Thursday, March 21, 2024

ದೇಶ ಗೆಲ್ಲುವ ಸವಾಲು : ಗೇಮ್ ಅಭಿ ಬಾಕಿ ಹೈ

 


ನಿಷ್ಠಾವಂತ ಮತದಾರರೇ ಎಲ್ಲಾ ರಾಜಕೀಯ ಪಕ್ಷಗಳ ಹಿಂದಿನ ಎಲುಬುಗಳು !

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮತ್ತೊಂದು ಸುತ್ತಿನ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದ ಹಾಗೆ ಚುನಾವಣಾ ಕಾವು ಜೋರಾಗಿದೆ. ಮಿತ್ರಪಕ್ಷಗಳಾದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮತ್ತು ತೃಣಮೂಲ ಕಾಂಗ್ರೆಸ್ ʼಇಂಡಿಯಾʼ ಮೈತ್ರಿಯನ್ನು ತೊರೆಯುವುದರೊಂದಿಗೆ ಮತ್ತು ತೆಲುಗು ದೇಶಂ ಪಕ್ಷದ(ಟಿಡಿಪಿ) ಚಂದ್ರಬಾಬು ನಾಯ್ಡು ಮತ್ತು ಜನತಾ ದಳ (ಯುನೈಟೆಡ್) (ಜೆಡಿ-ಯು) ನಿತೀಶ್ ಕುಮಾರ್ ಅವರ ಘರ್ವಾಪ್ಸಿ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಯ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನಾಯಕತ್ವದ  ಎನ್‌ಡಿಎ ಮೈತ್ರಿ ಈ ಚುನಾವಣೆಯಲ್ಲಿ ನೆಚ್ಚಿನ ಪಕ್ಷವಾಗಿ ಕಾಣಿಸಿಕೊಳ್ಳುತ್ತಿದೆ. ಏತನ್ಮಧ್ಯೆ, ಪ್ರತಿಪಕ್ಷಗಳು ಅಷ್ಟೊಂದು ಹಾಟ್‌ ಫೇವರೇಟ್‌ ಪಕ್ಷಗಳು ಎಂದು ಕಾಣಿಸುತ್ತಿಲ್ಲವಾದರೂ ಈ ಬಾರಿ ಚುನಾವಣೆ ಪ್ರತಿಪಕ್ಷಗಳ ಏಳ್ಗೆಗೆ ಕಾರಣವಾಗಬಹುದು ಎನ್ನುವ ರಾಜಕೀಯ ವಿಶ್ಲೇಷಣೆ ಈಗ ಕೇಳಿ ಬರುತ್ತಿವೆ.  ಬಿಜೆಪಿ ನೇತೃತ್ವದ ಎನ್‌ಡಿಎಗೆ ರಾಮ ಮಂದಿರ, ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಹಕ್ಕು ಆರ್ಟಿಕಲ್‌ ೩೭೦ ಪರವಾದ ಮತಗಳನ್ನು ತಂದುಕೊಡಬಹುದು ಎಂಬ ಲೆಕ್ಕಚಾರ ಸ್ವಲ್ಪ ಮಟ್ಟಿಗೆ ಇದ್ದರೇ, ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟಕ್ಕೆ ಚುನಾವಣಾ ಬಾಂಡ್‌, ವಿವಾದಾತ್ಮಕ ಸಿಎಎ ಹಾಗೂ  ರೈತರ ಪ್ರತಿಭಟನೆ ವಿಚಾರಗಳು ಪರವಾದ ಮತಗಳನ್ನು ಒದಗಿಸಿಕೊಡಬಹುದು ಎಂಬ ವಿಶ್ಲೇಷಣೆ ಇದೆ.

ಮತ್ತೆ ಮರಳಿ ಮೂರನೆ ಸುತ್ತಿಗೆ ಎನ್‌ಡಿಎ ಗೆಲುವಿನ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಈ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆಯನ್ನು ಹೊಂದಿದ್ದಾರೆ. ಎನ್‌ಡಿಎ 335 ರಿಂದ 398 ಸ್ಥಾನಗಳನ್ನು ಗೆಲ್ಲಬಹುದು ಎಂದು ಬೇರೆ ಬೇರೆ ರಾಷ್ಟ್ರೀಯ ಮಟ್ಟದ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳು ಭವಿಷ್ಯ ನುಡಿದಿವೆಯಾದರೇ, ರಾಷ್ಟ್ರದ ಅತ್ಯಂತ ಹಿರಿಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟ ದೇಶದಾದ್ಯಂತ 93-166  ಕ್ಷೇತ್ರಗಳಲ್ಲಿ ಜಯ ಗಳಿಸಬಹುದು ಎಂದು ಹೇಳಿವೆ. ಆದರೇ, ಕಾಂಗ್ರೆಸ್‌ ಹಾಗೂ ʼಇಂಡಿಯಾʼ ಮೈತ್ರಿಕೂಟ ಅದಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ತಮ್ಮ ಸಮೀಕ್ಷಾ ವರದಿಯ ಆಧಾರದ ಮೇಲೆ, ಕ್ಷೇತ್ರಗಳಲ್ಲಿನ ರಾಜಕೀಯ ಸ್ಥಿತಿಗತಿಗಳ ಮೇಲೆ ಪಕ್ಷಗಳು ವಿಶ್ವಾಸವನ್ನು ವ್ಯಕ್ತಪಡಿಸುವುದು ಚುನಾವಣೆಯ ಸಂದರ್ಭದಲ್ಲಿ ತೀರಾ ಸಹಜ. ಆದರೇ, ಈ ಲೋಕಸಭಾ ಚುನಾವಣೆಯ ಮುಂದೆ ರಾಮ ಮಂದಿರ, ಇತ್ತೀಚೆಗಷ್ಟೇ ರಾಷ್ಟ್ರ ರಾಜಕಾರಣದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಚುನಾವಣಾ ಬಾಂಡ್‌ ಅನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್‌ ೩೭೦ ರದ್ದು ಮಾಡಿದ್ದು ಸರಿ ಎಂದು ಕೇಂದ್ರದ ನಿಲುವಿಕೆ ಸುಪ್ರೀಂ ಕೋರ್ಟ್‌ ಸಹಮತ ವ್ಯಕ್ತಪಡಿಸಿದ್ದು, ೨೦೧೯ರ ಪೌರತ್ವ(ತಿದ್ದುಪಡಿ) ಕಾಯ್ದೆಯ ಅನುಷ್ಠಾನ, ರೈತರ ಸಮಸ್ಯಗಳು ಹಾಗೂ ಕನಿಷ್ಠ ಬೆಂಬಲ ಬೆಲೆಯ ವಿಚಾರ, ಅಮೃತ್ ಕಾಲ್‌ ವರ್ಸಸ್‌ ಅನ್ಯಾಯ್‌ ಕಾಲ್‌, ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು, ಮೋದಿ ಕಿ ಗ್ಯಾರಂಟಿಗಳೆಲ್ಲವೂ ಈ ಬಾರಿಯ ಚುನಾವಣೆಯ ಮೇಲೆ ಪ್ರಭಾವ ಹೇಗೆ ಬೀರಲಿವೆ ಎನ್ನುವುದು ಕೂಡ ಈ ಬಾರಿಯ ಚುನಾವಣೆಯ ಮೇಲೆ ಗಣನೀಯ ವಿಚಾರಗಳಾಗಿವೆ.

1. ಅಳೆದು ತೂಗುವ ಮತದಾರರು :

ಸೆಂಟರ್‌ ಫಾರ್‌ ದಿ ಸ್ಟಡಿ ಆಫ್‌ ಡೆವಲಪ್ಪಿಂಗ್‌ ಸೊಸೈಟಿಸ್‌ (ಸಿಎಸ್‌ಡಿಎಸ್‌) ಪ್ರಕಟಿಸಿದ ರಾಷ್ಟ್ರೀಯ ಚುನಾವಣಾ ಅಧ್ಯಯನ ವರದಿಗಳ ಪ್ರಕಾರ, ಭಾರತದಲ್ಲಿ, ಶೇ. 25 ರಿಂದ 30ರಷ್ಟು ಮತದಾರರು ಮತದಾನದ ದಿನದಂದು ಅಥವಾ ಮತದಾನಕ್ಕೆ ಕೆಲವೇ ದಿನಗಳ ಮೊದಲು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುತ್ತಾರೆ. ಇದರರ್ಥ ಚುನಾವಣೆಯ ಅಂತಿಮ ದಿನದವರೆಗೆ ತಾವು ಯಾರಿಗೆ ಮತ ಚಲಾಯಿಸಬೇಕು ಎಂಬ ಗೊಂದಲದಲ್ಲೇ ಇರುವ ಮತದಾರರು ಬಹಳಷ್ಟು ಮಂದಿ ಇದ್ದಾರೆ ಮತ್ತು ಅವರು ಯಾವುದೇ ಸಂದರ್ಭದಲ್ಲಿಯೂ ಚುನಾವಣೆಯ ಫಲಿತಾಂಶದ ನಿರೀಕ್ಷೆಯನ್ನೇ ಬದಲಾಯಿಸಬಲ್ಲವರಾಗಿದ್ದಾರೆ ಎನ್ನುವುದು ಇಲ್ಲಿ ಪ್ರಮುಖಾಂಶ.

ಕೇವಲ ಶೇ. 36ರಷ್ಟು ಮತದಾರರು ಆರಂಭದಿಂದ ತಾವು ಯಾವ ಪಕ್ಷಕ್ಕೆ ಬೆಂಬಲಿಸಬೇಕೆಂದು ಅಂದುಕೊಂಡಿರುತ್ತಾರೋ ಅದೇ ಪಕ್ಷಕ್ಕೆ ಮತ ಚಲಾಯಿಸುವವರಿದ್ದಾರೆ. ಇನ್ನು, ಶೇ.12ರಷ್ಟು ಮತದಾರರು ಅಭ್ಯರ್ಥಿಗಳ ಘೋಷಣೆಯ ಬಳಿಕ ತಮ್ಮ ಮತ ಚಲಾವಣೆಯ ನಿರ್ಧಾರ ಮಾಡುತ್ತಾರೆ. ಇನ್ನು, ಸುಮಾರು ಶೇ. 18 ರಷ್ಟು ಮಂದಿ ಚುನಾವಣಾ ಪ್ರಚಾರ ಹಾಗೂ ಪ್ರಣಾಳಿಕೆಯ ಆಧಾರದ ಮೇಲೆ ತಾವು ಯಾರಿಗೆ ಮತದಾನ ಮಾಡುವುದೆಂದು ನಿರ್ಧಾರ ಮಾಡುತ್ತಾರೆ.

