ತನ್ನದೇ ತಪ್ಪು ನಿರ್ಧಾರಗಳಿಂದ ಸೃಷ್ಟಿಯಾದ ಇಂಧನ ಬಿಕ್ಕಟ್ಟಿನ ಹೊರೆಯನ್ನು ಸರ್ಕಾರ ಈಗ ಭಾರತದ ಬಡ ಮತ್ತು ದುಡಿಯುವ ವರ್ಗದ ಹೆಗಲಿಗೆ ಯಶಸ್ವಿಯಾಗಿ ವರ್ಗಾಯಿಸಿದೆ. ಮೂಲಭೂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ (GST) ವ್ಯಾಪ್ತಿಗೆ ತರಲು ಸರ್ಕಾರ ಒಪ್ಪುತ್ತಿಲ್ಲ. ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಗರಿಷ್ಠ ಶೇ. 28ರಷ್ಟು ಮಾತ್ರ ತೆರಿಗೆ ಹಾಕಬಹುದು, ಆಗ ಬೆಲೆ ತಾನಾಗಿಯೇ ರೂ.60-70ಕ್ಕೆ ಇಳಿಯುತ್ತದೆ. ಆದರೆ ಸರ್ಕಾರಕ್ಕೆ ಜನರಿಂದ ಲೂಟಿ ಮಾಡುವುದನ್ನು ನಿಲ್ಲಿಸಲು ಮನಸ್ಸಿಲ್ಲ.
'ಸಬ್ ಚಂಗಾ ಸಿ'(ಎಲ್ಲವೂ ಚೆನ್ನಾಗಿದೆ) ಎಂದು ಹೇಳಿದ ಮೋದಿ ದಿಢೀರ್ ಆಗಿ ಬಂದು 'ಹಿತಮಿತ'ದ ಪಾಠ ಮಾಡಿದ್ದಾರೆ. ಅವರ ಅನುಯಾಯಿಗಳೆಲ್ಲಾ ಪರಮ ಪಾಮರ ಹೇಳಿರುವುದು ಎಂದು ಪಾಲಿಸುವ ಹೈಡ್ರಾಮ ಮಾಡಿದರು. ಅದರ ಹಿಂದಿನ ಸತ್ಯ ಗೊತ್ತಿದ್ದರೂ ಸಮರ್ಥನೆಗೆ ಇಳಿದರು. ಕೇವಲ ಫಾಯ್ದೆಗಾಗಿ ಕೆಲಸ ಮಾಡುವ ಮಾಧ್ಯಮಗಳು, ಪತ್ರಕರ್ತರು ಅತಿರೇಕದ ಭಟ್ಟಂಗಿತನಕ್ಕೆ ಇಳಿದರು. ಕಣ್ಣ ಮುಂದೆ ಕಾಣಿಸುವ ತಪ್ಪುಗಳನ್ನು ಪ್ರಶ್ನಿಸದೇ ಇರುವಷ್ಟರ ಮಟ್ಟಿಗೆ ಮಾಧ್ಯಮ, ಮತ್ತು ಅಲ್ಲಿ ಕೆಲಸ ಮಾಡುವ ಪತ್ರಕರ್ತರು ಬದಲಾಗಿದೆ/ದ್ದಾರೆ.
ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳು ಮುಗಿಯುತ್ತಿದ್ದಂತೆ ಕೇಂದ್ರದ ಬಿಜೆಪಿ ಸರ್ಕಾರ ತನ್ನ ಅಸಲಿ ಮುಖವನ್ನು ಮತ್ತೊಮ್ಮೆ ತೋರಿಸಿದೆ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿ ಲೀಟರ್‌ಗೆ 3 ರೂ. ರಷ್ಟು ಹಾಗೂ ಸಿಎನ್‌ಜಿ ದರವನ್ನು 2 ರೂ. ರಷ್ಟು ದಿಢೀರ್ ಹೆಚ್ಚಳ ಮಾಡುವ ಮೂಲಕ ಶ್ರಮಿಕ ವರ್ಗ, ರೈತರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಆರ್ಥಿಕ ಸುಲಿಗೆಯ ಪ್ರಹಾರ ನಡೆಸಲಾಗಿದೆ.
