ಭಾರತೀಯ ಪತ್ರಿಕೋದ್ಯಮ ನಾರ್ವೆಯ ಪತ್ರಿಕೋದ್ಯಮದ ಎದುರು ಇಷ್ಟೊಂದು ಕುಸಿತವಾಗಿರುವುದು ಯಾಕೆ!? ಅಲ್ಲಿ ಮುಖ್ಯವಾಗಿ ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸಿದವರನ್ನು ದೇಶದ್ರೋಹಿಗಳೆಂದು ಕರೆಯುವುದಿಲ್ಲ. ವ್ಯವಸ್ಥೆ ಮತ್ತು ಸರ್ಕಾರದ ತಪ್ಪನ್ನು ಪ್ರಶ್ನಿಸುವುದನ್ನು ಅಲ್ಲಿನ ಮಾಧ್ಯಮ ಸಂಸ್ಥೆ ಮತ್ತು ಆಡಳಿತರೂಢ ಸರ್ಕಾರ ದೇಶದ್ರೋಹದ ಕೆಲಸ ಎಂದು ಬಿಂಬಿಸಿ ಲೇಬಲ್ ಮಾಡುವುದಿಲ್ಲ. ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳುವುದು ಪತ್ರಕರ್ತರ ಕರ್ತವ್ಯ ಎಂದು ಅಲ್ಲಿನ ಸರ್ಕಾರ ಮತ್ತು ಸಾರ್ವಜನಿಕರು ಗೌರವಿಸುತ್ತಾರೆ.
ಭಾರತದಲ್ಲಿ ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿರುವ ಮಾಧ್ಯಮ ಸಂಸ್ಥೆಗಳ ಒಳಗಿರುವ "ಆಂತರಿಕ ಪತ್ರಿಕಾ ಸ್ವಾತಂತ್ರ್ಯದ" (Internal Press Freedom) ಕುಸಿತವೂ ಮುಖ್ಯಾಂಶ. ಸಂಸ್ಥೆಯ ನಿಲುವಿಗೆ ವಿರುದ್ಧವಾಗಿ ಅಥವಾ ಆಡಳಿತ ಮಂಡಳಿಗೆ ಇಷ್ಟವಿಲ್ಲದ ಸತ್ಯವನ್ನು ವರದಿ ಮಾಡಲು ಪತ್ರಕರ್ತ ಧೈರ್ಯ ತೋರಿದರೆ, ಆತನನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಲಾಗುತ್ತದೆ.
ಜಗತ್ತಿನ ಯಾವುದೇ ಸರ್ವಾಧಿಕಾರಿ ಅಥವಾ ದಮನಕಾರಿ ಪ್ರಭುತ್ವ ಅಧಿಕಾರಕ್ಕೆ ಬಂದಾಗ ಮೊದಲು ಮಾಡುವುದೇ ಪತ್ರಕರ್ತರ, ಬರಹಗಾರರ ಮತ್ತು ಬುದ್ಧಿಜೀವಿಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ. ಆದರೆ, ಧ್ವನಿಯನ್ನು ಅಡಗಿಸುವುದರಿಂದ ಸತ್ಯ ಸಾಯುವುದಿಲ್ಲ, ಬದಲಿಗೆ ತಾತ್ಕಾಲಿಕವಾಗಿ ಅದು ಸಾರ್ವಜನಿಕ ವಲಯದಿಂದ ಮರೆಯಾಗಬಹುದು.
ನಾರ್ವೆ ಪ್ರಧಾನಿ ಜೋನಸ್ ಗಹರ್ ಸ್ಟೋರ್ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆ (Joint Press Statement) ನೀಡಿದ ನಂತರ ಪ್ರಧಾನಿ ಮೋದಿ ಅವರು ವೇದಿಕೆಯಿಂದ ನಿರ್ಗಮಿಸುತ್ತಿದ್ದರು. ಈ ವೇಳೆ ನಾರ್ವೆಯ 'ಡಾಗ್ಸ್‌ವಿಸೆನ್' (Dagsavisen) ಪತ್ರಿಕೆಯ ಯುವ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸೆನ್ (Helle Lyng Svendsen) ಅವರು ಜೋರಾಗಿ, "ಪ್ರಧಾನಿ ಮೋದಿಯವರೇ, ಜಗತ್ತಿನ ಅತ್ಯಂತ ಮುಕ್ತ ಮಾಧ್ಯಮದಿಂದ ಕೆಲವು ಪ್ರಶ್ನೆಗಳನ್ನು ನೀವು ಏಕೆ ಸ್ವೀಕರಿಸಬಾರದು?" ಎಂದು ಪ್ರಶ್ನಿಸಿದರು. ಆದರೆ, ಪ್ರಧಾನಿ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ತೆರಳಿದರು.
ಇದನ್ನು ವಿಡಿಯೋ ಸಮೇತ ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಹೆಲ್ಲೆ ಲಿಂಗ್, "ಭಾರತದ ಪ್ರಧಾನಿ ನನ್ನ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ನನಗೆ ಗೊತ್ತಿತ್ತು. ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ 1ನೇ ಸ್ಥಾನದಲ್ಲಿದ್ದರೆ, ಭಾರತ 157ನೇ ಸ್ಥಾನದಲ್ಲಿದೆ. ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ನಮ್ಮ ಕರ್ತವ್ಯ" ಎಂದು ಬರೆದುಕೊಂಡರು. ಇದು ತೀವ್ರ ಚರ್ಚೆಗೆ ಕಾರಣವಾಯಿತು. ಜಾಗತಿಕ ಅವಮಾನವನ್ನೂ ಪ್ರಧಾನಿ ಮೋದಿ ಅವರ ನಿರುತ್ತರದಿಂದ ಭಾರತ ಅನುಭವಿಸುವಂತಾಯಿತು. ದೇಶದಲ್ಲಿ ಪ್ರಧಾನಿ ಮೋದಿ ಅವರ ನಡೆಗೆ ಕಾಂಗ್ರೆಸ್ ಸೇರಿ ಇತರೆ ಪ್ರತಿಪಕ್ಷಗಳು ಖಂಡಿಸಿದವು.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ ಆ ಯುವ ಪತ್ರಕರ್ತೆಯನ್ನು ಪ್ರೆಸ್ ಬ್ರೀಫಿಂಗ್‌ಗೆ ಆಹ್ವಾನಿಸಿತು. ಅಲ್ಲಿ ಹೆಲ್ಲೆ ಲಿಂಗ್ ನೇರವಾಗಿ, "ನಾವು ನಿಮ್ಮನ್ನು ಏಕೆ ನಂಬಬೇಕು? ನಿಮ್ಮ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಲ್ಲಿಸುತ್ತೀರಾ ಮತ್ತು ಪ್ರಧಾನಿ ಮೋದಿ ಎಂದಾದರೂ ಪತ್ರಕರ್ತರ ಕಠಿಣ ಪ್ರಶ್ನೆಗಳನ್ನು ಎದುರಿಸುತ್ತಾರಾ?" ಎಂದು ಪ್ರಶ್ನಿಸಿದರು.
ಇದಕ್ಕೆ ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಸಿಬಿ ಜಾರ್ಜ್ ಅವರು ತೀಕ್ಷ್ಣವಾಗಿ ಉತ್ತರಿಸಿ, "ಭಾರತ 5000 ವರ್ಷಗಳ ಇತಿಹಾಸವಿರುವ, ಜಗತ್ತಿನ 1/6 ಭಾಗದಷ್ಟು ಜನಸಂಖ್ಯೆ ಹೊಂದಿರುವ ಬೃಹತ್ ಪ್ರಜಾಪ್ರಭುತ್ವ. ನಮ್ಮಲ್ಲಿ ಪ್ರಬಲ ಸಂವಿಧಾನ ಮತ್ತು ನ್ಯಾಯಾಲಯಗಳಿವೆ. ಕೆಲವು ಎನ್‌ಜಿಒಗಳ (NGO) ವರದಿಗಳನ್ನು ನೋಡಿ ಭಾರತವನ್ನು ನಿರ್ಣಯಿಸಬೇಡಿ" ಎಂದು ತಿರುಗೇಟು ನೀಡಿದರು.
