ಬಾಯ್ತುಂಬಾ ನಗು ಬೀರುತ್ತಾ, ಕಣ್ಣಲ್ಲೇ ನಗಿಸಿ ಮಾತಿಗಿಳಿಯುವ ಮಾನಸಿ ಸುಧೀರ್ ರವರ ವ್ಯಕ್ತಿತ್ವ ಸರಳವೂ, ವಿಶೇಷವೂ ಹೌದು. ಮತ್ತು ಅವರ ಜೀವನ ಶೈಲಿ ಬಲು ಅಚ್ಚುಕಟ್ಟು. ಮಾನಸಿ ಸುಧೀರ್ ಭರತನಾಟ್ಯ ವೇಷಭೂಷಣ ಧರಿಸಿ ವೇದಿಕೆಗೆ ಬಂದು ನಾಟ್ಯ ಪ್ರಾರಂಭಿಸಿದರಂತು ಸಾಕ್ಷಾತ್ ದೇವಕನ್ಯೆಯೇ ಇಳೆಗಿಳಿದಂತೆ ಭಾಸವಾಗುತ್ತದೆ. ಅಂದರೇ ಅವರ ನಾಟ್ಯಶೈಲಿ, ಭಾವಭಂಗಿ ಮತ್ತು ವೇದಿಕೆ ಮೇಲಿನ ಅವರ ಕಲಾನಿಷ್ಠೆ ಸುಸ್ಪಷ್ಟ ಎನ್ನುವ ಅರ್ಥ.
ಒಬ್ಬ ನಿಜವಾದ ಕಲಾಸಕ್ತನಾದವನು ವೇದಿಕೆ ಮೇಲೆ ಮಾನಸಿ ಸುಧಿರ್ ಇದ್ದರೆ ತನ್ನ ದೃಷ್ಟಿಯನ್ನು ಅವರಲ್ಲೇ ನೆಟ್ಟು ತಲ್ಲೀನನಾಗುತ್ತಾನೆ ಎನ್ನುವುದು ನೂರಕ್ಕೆ ನೂರು ಸತ್ಯ. ಅಂತಹ ಮನಮೋಹಕ ನಾಟ್ಯರಾಣಿಯ ವ್ಯಕ್ತಿತ್ವ ಪರಿಚಯ ಈ ಸಣ್ಣ ಲೇಖನದ ಮೂಲಕ.
ವೃತ್ತಿಯಲ್ಲಿ ಒಬ್ಬ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ , ಜೊತೆಜೊತೆಗೆ ನೃತ್ಯನಿಕೇತನದ ಸಾರಥ್ಯ ವಹಿಸಿರುವುದು ಗಮನಾರ್ಹ ವಿಷಯ. ಈಗಾಗಲೇ ದೇಶದ ಅನೇಕಾನೇಕ ಭಾಗಗಳಲ್ಲಿ ಸುಮಾರು ೭೦೦ಕ್ಕೂ ಅಧಿಕ ಭರತನಾಟ್ಯ ಪ್ರದರ್ಶನ ನೀಡಿದ ಇವರು ತನ್ನ ವಿಶೇಷವಾದ ನಾಟ್ಯ ಶೈಲಿಯಿಂದ ನೋಡುಗರೆಲ್ಲರನ್ನು ತನ್ನ ಕಲೆಯ ವ್ಯಾಪ್ತಿಯೊಳಗೆ ಹಿಡಿದಿಟ್ಟುಕೊಳ್ಳಬಲ್ಲ ಒಬ್ಬ ಉತ್ತಮ ನಾಟ್ಯ ಚತುರೆ.
ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ ಅನುಭವ ಮಾನಸಿ ಸುಧೀರ್‌ರವರಿಗಿದೆ . ಅವುಗಳಲ್ಲಿ ಪ್ರಮುಖವಾಗಿ ಉಲ್ಲೇಖಿಸುವುದಾದರೆ... ‘ಅಖಿಲ ಭಾರತ ಸಾಹಿತ್ಯ ಸಮ್ಮೇಳನ’, ‘ ಸಂಗೀತ/ಸಾಹಿತ್ಯ/ನೃತ್ಯ ಸಮ್ಮೇಳನ’, ‘ಆಳ್ವಾಸ್ ನುಡಿಸಿರಿ’, ‘ಅಂತರಾಷ್ಟ್ರಿಯ ಶ್ರೀ ಕೃಷ್ಣ ನೃತ್ಯ ಸಂಭ್ರಮ’, ‘ವಿಶ್ವರೂಪ ರಾಷ್ಟ್ರೀಯ ನೃತ್ಯ ಸಂಭ್ರಮ’, ‘ಭೀಮ್‌ಸೇನ್ ಜೋಷಿ ಅಂತರಾಷ್ಟ್ರೀಯ ಸಂಗೀತ/ನೃತ್ಯ ಸಂಭ್ರಮ, ಪುಣೆ’, ‘ನಾಡ ನಿರಂಜನಮ್ ತಿರುಪತಿ’, ‘ದೆಹಲಿ ಕರ್ನಾಟಕ ಸಂಘ’, ಹಾಗೆ ಭೀಮ್‌ಸೇನ್ ಜೋಷಿ ಸ್ಮರಣಾರ್ಥ ಉಡುಪಿಯ ರಾಜ ಭವನದಲ್ಲಿ ಆಯೋಜಿಸಿದ ‘ದೀಪ ದರ್ಶನ’ ಹೀಗೆ ಸಾಕಷ್ಟು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ ಹೆಚ್ಚುಗಾರಿಕೆ ಮಾನಸಿಯವರಿಗಿದೆ.
