ಬರೆದವುಗಳು ಎಲ್ಲವೂ ಕಾವ್ಯವಾಗಬೇಕಿಲ್ಲ, ಕವಿಯಾಗಬೇಕೆಂದು ಏನೇನೋ ಬರೆಯುವುದಲ್ಲಾ. ಹೌದು, ಕವನಗಳಿಗೆ ಇಂತದ್ದೇ ರೂಪ ಸ್ವರೂಪಗಳಿಲ್ಲಾ ಎನ್ನುವ ಅರಿವು ನನಗೂ ಗೊತ್ತು. ಅದನ್ನು ಎಲ್ಲರೂ ಒಪ್ಪಲೇ ಬೇಕಾದ ವಿಷಯ. ಯಾವುದು ಭಾವ ಮತ್ತು ಭಾಷೆಗಳನ್ನು ಒಳಗೊಂಡು ವಸ್ತು ಅಥವಾ ವಿಷಯಕ್ಕೆ ಸ್ಪಂದಿಸಿ ಅಕ್ಷರಗಳಿಗಿಳಿಯುತ್ತದೆಯೋ ಅದೇ ಕವನ. ಆದರೇ ಕವನಗಳಿಗೆ ಒಂದು ಚೌಕಟ್ಟಿದೆ, ಲಯವಿದೆ, ಲಾಲಿತ್ಯವಿದೆ, ಓಗವಿದೆ, ವೇಗವಿದೆ ಎಂಬುವುದನ್ನು ಕವನ ಕಟ್ಟುವಾಗ ಕವಿಯಾದವನು ಮರೆಯುವಂತಿಲ್ಲಾ. ಮತ್ತು ಅದನ್ನು ಹೊರತಾಗಿ ಬರೆದ ಅಕ್ಷರಗಳ ಗುಂಪೆಲ್ಲವೂ ಕವನಗಳೆನ್ನಿಸಿಕೊಳ್ಳುವುದಿಲ್ಲಾ. ಇಂದು ಬರೆದವುಗಳನ್ನು ಕಾವ್ಯವಾಗಿಸುವ ತವಕದಲ್ಲಿ ಸಹೃದಯರ ಓದಿನ ಭಾವಕ್ಕೆ ಸೇತುವೆಯಾಗದೆ ಸೋತ ಕವಿಗಳ ದೊಡ್ಡ ಪಟ್ಟಿಯನ್ನೇ ನಾವು ತೆಗೆಯಬಹುದುದಾಗಿದೆ.
ಮಾಧ್ಯಮಗಳಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಹೊರಹಾಕುವುದಕ್ಕೆ ಅವಕಾಶಗಳು ದೊರಕದೆ ಹೋದಾಗ ಸಾಮಾಜಿಕ ಜಾಲತಾಣಗಳು ಎಲ್ಲರ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಿತು ಎನ್ನುವುದು ಅಕ್ಷರಶಃ ಸತ್ಯ. ಅಭಿವ್ಯಕ್ತಿ ಸಾಮಾಜಿಕ ಜಾಲ(ಮಾಯಾ)ತಾಣಗಳಲ್ಲಿ ಇಂದು ಅಭಿವ್ಯಕ್ತಿ ಒಂದು ಸ್ವಾತಂತ್ರ್ಯ ಎಂದು ಮರೆತು ವಿಚಿತ್ರವಾಗಿ ಬಳಕೆಯಾಗುತ್ತಿರುವುದು ಒಪ್ಪುವಂತದಲ್ಲಾ. ಏನೆನನ್ನೋ ಕವನಗಳೆಂದು, ಲೇಖನಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಒಂದಿಷ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ತರಾತುರಿಯಲ್ಲಿ ಕೆಲವರು ಕ್ರಿಯಾಶೀಲರಾಗಿರುವುದನ್ನು ನೋಡಿದರೆ ನಿಜಕ್ಕೂ ಸಾಹಿತ್ಯ ಇಂದು ಯಾವ ಸ್ಥಿತಿಗೆ ತಲುಪಿಬಿಟ್ಟಿದೆ ಎಂಬ ಪ್ರಶ್ನೆ ನನ್ನಂಥವನಿಗೆ ಕುಕ್ಕದೆ ಇರುವುದಿಲ್ಲ.
