Wednesday, February 5, 2020

‘ಕಹಿ ಸಿಹಿ’ ಬಜೆಟ್..!


ಬಜೆಟ್ ಎಂದರೇ ಇಡೀ ದೇಶದ ಸಂಪೂರ್ಣ ಅಭಿವೃದ್ಧಿಯ ನೀಲಿ ನಕ್ಷೆ. ಬಜೆಟ್ ದೇಶದ ಆರ್ಥಿಕತೆಯ ಮೇಲೆ ಪೂರ್ಣ ಪ್ರಮಾಣದಲ್ಲಿ ಪ್ರಭಾವ ಬೀರುವುದರಲ್ಲಿ ಸಂಶಯವೇ ಇಲ್ಲ. ೨೦೨೦-೨೦೨೧ರ ಕೇಂದ್ರ ಬಜೆಟ್‌ನ್ನು ಹಣಕಾಸು ಸಚಿವೆ ಕಳೆದ ಶನಿವಾರ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಒಟ್ಟು ಬಜೆಟ್‌ನ ಒಂದು ತೇಲ್ನೋಟವನ್ನು ಗಮನಿಸುವುದಾದರೇ, ಈ ಬಾರಿಯೂ ಕೂಡ ಕೇಂದ್ರ ಬಿಜೆಪಿ ಸರ್ಕಾರ ತನ್ನ ಕಾರ್ಪೋರೇಟ್ ಧೋರಣೆಯನ್ನು ಮರೆತು ಬಜೆಟ್ ಮಂಡಿಸಿದಂತೆ ಕಾಣಿಸುತ್ತಿಲ್ಲ. ನಿರ್ಮಲಾ ಸೀತಾರಾಮನ್ ಮೂರು ಪ್ರಮುಖ ಅಂಶಗಳಾದ ಆರ್ಥಿಕ ಪ್ರಗತಿ, ದೇಶದ ಆಕಾಂಕ್ಷೆ, ಸಾಮಾಜಿಕ ಕಾಳಜಿಯನ್ನು ಗಣನೆಗೆ ತೆಗೆದುಕೊಂಡರೂ ಕೂಡ ಸರ್ಕಾರದ ಹಿಡಿತದಲ್ಲಿರುವ ಕೆಲವು  ಷೇರುಗಳಿಗೆ ಮೊದಲ ಪ್ರಾಶಸ್ಯ ನೀಡಿದಂತಿದೆ. ರೈತರಿಗೆ ಕೃಷಿ ಸಾಲವನನ್ನು ಒಳಗೊಂಡು ಪಂಪ್‌ಸೆಟ್‌ಗೆ ಅಗತ್ಯವಾಗಿ ಬೇಕಾಗುವ ಸೋಲಾರ್ ಶಕ್ತಿಯು ಒದಗಿಸುವ ಕುಸುಮ್ ಯೋಜನೆ,  ಗ್ರಾಮೀಣಾಭಿವೃದ್ಧಿಗಾಗಿ ೨.೮೩ ಲಕ್ಷ ಕೋಟಿ ರು, ಮೀನುಗಾರಿಕೆಗೆ ಸಂಬಂಧಿಸಿದಂತೆ ಸಾಗರ್ ಮಿತ್ರ ಯೋಜನೆ, ಮಹಿಳಾ ಸಬಲೀಕರಣ, ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ ಇಂದ್ರ ಧನುಷ್, ಶಿಕ್ಷಣ ವಂಚಿತರಿಗೆ ಆನ್‌ಲೈನ್ ಪದವಿಯಂತಹ ಕೆಲವು ಯೋಜನೆಗಳನ್ನು ಹೊರತಾಗಿ ಬಜೆಟ್‌ನಲ್ಲಿ  ಬೇರೇನೂ ವಿಶೇಷತೆಗಳಿಲ್ಲ. ಇಂಧನಗಳನ್ನು ಸೇರಿ ಚಿನ್ನ ಮೊದಲಾದವುಗಳ ತೆರಿಗೆಯನ್ನು ಬಜೆಟ್‌ನಲ್ಲಿ ಏರಿಸಲಾಗಿದೆ.
ಕಾರ್ಪೋರೇಟ್ ಸೆಕ್ಟರ್‌ಗಳಿಗೆ ಬೇಕಾಗುವಷ್ಟು ಈ ಬಜೆಟ್ ಭರಪೂರ ಕೊಡುಗೆ ನೀಡಿದೆ ಎಂದರೆ ತಪ್ಪಿಲ್ಲ. ಜನಸಾಮಾನ್ಯ, ಮಧ್ಯಮ ವರ್ಗದ ಜನರನ್ನು ಈ ಬಾರಿಯ ಬಜೆಟ್‌ನಲ್ಲಿಯೂ ದೂರ ಇರಿಸಲಾಗಿದೆ ಎನ್ನುವುದು ೨೦೨೦-೨೦೨೧ ಬಜೆಟ್‌ನಲ್ಲಿ ಸ್ಪಷ್ಟವಾಗುತ್ತದೆ. ಆರ್ಥಿಕ ಸಮಸ್ಯೆ ನೆಲಕಚ್ಚಿದ ಉದಾಹರಣೆ ಕಣ್ಮುಂದಿದ್ದರೂ ಕೂಡ ಕೇಂದ್ರ ಆ ಬಗ್ಗೆ ಹೆಚ್ಚೇನೂ ಗಮನ ಹರಿಸಿದಂತೆ ಕಾಣಿಸುತ್ತಿಲ್ಲ. ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ಇನ್ನೂ ಕೂಡ ಅಗತ್ಯ ಯಾವುದು ಎಂದು ಗುರುತಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎನ್ನುವುದು ಈ ಬಜೆಟ್ ತಿಳಿಸಿ ಕೊಡುವುದರಲ್ಲಿ ಏನೂ ಸಂದೇಹವಿಲ್ಲ.
ಒಟ್ಟು ಮೊತ್ತ ೨೮.೮೬  ಲಕ್ಷ ಕೋಟಿ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಬರೋಬ್ಬರಿ ೨ ಗಂಟೆ ೨೦ ನಿಮಿಷಗಳನ್ನು ತೆಗೆದುಕೊಂಡು  ಸಾಮಾನ್ಯದಲ್ಲಿ ಅತಿ ಸಾಮಾನ್ಯ ಬಜೆಟ್‌ನ್ನು ವೈಭವೀಕರಿಸಿದ್ದನ್ನು ಬಿಟ್ಟರೇ ಬೇರೇನೂ ಫಲ ನೀಡಲಿಲ್ಲ. ೨೦೨೦-೨೧ರ ಬಜೆಟ್ ಕೂಡ ಸಿಹಿಕಹಿಗಳ ಸಮ್ಮಿಲನದಿಂದಲೇ ಕೂಡಿ ಜನ ಸಾಮಾನ್ಯರಿಗೆ ಅರ್ಥೈಸಿಕೊಳ್ಳುವುದಕ್ಕೆ ಕಷ್ಟವಾಗಿ ಬಹು ನಿರೀಕ್ಷೆಯನ್ನು ಹುಸಿಗೊಳಿಸಿದೆ ಎನ್ನುವುದು ಸ್ಪಷ್ಟ.
-ಶ್ರೀರಾಜ್ ವಕ್ವಾಡಿ  

No comments:

Post a Comment