ನೆಟ್‌ವರ್ಕ್ನ ದಬ್ಬಾಳಿಕೆಯಲ್ಲಿ ಭಾವ ಮತ್ತು ಭಾಷೆಗಳು ಅತ್ಯಂತ ವೇಗವಾಗಿ ಮೂಲೆ ಸೇರುತ್ತಿದೆ. ಈಗ ಪುಸ್ತಕ ತೆರೆದು ಓದುವ ಕಾಲ ಅಳಿಸಿ ಹೋಯಿತು. ಅದರ ಬದಲಾಗಿ ಅಂಗೈಯೊಳಗಿನ ಮೊಬೈಲ್ ಫೋನ್‌ನಲ್ಲೇ ಎಲ್ಲವನ್ನೂ ಅಗಲವಾದ ಸ್ಕ್ರೀನ್ ಮೇಲೆ ಹೆಚ್‌ಡಿ ಕ್ವಾಲಿಟಿ ದೃಶ್ಯಗಳನ್ನು ನೋಡುವ ಕಾಲಘಟ್ಟದಲ್ಲಿ ಸಾಹಿತ್ಯವೆಂದರೇನು? ಎಂದು ಕೇಳುವ ಸ್ಥಿತಿಯಲ್ಲಿದ್ದೇವೆ.
ಇಂದಿನ ಸಾಹಿತ್ಯ ವಲಯವು ದಿನನಿತ್ಯ ಹೊಸತನದೊಂದಿಗೆ ಸಾಗುತ್ತಿದೆ. ಅದರಲ್ಲೂ ಕನ್ನಡ ಕಾವ್ಯ, ಕಥೆ ರಚನೆಗಳಲ್ಲಿ ಅನೇಕ ಬಬದಲಾವಣೆಗಳು ಇಂದು ಕಾಣುತ್ತಿದ್ದೇವೆ. ಓದುಗರ ನಡುವಿನ ಸ್ಥಿತ್ಯಂತರಗಳ ನಡುವೆ ತನ್ನದೇ ಶೈಲಿಯಲ್ಲಿ ಕಥೆ, ಕವನಗಳನ್ನು ರಚಿಸುತ್ತಾ ಈ ಭಾಗದಲ್ಲಿ ಸಾಹಿತ್ಯ ಲೋಕಕ್ಕೆ ಉದಯೋನ್ಮುಖರಾಗಿ ಕಾಣಿಸಿಕೊಳ್ಳುತ್ತಿರುವ ಅನೇಕ ಭರವಸೆಯ ಯುವ ಸಾಹಿತಿಗಳಲ್ಲಿ ಹಿರಿಯಡ್ಕದ ಚಂದ್ರಿಕಾ ನಾಗರಾಜ್ ಕೂಡ ಒಬ್ಬರು.


ಸಾಮಾನ್ಯ ಮಧ್ಯಮ ವರ್ಗ ಕುಟುಂಬದ ಕೆ. ನಾಗರಾಜ್ ಶೆಟ್ಟಿ, ಪ್ರೇಮಾ ನಾಗರಾಜ್ ಶೆಟ್ಟಿ ದಂಪತಿಗಳ ದ್ವಿತಿಯ ಪುತ್ರಿಯಾಗಿ ಜನಿಸಿದ ಚಂದ್ರಿಕಾ ಬಹುಮುಖ ಪ್ರತಿಭೆ. ಹುಟ್ಟಿದ್ದು ಹಿರಿಯಡ್ಕದಲ್ಲಾದರೂ ತನ್ನ ಬಾಲ್ಯವನ್ನು ಕಳೆದಿದ್ದು ತಂದೆಯೊಂದಗೆ ಶಿವಮೊಗ್ಗದಲ್ಲಿ. ತನ್ನ ಪ್ರಾಥಮಿಕ ಹಂತದ ಶಾಲಾ ಶಿಕ್ಷಣವನ್ನು ಅಜ್ಜಿ ಮನೆ ಹಿರಿಯಡ್ಕದಲ್ಲೇ ಇದ್ದು, ಕಾಜಾರಗುತ್ತು, ಹಿರಿಯಡ್ಕದಲ್ಲಿ ಪೂರೈಸಿದರು. ಎಳವೆಯಿಂದಲೇ ಸಾಹಿತ್ಯದ ಓದು, ಬರಹಗಳಲ್ಲಿ ಆಸಕ್ತಿ ಹೊಂದಿ ಅಧ್ಯಾಪಕರ ಕಣ್ಣಿಗೆ ಬಿದ್ದಿದ್ದರು. ಪ್ರೌಢ ವಯಸ್ಸು ತಲುಪಿದ ನಂತರ ಸಣ್ಣ ಕಥೆ, ಕವನ ಬರೆಯುವುದು, ನೃತ್ಯ, ನಾಟಕಗಳಲ್ಲಿ ಬಹು ಆಸಕ್ತಿಯೊಂದಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಜೊತೆಗೆ ಸಾಹಿತ್ಯದ ಓದನ್ನು ತಮ್ಮ ಹವ್ಯಾಸವನ್ನಾಗಿ ಬೆಳೆಸಿಕೊಂಡರು. ಕನ್ನಡ ಸಾಹಿತ್ಯ ಲೋಕದ ಮೇರು ಸಾಹಿತಿಗಳಾದ ಕೋಟ ಶಿವರಾಮ ಕಾರಂತ, ಎಸ್ ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ, ಜಯಂತ ಕಾಯ್ಕಿಣಿಯಂತವರ ಸಾಹಿತ್ಯ ಕೃತಿಗಳಿಂದ ಪ್ರಭಾವಿತರಾಗಿ ಈಗಾಗಲೇ ನೂರಕ್ಕೂ ಹೆಚ್ಚು ಸಣ್ಣ ಕಥೆಗಳು, ಕವನಗಳನನ್ನು ರಚಿಸಿದ್ದಾರೆ. ಅವುಗಳಲ್ಲಿ ಅನೇಕ ಕತೆ, ಕವನಗಳು ಕನ್ನಡದ ದಿನ ಪತ್ರಿಕೆ, ವಾರ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ ಎನ್ನುವುದು ಸಂತಸದ ವಿಷಯ. ಮಾತ್ರವಲ್ಲದೆ, “ದೂರಾಗೋ ಮುನ್ನಾ”(ಸಣ್ಣ ಕಥೆಗಳ ಸಂಕಲನ), “ನಾ ರಾಧೆಯಲ್ಲ”(ಕವನಗಳ ಸಂಕಲನ), “ಪಂಜುರ್ಲಿ ಇದ್ದಾನೆ..?” (ಕಥಾ ಸಂಕಲನ) ಎಂಬ ಮೂರು ಕೃತಿಗಳನ್ನು ಈಗಾಗಲೇ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಚಂದ್ರಿಕಾರಿಗೆ ಸುಮಾರು ಮೂರು ವರ್ಷಗಳ ಕಾಲ ಉಡುಪಿಯ ಸ್ಥಳಿಯ ದೃಶ್ಯ ಮಾಧ್ಯಮ ಪ್ರೈಮ್ ಟಿವಿಯಲ್ಲಿ ಬುಲೇಟಿನ್ ಪ್ರೊಡ್ಯೂಸರ್ ಆಗಿ, ಕಾರ್ಯಕ್ರಮ ನಿರೂಪಕಿಯಾಗಿ, ಸುದ್ದಿ ವಾಚಕರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಅಷ್ಟಲ್ಲದೆ ಕನ್ನಡ, ತುಳು ಆಲ್ಬಂ ಸಾಂಗ್ಸ್ ಮತ್ತು ಕಿರುಚಿತ್ರಗಳ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವುದು ಚಂದ್ರಿಕಾ ನಾಗರಾಜ್ ಅವರು ಒಬ್ಬ ಬಹುಮುಖ ಪ್ರತಿಭಾನ್ವಿತ ಭರವಸೆ ಎನ್ನುವುದಕ್ಕೆ ಹಿಡಿದ ಕನ್ನಡಿ.
ಸಾಹಿತ್ಯ ಲೋಕದಲ್ಲಿ ಉನ್ನತ ಆದರ್ಶದ ಬೆನ್ನು ಹಿಡಿದಿರುವ ಚಂದ್ರಿಕಾ ಎಲ್ಲದಕ್ಕೂ ಪ್ರತಿಸ್ಪಂದಿಸಿ ನಡೆದು ಸಾಧಿಸುವ ಛಲಗಾರ್ತಿಯೂ ಹೌದು. ಎಲ್ಲಾ ಭಾವನೆಗಳನ್ನು ಅತ್ಯಂತ ಸೂಕ್ಷ್ಮ ಮನಸ್ಸಿನಿಂದ ಕಂಡು ಅವುಗಳಿಗೆ ಭಾವ ಪೋಣಿಸಿ ಅಕ್ಷರ ರೂಪಕ್ಕಿಳಿಸುವ ಈ ಕತೆಗಾರ್ತಿ, ಕವಯಿತ್ರಿಗೆ ಸಾಹಿತ್ಯ ಲೋಕದಲ್ಲಿ ಮಹತ್ತರವಾದ ಸಾಧನೆ ಮಾಡುವ ಕನಸಿದೆ. ಆ ಕನಸುಗಳೆಲ್ಲಾ ಸಾಕಾರಗೊಳಿಸಿಕೊಳ್ಳುವ ಶಕ್ತಿ ಅವರ ಪಾಲಿಗಾಗಲಿ. ಬಹುದೊಡ್ಡ ಕನಸ್ಸನ್ನು ಹೊತ್ತು ನಡೆಯುತ್ತಿರುವ ಚಂದ್ರಿಕಾ ನಾಗರಾಜ್ ಅವರಿಂದ ಸಾಹಿತ್ಯ ಲೋಕದಲ್ಲಿ ಬಹುದೊಡ್ಡದ್ದನ್ನೇ ನಿರೀಕ್ಷಿಸಬಹುದಾಗಿದೆ.
-ಶ್ರೀರಾಜ್ ಎಸ್. ಆಚಾರ್ಯ, ವಕ್ವಾಡಿ
No comments:
Post a Comment