ತಮಿಳುನಾಡಿನಲ್ಲಿ ಡಿಎಂಕೆ ಜೊತೆಗಿನ ಮೈತ್ರಿ ಮುರಿದುಕೊಂಡಿರುವುದು ಸಿದ್ಧಾಂತಗಳ ನಡುವಿನ ಸಮನ್ವಯದ ಕೊರತೆ ಎಂದು ಎದ್ದು ಕಾಣಿಸುತ್ತಿದೆ. ಇದು ಖಂಡಿತವಾಗಿಯೂ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಪೆಟ್ಟು. ಒಂದು ವೇಳೆ ಕಾಂಗ್ರೆಸ್ ಇದನ್ನು 'ಜಾಣ ನಡೆ' ಎಂದು ಭಾವಿಸಿದ್ದರೆ, ಅದು ರಾಜಕೀಯ ವಾಸ್ತವಕ್ಕಿಂತ ಭಿನ್ನವಾದ ಭ್ರಮೆಯಾಗುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ನಿಲುವು ಮತ್ತು ಒಲವಾಗಿರುವ ಕೋಮುವಾದಿ ಶಕ್ತಿಗಳನ್ನು ಹಣಿಯಲು ಬೇಕಾದ ಐಕ್ಯತೆಯನ್ನು ಈ ನಿರ್ಧಾರ ದುರ್ಬಲಗೊಳಿಸಿದೆ.
ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ದಶಕಗಳ ಕಾಲದ ಮೈತ್ರಿಯಲ್ಲಿ ಬಿರುಕು ಮೂಡಿರುವುದು ಭಾರತೀಯ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿರುವುದು ನಿಜ. ಇದು ಕೇವಲ ಒಂದು ಚುನಾವಣಾ ಮೈತ್ರಿಯ ಅಂತ್ಯವಲ್ಲ; ಬದಲಾಗಿ ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಕೋಮುವಾದಿ ವಿರೋಧಿ ಹೋರಾಟದ ಮುಂದಿರುವ ಸವಾಲುಗಳ ಮುನ್ಸೂಚನೆಯಾಗಿದೆ.
ಬಿಜೆಪಿಯ ಕೇಂದ್ರೀಕೃತ ಅಧಿಕಾರವನ್ನು ಎದುರಿಸಲು ಪ್ರಾದೇಶಿಕ ಅಸ್ಮಿತೆ ಮತ್ತು ರಾಷ್ಟ್ರೀಯ ಹೋರಾಟ ಒಂದಾಗಬೇಕು ಎಂಬುದು ಇಂಡಿಯಾ ಮೈತ್ರಿಕೂಟದ ಆಶಯವಾಗಿತ್ತು. ತಮಿಳುನಾಡಿನಲ್ಲಿ ಡಿಎಂಕೆ ಈ ಮೈತ್ರಿಕೂಟದ ಭದ್ರಕೋಟೆಯಾಗಿತ್ತು. ದಕ್ಷಿಣ ಭಾರತದಲ್ಲಿ ಸಂಘ ಪರಿವಾರದ ಸಿದ್ಧಾಂತವನ್ನು ತಡೆಯಲು ಡಿಎಂಕೆ-ಕಾಂಗ್ರೆಸ್ ಮೈತ್ರಿ ಅನಿವಾರ್ಯವಾಗಿತ್ತು. ಈಗ ಈ ಮೈತ್ರಿ ಮುರಿದುಬಿದ್ದರೆ, ಅದು ವಿರೋಧ ಪಕ್ಷಗಳ ಒಗ್ಗಟ್ಟನ್ನು ಅಸ್ಥಿರಗೊಳಿಸಿ, ಶತ್ರುಗಳಿಗೆ ಹಾದಿ ಸುಗಮ ಮಾಡಿಕೊಡಬಹುದು ಎನ್ನುವ ರಾಜಕೀಯ ವಿಶ್ಲೇಷಣೆ ಕೇಳಿ ಬರುತ್ತಿದೆ. ಕಾಂಗ್ರೆಸ್ ಅತಿಯಾದ ಆತ್ಮವಿಶ್ವಾಸದಿಂದ ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸುವುದು ಐತಿಹಾಸಿಕ ತಪ್ಪಾಗಬಹುದು. ಇದು ಮೈತ್ರಿಕೂಟದ ಇತರ ಸದಸ್ಯರಲ್ಲೂ ಅನಿಶ್ಚಿತತೆಯನ್ನು ಮೂಡಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಇಂಡಿಯಾ ಮೈತ್ರಿಕೂಟದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಗಟ್ಟಿಯಾಗಿ ಹೇಳುತ್ತಿದ್ದವರಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟ್ಯಾಲಿನ್ ಮೊದಲಿಗರು. ರಾಹುಲ್ ಗಾಂಧಿ ಅವರ ರಾಜಕೀಯ ನಡೆಗೆ ಸ್ಟ್ಯಾಲಿನ್ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ತಮಿಳುನಾಡಿನ ರಾಜಕೀಯ ಸಮೀಕರಣವೇ ಬದಲಾಯಿಸಿದ 2026ರ ವಿಧಾನಸಭೆಯ ಚುನಾವಣೆಯ ಫಲಿತಾಂಶದ ಬಳಿಕ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ ತೊರೆದು ಕಾಂಗ್ರೆಸ್ ದಳಪತಿ ವಿಜಯ್ ನೇತೃತ್ವದ ಟಿವಿಕೆಗೆ ಸರ್ಕಾರ ಮಾಡುವುದಕ್ಕೆ ಷರತ್ತು ಬದ್ಧ ಊರುಗೋಲಾಗಿರುವುದು ಈಗ ರಾಷ್ಟ್ರೀಯ ರಾಜಕಾರಣದಲ್ಲಿ 'ಸ್ಪಾಟ್ ಲೈಟ್' ಆಗುತ್ತಿದೆ.
'ಡಿಎಂಕೆಯನ್ನು ಕಾಂಗ್ರೆಸ್ ಕ್ಷಮಿಸಿದ್ದೇ ದೊಡ್ಡದು!'
ಹಾಗೆ ನೋಡುವುದಕ್ಕೆ ಹೋದರೇ, ಡಿಎಂಕೆ ಈ ಹಿಂದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು, ರಾಜೀವ್ ಗಾಂಧಿ ಅವರ ಹತ್ಯೆಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (LTTE - Liberation Tigers of Tamil Eelam) ಜೊತೆಗೆ ಡಿಎಂಕೆ ಶಾಮೀಲು ಇತ್ತು ಎನ್ನುವ ರಾಜಕೀಯ ಚರ್ಚೆಗಳಾಗಿತ್ತು. ಅವೆಲ್ಲವನ್ನೂ ಮರೆತು ಡಿಎಂಕೆ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದೇ ದೊಡ್ಡದು ಎನ್ನುವುದು ಇಲ್ಲಿ ಉಲ್ಲೇಖನೀಯ.
ಡಿಎಂಕೆಯ ಇತಿಹಾಸ ಗಮನಿಸಿದರೆ, ಈಗ ಕುಸ್ತಿ, ಆಗ ದೋಸ್ತಿ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಡಿಎಂಕೆ ಮತ್ತು ಬಿಜೆಪಿ ಪರಸ್ಪರ ವಿರೋಧಿಗಳಾಗಿದ್ದರೂ, 2001ರ ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಕೈಜೋಡಿಸಿದ್ದವು ಎನ್ನುವುದು ಕುತೂಹಲಕಾರಿ ಸಂಗತಿ. ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಡಿಎಂಕೆ ಮತ್ತು ಬಿಜೆಪಿ ಒಂದಾಗಿ ಸ್ಪರ್ಧಿಸಿದ ಮೊದಲ ಮತ್ತು ಏಕೈಕ ಚುನಾವಣೆ ಅದಾಗಿತ್ತು. ಆದರೆ ಈ ಪ್ರಯೋಗವು ಮತದಾರರ ಮನಗೆಲ್ಲುವಲ್ಲಿ ವಿಫಲವಾಗಿತ್ತು.