ಈ ಘಟನೆಯ ಬೆನ್ನಲ್ಲೇ ನಾರ್ವೆಯ ಪ್ರಮುಖ ಪತ್ರಿಕೆ 'ಆಫ್ಟೆನ್‌ಪೋಸ್ಟನ್' (Aftenposten) ಪ್ರಧಾನಿ ಮೋದಿಯವರನ್ನು ಹಾವಾಡಿಗನಂತೆ (Snake Charmer) ಚಿತ್ರಿಸುವ ಕಾರ್ಟೂನ್ ಒಂದನ್ನು ಪ್ರಕಟಿಸಿತು. ಇದರಲ್ಲಿ ಮೋದಿಯವರು ಪುಂಗಿ ಊದಿದಾಗ ಹಾವಿನ ಆಕಾರದ ಇಂಧನ ಪೈಪ್ ಏರಿಕೆ ಆಗುತ್ತಿರುವುದನ್ನು (ಬೆಲೆ ಏರಿಕೆಯ ವ್ಯಂಗ್ಯ ಚಿತ್ರ) ತೋರಿಸಲಾಗಿತ್ತು. ಇದು ಜಾಗತಿಕ ಮಟ್ಟದಲ್ಲಿ ಭಾರತೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಪಾಶ್ಚಿಮಾತ್ಯ ಮಾಧ್ಯಮಗಳ ಹಳೆಯ "ವಸಾಹತುಶಾಹಿ ಮತ್ತು ಜನಾಂಗೀಯ ನಿಂದನೆ" (Racist/Colonial Mindset) ಮನಸ್ಥಿತಿಯನ್ನು ತೋರಿಸುತ್ತದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ವಿವಾದದ ಬೆನ್ನಲ್ಲೇ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಖಾತೆಗಳನ್ನು ಮೆಟಾ (Meta) ಸಂಸ್ಥೆ ಸಸ್ಪೆಂಡ್ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿದ ಆಕೆ, "ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ನಾನು ತೆತ್ತ ಸಣ್ಣ ಇನಾಮು ಇದು" ಎಂದು ವ್ಯಂಗ್ಯವಾಡಿದ್ದಾರೆ.
ಇಷ್ಟೆಲ್ಲಾ ಚರ್ಚೆ, ವಾದ, ವಿವಾದಗಳ ನಡುವೆ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್' (RSF) ಬಿಡುಗಡೆ ಮಾಡಿರುವ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ (World Press Freedom Index) ಒಟ್ಟು 180 ದೇಶಗಳ ಪಟ್ಟಿಯಲ್ಲಿ ನಾರ್ವೇ 1ನೇ ಸ್ಥಾನದಲ್ಲಿದ್ದರೆ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ 157ನೇ ಸ್ಥಾನಕ್ಕೆ ಕುಸಿದಿದೆ.
ಭಾರತ ತನ್ನ ನೆರೆಹೊರೆಯ ದೇಶಗಳಾದ ನೇಪಾಳ (87), ಶ್ರೀಲಂಕಾ (134) ಮತ್ತು ಪಾಕಿಸ್ತಾನ (153) ದೇಶಗಳಿಗಿಂತಲೂ ಕೆಳಗಿನ ಸ್ಥಾನದಲ್ಲಿದೆ.
