Tuesday, January 21, 2020

ವೃತ್ತಿಯಲ್ಲಿ ಉಪನ್ಯಾಸಕರು, ಪ್ರವೃತ್ತಿಯಲ್ಲಿ ಎರಡು ಮೇಳಗಳ ಯಜಮಾನರು..!




ಕುಂದಾಪುರದ ವಕ್ವಾಡಿಯ ಗಣಪತಿ ಶೆಟ್ಟಿ ಮತ್ತು ಕುಸುಮ ದಂಪತಿಗಳ ಪುತ್ರನಾಗಿ ೧೯೮೩ ಡಿಸೆಂಬರ್ ೨೮ರಂದು ಜನಿಸಿದ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ, ಸಂಘಟನಾ ಚತುರ. ಊರಿನ ಸಮಾನ ಮನಸ್ಸಿನ ಯುವಕರನ್ನು ಸೇರಿಸಿಕೊಂಡು ಯುವಶಕ್ತಿ ಮಿತ್ರ ಮಂಡಳಿ(ರಿ.) ಹೆಗ್ಗಾರ್‌ಬೈಲು, ವಕ್ವಾಡಿ ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸಿ, ಜಿಲ್ಲಾ ಪ್ರಶಸ್ತಿ ಪಡೆಯುವಂತೆ ಮಾಡಿದ ಕೀರ್ತಿಗೆ ರಂಜಿತ್ ಪಾತ್ರವಾಗಿದ್ದಾರೆ. ತನ್ನ ಯೌವನದಲ್ಲೇ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ನಟಿಸಿ ಈ ಭಾಗದಲ್ಲಿ ಸೈ ಎನ್ನಿಸಿಕೊಂಡಿದ್ದಲ್ಲದೇ, ಮೈಕಿನ ಮುಂದೆ ಸುಲಲಿತವಾಗಿ ಮಾತನಾಡಬಲ್ಲ ನಿರೂಪಕರಾಗಿಯೂ, ಮಾತುಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ತದನಂತರ ‘ನಮ್ಮ ಕಲಾಕೇಂದ್ರ ಕೋಟೇಶ್ವರ’, ಎಂಬ ಯಕ್ಷಗಾನ ಹವ್ಯಾಸಿ ತಂಡವನ್ನು ಕಟ್ಟಿ, ಆ ಮೂಲಕ ಅನೇಕರಿಗೆ ಸಂಸ್ಥೆಯಿಂದ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ತಾನೂ ಯಕ್ಷಗಾನದಲ್ಲಿ ಗೆಜ್ಜೆ ಕಟ್ಟಿ ಪಾತ್ರವಹಿಸಿದ್ದಲ್ಲದೇ, ಪ್ರತಿ ವರ್ಷ ಕೋಟೇಶ್ವರದಲ್ಲಿ ‘ಯಕ್ಷ ಹಬ್ಬ’ವೆಂಬ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸುತ್ತಾ ಬಂದಿದ್ದಾರೆ. ಎಂ.ಎ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರಾದ ರಂಜಿತ್ ಕುಮಾರ್ ಶೆಟ್ಟಿ, ಪ್ರಸ್ತುತ ವೃತ್ತಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರ, ಕೋಟೇಶ್ವರದ ಉಪನ್ಯಾಸಕರು. ಪ್ರವೃತ್ತಿಯಲ್ಲಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳ ಮತ್ತು ಮೇಗರವಳ್ಳಿ ಮೇಳಗಳ ಯಜಮಾನರು ಎನ್ನುವುದು ಹೆಮ್ಮೆ.

ತುಂಬಾ ಕಿರಿಯ ವಯಸ್ಸಿನಲ್ಲಿಯೇ ಎರಡು ಯಕ್ಷಗಾನ ಮೇಳಗಳ ಸಾರಥ್ಯ ವಹಿಸಿ ಈ ಭಾಗದ ಮೊದಲಿಗರೆನ್ನಿಸಿಕೊಂಡು, ಯಕ್ಷರಂಗದಲ್ಲಿ ಹೆಸರುಗಳಿಸುತ್ತಿರುವ ಮತ್ತು ಉಪನ್ಯಾಸಕನ ವೃತ್ತಿಯನ್ನೂ ನಿಭಾಯಿಸುತ್ತಿರುವ ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿಯವರ ಸಣ್ಣ ಸಂದರ್ಶನ ನಿಮಗಾಗಿ.

