Thursday, May 30, 2024

ಕಾಂಗ್ರೆಸ್‌ ಇನ್ನೂ ʼಪಾಲಿಟಿಕಲ್‌ ಮೈಂಡ್‌ ವಾಶ್‌ʼ ಕಲೆಯನ್ನು ಕಲಿತಿಲ್ಲ !


 2024ರ ಚುನಾವಣೆಯಲ್ಲಿ ಗ್ರಹಿಕೆಯನ್ನೂ ಮೀರಿ ದಿಢೀರ್‌ ಬದಲಾವಣೆ ಸಾಧ್ಯವೇ ?

ಕಾಂಗ್ರೆಸ್‌ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಇನ್ನೂ ಅನಿಶ್ಚಿತತೆಯಲ್ಲೆ ಇದೆಯೇ ಎನ್ನುವ ಸಾಮಾನ್ಯ ಪ್ರಶ್ನೆಯೊಂದು ಸದ್ಯ ನಮ್ಮ ಮುಂದಿದೆ. ಆಡಳಿತರೂಢ ಬಿಜೆಪಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಸವಾಲು. ಈ ಸುತ್ತಿನ ಲೋಕಸಭಾ ಚುನಾವಣೆ ಮುಗಿಯುವ ಹೊಸ್ತಿಲಲ್ಲಿ ಯಾರಿಗೆ ಗೆಲುವು ದಕ್ಕಬಹುದು, ಯಾರ ವಿಶ್ವಾಸ ಹುಸಿಯಾಗಬಹುದು, ನಿರೀಕ್ಷೆಗೂ ಮೀರಿ ಒಂದು ಹಂತದಲ್ಲಿ ಅಚ್ಚರಿಯ ಫಲಿತಾಂಶ ಬಂದು ಎಲ್ಲಾ ಸಮೀಕ್ಷೆಗಳನ್ನು ಅಡಿಮೇಲಾಗಿಸಬಹುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಮೇಲೆದ್ದಿದೆ.

ಕಳೆದ ಹತ್ತು ವರ್ಷಗಳಲ್ಲಿ ದೇಶದ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸುವುದಾದರೇ ಸಂಪೂರ್ಣ ಭಿನ್ನವೇ ಸರಿ. ಬಹುಷಃ ಬದಲಾಗಬಾರದ ರೀತಿಯಲ್ಲಿ ರಾಜಕೀಯ ಕ್ಷೇತ್ರ ಬದಲಾವಣೆಯನ್ನು ಪಡೆದುಕೊಂಡಿತ್ತು. ಒಂದು ವಿಚಿತ್ರವಾದ ಉನ್ಮಾದ ಈ ದೇಶದ ರಾಜಕೀಯಕ್ಕೆ ಅಂಟಿಕೊಂಡುಬಿಟ್ಟಿದೆ. ಇದರ ಸುತ್ತ ಸೃಷ್ಟಿಯಾದ ಒಂದು ಥರದ ಅಸ್ಪಷ್ಟ ವೈಬ್‌ ಗಮನಿಸಿದ್ದೀರಾ ? ರಾಜಕೀಯ ಕ್ಷೇತ್ರದಲ್ಲಿ ಬಹುಷಃ ಅಸಹಜ ಎನ್ನಿಸುವ ಈ ಬಗೆಯ ಒಂದು ಮಾನಸಿಕ ಧೋರಣೆ ರಾಜಕೀಯದಲ್ಲಿ ತೊಡಗಿಕೊಂಡವರಲ್ಲಿ ಮೂಡಿದೆ. ಒಂದು ರಾಜಕೀಯ ವಲಯ ತಾನು ಯೋಚಿಸುವ, ರೂಪಿಸುವ ಹಾಗೂ ಕಾರ್ಯರೂಪಕ್ಕೆ ತರುವ ನೆಲೆಯೂ ಅದಕ್ಕೆ ಕಾರಣವಿರಬಹುದು.

ಬದುಕನ್ನು ಹಿಂಡಿದ ಒಂದು ದಶಕದ ಆಡಳಿತವನ್ನು ಈ ದೇಶ ನೋಡುವ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿ ಉಳಿಯ ಬೇಕಾಗಿದ್ದ ಪ್ರತಿಪಕ್ಷಗಳು ಧ್ವನಿ ಇಲ್ಲದಂತಾಗಿದ್ದವು. ನಿಖರವಾದ ವೈಚಾರಿಕ ಒಲವು ಕಳೆದುಕೊಂಡ ಹಾಗೆ ಬಹುತೇಕ ಎಲ್ಲಾ ಪ್ರತಿಪಕ್ಷಗಳು ವರ್ತಿಸಿದ್ದವು. ತಪ್ಪುಗಳನ್ನು ಗಟ್ಟಿಯಾಗಿ ಪ್ರಶ್ನಿಸುವ ತಾಕತ್ತನ್ನೇ ಕಳೆದುಕೊಂಡಿದ್ದವು ಎಂಬ ಹಾಗಾಗಿತ್ತು. ಆಡಳಿತಾರೂಢ ಪಕ್ಷದ ಸ್ವಯಂಕೃತ ಅಪರಾಧ ಹಾಗೂ ದುರಾಡಳಿತ ಮೆರೆಯುತ್ತಿರುವ ಕಾಲದಲ್ಲಿಯೂ ಅದನ್ನು ವಿರೋಧಿಸುವ ಗಟ್ಟಿತನ ಕಳೆದುಕೊಂಡಿದ್ದವು ಎಂಬ ವಾತಾವರಣ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿತ್ತು. ಅದು ಈ ದೇಶದ ಪ್ರಜಾಪ್ರಭುತ್ವದ ದುರಿತ ಕಾಲವೂ ಹೌದು.

ಕಳೆದ ಹತ್ತು ವರ್ಷಗಳಲ್ಲಿ ವಿಪರೀತವಾಗಿ ಈ ದೇಶದ ನಾಗರಿಕರನ್ನು ಕಾಡಿದ ದುರಾಡಳಿತ ಪ್ರತಿಪಕ್ಷಗಳಿಗೆ ಒಂದು ಪ್ರಬಲ ರಾಜಕೀಯ ಅಸ್ತ್ರವಾಗಿಯೇ ದೊರಕ್ಕಿತ್ತಾದರೂ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್‌ ಸೇರಿ ಎಲ್ಲಾ  ಪ್ರತಿಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿದ್ದವು. ರಾಜಕೀಯ ಸುಸ್ಥಿರ ಸ್ಥಿತಿಯನ್ನು ಕಾಪಾಡಿಕೊಳ್ಳುವ ನೆಲೆಯಲ್ಲಿ ವಿಪಕ್ಷಗಳು ಮುಂದಡಿ ಇಟ್ಟಿದ್ದು ಎಲ್ಲಿಯೂ ಕಾಣಿಸಲೇ ಇಲ್ಲ.

2024 ರಲ್ಲಿ ದೇಶದ ಅತ್ಯಂತ ಹಳೆಯ ಪಕ್ಷ ಹಾಗೂ ಈ ದೇಶದವನ್ನು ಸುದೀರ್ಘ 55 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷದ ವಿರುದ್ಧ ದಿಢೀರ್‌ ಅಂತ ಸೃಷ್ಟಿಯಾದ, ದೇಶದಾದ್ಯಂತ ರಾಜಕೀಯ ವಲಯದಲ್ಲಿ ಮುಂಪಂಕ್ತಿಗೆ ಬಂದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಗುಜರಾತ್‌ನ ರಾಜಧಾನಿಯನ್ನು ತೋರಿಸಿಕೊಂಡು ಮತ್ತು ಉದುರಿ ಬೀಳಬಹುದೇನೋ ಎಂಬ ಹಾಗಿದ್ದ ಹಾಳಾದ ಗೋಡೆಗೆ ಚೆಂದದ ಬಣ್ಣ ಹಚ್ಚಿ ʼಇದೇ ದೇಶದ ಪರಮ ಶ್ರೇಷ್ಠ ಸೋ ಕಾಲ್ಡ್‌ ಅಭಿವೃದ್ಧಿʼ ಎಂದು ಬಿಂಬಿಸಿ ಕೇಂದ್ರಕ್ಕೆ ಬಿಜೆಪಿ ಎಳೆತಂದ ನರೇಂದ್ರ ಮೋದಿ ʼಅಚ್ಛೇ ದಿನ್‌ ಆನೆ ವಾಲಾ ಹೇʼ ಎಂಬ ಹಸಿ ಹಸಿ ಸುಳ್ಳು ಹೇಳುತ್ತಲೇ ದೇಶದಾದ್ಯಂತ ಪ್ರಚಾರ ಗಿಟ್ಟಿಸಿಕೊಂಡರು. ದೇಶದಾದ್ಯಂತ ʼಗುಜರಾತ್‌ ಮಾಡೆಲ್‌ʼ  ಅಭಿವೃದ್ಧಿಯನ್ನು ಒರಗೆ ಹಚ್ಚಲಾಯಿತು.  ಇದು ರಾಜಕೀಯ ವಲಯದಲ್ಲಿ ಪ್ರಭಾವ ಬೀರುವಂತೆ ಕೇಂದ್ರ ಸರ್ಕಾರದ ಕೃಪಾಪೋಷಿತ ಮಾಧ್ಯಮ ಸಂಸ್ಥೆಗಳು ಕೂಡ ಸಾಥ್‌ ನೀಡಿದವು. ಈ ದೇಶದಲ್ಲಿ ಮಹತ್ತರವಾದ್ದೇನೋ ಆಗುತ್ತದೆ ಎಂಬ ಕುರುಡು ನಂಬಿಕೆಯಲ್ಲಿದ್ದ ಈ ದೇಶದ ನಾಗರಿಕರಿಗೆ ಮೋದಿ ಪ್ರಧಾನಿಯಾಗಿ ಕೇವಲ ಎರಡು ವರ್ಷಗಳಲ್ಲೇ ಭ್ರಮನಿರಸನ ಮೂಡಿಸಿದರು. ನೋಟು ಅಮಾನ್ಯೀಕರಣ, ರಫೇಲ್‌ ಹಗರಣ, ಆರ್ಥಿಕ ಬಿಕ್ಕಟ್ಟು, ಕೋವಿಡ್‌ ಕಾಲದ ಅವ್ಯವಹಾರ, ರೈತರ ಪ್ರತಿಭಟನೆ, ಮಣಿಪುರ ಪ್ರಕರಣಗಳನ್ನೆಲ್ಲಾ ರಾಜಕೀಯವಾಗಿ ಲಾಭವಾಗುವ ಹಾಗೆ ಧ್ವನಿ ಎತ್ತುವಲ್ಲಿ ಪ್ರತಿಪಕ್ಷಗಳು ಸೋತವು ಎಂದರೇ ತಪ್ಪಿಲ್ಲ.

ಈ ಸುತ್ತಿನ ಲೋಕಸಭಾ ಚುನಾವಣೆ ಉಭಯ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣ. ಕಳೆದ ಲೋಕಸಭಾ ಚುನಾವಣೆ ಫಲಿತಾಂಶವನ್ನು ಗಮನಿಸುವುದಾದರೇ, ಭಾರತೀಯ ಜನತಾ ಪಕ್ಷವು ಕಳೆದ ಚುನಾವಣೆಯಲ್ಲಿ ಶೇ. 37.36ರಷ್ಟು ಮತಗಳನ್ನು ಪಡೆದುಕೊಂಡಿತು, ಇದು 1989ರ ಸಾರ್ವತ್ರಿಕ ಚುನಾವಣೆಯ ನಂತರ ರಾಜಕೀಯ ಪಕ್ಷವೊಂದರಿಂದ ಅತ್ಯಧಿಕ ಮತ ಗಳಿಕೆಯಾಗಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಮಾತ್ರವಲ್ಲದೇ, 303 ಕ್ಷೇತ್ರಗಳನ್ನು ಗೆದ್ದು, ಅದರ ಗಣನೀಯ ಬಹುಮತವನ್ನು ಮತ್ತಷ್ಟು ಹೆಚ್ಚಿಸಿಕೊಂಡಿತ್ತು. ಜೊತೆಗೆ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 353 ಕ್ಷೇತ್ರಗಳನ್ನು ಗೆದ್ದಿತ್ತು. ಬಿಜೆಪಿಯು ಶೇ. 37.76 ರಷು ಮತಗಳನ್ನು ಗಳಿಸಿದರೆ, ಎನ್‌ಡಿಎ ಯ ಸಂಯೋಜಿತ ಮತ ಪ್ರಮಾಣವು ಶೇ. 45ರಷ್ಟು ಆಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 52 ಕ್ಷೇತ್ರಗಳನ್ನು ಗೆದ್ದುಕೊಂಡಿತು, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಬೇಕಾದ ಶೇ.10ರಷ್ಟು ಸ್ಥಾನಗಳನ್ನು ಪಡೆಯಲು ವಿಫಲವಾಯಿತು. ಅದು ಕಾಂಗ್ರೆಸ್‌ನ ದುರಿತ ಕಾಲ. ಜೊತೆಗೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) 91 ಕ್ಷೇತ್ರಗಳನ್ನು ಗೆದ್ದರೆ, ಇತರ ಪಕ್ಷಗಳು 98 ಕ್ಷೇತ್ರಗಳನ್ನು ಗೆದ್ದವು. ಆದರೇ ಈ ಸುತ್ತಿನ ಲೋಕಸಭಾ ಚುನಾವಣೆಯಲ್ಲಿ ತನ್ನ ನೇತೃತ್ವದ ಮೈತ್ರಿಕೂಟವೇ ಅಧಿಕಾರ ಹಿಡಿಯುವುದು ನಿಶ್ಚಿತ ಎನ್ನುವ ವಿಶ್ವಾಸದಲ್ಲಿದೆ ಕಾಂಗ್ರೆಸ್. ಈ ದಿಢೀರ್‌ ಚೇಂಜ್‌ ಓವರ್‌ ಈಗಿನ ರಾಜಕೀಯದಲ್ಲಿ ಸಾಧ್ಯವಿದೆಯೇ ಎನ್ನುವುದೇ ಸದ್ಯದ ಪ್ರಶ್ನೆ. ಆದರೇ, ಮೋದಿ ನೇತೃತ್ವದ ಬಿಜೆಪಿ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ತುಸು ರಾಜಕೀಯವಾಗಿ ಬೆದರಿದ್ದು ಸತ್ಯ.

ಕಾಂಗ್ರೆಸ್‌ ದೇಶ ಮಟ್ಟದಲ್ಲಿ ಅನುಭವಿಸುತ್ತಿರುವ ಸಂಘಟನಾತ್ಮಕ ಕೊರತೆ ಒಂದು ಹಂತದಲ್ಲಿ ಗಮನಿಸುವುದಾದರೇ, ಅದು ಈ ದೇಶದ ರಾಜಕೀಯ ಬಿಕ್ಕಟ್ಟು. ಈ ದೇಶದ ರಾಜಕೀಯದ ಬದಲಾವಣೆಯಲ್ಲಿ ಕಾಂಗ್ರೆಸ್‌ನಂತಹ ಹಿರಿಯ ಪಕ್ಷ ತನ್ನ ಇರುವಿಕೆಯ ಭದ್ರತೆಯ ಅಗತ್ಯವನ್ನು ಅರ್ಥೈಸಿಕೊಳ್ಳುವಾಗಲೇ ಸಮಯ ಮೀರಿ ಇಲ್ಲಿನ ರಾಜಕೀಯ ಮತ್ತೆಲ್ಲೋ ಹೊಸ ದಿಕ್ಕಿನೆಡೆಗೆ ಹೆಜ್ಜೆ ಊರಿತ್ತು. ಈ ದೇಶಕ್ಕೆ ಕಾಂಗ್ರೆಸ್‌ ಕೊಟ್ಟ ಕೊಡುಗೆ ಅಪಾರವಾದದ್ದೇ ಆಗಿದೆ. ಅವೆಲ್ಲವನ್ನೂ ಅಳಿಸಿ ಹಾಕುವಷ್ಟರ ಮಟ್ಟಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬೆಳೆಯುತ್ತದೆ ಎಂಬ ಊಹೆ ಬಹುಷಃ ಕಾಂಗ್ರೆಸ್‌ಗೆ ಇರಲಿಲ್ಲ. ಒಂದು ರಾಜಕೀಯ ಪಕ್ಷವಾಗಿ ತನ್ನ ಯಶಸ್ಸಿನ ರಹದಾರಿಯನ್ನೇ ಕ್ರಮಿಸಿ ಬಂದ ಕಾಂಗ್ರೆಸ್‌, ಕಳೆದ ಕೆಲವು ವರ್ಷಗಳಿಂದ ಅನುಭವಿಸುತ್ತಿರುವ ದುರ್ಬಲ ಸ್ಥಿತಿಯನ್ನು ಬಹುಷಃ ಈ ದೇಶದ ರಾಜಕೀಯವೇ ಒಪ್ಪುವುದಿಲ್ಲ ಅನ್ನಿಸುತ್ತದೆ.

2013 ರಿಂದ ಕಾಂಗ್ರೆಸ್ ಪಕ್ಷ ನಾಯಕತ್ವಕ್ಕಾಗಿ ರಾಹುಲ್ ಗಾಂಧಿಯ ಮೇಲೆ ಅವಲಂಬಿತವಾಗಿದೆ ಎಂದು ಬಿಜೆಪಿ ಹೈಲೈಟ್ ಮಾಡಿಕೊಂಡೇ ಬಂದಿದೆ, ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರಗಳನ್ನು ನೇರವಾಗಿ ಟೀಕೆ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲ, ಪತ್ರಿಕಾ ಸ್ವಾತಂತ್ರ್ಯ ಮತ್ತು ಭಾರತೀಯ ಸರ್ಕಾರಿ ಸಂಸ್ಥೆಗಳು "ತೀವ್ರ ತೊಂದರೆಗಳನ್ನು ಅನುಭವಿಸಿವೆ" ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ, ಬಿಜೆಪಿ ನಾಯಕರು 1975 ರ ತುರ್ತು ಪರಿಸ್ಥಿತಿಯನ್ನು ಪ್ರಸ್ತಾಪಿಸುತ್ತಲೇ ಟೀಕಿಸಿದ್ದಾರೆ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಮಾನವ ಹಕ್ಕುಗಳ ವ್ಯಾಪಕ ದುರುಪಯೋಗ ಪಡಿಸಿಕೊಂಡಿದೆ ಎಂಬ ಗಂಭಿರ ಆರೋಪಗಳ ಸುರಿಮಳೆಗೈದಿದೆ. ಈ ಎಲ್ಲಾ ಆರೋಪಗಳು ಜನರ ಮನಸ್ಸಲ್ಲಿ ಮಾಸದೇ ಇರುವ ಹಾಗೆ ಬಿಜೆಪಿ ಒಂದು ಹಂತದಲ್ಲಿ ʼಪಾಲಿಟಿಕಲ್ ಮೈಂಡ್‌ ವಾಶ್ʼ ಮಾಡುವಲ್ಲಿ ಯಶಸ್ವಿಯಾಗಿದೆ.‌ ಈ ಪಾಲಿಟಿಕಲಿ ಮೈಂಡ್‌ ವಾಶ್‌ ಮಾಡುವ ಕಲೆಯನ್ನು ಕಾಂಗ್ರೆಸ್‌ ಇದುವರೆಗೆ ಕರಗತ ಮಾಡಿಕೊಂಡಿಲ್ಲ. ಅದಕ್ಕಾಗಿಯೇ ಅದು ಈ ಸ್ಥಿತಿಯನ್ನು ಕಾಣುತ್ತಿದೆ.

