Thursday, July 25, 2024

ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಸ್ಥಿತಿ ಚಂದ್ರನ್‌ ಮುಖಕ್‌ ಉಗ್ದಂಗೆ !

 

(ಸಾಂದರ್ಭಿಕ ಚಿತ್ರ)

ಉಸ್ತುವಾರಿ ಮೇಲೆ ತಣ್ಣಗಾಗದ ಸ್ವಪಕ್ಷೀಯರ ಮುನಿಸು | ಅಶಕ್ತವಾದ ಕಾಂಗ್ರೆಸ್‌  

ಹಾವು ಸಾಯಬಾರದು, ಕೋಲು ಮುರಿಯಬಾರದು ಎನ್ನುವ ಮಾತು ಉಡುಪಿ ಜಿಲ್ಲಾ ಕಾಂಗ್ರೆಸ್‌ಗೆ ಸದ್ಯಕ್ಕೆ ಸಾರ್ಥಕವಾಗಿ ಒಪ್ಪುತ್ತದೆ. ಹೌದು, ಜಿಲ್ಲೆಯ ಕಾಂಗ್ರೆಸ್‌ಗೆ ತಮ್ಮದೆ ಸರ್ಕಾರವೇ ನೇಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ವಿರೋಧಿಸುವ ಹಾಗೆಯೂ ಇಲ್ಲ, ಸಮರ್ಥಿಸಿಕೊಳ್ಳುವ ಹಾಗೆಯೂ ಇಲ್ಲದಂತಾಗಿದೆ. ತ್ರಿಶಂಕು ಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಇದೆ.

ಜಿಲ್ಲಾ ಮಟ್ಟದಲ್ಲಿ ಆಡಳಿತಾತ್ಮಕ ಅನುಕೂಲವಾಗಬೇಕು ಎಂಬ ದೃಷ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಡಳಿತಾರೂಢ ಸರ್ಕಾರ ನೇಮಿಸುವ ಪದ್ಧತಿ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಇದೆ. ಸ್ಥಳಿಯಾಡಳಿತಕ್ಕೂ ಹಾಗೂ ರಾಜ್ಯ ಸರ್ಕಾರಕ್ಕೂ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕೊಂಡಿಯಾಗಿ ಇರಬೇಕು. ಆದರೇ, ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಇದನ್ನು ಸಂಪೂರ್ಣವಾಗಿ ಮರೆತಿರುವಂತೆ ಕಾಣಿಸುತ್ತಿದೆ.

ಸ್ವತಃ ಆಡಳಿತಾರೂಢ ಕಾಂಗ್ರೆಸ್‌ನ ಉಡುಪಿ ಜಿಲ್ಲೆಯ ಕಾರ್ಯಕರ್ತರೇ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಸಮಾಧಾನದಿಂದಿದ್ದಾರೆ. ಅದು ಇಲ್ಲಿಯ ಬಿಜೆಪಿಗೆ ರಾಜಕೀಯ ಸರಕಾಗಿಯೂ ದೊರಕಿದೆ. ಕಾರ್ಯಕರ್ತರು ಸ್ವತಃ ಜಿಲ್ಲಾ ಉಸ್ತುವಾರಿಗಳ ಮುಂದೆಯೇ ಆಕ್ರೋಶ ಹೊರ ಹಾಕಿದ್ದರು. ಕಾಂಗ್ರೆಸ್‌ ಅದನ್ನು ಪಕ್ಷದೊಳಗಿನ ಆಂತರಿಕ ವಿಷಯ ಎಂದು ಸಮರ್ಥಿಸಿಕೊಂಡಿತ್ತು. ಲೋಕಸಭಾ ಚುನಾವಣೆಯ ಹೊತ್ತಿಗೆ ತಣ್ಣಗಾಗಿತ್ತು ಎಂದು ತೋರಿದ್ದ ಈ ಉಸ್ತುವಾರಿಗಳ ಮೇಲಿನ ಅಸಮಾಧಾನ ಮತ್ತೆ ಹೆಚ್ಚಾಗಿದೆ.

ನಿರಂತರ ಎಲ್ಲಾ ಚುನಾವಣೆಗಳ ಸೋಲು ಜಿಲ್ಲಾ ಕಾಂಗ್ರೆಸ್‌ಗೆ ತೀರ್ವ ಮುಖಭಂಗಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆಯವರಂತಹ ಸಮರ್ಥ ಅಭ್ಯರ್ಥಿ ಇದ್ದರೂ ಜಿಲ್ಲೆಯ ಪ್ರಮುಖ ತಾಲೂಕುಗಳಾದ ಉಡುಪಿ, ಕುಂದಾಪುರಗಳಲ್ಲೇ ಲೀಡ್‌ ತಂಡುಕೊಡುವುದಕ್ಕಾಗದೇ ʼತಾನು ಅಸಮರ್ಥʼ ಎಂದು ಜಿಲ್ಲಾ ಕಾಂಗ್ರೆಸ್ ತೋರಿಸಿಕೊಟ್ಟಂತಿದೆ. ಈಗ ಉಸ್ತುವಾರಿಗಳ ಬಗ್ಗೆ ಅಸಮಾಧಾನದ ಧ್ವನಿ ಎತ್ತುವುದಕ್ಕೂ ನೈತಿಕತೆ ಕಳೆದುಕೊಂಡ ಸ್ಥಿತಿ ಅನುಭವಿಸುತ್ತಿದೆ.‌ ಒಂದೆಡೆ ರಾಜ್ಯದಾದ್ಯಂತ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂಬ ವಿಪಕ್ಷಗಳ ಆರೋಪಗಳ ನಡುವೆ ಸರ್ಕಾರವನ್ನು ಸಮರ್ಥಿಸಿಕೊಳ್ಳುವಲ್ಲಿಯೂ ಜಿಲ್ಲಾ ಕಾಂಗ್ರೆಸ್‌ ಅಶಕ್ತವಾಗಿದೆ.

ಸಂಘಟನೆಯ ಕೊರತೆಯನ್ನು ಜಿಲ್ಲಾ ಕಾಂಗ್ರೆಸ್‌ ಅಕ್ಷರಶಃ ಅನುಭವಿಸುತ್ತಿದೆ. ಜಿಲ್ಲೆಯಲ್ಲಿನ ನಿರಂತರ ಸೋಲಿನ ಕಾರಣದಿಂದ ಕಾಂಗ್ರೆಸ್ ತನ್ನ ಎಲುಬುಗಳನ್ನು ಕಳೆದುಕೊಂಡಿದೆ. ನಾಯಕರುಗಳ ನಡುವಿನ ಪ್ರತಿಷ್ಠೆ, ವೈಮನಸ್ಸು ಕಾಂಗ್ರೆಸ್‌ ಸೊರಗುವುದಕ್ಕೆ ಮೂಲ ಕಾರಣ. ಉಸ್ತುವಾರಿ ಸಚಿವರು ನಿಜವಾಗಿಯೂ ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದಾದರೇ, ಇಡೀ ಜಿಲ್ಲೆಯಲ್ಲಿ ತಮ್ಮ ಆಡಳಿತ ವರ್ಚಸ್ಸು ಹಾಗೂ ಆಡಳಿತ ಸರ್ಕಾರದ ಪ್ರಭಾವವನ್ನು ಜಿಲ್ಲೆಯಲ್ಲಿ ಬೀರಬಹುದಾಗಿತ್ತು. ಪಕ್ಷವನ್ನು ಮರಳಿ ಚೇತರಿಸಿಕೊಳ್ಳುವ ಹಾಗೆ ಮಾಡಬಹುದಾಗಿತ್ತು. ಕಾಂಗ್ರೆಸ್‌ ಅಧಿಕಾರ ಹಿಡಿದು ಲೋಕಸಭಾ ಚುನಾವಣೆಗೆ ಒಂದು ವರ್ಷ ಕಾಲ ಇದ್ದಿತ್ತು. ಜಿಲ್ಲೆಯಲ್ಲಿ ಪ್ರಮುಖ ಎರಡು ವಿವಾದಗಳಾದ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ ಹಗರಣ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಹಗರಣಗಳ ಬಗ್ಗೆ ಆಡಳಿತವನ್ನು ಬಳಸಿಕೊಂಡು ಸಮರ್ಥವಾಗಿ ವಿರೋಧಿಸಿದ್ದರೇ, ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಹಾಗೆ ಮಾಡಿದ್ದರೇ, ಜಿಲ್ಲೆಯಲ್ಲಿ ಕಾಂಗ್ರೆಸ್‌ ಮರಳಿ ಚೇತರಿಸಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಿತ್ತು. ಇಲ್ಲಿನ ಉಸ್ತುವಾರಿಗಳೂ ಕೂಡ ಈ ಎರಡು ಹಗರಣಗಳಲ್ಲಿ ತಾವೂ ಶಾಮೀಲಾದವರಂತೆ, ಏನೂ ಆಗಿಲ್ಲ ಎಂಬಂತೆ ನಡೆದುಕೊಂಡರು ಎಂದು ಸ್ವತಃ ಕಾಂಗ್ರೆಸ್‌ ಕಾರ್ಯಕರ್ತರೇ ಹೇಳಿಕೊಂಡಿರುವುದು ದುರಂತವೇ ಸರಿ. ಮಾಡುವ ಕಾಲಕ್ಕೆ ಏನೂ ಮಾಡದೇ ಬಾಯಿ ಮುಚ್ಚಿ ಕುಳಿತ ಕಾಂಗ್ರೆಸ್‌ ಈಗ ನಿದ್ದೆಯಿಂದ ಎದ್ದಂತಿದೆ.   

ಕಾಂಗ್ರೆಸ್‌ ಸ್ಥಿತಿ ಜೆಪಿ ರಾಜರತ್ನಂ ಹೇಳಿದ ಹಾಗೆ ʼಚಂದ್ರನ್‌ ಮುಖಕ್‌ ಉಗ್ದಂಗೆʼ ಎಂಬಂತಾಗಿದೆ. ʼಚಂದ್ರನಿಗೆ ಉಗಿಯುವ ಉಗುಳು ಉಗಿಯುವವರ ಮುಖದ ಮೇಲೆಯೇ ಬೀಳುತ್ತದೆʼ. ಒಂದೆಡೆ ಜಿಲ್ಲೆಯಲ್ಲಿ ಅಭಿವೃಧ್ಧಿಯಾಗುತ್ತಿಲ್ಲ ಎಂದು ಸರ್ಕಾರವನ್ನು ವಿರೋಧಿಸುವುದಕ್ಕೂ ಸಾಧ್ಯವಿಲ್ಲ, ಇನ್ನೊಂದೆಡೆ ಉಸ್ತುವಾರಿಗಳನ್ನು ಪ್ರಶ್ನಿಸುವಂತೆಯೂ ಇಲ್ಲ. ಬಿಜೆಪಿಯ ಶಾಸಕರನ್ನು ಸಮರ್ಥವಾಗಿ ವಿರೋಧಿಸುವಲ್ಲಿಯೂ ಇಲ್ಲಿನ ಕಾಂಗ್ರೆಸ್ ನಾಯಕತ್ವ ಹೀನಾಯವಾಗಿ ಸೋತಿದೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ನಿಷ್ಕ್ರಿಯವಾಗಿರುವುದು ಇದರಿಂದಲೇ ತಿಳಿಯುತ್ತದೆ.

ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ನೇಮಕಗೊಂಡಾಗ ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲ್ಲುವುದಕ್ಕೆ ಸಾದ್ಯವಾಗಿಲ್ಲ ಎಂಬ ವಿಚಾರಕ್ಕೆ ಮುನಿಸಿಕೊಂಡು ಇಲ್ಲಿನ ಕಾರ್ಯಕರ್ತರು ಮತ್ತು ಪ್ರಮುಖ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಕಾರ್ಯಕರ್ತರಲ್ಲಿ ಭ್ರಮನಿರಸನ ಉಂಟು ಮಾಡಿತ್ತು. ಬಳಿಕ ನಡೆದ ಕಾರ್ಯಕರ್ತರ ಸಭೆಗಳಲ್ಲಿ ಕಾರ್ಯಕರ್ತರು ಉಸ್ತುವಾರಿಗಳ ಮೇಲೆಯೇ ತಿರುಗಿ ಬಿದ್ದಿದ್ದರು. ಕಾರ್ಯಕರ್ತರಿಗೆ ಬೇಕಾದ ಸವಲತ್ತುಗಳನ್ನು ಪಕ್ಷ ಒದಗಿಸುವುದಿಲ್ಲ. ಚುನಾವಣೆ ಬಂದಾಗ ನಾಯಕರಿಗೆ ಕಾರ್ಯಕರ್ತರು ಬೇಕು. ಕಾರ್ಯಕರ್ತರು ನಾಯಕರ ಗುಲಾಮರಾ ? ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದರು. ಹೀಗೆ ಕಾರ್ಯಕರ್ತರು ಹಾಗೂ ಉಸ್ತುವಾರಿ ಸಚಿವರ ನಡುವೆ ಅಸಮಾಧಾನ ಮುಂದುವರಿದಿತ್ತು. ಉಸ್ತುವಾರಿಗಳ ಬಗ್ಗೆ  ಬಿಜೆಪಿ ಶಾಸಕರೂ ಕೂಡ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರೊಂದಿಗೆ ಉಸ್ತುವಾರಿಗಳು ಮೃದು ಧೋರಣೆಯಿಂದ ನಡೆದುಕೊಂಡಿದ್ದರು. ಇದು ಕೂಡ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿತ್ತು. ಈಗ ಬಿಜೆಪಿ ಶಾಸಕರಿಂದಲೇ ಉಸ್ತುವಾರಿ ಸಚಿವರ ಮೇಲೆ ಟೀಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಕಾಂಗ್ರೆಸ್‌ ಕಾರ್ಯಕರ್ತರ ವರಸೆ ಬದಲಾದಂತೆ ಕಾಣಿಸುತ್ತಿದೆ. ಉಸ್ತುವಾರಿಗಳ ಮೇಲೆ ಉಡುಪಿ ಶಾಸಕರ ಅಭಿಪ್ರಾಯವೇ ಕಾಂಗ್ರೆಸ್‌ ಕಾರ್ಯಕರ್ತರಲ್ಲಿಯೂ ಇದೆ. ಆದರೇ, ಉಸ್ತುವಾರಿ ಸಚಿವರನ್ನು ಸಮರ್ಥಿಸಿಕೊಳ್ಳಲೇ ಬೇಕಾದ ಸ್ಥಿತಿಯಲ್ಲಿದ್ದಾರೆ. ಉಸ್ತುವಾರಿ ವಿರುದ್ಧ ಯಾವ ಸ್ವಪಕ್ಷೀಯ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದರೋ, ಅವರೇ ಈಗ ಉಸ್ತುವಾರಿಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದವೇ ಸರಿ. ನಾಯಕರ ತಪ್ಪುಗಳನ್ನು ಗುರುತಿಸಿ ಅದನ್ನು ಸರಿಮಾಡಬೇಕಾಗಿರುವ ಕಾರ್ಯಕರ್ತರು, ಸಮರ್ಥಿಸಿಕೊಳ್ಳುವ ಇರಾದೆ ತೋರಿಸುತ್ತಿರುವುದು ಜಿಲ್ಲಾ ಕಾಂಗ್ರೆಸ್‌ನ ದಯನೀಯ ಸ್ಥಿತಿಯೂ ಹೌದು. 

ರಾಜ್ಯದ ಅಧಿಕಾರರೂಢ ಕಾಂಗ್ರೆಸ್ ಸರ್ಕಾರ ಆಂತರಿಕ ಕಚ್ಚಾಟದಲ್ಲಿಯೇ ಮುಳುಗಿದ್ದು, ರಾಜ್ಯದ ಪ್ರಗತಿಯನ್ನು ಮರೆತಿದೆ. ಆಡಳಿತ ನಿಷ್ಕ್ರಿಯಗೊಂಡಿದೆ. ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಬೇಕು. ಆದರೆ ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟಗಳಲ್ಲಿ ನಡೆಯಬೇಕಾದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳು ನಡೆದೇ ಇಲ್ಲ. ಖಾಸಗಿ ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಹಾಜರಿರುವ ಉಸ್ತುವಾರಿಗಳು ಈ ಬಗ್ಗೆ ಗಮನವೇ  ಕೊಟ್ಟಿಲ್ಲ.

ಮಳೆಗಾಲ ಬಂದರೇ, ಹತ್ತಿರದ ಸಮುದ್ರ ತೀರಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಒಂದು ಫೋಟೋ ತೆಗೆಸಿಕೊಂಡರೇ ಉಸ್ತುವಾರಿಗಳ ಪರಿಶೀಲನೆ ಮುಗಿಯಿತು. ಜಿಲ್ಲೆಯಾದ್ಯಂತ ತೀವ್ರ ಮಳೆಯಾಗುತ್ತಿದೆ. ಕೆಲವೆಡೆ ನೆರೆ ಸೃಷ್ಟಿಯಾಗಿದೆ. ನೆರೆ ಪರಿಹಾರವೂ ಸರಿಯಾಗಿ ವಿನಿಯೋಗವಾಗುತ್ತಿಲ್ಲ. ಸರ್ಕಾರವೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಬೆಳೆಹಾನಿ ಮತ್ತು ಬೈಂದೂರು, ಕಾರ್ಕಳ, ಕುಂದಾಪುರ, ಹೆಬ್ರಿ ತಾಲೂಕುಗಳ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲವೇನೋ, ಮಳೆಗಾಲ ಬಂತೆಂದರೇ ಈ ಭಾಗಗಳಲ್ಲಿ ಜನಜೀವನ ಹೈರಾಣಾಗುತ್ತದೆ. ಎಷ್ಟೋ ತಗ್ಗು ಪ್ರದೇಶಗಳಲ್ಲಿ ನೆರೆಯಿಂದ ಊರಿಗೆ ಊರೇ ಮುಳುಗಿ ಹೋಗುತ್ತವೆ. ನೂರಾರು ಕಡೆಗಳಲ್ಲಿ ಉಕ್ಕಿ ಹರಿಯುವ ಹಳ್ಳ, ತೊರೆಗಳಿಗೆ ಸುಸಜ್ಜಿತ ಕಾಲುಸಂಕವೇ ಇಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಶಾಸಕರು, ಅಧಿಕಾರಿಗಳು ಉಸ್ತುವಾರಿಗಳಿಗೆ ತಿಳಿಸಿರಲಿಕ್ಕಿಲ್ಲ. ಉಸ್ತುವಾರಿ ಸಚಿವರೂ ಈ ಬಗ್ಗೆ ಕೇಳಿ ಮಾಹಿತಿ ಪಡೆದಿರಲಿಕ್ಕಿಲ್ಲ. ಅಧಿಕಾರಿಗಳ ವೈಫಲ್ಯ, ಶಾಸಕರ ವೈಫಲ್ಯವನ್ನು ಸಮರ್ಥವಾಗಿ ಪ್ರಶ್ನಿಸಬೇಕಾಗಿರುವ ಕಾಂಗ್ರೆಸ್‌ ತಾನು ಮಾಡಬೇಕಿರುವ ಪ್ರಾಥಮಿಕ ಕೆಲಸವನ್ನೂ ಸರಿಯಾಗಿ ಮಾಡದೇ ಜಿಲ್ಲೆಯಲ್ಲಿ ಮೂಲೆಗೆ ಸರಿಯುತ್ತಿರುವುದು ವಿಷಾದನೀಯವೇ ಸರಿ.     

ಇನ್ನು, ಎಲ್ಲಾ ತಾಲೂಕುಗಳಲ್ಲಿ ಕೆಡಿಪಿ ರಚನೆಯಾಗಿದೆ. ಈವರೆಗೆ ಒಂದೇ ಒಂದು ಕೆಡಿಪಿ ಸಭೆ ಕರೆದಿಲ್ಲ. ಜಿಲ್ಲಾ ಮಟ್ಟದಲ್ಲಿಯೂ ಕೆಡಿಪಿ ಸಭೆಯಾಗಿಲ್ಲ. ಉಸ್ತುವಾರಿಗಳ ಮೇಲೆ ಸ್ವಪಕ್ಷೀಯರ ಮುನಿಸು ಇಲ್ಲಿ ಉಪಶಮನವಾಗುವ ಹಾಗೆ ಕಾಣಿಸುತ್ತಿಲ್ಲ, ಕಾಂಗ್ರೆಸ್‌ ಕೂಡ ಚೇತರಿಸಿಕೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ.   

-ಶ್ರೀರಾಜ್‌ ವಕ್ವಾಡಿ

Wednesday, July 17, 2024

ನಿರಾಸೆ ಮೂಡಿಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರ

 


ಬಹುಮತದಿಂದ ಗೆದ್ದು ಸಮರ್ಥ ಆಡಳಿತ ನೀಡುವಲ್ಲಿ ಸೋತ ಕಾಂಗ್ರೆಸ್‌ !

 ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ಗೆ ಅಧಿಕಾರ ನೀಡುವುದರ ಹಿಂದೆ ಮತದಾರರ ಸ್ಪಷ್ಟ ಸಂದೇಶವಿದ್ದಿತ್ತು. ಭ್ರಷ್ಟಾಚಾರ, ಸಾರ್ವಜನಿಕ ಸಂಘರ್ಷದಿಂದ ನಾಡಿನ ಜನತೆ ಮುಕ್ತಿಯನ್ನು ಬಯಸಿದ್ದರು. ಇನ್ನೂ ನಿಖರವಾಗಿ ಹೇಳಬೇಕು ಎಂದರೇ, ಸ್ವಾಸ್ಥ್ಯ ಸಮಾಜದ ಬೇಡಿಕೆ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯಬೇಕು ಎಂದು ಮತಹಾಕಿದವರದ್ದಾಗಿತ್ತು. 

ಕಾಂಗ್ರೆಸ್‌ ಬಗ್ಗೆ ಬಹಳ ದೊಡ್ಡ ನಿರೀಕ್ಷೆಯಿಟ್ಟುಕೊಂಡೇ ಜನರು ಅಧಿಕಾರಕ್ಕೇರಿಸಿದ್ದರು. ಅಧಿಕಾರ ವಹಿಸಿಕೊಂಡ ಒಂದು ವರ್ಷದೊಳಗೆ ಕಾಂಗ್ರೆಸ್‌ ಸರ್ಕಾರ ಎರಡು ದೊಡ್ಡ ಭ್ರಷ್ಟಾಚಾರದ ಪ್ರಕರಣಗಳನ್ನು ಎದುರಿಸುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಹಾಗೂ ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ವ್ಯಾಪಕ ಅಕ್ರಮಗಳ ಪ್ರಕರಣ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಬಹುಮತದಿಂದ ಅಧಿಕಾರಕ್ಕೇರಲೇಬೇಕೆಂಬ ದೃಷ್ಟಿಯಲ್ಲಿ ಬಿಜೆಪಿ ಈ ಎರಡೂ ಪ್ರಕರಣಗಳ ವಿರುದ್ಧ ದೊಡ್ಡ ಹೋರಾಟವನ್ನೇ ಆರಂಭಿಸಿದೆ. ವಿಧಾನಮಂಡಲ ಅಧಿವೇಶನದಲ್ಲೂ ಬಿಜೆಪಿ ಈ ಪ್ರಕರಣಗಳನ್ನೇ ಎತ್ತುತ್ತಿದೆ.

ಬಿಜೆಪಿ ಸರ್ಕಾರದ ವಿರುದ್ಧ  ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ವಸೂಲಾತಿ, ಬಿಟ್ ಕಾಯಿನ್ ಹಗರಣಗಳ ಬಗ್ಗೆ ತೀವ್ರ ಟೀಕಾಸ್ತ್ರ ಬಳಸಿ, ಚುನಾವಣೆಗೆ ಅವನ್ನೇ ಮುಖ್ಯಾಸ್ತ್ರಗಳನ್ನಾಗಿ ಬಳಸಿಕೊಂಡು ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಒಂದು ವರ್ಷದ ಅವಧಿ ಪೂರ್ಣಗೊಂಡ ಸಂದರ್ಭದಲ್ಲೇ ಈ ಎರಡು ಹಗರಣಗಳು ನುಂಗಲಾರದ ತುತ್ತಾಗಿ ಪರಿಣಮಿಸಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ರಾಜಕೀಯ ವಿದ್ಯಮಾನ ಅನೇಕ ಅನಿರೀಕ್ಷಿತ ಬೆಳವಣಿಗೆಗಳಿಗೆ ಸಾಕ್ಷಿಯಾದರೂ ಆಶ್ಚರ್ಯವೇನಿಲ್ಲ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಬಿಜೆಪಿ ವಿರೋಧ ಪಕ್ಷದಲ್ಲಿದ್ದು, ತನ್ನ ಪಾತ್ರವನ್ನು ತಾನು ಬಹಳ ಸಮರ್ಥವಾಗಿಯೇ ನಿಭಾಯಿಸುತ್ತಿದೆ ಎಂದರೇ ತಪ್ಪಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಹಿಡಿದಿದ್ದು ಇದ್ದರೇ, ಅದು ಜನಾದೇಶವನ್ನು ಮೀರಿಯೇ ಹೊರತು, ಬಹುಮತವನ್ನು ಪಡೆದು ಅಧಿಕಾರ ಹಿಡಿದ ಉದಾಹರಣೆಯೇ ಈ ರಾಜ್ಯದ ರಾಜಕೀಯ ಇತಿಹಾಸದಲ್ಲಿಲ್ಲ. ಏನೇ ಆದರೂ, ಅಧಿಕಾರ ಹಿಡಿದಾಗ ಬಿಜೆಪಿ ತನ್ನ ಆಡಳಿತ ರೂಪುರೇಷೆಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿತ್ತು. ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷದ ತಪ್ಪನ್ನು ಸಮರ್ಥವಾಗಿಯೇ ಟೀಕಿಸಿತ್ತು. ಈಗ ಪ್ರಬುದ್ಧತೆಯನ್ನು ಕಳೆದುಕೊಂಡಿರುವುದು ಬೇರೆ ವಿಷಯ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ರಾಜಕೀಯ ದೊಡ್ಡ ಅಭಿಯಾನವನ್ನೇ ಸೃಷ್ಟಿಸಿ ಚುನಾವಣೆಯನ್ನು ಗೆದ್ದ ಕಾಂಗ್ರೆಸ್‌ನ ಪರಿಸ್ಥಿತಿ ಈಗ ʼಬೇಲಿಯೇ ಎದ್ದು ಹೊಲೆ ಮೇಯ್ದಂತಾಗಿದೆʼ.

ರಾಜಕೀಯದ ಹಣೆಬರಹವೇ ಅಷ್ಟೇ ಬಿಡಿ. ಆಡಳಿತ ಪಕ್ಷದಲ್ಲಿರುವವರು ತಪ್ಪು ಮಾಡಿದಾಗ ವಿರೋಧ ಪಕ್ಷದಲ್ಲಿರುವವರು ಆಡಳಿತದ ತಪ್ಪನ್ನು ಎತ್ತಿಹಿಡಿದು ಹೋರಾಟ ಮಾಡುತ್ತಾರೆ. ವಿರೋಧ ಪಕ್ಷದಲ್ಲಿರುವವರಿಗೆ ಮತ್ತೆ ಅಧಿಕಾರದ ಯೋಗ ಮತದಾರ ಕಲ್ಪಿಸಿಕೊಡುತ್ತಾನೆ. ಚುನಾವಣೆಯಲ್ಲಿ ಗೆದ್ದು ಆಡಳಿತವನ್ನು ಹಿಡಿಯುವ ಪಕ್ಷ ಮತ್ತದೆ ತಪ್ಪನ್ನು ಮಾಡುತ್ತದೆ. ಹೀಗೆ ರಾಜಕೀಯದಲ್ಲಿ ಈ ಪದ್ಧತಿ ಸರ್ವೇಸಾಮಾನ್ಯ.

ಕಾಂಗ್ರೆಸ್‌ನ ಆಂತರಿಕ ಅಸಮಾಧಾನದ ಬೆಳವಣಿಗೆಗಳ ನಡುವೆ ಈ ಎರಡು ಪ್ರಕರಣಗಳು ಪ್ರತಿಪಕ್ಷಗಳಿಗೆ ಸುಲಭವಾಗಿ ಸಿಕ್ಕ ಸರಕಾಗಿವೆ. ಕಾಂಗ್ರೆಸ್‌ ಒಳಗಿನ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಎದ್ದ ಧ್ವನಿಗಳು ಕಾಂಗ್ರೆಸ್‌ ಆಡಳಿತದಲ್ಲಿ ಹಳಿತಪ್ಪುತ್ತಿರುವುದನ್ನು ಬಯಲುಗೊಳಿಸಿತು. ನಂತರ ಬೆಳಕಿಗೆ ಬಂದ ವಾಲ್ಮೀಕಿ ನಿಗಮದಲ್ಲಿ ನಡೆದ ಬಹುಕೋಟಿ ಭ್ರಷ್ಟಾಚಾರ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮಗಳು ವಿವಾದವಾಗಿವೆ. ಎಸ್‌ಸಿ ಹಾಗೂ ಎಸ್‌ಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್‌ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ ಎಂಬ ವಿಚಾರ ರಾಜ್ಯ ಮಾತ್ರವಲ್ಲದೇ, ರಾಷ್ಟ್ರಮಟ್ಟದಲ್ಲಿಯೂ ಚರ್ಚಗೆ ಗ್ರಾಸವಾಯಿತು. ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಕಾಂಗ್ರೆಸ್‌ ಮೇಲೆ ಮುಗಿಬಿದ್ದಿವೆ. ಕಾಂಗ್ರೆಸ್‌ ನೈತಿಕವಾಗಿ ಈ ಪ್ರಕರಣಗಳೆರಡನ್ನು ಎದುರಿಸಲಾಗದ ಸ್ಥಿತಿಯನ್ನು ಅನುಭವಿಸುತ್ತಿದೆ. ಕಾಂಗ್ರೆಸ್‌ ತನ್ನ ಆಡಳಿತವನ್ನು ಇನ್ನೂ ಅರ್ಥಮಾಡಿಕೊಂಡಿಲ್ಲ ಎಂಬಂತೆ ಕಾಣಿಸುತ್ತಿದೆ.