ಅಕ್ಷರಗಳನ್ನು ಮಾರುಗಟ್ಟಲೆ ಹೆಣೆಯುತ್ತಾ ಹೋಗಿ ಏನೇನೋ ಭಾವಗಳನ್ನು ಅರ್ಥೈಸಿಕೊಳ್ಳುವುದಕ್ಕಾಗದ ಹಾಗೆ ಬರೆಯುವುದು ಅಥವಾ ತುಂಬಾ ಸುಲಭವಾಗಿ ಅರ್ಥೈಸಿಕೊಳ್ಳುವುದಕ್ಕಾಗುವಷ್ಟು ಸರಳವಾಗಿ ಬರೆದರೆ, ಕಾವ್ಯದ ಒಳದನಿಯ ಬಗ್ಗೆ ತಲೆಕೆಡಿಸಿಕೊಳ್ಳದೆ ಎಂಥೆಂತದ್ದೋ ಶಬ್ದ ಭಂಡಾರದ ಪ್ರದರ್ಶನ ಮಾಡುವುದು ಕವನವಾಗುವುದಿಲ್ಲ. ಕವನಗಳು ಭಾವಕ್ಕೂ ಹಾಗೂ ಭಾವದೊಳಗಿನ ಭಾಷೆಗೂ ಸರಳವಾದ ನಿರೂಪಣೆಯನ್ನು ಹೊಂದಿ ಹೊಸದೊಂದು ಅರ್ಥ ನೀಡುವ ಹಾಗೆ ಇರಬೇಕು.
ನವೋದಯ ಸಾಹಿತ್ಯವು ಅಥವಾ ಕಾವ್ಯವು ಭಾವನೆಗಳ ತೀವ್ರತೆಗೆ, ಭಾವುಕತೆಗೆ, ಅಭಿವ್ಯಕ್ತಿಗೆ, ಉತ್ಸಾಹಕ್ಕೆ ಪ್ರಾಮುಖ್ಯತೆ ಕೊಟ್ಟು ಬೆಳೆಯಿತು. ಬಹುಶಃ ಅದನ್ನೇ ಅನುಸರಿಸುತ್ತಾ ಆಧುನಿಕ ಕವಿ ಪರಂಪರೆ ಬಂದಿತ್ತಾದರೂ ಇಂದಿನ ಕವಿಗಳಾದ ನಾವು ಕಾವ್ಯ ಅನುಸಂಧಾನಕ್ಕೆ ಎಷ್ಟರ ಮಟ್ಟಿಗೆ ಅಣಿಯಾಗಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಅಭಿವ್ಯಕ್ತಿಯಲ್ಲಿ ಆತ್ಮಪ್ರಜ್ಙೆಯ ತಾಕತ್ತು ಸಾಕ್ಷಿಯಾಗಿ ನಿಂತಾಗ ಮಾತ್ರ ಕಾವ್ಯವಾಗಬಲ್ಲದು ಅದನ್ನು ಸಾಧಿಸುವತ್ತ ಬರಹಗಾರರಾದ ನಾವು ಚಿತ್ತ ಹರಿಸಬೇಕಾಗಿದೆ.
ಪ್ರಚಾರದ ಗೀಳು ಅಥವಾ ಚಟದ ಬೆನ್ನು ಹತ್ತಿದ ಎಷ್ಟೋ ಸೋ ಕಾಲ್ಡ್ ಸಾಹಿತಿಗಳು/ ಕವಿಗಳು ಇಂದು ಸಾಹಿತ್ಯಕ್ಕೆ ಹೊಲಸಂಟಿಸಿದ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಆ ಪ್ರಚಾರದ ಹೊಲಸಿನ ತುಡಿತಗಳು ಸಾಫಲ್ಯ ತಂದು ಕೊಟ್ಟಿಲ್ಲ ಎಂಬುವುದೇ ಒಂದು ರೀತಿಯ ಸಮಧಾನಕರ ವಿಷಯ. ಕವಿಯಾಗುವುದಕ್ಕೆ ವಿಶೇಷ ಪ್ರಚಾರದ ಅಗತ್ಯವಿಲ್ಲ. ಕಾವ್ಯದ ಒಳದನಿಯೇ ಕವಿಗೆ ಪ್ರಚಾರ ಕೊಡಬೇಕು ಮತ್ತು ಕೊಡುತ್ತದೆ. ಆ ನಿಟ್ಟಿನಲ್ಲಿ ಸಾಹಿತ್ಯ ಹಾಗೂ ಕವಿ ಪರಂಪರೆ ಬೆಳೆಯಬೇಕಾಗಿದೆ.
ಕವಿ ಅಥವಾ ಬರಹಗಾರನಾಗುವ ಮುನ್ನ ಒಂದಿಷ್ಟು ಹಳೆಯದು ಮತ್ತು ಹೊಸ ಓದಿನೊಂದಿಗೆ, ಜೀವನಾನುಭಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಆಗ ಮಾತ್ರ ಕವಿಯ ಕವಿತ್ವಕ್ಕೆ ಬಲ ಬರುವುದಕ್ಕೆ ಸಾಧ್ಯವಾಗುತ್ತದೆ.
“ಎನಗಿಂತ ಕಿರಿಯವರಿಲ್ಲ”
-ಕಾವ್ಯ ಬೈರಾಗಿ
(ಶ್ರೀರಾಜ್ ವಕ್ವಾಡಿ)
(ಶ್ರೀರಾಜ್ ವಕ್ವಾಡಿ)


No comments:
Post a Comment