ಇದು ಕೇವಲ ಕಚ್ಚಾ ತೈಲದ ಬೆಲೆ ಏರಿಕೆಯ ಕಥೆಯಲ್ಲ, ಬದಲಿಗೆ ಇದು ಮೋದಿ ಸರ್ಕಾರದ ಅತ್ಯಂತ ಕೆಟ್ಟ ಅಂತರರಾಷ್ಟ್ರೀಯ ರಾಜತಾಂತ್ರಿಕ ನೀತಿ ಮತ್ತು ಬಂಡವಾಳಶಾಹಿ ಹಿತರಕ್ಷಣೆಗಾಗಿ ಜನಸಾಮಾನ್ಯರನ್ನು ಬಲಿಕೊಡುತ್ತಿರುವ ಜ್ವಲಂತ ಸಾಕ್ಷಿ. ಇಂತಹ ಸಂದರ್ಭದಲ್ಲೂ, ಮಧ್ಯಪ್ರಾಚ್ಯ ಬಿಕಟ್ಟಿನ ಕಾರಣಕ್ಕೆ ಆರ್ಥಿಕ ಸಂಕಷ್ಟ ಸರಿದೂಗಿಸಲು ತೆಗೆದುಕೊಂಡ ಕ್ರಮ ಎಂದು ಬಿಂಬಿಸಿ ಸುದ್ದಿಗಳನ್ನು ಮಾಡಿ ಪರೋಕ್ಷವಾಗಿ ಕೇಂದ್ರ ಸರ್ಕಾರದ ವಕ್ತಾರಿಕೆ ಮಾಡುವಷ್ಟು ಕೆಲವು/ಹಲವು ಮಾಧ್ಯಮಗಳು, ಪತ್ರಕರ್ತರು ಕೆಳಮಟ್ಟಕ್ಕೆ ಇಳಿದಿರುವುದು ಪ್ರಜಾಪ್ರಭುತ್ವದ ದುರಂತಗಳಲ್ಲೊಂದು.
ಚುನಾವಣೆ ಮುಗಿಯುತ್ತಿದ್ದಂತೆ ವಸೂಲಿ!
ಬಂಡವಾಳಶಾಹಿ ಪ್ರಭುತ್ವದ ಅತಿ ದೊಡ್ಡ ಲಕ್ಷಣವೆಂದರೆ ಜನರನ್ನು ಕೇವಲ ಮತಬ್ಯಾಂಕ್ ಆಗಿ ನೋಡುವುದೇ ಆಗಿದೆ. ಚುನಾವಣೆಗಳು ನಡೆಯುತ್ತಿರುವಾಗ ‘ಸಬ್ ಚಂಗಾ ಸಿ’(ಎಲ್ಲವೂ ಚೆನ್ನಾಗಿದೆ) ಎಂದು ಬಿಂಬಿಸುತ್ತಾ ತೈಲ ಬೆಲೆಗಳನ್ನು ಯಥಾಸ್ಥಿತಿಯಲ್ಲಿಟ್ಟಿದ್ದ ಸರ್ಕಾರ, ಚುನಾವಣೆ ಮುಗಿಯುತ್ತಿದ್ದಂತೆ ಇಂಧನ ಕಂಪನಿಗಳಿಗೆ ದರ ಏರಿಸಲು ಹಸಿರು ನಿಶಾನೆ ತೋರಿದೆ. ಇದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಜನತೆಗೆ ಮಾಡುತ್ತಿರುವ ದ್ರೋಹವಲ್ಲದೆ ಬೇರೇನೂ ಅಲ್ಲ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅಲಿಪ್ತ ನೀತಿ ಪಾಲಿಸದೇ ಟ್ರಂಪ್ ಹೇಳಿದಂತೆ ಮೋದಿ ಕುಣಿದಾಡಿದರು. ಟ್ರಂಪ್ ತಾಳಕ್ಕೆ ಕುಣಿದು ಇಡೀ ದೇಶದ ಶ್ರಮಿಕ, ಬಡ ವರ್ಗವನ್ನೇ ಬಲಿಕೊಟ್ಟರು. ಈಗ 'ದೇಶಭಕ್ತಿ' ಹೆಸರಿನಲ್ಲಿ ಬೃಹನ್ನಾಟಕ ಮಾಡುತ್ತಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾಗಿರುವ ಯುದ್ಧದ ವಾತಾವರಣದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಏರುಪೇರಾಗಿದೆ ಎನ್ನುವುದು ಸರ್ಕಾರದ ನೆಪ. ಆದರೆ, ಭಾರತದ ಇಂದಿನ ಈ ದುಸ್ಥಿತಿಗೆ ಪ್ರಧಾನಿ ಮೋದಿಯವರ ಏಕಪಕ್ಷೀಯ ವಿದೇಶಾಂಗ ನೀತಿಯೇ ಕಾರಣ. ಸಾಂಪ್ರದಾಯಿಕವಾಗಿ ಭಾರತ ಅಲಿಪ್ತ ನೀತಿಯನ್ನು (Non-Aligned Movement) ಅನುಸರಿಸುತ್ತಾ, ತೈಲ ಸಮೃದ್ಧ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. ಆದರೆ ಪ್ರಸ್ತುತ ಸರ್ಕಾರ ಅಮೆರಿಕ ಮತ್ತು ಇಸ್ರೇಲ್ ಸಾಮ್ರಾಜ್ಯಶಾಹಿ ಕೂಟದ ಪರವಾಗಿ ನಿಲ್ಲುವ ಮೂಲಕ, ಇರಾನ್ ಸೇರಿದಂತೆ ಪ್ರಮುಖ ಇಂಧನ ಸರಬರಾಜು ದೇಶಗಳ ವಿಶ್ವಾಸವನ್ನು ಕಳೆದುಕೊಂಡಿದೆ. ಈ ರಾಜತಾಂತ್ರಿಕ ದಿವಾಳಿತನದ ಪರಿಣಾಮವಾಗಿ ಇಂದು ಸ್ಟ್ರೈಟ್ ಆಫ್ ಹಾರ್ಮುಜ್‌ನಂತಹ ಪ್ರಮುಖ ಜಲಮಾರ್ಗಗಳಲ್ಲಿ ಭಾರತೀಯ ಸರಕು ಸಾಗಣೆಗೆ ಭದ್ರತೆಯ ಕೊರತೆ ಎದುರಾಗಿದೆ. ತನ್ನದೇ ತಪ್ಪು ನಿರ್ಧಾರಗಳಿಂದ ಸೃಷ್ಟಿಯಾದ ಇಂಧನ ಬಿಕ್ಕಟ್ಟಿನ ಹೊರೆಯನ್ನು ಸರ್ಕಾರ ಈಗ ಭಾರತದ ಬಡ ಮತ್ತು ದುಡಿಯುವ ವರ್ಗದ ಹೆಗಲಿಗೆ ಯಶಸ್ವಿಯಾಗಿ ವರ್ಗಾಯಿಸಿದೆ.
ಲೂಟಿಕೋರ ನೀತಿ ಮತ್ತು ಲಾಭಕೋರತನ :
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ಸಾಮಾನ್ಯವಾಗಿ ಪ್ರತಿ ಬ್ಯಾರೆಲ್‌ಗೆ (1 ಬ್ಯಾರೆಲ್ = ಸುಮಾರು 159 ಲೀಟರ್) ಅಮೆರಿಕನ್ ಡಾಲರ್ ($) ಲೆಕ್ಕದಲ್ಲಿ ಅಳೆಯಲಾಗುತ್ತದೆ. ಭಾರತ ಆಮದು ಮಾಡಿಕೊಳ್ಳುವ ತೈಲದ ಸರಾಸರಿ ಬೆಲೆಯನ್ನು ‘ಇಂಡಿಯನ್ ಬಾಸ್ಕೆಟ್’ (Indian Basket) ಎನ್ನಲಾಗುತ್ತದೆ.