ಈಗ ಆಡಳಿತವನ್ನು ವಿರೋಧಿಸುವುದಕ್ಕೆ ಸಾಕಷ್ಟು ಅಸ್ತ್ರಗಳಿದ್ದರೂ ʼಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕುʼ ಎನ್ನುವ ರಾಜಕೀಯ ತಂತ್ರಗಾರಿಕೆಗೆ ಕಾಂಗ್ರೆಸ್‌ ಒಗ್ಗಿಕೊಳ್ಳಲಿಲ್ಲ ಎಂದೇ ಕಾಣಿಸುತ್ತಿದೆ. ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಅಧ್ಯಕ್ಷರಾದಾಗ ಕಾಂಗ್ರೆಸ್‌ನ ಒಳಗೆಯೇ ಅಪಸ್ವರ ಕೇಳಿ ಬಂತು. ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ರಾಹುಲ್‌ ಗಾಂಧಿಯೇ ನೇರ ಕಾರಣ ಎಂಬ ಆರೋಪಗಳನ್ನು ಸ್ವತಃ ಕಾಂಗ್ರೆಸ್‌ ಕೆಲ ಹಿರಿಯರು ಹೊರಿಸಿದರು. ಆದರೇ, ಕಾಂಗ್ರೆಸ್‌ಗೆ ರಾಹುಲ್‌ ಗಾಂಧಿ ಭಾರತ್‌ ಜೋಡೋ ನ್ಯಾಯ ಯಾತ್ರೆಯಿಂದ ಹೊಸ ಚೈತನ್ಯ ತಂದು ಕೊಟ್ಟರು ಎನ್ನುವುದನ್ನು ಅಂದು ರಾಗಾ ವಿರುದ್ಧ ಯಾರು ಆರೋಪ ಹೊರಿಸಿದ್ದರೋ ಅವರೆ ಮೆಚ್ಚುವ ಮಟ್ಟಕ್ಕೆ ಪಕ್ಷವನ್ನು ತಂದು ನಿಲ್ಲಿಸಿದರು. ಆದರೂ, ಕಾಂಗ್ರೆಸ್‌ನಲ್ಲಿ ರಾಹುಲ್‌ ಒಬ್ಬರೇ ಆಗಿ ಬಿಟ್ಟರು ಎನ್ನುವ ವಾತಾವರಣ ಇನ್ನೂ ಇದೆ.

ಇಂತಹ ಸ್ಥಿತಿಯಲ್ಲಿ, ಈ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಒಂದೆಡೆ ಸೇರದೇ ಇದ್ದಿದ್ದರೆ ಕಷ್ಟವಿತ್ತು. ಇಂಡಿಯಾ ಮೈತ್ರಿಕೂಟ ತುಂಬಾ ಸರಾಗವಾಗಿ ಮತ್ತು ವೇಗವಾಗಿ ನಡೆಯುತ್ತದೆ ಎಂದು ಆಡಳಿತ ಪಕ್ಷ ಬಹುಶಃ ಊಹಿಸಿರಲಿಲ್ಲ. ಇಂಡಿಯಾ ಮೈತ್ರಿಕೂಟದ ಬಗ್ಗೆ ಒಂದಿಷ್ಟು ಟೀಕೆ ಮಾಡಿ ಸಂಘಟನಾತ್ಮಕವಾಗಿ ಕುಗ್ಗಿಸುವ ಸಹಜ ರಾಜಕೀಯವನ್ನು ಬಿಜೆಪಿ ಮಾಡಿದ್ದರೂ ಸ್ಥಿರವಾಗಿ ʼಇಂಡಿಯಾʼ ನಿಂತಿತು. ಇನ್ನು, ಬಹಳ ಮುಖ್ಯವಾಗಿ ಪ್ರತಿಪಕ್ಷಗಳು ಒಗ್ಗೂಡಿದಾಗಲೆಲ್ಲಾ ಅಧಿಕಾರದಲ್ಲಿರುವ ಪಕ್ಷಕ್ಕೆ ತೊಡಕು ಉಂಟಾಗಿದೆ ಎಂದು ಬಿಜೆಪಿಯು ಅಗತ್ಯವಾಗಿ ತಿಳಿದುಕೊಳ್ಳಬೇಕಿದೆ. 1967, 1977 ಮತ್ತು 1989ರ ಉದಾಹರಣೆಗಳು ನಮ್ಮ ಮುಂದಿವೆ. ಇದು ಕಾಂಗ್ರೆಸ್ ಭಾರತದ ರಾಜಕೀಯದಲ್ಲಿ ಮೇರು ಸ್ಥಾನದಲ್ಲಿದ್ದ ಕಾಲ. ವಿರೋಧ ಪಕ್ಷಗಳು ಕಾಂಗ್ರೆಸ್ ನನ್ನು ಎದುರಿಸಲು ಚಿಕ್ಕದಾಗಿದ್ದವು. ಆದರೆ ಒಟ್ಟಾರೆಯಾಗಿ ಅಂದು ಕಾಂಗ್ರೆಸ್‌ಗೆ ದೊಡ್ಡ ಆಘಾತವನ್ನೇ ಪ್ರತಿಪಕ್ಷಗಳು ಕೊಟ್ಟಿದ್ದವು. ಇಲ್ಲಿ ಈಗ, 2024 ಭಿನ್ನವಾಗಿದೆ ಎಂಬ ವಾದ ಏಳಬಹುದು. ಆದರೆ ಅಂತಹ ವಾದಗಳು 1967, 1977 ಮತ್ತು 1989 ರಲ್ಲಿ ಉಲ್ಟಾ ಹೊಡೆದಿತ್ತು ಎನ್ನುವುದು ಗಮನಾರ್ಹ. ಇಂದು, ರಾಜಕೀಯ ವಲಯದ ಸಾಮಾನ್ಯ ಗ್ರಹಿಕೆಯನ್ನು ಮೀರಿ ವಿರೋಧ ಪಕ್ಷಗಳ ಮೈತ್ರಿ ಹಿಂದೆಂದಿಗಿಂತಲೂ ಬಲವಾಗಿ ಚುನಾವಣೆಯನ್ನು ಎದುರಿಸಿದೆ. ಮಾತ್ರವಲ್ಲದೇ ಮೈತ್ರಿಕೂಟ ಬಹಳಷ್ಟು ರಾಜ್ಯಗಳಲ್ಲಿ ಸರ್ಕಾರಗಳನ್ನ ಹೊಂದಿವೆ. ಹೀಗೆ ಹಿಂದೆಂದೂ ಇರಲಿಲ್ಲ ಎಂಬುವುದು ಇಲ್ಲಿ ಮುಖ್ಯ. ಫಲಿತಾಂಶಕ್ಕಾಗಿ ಕಾಯೋಣ.

-ಶ್ರೀರಾಜ್‌ ವಕ್ವಾಡಿ

 

Thursday, May 23, 2024

1984 ಅಥವಾ 2004 ಅಥವಾ 2019

 ʼಇಂಡಿಯಾ ಶೈನಿಂಗ್‌ʼ ಮುಂದುವರಿದ ಭಾಗ ʼಮೋದಿ ಗ್ಯಾರಂಟಿʼ !?

ಕೇಂದ್ರ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ದೇಶದಲ್ಲಿ 96.88 ಕೋಟಿ ಮತದಾರರಿದ್ದಾರೆ. ಅವರಲ್ಲಿ 49.72 ಕೋಟಿ ಪುರುಷರು, 47.15 ಕೋಟಿ ಮಹಿಳೆಯರು, 48 ಸಾವಿರ ಲಿಂಗತ್ವ ಅಲ್ಪಸಂಖ್ಯಾತರು, 1.84 ಕೋಟಿ ಮೊದಲ ಬಾರಿಗೆ ಮತದಾರರು, 19.74 ಕೋಟಿ ಯುವ ಮತದಾರರು (ಏಪ್ರಿಲ್ 1ಕ್ಕೆ 18 ವರ್ಷ ತುಂಬುವವರ ಸಹಿತ), 19.1 ಲಕ್ಷ ಸೇವಾ ವಲಯದ ಮತದಾರರು (ಸೇನಾ ಪಡೆಗಳು ಇತ್ಯಾದಿ), 85 ವರ್ಷ ದಾಟಿದ 82 ಲಕ್ಷ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕು. ಈವರೆಗೆ ಒಟ್ಟು ಐದು ಹಂತದ ಮತದಾನ ಮುಗಿದಿದ್ದು, ಇನ್ನೆರಡು ಹಂತಗಳು ಮುಗಿದರೇ, ಲೋಕಸಭಾ ಚುನಾವಣೆಯ ಈ ಬಾರಿಯ ಸುತ್ತು ಮುಕ್ತಾಯಗೊಳ್ಳಲಿದೆ. ಈವರೆಗೆ ನಡೆದ ಎಲ್ಲಾ ಮತದಾನದ ಹಂತಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ ಎಂಬ ವರದಿಗಳಿವೆ. ಇದಕ್ಕೆ ರಾಜಕೀಯವಾಗಿಯೂ ಹಲವು ಆಯಾಮಗಳಲ್ಲಿ ವಿಶ್ಲೇಷಣೆಗಳು ಹೊರಬಂದಿವೆ. ಅವೆಲ್ಲವನ್ನು ಹೊರತಾಗಿ ನೋಡುವುದಾದರೇ, ಈ ಸುತ್ತಿನ ಲೋಕಸಭಾ ಚುನಾವಣೆ ಹಲವು ವಿಷಯಗಳನ್ನು ಮುಂದಿಟ್ಟಿದೆ. ಆಡಳಿತರೂಢ ಪಕ್ಷಕ್ಕೆ ಅಧಿಕಾರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಹಾಗೂ ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷವನ್ನು ಕೆಳಗಿಳಿಸಿ ಅಧಿಕಾರಕ್ಕೆ ಏರುವ ಹಂಬಲ.

ಕಳೆದ ಎರಡು ಲೋಕಸಭಾ ಚುನಾವಣೆಗಳಿಗಿಂತ ಈ ಸುತ್ತಿನ ಚುನಾವಣೆ ಹಲವು ಕುತೂಹಲಗಳನ್ನು ಹುಟ್ಟಿಸಿದೆ. ಎನ್‌ಡಿಎ ಹಾಗೂ ʼಇಂಡಿಯಾʼ ಮೈತ್ರಿಕೂಟಗಳೆರಡೂ ಅಧಿಕಾರ ಹಿಡಿಯುವುದು ನಿಶ್ಚಿತ ಎನ್ನುವ ಹುಮ್ಮಸ್ಸಿನಲ್ಲಿವೆ. ರಾಷ್ಟ್ರೀಯತೆ ಹಾಗೂ ಪ್ರಾದೇಶಿಕತೆ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಅಂಶಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕಡೆ ಎನ್‌ಡಿಎಗೆ ಜನರ ಬೆಂಬಲ ಬಲಗೊಳ್ಳುತ್ತಿದೆ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ, ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ರಾಹುಲ್‌ ಗಾಂಧಿ ಸೇರಿ ʼಇಂಡಿಯಾʼ ಮೈತ್ರಿಕೂಟ ದೇಶದಾದ್ಯಂತ ಜನರ ಒಲವು ತಮ್ಮ ಪರವಾಗಿದೆ ಎಂದು ನಂಬಿಕೆಯಲ್ಲಿರುವುದೇ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬೆರಗುಗಣ್ಣಿಂದ ನೋಡುವ ಹಾಗೆ ಮಾಡಿದೆ.

ಸಾಮಾಜಿಕ ಮತ್ತು ವೃತ್ತಿಪರ ಮಾಧ್ಯಮಗಳೆರಡೂ ಚುನಾವಣಾ ಲೆಕ್ಕಚಾರದ ಸಮೀಕ್ಷೆಯ ಅಧ್ಯಯನಗಳು ಮತ್ತು ವಿಶ್ಲೇಷಣೆಗಳಿಂದ ತುಂಬಿ ತುಳುಕುತ್ತಿವೆ, ಆದರೂ ಅವೆಲ್ಲದರ ನಡುವಿನ ಸಾಮಾನ್ಯ ಅವಲೋಕನವೆಂದರೆ, ಆರಂಭದಲ್ಲಿ ಏಕ ಪಕ್ಷೀಯ ಚುನಾವಣೆಯಂತೆ ಕಂಡಂತಹ ಈ ಬಾರಿಯ ಲೋಕಸಭಾ ಚುನಾವಣಾ ಸ್ಪರ್ಧೆಯು ನಿರೀಕ್ಷೆಗಿಂತ ಬಿಗಿಯಾಗಿ ಕಾಣಿಸುತ್ತಿದೆ. ರಾಷ್ಟ್ರೀಯತೆಗಿಂತ ಸ್ಥಳೀಯ ಅಂಶಗಳೇ ಪ್ರಮುಖ ಆದ್ಯತೆ ತೆಗೆದುಕೊಂಡ ಹಾಗೆ ಕಾಣಿಸುತ್ತಿದೆ. ರಾಷ್ಟ್ರಾಭಿವೃದ್ಧಿಯ ಮೂಲ ಬೇರು ಸ್ಥಳಿಯಾಭಿವೃದ್ಧಿಯೇ ಆಗಿದೆ ಎಂಬ ಮತದಾರನ ಮನೋಧೋರಣೆ ಮತದಾನ ಪ್ರಕ್ರಿಯೆಯಲ್ಲಿ ಕಾಣಸಿಕ್ಕಿದ್ದು, ರಾಷ್ಟ್ರೀಯತೆಯ ಸಿದ್ದಾಂತವನ್ನೇ ನಂಬಿಕೊಂಡಿದ್ದ ಒಂದು ಪಕ್ಷಕ್ಕೆ ಇದು ಘಾತಕವಾಗಿಯೇ ಪರಿಣಮಿಸಲಿದೆ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿವೆ.

ಭಾರತೀಯ ಜನತಾ ಪಕ್ಷ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಕೆಲವು ವಿಶ್ಲೇಷಕರು ಹೇಳುತ್ತಾರೆ. ಮಿತ್ರಪಕ್ಷಗಳ ಸಹಾಯವಿಲ್ಲದೆ ಬಿಜೆಪಿ ಏಕಾಂಗಿಯಾಗಿ ಮ್ಯಾಜಿಕ್‌ ನಂಬರ್ 272 ತಲುಪಲು ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ ಎಂದು ಇನ್ನು ಕೆಲವರು ಭವಿಷ್ಯ ನುಡಿದಿದ್ದಾರೆ. ಮತ್ತೆ ಮರಳಿ ಮೋದಿ ನೇತೃತ್ವದ ಸರ್ಕಾರವೇ ಅಧಿಕಾರ ಹಿಡಿಯುತ್ತದೆ ಎಂಬ ವಿಶ್ಲೇಷಣೆಗಳೂ ಇವೆ. ಆದರೇ, ಉಭಯ ಮೈತ್ರಿ ಪಕ್ಷಗಳಿಗೂ ಮತದಾನದ ಪ್ರಮಾಣವು ಕಡಿಮೆಯಾಗಿರುವುದು ಒಳಗೊಳಗೆ ಆತಂಕವನ್ನು ಹೆಚ್ಚಿಸಿದೆ ಮತ್ತು ಎನ್‌ಡಿಎ ಮತ್ತು ʼಇಂಡಿಯಾʼ ಮೈತ್ರಿಕೂಟಗಳ ಬೆಂಬಲಿಗರು ಇದೇ ಕಾರಣಕ್ಕೆ ಫಲಿತಾಂಶದ ವಿಚಾರದಲ್ಲಿ ತುಸು ಗೊಂದಲಕ್ಕೀಡಾಗಿದ್ದಾರೆ. ಈ ನಡುವೆ ದೇಶಾದ್ಯಂತ ಬಿಜೆಪಿಯನ್ನು ಮಣಿಸಲು ಕಸರತ್ತು ನಡೆಸುತ್ತಿರುವ ‘ಇಂಡಿಯಾ’ ಮೈತ್ರಿಕೂಟಕ್ಕೆ ಈ ಲೋಕಸಭಾ ಚುನಾವಣೆ ಬಹುಮುಖ್ಯವಾಗಿದ್ದು, ಹೇಗಾದರೂ ಮಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಪಣ ತೊಟ್ಟಿವೆ.

ಅಯೋಧ್ಯೆಯ ಶ್ರೀರಾಮ ಮಂದಿರದ ಹೆಸರಿನಲ್ಲಿ ಮತ್ತೆ ದೇಶದಾದ್ಯಂತ ಹಿಂದುತ್ವದ ಉನ್ಮಾದ ಸೃಷ್ಟಿಸಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಯೋಜನೆ ರೂಪಿಸಿದ್ದ ಬಿಜೆಪಿಗೆ ದುರಾದೃಷ್ಟವಶಾತ್‌ ಅಷ್ಟಾಗಿ ರಾಮ ಮಂದಿರದ ವಿಚಾರ ಬಿಜೆಪಿಯ ಕೈಹಿಡಿಯುತ್ತಿಲ್ಲ ಎಂಬಂತೆ ಕಾಣಿಸುತ್ತಿದೆ. ರಾಮ ಮಂದಿರಕ್ಕೆ ಪ್ರತಿಯಾಗಿ ನಿತ್ಯ ಜೀವನೋಪಾಯಕ್ಕೆ ಧಕ್ಕೆ ತಂದ ವಿಷಯಗಳನ್ನೇ ಅಂದರೆ, ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು, ಆಡಳಿತ ವೈಫಲ್ಯದಂತಹ ವಿಚಾರಗಳನ್ನೇ ಮುನ್ನೆಲೆಗೆ ತಂದಿರುವ ವಿಪಕ್ಷಗಳ ಚುನಾವಣಾ ವಿಷಯವನ್ನಾಗಿಸಿವೆ.

ವಿಪಕ್ಷಗಳ ರಾಜಕೀಯ ಅಸ್ತ್ರ ಬಿಜೆಪಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಬಿಜೆಪಿ ಪ್ರತಿನಿಧಿಸುವ ಬಹುತೇಕ ಕ್ಷೇತ್ರಗಳ ರಾಜಕೀಯ ಚಿತ್ರಣವು ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ. ಹಾಲಿ ಸಂಸದರ ಬದಲಾವಣೆ, ಆಡಳಿತ ವಿರೋಧಿ ಅಲೆ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪದ ಹಾಗೆ ಪರಿಣಮಿಸಿದೆ ಎಂದರೇ ತಪ್ಪಿಲ್ಲ. ಬಿಜೆಪಿಯ ಬಾಯಿ ಮಾತಿನ ಅಭಿವೃದ್ಧಿ ಬಗ್ಗೆ ಮತದಾರರು ಸಹಜವಾಗಿಯೇ ಬೇಸರಗೊಂಡಿದ್ದಾರೆ ಎಂಬ ವಿಪಕ್ಷಗಳ ಪ್ರಚಾರ ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಕೂಡ. ಮಾತ್ರವಲ್ಲದೆ ಅಭಿವೃದ್ಧಿ ಒಬ್ಬ ನಾಗರಿಕನ ಮೇಲೆ ಸಾಲದ ಹೊರೆ ಹೊರಿಸುವುದಾದರೇ ಅಂತಹ ಅಭಿವೃದ್ಧಿ ಯಾಕೆ ಎಂಬ ಮನಸ್ಥಿತಿ ಮತದಾರರಲ್ಲಿ ಮೂಡಿಸುವಲ್ಲಿ ವಿಪಕ್ಷಗಳು ಯಶಸ್ಸಾಗಿವೆ.

