿಗೆ ಇದೆ. ಒಂದು ಮಳೆ ಬರುವಂತೆ ಮಾಡುವ ಪ್ರಯೋಗಕ್ಕಾಗಿ ಖರ್ಚಾಗುವ ಹಣದಿಂದ ಎಷ್ಟು ಕೆರೆಗಳನ್ನು ಪುನಶ್ಚೇತನಗೊಳಿಸಬಹುದು? ಎಷ್ಟು ಕಾಲುವೆಗಳನ್ನು ದುರಸ್ತಿ ಮಾಡಬಹುದು? ಎಷ್ಟು ಗ್ರಾಮಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ನಿರ್ಮಿಸಬಹುದು? ಎಷ್ಟು ರೈತರಿಗೆ ನೀರು ಉಳಿಸುವ ಕೃಷಿ ತಂತ್ರಜ್ಞಾನ ತರಬೇತಿ ನೀಡಬಹುದು? ಈ ಹೋಲಿಕೆಗಳನ್ನು ಸರ್ಕಾರವೇ ಸಾರ್ವಜನಿಕವಾಗಿ ಮಂಡಿಸಬೇಕು. ಯಾಕೆಂದರೆ ಇದು ಕೇವಲ ತಾಂತ್ರಿಕ ನಿರ್ಧಾರವಲ್ಲ. ಇದು ಸಾರ್ವಜನಿಕ ಹಣವನ್ನು ಯಾವುದಕ್ಕೆ ಆದ್ಯತೆ ನೀಡಿ ಖರ್ಚು ಮಾಡಬೇಕು ಎಂಬ ರಾಜಕೀಯ ನಿರ್ಧಾರ. ಇನ್ನು, ಮೌಢ್ಯಕ್ಕೆ ಸರ್ಕಾರದ ಮುದ್ರೆ ಯಾಕೆ? ಧಾರ್ಮಿಕ ನಂಬಿಕೆ ವ್ಯಕ್ತಿಯ ವೈಯಕ್ತಿಕ ಹಕ್ಕು. ಯಾರಾದರೂ ಮಳೆಗಾಗಿ ಪೂಜೆ ಸಲ್ಲಿಸುವುದನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಉದ್ದೇಶವಲ್ಲ. ಆದರೆ ಸರ್ಕಾರದ ಪ್ರತಿನಿಧಿಗಳು ಅಧಿಕೃತವಾಗಿ ಇಂತಹ ಆಚರಣೆಯಲ್ಲಿ ಭಾಗವಹಿಸಿದಾಗ ಅದು ಸಾರ್ವಜನಿಕ ನೀತಿಯ ಭಾಗವಾಗುವ ಅಪಾಯವಿದೆ.

ಅದರಲ್ಲೂ ಇದೇ ಸರ್ಕಾರ ವೈಜ್ಞಾನಿಕ ಕಾರ್ಯಕ್ರಮವೊಂದನ್ನು ನಡೆಸುತ್ತಿರುವಾಗ ಈ ವೈರುಧ್ಯ ಇನ್ನಷ್ಟು ತೀವ್ರವಾಗುತ್ತದೆ. ವಿಜ್ಞಾನವನ್ನು ಸರ್ಕಾರದ ಪ್ರಯೋಗಾಲಯದಲ್ಲಿ ಇಟ್ಟು, ಮೌಢ್ಯವನ್ನು ಸರ್ಕಾರದ ವೇದಿಕೆಯಲ್ಲಿ ಪ್ರಚಾರ ಮಾಡುವುದಕ್ಕೆ ಸಾಧ್ಯವಿಲ್ಲ.   ಸರ್ಕಾರ ಜನರಿಗೆ ವೈಜ್ಞಾನಿಕ ಮನೋಭಾವ ಬೆಳೆಸಬೇಕಾದ ಜವಾಬ್ದಾರಿ ಸ್ಥಾನದಲ್ಲಿ. ಹಾಗಂತ ನಂಬಿಕೆಯನ್ನು ಖಂಡಿಸಬೇಕೆಂದರ್ಥವಲ್ಲ. ಜನರ ಆತಂಕ ಮತ್ತು ನಂಬಿಕೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕಿಂತ, ಆ ಆತಂಕಗಳಿಗೆ ವೈಜ್ಞಾನಿಕ ಉತ್ತರ ನೀಡುವುದು ಸರ್ಕಾರದ ಕರ್ತವ್ಯ.  ಬರದ ರಾಜಕೀಯವನ್ನು ಬದಲಿಸಬೇಕಿದೆ. ಪ್ರತಿ ಬರಗಾಲದಲ್ಲೂ ಹೊಸ ಯೋಜನೆ, ಹೊಸ ಘೋಷಣೆ, ಹೊಸ ಸಮಿತಿ, ಹೊಸ ಪರಿಹಾರ ಈ ಚಕ್ರ ಮುಂದುವರಿದರೆ ಸಮಸ್ಯೆ ಮಾತ್ರ ಶಾಶ್ವತವಾಗುತ್ತದೆ. ಬರವನ್ನು ಕೇವಲ ಪ್ರಕೃತಿ ವಿಕೋಪವೆಂದು ನೋಡುವುದರಿಂದ ಸಾಲದು. ನೀರಿನ ಕೊರತೆಯೂ ಒಂದು ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಪ್ರಶ್ನೆ. ಯಾರ ಭೂಮಿಯಲ್ಲಿ ನೀರು ಉಳಿಯುತ್ತದೆ? ಯಾರ ಬೋರ್‌ವೆಲ್ ಒಣಗುತ್ತದೆ? ಯಾವ ಬೆಳೆಗಳಿಗೆ ನೀರು ಸಿಗುತ್ತದೆ? ಯಾವ ಪ್ರದೇಶಗಳಿಗೆ ಕಾಲುವೆ ತಲುಪುತ್ತದೆ? ಯಾವ ಕೈಗಾರಿಕೆಗಳಿಗೆ ನೀರಿನ ಆದ್ಯತೆ? ನಗರಗಳಿಗೆ ಎಷ್ಟು ನೀರು, ಗ್ರಾಮಗಳಿಗೆ ಎಷ್ಟು? ಈ ಪ್ರಶ್ನೆಗಳ ಉತ್ತರದಲ್ಲೇ ನೀರಿನ ರಾಜಕಾರಣ ಅಡಗಿದೆ.

ಇನ್ನು, ಬರೀ ಮೋಡವಲ್ಲ, ಮಾದರಿ ಬದಲಿಸಬೇಕು. ಮೋಡ ಬಿತ್ತನೆ ಯಶಸ್ವಿಯಾದರೂ ಅದು ಮಳೆಯ ಕೊರತೆಯ ಶಾಶ್ವತ ಪರಿಹಾರವಲ್ಲ. ಅದು ಇದ್ದರೆ ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಬಳಸಬಹುದಾದ ಒಂದು ಸಾಧನ ಮಾತ್ರ. ಶಾಶ್ವತ ಪರಿಹಾರವೆಂದರೆ ಜಲಾನಯನ ಪ್ರದೇಶಗಳ ಸಂರಕ್ಷಣೆ, ಕೆರೆ-ಕಟ್ಟೆಗಳ ಪುನಶ್ಚೇತನ, ಕಾಲುವೆಗಳ ನಿರ್ವಹಣೆ, ಮಳೆನೀರು ಸಂಗ್ರಹ, ಅಂತರ್ಜಲ ಮಟ್ಟ ಹೆಚ್ಚಿಸುವುದು, ನೀರು ಉಳಿಸುವ ನೀರಾವರಿ, ಸೂಕ್ತ ಬೆಳೆ ಪದ್ಧತಿ ಮತ್ತು ರೈತರಿಗೆ ವೈಜ್ಞಾನಿಕ ಸಲಹೆ ನೀಡಬೇಕಾಗಿದೆ. ಅದರ ಜತೆಗೆ ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿರುವ ಅನಿಶ್ಚಿತ ಮಳೆಯನ್ನೂ ಕೃಷಿ ನೀತಿಯ ಕೇಂದ್ರದಲ್ಲಿರಿಸಬೇಕಾಗಿದೆ. ಅಂದರೆ ಪ್ರಶ್ನೆ ‘ಮಳೆ ಹೇಗೆ ತರಬೇಕು?’ ಎಂಬುದೊಂದೇ ಅಲ್ಲ. ‘ಮಳೆ ಬಂದಾಗ ನೀರನ್ನು ಹೇಗೆ ಉಳಿಸಬೇಕು?’ ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯ. ಒಟ್ಟಿನಲ್ಲಿ, ಮೋಡ ಬಿತ್ತನೆಗೆ ವೈಜ್ಞಾನಿಕ ಪರಿಶೀಲನೆ ಇರಲಿ. ಅದರ ಯಶಸ್ಸು-ವಿಫಲತೆಗಳ ಬಗ್ಗೆ ಪಾರದರ್ಶಕ ಮಾಹಿತಿ ಇರಲಿ. ವೆಚ್ಚ ಮತ್ತು ಫಲಿತಾಂಶಗಳ ಸಾರ್ವಜನಿಕ ಲೆಕ್ಕ ಇರಲಿ. ಆದರೆ ಅದರ ಜೊತೆಗೆ ಸರ್ಕಾರವೇ ಮೌಢ್ಯಕ್ಕೆ ಅಧಿಕೃತ ಮುದ್ರೆ ಒತ್ತುವ ರೀತಿಯ ನಡೆ ತಾಳಬಾರದು. ಮಳೆ ಬರಬಹುದು. ಬರದಿರಬಹುದು.

ಆದರೆ ಸರ್ಕಾರದ ನೀತಿ ಮಾತ್ರ ಮಳೆಯಂತೆ ಅನಿಶ್ಚಿತವಾಗಿರಬಾರದು.ಮೋಡ ಬಿತ್ತುವ ಮೊದಲು ನೀರನ್ನು ಉಳಿಸುವ ವ್ಯವಸ್ಥೆ ಬಿತ್ತಬೇಕು. ಮೌಢ್ಯ ಬಿತ್ತುವ ಬದಲು ವೈಜ್ಞಾನಿಕ ಮನೋಭಾವ ಬಿತ್ತಬೇಕು. ಮಳೆಗಾಗಿ ದೇವರನ್ನು ಬೇಡುವ ಹಕ್ಕು ಜನರಿಗಿದೆ; ಆದರೆ ಜನರ ನೀರಿಗಾಗಿ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ.  ಪ್ರಕೃತಿಯನ್ನು ಬಲವಂತವಾಗಿ ಬದಲಿಸುವ ಅಥವಾ ಒಲಿಸಿಕೊಳ್ಳುವ ಪ್ರಯತ್ನಕ್ಕಿಂತ ಮೊದಲು ನೆಲದ ನೀರಿನ ನೀತಿ ಬದಲಾಗಬೇಕು. ಯಾಕೆಂದರೆ ರೈತನ ಬದುಕನ್ನು ಉಳಿಸುವುದು ಆಕಾಶದಲ್ಲಿ ಬಿತ್ತುವ ಮೋಡವಲ್ಲ—ನೆಲದಲ್ಲಿ ಉಳಿಸುವ ನೀರು ಎನ್ನುವುದು ಅನುಮಾನವಿಲ್ಲ.

- ಶ್ರೀರಾಜ್‌ ವಕ್ವಾಡಿ 

ಜಾತಿ ಗಣತಿ: ವರದಿ ಬಿಡುಗಡೆಗೆ ಸಿದ್ದರಾಮಯ್ಯ ಅವರ ಮುಂದೆಯೇ ಕೇಳಿಬಂದ ಒತ್ತಾಯ

ಸಾಮಾಜಿಕ ನ್ಯಾಯದ ರಾಜಕೀಯದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದ ‘ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ’  ಅಂಕಿ-ಅಂಶಗಳು ಹೊರಬರಬೇಕೇ, ಅಥವಾ ರಾಜಕೀಯ ಅನುಕೂಲಕ್ಕೆ ಕಡತದಲ್ಲೇ ಉಳಿಯಬೇಕೇ? ಕರ್ನಾಟಕದ ರಾಜಕೀಯದಲ್ಲಿ ಜಾತಿ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಪ್ರಶ್ನೆಗಳು ಮತ್ತೆ ಕೇಂದ್ರಬಿಂದುವಿಗೆ ಬಂದಿವೆ. ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ—ಸಾಮಾನ್ಯವಾಗಿ ‘ಜಾತಿ ಗಣತಿ’ ಎಂದು ಕರೆಯಲಾಗುತ್ತಿರುವ ವರದಿಯನ್ನು ಬಿಡುಗಡೆ ಮಾಡಿ ಜಾರಿಗೊಳಿಸಬೇಕೆಂಬ ಒತ್ತಾಯ ಇದೀಗ ಮತ್ತೊಮ್ಮೆ ಸಾರ್ವಜನಿಕ ವೇದಿಕೆಯಲ್ಲಿ ಮೊಳಗಿದೆ. 

ರಾಜಧಾನಿ ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ರಜತ ಮಹೋತ್ಸವ, ಬೃಹತ್ ಜನಜಾಗೃತಿ ಸಮಾವೇಶ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಈ ಬೇಡಿಕೆ ಕೇಳಿಬಂದಿರುವುದು ರಾಜಕೀಯವಾಗಿ ಗಮನಾರ್ಹ ಸಂಗತಿ.  ವಿಶೇಷವಾಗಿ, ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಈ ಒತ್ತಾಯ ಕೇಳಿಬಂದಿರುವುದು, ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ರಾಜಕೀಯದ ಮುಂದಿರುವ ಒಂದು ನೇರ ಪ್ರಶ್ನೆಯಾಗಿದೆ. ನೋಡಿ, ವರದಿ ಏಕೆ ಇಷ್ಟು ಮಹತ್ವದ್ದು? ಜಾತಿ ಗಣತಿ ಎಂದರೆ ಕೇವಲ ವಿವಿಧ ಜಾತಿಗಳ ಸಂಖ್ಯೆಯನ್ನು ಎಣಿಸುವ ಆಡಳಿತಾತ್ಮಕ ಪ್ರಕ್ರಿಯೆಯಲ್ಲ. ಯಾರು ಶಿಕ್ಷಣದಲ್ಲಿ ಹಿಂದೆ ಉಳಿದಿದ್ದಾರೆ? ಯಾವ ಸಮುದಾಯಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ಕಡಿಮೆ?ಯಾವ ವರ್ಗಗಳು ಆರ್ಥಿಕವಾಗಿ ದುರ್ಬಲ? ಯಾರ ಬಳಿ ಭೂಮಿ, ಸಂಪತ್ತು ಮತ್ತು ಸಾಮಾಜಿಕ ಬಂಡವಾಳ ಹೆಚ್ಚು?ಮೀಸಲಾತಿಯ ಪ್ರಯೋಜನ ಯಾರಿಗೆ ಎಷ್ಟು ತಲುಪಿದೆ? ಇಂತಹ ಪ್ರಶ್ನೆಗಳಿಗೆ ನೀತಿ ರೂಪಿಸುವಾಗ ಸರ್ಕಾರಕ್ಕೆ ನಿಖರವಾದ ಸಾಮಾಜಿಕ ಅಂಕಿ-ಅಂಶಗಳ ಅಗತ್ಯವಿದೆ. ಆದರೆ ದಶಕಗಳ ಕಾಲ ‘ಸಾಮಾಜಿಕ ನ್ಯಾಯ’ದ ಬಗ್ಗೆ ರಾಜಕೀಯ ಭಾಷಣಗಳು ನಡೆದಿದ್ದರೂ, ಆ ನ್ಯಾಯದ ಆಧಾರವಾಗಬೇಕಾದ ನಿಖರವಾದ ಸಾಮಾಜಿಕ ದತ್ತಾಂಶದ ವಿಚಾರದಲ್ಲಿ ರಾಜ್ಯಗಳು ಮತ್ತು ರಾಜಕೀಯ ಪಕ್ಷಗಳು ಹಲವು ಬಾರಿ ರಾಜಕೀಯ ಲೆಕ್ಕಾಚಾರಕ್ಕೆ ಸಿಲುಕಿವೆ ಎಂಬುದು ಈ ಚರ್ಚೆಯ ಪ್ರಮುಖ ಅಂಶ. ಸಿದ್ದರಾಮಯ್ಯ ಅವರ ಮುಂದೆಯೇ ಕೇಳಿದ ಪ್ರಶ್ನೆ ಯಾಕೆ ಮಹತ್ವದ್ದು ಎನ್ನುವುದು ಕೂಡ ಇಲ್ಲಿ ಚರ್ಚೆಗೆ ಕಾರಣವಾಗುತ್ತದೆ.

ಸಿದ್ದರಾಮಯ್ಯ ಅವರು ಕರ್ನಾಟಕದ ರಾಜಕೀಯದಲ್ಲಿ ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಹಕ್ಕು ಮತ್ತು ಅಸಮಾನತೆಯ ಪ್ರಶ್ನೆಗಳನ್ನು ತಮ್ಮ ರಾಜಕೀಯದ ಪ್ರಮುಖ ಅಂಶಗಳನ್ನಾಗಿ ಮಾಡಿಕೊಂಡಿರುವ ನಾಯಕ. ಅಂತಹ ನಾಯಕನ ಅಭಿನಂದನಾ ಕಾರ್ಯಕ್ರಮದಲ್ಲೇ ಅವರ ಮುಂದೆಯೇ ಹಿಂದುಳಿದ ಜಾತಿಗಳ ಒಕ್ಕೂಟ ವರದಿ ಬಿಡುಗಡೆ ಮತ್ತು ಜಾರಿಗೆ ಆಗ್ರಹಿಸಿರುವುದು ಒಂದು ರೀತಿಯಲ್ಲಿ ಸರ್ಕಾರಕ್ಕೆ ಸಾರ್ವಜನಿಕ ವೇದಿಕೆಯಿಂದ ನೀಡಿದ ರಾಜಕೀಯ ಸಂದೇಶ. ನೋಡಿ, ಇದು ಕೇವಲ ಅಭಿನಂದನೆಯ ಕಾರ್ಯಕ್ರಮವಲ್ಲ. ಇದು ಒಂದು ಬೇಡಿಕೆಯ ವೇದಿಕೆ. ಅದರ ಸಂದೇಶ ಸ್ಪಷ್ಟ, “ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದಷ್ಟೇ ಸಾಕಾಗುವುದಿಲ್ಲ; ಸಾಮಾಜಿಕ ವಾಸ್ತವವನ್ನು ತೋರಿಸುವ ಅಂಕಿ-ಅಂಶಗಳನ್ನು ಬಹಿರಂಗಪಡಿಸಿ, ಅದರ ಆಧಾರದ ಮೇಲೆ ನೀತಿಗಳನ್ನು ರೂಪಿಸಿ.”  ‘ವರದಿ ಇದೆ’ ಎನ್ನುವುದಕ್ಕಿಂತ ‘ವರದಿ ಏನು ಹೇಳುತ್ತದೆ?’ ಎಂಬುದು ಮುಖ್ಯ ಜಾತಿ ಗಣತಿಯ ವಿಚಾರದಲ್ಲಿ ಮತ್ತೊಂದು ಮೂಲಭೂತ ಪ್ರಶ್ನೆ ಇದೆ. ಸಮೀಕ್ಷೆ ನಡೆದಿದೆ ಎಂಬುದು ಒಂದು ವಿಷಯ. ವರದಿ ಸಿದ್ಧವಾಗಿದೆ ಎಂಬುದು ಮತ್ತೊಂದು ವಿಷಯ. ವರದಿ ಸಾರ್ವಜನಿಕವಾಗುವುದು ಮೂರನೇ ವಿಷಯ. ಆ ವರದಿಯ ಆಧಾರದ ಮೇಲೆ ನೀತಿ ರೂಪಿಸುವುದು ನಾಲ್ಕನೇ ವಿಷಯ. ಇವುಗಳಲ್ಲಿ ಕೊನೆಯ ಎರಡು ಹಂತಗಳೇ ನಿಜವಾದ ರಾಜಕೀಯ ಪರೀಕ್ಷೆ. ಒಂದು ವರದಿ ವರ್ಷಗಳ ಕಾಲ ಕಡತದಲ್ಲೇ ಉಳಿದರೆ, ಅದರ ಸಾಮಾಜಿಕ ಉಪಯೋಗವೇನು? ಸರ್ಕಾರಕ್ಕೆ ವರದಿಯ ಅಂಕಿ-ಅಂಶಗಳು ಅನಾನುಕೂಲವಾಗಿದ್ದರೆ ಅವುಗಳನ್ನು ಮುಚ್ಚಿಡುವುದು ಸಾಮಾಜಿಕ ನ್ಯಾಯವೇ? ಅಥವಾ ಅಂಕಿ-ಅಂಶಗಳು ಯಾರ ಪರವಾಗಿದ್ದರೂ, ಯಾರ ವಿರುದ್ಧವಾಗಿದ್ದರೂ, ಅವುಗಳನ್ನು ಸಾರ್ವಜನಿಕ ಚರ್ಚೆಗೆ ತಂದು, ತಜ್ಞರ ಪರಿಶೀಲನೆಗೆ ಒಳಪಡಿಸಿ, ಅಗತ್ಯವಿದ್ದರೆ ನೀತಿಗಳನ್ನು ಪರಿಷ್ಕರಿಸುವುದೇ ಪ್ರಜಾಪ್ರಭುತ್ವದ ಸರಿಯಾದ ಮಾರ್ಗವೇ? ಇಲ್ಲಿಯೇ ಜಾತಿ ಗಣತಿಯ ನಿಜವಾದ ಪರೀಕ್ಷೆ ಇದೆ. ಇನ್ನು, ಜಾತಿ ವ್ಯವಸ್ಥೆ ಕೇವಲ ಸಾಮಾಜಿಕ ಗುರುತು ಅಲ್ಲ; ಅದು ಐತಿಹಾಸಿಕವಾಗಿ ಶಿಕ್ಷಣ, ಉದ್ಯೋಗ, ಭೂಮಿ, ಸಂಪತ್ತು ಮತ್ತು ಅಧಿಕಾರದ ಹಂಚಿಕೆಯ ಮೇಲೂ ಪರಿಣಾಮ ಬೀರಿರುವ ವ್ಯವಸ್ಥೆ. ಹೀಗಾಗಿ ಹಿಂದುಳಿದ ವರ್ಗಗಳ ಸ್ಥಿತಿಗತಿ ಕುರಿತು ಚರ್ಚಿಸುವಾಗ ಕೇವಲ ಭಾವನಾತ್ಮಕ ಹೇಳಿಕೆಗಳಿಗಿಂತ ದತ್ತಾಂಶ ಆಧಾರಿತ ಸಾಮಾಜಿಕ ವಿಶ್ಲೇಷಣೆ ಅಗತ್ಯ. ಯಾವ ಸಮುದಾಯದ ಜನಸಂಖ್ಯೆ ಎಷ್ಟು ಎಂಬುದಷ್ಟೇ ಅಲ್ಲ, ಅವರ ಶಿಕ್ಷಣದ ಪ್ರಮಾಣವೇನು? ಉದ್ಯೋಗದ ಸ್ವರೂಪವೇನು? ಸರ್ಕಾರಿ ಸೇವೆಗಳಲ್ಲಿ ಅವರ ಪಾಲು ಎಷ್ಟು? ಆರ್ಥಿಕ ಸ್ಥಿತಿ ಹೇಗಿದೆ? ಎಂಬುದನ್ನು ಒಟ್ಟಾಗಿ ನೋಡಬೇಕು. ಇದರಿಂದ ಜಾತಿ ಗಣತಿ ಒಂದು ‘ಜಾತಿ ರಾಜಕಾರಣದ ಸಾಧನ’ದಿಂದ ‘ಸಾಮಾಜಿಕ ಅಸಮಾನತೆಯನ್ನು ಅಳೆಯುವ ಸಾಧನ’ವಾಗಿ ರೂಪಾಂತರಗೊಳ್ಳಬಹುದು. ಆದರೆ ಒಂದು ಅಪಾಯವೂ ಇದೆ.

