Thursday, January 23, 2020

ಸಾರ್ವಜನಿಕರ ಶಾಲೆ ಇದು ಮಲೀನಗೊಳಿಸಬೇಡಿ..! ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ಕೂಗು..!



                               ಜ್ಙಾನಾರ್ಜನೆಗೆ ಪೂರಕವಾಗಿರಬೇಕಾದ ಶಾಲೆಯನ್ನು ಶುಚಿತ್ವದಿಂದ ಇಡುವುದು ಸಾರ್ವಜನಿಕರ ಕರ್ತವ್ಯ. ಆದರೇ ಆ ಮಾತಿಗೆ ವಿರುದ್ಧವಾಗಿ ಇಲ್ಲಿ ನಡೆಯುತ್ತಿದೆ. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ಆವರಣ ಈಗ ಕುಡಿದು ಮೋಜು ಮಸ್ತಿ ಮಾಡುವ ಕಿಡಿಕೇಡಿಗಳ ತಾಣವಾಗಿ ಬದಲಾಗುತ್ತಿರುವುದು ವಿಷಾದನೀಯ. ಕೋಟೇಶ್ವರದ ಮಧ್ಯಭಾಗದಲ್ಲಿರುವ ಈ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಸುತ್ತಲೂ ಕಂಪೌಂಡ್ ಹೊಂದಿದೆ. ಆದರೂ ಕೂಡ ಕುಡುಕರು, ಮೋಜುಗಾರರ ಅನೈತಿಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಶಾಲೆಯಲ್ಲಿ ಬಿಗಿ ಭದ್ರತೆಯಿಲ್ಲದಿರುವುದನ್ನು ಗಮನಿಸಿ ಕಿಡಿಗೇಡಿಗಳು ರಾತ್ರಿಯ ವೇಳೆ ಮದ್ಯಪಾನ ಮಾಡಿ ಶಾಲೆಯ ಕಾರಿಡಾರ್, ಆವರಣದೊಳಗೆ ಕುಡಿದ ಬಾಟಲಿ, ಸಿಗರೇಟ್ ಪ್ಯಾಕ್, ಆಹಾರ ಪದಾರ್ಥಗಳನ್ನು ಅಲ್ಲಲ್ಲಿ ಬಿಸಾಡಿ ಶಾಲೆಯನ್ನು ಮಲೀನಗೊಳಿಸುತ್ತಿದ್ದಾರೆ. ‘ಶಾಲೆಯ ಆವರಣದ ೧೦೦ ಗಜ ಅಂತರದಲ್ಲಿ ತಂಬಾಕು ಸೇವನೆ ಮತ್ತು ಮಾರಾಟ ಮಾಡುವುದು ನಿಷೇಧಿಸಲಾಗಿದೆ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ’ ಎಂಬ ಸರ್ಕಾರದ ಆದೇಶವನ್ನು ಹೊತ್ತಿರುವ, ಶಾಲೆಯ ಕಂಪೌಂಡ್‌ಗಳಲ್ಲಿ ಹಾಕಲಾಗಿರುವ ಬೋರ್ಡ್ಗಳು ಕಿಡಿಗೇಡಿಗಳಿಗೆ ಲೆಕ್ಕಕ್ಕೆ ಇಲ್ಲದಂತಾಗಿವೆ. 




