(ತಮಿಳುನಾಡಿನ ಸಿಎಂ ಸಿ. ಜೋಸೆಫ್ ವಿಜಯ್ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ)
ತಮಿಳುನಾಡಿನ ಈ ರಾಜಕೀಯ ಸಮೀಕರಣವನ್ನು ಗಮನಿಸಿದರೆ, ರಾಹುಲ್ ಗಾಂಧಿ, ಡಿಎಂಕೆಯ ಹಳೆಯ ದ್ರಾವಿಡ ಸಿದ್ಧಾಂತವನ್ನು ಬಿಟ್ಟು ಬಹಳ ದೊಡ್ಡ ಸವಾಲನ್ನು ಎದುರು ಹಾಕಿಕೊಂಡು 'ನವ ದ್ರಾವಿಡ ರಾಜಕಾರಣ'ದ ಭರವಸೆಯಾಗಿ ಕಾಣಿಸುತ್ತಿರುವ ಟಿವಿಕೆ ಜೊತೆಗೆ ಸೇರಿ ತಮಿಳುನಾಡಿನಲ್ಲಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕಾಗಿ, ಪರೋಕ್ಷವಾಗಿ 'ಕಾಮರಾಜ್ ಸೂತ್ರ' ಅಳವಡಿಸಲು ನಾಂದಿ ಹಾಡಿದ್ದಾರೆ ಎಂಬಂತೆ ಕಾಣಿಸುತ್ತಿದೆ. ಇದು, ಪ್ರವೀಣ್ ಚಕ್ರವರ್ತಿ ತೆರೆಮರೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಜೀವ ಸಂಜೀವಿನಿಯಂತೆ ಕಾಣಿಸುತ್ತಿದೆ.
ತಮಿಳುನಾಡು ರಾಜಕೀಯದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯ ಕುರಿತಾದ ಚರ್ಚೆಗಳು ಈಗ ಮುನ್ನೆಲೆಗೆ ಬಂದಿವೆ. ಈ ಮೈತ್ರಿಯ ತಂತ್ರಗಾರಿಕೆಯ ಹಿಂದೆ ಕಾಂಗ್ರೆಸ್‌ನ ಡೇಟಾ ಅನಾಲಿಟಿಕ್ಸ್ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ಅವರ ಪಾತ್ರ ನಿರ್ಣಾಯಕವಾಗಿದೆ ಎನ್ನುವುದು ಈಗ ಸ್ಪಾಟ್ ಲೈಟ್ ಆಗುತ್ತಿದೆ.
ಚುನಾವಣೆಗಾಗಿ ಕೆಲವು ತಿಂಗಳುಗಳ ಕಾಲ ತಮಿಳುನಾಡಿನಾದ್ಯಂತ ಪಕ್ಷದ ಪರವಾಗಿ ಕೆಲಸ ಮಾಡಿದ್ದ ಪ್ರವೀಣ್ ಚಕ್ರವರ್ತಿ ಟಿವಿಕೆ ಮತ್ತು ವಿಜಯ್ ಪರ ತಮಿಳಿಗರಲ್ಲಿ ಇದ್ದ ಒಲವನ್ನು ಅರ್ಥ ಮಾಡಿಕೊಂಡು, ಚುನಾವಣಾ ಪೂರ್ವದಲ್ಲೇ ಟಿವಿಕೆ ಜೊತೆಗೆ ಕೈ ಜೋಡಿಸುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಅದು ಚುನಾವಣಾ ಪೂರ್ವದಲ್ಲಿ ಆಗಿರಲಿಲ್ಲ. ಚುನಾವಣೋತ್ತರದಲ್ಲಿ ಮೈತ್ರಿಯಾಯಿತು. ಅದಕ್ಕೆ ಇದೇ ಪ್ರವೀಣ್ ಚಕ್ರವರ್ತಿ ಕಾರಣ. ಅದೇ ಕಾರಣಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ತಮಿಳಿಗರನ್ನು ಉದ್ದೇಶಿಸಿ ಮಾತನಾಡುವಾಗ, ಪ್ರವೀಣ್ ಚಕ್ರವರ್ತಿ ಅವರಿಗೆ ವಿಜಯ್ ವಿಶೇಷ ಧನ್ಯವಾದ ಸಮರ್ಪಿಸಿದ್ದರು ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.