ನಾರ್ವೆಯಲ್ಲಿ ಪತ್ರಿಕೋದ್ಯಮಕ್ಕೆ ಬಲವೇ ಸಾಂವಿಧಾನಿಕ ರಕ್ಷಣೆ :
ನಾರ್ವೇ ಸಂವಿಧಾನದ 100ನೇ ವಿಧಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಪಡೆಯುವ ಹಕ್ಕನ್ನು ಸಂಪೂರ್ಣವಾಗಿ ಖಾತರಿಪಡಿಸುತ್ತದೆ. ಅಲ್ಲಿ ಯಾರಿಗೇ ಆದರೂ ಮಾಹಿತಿ ನೀಡಲು ಸರ್ಕಾರ ನಿರಾಕರಿಸುವಂತಿಲ್ಲ. ನಾರ್ವೇಯಲ್ಲಿ ಮಾಧ್ಯಮ ಸಂಸ್ಥೆಗಳು ಯಾವುದೇ ರಾಜಕೀಯ ಪಕ್ಷದ ಅಥವಾ ದೈತ್ಯ ಕಾರ್ಪೊರೇಟ್ ಕಂಪನಿಗಳ ಮುಷ್ಠಿಯಲ್ಲಿಲ್ಲ. ಅಲ್ಲಿನ ಸರ್ಕಾರ ಮಾಧ್ಯಮಗಳಿಗೆ ಧನಸಹಾಯ ನೀಡುತ್ತದೆಯಾದರೂ, ಅದರ ಸಂಪಾದಕೀಯ ವಿಷಯ (Editorial content) ನಿರ್ಧಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಮುಖ್ಯವಾಗಿ ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸಿದವರನ್ನು ದೇಶದ್ರೋಹಿಗಳೆಂದು ಕರೆಯುವುದಿಲ್ಲ. ಪ್ರಶ್ನಿಸಿದ ಪತ್ರಕರ್ತರನ್ನು ಮಾಧ್ಯಮ ಸಂಸ್ಥೆಯೂ ಸಕಾರಣವಿಲ್ಲದೆ ಹೊರಗೆ ಹಾಕುವುದಿಲ್ಲ. ವ್ಯವಸ್ಥೆ ಮತ್ತು ಸರ್ಕಾರದ ತಪ್ಪನ್ನು ಪ್ರಶ್ನಿಸುವುದನ್ನು ಅಲ್ಲಿನ ಮಾಧ್ಯಮ ಸಂಸ್ಥೆ ಮತ್ತು ಆಡಳಿತರೂಢ ಸರ್ಕಾರ ದೇಶದ್ರೋಹದ ಕೆಲಸ ಎಂದು ಬಿಂಬಿಸಿ ಲೇಬಲ್ ಮಾಡುವುದಿಲ್ಲ. ಪತ್ರಕರ್ತರನ್ನು ದೇಶದ್ರೋಹಿಗಳಂತೆ ನೋಡುವುದಿಲ್ಲ ಅಥವಾ ಅವರ ಮೇಲೆ ದೈಹಿಕ ಹಲ್ಲೆ, ಕಾನೂನು ಕ್ರಮಗಳ ಭಯ ಇರುವುದಿಲ್ಲ. ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳುವುದು ಪತ್ರಕರ್ತರ ಕರ್ತವ್ಯ ಎಂದು ಅಲ್ಲಿನ ಸರ್ಕಾರ ಮತ್ತು ಸಾರ್ವಜನಿಕರು ಗೌರವಿಸುತ್ತಾರೆ. ಮತ್ತು ಮಾಧ್ಯಮ ಸಂಸ್ಥೆಯೂ ಆ ರೀತಿಯಾಗಿ ನೇರ ನಿಷ್ಠುರವಾಗಿ, ಪಕ್ಷಾತೀತವಾಗಿ ಇರುವ ಪತ್ರಕರ್ತರನ್ನು ಇನ್ನಷ್ಟು ಉತ್ತುಂಗಕ್ಕೆ ಬೆಳೆಸುತ್ತದೆ ವಿನಃ ಕಾಲೆಳೆಯುವುದಿಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ.
ಭಾರತ 157ನೇ ಸ್ಥಾನಕ್ಕೆ ಕುಸಿಯಲು ಕಾರಣಗಳೇನು?
ಸ್ವತಂತ್ರ ಪತ್ರಕರ್ತರು ಮತ್ತು ಸರ್ಕಾರದ ನೀತಿಗಳನ್ನು ವಿಶ್ಲೇಷಣೆ ಮಾಡುವ ಮಾಧ್ಯಮ ಸಂಸ್ಥೆಗಳ ಧ್ವನಿಯನ್ನು ಅಡಗಿಸಲು ಗಂಭೀರ ಕಾನೂನುಗಳನ್ನು ಬಳಸಲಾಗುತ್ತಿದೆ. ರಾಷ್ಟ್ರೀಯ ಭದ್ರತೆ, ದೇಶದ್ರೋಹದ ಕಾಯ್ದೆ ಮತ್ತು UAPA (Unlawful Activities Prevention Act) ಅಡಿಯಲ್ಲಿ ಪತ್ರಕರ್ತರನ್ನು ಬಂಧಿಸುತ್ತಿರುವುದು ಈ ಭಾರಿ ಕುಸಿತಕ್ಕೆ ಮೂಲ ಕಾರಣ.
