ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮೀರಿ ಫಾಲೋವರ್ಸ್ ಅನ್ನು ಈ ಹೊಸ ರಾಜಕೀಯ ಚಳವಳಿ ಪ್ರೇರಿತ ಪಕ್ಷ ಹೊಂದಿದೆ ಎನ್ನುವುದು ದೊಡ್ಡ ವಿಷಯವಲ್ಲ. ಆ ಸೃಜನಶೀಲ ಚಳವಳಿಯ ಹಿಂದೆ ಈ ವ್ಯವಸ್ಥೆಯಿಂದ ಕಡೆಗಣಿಸಲ್ಪಟ್ಟ, ಪ್ರಭುತ್ವ ರಾಜಕಾರಣದಿಂದ ಬದಿಗೆ ತಳ್ಳಲ್ಪಟ್ಟ ಯುವಕರ ದೊಡ್ಡ ಆಕ್ರೋಶವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ದೇಶದ ಆಡಳಿತಾರೂಢ ಸರ್ಕಾರದ ದಮನಕಾರಿ ನಡೆಯ ವಿರುದ್ಧ ಒಂದು ಧ್ವನಿ ಹುಟ್ಟುವ ಲಕ್ಷಣ ಕಳೆದ ಕೆಲವು ವರ್ಷಗಳಿಂದಲೇ ಕಾಣಿಸುತ್ತಿತ್ತು. ಅದೀಗ ಅಧೀಕೃತವಾಗಿ ಹುಟ್ಟಿದೆ. 'ಯುವಕರು ಪಕೋಡ ಮಾರಿಯೂ ಜೀವನ ನಡೆಸಬಹುದು, ಚರಂಡಿಯಿಂದಲೂ ಗ್ಯಾಸ್ ಉತ್ಪಾದಿಸಬಹುದು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಡಿಜಿಟಲ್ ಚಳವಳಿ ಬಲವಾದ ತಪರಾಕಿ ಕೊಟ್ಟಂತಿದೆ."
ರಾಜಕೀಯ ಸಮಾನ ಚಿಂತನೆ ಇರುವ ನನ್ನ ಆತ್ಮೀಯರೊಬ್ಬರು ಇಂದು ಕಾಕ್ರೋಚ್ ಜನತಾ ಪಾರ್ಟಿಗೆ ಸೇರಿದ್ದೀರಾ? ಅಂತ ಕೇಳಿದರು. ವ್ಯವಸ್ಥೆಯ ದಬ್ಬಾಳಿಕೆಯ ಧೋರಣೆಯಿಂದ ಕಡೆಗಣಿಸಲ್ಪಟ್ಟ ನಾನು ಅಧಿಕೃತವಾಗಿ ಸೇರುವುದೊಂದು ಬಾಕಿ ಇದೆ ಎಂದು ಉತ್ತರಿಸಿದೆ. ಅವರು ನಕ್ಕರು. ಹೌದು, ನೀವು ಅಂದುಕೊಂಡಿರುವುದು ಸತ್ಯ. ಕಾರ್ಕೋಚ್ ಜನತಾ ಪಾರ್ಟಿ ಬಹಳ ಸದ್ದು ಮಾಡುತ್ತಿದೆ. ವ್ಯವಸ್ಥೆಯ ಪ್ರಭುತ್ವ ಧೋರಣೆಯ ವಿರುದ್ಧ ಒಂದು ಬಲವಾದ ಧ್ವನಿಯಾಗಿ ಕಾಣಿಸುತ್ತಿದೆ.
'ಕಾಕ್ರೋಚ್ ಜನತಾ ಪಾರ್ಟಿ' (Cockroach Janta Party - CJP) ಹುಟ್ಟಿಕೊಳ್ಳಲು ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ಇತ್ತೀಚೆಗೆ (ಮೇ 15, 2026) ನ್ಯಾಯಾಲಯದ ವಿಚಾರಣೆಯೊಂದರ ಸಂದರ್ಭದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಯೇ ನೇರ ಕಾರಣ.
"ಉದ್ಯೋಗ ಸಿಗದ ಅಥವಾ ವೃತ್ತಿಯಲ್ಲಿ ಯಾವುದೇ ಸ್ಥಾನ ಕಂಡುಕೊಳ್ಳದ ಜಿರಳೆಗಳಂತಹ (Cockroaches) ಯುವಕರು ಸಮಾಜದಲ್ಲಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮ, ಇನ್ನು ಕೆಲವರು ಸೋಶಿಯಲ್ ಮೀಡಿಯಾ, ಆರ್‌ಟಿಐ (RTI) ಕಾರ್ಯಕರ್ತರು ಮತ್ತು ಆಕ್ಟಿವಿಸ್ಟ್‌ಗಳಾಗಿ ವ್ಯವಸ್ಥೆಯ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸುತ್ತಾರೆ." ಎಂದು ಹೇಳಿದ್ದರು.
ದೇಶದಲ್ಲಿ ತೀವ್ರವಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯ ನಡುವೆ, ಯುವಕರನ್ನು 'ಜಿರಳೆ' ಮತ್ತು 'ಪರಾವಲಂಬಿ' ಎಂದು ಕರೆದ ನ್ಯಾಯಮೂರ್ತಿಗಳ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಈ ಆಕ್ರೋಶವನ್ನು ವಿಭಿನ್ನವಾಗಿ ದಾಖಲಿಸಲು ಅಭಿಜೀತ್ ದಿಪ್ಕೆ ಎಂಬ ಯುವ ರಾಜಕೀಯ ಸಂವಹನ ತಜ್ಞ ಮೇ 16, 2026 ರಂದು 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ವಿಡಂಬನಾತ್ಮಕ (Satirical) ಡಿಜಿಟಲ್ ವೇದಿಕೆಯನ್ನು ಸ್ಥಾಪಿಸಿದರು. Voice of the Lazy & Unemployed ಎಂಬ ಧ್ಯೇಯವಾಕ್ಯವನ್ನೂ ನೀಡಿದರು. 'ಯುವಕರು ಪಕೋಡ ಮಾರಿಯೂ ಜೀವನ ನಡೆಸಬಹುದು, ಚರಂಡಿಯಿಂದಲೂ ಗ್ಯಾಸ್ ಉತ್ಪಾದಿಸಬಹುದು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಡಿಜಿಟಲ್ ಚಳವಳಿ ಬಲವಾದ ತಪರಾಕಿ ಕೊಟ್ಟಂತಿತ್ತು.'
ವ್ಯವಸ್ಥಿತ ಕಡೆಗಣನೆಗೆ ವಿಡಂಬನಾತ್ಮಕ ಪ್ರತಿಕ್ರಿಯೆ :
ಭಾರತದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ಚಳವಳಿಗಳು ಮತ್ತು ಹೊಸ ರಾಜಕೀಯ ಪಕ್ಷಗಳು ಕೇವಲ ಸದ್ದಿಲ್ಲದೆ ಹುಟ್ಟಿಕೊಳ್ಳುವುದಿಲ್ಲ, ಅವು ಸಮಾಜದಲ್ಲಿ ಧಗಧಗಿಸುತ್ತಿರುವ ಅಸಮಾಧಾನದ ಜ್ವಾಲೆಯಿಂದ ಹೊರಹೊಮ್ಮುತ್ತವೆ. ಕಳೆದ ಕೆಲವೇ ಕೆಲವು ದಿನಗಳಿಂದ ಯುವ ಸಮೂಹದ ಗಮನ ಸೆಳೆಯುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ' ಕೂಡ ಇಂತಹದ್ದೇ ಒಂದು ವಿಶಿಷ್ಟ, ಆದರೆ ಆಳವಾದ ಸಾಮಾಜಿಕ ಆತಂಕದಿಂದ ಹುಟ್ಟಿಕೊಂಡ ಧ್ವನಿಯಾಗಿದೆ. ಇದು ಕೇವಲ ಒಂದು ಸಾಂಕೇತಿಕ ಹೆಸರಲ್ಲ, ಬದಲಿಗೆ ದೇಶವನ್ನು ಕಾಡುತ್ತಿರುವ ತೀವ್ರ ನಿರುದ್ಯೋಗ ಮತ್ತು ಯುವಕರ ಹತಾಶೆಯ ವಿರುದ್ಧದ ಒಂದು ಕಟು ವಿಡಂಬನೆಯಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮೀರಿ ಫಾಲೋವರ್ಸ್ ಅನ್ನು ಈ ಹೊಸ ರಾಜಕೀಯ ಚಳವಳಿ ಪಕ್ಷ ಹೊಂದಿದೆ ಎನ್ನುವುದು ದೊಡ್ಡ ವಿಷಯವಲ್ಲ. ಆ ಸೃಜನಶೀಲ ಚಳವಳಿಯ ಹಿಂದೆ ಈ ವ್ಯವಸ್ಥೆಯಿಂದ ಕಡೆಗಣಿಸಲ್ಪಟ್ಟ, ಪ್ರಭುತ್ವ ರಾಜಕಾರಣದಿಂದ ಬದಿಗೆ ತಳ್ಳಲ್ಪಟ್ಟ ಯುವಕರ ದೊಡ್ಡ ಆಕ್ರೋಶವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ದೇಶದ ಆಡಳಿತಾರೂಢ ಸರ್ಕಾರದ ದಮನಕಾರಿ ನಡೆಯ ವಿರುದ್ಧ ಒಂದು ಧ್ವನಿ ಹುಟ್ಟುವ ಲಕ್ಷಣ ಕಳೆದ ಕೆಲವು ವರ್ಷಗಳಿಂದಲೇ ಕಾಣಿಸುತ್ತಿತ್ತು. ಅದೀಗ ಅಧೀಕೃತವಾಗಿ ಹುಟ್ಟಿದೆ.
ಬಂಡವಾಳಶಾಹಿ ಮತ್ತು ದೇಶದ ಅತ್ಯಂತ ಅಪಾಯಕಾರಿ ಆರ್ಥಿಕ ನೀತಿಗಳು ಯುವಕರ ಬದುಕನ್ನು ಹಾಳುಗೆಡವಿದೆ. ಉದ್ಯೋಗ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪದವಿ ಪಡೆದ ಯುವಕರು ಇಂದು ಬೀದಿಗಿಳಿದಿದ್ದಾರೆ. 'ಕಾಕ್ರೋಚ್' (ಜಿರಳೆ) ಎಂಬ ಕೀಟ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ, ಯಾವುದೇ ಸೌಲಭ್ಯವಿಲ್ಲದಿದ್ದರೂ ಬದುಕಿ ಉಳಿಯುವ ಜೀವಿಯಾಗಿದೆ. ಪ್ರಸ್ತುತ ಯುವ ಪೀಳಿಗೆ ತಮಗೆ ಉದ್ಯೋಗ, ಭದ್ರತೆ ಅಥವಾ ಸಾಮಾಜಿಕ ನ್ಯಾಯ ಸಿಗದಿದ್ದರೂ, ವ್ಯವಸ್ಥೆಯ ಕಡೆಗಣನೆಯ ನಡುವೆಯೂ "ನಾವು ಬದುಕಿ ಉಳಿಯುತ್ತೇವೆ" ಎಂದು ತೋರಿಸಲು ಈ ಹೆಸರನ್ನು ಬಳಸಿಕೊಂಡಿರುವುದು ಪ್ರಭುತ್ವಕ್ಕೆ ನೀಡಿದ ಚಾಟಿಯೇಟಾಗಿದೆ.
ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಯುವಕರ ಆಕ್ರೋಶ :
ದಶಕಗಳಿಂದ ಆಳುವ ಸರ್ಕಾರಗಳು ಕಾರ್ಪೊರೇಟ್ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಮತ್ತು ಸವಲತ್ತುಗಳನ್ನು ನೀಡುತ್ತಾ ಬಂದಿವೆಯೇ ಹೊರತು, ಸಾರ್ವಜನಿಕ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿಲ್ಲ. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದಿರುವುದು ಮತ್ತು ಗುತ್ತಿಗೆ ಆಧಾರಿತ ದುಡಿಮೆಯನ್ನು ಪ್ರೋತ್ಸಾಹಿಸುತ್ತಿರುವುದು ಯುವಕರನ್ನು ಶೋಷಣೆಗೆ ತಳ್ಳಿದೆ. 'ಕಾಕ್ರೋಚ್ ಜನತಾ ಪಾರ್ಟಿ' ಈ ಕಾರ್ಪೊರೇಟ್-ರಾಜಕಾರಣಿಗಳ ಅಪವಿತ್ರ ಮೈತ್ರಿಯ ವಿರುದ್ಧ ಶ್ರಮಿಕ ಮತ್ತು ಸುಶಿಕ್ಷಿತ ನಿರುದ್ಯೋಗಿ ಯುವಕರ ಒಕ್ಕೂಟವಾಗಿ ಬಿಂಬಿತವಾಗುತ್ತಿದೆ.
ಈ ಚಳವಳಿ ಪ್ರೇರಿತ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಮೇಲ್ನೋಟಕ್ಕೆ ಇವು ಹಾಸ್ಯದಂತೆ ಕಂಡರೂ, ಪ್ರತಿ ಭರವಸೆಯ ಹಿಂದೆ ದೇಶದ ನಿರುದ್ಯೋಗಿ ಯುವ ಸಮೂಹದ ಆಳವಾದ ಹತಾಶೆ ಮತ್ತು ಆಕ್ರೋಶ ಅಡಗಿದೆ ಎನ್ನುವುದು ಇಲ್ಲಿ ಉಲ್ಲೇಖನೀಯ.
ಶಿಕ್ಷಣ ಇಲಾಖೆಯ ವೈಫಲ್ಯ ಮತ್ತು ಖಾಸಗಿ ಕೋಚಿಂಗ್ ಮಾಫಿಯಾವನ್ನು ಇದು ನೇರವಾಗಿ ಪ್ರಶ್ನಿಸುತ್ತಿದೆ. ಐಐಟಿ, ನೀಟ್, ಯುಪಿಎಸ್‌ಸಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿರುವ ಕೋಚಿಂಗ್ ಸೆಂಟರ್‌ಗಳು ಯುವಕರ ಕನಸುಗಳ ಮೇಲೆ ಪ್ರಹಾರ ಮಾಡುತ್ತಿರುವುದರ ವಿರುದ್ಧದ ಆಕ್ರೋಶವಿದು.
ಇತಿಹಾಸದಲ್ಲಿ ಯಾವುದೇ ಸರ್ವಾಧಿಕಾರಿ ಅಥವಾ ನಿರಂಕುಶ ವ್ಯವಸ್ಥೆಗೆ ಅತ್ಯಂತ ಭಯ ಹುಟ್ಟಿಸುವುದು ಆ ವ್ಯವಸ್ಥೆಯ ಮೇಲಾಗುವ "ವಿಡಂಬನೆ". ಬೀದಿಗಿಳಿದು ಮಾಡುವ ಗಂಭೀರ ಹೋರಾಟಗಳನ್ನು ಪೊಲೀಸರ ಲಾಠಿ, ಜೈಲುಗಳ ಮೂಲಕ ಹತ್ತಿಕ್ಕಬಹುದು. ಆದರೆ, ಯುವಕರು ವಿಡಂಬನೆ ಮಾಡುತ್ತಾ ವ್ಯವಸ್ಥೆಯ ತಪ್ಪುಗಳನ್ನು ಜಗತ್ತಿನೆದುರು ಬೆತ್ತಲೆಗೊಳಿಸಿದಾಗ ಅದಕ್ಕೆ ಪ್ರಭುತ್ವದ ಬಳಿ ಉತ್ತರವಿರುವುದಿಲ್ಲ.