ಬೆಲೆ ಏರಿಕೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ ಕಾಂಗ್ರೆಸ್‌ ಸರ್ಕಾರವೇ ಪೆಟ್ರೋಲ್‌, ಡಿಸೇಲ್‌ ದರ ಏರಿಕೆ ಮಾಡಿತು. ಗ್ಯಾರಂಟಿ ಯೋಜನೆಗಳ ಅಸಮರ್ಥ ನಿರ್ವಹಣೆ ಹಾಗೂ ಬೆಲೆ ಏರಿಕೆಯನ್ನೇ ರಾಜಕೀಯಕ್ಕೆ ಬಳಸಿಕೊಳ್ಳಬೇಕು ಎಂದು ಕಾಯುತ್ತಿದ್ದ ಬಿಜೆಪಿ ಬೆಲೆ ಏರಿಕೆಯ ವಿರುದ್ಧ ಜನರಲ್ಲಿ ʼಕಾಂಗ್ರೆಸ್‌ ಜನವಿರೋಧಿ ಸರ್ಕಾರʼ ಎಂದು ಬಿಂಬಿಸುವಲ್ಲಿ ಯಶಸ್ವಿಯಾಯಿತು. ಇಂಧನ ಬೆಲೆ ಏರಿಕೆಯಿಂದ ಸರಕು ಸಾಗಾಟದ ಮೇಲೆ ನೇರ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್‌ ಸರ್ಕಾರಕ್ಕೆ ಈ ವಿಚಾರ ಗೊತ್ತಿಲ್ಲದ ವಿಚಾರವೇನಲ್ಲ. ಬೆಲೆ ಏರಿಕೆಯಿಂದ ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇವೆ ಎಂಬ ಸಮರ್ಥನೆಯನ್ನೂ ಕಾಂಗ್ರೆಸ್‌ ಮಾಡಿಕೊಂಡಿತ್ತು. ಅಧಿಕಾರದಲ್ಲಿ ಇಲ್ಲದೇ ಇರುವಾಗ ಇದೇ ವಿಚಾರವನ್ನು ವಿರೋಧಿಸುವುದಕ್ಕೆ ಬಳಸಿಕೊಂಡಿದ್ದ ಕಾಂಗ್ರೆಸ್‌, ಈಗ ತನ್ನನ್ನೇ ತಾನು ಸಮರ್ಥಿಸಿಕೊಂಡಿರುವುದನ್ನು ನೋಡಿರುವುದು ಹಾಸ್ಯಾಸ್ಪದವೇ ಸರಿ. ಇಂಧನ ಬೆಲೆ ಏರಿಕೆ ಅಗತ್ಯ ವಸ್ತುಗಳ ಬೆಲೆ ಏರಿಸುತ್ತದೆ. ಅದು ಬಡವರು ಮತ್ತು ಮಧ್ಯಮವರ್ಗದವರ ಜೇಬಿಗೆ ಕತ್ತರಿ ಹಾಕುತ್ತದೆ. ಅದರ ಪ್ರಮಾಣ ಎಷ್ಟು ಎನ್ನುವುದು ಅಂದಾಜಿಗೂ ಸಿಗುವುದಿಲ್ಲ. ಹಾಗಾಗಿ ಇದು ಸರ್ಕಾರದ ಸರಿಯಾದ ನಡೆಯಲ್ಲ ಎನ್ನುವುದು ಸ್ಪಷ್ಟ. ಇನ್ನು, ಈ ನಡುವೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ವರ್ಗಾವಣೆಯನ್ನು ‘ದಂಧೆ’ಯ ಆರೋಪವೂ ಬಹಳ ದೊಡ್ಡ ಮಟ್ಟದಲ್ಲೇ ಕೇಳಿಬಂತು.  

ಹೀಗೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಒಂದು ವರ್ಷದೊಳಗೆ ಈ ರೀತಿಯ ಆಡಳಿತವನ್ನು ನೀಡುತ್ತದೆ ಎಂಬ ಊಹೆ ಆ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಮತ ಹಾಕಿದವರಲ್ಲಿಯೂ ಇದ್ದಿರಲಿಕ್ಕಿಲ್ಲ. ಹೊಸ ಸರ್ಕಾರವೊಂದು ಅಧಿಕಾರ ಹಿಡಿದಾಗ ಆ ಪಕ್ಷದಲ್ಲಿ ಆಂತರಿಕವಾಗಿ ಆಗುವ ಕೆಲವು ಬದಲಾವಣೆಗಳು ಹಾಗೂ ಆಡಳಿತದಲ್ಲಿ ಕಾಣುವ ಕೆಲವು ನಡೆಗಳು ಆ ಸರ್ಕಾರದ ಭವಿಷ್ಯವನ್ನು ಹೇಳುತ್ತದೆ. ಕಾಂಗ್ರೆಸ್ ಸರ್ಕಾರದ ಈವರೆಗಿನ ಆಡಳಿತವನ್ನು ನೋಡಿದರೆ, ರಾಜ್ಯದ ಜನ ನಿರೀಕ್ಷಿಸಿದ ಮಟ್ಟದಲ್ಲಿ ಕಾಂಗ್ರೆಸ್‌ ನಡೆದುಕೊಂಡಿಲ್ಲ ಎಂದೇ ಕಾಣಿಸುತ್ತಿದೆ. ಸಮರ್ಥನೀಯವಲ್ಲದ ಆಡಳಿತವನ್ನೇ ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ ತೋರಿಸಿದೆ.

ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ದಂಧೆಯು ಸೇರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲಾ ಭ್ರಷ್ಟಾಚಾರಗಳ ತನಿಖೆ ನಡೆಸುತ್ತೇವೆ ಎಂದು ಹೇಳಿದ ಕಾಂಗ್ರೆಸ್‌ ಈಗ ಭ್ರಷ್ಟಾಚಾರದ ಆರೋಪದ ಸುಳಿಯಲ್ಲಿ ಸಿಲುಕಿರುವುದು ದುರಂತವೇ ಸರಿ. ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್‌ ಕುಮಾರ್‌ ಅವರ ನೇತೃತ್ವದಲ್ಲಿ ನಡೆದಿದೆ ಎನ್ನಲಾಗುತ್ತಿರುವ ನಕಲಿ ಪರಶುರಾಮ ಮೂರ್ತಿ ಹಾಗೂ ಥೀಂ ಪಾರ್ಕ್‌ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣಗಳ ಬಗ್ಗೆ ಸ್ಥಳೀಯ ಹೋರಾಟಗಾರರು ಧ್ವನಿ ಎತ್ತಿದ ಕಾರಣ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾಯಿತು, ಕಾಂಗ್ರೆಸ್‌ ಸರ್ಕಾರ ತನಗೆ ಈ ಬಗ್ಗೆ ಅರಿವೇ ಇಲ್ಲವೆಂಬಂತೆ ವರ್ತಿಸಿತು. ಕಾಟಾಚಾರಕ್ಕೆ ಈಗ ಸಿಒಡಿ ತನಿಖೆಗೆ ಒಪ್ಪಿಸಿದೆ. ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಗಮನವೂ ನೀಡಿಲ್ಲ. ಇವನ್ನೆಲ್ಲಾ ಅಸಮರ್ಥನೀಯ ನಡೆ ಎನ್ನದೆ ಮತ್ತೇನೆಂದು ಹೇಳಬೇಕು ? ಇಲಾಖೆಗಳು ನಿದ್ರೆಗೆ ಜಾರಿವೆ, ಪ್ರಗತಿ ಪರಿಶೀಲನಾ ಸಮಿತಿ ಕೆಡಿಪಿ ಇದೆಯೇ ಇಲ್ಲವೋ ಎನ್ನುವುದನ್ನು ನೋಡಬೇಕಿದೆ. ಇಷ್ಟಾಗ್ಯೂ ಕಾಂಗ್ರೆಸ್‌ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿರುವುದನ್ನು ನೋಡಿದರೇ, ಪ್ರಜಾಪ್ರಭುತ್ವದ ಅಣಕದಂತೆ ತೋರುತ್ತಿದೆ.

-ಶ್ರೀರಾಜ್‌ ವಕ್ವಾಡಿ   

 

Thursday, July 11, 2024

ಪ್ರಜಾಪ್ರಭುತ್ವದ ಧ್ವನಿಗೆ ಒಲಿಯಬಹುದೇ ʼರಾಗಾʼ !?

 ಮೋದಿಗೆ ಪ್ರಬಲ ʼಛಾಯಾ ಪಿಎಂʼ  

ಯಾವುದೇ ಸರ್ಕಾರದಲ್ಲಿ ಪ್ರತಿಪಕ್ಷಗಳು ನಿರ್ವಹಿಸಬೇಕಾದ ಬಹಳ ಮುಖ್ಯ ಪಾತ್ರವೆಂದರೆ ಪರಿಣಾಮಕಾರಿ ಹಾಗೂ ಬಲವಾದ ಟೀಕೆ. ಸರ್ಕಾರದ ಸುಗಮ ಕಾರ್ಯನಿರ್ವಹಣೆಯಲ್ಲಿ ವಿರೋಧ ಪಕ್ಷ ಪ್ರಮುಖ ಜವಾಬ್ದಾರಿಯುತ ಪಾತ್ರ ನಿಭಾಯಿಸುತ್ತದೆ. ಪ್ರಸ್ತುತ ಸರ್ಕಾರವನ್ನು ಅದರ ನೀತಿಗಳಿಗೆ ಹೊಣೆಗಾರರನ್ನಾಗಿ ಮಾಡಲು ಪ್ರತಿಪಕ್ಷ ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತದೆ. ದುರ್ಬಲ ಪ್ರತಿಪಕ್ಷವಿದ್ದರೆ, ಆಡಳಿತ ಪಕ್ಷ ಶಾಸಕಾಂಗದ ಮೇಲೆ ಮುಕ್ತ ಆಳ್ವಿಕೆಯನ್ನು ಹೊಂದಿರುತ್ತದೆ, ಇದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಸೂಕ್ತವಾದುದ್ದಲ್ಲ.  

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿ ಟಿಡಿಪಿ ಹಾಗೂ ಜೆಡಿಯು ಪಕ್ಷಗಳ ಸಹಾಯದಿಂದ ಸರ್ಕಾರ ರಚನೆ ಮಾಡಬೇಕಾಗಿ ಬಂತು. ಪ್ರಧಾನಿ ನೇತೃತ್ವದ ಬಿಜೆಪಿಗೆ ಇದು ದೊಡ್ಡ ಹಿನ್ನಡೆಯೇ ಸರಿ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತ ದೇಶದ ಜನಸ್ನೇಹಿಯಾಗಿರಲಿಲ್ಲ ಎನ್ನುವ ರಾಜಕೀಯ ಚರ್ಚೆಗಳಿವೆ. ಅದೇನೇ ಇರಲಿ ಬಿಡಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು, ಆಡಳಿತ ವೈಫಲ್ಯವನ್ನು ಒಳಗೊಂಡು ನಾಗರಿಕ ಸಂಘರ್ಷಗಳು ಈ ಸರ್ಕಾರದ ಆಡಳಿತ ಹೇಗಿತ್ತು ಎನ್ನುವುದಕ್ಕೆ ಹಿಡಿದ ಕನ್ನಡಿ. ಒಂದು ಸರ್ಕಾರದ ಆಡಳಿತದಲ್ಲಿ ನಡೆದ ಜನರ ಬದುಕು ಸ್ವಾಸ್ಥ್ಯ ಕಸಿದುಕೊಳ್ಳುವ ಬೆಳವಣಿಗೆಗಳು ಆಡಳಿತ ದಕ್ಷವಾಗಿ ಇರಲಿಲ್ಲ ಎನ್ನುವುದಕ್ಕೆ ಸಾಕ್ಷಿ. ಕಳೆದ ಎರಡು ಅವಧಿಗಳಲ್ಲಿ ದೇಶ ಅನೇಕ ಗಂಭೀರ ಸಮಸ್ಯೆಗಳನ್ನು, ಆಡಳಿತ ವಿರೋಧಿ ಅಲೆಗೆ ಸಾಕ್ಷಯಾಗಿದೆ ಎನ್ನುವುದನ್ನು ಇದಕ್ಕೂ ಹೆಚ್ಚು ನಿಖರವಾಗಿ ಹೇಳುವ ಅಗತ್ಯವಿಲ್ಲ ಅನ್ನಿಸುತ್ತದೆ.

ಕಾಂಗ್ರೆಸ್‌ನಂತಹ ಅತ್ಯಂತ ಸುದೀರ್ಘ ರಾಜಕೀಯ ಅನುಭವ ಹೊಂದಿದ ಪಕ್ಷದ ಅಸಮರ್ಥ ಸಂಘಟನೆಯ ನಡುವೆಯೂ ಬಿಜೆಪಿ ಫಲಿತಾಂಶದಲ್ಲಿ ಕುಸಿದು ಬಿದ್ದಿದೆ ಎಂದರೇ, ಜನ ಬದಲಾವಣೆಯನ್ನು ನಿರೀಕ್ಷಿಸಿದ್ದರು ಎಂದೇ ಅರ್ಥೈಸಿಕೊಳ್ಳಬೇಕು. ಇನ್ನು, ಕಳೆದ ಎರಡು ಲೋಕಸಭಾ ಚುನಾವಣೆಯ ಸುತ್ತಿನಲ್ಲಿ ಸದನದ ವಿಪಕ್ಷ ಸ್ಥಾನವನ್ನು ಹೊಂದುವುದಕ್ಕೆ ಬೇಕಾದ ಒಟ್ಟು ಕ್ಷೇತ್ರಗಳ ಪೈಕಿ ಶೇ. 10 ಷ್ಟನ್ನು ಪಡೆಯದೇ ಇರುವಷ್ಟು ಕಾಂಗ್ರೆಸ್ ದುರ್ಬಲವಾಗಿತ್ತು.‌ ಆದರೇ, ಕಾಂಗ್ರೆಸ್‌ ಈಗ ಮರಳಿ ಚೇತರಿಸಿಕೊಂಡಿದೆ. ಲೋಕಸಭಾ ಸದನದ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ.

ರಾಹುಲ್‌ ಗಾಂಧಿ ಮೊದಲ ಅಧಿವೇಶನದಲ್ಲೇ ಹುರುಪಿನಲ್ಲಿರುವುದನ್ನು ತೋರಿಸಿಕೊಟ್ಟರು. ವಿಪಕ್ಷ ನಾಯಕನಾಗಿ ರಾಹುಲ್‌ ಗಾಂಧಿ ಮಾತು, ತಿರುಗೇಟು, ಸರ್ಕಾರದ ವಿರುದ್ಧ ಅವರು ಮಾಡುತ್ತಿರುವ ಟೀಕೆ ಪ್ರಜಾಸತ್ತಾತ್ಮಕವಾದ ಅತ್ಯುನ್ನತ ಮಟ್ಟದ ವಾಗ್ವಾದವೇ ಸರಿ. ನಿರ್ದಿಷ್ಟ ವಿಚಾರಗಳಲ್ಲಿ ಅವರು ಕಳೆದ ಕೆಲವು ವರ್ಷಗಳಲ್ಲಿ ವೃದ್ಧಿಸಿಕೊಂಡ ಹಿಡಿತ ನಿಜಕ್ಕೂ ಶ್ಲಾಘನೀಯ. ರಾಹುಲ್‌ ತಮಗೆ ಮತ್ತು ತಮ್ಮ ಪಕ್ಷಕ್ಕೆ ದೊರಕಿರುವ ದೊಡ್ಡ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಈ ಅವಕಾಶವನ್ನು ಕಳೆದುಕೊಂಡಿದ್ದ ಕಾಂಗ್ರೆಸ್‌ ಮತ್ತಷ್ಟು ಗುಣಮುಖಗೊಳ್ಳುವುದಕ್ಕೆ ಬೇಕಾಗಿ ಔಷಧಿ ನೀಡುವ ಪ್ರಯತ್ನದ ಹಾದಿಯಲ್ಲಿಯೂ ರಾಹುಲ್ ಈ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುವುದರೊಂದಿಗೆ ಒಳ್ಳೆಯ ಆರಂಭವನ್ನೇ ಕಂಡುಕೊಂಡಿದ್ದಾರೆ.