ಡೇರೆ ಮೇಳಗಳ ನಡುವೆ ಬಯಲಾಟ ಮೇಳಗಳನ್ನು ನಿರ್ವಹಿಸುವುದಕ್ಕೆ ಕಷ್ಟವಾಗುತ್ತಿಲ್ಲವೇ..?
ಡೇರೆ ಮೇಳಗಳ ಹವಾನೇ ಬೇರೆ. ಹರಕೆಯೇತರ ಬಯಲಾಟಗಳಿಗೆ ಇದು ತುಂಬಾ ಕಷ್ಟ, ನಷ್ಟ. ಡೇರೆ ಮೇಳಗಳು ಈಗ ಪಡೆದ ಪ್ರತಿಷ್ಠೆ ಉಳಿಸಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಿವೆ ಅನ್ನಿಸುತ್ತಿದೆ.

ಬಯಲಾಟಗಳಲ್ಲಿ ಕಾಲಮಿತಿ ಯಕ್ಷಗಾನ ಇತ್ತೀಚಿನ ಕೆಲವು ವರ್ಷಗಳಿಂದ ರೂಢಿಯಲ್ಲಿದೆ.  ಆ ಕುರಿತು ಪ್ರೇಕ್ಷಕರ  ಸ್ಪಂದನೆ ಹೇಗಿದೆ..?
ಕಾಲಮಿತಿಗೆ ಇಂದು ಹೆಚ್ಚು ಜನ ಬರುತ್ತಿದ್ದಾರೆ. ಕಾಲಮಿತಿ ಯಕ್ಷಗಾನವನ್ನು ಬಹುತೇಕ ಯಕ್ಷಾಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಯುವಕರನ್ನು ಯಕ್ಷಗಾನದತ್ತ ಸೆಳೆಯುವಲ್ಲಿ ಕಾಲಮಿತಿ ಮಹತ್ತರವಾದ ಪಾತ್ರ ನಿಭಾಯಿಸಿದೆ. ಈಗಿನ ದಿನಮಾನಗಳಿಗೆ ಕಾಲಮಿತಿ ಯಕ್ಷಗಾನ ಸೂಕ್ತವೆನ್ನಿಸುತ್ತಿದೆ.

ಕಾಲಮಿತಿ ಯಕ್ಷಗಾನಗಳು ಮೂಲ ಪ್ರಸಂಗಕ್ಕೆ ಧಕ್ಕೆ ಉಂಟುಮಾಡುತ್ತಿಲ್ಲವೇ..?
ಮೂಲ ಪ್ರಸಂಗ ಅಂದರೇನು..? ಪೌರಾಣಿಕ ಪ್ರಸಂಗಗಳ ಮೂಲ ಪ್ರತಿಯಲ್ಲಿ ಎರಡು ರಾತ್ರಿಗಳಾಡುವಷ್ಟು ಪದ್ಯಗಳಿರುತ್ತವೆ. ಅದರಲ್ಲಿ ಆಯ್ಕೆ ಮಾಡಿಯೇ ಪ್ರಸಂಗಗಳಿಗೆ ಬಳಸುವ ಕ್ರಮ ಈ ಹಿಂದಿನಿಂದಲೂ ಇತ್ತು...ಹಾಗಾದರೇ, ಯಕ್ಷಗಾನ ಅಗತ್ಯವಿದ್ದಷ್ಟೇ ಬಳಕೆ ಅಂತಾಯ್ತಲ್ಲ.