ಆಕ್ಸಿಸ್ ಮೈ ಇಂಡಿಯಾ 2019 ಎಕ್ಸಿಟ್ ಪೋಲ್, ರಾಜಕೀಯ ಪಕ್ಷಗಳ ಬಹು ಹಂತದ ಚುನಾವಣಾ ತಯಾರಿ, ತಿಂಗಳ ಅವಧಿಯ ಚುನಾವಣಾ ಪ್ರಚಾರಗಳ ಮಹತ್ವವನ್ನು ಒತ್ತಿಹೇಳುತ್ತದೆ. ಸುಮಾರು ಶೇ. 43ರಷ್ಟು ಮಂದಿ ಪ್ರತಿಕ್ರಿಯಿಸಿದವರಲ್ಲಿ ಶೇ. 14ರಷ್ಟು ಮಂದಿ  ಮತದಾನದ ದಿನದಂದು ತಾವು ಯಾರಿಗೆ ಮತದಾನ ಮಾಡುವುದೆಂದು ನಿರ್ಧರಿಸಿದ್ದು ಎಂದು ಹಾಗೂ ಶೇ. 29ರಷ್ಟು ಮಂದಿ ಕೆಲವು ದಿನಗಳ ಹಿಂದೆ ನಡೆಯುವ ಸಮುದಾಯ ಸಭೆಗಳು, ಪ್ರಚಾರ ಸಭೆಗಳ ರಾಜಕೀಯ ವೈಬ್‌ ಅನ್ನು ಆಧರಿಸಿ ತಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳುತ್ತದೆ.

ಇನ್ನು, ವರದಿಗಳ ಪ್ರಕಾರ ಒಡಿಶಾದಲ್ಲಿ ಶೇ. 68, ಮಹಾರಾಷ್ಟ್ರದಲ್ಲಿ ಶೇ. 56ರ, ಜಾರ್ಖಂಡ್ ನಲ್ಲಿ ಶೇ. 63, ಛತ್ತೀಸ್‌ಗಢದಲ್ಲಿ ಶೇ. 55, ತೆಲಂಗಾಣದಲ್ಲಿ ಶೇ. 57, ಬಿಹಾರದಲ್ಲಿ ಶೇ. 55 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ. 50 ರಷ್ಟು ಮಂದಿ ಚುನಾವಣೆಯಲ್ಲಿ ತಾವು ಯಾರಿಗೆ ಮತದಾನ ಮಾಡುವುದೆಂದು ತಡವಾಗಿ ನಿರ್ಧರಿಸುತ್ತಾರೆಂದು ಹೇಳಲಾಗಿದೆ. ಛತ್ತೀಸ್‌ಗಢ ಹೊರತುಪಡಿಸಿ ಉಳಿದೆಲ್ಲವೂ ತ್ರಿಕೋನ ಅಥವಾ ಬಹುಕೋನ ಸ್ಪರ್ಧೆಗಳನ್ನು ನಾವಿಲ್ಲಿ ಗಮನಿಸಬಹುದು ಈ ಕಾರಣಕ್ಕಾಗಿ ಇಲ್ಲಿ ಮತದಾರರಿಗೂ ಯಾವ ಅಭ್ಯರ್ಥಿಯನ್ನು ಆರಿಸಬೇಕು ಎನ್ನುವುದು ಗೊಂದಲವೇ ಸರಿ. ಈ ಎಲ್ಲಾ ರಾಜ್ಯಗಳಲ್ಲಿ, ಕನಿಷ್ಠ ಅರ್ಧದಷ್ಟು ಮತದಾರರು ಮತದಾನದ ದಿನವೇ ಯಾವ ಪಕ್ಷವನ್ನು ಬೆಂಬಲಿಸಬೇಕೆಂದು ನಿರ್ಧರಿಸುತ್ತಾರೆ ಎಂದು ಸಮೀಕ್ಷಾ ವರದಿಗಳು ಹೇಳುತ್ತವೆ. ಅಂತಿಮ ಹಂತದವರೆಗೂ ಮತದಾರರು ಅಭ್ಯರ್ಥಿಗಳನ್ನು, ಪಕ್ಷಗಳನ್ನು ಅಳೆದು ತೂಗುತ್ತಾರೆ.

2. ನಾವ್ಯಾರೇ ಬಂದರೂ ಬದಲಾಗಲ್ಲ ಎನ್ನುವವರು ಕಡಿಮೆ : 

ಆಕ್ಸಿಸ್ ಮೈ ಇಂಡಿಯಾ 2019 ಎಕ್ಸಿಟ್ ಪೋಲ್‌ನಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ. 31ರಷ್ಟು ಮಂದಿ ಒಂದು ಪಕ್ಷಕ್ಕೆ ಸದಾ ನಿಷ್ಠರಾಗಿದ್ದೇವೆ ಮತ್ತು ಚುನಾವಣೆಯಲ್ಲಿ ಸೋತರೂ, ಗೆದ್ದರೂ ಅವರನ್ನೇ ಬೆಂಬಲಿಸುತ್ತೇವೆ ಎಂದು ಹೇಳಿಕೊಂಡಿದ್ದರು. ಇದು ದೇಶದಲ್ಲಿ ಶೇ. 31 ಜನರು ಹಾರ್ಡ್‌ಕೋರ್, ಸೈದ್ಧಾಂತಿಕವಾಗಿ ಬದ್ಧರಾಗಿರುವ ಮತದಾರರೆಂದು ಸೂಚಿಸುತ್ತದೆ.

2009ರ ಲೋಕಸಭಾ ಚುನಾವಣೆಯಲ್ಲಿ, ಶೇ. 18.8ರಷ್ಟು ಮತಗಳನ್ನು ಪಡೆದ ಬಿಜೆಪಿ, ಶೇ. 28.6ರಷ್ಟು ಮತಗಳನ್ನು ಗಳಿಸಿದ ಕಾಂಗ್ರೆಸ್‌ ಎದುರು ಸೋಲನುಭವಿಸಿತ್ತು. 1991ರಿಂದೀಚೆಗಿನ ಚುನಾವಣೆಗಳಲ್ಲಿ ಬಿಜೆಪಿಯ ಅತ್ಯಂತ ಕಳಪೆ ಮತಪ್ರಮಾಣವಾಗಿದೆ. ಇದಕ್ಕೆ ವಿರುದ್ಧವಾಗಿ, 2019ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಶೇ. 37.7ರಷ್ಟು ಮತಗಳಿಸಿ ಕಾಂಗ್ರೆಸ್‌ ವಿರುದ್ಧ ಗೆದ್ದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.19.7ರಷ್ಟೆ ಮತಗಳನ್ನು ಗಳಿಸುವಲ್ಲಿ ಸಫಲವಾಗಿತ್ತು. ಇದು ಕಾಂಗ್ರೆಸ್ಸಿನ ಅತ್ಯಂತ ಕಳಪೆ ಮತ ಹಂಚಿಕೆಯ ಪ್ರಮಾಣ. 2009ರಲ್ಲಿ ಸೋತ ಬಿಜೆಪಿಯನ್ನು ಅದು ಸೋತ ಕಾರಣಕ್ಕಾಗಿ ಬೆಂಬಲಿಸಿದವರು ಅದರ ನಿಷ್ಠಾವಂತ ಅಥವಾ ಸೈದ್ಧಾಂತಿಕ ಬೆಂಬಲಿಗರು ಎಂದು ಭಾವಿಸಬಹುದಾದಂತೆಯೇ ಇಂದು ಕಾಂಗ್ರೆಸ್‌ಗೆ ಮತ ಹಾಕುತ್ತಿರುವವರು ಹೆಚ್ಚಾಗಿ ನಿಷ್ಠಾವಂತ ಮತದಾರರು ಎಂದು ಭಾವಿಸಬಹುದಾಗಿದೆ.

ಸುಮಾರು ಶೇ. 70ರಷ್ಟು ಮತದಾರರು 'ಸ್ವಿಂಗ್' ಅಂದರೆ, ಅವರ ಆದ್ಯತೆಗಳ ಆಧಾರದ ಮೇಲೆ ತಮ್ಮ ನಿಲುವನ್ನು ಬದಲಾಯಿಸುತ್ತಾರೆ. ಉಳಿದ ಶೇ. 31 ಜನರು 'ನಿಷ್ಠಾವಂತರು'. ಅಂತಹ ನಿಷ್ಠಾವಂತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಾಜ್ಯಗಳೆಂದರೆ ಉತ್ತರಾಖಂಡ್ನಲ್ಲಿ  ಶೇ.60, ಗುಜರಾತ್ನಲ್ಲಿ ಶೇ.52, ರಾಜಸ್ಥಾನದಲ್ಲಿ ಶೇ.48, ಆಂಧ್ರಪ್ರದೇಶದಲ್ಲಿ ಶೇ.44, ಮಧ್ಯಪ್ರದೇಶದಲ್ಲಿ ಶೇ. 44, ಉತ್ತರ ಪ್ರದೇಶದಲ್ಲಿ ಶೇ.38, ಕೇರಳದಲ್ಲಿ ಶೇ.37 ಮತ್ತು ಹರಿಯಾಣದಲ್ಲಿ ಶೇ.36. ರಷ್ಟು ಮಂದಿ ಇದ್ದಾರೆ. ಇವುಗಳಲ್ಲಿ ಐದು ರಾಜ್ಯಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೆಚ್ಚಾಗಿ ಸ್ಪರ್ಧೆಗಳಿಗೆ ಸಾಕ್ಷಿಯಾಗುತ್ತವೆ, ಆದರೆ ಕೇರಳ ಮತ್ತು ಆಂಧ್ರಪ್ರದೇಶ ಎರಡು ರಾಜ್ಯಗಳು ಕ್ರಮವಾಗಿ ಕಾಂಗ್ರೆಸ್ ವಿರುದ್ಧ ಎಡಪಕ್ಷಗಳ ಸ್ಪರ್ಧೆ ಮತ್ತು ಪ್ರಾದೇಶಿಕ ಪಕ್ಷಗಳ ಕದನಗಳಿಗೆ ಸಾಕ್ಷಿಯಾಗುತ್ತವೆ.

