ಕುಂದಾಪುರದಿಂದ ಬೈಂದೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ೬೬ರಲ್ಲಿ ಹಾಕಿದ ಸೂಚನಾ ಫಲಕಗಳಲ್ಲಿ ಕನ್ನಡವೇ ಇಲ್ಲದಂತಾಗಿದೆ. ರಸ್ತೆ ಅಕ್ಕಪಕ್ಕದಲ್ಲಿರುವ ಹೋಟೇಲು, ಅಂಗಡಿಗಳ ಬೋರ್ಡ್ಗಳು ಕನ್ನಡದಲ್ಲಿದ್ದದ್ದನ್ನು ಬಿಟ್ಟರೇ ಮಾರ್ಗ ಗುರುತುಗಳಲ್ಲಿ ಕಾಣಸಿಗುವುದಿಲ್ಲ. ಹೆದ್ದಾರಿ ಉದ್ದಕ್ಕೂ ಹಾಕಲಾಗಿರುವ ಸೂಚನಾ ಫಲಕಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಬಳಕೆಯೇ ರಾರಾಜಿಸುತ್ತಿದೆ. ರಸ್ತೆ ವಿಭಜಕಗಳಲ್ಲಿ, ತಿರುವುಗಳಲ್ಲಿ, ಅಪಘಾತ ವಲಯಗಳಲ್ಲಿ ಸರಿಯಾದ ಸೂಚಿಗಳು ಕೂಡ ಕೆಲವು ಕಡೆ ಇಲ್ಲ. ಸಂಚಾರ ನಿಯಮಗಳಿಗೆ ಅಗತ್ಯವಿರುವ ಗುರುತುಗಳು ಹಾಕದಿದ್ದುದ್ದರಿಂದ ವಾಹನ ಸಂಚಾರಿಗಳಿಗೆ ಗೊಂದಲವುಂಟು ಮಾಡುತ್ತಿದೆ. ಟೆಂಡರ್ ವಹಿಸಿಕೊಂಡ ಐಆರ್‌ಬಿ ಹಿಂದಿ ಹೇರಿಕೆಯನ್ನು ಪಾಲಿಸಿದಂತಿದೆ. ಸಂಬಂಧ ಪಟ್ಟ ಸ್ಥಳೀಯಾಡಳಿತವಾಗಲಿ, ಅಧಿಕಾರಿಗಳಾಗಲಿ ಈ ಬಗ್ಗೆ ಗಮನ ಹರಿಸಿದಂತೆ ಕಾಣಿಸುತ್ತಿಲ್ಲ. ಅಲ್ಲಲ್ಲಿ ಒಂದೆರಡು ಕನ್ನಡ ಬೋರ್ಡ್ಗಳನ್ನು ಬಿಟ್ಟರೆ ಬೇರೆಲ್ಲಾ ಹಿಂದಿ, ಇಂಗ್ಲೀಷ್ ಭಾಷೆಗಳಿಂದ ತಯಾರಿಸಿ ಹಾಕಲಾಗಿದೆ. ಕುಂದಾಪುರದಿಂದ ಬೈಂದೂರಿಗೆ ಒಮ್ಮೆ ಸಂಚರಿಸಿದರೆ ಮಹಾರಾಷ್ಟ್ರದ ಯಾವುದೋ ಹೆದ್ದಾರಿಯಲ್ಲಿ ಹೋದಂತೆ ಅನುಭವಕ್ಕೆ ಬರುವುದರಲ್ಲಿ ಸಂಶಯವಿಲ್ಲ.
ಮುಂಬೈನಲ್ಲಿ ಡಿಸೈನ್ :-
ಸ್ಥಳಿಯವಾಗಿ ಸಿದ್ಧವಾಗುವ ಸೂಚನಾ ಫಲಕಗಳು ನಿಯಮದಂತೆ ರೂಪಿತವಾಗಿರುವುದಿಲ್ಲ. ವಾಹನ ಚಾಲಕರಿಗೆ ಇವುಗಳು ಸರಿಯಾಗಿ ತಿಳಿಯುವುದಿಲ್ಲ ಮತ್ತು ಕಾಣುವುದಿಲ್ಲ, ಇದರಿಂದ ಅಪಘಾತ ಪ್ರಮಾಣ ಹೆಚ್ಚಾಗುತ್ತದೆ ಎಂದು ಭಾವಿಸಿ ಮಾರ್ಗಸೂಚಿಗಳನ್ನು ಐಆರ್‌ಬಿ, ಮುಂಬೈಯಲ್ಲಿ ಸಿದ್ಧಪಡಿಸಿ ತರಿಸಿ ಹಾಕಿದೆ. ಈಗ ಅವುಗಳಲ್ಲಿ ದೊಡ್ಡ ಪಟ್ಟಿ ಮಾಡುವಷ್ಟು ತಪ್ಪುಗಳು ಕಾಣಸಿಗುತ್ತಿರುವುದು ಅಪಹಾಸ್ಯಕ್ಕೆ ತುತ್ತಾಗಿದೆ.