ರಾಹುಲ್‌ ಗಾಂಧಿ ಇವತ್ತಿನ ರಾಜಕಾರಣಕ್ಕೆ ಯೋಗ್ಯನಲ್ಲ ಎಂದು ಯಾರು ಜರೆದಿದ್ದರೋ ಅವರೇ ರಾಹುಲ್‌ ಕೈ ಕುಲುಕುವ ಹಾಗೆ ಒಂದು ಸನ್ನಿವೇಶ ಎದುರಾಗಿದ್ದು ಈ ದೇಶ ಕಂಡ ರಾಜಕೀಯದ ಅಚ್ಚರಿ ಅದು. ರಾಹುಲ್‌ ಪಾಲಿಗೆ ರಾಜಕೀಯ ಹೆಚ್ಚು ಶ್ರಮ ಬೇಡಿದೆ. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಖಂಡಿತ ರಾಹುಲ್‌ಗೆ ಸಾಧ್ಯವಿಲ್ಲ. ಅದನ್ನು ಅವರು ಚೆನ್ನಾಗಿ ಅರಿತಂತೆ ಕಾಣಿಸುತ್ತಿದೆ. ಬಹುಶಃ ರಾಹುಲ್‌ ಗಾಂಧಿಗೆ ಕಳೆದ ಹತ್ತು ವರ್ಷಗಳಲ್ಲಿ ಅವರ ವಿರುದ್ಧವಿರುವ ಪಕ್ಷ ಸೃಷ್ಟಿಸಿದ ʼಗಂಭೀರ ರಾಜಕಾರಣಿ ಅಲ್ಲʼ ಎಂಬ ಹಣೆಪಟ್ಟಿಯನ್ನು ಕಳಚಿಟ್ಟಿದ್ದಾರೆ ಎನ್ನುವುದಕ್ಕೆ ಅವರು ಲೋಕಸಭೆಯ ಮೊದಲ ಅಧಿವೇಶನದಲ್ಲಿ ಮಾತನಾಡಿದ್ದೆ ಸಾಕ್ಷಿ.

ವಿಪಕ್ಷ ನಾಯಕನಾಗಿ ನೆರೆಪೀಡಿತ ಅಸ್ಸಾಂನ ನಿರಾಶ್ರಿತರ ಶಿಬಿರಕ್ಕೆ ಭೇಟಿ, ಹತ್ರಾಸ್‌ ಭೀಕರ ಕಾಲ್ತುಳಿತ ನಡೆದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸಂತ್ರಸ್ತರಿಗೆ ಸಾಂತ್ವಾನ, ಮಣಿಪುರದ ಸಂತ್ರಸತರೊಂದಿಗೆ ರಾಹುಲ್‌ ನಡೆಸಿದ ಸಂವಾದಗಳೆಲ್ಲವೂ ಒಬ್ಬ ಪ್ರಧಾನಿಯಾಗಿ ಮಾಡಬೇಕಾಗಿರುವ ಕೆಲಸ. ಲೋಕಸಭೆಯ ವಿಪಕ್ಷ ನಾಯಕನನ್ನು ʼಛಾಯಾ ಪಿಎಂʼ ಎಂದೂ ಕರೆಯುತ್ತಾರೆ. ರಾಹುಲ್‌ ʼಛಾಯಾ ಪಿಎಂʼ ಆಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅಂತಂದುಕೊಳ್ಳಬಹುದೇನೋ.   

ಬಹುಶಃ ಅವಕಾಶದ ಹುರುಪಿನಲ್ಲಿ ರಾಹುಲ್‌ ತಮ್ಮ ಸ್ಥಾನದ ಗೌರವವನ್ನು ಮರೆಯದೆ ನಡೆದುಕೊಳ್ಳಬೇಕಷ್ಟೆ. ಸದನದಲ್ಲಿ ವೈಯಕ್ತಿಕ ಪಕ್ಷವೊಂದು ವಿಪಕ್ಷ ಮಾನ್ಯತೆ ಪಡೆಯದೆ ಹೇಳಹೆಸರಿಲ್ಲದಂತಿದ್ದ ಎರಡು ಅವಧಿಯ ಬರವನ್ನು ಕಾಂಗ್ರೆಸ್‌ ಈಗ ನೀಗಿಸಿಕೊಂಡಿದೆ. ಇಲ್ಲಿನ ಜನರ ಧ್ವನಿಯಾಗಿ ನಿಂತು ಈ ದೇಶ ಇತ್ತೀಚಿನ ವರ್ಷಗಳಲ್ಲಿ ಸಂಸತ್ತು ಕಂಡ ಪ್ರಬಲ ವಿಪಕ್ಷ ನಾಯಕನಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಸದನದಲ್ಲಿ ಅವರು ವಿಷಯಪೂರ್ಣವಾಗಿ ಮಾತನಾಡಿರುವುದನ್ನು ನೋಡಿದರೆ ಸ್ಪಷ್ಟವಾಗುತ್ತದೆ.

ರಾಹುಲ್‌ ಮುಂದೆ ಇನ್ನೂ ಸುದೀರ್ಘವಾದ ದಾರಿ ಇದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತರುವುದಕ್ಕೆ ಹೊರಟಿರುವ ʼಒಂದು ದೇಶ, ಒಂದು ಚುನಾವಣೆʼಯಂತಹ ಯೋಜನೆಗಳಿಗೆ ಈಗಾಗಲೇ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ ʼಜಾರಿಗೊಳಿಸಬಹುದುʼ ಎಂಬ ಶಿಫಾರಸ್ಸು ನೀಡಿದೆ. ಕ್ಷೇತ್ರ ಪುನರ್‌ ವಿಂಗಡನೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಂತಹ ವಿಷಯಗಳನ್ನು ರಾಹುಲ್‌ ಸಮರ್ಥವಾಗಿ ಎದುರಿಸಬೇಕಾಗಿದೆ. ಇಂತಹ ವಿವಾದಾತ್ಮಕ ವಿಷಯಗಳನ್ನು ಸಂಸತ್ತಿನಲ್ಲಿ ತಾರ್ಕಿಕ ಅಂತ್ಯ ಕಾಣುವಂತೆ ಮಾಡುವಲ್ಲಿ ರಾಹುಲ್‌ ಪಾತ್ರ ನಿರ್ಣಾಯಕವಾಗಲಿದೆ. ರಾಹುಲ್‌ ಸಾಮರ್ಥ್ಯವನ್ನು ಪ್ರಶ್ನಿಸಿದವರು ಈಗ ರಾಹುಲ್‌ ಮಾತಿಗೆ ಸಂಸತ್ತಿನಲ್ಲಿ ಕಿವಿಕೊಡಲೇ ಬೇಕಿದೆ ಎನ್ನುವುದು ಹತ್ತು ವರ್ಷಗಳ ಬಳಿಕ ಈ ದೇಶದ ರಾಜಕೀಯದಲ್ಲಿ ಆದ ಅಚ್ಚರಿಯ ಬೆಳವಣಿಗೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಇದು ರಾಹುಲ್‌ ಗಾಂಧಿ ʼಪಪ್ಪು ಟು ಸಮರ್ಥʼ ಆದ ಬಗೆ. ಸರ್ಕಾರದ ನಡೆಯನ್ನು ಟೀಕೆ ಮಾಡುವುದನ್ನು ದೇಶದ್ರೋಹ ಎಂದು ಹೇಳುವ ಸ್ಥಿತಿಯ ಬೌದ್ಧಿಕ ಬಡತನವನ್ನು ಈ ದೇಶ ಕಂಡ ಕಾಲದಲ್ಲಿ ನಾವೆಲ್ಲಾ ಬದುಕಿದ್ದೇವೆ. ಒಬ್ಬ ಪ್ರಧಾನಿಗೆ ಈ ದೇಶದ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಾಮಾಣಿಕ ಬಯಕೆ ಇಲ್ಲವೇ ಇಲ್ಲ ಎನ್ನುವುದನ್ನು ಹೇಳುವಷ್ಟು ಯಾರಾದರು ಎದೆಗಾರಿಕೆ ವೃದ್ಧಿಸಿಕೊಂಡಿದ್ದಾರೆ ಎನ್ನುವುದಿದ್ದರೇ ಅದು ರಾಹುಲ್‌ ಗಾಂಧಿ ಮಾತ್ರ. ರಾಹುಲ್‌ ಅವರನ್ನು ಸುಖಾಸುಮ್ಮನೆ ಹೊಗುಳುವ ಅಗತ್ಯವೇನಿಲ್ಲ. ಆದರೇ, ಪ್ರಜಾಪ್ರಭುತ್ವ ದೇಶದಲ್ಲಿ ಒಬ್ಬ ವಿಪಕ್ಷ ನಾಯಕ ಇಲ್ಲಿನ ಸಮಸ್ಯೆಗಳನ್ನು ಧ್ವನಿಸುತ್ತಿರುವಾಗ ಅದನ್ನು ಬೆಂಬಲಿಸುವುದು ಎಲ್ಲಾ ನಾಗರಿಕನ ಕರ್ತವ್ಯವೂ ಹೌದು. ಸರ್ಕಾರ ತಪ್ಪು ದಾರಿಯಲ್ಲಿ ನಡೆಯದಂತೆ ನೋಡಿಕೊಳ್ಳುವುದಕ್ಕೆ ವಿಪಕ್ಷ ನಾಯಕನಿಗೆ ಎಷ್ಟು ಜವಾಬ್ದಾರಿ ಇದೆಯೋ ಇಲ್ಲಿನ ನಾಗರಿಕರಿಗೂ ಅಷ್ಟೇ ಜವಾಬ್ದಾರಿ ಇದೆ. ಹಾಗಿದ್ದಾಗ ಇಲ್ಲಿನ ಸಮಸ್ಯೆಗಳ ಬಗ್ಗೆ ವಿಪಕ್ಷ ನಾಯಕನೊಬ್ಬ ಧ್ವನಿ ಎತ್ತುತ್ತಿರುವಾಗ ನಾಗರಿಕರು ಬೆಂಬಲಿಸದೇ ಉಳಿದರೆ ?  

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ತನ್ನ ರಾಜಕೀಯ ತಂತ್ರಗಾರಿಕೆಯಲ್ಲಿ ಸೋತಿರಬಹುದು. ಆದರೇ, ತಾತ್ವಿಕ ನೆಲೆಗಟ್ಟಿನಲ್ಲಿ, ವೈಚಾರಿಕ ಚಿಂತನೆಗಳೊಂದಿಗೆ ರಾಹುಲ್ ನಡೆಯುತ್ತಿರುವ ದಾರಿ ಈ ದೇಶದ ಗೆಲುವಿನ ದಾರಿ ಎಂಬ ಅಭಿಪ್ರಾಯವನ್ನು ಅಲ್ಲಗಳೆಯುವಂತಿಲ್ಲ. ಜನತಾ ಪಕ್ಷದ ಸರ್ಕಾರದ ಎದುರು ಕಾಂಗ್ರೆಸ್‌ನ ಸಿ.ಎಂ. ಸ್ಟೀಫನ್‌, ಕಾಂಗ್ರೆಸ್‌ ಸರ್ಕಾರದ ಎದುರು ಬಿಜೆಪಿಯ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಸುಷ್ಮಾ ಸ್ವರಾಜ್‌ ನಂತವರು ಸಮರ್ಥವಾಗಿ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದನ್ನು ನೋಡಿದ್ದೇವೆ, ಓದಿ/ಕೇಳಿ ತಿಳಿದುಕೊಂಡಿದ್ದೇವೆ. ಅಂತಹ ಸಮರ್ಥ ವಿಪಕ್ಷ ನಾಯಕರ ಸಾಲಿಗೆ ರಾಹುಲ್‌ ಸೇರಲಿ ಎನ್ನುವುದೇ ಈ ದೇಶದ ನಾಗರಿಕರ ಆಶಯ. ಕಾಂಗ್ರೆಸ್‌ ಪಕ್ಷದ ಆಶಯವೂ ಅದೇ ಆಗಿದೆ ಅಂತನ್ನಿಸುತ್ತದೆ.  

-ಶ್ರೀರಾಜ್‌ ವಕ್ವಾಡಿ   

Thursday, July 4, 2024

ಸಾರ್ವಜನಿಕ ಚಿಂತನೆಯೊಂದಿಗೆ ಬದುಕಬೇಕಾದ ಮಾಧ್ಯಮಗಳ ಅಪಾಯಕಾರಿ ಸ್ಥಿತಿ !

 

ಸತ್ಯ, ಸುಳ್ಳು, ಹೆಸರಿಲ್ಲದ ಪತ್ರಕರ್ತ ಮತ್ತು ಸಾಮಾಜಿಕ ಜವಾಬ್ದಾರಿ  

ಪ್ರತಿ ವರ್ಷ ಜುಲೈ 1 ರಂದು ಕನ್ನಡ ಪತ್ರಿಕಾ ದಿನಾಚರಣೆ. ಈ ವರ್ಷವೂ ಆ ದಿನ ಆಗಿ ಹೋಗಿದೆ. ಪತ್ರಕರ್ತರೆಲ್ಲಾ ಪರಸ್ಪರ ಶುಭಾಶಯ ಕೋರುವುದು, ವಾಟ್ಸ್ಯಾಪ್‌ ಸ್ಟೇಟಸ್‌ ಇಡುವುದು. ಹೆಚ್ಚೆಂದರೇ ಒಂದು ಸಭಾ ಕಾರ್ಯಕ್ರಮ ಮಾಡಿ ಹಿರಿಯ ಪತ್ರಕರ್ತರೊಬ್ಬರಿಗೆ ಶಾಲು-ಹಾರ ಹಾಕಿ, ಒಂದು ಹರಿವಾಣ ತುಂಬಾ ಹಣ್ಣುಗಳನ್ನು ಹಾಕಿ ಸನ್ಮಾನದ ಹೆಸರಿನಲ್ಲಿ ಕೊಟ್ಟುಬಿಟ್ಟರೇ ವರ್ಷದ ಪತ್ರಿಕಾ ದಿನಾಚರಣೆ ಮುಗಿಯಿತು.

ಪತ್ರಿಕೋದ್ಯಮ ಹಿಂದೆ ಇದ್ದ ಹಾಗೆ ಉಳಿದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸಾರ್ವಜನಿಕ ಸೇವೆ, ಜವಾಬ್ದಾರಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಪತ್ರಿಕೋದ್ಯಮ ಇಂದು ವ್ಯಾಪಾರವಾಗಿ ಬದಲಾಗಿದೆ. ಪತ್ರಿಕೋದ್ಯಮ ಪತ್ರಕರ್ತನೋರ್ವನ ಪಾಲಿಗೆ ಅದು ನಿಜಕ್ಕೂ ಪಾಕಶಾಲೆ. ಇಲ್ಲಿ, ರುಚಿ ಸವಿಯುವಷ್ಟು ಪುರಸೊತ್ತಿಲ್ಲದೆ ಮಾಡಿದ್ದನ್ನು ಬಳಸಿಬಿಡುವ ತುರ್ತು ಜವಾಬ್ದಾರಿ. ಚುರುಕು, ತಾಳ್ಮೆ, ಜಾಣ್ಮೆ ಎಲ್ಲವೂ ಬೇಕು. ಪತ್ರಿಕೋದ್ಯಮ ಈಗ ಮೊದಲಿನಂತಿಲ್ಲ ಕಾಲಕ್ಕೆ ಅನುಸಾರವಾಗಿ ಅದು ಬದಲಾಗುತ್ತಾ ಬಂತು‌. ಅದು ಎಲ್ಲಿಯ ತನಕ ಬಂತು ಅಂದರೇ, ಒಬ್ಬ ಹೂಡಿಕೆದಾರ ಒಂದು ಸಿದ್ದಾಂತವನ್ನು ಖರೀದಿಸಿ ಅದರಡಿಯಲ್ಲಿ ಹೆಚ್.ಆರ್(ಹ್ಯೂಮನ್‌ ರಿಸೋರ್ಸ್) ಪ್ರಕ್ರಿಯೆಗಳ ಮೂಲಕ ತಮಗೊಪ್ಪುವ ಪತ್ರಕರ್ತರನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿಯವರೆಗೆ.