ಪ್ರವೀಣ್ ಚಕ್ರವರ್ತಿ ಅವರು ಕೇವಲ ಚುನಾವಣಾ ಅಂಕಿಅಂಶಗಳ ತಜ್ಞರಲ್ಲ, ಬದಲಿಗೆ ದಕ್ಷಿಣ ಭಾರತದ ರಾಜಕೀಯ ಸಂರಚನೆಯನ್ನು ಆಳವಾಗಿ ಬಲ್ಲವರು. ಡಿಎಂಕೆ (DMK) ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿತ್ತು. ಡಿಎಂಕೆಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾದಾಗ ಪರ್ಯಾಯ ಶಕ್ತಿಯ ಅಗತ್ಯವಿದೆ ಎಂದು ಚಕ್ರವರ್ತಿ ಅವರ ಅಂಕಿಅಂಶಗಳು ಕಾಂಗ್ರೆಸ್ ಗೆ ಸೂಚಿಸಿತ್ತು. ಕಾಂಗ್ರೆಸ್ ನ ಹಿರಿತಲೆಗಳು ಇದನ್ನು ನಿರಾಕರಿಸಿತ್ತು. ಫಲಿತಾಂಶ ಬಂದ ಮೇಲೆ ಟಿವಿಕೆಯೊಂದಿಗಿನ ಮೈತ್ರಿಗೆ ರಾಹುಲ್ ಗಾಂಧಿ ಮತ್ತು ದಳಪತಿ ವಿಜಯ್ ಅವರಿಗೆ ಸೇತುವೆ ಆಗಿದ್ದೇ ಪ್ರವೀಣ್ ಚಕ್ರವರ್ತಿ.
'ವಿಜಯ್ ಅವರ ಟಿವಿಕೆ ಪಕ್ಷ ಯುವಜನತೆ ಮತ್ತು ದಲಿತ/ಹಿಂದುಳಿದ ವರ್ಗಗಳ ಮತಗಳನ್ನು ಸೆಳೆದಿದೆ, ಈ ಮತಬ್ಯಾಂಕ್ ಕಾಂಗ್ರೆಸ್‌ನ ಸಿದ್ಧಾಂತಕ್ಕೆ ಪೂರಕವಾಗಬಲ್ಲದು ಎಂಬುದು ಪ್ರವೀಣ್ ಲೆಕ್ಕಾಚಾರ. ಇದು ಮುಂದಿನ ರಾಜಕೀಯ ಸಮೀಕರಣಕ್ಕೂ ಬಿಜೆಪಿಯ ಎದುರು ರಾಜಕೀಯ ಹೋರಾಟಕ್ಕೆ ಟಿವಿಕೆಗೂ ಸಹಾಯವಾಗುತ್ತದೆ, ಕಾಂಗ್ರೆಸ್ ಪಕ್ಷಕ್ಕೂ ಊರುಗೋಲಾಗಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
'ಇಂಡಿಯಾ' ಮೈತ್ರಿಗೆ ಲಾಭ !?
ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ (TVK) ಮತ್ತು ಕಾಂಗ್ರೆಸ್ ಮೈತ್ರಿಯಾಗಿದೆ. ಅದು ಕೇವಲ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದ ಇಂಡಿಯಾ (INDIA) ಮೈತ್ರಿಕೂಟಕ್ಕೆ ದೊಡ್ಡ ಬಲ ತುಂಬಿಸಲಿದೆ.
ಮಾತ್ರವಲ್ಲದೆ, ವಿಜಯ್ ಅವರ ಅಭಿಮಾನಿ ಬಳಗ ಮತ್ತು ಯುವ ಮತದಾರರು ಇಂಡಿಯಾ ಮೈತ್ರಿಕೂಟದತ್ತ ವಾಲಬಹುದು. ಇದು ಇಂಡಿಯಾ ಮೈತ್ರಿಕೂಟದ ಮತ ಹಂಚಿಕೆಯನ್ನು ಶೇ. 50ರಷ್ಟು ಹೆಚ್ಚಿಗೆ ಕೊಂಡೊಯ್ಯಬಲ್ಲದು.
ಕರ್ನಾಟಕ, ತೆಲಂಗಾಣ ಮತ್ತು ಕೇರಳದ ನಂತರ ತಮಿಳುನಾಡಿನಲ್ಲೂ ಟಿವಿಕೆ ಜೊತೆಗೂಡಿ ಕಾಂಗ್ರೆಸ್ ಹೆಚ್ಚು ಪ್ರಬಲವಾದರೆ, ದಕ್ಷಿಣದ 130ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ 'ಇಂಡಿಯಾ' ಮೈತ್ರಿಕೂಟ ಸಂಪೂರ್ಣ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಲಿದೆ.
