Friday, January 17, 2020

ಕೋಟೇಶ್ವರ ಅಶುಚಿತ್ವ, ಗ್ರಾಮ ಪಂಚಾಯತ್ ನಿರ್ಲಕ್ಷ್ಯ..! ರಸ್ತೆ ಬದಿಗಳಲ್ಲಿ ಕೊಳೆಯುತ್ತಿದೆ ತ್ಯಾಜ್ಯ | ಸ್ಥಳಿಯರ ಆಕ್ರೋಶ...!



                                     ಕೋಟೇಶ್ವರದ ಪೇಟೆಯ ರಸ್ತೆ ಬದಿಗಳಲ್ಲಿ ಎಲ್ಲಿ ನೋಡಿದರಲ್ಲಿ ಕಸ, ತ್ಯಾಜ್ಯದ ರಾಶಿಗಳು ಬಿದ್ದು ತಾಂಡವವಾಡುತ್ತಿವೆ. ಎನ್‌ಆರ್ ಆಚಾರ್ಯ, ಆಸ್ಪತ್ರೆಯ ಮುಂಬಾಗದಲ್ಲಿ ಬರುವ ಆರ್ಯ ಹೋಟೇಲಿನ ಬಲ ಭಾಗದಲ್ಲಿ ತ್ಯಾಜ್ಯಗಳು ಕೊಳೆತು ನಾರುತ್ತಿವೆ. ಅಷ್ಟಲ್ಲದೇ ಕೋಟೇಶ್ವರದಿಂದ ಉಡುಪಿಗೆ ಹೋಗುವ ಮಾರ್ಗದಲ್ಲಿ ಸಿಗುವ ಹಿಂದೂ ರುಧ್ರಭೂಮಿಯ ಸಮಿಪದಲ್ಲಿ, ಕುರುಕ್ಷೇತ್ರ ಗದ್ದೆ ಎಂದು ಕರೆಯಲ್ಪಡುವ ಖಾಲಿ ಜಾಗದಲ್ಲಿ ಪಾಸ್ಟಿಕ್ ಚೀಲಗಳು, ನೀರಿನ ಬಾಟಲಿಗಳು, ಹೋಟೇಲಿನಿಂದ ತಂದು ಸುರಿದ ಹಳಸಿದ ಪದಾರ್ಥಗಳು, ಮದ್ಯದ ಬಾಟಲಿಗಳು ಬೆತ್ತಲೆ ಬಿದ್ದಿವೆ. ಗ್ರಾಮ ಪಂಚಾಯತ್‌ಗೆ ಅಂಟಿಕೊಂಡಂತಿರುವ ಮೀನು ಮಾರುಕಟ್ಟೆಯ ಅಕ್ಕಪಕ್ಕದಲ್ಲಿಯೂ ಇದೆ ಸ್ಥಿತಿ. ಇದು ಅಕ್ಷರಶಃ ಕೋಟೇಶ್ವರದ ಅಂದಗೆಡಿಸುತ್ತಿರುವುದು ಸತ್ಯ. ಸಂಚಾರಿಗಳು ರಸ್ತೆ ಬದಿಗಳಲ್ಲಿ ಬಿದ್ದು ಕೊಳೆಯುತ್ತಿರುವ ಕಸದ ರಾಶಿಗಳನ್ನು ದರ್ಶನ ಮಾಡಿಕೊಳ್ಳುವುದರೊಂದಿಗೆ ವಾಸನೆಯನ್ನೂ ಅನುಭವಿಸಿ ಹೋಗಬೇಕಾದ ಅಸಹನೀಯ ಪರಿಸ್ಥಿತಿ ಉಂಟಾಗಿದೆ.