ವಿದ್ಯಾರ್ಥಿಗಳಿಗೆ ನಿತ್ಯ ಶಾಲೆಯನ್ನು ಶುಚಿ ಮಾಡುವುದೇ ಕೆಲಸ..!
ದಿನನಿತ್ಯ ಬೆಳಿಗ್ಗೆ ವಿದ್ಯಾಭ್ಯಾಸ ಮಾಡಬೇಕೆಂದು ಬರುವ ವಿದ್ಯಾರ್ಥಿಗಳು,  ಟೀಚಿಂಗ್ ಸ್ಟಾಫ್ಸ್ , ನಾನ್ ಟೀಚಿಂಗ್ ಸ್ಟಾಫ್ಸ್ ಶಾಲೆಯ ಆವರಣದ ಸ್ವಚ್ಛತೆಗಾಗಿ ಸಮಯ ಮೀಸಲಿಡಬೇಕಾದ ಸ್ಥಿತಿ ಬಂದೊದಗಿದೆ. ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇವರೆಲ್ಲರೂ ನಿತ್ಯ, ಮದ್ಯದ ಬಾಟಲಿ, ಅರೆ ಸುಟ್ಟು ಬಿದ್ದ ಸಿಗರೇಟುಗಳನ್ನು ದರ್ಶನ ಮಾಡಿ ತರಗತಿಗೆ ಹೋಗಿ ಪಾಠ ಕೇಳುವಂತಾಗಿದೆ.
     ಕಳೆದ ಸಾಲಿನಲ್ಲಷ್ಟೇ ತನ್ನ ಹೆಚ್ಚುಗಾರಿಕೆಗೆ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಎಂದು ಮರುನಾಮಕರಣಕೊಂಡು ಮಾನ್ಯತೆ ಪಡೆದ ಶಾಲೆಯ ಆವರಣದಲ್ಲಿ ಇಂತಹ  ಅನೈತಿಕ ಚಟುವಟಿಕೆಗಳು ನಿರ್ಭಯವಾಗಿ ನಡೆಯುತ್ತಿರುವುದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ದುಷ್ಪರಿಣಾಮ ಉಂಟುಮಾಡುತ್ತಿದೆ. ತುರ್ತಾಗಿ ಈ ಸಮಸ್ಯೆ ಬಗೆಹರಿಯುವಲ್ಲಿ ಸಂಬಂಧಪಟ್ಟ ಸ್ಥಳಿಯಾಡಳಿತವಾಗಲಿ, ಶಾಲಾಭಿವೃದ್ಧಿ ಕಮಿಟಿಯಾಗಲಿ, ಇಲಾಖೆಯಾಗಲಿ ಸೂಕ್ತ ಕ್ರಮಕೈಗೊಂಡು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದೆ.



ಶಾಲೆಯ ಆವರಣದಲ್ಲಿ ಮದ್ಯದ ಬಾಟಲಿ, ಸಿಗರೇಟು ಪ್ಯಾಕ್‌ಗಳು, ಆಹಾರ ಪದಾರ್ಥಗಳ ಪ್ಯಾಕೆಟ್‌ಗಳು, ಬಟ್ಟೆಗಳನ್ನೆಲ್ಲಾ ಬಿಸಾಡಿ ಹೋಗುತ್ತಾರೆ. ಅದನ್ನು ಶುಚಿತ್ವಗೊಳಿಸುವುದೇ ನಮಗೆ ದೊಡ್ಡ ಕೆಲಸವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್‌ನ ಗಮನಕ್ಕೆ ತಂದಿದ್ದೇವೆ. ಸ್ಥಳಿಯ ಪೋಲಿಸ್ ಠಾಣೆಯಲ್ಲಿ ಹಲವಾರು ಬಾರಿ ಕಂಪ್ಲೆಂಟ್ ಕೂಡ ದಾಖಲಿಸಿದ್ದೇವೆ. ಆದರೂ ಈ ಸಮಸ್ಯೆ ನಿವಾರಣೆಯಾಗುತ್ತಿಲ್ಲ.
-ಡೇನಿಸ್ ಬಾಂಜಿ
ಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ.


ಅತಿ ಶೀಘ್ರದಲ್ಲಿ ಶಾಲೆಗೆ ಅಗತ್ಯವಾಗಿ ಬೇಕಾದ ಭದ್ರತಾ ವ್ಯವಸ್ಥೆಗಳನ್ನು ಪೂರೈಸುವುದಕ್ಕೆ ಗ್ರಾಮ ಪಂಚಾಯತ್‌ನಿಂದ ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಪೋಲಿಸರಲ್ಲೂ ರಾತ್ರಿ ವೇಳೆ ಶಾಲೆಯ ಸುತ್ತಮುತ್ತಾ ಗಸ್ತು ತಿರುಗುವುದಕ್ಕೆ ಮನವಿ ಮಾಡಿಕೊಳ್ಳುತ್ತೇವೆ. 
-ಶಾಂತಾ ಗೋಪಾಲಕೃಷ್ಣ
ಅಧ್ಯಕ್ಷರು, ಕೋಟೇಶ್ವರ ಗ್ರಾಮ ಪಂಚಾಯತ್

-ಶ್ರೀರಾಜ್ ವಕ್ವಾಡಿ   

No comments:

Post a Comment