ಭಾರತದ ಪ್ರಮುಖ ಮುಖ್ಯವಾಹಿನಿಯ ಮಾಧ್ಯಮಗಳು (Mainstream Media) ಕೆಲವೇ ಕೆಲವು ಪ್ರಭಾವಿ ಉದ್ಯಮಿಗಳ ಒಡೆತನದಲ್ಲಿವೆ. ಇವು ಪ್ರಭುತ್ವದೊಂದಿಗೆ ನಿಕಟ ಸಂಬಂಧ ಹೊಂದಿರುವುದರಿಂದ, ಜನಸಾಮಾನ್ಯರ ನೈಜ ಸಮಸ್ಯೆಗಳಾದ ನಿರುದ್ಯೋಗ, ಆರ್ಥಿಕ ಕುಸಿತ, ಭ್ರಷ್ಟಾಚಾರಗಳ ಬಗ್ಗೆ ವರದಿ ಮಾಡುವ ಬದಲಿಗೆ, ಕೇವಲ ಸರ್ಕಾರದ ಪ್ರಚಾರದ ಸಾಧನಗಳಾಗಿ ಮಾರ್ಪಟ್ಟಿವೆ. ಸರ್ಕಾರವನ್ನು ಸಮರ್ಥಿಸಿಕೊಳ್ಳುವುದಕ್ಕೆ ಎಂತಹ ಕೆಳಮಟ್ಟಕ್ಕೆ ಇಳಿಯಲೂ ಹೇಸುವುದಿಲ್ಲ. ಇನ್ನು, ಗ್ರಾಮೀಣ ಭಾಗಗಳಲ್ಲಿ ಅಥವಾ ಸ್ಥಳೀಯ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಪತ್ರಕರ್ತರಿಗೆ ಭಾರತದಲ್ಲಿ ಸೂಕ್ತ ರಕ್ಷಣೆ ಇಲ್ಲ. ದೈಹಿಕ ಹಲ್ಲೆಗಳು, ಕೊಲೆ ಬೆದರಿಕೆಗಳು ಮತ್ತು ಆನ್‌ಲೈನ್‌ನಲ್ಲಿ (ವಿಶೇಷವಾಗಿ ಮಹಿಳಾ ಪತ್ರಕರ್ತೆಯರ ವಿರುದ್ಧ) ನಡೆಯುವ ವ್ಯವಸ್ಥಿತ ಟ್ರೋಲಿಂಗ್‌ಗಳು ಪತ್ರಕರ್ತರಲ್ಲಿ ಒಂದು ರೀತಿಯ ಸ್ವಯಂ-ಸೆನ್ಸಾರ್‌ಶಿಪ್ (Self-censorship) ಅಂದರೆ, ತಾವಾಗಿಯೇ ಸತ್ಯವನ್ನು ಬರೆಯಲು ಹೆದರುವ ವಾತಾವರಣವನ್ನು ಸೃಷ್ಟಿಸಿದೆ.
ಭಾರತದ ದೃಶ್ಯ ಮಾಧ್ಯಮಗಳು (TV Channels) ಇಂದು ಕೇವಲ ರಾಜಕೀಯ ಧ್ರುವೀಕರಣ ಮತ್ತು ಧಾರ್ಮಿಕ ವಿವಾದಗಳನ್ನೇ ಪ್ರಮುಖ ವಿಷಯಗಳನ್ನಾಗಿ ಚರ್ಚಿಸುತ್ತಿವೆ. ಇದು ಸಮಾಜದಲ್ಲಿ ದ್ವೇಷವನ್ನು ಬಿತ್ತುವುದರ ಜೊತೆಗೆ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಪತ್ರಕರ್ತರ ಧ್ವನಿ ಅಡಗಿಸುವುದು ಸತ್ಯವನ್ನು ಸಾಯಿಸಿದ ಹಾಗೆ :
ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ನಿರಂತರವಾಗಿ ಕಾವಲು ಕಾಯುವ ನಾಲ್ಕನೇ ಅಂಗವೇ ಮಾಧ್ಯಮ (Fourth Estate). ಪತ್ರಕರ್ತರ ಧ್ವನಿಯನ್ನು ಅಡಗಿಸಿದಾಗ, ಆಡಳಿತಗಾರರ ತಪ್ಪುಗಳನ್ನು, ಭ್ರಷ್ಟಾಚಾರವನ್ನು ಮತ್ತು ವೈಫಲ್ಯಗಳನ್ನು ಪ್ರಶ್ನಿಸುವವರೇ ಇಲ್ಲದಂತಾಗುತ್ತದೆ. ಆಗ ಜನಸಾಮಾನ್ಯರಿಗೆ ತಲುಪಬೇಕಾದ 'ನಿಜವಾದ ಸತ್ಯ' ಮರೆಯಾಗಿ, ಕೇವಲ ಪ್ರಭುತ್ವ ಬಯಸುವ 'ಅರ್ಧಸತ್ಯ' ಅಥವಾ 'ಪ್ರಚಾರ' (Propaganda) ಮಾತ್ರ ಸತ್ಯದಂತೆ ಬಿಂಬಿತವಾಗುತ್ತದೆ.