3. ಸ್ಥಳೀಯ ಅಭ್ಯರ್ಥಿಯೂ ಒಮ್ಮೊಮ್ಮೆ ಗಣನೆಗೆ :

2019ರ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್  ಪ್ರಕಾರ, ಶೇ. 25ರಷ್ಟು ಮತದಾರರು ಸ್ಥಳೀಯ ಅಭ್ಯರ್ಥಿಯ ಆಧಾರದ ಮೇಲೆ ಅವರ ಆಯ್ಕೆಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.  ಶೇ. 37 ರಷ್ಟು ಮತದಾರರಿಗೆ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಮುಖ್ಯವಾಗುತ್ತದೆ, ಶೇ. 22ರಷ್ಟು ಮಂದಿ ಪಕ್ಷದ ಮೇಲೆ, ಕೇವಲ ಶೇ. 3ರಷ್ಟು ಪ್ರಣಾಳಿಕೆಯ ಭರವಸೆಗಳ ಮೇಲೆ ಮತ್ತು ಶೇ. 13 ಇತರ ಅಂಶಗಳ ಆಧಾರದ ಮೇಲೆ ಮತದಾನ ಮಾಡಿದ್ದಾರೆ.

ಹೀಗಾಗಿ, ಅನೇಕ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳು ಬಹುತೇಕ ಸರಿಯಾಗಿದ್ದರೂ, ಈ ಅಂಶಗಳಿಂದಾಗಿ ಲೆಕ್ಕಾಚಾರಗಳು ಬದಲಾಗಬಹುದು. ಬಹಳ ಪ್ರಮುಖವಾಗಿ ನಾವು ಗಮನಿಸಬೇಕು 2009ರ ಚುನಾವಣೆಯಲ್ಲಿ ಸಮೀಕ್ಷಾ ವರದಿಗಳು ಯುಪಿಎ ಅತ್ಯುತ್ತಮ ಅಂದಾಜಿನ ಪ್ರಕಾರ 257 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದ್ದವು. ಆದರೇ, ಯುಪಿಎ 262 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ಗೆ 144 ಕ್ಷೇತ್ರಗಳಲ್ಲಿ ಗೆಲ್ಲಬಹುದೆಂಬ ಲೆಕ್ಕಚಾರವಿದ್ದಿತ್ತು, ಆದರೇ, ಕಾಂಗ್ರೆಸ್‌ ಅಂದು 206ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

2014ರ ಚುನಾವಣೆಯಲ್ಲಿ, ಎನ್‌ಡಿಎ 275 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು, ಆದರೆ ಅಂತಿಮವಾಗಿ 336 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 226 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು, ಆದರೇ, 282 ಕ್ಷೇತ್ರಗಳನ್ನು ಜಯ ಕಂಡಿತ್ತು.

2019 ರ ಚುನಾವಣೆಯಲ್ಲಿ, ಎನ್‌ಡಿಎ ಮೈತ್ರಿ 285 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗಿತ್ತು. ಅಂತಿಮವಾಗಿ 353 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿಗೆ 248 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗಿತ್ತು ಆದರೇ, 313 ಕ್ಷೇತ್ರಗಳನ್ನು ಪಡೆದುಕೊಂಡಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.   

ಈ ಸಂಖ್ಯೆಗಳು ಮತ್ತು ಮಾದರಿಗಳು ಪಕ್ಷಗಳ ಬೆಂಬಲಿಗರನ್ನು ಹುರಿದುಂಬಿಸಬೇಕು. ಕಳೆದ ಎರಡು ಚುನಾವಣೆಗಳಲ್ಲಿನ ಸಮೀಕ್ಷಾ ವರದಿಗಳನ್ನೂ ಮೀರಿ ಫಲಿತಾಂಶ ಬಂದಿರುವುದರಿಂದ ಈಗ ಬಂದಿರುವ ಪ್ರೀ ಪೋಲ್‌ ಸಮೀಕ್ಷೆಗಳೇ ಅಂತಿಮವಲ್ಲ ಎನ್ನುವುದು ಖಚಿತ. ಇನ್ನು, ದೇಶ ಗೆಲ್ಲುವ ಸವಾಲನ್ನು ಎಲ್ಲಾ ರಾಜಕೀಯ ಪಕ್ಷಗಳು ಎದುರಿಸುತ್ತಿವೆ.  "ಗೇಮ್ ಅಭಿ ಬಾಕಿ ಹೈ" ಎಂಬ ಹಳೆಯ ಮಾತಿನಲ್ಲಿ ಪ್ರತಿಪಕ್ಷಗಳು ಸ್ವಲ್ಪ ಸಮಾಧಾನವನ್ನು ಕಂಡುಕೊಳ್ಳಬಹುದು.

 

-ಶ್ರೀರಾಜ್‌ ವಕ್ವಾಡಿ

Wednesday, March 13, 2024

ಹೊಸತನಕ್ಕೆ ಒಗ್ಗಿಕೊಳ್ಳದ ಹೊರತು ಬದಲಾವಣೆ ಸಾಧ್ಯವಿಲ್ಲ !

 


ಕಾರ್ಯಕರ್ತರ ಸಂಘಟನೆಯಲ್ಲಿ ಬಿಜೆಪಿಯ ಚತುರತೆ ಮತ್ತು ಕಾಂಗ್ರೆಸ್‌

ಬಿಜೆಪಿಯಂತಹ ಸಂಘಟನೆಯನ್ನು ಕಾಂಗ್ರೆಸ್ ಯಾಕೆ ರಚಿಸಬಾರದು ? ಕೊನೆಯ ಪಕ್ಷ ಆ ಮಾದರಿಯ ಸಂಘಟನಾ ಬಲವನ್ನು ಯಾಕೆ ವೃದ್ಧಿಸಿಕೊಳ್ಳಬಾರದು ? ವಾಸ್ತವವಾಗಿ, ಜನರನ್ನು ತಲುಪುವ ಉದ್ದೇಶದಿಂದ ಪ್ರಚಾರ ಮಾಡಲು ಕಾರ್ಯಕರ್ತರನ್ನು ಹೊಣೆಗಾರರನ್ನಾಗಿ ಮಾಡುವ ಸಾಂಸ್ಥಿಕ ರಚನೆಯೊಂದನ್ನು ಮಾಡದ ಹೊರತು ಕಾಂಗ್ರೆಸ್ ಪಕ್ಷದ  ಪುನರುಜ್ಜೀವನ ಅಸಾಧ್ಯ ಅಂತನ್ನಿಸುತ್ತದೆ. ಇದು ಒಂದು ಪ್ರಶ್ನೆಯಲ್ಲ ಅಥವಾ ಅಭಿಪ್ರಾಯವೂ ಅಲ್ಲ, ಈ ಬಗ್ಗೆ ಕಾಂಗ್ರೆಸ್‌ ಯೋಚನೆ ಮಾಡಲೇಬೇಕಿದೆ. ಒಂದು ಸಿದ್ಧಾಂತದ ವಿರುದ್ಧ ನಿಲ್ಲುವುದಕ್ಕೆ ಮುಂದಾದವರು ಒಂದು ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೆ ಸಾಂಸ್ಥಿಕ ರಚನೆ ಮಾಡದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ. 

      ಕಾಂಗ್ರೆಸ್‌ ಎಂದಿಗೂ ನಾಯಕರ ಪಕ್ಷವಾಗಿಯೇ ಉಳಿದುಕೊಂಡಿದೆ ಹೊರತು, ಕಾರ್ಯಕರ್ತರ ಪಕ್ಷವಾಗಿ ಉಳಿಯಲಿಲ್ಲ ಅಥವಾ ಬದಲಾಗಿಲ್ಲ. ಕಾಂಗ್ರೆಸ್‌ ಎಲ್ಲೇ ಗೆಲ್ಲಲಿ ಅದು ಅದರ ನಾಯಕತ್ವವನ್ನು ಹೊಗಳಿಕೊಳ್ಳುತ್ತದೆ. ಇದು ಬಿಜೆಪಿಯನ್ನು ಒಳಗೊಂಡು ಎಲ್ಲಾ ಪಕ್ಷಗಳಲ್ಲೀಗ ಸಾಮಾನ್ಯವಾಗಿದೆ. ಆದರೇ, ಇಂದಿರಾಗಾಂಧಿ ಕಾಲದಿಂದ ಮೊದಲ್ಗೊಂಡು, ಸೋನಿಯಾ ಗಾಂಧಿ ಮುಂದಾಳತ್ವವಿರುವ ತನಕವೂ ಕಾಂಗ್ರೆಸ್‌ ನಾಯಕರ ಪಕ್ಷವಾಗಿಯೇ ಉಳಿದಿದೆ. ರಾಹುಲ್‌ ಗಾಂಧಿ ಜೋಡೋ ಯಾತ್ರೆಯ ಮೂಲಕ ಕಾರ್ಯಕರ್ತರನ್ನು ಒಳಗೊಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದರೂ, ಉಳಿದ ನಾಯಕರು ಅವರ ನಡೆಯಂತೆ ಇಲ್ಲದಿರುವುದು ಕಾಂಗ್ರೆಸ್‌ ಓಟಕ್ಕೆ ಮತ್ತೆ ಮತ್ತೆ ಹಿನ್ನೆಡೆಯಾಗುತ್ತಿದೆ. ಕಾಂಗ್ರೆಸ್‌ನ ಎಲ್ಲಾ ಗೆಲುವುಗಳಲ್ಲಿ ಕಾರ್ಯಕರ್ತರ ಶ್ರಮ ಮರೆಯಾಗಿ ಹೋಗಿ ನಾಯಕರೇ ಅದರ ಶ್ರೇಯ ಗಿಟ್ಟಿಸಿಕೊಳ್ಳುವುದು ತೀರಾತಿಸಹಜ. ಮೋದಿ ಆಡಳಿತವೂ ಇದನ್ನೇ ಅನುಸರಿಸುತ್ತಿದೆ ಆದರೇ, ಮೋದಿಯವರ ʼಒಂದುʼ ಹೇಳಿಕೆಯು ಕಾರ್ಯಕರ್ತರನ್ನು ಒಗ್ಗೂಡಿಸುವ ಶಕ್ತಿಯಾಗಿ ಪರಿವರ್ತನೆಯಾಗಿದೆ. ಆದರೇ, ಕಾಂಗ್ರೆಸ್‌ನಲ್ಲಿ ಆ ಪರಿಸ್ಥಿತಿ ಇಲ್ಲ. ಕಾರ್ಯಕರ್ತರನ್ನು ಈ ಹಿಂದಿನಿಂದಲೂ ಕಾಂಗ್ರೆಸ್‌ ಅಷ್ಟೊಂದು ವಿಶ್ವಾಸದ ವಲಯದಲ್ಲಿ ಉಳಿಸಿಕೊಂಡಿಲ್ಲ. ಚುನಾವಣೆ ಬಂದಾಗ ಕಾರ್ಯಕರ್ತರು ಬೇಕು ಎಂಬಂತಹ ಮನಸ್ಥಿತಿ ಕಾಂಗ್ರೆಸ್‌ನ ಅನೇಕ ನಾಯಕರಲ್ಲಿದೆ.

ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ನಾಯಕರ ಮನೋಧೋರಣೆಯ ಬಗ್ಗೆ ಅಸಮಾಧಾನವೂ ಬಹಳ ದೊಡ್ಡ ಮಟ್ಟದಲ್ಲಿದೆ. ಅದಕ್ಕೆ ಕಾಂಗ್ರೆಸ್‌ ನಡೆದು ಬಂದ ದಾರಿಯೇ ಮುಖ್ಯ ಕಾರಣ. ಬಿಜೆಪಿ ಕಾರ್ಯಕರ್ತರಿಗೆ ಕೊಟ್ಟಷ್ಟು ಹೋಲ್ಡ್‌, ಕಾಂಗ್ರೆಸ್‌ ತನ್ನ ಕಾರ್ಯಕರ್ತರಿಗೆ ನೀಡಿಲ್ಲ. ಅದು ಕಾಂಗ್ರೆಸ್‌ನ ದೌರ್ಬಲ್ಯ.

ಭಾರತೀಯ ಜನತಾ ಪಕ್ಷ (ಬಿಜೆಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) (ಸಿಪಿಐ-ಎಂ) ಭಾರತದಲ್ಲಿ ಕಾಯಕರ್ತರ ಆಧಾರಿತ ಪಕ್ಷಗಳಿಗೆ ಕೆಲವು ಉದಾಹರಣೆಗಳಾಗಿವೆ. ಇಂದು ಬಿಜೆಪಿಯನ್ನು ಹೊರತು ಪಡಿಸಿ ಉಳಿದ ಪಕ್ಷಗಳು ಕಾರ್ಯಕರ್ತರ ಪಕ್ಷವಾಗಿ ಉಳಿಯದೇ ಇರಬಹುದು ಅಥವಾ ದುರ್ಬಲಗೊಂಡಿರಬಹುದು. ಆದರೇ, ಕಾರ್ಯಕರ್ತರ ಶ್ರಮದಿಂದಲೇ ಈ ಎಲ್ಲಾ ಪಕ್ಷಗಳು ಬೆಳೆದಿವೆ ಎನ್ನುವುದು ಸತ್ಯ. ಕಾಂಗ್ರೆಸ್‌ನಂತಹ ದೇಶದ ಅತ್ಯಂತ ಹಿರಿಯ ರಾಷ್ಟ್ರೀಯ ಪಕ್ಷದ ಹಿಂದೆ ಬಹುದೊಡ್ಡ ಕಾರ್ಯಕರ್ತರಿದ್ದಾರೆ. ಆದರೇ, ಕಾರ್ಯಕರ್ತರನ್ನು ಕಾಂಗ್ರೆಸ್‌ ಸಂಘಟನಾತ್ಮಕ ವಿಕಾಸಕ್ಕೆ ಸರಿಯಾಗಿ ಬಳಸಿಕೊಂಡಿಲ್ಲ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

1920ರ ದಶಕದಲ್ಲಿ ಕಾಂಗ್ರೆಸ್ ನಾಯಕರಿಗೆ ಸಾಮಾಜಿಕ ಮಾಧ್ಯಮಗಳು ಲಭ್ಯವಿರಲಿಲ್ಲ. ಮಹಾತ್ಮಾ ಗಾಂಧಿಯವರು ಎಂತಹ ಪ್ರಖರ ಬರಹಗಾರರಾಗಿದ್ದರು ಎಂಬುದನ್ನು ಗಮನಿಸಿದರೆ, ಅವರು ಇಂದು ಬದುಕಿದ್ದಿದ್ದರೆ, ಅವರು ಸಾರ್ವಜನಿಕರನ್ನು ಮನವೊಲಿಸಲು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ಮುಂಚೂಣಿಯಲ್ಲಿರುತ್ತಿದ್ದರು ಎಂದು ಈ ಸಮಾಜ ನಿಸ್ಸಂಶಯವಾಗಿ ಒಪ್ಪುತ್ತದೆ.

ಹೌದು, ಕಾಂಗ್ರೆಸ್ ತನ್ನ ಪಕ್ಷ ಸಂಘಟನೆಯ ಬಗ್ಗೆ ಮರುಚಿಂತನೆ ಮಾಡುವ ಸಮಯ ಬಂದಿದೆ. ಇದು ಸರಳ ಸದಸ್ಯತ್ವ ಅಭಿಯಾನದ ಮೂಲಕ ಮಾಡುವ ವಿಷಯವಲ್ಲ, ಯಾಕೆಂದರೆ ಪಕ್ಷದ ಸಂಘಟನೆಯನ್ನು ರೂಪಿಸುವ ಮತ್ತು ಬಳಸುವ ವಿಧಾನದ ಬಗ್ಗೆ ಹೊಸ ಕಲ್ಪನೆ ಇಲ್ಲದಿದ್ದರೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವುದು ಅರ್ಥಹೀನ.  ಕಾಂಗ್ರೆಸ್‌ ಪದೇ ಪದೆ ಸೋಲುತ್ತಿರುವುದೇ ಇಲ್ಲಿ.

ಕೇರಳದ ಕಾಂಗ್ರೆಸ್‌ ಸಂಘಟನಾ ಮಾದರಿ :

ಕಾಂಗ್ರೆಸ್ ಸಂಘಟನೆಯು ಕಾರ್ಯಕರ್ತರ ಆಧಾರಿತ ಪಕ್ಷಗಳನ್ನು ಹೋಲುವ ಒಂದು ರಾಜ್ಯವಿದೆ. ಅದು ಕೇರಳ. ಹೌದು, ಕೇರಳದಲ್ಲಿ ಕಾಂಗ್ರೆಸ್ ಸಂಘಟನೆಯು ಸಿಪಿಐ(ಎಂ) ಕಾರ್ಯಕರ್ತರಿಗೆ ಪ್ರತಿಯಾಗಿ ವಿಕಸನಗೊಂಡು ಬೆಳೆಯಿತು. ಕೇರಳದಲ್ಲಿ ಕಾಂಗ್ರೆಸ್‌ಗೆ ಆ ಅನಿವಾರ್ಯ ಇದ್ದಿತ್ತು ಕೂಡ. ಆದರೂ ಇಂದು ಕೇರಳದಲ್ಲಿ ಕಾಂಗ್ರೆಸ್ ಸಂಘಟನೆ ದುರ್ಬಲವಾಗಿದೆ ಎಂದು ಕಳೆದ ವಿಧಾನಸಭಾ ಚುನಾವಣೆ ತೋರಿಸಿಕೊಟ್ಟಿದೆ.‌ ಕರ್ನಾಟಕದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಬೆಂಬಲದಿಂದ ಗೆದ್ದಿದ್ದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹಾಗಂತ ಕಾರ್ಯಕರ್ತರ ಶ್ರಮವಿಲ್ಲ ಎಂದರ್ಥವಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿಗೆ ಹಲವಾರು ಕಾರಣಗಳಿವೆ. ಅದೊಂದು ದೊಡ್ಡ ಚರ್ಚೆಯೇ ಸರಿ.

ಸಿಪಿಐ(ಎಂ)ಗೆ ಪ್ರತಿಯಾಗಿ ಕೇರಳದಲ್ಲಿ ಕಾಂಗ್ರೆಸ್ ಹೊಸ ಸಾಂಸ್ಥಿಕ ರಚನೆಯನ್ನು ರೂಪಿಸಿದಂತೆಯೇ,  2014ರ ನಂತರದಲ್ಲಿ ಬದಲಾದ ಬಿಜೆಪಿಗೆ ಪ್ರತಿಯಾಗಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಒಂದು ಸಾಂಸ್ಥಿಕ ರಚನೆಗೆ ಮುಂದಾಗಬೇಕಿತ್ತು. ಅದನ್ನು ಮಾಡದೇ ಉಳಿದಿರುವುದೇ ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಕಾರಣ ಎಂದು ಹೇಳಿದರೇ ತಪ್ಪಲ್ಲ.   

ಸಂಘಟನೆಯ ಚತುರತೆ ಮತ್ತು ಬಿಜೆಪಿ :

ಬಿಜೆಪಿ ಇಂದು ಅಸಾಧಾರಣ ಪಕ್ಷ ಸಂಘಟನೆಯನ್ನು ಹೊಂದಿದೆ. ಪಕ್ಷದ ಚುನಾವಣಾ ಪ್ರಚಾರಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಕಾರ್ಯಕರ್ತರ ಪಾತ್ರ ದೊಡ್ಡದಿದೆ. 2014 ರಿಂದ ಬಿಜೆಪಿ ತನ್ನ ಪಕ್ಷದ ಸಂಘಟನೆಯನ್ನು ಬಹುಮುಖಿಯಾಗಿ ವಿಸ್ತರಿಸಿದೆ. ರಾಜಕೀಯ ವಿಶ್ಲೇಷಕರು ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳು ಮತ್ತು ಪ್ರಚಾರಗಳ ಮೇಲೆ ಕೇಂದ್ರೀಕರಿಸುತ್ತಾರೆ, ಮಾಧ್ಯಮಗಳು ಬಿಜೆಪಿಯ ಗೆಲುವಿನ ಹಿಂದಿನ ಅಂಶಗಗಳು. ಅವೆಲ್ಲವನ್ನೂ ಮೀರಿ ತಳಮಟ್ಟದಲ್ಲಿ ಬಿಜೆಪಿಯ ಹಿಂದೆ ಕಾರ್ಯಕರ್ತರ ದೊಡ್ಡ ಸಮೂಹವೇ ಇದೆ.

ಶ್ರೀಸಾಮಾನ್ಯರು ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ ಅವರಂತಹ ನಾಯಕರನ್ನು ತಲುಪಲು ಸಾಧ್ಯವಿಲ್ಲ. ಜನಸಾಮಾನ್ಯರಿಗೆ ಪಕ್ಷ ಎಂದರೆ ಪಕ್ಕದ ಮನೆಯ ಕಾರ್ಯಕರ್ತರೇ ಆಗಿದ್ದಾರೆ. ಪಕ್ಷದ ಕಾರ್ಯಕರ್ತ ತನ್ನ ಮತಗಟ್ಟೆಯಲ್ಲಿ ಇರುವ ಜನರಿಗೆ ವರ್ಷಪೂರ್ತಿ ಸಂಪರ್ಕದಲ್ಲಿರುತ್ತಾನೆ. ಪರಿಣಾಮವಾಗಿ, ಪಕ್ಷದ ಕಾರ್ಯಕರ್ತರೇ ಮತವನ್ನು ವೈಯಕ್ತಿಕವಾಗಿ ಸೆಳೆಯುವಷ್ಟು ಬೆಳೆದಿರುತ್ತಾರೆ. ಕಾರ್ಯಕರ್ತರ ಅಭಿಪ್ರಾಯಗಳಿಗೆ ಪಕ್ಷ ನೀಡುವ ಸ್ಥಾನಮಾನ ಮತ್ತು ಗೌರವ ಆ ಪಕ್ಷವನ್ನು ಅಭೂತಪೂರ್ವವಾಗಿ ಗೆದ್ದು ಬೀಗುವಂತೆ ಮಾಡಿದೆ ಎನ್ನುವುದಕ್ಕೆ ಈ ದೇಶದಲ್ಲಿ ಬಿಜೆಪಿ ಉದಾಹರಣೆಯಾಗಿ ಮುಂಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ.    

ಕಾರ್ಯಕರ್ತರೇ ನಾಯಕರು ಎಂಬ ಮೈಂಡ್‌ ವಾಷ್‌ ತಂತ್ರಗಾರಿಕೆ :

ಬಹುಷಃ ಈ ತಂತ್ರಗಾರಿಕೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಅಗತ್ಯವಾಗಿ ಬೇಕು. ಚುನಾವಣೆಗಳಲ್ಲಿ ಎಲ್ಲೋ ಒಬ್ಬ ಕಾರ್ಯಕರ್ತನಿಗೆ ಟಿಕೇಟ್‌ ನೀಡಿದಂತೆ ಮಾಡಿ ತೋರಿಸುವುದು, ಕಾರ್ಯಕರ್ತರಿಂದಲೇ ಪಕ್ಷ ನಡೆಯುತ್ತಿದೆ ಎಂದು ಮತ್ತೆ ಮತ್ತೆ ನಿರೂಪಿಸುವ ಪ್ರಯತ್ನ ಮಾಡುವುದು, ಕಾರ್ಯಕರ್ತರೇ ನಾಯಕರು ಎಂಬ ಮೈಂಡ್‌ ವಾಷ್‌ ತಂತ್ರಗಾರಿಕೆ, ಕಾರ್ಯಕರ್ತರ ಪಕ್ಷ ಎಂದು ಮತ್ತೆ ಮತ್ತೆ ಬಿಂಬಿಸುವುದೇ ಕಾರ್ಯಕರ್ತರನ್ನು ಎಲ್ಲಿಯೂ ವಿಭಜಿಸಿ ಹೋಗದಂತೆ ಮಾಡುವ ಅಸ್ತ್ರ. ಇದನ್ನು ಬಿಜೆಪಿ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಕಾಂಗ್ರೆಸ್‌ನಲ್ಲಿ ಈ ಪದ್ಧತಿ ಇಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿ ತೀರಾ ಇತ್ತೀಚೆಗಿನ ದಿನಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾದದ್ದೂ ಉಂಟು. ಬಿಜೆಪಿಯಲ್ಲಿ ಹಾಗಲ್ಲ. ತನ್ನ ನಾಯಕನನ್ನು ಕಾರ್ಯಕರ್ತರೇ ನಿರ್ಧರಿಸುತ್ತಾರೆ ಎಂಬ ವಾತಾವರಣವಿದೆ.

ಬಿಜೆಪಿಯಲ್ಲಿ ಕಾರ್ಯಕರ್ತರ ಉತ್ತೇಜಿಸುವ ವ್ಯವಸ್ಥೆ ಇದೆ. ಪಕ್ಷದ ಕಾರ್ಯಕರ್ತರಿಗೆ ತಿಂಗಳಿಗೊಮ್ಮೆಯಾದರೂ ಜನರನ್ನು ತಲುಪಲು ನಿಯಮಿತ ಪ್ರಚಾರ ಕಾರ್ಯಗಳನ್ನು ನೀಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಚುನಾವಣೆಗಳಲ್ಲಿ ಸೋತರೆ ಅದಕ್ಕೆ ಕಾರಣ, ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಪಕ್ಷ ಅಸಮರ್ಥನೀಯ ಆಡಳಿತ ಅಥವಾ ನಾಯಕತ್ವದ ಸವಾಲುಗಳು, ದುರ್ಬಲ ಮುಖ್ಯಮಂತ್ರಿಯ ನೇತೃತ್ವ ಅಥವಾ  ಘಟಕದ ದುರ್ಬಲ ನಿರ್ವಹಣೆಯಂತಹ ಸಮಸ್ಯೆಗಳನ್ನು ಅನುಭವಿಸಬಹುದು. ಆ ಸಂದರ್ಭದಲ್ಲಿಯೂ ಬಿಜೆಪಿ ಬಲವಾದ ಮತ ಪಾಲನ್ನು ಉಳಿಸಿಕೊಂಡಿದೆ/ಉಳಿಸಿಕೊಳ್ಳುತ್ತದೆ ಎಂದರೇ ಅದಕ್ಕೆ ಮುಖ್ಯ ಕಾರಣ ಮತವನ್ನು ತರುವ ಕಾರ್ಯಕರ್ತರೇ ಆಗಿದ್ದಾರೆ.

ಇನ್ನು, ಕಾರ್ಯಕರ್ತರನ್ನು ಕೇಂದ್ರೀಕರಿಸಿಕೊಂಡು ಬಿಜೆಪಿ 'ಸರಲ್' ಎಂಬ ಅಪ್ಲಿಕೇಶನ್ ಅನ್ನು ತಂದಿದೆ. ಪಕ್ಷದ ಯೋಜನೆಗಳ್ನು ಈ ಮೂಲಕ ಜನರಿಗೆ ಹಾಗೂ ಕಾರ್ಯಕರ್ತರಿಗೆ ತಲುಪುವ ವ್ಯವಸ್ಥೆ ಬಿಜೆಪಿಯಲ್ಲಿದೆ. ಇಂತಹ ವ್ಯವಸ್ಥೆಗಳು ಕಾಂಗ್ರೆಸ್‌ನಲ್ಲಾಗಲಿ ಅಥವಾ ಇತರೆ ಪಕ್ಷಗಳಲ್ಲಿ ಇಲ್ಲ. ಆ ಪ್ರಯತ್ನವನ್ನು ಬಿಜೆಪಿಯೇತರ ಪಕ್ಷಗಳು ಮಾಡಿದ್ದರೂ ಕೂಡ ಬಿಜೆಪಿ ಕಾರ್ಯರೂಪಕ್ಕೆ ತಂದಷ್ಟು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದಿಲ್ಲ ಹಾಗೂ ಉಳಿಸಿಕೊಳ್ಳಲಿಲ್ಲ ಎನ್ನುವುದು ನಿಜಾಂಶ.  

ನಿಷ್ಠೆಗಳು ಬದಲಾಗುವ ಸಾಧ್ಯಸಾಧ್ಯತೆ :

ಇದಕ್ಕೆ ವ್ಯತಿರಿಕ್ತವಾಗಿ, ಮತಗಟ್ಟೆಯಲ್ಲಿನ ಏಕೈಕ ಕಾಂಗ್ರೆಸ್ ಕಾರ್ಯಕರ್ತ ಸ್ಥಳೀಯ ಕಾಂಗ್ರೆಸ್ ನಾಯಕನಿಗೆ ಸಮನ್ವಯಕಾರನಾಗಿರುತ್ತಾನೆ. ಕಾಂಗ್ರೆಸ್ ನಾಯಕ ಬಿಜೆಪಿಗೆ ಅಥವಾ ಬೇರೆ ಪಕ್ಷಕ್ಕೆ ಪಕ್ಷಾಂತರಗೊಂಡರೇ, ಪ್ರಾಯಶಃ ಕಾರ್ಯಕರ್ತರು ಮತ್ತು ಆ ನಾಯಕ ಆಜ್ಞಾಪಿಸುವ ಮತಗಳೂ ಬದಲಾಗುತ್ತವೆ. ಆದರೇ, ಬಿಜೆಪಿಯಲ್ಲಿ ನಾಯಕ ಬದಲಾದರೂ ಕಾರ್ಯಕರ್ತ ಬದಲಾಗುವುದಿಲ್ಲ ಎಂಬ ಮಾತಿದೆ, ಮತ್ತು ಕಾರ್ಯಕರ್ತರು ಮತಗಳು ಬದಲಾಗದೇ ಇರುವ ಹಾಗೆ ಕಂಡುಕೊಳ್ಳುವುದೇ ಬಿಜೆಪಿಗೆ ಪ್ಲಸ್‌ ಪಾಯಿಂಟ್.‌ 

ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಶಿಸ್ತುಬದ್ಧ ಕಾರ್ಯಕರ್ತರ ಬೆಂಬಲದೊಂದಿಗೆ ಬೂತ್ ಮಟ್ಟದವರೆಗೆ ತಲುಪಿದ ನಿರ್ವಹಿಸಿ ಸಮೃದ್ಧ ಸಂಘಟನೆಯನ್ನು ಬಿಜೆಪಿ ಮಾಡಿದಷ್ಟು ಯಾವುದೇ ಪಕ್ಷವು ಮಾಡುವುದಕ್ಕೆ ಸಾಧ್ಯವಿಲ್ಲ. ಅದು ವಿಚಾರಪೂರ್ಣ ಸಂಘಟನೆಯೋ, ಭಾವನಾತ್ಮಕ ಪೂರ್ವಾಗ್ರಹ ಪೀಡಿತ ಸಂಘಟನೆಯೋ ಅದು ಎರಡನೇಯ ಚರ್ಚೆ. ಪಕ್ಷ ಬೆಳೆಯುವುದಷ್ಟೇ ಮುಖ್ಯ.