ಒಳಗೆ ಸೇರಿದ ಮೇಲೆ ಅಲ್ಲಿನ ಮೇಲಾಟಗಳು, ರಾಜಕೀಯ ಒತ್ತಡ, ಸತ್ಯವನ್ನು ಹಿಚುಕಿ ಸುಳ್ಳನ್ನು ವೈಭವೀಕರಿಸುವ ಈಗಿನ ಕೆಲವು ಮಾಧ್ಯಮಗಳ ಧೋರಣೆಯನ್ನು ಸಹಿಸಿಕೊಳ್ಳಲಾಗದೇ 'ಸಾಕಪ್ಪ, ಈ ಪತ್ರಿಕೋದ್ಯಮ ವೃತ್ತಿ ಸಹವಾಸವೇ ಸಾಕು' ಅಂತ  ಹೊರಗೆ ಬಂದ ಪರ್ತಕರ್ತರ ಪಟ್ಟಿ ದೊಡ್ಡದಿದೆ‌. ಆ ಪಟ್ಟಿಯಲ್ಲಿ ಆಪ್ತ ಬಳಗದಲ್ಲಿರುವವರೆ ಹಲವರಿದ್ದಾರೆ.  

ಹೌದು, ನನ್ನ ಗೆಳೆಯನೊಬ್ಬ ಮೂರು ವರ್ಷಗಳ ಹಿಂದೆ ಒಂದು ಖಾಸಗಿ ಸುದ್ದಿ ಮಾಧ್ಯಮಕ್ಕೆ ವರದಿಗಾರನಾಗಿ ಸೇರ್ಪಡೆಗೊಂಡಿದ್ದ. ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದ. ಮತ್ತವನ ಪ್ರತಿಭೆಯನ್ನು ಆ ಸಂಸ್ಥೆ ಚೆನ್ನಾಗಿಯೇ ದುಡಿಸಿಕೊಂಡಿತ್ತು. ಅದು ಅವನಿಗೆ ದೊಡ್ಡ ಅನುಭವವನ್ನೇ ಕೊಟ್ಟಿತು ಬಿಡಿ. ಸೇರಿದ ಕೆಲವೇ ಕೆಲವು ತಿಂಗಳಲ್ಲಿ 'ಇಲ್ಲಿ ಜೀವನ ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಕೆಲಸದ ಒತ್ತಡ, ಪತ್ರಿಕೋದ್ಯಮ ಸಾಕೆನ್ನಿಸಿದೆ‌. ಹೊರಗೆ ಬರಲು ನಿರ್ಧರಿಸಿದ್ದೇನೆ, ಇನ್ಮೇಲೆ ಪತ್ರಿಕೋದ್ಯಮವನ್ನು ಪ್ರವೃತ್ತಿಯಾಗಿ ಸ್ವೀಕರಿಸುತ್ತೇನೆ' ಅಂತಂದ. ಮಾಧ್ಯಮ ಲೋಕದಲ್ಲಿ ಈಗಷ್ಟೇ ಹಸಿ ಹೆಜ್ಜೆಗಳನ್ನು ಇಡಲಾರಂಭಿಸಿದವ ಹೀಗೆ ಹೇಳ್ತಿದ್ದಾನಲ್ಲಾ ಅಂತ ಆಶ್ಚರ್ಯ ಆಯ್ತು.  ಮತ್ತವನ ಆ ಕ್ಷಣದ ಧೈರ್ಯ ಇಷ್ಟ ಆಯ್ತು. ಕೆಲದಿನಗಳ ನಂತರ ತಾನು ಹೇಳಿದಂತೆಯೇ ಪ್ರವೃತ್ತಿಗಾಗಿ ಸ್ವತಂತ್ರ ಪತ್ರಿಕೋದ್ಯಮವನ್ನು ಆರಂಭಿಸಿದ್ದ. ಪತ್ರಿಕೋದ್ಯಮದಲ್ಲಿ ಸತ್ಯ ಶೋಧಿಸುವ ಕೆಲಸ ನಿರಂತರವಾಗಲಿ. ಯಾವುದೇ ಸಂಘಟನೆ, ಪಕ್ಷ, ಸಿದ್ದಾಂತಕ್ಕೆ ಬಲಿಯಾಗದೇ ಬೆಳೆಯಲಿ‌. ಮತ್ತೆ ವೃತ್ತಿ ಪತ್ರಿಕೋದ್ಯಮದತ್ತ ಅದು ಕರೆತರಲಿ ಎಂದು ಆಶಿಸಿದ್ದೆ. ಹಾಗೆಯೇ ಆಗಿದೆ. ಎಲ್ಲಿಂದ ಹೊರಬಂದಿದ್ದಾನೋ ಅಲ್ಲಿಗೆ ಮರಳಿ ಸೇರ್ಪಡೆಗೊಂಡಿದ್ದಾನೆ. ಅಂದರೇ ಆತನ ಅಗತ್ಯ ಆ ಮಾಧ್ಯಮಕ್ಕೂ ಇತ್ತು ಎಂದು ಅರ್ಥೈಸಿಕೊಳ್ಳಬಹುದೇನೋ.

ದುಡಿಯುವ, ಪ್ರಶ್ನೆ ಮಾಡುವ, ಸಾರ್ವಜನಿಕವಾಗಿ ಚಿಂತಿಸುವ ಭರವಸೆಗಳನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿ ಹೆಚ್ಚಿನ ಮಾಧ್ಯಮಗಳಿಗೆ ಬಂದಿದೆ. ಸಾರ್ವಜನಿಕ ಚಿಂತನೆಯೊಂದಿಗೆ ಬದುಕುತ್ತಾ ಪತ್ರಿಕೋದ್ಯಮದಲ್ಲಿ ತೊಡಗುವುದಕ್ಕೆ ಮುಂದಾಗುವವನ ಪ್ರಸ್ತುತಿ ಯಾವ ಅನುಭವಿ ಪತ್ರಕರ್ತನಿಗೂ ಕಡಿಮೆ ಇರುವುದಿಲ್ಲ ಎನ್ನುವುದು ಉತ್ಪ್ರೇಕ್ಷೆಯಲ್ಲ. ಯಾವುದೇ ನಿಲುವುಗಳಿಗೆ ಬಲಿಯಾಗದೇ ಒಳ್ಳೆಯ ಪರ್ತಕರ್ತನಾಗಬೇಕೆಂಬ ಕನಸು ಕನಸಾಗಿಯೇ ಸಾಯಿಸಿಕೊಂಡು ಬದುಕುತ್ತಿರುವ ಯುವ ಪತ್ರಕರ್ತರು ಸಾಕಷ್ಟು ಮಂದಿ ಇದ್ದಾರೆ. ಹಿರಿಯ ಪತ್ರಕರ್ತರ ಸಾಲೂ ದೊಡ್ಡದಿದೆ. ಹೂಡಿಕೆದಾರನೋರ್ವನ ʼಅಡಿಯಾಳು ಮಾಧ್ಯಮʼಗಳ ಕಾರಣದಿಂದ ಸತ್ಯವನ್ನು ಸತ್ಯವೆಂದು, ಸುಳ್ಳನ್ನು ಸುಳ್ಳೆಂದು ಹೇಳುವುದಕ್ಕಾಗದೇ ಬದುಕನ್ನು ನಿಭಾಯಿಸುವುದಕ್ಕೋಸ್ಕರ ದುಡಿಯುತ್ತಿದ್ದಾರೆ.

ಜುಲೈ 1 ಕನ್ನಡ ಪತ್ರಿಕೋದ್ಯಮ ದಿನಾಚರಣೆ. ಹೀಗೆ ಆಯಾಯ ಭಾಷೆಗಳಲ್ಲಿ ಒಂದೊಂದು ದಿನ ಆಚರಣೆಗೆ ನಿಗದಿಯಾಗಿರಬಹುದು. ಪತ್ರಿಕಾ ಸ್ವಾತಂತ್ರ್ಯ ದಿನ, ರಾಷ್ಟ್ರೀಯ ಪತ್ರಿಕಾ ದಿನ… ಹೀಗೆ ಇಂತಹ ದಿನಗಳು, ಆಚರಣೆಗಳು ಎಷ್ಟು ಬಂದರೇನು, ಆ ಆಚರಣೆಯ ಮೂಲ ಉದ್ದೇಶ ಮತ್ತು ಅದರಿಂದ ತಿಳಿಯಬೇಕಾದ ಮೂಲ ಆದರ್ಶವನ್ನು ಮೂಲೆಗೆ ಸರಿಸಿ ಪತ್ರಿಕೋದ್ಯಮ ನಡೆಯುತ್ತಿರುವಾಗ ? ಹೀಗೆಲ್ಲಾ ಬರಿದೇ ಆಚರಣೆ ಕಾಣುವ ದಿನಗಳು ನಿರರ್ಥಕ ಎಂದೇ ಕಾಣಿಸುತ್ತವೆ.

ಪತ್ರಕರ್ತ ಮಾಧ್ಯಮದಲ್ಲಿ ಸರಿಯಾದದ್ದನ್ನು, ನಿಖರವಾದದ್ದನ್ನು ನಿಷ್ಠುರವಾಗಿಯೇ ಹೇಳುವ ಸ್ವತಂತ್ರನಾಗಿರಬೇಕು ಎಂಬ ಮಾತಿದೆ. ಹಾಗೆಂದ ಮಾತ್ರಕ್ಕೆ ಪತ್ರಕರ್ತ ಸರ್ವಸ್ವತಂತ್ರನಾಗಿ ಇರುವುದಕ್ಕೆ ಸಾಧ್ಯವಿಲ್ಲ. ಆತನಿಗೂ ಒಂದು ಚೌಕಟ್ಟಿದೆ. ಆ ವ್ಯಾಪ್ತಿಯೊಳಗೆ ಆತ ಸಾರ್ವಜನಿಕವಾಗಿ ಜವಾಬ್ದಾರನಾಗಿರಬೇಕಾಗುತ್ತದೆ. ಈ ಸಹಜ ಚೌಕಟ್ಟನ್ನು ಮೀರಿ ಸೃಷ್ಟಿಸಿರುವ ʼಹೂಡಿಕೆ ಮೂಲದ ನಿಯಮಗಳುʼ ಇಂದು ಪತ್ರಿಕೋದ್ಯಮ ಅಸಹಜವಾಗಿ ನಡೆಯುವಂತಹ ವಾತಾವರಣವನ್ನು ಸೃಷ್ಟಿ ಮಾಡಿವೆ ಎಂದರೇ ತಪ್ಪಿಲ್ಲ. ಪತ್ರಿಕೋದ್ಯಮ ಇಂದು ಒಂದು ವಿಶ್ವಾಸಾರ್ಹ ಸುದ್ದಿಗಳನ್ನು ಬಿತ್ತರಿಸುವುದಕ್ಕೆ ಸಾಧ್ಯವಾಗದೇ ಇರುವುದಕ್ಕೆ ಮೂಲ ಕಾರಣವೇ ʼಹೂಡಿಕೆಯ ನಿಯಂತ್ರಣ ಹೇರಿಕೆʼ.

ಇನ್ನು, ಪತ್ರಿಕೋದ್ಯಮದ ಪ್ರಧಾನ ಮೂಲ ಜಾಹೀರಾತು. ಇವುಗಳಲ್ಲಿ ಸರ್ಕಾರಿ ಜಾಹೀರಾತುಗಳು ಹೆಚ್ಚು. ಇನ್ನು, ಪ್ರಭಾವಿಗಳು, ಉಳ್ಳವರು ಹಾಗೂ ಸರ್ಕಾರೇತರ ಸಂಸ್ಥೆಗಳು ಕೂಡ ಪ್ರಚಾರಕ್ಕಾಗಿ ಹೆಚ್ಚಾಗಿ ಮಾಧ್ಯಮಗಳನ್ನೇ ಅವಲಂಭಿಸಿವೆ. ಹಾಗಾಗಿ ಮಾಧ್ಯಮಗಳಿಗೆ ಜಾಹೀರಾತುಗಳನ್ನು ನೀಡುವ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ತಮಗೆ ಸಂಬಂಧಿಸಿದ ಸುದ್ದಿಗಳ ಮೇಲೆ ಹೆಚ್ಚು ನಿಯಂತ್ರಣ ಹೊಂದಿವೆ. ತಮಗೆ ಅನೂಕಲಕರವಲ್ಲದ ಸುದ್ದಿಗಳಿಗಾಗಿ ಜಾಹೀರಾತುಗಳನ್ನು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಜಾಹೀರಾತುಗಳನ್ನು ನಿಲ್ಲಿಸಬಹುದು. ʼಉಪಕಾರ ಸ್ಮರಣೆʼಯ ದೃಷ್ಟಿಯಲ್ಲಿ ಮಾಧ್ಯಮಗಳು ಜಾಹೀರಾತು ನೀಡುವವರಿಗೆ ಅನೂಕಲಕರವಾಗಿ ಇರವ ಹಾಗೆ ಸುದ್ದಿಗಳನ್ನು ಬಿತ್ತರಿಸುವ ಅನಿವಾರ್ಯತೆಯಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಅಂದರೇ ಜಾಹೀರಾತಿನ ಮೂಲಕ ಮಾಧ್ಯಮಗಳನ್ನು ಅಥವಾ ಪತ್ರಿಕೋದ್ಯಮವನ್ನು ʼಕೊಳ್ಳುವ ಸಂಸ್ಕೃತಿʼ ಬಂದಿದೆ. ಈ ಮೂಲಕ ಸುದ್ದಿ ಬಿತ್ತರಿಸುವ ಮಾಧ್ಯಮಗಳ ಮೇಲೆ, ಪತ್ರಕರ್ತರ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಬಹಳ ಸುಲಭ. ಪತ್ರಿಕೋದ್ಯಮದಲ್ಲಿ ಕಾಲಾಂತರದಲ್ಲಿ ಒಂದು ರೀತಿಯ ಸಂಪ್ರದಾಯದಂತೆಯೇ ಆಗಿ ಹೋದ ಈ ʼಕೊಳ್ಳುವ ಪದ್ಧತಿʼ ಮಾಧ್ಯಮಗಳಲ್ಲಿ ದುಡಿಯುವವರ ಹೊಟ್ಟೆ ತುಂಬಿಸಬಹುದು, ಮಾಧ್ಯಮಗಳನ್ನು ಯಾವುದೇ ಆರ್ಥಿಕ ಬಿಕ್ಕಟ್ಟಿಲ್ಲದೇ ಮುನ್ನಡೆಸಬಹುದು ಆದರೇ, ಇದು ಸತ್ಯವನ್ನು ಸುಳ್ಳಾಗಿಸುವ ಅಕ್ರಮ ದಾರಿ ಆಗಿರುವುದರಿಂದ ಇದು ಸಮಾಜಕ್ಕೆ ಹೆಚ್ಚು ಅಪಾಯಕಾರಿಯೇ ಆಗಿದೆ.