ಜಗತ್ತಿನ ಯಾವುದೇ ಸರ್ವಾಧಿಕಾರಿ ಅಥವಾ ದಮನಕಾರಿ ಪ್ರಭುತ್ವ ಅಧಿಕಾರಕ್ಕೆ ಬಂದಾಗ ಮೊದಲು ಮಾಡುವುದೇ ಪತ್ರಕರ್ತರ, ಬರಹಗಾರರ ಮತ್ತು ಬುದ್ಧಿಜೀವಿಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ. ಆದರೆ, ಧ್ವನಿಯನ್ನು ಅಡಗಿಸುವುದರಿಂದ ಸತ್ಯ ಸಾಯುವುದಿಲ್ಲ, ಬದಲಿಗೆ ತಾತ್ಕಾಲಿಕವಾಗಿ ಅದು ಸಾರ್ವಜನಿಕ ವಲಯದಿಂದ ಮರೆಯಾಗಬಹುದು. ಸತ್ಯ ಒಂದಲ್ಲಾ ಒಂದು ರೀತಿಯಲ್ಲಿ ಹೊರಬಂದೇ ಬರುತ್ತದೆ.
ಎಷ್ಟು ಕಠಿಣವಾಗಿ ಸತ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೋ, ಅಷ್ಟು ತೀವ್ರವಾಗಿ ಅದು ಮತ್ತೊಂದು ರೂಪದಲ್ಲಿ (ಪರ್ಯಾಯ ಮಾಧ್ಯಮಗಳು, ಅಥವಾ ಇಂದಿನ ಡಿಜಿಟಲ್ ಮಾಧ್ಯಮಗಳ ಮೂಲಕ) ಹೊರಬಂದೇ ತೀರುತ್ತದೆ.
'ಯಾವುದೋ ಒಂದು 'ಪ್ರಭಾವಿ ಶಕ್ತಿ' ಪ್ರಕಟಿಸಲು, ಧ್ವನಿಸಲು ಅಡ್ಡಗಾಲು ಹಾಕಿ ಮುಚ್ಚಿಡಲು ಯತ್ನಿಸುವುದೇ ನಿಜವಾದ ಸುದ್ದಿ, ಉಳಿದುದೆಲ್ಲವೂ ಕೇವಲ ಹಣ ಕೊಟ್ಟು ಮಾಡುವ ಪ್ರಚಾರ' ಎನ್ನುವುದು ಅಕ್ಷರಶಃ ಸತ್ಯ. ಆದ್ದರಿಂದ, ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕುವುದು ಎಂದರೆ ಕೇವಲ ವ್ಯಕ್ತಿಯೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದಲ್ಲ, ಅದು ಇಡೀ ಸಮಾಜವನ್ನು ಕತ್ತಲಿನಲ್ಲಿಟ್ಟು ಸತ್ಯದ ಕೊಲೆ ಮಾಡಿದಂತೆ.