ದಿನಕ್ಕೊಂದರಂತೆ ಹುಟ್ಟಿಕೊಳ್ಳುತ್ತಿರುವ ಕ್ಷೇತ್ರ ಮಹಾತ್ಮೆ ಪ್ರಸಂಗಗಳಲ್ಲಿ ತೊಡಕುಗಳಿವೆ ಎಂಬುವುದಕ್ಕೆ ನಿಮ್ಮ ಅಭಿಪ್ರಾಯ..?
ಕಲೆಯ ಜೊತೆಗೆ ಭಕ್ತಿ, ಭಾವನೆಯ ಸಮ್ಮೇಳನ ಅಂದರೆ ಯಕ್ಷಗಾನ. ಅದಿಲ್ಲದಿದ್ದರೇ ಇಂದು ಕ್ಷೇತ್ರ ಮಹಾತ್ಮೆಗಳು ಹರಕೆಯ ರೂಪಗಳಲ್ಲಿ ಬೇಡಿಕೆ ಪಡೆಯುತ್ತಿರಲಿಲ್ಲ. ಮೂಲ ಸತ್ವ ಉಳಿಸಿಕೊಳ್ಳಲು ಸವಾಲು ಅಧಿಕ.

ಬಯಲಾಟ ಮೇಳಗಳಲ್ಲಿ ಕಲಾವಿದರ ನಿರ್ವಹಣೆಯ ಬಗ್ಗೆ...
ಕಲಾವಿದರು ಅನ್ನೋದಕ್ಕಿಂತ ಜನರನ್ನು ಗುಂಪು ಸೇರಿಸಿ ಕೆಲಸ ಮಾಡುವುದೇ ಕಷ್ಟ. ಚೌಕಿಮನೆಯೊಳಗಿನ ವೈಮಸ್ಸು, ಭಿನ್ನಾಭಿಪ್ರಾಯಗಳು ಎಲ್ಲಾ ಮೇಳಗಳಲ್ಲಿಯೂ ಸಹಜ. ಎಲ್ಲರೂ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಸ್ವಭಾವದವರಿದ್ದರೇ ನಿರ್ವಹಣೆ ಸುಲಭ.

ಸಾಮಾಜಿಕ ಪ್ರಸಂಗಗಳನ್ನು ಈಚಿನ ದಿನಗಳಲ್ಲಿ ಬಯಲಾಟ ಮೇಳಗಳೂ ಆಡಿ ತೋರಿಸುತ್ತಿವೆ,  ನೋಡುಗರ ಅಭಿಪ್ರಾಯ ಹೇಗಿದೆ..?
ಸಾಮಾಜಿಕ ಪ್ರಸಂಗಗಳು ಬಂದರೂ ಆವರಣ ಅದೇ. ಕಲಾವಿದರ ಸೃಜಶೀಲತೆಗೆ, ಆಧುನಿಕ ಔದ್ಯಮಿಕ ಸೃಷ್ಟಿಗೆ, ಯುವಜನರನ್ನು ಸೆಳೆಯುವುದಕ್ಕೆ, ಪ್ರಚಾರದ ದೃಷ್ಟಿಯಿಂದ ಹೊಸ ಪ್ರಸಂಗಗಳು ದೊಡ್ಡ ಕೊಡುಗೆಯನ್ನೇ ಕೊಟ್ಟಿವೆ. ಒಳ್ಳೆಯ ಕಥೆಗಳನ್ನು ನೋಡುಗರು ಖಂಡಿತ ಮೆಚ್ಚಿಕೊಳ್ಳುತ್ತಾರೆ.


‘ಸಾಮಾಜಿಕ ಪ್ರಸಂಗಗಳು ಸಿನೆಮಾಧಾರಿತವಾಗಿರುತ್ತವೆ’ ಎನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ..?
ಕಥೆ ಅಂದಮೇಲೆ ಸಂಪೂರ್ಣ ಸ್ವತಂತ್ರ ಸೃಷ್ಟಿಯಲ್ಲ. ಒಂದು ಭಾಗ ಎಲ್ಲೋ ಕಥಯ ಮಧ್ಯದಲ್ಲಿ ಬಂದಾಗ ಅದು ಆಧಾರಿತ ಎಂದೆನ್ನಿಕೊಳ್ಳುತ್ತದೆ ಅಷ್ಟೇ. ಸಂಪೂರ್ಣ ಸಿನೆಮಾದ ಕಥೆಯೇ ಆಗಿದ್ದರೇ ಅದು ರೂಪಾಂತರವಾಗುತ್ತದೆ. ಆಧಾರಿತವಲ್ಲ. ಜನ ಒಪ್ಪಿದ್ದು ಮಾತ್ರ ಹೆಚ್ಚು ಪ್ರದರ್ಶನ ಕಾಣುತ್ತವೆ.