ಈಗಾಗಲೇ ಮತದಾನ ಮುಗಿದಿರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಕ್ಷೇತ್ರಗಳು ದೊರೆಯುವುದಿಲ್ಲ ಎಂಬ ಸಮೀಕ್ಷಾ ವರದಿಗಳ ಜೊತೆಗೆ ಬಿಜೆಪಿ ಈ ಬಾರಿಯೂ ಮರಳಿ ಅಧಿಕಾರ ಹಿಡಿಯಲಿದೆ ಎಂಬ ಸಮೀಕ್ಷೆಯೂ ಬಂದಿವೆ. ಪ್ರಧಾನಿ ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ, ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ, ಮಿಗಿಲಾಗಿ ಎನ್‌ಡಿಎ ಈ ಬಾರಿ 195 ಸ್ಥಾನಗಳನ್ನೂ ದಾಟುವುದಿಲ್ಲ ಎಂದು ಹಲವಾರು ಸಮೀಕ್ಷೆಗಳು, ರಾಜಕೀಯ ವಿಶ್ಲೇಷಣೆಗಳಿವೆ. ಇದು, ಬಿಜೆಪಿಯಲ್ಲಿ ಆತಂಕ ಹುಟ್ಟಿಸಿದೆ. ಇನ್ನು, 5ನೇ ಹಂತದವರೆಗೆ ಬಿಜೆಪಿ 310 ಕ್ಷೇತ್ರಗಳನ್ನು ಗೆದ್ದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ಹೇಳಿಕೊಂಡಿದ್ದಾರೆ. ಇದು ಅವರ ಮತ್ತು ಬಿಜೆಪಿಯ ವಿಶ್ವಾಸವೇ ಅಂದುಕೊಂಡರೇ, ಈ ನಾಲ್ಕು ಐದು ಹಂತಗಳ ಚುನಾವಣೆಯಲ್ಲಿ ವಿಪಕ್ಷಗಳು ಪ್ರತಿನಿಧಿಸಿದ ಕ್ಷೇತ್ರಗಳ ಕಥೆ ? ಈ ಬಾರಿಯ ಲೋಕಸಭಾ ಚುನಾವಣೆಯಲ್ಲಂತೂ ಹೆಚ್ಚಿನ ಕ್ಷೇತ್ರಗಳಲ್ಲಿ ಬಹಳ ಸುಲಭವಾಗಿ ಬಿಜೆಪಿ ಗೆದ್ದು ಬಿಡುವ ವಾತಾವರಣವೇನೂ ಇಲ್ಲ ಎನ್ನುವುದು ಕೂಡ ಇಲ್ಲಿ ಮುಖ್ಯಾಂಶ.

ಈ ಚುನಾವಣೆಯಲ್ಲಿ ಬಿಜೆಪಿ ಸೋಲಬಹುದು ಎಂದು ನಂಬುವ ವರ್ಗ ಸಾಮಾನ್ಯವಾಗಿ 2004 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಪಡೆದ ಜನಾದೇಶವನ್ನು ಉಲ್ಲೇಖಿಸುತ್ತಾರೆ. ಇನ್ನು, ಬಹುತೇಕ ಎಲ್ಲಾ ಎಕ್ಸಿಟ್ ಪೋಲ್‌ಗಳು ಸಾರ್ವಜನಿಕ ಚಿತ್ತವನ್ನು ಅಳೆಯಲು ವಿಫಲವಾಗಿವೆ. ವೈಜ್ಞಾನಿಕ ತಂತ್ರಗಳ ಮೂಲಕ ನಡೆಸಿದ ಸಮೀಕ್ಷೆಗಳು ತಪ್ಪಾಗಬಹುದಾದರೆ, ಅವೈಜ್ಞಾನಿಕ ಮಾದರಿ ವಿಧಾನಗಳ ಆಧಾರದ ಮೇಲೆ ಮತ್ತು ಕ್ಷೇತ್ರದಲ್ಲಿ ಸಂಗ್ರಹಿಸಿದ ಪ್ರತಿಕ್ರಿಯೆ ಗ್ರೌಂಡ್‌ ರಿಪೋರ್ಟ್‌ಗಳು ಸಹ ತಪ್ಪುದಾರಿಗೆಳೆಯಬಹುದು. ಯಾಕೆಂದರೆ ಇಂತಹ ಸ್ಥಳೀಯ ಸಮೀಕ್ಷಾ ವರದಿಗಳು ಸಾಮಾನ್ಯವಾಗಿ ಚುನಾವಣೆಗಳನ್ನು 'ಪಿಚ್ಡ್ ಕದನಗಳು' ಎಂದು ಬಿಂಬಿಸುತ್ತವೆ, ಪ್ರತಿ ಕ್ಷೇತ್ರದಲ್ಲಿ ಆಯಾಯ ಅಭ್ಯರ್ಥಿಯ ಅಥವಾ ಪಕ್ಷದ ಬೆಂಬಲಿಗರು ಗೆಲುವು ತಮ್ಮದೇ ಎಂದು ಹೇಳಿಕೊಳ್ಳುತ್ತಾರೆ. ಹೀಗೆ ಸಂಗ್ರಹವಾದ ಅಭಿಪ್ರಾಯಗಳಿಂದ ಬಂದ ಸಮೀಕ್ಷಾ ವರದಿಗಳನ್ನು ಸುಳ್ಳು ಮಾಡಿದ ಚುನಾವಣೆಗಳು ಅದೆಷ್ಟೋ ಆಗಿ ಹೋಗಿವೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕೆಲವು ಡೇಟಾವನ್ನು ಗಮನಿಸೋಣ. 1999ರ ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿ ಶೇ.24ರಷ್ಟು ಮತಗಳ ಹಂಚಿಕೆಯೊಂದಿಗೆ 182 ಕ್ಷೇತ್ರಗಳನ್ನು ಗೆದ್ದಿತು, ಆದರೆ ಕಾಂಗ್ರೆಸ್ ಶೇ.28ರಷ್ಟು ಮತಗಳ ಹಂಚಿಕೆಯೊಂದಿಗೆ 114 ಕ್ಷೇತ್ರಗಳನ್ನು ಗೆದ್ದಿತು. ಎರಡೂ ಪಕ್ಷಗಳ ಮತ ಹಂಚಿಕೆಗಳ ನಡುವಿನ ಅಂತ ಕೇವಲ 4 ಶೇಕಡಗಳಷ್ಟಿದ್ದರೂ, ಎನ್‌ಡಿಎ ಮಿತ್ರಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು.

2004  ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿ ಶೇ.22ರಷ್ಟು ಮತ ಹಂಚಿಕೆಯೊಂದಿಗೆ 138 ಕ್ಷೇತ್ರಗಳನ್ನು ಗೆದ್ದುಕೊಂಡಿತು, ಆದರೆ ಕಾಂಗ್ರೆಸ್ ಶೇ.27ರಷ್ಟು ಮತ ಹಂಚಿಕೆಯೊಂದಿಗೆ 145 ಕ್ಷೇತ್ರಗಳನ್ನು ಗೆದ್ದಿತ್ತು. ಕಾಂಗ್ರೆಸ್ ತನ್ನ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಮಿತ್ರಪಕ್ಷಗಳೊಂದಿಗೆ ಸರ್ಕಾರವನ್ನು ರಚಿಸಿತು. 'ಭಾರತ ಪ್ರಕಾಶಿಸುತ್ತಿದೆ'(ಇಂಡಿಯಾ ಶೈನಿಂಗ್) ಪ್ರಚಾರದ ಹೊರತಾಗಿಯೂ ಬಿಜೆಪಿ ಆಘಾತಕಾರಿ ಸೋಲನ್ನು ಕಾಣಬೇಕಾಯಿತು. 1999 ರಲ್ಲಿ, ಬಿಜೆಪಿ ಗಳಿಸಿದ ಕ್ಷೇತ್ರಗಳಲ್ಲಿ ಸರಾಸರಿ ಮತ ಹಂಚಿಕೆ ಮತ್ತು ಗೆಲುವಿನ ಅಂತರ(60,000) ಹೇಳುವಷ್ಟೇನು ದೊಡ್ಡದ್ದಾಗಿರಲಿಲ್ಲ.ದೇ ಕಾರಣದಿಂದಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಸೋಲು ಕಾಣಬೇಕಾಯಿತು.

2019 ರಲ್ಲಿ, ಬಿಜೆಪಿಯ ಜಯಸಾಧಿಸಿದ ಕ್ಷೇತ್ರಗಳಲ್ಲಿ ಸರಾಸರಿ ಗೆಲುವಿನ ಅಂತರ ಸುಮಾರು 2.32 ಲಕ್ಷ ಮತಗಳು ಆಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಇದೇ ಧೈರ್ಯದಲ್ಲಿ ಬಿಜೆಪಿ ಮರಳಿ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ. ಆದರೇ 2024ರ ಅಂದರೇ ಈ ಸುತ್ತಿನ ಚುನಾವಣೆಯಲ್ಲಿಯೂ, ಆಡಳಿತ ವಿರೋಧಿ ಅಲೆಯ ನಡುವೆಯೂ ಮತ್ತು ವಿಪಕ್ಷಗಳ ಗೆಲ್ಲುವ ವಿಶ್ವಾಸ ಮಟ್ಟ ಹೆಚ್ಚಿರುವುದರ ನಡುವೆ ಕಳೆದ ಚುನಾವಣೆಯಲ್ಲಿ ಗಳಿಸಿದ ದೊಡ್ಡ ಅಂತರವನ್ನು ಬಿಜೆಪಿ ಪಡೆಯಬಹುದೇ ? ಪ್ರಶ್ನೆ ಮುಂದಿದೆ.

1984 ರ ಚುನಾವಣೆಯಲ್ಲಿ, ರಾಜೀವ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ 414 ಕ್ಷೇತ್ರಗಳನ್ನು ಗೆದ್ದರೂ, 1989 ರ ಚುನಾವಣೆಯಲ್ಲಿ ಸೋಲನುಭವಿಸಿತ್ತು. ಗಮನಾರ್ಹವಾಗಿ, 1984 ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ಕಾರಣದಿಂದ ಕಾಂಗ್ರೆಸ್‌ ಪರವಾದ ಅನುಕಂಪದ ಅಲೆ ಸೃಷ್ಟಿಯಾಗಿತ್ತು. ಮುಂದಿನ ಚುನಾವಣೆಯ ಹೊತ್ತಿಗೆ ಅದು ಕ್ಷೀಣಿಸಿತು ಮತ್ತು ಗಾಂಧಿ ಕುಟುಂಬದ ವಿರುದ್ಧದ ಬೋಫೋರ್ಸ್ ಹಗರಣ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿತ್ತು, ಕಾಂಗ್ರೆಸ್‌ ಸೋಲೊಪ್ಪಿಕೊಳ್ಳಬೇಕಾಯ್ತು. ಉಳಿದಿದ್ದು ಗೊತ್ತೇ ಇದೆ.

ಆದರೇ, ಭಾರತದಲ್ಲಿ ಇಂದು ರಾಜಕೀಯ ವಾತಾವರಣ 1984 ಅಥವಾ 2004 ಅಥವಾ 2019ರ ಲೋಕಸಭಾ ಚುನಾವಣೆಯಂತೆಯೇ ಇದೆಯೇ? ನೀವೂ ಯೋಚಿಸಿ.

-ಶ್ರೀರಾಜ್‌ ವಕ್ವಾಡಿ

Thursday, May 16, 2024

ಮೋದಿ ಮತ್ತು ಹದ್ದುಮೀರಿದ ಗಣ್ಯಪ್ರಜ್ಞೆ

 


ಸ್ವನಾಮ ವೈಭವೀಕರಣ, ಪ್ರಸ್ತುತ ರಾಜಕೀಯದ ಸ್ಥಿತಿಗತಿ !

2014ರ ಚುನಾವಣೆಗೂ ಮುನ್ನಾ ನಡೆದ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ ಮತ್ತು ನಿರ್ಭಯಾ ಅತ್ಯಚಾರ ಪ್ರಕರಣದ ವಿರುದ್ಧ ಎದ್ದ ಆಡಳಿತ ವಿರೋಧಿ ಆಂದೋಲನಗಳು ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಘಾತಕವಾಗಿದ್ದವು. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರದಿಂದ ಇಳಿಯುವುದಕ್ಕೆ ಈ ಎರಡು ವಿಷಯಗಳು ಬಹಳ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದ್ದವು.

ವರ್ಷಾನುಗಟ್ಟಲೇ ನಡೆದ ರೈತರ ಪ್ರತಿಭಟನೆ, ಮಣಿಪುರ ಹಿಂಸಾಚಾರ, ಉತ್ತರ ಪ್ರದೇಶದ ಹತ್ರಾಸ್‌ ಅತ್ಯಾಚಾರದಂತಹ ಪ್ರಕರಣಗಳು, ಸಿಎಎ ವಿರೋಧಿ ಪ್ರತಿಭಟನೆ, ಬಿಬಿಸಿ ನಿರ್ಮಾಣದ ಇಂಡಿಯಾ: ದಿ ಮೋದಿ ಕ್ವೆಶ್ಚನ್‌, ಚುನಾವಣಾ ಬಾಂಡ್‌ ನಿಷೇಧ, ಲಡಾಕ್‌ ಉಳಿಸಿ ಹೋರಾಟ, ಗಡಿ ವಿವಾದ, ಪೆಗಾಸಸ್‌ ಬೇಹುಗಾರಿಕೆ, ಹಣದುಬ್ಬರ, ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟು ಸೇರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದೇಶದ ಉದ್ದಗಲಕ್ಕೂ ನಡೆಸಿದ ಭಾರತ್‌ ಜೋಡೋ ಯಾತ್ರೆ ಮತ್ತು ಭಾರತ್‌ ಜೋಡೋ ನ್ಯಾಯ್ ಯಾತ್ರೆಗಳು ಬಿಜೆಪಿಗೆ ಈ ಬಾರಿ ಘಾತಕವಾಗುವಂತಹ ವಿಷಯಗಳೇ ಆಗಿವೆ. ಆದರೇ, ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷಾಧಿಕಾರ ಆರ್ಟಿಕಲ್‌ 370 ರದ್ದು, ರಾಮ ಮಂದಿರ ಲೋಕಾರ್ಪಣೆ(ಅಪೂರ್ಣ ಮಂದಿರ), ತ್ರಿವಳಿ ತಲಾಕ್‌ ರದ್ದು ವಿಚಾರಗಳೇ ಚುನಾವಣೆಗೆ ಪೂರಕವಾಗಲಿವೆ ಎಂಬ ಲೆಕ್ಕಚಾರದಲ್ಲಿ ಬಿಜೆಪಿ ಇದೆ.

ಹಿಂದುತ್ವ ಮತ್ತು ರಾಮ ಮಂದಿರ ಬಿಜೆಪಿಯ ಪ್ರಮುಖ ಅಸ್ತ್ರ ಎನ್ನುವುದು ನಿಜ. ಅಯೋಧ್ಯೆಯ ಅಪೂರ್ಣ ರಾಮ ಮಂದಿರ ಲೋಕಾರ್ಪಣೆ ಆಗುವ ಹೊತ್ತಿಗೆ ದೇಶದಲ್ಲಿ ಇದ್ದ ಉನ್ಮಾದ ಈಗ ಇಲ್ಲ ಎನ್ನುವುದು ಕೂಡ ನಿಜ. ಜನರಿಗೆ ಕೊನೆಗೆ ಈ ಎಲ್ಲಾ ಉನ್ಮಾದಗಳಿಗಿಂತ ಬದುಕೇ ಮುಖ್ಯ ಎನ್ನುವ ಅರಿವು  ಸ್ವಲ್ಪ ಮಟ್ಟಿಗೆ ಆದ ಹಾಗೆ ಕಾಣಿಸುತ್ತಿದೆ. ಆದರೂ ಬಿಜೆಪಿಯ ಮುಸ್ಲೀಮರ ಬಗೆಗಿನ ದ್ವೇಷ, ಮೋದಿ ಮತ್ತು ಮತ್ತಿತರ ಬಿಜೆಪಿಗರ ಮುಸ್ಲೀಮರ ವಿರುದ್ಧ ಮಾತುಗಳಿಂದ ಪ್ರಚೋದನೆಗೆ ಒಳಗಾಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಎಲ್ಲಾ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳುವುದಕ್ಕೆ ಈ ಚುನಾವಣೆಯಲ್ಲಿ ಮೋದಿ ಬಳಸಿದ ಮುಸ್ಲೀಮರ ವಿರುದ್ಧದ ದ್ವೇಷಪೂರಿತ ಬಾಷಣಗಳ ಕಾರಣದಿಂದಾಗಿ ಮೋದಿ ಪ್ರತಿನಿತ್ಯ ಹೆಚ್ಚುಹೆಚ್ಚು ಹಿಂದೂ ಹೃದಯ ಸಾಮ್ರಾಟನಾಗುತ್ತಿರುವುದು ಕೂಡ ಅಷ್ಟೇ ಸತ್ಯ. ಆದರೇ, ಇಂತಹದ್ದೊಂದು ಬೆಳವಣಿಗೆಯೇ ಈ ಬಾರಿ ಬಿಜೆಪಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಡಲಿದೆ ಎಂಬ ನಂಬಿಕೆ ಸ್ವತಃ ಬಿಜೆಪಿಯಲ್ಲಿಯೇ  ದಟ್ಟವಾಗಿಲ್ಲ ಎಂಬ ವಾತಾವರಣ ಕಾಣಿಸುತ್ತಿದೆ. ರಾಮ ಮಂದಿರ ಹಾಗೂ ಹಿಂದುತ್ವದ ಬಗೆಗಿನ ನಿಷ್ಠೆಯನ್ನು ಹೊರತಾಗಿ ಬಿಜೆಪಿಗೆ ಮತ ಹಾಕುವವರ ಮನಸ್ಸಿನಲ್ಲಿಯೂ ಇತ್ತೀಚೆಗೆ ಮೋದಿ ಆಡುತ್ತೀರುವ ವಿಪರೀತ ದ್ವೇಷ ಬಾಷಣಗಳು ಆತಂಕ ಮೂಡಿಸಿದೆ ಎನ್ನುವ ಹಾಗೆ ಕಾಣಿಸುತ್ತಿದೆ.    

ಬಹುಶಃ ಮೋದಿ ಇಂತಹದ್ದನ್ನು ಚುನಾವಣೆಯಲ್ಲಿ ಆಯ್ದುಕೊಳ್ಳದೇ ಇದ್ದಿದ್ದರೇ, ಈಗಿನ ರಾಜಕೀಯದ ಪರಿಸ್ಥಿತಿ ಬೇಡುವ ಸಾಮರ್ಥ್ಯವನ್ನು ಮೋದಿ ವೃದ್ಧಿಸಿಕೊಳ್ಳುವುದಕ್ಕೆ ಸಾದ್ಯವಾಗುತ್ತಿರಲಿಲ್ಲ. ಇದು ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ರಾಷ್ಟ್ರ ರಾಜಕಾರಣದ ಪಾಲಿಗೆ ಎಷ್ಟು ಸತ್ಯವೋ ಅಷ್ಟೇ ಅಪ್ರಿಯವೂ ಹೌದು. ಮೋದಿ ಅವರ ಆತ್ಮರತಿಗೆ ಸ್ವತಃ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಬೇಸತ್ತಿರಬಹುದು. ಈ ಪ್ರಜಾಪ್ರಭುತ್ವದ ದೇಶದಲ್ಲಿ ತನಗಿಂತ ಶ್ರೇಷ್ಠ ನಾಯಕನಿಲ್ಲ ಎಂದು ಗುರುತಿಸಿಕೊಳ್ಳುವ ಒಂದು ಅತೀವ ಆಸೆ ಮೋದಿ ಅವರ ಮನಸ್ಸಿನಲ್ಲಿದೆ. ಈ ಮನಸ್ಸನ್ನೇ ಸ್ವತಃ ಆರ್‌ಎಸ್‌ಎಸ್‌ ಒಪ್ಪಿಕೊಳ್ಳುವುದಿಲ್ಲ. ಮೋದಿ ಸಂಪುಟದಲ್ಲಿರುವ ಹಾಗೂ ಪಕ್ಷಕ್ಕಿಂತ ಮೋದಿಗೆ ಹೆಚ್ಚು ವಿದೇಯರಾಗಿರುವ ಬಿಜೆಪಿ ನಾಯಕರೂ ಕೂಡ ʼಮೋದಿʼ ಪ್ರಭುತ್ವವನ್ನೇ ತಮಗೆ ಅರಿವೇ ಇಲ್ಲದೇ ತಮ್ಮಗೊಳಗೆ ಆವರಿಸಿಕೊಂಡು ಬಿಟ್ಟಿದ್ದಾರೆ. ಪ್ರಭುತ್ವವನ್ನು ಒಪ್ಪಿಕೊಳ್ಳುವುದು ಎಂದರೇ, ಅದು ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕುವುದೇ ಆಗಿದೆ.  ಪ್ರಜೆಗಳು ಅವನನ್ನು ಮತ್ತು ಅವನ ಎಲ್ಲಾ ನಡೆಯನ್ನು ದೈವಾಜ್ಞೆ ಎಂದು ಪಾಲಿಸಬೇಕು ಎಂಬ ವಾತಾವರಣ ಸೃಷ್ಟಿ ಮಾಡುವ ʼಪ್ರಭುತ್ವʼವನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಮೋದಿ ತನ್ನ ʼಪರಿವಾರʼದವರಿಗೆ ಮಾಡಿದ್ದಾರೆ. ಆದರ್ಶ ಪ್ರಜಾಪ್ರಭುತ್ವದಲ್ಲಿ ಇರಬೇಕಾದ, ಆದರೇ ವಾಸ್ತವದಲ್ಲಿ ಕಣ್ಮರೆಯಾಗಿರುವ ಸ್ಥಿತಿಯನ್ನು ಮೋದಿ ಒಂದು ಹಂತದಲ್ಲಿ ಸೃಷ್ಟಿ ಮಾಡಿದ್ದಾರೆಯೇ ಎನ್ನುವ ಪ್ರಶ್ನೆಯೂ ಇದೆ.  

ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರದಲ್ಲಂತೂ ಪಕ್ಷ, ಪಕ್ಷದ ಚಿಹ್ನೆಗಿಂತ ʼಮೋದಿ ನಾಮʼವನ್ನೇ ಅಭ್ಯರ್ಥಿಗಳು ಬಳಸಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಅಭ್ಯರ್ಥಿಗಳು ಸ್ವನಾಮ ಬಳಕೆಯಿಲ್ಲದೇ ಚುನಾವಣೆಯನ್ನು ಎದುರಿಸಿದ್ದು ತಮಗೆ ವರ್ಚಸ್ಸು ಇಲ್ಲ ಎಂಬ ಕಾರಣಕ್ಕೋ ಅಥವಾ ಮೋದಿಗೆ ಶರಣಾಗಿ ಸಾಮಂತರಾಗಿ ಆಳ್ವಿಕೆ ಮಾಡುತ್ತೇವೆ ಎಂಬ ಕಾರಣಕ್ಕೋ ತಿಳಿಯುತ್ತಿಲ್ಲ. ಪರೋಕ್ಷವಾಗಿ ಪಕ್ಷಕ್ಕಿಂತ, ಆರ್‌ಎಸ್ಎಸ್‌ ಸಂಘಟನೆಗಿಂತ ಅಥವಾ ಬಿಜೆಪಿಯ ಸಿದ್ದಾಂತಕ್ಕಿಂತ ಮೋದಿಯೇ ನಮ್ಮ ಮೊದಲ ಆದ್ಯತೆ ಎಂಬುವುದನ್ನು ಈ ನಾಯಕರೆಲ್ಲಾ ಒಪ್ಪಿಕೊಂಡರೇ ? ಪರೋಕ್ಷವಾಗಿ ʼಪ್ರಭುತ್ವʼವನ್ನು ಮೆಚ್ಚಿಕೊಂಡರೇ ? ʼಮೋದಿ ಕಾ ಪರಿವಾರ್‌ʼ ಎಂಬ ಪ್ರಚಾರ ಗಿಟ್ಟಿಸಿಕೊಳ್ಳುವ ಮೋದಿಯ ಉದ್ದೇಶ ? ಮುಂದೊಂದು ದಿನ ಈ ʼಮೋದಿ ಕಾ ಪರಿವಾರ್‌ʼ ಒಂದು ರಾಜಕೀಯ ಪಕ್ಷವೇ ಆಗಿ ಬದಲಾಗುವ ಮುನ್ಸೂಚನೆಯೇ ? ಗೊತ್ತಿಲ್ಲ. ಮೋದಿಯನ್ನು ವಿಷ್ಣುವಿನ ಅವತಾರ ಎಂದೆಲ್ಲಾ ಹಾಡಿ ಹೊಗಳಿದವರು ಬಿಜೆಪಿಯಲ್ಲಿದ್ದಾರೆ ಎನ್ನುವುದು ಕೂಡ ಉಲ್ಲೇಖಾರ್ಹ.   

ಈ ಮನೋಧೋರಣೆ ಭಾರತದಂತಹ ರಾಜಕೀಯ ಹಾಗೂ ಚುನಾವಣಾ ಪ್ರಕ್ರಿಯೆಗೆ ಅಂಟಿರುವುದು ಆಶ್ಚರ್ಯವೇ ಸರಿ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ, ಜಾಹೀರಾತುಗಳಲ್ಲಿ ಬಿಜೆಪಿಯ ಚಿಹ್ನೆಗಿಂತ ಮೋದಿಯವರೇ ಹೆಚ್ಚು ರಾರಾಜಿಸಿದ್ದಾರೆ. ಸಣ್ಣ ಮಟ್ಟಿನ ಆತ್ಮರತಿ ಅಥವಾ ಗಣ್ಯಪ್ರಜ್ಞೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುವುದು ಸಹಜ. ಅದು ಅತಿಯಾದರೇ ಅಸಹಜವೇ ಸರಿ. ಇದು ಆತ್ಮರತಿಯ ಪರಾಕಾಷ್ಠೆಯೆ ಆಗಿದೆ. ನಿರ್ಲಜ್ಜೆಯಿಂದ ಏನೋ ಮಹತ್ತರವಾದ ಸಾಧನೆಯನ್ನು ಮಾಡಿದ್ದೇನೆ ಎಂಬ ಸ್ವಯಂ ವೈಭವೀಕರಣದ ವ್ಯಕ್ತಿತ್ವ ರಾಜಕೀಯ ಕ್ಷೇತ್ರದಲ್ಲಿ ತುಸು ಹೆಚ್ಚೇ ಇರುತ್ತದೆ. ಆದರೇ, ಬಹುಶಃ ದೇಶ ಇಷ್ಟೊಂದು ಆತ್ಮರತಿಯುಳ್ಳ ರಾಜಕಾರಣಿಯನ್ನು ಕಂಡ ಉದಾಹರಣೆಯೇ ಇಲ್ಲವೇನೋ.

ಕರ್ನಾಟಕದಲ್ಲೂ ʼಮೋದಿ ನಾಮʼ ಮತ್ತು ವಿಫಲತೆ :

ಈ ಭಾರಿಯ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕಾರಣದ ಈಗಿನ ಪರಿಸ್ಥಿತಿ ಗಮನಿಸುವುದಾದರೇ ಮೋದಿ ಹವಾ, ಆ ಅಲೆ, ಈ ಅಲೆ, ಹಿಂದುತ್ವ ಹಾಗೂ ರಾಮ ಮಂದಿರದ ಹೆಸರಿನಲ್ಲಿ ಸೃಷ್ಟಿಸಿದ ಉನ್ಮಾದದ ನಡುವೆಯೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಾಂಗ್ರೆಸ್ ಈ ಬಾರಿ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಏರಿದ್ದು,‌ ರೇವಂತ್‌ ರೆಡ್ಡಿ ನೇತೃತ್ವದ ಕಾಂಗ್ರೆಸ್ ತೆಲಂಗಾಣ ರಾಜ್ಯದಲ್ಲೂ ಗೆದ್ದು ಅಧಿಕಾರ ಹಿಡಿದಿರುವುದು ಮಾತ್ರವಲ್ಲದೇ, ತಮಿಳುನಾಡು, ಕೇರಳದಲ್ಲೂ ತನ್ನ ನೇತೃತ್ವದ ʼಇಂಡಿಯಾʼ ಮೈತ್ರಿಕೂಟದ ಪಕ್ಷಗಳೇ ಅಧಿಕಾರದಲ್ಲಿರುವುದು ಬಲವರ್ಧನೆ ಹೆಚ್ಚಳವಾಗುವುದಕ್ಕೆ ಪೂರಕವಾಗಿದೆ. ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲೂ ಮೋದಿ ಹಾಗೂ ಅಮಿತ್ ಶಾ ಜೋಡಿಯ ರಾಜಕೀಯ ತಂತ್ರಗಳು ಫಲ ನೀಡದೆ ಕಾಂಗ್ರೆಸ್ ನಿಚ್ಚಳ ಬಹುಮತ ಗಳಿಸಿ ಅಧಿಕಾರ ಹಿಡಿದಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ʼಮೋದಿನಾಮʼ ಬಿಜೆಪಿಗೆ ಯಶಸ್ಸು ತಂದುಕೊಟ್ಟಿಲ್ಲ. ಬಿಜೆಪಿ ಇದೀಗ ಮಾಜಿ ಪ್ರಧಾನಿ ದೇವೇಗೌಡರ ನಾಯಕತ್ವದ ಜಾತ್ಯತೀತ ಜನತಾದಳದ ಮೈತ್ರಿಯನ್ನು ಆಶ್ರಯಿಸುವಷ್ಟು ದಯನೀಯ ಸ್ಥಿತಿಯನ್ನು ಮುಟ್ಟಿದೆ. ಅಲ್ಲಿಯೂ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಇಡೀ ದೇಶದಾದ್ಯಂತ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಧಕ್ಕೆ ಉಂಟು ಮಾಡಿದೆ. ʼಮೋದಿ ನಾಮʼ ಇಂತಹ ಕಳಂಕವನ್ನೆಲ್ಲಾ ದೂರಿಕರಿಸುತ್ತದೆ ಎಂಬ ನಂಬಿಕೆಯಲ್ಲಿಯೇ ಮೈತ್ರಿ ಅಭ್ಯರ್ಥಿಗಳು ಚುನಾವಣೆಯನ್ನು ಎದುರಿಸಿದರು. ಅಷ್ಟಾಗಿಯೂ ದೇಶದ ಮೊದಲ ಚುನಾವಣೆಯಿಂದಲೂ ಇಲ್ಲಿನ ಮತದಾರರು ಬದುಕನ್ನು ಕಿತ್ತುಕೊಂಡವರನ್ನು, ಸಾಮಾಜಿಕ ಬದುಕಿನಲ್ಲಿ ಸಂಘರ್ಷಕ್ಕೆ ಕಾರಣವಾದವರನ್ನು, ಪ್ರಜಾಪ್ರಭುತ್ವದ ಬದುಕಿಗೆ ಚ್ಯುತಿ ತಂದವರನ್ನು ನಿರಂತರವಾಗಿ ಅಧಿಕಾರದಿಂದ ಇಳಿಸುತ್ತಲೇ ಬಂದಿದ್ದಾರೆ ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ.

ರಾಜಧಾನಿ ದೆಹಲಿ ಧಣಿಗಳ ನಿರ್ದೇಶನಕ್ಕೆ ಮಣಿದು ಅನಿವಾರ್ಯವಾಗಿ ಜೆಡಿಎಸ್‌ನೊಂದಿಗೆ ಮೈತ್ರಿಯನ್ನು ಒಪ್ಪಿಕೊಂಡ ಬಿಜೆಪಿ ಸ್ಥಳೀಯ ನಾಯಕರು ಚುನಾವಣೆ ಎದುರಿಸಿದ್ದಾರೆ. ಇನ್ನು, ಮೋದಿ ಕರ್ನಾಟಕಕ್ಕೆ ಬಂದು ಮೆರೆದಿದ್ದು ಕೂಡ ಸ್ವನಾಮ ಪ್ರೀತಿಯನ್ನೇ. ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್‌. ಡಿ ದೇವೇಗೌಡರಿಂದಲೂ ತಮ್ಮ ಜಪ ಮಾಡಿಸಿಕೊಂಡ ಕೀರ್ತಿ ಯಾರಿಗಾದರೂ ಸಲ್ಲುತ್ತದೆ ಎಂದರೇ ಅದು ಮೋದಿ ಅವರಿಗೆ ಮಾತ್ರ. ಅದು ಅವರು ಸೃಷ್ಟಿಸಿಕೊಂಡ ಸ್ವನಾಮ ವೈಭವೀಕರಣದಿಂದಲೇ ಸಾಧ್ಯವಾಗಿದ್ದೆನ್ನುವುದು ಇಲ್ಲಿ ಮುಖ್ಯಾಂಶ.  

ಬಹುಶಃ 2014ರಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಮೋದಿ ಅವರನ್ನು ಆಯ್ಕೆ ಮಾಡುವಾಗ ಆರ್‌ಎಸ್‌ಎಸ್‌ ಗೂ, ಮೋದಿ ಸಂಘವನ್ನು ಮೀರಿ ಬೆಳೆಯುತ್ತಾರೆ ಎನ್ನುವುದರ ಬಗ್ಗೆ ಊಹೆ ಇದ್ದಿರಲಿಕ್ಕಿಲ್ಲ. ೨೦೧೪ರ ಆರಂಭದಲ್ಲಿ ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿ ಮೋದಿ ಇದ್ದಿದ್ದರು, ಮೋದಿ ಬರಬರುತ್ತಾ ಆ ನಿಯಂತ್ರಣವನ್ನು ಮೀರಿ ಬೆಳೆದರು. ಇದೇ ಆರ್‌ಎಸ್‌ಎಸ್‌ ನಾಯಕರಲ್ಲಿ ಅಸಮಾಧಾನ ಮೂಡುವುದಕ್ಕೆ ಕಾರಣ. ರಾಮ ಮಂದಿರದ ಶ್ರೇಯ ಮೋದಿ ಒಬ್ಬರೇ ಪಡೆದುಕೊಂಡಿರುವುದರ ಬಗ್ಗೆ ಆರ್‌ಎಸ್‌ಎಸ್‌ ನಾಯಕರಲ್ಲಿ ಸಣ್ಣ ಮುನಿಸಿದೆ. ಆರ್‌ಎಸ್‌ಎಸ್‌ ಮತ್ತು ಮೋದಿ ನಡುವೆ ಸಣ್ಣ ಭಿನ್ನಾಭಿಪ್ರಾಯವಿದೆ ಎನ್ನುವ ವಿಚಾರಕ್ಕೆ ವಿರೋಧ ಯಾವ ಮಟ್ಟದಲ್ಲಿ ಬರಲಿದೆ ಎನ್ನುವುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಆದರೇ, ಸಂಘಟನಾ ಶಕ್ತಿಯಿಂದ ಧರ್ಮ ರಕ್ಷಣೆ ಮಾಡುವ ದೃಷ್ಟಿಯಲ್ಲಿ ಶಾಖೆಗಳಲ್ಲಿ ದೇಶಭಕ್ತಿಯನ್ನು ಕಣಕಣದಲ್ಲೂ ಆಹ್ವಾಹಿಸಿಕೊಂಡು ದೇಶಕ್ಕಾಗಿ ನಾವು ಎಂಬ ಉತ್ಸಾಹದಲ್ಲಿ ಹಿಂದೂ ಧರ್ಮದ ಸಂಘಟನೆ ಮಾಡಿದ ಆರ್‌ಎಸ್‌ಎಸ್‌ ನಾಯಕರಿಗೆ ಮೋದಿ ಅವರ ಈ ಧೋರಣೆ ಹಿಡಿಸುತ್ತದೆಯೇ ? ಪ್ರಶ್ನೆಯಾಗಿಯೇ ಉಳಿದಿದೆ.  

-ಶ್ರೀರಾಜ್‌ ವಕ್ವಾಡಿ

 

Thursday, May 9, 2024

ವಯನಾಡಿನ ಪ್ರೀತಿಯನ್ನು ರಾಗಾ ಮರೆಯುವುದಿಲ್ಲ !

 

ರಾಯ್ಬರೇಲಿಯ ಉಪಚುನಾವಣೆಯಲ್ಲಿ ಪ್ರಿಯಾಂಕಾ ಸ್ಪರ್ಧೆ | ಅಮೇಥಿ ಮರಳಿ ಕಾಂಗ್ರೆಸ್‌ಗೆ !?

 ಹಲವು ರಾಜಕೀಯ ವಿಶ್ಲೇಷಣೆಗಳು, ರಾಜಕೀಯ ವಲಯದ ಚರ್ಚೆಗಳ ನಡುವೆ ಅಳೆದು ತೂಗಿ ಕಾಂಗ್ರೆಸ್ ಪಕ್ಷ ಅಂತಿಮವಾಗಿ ಅಮೇಥಿ ಹಾಗೂ ರಾಯ್ಬರೇಲಿ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ನಾಮಪತ್ರದ ಕೊನೆಯ ದಿನದಂದು ಕಣಕ್ಕಿಳಿಸಿದೆ. ಈ ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ಮಾಡಿರುವ ಬೆನ್ನಲ್ಲೇ ಉತ್ತರಪ್ರದೇಶದ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ವಯನಾಡಿನ ಹೊರತಾಗಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ರಾಯ್ಬರೇಲಿಯಿಂದಲೂ ಸ್ಪರ್ಧಾ ಕಣಕ್ಕೆ ಇಳಿದಿದ್ದು ಹಾಗೂ ಗಾಂಧಿ ಕುಟುಂಬದ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಿಶೋರಿ ಲಾಲ್ ಶರ್ಮಾ ಅಮೇಥಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ರಾಯ್ಬರೇಲಿ ಅಥವಾ ಅಮೇಥಿಯಿಂದ ಈ ಭಾರಿ ಸ್ಪರ್ಧಾ ಕಣಕ್ಕೆ ಇಳಿಯುವುದು ಬಹುತೇಕ ನಿಶ್ಚಿತ ಎಂಬ ರಾಜಕೀಯ ಚರ್ಚೆಗಳು ಕೇಳಿ ಬಂದಿದ್ದವು. ಆದರೇ, ಎಲ್ಲಾ ನಿರೀಕ್ಷೆಗಳು ಹುಸಿಯಾದವು.

ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್‌ನ ಭದ್ರಕೋಟೆ ಎಂದು ಕರೆಸಿಕೊಳ್ಳುವ ಅಮೇಥಿ ಹಾಗೂ ರಾಯ್ಬರೇಲಿ ಕ್ಷೇತ್ರಗಳಿಗೆ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೇ ಸ್ಪರ್ಧಿಸಬೇಕು ಎಂಬ ಒತ್ತಾಯ ಸ್ಥಳೀಯ ಕಾಂಗ್ರೆಸ್‌ ಘಟಕದಿಂದ ಕೇಳಿಬಂದಿತ್ತು. ಗಾಂಧಿ ಕುಟುಂಬದ ಸದಸ್ಯರು ಅಮೇಥಿಯಿಂದ ಸ್ಪರ್ಧಿಸದಿದ್ದಲ್ಲಿ ಸ್ಮೃತಿ ಇರಾನಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಸಣ್ಣ ಭಯ ಕಾಂಗ್ರೆಸ್‌ ವಲಯದಲ್ಲಿ ಸೃಷ್ಟಿಯಾಗಿತ್ತು. ರಾಯ್ಬರೇಲಿಯಿಂದ ಪ್ರಿಯಾಂಕಾ ಗಾಂಧಿ, ಅಮೇಥಿಯಿಂದ ರಾಹುಲ್‌ ಗಾಂಧಿ ಸ್ಪರ್ಧಿಸುವುದು ಖಚಿತ ಎಂದು ಕಾಂಗ್ರೆಸ್‌ ವಲಯ ಭಾವಿಸಿತ್ತು. ಆದರೇ ಕಾಂಗ್ರೆಸ್‌ ಹೈಕಮಾಂಡ್‌ನ ಯೋಚನೆ ಮತ್ತು ಯೋಜನೆ ಬೇರೆಯಾಗಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಉತ್ತರ ಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟುವ ಜವಾಬ್ದಾರಿ ವಹಿಸಿಕೊಂಡಿದ್ದ ಪ್ರಿಯಾಂಕಾ, ಬಹಳ ದೊಡ್ಡ ಸುದ್ದಿಯಲ್ಲಿ ಇದ್ದಿದ್ದರೂ ಕೂಡ ಉ.ಪ್ರದೇಶದಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸಬೇಕಾಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಮಟ್ಟಕ್ಕೆ ಪ್ರಿಯಾಂಕ ಕಾಣಿಸಿಕೊಂಡರು. ಉತ್ತರ ಪ್ರದೇಶದಲ್ಲಿ ಮಹಿಳಾ ಕಾಂಗ್ರೆಸ್‌ನ ವರ್ಚಸ್ಸನ್ನು ವೃದ್ಧಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಚುನಾವಣಾ ಭವಿಷ್ಯವನ್ನು ಪುನರುಜ್ಜೀವಗೊಳಿಸುವ ಗುರಿಯನ್ನು ಹೊಂದಿದ್ದ ಪ್ರಿಯಾಂಕಾ, ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಅಹರ್ನಿಶಿ ಪ್ರಯತ್ನಿಸಿದರು. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹತ್ರಾಸ್‌ ಅತ್ಯಚಾರ ಪ್ರಕರಣದ ವಿರುದ್ಧ ನಿಂತು ಪ್ರಿಯಾಂಕ ಗಾಂಧಿ ಹಾಗೂ ರಾಹುಲ್‌ ಗಾಂಧಿ ದೇಶದ ಗಮನ ಸೆಳೆದರು. ಪ್ರಿಯಾಂಕ ಭರವಸೆಯಾಗಿ ಕಾಣಿಸಿಕೊಂಡರು. ಆದರೂ ಚುನಾವಣೆಯಲ್ಲಿ ಇವು ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ರಾಹುಲ್‌ ಗಾಂಧಿ ಸ್ಪರ್ಧಿಸಿ, ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೂಹಗಳು ಊಹಾಪೂಹಗಳಾಗಿಯೇ ಉಳಿದವು. ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಮತ್ತು ಬದಲಿಗೆ ರಾಷ್ಟ್ರವ್ಯಾಪಿ ಪ್ರಚಾರದತ್ತ ಗಮನ ಹರಿಸಿದ್ದಾರೆ.

ಅಮೇಥಿ ಮತ್ತು ರಾಯ್ಬರೇಲಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಭದ್ರಕೋಟೆಗಳಾಗಿವೆ. ಅಮೇಥಿಗೆ ಹೋಲಿಸಿದರೇ ರಾಯ್ಬರೇಲಿ ರಾಹುಲ್‌ಗೆ ಸುರಕ್ಷಿತ ಕ್ಷೇತ್ರ ಎಂಬ ನಿರ್ಧಾರಕ್ಕೆ ಬಂದು ರಾಹುಲ್‌ ಗಾಂಧಿ ರಾಯ್ಬರೇಲಿಯಿಂದ ಕಣಕ್ಕಿಳಿದರು. ಪ್ರಿಯಾಂಕ ಕ್ಷೇತ್ರವನ್ನು ಸಹೋದರನಿಗೆ ಬಿಟ್ಟುಕೊಟ್ಟರು ಎಂಬ ಮಾತೂ ಕೂಡ ಇದೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್‌ ಯಾದವ್‌ ಅವರೊಂದಿಗಿನ ಪ್ರಬಲ ಮೈತ್ರಿ ಇರುವ ಕಾರಣ ಈ ಬಾರಿ ಈ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್‌ ಮತ್ತೆ ವಶಕ್ಕೆ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ರಾಜ್ಯ ಕಾಂಗ್ರೆಸ್‌ ಘಟಕ ಇದ್ದಿತ್ತು. ರಾಯ್ಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ರಾಯ್ಬರೇಲಿಯನ್ನು ಹೊರತು ಪಡಿಸಿ ಬಚ್ರವಾನ್‌, ಹರ್ಚಂದಪುರ್‌, ಸರಿನಿ, ಉಂಚಹರ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಶಾಸಕರಿದ್ದಾರೆ. ಹಾಗಾಗಿ ಸಹಜವಾಗಿ ಸಮಾಜವಾದಿ ಪಕ್ಷದ ಮತಗಳು ಕಾಂಗ್ರೆಸ್‌ಗೆ ಬರುವುದು ನಿಶ್ಚಿತ.

ಇನ್ನು ಅಮೇಥಿಯಿಂದ ಬ್ರಾಹ್ಮಣ ವರ್ಗದ ಜನಪ್ರಿಯತೆಯನ್ನು ಹೊಂದಿರುವ ಸ್ಥಳೀಯ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿ ಮೇಲ್ಜಾತಿಗಳು, ಬುಡಕಟ್ಟುಗಳು, ದಲಿತರು ಮತ್ತು ಮುಸ್ಲಿಮರಿಂದ ಸಾಂಪ್ರದಾಯಿಕ ಬೆಂಬಲವನ್ನು ಮರಳಿ ಪಡೆಯಲು ಪಕ್ಷದ ತಂತ್ರ ಹೆಣೆಯಿತು. ರಾಜಕೀಯವಾಗಿ, ಈ ಕ್ರಮ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ವಿರುದ್ಧ ಹೊಸ ಅಸ್ತ್ರವನ್ನೇ ಒದಗಿಸಿದೆ. ಕಾಂಗ್ರೆಸ್ ನ ಈ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಟೀಕಿಸಿದ್ದು, ಚುನಾವಣಾ ರ್ಯಾಲಿಗಳ ಸಂದರ್ಭದಲ್ಲಿ ಕಾಂಗ್ರೆಸ್‌ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ. ಇನ್ನು, ರಾಹುಲ್ ಗಾಂಧಿ 2004 ರಿಂದ ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ, 2019ರಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತರು. ಅವರು ಪ್ರಸ್ತುತ ಕೇರಳದ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಚುನಾವಣಾ ಇತಿಹಾಸದ ದಾಖಲೆಗಳ ಪ್ರಕಾರ, ಅಮೇಥಿಯಲ್ಲಿ ಕಾಂಗ್ರೆಸ್ 18 ಚುನಾವಣೆಗಳ ಪೈಕಿ 15 ಬಾರಿ ಮತ್ತು ರಾಯ್ಬರೇಲಿಯಲ್ಲಿ 20 ಚುನಾವಣೆಗಳ ಪೈಕಿ 17 ಬಾರಿ ಗೆದ್ದಿದೆ. ಅಮೇಥಿಗೆ ಹೋಲಿಸಿದರೆ ರಾಯ್ಬರೇಲಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಬಲವಾಗಿದೆ. ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಇಲ್ಲಿ ರಾಹುಲ್ ವಿರುದ್ಧ ದೊಡ್ಡ ಮಟ್ಟದ ಪೈಪೋಟಿ ನೀಡುತ್ತಾರೆ ಎಂಬ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಪ್ರಿಯಾಂಕ ಗಾಂಧಿ ಹಾಗೂ ಕೆ. ಎಲ್‌ ಶರ್ಮಾ ಪಕ್ಷ ಸಂಘಟನೆಯಲ್ಲಿ ನಿರಂತರ ಶ್ರಮ ವಹಿಸಿದ್ದಾರೆ. ಗಾಂಧಿ ಪರಿವಾರದ ಭದ್ರಕೋಟೆ ಎಂಬ ಪಟ್ಟವೂ ಈ ಕ್ಷೇತ್ರಕ್ಕಿದೆ. 

ಚುನಾವಣಾ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ರಾಹುಲ್ ಗಾಂಧಿಯವರು 2014 ರಲ್ಲಿ ಅಮೇಥಿಯಲ್ಲಿ ಶೇ. 46ರಷ್ಟು ಮತಗಳನ್ನು ಪಡೆದುಕೊಂಡಿದ್ದರು, 2019 ರಲ್ಲಿ ರಾಹುಲ್‌ ವರ್ಚಸ್ಸು ಅಮೇಥಿಯಲ್ಲಿ ಕುಸಿದಿತ್ತು ಎನ್ನುವುದಕ್ಕೆ ಅವರು ಪಡೆದುಕೊಂಡ ಶೇ. 43 ರಷ್ಟು ಮತಗಳೇ ಸಾಕ್ಷಿ. ರಾಯ್ಬರೇಲಿಯಲ್ಲಿ, ಸೋನಿಯಾ ಗಾಂಧಿಯವರು ಚುನಾವಣೆಗಳಲ್ಲಿ ಸತತವಾಗಿ ಶೇ. 55-56ರಷ್ಟು ಮತಗಳನ್ನು ಸಲೀಸಾಗಿ ಪಡೆದುಕೊಂಡಿದ್ದಾರೆ.

2022ರ ವಿಧಾನಸಭಾ ಚುನಾವಣೆಯಲ್ಲಿ(ರಾಯ್ಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು) ಎಸ್‌ಪಿ ಐದರಲ್ಲಿ ನಾಲ್ಕು ಕ್ಷೇತ್ರಗಳನ್ನು ಗೆದ್ದರೆ, ಅಮೇಥಿಯಲ್ಲಿ ಬಿಜೆಪಿ ಮೂರು ಮತ್ತು ಎಸ್‌ಪಿ ಎರಡು ಕ್ಷೇತ್ರಗಳನ್ನು ಗಳಿಸಿತು. ಈಗ ಎಸ್‌ಪಿ ಜೊತೆಗಿನ ಕಾಂಗ್ರೆಸ್ ಮೈತ್ರಿಯನ್ನು ಗಮನಿಸಿದರೆ, ರಾಯ್ಬರೇಲಿ ಸುರಕ್ಷಿತ ಕ್ಷೇತ್ರವಾಗಿ ಕಾಣಿಸುತ್ತಿದೆ. ಒಂದು ವೇಳೆ ರಾಹುಲ್ ಅಮೇಥಿಯಿಂದ ಸ್ಪರ್ಧಿಸಿ ಮತ್ತೊಮ್ಮೆ ಸೋತರೇ ಅದು ಕಾಂಗ್ರೆಸ್ ಪಕ್ಷದೊಳಗೆ ಅವರ ಸ್ಥಾನಮಾನವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತ್‌ ಜೋಡೋ ಯಾತ್ರೆ, ಭಾರತ್‌ ಜೋಡೋ ನ್ಯಾಯ ಯಾತ್ರೆಯ ಮೂಲಕ ತಮ್ಮ ರಾಜಕೀಯ ವರ್ಚಸ್ಸನ್ನು ನಿರೀಕ್ಷೆಗೂ ಮೀರಿ ವೃದ್ಧಿಸಿಕೊಂಡಿದ್ದ ರಾಹುಲ್‌ಗೆ ಅಮೇಥಿಯಲ್ಲಿ ಮತ್ತೊಮ್ಮೆ ಸೋಲಾದರೇ ಆ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿಯೇ ರಾಹುಲ್ ಭಾವನಾತ್ಮಕ ನಿರ್ಧಾರಕ್ಕಿಂತ ಪ್ರಾಯೋಗಿಕವಾಗಿ ಸುರಕ್ಷಿತ ಕ್ಷೇತ್ರವನ್ನು ಆರಿಸಿಕೊಂಡರು. ಮತ್ತು ತಮ್ಮ ಪಾಲಿಗಾಗುತ್ತಿದ್ದ ಕ್ಷೇತ್ರವನ್ನು ಸಹೋದರನಿಗೆ ಬಿಟ್ಟುಕೊಡುವ ಮೂಲಕ ಪ್ರಿಯಾಂಕಾ ಧಾರಾಳತನವನ್ನು ಮೆರೆದರು. ಆದಾಗ್ಯೂ, ರಾಹುಲ್‌ ಗಾಂಧಿ ರಾಯ್ಬರೇಲಿಯಿಂದ  ಕ್ಷೇತ್ರದ ಸಂಪರ್ಕದಿಂದ ದೂರದಲ್ಲಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ತಾಯಿಯ ರಾಜಕೀಯ ವರ್ಚಸ್ಸು ಹಾಗೂ ಸಮಾಜವಾಧಿ ಮೈತ್ರಿಯ ಬಲ ಇಲ್ಲಿರುವುದು ಕಾಂಗ್ರೆಸ್‌ಗೆ ಲಾಭವೇ ಆಗಿದೆ.  

ಆದಾಗ್ಯೂ, ಸ್ಮೃತಿ ಇರಾನಿಗೆ ಸವಾಲು ಎಸೆಯಲು ಪ್ರಿಯಾಂಕಾ ಗಾಂಧಿ ಅಮೇಥಿಯಿಂದ ಸ್ಪರ್ಧಿಸಬಹುದಿತ್ತು, ಇದು ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸುವ ಎಲ್ಲಾ ಲಕ್ಷಣಗಳಿತ್ತು ಮತ್ತು ರಾಜ್ಯ ಮತ್ತು ಹಿಂದಿ ಹೃದಯ ಭಾಗದಾದ್ಯಂತ ಒಂದು ಬಲವಾದ ಸಂದೇಶವನ್ನು ರವಾನಿಸಬಹುದಾದ ಎಲ್ಲಾ ಅವಕಾಶಗಳು ಕಾಂಗ್ರೆಸ್‌ಗೆ ಇದ್ದಿತ್ತು. ಆದರೇ ಕಾಂಗ್ರೆಸ್‌  ಆ ಮುಖವಾಗಿ ಯೋಚಿಸದೇ ಇರುವುದು ಅಥವಾ ಯೋಚಿಸಿಯೂ ನಿರ್ಧಾರ ತೆಗೆದುಕೊಳ್ಳದೇ ಇರುವುದು ಆಶ್ಚರ್ಯವೇ ಸರಿ.

ʼಗಾಂಧಿ ಕುಟುಂಬ ರಾಜಕಾರಣʼ ಎಂಬ ಆರೋಪಗಳಿಂದ ಮುಕ್ತಿ ಹೊಂದುವ ಉದ್ದೇಶದಿಂದ ಪಕ್ಷದ ಯಾವೊಬ್ಬ ಕಾರ್ಯಕರ್ತ ಕೂಡ ಪಕ್ಷದ ಟಿಕೆಟ್ ಪಡೆಯಬಹುದು ಎಂಬ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಅಮೇಥಿ ಟಿಕೇಟ್‌ ಅನ್ನು ಕೆ. ಎಲ್‌ ಶರ್ಮಾ ಅವರಿಗೆ ಬಿಟ್ಟುಕೊಡುವ ಉದಾರ ಮನೋಭಾವವನ್ನು ಕಾಂಗ್ರೆಸ್ ತೋರಿಸುವ ಪ್ರಯತ್ನ ಮಾಡಿದ್ದಿರಬಹುದು. ಪರೋಕ್ಷವಾಗಿ ರಾಹುಲ್‌ ಗಾಂಧಿಯವರನ್ನು ತನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿದೆ. ಪ್ರಧಾನಿ ಅಭ್ಯರ್ಥಿಯ ರಾಜಕೀಯ ವರ್ಚಸ್ಸನ್ನು ಮತ್ತಷ್ಟು ವೃದ್ಧಿಸುವ ಉದ್ದೇಶದಿಂದ ರಾಗಾ ಅವರನ್ನು ಸುಲಭಸಾದ್ಯವಾದ ಎರಡೂ ಕ್ಷೇತ್ರಗಳಿಂದ ಸ್ಪರ್ಧೆಗೆ ಇಳಿಸಿರಬಹುದು.

2019ರ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ರಾಹುಲ್‌ ಅವರನ್ನು ಅಪ್ಪಿ ಕೊಂಡಾಡಿದ್ದ ವಯನಾಡನ್ನು ಅಷ್ಟು ಸುಲಭದಲ್ಲಿ ರಾಹುಲ್‌ ತ್ಯಜಿಸುವುದಕ್ಕೆ ಮುಂದಾಗುವುದಿಲ್ಲ ಅಂತಲೇ ಕಾಣಿಸುತ್ತಿದೆ. ವಯನಾಡು ತೋರಿದ ಪ್ರೀತಿ ರಾಹುಲ್‌ ಗಾಂಧಿಗೆ ಅಮೇಥಿಯೂ ತೋರಿಸಿಲ್ಲ. ಹಾಗಾಗಿ ಕಷ್ಟ ಕಾಲದಲ್ಲಿ ಕೈ ಹಿಡಿದ ವಯನಾಡನ್ನು ನಿರಾಕರಿಸುವ ಮನಸ್ಸು ರಾಹುಲ್ ಗಾಂಧಿಗೂ ಇಲ್ಲ. ಒಂದು ವೇಳೆ ವಯನಾಡು ಹಾಗೂ ರಾಯ್ಬರೇಲಿ ಎರಡೂ ಕ್ಷೇತ್ರಗಳಲ್ಲಿಯೂ ಗೆದ್ದರೇ, ವಯನಾಡನ್ನು ಉಳಿಸಿಕೊಂಡು ರಾಯ್ಬರೇಲಿಯಿಂದ ಪ್ರಿಯಾಂಕ ಗಾಂಧಿಗೆ ಉಪಚುನಾವಣೆಗೆ ಅವಕಾಶ ಮಾಡಿಕೊಡಬಹುದುದೆಂಬ ಚರ್ಚೆಯೂ ಇದೆ.

ಆದಾಗ್ಯೂ, ಉಪಚುನಾವಣೆಯಲ್ಲಿ ರಾಮ್‌ಪುರ ಮತ್ತು ಅಜಂಗಢದಂತಹ ಸಮಾಜವಾದಿ ಪಾರ್ಟಿಯ ಭದ್ರಕೋಟೆಯ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ. ಈ ಕ್ಷೇತ್ರಗಳಲ್ಲಿ ಈ ಹಿಂದೆ ಕ್ರಮವಾಗಿ ಎಸ್ಪಿಯ ಅಜಂ ಖಾನ್‌ ಮತ್ತು ಅಖಿಲೇಶ್‌ ಯಾದವ್‌ ಗೆದ್ದಿದ್ದರು. ಅವರು ಬಳಿಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದರಿಂದ ಈ ಕ್ಷೇತ್ರಗಳು ತೆರವಾಗಿದ್ದವು. ಎರಡೂ ಕ್ಷೇತ್ರಗಳನ್ನು ಎಸ್‌ಪಿ ಉಳಿಸಿಕೊಳ್ಳುವ ಹಾದಿಯಲ್ಲಿ ರಾಮ್‌ಪುರದಿಂದ ಅಸೀಮ್‌ ರಾಜಾ ಮತ್ತು ಅಜಂಗಢದಿಂದ ಧರ್ಮೇಂದ್ರ ಯಾದವ್‌  ಅವರನ್ನು ಕಣಕ್ಕಿಳಿಸಿ ಸೋಲು ಕಾಣಬೇಕಾಯಿತು. ಈ ಅಂಶವನ್ನು ಕಾಂಗ್ರೆಸ್ ಎಚ್ಚರಿಕೆಯಿಂದ ಪರಿಗಣಿಸಬೇಕಾಗಿದೆ. ಈ ಚುನಾವಣೆಗೂ ಹಾಗೂ ರಾಮ್‌ಪುರ ಮತ್ತು ಅಜಂಗಢ ಉಪಚುನಾವಣೆಗೂ ವ್ಯತ್ಯಾಸವಿದೆ. ರಾಯ್ಬರೇಲಿ ರಾಮ್‌ಪುರವೂ ಅಲ್ಲ, ಅಜಂಗಢವೂ ಅಲ್ಲ. ಆದರೂ, ಉಪ ಚುನಾವಣೆಗೆ ಪ್ರಿಯಾಂಕ ಅವರನ್ನು ಕಣಕ್ಕಿಳಿಸುವ ಯೋಚನೆಯಲ್ಲಿ ಕಾಂಗ್ರೆಸ್‌ ಇರುವುದು ಹೌದಾದರೇ ಈ ಚುನಾವಣೆಯಲ್ಲೇ ಯಾಕೆ ಕಣಕ್ಕಿಳಿಸಬಾರದಿತ್ತು ಎನ್ನುವ ಪ್ರಶ್ನೆಯೂ ಇದೆ. ರಾಯ್ಬರೇಲಿಯಿಂದ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಿದ್ದರೆ, ಮೋದಿ ಮತ್ತು ಬಿಜೆಪಿಯ ಟೀಕೆಯಿಂದಲೂ ಮುಕ್ತವಾಗಬಹುದಿತ್ತು.

ಪ್ರತಿಯೊಂದು ಕಾರ್ಯತಂತ್ರದ ಕ್ರಮ ಅದರ ಸಾಧಕ-ಬಾಧಕಗಳನ್ನು ಹೊಂದಿದೆ. ಈ ನಿರ್ಧಾರವು ಮಾಸ್ಟರ್‌ಸ್ಟ್ರೋಕ್ ಅಥವಾ ತಪ್ಪು ಹೆಜ್ಜೆಯೇ ಎಂಬುದು ಜೂನ್ 4 ರಂದು ಚುನಾವಣಾ ಫಲಿತಾಂಶ ಬಂದ ಮೇಲೆಯೇ ತಿಳಿಯಲಿದೆ.

-ಶ್ರೀರಾಜ್‌ ವಕ್ವಾಡಿ

 

Wednesday, May 1, 2024

ʼದ್ವೇಷʼ ಮತ್ತು ʼಹೆಣ್ಣುʼ ರಾಜಕೀಯ ಭೋಗಕ್ಕೆ ಬಳಸಿಕೊಳ್ಳುವ ವಸ್ತುಗಳೆ !?

 

ಜನರನ್ನು ಮರಳು ಮಾಡುವ ರಾಜಕೀಯಕ್ಕೂ ಒಂದು ಮಿತಿ ಇದೆ !

ಸುಳ್ಳನ್ನು ಸಹಿಸಿಕೊಳ್ಳುವುದಕ್ಕೂ ಕೂಡ ಬಹುಶಃ ಒಂದು ಮಿತಿ ಇದೆ. ಈ ದೇಶವನ್ನು ಸುಳ್ಳಿನಿಂದಲೇ ಮುಳುಗಿಸಿದ ರಾಜಕೀಯಕ್ಕೆ ದೊಡ್ಡ ಇತಿಹಾಸವಿದೆ. ಮನಃಶಾಸ್ತ್ರದ ಪ್ರಕಾರ ಒಂದು ವಿಷಯ ಅದು ಸತ್ಯವೇ ಆಗಿರಲಿ, ಸುಳ್ಳೇ ಆಗಿರಲಿ, ಅದನ್ನು ಕನಿಷ್ಠ ಇಪ್ಪತ್ತೊಂದು ಸಾರ್ತಿ ಮತ್ತೆ ಮತ್ತೆ ಹೇಳಿದರೇ, ಅದೇ ಸತ್ಯವೋ ಅಥವಾ ಸುಳ್ಳಾಗಿ ಅಚ್ಚಾಗಿ ಒಬ್ಬನ ಮನಸ್ಸಿನಲ್ಲಿ ಉಳಿಯುತ್ತದೆ ಅಥವಾ ಅದನ್ನು ಸಾಮಾಜಿಕ ಬುದ್ಧಿ ಸ್ವಂತ ಯೋಚನೆಗೂ ಸಮಯಕಾಶ ಕೊಡದೇ ಒಪ್ಪುತ್ತದೆ. ಭಾರತದ ರಾಜಕೀಯದಲ್ಲಿ, ಅದರಲ್ಲೂ ಇತ್ತೀಚೆಗಿನ ರಾಜಕೀಯ ಇತಿಹಾಸದಲ್ಲಿ ಈ ಬಗೆಯ ತಂತ್ರಗಾರಿಕೆಯನ್ನು ಹೇರಳವಾಗಿಯೇ ಬಳಸಿಕೊಳ್ಳಲಾಗಿದೆ. ಅದು ಈ ದೇಶದ ರಾಜಕೀಯದ ದುರಂತವೂ ಹೌದು ಎನ್ನುವುದರಲ್ಲಿ ಸಂಶಯವೇ ಇಲ್ಲ.

ರಾಜಕೀಯ ವರ್ಚಸ್ಸು ವೃದ್ಧಿಸಿಕೊಳ್ಳುವುದಕ್ಕೆ ಈ ತಂತ್ರಗಾರಿಕೆಯನ್ನು ಈ ದೇಶದಲ್ಲಿ ಬಳಸಿಕೊಳ್ಳಲಾಗಿದೆ. ಈ ದೇಶದ ಜನರೂ ಕೂಡ ಅದನ್ನೇ ನಂಬಿ ಮೋಸ ಹೋಗಿದ್ದಾರೆ. ಜನರ ಮನಸ್ಸುಗಳನ್ನು ಮತ್ತು ಭಾವನೆಗಳನ್ನು ಕೆರಳಿಸಿ ಮಾಡುವ ರಾಜಕೀಯ ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಪ್ರಚಲಿತದಲ್ಲಿರುವುದು ಇಂದು ದೇಶ ದುರಿತ ಕಾಲವನ್ನು ಅನುಭವಿಸುತ್ತಿದೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿ. ತಾನಿರುವ ಹುದ್ದೆಯ ಸಾಮಾನ್ಯ ಪ್ರಜ್ಞೆಯೂ ಇಲ್ಲದೇ ಬಹಿರಂಗವಾಗಿ ವಿಷ ಉಗುಳುವ ಕೆಟ್ಟ ಬುದ್ದಿ ಇಲ್ಲಿನ ಪ್ರಮುಖ ರಾಜಕೀಯ ನಾಯಕರಿಗೆ ಇದೆ ಎನ್ನುವುದು ದುರಂತವೇ ಸರಿ. ಇದು ಹತಾಶೆಯ ಪರಮಾವಧಿಯೋ ಅಥವಾ ದುರ್ಬುದ್ಧಿಯೋ ತಿಳಿಯುತ್ತಿಲ್ಲ. ಈಗ ಲೋಕಸಭಾ ಚುನಾವಣೆಯ ರಂಗು. ಈ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ದೇಶದ ಉದ್ದಗಲಕ್ಕೂ ರಾಜಕೀಯವಾಗಿ ಮತದಾರರನ್ನು ವಿಭಜಿಸಲು ನಡೆದ ಯತ್ನಗಳು ತಲುಪಿರುವ ಮಟ್ಟ ನಿಜಕ್ಕೂ ಹೇಸಿಗೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಹತಾಶೆಯ ಮಟ್ಟ ಈ ದೇಶದ ರಾಜಕಾರಣವನ್ನು ಕನಿಷ್ಠ ಸೌಜನ್ಯವನ್ನೂ ಲೆಕ್ಕಿಸದೇ ಅತ್ಯಂತ ಕೆಳಮಟ್ಟಕ್ಕೆ ತೆಗದುಕೊಂಡು ಹೋಗಿದೆ. ಸ್ವಾತಂತ್ರ್ಯ ನಂತರದ ಇಷ್ಟು ವರ್ಷಗಳ ಸುದೀರ್ಘ ರಾಜಕೀಯ, ಬದಲಾವಣೆಯ ಅಲೆ, ಆ ಅಲೆ, ಈ ಅಲೆ, ಮತ್ತೊಂದು, ಮಗದೊಂದು ಎಂಬ ದಿಸೆಯಲ್ಲಿ ನಾವು ಹೊಸತೇನು ಸಾಧಿಸಿಲ್ಲ ಎನ್ನುವುದು ಇಲ್ಲಿ ನಾವೆಲ್ಲರೂ ಅರಿತುಕೊಳ್ಳಲೇಬೇಕಿದೆ. ಹೆಸರು, ಪಕ್ಷ, ಧರ್ಮ ಎಲ್ಲವನ್ನೂ ಬಿಟ್ಟು ಈ ಕಾಲದ ʼರಾಜಕೀಯ ಹತಾಶೆʼಯನ್ನು ನಾವಿಲ್ಲಿ ಗಮನಿಸಬೇಕಾದ ತುರ್ತಿದೆ. ಇಲ್ಲಿನ ಪ್ರತಿಯೊಬ್ಬ ಬಯಸುವುದು ಕೂಡ ಒಂದು ನೆಮ್ಮದಿಯ ನಾಳೆಗಳನ್ನು, ಪ್ರೀತಿ ಪೂರ್ವಕವಾದ ಸಮಾಜವನ್ನೇ ಹೊರತು ದ್ವೇಷಗಳನ್ನಲ್ಲ. ಒಬ್ಬ ʼಪ್ರಧಾನʼ ಹುದ್ದೆಯಲ್ಲಿರುವ ನಾಯಕ ತನ್ನ ಹುದ್ದೆಯ ಘನತೆ, ಗೌರವವನ್ನೂ ಲೆಕ್ಕಿಸದೇ ದ್ವೇಷಗಳನ್ನು, ವಿಷವನ್ನು ಮತ್ತೆ ಮತ್ತೆ ಉಗುಳುತ್ತಾನೆ ಎಂದರೇ, ಇದು ಪ್ರಜಾಪ್ರಭುತ್ವದ ಮೇಲೆ ಬಲವಂತವಾಗಿ ʼಪ್ರಭುತ್ವʼ ಧೋರಣೆಯನ್ನು ಬಿತ್ತುವ ಪ್ರಯತ್ನವೇ ಆಗಿದೆ. ಇದನ್ನು ಇಲ್ಲಿನ ಜನರು ಅರ್ಥೈಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನದಲ್ಲಿ ಹೀಗೆ ದ್ವೇಷ ಭಾಷಣಗಳನ್ನು ಮಾಡುವುದೇ ಪರಿಹಾರ ಎಂದು ಭಾವಿಸಿದರೇ ಅದರಷ್ಟು ಮೂರ್ಖತನ ಮತ್ತೊಂದಿಲ್ಲ. ಅಧಿಕಾರ ಹಿಡಿಯುವ ಪ್ರಯತ್ನದ ಸ್ಪರ್ಧೆಯಲ್ಲಿ ಮನಸೋಇಚ್ಛೆಯಂತೆ ಹೋದಲ್ಲೆಲ್ಲಾ ಬಿಗಿಯುತ್ತಿರುವ ʼದ್ವೇ಼ಷ ಭಾಷಣʼಗಳ ಸರದಾರರ ಪಟ್ಟಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರೇನು ಹೊರತಲ್ಲ. ಇದನ್ನು ವ್ಯಕ್ತಿ, ಪಕ್ಷ, ಧರ್ಮಗಳನ್ನು ಮೀರಿ ಇಡೀ ದೇಶದ ಜನರು ಪ್ರಶ್ನಿಸುವ ಅಗತ್ಯವಿದೆ.

ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧಾರ್ಮಿಕ ವಿಚಾರಗಳನ್ನು ಪ್ರಸ್ತಾಪಿಸಿ ಮಾಡಿದ ಭಾಷಣ ಅತ್ಯಂತ ಕೆಳಮಟ್ಟದಾಗಿತ್ತು ಎನ್ನುವುದನ್ನು ಇಡೀ ದೇಶ ಒಪ್ಪಿಕೊಳ್ಳಲೇ ಬೇಕಿದೆ. ಭಾರತೀಯ ಜನತಾ ಪಕ್ಷ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ವಿಶ್ವಾಸ ಬಲವಾಗಿ ಹೊಂದಿದ್ದು ನಿಜವೇ ಆಗಿದ್ದರೇ ʼಮಂಗಳಸೂತ್ರವೂ ನಿಮ್ಮ ಬಳಿ ಉಳಿಯುವುದಿಲ್ಲʼ ಎಂದು ಹೇಳಿ ದ್ವೇಷವನ್ನು ಬಿತ್ತುವ ಅಗತ್ಯವೇನಿತ್ತು? ಈ ದೇಶದ ನಾಗರಿಕರು ಈ ಹಿಂದಿನ ಸರ್ಕಾರಗಳ ಆಡಳಿತವನ್ನು ನೋಡಿಲ್ಲವೇ ? ಇಂತಹದ್ದೇನಾದರೂ ಘಟನೆಗಳು ನಡೆದಿವೆಯೇ ? ಜನರನ್ನು ಮರಳು ಮಾಡುವ ರಾಜಕೀಯಕ್ಕೂ ಒಂದು ಮಿತಿ ಇದೆ.

ಇಡೀ ಭಾರತದಲ್ಲಿರುವ ಹೆಣ್ಣುಮಕ್ಕಳಿಗೆ ರಕ್ಷಕ ತಾನೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದ ಪ್ರಧಾನಿಗಳು ಮಹಿಳಾ ಕುಸ್ತಿಪಟುಗಳು ತಮ್ಮ ಫೆಡರೇಷನ್‌ನ ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ದಿನಗಟ್ಟಲೇ ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೂ ಮೌನ ವಹಿಸಿದ್ಯಾಕೆ ? ಮಣಿಪುರದಲ್ಲಿ ಮಹಿಳೆಯೋರ್ವವರನ್ನು ಅರೆಬೆತ್ತಲು ಮಾಡಿ ಮೆರವಣಿಗೆ ಮಾಡಿದರೂ, ಅಲ್ಲಿ ಎರಡು ಸಮುದಾಯಗಳ ನಡುವೆ ಬೆಂಕಿಯೇ ಬಿದ್ದರೂ ಕನಿಷ್ಠ ಸೌಜನ್ಯ ತೋರಿಸಿಲ್ಲ ಯಾಕೆ ? ಉತ್ತರಪ್ರದೇಶದಲ್ಲಿ ದಲಿತ ಯುವತಿಯೊಬ್ಬಳ ಮೇಲೆ ಅತ್ಯಚಾರ ಮಾಡಿ ಕೊಲೆ ಮಾಡಿದಾಗ ಇಡೀ  ಪ್ರಕರಣವನ್ನೇ ತಮ್ಮದೇ ಪಕ್ಷ ಅಧಿಕಾರದಲ್ಲಿರುವ ರಾಜ್ಯ ಸರ್ಕಾರ ಸಾಕ್ಷ್ಯ ನಾಶ ಮಾಡುವಾಗ ತಮ್ಮ ಆಕ್ರೋಶ, ಸಿಟ್ಟು, ಸೆಡವು, ಕೋಪವೆಲ್ಲಾ ಎಲ್ಲಿ ಹೋಯಿತು ? ಕರ್ನಾಟಕದಲ್ಲಿ ತಮ್ಮದೇ ಮೈತ್ರಿ ಪಕ್ಷ ಜೆಡಿಎಸ್‌ನ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ದೇಶವ್ಯಾಪಿ ಸದ್ದು ಮಾಡಿದರೂ ಪ್ರಧಾನಿಗಳು ಈ ಬಗ್ಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ ಯಾಕೆ ? ತುಮಕೂರಿನ ರುಕ್ಸಾನ ಕೊಲೆಯಾದಾಗ ಇವರ ಧ್ವನಿ ಏರುವುದಕ್ಕೆ ಕೇಳಲೇ ಇಲ್ಲ. ಸೌಜನ್ಯ ಅತ್ಯಚಾರ ಮತ್ತು ಕೊಲೆ ಪ್ರಕರಣಕ್ಕೆ ಧರ್ಮದ ರಕ್ಷಣೆ, ಹಿಂದೂ ಹೆಣ್ಣುಮಗಳ ರಕ್ಷಣೆ ಎಂಬ ಮಾತುಗಳೆಲ್ಲಾ ಇವರಿಂದ ಕೇಳಿ ಬರಲೇ ಇಲ್ಲ. ಉಡುಪಿಯಲ್ಲಿ ಒಬ್ಬಾತ ಹಾಡುಹಗಲಲ್ಲೇ ಮುಸ್ಲೀಂ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಹೋದಾಗ ಆಕ್ರೋಶ, ಸಿಟ್ಟು, ಕೇಕೆ, ಟೀಕೆ, ಕೋಪ ತಾಪಗಳೆಲ್ಲವೂ ತಣ್ಣಗಾಗಿದ್ದವು, ಅವುಗಳು ಸದ್ದು ಮಾಡಲೇ ಇಲ್ಲ. ಚುನಾವಣೆಯ ಉನ್ಮಾದಕ್ಕೆ ಇವರಿಗೆ ಲಾಭ ತಂದುಕೊಡುವ ಕೊಲೆ, ಧರ್ಮದ ಲೇಪ ಬೇಕು ಅಷ್ಟೇ, ಅದನ್ನು ಹೊರತಾಗಿ ಇಲ್ಲಿ ಎಷ್ಟೇ ಬಲಿಯಾದರೂ ಅದು ಗಣನಗೆ ಬರುವವುಗಳೇ ಅಲ್ಲ. ಇವರದ್ದೇ ʼಬೇಟಿ ಬಚಾವೋ ಬೇಟಿ ಪಡಾವೋʼ ಮಾತು ಯಾಕೆ ಇಷ್ಟು ಬೇಗ ಮರೆಯಲ್ಲಿ ಉಳಿದು ಹೋಯಿತೇ ಎನ್ನುವ ಪ್ರಶ್ನೆ ಸಹಜವಾಗಿ ಮುನ್ನೆಲೆಗೆ ಬಂದಿದೆ. 

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣವನ್ನು ದ್ವೇಷದ ಉಗುಳು ಹೆಚ್ಚಿಸಿಕೊಳ್ಳುವುದಕ್ಕೆ ತೋರಿದ ಜಾಣ್ಮೆ ಉಳಿದೆಡೆ ಯಾಕಿರಲಿಲ್ಲ ಪ್ರಧಾನಿಯವರೇ ಎನ್ನುವ ಪ್ರಶ್ನೆಯನ್ನು ಪ್ರತಿಯೊಬ್ಬ ಪ್ರಜೆ ಕೇಳಬೇಕಿದೆ. ಬಹುಶಃ ಕರ್ನಾಟಕದಲ್ಲಿ ಜೆಡಿಎಸ್‌ ಪಕ್ಷ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರೇ ಪ್ರಧಾನಿಯವರು ರಾಜ್ಯದ ಎಲ್ಲಾ ಚುನಾವಣಾ ಪ್ರಚಾರ ಸಭೆಯಲ್ಲಿ, ಸುದ್ದಿಯಲ್ಲಿರುವ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ವಿರುದ್ಧ ಪ್ರಸ್ತಾಪಿಸಿ ರಾಜ್ಯದಲ್ಲಿ ʼಕಾನೂನು ವ್ಯವಸ್ಥೆ ಹದಗೆಟ್ಟಿದೆʼ, ಈ ಸರ್ಕಾರದ ಅಡಿಯಲ್ಲಿ ʼಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲʼ ಎಂದು ಮತ್ತಷ್ಟು ವಿಷ ಉಗುಳುತ್ತಿದ್ದರೇನೋ, ಪ್ರಧಾನಿ ಮೋದಿ ನೇತೃತ್ವ ಬಿಜೆಪಿಯ ದೃಷ್ಟಿಯಲ್ಲಿ ಆಗ ʼರಾಜ್ಯದ ಹೆಣ್ಣುಮಕ್ಕಳಿಗೆ ಅನ್ಯಾಯʼವಾಗುತ್ತಿತ್ತೇನೋ. ಜನ ಇವತ್ತು ಮೊದಲು ಪ್ರಶ್ನೆ ಮಾಡಬೇಕಾಗಿರುವುದು ಇಂತಹುಗಳನ್ನೇ. ಯಾವುದನ್ನು ಪ್ರಶ್ನೆ ಮಾಡಬೇಕೋ ಅದರ ಬಗ್ಗೆ ಜನ ಮೌನ ತಾಳಿರುವುದು ದುರಂತವೇ ಸರಿ. ಪ್ರಧಾನಿಯವರೇನು ಪ್ರಶ್ನಾತೀತರೇ ? ಪ್ರಜಾಪ್ರಭುತ್ವದಲ್ಲಿ ಸಾಮಾನ್ಯನ ಮಾತು ಮೌನವಾದರೇ ಅದು ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಅಪಾಯಕಾರಿ ಎನ್ನುವುದು ಅಕ್ಷರಶಃ ಸತ್ಯ.

ರಾಜಕೀಯ ನಾಯಕರ ಅಸೂಕ್ಷ್ಮ ಹೇಳಿಕೆಗಳು ಮತ್ತು ಆ ಹೇಳಿಕೆಗಳನ್ನೇ ನಿಜ ಎಂದು ನಂಬಿ ಮೊಳಗುವ ಕೇಕೆಯ ಒರಟುತನ ಈ ಸಮಾಜದಲ್ಲಿ ಉನ್ಮಾದವನ್ನು ಸೃಷ್ಟಿಸುವ ಪರಿ ನಿಜಕ್ಕೂ ಆತಂಕಕಾರಿಯಾಗಿದೆ. ನೇಹಾ ಕೊಲೆಯಾದಾಗ ಎದ್ದ ಕೇಕೆಗಳು, ಧರ್ಮದ ಲೇಪ ಇಲ್ಲೇ ತುಮಕೂರಿನ ರುಕ್ಸಾನ ಎಂಬ ಹೆಣ್ಣುಮಗಳೊಬ್ಬಳ ಕೊಲೆಯಾದಗ, ಸೌಜನ್ಯ ಕೊಲೆಯಾದಾಗ, ಪ್ರಜ್ವಲ್‌ ರೇವಣ್ಣ ಹೆಣ್ಣು ಮಕ್ಕಳನ್ನು ತಮ್ಮ ಕಾಮ ತೃಷೆಗೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಾಗ ಸೃಷ್ಟಿಯಾಗಿಲ್ಲ. ಇದು ಈ ಸಾಮಾಜಿಕ ಬುದ್ಧಿಯ ಬಡಸ್ತಿಕೆಯೋ ಅಥವಾ ಸಾಮಾಜಿಕ ಮನಸ್ಥಿತಿಯ ನಾಶದ ಸಂಕೇತವೋ ತಿಳಿಯುತ್ತಿಲ್ಲ. ಈ ದೇಶದ ಒಂದು ರಾಷ್ಟ್ರೀಯ ಪಕ್ಷದ ಮೂಲ ಸಂಘಟನೆ ಈ ದೇಶದುದ್ದಕ್ಕೂ ʼಹಸಿ ಬುದ್ಧಿʼಗಳಿಗೆ ಹೇರಿದ, ತೂರಿದ, ತುಂಬಿದ ʼದ್ವೇಷದ ಪಾಠʼದ ಕಾರಣದಿಂದಲೇ ಈ ದೇಶ ಇಂದು ಸಾಮಾಜಿಕವಾಗಿ ದುಸ್ಥಿತಿಯಲ್ಲಿದೆ ಎಂದರೇ ಯಾವುದೇ ಕಾರಣಕ್ಕೂ ತಪ್ಪಿಲ್ಲ. ʼದ್ವೇಷʼ ಹಾಗೂ ʼಹೆಣ್ಣುʼ ರಾಜಕೀಯ ಭೋಗಕ್ಕೆ ಬಳಸಿಕೊಳ್ಳುವ ವಸ್ತುಗಳಾಗಿ ಬದಲಾಗಿವೆ ಎನ್ನುವುದರಲ್ಲಿ ಅನಮಾನವೇ ಇಲ್ಲ. 

ದ್ವೇಷ ಒಂದು ಮನರಂಜನೆಯ ಅಸ್ತ್ರವಾಗಿ ಬದಲಾಗಿದೆ ಎಂಬಂತೆ ಕಾಣಿಸುತ್ತಿದೆ. ಹೀಗಾಗುವುದಕ್ಕೆ ಇಲ್ಲಿನ ರಾಜಕೀಯ ಪಕ್ಷಗಳ, ರಾಜಕೀಯ ನಾಯಕರ ಕೊಡುಗೆ ಅಪಾರವಾದದ್ದಿದೆ. ದ್ವೇಷಕ್ಕೆ ಬರುವವರು, ಒಂದಾಗಿ ಬಾಳುವ ಎನ್ನುವ ಕರೆಗೆ ಕಿವಿ ಕೊಡದೇ ಇರುತ್ತಿರುವುದು ಒಂದು ಮಹತ್ತರವಾದ ಅಪಾಯದ, ಸಂಕಟದ ವಿಷಘಳಿಗೆಗೆ ಮುನ್ಸೂಚನೆ ಎಂಬಂತೆಯೇ ಕಾಣಿಸುತ್ತಿದೆ. ಒಂದು ಅತಿಸೂಕ್ಷ್ಮ ಘಟನೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಉದ್ದೇಶದಿಂದಲೇ ಕಾಯುವ ನಿರ್ಲಜ್ಜೆಯ ಧೋರಣೆ ಈ ಸಮಾಜವನ್ನು ಒಡೆದು ಚೂರು ಮಾಡುತ್ತಿದೆ. ಕಾನೂನನ್ನು, ಅಧಿಕಾರವನ್ನು ತಮ್ಮ ತಮ್ಮ ಹಿತಾಸಕ್ತಿಗೆ ಬೇಕಾದ ಒರಟುತನವನ್ನು ವೈಭವೀಕರಿಸಿಕೊಳ್ಳುವುದಕ್ಕೆ ಅತ್ಯಂತ ಕೆಟ್ಟ ಮಟ್ಟದಲ್ಲಿ ಬಳಸಿಕೊಳ್ಳುತ್ತಿರುವುದು ಕೂಡ ವಿಷಾದನೀಯ ಸಂಗತಿ.

ದ್ವೇಷವನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಈ ದೇಶದ ಪ್ರಧಾನ ಹುದ್ದೆಯಲ್ಲಿರುವ ನಾಯಕನೋರ್ವ ಇಳಿದು ರಾಜಕೀಯ ಮಾಡುತ್ತಿದ್ದಾನೆ ಮತ್ತು ಅದಕ್ಕೆ ಈ ದೇಶ ದಿವ್ಯ ಮೌನವನ್ನು ವಹಿಸುತ್ತಿದೆ ಎಂದರೇ, ಇದು ಅತ್ಯಂತ ಅಪಾಯಕಾರಿ ನಾಳೆಗಳ ಮುನ್ಸೂಚನೆ ಎಂದೇ ಅರ್ಥೈಸಿಕೊಳ್ಳಬೇಕಾಗಿದೆ. ಒಂದು ಕೆಟ್ಟ ಬಗೆಯ ದ್ವೇಷ ರಾಜಕಾರಣ ಈ ದೇಶವನ್ನು ಆವರಿಸಿಕೊಂಡು ಬಿಟ್ಟಿದೆ. ಇದರಿಂದ ಬಿಡುಗಡೆ ಹೊಂದುವುದು ಅಷ್ಟು ಸುಲಭವಿದೆ ಎಂದು ಅನ್ನಿಸುತ್ತಿಲ್ಲ. ಪ್ರತಿಯೊಬ್ಬನ ಘನತೆಯ ಬದುಕನ್ನು ಖಾತ್ರಿಪಡಿಸುವ ಸಂವಿಧಾನದ ಅಡಿಯಲ್ಲೇ ಅಡಿಗಡಿಗೂ ಇಂಚಿಂಚಾಗಿ ಇಲ್ಲಿನ ಜನರನ್ನು ವಿಭಜಿಸಿ ಅವರ ಬದುಕನ್ನೇ ಹರಿದು ಮುಕ್ಕುವ ಕೃತ್ಯಗಳು ರಾಜಾರೋಷವಾಗಿ ಜಾರಿಗೆ ತರುವ ಎಲ್ಲಾ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಲಕ್ಷಣಗಳು ಕಾಣಿಸುತ್ತಿದೆ. ತಪ್ಪನ್ನು ತಪ್ಪು ಎನ್ನದೇ ಸಮರ್ಥಿಸಿಕೊಳ್ಳುವ ಮತ್ತು ಆ ಬಗ್ಗೆ ಬೇಜವಾಬ್ದಾರಿತನದಿಂದ ಮೌನ ವಹಿಸುವ ಪಲಾಯನವಾದಿತನ ಮೈತುಂಬಾ ಬೆಳೆಯಲು ಅವಕಾಶ ಮಾಡಿಕೊಟ್ಟರೇ, ಇಲ್ಲಿನ ಬದುಕು ತೀರಾ ಕಷ್ಟವನ್ನು ಕಾಣಬೇಕಾಗುವುದು ನಿಶ್ಚಿತ.

ಪ್ರೀತಿಯನ್ನು ಮತ್ತಷ್ಟು ಹಬ್ಬುವ ಅಗತ್ಯವಿದೆ. ಸೊಲ್ಲೆತ್ತಿದರೇ ದ್ವೇಷವನ್ನೇ ಉಗುಳುವ ಸಾಮಾಜಿಕ ಮನಸ್ಥಿತಿಯ ಕೇವಲತನಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲವೇ ? ದ್ವೇಷ ಅಳಿಯದೇ ಸಮಾಜ ಬದಲಾಗುವುದೆ ? ಯೋಚಿಸುವ ಅಗತ್ಯವಿದೆ.

-ಶ್ರೀರಾಜ್‌ ವಕ್ವಾಡಿ

Thursday, April 25, 2024

ದ್ರಾವಿಡ ರಾಜಕಾರಣದ ನೆಲದಲ್ಲಿ ಪ್ರಾಬಲ್ಯ ಬಯಸಿದ ಬಿಜೆಪಿ !

 ತಮಿಳುನಾಡು : ಬಿಜೆಪಿಯ ಡಬಲ್‌ ಡಿಜಿಟ್‌ ಕನಸು | ಡಿಎಂಕೆ ಹಾಟ್‌ ಫೆವರೆಟ್‌ !

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ತಮಿಳುನಾಡು ಹೈವೋಲ್ಟೇಜ್‌ ಕಣ. ಹಲವು ಕಾರಣಗಳಿಗೆ ಪ್ರತಿ ಚುನಾವಣೆಯಲ್ಲಿ ಕುತೂಹಲ ಮೂಡಿಸುವ ತಮಿಳುನಾಡು ರಾಜಕಾರಣದಲ್ಲಿ ಈ ಬಾರಿ ಬಿಜೆಪಿ ಹೊಸ ಅಲೆ ಎಬ್ಬಿಸಿದೆ.

1984ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಾದ್ಯಂತ ಕೇವಲ ಎರಡು ಕ್ಷೇತ್ರಗಳನ್ನು ಪಡೆದಿದ್ದ ಬಿಜೆಪಿ, 1989ರ ಲೋಕಸಭಾ ಚುನಾವಣೆಯಲ್ಲಿ ಪುಟಿದೆದ್ದು ಒಮ್ಮಿಂದೊಮ್ಮೆಲೆ 85 ಕ್ಷೇತ್ರಗಳನ್ನು ಪಡೆದು ಇಡೀ ದೇಶವನ್ನೇ ಬಿಜೆಪಿಯತ್ತ ತಿರುಗಿ ನೋಡುವಂತೆ ಮಾಡಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜಕೀಯ ಒಂದು ದೊಡ್ಡ ಇತಿಹಾಸವೇ ಸರಿ.

ತಮಿಳುನಾಡಿನಂತಹ ದ್ರಾವಿಡ ರಾಜಕಾರಣವಿರುವ ರಾಜ್ಯದಲ್ಲಿ ಬಿಜೆಪಿ ಹೇಳಹೆಸರಿಲ್ಲದ ಪಕ್ಷದಂತೆಯೇ ಇದ್ದಿತ್ತು. ಆದರೇ ಕಳೆದ ಎರಡು ಲೋಕಸಭಾ ಚನಾವಣೆಯಿಂದೀಚೆಗೆ ಬಾರಿ ಸದ್ದು ಮಾಡುತ್ತಿದೆ ಬಿಜೆಪಿ. 1984 ಮತ್ತು 1989 ರ ಲೋಕಸಬಾ ಚುನಾವಣೆಯಲ್ಲಿ ಬಿಜೆಪಿಯ ಅಲೆ ದೇಶದೆಲ್ಲೆಡೆ ಎದ್ದಂತೆ ತಮಿಳುನಾಡಿನಲ್ಲಿಯೂ ಮರುಕಳಿಸಬಹುದೇ ಎಂಬ ಪ್ರಶ್ನೆಯೊಂದು ಮಂದಿದೆ. ಈಗಾಗಲೇ ಚುನಾವಣೆಯನ್ನು ಪೂರೈಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ತಮಿಳುನಾಡಿನ ರಾಜಕಾರಣದಲ್ಲಿ ಈ ಬಗೆಗಿನ ಕುತೂಹಲ ಸೃಷ್ಟಿಯಾಗಿದೆ.

1962ರ ಲೋಕಸಭಾ ಚುನಾವಣೆಯಿಂದ ಪ್ರವರ್ಧಮಾನಕ್ಕೆ ಬಂದ ದ್ರಾವಿಡ ರಾಜಕಾರಣ ಕಾಂಗ್ರೆಸ್‌ ಪಕ್ಷವನ್ನು ನೆಲಕಚ್ಚುವಂತೆ ಮಾಡಿತ್ತು. ಆಗಿನಿಂದಲೂ ಎರಡು ಪ್ರಾದೇಶಿಕ ಪಕ್ಷಗಳ ಹೋರಾಟದ ಕದನವಾಗಿದ್ದ ತಮಿಳುನಾಡು, ಇದೇ ಮೊದಲ ಬಾರಿಗೆ ಡಿಎಂಕೆ- ಎಐಎಡಿಎಂಕೆ- ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಕಂಡಿದೆ.

370 ಲೋಕಸಭಾ ಕ್ಷೇತ್ರ ಗೆಲ್ಲುವ ಗುರಿ ಹೊಂದಿರುವ ಬಿಜೆಪಿಗೆ ದಕ್ಷಿಣದ ರಾಜ್ಯಗಳೇ ಟಾರ್ಗೆಟ್‌. ಕನಿಷ್ಠ 50 ರಿಂದ 60 ಕ್ಷೇತ್ರಗಳ ಮೇಲೆ ಗುರಿ ಇಟ್ಟಿರುವ ಬಿಜೆಪಿ, ತಮಿಳುನಾಡಿನಲ್ಲಿ ಕನಿಷ್ಠ 10 ಕ್ಷೇತ್ರಗಳನ್ನು ಗಳಿಸುವ ಇರಾದೆಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರೂ ರಾಜ್ಯದಲ್ಲಿ ಅನೇಕ ರ್ಯಾಲಿಗಳು ಮತ್ತು ರೋಡ್‌ ಶೋಗಳನ್ನು ನಡೆಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಅಂಗ ಪಕ್ಷವಾಗಿರುವ ಡಿಎಂಕೆ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಆಡಳಿತದ ಭದ್ರ ನೆಲೆ ಡಿಎಂಕೆ ಹಾಗೂ ಕಾಂಗ್ರೆಸ್‌ಗೆ ಪ್ಲಸ್‌ ಆದರೇ, ಬಿಜೆಪಿ ಸೃಷ್ಟಿಸಿದ ಆಡಳಿತ ವಿರೋಧ ಅಲೆಯೂ ಈ ಬಾರಿ ತುಸು ಡ್ಯಾಮೇಜ್‌ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಏಪ್ರಿಲ್ 19 ರಂದು ಚುನಾವಣೆಯನ್ನು ಪೂರೈಸಿರುವ ತಮಿಳುನಾಡು, 2014 ರಿಂದೀಚೆಗೆ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಭಾರತೀಯ ಜನತಾ ಪಕ್ಷವು (ಬಿಜೆಪಿ) ದಕ್ಷಿಣದಲ್ಲಿ ತನ್ನ 'ಮಿಷನ್ 50' ಅನ್ನು ಸಾಧಿಸಲು ರಾಜ್ಯದಲ್ಲಿ ಮಹತ್ತರ ಬಾಗಿಲು ತೆರೆಯುವ ಬಹಳ ದೊಡ್ಡ ವಿಶ್ವಾಸಲದಲ್ಲಿದೆ. ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಚುನಾವಣೆ ಮುಗಿದ ಮೇಲಂತೂ ಈ ಬಾರಿ ʼಡಬಲ್‌ ಡಿಜಿಟ್‌ʼನಲ್ಲಿ ಕ್ಷೇತ್ರಗಳು ಬಿಜೆಪಿಯ ಪಾಲಾಗುವುದು ನಿಶ್ಚಿತ ಎಂಬ ಹುರುಪಿನಲ್ಲಿದ್ದಾರೆ. ರಾಜ್ಯದಲ್ಲಿ ಎರಡು ಪ್ರಬಲವಾದ ಡಿಎಂಕೆ ಮತ್ತು ಎಐಎಡಿಎಂಕೆ ಹೊರತುಪಡಿಸಿ ಬದಲಾವಣೆ ಮತ್ತು ಮೂರನೇ ಶಕ್ತಿ ಬಯಸುವ ಮತದಾರರನ್ನು ಸೆಳೆಯುವ ಆಶಯದೊಂದಿಗೆ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯ ಪೂರ್ವವಾಗಿ ಕೆಲಸ ಮಾಡಿದೆ.