2014 ರಿಂದ 2026 ರವರೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ವಾರ್ಷಿಕ ಸರಾಸರಿ ಬೆಲೆಗಳ ಅಂಕಿಅಂಶಗಳನ್ನು ಗಮನಿಸುವುದಾದರೆ, 2014ರಲ್ಲಿ ಜಾಗತಿಕ ಕಚ್ಚಾ ತೈಲದ ಸರಾಸರಿ ಬೆಲೆ (ಪ್ರತಿ ಬ್ಯಾರೆಲ್‌ಗೆ USD ನಲ್ಲಿ) $99, 2015ರಲ್ಲಿ $52, 2016ರಲ್ಲಿ $43, 2017ರಲ್ಲಿ $54, 2018ರಲ್ಲಿ $71, 2019ರಲ್ಲಿ $64, 2020ರಲ್ಲಿ $41, 2021ರಲ್ಲಿ $70, 2022ರಲ್ಲಿ $100, 2023ರಲ್ಲಿ $82, 2024ರಲ್ಲಿ $75, 2025ರಲ್ಲಿ $65, 2026ರ ಫೆಬ್ರವರಿಯಲ್ಲಿ $65 ರಿಂದ $72, 2026ರಲ್ಲಿ (ಪ್ರಸಕ್ತ) $105 - $120ರಷ್ಟಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ (2011-2014) ಕಚ್ಚಾ ತೈಲದ ಬೆಲೆ ಸತತವಾಗಿ $105 ರಿಂದ $114 ರಷ್ಟಿತ್ತು. ಆದರೆ ಮೋದಿ ಸರ್ಕಾರ ಬಂದ ನಂತರ, 2014 ರಿಂದ 2020 ರವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಭಾರಿ ಪ್ರಮಾಣದಲ್ಲಿ (ಶೇ. 50 ಕ್ಕಿಂತ ಹೆಚ್ಚು) ಕುಸಿದಿತ್ತು. ಆದಾಗ್ಯೂ, ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು (Excise Duty) ನಿರಂತರವಾಗಿ ಹೆಚ್ಚಿಸುತ್ತಾ ಹೋದ ಕಾರಣ, ಜಾಗತಿಕ ಮಾರುಕಟ್ಟೆಯ ಬೆಲೆ ಇಳಿಕೆಯ ಲಾಭ ಭಾರತದ ಜನಸಾಮಾನ್ಯರಿಗೆ ಸಿಗಲೇ ಇಲ್ಲ. ಈಗ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಿದ್ದಂತೆ, ಅದರ ಸಂಪೂರ್ಣ ಹೊರೆಯನ್ನು ಜನರ ಮೇಲೆ ಹೇರಲಾಗಿದೆ.
ಕಳೆದ ಹತ್ತು ವರ್ಷಗಳಲ್ಲಿ ಇಂಧನದ ಮೇಲಿನ ಅತಿಯಾದ ಅಬಕಾರಿ ಸುಂಕದ (Excise Duty) ಮೂಲಕ ಕೇಂದ್ರ ಸರ್ಕಾರ ಬರೋಬ್ಬರಿ 43 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಜನರ ಜೇಬಿನಿಂದ ಲೂಟಿ ಮಾಡಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪನಿಗಳು (OMCs) ದಿನಕ್ಕೆ 1,000 ಕೋಟಿ ರೂ. ನಷ್ಟ ಅನುಭವಿಸುತ್ತಿವೆ ಎಂಬ ಕಾರ್ಪೊರೇಟ್ ಪರ ಮಾಧ್ಯಮಗಳ ರೋದನೆ ಕೇವಲ ಕಣಣೊರೆಸುವ ತಂತ್ರ ಎನ್ನುವುದು ಸ್ಪಷ್ಟ. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಕೇವಲ ಲಾಭ ಗಳಿಸುವ ಯಂತ್ರಗಳನ್ನಾಗಿ ನೋಡುವುದು ಮತ್ತು ನಷ್ಟ ಬಂದಾಗ ಅದನ್ನು ಜನರ ಮೇಲೆ ಹೇರುವುದು ಶುದ್ಧ ಬಂಡವಾಳಶಾಹಿ ಶೋಷಣೆ. ಅದನ್ನು ಯಶಸ್ವಿಯಾಗಿ ಮೋದಿ ಸರ್ಕಾರ ಮಾಡುತ್ತಲೇ ಬಂದಿದೆ.