ಅಗತ್ಯ ಪ್ರದೇಶಗಳಲ್ಲಿ ಸೂಚನಾ ಫಲಕಗಳೇ ಇಲ್ಲ :-
ಹೆದ್ದಾರಿಯ ಬಲ,ಎಡ ಭಾಗಗಳಲ್ಲಿರುವ ಶಾಲಾ ಕಾಲೇಜುಗಳು, ಆಸ್ಪತ್ರೆಗಳ ಬಳಿಯಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ. ಕುಂದಾಪುರ ಮಾರ್ಕೇಟ್ ಹತ್ತಿರದಲ್ಲಿ ಡಾ. ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಬಸ್ಸಿಗಾಗಿ ರಸ್ತೆ ದಾಟುವ ಅಗತ್ಯವಿದೆ. ಅಲ್ಲಿ ರೋಡ್ ಪಾಥ್ ಮಾರ್ಕನ್ನು, ಸೂಚನಾ ಫಲಕಗಳನ್ನು ಹಾಕಿಲ್ಲ.
ಅನಗತ್ಯ ಬೋರ್ಡ್ಗಳು :-
ಹೆದ್ದಾರಿಯುದ್ದಕ್ಕೂ ಹೊನ್ನಾವರ ಮತ್ತು ಪನ್ವೆಲ್‌ಗಳೆರಡರ ಬೋರ್ಡ್ಗಳನ್ನು ಹೊರತಾಗಿ ಬೈಂದೂರು, ಶಿರೂರು, ಭಟ್ಕಳಗಳನ್ನು ಐಆರ್‌ಬಿ ಪರಿಗಣಿಸಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಸಂದಿಸುವಲ್ಲಿ ಸೂಚನಾ ಫಲಕಗಳೇ ಇಲ್ಲ. ಅನಗತ್ಯ ಪ್ರದೇಶಗಳಲ್ಲಿ ಪನ್ವೆಲ್, ಹೊನ್ನಾವರ ಸೂಚನಾ ಫಲಕಗಳು ಹೆಚ್ಚಾಗಿ ಕಾಣಸಿಗುತ್ತವೆ. ಹಟ್ಟಿಯಂಗಡಿಯಂತಹ ಪುರಾಣ ಪ್ರಸಿದ್ಧ ದೇವಾಯಕ್ಕೆ ಹೋಗುವ ದಾರಿಯಲ್ಲಿ ಮತ್ತು ಯಡ್ತರೆ ಬೈಂದೂರಿನಿಂದ ಪ್ರಸಿದ್ಧ ಕ್ಷೇತ್ರ ಕೊಲ್ಲೂರಿಗೆ ಹೋಗುವ ದಾರಿಯಲ್ಲಿ ಸೂಚನಾ ಫಲಕವನ್ನೇ ಹಾಕಲಿಲ್ಲ.
ಕೆಲವು ಕಡೆ ರಸ್ಥೆಗೆ ರಕ್ಷಣಾ ತಡೆಗಳಿಲ್ಲ :-
ಬೈಂದೂರಿನಿಂದ ಕುಂದಾಪುರದೆಡೆಗೆ ಬರುವ ದಾರಿಯಲ್ಲಿ ಸಿಗುವ ತಲ್ಲೂರು ಸೇತುವೆಯನ್ನು ಸೇರುವ ರಸ್ತೆಗಳನ್ನು ಮೊದಲಿಗಿಂತ ಈಗ ಏರಿಸಿಲಾಗಿದೆ. ಆ ರಸ್ತೆಗಳ ಬದಿಗೆ ರಕ್ಷಣಾ ತಡೆಗಳಿರದಿರುವುದು ಅಪಘಾತಕ್ಕೆ ಮೃತ್ಯು ಕೂಪದಂತಾಗಿದೆ. ಅಷ್ಟಲ್ಲದೇ ಅಲ್ಲಿ ಯಾವುದೇ ರೀತಿಯ ಸೂಚನಾ ಫಲಕಗಳು, ಎಚ್ಚರಿಕೆಯ ನಿಯಮಗಳ ಬೋರ್ಡ್ಗಳು ಕಾಣಸಿಗುವುದಿಲ್ಲ.