ಸೇವೆಯಾಟಗಳು ಮತ್ತು ವಂತಿಗೆ ಆಟಗಳ ಬಗ್ಗೆ...
ಬಹಳ ಹಿಂದಿನಿಂದಲೂ ಮೇಳಗಳಿಗೆ ಸೇವೆಯಾಟಗಳು ಇಲ್ಲದಿದ್ದಾಗ ವಂತಿಗೆ ಆಟಗಳು ನಡೆಯುತ್ತಿದ್ದವು. ಕಲಾವಿದರ ಆ ದಿನದ ಕರ್ಚು ವೆಚ್ಚಕ್ಕೆ ಆಗುವಷ್ಟು ಊರಿನ ಹತ್ತು ಸಮಸ್ತರಿಂದ ದೇಣಿಗೆ ಪಡೆದು, ಕಡಿಮೆಯಾದರೇ ಮೇಳದ ಯಜಮಾನ ಕೈಯಿಂದ ಹಾಕಿ ನಡೆಸಬೇಕಾಗುತ್ತದೆ. ಹಾಗಾಗಿ ಮೇಳದ ಯಜಮಾನಿಕೆ ದೇವರ ಆಯ್ಕೆ ಎನ್ನುವುದು ನನ್ನ ಅಭಿಪ್ರಾಯ. ಕಲಾವಿದ ಎಂಬ ಪುಣ್ಯ ಜೀವವನ್ನು ಸಂಘಟಿಸುವುದು ಮಹಾನ್ ಶಕ್ತಿ.

ಬಯಲಾಟಗಳಿಗೆ ಬರುವ ಜನಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವುದಕ್ಕೆ ಏನು ಹೇಳುವಿರಿ..?
ನನ್ನ ತಿರುಗಾಟದ ಅನುಭವದ ನೆಲೆಯಲ್ಲಿ ಹಾಗನ್ನಿಸಿಲ್ಲ. ಕರಾವಳಿಯಲ್ಲಿ ಉತ್ತಮ ಪ್ರದರ್ಶನದ ಅವಕಾಶವಿದೆ. ಮೂಲ ಕರಾವಳಿಗರು ಹೊರಭಾಗದಲ್ಲಿ ಇನ್ನೂ ಹೆಚ್ಚಿನ ಭಾವನೆ, ಒಲವು ಇರಿಸಿಕೊಂಡಿದ್ದಾರೆ.

ವೃತ್ತಿಯಲ್ಲಿ ಉಪನ್ಯಾಸಕರು, ಪ್ರವೃತ್ತಿಯಲ್ಲಿ ಎರಡು ಬಯಲಾಟ ಮೇಳಗಳ ಯಜಮಾನರು. ಹೇಗೆ ನಿಭಾಯಿಸುತ್ತೀರಿ..?
ಆಸಕ್ತಿ, ಶ್ರದ್ಧೆ ಜೊತೆಗೆ ನಿರಂತರ ಶೋಧಕ ಪ್ರವೃತ್ತಿಯಿದ್ದರೇ ಯಾವ ಕೆಲಸಕ್ಕೂ ತೊಡಕಾಗದು. ಸೋತರೂ ಮೆಟ್ಟಿ ನಿಲ್ಲುವ ಛಲ, ಧೈರ್ಯ ಈ ಕ್ಷೇತ್ರಕ್ಕೆ ಬೇಕೇ ಬೇಕು.



                                                                                               -ಶ್ರೀರಾಜ್ ಎಸ್. ಆಚಾರ್ಯ, ವಕ್ವಾಡಿ











3 comments: