Saturday, March 28, 2020

ಕೊರೋನಾ ಢವಢವ | ಬೆಚ್ಚಿಬೀಳಿಸುವಂತಿದೆ ಸಿಡಿಡಿಇಪಿ ವರದಿ | ಎಚ್ಚರ ಎಚ್ಚರ..!


ದೇಶ ಅತ್ಯಂತ ದುಸ್ಥಿತಿಯಲ್ಲಿದೆ. ಪ್ರಪಂಚದ 200ಕ್ಕೂ ಹೆಚ್ಚು ದೇಶಗಳಿಗೆ ಇಂದು ಕೊರೋನಾ ಸೋಂಕು ತಟ್ಟಿದೆ. ಅಮೇರಿಕಾದ ಸಿಡಿಡಿಇಪಿ ಸಂಸ್ಥೆ ನಡೆಸಿದ ಅಧ್ಯಯನವೊಂದರ ಪ್ರಕಾರ, ಈ ಕೊರೋನಾ ಸೋಂಕು ಭಾರತಕ್ಕೆ ಅತ್ಯಂತ ಕೆಟ್ಟ ಪರಿಸ್ಥಿತಿ ತಂದೊಡ್ಡುತ್ತದೆ ಎಂಬ ಆಘಾತಕಾರಿ ವರದಿಯೊಂದನ್ನು ತಿಳಿಸಿದೆ. ಅದೇನೆಂದರೇ, ದೇಶದಲ್ಲಿ ಕೊರೋನಾ ಸೋಂಕಿತರ ಮಟ್ಟ ಗರಿಷ್ಠಕ್ಕೇರಲಿದೆಯಂತೆ, 24 ಕೋಟಿ ಮಂದಿಗೆ ಈ ಸೋಂಕು ಹರಡಲಿದೆ ಎಂಬ ಮಾಹಿತಿಯೊಂದನ್ನು ಸಿಡಿಡಿಇಪಿ (ದಿ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಆ್ಯಂಡ್ ಪ್ವಾಲಿಸಿ) ಸಂಸ್ಥೆ ಹೊರಹಾಕಿದೆ. ಎನ್ನುವಲ್ಲಿಗೆ, ಇದೇ ರೀತಿಯಲ್ಲಿ ಸರ್ಕಾರದ ‘ಲಾಕ್ಡೌನ್’ ಕಳಕಳಿಯ ನಿರ್ಬಂಧವನ್ನು ಮೀರಿ ಜನರು ಈ ಸಾಂಕ್ರಾಮಿಕ ರೋಗವನ್ನು ನಿರ್ಲಕ್ಷಿಸಿದ್ದೇ ಹೌದಾದಲ್ಲಿ ಸೋಂಕಿತರ ಪಟ್ಟಿ ಗರಿಷ್ಠ ಮಟ್ಟಕ್ಕೆ ಏರುವುದರಲ್ಲಿ ಏನೂ ಸಂಶಯವೇ ಇಲ್ಲ. ಈಗಾಗಲೇ ಎರಡನೇ ಹಂತದ ಗಡಿಯಲ್ಲಿರುವ ಭಾರತ, ಈ ಬಗ್ಗೆ ಇನ್ನೂ ಅಸಡ್ಡೆ ತೋರಿಸಿದ್ದಲ್ಲಿ ಚೀನಾ, ಇಟೆಲಿ, ಅಮೇರಿಕಾಕ್ಕೆ ಆದಂತಹ ಪರಿಸ್ಥಿತಿಗೆ ತಲುಪುದರಲ್ಲಿ ಭಿನ್ನ ಮಾತಿಲ್ಲ.