ಬೆಲೆ ಏರಿಕೆಯ ಬಿಸಿ ಮತ್ತು ಶ್ರಮಿಕ, ಬಡ ವರ್ಗದ ನೆಮ್ಮದಿಗೆ ಕೊಳ್ಳಿ :
ಪೆಟ್ರೋಲ್-ಡೀಸೆಲ್ ಕೇವಲ ವಾಹನ ಸವಾರರ ಮೇಲಿನ ಹೊರೆಯಲ್ಲ. ಡೀಸೆಲ್ ಬೆಲೆ ಏರಿಕೆ ಸರಕು ಸಾಗಣೆ ವೆಚ್ಚವನ್ನು (Freight Charges) ದುಪ್ಪಟ್ಟಾಗಿಸಲಿದೆ. ಕರ್ನಾಟಕ ಒಳಗೊಂಡಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಖಾಸಗಿ ಬಸ್ ಕಂಪೆನಿಗಳು ಶೇ. 20 ರಿಂದ 30ರಷ್ಟು ಟಿಕೇಟ್ ದರ ಹೆಚ್ಚಳ ಮಾಡಲು ಮುಂದಾಗಿವೆ.
ಇದು ದಿನಬಳಕೆಯ ತರಕಾರಿ, ಧಾನ್ಯಗಳು, ಹಾಲು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ (Inflation) ಶೇ. 6 ಕ್ಕೆ ತಲುಪುವ ಮುನ್ಸೂಚನೆ ಇದೆ. ಇತ್ತೀಚೆಗಷ್ಟೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಸಿದ್ದ ಸರ್ಕಾರ, ಈಗ ಇಂಧನ ದರ ಏರಿಸಿ ಗಾಯದ ಮೇಲೆ ಉಪ್ಪು ಸವರಿದೆ.
ರೈತರು ಕೃಷಿ ಉತ್ಪಾದನೆಗೆ ಟ್ರ್ಯಾಕ್ಟರ್, ಪಂಪ್‌ಸೆಟ್‌ಗಳಿಗೆ ಡೀಸೆಲ್ ಅನ್ನೇ ಅವಲಂಬಿಸಿದ್ದಾರೆ. ಸರ್ಕಾರ ಭತ್ತ ಮುಂತಾದ ಬೆಳೆಗಳಿಗೆ ಕೇವಲ 72 ರೂ. ರಷ್ಟು ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸಿ, ಮರುದಿನವೇ ಡೀಸೆಲ್ ದರವನ್ನು ₹3 ಹೆಚ್ಚಿಸಿರುವುದು ರೈತರನ್ನು ವಂಚಿಸಿದಂತಾಗಿದೆ.
ಮೋದಿ ನೇತೃತ್ವದ ಸರ್ಕಾರ ದೇಶದ ಜನರಿಗೆ ಸಾರ್ವಜನಿಕ ಸಾರಿಗೆ ಬಳಸಿ, ಕಾರ್-ಪೂಲಿಂಗ್ ಮಾಡಿ, ಚಿನ್ನ ಖರೀದಿಸಬೇಡಿ, ವಿದೇಶಿ ಪ್ರಯಾಣ ಬೇಳೆಸಬೇಡಿ, ಖರ್ಚು ಕಡಿಮೆ ಮಾಡಿ ಎಂದು ಉಚಿತ ಸಲಹೆಗಳನ್ನು ನೀಡಿದೆ. ಕಾರ್ಪೊರೇಟ್ ಕುಳಗಳ ಲಕ್ಷಾಂತರ ಕೋಟಿ ರೂ. ಸಾಲ ಮನ್ನಾ ಮಾಡುವ ಸರ್ಕಾರಕ್ಕೆ, ಬಡವರಿಗೆ ಇಂಧನ ಸಬ್ಸಿಡಿ ನೀಡಲು ಹಣವಿಲ್ಲದಿರುವುದು ಆಡಳಿತದ ಆದ್ಯತೆ ಯಾವ ಕಡೆ ಇದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.
ಅಸಲಿ ಸಮಸ್ಯೆ ಇರುವುದು ಸರ್ಕಾರದ ತೆರಿಗೆ ನೀತಿಯಲ್ಲಿ!