ಆ ಚುನಾವಣೆಯಲ್ಲಿ ಡಿಎಂಕೆ ಕೇವಲ 31 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಜೆ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಈ ಸೋಲಿನ ಬಳಿಕ ಎರಡೂ ಪಕ್ಷಗಳು ತಮ್ಮ ರಾಜಕೀಯ ಹಾದಿಯನ್ನು ಬದಲಿಸಿಕೊಂಡವು. ಡಿಎಂಕೆ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಕಾಂಗ್ರೆಸ್ ನಿಲುವನ್ನು ಪ್ರಶ್ನಿಸುವ ಡಿಎಂಕೆ, ತನ್ನ ಇತಿಹಾಸವನ್ನು ಗಮನಿಸಿದರೆ, ಸೈಲೆಂಟ್ ಆಗಬಹುದು. ಕಾಂಗ್ರೆಸ್ ಟಿವಿಕೆ ಜೊತೆಗೆ ಮೈತ್ರಿಯಾಗುವಾಗ ಮುಂದಿಟ್ಟ ಷರತ್ತು(ಕೋಮುವಾದಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಾದರೇ ನಾವು ನಿಮಗೆ ಸರ್ಕಾರ ರಚನೆಗೆ ಸಹಾಯ ಮಾಡುವುದಿಲ್ಲ) ಕಾಂಗ್ರೆಸ್ ನ ನಿಲುವನ್ನು ಸ್ಪಷ್ಟವಾಗಿ ಹೇಳಿತ್ತು ಇಲ್ಲಿ ಮುಖ್ಯಾಂಶ.
ಸ್ವಾವಲಂಬನೆಯ ಕನಸು ಮತ್ತು ಡಿಎಂಕೆಯ ಮೇಲಿನ ಅವಲಂಬನೆ ಮುಕ್ತ
ಕಾಂಗ್ರೆಸ್ ಒಂದು ವೇಳೆ ಈ ನಿರ್ಧಾರವನ್ನು ಸ್ವತಂತ್ರವಾಗಿ ಬೆಳೆಯುವ ಉದ್ದೇಶದಿಂದ ಮಾಡಿದ್ದರೆ, ಅದನ್ನು 'ಜಾಣ ನಡೆ' ಎನ್ನುವುದಕ್ಕಿಂತ 'ಜುಗಾರಿ' ಎನ್ನಬಹುದು. ತಮಿಳುನಾಡಿನಲ್ಲಿ ಕಾಂಗ್ರೆಸ್ ಕೇವಲ ಡಿಎಂಕೆಯ ನೆರಳಾಗಿ ಉಳಿದಿದೆ ಎಂಬ ಆತಂಕ ಪಕ್ಷದ ಒಳಗಿದೆ. ತನ್ನ ಅಸ್ತಿತ್ವವನ್ನು ಮರುಸ್ಥಾಪಿಸಲು ಕಾಂಗ್ರೆಸ್ ಈ ಹಾದಿ ತುಳಿಯುತ್ತಿರಬಹುದು. ಆದರೆ, ಕೆಳಮಟ್ಟದಲ್ಲಿ ಸಂಘಟನಾ ಶಕ್ತಿ ಇಲ್ಲದೆ ಇಂತಹ ಸಾಹಸಕ್ಕೆ ಕೈ ಹಾಕುವುದು ಎಷ್ಟು ಪ್ರಾಯೋಗಿಕ ಎನ್ನುವುದು ಪ್ರಶ್ನೆ. ಕೆಲವು ಕ್ಷೇತ್ರಗಳಲ್ಲಿ ಡಿಎಂಕೆಯ ಆಡಳಿತ ವಿರೋಧಿ ಅಲೆಯ ಹೊಡೆತ ತನಗೂ ಬೀಳಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ಸಿಗಿತ್ತು. ಆದರೆ, ಫ್ಯಾಸಿಸಂ ವಿರುದ್ಧದ ಹೋರಾಟದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕಾದ್ದು ಇಂದಿನ ತುರ್ತು ಅಗತ್ಯ. ವಿಜಯ್ ಕೂಡ ಈಗ ಬಿಜೆಪಿಯ ಸೈದ್ಧಾಂತಿಕ ನಿಲುವನ್ನು ಟೀಕಿಸುತ್ತಿದ್ದ ಕಾರಣಕ್ಕೆ ಸರ್ಕಾರ ರಚನೆಗೆ ಕಾಂಗ್ರೆಸ್ ಕೈ ಜೋಡಿಸಿದೆ. ಮುಂದೆ ಇಂಡಿಯಾ ಮೈತ್ರಿಕೂಟಕ್ಕೆ ವಿಜಯ್ ಕೂಡ ಆನೆಬಲ ಆಗಬಹುದು ಎನ್ನುವುದು ಕಾಂಗ್ರೆಸ್ ನ ಲೆಕ್ಕಾಚಾರ ಇರಬಹುದು.
