ಹೇಗೆ ಆಚರಿಸಲಿ ಹಬ್ಬ..!?
ಅದೆಲ್ಲಿದೋ ಮಹಾಮಾರಿ
ಒಕ್ಕರಿಸಿ ಬಿಟ್ಟಿದೆ ದೇಶಕ್ಕೆ,
ದುಡಿಮೆಯಿಲ್ಲ, ಎದೆಗೆ
ಭಾರ ಹೊರತು ಮತ್ತೇನಿಲ್ಲ..!
ಕಹಿಸುದ್ದಿಯೇ
ಪುಂಖಾನುಪುಂಖ
ಸಾಗರದಲೆಗಳಬ್ಬರಿಸಿದಂತೆ
ಕಿವಿಗೆ ಬಡಿಯುತ್ತಿರಲು...
ಸಿಹಿ ಯಾವ ಸಂತಸಕ್ಕೆ ..?
ಚಾಂದ್ರಮಾನದಿಂದ
ಸೌರಮಾನದೊರೆಗೂ
ಸದ್ಯ ದೇಶ ಲಾಕ್ಡೌನ್..!
ವರ್ಷದಾರಂಭದಲ್ಲೇ
ಒಬ್ಬಟ್ಟಿನ ಸಿಹಿ
ಹೂರಣ ಕಹಿಯಾಗಿದೆ..!
ವಿಕಾರಿ ಕಳೆದು
ಶಾರ್ವರಿಯಾಗಮನಕ್ಕೆ
ಸ್ತಬ್ಧ ಮೌನವೇ ಸ್ವಾಗತ..!
ಮುಗಿಯದ ಪ್ರೀತಿ ಕೊಟ್ಟ,
ಪಕ್ಕದ ಮನೆಯ ಬಂಧು
ಅದೆಲ್ಲೋ ಇದ್ದವರು
ಊರಿಗೆ ಬಂದು
ಐಸೋಲೇಟ್ನಲ್ಲಿದ್ದಾರೆ..!
ಹೆತ್ತ ಕರುಳಿನಾಕ್ರದಂನ
ನೀರವತೆಗೆ ಹೆಗಲಾಗಿದೆ..!
ಮಹಾಮಾರಿ
ಸಮೂಲ ಅಲುಗಾಡಿಸಿದೆ,
ಭೂಮಿ ಈಗ ಮರಣ
ಯಜ್ಞಕ್ಕೆ ಸಿದ್ಧಗೊಳಿಸಿದ ಸ್ಥಂಡಿಲ...!
ಯುಗಾದಿ ಅಂದರೇ,
ಕಾರಿರುಳು ಕಳೆಯುವುದಂತೆ..
ಮೌನವನ್ನು ಸರಿಸಿ
ಸಿಹಿ ನಿರೀಕ್ಷೆ ಜೊತೆಗಿರಲಿ,
ಸಮೃದ್ಧ ಬದುಕು
ಒದಗಿಸಿಕೊಡಲಿ,
ಯುಗಾದಿ ಸಂತಸ ತರಲಿ..
ಐಸೋಲೇಟ್ನಲ್ಲಿ
ಮಲಗಿದವರಿಗೂ...
ಹಬ್ಬ ಹಬ್ಬವಾಗಲಿ...!
-ಕಾವ್ಯ ಬೈರಾಗಿ


No comments:
Post a Comment