ಬಿಜೆಪಿಯಂತಹ ಸಂಘಟನೆಯನ್ನು ಕಾಂಗ್ರೆಸ್ ಯಾಕೆ ರಚಿಸಬಾರದು ? ಕೊನೆಯ ಪಕ್ಷ ಆ ಮಾದರಿಯ ಸಂಘಟನಾ ಬಲವನ್ನು ಯಾಕೆ ವೃದ್ಧಿಸಿಕೊಳ್ಳಬಾರದು ?  ವಾಸ್ತವವಾಗಿ, ಜನರನ್ನು ತಲುಪುವ ಉದ್ದೇಶದಿಂದ ಪ್ರಚಾರ ಮಾಡಲು ಕಾರ್ಯಕರ್ತರನ್ನು ಹೊಣೆಗಾರರನ್ನಾಗಿ ಮಾಡುವ ಸಾಂಸ್ಥಿಕ ರಚನೆಯೊಂದನ್ನು ಮಾಡದ ಹೊರತು ಕಾಂಗ್ರೆಸ್ ಪಕ್ಷದ  ಪುನರುಜ್ಜೀವನ ಅಸಾಧ್ಯ ಅಂತನ್ನಿಸುತ್ತದೆ. ಇದು ಒಂದು ಪ್ರಶ್ನೆಯಲ್ಲ ಅಥವಾ ಅಭಿಪ್ರಾಯವೂ ಅಲ್ಲ, ಈ ಬಗ್ಗೆ ಕಾಂಗ್ರೆಸ್‌ ಯೋಚನೆ ಮಾಡಲೇಬೇಕಿದೆ. ಒಂದು ಸಿದ್ಧಾಂತದ ವಿರುದ್ಧ ನಿಲ್ಲುವುದಕ್ಕೆ ಮುಂದಾದವರು ಒಂದು ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೆ ಸಾಂಸ್ಥಿಕ ರಚನೆ ಮಾಡದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ. ಬದಲಾವಣೆ ಬಯಸುವವರು ಮೊದಲು ಹೊಸತನಕ್ಕೆ ಒಗ್ಗಿಕೊಳ್ಳಬೇಕು.

2024 ಲೋಕಸಭಾ ಚುನಾವಣೆ :

ಈ ಹಿನ್ನೆಲೆಯಲ್ಲಿ 2024 ಲೋಕಸಭಾ ಚುನಾವಣೆ ಬಂದಿದೆ. ಕಾರ್ಯಕರ್ತರ ಬಹುಶ್ರಮವನ್ನೇ ನಂಬಿಕೊಂಡ ಬಿಜೆಪಿ ಮತ್ತು ನಾಯಕರ ನಿರ್ಧಾರವೇ ಅಂತಿಮ ಎನ್ನುವ  ಹಲವು ವಿಷಯಗಳಲ್ಲಿ ನಿರ್ಣಾಯಕವಾಗಿರುತ್ತದೆ. ಆದರೂ, ಮತದಾರರ ಮನಸ್ಸು ಮತ್ತು ಆದ್ಯತೆಗಳು ಹೇಗೆ ಬದಲಾಗಿವೆ ಎನ್ನುವುದು ಪ್ರಮುಖವಾಗಿದೆ.

ಒಂದೆಡೆ ಸಂಸತ್ತಿನಲ್ಲಿ, ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ತಳಮಟ್ಟದ ರಾಜಕೀಯ ವಲಯದಲ್ಲಿ ಪ್ರಧಾನ ಮಂತ್ರಿ ಮತ್ತು ಬಿಜೆಪಿ ದುರ್ಬಲಗೊಂಡಿರುವ ಯಾವ ಲಕ್ಷಣಗಳು ಕಾಣಿಸಿಕೊಳ್ಳದ ಹಾಗೆ ವ್ಯವಸ್ಥೆ ಮಾಡಿಕೊಂಡಿದೆ. ಇನ್ನೊಂದೆಡೆ ತನ್ನ ಅಂಗ ಪಕ್ಷಗಳ ಮಹತ್ವಾಕಾಂಕ್ಷೆಗಳು ಮತ್ತು ಅನ್ನು ಒಟ್ಟಿಗೆ ಸೇರಿಸಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ದೌರ್ಬಲ್ಯದ ಜೊತೆಜೊತೆಗೆ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಯನ್ನು, ಸೈದ್ಧಾಂತಿಕ ನಿಲುವನ್ನು ವಿರೋಧಿಸುವ ಮಹಾ ಸಂಕಲ್ಪದೊಂದಿಗೆ ರಚನೆಗೊಂಡ ʼಇಂಡಿಯಾʼ ಮೈತ್ರಿ ಅನಿಶ್ಚಿತತೆಯಲ್ಲೇ ಇದೆ. ಉಳಿದದ್ದು ನಿಮ್ಮ ಯೋಚನೆಗೆ ಬಿಟ್ಟಿದ್ದು.

 -ಶ್ರೀರಾಜ್‌ ವಕ್ವಾಡಿ  

Thursday, March 7, 2024

ಒಂದು ಕ್ಷೇತ್ರದಲ್ಲೂ ಸ್ಪರ್ಧಿಸಲು ಕಾಂಗ್ರೆಸ್‌ಗೆ ಅರ್ಹತೆ ಇಲ್ಲವೆಂದಿದ್ದ ಆಪ್‌…

ಮೈತ್ರಿ ರಾಜಕೀಯದ ಪ್ರಾಯೋಗಿಕ ಬೆಳವಣಿಗೆಗಳು | ಬಿಜೆಪಿಗೆ ಸುಕೃತ ದೆಸೆ

46 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಐದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಆಮ್ ಆದ್ಮಿ ಪಾರ್ಟಿ(ಎಎಪಿ)ಯೊಂದಿಗೆ ಕಾಂಗ್ರೆಸ್ ಸೀಟು ಹಂಚಿಕೆ ಒಪ್ಪಂದವನ್ನು ಕಳೆದ ವಾರ ಅಂತಿಮಗೊಳಿಸಿದೆ. ಪಶ್ಚಿಮ ಬಂಗಾಳ, ಪಂಜಾಬ್‌ ಹಾಗೂ ಬಿಹಾರದಲ್ಲಿ ಸತತ ಹಿನ್ನಡೆಯಾಗಿರುವುದರ ನಡುವೆ ಇಂತಹದ್ದೊಂದು ಬೆಳವಣಿಗೆ ʼಇಂಡಿಯಾʼ ಮೈತ್ರಿಕೂಟಕ್ಕೆ ಚೇತರಿಕೆ ಅನ್ನಿಸಿದೆ.  

ಕಾಂಗ್ರೆಸ್‌ ಹಾಗೂ ಆಪ್‌ ರಡೂ ಪಕ್ಷಗಳು ಪಂಜಾಬ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದ ಬಳಿಕ ದೆಹಲಿಯಲ್ಲಿಯೂ ಉಭಯ ಪಕ್ಷಗಳು ಇದೇ ಮಾರ್ಗ ಕಂಡುಕೊಳ್ಳುತ್ತವೆ ಎಂದು ಹೇಳಲಾಗಿತ್ತು. ಆದರೆ, ಎರಡು ಪಕ್ಷಗಳ ನಾಯಕತ್ವಕ್ಕೆ ಮನ್ನಣೆ ನೀಡಿ ಸೀಟು ಹಂಚಿಕೆಯ ಅಂತಿಮ ನಿರ್ಧಾರ ತೆಗೆದುಕೊಂಡಿವೆ. ಕಾಂಗ್ರೆಸ್ ಕೆಲವೆಡೆ ಸೀಟು ಹಂಚಿಕೆಯ ವಿಚಾರದಲ್ಲಿ ಹೃದಯ ಶ್ರೀಮಂತಿಕೆ ತೋರಿಸಿದೆ ಎನ್ನುವುದಕ್ಕಿದು ಸಾಕ್ಷಿ. ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್‌ ಅಲ್ಲಿರುವ ಕೊರತೆಯನ್ನು, ಅನಿಶ್ಚಿತತೆಯ ಬಗ್ಗೆ  ಅನೇಕ ರಾಜಕೀಯ ವಿಶ್ಲೇಷಕರು  ಆರೋಪಿಸಿದ್ದರು.  ದೆಹಲಿಯಲ್ಲಿ 2019ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಆಪ್‌ಗಿಂತ ಹೆಚ್ಚಿನ ಮತ ಪಾಲನ್ನು ಪಡೆದಿದ್ದರೂ ಕೂಡ ದೆಹಲಿಯಲ್ಲಿ ಕೇವಲ ಮೂರು ಕ್ಷೇತ್ರಗಳನ್ನು ತನಗಾಗಿ ಉಳಿಸಿಕೊಂಡಿದೆ. ಒಂದು ಕ್ಷೇತ್ರದಲ್ಲೂ ಸ್ಪರ್ಧಿಸಲು ಕಾಂಗ್ರೆಸ್ಸಿಗೆ ಅರ್ಹತೆ ಇಲ್ಲ ಎಂದಿದ್ದ ಆಪ್, ಈಗ ಕಾಂಗ್ರೆಸ್ಸಿಗೆ ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟು, ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ಗೆ ಎದುರಾದ ಸಮಸ್ಯೆಯಿಂದ ಪಾರಾಗುವುದಕ್ಕೆ ಈ ಅನಿವಾರ್ಯತೆಯನ್ನು ಆಪ್ ಅರ್ಥೈಸಿಕೊಂಡಂತಿದೆ.

ಹರಿಯಾಣದಲ್ಲಿ ಕಾಂಗ್ರೆಸ್‌, ಸೀಮಿತ ಅಸ್ತಿತ್ವವನ್ನು ಹೊಂದಿರುವ ಎಎಪಿಗೆ ಒಂದು ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ ಮತ್ತು ಗುಜರಾತ್‌ನಲ್ಲಿ ಎರಡು ಕ್ಷೇತ್ರಗಳನ್ನು ನೀಡಿದೆ. ಎಎಪಿ 2022ರ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ತನ್ನ ರಾಜಕೀಯ ಚೊಚ್ಚಲ ಪ್ರವೇಶವನ್ನು ಮಾಡಿತು, ಶೇ. 13ರಷ್ಟು ಮತಗಳನ್ನು ಗಳಿಸಿತು ಮತ್ತು ಬಿಜೆಪಿಗೆ 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ದಾಖಲೆಯ ಗೆಲುವು ಹೊಂದಲು ಆಪ್‌ ಪರೋಕ್ಷವಾಗಿ ಸಹಾಯ ಮಾಡಿತ್ತು. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಕಾಂಗ್ರೆಸ್‌ ಇಲ್ಲಿ ಈ ನಿರ್ಧಾರಕ್ಕೆ ಬಂದಿದೆ. ಆದರೆ, ಗೋವಾದಲ್ಲಿ ಆಪ್ ತನ್ನ ಯೋಗ್ಯ ಅಸ್ತಿತ್ವದ ಹೊರತಾಗಿಯೂ ಕಾಂಗ್ರೆಸ್‌ಗೆ ಬೆಂಬಲ ನೀಡಲಿದೆ. ಎಎಪಿ ಈಗ ಮೇಯರ್ ಸ್ಥಾನವನ್ನು ಹೊಂದಿರುವ ಚಂಡೀಗಢದಲ್ಲೂ ಇದೇ ಬೆಳವಣಿಗೆಯನ್ನು ಕಂಡಿದೆ.

