Thursday, January 30, 2020

ವಕ್ವಾಡಿ-ಮೂಡುಗೋಪಾಡಿ : ತ್ಯಾಜ್ಯ ಸಮಸ್ಯೆ, ನಿಯಂತ್ರಣಕ್ಕೆ ಬಾರದ ಸ್ಥಿತಿ..!


ವಕ್ವಾಡಿಯಿಂದ ಮೂಡುಗೋಪಾಡಿಗೆ ಹೋಗುವ ರಸ್ತೆಯ ಬದಿಗಳಲ್ಲಿ ಕಸ ತ್ಯಾಜ್ಯದ ದೊಡ್ಡ  ರಾಶಿ ಬಿದ್ದಿದೆ. ಹೇಳಿ ಕೇಳಿ ಇದು ಕಾಳವಾರ ಪಂಚಾಯತ್ ಮತ್ತು ಗೋಪಾಡಿ ಪಂಚಾಯತ್‌ನ ಗಡಿ ಪ್ರದೇಶ. ಕಳೆದ ಒಂದು ವರ್ಷದ ಹಿಂದೆ ಇದು ಬಿಜಾಡಿ-ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತಿತ್ತು. ಗ್ರಾಮ ಪಂಚಾಯತ್‌ಗಳ ವಿಭಾಗೀಕರಣದಿಂದಾಗಿ ಈಗ ಗೋಪಾಡಿ ಪಂಚಾಯತ್‌ಗೆ ಒಳಪಟ್ಟಿದೆ.
ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ, ಕುಂಭಾಶಿ ಮಾದರಿ ತೋಟಗಾರಿಕಾ ಕ್ಷೇತ್ರದ ಆವರಣಕ್ಕೆ ಅಂಟಿಕೊಂಡಂತಿರುವ ಈ ರಸ್ತೆಯ ಬದಿಗಳಲ್ಲಿ ಅಪರಾತ್ರಿಯ ವೇಳೆ ಪರವೂರಿನಿಂದ ಮೂಟೆಗಟ್ಟಲೆ ಕಸ, ಚಿಕನ್-ಮಟನ್ ಮಾಂಸದಂಗಡಿಗಳಿಂದ ವೇಸ್ಟೇಜ್‌ಗಳನ್ನು ತಂದು ಸುರಿಯುತ್ತಿದ್ದಾರೆ. ಇಲ್ಲಿನ ಈ ಸ್ಥಿತಿಯ ಬಗ್ಗೆ ಗ್ರಾಮ ಪಂಚಾಯತ್ ಯಾವುದೇ ಸೂಚನಾ ಫಲಕವನ್ನು ಅಳವಡಿಸುವುದಾಗಲಿ, ಕ್ರಮ ಕೈಗೊಳ್ಳುವುದಾಗಲಿ ಮಾಡುತ್ತಿಲ್ಲ ಎಂದು ಸ್ಥಳಿಯರು ಒಂದೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೇ, ಇನ್ನೊಂದೆಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸೂಕ್ತ ಸ್ಥಳವಿಲ್ಲ. ಸಾಕಷ್ಟು ಬಾರಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಮೇಲಾಡಳಿತಕ್ಕೆ ಕಸ ವಿಲೇವಾರಿಗೆ ಎಸ್‌ಎಲ್‌ಆರ್‌ಎಮ್ ಘಟಕಕ್ಕೆ ಮನವಿ ಕೊಟ್ಟಿದ್ದೇವೆ ಎಂದು ಪಂಚಾಯತ್ ಹೇಳುತ್ತಿದೆ.


ತ್ಯಾಜ್ಯ ಸಮಸ್ಯೆ ನಿವಾರಣೆಗೆ ಗಡಿಯೇ ಸಮಸ್ಯೆ..!
ಕಸ ತ್ಯಾಜ್ಯ ರಾಶಿ ಬಿದ್ದಿರುವ ಪ್ರದೇಶ ಕಾಳಾವಾರ ಪಂಚಾಯತ್ ಮತ್ತು ಗೋಪಾಡಿಯ ಪಂಚಾಯತ್‌ಗಳ ವ್ಯಾಪ್ತಿಗೆ ಬರುವ ಗಡಿ ಪ್ರದೇಶವಾಗಿರುವ ಕಾರಣದಿಂದಾಗಿ ಎರಡೂ ಪಂಚಾಯತ್‌ಗಳು ತ್ಯಾಜ್ಯ ಸಮಸ್ಯೆ ನಿವಾರಿಸಲು ಮುಂದಾಗುತ್ತಿಲ್ಲ. ಈ ಬಗ್ಗೆ ಸ್ಥಳಿಯರು ಈ ಹಿಂದೆಯೂ ಗ್ರಾಮ ಪಂಚಾಯತ್ ಮೊರೆ ಹೋಗಿದ್ದರಾದರೂ ಏನು ಪ್ರಯೋಜನವಾಗಲಿಲ್ಲ.
ವಿಪರೀತ ವಾಸನೆ :
ವೇಸ್ಟ್ ಕೋಳಿ ಮಾಂಸಗಳನ್ನು, ಉಳಿದ ಆಹಾರ ಪದಾರ್ಥಗಳನ್ನು ದೊಡ್ಡ ಮೂಟೆಯಲ್ಲಿ ತಂದು ಇಲ್ಲಿ ಸುರಿಯುವುದರಿಂದ ಗಾಳಿಗೆ ಅದರ ವಾಸನೆ ಹರಡುತ್ತದೆ. ಇದರಿಂದಾಗಿ ಸ್ಥಳಿಯರಿಗೆ ಅಸಹನೀಯ ಸ್ಥಿತಿ ಉಂಟಾಗಿದೆ. ಮಳೆಗಾಲದಲ್ಲಂತೂ ಮಾಸ್ಕ್ ಹಾಕಿಕೊಳ್ಳಬೇಕಾಗುತ್ತದೆ ಎನ್ನುವುದು ಸ್ಥಳಿಯರ ಅಳಲಾಗಿದೆ.