ಮಾನಸಿ ಕೇವಲ ಭರತನಾಟ್ಯ ಕಲಾವಿದೆ ಮಾತ್ರವಲ್ಲ, ಅವರದ್ದು ಬಹುಮುಖ ಪ್ರತಿಭೆಗಳ ಸಂಗಮದ ಮೇರು ವ್ಯಕ್ತಿತ್ವ. ಬಾಲ್ಯದಿಂದಲೇ ಸಂಗೀತ ಆಸಕ್ತಿ ಹೊಂದಿದ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಬಲ್ಲವರು ಕೂಡ ಹೌದು. ಗುರು ಶ್ರೀ ನರಸಿಂಹ ಉಪಾಧ್ಯ ಮತ್ತು ಗುರು ಶ್ರೀ ನಾಗರಾಜ ಉಪಾಧ್ಯರಲ್ಲಿ ಕರ್ನಾಟಕ ಸಂಗೀತ ಅಭ್ಯಾಸ ಮಾಡಿ ಆಕಾಶವಾಣಿಯಲ್ಲಿ ಬಿ ಗ್ರೇಡ್ ಕಲಾವಿದೆಯಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ. ರಂಗಕರ್ಮಿ ಶ್ರೀ ಗುರುರಾಜ್ ಮಾರ್ಪಳ್ಳಿಯವರೊಂದಿಗೆ ಅನೇಕ ಭಾವಗೀತೆಗಳನ್ನು ಹಾಡಿ ಸೈ ಎನಿಸಿಕೊಂಡವರು. ಮಾತ್ರವಲ್ಲದೇ ಮಾನಸಿ ಸುಧೀರ್ ಒಬ್ಬ ರಂಗಭೂಮಿ ಕಲಾವಿದೆಯೂ ಹೌದು. ಕರ್ನಾಟಕದ ಹೆಸರಾಂತ ರಂಗ ತರಬೇತಿ ಕೇಂದ್ರ ನೀನಾಸಂ ಹೆಗ್ಗೋಡಿನ ರಂಗ ಶಿಬಿರದಲ್ಲಿ ರಂಗ ರತಬೇತಿ ಪಡೆದವರು. ‘ಚಿತ್ರ’ ಎನ್ನುವ ನೃತ್ಯನಾಟಕದಲ್ಲಿ ರಾಷ್ಟ್ರೀಯ ನಾಟಕ ಶಾಲೆ ದೆಹಲಿ ಆಯೋಜಿಸಿದ ೧೯ನೇ ಬಿಆರ್‌ಎಮ್ ಕಾರ‍್ಯಕ್ರಮದಲ್ಲಿ ಭಾಗವಹಿಸಿದ ಅನುಭವವೂ ಇದೆ. ಅಷ್ಟೇ ಅಲ್ಲದೆ ಮಾನಸಿ.. ಕಿರುತೆರೆ, ಮತ್ತು ಬೆಳ್ಳಿತೆರೆಗಳಲ್ಲಿ ಕಾಣಿಸಿಕೊಂಡ ನಟಿಯೂ ಹೌದು.
ಮಣಿಪಾಲ ವಿಶ್ವವಿದ್ಯಾಲಯದಲ್ಲಿ ವಿದೇಶಿ ಭರತನಾಟ್ಯ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಅಷ್ಟಲ್ಲದೇ ‘ಗೀತ ಗೋವಿಂದ’, ‘ಶಬರಿ’, ‘ನಂದಗೋಕುಲ’, ‘ಮಳೆ ಬಂತು ಮಳೆ’, ಎಂಬಿತ್ಯಾದಿ ನೃತ್ಯರೂಪಕಗಳನ್ನು ನಿರ್ದೇಶಿಸುತ್ತಾ ಅವರ ಗುರುವೂ, ಪತಿಯೂ ಆಗಿರುವ ವಿದ್ವಾನ್ ಸುಧೀರ್ ರಾವ್ ಕೊಡವೂರು ಅವರೊಂದಿಗೆ ಕಾರ್ಯಕ್ರಮಗಳನ್ನು ಸಂಯೋಜಿಸುತ್ತಾ, ಈ ನಾಲ್ಕನೇ ತಲೆಮಾರಿನಲ್ಲಿ ಭರತನಾಟ್ಯದಂತಹ ಸರ್ವಾಂಗ ಸುಂದರ ಕಲೆಯಲ್ಲಿ ಆಸಕ್ತಿ ಹೊಂದಿರುವ ನೂರಾರು ಯುವ ಮನಸ್ಸುಗಳಿಗೆ ಭರತನಾಟ್ಯವನ್ನು ಧಾರೆಯೆರೆಯುತ್ತಾ ಬದುಕನ್ನು ಅನುಭವಿಸುತ್ತಿದ್ದಾರೆ.
ಒಬ್ಬ ಮಹಿಳೆಯಾಗಿ, ಮನೆಯಲ್ಲಿ ಗ್ರಹಿಣಿಯ ಜವಾಬ್ದಾರಿ ಹೊತ್ತು, ಕಾಲೇಜಿನಲ್ಲಿ ಉಪನ್ಯಾಸಕಿ ವೃತ್ತಿಯನ್ನು ನಿಭಾಯಿಸುತ್ತಾ ಭರತನಾಟ್ಯ ಹಾಗೂ ಆಗಾಗ ಬೆಳ್ಳಿ ತೆರೆ, ಕಿರುತೆರೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಾನಸಿ ಸುದೀರ್‌ರವರ ಸಾಧನೆ ನಿಜಕ್ಕೂ ಸ್ತುತ್ಯಾರ್ಹ.
-ಶ್ರೀರಾಜ್ ಎಸ್. ಆಚಾರ್ಯ, ವಕ್ವಾಡಿ
(ಪೋಟೋ ಕೃಪೆ: ಇಂಟರ್ನೆಟ್)



No comments:
Post a Comment