ಲಕ್ಷ, ಕೋಟಿ ಲೆಕ್ಕಗಳಲ್ಲಿ ಬರುವ ಒಂದು ಜಾಹೀರಾತುಗಳಿಗೆ ಅಸಂಖ್ಯ ಸುಳ್ಳುಗಳನ್ನು ಮಾಧ್ಯಮದ ಮೂಲಕ ಮುಚ್ಚುವ ಸುಲಭ ಮಾರ್ಗ ದಕ್ಕಿ ಬಿಟ್ಟಿದೆ. ಈ ಮೂಲಕ ಸುದ್ದಿ ಮಾಧ್ಯಮಗಳನ್ನು ಮೇಲೆ ಜಾಹೀರಾತು ನೀಡುವ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಹಿಡಿತ ಸಾಧಿಸಿವೆ. ಮಾಧ್ಯಮ ಸಂಸ್ಥೆ ಈ ಜಾಹೀರಾತಿನ ಕಾರಣಕ್ಕಾಗಿ ಹೇರುವ  ನಿರ್ಬಂಧಗಳನ್ನು ಅಲ್ಲಿ ದುಡಿಯುವ ಹೆಸರಿಲ್ಲದ ಪತ್ರಕರ್ತ ಪಾಲಿಸಲೇಬೇಕಾದ ಅನಿವಾರ್ಯತೆ ಇದೆ. ನಿಜಕ್ಕೂ ಇಂತಹ ವಾತಾವರಣದಲ್ಲಿ ಸಂಕಟ ಅನುಭವಿಸುತ್ತಿರುವವರು ಸತ್ಯವನ್ನು ಹೇಳಲು ಬಯಸುವ, ತಪ್ಪನ್ನು ಮುಲಾಜಿಲ್ಲದೇ ಪ್ರಶ್ನಿಸಲು ಬಯಸುವ ಹೆಸರಿಲ್ಲದ ಪತ್ರಕರ್ತರು.

ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ ವರದಿ ಇತ್ತೀಚೆಗಷ್ಟೇ ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಭಾರತ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಒಳಪಡಿಸಿದ 180 ದೇಶಗಳ ಪೈಕಿ 135 ದೇಶಗಳಲ್ಲಿ ಮಾಧ್ಯಮಗಳನ್ನು ಸರ್ಕಾರಗಳು ಅಥವಾ ಉದ್ಯಮ ಸಂಸ್ಥೆಗಳು ನಿಯಂತ್ರಿಸುತ್ತಿವೆ ಎಂದು ವರದಿ ಹೇಳಿದೆ. ಇವುಗಳಲ್ಲಿ 36 ದೇಶಗಳು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿವೆ ಎಂದೂ ಹೇಳಿದ್ದು, ಆ ಪೈಕಿ ಭಾರತವೂ ಒಂದು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಮಾಧ್ಯಮಗಳು ಅಪಾಯಕಾರಿ ಸ್ಥಿತಿಯಲ್ಲಿವೆ ಎನ್ನುವುದನ್ನು ಇನ್ನೂ ಹೆಚ್ಚು ನಿಖರವಾಗಿ ಹೇಳುವುದಾದರೇ, ಸಮಾಜ ಅಪಾಯದಲ್ಲಿದೆ.       

 -ಶ್ರೀರಾಜ್‌ ವಕ್ವಾಡಿ  

  

Thursday, June 27, 2024

ನೀಟ್‌ ಅಕ್ರಮ ಬಯಲಿಗೆಳೆದ ʼಪರೀಕ್ಷಾ ಮಾಫಿಯಾʼ ! | ದೇಶದಲ್ಲಿ ಹಳಿತಪ್ಪಿದ ಪರೀಕ್ಷಾ ವ್ಯವಸ್ಥೆ

 ಪರೀಕ್ಷಾ ಅಕ್ರಮಗಳನ್ನು ಒಬ್ಬರು ಇಬ್ಬರಿಂದ ನಡೆಸುವುದಕ್ಕೆ ಸಾಧ್ಯವೇ ? ಇದಕ್ಕೆ ಒಂದು ದೊಡ್ಡ ವ್ಯವಸ್ಥಿತ ಜಾಲವೇ ಇರಬಹುದು. ಪರೀಕ್ಷೆಗಳ ಮೂಲ ಉದ್ದೇಶವನ್ನೇ ಬದಿಗೆ ಸರಿಸುವಂತೆ ಮಾಡುವ ಈ ʼಪರೀಕ್ಷಾ ಮಾಫಿಯಾʼ ದೇಶದಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ಈ ನೀಟ್‌ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು ಬಯಲಿಗೆಳೆದಿವೆ. 

ಸ್ಪರ್ಧಾತ್ಮಕ/ಅರ್ಹತಾ ಪರೀಕ್ಷೆಗಳ ಅಸಲಿತನ ಈಗ ಬಯಲಾಗಿದೆ. ರಾಜಾರೋಷವಾಗಿ ಇಂತಹ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುವುದು ತೀರಾ ಸಾಮಾನ್ಯ ಎಂಬಂತಾಗಿದೆ. ನೀಟ್‌ ಪರೀಕ್ಷೆಯಲ್ಲಿ ನಡೆದ ಅಕ್ರಮಗಳಿಂದ ಹಾಗೂ 2024ರ ನೆಟ್-ಜೆಆರ್‌ಎಫ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆಯಲ್ಲಿ ರದ್ದು ಆಗಿರುವ ಕಾರಣಕ್ಕೆ ಮತ್ತೆ ಈ ವಿಚಾರ ಮೇಲೆ ಬಂದಿದೆ. ಕಳೆದ ಎಂಟು ವರ್ಷಗಳಲ್ಲಿ ಹೀಗೆ ದೇಶದಾದ್ಯಂತ 45ಕ್ಕೂ ಹೆಚ್ಚು ಪರೀಕ್ಷೆಗಳು ರದ್ದಾಗಿವೆ ಎಂಬ ವರದಿ ಕೂಡ ಇದೆ. ಈ ಸ್ಪರ್ಧಾತ್ಮಕ/ಅರ್ಹತಾ ಹಾಗೂ ನೇಮಕಾತಿ ಪರೀಕ್ಷೆಗಳು ಅಂತಂದರೆ ಸಾಕು, ʼಅಲ್ಲೆಲ್ಲಾ ಪ್ರಭಾವ ನಡೆಯುತ್ತದೆ, ರಾಜಕೀಯ ನಡೆಯುತ್ತದೆʼ ಎಂದು ಸಾಮಾನ್ಯರ ಬಾಯಿಯಲ್ಲಿ ಬರುವ ಮಾತುಗಳೇನು ಹುಸಿಯಾಗಿ ಉಳಿದಿಲ್ಲ. ಅದು ಆ ಮಾತಿನಷ್ಟೇ ಸತ್ಯವೂ ಕೂಡ.

ಇಂತಹ ಪರೀಕ್ಷೆಗಳಲ್ಲಿ ರಾಜಾರೋಷವಾಗಿ ನಡೆಯುವ ಭ್ರಷ್ಟಾಚಾರ, ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವುದಕ್ಕೆ ಸಂಬಂಧಪಟ್ಟ ಪರೀಕ್ಷಾ ಪ್ರಾಧಿಕಾರವಾಗಲಿ, ಇಲಾಖೆಗಳಾಗಲಿ, ಆಯೋಗವಾಗಲಿ ಮುತುವರ್ಜಿ ವಹಿಸದೇ ಇರುವುದು ದುರಂತವೇ ಸರಿ. ಇದೊಂಥರ ʼಬೇಲಿಯೇ ಎದ್ದು ಹೊಲ ಮೇಯ್ದಂತೆʼ. ಪರೀಕ್ಷೆಗಳನ್ನು ನಡೆಸುವ ಪ್ರಾಧಿಕಾರ, ಇಲಾಖೆಗಳು, ಆಯೋಗದಲ್ಲೇ ಈ ಅಕ್ರಮಗಳನ್ನು ನಡೆಸುವವರ ದಂಡೇ ಇದೆ ಎಂದರೆ ತಪ್ಪಿಲ್ಲವೇನೋ. ಹೀಗೆ ಈ ಥರದ ಪರೀಕ್ಷೆಗಳಲ್ಲಿನ ಅಕ್ರಮಗಳು ಹಾಗೂ ಅದನ್ನು ತಡೆಗಟ್ಟುವ ಸಲುವಾಗಿ ರೂಪಿಸುವ ನಿಯಮಾವಳಿಗಳು ಎರಡರಿಂದಲೂ ಆಗುವ ಸಮಸ್ಯೆಗಳನ್ನು ಅನುಭವಿಸುವವರು ಮಾತ್ರ ಅಭ್ಯರ್ಥಿಗಳು.

ನಾನು ಮಂಗಳೂರಿನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಿಸರ್ಚ್‌ ಪ್ರೊಸೆಸರ್‌ ಒಬ್ಬರು ʼನೆಟ್‌ ಎಕ್ಸಾಂ ಪಾಸ್‌ ಮಾಡಿಕೊಳ್ಳುವುದಕ್ಕೆ ಒಂದಿಷ್ಟು ಲಕ್ಷ ಕೊಟ್ಟು, ಎಕ್ಸಾಂಗೆ ಅಟೆಂಡ್ ಮಾಡಿದರಷ್ಟೇ ಸಾಕುʼ ಅಂತಂದ್ರು. ʼಏನ್‌ ತಮಾಷೆ ಮಾಡ್ತಿದ್ದೀರಾ ಸರ್‌ ಎಂದು ಪ್ರಶ್ನೆ ಹಾಕಿದ್ದೆ. ʼಏನ್‌ ರೀ ಮಾತಾಡ್ತೀರಾ? ಇಂತವೆಲ್ಲಾ ಭಯಭೀತಿ ಇಲ್ಲದೆ ನೆಡಿತವೆ… ನೀವೂ ಅವರು ಕೇಳುವಷ್ಟು ಹಣ ರೆಡಿ ಮಾಡ್ಕೊಂಡ್ರೆ ಆಯ್ತುʼ ಅಂತಂದ್ರು. ಆ ಸಂದರ್ಭದಲ್ಲಿ ನನಗೆ ಆಶ್ಚರ್ಯ ಆಗಿತ್ತು. ಅದಾಗಲೇ ಎರಡು ಬಾರಿ ನೆಟ್‌ ಎಕ್ಸಾಂ ಬರೆದು ವಿಫಲನಾಗಿದ್ದೆ. ಮೂರನೇ ಬಾರಿಗೆ ನೆಟ್‌ ಎಕ್ಸಾಂ ಗೆ ತಯಾರಿಯಲ್ಲಿದ್ದೆ. ಎರಡನೇ ನೆಟ್‌ ಎಕ್ಸಾಂ ನಲ್ಲಿ ಮೂರ್ನಾಲ್ಕು ಅಂಕಗಳಿಂದ ಅನುತ್ತೀರ್ಣಗೊಂಡಿದ್ದೆ. ಇನ್ನು, ಮೀಸಲಾತಿ ಹಾಗೂ ಅವರಿಗಿದ್ದ ಕನಿಷ್ಠ ಅರ್ಹತಾ ಅಂಕಗಳ ಬಗ್ಗೆ ಸಹಜವಾಗಿ ಅಸಮಾಧಾನವಿದ್ದಿತ್ತು. ಹಿಂದುಳಿದ ವರ್ಗದವರಿಗೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಈ ನಿಯಮ ಜಾರಿಗೆ ತರಲಾಗಿತ್ತಾದರೂ, ಎಲ್ಲಾ ವರ್ಗದವರಿಗೆ ಸಮಾನ ಅರ್ಹತಾ ಅಂಕಗಳ ನಿರ್ದಿಷ್ಟತೆಯಲ್ಲಿ ಉತ್ತೀರ್ಣಗೊಳಿಸುವ ಹಾಗೆ ಇಲ್ಲದಿರುವುದರ ಬಗ್ಗೆ ಒಂದಿಷ್ಟು ಕೊಪ, ಸಿಟ್ಟು ಎಲ್ಲರಿಗೂ ಇದ್ದ ಹಾಗೆ ನನ್ನಲ್ಲೂ ಇದ್ದಿತ್ತು. ಅರ್ಹತೆಯ ಮಾನದಂಡವೇನೆನ್ನುವ ಪ್ರಶ್ನೆ ಬಹಳ ಕಾಡಿತ್ತು. ಈ ನಡುವೆ ಇಂತಹದ್ದೊಂದು ವಿಚಾರ ಇದೆ ಎನ್ನುವುದು ಮತ್ತಷ್ಟು ಇಂತಹ ಪರೀಕ್ಷೆಗಳ ಬಗ್ಗೆ ಅಪನಂಬಿಕೆ ಮೂಡಿಸಿತ್ತು ಎಂದರೇ ತಪ್ಪಿಲ್ಲ. ಅಷ್ಟಾಗಿಯೂ ಪ್ರಯತ್ನದ ಹಾದಿಯಲ್ಲೇ ಇದ್ದೇವೆ ಎನ್ನುವುದೇ ಸಮಾಧಾನ.

ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಲು ನೀಡುವ ಅವಕಾಶ, ಉತ್ತರ ಪತ್ರಿಕೆ ತಿದ್ದುವುದು ಸೇರಿದಂತೆ ಈ ಪರೀಕ್ಷೆಗಳ ಪೂರ್ಣ ಪ್ರಕ್ರಿಯೆಯಲ್ಲಿ ನಡೆಯುವ ತರಹೇವಾರಿ ಅಕ್ರಮಗಳಿಗೆ ಮೂಲ ಕಾರಣ ಆಯಾ ಪರೀಕ್ಷೆಗಳನ್ನು ನಡೆಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ವ್ಯಕ್ತಿಗಳೇ ವಿನಃ ಅಭ್ಯರ್ಥಿಗಳಲ್ಲ. ಇದನ್ನು ನಡೆಸುವುದಕ್ಕೆ ಒಬ್ಬರು ಇಬ್ಬರಿಂದ ಸಾಧ್ಯವೇ ? ಇದಕ್ಕೆ ಒಂದು ದೊಡ್ಡ ವ್ಯವಸ್ಥಿತ ಜಾಲವೇ ಇರಬಹುದು.  