ಬಿಜೆಪಿ-ಎಐಎಡಿಎಂಕೆ: ಆನ್ ಅಂಡ್ ಆಫ್‌ :

ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಭಾಗವಾಗಿ ಡಿಎಂಕೆ ನೇತೃತ್ವದ ಬಣವು 2019 ರಲ್ಲಿ ತಮಿಳುನಾಡಿನಲ್ಲಿ 39 ಕ್ಷೇತ್ರಗಳಲ್ಲಿ 38 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಎಐಎಡಿಎಂಕೆ ಕೇವಲ ಒಂದು ಕ್ಷೇತ್ರದಲ್ಲಿ ತೃಪ್ತಿ ಪಟ್ಟುಕೊಂಡಿತ್ತು.

ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಪ್ರೀತಿ-ದ್ವೇಷದ ಸಂಬಂಧ ಇಂದಿಗೂ ಮುಂದುವರೆದಿದೆ. ಪಕ್ಷಗಳು 1998 ರಲ್ಲಿ ಒಟ್ಟಾಗಿ ಸ್ಪರ್ಧಿಸಿದವು, 1999 ರಲ್ಲಿ ಮೈತ್ರಿಯನ್ನು ಮುರಿದುಕೊಂಡವು, 2004 ರಲ್ಲಿ ಮತ್ತೆ ಕೈಜೋಡಿಸಿ, 2009ರಲ್ಲಿ ಮತ್ತೆ ಮೈತ್ರಿ ಕಡಿದುಕೊಂಡವು. 2014ರಲ್ಲಿ ನರೇಂದ್ರ ಮೋದಿಯವರೊಂದಿಗೆ ಜಯಲಲಿತಾ ಉತ್ತಮ ಬಾಂಧವ್ಯವನ್ನು ಬೆಸೆದುಕೊಂಡಿದ್ದರೂ, ಎಐಎಡಿಎಂಕೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಸೇರಲಿಲ್ಲ. ಬದಲಿಗೆ,  ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿತು. 39 ಕ್ಷೇತ್ರಗಳಲ್ಲಿ 37 ಕ್ಷೇತ್ರಗಳನ್ನು ಗಳಿಸಿತ್ತು. ಆದಾಗ್ಯೂ, ಐದು ವರ್ಷಗಳ ನಂತರ, 2019 ರಲ್ಲಿ, ಪಕ್ಷವು ಎನ್‌ಡಿಎ ಸೇರಲು ನಿರ್ಧರಿಸಿದಾಗ ಹೀನಾಯ ಸೋಲು ಕಾಣಬೇಕಾಯಿತು. 2024ರ ಚುನಾವಣೆಗೂ ಮುನ್ನ ಮತ್ತೆ ಬೇರ್ಪಟ್ಟಿವೆ.

ಸೀಟ್ ಲೆಕ್ಕಾಚಾರಗಳು  

ಈ ಚುನಾವಣೆಯಲ್ಲಿ 39 ಕ್ಷೇತ್ರಗಳ ಪೈಕಿ ಬಿಜೆಪಿ 23, ಪಟ್ಟಾಳಿ ಮಕ್ಕಳ ಕಚ್ಚಿ (ಪಿಎಂಕೆ) 10, ಮಾಜಿ ಸಚಿವ ಜಿ.ಕೆ. ವಾಸನ್ ನೇತೃತ್ವದ ತಮಿಳ್ ಮಾನಿಲ ಕಾಂಗ್ರೆಸ್ (ಟಿಎಂಸಿ) ಮೂರು ಮತ್ತು ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಎರಡು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಎಐಎಡಿಎಂಕೆ ಉಚ್ಚಾಟಿತ ನಾಯಕ ಓ.ಪನ್ನೀರಸೆಲ್ವಂ ಸ್ಪರ್ಧಿಸಿದ್ದಾರೆ.

ಎಐಎಡಿಎಂಕೆಯು ದೇಶಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜೊತೆ ಮೈತ್ರಿ ಮಾಡಿಕೊಂಡಿದ್ದರೆ, ಆಡಳಿತರೂಢ ಡಿಎಂಕೆ ನೇತೃತ್ವದ ಗುಂಪು ಕಾಂಗ್ರೆಸ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ( ಸಿಪಿಐ) ಮತ್ತು ಸಿಪಿಐ-ಮಾರ್ಕ್ಸಿಸ್ಟ್, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮತ್ತು ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಮೈತ್ರಿಯೊಂದಿಗೆ ಚುನಾವಣೆಯನ್ನು ಎದುರಿಸಿದೆ. ಏತನ್ಮಧ್ಯೆ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ), ಎಐಎಡಿಎಂಕೆ ನೇತೃತ್ವದ ಬಣಕ್ಕೆ ತನ್ನ ಬೆಂಬಲ ನೀಡಿದೆ, ಇದು ಒಟ್ಟು ಜನಸಂಖ್ಯೆಯ ಶೇ. 6 ರಷ್ಟಿರುವ ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಬಹುದು.

ಚುನಾವಣೆಯ ರಾಷ್ಟ್ರೀಯ ಸ್ವರೂಪವನ್ನು ಗಮನಿಸಿದರೆ, ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ತನ್ನನ್ನು ಪ್ರಮುಖ ವಿರೋಧ ಪಕ್ಷವಾಗಿ ನಿಲ್ಲಲು ಪ್ರಯತ್ನಿಸಿ ಚುನಾವಣೆ ಎದುರಿಸಿದೆ. ಡಿಎಂಕೆಗೆ ಪರ್ಯಾಯ ಎಂಬಷ್ಟು ಪ್ರಭಾವ ಬೀರದೇ ಇದ್ದರೂ ಎಐಎಡಿಎಂಕೆ ಮತ ಮೂಲವನ್ನು ಕೆಡಿಸುವ ಪ್ರಯತ್ನವನ್ನಂತೂ ಮಾಡಿದ ಲಕ್ಷಣ ಚುನಾವಣಾ ಪೂರ್ವದಲ್ಲಿಯೂ, ಚುನಾವಣೆಯ ಆದಮೇಲೂ ಕಾಣಿಸುತ್ತಿದೆ ಎನ್ನುವುದು ಅಲ್ಲಿನ ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ವಾಸ್ತವವಾಗಿ, ಪ್ರತಿಪಕ್ಷದ ಜಾಗವನ್ನು ವಶಪಡಿಸಿಕೊಳ್ಳಲು ಮತ್ತು ಸ್ವತಂತ್ರ ಶಕ್ತಿಯಾಗಿ ಹೊರಹೊಮ್ಮಲು ಅಕ್ಷರಶಃ ಪ್ರಯತ್ನಿಸಿದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಎಐಎಡಿಎಂಕೆ ಜೊತೆಗಿನ ಒಡಕಿಗೆ ಪ್ರಮುಖ ಕಾರಣ ಎನ್ನುವುದು ಉಲ್ಲೇಖಾರ್ಹ.

ತಮಿಳುನಾಡಿನ ಜಾತಿ ಲೆಕ್ಕಚಾರ :

ತಮಿಳುನಾಡಿನಲ್ಲಿ ಜಾತಿ ನಿರ್ಣಾಯಕ ಅಂಶ, ಒಬಿಸಿ ಮತ್ತು ಎಸ್‌ಸಿ/ಎಸ್‌ಟಿ  ಕ್ರಮವಾಗಿ ಜನಸಂಖ್ಯೆಯ ಶೇ.68 ಮತ್ತು ಶೇ.21 ರಷ್ಟಿದ್ದಾರೆ. ಸಾಂಪ್ರದಾಯಿಕವಾಗಿ, ಎಐಎಡಿಎಂಕೆಯು ಮೇಲ್ಜಾತಿಗಳು, ವನ್ನಿಯಾರ್‌ ಸಮುದಾಯ, ದಲಿತರು, ಗೌಂಡರ್‌ ಮತ್ತು ತೇವರ್‌ ಸಮುದಾಯದ ಬಲವಾದ ಬೆಂಬಲ ಹೊಂದಿದೆ. ಆಡಳಿತಾರೂಢ ಡಿಎಂಕೆಯ ನಿಷ್ಠಾವಂತ ಮತಗಳು ವೆಲ್ಲಲರ್ ಸಮುದಾಯ, ಮುದಲಿಯಾರ್‌, ಉದಯರ್‌ಗಳು, ನಾಡಾರ್‌, ನಾಯ್ಡು ಮತ್ತು ಮುಸ್ಲಿಮ್ ಸಮುದಾಯಗಳ ಮತಗಳ ಪ್ರಬಲ ಬೆಂಬಲ ಹೊಂದಿದೆ.

ರಾಜ್ಯದ ರಾಜಕೀಯ ರಂಗಕ್ಕೆ ಎಂಡಿಎಂಕೆ ಮತ್ತು ಡಿಎಂಡಿಕೆ ಪಕ್ಷಗಳ ಉದಯವು ನಾಯ್ಡು ಸಮುದಾಯಕ್ಕೆ ಹೆಚ್ಚುವರಿ ಆಯ್ಕೆಯನ್ನು ಮುಂದಿಟ್ಟಿದೆ. ಎಸ್‌ಸಿಗಳು ಮತ್ತು ವನ್ನಿಯಾರ್‌ ಸಮುದಾಯಗಳ ಮತಗಳು ಡಿಎಂಕೆ ಕಡೆಗೆ ವಾಲಿದ್ದು ಚುನಾವಣೆ ನಂತರದಲ್ಲಿ ಕಂಡುಬಂದಿದೆ ಎಂದು ಡೇಟಾ ಸೂಚಿಸುತ್ತದೆ. ಅಣ್ಣಾಮಲೈ ಗೌಂಡರ್‌ ಸಮುದಾಯದಿಂದ ಬಂದವರು. ತೇವರ್‌  ಮತ್ತು ನಾಡಾರ್‌ ಸಮುದಾಯಗಳು ಬಿಜೆಪಿಗೆ ಬೆಂಬಲಿಸಿವೆ. ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ರಾಷ್ಟ್ರೀಯ ಚುನಾವಣಾ ಅಧ್ಯಯನದ ಸಮೀಕ್ಷೆಯ ಪ್ರಕಾರ, ತಮಿಳುನಾಡಿನಲ್ಲಿ ಸುಮಾರು ಶೇ.20ರಷ್ಟು ತೇವರ್ ಮತ್ತು ಗೌಂಡರ್‌ ಸಮುದಾಯದ ಮತದಾರರು 2019 ರಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಅಂಶವನ್ನೂ ನಾವು ಇಲ್ಲಿ ತಿಳಿಯಬಹುದಾಗಿದೆ.

ಪಿಎಂ ಮೋದಿ ಮತ್ತು ಅಣ್ಣಾಮಲೈ ಇಬ್ಬರ ಕಠಿಣ ಪರಿಶ್ರಮದ ಹೊರತಾಗಿಯೂ, ತಮಿಳುನಾಡಿನಲ್ಲಿ ಯೋಗ್ಯ ಸಂಖ್ಯೆಯ ಕ್ಷೇತ್ರಗಳನ್ನು ಗೆಲ್ಲುವುದು 2019ರಲ್ಲಿ ಸಾಧ್ಯವಾಗಿಲ್ಲ. ಅಷ್ಟೇಕೆ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗದ ಬಿಜೆಪಿಗೆ ಈ ಬಾರಿಯ ಚುನಾವಣೆಯ ಒಂದು ಸವಾಲಾಗಿತ್ತು. ವಾಸ್ತವವಾಗಿ, ಪಕ್ಷದ ಅತ್ಯುತ್ತಮ ಸಾಧನೆ ಎಂದರೇ, 1999 ರಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ನಾಲ್ಕು ಕ್ಷೇತ್ರಗಳನ್ನು ಗೆದ್ದಿತ್ತು. ಈ ಕಾರಣಕ್ಕಾಗಿಯೇ ಬಿಜೆಪಿ ಈ ಬಾರಿ ತನ್ನ ಮತಗಳ ಪಾಲನ್ನು ಸುಧಾರಿಸಲು ಮತ್ತು ಭವಿಷ್ಯದ ಲಾಭಕ್ಕಾಗಿ ಪ್ರಬಲ ಅಡಿಪಾಯವನ್ನು ಸ್ಥಾಪಿಸಲು ಹೆಚ್ಚಿನ ಗಮನಹರಿಸಿ ಚುನಾವಣೆಯನ್ನು ಎದುರಿಸಿದೆ. ಬಿಜೆಪಿ ವಹಿಸಿದ ಶ್ರಮ ಫಲವಾಗಿ ಪರಿಣಮಿಸಿದೆಯೇ ಎನ್ನುವುದು ಫಲಿತಾಂಶ ಬಂದ ಮೇಲೆ ತಿಳಿದುಬರಬೇಕು.

ತಮಿಳುನಾಡು ʼಮತಗಳ ಸ್ವಿಂಗ್‌ ಪದ್ಧತಿʼಗೆ ಹೆಸರುವಾಸಿ. ದೊಡ್ಡ ಪ್ರಮಾಣದ ಸ್ವಿಂಗ್ ಮತಗಳು ತನ್ನ ಪರವಾಗಿ ಒಲಿದಿರಬಹುದು ಎನ್ನುವುದು ಚುನಾವಣೆಯ ನಂತರದ ವಾತಾವರಣದಲ್ಲಿ ಬಿಜೆಪಿ ವಿಶ್ವಾಸದಲ್ಲಿದೆ.

ಆದರೆ, ಆ ಗುಂಪಿನ ಎರಡು ಪಕ್ಷಗಳಾದ ಡಿಎಂಡಿಕೆ ಮತ್ತು ಎಂಡಿಎಂಕೆ ಈಗ ಮೈತ್ರಿಯಿಂದ ಹೊರಬಂದಿವೆ. ಬಿಜೆಪಿ ಎಸ್. ರಾಮದಾಸ್ ಅವರ ಪಿಎಂಕೆ ರಚನೆಯಾದಾಗಿನಿಂದ ಸತತವಾಗಿ ಶೇ.5-6 ರಷ್ಟು ಮತಗಳನ್ನು ಪಡೆಯುತ್ತಿದೆ. ಉತ್ತರ ತಮಿಳುನಾಡಿನಲ್ಲಿ ಹೆಚ್ಚಿರುವ ವನ್ನಿಯಾರ್ ಸಮುದಾಯವನ್ನು ಸೆಳೆಯುವಲ್ಲಿ ಪ್ರಯತ್ನಿಸಿದೆ. ದಕ್ಷಿಣ ಮತ್ತು ಪಶ್ಚಿಮದಲ್ಲಿ ಮತ್ತು ರಾಜ್ಯದಲ್ಲಿ ನಗರ ಪ್ರದೇಶಗಳಲ್ಲಿಯೂ ಬಿಜೆಪಿ ಸ್ವಲ್ಪಮಟ್ಟಿಗೆ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಣ್ಣಾಮಲೈ, ಟಿಟಿವಿ ದಿನಕರನ್ ಮತ್ತು ಒಪಿಎಸ್ ಅವರಂತಹ ಪ್ರಬಲ ನಾಯಕರು ತಮಿಳುನಾಡಿನಲ್ಲಿ ಬಿಜೆಪಿ ವರ್ಚಸ್ಸನ್ನು ವೃದ್ಧಿಸಲು ಪ್ರಯತ್ನ ಮಾಡಿದ್ದಾರೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಕೊಯಮತ್ತೂರು(ದಕ್ಷಿಣ) ಮತ್ತು ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಾಗರಕೋವಿಲ್, ತಿರುನೆಲ್ವೇಲಿ, ಮೊಡಕುರಿಚ್ ವಿಧಾನಸಭಾ ಕ್ಷೇತ್ರಗಳು ಬಿಜೆಪಿಯ ಶಕ್ತಿಯ ಸ್ತಂಭಗಳಾಗಿವೆ.

ಆರೋಪ ಪ್ರತ್ಯಾರೋಪಗಳು :

ಡಿಎಂಕೆ ರಾಜ್ಯದಲ್ಲಿ ಎಐಎಡಿಎಂಕೆ ಕಾಲಿಡದಂತೆ ತಡೆಯಲು ಆ ಪಕ್ಷವನ್ನು ಬೆಂಬಲಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ʼಇಂಡಿಯಾ;ʼ ಬಣವು ಉತ್ತರ ಮತ್ತು ದಕ್ಷಿಣ ಭಾರತವೆಂದು ವಿಭಜನೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಬಿಜೆಪಿಯೊಂದಿಗೆ ಎಐಎಡಿಎಂಕೆ ರಹಸ್ಯ ಸಂಬಂಧ ಹೊಂದಿದೆ ಎಂದು ಆರೋಪಿಸಿದ್ದಾರೆ.ಸ್ಟಾಲಿನ್ ತೆರಿಗೆ ಹಂಚಿಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿಗೆ ವಂಚಿಸುತ್ತಿದೆ ಎಂಬ ವಿಚಾರವನ್ನು ಎತ್ತಿದ್ದಾರೆ ಮತ್ತು ಬಿಜೆಪಿಯು ಫೆಡರಲ್ ರಚನೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ತಮಿಳಿನ ಪ್ರಾದೇಶಿಕತೆಯನ್ನು ಎತ್ತಿ ಹಿಡಿಯುವುದರೊಂದಿಗೆ ಬಿಜೆಪಿಯನ್ನು 'ಹೊರಗಿನ' ಪಕ್ಷ ಎಂದು ಬಿಂಬಿಸಲು ಡಿಎಂಕೆ ಪ್ರಯತ್ನಿಸಿದೆ. ಈ ಆರೋಪ ಪತ್ಯಾರೋಪಗಳು ಮತದಗಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎನ್ನುವುದನ್ನು ಫಲಿತಾಂಶದ ದಿನವೇ ನೋಡಬೇಕು.

ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ನಡೆದಿದೆ. ಫಲಿತಾಂಶ ಬರಬೇಕಿದೆ. ದ್ರಾವಿಡ ಪಕ್ಷದ ಕೋಟೆಯನ್ನು ಕೆಡವಲು ಬಿಜೆಪಿಗೆ ಸಾಧ್ಯವೇ? ಮುಂದಿನ ಕೆಲವು ವಾರಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

-ಶ್ರೀರಾಜ್‌ ವಕ್ವಾಡಿ