ಹೊಸ ಮಾದರಿಯ ಪ್ರತಿರೋಧ :
ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ನಿರುದ್ಯೋಗವನ್ನು ಕೇವಲ ಚುನಾವಣಾ ವಿಷಯವನ್ನಾಗಿ ಬಳಸಿಕೊಳ್ಳುತ್ತವೆಯೇ ಹೊರತು ಪ್ರಾಮಾಣಿಕ ಪರಿಹಾರ ಹುಡುಕುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ, ಯುವ ಸಮೂಹ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪ್ರತಿರೋಧ ದಾಖಲಿಸುತ್ತಿದೆ. ಗಂಭೀರವಾದ ರಾಜಕೀಯ ಚರ್ಚೆಗಳ ನಡುವೆ ವಿಡಂಬನೆಯನ್ನು (Satire) ಅಸ್ತ್ರವನ್ನಾಗಿ ಬಳಸಿ ವ್ಯವಸ್ಥೆಯನ್ನು ಬೆತ್ತಲೆಗೊಳಿಸುತ್ತಿದೆ.
ಧಾರ್ಮಿಕ ಧ್ರುವೀಕರಣದ ರಾಜಕಾರಣಕ್ಕೆ ಬ್ರೇಕ್ !
ಇಂದಿನ ರಾಜಕೀಯ ವ್ಯವಸ್ಥೆ ಯುವಕರನ್ನು ಧರ್ಮ, ಜಾತಿ ಮತ್ತು ಭಾವನಾತ್ಮಕ ವಿಷಯಗಳ ಹೆಸರಿನಲ್ಲಿ ದಾರಿ ತಪ್ಪಿಸಲು ಯತ್ನಿಸುತ್ತಿದೆ. ಆದರೆ, 'ಕಾಕ್ರೋಚ್ ಜನತಾ ಪಾರ್ಟಿ'ಯಂತಹ ಧ್ವನಿಗಳು ಯುವಕರ ಅಸಲಿ ಸಮಸ್ಯೆಗಳಾದ "ಶಿಕ್ಷಣ, ಉದ್ಯೋಗ"ದಂತಹ ಸಮಸ್ಯೆಯನ್ನು ಮುಂಚೂಣಿಗೆ ತರುತ್ತಿವೆ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ರಾಜಕಾರಣಕ್ಕೆ ಯುವಕರು ಬಲಿಯಾಗದೆ, ತಮ್ಮ ಹಕ್ಕುಗಳಿಗಾಗಿ ಒಂದಾಗುತ್ತಿದ್ದಾರೆ ಎಂಬುದಕ್ಕೆ ಇದು ಆಶಾದಾಯಕ ಮುನ್ಸೂಚನೆಯಂತಿದೆ.
ಒಟ್ಟಿನಲ್ಲಿ, 'ಕಾಕ್ರೋಚ್ ಜನತಾ ಪಾರ್ಟಿ' ಎನ್ನುವುದು ಕೇವಲ ಒಂದು ವಿಡಂಬನೆಯಲ್ಲ, ವ್ಯವಸ್ಥೆಯ ವಿರುದ್ಧ ಯುವಕರು ಸಾರಿದ ಬಂಡಾಯ. ಹಸಿದ ಮನಸ್ಸುಗಳು ಮತ್ತು ನಿರುದ್ಯೋಗಿ ಕೈಗಳು ಒಂದಾದಾಗ ಎಂತಹ ಬಲಿಷ್ಠ ಸಾಮ್ರಾಜ್ಯವೂ ನಡುಗುತ್ತದೆ ಎಂಬುದಕ್ಕೆ ಈ ಡಿಜಿಟಲ್ ಚಳವಳಿಯೇ ಸಾಕ್ಷಿ. ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಂಡು ಯುವಕರಿಗೆ ಉದ್ಯೋಗ ಭದ್ರತೆ ನೀಡದಿದ್ದರೆ, ಈ 'ಜಿರಳೆಗಳ ಸೈನ್ಯ' ವ್ಯವಸ್ಥೆಯ ಕೊಳಕನ್ನು ತೊಳೆದುಹಾಕಲು ಬೀದಿಗಿಳಿಯುವುದು ಖಚಿತ ಎಂಬಂತಹ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿದೆ.
-ಶ್ರೀರಾಜ್ ವಕ್ವಾಡಿ

No comments:
Post a Comment