‘ಸರ್ವಿಸ್ ರೋಡ್’ ಇಂಗ್ಲೀಷ್, ಹಿಂದಿಯಲ್ಲಿ ಮಾತ್ರ :-
ಸ್ಥಳಿಯರು ಹೆಚ್ಚಾಗಿ ಬಳಸುವ ಸರ್ವಿಸ್ ರೋಡ್‌ಗೆ ಹೋಗುವ ಸೂಚನಾ ಫಲಕದಲ್ಲಿ ಕನ್ನಡವೇ ಇಲ್ಲ. ಬೋರ್ಡ್ ಲ್ಲಿ ಸ್ಥಳಿಯರಿಗೆ ಅರ್ಥವಾಗದ, ಗೊತ್ತಿಲ್ಲದ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಮಾರ್ಗಸೂಚಿ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತು ಕೆಲವು ಕಡೆ ಸರ್ವಿಸ್ ರೋಡ್‌ಗೆ ಬೇಕಾಗುವಷ್ಟು ಜಾಗ ಕೂಡ ಬಿಟ್ಟಿಲ್ಲ. ತ್ರಾಸಿ ಅಂತಹ ಕೆಲವು ಪೇಟೆ ಪ್ರದೇಶಗಳಲ್ಲಿ ಅಗತ್ಯವಾಗಿ ಬೇಕಾಗಿರುವ ಸರ್ವಿಸ್ ರೋಡ್‌ಗಳಿಲ್ಲದೆ ಸಂಚಾರಕ್ಕೆ ಅಡೆತಡೆಗಳಾಗುತ್ತಿದೆ.
ಬೋರ್ಡ್ಗಳಲ್ಲಿರುವುದು ನದಿಗಳ ಮೂಲ ಹೆಸರಲ್ಲ ! :-
ಕುಂದಾಪುರದ ಸಂಗಮ್‌ನಲ್ಲಿ ಹರಿಯುವ ವಾರಾಹಿ ನದಿಗೆ ‘ಹಾಲಾಡಿ ನದಿ’ ಎಂದು, ಅರಾಟೆಯಲ್ಲಿ ಹರಿಯುವ ಸೌಪರ್ಣಿಕ ನದಿಗೆ ‘ಕೊಲ್ಲೂರು ನದಿ’ ಎಂದು, ಎಡಮಾವಿನ ಹೊಳೆಯ ಬದಲಾಗಿ ಚಕ್ರ ಹೊಳೆ ಎಂದು ನದಿಗಳ ಮೂಲ ಹೆಸರನ್ನೇ ಬದಲಾಯಿಸಿ ಫಲಕಗಳಲ್ಲಿ ಹಾಕಲಾಗಿದೆ.
ಒಟ್ಟಿನಲ್ಲಿ, ಕುಂದಾಪುರದಿ0ದ ಬೈಂದೂರಿಗೆ ಹೋಗುವ ೩೫-೩೬ ಕಿ.ಮೀ ವ್ಯಾಪ್ತಿಯ ರಾಷ್ಟಿಯ ಹೆದಾರಿಯ ದಿಗಳಲ್ಲಿ ಹಾಕಲಾಗಿರುವ ಸೂಚನಾ ಫಲಕಗಳಲ್ಲಿ ಅನೇಕ ತಪ್ಪುಗಳು, ಸಮಸ್ಯೆಗಳಿರುವುದರೊಂದಿಗೆ ಪ್ರಾದೇಶಿಕ ಭಾಷೆ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ಬಗ್ಗೆ ಸ್ಥಳಿಯಾಡಳಿತ, ಸಂಬಧಪಟ್ಟ ಹೆದ್ದಾರಿ ಪ್ರಾಧಿಕಾರ, ಇಲಾಖೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುವುದು ಸ್ಪಷ್ಟವಾಗಿ ತೋರುತ್ತಿದೆ. ತುರ್ತಾಗಿ ಈ ತಪ್ಪುಗಳನ್ನು, ಸಮಸ್ಯೆಗಳನ್ನು ಸರಿಪಡಿಸುವಂತಾಗಿ ಸಂಚಾರಿಗಳ ಗೊಂದಲಗಳಿಗೆ ಪರಿಹಾರ ಒದಗಿಸೇಕಾಗಿದೆ.
-ಶ್ರೀರಾಜ್ ವಕ್ವಾಡಿ

No comments:
Post a Comment