ಯುಎಇ (ಯುನಿಟೆಡ್ ಅರಬ್ ಎಮಿರೇಟ್ಸ್) ಜೊತೆ ತೈಲ ಒಪ್ಪಂದ ಮಾಡಿಕೊಂಡ ತಕ್ಷಣ ಭಾರತದ ಇಂಧನ ಬಿಕ್ಕಟ್ಟು ಮತ್ತು ದೇಶೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲು ಸಾಧ್ಯವಿಲ್ಲ.
ಎಲ್‌ಪಿಜಿ ಪೂರೈಕೆ ಮತ್ತು 'ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್' (ಭಾರತದ ತುರ್ತು ತೈಲ ಸಂಗ್ರಹಾಗಾರ) ಸಾಮರ್ಥ್ಯ ಹೆಚ್ಚಿಸಲು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೆ ಅಮೆರಿಕನ್ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ರೂಪಾಯಿ-ದಿರ್ಹಾಮ್ (Local Currency Settlement) ಮೂಲಕ ವ್ಯಾಪಾರ ಮಾಡುವ ಪ್ರಯತ್ನಗಳೂ ನಡೆದಿವೆ.
ಈ ಒಪ್ಪಂದಗಳು ಕೇವಲ "ತಾತ್ಕಾಲಿಕ ಮುಲಾಮು" ಅಷ್ಟೆ. ಮೂಲಭೂತ ಸಮಸ್ಯೆಗಳು ಬಗೆಹರಿಯಬೇಕಾದರೆ ಈ ಕೆಳಗಿನ ಆಡಳಿತಾತ್ಮಕ ಮತ್ತು ನೀತಿ ಬದಲಾಗಬೇಕಿದೆ.
ಇನ್ನು, ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಜಲಮಾರ್ಗವನ್ನು ಬಂದ್ ಮಾಡಲಾಗಿದೆ. ಜಾಗತಿಕ ತೈಲ ಸಾಗಣೆಯ ಶೇ. 20 ಕ್ಕೂ ಅಧಿಕ ಭಾಗ ಇದೇ ಮಾರ್ಗವಾಗಿ ಬರುತ್ತದೆ. ಭಾರತ ಯುಎಇನಿಂದ ತೈಲ ಖರೀದಿಸಿದರೂ, ಹಾರ್ಮುಜ್ ಜಲಮಾರ್ಗ ಸುರಕ್ಷಿತವಾಗಿರದಿದ್ದರೆ ತೈಲ ಹೊತ್ತ ಹಡಗುಗಳು ಭಾರತಕ್ಕೆ ಬರುವುದು ಕಷ್ಟವಾಗುತ್ತದೆ. ಹಾಗಾಗಿ, ಇಡೀ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಭಾರತ ತಟಸ್ಥ ಮತ್ತು ಬಲವಾದ ರಾಜತಾಂತ್ರಿಕ ಪಾತ್ರ ವಹಿಸಬೇಕಿದೆ.
ಯುಎಇನಿಂದ ಭಾರತ ಅತ್ಯಂತ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಂಡರೂ, ಅದರ ಮೇಲೆ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ (Excise Duty) ಮತ್ತು ಸೆಸ್ (Cess) ಅನ್ನು ಕಡಿಮೆ ಮಾಡದಿದ್ದರೆ ದೇಶದ ಗ್ರಾಹಕರಿಗೆ ಒಂದು ಪೈಸೆ ಲಾಭವೂ ಸಿಗುವುದಿಲ್ಲ ಎನ್ನುವುದು ಇಲ್ಲಿ ಉಲ್ಲೇಖನೀಯ.
ಇನ್ನು, ಮೂಲಭೂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ(GST) ವ್ಯಾಪ್ತಿಗೆ ತರಲು ಸರ್ಕಾರ ಒಪ್ಪುತ್ತಿಲ್ಲ. ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಗರಿಷ್ಠ ಶೇ. 28 ರಷ್ಟು ಮಾತ್ರ ತೆರಿಗೆ ಹಾಕಬಹುದು, ಆಗ ಬೆಲೆ ತಾನಾಗಿಯೇ ₹60-70 ಕ್ಕೆ ಇಳಿಯುತ್ತದೆ. ಆದರೆ ಸರ್ಕಾರಕ್ಕೆ ಜನರಿಂದ ಲೂಟಿ ಮಾಡುವುದನ್ನು ನಿಲ್ಲಿಸಲು ಮನಸ್ಸಿಲ್ಲ.