ಡೊಡ್ಡ ಗ್ರಾಮ ಪಂಚಾಯತ್‌ನಲ್ಲಿ ಸಣ್ಣದೊಂದು ಡಂಪಿಂಗ್ ಯಾರ್ಡ್ ಇಲ್ಲ..!
ರಾಷ್ಟ್ರೀಯ ಹೆದ್ದಾರಿ ೬೬ಕ್ಕೆ ಹೊಂದಿಕೊಂಡಿರುವ ಕೋಟೇಶ್ವರದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲೆಲ್ಲೂ ಕಸಗಳು ಕಾಣಸಿಗುತ್ತಿವೆ. ೧೧ ಕ್ಷೇತ್ರಗಳು, ೮ ವಾರ್ಡ್ಗಳಿರುವ ದೊಡ್ಡ ಗ್ರಾಮ ಪಂಚಾಯತ್‌ನಲ್ಲಿ ಕಸ, ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಡಂಪಿಂಗ್ ಯಾರ್ಡ್ ಇಲ್ಲದಿರುವುದು ದುರಂತ. ಎಸ್‌ಎಲ್‌ಆರ್‌ಎಂ ಘಟಕದ ಸ್ಥಾಪೆಗೂ ಸೂಕ್ತ ಸ್ಥಳದ ಕೊರತೆಯಿದೆ.

ಒಟ್ಟಿನನಲ್ಲಿ, ಪೇಟೆಯ ಈ ಸ್ಥಿತಿಗೆ ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನಾದರೂ ಸ್ಥಳಿಯಾಡಳಿತ ಈ ಬಗ್ಗೆ ಅಗತ್ಯವಾಗಿ ತುರ್ತು ಕ್ರಮಗಳನ್ನು ಕೈಗೊಂಡು ಕಸ ತ್ಯಾಜ್ಯ ವಿಲೇವಾರಿಯ ಅವ್ಯವಸ್ಥೆಗೆ ಮುಕ್ತಿ ನೀಡಬೇಕಾಗಿದೆ.

ಕಸ ವಿಲೇವಾರಿಗೆ ಸರ್ಕಾರಿ ಜಾಗವಿಲ್ಲ..!
ಕೋಟೇಶ್ವರ ಗ್ರಾಮ ಪಂಚಾಯತ್‌ನಲ್ಲಿ ಕಸ ವಿಲೇವಾರಿಗೆ ಸರ್ಕಾರಿ ಜಾಗವಿಲ್ಲ. ಇದು ಗ್ರಾಮ ಪಂಚಾಯತ್‌ಗೆ ದೊಡ್ಡ ತಲೆನೋವಾಗಿದೆ. ಹಿಂದೂ ರುಧ್ರಭೂಮಿಯಲ್ಲಿ ಒಂದು ಎಕರೆ ಜಾಗವಿದೆ. ಅದರಲ್ಲಿ ಸ್ವಲ್ಪ ಜಾಗವನ್ನು ತಹಶಿಲ್ದಾರರು ಮತ್ತು ಎಸಿಯವರ ಮೂಲಕ ಡಿಸಿಯವರಲ್ಲಿ ಎಸ್‌ಎಲ್‌ಆರ್‌ಎಮ್ ಘಟಕ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದೇವೆ. ಪೇಟೆಯಲ್ಲಿ ವಾರಕ್ಕೊಮ್ಮೆ ಒಣಕಸಗಳನ್ನು ಸಂಗ್ರಹಿಸುತ್ತಿದ್ದೇವೆ. ಈ ಬಗ್ಗೆ ಪುರಸಭೆ ಅಧಿಕಾರಿಯವರಲ್ಲಿಯೂ ಪ್ರಸ್ತಾಪ ಮಾಡಿದ್ದೇವೆ. ಪರಿಸರ ಜಾಗೃತಿ ಕಾರ್ಯಕ್ರಮಗಳ್ನು ಕೂಡ ಸಾರ್ವಜನಿಕರಿಗಾಗಿ ಮಾಡಿದ್ದೇವೆ.
-ಶಾಂತಾ ಗೋಪಾಲಕೃಷ್ಣ. ಅಧ್ಯಕ್ಷರು, ಕೋಟೇಶ್ವರ ಗ್ರಾಮ ಪಂಚಾಯತ್