ಜಾತಿ ಗಣತಿಯ ಪರವಾಗಿರುವವರು ಕೇಳಬೇಕಾದ ಪ್ರಶ್ನೆಯಷ್ಟೇ, ಅದರ ವಿರುದ್ಧದ ಆತಂಕಗಳನ್ನೂ ಗಂಭೀರವಾಗಿ ಪರಿಗಣಿಸಬೇಕು. ಜಾತಿ ಆಧಾರಿತ ಅಂಕಿ-ಅಂಶಗಳು ಸಮಾಜವನ್ನು ಇನ್ನಷ್ಟು ವಿಭಜಿಸುತ್ತವೆಯೇ? ಮೀಸಲಾತಿ ಮತ್ತು ಸಂಪನ್ಮೂಲ ಹಂಚಿಕೆಯ ವಿಚಾರದಲ್ಲಿ ಹೊಸ ಸಂಘರ್ಷಗಳಿಗೆ ಕಾರಣವಾಗುತ್ತವೆಯೇ? ದತ್ತಾಂಶದ ಗುಣಮಟ್ಟ, ವಿಧಾನ ಮತ್ತು ವರ್ಗೀಕರಣದ ಬಗ್ಗೆ ಪ್ರಶ್ನೆಗಳಿವೆಯೇ? ಇವೆಲ್ಲಕ್ಕೂ ಪಾರದರ್ಶಕ ಉತ್ತರ ಬೇಕು. ಆದರೆ ಈ ಆತಂಕಗಳಿಗೆ ಪರಿಹಾರ ಅಂಕಿ-ಅಂಶಗಳನ್ನು ಮರೆಮಾಚುವುದು ಅಲ್ಲ; ಅಂಕಿ-ಅಂಶಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವುದು ಮುಖ್ಯ. ಇನ್ನು, ಇದು ರಾಜಕೀಯ ಪಕ್ಷಗಳಿಗೆ ಇದು ಅಗ್ನಿಪರೀಕ್ಷೆಯಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಜಾತಿ ಗಣತಿಯ ವರದಿ ಬಿಡುಗಡೆ ಪ್ರಶ್ನೆ ಈಗ ಕೇವಲ ಹಿಂದುಳಿದ ಜಾತಿಗಳ ಒಕ್ಕೂಟದ ಬೇಡಿಕೆಯಾಗಿರದೆ, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ನಿಲುವಿನ ಪರೀಕ್ಷೆಯಾಗಿದೆ. ‘ಸಾಮಾಜಿಕ ನ್ಯಾಯ’ ಎಂಬ ಪದ ಚುನಾವಣಾ ಭಾಷಣದಲ್ಲಿ ಎಷ್ಟು ಬಾರಿ ಕೇಳಿಬರುತ್ತದೆ ಎಂಬುದಕ್ಕಿಂತ, ಸಾಮಾಜಿಕ ಅಸಮಾನತೆಯ ನೈಜ ಚಿತ್ರವನ್ನು ತೋರಿಸುವ ದತ್ತಾಂಶವನ್ನು ಸರ್ಕಾರ ಎಷ್ಟು ಮುಕ್ತವಾಗಿ ಸ್ವೀಕರಿಸುತ್ತದೆ ಎಂಬುದೇ ಮುಖ್ಯ. ವಿಶೇಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ರಾಜಕೀಯ ಮತ್ತು ಸೈದ್ಧಾಂತಿಕ ಎರಡೂ ರೀತಿಯ ಸವಾಲುಗಳಿವೆ. ಸಿದ್ದರಾಮಯ್ಯ ಅವರ ರಾಜಕೀಯ ಪರಂಪರೆಯ ಪ್ರಮುಖ ಅಂಶಗಳಲ್ಲಿ ಒಂದಾದ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುಂದುವರಿಸಬೇಕಾದರೆ, ವರದಿ ಬಿಡುಗಡೆ, ಅದರ ಕುರಿತು ಸಾರ್ವಜನಿಕ ಚರ್ಚೆ ಮತ್ತು ಅಗತ್ಯ ನೀತಿ ಪರಿಷ್ಕರಣೆಗಳ ಬಗ್ಗೆ ಸ್ಪಷ್ಟ ನಿಲುವು ಅಗತ್ಯ. ಹಿಂದುಳಿದವರ ಸಂಖ್ಯೆ ತಿಳಿಯುವುದಕ್ಕಿಂತ ಅವರ ಹಿಂದುಳಿತನದ ಕಾರಣ ತಿಳಿಯಬೇಕು ಜಾತಿ ಗಣತಿಯ ಚರ್ಚೆ ಕೇವಲ ‘ಯಾರು ಎಷ್ಟು?’ ಎಂಬ ಸಂಖ್ಯಾಶಾಸ್ತ್ರಕ್ಕೆ ಸೀಮಿತವಾದರೆ ಅದರ ಉದ್ದೇಶವೇ ಅಪೂರ್ಣ. ಮುಖ್ಯ ಪ್ರಶ್ನೆ:  “ಯಾರು ಯಾಕೆ ಹಿಂದುಳಿದಿದ್ದಾರೆ?” ಒಂದು ಸಮುದಾಯದ ಜನಸಂಖ್ಯೆ ದೊಡ್ಡದಿದ್ದರೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅದರ ಪಾಲು ಕಡಿಮೆಯಾಗಿರಬಹುದು. ಮತ್ತೊಂದು ಸಮುದಾಯದ ಜನಸಂಖ್ಯೆ ಕಡಿಮೆಯಿದ್ದರೂ ಆರ್ಥಿಕ ಮತ್ತು ಆಡಳಿತಾತ್ಮಕ ಸಂಪನ್ಮೂಲಗಳಲ್ಲಿ ಅದರ ಪ್ರಾತಿನಿಧ್ಯ ಹೆಚ್ಚಿರಬಹುದು. ಹೀಗಾಗಿ ಜನಸಂಖ್ಯೆ, ಶಿಕ್ಷಣ, ಉದ್ಯೋಗ, ಆಸ್ತಿ, ಆದಾಯ ಮತ್ತು ಸಾಮಾಜಿಕ ಪ್ರಾತಿನಿಧ್ಯ—ಇವೆಲ್ಲವನ್ನೂ ಒಟ್ಟಾಗಿ ವಿಶ್ಲೇಷಿಸುವ ಅಗತ್ಯವಿದೆ. ಅಂತಿಮವಾಗಿ ಉಳಿಯುವ ಪ್ರಶ್ನೆ ಏನೆಂದ್ರೆ, ಜಾತಿ ಗಣತಿಯ ವರದಿ ಬಿಡುಗಡೆ ಮಾಡಬೇಕೇ ಬೇಡವೇ ಎಂಬ ಪ್ರಶ್ನೆಯನ್ನು ರಾಜಕೀಯ ಲಾಭ–ನಷ್ಟದ ಕನ್ನಡಕದಿಂದ ಮಾತ್ರ ನೋಡುವುದು ಅಪಾಯಕಾರಿ. ಯಾಕೆಂದರೆ ಅಂಕಿ-ಅಂಶಗಳು ಸರ್ಕಾರಕ್ಕೆ ಅನುಕೂಲವಾಗಲಿ, ಅನಾನುಕೂಲವಾಗಲಿ—ಸತ್ಯವನ್ನು ತಿಳಿದುಕೊಳ್ಳುವ ಹಕ್ಕು ಸಮಾಜಕ್ಕಿದೆ. ಹಿಂದುಳಿದ ವರ್ಗಗಳ ನಿಜವಾದ ಸ್ಥಿತಿಯನ್ನು ತಿಳಿಯಲು ವರದಿ ಬೇಕು. ಮೀಸಲಾತಿ ಮತ್ತು ಕಲ್ಯಾಣ ಯೋಜನೆಗಳನ್ನು ವೈಜ್ಞಾನಿಕವಾಗಿ ರೂಪಿಸಲು ವರದಿ ಬೇಕು. ಸಾಮಾಜಿಕ ಅಸಮಾನತೆಯನ್ನು ಅಳೆಯಲು ವರದಿ ಬೇಕು. 

ಸಾಮಾಜಿಕ ನ್ಯಾಯದ ಬಗ್ಗೆ ರಾಜಕೀಯ ಘೋಷಣೆಗಳು ಮುಂದುವರಿಯಬೇಕೇ, ಅಥವಾ ಸಾಮಾಜಿಕ ನ್ಯಾಯಕ್ಕೆ ಬೇಕಾದ ದತ್ತಾಂಶವನ್ನು ಮೊದಲು ಸಮಾಜದ ಮುಂದೆ ಇಡಬೇಕೇ?  ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತೆ ಈ ಪ್ರಶ್ನೆಯನ್ನು ಎತ್ತಿದೆ. ಈಗ ಉತ್ತರ ನೀಡಬೇಕಿರುವುದು ಕೇವಲ ಒಂದು ಪಕ್ಷವಲ್ಲ. ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ಅಂತಿಮವಾಗಿ ಇಡೀ ಕರ್ನಾಟಕ.  ಯಾಕೆಂದರೆ, ಸಾಮಾಜಿಕ ನ್ಯಾಯವು ಕೇವಲ ಘೋಷಣೆಯಾಗಿರಬಾರದು; ಅದು ಅಂಕಿ-ಅಂಶಗಳಲ್ಲಿ ಕಾಣಬೇಕು, ನೀತಿಗಳಲ್ಲಿ ಪ್ರತಿಫಲಿಸಬೇಕು ಮತ್ತು ಅವಕಾಶಗಳ ಹಂಚಿಕೆಯಲ್ಲಿ ಅನುಭವಕ್ಕೆ ಬರಬೇಕಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.


- ಶ್ರೀರಾಜ್‌ ವಕ್ವಾಡಿ 

ಮೋಡ ಬಿತ್ತನೆ : ಮಳೆಗಾಗಿ ಆಕಾಶದತ್ತ ಕಣ್ಣು, ನೆಲದ ನೀರಿಗಾಗಿ ಸರ್ಕಾರದತ್ತ ಪ್ರಶ್ನೆ

ರಾಜ್ಯದಲ್ಲಿ ಮೋಡ ಬಿತ್ತನೆಗೆ ಚಾಲನೆ ಸಿಕ್ಕಿದೆ. ಆದರೆ ಮಳೆ ಬರಿಸುವ ಪ್ರಯತ್ನದ ಜೊತೆಗೆ, ಮಳೆ ಕೊರತೆಗೆ ಕಾರಣವಾಗಿರುವ ಗಂಭೀರ ಸಮಸ್ಯೆಗಳಿಗೆ ಸರ್ಕಾರ ಯಾವ ಉತ್ತರ ನೀಡಲಿದೆ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ‘ಮೋಡ ಬಿತ್ತನೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಶೇಷ ಲಘು ವಿಮಾನಕ್ಕೆ ರಾಷ್ಟ್ರಧ್ವಜ ಹಾಗೂ ನಾಡಧ್ವಜ ತೋರಿಸುವ ಮೂಲಕ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಕಾರ್ಯಾಚರಣೆಗೆ ಅಧಿಕೃತ ಚಾಲನೆ ನೀಡಿದ್ದಾರೆ. 

ರೈತರ ಹೊಲಗಳಿಗೆ ನೀರು ಬೇಕು, ಜಲಾಶಯಗಳಿಗೆ ನೀರು ಬೇಕು, ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಮೋಡ ಬಿತ್ತನೆ ನಿಜಕ್ಕೂ ಬರಕ್ಕೆ ಪರಿಹಾರವೇ? ಅಥವಾ ಬರದ ತೀವ್ರತೆಯ ನಡುವೆ ಸರ್ಕಾರ ಕೈಗೊಂಡಿರುವ ತಾತ್ಕಾಲಿಕ ಪ್ರಯತ್ನವೇ? ಎಂಬ ಪ್ರಶ್ನೆಯನ್ನು ಕೇಳುವುದು ಅಗತ್ಯ. ಸಚಿವರು ಹಿಂದೆ ನಡೆದ ಮೋಡ ಬಿತ್ತನೆ ಕಾರ್ಯಾಚರಣೆ ಶೇ.35ರಷ್ಟು ಯಶಸ್ವಿಯಾಗಿತ್ತು ಎಂದು ಹೇಳಿದ್ದಾರೆ. ಈ ಅಂಕಿ ಅಂಶವೇ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಶೇ.35ರಷ್ಟು ಯಶಸ್ಸು ಎಂದರೆ ವಾಸ್ತವವಾಗಿ ಎಷ್ಟು ಹೆಚ್ಚುವರಿ ಮಳೆ ಬಂತು? ಅದರಿಂದ ಎಷ್ಟು ಹೆಕ್ಟೇರ್ ಕೃಷಿಭೂಮಿಗೆ ಪ್ರಯೋಜನವಾಯಿತು? ಎಷ್ಟು ಪ್ರಮಾಣದ ನೀರು ಜಲಾಶಯಗಳಿಗೆ ಸೇರ್ಪಡೆಯಾಯಿತು? ಯೋಜನೆಗೆ ಖರ್ಚಾದ ಪ್ರತಿ ರೂಪಾಯಿಗೆ ಎಷ್ಟು ಪ್ರಮಾಣದ ಹೆಚ್ಚುವರಿ ನೀರಿನ ಲಾಭ ದೊರೆಯಿತು? ಈ ಪ್ರಶ್ನೆಗಳಿಗೆ ಪಾರದರ್ಶಕ ಉತ್ತರ ದೊರೆಯಬೇಕಿದೆ. ಗಮನಿಸಿ, ಮೋಡ ಬಿತ್ತನೆ ಎಂದರೆ ಮೋಡ ಸೃಷ್ಟಿಸುವ ತಂತ್ರಜ್ಞಾನವಲ್ಲ. ಮೋಡ ಬಿತ್ತನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಂದು ತಪ್ಪು ಕಲ್ಪನೆ ಇರುವುದು ಸಹಜ. ಆಕಾಶದಲ್ಲಿ ಮೋಡವೇ ಇಲ್ಲದ ಸಂದರ್ಭದಲ್ಲಿ ವಿಮಾನ ಹಾರಿಸಿ ಮಳೆ ಸುರಿಸುವ ತಂತ್ರಜ್ಞಾನ ಇದಲ್ಲ. ಈಗಾಗಲೇ ಸೂಕ್ತ ತೇವಾಂಶ ಮತ್ತು ಮಳೆಯ ಸಾಧ್ಯತೆಯಿರುವ ಮೋಡಗಳಲ್ಲಿ ಕೆಲವು ರಾಸಾಯನಿಕ ಕಣಗಳನ್ನು ಹರಡುವ ಮೂಲಕ ಮಳೆಯಾಗುವ ಸಾಧ್ಯತೆಯನ್ನು ಹೆಚ್ಚಿಸುವ ಪ್ರಯತ್ನವೇ ಮೋಡ ಬಿತ್ತನೆ. ಅಂದರೆ, ಮೋಡ ಇದ್ದಾಗ ಮಾತ್ರ ಮೋಡ ಬಿತ್ತನೆಗೆ ಅರ್ಥವಿದೆ. ಅಥವಾ ಅಂತಹ ಪೂರಕ ವಾತಾವರಣವಿದ್ದಾಗ ಮಾತ್ರ ಮೋಡ ಬಿತ್ತನೆಗೆ ಅವಕಾಶವಿರುತ್ತದೆ.  ಈ ಕಾರಣಕ್ಕಾಗಿಯೇ ಸರ್ಕಾರ ಪ್ರತೀ ಎರಡು ಗಂಟೆಗೊಮ್ಮೆ ಲಭ್ಯವಾಗುವ ಹವಾಮಾನ ದತ್ತಾಂಶವನ್ನು ಆಧರಿಸಿ ಕಾರ್ಯಾಚರಣೆಯ ಸ್ಥಳವನ್ನು ನಿರ್ಧರಿಸುವುದಾಗಿ ಹೇಳಿದೆ. ಇದು ವೈಜ್ಞಾನಿಕ ವಿಧಾನವನ್ನು ಅನುಸರಿಸುವ ಪ್ರಯತ್ನ ಎಂಬುದು ಸ್ವಾಗತಾರ್ಹ. ಆದರೆ ಇಲ್ಲಿಯೇ ಮತ್ತೊಂದು ಪ್ರಶ್ನೆ ಎದುರಾಗುತ್ತದೆ: ಹವಾಮಾನ ದತ್ತಾಂಶದ ಆಧಾರದ ಮೇಲೆ ಕಾರ್ಯಾಚರಣೆ ನಡೆಸುವುದರಿಂದ ಮಾತ್ರ ಫಲಿತಾಂಶ ಖಚಿತವಾಗುತ್ತದೆಯೇ? ಉತ್ತರ ಸರಳವಲ್ಲ. ಮೋಡದ ಸ್ವರೂಪ, ತೇವಾಂಶ, ಗಾಳಿಯ ವೇಗ ಮತ್ತು ದಿಕ್ಕು, ವಾತಾವರಣದ ಸ್ಥಿರತೆ ಸೇರಿದಂತೆ ಹಲವು ಅಂಶಗಳು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಮೋಡ ಬಿತ್ತನೆಯನ್ನು ಖಚಿತ ಮಳೆ ಉತ್ಪಾದಿಸುವ ಯೋಜನೆ ಎಂದು ಜನರ ಮುಂದೆ ಬಿಂಬಿಸುವುದು ವೈಜ್ಞಾನಿಕವಾಗಿ ಸರಿಯಾದ ಸಂದೇಶವಾಗುವುದಿಲ್ಲ.

ಇನ್ನು, ರೈತರ ನಿರೀಕ್ಷೆ ಮತ್ತು ಸರ್ಕಾರದ ಹೊಣೆಗಾರಿಕೆ ಏನು ? ಬರ ಪರಿಸ್ಥಿತಿಯಲ್ಲಿ ರೈತನಿಗೆ ಮಳೆ ಎಂದರೆ ಕೇವಲ ಹವಾಮಾನವಲ್ಲ; ಅದು ಬೆಳೆ, ಆದಾಯ, ಸಾಲ ತೀರಿಸುವ ಸಾಮರ್ಥ್ಯ ಮತ್ತು ಕುಟುಂಬದ ಬದುಕಿನ ಪ್ರಶ್ನೆ, ಮೋಡ ಬಿತ್ತನೆಗೆ ಸರ್ಕಾರ ಮುಂದಾಗಿರುವುದನ್ನು ರೈತರ ನಿರೀಕ್ಷೆಯ ಹಿನ್ನೆಲೆಯಲ್ಲಿ ನೋಡಬೇಕು. ಆದರೆ ರೈತನಿಗೆ ಮೋಡ ಬಿತ್ತನೆಯಷ್ಟೇ ಸಾಕಾಗುವುದಿಲ್ಲ. ಬೆಳೆ ನಷ್ಟಕ್ಕೆ ಪರಿಹಾರ ಎಷ್ಟು? ಕುಡಿಯುವ ನೀರಿನ ವ್ಯವಸ್ಥೆ ಹೇಗೆ? ಜಾನುವಾರುಗಳಿಗೆ ಮೇವು ಮತ್ತು ನೀರು ಸಿಗುತ್ತಿದೆಯೇ? ಕೃಷಿ ಸಾಲದ ಒತ್ತಡಕ್ಕೆ ಸರ್ಕಾರದ ಪರಿಹಾರವೇನು? ಬರಪೀಡಿತ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ? ಮಳೆ ಬರಿಸುವ ಪ್ರಯತ್ನದ ಜೊತೆಗೆ ಈ ಪ್ರಶ್ನೆಗಳಿಗೂ ಸಮಾನ ಆದ್ಯತೆ ದೊರೆಯಬೇಕು.ಯಾಕೆಂದರೆ ಮೋಡ ಬಿತ್ತನೆ ಯಶಸ್ವಿಯಾಗದಿದ್ದರೆ ರೈತನಿಗೆ ಮತ್ತೊಂದು ನಷ್ಟವಾಗಬಾರದು. ಜಲಾಶಯಗಳಿಗಾಗಿ ಮಾತ್ರವಲ್ಲ, ಜಲಾನಯನ ಪ್ರದೇಶಗಳಿಗಾಗಿ ಯೋಚಿಸಬೇಕಿದೆ. ಮೋಡ ಬಿತ್ತನೆ ಕಾರ್ಯಾಚರಣೆಯಲ್ಲಿ ಪ್ರಮುಖ ಜಲಾಶಯಗಳ ಜಲಾನಯನ ಪ್ರದೇಶಗಳಿಗೆ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಇದು ತಾಂತ್ರಿಕವಾಗಿ ಗಮನಾರ್ಹವಾದ ನಿರ್ಧಾರ. ಆದರೆ ಜಲಾಶಯಕ್ಕೆ ನೀರು ಬಂದರೆ ಮಾತ್ರ ನೀರಿನ ಸಮಸ್ಯೆ ಪರಿಹಾರವಾಗುವುದಿಲ್ಲ. ಜಲಾಶಯದ ಮೇಲ್ಭಾಗದಲ್ಲಿ ಅರಣ್ಯ ನಾಶವಾಗುತ್ತಿದ್ದರೆ, ಕೆರೆ-ಕಟ್ಟೆಗಳು ಹೂಳು ತುಂಬಿಕೊಂಡಿದ್ದರೆ, ಮಳೆನೀರು ಭೂಮಿಗೆ ಇಂಗುವ ವ್ಯವಸ್ಥೆ ದುರ್ಬಲವಾಗಿದ್ದರೆ ಮತ್ತು ನಗರ ಪ್ರದೇಶಗಳಲ್ಲಿ ಮಳೆನೀರು ಚರಂಡಿಗಳ ಮೂಲಕ ವೇಗವಾಗಿ ಹೊರಹೋಗುತ್ತಿದ್ದರೆ, ಬಿದ್ದ ಮಳೆಯ ದೊಡ್ಡ ಭಾಗವನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮೋಡ ಬಿತ್ತನೆಗಿಂತಲೂ ‘ಮಳೆನೀರು ಬಿತ್ತನೆ’—ಅಂದರೆ ಕೆರೆ, ಕಟ್ಟೆ, ಜಲಾನಯನ ಪ್ರದೇಶ, ಕಂದಕ, ಅಂತರ್ಜಲ ಮರುಪೂರಣ ಮತ್ತು ಸ್ಥಳೀಯ ನೀರಿನ ಸಂರಕ್ಷಣೆಗೆ ಆದ್ಯತೆ ನೀಡುವ ನೀತಿ—ದೀರ್ಘಕಾಲೀನ ಪರಿಹಾರವಾಗಬೇಕಿದೆ. ಇನ್ನು, ಬರದ ವಿರುದ್ಧ ಆಕಾಶದಲ್ಲಿ ಒಂದು ಹೋರಾಟ, ನೆಲದಲ್ಲಿ ಮತ್ತೊಂದು ಹೋರಾಟ. ಕರ್ನಾಟಕದ ಬರವನ್ನು ಕೇವಲ ಮಳೆ ಕೊರತೆಯಾಗಿ ನೋಡುವುದು ಸಮಸ್ಯೆಯ ಒಂದು ಭಾಗವನ್ನು ಮಾತ್ರ ನೋಡುವಂತಾಗಿದೆ. ಒಂದೆಡೆ ಹವಾಮಾನ ವೈಪರೀತ್ಯದಿಂದ ಮಳೆಯ ಮಾದರಿಯಲ್ಲಿ ಬದಲಾವಣೆ ಉಂಟಾಗುತ್ತಿದೆ. ಮತ್ತೊಂದೆಡೆ ಭೂಬಳಕೆಯ ಬದಲಾವಣೆ, ಜಲಮೂಲಗಳ ಒತ್ತುವರಿ, ಕೆರೆಗಳ ನಿರ್ಲಕ್ಷ್ಯ, ಅಂತರ್ಜಲದ ಅತಿಯಾದ ಬಳಕೆ ಮತ್ತು ನೀರಿನ ಅಸಮರ್ಪಕ ನಿರ್ವಹಣೆ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿವೆ. ಹೀಗಿರುವಾಗ ಸರ್ಕಾರದ ಬರ ನಿರ್ವಹಣಾ ನೀತಿ ‘ಮಳೆ ಬಂದರೆ ಸಮಸ್ಯೆ ಮುಗಿಯಿತು’ ಎಂಬ ಸರಳ ಲೆಕ್ಕಾಚಾರದಲ್ಲಿರಬಾರದು. ಮಳೆ ಬಂದರೂ ಅದನ್ನು ಸಂಗ್ರಹಿಸುವ ವ್ಯವಸ್ಥೆ ಇಲ್ಲದಿದ್ದರೆ, ಮುಂದಿನ ಬೇಸಿಗೆಯಲ್ಲಿ ಮತ್ತೆ ನೀರಿನ ಬಿಕ್ಕಟ್ಟು ಎದುರಾಗುತ್ತದೆ. ಆದ್ದರಿಂದ ಮೋಡ ಬಿತ್ತನೆ ಒಂದು ಪ್ರಯೋಗವಾಗಿರಬಹುದು; ಆದರೆ ಅದನ್ನು ರಾಜ್ಯದ ಸಮಗ್ರ ಜಲ ನೀತಿಗೆ ಪರ್ಯಾಯವನ್ನಾಗಿ ಮಾಡಲಾಗದು. ಇನ್ನು, ಶೇ.35ರ ಯಶಸ್ಸಿನ ಅರ್ಥವೇನು? ಸಚಿವರು ಹಿಂದಿನ ಮೋಡ ಬಿತ್ತನೆ ಕಾರ್ಯಾಚರಣೆಯು ಶೇ.35ರಷ್ಟು ಯಶಸ್ವಿಯಾಗಿತ್ತು ಎಂದು ಹೇಳಿದ್ದಾರೆ.

ಈ ಹೇಳಿಕೆಯನ್ನು ಸರ್ಕಾರವೇ ಹೆಚ್ಚಿನ ವಿವರಗಳೊಂದಿಗೆ ಜನರ ಮುಂದಿಡಬೇಕಾಗಿದೆ. ‘ಯಶಸ್ಸು’ ಎಂಬ ಮಾನದಂಡವನ್ನು ಹೇಗೆ ನಿರ್ಧರಿಸಲಾಯಿತು? ಮಳೆ ಬಿದ್ದರೆ ಅದನ್ನು ಮೋಡ ಬಿತ್ತನೆಯ ಫಲ ಎಂದು ಪರಿಗಣಿಸಲಾಯಿತೇ? ಅಥವಾ ಮೋಡ ಬಿತ್ತನೆ ನಡೆಸಿದ ಪ್ರದೇಶ ಮತ್ತು ನಡೆಸದ ಪ್ರದೇಶಗಳ ಮಳೆಯ ಪ್ರಮಾಣವನ್ನು ವೈಜ್ಞಾನಿಕವಾಗಿ ಹೋಲಿಸಲಾಯಿತೇ? ಕಾರ್ಯಾಚರಣೆಯಿಂದ ಹೆಚ್ಚುವರಿಯಾಗಿ ಉಂಟಾದ ಮಳೆಯ ಪ್ರಮಾಣ ಎಷ್ಟು? ಈ ಮಾಹಿತಿಯು ಸಾರ್ವಜನಿಕವಾಗಬೇಕು. ಸಾರ್ವಜನಿಕ ಹಣದಿಂದ ನಡೆಯುವ ಯೋಜನೆಯ ಯಶಸ್ಸನ್ನು ಕೇವಲ ರಾಜಕೀಯ ಹೇಳಿಕೆಯಿಂದಲ್ಲ, ಸ್ವತಂತ್ರ ವೈಜ್ಞಾನಿಕ ಮೌಲ್ಯಮಾಪನದಿಂದ ಅಳೆಯಬೇಕು.  ‘ನಷ್ಟವಾದರೂ ಪರವಾಗಿಲ್ಲ, ಜನರಿಗೆ ಒಳ್ಳೆಯದಾಗಬೇಕು’ ಎಂಬ ಮಾತಿನಾಚೆಗೆ,   ಸಚಿವರು ಯೋಜನೆಯಿಂದ ನಷ್ಟ ಅಥವಾ ಲಾಭ ಏನೇ ಆಗಲಿ, ಜನರಿಗೆ ಒಳ್ಳೆಯದಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಈ ಆಶಯವನ್ನು ಗೌರವಿಸಲೇಬೇಕು. ಆದರೆ ಸಾರ್ವಜನಿಕ ಆಡಳಿತದಲ್ಲಿ ಆಶಯದ ಜೊತೆಗೆ ಹೊಣೆಗಾರಿಕೆಯೂ ಅಗತ್ಯ. ಸರ್ಕಾರ ಒಂದು ಪ್ರಯೋಗಾತ್ಮಕ ಯೋಜನೆಗೆ ಹಣ ಖರ್ಚು ಮಾಡುತ್ತಿದ್ದರೆ ಅದರ ವೆಚ್ಚ, ಫಲಿತಾಂಶ, ವೈಜ್ಞಾನಿಕ ಮೌಲ್ಯಮಾಪನ ಮತ್ತು ಮುಂದಿನ ನಿರ್ಧಾರಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು. ಯೋಜನೆ ಯಶಸ್ವಿಯಾದರೆ ಅದರ ಯಶಸ್ಸಿನ ವೈಜ್ಞಾನಿಕ ಸಾಕ್ಷ್ಯ ಜನರ ಮುಂದಿರಬೇಕು. ವಿಫಲವಾದರೆ ಅದರ ಕಾರಣಗಳನ್ನೂ ಬಹಿರಂಗಪಡಿಸಬೇಕು. ಇದೇ ಪ್ರಜಾಸತ್ತಾತ್ಮಕ ಆಡಳಿತದ ಮೂಲಭೂತ ಹೊಣೆಗಾರಿಕೆ. ನೋಡಿ, ಇನ್ನು ಇಲ್ಲಿ ಮುಖ್ಯವಾಗುವುದು, ಮೋಡ ಬಿತ್ತನೆಗಿಂತ ದೊಡ್ಡ ಪ್ರಶ್ನೆ: ನೀರಿನ ರಾಜಕೀಯ. ಕರ್ನಾಟಕದಲ್ಲಿ ನೀರು ಕೇವಲ ಪ್ರಕೃತಿ ಸಂಪನ್ಮೂಲವಲ್ಲ; ಅದು ರಾಜಕೀಯ, ಆರ್ಥಿಕತೆ ಮತ್ತು ಬದುಕಿನ ಪ್ರಶ್ನೆಯಾಗಿದೆ. ನಗರಗಳಿಗೆ ನೀರು, ಕೈಗಾರಿಕೆಗಳಿಗೆ ನೀರು, ಕೃಷಿಗೆ ನೀರು, ಜಲಾಶಯಗಳಿಗೆ ನೀರು—ಎಲ್ಲ ಕ್ಷೇತ್ರಗಳ ನಡುವೆ ನೀರಿನ ಹಂಚಿಕೆಯ ಸಂಘರ್ಷ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಕಾರ್ಯಕ್ರಮವನ್ನು ಪ್ರತ್ಯೇಕ ಯೋಜನೆಯಾಗಿ ನೋಡುವ ಬದಲು ರಾಜ್ಯದ ಸಮಗ್ರ ಜಲ ನೀತಿಯ ಭಾಗವಾಗಿ ನೋಡಬೇಕಿದೆ. ಮಳೆಗಾಗಿ ಆಕಾಶದತ್ತ ನೋಡುವ ಸರ್ಕಾರ, ಮಳೆ ಬಂದಾಗ ನೀರನ್ನು ಉಳಿಸಲು ನೆಲದತ್ತವೂ ನೋಡಬೇಕು.  ಕೆರೆಗಳನ್ನು ಪುನರುಜ್ಜೀವನಗೊಳಿಸುವುದು, ಸಣ್ಣ ಜಲಾಶಯಗಳನ್ನು ಬಲಪಡಿಸುವುದು, ಜಲಾನಯನ ಪ್ರದೇಶಗಳನ್ನು ಸಂರಕ್ಷಿಸುವುದು, ಮಳೆನೀರು ಕೊಯ್ಲನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಅಂತರ್ಜಲ ಬಳಕೆಗೆ ವೈಜ್ಞಾನಿಕ ನಿಯಂತ್ರಣ ತರುವುದು—ಇವುಗಳೆಲ್ಲ ಮೋಡ ಬಿತ್ತನೆಯಷ್ಟೇ ಮುಖ್ಯ.

ಒಟ್ಟಿನಲ್ಲಿ, ಬರದ ಸಮಯದಲ್ಲಿ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳಬಾರದು. ಹೊಸ ತಂತ್ರಜ್ಞಾನಗಳನ್ನು ಪ್ರಯೋಗಿಸುವ ಧೈರ್ಯವೂ ಇರಬೇಕು. ಆ ಅರ್ಥದಲ್ಲಿ ಮೋಡ ಬಿತ್ತನೆ ಪ್ರಯತ್ನವನ್ನು ತಕ್ಷಣ ತಳ್ಳಿಹಾಕುವ ಅಗತ್ಯವಿಲ್ಲ. ಆದರೆ ಮೋಡ ಬಿತ್ತನೆಗೆ ಚಾಲನೆ ನೀಡುವುದೇ ಬರ ನಿರ್ವಹಣೆಯ ಯಶಸ್ಸಿನ ಮಾನದಂಡವಾಗಬಾರದು. ರೈತನ ಹೊಲದಲ್ಲಿ ಬೆಳೆ ಉಳಿಯುತ್ತದೆಯೇ ? ಗ್ರಾಮದಲ್ಲಿ ಕುಡಿಯುವ ನೀರು ಸಿಗುತ್ತದೆಯೇ?  ಜಲಾಶಯಗಳಲ್ಲಿ ನೀರು ಸಂಗ್ರಹವಾಗುತ್ತದೆಯೇ? ಅಂತರ್ಜಲ ಮಟ್ಟ ಸುಧಾರಿಸುತ್ತದೆಯೇ? ಬರದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಆರ್ಥಿಕ ಭದ್ರತೆ ದೊರೆಯುತ್ತದೆಯೇ? ಈ ಪ್ರಶ್ನೆಗಳಿಗೆ ಸಕಾರಾತ್ಮಕ ಉತ್ತರ ಸಿಕ್ಕಾಗ ಮಾತ್ರ ಬರ ನಿರ್ವಹಣೆ ಯಶಸ್ವಿಯಾಗಿದೆ ಎಂದು ಹೇಳಬಹುದು. ಆಕಾಶದಲ್ಲಿ ಮೋಡಗಳನ್ನು ಹುಡುಕುವುದು ತುರ್ತು ಪರಿಹಾರವಾಗಿರಬಹುದು. ಆದರೆ ನೆಲದಲ್ಲಿ ನೀರನ್ನು ಉಳಿಸುವುದು ಮಾತ್ರ ಶಾಶ್ವತ ಪರಿಹಾರದ ದಾರಿ. ಮೋಡ ಬಿತ್ತನೆಗಂತೂ ಈಗ ಚಾಲನೆ ಸಿಕ್ಕಿದೆ. ಅದರ ಜೊತೆಗೆ ಸರ್ಕಾರದ ಜಲ ಸಂರಕ್ಷಣೆಯ ಬದ್ಧತೆಯೂ ಕಾಣಿಸಿಕೊಳ್ಳಲಿ. ಆಗ ಮಾತ್ರ ಈ ಪ್ರಯತ್ನ ರೈತರ ಬದುಕಿಗೆ ನಿಜವಾದ ಅರ್ಥದಲ್ಲಿ ಮಳೆಯಾಗಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.


- ಶ್ರೀರಾಜ್‌ ವಕ್ವಾಡಿ 

Friday, September 4, 2026

ಪ್ರಜಾಸೇವೆ ಇಲಾಖೆ, ಜನರ ಬಳಿಗೆ ಸರ್ಕಾರವೋ, ಸರ್ಕಾರದ ಬಳಿಗೆ ಜನರೋ?

ಪ್ರಜಾಸೇವೆ ಇಲಾಖೆ, ಜನರ ಬಳಿಗೆ ಸರ್ಕಾರವೋ, ಸರ್ಕಾರದ ಬಳಿಗೆ ಜನರೋ? ಸೆಪ್ಟೆಂಬರ್‌ 5ರಿಂದ ರಾಜ್ಯದಲ್ಲಿ ‘ಪ್ರಜಾಸೇವೆ ಇಲಾಖೆ’ ಆರಂಭವಾಗಲಿದೆ ಎಂಬ ಘೋಷಣೆ, ಮೇಲ್ನೋಟಕ್ಕೆ ಜನರ ಸಮಸ್ಯೆಗಳನ್ನು ಸರ್ಕಾರದ ಬಾಗಿಲಿಗೆ ತಂದು ನಿಲ್ಲಿಸುವ ಬದಲು ಸರ್ಕಾರವೇ ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನದಂತೆ ಕಾಣುತ್ತದೆ. ಜಿಲ್ಲಾ ಸಚಿವರು ತಿಂಗಳಿಗೆ ಎರಡು ದಿನ ಜನರ ಸಮಸ್ಯೆಗಳನ್ನು ಆಲಿಸಬೇಕು, ಶಾಸಕರು ತಿಂಗಳಿಗೆ ನಾಲ್ಕು ದಿನ ಪಂಚಾಯಿತಿ ಮಟ್ಟದಲ್ಲಿ ಜನರೊಂದಿಗೆ ಸಂವಾದ ನಡೆಸಬೇಕು, ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು ಎಂಬ ಉದ್ದೇಶ ನಿಸ್ಸಂದೇಹವಾಗಿ ಸ್ವಾಗತಾರ್ಹ. ಆದರೆ, ಜನಸೇವೆ ಎಂಬ ಹೆಸರಿನ ಯೋಜನೆ ನಿಜಕ್ಕೂ ಜನರ ಅಧಿಕಾರವನ್ನು ಹೆಚ್ಚಿಸುತ್ತದೆಯೇ? ಅಥವಾ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ರಾಜಕೀಯಗೊಳಿಸುವ ಮತ್ತೊಂದು ವೇದಿಕೆಯಾಗುತ್ತದೆಯೇ?ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯ. 