ಈ ಒಪ್ಪಂದವು ಕಾಂಗ್ರೆಸ್‌ನ ಸ್ಥಳೀಯ ನಾಯಕತ್ವದಿಂದ ಸ್ವಲ್ಪ ವಿರೋಧವನ್ನು ಎದುರಿಸಿದೆ. ಆಮ್‌ ಆದ್ಮಿಯ ಉದಯದ ನಂತರ ಪಕ್ಷವು ದೆಹಲಿಯಲ್ಲಿ ಕಾಂಗ್ರೆಸ್‌  ಬಹುತೇಕ ಶೂನ್ಯ ಸಾಧನೆಗೆ ಇಳಿದಿದೆ ಮತ್ತು 2008ರಿಂದ ಸುಮಾರು ಶೇ. 35ರಷ್ಟು ಮತಗಳನ್ನು ಕಳೆದುಕೊಂಡಿದೆ.  ಕಾಂಗ್ರೆಸ್‌ನ ಶೇ. 70ರಷ್ಟಿದ್ದ ಮತಪಾಲು ಮತ್ತು ಇತರ ಪಕ್ಷಗಳ ಪಾಲಿಗೆ ದೊರಕುತ್ತಿದ್ದ ಶೇ. 30ರಷ್ಟು ಮತಪಾಲು ವಿಭಜನೆಗಗೊಂಡು  ಆಪ್‌ ನತ್ತ ವಾಲಿ, ಆಪ್ ಶೇ. 50% ಕ್ಕಿಂತ ಹೆಚ್ಚಿನ ಪಾಲು ಆಪ್ ಹೊಂದುವಂತಾಯಿತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಪಂಜಾಬ್, ಗುಜರಾತ್, ದೆಹಲಿಯಲ್ಲಿ ಕಾಂಗ್ರೆಸ್ ನ ಸಹಾಯದಲ್ಲೇ ಬೆಳೆದ ಆಪ್ :

2012ರಲ್ಲಿ ಪಂಜಾಬ್‌ನಲ್ಲಿ  ಶೇ.40ರಷ್ಟು ಮತಗಳ ಪ್ರಮಾಣ ಹೊಂದಿದ್ದ ಕಾಂಗ್ರೆಸ್‌ನ ಮತಗಳ ಪ್ರಮಾಣವು 2022ರಲ್ಲಿ ಶೇ. 23 ಕ್ಕೆ ಇಳಿಯಿತು. ಇದೇ ಅವಧಿಯಲ್ಲಿ ಅಕಾಲಿದಳದ ಪಾಲು ಶೇ. 35 ರಿಂದ ಶೇ.19ರಷ್ಟಕ್ಕೆ ಇಳಿಯಿತು. ಪ್ರತಿಯಾಗಿ, ಈ ಎರಡೂ ಪಕ್ಷಗಳ ಮತ ಪ್ರಮಾಣದ ವಿಭಜನೆ ಆಪ್‌ ಗೆ ಲಾಭ ತಂದುಕೊಟ್ಟಿತ್ತು, ಪ್ರಸ್ತುತ ಪಂಜಾಬ್‌ನಲ್ಲಿ ಶೇ.42ರಷ್ಟು ಮತ ಹಂಚಿಕೆಯನ್ನು ಹೊಂದಿ 2022ರಲ್ಲಿ ಒಟ್ಟು 117 ಕ್ಷೇತ್ರಗಳ ಪೈಕಿ 92 ಕ್ಷೇತ್ರಗಳನ್ನು ಗೆದ್ದು ಆಪ್ ರಾಜ್ಯದ ಅಧಿಕಾರಕ್ಕೇರಿತು. ಬಿಜೆಪಿ ಕೇವಲ ಶೇ. 7ರಷ್ಟು ಮತ ಹಂಚಿಕೆಯಿಂದ ಹೀನಾಯ ಸೋಲನುಭವಿಸಿತು. ರೈತರ ಸುಮಾರು ಒಂದು ವರ್ಷದವರೆಗಿನ ಕೇಂದ್ರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ಪಂಜಾಬ್‌ನಲ್ಲಿ ಆಪ್‌ ಗೆಲ್ಲುವುದಕ್ಕೆ ಪರೋಕ್ಷವಾಗಿ ಕಾರಣವಾಯಿತು. ರೈತರ ಧ್ವನಿಯಾಗಿ ಕಾಂಗ್ರೆಸ್‌ ನಿಂತಿದ್ದರೂ ಕೂಡ ಪಂಜಾಬ್‌ನಲ್ಲಿ ಯಾವುದೇ ಪ್ರಯೋಜನವಾಗಿಲ್ಲ.

ಇನ್ನು, ಕಾಂಗ್ರೆಸ್ ಮತ್ತು ಎಎಪಿ ಎರಡೂ ಪಕ್ಷಗಳು ಪಂಜಾಬ್‌ ರಾಜ್ಯದ 13 ಕ್ಷೇತ್ರಗಳಿಗೆ ಸ್ವತಂತ್ರವಾಗಿ ಸ್ಪರ್ಧಿಸಲಿವೆ. ದೆಹಲಿಯಲ್ಲಿ ಹೊಂದಾಣಿಕೆ ಮಾಡಿಕೊಂಡಿರುವ ಈ ಎರಡು ಪಕ್ಷಗಳು ಪಂಜಾಬ್ ನಲ್ಲಿ ಮಾತ್ರ ಸ್ವತಂತ್ರವಾಗಿ ಸ್ಪರ್ಧಿಸಲಿರುವುದು ಆಶ್ಚರ್ಯಕರ ಸಂಗತಿ. "ಪಂಜಾಬ್‌ ನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಅನಿವಾರ್ಯತೆಯನ್ನು ಕಾಂಗ್ರೆಸ್ ಕೂಡಾ ಒಪ್ಪಿಕೊಂಡಂತಿದೆ.

ಗುಜರಾತ್‌ನಲ್ಲಿ, ಕಾಂಗ್ರೆಸ್ 2022 ರಲ್ಲಿ ಶೇ. 27ರಷ್ಟು ಮತಗಳನ್ನು ಪಡೆದುಕೊಂಡಿತು, 2017ರ ಚುನಾವಣೆಗಿಂತ 15 ಶೇಕಡಾ ಕಡಿಮೆ ಎನ್ನುವುದು ಉಲ್ಲೇಖಾರ್ಹ. ಗುಜರಾತ್‌ನ ಕಾಂಗ್ರೆಸ್‌ನ ಪಾಲಿನ ಮತ ಪ್ರಮಾಣ ಎಎಪಿ ಪಡೆದುಕೊಂಡಿತ್ತು. ಗುಜರಾತ್‌ನಲ್ಲಿ ತನ್ನ ಚೊಚ್ಚಲ ರಾಜಕೀಯ ಪ್ರವೇಶ ಕಂಡ ಆಪ್ ಶೇ.13ರಷ್ಟು ಮತಗಳನ್ನು ಗಳಿಸಿತು. ಕಾಂಗ್ರೆಸ್‌ಗೆ ಗುಜರಾತ್ ನಲ್ಲಿ ಕಳೆದ ಕೆಲವು ಚುನಾವಣೆಗಳಿಂದ ಅಧಿಕಾರಕ್ಕೆ ಬರದೆ ಹೀನಾಯ ಸೋತಿರುವುದು, ಬಿಡಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಲು ಸಹ ಹೆಣಗಾಡಿದ್ದು, ಕಾಂಗ್ರೆಸ್‌ ಪಾಲಿನ ದುರಂತ ಇತಿಹಾಸ. ಬಹಳ ಪ್ರಮುಖವಾಗಿ ಪಂಜಾಬ್‌ನಂತೆ ಇಲ್ಲಿಯೂ ಎಎಪಿ ಕಷ್ಟಪಟ್ಟು ಕೆಲಸ ಮುಂದುವರೆಸಿದರೆ, ಗುಜರಾತ್‌ನಲ್ಲಿ ಕಾಂಗ್ರೆಸ್ ಬದಲಿಗೆ ವಿರೋಧ ಪಕ್ಷ ಸ್ಥಾನದಲ್ಲಿ ನಿಲ್ಲುವ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದು ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಮೂಡಿಸಿತ್ತು ಎನ್ನುವುದು ಇಲ್ಲಿ ಕಾಂಗ್ರೆಸ್‌ನ ಬಲಹೀನತೆಯನ್ನು ಎತ್ತಿ ತೋರಿಸುತ್ತದೆ.

ಇಂಡಿಯಾ ಎಗೇನ್ಸ್ಟ್ ಕರಪ್ಷನ್ ಯುಪಿಎ-2 :  

ವಾಸ್ತವವಾಗಿ, ಇಂಡಿಯಾ ಎಗೇನ್ಸ್ಟ್ ಕರಪ್ಷನ್ ಯುಪಿಎ-2 ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಲೇ ರಾಜಕೀಯಕ್ಕೆ ಉರುಳಿತ್ತು ಆಪ್. ಇದರ ರಾಜಕೀಯವು ಪ್ರಾರಂಭದಲ್ಲಿ ಬಹುಮಟ್ಟಿಗೆ ಕಾಂಗ್ರೆಸ್ ವಿರೋಧಿಯಾಗಿತ್ತು, ಇಂದು ʼಇಂಡಿಯಾʼ ಮೈತ್ರಿಯೊಂದಿಗೆ ಸೇರ್ಪಡೆಗೊಂಡು ಬಿಜೆಪಿಯನ್ನು ವಿರೋಧಿಸುವ ನಿಲುವುವಾಗಿ ಬದಲಾಗಿದೆ.