ಇದರ ವಿರುದ್ಧ ಹೋರಾಡುವವರು ಯಾರು !?
ಇಂತೆಲ್ಲಾ ಕೆಟ್ಟ ನೀತಿಯ ವಿರುದ್ಧ ಪ್ರತಿಪಕ್ಷಗಳು ಇನ್ನಷ್ಟು ಗಟ್ಟಿಯಾಗಿ ಧ್ವನಿಸಬೇಕಿದೆ. ಪ್ರತಿಪಕ್ಷಗಳ ನಾಯಕನಾಗಿರುವ ಕಾಂಗ್ರೆಸ್ ಈ ಹೋರಾಟವನ್ನು ಮುನ್ನಡೆಸಬೇಕಿದೆ. ಜನರನ್ನು ಒಟ್ಟುಗೂಡಿಸಿಬೇಕಿದೆ. ತನ್ನ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಕಾಂಗ್ರೆಸ್ ಇಂತಹ ಸಂದರ್ಭಗಳಲ್ಲಿಯೂ ಸುಮ್ಮನಿದ್ದರೆ, ಅದು ಈ ದೇಶಕ್ಕೆ ಮಾಡುವ ದ್ರೋಹ ಎಂದು ಪರಿಗಣಿಸಲ್ಪಡುತ್ತದೆ.
ಕೇವಲ ಸದನದ ಒಳಗೆ ಭಾಷಣ ಮಾಡುವುದರಿಂದ ಬಂಡವಾಳಶಾಹಿ ಸರ್ಕಾರದ ದಪ್ಪ ಚರ್ಮಕ್ಕೆ ಚುಚ್ಚಲು ಸಾಧ್ಯವಿಲ್ಲ ಎನ್ನುವುದನ್ನು ಇನ್ನಷ್ಟು ಅರಿತುಕೊಳ್ಳಬೇಕಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆ ಅಥವಾ ಅಬಕಾರಿ ಸುಂಕದ ತಾಂತ್ರಿಕ ಅಂಶಗಳ ಬಗ್ಗೆ ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಿಳಿ ಹೇಳುವ ಕೆಲಸಕ್ಕೆ ಮುಂದಾಗಬೇಕಿದೆ.
ಜನರ ದೈನಂದಿನ ಸಂಕಷ್ಟಗಳನ್ನೇ ಹೋರಾಟದ ಅಸ್ತ್ರವಾಗಿ ಮಾಡಿಕೊಳ್ಳಬೇಕಿದೆ. ಹಕ್ಕೊತ್ತಾಯದ ಹೋರಾಟಗಳು ಹೆಚ್ಚಾದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯುವುದಕ್ಕೆ ಕಾರಣವಾಗುತ್ತದೆ.
ಒಟ್ಟಿನಲ್ಲಿ, ಜನರ ಸಂಕಷ್ಟಗಳಿಗೆ ಸ್ಪಂದಿಸದ, ವಿದೇಶಾಂಗ ನೀತಿಯಲ್ಲಿ ವಿಫಲವಾಗಿ ದೇಶದ ಆರ್ಥಿಕತೆಯನ್ನು ಪ್ರಪಾತಕ್ಕೆ ತಳ್ಳುತ್ತಿರುವ ಈ ಮೋದಿ ನೇತೃತ್ವದ ಸರ್ಕಾರದ ಪ್ರಭುತ್ವ ರಾಜಕಾರಣದ ವಿರುದ್ಧ ಪ್ರತಿಪಕ್ಷಗಳು, ದುಡಿಯುವ ವರ್ಗ, ಕಾರ್ಮಿಕ ಸಂಘಟನೆಗಳು ಬೀದಿಗಿಳಿದು ಹೋರಾಡಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಆಗ ಮಾತ್ರ ತಾನಾಗಿಯೇ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ, ಇಂತಹ ಲೂಟಿಕೋರ ಸಂಸ್ಕೃತಿಗಳಿಗೆ ಅಂತಿಮ ಚುಕ್ಕಿ ಬೀಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
-ಶ್ರೀರಾಜ್ ವಕ್ವಾಡಿ

No comments:
Post a Comment