ಶ್ರೀರಾಜ್ ಆಚಾರ್ಯ ಪ್ರವರ್ಧಮಾನಕ್ಕೆ ಬರುತ್ತಿರುವ ಕುಂದಾಪುರ ವಕ್ವಾಡಿಯ ಯುವ ಬರಹಗಾರ. ಇತ್ತೀಚೆಗೆ ಬಿಡುಗಡೆಯಾದ ಅವರ ಮೂರನೆಯ ಕೃತಿ ‘ಕತ್ತಲೆಯ ಬೆತ್ತಲು’ ಎಂಬ ಸಣ್ಣಕಥಾ ಸಂಕಲನದ ಬಗೆಗೆ ಒಂದು ಸ್ಥೂಲ ನೋಟ ಇಲ್ಲಿದೆ. ಈ ಕೃತಿಯಲ್ಲಿ ಸುಖವಾಗಿ ಓದಿಸಿಕೊಂಡು ಹೋಗುವ ಹದಿನೈದು ಕಥೆಗಳಿವೆ. ಒಬ್ಬ ಯುವ ಲೇಖಕನಿಗೆ ಸಹಜವಾಗಿ ಇರುವಂಥ ಗಂಡು-ಹೆಣ್ಣುಗಳ ನಡುವಣ ಪ್ರೀತಿ, ಪ್ರೇಮ ಕಾಮಗಳ ಬಗೆಗಿನ ಕುತೂಹಳ ಇಲ್ಲಿನ ಹಲವು ಕಥೆಗಳನ್ನು ಆವರಿಸಿಕೊಂಡಿದೆಯಾದರೂ ಪ್ರೀತಿಯ ಇತರ ಹಲವು ಆಯಾಮಗಳ ಕುರಿತು ಆಲೋಚಿಸುವ ಮನಸ್ಸು ಕೂಡಾ ಇಲ್ಲಿದೆ.
‘ನೀರ ಮೇಲೆ ತೇಲುವ ಅಲೆಗಳಂತೆ’ ಎಂಬ ಕಥೆ ಪ್ರೀತಿಯ ಭಾವುಕತೆಯ ಉತ್ತುಂಗದಲ್ಲಿ ವಿವರಿಸುತ್ತಾ ಮನಸ್ಸನ್ನು ಕಾಡುವ ಗುಣವನ್ನು ಹೊಂದಿದೆ. ಅಡ್ಡಿ-ಆತಂಕಗಳ ನಡುವೆಯೇ ಅರಳುವ ಪ್ರೀತಿ ಕೊನೆಗೂ ಬೇರ್ಪಡುವಿಕೆಯಲ್ಲಿ ಅಂತ್ಯಗೊಂಡು ಹದವಾಗಿ ಪಕ್ವಗೊಂಡು,ಅದರ ನೆನಪಿನ ಸವಿಯಲ್ಲೇ ಮುಂದುವರೆಯುವ ಎರಡು ಹೃದಯಗಳ ಕಥೆಯಿದು. ‘ ಈ ನೆನಪುಗಳನ್ನು ಸುಮ್ಮನೆ ಹೀಗೆ ಕೆದಕಿದಾಗ ಮೊಗದಲ್ಲಿ ಸಣ್ಣ ನಸುನಗೆ..ಆ ಪ್ರಣಯದ ದಿಬ್ಬಣ ಕಳ್ಳ ಬುದ್ಧಿಯ ಕಲಿತು ರೋಮ ರೋಮಗಳಲ್ಲೂ ಪಲ್ಲವಿಸುತ್ತದೆ. ಕೆಲವೊಮ್ಮೆ ನೆನಪಿಸಲಿಚ್ಛಿಸದ ನೆನಪುಗಳು ಮತೆತ್ತೆ ಕಾಡುವಾಗ ಬದುಕು ನಶ್ವರವೆನ್ನಿಸುವುದು ನನಗೆ…(ಪು.೧೪) ಆ ಪ್ರೀತಿ ಈಗ ಮೊದಲಿನಂತಿಲ್ಲ ! ಅದು ನನ್ನಿಂದ ದೂರ ಹೋಗಿದೆ. ಕುಣಿಯುವ ಪದಗಳ ಕವಿತೆಯಾಗಿದ್ದ ಪ್ರೀತಿ ಈಗ ನಡೆಯುವ ಗದ್ಯರೂಪಿ ಕವನವಾಗಿದೆ. ( ಪು.೧೬)
ಸಮಾಜದಲ್ಲಿ ಸ್ತ್ರೀ ಗಾಗುವ ಅನ್ಯಾಯದತ್ತ ಕಥೆಗಾರನ ಗಮನ ಹರಿಯುವುದು ಮತ್ತು ಆ ಬಗ್ಗೆ ಚಿಂತಿಸುವುದು ಇಂದಿನ ಆಧುನಿಕ ಬದುಕಿನಲ್ಲಿ ಸಹಜವೇ ಆಗಿದೆ. ಇಲ್ಲಿನ ಎರಡು ಕಥೆಗಳಲ್ಲಿ ದಾಂಪತ್ಯದ ನಿಯಮಗಳನ್ನು ಮುರಿದು ಹೆಂಡತಿಗೆ ದ್ರೋಹ ಬಗೆಯುವ ಗಂಡನ ವಿವಾಹ ಬಾಹಿರ ಸಂಬಂಧಗಳ ಚಿತ್ರಣವಿದೆ (‘ಡೊಂಕು ದುರ್ಬೀಜ’ ಮತ್ತು ‘ ದುರ್ನಾತ’). “ಚಿತ್ರದಿ ತೋರುವ ದೋಣಿಯ ಪಯಣ”ದಲ್ಲಿ ಕಥೆಗಾರ ತನ್ನ ಆದರ್ಶಗಳ ಮೂಲಕ ತುಸು ರೊಮ್ಯಾಂಟಿಕ್ ಆದಂತೆ ಕಾಣುತ್ತಾನೆ. ವೇಶ್ಯೆಯರ ಬದುಕನ್ನು ಅರ್ಥ ಮಾಡಿಕೊಂಡು ಅವರ ಬಗ್ಗೆ ಒಂದು ಕೃತಿ ರಚನೆ ಮಾಡುವ ಉದ್ದೇಶದಿಂದಲೆ ನಿರೂಪಕನು ವೇಶ್ಯೆಯರ ಕಾಲನಿಗೆ ಭೇಟಿ ನೀಡುವ ಒಂದು ವಿಶಿಷ್ಟ ಸನ್ನಿವೇಶ ಇಲ್ಲಿದೆ. ಇನ್ನೊಂದು ಕಥೆಯಲ್ಲಿ ( ಕತ್ತಲೆಯ ಬೆತ್ತಲು)ಅನಾಥ ಕುರುಡಿ ಹೆಣ್ಣೊಬ್ಬಳ ದುರಂತ ಕಥೆಯಿದೆ. ಎಳವೆಯಲ್ಲೇ ಅವಳ ಬಗ್ಗೆ ಸಹಾನುಭೂತಿ ನಟಿಸಿ ಅವಳನ್ನು ಸಾಕಿ ಬೆಳೆಸಿ ಕೊನೆಗೆ ಅವಳನ್ನು ತನಗೆ ಬೇಕಾದಂತೆ ಭೋಗಿಸುವ ೮೭ ವರ್ಷದ ಮುದುಕ ಇದರ ಖಳನಾಯಕ.
ಸಹೋದರ ಪ್ರೀತಿಗೆ ರಕ್ತ ಸಂಬಂಧವೇ ಬೇಕಾಗಿಲ್ಲವೆನ್ನುವ ‘ಸ್ಪಂದನೆ’ ‘ನನ್ನ ತಂಗಿ’ ‘ಇನ್ನೊಂದಿಷ್ಟು ಪ್ರೀತಿ ಹಂಚಿಕೊಳ್ಳಬೇಕು’ ಮೊದಲಾದ ಕಥೆಗಳು ಪ್ರೀತಿಯ ಬೇರೆ ಬೇರೆ ಮುಖಗಳನ್ನು ಅಭಿವ್ಯಕ್ತಿಸುವ ಕಥೆಗಳು. ಗಂಡು-ಹೆಣ್ಣುಗಳ ನಡುವಣ ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅನ್ನುವ ‘ಅಕ್ಕನ ಲವ್ ಲೆಟರ್’ ಒಂದು ಭಿನ್ನ ಲಹರಿಯ ಕಥೆ. ಬಾಲ್ಯದ ನೆನಪುಗಳ ನೆಪದಲ್ಲಿ ಜನಪದ ಕಥೆಗಳ ಸರದಾರ ಸೋಮಜ್ಜನ ವ್ಯಕ್ತಿತ್ವವನ್ನು ಕಟ್ಟಿಕೊಡುವ ‘ ಸೋಮಜ್ಜನ ಕಥೆ’ ಗೆ ಕಥೆಯ ಸ್ವರೂಪವಿಲ್ಲದಿದ್ದರೂ ಒಂದು ಸುಂದರ ಚಿತ್ರಣ.
-ಡಾ.ಪಾರ್ವತಿ ಜಿ. ಐತಾಳ್
‘ಸುರಗಂಗೆ’ ಕುಂದಾಪುರ
“ಕತ್ತಲೆಯ ಬೆತ್ತಲು”(ಕಥಾ ಸಂಕಲನ)
ಲೇ : ಕಾವ್ಯ ಬೈರಾಗಿ(ಶ್ರೀರಾಜ್ ಎಸ್. ಆಚಾರ್ಯ)
ಪ್ರ : ಜಾನಕಿರಾಮ ಪಬ್ಲಿಷರ್ಸ್, ವಕ್ವಾಡಿ ಕುಂದಾಪುರ
8762723716


This comment has been removed by the author.
ReplyDeleteThank You Akshu
Delete