ಆದಾಗ್ಯೂ, ಚುನಾವಣಾ ದೃಷ್ಟಿಯಿಂದ, ಬಿಜೆಪಿಯ ಮತಗಳ ಪಾಲು ಹೆಚ್ಚಿರುವ ಗುಜರಾತ್‌ನಲ್ಲಿ ಮತ್ತು ಎಎಪಿಗೆ ಯಾವುದೇ ಬೆಂಬಲವಿಲ್ಲದ ಹರಿಯಾಣದಲ್ಲಿ ಮೈತ್ರಿಯು ಗಮನಾರ್ಹ ಪರಿಣಾಮ ಬೀರದಿರಬಹುದು. ದೆಹಲಿಯಲ್ಲಿ, ಎಎಪಿ ಮತ್ತು ಕಾಂಗ್ರೆಸ್‌ನ ಸಂಯೋಜಿತ ಮತ ಹಂಚಿಕೆಯು ಲೋಕಸಭಾ ವಿಚಾರಕ್ಕೆ ಬಂದರೇ ಬಿಜೆಪಿಗಿಂತ ಕಡಿಮೆಯಾಗಿದೆ ಎನ್ನುವುದು ಉಲ್ಲೇಖಾರ್ಹ.

ಈ ನಡುವೆ ಆಪ್ ಕಾಂಗ್ರೆಸ್‌ ಮೈತ್ರಿಗೆ ಸೇರಿದ್ದು, ಮೈತ್ರಿಧರ್ಮ ಪಾಲಿಸಲು ಒಂದು ಕ್ಷೇತ್ರವನ್ನಷ್ಟೆ ಬೇಕಾದರೆ ಬಿಟ್ಟು ಕೊಡುತ್ತೇವೆ ಎಂದಿದ್ದ ಅರವಿಂದ್ ಕೇಜ್ರಿವಾಲ್ ಅವರ ಪಕ್ಷ, ಕಾಂಗ್ರೆಸ್ ಬಯಸಿದ್ದಷ್ಟೇ ಸ್ಥಾನವನ್ನು ನೀಡಿದ್ದು, ಸೀಟು ಹಂಚಿಕೆಯ ವಿಚಾರದಲ್ಲಿ ಕಾಂಗ್ರೆಸ್‌ ಹೇಳಿದ್ದಕ್ಕೆಲ್ಲಾ ಜೈ ಅಂದಿದ್ದು ನಿಜಕ್ಕೂ ರಾಜಕೀಯದ ವಿಶೇಷವೇ ಸರಿ.

ಪ್ರಾಯೋಗಿಕ ರಾಜಕೀಯದ ಬೆಳವಣಿಗೆಗಳು :

ಇನ್ನು, ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಯೊಂದಿಗೆ ಕಾಂಗ್ರೆಸ್ ಇದೇ ರೀತಿಯ ಪ್ರಯೋಗವನ್ನು ಪ್ರಯತ್ನಿಸಿತು. ಕೇರಳದಲ್ಲಿ ಪ್ರಮುಖ ಎದುರಾಳಿಗಳಾದ ಉಭಯ ಪಕ್ಷಗಳು 2016 ಮತ್ತು 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕೈಜೋಡಿಸಿದ್ದವು. 2016 ಮತ್ತು 2021 ಎರಡರಲ್ಲೂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಲು ಮೈತ್ರಿ ವಿಫಲವಾಗಿತ್ತು. ವಾಸ್ತವವಾಗಿ, 2021 ರಲ್ಲಿ ಅದು ಒಂದೇ ಒಂದು ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಲಿಲ್ಲ, ಮತ್ತು 2016ರಲ್ಲಿ, ಅದರ ಸಂಖ್ಯೆಯು 2011 ಕ್ಕಿಂತ ಕಡಿಮೆಯಾಗಿತ್ತು. 2023 ರಲ್ಲಿ ತ್ರಿಪುರಾದಲ್ಲಿ ಮೈತ್ರಿ ಪುನರಾವರ್ತನೆಯಾಯಿತು ಮತ್ತು ಅದು ಮತ್ತೊಮ್ಮೆ ಬಿಜೆಪಿಯನ್ನು ಸೋಲಿಸುವಲ್ಲಿ ವಿಫಲವಾಯಿತು. ವಿಷಯವೇನೆಂದರೆ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಡುವೆ ಪೈಪೋಟಿಯ ಸುದೀರ್ಘ ಇತಿಹಾಸವಿದೆ. ಆದ್ದರಿಂದ ಅವರು ಮೈತ್ರಿಯಾಗಿ ಸ್ಪರ್ಧಿಸಿದಾಗ, ಅದು ಮತದಾರರನ್ನು ಗೊಂದಲ ಸೃಷ್ಟಿ ಮಾಡುವುದಂತೂ ನಿಜ.

ಕೆಲವು ರಾಜಕೀಯ ವಿಶ್ಲೇಷಕರು ಇತ್ತೀಚಿನ ಬೆಳವಣಿಗೆಗಳನ್ನು ಪ್ರಾಯೋಗಿಕ ರಾಜಕೀಯದ ಯುಗವೆಂದು ನಿರೂಪಿಸುತ್ತಾರೆ, ಅಲ್ಲಿ ಬದ್ಧ ವಿರೋಧಿಗಳು ಸಹ ಒಂದು ನಿರ್ದಿಷ್ಟ ಚುನಾವಣೆಯಲ್ಲಿ ʼಶತ್ರು ಸಿದ್ಧಾಂತʼವನ್ನು ಸೋಲಿಸುವ ಮಹತ್ತರ ಉದ್ದೇಶದಿಂದ ಮೈತ್ರಿಯಾಗಬಹುದು, ಒಂದು ಸಾಮೂಹಿಕ ಹೋರಾಟದ ಫಲವಾಗಿ ತಾನು ನಂಬಿರುವ ಸಿದ್ಧಾಂತದ ವಿರುದ್ಧ ಇರುವ ಸಿದ್ಧಾಂತವನ್ನು ಸೋಲಿಸಬೇಕು ಎನ್ನುವ ದೃಷ್ಟಿಯಲ್ಲಿ ತನ್ನ ಸಿದ್ಧಾಂತಕ್ಕೆ ಸಾಮಿಪ್ಯವಿರುವ ಸಿದ್ದಾಂತದ ಇನ್ನೊಂದು ಪಕ್ಷದೊಂದಿಗೆ ಮೈತ್ರಿಯಾಗುವ ಸಂಪ್ರದಾಯ ಇತ್ತೀಚೆಗಿನ ವರ್ಷಗಳಲ್ಲಿ ತೀರಾ ಸಾಮಾನ್ಯವಾಗಿ ಬೆಳೆದು ಬಿಟ್ಟಿದೆ.

ಬಿಜೆಪಿ ಈ ರೀತಿಯ ಮೈತ್ರಿಯನ್ನು ಅಥವಾ ತನ್ನ ವಿರುದ್ಧ ನಡೆಯುವ ಮೈತ್ರಿ ರಾಜಕೀಯವನ್ನು ಅವಕಾಶವಾದಿ ಎಂದು ಬಣ್ಣಿಸುವುದನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.ಅವಕಾಶವಾದವು ಬಹುಶಃ ಭಾರತೀಯ ರಾಜಕೀಯದಲ್ಲಿ ಇತ್ತೀಚೆಗೆ ತುಂಬಾ ರೂಢಿಯಾಗಿದೆ. ಬಿಡಿ, ಬಿಜೆಪಿ ಏನೆ ಮಾಡಿದರೂ ಅದನ್ನು ಆರಾಮವಾಗಿ ಸ್ವೀಕರಿಸುವ ಮನಸ್ಥಿತಿಯಲ್ಲಿ ಬಿಜೆಪಿ ಮತದಾರರಿದ್ದಾರೆ. ಬಿಜೆಪಿ ಪಾಲಿನ ರಾಜಕೀಯಕ್ಕಿದು ಸುಕೃತ ದೆಸೆ. ಗಮನಿಸಿ, ಬಿಜೆಪಿ ಜನತಾ ದಳ (ಯುನೈಟೆಡ್) (ಜೆಡಿ-ಯು) ಅನ್ನು ಮತ್ತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಸೇರಿಸಿಕೊಂಡಿರುವುದು, ಹಾಗೆಯೇ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸಿರುವುದು ಪ್ರಾಯೋಗಿಕ ರಾಜಕೀಯದ ಭಾಗವಾಗಿದೆ. ಹಾಗೆಯೇ ಎಎಪಿ-ಕಾಂಗ್ರೆಸ್ ಮೈತ್ರಿ. ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌, ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳ ಮತ್ತು ಬಿಜೆಪಿ, ಬಿಹಾರದಲ್ಲಿ ಬಿಜೆಪಿ ಮತ್ತು ಸಂಯುಕ್ತ ಜನತಾ ದಳ ಮೈತ್ರಿ ಎಲ್ಲವೂ ಅವಕಾಶವಾದವೇ ಸರಿ. ʼಇಂಡಿಯಾʼ ಮೈತ್ರಿಕೂಟದೊಂದಿಗೆ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆಯೂ ಈ ಸಾಲಿಗೆ ಸೇರುತ್ತದೆ.

ಆದಾಗ್ಯೂ, ಇವು ಯಾವುವೂ ಮುಖ್ಯ ಅಲ್ಲ ಅಂತಂದುಕೊಂಡರೇ, ಇಂತಹ ಸೂತ್ರವನ್ನು ಪ್ರಯೋಗಿಸುತ್ತಿರುವುದು ಇದೇ ಮೊದಲಲ್ಲ. ರಾಜಕೀಯದ ಮಜವಾದಿ ನಿಲುವಿಗೆ ಇಂತಹ ಮೈತ್ರಿ ಕಾರಣವಾದದ್ದೂ ಉಂಟು. ಎಎಪಿ-ಕಾಂಗ್ರೆಸ್ ಮೈತ್ರಿ 2024 ರಲ್ಲಿ ಕೆಲಸ ಮಾಡುತ್ತದೆಯೇ? ಎನ್ನುವುದಷ್ಟೇ ಪ್ರಮುಖವಾಗಿ ನಮ್ಮ ಮುಂದಿರುವ ಪ್ರಶ್ನೆ. ನತಾ ಜನಾರ್ದನ್ ಹೈ. ಮುಂದಿನ ದಿನಗಳನ್ನು, ರಾಜಕೀಯ ಬೆಳವಣಿಗೆಯನ್ನು ಗಮನಿಸೋಣ.

-ಶ್ರೀರಾಜ್‌ ವಕ್ವಾಡಿ