ಇದು ಭಾರತಕ್ಕೆ, ಸಿಡಿಡಿಇಪಿ ಕೊಟ್ಟಿರುವ ಎಚ್ಚರಿಕೆಯ ಕರೆಗಂಟೆ. ಒಂದು ವೇಳೆ ಈ ಮಟ್ಟಕ್ಕೆ ತಲುಪಿದ್ದಲ್ಲಿ ಅದನ್ನು ನಿಭಾಯಿಸುವ ಸಾಮರ್ಥ್ಯ ದೇಶಕ್ಕೆ ಇದೆಯಾ..? ವೈದ್ಯಕೀಯ ಸೌಲಭ್ಯಗಳು ಲಭ್ಯವಿದೆಯಾ..? ಅಗತ್ಯ ಮಟ್ಟಕ್ಕೆ ಸೋಂಕಿನ ಪರೀಕ್ಷೆಗೆ ಬೇಕಾದ ವ್ಯವಸ್ಥೆಗಳಿವೆಯಾ..? ಆರ್ಥಿಕ ಸ್ಥಿತಿಗತಿಗಳೇನು..? ಎಂಬೆಲ್ಲಾ ಪ್ರಶ್ನೆಗಳಿಗೆ ತುರ್ತಾಗಿ ಸರ್ಕಾರ ಉತ್ತರ ಕಂಡುಕೊಳ್ಳಬೇಕಾಗಿದೆ.
ದೇಶದಲ್ಲಿ, ರಾಜ್ಯದಲ್ಲಿ ಕೊರೋನಾ ಸೋಂಕಿನ ಹೊಸ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ವೇಗವನ್ನು ಕಂಡುಕೊಳ್ಳುತ್ತಿರುವ ಭೀತಿ ಒಂದೆಡೆಯಾದರೇ, ಮತ್ತೊಂದೆಡೆ.. ಎಷ್ಟೇ ನಿರ್ಬಂಧಗಳನ್ನು, ಕಟ್ಟೆಚ್ಚರಗಳನ್ನು ಹೂಡಿದರೂ ಜನ ‘ಡೋಂಟ್ ಕೇರ್’ ಧೋರಣೆ ತೋರಿಸುತ್ತಿರುವುದನ್ನು ನಿಭಾಯಿಸುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಎರಡನೇ ಹಂತದ ನಿರ್ಣಾಯಕ ಘಟ್ಟದಲ್ಲಿರುವ ಭಾರತದಲ್ಲಿ, ಮುಂದಿನ ಒಂದು ವಾರದ ಸಮಯದಲ್ಲಿ ಈ ಸೋಂಕು ನಿಯಂತ್ರಣಕ್ಕೆ ಬಂದಲ್ಲಿ ಅಪಾಯದ ಮೂರನೇ ಹಂತಕ್ಕೆ ಹೋಗವುದನ್ನು ತಡೆಗಟ್ಟಬಹುದು ಎನ್ನುವುದನ್ನು ವರದಿ ಸ್ಪಷ್ಟವಾಗಿ ತಿಳಿಹೇಳಿದೆ. ರಾಜ್ಯದ ಸ್ಥಿತಿಯೂ ಗಂಭೀರವಾಗಿದೆ. ದೇಶದಲ್ಲಿ ಹೆಚ್ಚು ಸೋಂಕು ಧೃಡಗೊಂಡಿರುವ ರಾಜ್ಯವಾರು ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ ಸದ್ಯದ ಮಟ್ಟಿಗೆ ಮೂರನೇ ಸ್ಥಾನದಲ್ಲಿದೆ. ಜನ ಇನ್ನೂ ಎಚ್ಚೆತ್ತುಗೊಂಡಿಲ್ಲ.


ಇತ್ತ, ದೇಶದಾದ್ಯಂತ ದಿನಗೂಲಿ ಕಾರ್ಮಿಕರು, ತಳ್ಳುಗಾಡಿ ವ್ಯಾಪಾರಿಗಳು, ಬಡವರ ಸ್ಥಿತಿಯಂತೂ ಸಂಕಷ್ಟಕ್ಕೀಡಾಗಿ ಬಿಟ್ಟಿದೆ. ಇನ್ನು, ಪದವಿ, ಸ್ನಾತಕೋತ್ತರ ಪದವಿಗಳಾದಿಗಳಲ್ಲಿ ಕೊನೆಯ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವವರನ್ನೆಲ್ಲರನ್ನೊಳಗೊಂಡು ವಿದ್ಯಾರ್ಥಿಗಳ ಭವಿಷ್ಯ, ಈ ಕೊರೋನಾದ ಪರಿಣಾಮದಿಂದಾಗಿ ಖಾಲಿ ಖಾಲಿಯಾಗಿ ಕಾಣಿಸಿದಂತಿದೆ. ಮೊದಲೇ ಉದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಭಾರತದಲ್ಲಿ, ಈ ಕೊರೋನಾದ ಕಾರಣದಿಂದಾಗಿ ಮತ್ತಷ್ಟು ಈ ಸಮಸ್ಯೆ ಉಲ್ಬಣಿಸುವುದರಲ್ಲಿ ಸಂದೇಹವಿಲ್ಲ. ಸದ್ಯದ ಮಟ್ಟಿಗೆ ನೋಡುವುದಾದರೇ, ಭವಿಷ್ಯ ಚಿಂತಾಜನಕವಾಗಿದೆ ಅಂತನ್ನಿಸುತ್ತಿದೆ. ಎಲ್ಲರಿಗಿನ್ನು ಹೊಸ ಬದುಕು. ಎಲ್ಲರ ಬದುಕಿಗಿನ್ನು ಪುನರಾರಂಭ.