ವಿಜಯ್ ಮತ್ತು ಅವರ ಪಕ್ಷ ಈಗ ಪಾಲಿಸುತ್ತಿರುವ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯ ತತ್ವ, ಸಿದ್ಧಾಂತದಲ್ಲಿ ಬದಲಾವಣೆ ಮಾಡಿಕೊಳ್ಳದೇ ಇದ್ದಲ್ಲಿ ಈ ಮೈತ್ರಿ ಕೇವಲ ಚುನಾವಣಾ ಮೈತ್ರಿಯಾಗದೆ, ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ "ಪ್ರಗತಿಪರ ಪರ್ಯಾಯ ಶಕ್ತಿ"ಯಾಗಿ ಕನಿಷ್ಟವೆಂದರೂ ಒಂದೆರಡು ದಶಕಗಳ ಕಾಲ ರಾಜಕೀಯದಲ್ಲಿ ಪ್ರಸ್ತುತವಾಗಿರಲಿರುವುದು ನಿಶ್ಚಿತ.
ನವ ದ್ರಾವಿಡ ರಾಜಕಾರಣಕ್ಕೆ ನಾಂದಿ!?
ತಮಿಳುನಾಡಿನ ಇಂದಿನ ರಾಜಕೀಯ ಸನ್ನಿವೇಶದಲ್ಲಿ ವಿಜಯ್ ಮತ್ತು ರಾಹುಲ್ ಗಾಂಧಿ ಅವರ ಪಾತ್ರಗಳು ದ್ರಾವಿಡ ರಾಜಕಾರಣದ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಹೊಸ ಸಂಚಲನ ಮೂಡಿಸುತ್ತಿರುವುದು ನಿಜ. ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ನಡುವಿನ ದಶಕಗಳ ಪೈಪೋಟಿ ರಾಜಕಾರಣದಿಂದ ಬೇಸತ್ತಿರುವ ಯುವ ಮತದಾರರಿಗೆ ವಿಜಯ್ ಒಂದು ಪರ್ಯಾಯ ಶಕ್ತಿಯಾಗಿ ಕಾಣುತ್ತಿದ್ದಾರೆ. ಅದೇ ಕಾರಣಕ್ಕೆ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಮನಸ್ಸು ಪೂರ್ತಿ ಬೆಂಬಲಿಸಿದ್ದಾರೆ.
ರಾಹುಲ್ ಗಾಂಧಿ ಅವರು ತಮಿಳು ಸಂಸ್ಕೃತಿ, ಭಾಷೆ ಮತ್ತು ತಮಿಳು ಅಸ್ಮಿತೆ ಬಗ್ಗೆ ತೋರುತ್ತಿರುವ ಆಸಕ್ತಿ ಮತ್ತು ದಕ್ಷಿಣ ಭಾರತದ ರಾಜ್ಯಗಳ ಮೇಲೆ ಬಿಜೆಪಿಯ ಹಿಂದಿ ಹೇರಿಕೆ, ಕ್ಷೇತ್ರ ಮರುವಿಂಗಡಣೆಯಂತಹ ವಿಷಯಗಳಿಗೆ ಪ್ರಬಲವಾಗಿ ವಿರೋಧಿಸುತ್ತಿರುವುದು ತಮಿಳು ಜನರ ಮನಗೆದ್ದಿದೆ. ಇದು ಉತ್ತರ ಭಾರತದ ಪಕ್ಷ ಎಂಬ ಕಾಂಗ್ರೆಸ್ ಮೇಲಿದ್ದ ಲೇಬಲ್ ಅನ್ನು ಅಳಿಸಲು ಸಹಕಾರಿಯಾಗುವ ಲಕ್ಷಣ ಕಾಣಿಸುತ್ತಿದೆ.
ವಿಜಯ್ ಅವರು ಪ್ರಾದೇಶಿಕವಾಗಿ ಹೊಸ ಮತಬ್ಯಾಂಕ್ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ, ರಾಹುಲ್ ಗಾಂಧಿ ಅವರ ಜಾತ್ಯತೀತ, ಅಹಿಂದ, ಸಾಮಾಜಿಕ ನ್ಯಾಯದಂತಹ ತತ್ವಗಳು, ದ್ರಾವಿಡ ರಾಜಕಾರಣಕ್ಕೆ ನೀಡುತ್ತಿರುವ ಮಾನ್ಯತೆ ತಮಿಳುನಾಡಿನಲ್ಲಿ "ನವ ದ್ರಾವಿಡ ರಾಜಕಾರಣ"ಕ್ಕೆ ನಾಂದಿ ಹಾಡುವ ಲಕ್ಷಣಗಳು ಕಾಣಿಸುತ್ತಿವೆ. ಇದು ತಮಿಳಿಗರಲ್ಲಿ ವಿಶ್ವಾಸ ಮೂಡಿಸುವಂತೆ ತೋರುತ್ತಿದೆ.