ಟ್ಯಾಕ್ಸ್ ತೆಗೆದುಕೊಳ್ಳುತ್ತಾರೆ, ಸ್ವಚ್ಛತೆ ಅಷ್ಟಕ್ಕಷ್ಟೆ.!
ಗ್ರಾಮ ಪಂಚಾಯತ್‌ಯಿಂದ ಸ್ವಚ್ಛತಾ ಕಾರ್ಯಕ್ಕೆ ಟ್ಯಾಕ್ಸ್ ತೆಗೆದುಕೊಳ್ಳುವುದಕ್ಕೆ ಸರಿಯಾದ ಸಮಯಕ್ಕೆ ರಶೀದಿ ಹಿಡಿದುಕೊಂಡು ಬರುತ್ತಾರೆ. ಸ್ವಚ್ಛತಾ ಕಾರ್ಯ ಮಾಡುವುದಿಲ್ಲ ಎನ್ನುವುದಕ್ಕೆ ನಿಮ್ಮುಂದೆಯೇ ಉದಾಹರಣೆಗಳಿವೆ. ಗ್ರಾಮ ಪಂಚಾಯತ್ ಆಡಳಿತದ ಮೇಲೆ ಬೇಸರ ಬಂದು ಹೋಗಿದೆ.
-ಮಹೇಶ್ ಆಚಾರ್ಯ, ಸ್ಥಳಿಯ ಚಿನ್ನದಂಗಡಿ ಮಾಲಿಕರು  

ಗ್ರಾಮ ಪಂಚಾಯತ್ ದಿವ್ಯ ನಿರ್ಲಕ್ಷ್ಯ..!
ಗ್ರಾಮ ಪಂಚಾಯತ್ ಕಸ ವಿಲೇವಾರಿಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತ್ಯಾಜ್ಯ ನಿವಾರಣೆಯ ಬಗ್ಗೆ ಪಂಚಾಯತ್ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದೆ. ಇನ್ನಾದರೂ ಜವಾಬ್ದಾರಿ ತೋರಿಸಬೇಕಾಗಿದೆ. ಸಾರ್ವಜನಿಕರ ಜಾಗವನ್ನು ರಕ್ಷಿಸುವ ಜವಾಬ್ದಾರಿ ಎಲ್ಲಾ ನಾಗರಿಕರಿಕರಿಗೂ ಕೂಡ ಇದೆ ಎನ್ನುವುದು ತಿಳಿದಿರಬೇಕು.
-ಸಂದೇಶ್ ಪೂಜಾರಿ ಕೋಟೇಶ್ವರ, ಸ್ಥಳಿಯ ಮೊಬೈಲ್ ಅಂಗಡಿ ಮಾಲಿಕರು

ಕೊಡಿ ಹಬ್ಬದ ಸಂದರ್ಭದಲ್ಲಿ ಮಾತ್ರ ಕ್ಲೀನಿಂಗ್...!
ಕೊಡಿ ಹಬ್ಬ ಬಂದರೆ ಮಾತ್ರ ಗ್ರಾಮ ಪಂಚಾಯತ್ ಎಚ್ಚರಗೊಳ್ಳುತ್ತದೆ. ಮಿಕ್ಕುಳಿದ ಸಂದರ್ಭದಲ್ಲಿ ಏನೂ ಸ್ವಚ್ಚತಾ ಕಾರ್ಯ ಮಾಡುವುದಿಲ್ಲ. ತ್ಯಾಜ್ಯಗಳೆಲ್ಲಾ ಹಾಗೆಯೇ ವರ್ಷವಿಡೀ ಕೊಳೆಯುತ್ತವೆ.
-ಸುರೇಶ್, ಸ್ಥಳಿಯರು


-ಶ್ರೀರಾಜ್ ವಕ್ವಾಡಿ

No comments:

Post a Comment