 ನೋಡಿ, ಜನರ ಸಮಸ್ಯೆಗಳನ್ನು ಆಲಿಸುವುದಕ್ಕೆ ಸಭೆಗಳನ್ನು ನಡೆಸುವುದು ಮಾತ್ರ ಸಾಕಾಗುವುದಿಲ್ಲ. ಸಮಸ್ಯೆಗಳನ್ನು ದಾಖಲಿಸುವುದು, ಅವುಗಳಿಗೆ ಕಾಲಮಿತಿ ನಿಗದಿಪಡಿಸುವುದು, ಪರಿಹಾರವಾಗದಿದ್ದರೆ ಕಾರಣವನ್ನು ಸಾರ್ವಜನಿಕಗೊಳಿಸುವುದು ಮತ್ತು ಅಧಿಕಾರಿಗಳ ಹೊಣೆಗಾರಿಕೆಯನ್ನು ಖಚಿತಪಡಿಸುವ ವ್ಯವಸ್ಥೆಯೂ ಬೇಕು. ಇಲ್ಲದಿದ್ದರೆ ‘ಜನತಾ ದರ್ಬಾರ್’ಗಳು ಜನರ ಅಸಮಾಧಾನವನ್ನು ತಾತ್ಕಾಲಿಕವಾಗಿ ತಣಿಸುವ ರಾಜಕೀಯ ಕಾರ್ಯಕ್ರಮಗಳಾಗಿ ಮಾತ್ರ ಉಳಿಯುವ ಅಪಾಯವಿದೆ. ಶಾಸಕರು ಜನರ ಬಳಿಗೆ ಹೋಗುವುದು ಒಳ್ಳೆಯದು; ಆದರೆ ಅಧಿಕಾರ ಯಾರ ಕೈಯಲ್ಲಿರುಯತ್ತದೆ ? ಶಾಸಕರು ತಿಂಗಳಿಗೆ ನಾಲ್ಕು ದಿನ ಪಂಚಾಯಿತಿ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂಬ ಪ್ರಸ್ತಾಪ ವಿಕೇಂದ್ರೀಕರಣದ ದೃಷ್ಟಿಯಿಂದ ಮಹತ್ವದ್ದಾಗಿದೆ. ಆದರೆ ಶಾಸಕರು ಹೋಗದಿದ್ದರೆ ಅಧಿಕಾರಿಗಳು ಜನರ ಬಳಿಗೆ ಹೋಗಬೇಕು ಎಂಬ ಅಂಶ ಇನ್ನೂ ಮುಖ್ಯ. ಇಲ್ಲಿ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಜನರ ಸಮಸ್ಯೆ ಪರಿಹಾರವಾಗಬೇಕಾದದ್ದು ಶಾಸಕರ ಶಿಫಾರಸಿನಿಂದಲೋ, ಅಥವಾ ಕಾನೂನುಬದ್ಧ ಆಡಳಿತಾತ್ಮಕ ಪ್ರಕ್ರಿಯೆಯ ಮೂಲಕವೋ? ಜನರಿಗೆ ಸೇವೆ ಪಡೆಯಲು ರಾಜಕೀಯ ಪ್ರತಿನಿಧಿಯ ಶಿಫಾರಸು ಅಗತ್ಯವಾಗುವ ಪರಿಸ್ಥಿತಿ ನಿರ್ಮಾಣವಾದರೆ, ಅದು ಪ್ರಜಾಸತ್ತಾತ್ಮಕ ಆಡಳಿತದ ಬಲವರ್ಧನೆ ಅಲ್ಲ; ಬದಲಾಗಿ ಅಧಿಕಾರದ ಮಧ್ಯವರ್ತಿ ವ್ಯವಸ್ಥೆಯನ್ನು ಬಲಪಡಿಸುವ ದುರಂತವಾಗಬಹುದು. ಆದ್ದರಿಂದ ಪ್ರಜಾಸೇವೆ ಇಲಾಖೆಯ ಯಶಸ್ಸಿನ ಮಾನದಂಡ, ಎಷ್ಟು ಜನ ಶಾಸಕರನ್ನು ಭೇಟಿ ಮಾಡಿದರು ಎಂಬುದಲ್ಲ. ಎಷ್ಟು ಜನರು ಯಾವುದೇ ರಾಜಕೀಯ ಶಿಫಾರಸಿಲ್ಲದೆ ತಮ್ಮ ಹಕ್ಕಿನ ಸೇವೆಯನ್ನು ಪಡೆದುಕೊಂಡರು ಎಂಬುದಾಗಬೇಕು. ಇನ್ನು, ನಿವೇಶನದ ಬಗ್ಗೆ ಸಭೆಯಲ್ಲಿ ಸಿಎಂ ಡಿಕೆಶಿ ಪ್ರಸ್ತಾಪಿಸಿದ್ದಾರೆ. ಆ ನಿವೇಶನ ನಿಜವಾದ ಬಡವನಿಗೆ ಸಿಗುತ್ತದೆಯೇ? ನಿವೇಶನ ರಹಿತರಿಗೆ ನಿವೇಶನ ನೀಡಲು ವಿಶೇಷ ಕಾರ್ಯಕ್ರಮ ರೂಪಿಸಿರುವುದು ಸ್ವಾಗತಾರ್ಹ. ಆದರೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುವಾಗ ಸೂಕ್ತ ದಾಖಲೆಗಳನ್ನು ಕಡ್ಡಾಯಗೊಳಿಸುವುದು ಮತ್ತು ಈಗಾಗಲೇ ನಿವೇಶನ ಹೊಂದಿರುವವರು ಮತ್ತೆ ಅರ್ಜಿ ಸಲ್ಲಿಸದಂತೆ ತಡೆಯುವುದು ಅತ್ಯಗತ್ಯ. ಇಲ್ಲಿ ಸರ್ಕಾರ ಎಚ್ಚರಿಕೆ ವಹಿಸಬೇಕಾದ ಮತ್ತೊಂದು ಸಂಗತಿಯಿದೆ. ಗ್ರಾಮೀಣ ಪ್ರದೇಶದ ಭೂರಹಿತರು, ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಹಾಗೂ ದಾಖಲೆ ವ್ಯವಸ್ಥೆಯಿಂದ ಹೊರಗುಳಿದ ಕುಟುಂಬಗಳಿಗೆ ದಾಖಲೆಗಳ ಕೊರತೆಯೇ ದೊಡ್ಡ ಅಡೆತಡೆಯಾಗಿರಬಹುದು. ಹೀಗಾಗಿ ‘ದಾಖಲೆ ಇಲ್ಲ’ ಎಂಬ ಕಾರಣಕ್ಕೆ ಅರ್ಹ ಬಡವರನ್ನು ಹೊರಗಿಡದೆ, ದಾಖಲೆ ಪರಿಶೀಲನೆಗೆ ನೆರವಾಗುವ ವ್ಯವಸ್ಥೆಯನ್ನೂ ಸರ್ಕಾರ ನಿರ್ಮಿಸಬೇಕು.  ಇಲ್ಲದಿದ್ದರೆ ನಿವೇಶನ ಯೋಜನೆ ನಿಜವಾದ ನಿವೇಶನ ರಹಿತರಿಗಿಂತ ದಾಖಲೆಗಳನ್ನು ಸರಿಯಾಗಿ ಹೊಂದಿರುವವರಿಗೆ ಹೆಚ್ಚು ಅನುಕೂಲ ಮಾಡುವ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಬಹುದು.

ಗೃಹಜ್ಯೋತಿ, ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ ಎಂದರೆ ಏನು?  ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಮರುಪರಿಶೀಲಿಸಬೇಕು ಎಂಬ ಸಿಎಂ ಡಿಕೆಶಿ ಅವರ ಪ್ರಸ್ತಾಪವೂ ಗಮನಾರ್ಹ. ಆದರೆ ‘ಮರುಪರಿಶೀಲನೆ’ ಎಂಬ ಪದಕ್ಕೆ ಸ್ಪಷ್ಟವಾದ ಅರ್ಥ ಬೇಕಾಗಿದೆ. ಅದು ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಗಳ ಸೋರಿಕೆಯನ್ನು ತಡೆಯುವುದೇ? ಅಥವಾ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನವೇ? ಫಲಾನುಭವಿಗಳ ದೂರವಾಣಿ ಸಂಖ್ಯೆಯನ್ನೇ ಬಳಸುವುದು, ಮೂರನೇ ವ್ಯಕ್ತಿಯ ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಜೋಡಣೆಗೆ ಅವಕಾಶ ನೀಡದಿರುವುದು ಪಾರದರ್ಶಕತೆಯ ದೃಷ್ಟಿಯಿಂದ ಅಗತ್ಯವಾಗಬಹುದು. ಆದರೆ ಡಿಜಿಟಲ್ ವ್ಯವಸ್ಥೆಯಿಂದ ಹೊರಗುಳಿದಿರುವ ಬಡ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದಿದ್ದರೆ, ತಂತ್ರಜ್ಞಾನವೇ ಈ ಸಮಾಜ ಕಲ್ಯಾಣದ ಹೆಸರಿನಲ್ಲಿ ನೀಡುತ್ತಿರುವ ಕಾಂಗ್ರೆಸ್‌ ಗ್ಯಾರಂಟಿಗಳ ಬಾಗಿಲಿಗೆ ಬೀಗ ಹಾಕಬಹುದು. ಆದ್ದರಿಂದ ಡಿಜಿಟಲ್ ಪರಿಶೀಲನೆಯ ಜೊತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಹಾಯ ಕೇಂದ್ರಗಳು, ಆಫ್‌ಲೈನ್ ಪರಿಶೀಲನೆ ಮತ್ತು ದೂರು ಪರಿಹಾರ ವ್ಯವಸ್ಥೆಯೂ ಇರಬೇಕು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಬಗ್ಗೆಯೂ ಕೂಡ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ. ಇದು ಜನರ ಸಮಿತಿಯೋ, ಪಕ್ಷದ ಸಮಿತಿಯೋ? ಎನ್ನುವ ಪ್ರಶ್ನೆಯನ್ನು ಮುನ್ನೆಲೆಗೆ ತರಿಸಿದೆ.  ಪಂಚಾಯಿತಿ ಮಟ್ಟದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸುವ ಪ್ರಸ್ತಾಪವೇ ಅತ್ಯಂತ ಸೂಕ್ಷ್ಮವಾದ ಅಂಶ. ಶಾಸಕರು ಸಮಿತಿ ರಚಿಸಬೇಕು; ರಚಿಸದಿದ್ದರೆ ಸರ್ಕಾರವೇ ಸಮಿತಿ ರಚಿಸುತ್ತದೆ ಎಂಬ ನಿಲುವು ಆಡಳಿತಾತ್ಮಕ ದೃಷ್ಟಿಯಿಂದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಲು ಸಮಿತಿ ಬೇಕು. ಆದರೆ ಆ ಸಮಿತಿಯ ಸದಸ್ಯರು ರಾಜಕೀಯವಾಗಿ ಆಯ್ಕೆಯಾದವರಾಗಿದ್ದರೆ, ಅದು ಜನರ ಮೇಲ್ವಿಚಾರಣಾ ಸಮಿತಿಯಾಗುತ್ತದೆಯೇ ಅಥವಾ ಆಡಳಿತ ಪಕ್ಷದ ಸ್ಥಳೀಯ ವಿಸ್ತರಣೆಯಾಗುತ್ತದೆಯೇ? ಇದು ಕೇವಲ ಈ ಸರ್ಕಾರಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಇದೇ ಪ್ರಶ್ನೆ ಅನ್ವಯಿಸುತ್ತದೆ. ಪ್ರಜಾಸೇವೆ ಎಂದರೆ ಅಧಿಕಾರದಲ್ಲಿರುವ ಪಕ್ಷದ ಕಾರ್ಯಕರ್ತರಿಗೆ ಮತ್ತೊಂದು ಅಧಿಕೃತ ವೇದಿಕೆ ಸೃಷ್ಟಿಸುವುದಲ್ಲ. ಬದಲಾಗಿ ಗ್ರಾಮಸಭೆ, ಪಂಚಾಯಿತಿ, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳಿಗೆ ನಿಜವಾದ ಮೇಲ್ವಿಚಾರಣಾ ಅವಕಾಶ ನೀಡುವ ವ್ಯವಸ್ಥೆಯಾಗಬೇಕು. ಇನ್ನು, ʼಪ್ರಜಾಸೇವೆ’ ಎಂಬ ಹೆಸರಿಗಿಂತ ಅದರ ಸ್ವರೂಪ ಮುಖ್ಯ. 

ಒಂದು ಇಲಾಖೆಗೆ ‘ಪ್ರಜಾಸೇವೆ’ ಎಂದು ಹೆಸರಿಟ್ಟ ಮಾತ್ರಕ್ಕೆ ಅದು ಪ್ರಜಾಪರ ಇಲಾಖೆಯಾಗುವುದಿಲ್ಲ. ಅದರ ಕಾರ್ಯವಿಧಾನವೇ ಅದನ್ನು ನಿರ್ಧರಿಸುತ್ತದೆ. ಜನರು ಅಧಿಕಾರಿಗಳನ್ನು ಭೇಟಿ ಮಾಡಲು ಎಷ್ಟು ದಿನ ಕಾಯಬೇಕು? ದೂರು ದಾಖಲಾದ ನಂತರ ಎಷ್ಟು ದಿನದಲ್ಲಿ ಪರಿಹಾರವಾಗಬೇಕು? ಪರಿಹಾರವಾಗದಿದ್ದರೆ ಯಾರನ್ನು ಹೊಣೆಗಾರರನ್ನಾಗಿಸಬೇಕು ? ಯೋಜನೆಯ ಫಲಾನುಭವಿಗಳ ಆಯ್ಕೆ ಹೇಗೆ ನಡೆಯಬೇಕು? ರಾಜಕೀಯ ಶಿಫಾರಸಿಗೆ ಎಷ್ಟು ಅವಕಾಶವಿದೆ? ದೂರು ನೀಡಿದ ವ್ಯಕ್ತಿಗೆ ತನ್ನ ಅರ್ಜಿಯ ಸ್ಥಿತಿ ತಿಳಿಯುವ ವ್ಯವಸ್ಥೆ ಇದೆಯೇ?ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಮೇಲ್ಮನವಿ ವ್ಯವಸ್ಥೆ ಇದೆಯೇ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಾಗ ಮಾತ್ರ ಪ್ರಜಾಸೇವೆ ಇಲಾಖೆ ಅರ್ಥಪೂರ್ಣವಾಗುತ್ತದೆ.  “ಪ್ರಜಾಸೇವೆ ಇಲಾಖೆ ಪ್ರಜಾಸೇವೆಗಾಗಿಯೇ ಆಗಲಿ; ಪ್ರಭುತ್ವದ ಹಿತಾಸಕ್ತಿ ಕಾಯುವ ಇಲಾಖೆ ಆಗದಿರಲಿ.”  ಈ ಎಚ್ಚರಿಕೆ ಇಂದಿನ ಸರ್ಕಾರಕ್ಕೆ ಮಾತ್ರವಲ್ಲ, ನಾಳೆ ಅಂದರೇ, ಮುಂದೆ ಅಧಿಕಾರಕ್ಕೆ ಬರುವ ಪ್ರತಿಯೊಂದು ಸರ್ಕಾರಕ್ಕೂ ಅನ್ವಯಿಸುತ್ತದೆ. ಜನರ ಸಮಸ್ಯೆಗಳನ್ನು ಕೇಳುವ ವೇದಿಕೆಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ. ಆದರೆ ಅದೇ ವೇದಿಕೆಗಳು ರಾಜಕೀಯ ನಿಷ್ಠೆ, ಶಿಫಾರಸು ಮತ್ತು ಅಧಿಕಾರದ ಮಧ್ಯವರ್ತಿತನಕ್ಕೆ ದಾರಿ ಮಾಡಿಕೊಟ್ಟರೆ ಅವು ಜನಸೇವೆಯ ಬದಲು ಪ್ರಭುತ್ವದ ವಿಸ್ತರಣಾ ಸಾಧನಗಳಾಗಿ ಬದಲಾಗುತ್ತವೆ. ಹೀಗಾಗಿ ಪ್ರಜಾಸೇವೆ ಇಲಾಖೆಯ ನಿಜವಾದ ಪರೀಕ್ಷೆ ಸೆಪ್ಟೆಂಬರ್‌ 5ರಂದು ಉದ್ಘಾಟನೆಯಾಗುವ ದಿನ ನಡೆಯುವುದಿಲ್ಲ.

ಒಬ್ಬ ಬಡ ಕುಟುಂಬದ ಅರ್ಜಿ ಯಾವುದೇ ರಾಜಕೀಯ ಶಿಫಾರಸಿಲ್ಲದೆ ಪರಿಹಾರವಾದ ದಿನ, ನಿವೇಶನ ರಹಿತನಿಗೆ ನಿಜವಾಗಿ ನಿವೇಶನ ಸಿಕ್ಕ ದಿನ, ಗೃಹಲಕ್ಷ್ಮಿಯ ಹಣ ಮಧ್ಯವರ್ತಿಯಿಲ್ಲದೆ ಫಲಾನುಭವಿಯ ಖಾತೆಗೆ ಸೇರಿದ ದಿನ, ಮತ್ತು ಒಬ್ಬ ಸಾಮಾನ್ಯ ನಾಗರಿಕನು ಅಧಿಕಾರದ ಮುಂದೆ ತಲೆಬಾಗದೆ ತನ್ನ ಹಕ್ಕನ್ನು ಪಡೆದುಕೊಂಡ ದಿನ—ಅಂದು ಪ್ರಜಾಸೇವೆ ಇಲಾಖೆ ನಿಜವಾಗಿ ಜನರ ಇಲಾಖೆಯಾಗಿದೆ ಎಂದು ಹೇಳಬಹುದು. ಅಲ್ಲಿಯವರೆಗೆ, ಈ ಹೊಸ ವ್ಯವಸ್ಥೆಯನ್ನು ಸ್ವಾಗತಿಸುವುದರ ಜೊತೆಗೆ ಅದರ ಮೇಲೂ ಜನರ ಕಣ್ಣಿರಬೇಕು. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜನರ ಬಳಿಗೆ ಬರುವುದು ಮುಖ್ಯ; ಆದರೆ ಅದಕ್ಕಿಂತ ಮುಖ್ಯವಾಗಿ, ಜನರೇ ಸರ್ಕಾರದ ಮೇಲೆ ನಿಗಾ ಇಡುವ ಅಧಿಕಾರವನ್ನು ಕಳೆದುಕೊಳ್ಳಬಾರದು ಎನ್ನುವುದು ಇಲ್ಲಿ ಮುಖ್ಯಾಂಶ.

- ಶ್ರೀರಾಜ್‌ ವಕ್ವಾಡಿ

ಬರದ ಬಿಸಿಯಲ್ಲಿ ವಿಶೇಷ ಅಧಿವೇಶನಕ್ಕೆ ಸರ್ಕಾರ ನಿರ್ಧಾರ !

ಬರದ ಬಿಸಿಯಲ್ಲಿ ವಿಶೇಷ ಅಧಿವೇಶನಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ರೈತರ ಬದುಕು, ಪಶ್ಚಿಮಘಟ್ಟ ಮತ್ತು ಅಭಿವೃದ್ಧಿಯ ದಿಕ್ಕಿನ ಕುರಿತು ಕರ್ನಾಟಕದ ನಿರ್ಣಾಯಕ ಚರ್ಚೆಗೆ ಇದು ಅಗತ್ಯ.  ಕರ್ನಾಟಕದ ರಾಜಕೀಯದಲ್ಲಿ ವಿಧಾನಮಂಡಲದ ವಿಶೇಷ ಅಧಿವೇಶನಕ್ಕೆ ಸಾಮಾನ್ಯವಾಗಿ ಇರುವ ಅರ್ಥಕ್ಕಿಂತ ಈ ಬಾರಿಯ ಅಧಿವೇಶನಕ್ಕೆ ಹೆಚ್ಚಿನ ರಾಜಕೀಯ ಮತ್ತು ಸಾಮಾಜಿಕ ಮಹತ್ವವಿದೆ. ಸೆಪ್ಟೆಂಬರ್‌ 21ರಿಂದ 23ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ರಾಜ್ಯದ ಗಂಭೀರ ಬರ ಪರಿಸ್ಥಿತಿ, ರೈತರ ಸಂಕಷ್ಟ, ಪಶ್ಚಿಮಘಟ್ಟಗಳ ಕುರಿತ ಡಾ. ಕೆ. ಕಸ್ತೂರಿ ರಂಗನ್ ವರದಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಸರ್ಕಾರ ನಿರ್ಧರಿಸಿದೆ. ಆದರೆ, ಮೂರು ದಿನಗಳ ಚರ್ಚೆ ರಾಜ್ಯದ ಸಮಸ್ಯೆಗಳಿಗೆ ಪರಿಹಾರದ ದಿಕ್ಕು ತೋರಿಸಲಿದೆಯೇ? ಅಥವಾ ಮತ್ತೊಂದು ರಾಜಕೀಯ ವಾಗ್ವಾದದ ವೇದಿಕೆಯಾಗಿ ಉಳಿಯಲಿದೆಯೇ? 