ತಮಿಳುನಾಡಿನ ಜಾತ್ಯತೀತ ಹೋರಾಟ, ಪೆರಿಯಾರ್ ಸಿದ್ಧಾಂತ, ಬ್ರಾಹ್ಮಣ್ಯ ವಿರೋಧಿ ಆಂದೋಲನಗಳ ಬಗ್ಗೆ ಅರಿವಿಲ್ಲದ ಯುವ ಜನಾಂಗಕ್ಕೆ ವಿಜಯ್ ಮತ್ತು ರಾಹುಲ್ ಜೋಡಿ ಹೊಸ ಭರವಸೆಯಾಗಿ ಕಾಣುತ್ತಿರುವುದಲ್ಲದೇ, ಈ ಜೋಡಿಯೇ ದ್ರಾವಿಡ ಪರಂಪರೆಯನ್ನು ಮುನ್ನಡೆಸುವ ಜೋಡೆತ್ತುಗಳಂತೆ ಕಾಣುತ್ತಿರಬಹುದು. ಹಾಗಾಗಿ ತಮಿಳುನಾಡಿನ ರಾಜಕೀಯಕ್ಕೆ ಹೊಸ ಶಕ್ತಿಯಾಗಿ ಬದಲಾಗುವ ಲಕ್ಷಣ ಹೆಚ್ಚುತ್ತಿದೆ.
ತಮಿಳುನಾಡಿನಲ್ಲಿ 'ಕಾಮರಾಜ್ ಸೂತ್ರ' ಜಾರಿಗೆ ತಂದರೇ ರಾಹುಲ್ !?
'ಕಾಮರಾಜ್ ಸೂತ್ರ' ಎನ್ನುವುದು 1963 ರಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸಲು ರೂಪಿಸಿದ ಒಂದು ರಾಜಕೀಯ ತಂತ್ರವಾಗಿದೆ.
1962ರಲ್ಲಿ ಚೀನಾದ ವಿರುದ್ಧ ಭಾರತ ಯುದ್ಧದಲ್ಲಿ ಸೋತಿತ್ತು. ಜವಹರಲಾಲ್ ನೆಹರೂ ಪ್ರಧಾನಿಯಾಗಿ ದೇಶದಲ್ಲಿ ಪ್ರತಿಪಕ್ಷಗಳಿಂದ ಟೀಕೆಗಳನ್ನು ಎದುರಿಸಬೇಕಾಯಿತು. ಆ ಸಂದರ್ಭದಲ್ಲಿ ಕಾಮರಾಜ್ ನೆಹರೂ ಅವರ ನೆರವಿಗೆ ಬಂದರು. ತಮ್ಮ ಯೋಜನೆಯನ್ನು ಅನುಷ್ಠಾನಕ್ಕೆ ತರಲು ನೆಹರು ಅವರನ್ನು ಮನವೊಲಿಸಿದ್ದರು.
1963ರಲ್ಲಿ, ಕಾಂಗ್ರೆಸ್ ಪಕ್ಷದ ಜನಪ್ರಿಯತೆ ತಗ್ಗುತ್ತಿರುವ ಸಂದರ್ಭದಲ್ಲಿ, ನೆಹರೂ ಆಪ್ತರಾಗಿರುವ ಕೆ. ಕಾಮರಾಜ್ ಅವರು ಅಧಿಕಾರಕ್ಕಿಂತ ಪಕ್ಷದ ಸಂಘಟನೆ ಮುಖ್ಯ ಎಂಬ ಕಾರಣಕ್ಕೆ ತಮಿಳುನಾಡಿನಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ(ನೆಹರೂ ಅವರೇ ರಾಷ್ಟ್ರೀಯ ರಾಜಕಾರಣಕ್ಕೆ ಕರೆಸಿಕೊಂಡರು), ಈ ಸೂತ್ರವನ್ನು ಜಾರಿಗೊಳಿಸಿದ್ದರು. ಲಾಲ ಬಹದ್ದೂರ್ ಶಾಸ್ತ್ರಿ, ಜಗಜೀವನ್ ರಾಮ್, ಮೊರಾರ್ಜಿ ದೇಸಾಯಿ ಮುಂತಾದ ಹಿರಿಯ ನಾಯಕರು ಈ ಸೂತ್ರದಡಿ ರಾಜೀನಾಮೆ ನೀಡಿದ್ದರು ಎನ್ನುವುದು ಉಲ್ಲೇಖನೀಯ.