ಸ್ಥಳಿಯರ ಸಹಕಾರ ಅಗತ್ಯ
ಆ ಪ್ರದೇಶ ವಕ್ವಾಡಿಗೆ ಸೇರುತ್ತದೆ. ಅದು ಕಾಳಾವರ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತದೆ. ಗ್ರಾಮ ಪಂಚಾಯತ್‌ಗೆ ಎಲ್ಲಾ ಕಡೆ ಮಾನಿಟರ್ ಮಾಡುವುದಕ್ಕೆ ಸಾಧ್ಯವಿಲ್ಲ. ಅನಾಗರಿಕರಾಗಿ ಸಾರ್ವಜನಿಕರು ತ್ಯಾಜ್ಯಗಳನ್ನು ತಂದು ಸುರಿದು ಹೋಗುತ್ತಾರೆ. ಡಂಪಿಂಗ್ ಯಾರ್ಡ್ನ ಅಗತ್ಯದ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಅಲ್ಲಿನ ಸ್ಥಳಿಯರು ನಮಗೆ ಸಹಕಾರ ಮಾಡಬೇಕು. ಕಸ-ತ್ಯಾಜ್ಯಗಳನ್ನು ತಂದು ಹಾಕುವವರ ಬಗ್ಗೆ ನಮಗೆ ಮಾಹಿತಿ ಕೊಡಲಿ, ಅಂತವರಿಗೆ ಕಾನೂನಿನನ್ವಯ ಕ್ರಮಕೈಗೊಳ್ಳುವುದಕ್ಕೆ ಪಂಚಾಯತ್ ಸಿದ್ಧವಿದೆ. ನಾವು ಕೂಡ ಪಂಚಾಯತ್‌ನ ಅಧಿಕಾರದ ಮಿತಿಯಲ್ಲಿ ಈ ಬಗ್ಗೆ ಗಮನ ಹರಿಸುತ್ತೇವೆ.
-ಸರಸ್ವತಿ ಪುತ್ರನ್. ಅಧ್ಯಕ್ಷರು, ಗೋಪಾಡಿ ಗ್ರಾಮ ಪಂಚಾಯತ್.


ಮಾಹಿತಿ ಇಲ್ಲ..!
ಅದು ಯಾವ ವಾರ್ಡ್ಗೆ ಬರುತ್ತದೆ ಎನ್ನುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ವಾರ್ಡ್ನ ಸದಸ್ಯರಲ್ಲಿ ಕೇಳಿ ಆ ಬಗ್ಗೆ ಮುಂದಿನ ಕ್ರಮಕೈಗೊಳ್ಳುತ್ತೇನೆ.
-ಸುಖಾನಂದ ಹೆಗ್ಡೆ. ಅಧ್ಯಕ್ಷರು, ಕಾಳಾವರ ಗ್ರಾಮ ಪಂಚಾಯತ್

ಮಧ್ಯರಾತ್ರಿ ವೇಳೆ ಕಸ ತ್ಯಾಜ್ಯ ಸುರಿದು ಹೋಗುತ್ತಾರೆ. ನಾವೂ ಕೂಡ ಒಂದೆರಡು ಬಾರಿ ಗಮನಿಸಿದ್ದೇವೆ. ಯಾರೆಂದು ತಿಳಿದುಕೊಳ್ಳುವುದಕ್ಕಾಗಲಿಲ್ಲ. ಮಳೆಗಾಲದಲ್ಲಿ ಕೊಳೆತು ಬಿದ್ದ ಕೋಳಿ ಮಾಂಸದ ಕೆಟ್ಟ ವಾಸನೆಯಿಂದ ನಮಗೆ ತುಂಬಾ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ಜವಾಬ್ದಾರಿ ಮರೆತು ಹೀಗೆ ಮಾಡುತ್ತಿರುವುದು ವಿಷಾಧನೀಯ.
-ಎಚ್. ಆರ್ ಶ್ರೀನಿವಾಸ ಆಚಾರ್ಯ, ಸ್ಥಳಿಯರು.

ಗ್ರಾಮ ಪಂಚಾಯತ್ ಶುಲ್ಕಗಳನ್ನು ಪ್ರತಿ ಮನೆಯವರಿಂದ ಸಂಗ್ರಹಿಸುವುದರೊಂದಿಗೆ ತ್ಯಾಜ್ಯ ವಿಲೇವಾರಿಗೂ ಉತ್ತಮ ವ್ಯವಸ್ಥೆ ಮಾಡಬೇಕು. ದಿನ ಕಳೆದಂತೆ ತ್ಯಾಜ್ಯದ ರಾಶಿ ದೊಡ್ಡದಾಗುತ್ತಿದೆ. ಈ ಪ್ರದೇಶ ಡಂಪಿಂಗ್ ಯಾರ್ಡ್ ಆಗುತ್ತಿದೆಯೇನೋ ಎಂಬ ಭಿತಿ ಕಾಡುತ್ತಿದೆ.
-ಅಬ್ದುಲ್ ರಜಾಕ್, ಸ್ಥಳಿಯರು.


_ಶ್ರೀರಾಜ್ ವಕ್ವಾಡಿ 

No comments:

Post a Comment