 ಇದು ಈ ವಿಶೇಷ ಅಧಿವೇಶನದ ನಿಜವಾದ ಪರೀಕ್ಷೆ. ಬರವೆಂದರೆ ಕೇವಲ ಮಳೆಯ ಕೊರತೆಯಲ್ಲ. ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಕೇವಲ ಮಳೆ ಕೈಕೊಟ್ಟ ಪರಿಣಾಮ ಎಂದು ವ್ಯಾಖ್ಯಾನಿಸುವುದು ಸಮಸ್ಯೆಯ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡ ಹಾಗಾಗುತ್ತದೆ. ಮಳೆ ಕಡಿಮೆಯಾಗುವುದು ಕಾರಣವಾಗಿರಬಹುದು. ಆದರೆ ಅದರ ಪರಿಣಾಮಗಳು ಇಷ್ಟು ವ್ಯಾಪಕವಾಗಿರುವುದಕ್ಕೆ ಕೃಷಿಯ ಮೇಲಿನ ಹೆಚ್ಚುತ್ತಿರುವ ಒತ್ತಡ, ನೀರಿನ ಅಸಮರ್ಪಕ ನಿರ್ವಹಣೆ, ಭೂಗರ್ಭಜಲದ ಕುಸಿತ, ಬೆಳೆ ಪದ್ಧತಿಯ ಬದಲಾವಣೆ ಮತ್ತು ಹವಾಮಾನ ಬದಲಾವಣೆಯಂತಹ ಹಲವು ಅಂಶಗಳು ಕಾರಣವಾಗಿವೆ. ಬರದ ಹೊಡೆತ ಮೊದಲು ರೈತನ ಹೊಲಕ್ಕೆ ಬೀಳುತ್ತದೆ. ನಂತರ ಅದು ಕೂಲಿ ಕಾರ್ಮಿಕನ ಬದುಕಿಗೆ, ಗ್ರಾಮೀಣ ಮಾರುಕಟ್ಟೆಗೆ, ಸಣ್ಣ ವ್ಯಾಪಾರಿಗೆ ಮತ್ತು ಅಂತಿಮವಾಗಿ ರಾಜ್ಯದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ವಿಶೇಷ ಅಧಿವೇಶನದಲ್ಲಿ ಬರದ ಬಗ್ಗೆ ಚರ್ಚೆ ಎಂದರೆ ಕೇವಲ “ಎಷ್ಟು ಮಳೆ ಬಂತು?” ಎಂಬ ಪ್ರಶ್ನೆಯಾಗಬಾರದು. “ರೈತನ ಆದಾಯ ಯಾಕೆ ಕುಸಿಯುತ್ತಿದೆ?”, “ಕೃಷಿ ವೆಚ್ಚ ಯಾಕೆ ಏರುತ್ತಿದೆ?”, “ನೀರಿನ ಹಕ್ಕು ಯಾರಿಗೆ?”, “ಬರ ಪರಿಹಾರ ನಿಜವಾಗಿ ಯಾರನ್ನು ತಲುಪುತ್ತಿದೆ?” ಎಂಬ ಪ್ರಶ್ನೆಗಳು ಚರ್ಚೆಯ ಕೇಂದ್ರವಾಗಬೇಕು. ರೈತರ ಸಂಕಷ್ಟಕ್ಕೆ ಪರಿಹಾರ ಎಂದರೆ ಪರಿಹಾರಧನ ಮಾತ್ರವೇ? ಬರ ಪರಿಹಾರವಾಗಿ ಸರ್ಕಾರ ಹಣ ಬಿಡುಗಡೆ ಮಾಡುವುದು ಅಗತ್ಯ. ಆದರೆ ಅದು ಶಾಶ್ವತ ಪರಿಹಾರವಲ್ಲ. ಬೆಳೆ ನಷ್ಟವಾದ ರೈತನಿಗೆ ಪರಿಹಾರಧನ ನೀಡಿದರೆ ಆ ವರ್ಷದ ನಷ್ಟದ ಒಂದು ಭಾಗವನ್ನು ಮಾತ್ರ ಭರಿಸಬಹುದು. ಆದರೆ ಸಾಲದ ಹೊರೆ, ಬೀಜ–ರಸಗೊಬ್ಬರದ ವೆಚ್ಚ, ನೀರಿನ ವೆಚ್ಚ, ಮಾರುಕಟ್ಟೆಯ ಅನಿಶ್ಚಿತತೆ ಮತ್ತು ಬೆಲೆ ಕುಸಿತದ ಸಮಸ್ಯೆ ಮುಂದುವರಿಯುತ್ತದೆ. ಹೀಗಾಗಿ ವಿಶೇಷ ಅಧಿವೇಶನದಲ್ಲಿ ರೈತರ ಪ್ರಶ್ನೆಯನ್ನು “ಬರ ಪರಿಹಾರ”ದಿಂದ “ಕೃಷಿ ಬದುಕಿನ ಪುನರ್‌ನಿರ್ಮಾಣ”ದತ್ತ ಕೊಂಡೊಯ್ಯುವ ಅಗತ್ಯವಿದೆ.

 ರೈತನಿಗೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾದ ಬೆಲೆ, ಸಾರ್ವಜನಿಕ ಹೂಡಿಕೆಯಿಂದ ನೀರಾವರಿ, ಬೆಳೆ ವಿಮೆಯ ಪರಿಣಾಮಕಾರಿ ಅನುಷ್ಠಾನ, ಸಾಲದ ಒತ್ತಡದಿಂದ ರಕ್ಷಣೆ ಮತ್ತು ಸ್ಥಳೀಯ ಆಹಾರ ವ್ಯವಸ್ಥೆಯನ್ನು ಬಲಪಡಿಸುವ ನೀತಿಗಳ ಬಗ್ಗೆ ಚರ್ಚೆ ನಡೆಯಬೇಕು. ಇಲ್ಲದಿದ್ದರೆ ಬರ ಬರುತ್ತದೆ, ಪರಿಹಾರ ಘೋಷಣೆಯಾಗುತ್ತದೆ, ಅಧಿವೇಶನ ನಡೆಯುತ್ತದೆ, ರಾಜಕೀಯ ಆರೋಪ–ಪ್ರತ್ಯಾರೋಪಗಳು ನಡೆಯುತ್ತವೆ; ಆದರೆ ಮುಂದಿನ ದಿನಗಳಲ್ಲಿ ಹೀಗೆ ಬರ ಬಂದರೇ, ಇದೇ ಕಥೆ, ವ್ಯಥೆ ಮತ್ತೆ ಪುನರಾವರ್ತನೆಯಾಗುತ್ತದೆ. ಇನ್ನು, ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆಯೂ  ಚರ್ಚೆಯೂ ನಡೆಯಲಿದೆ.  ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಪ್ರಮುಖ ವಿಷಯವಾಗಿರುವುದು ಮತ್ತೊಂದು ಕಾರಣಕ್ಕೆ ಮಹತ್ವದ್ದು. ಪಶ್ಚಿಮಘಟ್ಟಗಳು ಕರ್ನಾಟಕದ ನೀರಿನ ಭದ್ರತೆ, ಕೃಷಿ, ಜೀವವೈವಿಧ್ಯ ಮತ್ತು ಪರಿಸರ ಸಮತೋಲನಕ್ಕೆ ಅತ್ಯಂತ ಮಹತ್ವದ ಪ್ರದೇಶ. ಹೀಗಾಗಿ ಪಶ್ಚಿಮಘಟ್ಟಗಳ ಸಂರಕ್ಷಣೆ ಮತ್ತು ಅಲ್ಲಿನ ಜನರ ಬದುಕಿನ ಹಕ್ಕು—ಇವೆರಡನ್ನೂ ಪರಸ್ಪರ ವಿರುದ್ಧವಾಗಿ ನಿಲ್ಲಿಸುವುದು ಸರಿಯಾದ ಪರಿಹಾರವಲ್ಲ. ಒಂದು ಕಡೆ ಪರಿಸರ ಸಂರಕ್ಷಣೆ ಅಗತ್ಯ. ಮತ್ತೊಂದು ಕಡೆ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ತಲೆತಲಾಂತರಗಳಿಂದ ಬದುಕುತ್ತಿರುವ ರೈತರು, ಆದಿವಾಸಿಗಳು ಮತ್ತು ಸ್ಥಳೀಯ ಸಮುದಾಯಗಳ ಜೀವನೋಪಾಯದ ಪ್ರಶ್ನೆಯೂ ಇದೆ. ಹೀಗಾಗಿ ಚರ್ಚೆಯ ಮೂಲ ಪ್ರಶ್ನೆಗಳು ಏನೆಂದ್ರೆ,  “ಪರಿಸರವೇ? ಅಭಿವೃದ್ಧಿಯೇ?” ಎಂಬ ದ್ವಂದ್ವವಲ್ಲ.“ಯಾವ ರೀತಿಯ ಅಭಿವೃದ್ಧಿ? ಯಾರಿಗಾಗಿ ಅಭಿವೃದ್ಧಿ?” ಎಂಬುದಾಗಬೇಕು. ಪಶ್ಚಿಮಘಟ್ಟವನ್ನು ರಕ್ಷಿಸುವ ಹೆಸರಿನಲ್ಲಿ ಸ್ಥಳೀಯ ಜನರ ಬದುಕನ್ನು ಅಸ್ಥಿರಗೊಳಿಸುವ ನೀತಿಯೂ ಸ್ವೀಕಾರಾರ್ಹವಲ್ಲ. ಅದೇ ಸಮಯದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ, ಜಲಮೂಲ ಮತ್ತು ಪರಿಸರ ವ್ಯವಸ್ಥೆಗಳನ್ನು ನಾಶಪಡಿಸುವ ಮಾದರಿಯೂ ದೀರ್ಘಕಾಲಿಕವಾಗಿ ಪರಿಸರಕ್ಕೆ ಹಾನಿಕರ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ.   ಆದ್ದರಿಂದ ಕಸ್ತೂರಿ ರಂಗನ್ ವರದಿಯ ಬಗ್ಗೆ ರಾಜಕೀಯ ಪಕ್ಷಗಳು ತಮ್ಮ ನಿಲುವುಗಳನ್ನು ಘೋಷಿಸುವುದಕ್ಕಿಂತ ಮುಂದೆ ಹೋಗಿ, ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಜನರ ಹಕ್ಕುಗಳ ನಡುವೆ ವೈಜ್ಞಾನಿಕ ಹಾಗೂ ಸಾಮಾಜಿಕವಾಗಿ ನ್ಯಾಯಯುತ ಸಮತೋಲನವನ್ನು ಹೇಗೆ ರೂಪಿಸಬಹುದು? ಎಂಬುದನ್ನು ಚರ್ಚಿಸಬೇಕು.

ಇನ್ನು, ಬರ ಮತ್ತು ಪರಿಸರವನ್ನು ಬೇರೆ ಬೇರೆ ಸಮಸ್ಯೆಗಳೆಂದು ನೋಡುವುದಕ್ಕೆ ಸಾಧ್ಯವಾಗಲಿಲ್ಲ. ಇಲ್ಲಿ ಒಂದು ಪ್ರಮುಖ ರಾಜಕೀಯ ಸಂಪರ್ಕವಿದೆ. ಒಂದೆಡೆ ಪಶ್ಚಿಮಘಟ್ಟಗಳ ಪರಿಸರ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುತ್ತಿದೆ. ಮತ್ತೊಂದೆಡೆ ರಾಜ್ಯದ ವಿವಿಧ ಭಾಗಗಳಲ್ಲಿ ನೀರಿನ ಕೊರತೆ ಮತ್ತು ಬರದ ತೀವ್ರತೆ ಹೆಚ್ಚುತ್ತಿದೆ. ಇವೆರಡನ್ನು ಪ್ರತ್ಯೇಕ ಸಮಸ್ಯೆಗಳಂತೆ ನೋಡುವ ಬದಲು ಒಂದೇ ಪರಿಸರ–ಆರ್ಥಿಕ ಸಂಕಷ್ಟದ ಭಾಗವಾಗಿ ನೋಡಬೇಕಿದೆ. ಅರಣ್ಯ ನಾಶ, ಜಲಾನಯನ ಪ್ರದೇಶಗಳ ಹಾನಿ, ಅಸಮರ್ಪಕ ನಗರೀಕರಣ, ಕೆರೆ–ಕಟ್ಟೆಗಳ ನಿರ್ಲಕ್ಷ್ಯ ಮತ್ತು ಅತಿಯಾದ ಭೂಗರ್ಭಜಲ ಬಳಕೆ—ಇವೆಲ್ಲವೂ ದೀರ್ಘಾವಧಿಯಲ್ಲಿ ನೀರಿನ ಭದ್ರತೆಯನ್ನೇ ದುರ್ಬಲಗೊಳಿಸುತ್ತವೆ. ಹೀಗಾಗಿ ಬರಕ್ಕೆ ಪರಿಹಾರವೆಂದರೆ ಕೇವಲ ಟ್ಯಾಂಕರ್‌ ನೀರು ಅಥವಾ ಪರಿಹಾರಧನವಲ್ಲ. ಜಲಮೂಲಗಳ ಪುನರುಜ್ಜೀವನ, ಕೆರೆಗಳ ಸಂರಕ್ಷಣೆ, ಸ್ಥಳೀಯ ಜಲಾನಯನ ವ್ಯವಸ್ಥೆಗಳ ಪುನರ್‌ನಿರ್ಮಾಣ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳಿಗೆ ಸಾರ್ವಜನಿಕ ಹೂಡಿಕೆ ಕೂಡ ಆಗಬೇಕು. ಗಮನಿಸಿ, ವಿಶೇಷ ಅಧಿವೇಶನ ಎನ್ನುವುದು ರಾಜಕೀಯ ಆರೋಪಗಳ ವೇದಿಕೆಯೇ, ನೀತಿ ರೂಪಿಸುವ ವೇದಿಕೆಯೇ? ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ.  ವಿಧಾನಮಂಡಲದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ಸಹಜ. ಸರ್ಕಾರ ತನ್ನ ಸಾಧನೆಗಳನ್ನು ಹೇಳುತ್ತದೆ; ಪ್ರತಿಪಕ್ಷ ವೈಫಲ್ಯಗಳನ್ನು ಎತ್ತಿ ತೋರಿಸುತ್ತದೆ. ಆದರೆ ರಾಜ್ಯದ ಜನರು ಈ ಅಧಿವೇಶನದಿಂದ ನಿರೀಕ್ಷಚಿಸುತ್ತಿರುವುದು ಬೇರೆ ಎನ್ನುವುದನ್ನು ಆಡಳಿತರೂಢ ಪಕ್ಷ ಮತ್ತು ವಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕಿದೆ.  ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ವಿಧಾನಸಭೆಯ ಚರ್ಚೆ ನೆಮ್ಮದಿ ನೀಡುವುದಾದರೆ ಅದು ನಿರ್ದಿಷ್ಟ ನೀತಿ ಮತ್ತು ಬಜೆಟ್‌ ನಿರ್ಧಾರಗಳಾಗಿ ಹೊರಬರಬೇಕು. ಪಶ್ಚಿಮಘಟ್ಟದ ಜನರಿಗೆ ಚರ್ಚೆ ಭರವಸೆ ನೀಡುವುದಾದರೆ ಅದು ಪರಿಸರ ಸಂರಕ್ಷಣೆ ಮತ್ತು ಜನರ ಹಕ್ಕುಗಳನ್ನು ಒಟ್ಟಿಗೆ ರಕ್ಷಿಸುವ ನೀತಿಯಾಗಿ ರೂಪುಗೊಳ್ಳಬೇಕು. ಅದೇ ರೀತಿ ಗ್ರಾಮೀಣ ಆರ್ಥಿಕತೆ ಕುಸಿಯುತ್ತಿರುವ ಸಂದರ್ಭದಲ್ಲಿ ಅಧಿವೇಶನವು ಕೃಷಿ ಮತ್ತು ಗ್ರಾಮೀಣ ಉದ್ಯೋಗದ ಬಗ್ಗೆ ದೀರ್ಘಕಾಲಿಕ ಯೋಜನೆಗೆ ದಾರಿ ಮಾಡಿಕೊಡಬೇಕು. ನೋಡಿ, ಕೇಂದ್ರದ ಹೊಣೆಗಾರಿಕೆಯ ಪ್ರಶ್ನೆಯೂ ಚರ್ಚೆಯಾಗಬೇಕು. 

 ಬರದ ಸಂದರ್ಭದಲ್ಲಿ ರಾಜ್ಯ–ಕೇಂದ್ರ ಸಂಬಂಧವೂ ಪ್ರಮುಖ ಪ್ರಶ್ನೆಯಾಗುತ್ತದೆ. ರಾಜ್ಯ ಸರ್ಕಾರದ ಹೊಣೆಗಾರಿಕೆ ಇದ್ದಷ್ಟೇ ಕೇಂದ್ರ ಸರ್ಕಾರದ ಹೊಣೆಗಾರಿಕೆಯೂ ಇದೆ. ರಾಜ್ಯಗಳು ನೈಸರ್ಗಿಕ ವಿಕೋಪ ಎದುರಿಸುವಾಗ ಪರಿಹಾರ ಮತ್ತು ಪುನರ್ವಸತಿಗೆ ಅಗತ್ಯವಾದ ಸಂಪನ್ಮೂಲಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತಿವೆಯೇ? ರಾಜ್ಯದ ತೆರಿಗೆ ಪಾಲು ಮತ್ತು ಹಣಕಾಸಿನ ಹಂಚಿಕೆ ರಾಜ್ಯಗಳ ಹೆಚ್ಚುತ್ತಿರುವ ಹೊಣೆಗಾರಿಕೆಗೆ ಅನುಗುಣವಾಗಿದೆಯೇ? ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ರಕ್ಷಿಸಲು ಕೇಂದ್ರದ ನೀತಿಗಳು ಸಾಕಷ್ಟಿವೆಯೇ? ಇಂತಹ ಪ್ರಶ್ನೆಗಳೂ ವಿಶೇಷ ಅಧಿವೇಶನದ ಚರ್ಚೆಯ ಭಾಗವಾಗಬೇಕು. ಯಾಕೆಂದರೆ ಬರವನ್ನು ಕೇವಲ ರಾಜ್ಯ ಸರ್ಕಾರದ ವೈಫಲ್ಯವೆಂದು ಹೇಳುವುದು ಎಷ್ಟು ಅಪೂರ್ಣವೋ, ಕೇಂದ್ರದ ನೀತಿಗಳ ಪಾತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದೂ ಅಷ್ಟೇ ಅಪೂರ್ಣ. ಇಂತಹ ಅಧಿವೇಶನದಲ್ಲಿ ಜನರ ಬದುಕು ಕೇಂದ್ರವಾಗಬೇಕಿದೆ. ವಿಧಾನಮಂಡಲದ ಅಧಿವೇಶನಗಳು ಬಹುತೇಕ ಪಕ್ಷಗಳ ರಾಜಕೀಯ ಶಕ್ತಿಪ್ರದರ್ಶನದ ವೇದಿಕೆಗಳಾಗುತ್ತಿವೆ ಎಂಬ ಆರೋಪ ಸಾಮಾನ್ಯವಾಗಿದೆ. ಈ ಬಾರಿಯ ವಿಶೇಷ ಅಧಿವೇಶನ ಆ ಆರೋಪವನ್ನು ಸುಳ್ಳು ಎಂದು ಸಾಬೀತುಪಡಿಸುವ ಅವಕಾಶವನ್ನು ಹೊಂದಿದೆ. ಚರ್ಚೆಯ ಕೇಂದ್ರದಲ್ಲಿ ಮುಖ್ಯಮಂತ್ರಿ, ಸಚಿವರು ಅಥವಾ ಪ್ರತಿಪಕ್ಷ ನಾಯಕರು ಇರುವುದಲ್ಲ, ಚರ್ಚೆಯ  ಕೇಂದ್ರದಲ್ಲಿ ರೈತನಿರಬೇಕು, ಚರ್ಚೆಯ ಕೇಂದ್ರದಲ್ಲಿ ಗ್ರಾಮೀಣ ಕಾರ್ಮಿಕನಿರಬೇಕು. ಚರ್ಚೆಯ ಕೇಂದ್ರದಲ್ಲಿ ನೀರಿಗಾಗಿ ಕಾಯುತ್ತಿರುವ ಜನರಿರಬೇಕು. ಚರ್ಚೆಯ ಕೇಂದ್ರದಲ್ಲಿ ಪಶ್ಚಿಮಘಟ್ಟದ ಸ್ಥಳೀಯ ಸಮುದಾಯಗಳಿರಬೇಕು. ಚರ್ಚೆಯ ಕೇಂದ್ರದಲ್ಲಿ ಮುಂದಿನ ಪೀಳಿಗೆಯ ಪರಿಸರ ಭದ್ರತೆಯಿರಬೇಕು. ಮೂರು ದಿನಗಳ ಅಧಿವೇಶನ ಮುಗಿದ ಬಳಿಕ ಜನರ ಕೈಯಲ್ಲಿ ಉಳಿಯಬೇಕಾಗಿರುವುದು ರಾಜಕೀಯ ಹೇಳಿಕೆಗಳಲ್ಲ; ಸ್ಪಷ್ಟ ನಿರ್ಣಯಗಳು, ಕಾಲಮಿತಿಯ ಕಾರ್ಯಯೋಜನೆ ಮತ್ತು ಜವಾಬ್ದಾರಿಯುತ ಅನುಷ್ಠಾನ ವ್ಯವಸ್ಥೆ.  ಇಲ್ಲದಿದ್ದರೆ ವಿಶೇಷ ಅಧಿವೇಶನವೂ ಮತ್ತೊಂದು ರಾಜಕೀಯ ಅಧ್ಯಾಯವಾಗಿ ಮುಗಿಯುತ್ತದೆ. ಆದರೆ ಈ ಅವಕಾಶವನ್ನು ಸರ್ಕಾರ ಮತ್ತು ಪ್ರತಿಪಕ್ಷಗಳು ಸಮರ್ಥವಾಗಿ ಬಳಸಿಕೊಂಡರೆ, ಕರ್ನಾಟಕದ ಬರ, ಕೃಷಿ, ನೀರು ಮತ್ತು ಪರಿಸರದ ಕುರಿತು ಹೊಸ ನೀತಿ ಚರ್ಚೆಗೆ ಇದು ಆರಂಭವಾಗಬಹುದು.