ಇಂತಹ ಸ್ಪರ್ಧಾತ್ಮಕ/ಅರ್ಹತಾ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವ ಇಚ್ಚಾಶಕ್ತಿ ಸರ್ಕಾರಕ್ಕೆ ಅಸಲಿಗೂ ಇರುವುದು ಹೌದಾದರೇ, ಅಭ್ಯರ್ಥಿಗಳಿಗೆ ಸಮಸ್ಯೆಯಾಗದೇ ಇರುವ ರೀತಿಯಲ್ಲಿ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಲಿ. ಕೇಂದ್ರ ಮಟ್ಟದಲ್ಲಿ ಇಷ್ಟರ ಮಟ್ಟಿಗೆ ಅಕ್ರಮಗಳು, ಪ್ರಶ್ನೆ ಪತ್ರಿಕೆಗಳ ಸೋರಿಕೆಗಳೆಲ್ಲಾ ಆಗುತ್ತವೆ ಎಂದರೇ ಪರೀಕ್ಷಾ ಪ್ರಾಧಿಕಾರ, ಇಲಾಖೆಗಳ ನೇರ ಪಾಲುದಾರಿಕೆ ಇಲ್ಲದೇ ಇರುವುದಕ್ಕೆ ಸಾಧ್ಯವೆ ? ಅಷ್ಟಕ್ಕೂ  ಇಂತಹ ಪರೀಕ್ಷಾ ಅಕ್ರಮಗಳ ಹಾದಿ ಮತ್ಯಾರಿಗೆ ತಿಳಿದಿರುತ್ತದೆ ? ಪಟ್ಟಭದ್ರ ಹಿತಾಸಕ್ತರಿಗೆ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ದೃಷ್ಟಿಯಲ್ಲಿ ಕಡಿವಾಣ ಹಾಕುವುದಕ್ಕೆ ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ, ತನಿಖೆಗೆ ಒಪ್ಪಿಸಿದ್ದೇವೆ ಎನ್ನುವುದರಲ್ಲೇ ಅಧಿಕ ಲಾಭ ಇದೆ. ಪರೀಕ್ಷಾ ಪತ್ರಿಕೆ ಸೋರಿಕೆ, ಅಕ್ರಮಗಳಲ್ಲದೇ ಅವನ್ನು ತಡೆಯುವ ಉದ್ದೇಶದಿಂದ ಪಾಲಿಸುವ ಕ್ರಮಗಳಿಂದಲೂ ಬಲಿಪಶುಗಳಾಗುವುದು ಪರೀಕ್ಷಾರ್ಥಿಗಳೆ.

ಪರೀಕ್ಷೆಗಳಲ್ಲಿ ನಡೆದಿದೆ ಎಂದು ಹೇಳುವ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಶಂಕೆಯ ಹಿನ್ನೆಲೆಯಲ್ಲಿ ಅನುಸರಿಸುವ ರದ್ದು ಕ್ರಮ ಹಾಗೂ ಕೆಲವು ದಿನಗಳ ಬಳಿಕ ನಡೆಯುವ ಮರು ಪರೀಕ್ಷೆಗಳಿಂದ ಅಭ್ಯರ್ಥಿಗಳನ್ನು ಇನ್ನಷ್ಟು ಹತಾಶರನ್ನಾಗಿಸುತ್ತದೆ ಅಷ್ಟೇ ಹೊರತಾಗಿ ಪರೀಕ್ಷೆಗಳನ್ನು ನಡೆಸುವ ಸಂಸ್ಥೆ, ಪ್ರಾಧಿಕಾರ ಅಥವಾ ಇಲಾಖೆಯ ಮೇಲೆ ವಿಶ್ವಾಸಾರ್ಹತೆಯನ್ನು ಯಾವುದೇ ಕಾರಣಕ್ಕೂ ಹೆಚ್ಚಿಸಲಾರವು.

ಈಗ ಏಕಾಏಕಿ ಇಂತಹ ಪರೀಕ್ಷೆಗಳ ಅಕ್ರಮಗಳ ಸರಣಿಗಳೆ ಬಯಲಾಗತೊಡಗಿವೆ. ನೀಟ್‌, ನೆಟ್‌ ಅಥವಾ ಇನ್ಯಾವುದೋ ಸ್ಮರ್ಧಾತ್ಮಕವೋ, ಅರ್ಹತಾ ಪರೀಕ್ಷೆಯೋ ಅಥವಾ ನೇಮಕಾತಿ ಪರೀಕ್ಷೆಯೋ ಅರ್ಹ ಹಾಗೂ ಪ್ರತಿಭಾವಂತರಿಗೆ ಅವಕಾಶ ದಕ್ಕಬೇಕು ಎಂಬ ಕಾರಣದಿಂದ ಪಾರದರ್ಶಕವಾಗಿ ನಡೆಯುತ್ತಾ ಬಂದಿವೆ. ಆದರೂ ಇಂತಹ ಪರೀಕ್ಷೆಗಳಲ್ಲಿ ನಿರಂತರವಾಗಿ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿವೆ. ಇಂತಹ ಪರೀಕ್ಷೆಗಳ ಮೂಲ ಉದ್ದೇಶಗಳನ್ನೇ ಮೂಲೆಗೆ ಸರಿಸುವಂತೆ ʼಅಕ್ರಮಗಳುʼ ಮಾಡಿವೆ. ಪರೀಕ್ಷೆ ನಡೆಸುವ ಸಂಸ್ಥೆಗಳ ಅಧಿಕಾರಿಗಳು, ರಾಜಕೀಯ ನಾಯಕರು, ಪ್ರಭಾವಿಗಳು ಇಂತಹ ಅಡ್ಡ ದಾರಿಯಲ್ಲಿ ಲಾಭಕ್ಕಾಗಿ ಕಾಯುವುದು ವಿಪರ್ಯಾಸ.

ಹೌದು, ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕೃಪಾಂಕ ಪಡೆದ 1,563 ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಕೇಂದ್ರ ಶಿಕ್ಷಣ ಇಲಾಖೆ ರದ್ದು ಮಾಡಿತ್ತು. 2024ರ ನೆಟ್-ಜೆಆರ್‌ಎಫ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆಯಲ್ಲಿ ರದ್ದು ಮಾಡಲಾಯಿತು. 2024ರ ಸಿಎಸ್‌ಐಆರ್-ನೆಟ್-ಜೆಆರ್‌ಎಫ್‌ ಪರೀಕ್ಷೆಯನ್ನೂ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆಯಲ್ಲಿ ರದ್ದು ಮಾಡಲಾಯಿತು. ಹೀಗೆ ಸಾಲು ಸಾಲು ಪರೀಕ್ಷೆಗಳ ಅಕ್ರಮಗಳು ಬೆಳಕಿಗೆ ಬರುತ್ತಿದ್ದಂತೆ ಈ ಪರೀಕ್ಷೆಗಳ ಸಾಚಾತನ ಬಯಲಾಗತೊಡಗಿತು. ಇದು ರಾಜಕೀಯ ಟೀಕೆಗೂ, ಚರ್ಚೆಗೂ ಕಾರಣವಾಯಿತು. 

ಮಹತ್ವಕಾಂಕ್ಷೆಯಿಂದಲೇ ಇಂತಹ ಪರೀಕ್ಷೆಗಳನ್ನು ಎಷ್ಟೋ ಅಭ್ಯರ್ಥಿಗಳು ಎದುರಿಸುತ್ತಾರೆ. ಹಾಗಿರುವಾಗ ಇಂತಹದ್ದೊಂದು ಪರೀಕ್ಷೆ ನಡೆಸುವಲ್ಲಿ ದೊಡ್ಡ ಮಟ್ಟದ ಸಾಂಸ್ಥಿಕ ವೈಫಲ್ಯವಾದರೇ ಹೇಗೆ ? ದೇಶದಲ್ಲಿ ಇಂತಹ ಪರೀಕ್ಷೆಗಳ ಪತ್ರಿಕಾ ಸೋರಿಕೆಯ ಮಾಫೀಯಾದ ಜಾಲ ಎಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ಈ ನೀಟ್‌ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು ಬಯಲಿಗೆಳೆದಿವೆ. ಹಾಗಾದರೇ ದೇಶದಲ್ಲಿನ ಪರೀಕ್ಷಾ ವ್ಯವಸ್ಥೆ ಹಳಿ ತಪ್ಪುವುದಕ್ಕೆ ರಾಜಕೀಯ ನಾಯಕರು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಮಾಫೀಯಾದ ನಡುವೆ ಇರುವ ನಿಗೂಢ ವ್ಯವಹಾರ ಕಾರಣವೆ ಎಂಬ ಪ್ರಶ್ನೆಯನ್ನು ಮುಂದಿರಿಸಿದೆ.

ಪರೀಕ್ಷಾ ಪತ್ರಿಕಾ ಸೋರಿಕೆ ಹಾಗೂ ಪರೀಕ್ಷಾ ಅಕ್ರಮ ಮಾಫೀಯಾವನ್ನು ನಿಯಂತ್ರಿಸಲು ಸಂಸತ್ತು ಕಠೀಣ ಕಾನೂನು ಜಾರಿಗೆ ತಂದಿತ್ತು. ಕಾನೂನಿನ ಪ್ರಕಾರ ಇಂತಹ ಅಕ್ರಮಗಳಲ್ಲಿ ಪಾಲು ಪಡೆದವರಿಗೆ ಗರಿಷ್ಠ ಹತ್ತು ವರ್ಷಗಳ ಜೈಲು ಹಾಗೂ ಒಂದು ಕೋಟಿ ದಂಡ ವಿಧಿಸಲಾಗುತ್ತದೆ. ಇನ್ನು, ಪರೀಕ್ಷೆಯ ವಿಚಾರದಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆ ಇದೆ  ಎಂದು ಸಮರ್ಥಿಸಿಕೊಳ್ಳುವ ಸರ್ಕಾರ ಪರೀಕ್ಷಾ ಅಕ್ರಮಗಳನ್ನು ತಡೆಯುವಲ್ಲಿ ವಿಫಲವಾಗಿರುವುದು ವಿಪರ್ಯಾಸವೇ ಸರಿ.

-ಶ್ರೀರಾಜ್‌ ವಕ್ವಾಡಿ   

Wednesday, June 19, 2024

ಉದಾತ್ತ ಮಾದರಿಯಾಗುವುದು ಸುಲಭವೇ…

ಸ್ಥಾನಮಾನವುಳ್ಳವರು ಅಲ್ಪಮಾನವರಾಗುವ ದುರಿತ ಕಾಲ

"ಬುದ್ಧ ಹೇಳುವಂತೆ, ದುರಾಸೆಯ ನಿರರ್ಥಕೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ತಪ್ಪುಗಳ ಹಿಂದೆ ಮನಸ್ಸಿನ ಕೈವಾಡವಿರುತ್ತದೆ ಎಂಬ ಬುದ್ಧನ ಮಾತನ್ನು ನಾವು ಅರ್ಥೈಸಿಕೊಳ್ಳಬೇಕು. ಮನಸ್ಸು ಆಗಾಗ ಮೊಗೆಮೊಗೆದು ಕೊಡುವ ದುರಾಸೆಗಳಿಗೆ ಬಲಿಯಾಗುವುದರಿಂದಲೇ ಸ್ಥಾನಮಾನವುಳ್ಳವರು ಅಲ್ಪಮಾನವರಾಗುತ್ತಾರೆ." 

ಸಾಮಾಜಿಕ ಬದುಕಿನ ಜೊತೆಗೆ ಅಥವಾ ಸಾಮಾಜಿಕ ಜೀವನಕ್ಕೆ ಹತ್ತಿರವಾಗಿದ್ದು ತಮ್ಮ ವೃತ್ತಿ ಜೀವನ ನಡೆಸುತ್ತಿರುವವರು ಈ ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು. ಬಹಳ ವಿಶೇಷವಾಗಿ ಹೀಗೆ ಬದುಕುತ್ತಿರುವವರಲ್ಲಿ ತಮ್ಮನ್ನು ಅನುಸರಿಸುವವರು ಹಲವಾರು ಮಂದಿ ಇದ್ದಾರೆ ಎನ್ನುವ ಸ್ವಯ ಇರಬೇಕು. ಹೆಸರು, ಅಧಿಕಾರ, ದುಡ್ಡು ತಲೆಗೇರಿದಾಗ ಮನುಷ್ಯನ ವರ್ತನೆ ಬದಲಾವಣೆ ಆಗುವುದು ಸಹಜವೇ ಸರಿ. ಆದರೇ, ತನ್ನ ಕಾಲ, ಸ್ಥಿತಿ, ಸಂಬಂಧಗಳ ಅರಿವು ಬಹಳ ಮುಖ್ಯವಾಗಿರುತ್ತದೆ. ಸಮಾಜದಲ್ಲಿ ತನಗಿರುವ ಸ್ಥಾನಮಾನಗಳು, ಅಧಿಕಾರ, ಹೆಸರು, ದುಡ್ಡಿನಿಂದ ಸೃಷಿಯಾದ ಗೌರವಗಳಿಗಾದರೂ ವಿಧೇಯರಾಗಿ ಬದುಕಬೇಕು. ಒಬ್ಬ ಸಾಮಾನ್ಯ ವ್ಯಕ್ತಿಯ ʼಇರುವಿಕೆʼಯೇ ಬಹಳಷ್ಟು ಮಾತನಾಡುತ್ತದೆ. ಇನ್ನು, ದೊಡ್ಡ ದೊಡ್ಡ ಸ್ಥಾನಮಾನಗಳಲ್ಲಿರುವವರ ʼಇರುವಿಕೆʼಯಲ್ಲಿ ವ್ಯತ್ಯಾಸಗಳಾದರೆ ಕೇಳಬೇಕೆ ?  

ಇರುವಿಕೆಯಲ್ಲಿ ಸ್ವಯಂ ಪ್ರಜ್ಞೆ ಇಲ್ಲದವನು ಸಮಾಜ ಕಂಟಕನಾಗಿ ಬದಲಾಗುತ್ತಾನೆ. ಪ್ರತಿಯೊಬ್ಬನಿಗೂ ತನ್ನ ಹಿನ್ನೆಲೆ, ಈಗಿರುವ ಹುದ್ದೆ, ಸ್ಥಾನಮಾನ ಗೌರವಗಳ ಅರಿವು ಇರಬೇಕು. ತಮ್ಮಿಂದ ಆದವುಗಳಿಗೆ ಎಲ್ಲದಕ್ಕೂ ಸಮಾಜಾಯಿಷಿ ಕೊಡುವುದಕ್ಕೂ ಒಂದು ಮಿತಿ ಇದೆ. ಒಪ್ಪಿತ ಎನ್ನುವುದಕ್ಕೂ ಒಂದು ಮಿತಿ ಇದೆ. ಅದನ್ನು ದಾಟಿದ ಕ್ರಿಯೆಯನ್ನು ಸಹಿಸಿಕೊಳ್ಳುವ ಅಥವಾ ಒಪ್ಪಿಕೊಳ್ಳುವ ಮನಸ್ಥಿತಿ ಈ ಸಮಾಜಕ್ಕಿಲ್ಲ. ಒಪ್ಪಿಕೊಳ್ಳುವ ಮತ್ತು ಸಹಿಸಿಕೊಳ್ಳುವ ಮನಸ್ಥಿತಿ ಈ ಸಮಾಜಕ್ಕಿದೆ ಎಂದರೇ ಅದು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ ಎಂದೇ ಅರ್ಥೈಸಿಕೊಳ್ಳಬೇಕು.

ಸಾಮಾನ್ಯ ಅಸಮಾನ್ಯನಾಗುವುದಕ್ಕೂ, ಸಾಮಾನ್ಯರಲ್ಲಿ ಸಾಮಾನ್ಯನಾಗಿಯೇ ಬದುಕುವುದಕ್ಕೂ ವ್ಯತ್ಯಾಸವಿದೆ. ಅಸಮಾನ್ಯನಾಗುವ ಕ್ರಿಯೆಯಲ್ಲಿ ʼಅಹಂʼ ಅಮಲಾಗಿ ಬದಲಾಗಬಹುದು. ಸಾಮಾನ್ಯರೊಳಗೆ ಸಾಮಾನ್ಯರಾಗಿಯೇ ಇರುವ ಕ್ರಿಯೆಯಲ್ಲಿ ʼನಾಟಕೀಯʼವೂ ಮನಸ್ಸು, ಮೈಗೆ ಪರಾಕಾಯ ಪ್ರವೇಶ ಪಡೆದುಕೊಳ್ಳಬಹುದು. ತೊಡಗಿಕೊಳ್ಳುವವನಿಗೆ ಈ ಎರಡೂ ಕ್ರಿಯೆಯಲ್ಲಿ ಸಾಮಾನ್ಯವಾಗಿ ಆಗುವ ಬದಲಾವಣೆಗಳ ಬಗ್ಗೆ ನಿಗಾ ಇರಬೇಕು. ಅಹಂ ಮತ್ತು ನಾಟಕೀಯ ವರ್ತನೆಯನ್ನು ಮೀರಿ ಬೆಳೆಯುವವ ನಿಜಕ್ಕೂ ಈ ಸಮಾಜಕ್ಕೆ ಅತ್ಯಾಪ್ತನಾಗಿ ಬೆಳೆಯುತ್ತಾನೆ, ಉಳಿಯುತ್ತಾನೆ.

ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಮೇಲಿರುವ ಲೈಂಗಿಕ ದೌರ್ಜನ್ಯ ಪ್ರಕರಣ, ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಸಂಸದೀಯ ಮಂಡಳಿ ಸಮಿತಿಯ ಸದಸ್ಯರೂ ಆಗಿರುವ ಹಿರಿಯ ರಾಜಕಾರಣಿ ಬಿ.ಎಸ್‌ ಯಡಿಯೂರಪ್ಪ ಅವರ ಮೇಲಿರುವ ಪೋಕ್ಸೋ ಪ್ರಕರಣ ಹಾಗೂ ಚಿತ್ರನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಮೇಲಿರುವ ಕೊಲೆ ಆರೋಪಗಳನ್ನು ನಾವು ತುಸು ಚಿಂತನೆ ಮಾಡಬೇಕಿದೆ. ಹೌದು, ಸಮಾಜದಲ್ಲಿ ಅಗ್ರ ಸ್ಥಾನಮಾನಗಳನ್ನು ಹೊಂದಿರುವ ಪ್ರಜ್ವಲ್‌ ರೇವಣ್ಣ, ಬಿ.ಎಸ್‌. ಯಡಿಯೂರಪ್ಪ ಹಾಗೂ ನಟ ದರ್ಶನ್‌ ಬಗೆಗೆ ನಾವು ಯೋಚಿಸಬೇಕಿದೆ. ಚಿಂತಿಸಬೇಕಿದೆ. ರಾಜಕೀಯ, ಸಿನೆಮಾ, ಸರ್ಕಾರಿ ಹುದ್ದೆ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಜೀವನ ನಡೆಸುತ್ತಿರುವವರದ್ದು ಕತ್ತಿ ಅಲಗಿನ ಮೇಲಿನ ನಡಿಗೆ. ಸದಾ ಜಾಗೃತರಾಗಿಯೇ ಬದುಕಬೇಕು. ಮಾದರಿಯಾಗಿಯೂ ಬದುಕಬೇಕು. ಅದು ಅನಿವಾರ್ಯವೂ ಕೂಡ.

ಗಮನಿಸಿ, ತನ್ನ ಕಾಮ ತೃಷೆ ತೀರಿಸಿಕೊಳ್ಳುವ ಸಲುವಾಗಿ ನೂರಾರು ಹೆಣ್ಣು ಮಕ್ಕಳನ್ನು ಬರೀ ಅಂಗಾಂಗ ಎಂಬಂತೆ ಬಳಸಿಕೊಂಡು, ಆ ಹೆಣ್ಣು ಮಕ್ಕಳಿಗೆ ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯಗಳನ್ನು ಸಾವಿರಾರು ವೀಡಿಯೋಗಳನ್ನಾಗಿ ಮಾಡಿಟ್ಟುಕೊಳ್ಳುವ ಮನಸ್ಥಿತಿಗೆ ತಲುಪುವವರೆಗೆ ಹಾಸನ ಪೆನ್‌ಡ್ರೈವ್‌ ಪ್ರಕರಣದ ಆರೋಪಿಗೆ ಸ್ವಯ ಇರಲಿಲ್ಲವೇ ? ತಾನೊಬ್ಬ ರಾಜಕಾರಣಿ, ಒಂದು ಲೋಕಸಭಾ ಕ್ಷೇತ್ರದ ಸಂಸದ, ತಾನಿರುವ ಹುದ್ದೆಗೆ ಒಂದು ಗೌರವವಿದೆ, ಹೀಗೆಲ್ಲಾ ತಾನು ನಡೆದುಕೊಳ್ಳಬಾರದು ಎನ್ನುವ ಪ್ರಾಥಮಿಕ ಪ್ರಜ್ಞೆ ಇದ್ದಿದ್ದರೇ ಬಹುಷಃ ಹೀಗೆಲ್ಲಾ ಆಗುತ್ತಿರಲಿಲ್ಲವೇನೋ. ಯುವ ನಾಯಕ ಎಂದು ಆತನನ್ನು ಸ್ಪರ್ಧೆಯ ಕಣಕ್ಕಿಳಿಸಿದ ಪಕ್ಷ ಹಾಗೂ ಹಿರಿಯ ನಾಯಕರ ಮಾತಿಗೆ ಈಗ ಎಲ್ಲಿದೆ ಬೆಲೆ ? ತನ್ನನ್ನು ಈ ಹಿಂದೆ ಆರಿಸಿದ ಮತದಾರರಿಗೆ ನೀಡಿದ ಸುರಕ್ಷತೆ ?

ಗಾಳಿಯಿಲ್ಲದೇ ಹೊಗೆಯಾಡುವುದಿಲ್ಲ. ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ನೀಡಿರುವ ದೂರಿನ ಮೇಲೆ ಸಂಕಷ್ಟ ಎದುರಿಸುತ್ತಿರುವ ಆರೋಪಿ ತನ್ನ ವಯಸ್ಸು, ತಾನು ಅನುಭವಿಸಿದ ಹುದ್ದೆ, ಸ್ಥಾನಮಾನಗಳ ಬಗ್ಗೆ ಅರಿವು ಇದ್ದಿದ್ದರೇ, ಇಂತಹ ಕೆಲಸಕ್ಕೆ ಮುಂದಾಗುತ್ತಿದ್ದರೇ ಎನ್ನುವ ಪ್ರಶ್ನೆಯೂ ಸಹಜವಾಗಿ ಮುಂದಿನ ಸಾಲಿನಲ್ಲೇ ನಿಲ್ಲುತ್ತದೆ. ಪ್ರಭಾವಿ ರಾಜಕಾರಣಿ ಎನ್ನುವ ಕಾರಣಕ್ಕೆ ಇಂತಹದ್ದೊಂದು ಘಟನೆ ಆಗಿದ್ದು ನಿಜವಾದರೇ ಈ ಸಮಾಜ ಅದನ್ನು ಒಪ್ಪುವುದಕ್ಕೆ ಸಾಧ್ಯವಿದೆಯೇ ? ಆರೋಪಗಳಿಂದ ಹೊರಬರಲು ಸಮರ್ಥಿಸಿಕೊಳ್ಳುವುದು ಸಾಮಾನ್ಯ. ಆ ಪ್ರತಿವಾದ ಸಮರ್ಥನೆ ಸ್ವಾತಂತ್ರ್ಯವೂ ಹೌದು. ಆದರೂ ಆ ಸ್ವಾತಂತ್ರ್ಯ ಎಲ್ಲಿಯವರೆಗೆ ? ಅದಕ್ಕೂ ಒಂದು ಮಿತಿ ಇದೆ. ಈ ಪ್ರಕರಣದ ವಿಚಾರಣೆ ಆದ ಬಳಿಕ ಸತ್ಯ ಸಂಗತಿ ಹೊರಬರಬಹುದು.

ತಮ್ಮ ಪ್ರಿಯತಮೆಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಮತ್ತು ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದಾರೆ ಎನ್ನುವ ಕಾರಣಕ್ಕೆ ತಮ್ಮದೇ ಅಭಿಮಾನಿ ಎಂದು ಹೇಳಲಾಗುತ್ತಿರುವ ಒಬ್ಬ ವ್ಯಕ್ತಿಯನ್ನು ಅಪಹರಿಸಿ ಕೊಲೆಗೈದು ರಾಜಕಾಲುವೆಗೆ ಎಸೆದಿದ್ದಾರೆ ಎಂಬ ಆರೋಪದ ಮೇಲೆ ಸ್ಯಾಂಡಲ್‌ವುಡ್‌ ನ ಅಗ್ರಮಾನ್ಯ ನಟ ಹಾಗೂ ಆತನ ಪ್ರಿಯತಮೆ, ಸಹಚರರು ಬಂಧನಕ್ಕೊಳಾಗಿದ್ದಾರೆ. ಇಂತಹದ್ದೊಂದು ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ತುಸು ಯೋಚಿಸಿದ್ದರೇ ? ಪತ್ನಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನ, ಶ್ರೀರಂಗಪಟ್ಟಣದಲ್ಲಿ ಅಭಿಮಾನಿಯ ಮೇಲೆ ಹಲ್ಲೆ, ಮಾಧ್ಯಮಗಳನ್ನು ಅಶ್ಲೀಲವಾಗಿ ನಿಂಧಿಸಿ ಒಂದು ವರ್ಷ ನಿಷೇಧ, ಪುನೀತ್‌ ರಾಜ್‌ಕುಮಾರ್‌ ವಿರುದ್ಧ ವಿವಾದಾತ್ಮಕ ಮಾತು, ವನ್ಯ ಜೀವಿಗಳನ್ನು ಸಾಕಿ ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿ, ಮೈಸೂರು ಹೋಟೇಲ್‌ನಲ್ಲಿ ಕಾರ್ಮಿಕನ ಮೇಲೆ ಹಲ್ಲೆ, ನಿರ್ಮಾಪಕನೋರ್ವನಿಗೆ ಬಹಿರಂಗ ಸಭೆಯೊಂದರಲ್ಲಿ ನಿಂದನೆ ಮತ್ತು ವಿವಾದ, ಚಿತ್ರೀಕರಣದ ಸಂದರ್ಭದಲ್ಲಿ ಸಹನಟನ ಮೇಲೆ ಹಲ್ಲೆ, ಸರ್ಕಾರ ನಟನ ಮನೆಯಲ್ಲಿದ್ದ ಹುಲಿ ಉಗುರು ವಶ ಪಡಿಸಿಕೊಂಡಂತಹ ಸಾಲು ಸಾಲು ಅವಾಂತರಗಳು ಆದ ಬಳಿಕವೂ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ತಾನು ನಡೆದುಕೊಂಡು ಬಂದ ದಾರಿ, ಕುಟುಂಬದ ಹಿನ್ನೆಲೆ, ಚಿತ್ರರಂಗದ ಅನುಭವ, ಸ್ಥಾನಮಾನ, ಫ್ಯಾನ್‌ ಫಾಲೋವರ್ಸ್‌, ತಾನೊಬ್ಬ ಅನುಭವಿ ನಟನಾಗಿದ್ದುಕೊಂಡು ಈ ಸಮಾಜಕ್ಕೆ ಮಾದರಿಯಾಗಿ ಇರಬೇಕು ಎನ್ನುವ ವಿಚಾರಗಳನ್ನೆಲ್ಲಾ ಒಮ್ಮೆ ಯೋಚಿಸಿ ಮನಸ್ಸಿನ ಮಾತು ಕೇಳಿದ್ದರೇ,  ಈಗ ಹೊತ್ತಿರುವ ಆರೋಪಗಳಿಗೆ ಹೊಂದುವ ಕೃತ್ಯಗಳ ಬಗ್ಗೆ ಯೋಚನೆಯನ್ನು ಮಾಡುವುಕ್ಕೂ ಸಮಯ ದೊರಕುತ್ತಿರಲಿಲ್ಲ.

ಹೌದು, ಸ್ವಾಸ್ಥ್ಯಕ್ಕೆ ಪ್ರತಿಬಂಧಕರೂಪವಾಗಿ ಆರು ಶತ್ರುಗಳಂತೆ ಇರುವ ಭಾವನೆಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು ತನ್ನೊಳಗೆ ತನಗೇ ಅರಿವಿಲ್ಲದೆ ಮನುಷ್ಯ ಇರಿಸಿಕೊಂಡಿದ್ದಾನೆ. ಅವುಗಳಲ್ಲಿ ಯಾವುದನ್ನು ಎಲ್ಲಿ ಸಾಧಿಸಿಕೊಳ್ಳಬೇಕು ಎನ್ನುವುದು ಆಯಾಯ ವ್ಯಕ್ತಿತ್ವಕ್ಕೆ ಅವಲಂಭಿಸಿರುವ ವಿಷಯ. ಇವುಗಳೊಂದಿಗೆ ಹೇಗೆ ಬದುಕುತ್ತೇವೆ ಎನ್ನುವುದೇ ಮುಖ್ಯ. 

ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ನಮ್ಮ ಮನಸ್ಸು ಇರುತ್ತದೆ. ಕೆಲವೊಮ್ಮೆ ಚಂಚಲ ಮನಸ್ಸು ನಮ್ಮನ್ನು ಕೆಟ್ಟ ದಾರಿಯತ್ತ ಕೊಂಡೊಯ್ಯಬಹುದು. ಹಾಗಾಗಿ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವುದು ಮುಖ್ಯ. ಬುದ್ಧ ಹೇಳುವಂತೆ, ದುರಾಸೆಯ ನಿರರ್ಥಕೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ತಪ್ಪುಗಳ ಹಿಂದೆ ಮನಸ್ಸಿನ ಕೈವಾಡವಿರುತ್ತದೆ ಎಂಬ ಬುದ್ಧನ ಮಾತನ್ನು ನಾವು ಅರ್ಥೈಸಿಕೊಳ್ಳಬೇಕು. ಮನಸ್ಸು ಆಗಾಗ ಮೊಗೆಮೊಗೆದು ಕೊಡುವ ದುರಾಸೆಗಳಿಗೆ ಬಲಿಯಾಗುವುದರಿಂದಲೇ ಸ್ಥಾನಮಾನವುಳ್ಳವರು ಅಲ್ಪಮಾನವರಾಗುತ್ತಾರೆ. 

ವ್ಯಕ್ತಿಯಾಗಿ ಬದುಕುವುದು ಬಹಳ ಸುಲಭ. ಆದರೆ, ಮಾದರಿ ವ್ಯಕ್ತಿಯಾಗಿ, ಅನುಕರಣೀಯ ವ್ಯಕ್ತಿತ್ವದವರಾಗಿ ಬದುಕುವುದು ಕಷ್ಟ. ಉದಾತ್ತ ಆದರ್ಶಗಳ ಅಳವಡಿಕೆಯ ಇರುವಿಕೆಯಿಂದಲಷ್ಟೇ ಮಾದರಿಯಾಗಿ ಬದುಕಬಹುದು. ʼಅಹಂ ಲೋಕʼ ಮುಂದಾದರೆ, ಆ ಹಮ್ಮುಬಿಮ್ಮಿನಿಂದಲೇ ಎಲ್ಲವನ್ನೂ ಜಯಿಸಿಕೊಳ್ಳಬಹುದೆಂಬ ಭ್ರಮೆ ಆವರಿಸಿಕೊಂಡರೇ ಮನುಷ್ಯ ಮನುಷ್ಯನಾಗಿ ಬದುಕುವುದಕ್ಕೆ ಸಾಧ್ಯವಿಲ್ಲ. ದುರಂತವೆಂದರೇ, ಬಹುತೇಕರು ಇಲ್ಲಿ ಮನುಷ್ಯರಾಗುವ ಪ್ರಾಥಮಿಕ ಪ್ರಯತ್ನವನ್ನೇ ಮಾಡುತ್ತಿಲ್ಲ.

-ಶ್ರೀರಾಜ್‌ ವಕ್ವಾಡಿ