ಈಗ ರಾಹುಲ್, ಡಿಎಂಕೆಯ ಹಳೆಯ ದ್ರಾವಿಡ ಸಿದ್ಧಾಂತವನ್ನು ಬಿಟ್ಟು ಬಹಳ ದೊಡ್ಡ ಸವಾಲನ್ನು ಎದುರು ಹಾಕಿಕೊಂಡು ನವ ದ್ರಾವಿಡ ರಾಜಕಾರಣದ ಭರವಸೆಯಾಗಿ ಕಾಣಿಸುತ್ತಿರುವ ಟಿವಿಕೆ ಜೊತೆಗೆ ಸೇರಿ ತಮಿಳುನಾಡಿನಲ್ಲಿ ಮಾತ್ರವಲ್ಲದೇ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕಾಗಿ, ಪರೋಕ್ಷವಾಗಿ 'ಕಾಮರಾಜ್ ಸೂತ್ರ' ಅಳವಡಿಸಲು ನಾಂದಿ ಹಾಡಿದ್ದಾರೆ ಎಂಬಂತೆ ಕಾಣಿಸುತ್ತಿದೆ.
ತಮಿಳುನಾಡಿನಲ್ಲಿ ಇಂದಿಗೂ ಕಾಮರಾಜ್ ಅವರ ಆಡಳಿತವನ್ನು (ಶಿಕ್ಷಣ, ಅಣೆಕಟ್ಟು ನಿರ್ಮಾಣ, ಭ್ರಷ್ಟಾಚಾರ ರಹಿತ ಆಡಳಿತ) 'ಸುವರ್ಣ ಯುಗ' ಎಂದು ಜನ ನೆನಪಿಸಿಕೊಳ್ಳುತ್ತಾರೆ. ವಿಜಯ್ ಕೂಡ ಕೆ.ಕಾಮರಾಜ್ ಅವರ ಆಡಳಿತವನ್ನು ತಮ್ಮ ಸಿದ್ಧಾಂತಗಳಲ್ಲೊಂದನ್ನಾಗಿ ಇಟ್ಟುಕೊಂಡಿದ್ದಾರೆ.
ವಿಜಯ್ ಅವರ ಮೇಲಿರುವ ಯುವ ಸಮೂಹದ ಬೆಂಬಲ ಮತ್ತು ಕಾಂಗ್ರೆಸ್‌ನ ಹಳೆಯ ಮತಬ್ಯಾಂಕ್ (ಓಲ್ಡ್ ಗಾರ್ಡ್) ಸೇರಿದರೆ, ಕಾಮರಾಜ್ ಕಾಲದ ಆಡಳಿತವನ್ನು ಮತ್ತೆ ತಮಿಳುನಾಡಿನಲ್ಲಿ ಮರು ಸ್ಥಾಪಿಸಬಹುದು ಎನ್ನುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ.
ಈ 'ಸೂತ್ರ' ಯಶಸ್ವಿಯಾದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತೆ ಶೂನ್ಯದಿಂದ ಪುಟಿದೇಳಬಹುದು. ಆದರೆ ಇದು ಪೂರ್ಣಪ್ರಮಾಣದ 'ಕಾಮರಾಜ್ ಆಡಳಿತ'ವಾಗಬೇಕೆಂದರೆ, ಕೇವಲ ಮೈತ್ರಿ ಸರ್ಕಾರದ ಆಡಳಿತ ಸಾಲದು, ಆ ಕಾಲದ ಆಡಳಿತ ವೈಖರಿಯನ್ನು ಜನರಿಗೆ ಅಕ್ಷರಶಃ ತೋರಿಸಬೇಕಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಒಟ್ಟಿನಲ್ಲಿ, ಪ್ರವೀಣ್ ಚಕ್ರವರ್ತಿ ಅವರ ಲೆಕ್ಕಾಚಾರ ಕಾಂಗ್ರೆಸ್ ಗೆ ತೆರೆಮರೆಯ ಜೀವ ಸಂಜೀವಿನಿ ಆಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್ ಹೇಗೆ ಇದರಿಂದ ಪುಟಿದೇಳುತ್ತದೆ ಎನ್ನುವುದು ಸದ್ಯಕ್ಕಿರುವ ಕುತೂಹಲವಾಗಿದೆ.
-ಶ್ರೀರಾಜ್ ವಕ್ವಾಡಿ


No comments:
Post a Comment