 ಬರ ಪರಿಹಾರದ ಪ್ರಶ್ನೆಯಿಂದ ನೀರಿನ ನ್ಯಾಯದ ಪ್ರಶ್ನೆಯವರೆಗೆ, ರೈತರ ನೆರವಿನಿಂದ ಕೃಷಿ ವ್ಯವಸ್ಥೆಯ ಪುನರ್‌ನಿರ್ಮಾಣದವರೆಗೆ, ಕಸ್ತೂರಿ ರಂಗನ್ ವರದಿಯಿಂದ ಪಶ್ಚಿಮಘಟ್ಟದ ಜನರ ಹಕ್ಕುಗಳವರೆಗೆ— ಈ ವಿಶೇಷ ಅಧಿವೇಶನ ಕರ್ನಾಟಕ ಯಾವ ರೀತಿಯ ಅಭಿವೃದ್ಧಿಯ ದಾರಿಯನ್ನು ಆರಿಸಿಕೊಳ್ಳಲಿದೆ ಎಂಬುದನ್ನು ನಿರ್ಧರಿಸುವ ಮಹತ್ವದ ರಾಜಕೀಯ ವೇದಿಕೆಯಾಗಬೇಕಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

- ಶ್ರೀರಾಜ್‌ ವಕ್ವಾಡಿ


ಉದ್ಯಾನವನ ತಿದ್ದುಪಡಿ ವಿಧೇಯಕದ ವಾಪಾಸ್‌ ಪಡೆದ ರಾಜ್ಯ ಸರ್ಕಾರ !

 ಉದ್ಯಾನವನ ತಿದ್ದುಪಡಿ ವಿಧೇಯಕದ ವಾಪಸಾತಿಯ ಹಿಂದಿನ ರಾಜಕೀಯ ಪಾಠವೇನು? ಜನಾಭಿಪ್ರಾಯಕ್ಕೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ.  ಕರ್ನಾಟಕದ ಉದ್ಯಾನವನಗಳ ಸಂರಕ್ಷಣೆಗೆ ಸಂಬಂಧಿಸಿದ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿರುವುದು ಕೇವಲ ಒಂದು ವಿಧೇಯಕದ ವಾಪಸಾತಿಯ ಬೆಳವಣಿಗೆಯಾಗಿ ನೋಡಲಾಗದು. ಇದು ಸರ್ಕಾರದ ನೀತಿ ನಿರ್ಧಾರಗಳು ಮತ್ತು ಜನಾಭಿಪ್ರಾಯದ ನಡುವಿನ ಸಂಘರ್ಷದಲ್ಲಿ ಸಾರ್ವಜನಿಕ ಒತ್ತಡ ಎಷ್ಟು ನಿರ್ಣಾಯಕ ಪಾತ್ರ ವಹಿಸಬಲ್ಲದು ಎಂಬುದನ್ನು ತೋರಿಸುವ ಬೆಳವಣಿಗೆಯಾಗಿದೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಮ್ಮ ಸರ್ಕಾರದ  ನಿರ್ಧಾರವನ್ನು ಜನಪರ ಬದ್ಧತೆಯ ಪ್ರತೀಕ ಎಂದು ಬಣ್ಣಿಸಿದೆ. ಸಾರ್ವಜನಿಕರ ಅಭಿಪ್ರಾಯ, ಆತಂಕ ಮತ್ತು ಭಾವನೆಗಳಿಗೆ ಬೆಲೆ ನೀಡಿ ವಿಧೇಯಕವನ್ನು ಹಿಂಪಡೆಯಲಾಗಿದೆ ಎಂಬ ಸಮರ್ಥನೆಯನ್ನೂ ನೀಡಿದೆ. ಆದರೆ ಇಲ್ಲಿ ಉದ್ಭವಿಸುವ ಪ್ರಮುಖ ಪ್ರಶ್ನೆ ಜನರ ಆತಂಕಗಳು ಮೊದಲು ಏಕೆ ಹುಟ್ಟಿಕೊಂಡವು? ಯಾವುದೇ ಕಾನೂನು ತಿದ್ದುಪಡಿ ಜನಜೀವನ, ಸಾರ್ವಜನಿಕ ಆಸ್ತಿ ಅಥವಾ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೊಂದಿದ್ದರೆ, ಅದರ ಉದ್ದೇಶ ಮತ್ತು ಪರಿಣಾಮಗಳ ಕುರಿತು ಸರ್ಕಾರವೇ ಮೊದಲಿನಿಂದಲೂ ಸ್ಪಷ್ಟವಾದ ಸಾರ್ವಜನಿಕ ಸಂವಾದ ನಡೆಸಬೇಕಾಗುತ್ತದೆ. ವಿಧೇಯಕ ಮಂಡನೆಯಾದ ನಂತರ ವಿರೋಧ ವ್ಯಕ್ತವಾದಾಗ ಮಾತ್ರ ಅದರ ಉದ್ದೇಶವನ್ನು ವಿವರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಅದು ಸರ್ಕಾರದ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿರುವ ಸಂವಹನದ ಕೊರತೆಯನ್ನೂ ಸೂಚಿಸುತ್ತದೆ. ವಿಶೇಷವಾಗಿ ಉದ್ಯಾನವನಗಳು, ಸಾರ್ವಜನಿಕ ಮುಕ್ತ ಸ್ಥಳಗಳು ಮತ್ತು ನಗರ ಪರಿಸರದಂತಹ ವಿಚಾರಗಳಲ್ಲಿ ನಾಗರಿಕರ ಆತಂಕವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇವು ಕೇವಲ ಸರ್ಕಾರದ ಆಡಳಿತಾತ್ಮಕ ನಿರ್ಧಾರದ ವ್ಯಾಪ್ತಿಯಲ್ಲಿರುವ ಭೂಮಿಯಲ್ಲ; ಸಾರ್ವಜನಿಕ ಬಳಕೆ ಮತ್ತು ಪರಿಸರ ಸಮತೋಲನದೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಸಾಮೂಹಿಕ ಸಂಪನ್ಮೂಲಗಳು. ಇದೇ ಕಾರಣಕ್ಕೆ ವಿಧೇಯಕವನ್ನು ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸುವುದರ ಜೊತೆಗೆ, ಮುಂದಿನ ಹೆಜ್ಜೆಯ ಮೇಲೂ ಸಾರ್ವಜನಿಕರು ಕಣ್ಣಿಟ್ಟಿರಬೇಕಾಗಿದೆ.

ಸರ್ಕಾರ ‘ಅಗತ್ಯ ತಿದ್ದುಪಡಿಗಳೊಂದಿಗೆ ವಿಧೇಯಕವನ್ನು ಮರು ಮಂಡಿಸಲಾಗುವುದು’ ಎಂದು ಹೇಳಿದೆ. ಹೀಗಾಗಿ ಈಗಿನ ನಿಜವಾದ ಪರೀಕ್ಷೆ ವಿಧೇಯಕವನ್ನು ಹಿಂಪಡೆಯುವುದಲ್ಲ; ಮರು ಮಂಡಿಸುವಾಗ ಜನರ ಆತಂಕಗಳಿಗೆ ಎಷ್ಟು ಪ್ರಾಮಾಣಿಕವಾಗಿ ಉತ್ತರಿಸಲಾಗುತ್ತದೆ ಎನ್ನುವುದು. ಜನಾಭಿಪ್ರಾಯವನ್ನು ಗೌರವಿಸುವುದೆಂದರೆ ಕೇವಲ ವಿರೋಧ ಹೆಚ್ಚಾದಾಗ ಕಾನೂನನ್ನು ಹಿಂಪಡೆಯುವುದಲ್ಲ. ನೀತಿ ರೂಪಿಸುವ ಆರಂಭಿಕ ಹಂತದಲ್ಲಿಯೇ ನಾಗರಿಕ ಸಮಾಜ, ಪರಿಸರ ತಜ್ಞರು, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರೊಂದಿಗೆ ಮುಕ್ತ ಚರ್ಚೆ ನಡೆಸುವುದು ಅದರ ನಿಜವಾದ ಅರ್ಥ.‘ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ನ್ಯಾಯಾಧೀಶರು’ ಎಂಬ ಸರ್ಕಾರದ ಮಾತು ರಾಜಕೀಯವಾಗಿ ಗಮನಾರ್ಹ. ಆದರೆ ಈ ಮಾತು ಘೋಷಣೆಯಾಗಿ ಉಳಿಯದೆ ಆಡಳಿತದ ಕಾರ್ಯವಿಧಾನದಲ್ಲೂ ಪ್ರತಿಫಲಿಸಬೇಕಾಗಿದೆ. ಜನರ ಅಭಿಪ್ರಾಯವನ್ನು ಕೇಳುವುದು, ಆ ಅಭಿಪ್ರಾಯದ ಆಧಾರದ ಮೇಲೆ ನೀತಿಯನ್ನು ರೂಪಿಸುವುದು ಮತ್ತು ಸರ್ಕಾರದ ಉದ್ದೇಶವನ್ನು ಪಾರದರ್ಶಕವಾಗಿ ವಿವರಿಸುವುದು—ಇವೆಲ್ಲವೂ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅಗತ್ಯ.

ಇದರ ಮತ್ತೊಂದು ರಾಜಕೀಯ ಆಯಾಮವೂ ಇದೆ. ಸರ್ಕಾರದ ಮೇಲೆ ಯಾವುದೇ ನಿರ್ಧಾರವನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳುವ ನಿರೀಕ್ಷೆ ಇರಲು ಸಾಧ್ಯವಿಲ್ಲ. ಜನರಿಂದ, ನಾಗರಿಕ ಸಂಘಟನೆಗಳಿಂದ ಮತ್ತು ಸಾರ್ವಜನಿಕ ವಲಯದಿಂದ ವ್ಯಕ್ತವಾಗುವ ವಿರೋಧ ಪ್ರಜಾಪ್ರಭುತ್ವದ ಸಹಜ ಭಾಗ. ಅಂತಹ ವಿರೋಧವನ್ನು ‘ಅಭಿವೃದ್ಧಿ ವಿರೋಧಿ’ ಎಂದು ತಳ್ಳಿಹಾಕುವ ಬದಲು, ಅದರಲ್ಲಿ ಅಡಗಿರುವ ಆತಂಕಗಳನ್ನು ಅರ್ಥಮಾಡಿಕೊಳ್ಳುವುದು ಜನಪರ ಆಡಳಿತದ ಲಕ್ಷಣ. ಹೀಗಾಗಿ ಉದ್ಯಾನವನಗಳ ತಿದ್ದುಪಡಿ ವಿಧೇಯಕದ ವಾಪಸಾತಿ ಸರ್ಕಾರಕ್ಕೆ ಒಂದು ರಾಜಕೀಯ ಎಚ್ಚರಿಕೆಯೂ ಹೌದು, ಒಂದು ಅವಕಾಶವೂ ಹೌದು. ಜನರ ವಿರೋಧವನ್ನು ತಾತ್ಕಾಲಿಕವಾಗಿ ಶಮನಗೊಳಿಸುವುದಕ್ಕಿಂತ, ಜನರ ವಿಶ್ವಾಸವನ್ನು ಶಾಶ್ವತವಾಗಿ ಗಳಿಸುವಂತಹ ಪಾರದರ್ಶಕ ಕಾನೂನು ರೂಪಿಸುವ ಪ್ರಕ್ರಿಯೆ ಈಗ ಅಗತ್ಯವಾಗಿದೆ. ಕೊನೆಗೆ ಉಳಿಯುವ ಪ್ರಶ್ನೆ ಒಂದೇ—ಸರ್ಕಾರ ಜನರ ಭಾವನೆಗಳನ್ನು ಗೌರವಿಸಿದೆ ಎಂಬ ಹೇಳಿಕೆಯಿಂದ ಮುಂದಿನ ಅಧ್ಯಾಯ ಮುಗಿಯುವುದಿಲ್ಲ. ಮರು ಮಂಡನೆಯಾಗುವ ವಿಧೇಯಕದಲ್ಲಿ ಜನರ ಧ್ವನಿ ಎಷ್ಟು ಪ್ರತಿಫಲಿಸುತ್ತದೆ ಎಂಬುದೇ ಸರ್ಕಾರದ ಜನಪರ ಬದ್ಧತೆಯ ನಿಜವಾದ ಮಾನದಂಡವಾಗಲಿದೆ.

- ಶ್ರೀರಾಜ್‌ ವಕ್ವಾಡಿ

Thursday, September 3, 2026

ಉಪ ಪ್ರಧಾನಿ ಹುದ್ದೆಗೆ ಫಡ್ನವಿಸ್‌ !? RSS V/S ಮೋದಿ ಬಿಜೆಪಿ

ಯುವಜನರ ಅಸಮಾಧಾನಕ್ಕೆ ಫಡ್ನವೀಸ್‌ ಉತ್ತರವೇ? ಆರ್‌ಎಸ್‌ಎಸ್‌ನ ‘ಯುವ ತಂತ್ರ’ದ ಹಿಂದೆ ಅಡಗಿರುವ ರಾಜಕೀಯ ಲೆಕ್ಕಾಚಾರವೇನು?  ಭಾರತೀಯ ರಾಜಕೀಯದಲ್ಲಿ ಒಂದು ವಿಚಿತ್ರ ಬೆಳವಣಿಗೆ ನಡೆಯುತ್ತಿದೆ. ಯುವಜನರ ಮತ ಬೇಕು. ಯುವಜನರ ಬೆಂಬಲ ಬೇಕು. ಸಾಮಾಜಿಕ ಮಾಧ್ಯಮದಲ್ಲಿ ಯುವಜನರ ಭಾಷೆಯಲ್ಲಿ ಮಾತನಾಡಬೇಕು. ಆದರೆ ಅಧಿಕಾರದ ಕೇಂದ್ರಗಳಲ್ಲಿ ಮಾತ್ರ ಹಳೆಯ ಮುಖಗಳ ಪ್ರಾಬಲ್ಯ ಮುಂದುವರಿಯಬೇಕು. ಈ ವೈರುಧ್ಯ ಈಗ ಬಿಜೆಪಿಯ ಮುಂದೆಯೇ ದೊಡ್ಡ ರಾಜಕೀಯ ಪ್ರಶ್ನೆಯಾಗಿ ನಿಂತಿದೆ. ಇದು ಆರ್‌ ಎಸ್‌ ಎಸ್‌ ವರ್ಸಸ್‌ ಮೋದಿ ಬಿಜೆಪಿ ಆಗ್ತಿದ್ಯಾ ? 

ದೇಶದಾದ್ಯಂತ ಉದ್ಯೋಗ, ಶಿಕ್ಷಣ, ಪರೀಕ್ಷಾ ಅಕ್ರಮ, ನಿರುದ್ಯೋಗ ಮತ್ತು ರಾಜಕೀಯ ಪ್ರತಿನಿಧಿತ್ವದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಜೆನ್‌-ಝೀ ಯುವಕರ ಅಸಮಾಧಾನ ಬೀದಿಗೆ ಬಂದಿರುವುದು ಈ ಬದಲಾವಣೆಯ ಪ್ರಮುಖ ಸೂಚನೆ. ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ವಿಡಂಬನಾತ್ಮಕ ಆನ್‌ಲೈನ್ ಚಳವಳಿ ಅಥವಾ ಚಳವಳಿ ಕೆಲವೇ ವಾರಗಳಲ್ಲಿ ದೊಡ್ಡ ಯುವಜನ ಚಳವಳಿಯಾಗಿ ರೂಪುಗೊಂಡಿದ್ದು, ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೂ ಎಚ್ಚರಿಕೆಯ ಗಂಟೆ ಬಾರಿಸಿದ್ದು, ಕೇಂದ್ರದ ಶಿಕ್ಷಣ ಸಚಿವರ ರಾಜೀನಾಮೆಗೆ ಪ್ರಮುಖ ಪಾತ್ರವಹಿಸಿದ್ದೆಲ್ಲವೂ ಭಾರತೀಯ ರಾಜಕೀಯ ವಲಯದಲ್ಲಿ ನಿಜಕ್ಕೂ ಅಚ್ಚರಿಯ ಸಂಗತಿ.   ಇದು ಕೇವಲ ಒಂದು ಸಾಮಾಜಿಕ ಮಾಧ್ಯಮದ ಟ್ರೆಂಡ್ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ದೆಹಲಿಯಲ್ಲಿ ಸಾವಿರಾರು ಯುವಜನರು ಬೀದಿಗಿಳಿದಿರುವುದು, ಶಿಕ್ಷಣ ಮತ್ತು ಉದ್ಯೋಗದಂತಹ ನೇರ ಬದುಕಿನ ಪ್ರಶ್ನೆಗಳನ್ನು ರಾಜಕೀಯದ ಕೇಂದ್ರಕ್ಕೆ ತರುತ್ತಿರುವುದು, ಯುವಜನರ ಅಸಮಾಧಾನಕ್ಕೆ ಹೊಸ ರೂಪ ಸಿಕ್ಕಿರುವುದನ್ನು ಸೂಚಿಸುತ್ತದೆ. ಈಗ ಎಲ್ಲಾ ರಾಜಕೀಯ ಪಕ್ಷಗಳು ಯುವಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಕೂಡ ರಾಷ್ಟ್ರೀಯ ಮಟ್ಟದಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಉಪಪ್ರಧಾನಿ ಸ್ಥಾನಕ್ಕೆ ತರಬೇಕು ಎಂಬ ಆರ್‌ಎಸ್‌ಎಸ್‌ನ ಆಸಕ್ತಿ ಕುರಿತು ವರದಿಗಳು ಹೊರಬಂದಿವೆ.RSS ಮೋದಿ ಬಗ್ಗೆ ಮುನಿಸಿಕೊಂಡಿರುವುದು ಜಗಜ್ಜಾಹೀರು. ಮೋಹನ್‌ ಭಾಗವತ್‌ ಮತ್ತು ಮೋದಿ ನಡುವೆ ಇಂದಿಗೂ ಶೀತಲ ಸಮರ ಇದೆ. ಮೋದಿ ಆರ್‌ ಎಸ್‌ ಎಸ್‌ ಸಿದ್ಧಾಂತಕ್ಕೂ ಮೀರಿ ಬೆಳೆಯುತ್ತಿರುವುದು, ಮೋದಿ ತಮ್ಮದೇ ಒಂದು ಬಿಜೆಪಿಯ ಬಣವನ್ನು ಸೃಷ್ಟಿಸಿಕೊಂಡಿರುವುದು ಸ್ವತಃ ಆರ್‌ ಎಸ್‌ ಎಸ್‌  ಪಕ್ಷಕ್ಕೂ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ ಇವೆಲ್ಲಾ ಜಾಣ ತಂತ್ರ ಎಂದೇ ಕಾಣಿಸುತ್ತಿದೆ. ಆದರೇ, ಬಿಜೆಪಿ ಅಥವಾ ಕೇಂದ್ರ ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಹೀಗಾಗಿ ಇದನ್ನು ಅಂತಿಮ ನಿರ್ಧಾರವೆಂದು ನೋಡುವುದಕ್ಕಿಂತ, ಬಿಜೆಪಿಯ ಭವಿಷ್ಯದ ನಾಯಕತ್ವದ ಕುರಿತು ನಡೆಯುತ್ತಿರುವ ಒಳರಾಜಕೀಯ ಚರ್ಚೆಯ ಭಾಗವಾಗಿ ನೋಡುವುದು ಸೂಕ್ತ. ಆದರೆ ಈ ಚರ್ಚೆಯೇ ಮಹತ್ವದ್ದು. ಯಾಕೆಂದರೆ ಫಡ್ನವೀಸ್ ಕೇವಲ ಮಹಾರಾಷ್ಟ್ರದ ನಾಯಕನಲ್ಲ. ನಾಗಪುರದ ರಾಜಕೀಯ ಹಿನ್ನೆಲೆಯಿಂದ ಬಂದಿರುವ ಅವರು ಆರ್‌ಎಸ್‌ಎಸ್‌ಗೆ ಪರಿಚಿತ ಮುಖ. ಮಹಾರಾಷ್ಟ್ರದಂತಹ ರಾಜಕೀಯವಾಗಿ ಅತ್ಯಂತ ಮಹತ್ವದ ರಾಜ್ಯದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಅವರ ಪಾತ್ರವೂ ನಿರ್ಣಾಯಕವಾಗಿದೆ. ಆದ್ದರಿಂದ ಫಡ್ನವೀಸ್‌ರನ್ನು ಕೇಂದ್ರದ ದೊಡ್ಡ ಪಾತ್ರಕ್ಕೆ ತರುವ ಚರ್ಚೆ ಇದ್ದರೆ, ಅದರ ಅರ್ಥ ಕೇವಲ ಒಬ್ಬ ವ್ಯಕ್ತಿಯ ಪದೋನ್ನತಿ ಎಂದಲ್ಲ. ಅದು ಬಿಜೆಪಿಯ ಮುಂದಿನ ಪೀಳಿಗೆಯ ನಾಯಕತ್ವದ ಪುನರ್‌ವಿನ್ಯಾಸದ ಪ್ರಯತ್ನವಾಗಿರಬಹುದು. ಆದರೆ ಯುವಜನರ ಸಮಸ್ಯೆ ಫಡ್ನವೀಸ್ ಅವರ ಸ್ಥಾನಮಾನದಿಂದ ಪರಿಹಾರವಾಗುತ್ತದೆಯೇ? ಇಲ್ಲಿಯೇ ಮೂಲ ಪ್ರಶ್ನೆ ಇದೆ. ಯುವಜನರು ರಾಜಕೀಯದಲ್ಲಿ ಸ್ಥಾನ ಕೇಳುತ್ತಿದ್ದಾರೆ ಎಂದರೆ, ಅವರಿಗೆ ಮತ್ತೊಬ್ಬ ‘ಯುವ ಮುಖ’ವನ್ನು ತೋರಿಸುವುದಷ್ಟೇ ಸಾಕಾಗುವುದಿಲ್ಲ. ಅವರಿಗೆ ಉದ್ಯೋಗ ಬೇಕು. ಗುಣಮಟ್ಟದ ಶಿಕ್ಷಣ ಬೇಕು. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬೇಕು. 