ಇನ್ನು, ಪತ್ರಿಕಾ ಸ್ವಾತಂತ್ರ್ಯದ ಕುರಿತಂತೆ ನಾವು ಕೇವಲ "ಬಾಹ್ಯ ಒತ್ತಡಗಳನ್ನು" (ಅಂದರೆ ಸರ್ಕಾರ, ರಾಜಕಾರಣಿಗಳು ಅಥವಾ ತನಿಖಾ ಸಂಸ್ಥೆಗಳ ದಬ್ಬಾಳಿಕೆಯನ್ನು) ಮಾತ್ರ ನೋಡುತ್ತೇವೆ. ಆದರೆ, ಇಂದಿನ ದಿನಗಳಲ್ಲಿ ಅದಕ್ಕಿಂತಲೂ ಅಪಾಯಕಾರಿಯಾಗಿ ಬೆಳೆಯುತ್ತಿರುವ ಮಾಧ್ಯಮ ಸಂಸ್ಥೆಗಳ ಒಳಗಿರುವ "ಆಂತರಿಕ ಪತ್ರಿಕಾ ಸ್ವಾತಂತ್ರ್ಯದ" (Internal Press Freedom) ಕುಸಿತವೂ ಮುಖ್ಯಾಂಶ. ಇದೇ ಕಾರಣಕ್ಕೆ ಪತ್ರಕರ್ತರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಪ್ರಾಮಾಣಿಕತೆಯನ್ನು ಬದಿಗಿಟ್ಟು, ಸಂಸ್ಥೆಯ "ಅಜೆಂಡಾ"ಕ್ಕೆ ತಕ್ಕಂತೆ ವರದಿಗಳನ್ನು ಸೃಷ್ಟಿಸುವ ಯಂತ್ರಗಳಾಗಿ ಬದಲಾಗುತ್ತಿದ್ದಾರೆ.
ಸಂಸ್ಥೆಯ ನಿಲುವಿಗೆ ವಿರುದ್ಧವಾಗಿ ಅಥವಾ ಆಡಳಿತ ಮಂಡಳಿಗೆ ಇಷ್ಟವಿಲ್ಲದ ಸತ್ಯವನ್ನು ವರದಿ ಮಾಡಲು ಪತ್ರಕರ್ತ ಧೈರ್ಯ ತೋರಿದರೆ, ಆತನನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಲಾಗುತ್ತದೆ. ಈ ಆರ್ಥಿಕ ಅಭದ್ರತೆಯು ಪತ್ರಕರ್ತರನ್ನು ಆಂತರಿಕವಾಗಿ ಗುಲಾಮರನ್ನಾಗಿಸುತ್ತಿದೆ. ಅವರು ಸತ್ಯ ಗೊತ್ತಿದ್ದರೂ ಹೊಟ್ಟೆಪಾಡಿಗಾಗಿ ಮೌನಕ್ಕೆ ಶರಣಾಗುತ್ತಿದ್ದಾರೆ.
ಒಟ್ಟಿನಲ್ಲಿ, ಪತ್ರಿಕಾ ಸ್ವಾತಂತ್ರ್ಯ ಎಂಬುದು ಕೇವಲ ಪತ್ರಕರ್ತರ ಹಕ್ಕಲ್ಲ, ಅದು ನಾಗರಿಕರ ಹಕ್ಕು. ಮಾಧ್ಯಮಗಳು ಸ್ವತಂತ್ರವಾಗಿದ್ದಾಗ ಮಾತ್ರ ದೇಶದ ಜನರಿಗೆ ಸರಿಯಾದ ಮಾಹಿತಿ ಸಿಗಲು ಸಾಧ್ಯ. ನಾರ್ವೇ ದೇಶವು ಪ್ರಭುತ್ವವನ್ನು ನಿರ್ಭೀತಿಯಿಂದ ಪ್ರಶ್ನಿಸುವ ವಾತಾವರಣವನ್ನು ಮಾಧ್ಯಮಗಳಿಗೆ ನೀಡಿದ್ದರೆ, ಭಾರತದಲ್ಲಿ ಪ್ರಶ್ನಿಸುವ ಧ್ವನಿಗಳನ್ನು ಹತ್ತಿಕ್ಕುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಭಾರತ ಜಾಗತಿಕ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತವು ಮಾಧ್ಯಮಗಳ ಸ್ವಾತಂತ್ರ್ಯವನ್ನು ಮರುಸ್ಥಾಪಿಸಬೇಕಾದ ತುರ್ತು ಅಗತ್ಯವಿದೆ.
-ಶ್ರೀರಾಜ್ ವಕ್ವಾಡಿ

No comments:
Post a Comment