ಒಕ್ಕೂಟ ವ್ಯವಸ್ಥೆಗೆ ಸೋಲೆ !?
ಬಿಜೆಪಿ ಪ್ರೇರಿತ ಕೇಂದ್ರೀಕರಣದ ವಿರುದ್ಧ ಪ್ರಾದೇಶಿಕ ಪಕ್ಷಗಳು ಮತ್ತು ರಾಷ್ಟ್ರೀಯ ಪಕ್ಷಗಳು ಒಟ್ಟಾಗಬೇಕಿತ್ತು. ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿ ಮುರಿದುಕೊಂಡಿರುವುದು ಜನಸಾಮಾನ್ಯರ ಹೋರಾಟಕ್ಕೆ ಹಿನ್ನಡೆಯೇ ಹೊರತು ಲಾಭವಲ್ಲ. ಇದು ಇಂಡಿಯಾ ಮೈತ್ರಿಕೂಟದ ಮುಂದಿನ ಹೆಜ್ಜೆಗೂ ಸವಾಲಾಗಿ ಪರಿಣಮಿಸಬಹುದು. 2027ರಲ್ಲಿ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಜೊತೆಗೂಡಿ ಹೋರಾಡುತ್ತದೆ ಎಂದು ಆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇತ್ತೀಚಿಗಷ್ಟೇ ಹೇಳಿದ್ದರು. ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿ ತೊರೆದ ಕಾಂಗ್ರೆಸ್ ಬಗ್ಗೆ ಸಣ್ಣ ಅಸಮಾಧಾನವನ್ನು ಈಗ ಅಖಿಲೇಶ್ ಯಾದವ್ ವ್ಯಕ್ತಪಡಿಸಿದ್ದಾರೆ. ಇದು ಇಂಡಿಯಾ ಮೈತ್ರಿಕೂಟದ ಪಕ್ಷದ ಆಂತರಿಕ ಭಿನ್ನಮತಕ್ಕೆ ನಾಂದಿ ಹಾಡಬಹುದು ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಕಾಂಗ್ರೆಸ್ ತನ್ನ 'ದೊಡ್ಡಣ್ಣ'ನ ಮನಸ್ಥಿತಿಯನ್ನು ಬಿಟ್ಟು, ಡಿಎಂಕೆಯಂತಹ ಜಾತ್ಯತೀತ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸೋಲುತ್ತಿರುವುದು ಮೈತ್ರಿಕೂಟದ ಭವಿಷ್ಯಕ್ಕೆ ಕಪ್ಪು ಚುಕ್ಕೆಯಾಗಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿರುವ ತುರ್ತಿದೆ.
ಒಟ್ಟಿನಲ್ಲಿ, ತಮಿಳುನಾಡಿನಲ್ಲಿ ಡಿಎಂಕೆ ಜೊತೆಗಿನ ಮೈತ್ರಿ ಮುರಿದುಕೊಂಡಿರುವುದು ಸಿದ್ಧಾಂತಗಳ ನಡುವಿನ ಸಮನ್ವಯದ ಕೊರತೆ ಎಂದು ಎದ್ದು ಕಾಣಿಸುತ್ತಿದೆ. ಇದು ಖಂಡಿತವಾಗಿಯೂ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಪೆಟ್ಟು. ಒಂದು ವೇಳೆ ಕಾಂಗ್ರೆಸ್ ಇದನ್ನು 'ಜಾಣ ನಡೆ' ಎಂದು ಭಾವಿಸಿದ್ದರೆ, ಅದು ರಾಜಕೀಯ ವಾಸ್ತವಕ್ಕಿಂತ ಭಿನ್ನವಾದ ಭ್ರಮೆಯಾಗುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ನಿಲುವು ಮತ್ತು ಒಲವಾಗಿರುವ ಕೋಮುವಾದಿ ಶಕ್ತಿಗಳನ್ನು ಹಣಿಯಲು ಬೇಕಾದ ಐಕ್ಯತೆಯನ್ನು ಈ ನಿರ್ಧಾರ ದುರ್ಬಲಗೊಳಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
-ಶ್ರೀರಾಜ್ ವಕ್ವಾಡಿ

No comments:
Post a Comment