ಕೊರೋನಾದಂತಹ ಸೋಂಕು ಪ್ರಪಂಚಕ್ಕೆ ಬಂದಿರುವುದು ಇದೇ ಮೊದಲೇನಲ್ಲ. ಇದನ್ನು ಖಂಡಿತ ಹೋಗಲಾಡಿಸುವುದಕ್ಕೆ ಸಾಧ್ಯವಿದೆ. ದಿ ಬ್ಲಾಕ್ ಡೆತ್(ಪ್ಲೇಗ್), ಪ್ಲೂ ನಂತಹ ಜಗನ್ಮಾರಿ ಸೋಂಕುಗಳನ್ನೇ ಪ್ರಪಂಚ ನಿಯಂತ್ರಣಕ್ಕೆ ತಂದು ಅವುಗಳಿಂದ ಮುಕ್ತವಾದ ಉದಾಹಣೆಯಿದೆ. ಪ್ಲೇಗ್‌ನಂತಹ ಮಹಾಮಾರಿ ಸೋಂಕಿಗೆ ಯೂರೋಪ್ ಖಂಡದಲ್ಲಿ ಬರೋಬ್ಬರಿ 5 ಕೋಟಿ ಮಂದಿ ಸತ್ತಿದ್ದರಂತೆ. ದೇಶವನ್ನೂ ಈ ಸೋಂಕು ಬಿಟ್ಟಿರಲಿಲ್ಲ. ಸೂರತ್‌ನ್ನು ಅಡಿಮೇಲನ್ನಾಗಿ ಮಾಡಿತ್ತು ಪ್ಲೇಗ್. ಯುರೋಪ್ ಆ ಮಹಾಮಾರಿಯನ್ನೂ ಹಿಂದೋಡಿಸಿ ಮತ್ತೆ ಚಿಗುರಿ ಬೆಳೆದು ನಿಂತಿಲ್ವೇ..? ಗುಜರಾತ್‌ನ ಸೂರತ್, ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದಾಗಿ, ಪ್ರಪಂಚದ ಅತಿ ದೊಡ್ಡ ನಗರಗಳ ಪಟ್ಟಿಯಲ್ಲಿ 36ನೇ ಸ್ಥಾನವನ್ನು ಪಡೆದಿಲ್ವೇ..? ಆ ಉದಾಹರಣೆಯನ್ನು ಮುಂದಿಟ್ಟುಕೊಂಡು ನೋಡುವುದಾದರೇ ಈ ಕೊರೋನಾ ಸೋಂಕನ್ನು ನಿಯಂತ್ರಣಕ್ಕೆ ತರುವುದು ದೊಡ್ಡದೇನಲ್ಲ ಅನ್ನಿಸುತ್ತದೆ. ಹಾಗಂತ.. ನಿರ್ಲಕ್ಷ್ಯ ಮಾಡಿದರೇ ಎಲ್ಲವೂ ದೊಡ್ಡದೇ. ಈ ಮಹಾಮಾರಿ ಕೊರೋನಾ ವೈರಸ್ಸನ್ನು ನಿಯಂತ್ರಣಕ್ಕೆ ತರುವಲ್ಲಿ ಸರ್ಕಾರ ಎಷ್ಟು ಜವಾಬ್ದಾರಿ ಹೊರುತ್ತಿದೆಯೋ ಅದರ ಅರ್ಧದಷ್ಟು ಭಾಗ ದೇಶದ ಜನತೆ ಹೊರಬೇಕಾಗಿದೆ. ಈ ವೈರಸ್ಸನ್ನು ನಿಯಂತ್ರಿಸುವಲ್ಲಿ ದೇಶದ ಜನತೆಯೂ ಮಹತ್ತರವಾದ ಪಾಲ್ಪಡೆಯಬೇಕಿದೆ. ಯಾವ ಸಂಸ್ಥೆಯ ವರದಿ ಏನೇ ಹೇಳಲಿ, ಜಾಗೃತೆ ನಮ್ಮಲ್ಲಿದ್ದರೇ, ಆ ಎಲ್ಲಾ ಸಂಸ್ಥೆಗಳು ಮಾಡಿದ ಸಮೀಕ್ಷೆಗಳ ವರದಿಯನ್ನು ಸುಳ್ಳಾಗಿಸಬಹುದಾದ ಶಕ್ತಿ ನಮ್ಮಲ್ಲಿನ ‘ನಿರ್ಧಾರ’ಕ್ಕಿದೆ..! “ನಮ್ಮ ಆರೋಗ್ಯ’, ‘ನಮ್ಮ ದೇಶ’ ನಮ್ಮ ಜವಾಬ್ದಾರಿ” ಏನಂತೀರಿ..?
ಬಿ ಸೇಫ್, ಟೇಕ್ ಕೇರ್.
-ಶ್ರೀರಾಜ್ ವಕ್ವಾಡಿ  


No comments:

Post a Comment