ಸರ್ಕಾರಿ ನೇಮಕಾತಿಯಲ್ಲಿ ನ್ಯಾಯ ಬೇಕು.ಪ್ರತಿಭಟನೆಗೆ ಅವಕಾಶ ಬೇಕು. ಮತ್ತು ಮುಖ್ಯವಾಗಿ, ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತಮ್ಮ ಧ್ವನಿ ಬೇಕು. ಕಾಕ್ರೋಚ್ ಚಳವಳಿಯ ಬೆಳವಣಿಗೆಯ ಹಿಂದಿನ ಅಸಮಾಧಾನವೂ ಇದೇ. ಉದ್ಯೋಗದ ಕೊರತೆ, ಪರೀಕ್ಷಾ ಅಕ್ರಮಗಳು ಮತ್ತು ಶಿಕ್ಷಣ ವ್ಯವಸ್ಥೆಯ ಮೇಲಿನ ಅವಿಶ್ವಾಸ ಯುವಜನರನ್ನು ಸಾಂಪ್ರದಾಯಿಕ ಪಕ್ಷಗಳ ಹೊರಗಿನ ರಾಜಕೀಯ ಅಭಿವ್ಯಕ್ತಿಯತ್ತ ತಳ್ಳಿವೆ. ಹೀಗಿರುವಾಗ, ಒಬ್ಬ ಯುವ ನಾಯಕನನ್ನು ಉನ್ನತ ಸ್ಥಾನಕ್ಕೆ ತರುವುದೇ ‘ಯುವ ರಾಜಕೀಯ’ದ ಪರ್ಯಾಯ ಎಂದು ಬಿಜೆಪಿ ಭಾವಿಸಿದರೆ, ಅದು ಸಮಸ್ಯೆಯ ಮೇಲ್ಮೈಯನ್ನು ಮಾತ್ರ ಮುಟ್ಟಿದಂತಾಗುತ್ತದೆ. ಆರ್‌ಎಸ್‌ಎಸ್‌ಗೆ ಎದುರಾಗಿರುವ ದೊಡ್ಡ ಸವಾಲು.  ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಂಬಂಧವನ್ನು ಕೇವಲ ಚುನಾವಣಾ ಯಂತ್ರದ ಸಂಬಂಧವಾಗಿ ನೋಡಲು ಸಾಧ್ಯವಿಲ್ಲ. ಸಂಘದ ದೃಷ್ಟಿಯಲ್ಲಿ ದೀರ್ಘಕಾಲೀನ ರಾಜಕೀಯ-ಸಾಮಾಜಿಕ ಪ್ರಭಾವವೇ ಮುಖ್ಯ. ಆದರೆ ಯುವಜನರ ಹೊಸ ರಾಜಕೀಯ ಭಾಷೆ ಸಾಂಪ್ರದಾಯಿಕ ಸಂಘಟನೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಯುವಕರು ಪಕ್ಷದ ಕಚೇರಿಗಳಲ್ಲಿ ಕುಳಿತು ರಾಜಕೀಯ ಕಲಿಯುವುದಕ್ಕಿಂತ, Instagram, YouTube, X ಮತ್ತು WhatsApp ಮೂಲಕ ರಾಜಕೀಯ ಚರ್ಚೆ ನಡೆಸುತ್ತಾರೆ. ಅವರು ಒಬ್ಬ ನಾಯಕನನ್ನು ದೇವರಂತೆ ನೋಡುವುದಿಲ್ಲ. ಪ್ರಶ್ನಿಸುತ್ತಾರೆ. ಮೀಮ್ ಮಾಡುತ್ತಾರೆ. ವಿರೋಧಿಸುತ್ತಾರೆ. ಅಗತ್ಯವಿದ್ದರೆ ತಮ್ಮದೇ ರಾಜಕೀಯ ವೇದಿಕೆಯನ್ನು ನಿರ್ಮಿಸುತ್ತಾರೆ. ಇದಕ್ಕಾಗಿಯೇ CJPಯಂತಹ ಚಳವಳಿಗಳು ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ ಸೇರಿದಂತೆ ಎಲ್ಲ ಸಾಂಪ್ರದಾಯಿಕ ಪಕ್ಷಗಳಿಗೂ ಎಚ್ಚರಿಕೆ. ಈ ಚಳವಳಿ ದೀರ್ಘಕಾಲ ಉಳಿಯುತ್ತದೆಯೇ ಎಂಬುದು ಬೇರೆ ಪ್ರಶ್ನೆ. ಆದರೆ ಅದು ಎತ್ತಿದ ಪ್ರಶ್ನೆಗಳನ್ನು ನಿರ್ಲಕ್ಷಿಸುವುದು ಕಷ್ಟ.

ಇನ್ನು, ರಾಹುಲ್ ಗಾಂಧಿ ಈ ಅವಕಾಶವನ್ನು ಬಳಸಿಕೊಳ್ಳಲಿದ್ದಾರೆಯೇ? ಇದೇ ಸಮಯದಲ್ಲಿ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ತನ್ನ ಸಂಘಟನೆಯನ್ನು ಪುನರ್‌ವಿನ್ಯಾಸಗೊಳಿಸುವ ಪ್ರಯತ್ನದಲ್ಲಿದೆ. ನಾಸಿಕ್‌ನಲ್ಲಿ ಮಹಾರಾಷ್ಟ್ರದ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಘಟಕಗಳ ಅಧ್ಯಕ್ಷರಿಗಾಗಿ ಹತ್ತು ದಿನಗಳ ವಸತಿ ತರಬೇತಿ ಶಿಬಿರ ಆಯೋಜಿಸಲಾಗಿದೆ. ರಾಹುಲ್ ಗಾಂಧಿ ಅದರ ಸಮಾರೋಪದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದು ಸಾಮಾನ್ಯ ಸಂಘಟನಾ ತರಬೇತಿ ಮಾತ್ರವಾಗಿದ್ದರೆ ಅದರ ರಾಜಕೀಯ ಮಹತ್ವ ಕಡಿಮೆ. ಆದರೆ ಕಾಂಗ್ರೆಸ್ ಈ ಶಿಬಿರವನ್ನು ಯುವಜನರ ಪ್ರಶ್ನೆಗಳು, ಸಂವಿಧಾನ, ಸಾಮಾಜಿಕ ನ್ಯಾಯ, ನಿರುದ್ಯೋಗ ಮತ್ತು ಬಿಜೆಪಿಯ ಸೈದ್ಧಾಂತಿಕ ಪ್ರಭಾವವನ್ನು ಎದುರಿಸುವ ರಾಜಕೀಯ ತರಬೇತಿಯೊಂದಿಗೆ ಜೋಡಿಸಿದರೆ, ಮಹಾರಾಷ್ಟ್ರದಲ್ಲಿ ಹೊಸ ರಾಜಕೀಯ ಸಮೀಕರಣಕ್ಕೆ ಅದು ಕಾರಣವಾಗಬಹುದು. ಆದರೆ ಇಲ್ಲಿಯೂ ಕಾಂಗ್ರೆಸ್ ತನ್ನ ಹಳೆಯ ಸಮಸ್ಯೆಯಿಂದ ಹೊರಬರಬೇಕು. ಯುವಜನರನ್ನು ಕೇವಲ ಚುನಾವಣಾ ಪ್ರಚಾರದ ‘ಫೇಸ್’ಗಳಾಗಿ ಬಳಸುವುದೇ? ಅಥವಾ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಿಗೂ ತರುತ್ತದೆಯೇ?  ಈ ಪ್ರಶ್ನೆಗೆ ಕಾಂಗ್ರೆಸ್ ಕೂಡ ಉತ್ತರಿಸಬೇಕಿದೆ.  ಫಡ್ನವೀಸ್‌ರನ್ನು ಉಪಪ್ರಧಾನಿ ಮಾಡಲಾಗುತ್ತದೆಯೇ ಇಲ್ಲವೇ ಎಂಬುದು ಈಗಿನ ರಾಜಕೀಯ ಕುತೂಹಲ. ಆದರೆ ಅದಕ್ಕಿಂತ ದೊಡ್ಡ ಪ್ರಶ್ನೆ ಬೇರೆ ಇದೆ.  ಬಿಜೆಪಿ ತನ್ನ ನಾಯಕತ್ವದಲ್ಲಿ ಯುವ ಮುಖಗಳನ್ನು ಹೆಚ್ಚಿಸಿದರೂ, ಯುವಜನರ ಮೂಲಭೂತ ಅಸಮಾಧಾನವನ್ನು ಹೇಗೆ ಪರಿಹರಿಸಲಿದೆ? ಯಾಕೆಂದರೆ ಯುವಜನರ ರಾಜಕೀಯ ಅಸಮಾಧಾನವನ್ನು ಕೇವಲ ನಾಯಕತ್ವ ಬದಲಾವಣೆ ಮೂಲಕ ಶಮನಗೊಳಿಸಲು ಸಾಧ್ಯವಿಲ್ಲ. ಒಬ್ಬ ನಿರುದ್ಯೋಗಿ ಯುವಕನಿಗೆ ಹೊಸ ಉಪಪ್ರಧಾನಿ ಮುಖಕ್ಕಿಂತ ಉದ್ಯೋಗ ಮುಖ್ಯ. ಪರೀಕ್ಷೆ ಬರೆಯುವ ವಿದ್ಯಾರ್ಥಿಗೆ ಭಾಷಣಕ್ಕಿಂತ ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಮುಖ್ಯ. ಪ್ರತಿಭಟಿಸುವ ಯುವಜನರಿಗೆ ಭರವಸೆಗಿಂತ ಅಭಿವ್ಯಕ್ತಿಯ ಹಕ್ಕು ಮುಖ್ಯ.  ಇದು ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ ಮತ್ತು ಇತರ ಎಲ್ಲ ಪಕ್ಷಗಳಿಗೂ ಅನ್ವಯಿಸುವ ಸತ್ಯ. 2029ರ ಮುನ್ನ ನಡೆಯುತ್ತಿರುವ ದೊಡ್ಡ ಪರೀಕ್ಷೆ.  ಈ ಬೆಳವಣಿಗೆಗಳನ್ನು 2029ರ ಚುನಾವಣೆಯ ಹಿನ್ನೆಲೆಯಲ್ಲಿಯೂ ನೋಡಬೇಕಾಗಿದೆ. ಬಿಜೆಪಿಗೆ ತನ್ನ ಮುಂದಿನ ಪೀಳಿಗೆಯ ನಾಯಕತ್ವವನ್ನು ಈಗಿನಿಂದಲೇ ರೂಪಿಸಬೇಕಿದೆ. ಆರ್‌ಎಸ್‌ಎಸ್‌ಗೆ ಪಕ್ಷದ ಮೇಲೆ ತನ್ನ ಸೈದ್ಧಾಂತಿಕ ಮತ್ತು ಸಂಘಟನಾ ಪ್ರಭಾವವನ್ನು ಮುಂದುವರಿಸಬೇಕಿದೆ. ಕಾಂಗ್ರೆಸ್ ಯುವಜನರ ಅಸಮಾಧಾನವನ್ನು ತನ್ನ ಪರವಾಗಿ ರಾಜಕೀಯವಾಗಿ ಪರಿವರ್ತಿಸಿಕೊಳ್ಳಬೇಕಿದೆ. ಹೀಗಾಗಿ ಫಡ್ನವೀಸ್‌ರಂತಹ ಮುಖಗಳ ಚರ್ಚೆ ಕೇವಲ ಒಂದು ಹುದ್ದೆಯ ಚರ್ಚೆಯಲ್ಲ. ಇದು ‘ಮೋದಿ ನಂತರ ಯಾರು?’ ಎನ್ನುವ ಪ್ರಶ್ನೆಗಿಂತಲೂ ದೊಡ್ಡದಾದ ‘ಮೋದಿ ನಂತರದ ಬಿಜೆಪಿ ಹೇಗಿರಬೇಕು?’ ಎಂಬ ಪ್ರಶ್ನೆಯ ಆರಂಭಿಕ ಅಧ್ಯಾಯ ಎನ್ನುವುದರಲ್ಲಿ ಅನುಮಾನವಿಲ್ಲ.  ಆದರೆ ಯುವಜನರ ಅಸಮಾಧಾನಕ್ಕೆ ಉತ್ತರವಾಗಿ ಮತ್ತೊಬ್ಬ ನಾಯಕನನ್ನು ಮೇಲಕ್ಕೆತ್ತುವುದರಿಂದ ಮಾತ್ರ ರಾಜಕೀಯ ಸಂಕಷ್ಟ ಪರಿಹಾರವಾಗುವುದಿಲ್ಲ.

ಯುವಜನರು ಈಗ ನಮ್ಮ  ನಾಯಕರು ಯಾರು ಎಂದು ಮಾತ್ರ ಹುಡುಕುತ್ತಿಲ್ಲ. ತಮ್ಮ ಭವಿಷ್ಯವನ್ನು ಹುಡುಕುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಉದ್ಯೋಗ, ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಪ್ರಜಾಸತ್ತಾತ್ಮಕ ಅವಕಾಶಗಳ ರೂಪದಲ್ಲಿ ಉತ್ತರ ಸಿಗದಿದ್ದರೆ, ಯಾವುದೇ ಪಕ್ಷದ ‘ಯುವ ತಂತ್ರ’ವೂ ಚುನಾವಣಾ ಘೋಷಣೆಯ ಮಟ್ಟದಲ್ಲೇ ಉಳಿಯುವ ಸಾಧ್ಯತೆಯಿದೆ. ಆದ್ದರಿಂದ ಫಡ್ನವೀಸ್ ಉಪಪ್ರಧಾನಿಯಾಗುತ್ತಾರೆಯೇ ಎಂಬುದಕ್ಕಿಂತ, ಭಾರತೀಯ ರಾಜಕೀಯದ ಅಧಿಕಾರದ ಮೇಜಿನ ಬಳಿ ಯುವಜನರಿಗೆ ನಿಜವಾಗಿ ಎಷ್ಟು ಜಾಗ ಸಿಗಲಿದೆ? ಎಂಬ ಪ್ರಶ್ನೆಯೇ ಹೆಚ್ಚು ಮಹತ್ವದ್ದು.

- ಶ್ರೀರಾಜ್‌ ವಕ್ವಾಡಿ 

ಪ್ರಕೃತಿಯ ಕೊರಳು ಹಿಸುಕಿ ಸುರಂಗ ರಸ್ತೆ ಮಾಡುವ ಅನಿವಾರ್ಯ ಏನಿದೆ !?

 ಅಭಿವೃದ್ಧಿಯ ಹೆಸರಿನಲ್ಲಿ ಬೆಂಗಳೂರಿನ ಹಸಿರಿಗೆ ಬಲಿ ಯಾಕೆ? ಸುರಂಗ ರಸ್ತೆಯ ಹಿಂದೆ ಯಾರ ಹಿತಾಸಕ್ತಿ ಅಡಗಿದೆ? ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ರಸ್ತೆಗಳು ವಾಹನಗಳಿಂದ ತುಂಬಿವೆ, ಟ್ರಾಫಿಕ್‌ ನಲ್ಲಿ ಜನ ರೋಸಿ ಹೋಗಿದ್ದಾರೆ. ಬೆಂಗಳೂರು ಮಂದಿಯ ಸಮಯ ಟ್ರಾಫಿಕ್ಸ್‌ ನಲ್ಲೇ ಕಳೆದು ಹೋಗುತ್ತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲಿನ ಒತ್ತಡವೂ ಹೆಚ್ಚುತ್ತಿದೆ. ಆದರೆ, ಟ್ರಾಫಿಕ್ ಸಮಸ್ಯೆಗೆ ಪರಿಹಾರ ಹುಡುಕುವ ಹೆಸರಿನಲ್ಲಿ ನಗರದ ಅಸ್ತಿತ್ವವನ್ನೇ ರೂಪಿಸಿರುವ ಹಸಿರು ಪ್ರದೇಶಗಳ ಮೇಲೆ ಕಣ್ಣಿಡುವುದು ಎಷ್ಟು ಸಮರ್ಥನೀಯ? ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ 16.75 ಕಿಲೋಮೀಟರ್ ಉದ್ದದ ಅವಳಿ ಸುರಂಗ ರಸ್ತೆ ಯೋಜನೆ ಇದೀಗ ಇದೇ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.

ಸಾವಿರಾರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ಗೌತಮ್ ಅದಾನಿ ನೇತೃತ್ವದ ಕಂಪನಿ ₹22,267 ಕೋಟಿಯ ಬಿಡ್ ಸಲ್ಲಿಸಿ ಮುಂಚೂಣಿಯಲ್ಲಿದೆ ಎಂಬ ವರದಿಗಳ ನಡುವೆಯೇ, ಯೋಜನೆಯ ವೆಚ್ಚ, ಟೆಂಡರ್ ಪ್ರಕ್ರಿಯೆ, ಪರಿಸರ ಪರಿಣಾಮ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಸರ್ಕಾರದ ಅಂದಾಜಿಗಿಂತ ಬಿಡ್ ಮೊತ್ತ ಹೆಚ್ಚಿರುವುದರಿಂದ ಟೆಂಡರ್ ಅಂತಿಮಗೊಳಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.  ಇದರ ನಡುವೆ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಸಹಜವಾಗಿಯೇ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಇಲ್ಲಿ ಮುಖ್ಯ ಪ್ರಶ್ನೆ ಅದಾನಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆಯೇ ಎಂಬುದಲ್ಲ. ಇಷ್ಟು ದೊಡ್ಡ ಸಾರ್ವಜನಿಕ ಯೋಜನೆಯ ನಿರ್ಧಾರ ಪ್ರಕ್ರಿಯೆ ಎಷ್ಟು ಪಾರದರ್ಶಕವಾಗಿದೆ? ಜನರ ತೆರಿಗೆ ಹಣದಿಂದ ನಿರ್ಮಾಣವಾಗಲಿರುವ ಯೋಜನೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಸರ್ಕಾರ ಜನರ ಮುಂದೆ ಸಂಪೂರ್ಣವಾಗಿ ತೆರೆದಿಟ್ಟಿದೆಯೇ? ಪರ್ಯಾಯ ಮಾರ್ಗಗಳ ಕುರಿತು ಸಾರ್ವಜನಿಕ ಚರ್ಚೆ ನಡೆದಿದೆಯೇ? ಯೋಜನೆಯ ಪರಿಸರ ಪರಿಣಾಮದ ಸಮಗ್ರ ಅಧ್ಯಯನವನ್ನುಸಾರ್ವಜನಿಕಗೊಳಿಸಲಾಗಿದೆಯೇ? ಯೋಜನೆಯಿಂದ ಲಾಲ್‌ಬಾಗ್, ಸ್ಯಾಂಕಿ ಕೆರೆ ಮತ್ತು ನಗರದ ಇತರ ಹಸಿರು ಪ್ರದೇಶಗಳ ಮೇಲೆ ಆಗಬಹುದಾದ ಪರಿಣಾಮವೇನು? ಲಾಲ್‌ಬಾಗ್ ಬೆಂಗಳೂರಿನಲ್ಲಿರುವ ಮತ್ತೊಂದು ಉದ್ಯಾನವನವಲ್ಲ. ಅದು ನಗರದ ಪರಿಸರ ಸಮತೋಲನದ ಭಾಗ. ಹಲವು ತಲೆಮಾರುಗಳ ಬೆಂಗಳೂರಿಗರ ನೆನಪು, ಉಸಿರು ಮತ್ತು ಸಾರ್ವಜನಿಕ ಬದುಕಿನ ಒಂದು ಪ್ರಮುಖ ಭಾಗ. ಅಂತಹ ಪ್ರದೇಶವನ್ನು ಬೃಹತ್ ಮೂಲಸೌಕರ್ಯ ಯೋಜನೆಗಾಗಿ ಬಳಸಿಕೊಳ್ಳುವ ಪ್ರಸ್ತಾಪ ಬಂದಾಗ ಸಹಜವಾಗಿಯೇ ಪರಿಸರದ ಬಗ್ಗೆ ಆತಂಕ ಮೂಡುವುದು ತಪ್ಪೇನಲ್ಲ.  ಇತ್ತೀಚೆಗೆ ಲಾಲ್‌ಬಾಗ್ ಉಳಿಸಿ ಅಭಿಯಾನದಡಿ ಸಾವಿರಾರು ನಾಗರಿಕರು ಬೀದಿಗಿಳಿದಿರುವುದು ಈ ಆತಂಕ ಕೇವಲ ಕೆಲ ಪರಿಸರವಾದಿಗಳದ್ದಲ್ಲ ಎಂಬುದನ್ನು ತೋರಿಸುತ್ತದೆ. ಸರ್ಕಾರ ಇದನ್ನು ಕೇವಲ 'ಅಭಿವೃದ್ಧಿ ವಿರೋಧಿ' ಮನೋಭಾವ ಎಂದು ತಳ್ಳಿಹಾಕಬಾರದು. 

ಜನರು ಅಭಿವೃದ್ಧಿಯನ್ನೇ ವಿರೋಧಿಸುತ್ತಿಲ್ಲ; ಯಾವ ಅಭಿವೃದ್ಧಿ, ಯಾರಿಗಾಗಿ, ಯಾವ ಬೆಲೆಗೆ ಎಂಬುದನ್ನು ಪ್ರಶ್ನಿಸುತ್ತಿದ್ದಾರೆ. ಟ್ರಾಫಿಕ್‌ಗೆ ಸುರಂಗವೇ ಏಕೈಕ ಪರಿಹಾರವೇ? ಬೆಂಗಳೂರು ಇಂದು ಎದುರಿಸುತ್ತಿರುವ ಸಂಚಾರ ಸಮಸ್ಯೆಗೆ ಮೂಲ ಕಾರಣ ಕೇವಲ ರಸ್ತೆಗಳ ಕೊರತೆಯೇ? ನಗರದ ಅತಿಯಾದ ಕೇಂದ್ರೀಕರಣ, ಖಾಸಗಿ ವಾಹನಗಳ ಹೆಚ್ಚಳ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲಿನ ಒತ್ತಡ, ಮೆಟ್ರೋ–ಬಸ್ ವ್ಯವಸ್ಥೆಗಳ ನಡುವಿನ ಸಮನ್ವಯದ ಕೊರತೆ, ನಗರ ಯೋಜನೆಯ ವೈಫಲ್ಯ—ಇವೆಲ್ಲವೂ ಸಮಸ್ಯೆಯ ಭಾಗವಲ್ಲವೇ? ಹೀಗಿರುವಾಗ ಮತ್ತೊಂದು ಬೃಹತ್ ರಸ್ತೆ ನಿರ್ಮಿಸಿ ಟ್ರಾಫಿಕ್ ಸಮಸ್ಯೆ ಪರಿಹರಿಸಲಾಗುತ್ತದೆ ಎನ್ನುವುದು ಎಷ್ಟು ದೂರದೃಷ್ಟಿಯ ನೀತಿ? ಇಂದು ಸುರಂಗ ನಿರ್ಮಿಸಿ ಸಮಸ್ಯೆ ಬಗೆಹರಿಸಿದರೂ, ನಾಳೆ ಅದೇ ರಸ್ತೆಗೆ ಮತ್ತಷ್ಟು ವಾಹನಗಳು ಬಂದರೆ? ರಸ್ತೆ ಹೆಚ್ಚಿಸಿದಂತೆ ವಾಹನಗಳ ಸಂಖ್ಯೆಯೂ ಹೆಚ್ಚುವ 'induced demand' ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಿದೆಯೇ? ಸುರಂಗ ರಸ್ತೆ ನಿರ್ಮಾಣದ ಮೊದಲು ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಬಲಪಡಿಸುವುದು, ಮೆಟ್ರೋ ಸಂಪರ್ಕ ವಿಸ್ತರಿಸುವುದು, ಬಸ್ ವ್ಯವಸ್ಥೆಯನ್ನು ಸುಧಾರಿಸುವುದು, ಪಾದಚಾರಿ ಮತ್ತು ಸೈಕಲ್ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು, ನಗರದ ಉದ್ಯೋಗ ಮತ್ತು ವಸತಿ ಕೇಂದ್ರೀಕರಣವನ್ನು ಸಮತೋಲನಗೊಳಿಸುವುದು ಮುಂತಾದ ಪರ್ಯಾಯಗಳ ಬಗ್ಗೆ ಸಮಗ್ರ ಚರ್ಚೆ ನಡೆದಿದೆಯೇ? ಈ ಪ್ರಶ್ನೆಗಳಿಗೆ ಉತ್ತರಿಸದೆ 'ಸುರಂಗವೇ ಪರಿಹಾರ' ಎಂದು ಹೇಳುವುದು ಅಭಿವೃದ್ಧಿಯ ಸರಳ ವ್ಯಾಖ್ಯಾನವಾಗುತ್ತದೆ. ಇನ್ನು, ಲಾಲ್‌ಬಾಗ್ ಉಳಿಸಿ ಅಭಿಯಾನಕ್ಕೆ ಬಿಜೆಪಿ ಕೈಜೋಡಿಸಿರುವುದು ಸ್ವಾಗತಾರ್ಹ. ಜನರೊಂದಿಗೆ ನಿಲ್ಲುವುದು ಯಾವುದೇ ವಿರೋಧ ಪಕ್ಷದ ಕರ್ತವ್ಯವೂ ಹೌದು. ಆದರೆ ಇಲ್ಲಿ ಮತ್ತೊಂದು ಅಸೌಕರ್ಯದ ಪ್ರಶ್ನೆಯೂ ಇದೆ. ಅದಾನಿ ಸಮೂಹಕ್ಕೆ ಸಂಬಂಧಿಸಿದ ವಿವಿಧ ಪರಿಸರ ಮತ್ತು ಭೂ ಬಳಕೆ ವಿವಾದಗಳ ಸಂದರ್ಭದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ತೆಗೆದುಕೊಂಡ ನಿಲುವು ಏನು? ದೇಶದ ವಿವಿಧ ಭಾಗಗಳಲ್ಲಿ ಮರಗಳ ಮಾರಣ ಹೋಮ, ಗಣಿಗಾರಿಕೆ ಮತ್ತು ಪರಿಸರ ಸಂಬಂಧಿತ ವಿಚಾರಗಳಲ್ಲಿ ಪಕ್ಷದ ನಿಲುವು ಏನಾಗಿತ್ತು? ಅದೇ ರೀತಿ, ಇಂದು ಲಾಲ್‌ಬಾಗ್‌ಗಾಗಿ ಧ್ವನಿ ಎತ್ತುತ್ತಿರುವ ಬಿಜೆಪಿ, ಅಧಿಕಾರದಲ್ಲಿದ್ದಾಗ ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಇದೇ ಮಟ್ಟದ ಬದ್ಧತೆಯನ್ನು ತೋರಿಸಿತೇ? ಇದೇ, ಬಿಜೆಪಿ ಅರಾವಳಿ ಬೆಟ್ಟಗಳ ಬುಡದಲ್ಲಿ ಗಣಿಗಾರಿಕೆಗೆ ಅದಾನಿಗೆ ಪರವಾನಗಿ ಕೊಟ್ಟ ವಿಚಾರದಲ್ಲಿ; ಬಿಹಾರ ಮತ್ತು ಮಹಾರಾಷ್ಟ್ರದ ಸಾವಿರಾರು ಮರಗಳನ್ನು ಕಡಿಯಲು ಅದಾನಿಗೆ ಅನುಮತಿಸಿರುವ ವಿಷಯದಲ್ಲಿ ಮೌನವಾಗಿದೆ.

ಅಂದರೆ ಕಾಂಗ್ರೆಸ್ ಮತ್ತು ಬಿಜೆಪಿ- ಎರಡೂ ಪಕ್ಷಗಳು ಅಧಿಕಾರದಲ್ಲಿದ್ದಾಗ ಜನವಿರೋಧಿ; ಇಲ್ಲದಿದ್ದಾಗ ಜನಪರ ಎಂಬುದು ನಿಚ್ಚಳವಾಗಿದೆ. ಎರಡೂ ಪಕ್ಷಗಳ ಇಬ್ಬಂದಿ ನೀತಿ ಬಯಲಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ಜನರ ಧ್ವನಿ ಕೇಳಿಸುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಅದೇ ಧ್ವನಿಯನ್ನು ಏಕೆ ನಿರ್ಲಕ್ಷಿಸುತ್ತವೆ? ಇದು ಕಾಂಗ್ರೆಸ್ ಅಥವಾ ಬಿಜೆಪಿಯೊಂದರ ಸಮಸ್ಯೆಯಲ್ಲ. ಭಾರತೀಯ ರಾಜಕಾರಣದಲ್ಲಿ ಪದೇಪದೇ ಕಾಣುವ ಅಧಿಕಾರ ರಾಜಕಾರಣದ ವೈರುಧ್ಯ ಇದು. ಜನಪರತೆ ಎನ್ನುವುದು ಅಧಿಕಾರದಲ್ಲಿದ್ದಾಗ ಏಕೆ ಬದಲಾಗುತ್ತದೆ? ವಿರೋಧ ಪಕ್ಷದಲ್ಲಿದ್ದಾಗ ಪರಿಸರ, ರೈತ, ಕಾರ್ಮಿಕ, ಸಾಮಾನ್ಯ ಜನರ ಹಕ್ಕುಗಳು ಅತ್ಯಂತ ಮುಖ್ಯವಾಗುತ್ತವೆ. ಅಧಿಕಾರಕ್ಕೆ ಬಂದ ನಂತರ ಅದೇ ಪಕ್ಷಕ್ಕೆ 'ಅಭಿವೃದ್ಧಿ', 'ಹೂಡಿಕೆ', 'ಉದ್ಯೋಗ', 'ಮೂಲಸೌಕರ್ಯ' ಎಂಬ ಪದಗಳು ಹೆಚ್ಚು ಮುಖ್ಯವಾಗುತ್ತವೆ. ಇಲ್ಲಿ ಪ್ರಶ್ನೆ ಅಭಿವೃದ್ಧಿ ಬೇಕೋ ಬೇಡವೋ ಎಂಬುದಲ್ಲ. ಅಭಿವೃದ್ಧಿಯ ಲಾಭ ಯಾರಿಗೆ? ಅದರ ವೆಚ್ಚವನ್ನು ಯಾರು ಭರಿಸುತ್ತಾರೆ? ನಿರ್ಧಾರ ಯಾರಿಂದ ತೆಗೆದುಕೊಳ್ಳಲಾಗುತ್ತದೆ?  ಇವುಗಳೇ ಮೂಲ ಪ್ರಶ್ನೆಗಳು. ಬೆಂಗಳೂರು ಜನರಿಗೆ ಉತ್ತಮ ಸಾರಿಗೆ ಬೇಕು. ಸಂಚಾರ ದಟ್ಟಣೆಯಿಂದ ಮುಕ್ತಿ ಬೇಕು. ಆದರೆ ಅದಕ್ಕಾಗಿ ನಗರದ ಹಸಿರು ಪ್ರದೇಶಗಳನ್ನು ಕಳೆದುಕೊಳ್ಳಬೇಕೇ? ಸಾರ್ವಜನಿಕ ಸಂಪನ್ಮೂಲಗಳನ್ನು ಅಪಾರ ಪ್ರಮಾಣದಲ್ಲಿ ಖರ್ಚು ಮಾಡುವ ಮೊದಲು ಪರ್ಯಾಯಗಳನ್ನು ಪರಿಶೀಲಿಸಬಾರದೇ? ಜನರಿಗಾಗಿ ಯೋಜನೆ ಎಂದರೆ ಜನರನ್ನೇ ಕೇಳಬೇಕಲ್ಲವೇ?  ಸರ್ಕಾರ ಹೇಳುವಂತೆ ಇದು ಜನರಿಗಾಗಿ ರೂಪಿಸಿರುವ ಯೋಜನೆಯಾದರೆ, ಜನರ ಅಭಿಪ್ರಾಯವನ್ನು ಕೇಳುವುದರಲ್ಲಿ ಸರ್ಕಾರಕ್ಕೆ ಏಕೆ ಹಿಂಜರಿಕೆ? ಒಂದು ಪ್ರಜಾಪ್ರಭುತ್ವದಲ್ಲಿ ದೊಡ್ಡ ಯೋಜನೆ ಎಂದರೆ ಕೇವಲ ಟೆಂಡರ್, ಡಿಪಿಆರ್ ಮತ್ತು ಗುತ್ತಿಗೆದಾರರ ಆಯ್ಕೆಯ ಪ್ರಕ್ರಿಯೆಯಲ್ಲ. ಅದು ಸಾರ್ವಜನಿಕ ಸಂವಾದವೂ ಹೌದು. ಪರಿಸರ ಪರಿಣಾಮದ ಅಧ್ಯಯನ ಸಾರ್ವಜನಿಕವಾಗಬೇಕು. ಪರ್ಯಾಯ ಮಾರ್ಗಗಳ ತುಲನಾತ್ಮಕ ಅಧ್ಯಯನ ನಡೆಯಬೇಕು. ಯೋಜನೆಯ ಒಟ್ಟು ವೆಚ್ಚ ಮತ್ತು ದೀರ್ಘಕಾಲೀನ ನಿರ್ವಹಣಾ ವೆಚ್ಚ ಜನರಿಗೆ ತಿಳಿಯಬೇಕು. ಲಾಲ್‌ಬಾಗ್ ಮತ್ತು ಸ್ಯಾಂಕಿ ಕೆರೆಯಂತಹ ಪರಿಸರ ಸೂಕ್ಷ್ಮ ಪ್ರದೇಶಗಳ ಮೇಲೆ ಆಗುವ ಪರಿಣಾಮವನ್ನು ಸ್ವತಂತ್ರ ತಜ್ಞರಿಂದ ಪರಿಶೀಲಿಸಬೇಕು. ಜನರ ವಿರೋಧವಿದೆ ಎಂಬ ಕಾರಣಕ್ಕೆ ಯೋಜನೆ ನಿಲ್ಲಿಸಲೇಬೇಕು ಎಂದಲ್ಲ. ಆದರೆ ಜನರ ವಿರೋಧವಿದೆ ಎಂಬ ಕಾರಣಕ್ಕೆ ಅವರನ್ನು ಮೌನಗೊಳಿಸಿಯೂ ಬಿಡಬಾರದು.

ಸರ್ಕಾರದ ಜವಾಬ್ದಾರಿ ಜನರಿಗೆ ಯೋಜನೆಯನ್ನು ಮನವರಿಕೆ ಮಾಡುವುದು; ಜನರ ಆತಂಕವನ್ನು ಅಸಡ್ಡೆ ಮಾಡುವುದು ಅಲ್ಲ. ಬೆಂಗಳೂರು, ಇದು ಉದ್ಯಾನವನಗಳ ನಗರ. ಕೆರೆಗಳ ನಗರ. ಮರಗಳ ನಗರ. ಸಾರ್ವಜನಿಕ ಸ್ಥಳಗಳ ನಗರ.ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಾಗ ಈ ನಗರದ ಜೀವನಾಡಿಯನ್ನೇ ದುರ್ಬಲಗೊಳಿಸಿದರೆ, ನಾಳೆ ನಾವು ಪಡೆಯುವುದು ವೇಗವಾಗಿ ಓಡಬಹುದಾದ ಆದರೆ ಉಸಿರಾಡಲು ಕಷ್ಟವಾಗುವ ನಗರ. ಸರ್ಕಾರ ಸುರಂಗ ರಸ್ತೆ ನಿರ್ಮಿಸಬೇಕೋ ಬೇಡವೋ ಎಂಬ ಪ್ರಶ್ನೆಗಿಂತ ಮೊದಲು, ಯೋಜನೆ ಬೆಂಗಳೂರಿನ ಮುಂದಿನ ಐವತ್ತು ವರ್ಷಗಳಿಗೆ ನಿಜವಾಗಿಯೂ ಅಗತ್ಯವೇ?' ಎಂಬ ಪ್ರಶ್ನೆಗೆ ಉತ್ತರಿಸಬೇಕು. ಅದಾನಿ ಬಂದರೇನು, ಬೇರೆ ಕಂಪನಿ ಬಂದರೇನು ಎಂಬುದು ಎರಡನೇ ಪ್ರಶ್ನೆ. ಮೊದಲ ಪ್ರಶ್ನೆ— ಬೆಂಗಳೂರು ಯಾರಿಗಾಗಿ?  ಸರ್ಕಾರಕ್ಕಾಗಿಯೇ? ದೊಡ್ಡ ಗುತ್ತಿಗೆದಾರರಿಗಾಗಿಯೇ?  ಹೈ ಕ್ಲಾಸ್‌ ಮಂದಿಯ ಕಾರುಗಳಿಗಾಗಿಯೇ? ಅಥವಾ ಈ ನಗರದಲ್ಲಿ ಬದುಕುತ್ತಿರುವ ಕೋಟ್ಯಂತರ ಜನರಿಗಾಗಿಯೇ ?  ಆ ಪ್ರಶ್ನೆಗೆ ಉತ್ತರ ಸಿಕ್ಕ ನಂತರವೇ ಅಭಿವೃದ್ಧಿಯ ದಿಕ್ಕು ನಿರ್ಧಾರವಾಗಬೇಕು. ಲಾಲ್‌ಬಾಗ್ ಉಳಿಸುವ ಹೋರಾಟವನ್ನು ಕೇವಲ ಒಂದು ಉದ್ಯಾನವನದ ಹೋರಾಟ ಎಂದು ನೋಡಬಾರದು. ಅದು ಬೆಂಗಳೂರಿನ ಅಭಿವೃದ್ಧಿ ಮಾದರಿಯ ಕುರಿತು ನಡೆಯುತ್ತಿರುವ ದೊಡ್ಡ ಸಾರ್ವಜನಿಕ ಚರ್ಚೆಯ ಆರಂಭವೆಂದು ನೋಡಬೇಕು.  ಇಂದು ಲಾಲ್‌ಬಾಗ್. ನಾಳೆ ಮತ್ತೊಂದು ಕೆರೆ. ಆಮೇಲೆ ಮತ್ತೊಂದು ಹಸಿರು ವಲಯ ಅಥವಾ ಪಾರ್ಕ್.‌  ಪ್ರತಿ ಬಾರಿ 'ಅಭಿವೃದ್ಧಿ ಅನಿವಾರ್ಯ' ಎಂಬ ಒಂದೇ ವಾದ ಮುಂದಿಟ್ಟರೆ, ಒಂದು ದಿನ ಅಭಿವೃದ್ಧಿ ಮಾಡಲು ಉಳಿಯುವ ನಗರವೇ ಇಲ್ಲದಂತಾಗಬಹುದು ಎನ್ನುವುದರಲ್ಲಿ ಅನುಮಾನವಿಲ್ಲ.

- ಶ್ರೀರಾಜ್‌ ವಕ್ವಾಡಿ