ಯಾಕೆ ʼಇಂಡಿಯಾʼ, ಮೋದಿ ಸೈದ್ಧಾಂತಿಕ ಬದ್ಧತೆಯ ಎದುರು ಪ್ರತಿಪಕ್ಷಗಳ ಹಾದಿ ಸುಗಮವೆ ?
ಅಂತಿಮವಾಗಿ, ಲೋಕಸಭಾ ರಾಜಕೀಯ ಸಮರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಎರಡು ಸೇನೆಗಳು ಸಿದ್ಧವಾಗಿವೆ. ಒಂದು ೨೬ ಪಕ್ಷಗಳನ್ನು ಹೊಂದಿದೆ ಮತ್ತು ಇನ್ನೊಂದು ೩೮. ಒಂದು ʼಇಂಡಿಯಾʼ ಎಂದು ಮತ್ತು ಇನ್ನೊಂದು ಎನ್ ಡಿಎ. ಒಂದು ಸಾಮೂಹಿಕ ನಾಯಕತ್ವ ಮತ್ತು ಇನ್ನೊಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಮರಕ್ಕೆ ಕಹಳೆ ಊದಿವೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಮೇಲಿಂದ ಮೇಲೆ ವಿರೋಧವನ್ನು ಎದುರಿಸುತ್ತಿದ್ದು, ಬಿಜೆಪಿಯ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿದೆ. ಕಳೆದ ಎರಡು ಲೋಕಸಭಾ ಚುನಾವಣೆಯಂತೆ ಅಂತೂ ೨೦೨೪ರ ಲೋಕಸಭಾ ಚುನಾವಣೆ ಇರುವುದಕ್ಕೆ ಖಂಡಿತ ಸಾಧ್ಯವಿಲ್ಲ ಎಂಬುವುದು ಸ್ಪಷ್ಟವಾದಂತಿದೆ.
ಪ್ರತಿಪಕ್ಷಗಳು ಒಟ್ಟಾಗಿ ಸೇರದ ಹೊರತು ಮೋದಿ ಮತ್ತು ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಬಿಜೆಪಿಯ ಸಾಮಾನ್ಯ ಅಭಿಪ್ರಾಯದ ಹೊರತಾಗಿಯೂ ಈಗ ʼಇಂಡಿಯಾʼ ಸೃಷ್ಟಿಯಾದ ಮೇಲಂತೂ ಬಿಜೆಪಿಗೆ ಹತಾಶೆ ಮೂಡಿದಂತಿದೆ. ಮಣಿಪುರದ ವಾಸ್ತವ ಸ್ಥಿತಿಯನ್ನು ಗಮನಿಸಿ. ಪ್ರತಿಪಕ್ಷಗಳ ಮೈತ್ರಿಗೆ ಇದೊಂದು ರಾಜಕೀಯ ಅಸ್ತ್ರವಾಗಿಯೂ ಸಿಕ್ಕಂತಾಗಿದೆ. ʼಮಣಿಪುರದ ಜ್ವಲಂತ ಸಮಸ್ಯೆಯ ಕುರಿತು ಕೇಂದ್ರದ ಮೌನ ನೋಡಿ, ಧಾರ್ಮಿಕ ವಿಭಜನೆ ಮತ್ತು ಬಹುಸಂಖ್ಯಾತ ಸಮುದಾಯದ ಕಡೆಗಿನ ಪಕ್ಷಪಾತವು ಮಣಿಪುರವನ್ನು ಉರಿಬೆಂಕಿಯಲ್ಲಿ ಕುದಿಯುವಂತೆ ಮಾಡಿದೆ. ಇಂತಹ ಗಂಭೀರ ವಿಚಾರದಲ್ಲಿ ಅಧಿಕಾರಿಗಳು ಮೌನವಹಿಸಿರುವುದು ವಿಷಾದನೀಯ. ಎರಡು ತಿಂಗಳು ಕಳೆದರೂ ಪರಿಸ್ಥಿತಿ ನಿಯಂತ್ರಣಕ್ಕೆ ತರುವುದಕ್ಕೆ ʼಡಬಲ್ ಎಂಜಿನ್ ಸರ್ಕಾರ್ʼ ಸೋತಿದೆ. ಜನರು ಸರ್ಕಾರದಿಂದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಮೂಲಸೌಕರ್ಯ ಮತ್ತು ಉದ್ಯೋಗವನ್ನು ಬಯಸುತ್ತಾರೆಯೇ ಹೊರತು ಗಲಭೆಗಳಲ್ಲ. ಇಂತಹ ಆತಂಕದ ಆಂತರಿಕ ಪರಿಸ್ಥಿತಿಯಿಂದ ವಿಶ್ವ ಶಕ್ತಿ ಅಥವಾ 'ವಿಶ್ವ ಗುರು' ಎಂಬ ಸ್ಥಾನಮಾನವನ್ನು ಸಾಧಿಸಲಾಗುವುದಿಲ್ಲʼ ಎಂದು ಪ್ರತಿಪಕ್ಷಗಳ ಮೈತ್ರಿ ಟೀಕೆ ಎಬ್ಬಸಿ ರಾಜಕೀಯ ಮೈಲೇಜ್ ಪಡೆಯುವುದಕ್ಕೆ ಒಂದಡಿ ಮುಂದಿಟ್ಟಂತಿದೆ. ದೇಶದ ಇಂತಹ ಅನೇಕ ಜ್ವಲಂತ ಸಮಸ್ಯೆಗಳನ್ನು ಪ್ರತಿಪಪಕ್ಷಗಳ ಮೈತ್ರಿ ನಿರಂತರವಾಗಿ ಕಟು ಟೀಕೆ ಮಾಡುತ್ತಿರುವುದು ಮೋದಿ ಸರ್ಕಾರವನ್ನು ತಲೆಗೆ ಕೈಕೊಟ್ಟು ಕೂರುವಂತೆ ಮಾಡಿದೆ.
ಇನ್ನು, ಕೇಂದ್ರಿಯ ಸಂಸ್ಥೆಗಳ ದುರುಪಯೋಗ, ಕೇಂದ್ರಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ತನಗೆ ನಿಷ್ಠೆಯಿಂದಿರುವಂತೆ ಕೇಂದ್ರ ಸರ್ಕಾರ ಸೃಷ್ಟಿಸಿದ ವಾತಾವರಣ ವಿರೋಧ ಪಕ್ಷಗಳು ಒಟ್ಟಾಗಿ ಹೋರಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲದ ಪರಿಸ್ಥಿತಿಗೆ ಕಾರಣವಾಗಿದೆ. ಏಜೆನ್ಸಿಗಳ ಇಂತಹ ದುರುಪಯೋಗವನ್ನು ಭಾರತ ಹಿಂದೆಂದೂ ಕಂಡಿರಲಿಲ್ಲ. ಇಂದು, ರಾಜಕೀಯ ನಾಯಕರು ಮತ್ತು ಪಕ್ಷಗಳನ್ನು ಒಳಗೊಂಡ ಜಾರಿ ನಿರ್ದೇಶನಾಲಯದ ಪ್ರಕರಣಗಳಲ್ಲಿ ಶೇ.೯೫ರಷ್ಟು ಪ್ರತಿಪಕ್ಷ ನಾಯಕರ ವಿರುದ್ಧ ಮತ್ತು ಶೇ.೫ರಷ್ಟು ಮಾತ್ರ ಬಿಜೆಪಿಯೊಂದಿಗೆ ಅಥವಾ ಕೇಂದ್ರದಲ್ಲಿ ಆಡಳಿತ ಪಕ್ಷವನ್ನು ಬೆಂಬಲಿಸುವವರ ವಿರುದ್ಧವಿದೆ. ಪ್ರತಿಪಕ್ಷದ ನಾಯಕರ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ, ಅವರನ್ನು ಜೈಲಿಗೆ ಕಳುಹಿಸುವುದಕ್ಕೆ ಮಾಡುತ್ತಿರುವ ಕಾನೂನಿನ ಆಚೆಗಿನ ಪ್ರಯತ್ನಗಳನ್ನು ಮೆಟ್ಟಿ ನಿಲ್ಲುವುದಕ್ಕಾಗಿ ಈ ಮೈತ್ರಿ ಈಗ ಸದೃಢವಾಗಿಯೇ ಸಜ್ಜಾಗಿರುವುದು ಮೋದಿ ಮತ್ತು ಬಿಜೆಪಿಗೆ ಒಳಗಿಂದೊಳಗೆ ಆತಂಕ ಮೂಡಿಸಿದಂತಿದೆ.
ಸಾಂವಿಧಾನಿಕವಾಗಿ ನೀಡಲಾದ "ಸ್ವಾತಂತ್ರ್ಯ"ದ ಮೇಲಿನ ಈ ಆಕ್ರಮಣವು ಪ್ರತಿಪಕ್ಷಗಳಿಗೆ ಅಸ್ತಿತ್ವವಾದದ ಬಿಕ್ಕಟ್ಟನ್ನು ಎದುರಿಸುವಂತೆ ಮಾಡಿದೆ. ಒಂದೋ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಡುವುದು ಅಥವಾ ಗುಲಾಮಗಿರಿಗೆ ಶರಣಾಗುವುದು ಎಂಬ ಸ್ಥಿತಿ ಪ್ರತಿಪಕ್ಷಗಳ ಎದುರು ಬಂದ ಕಾರಣವೇ ಮೈತ್ರಿ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರದ ಕಾನೂನಿನ ಆಚೆಗಿನ ಆಕ್ರಮಣಗಳು ಬಹುಮುಖಿಯಾಗಿದೆ. ಕೇಂದ್ರಿಯ ಸಂಸ್ಥೆಗಳು ಮಾತ್ರವಲ್ಲದೆ ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳು ವಿರೋಧ ಪಕ್ಷದ ಆಡಳಿತದ ರಾಜ್ಯಗಳಲ್ಲಿ ಸರ್ಕಾರಗಳ ಪಾಲಿಗೆ ನರಕವಾಗಿಸಿರುವ ಉದಾಹರಣೆಗಳು ನಮ್ಮ ಮುಂದಿವೆ. ಮುಖ್ಯವಾಹಿನಿಯ ಮಾಧ್ಯಮಗಳು ಪ್ರತಿಪಕ್ಷಗಳನ್ನು ದಿನನಿತ್ಯ ದೇಶ ವಿರೋಧಿಗಳು, ಭ್ರಷ್ಟರು ಮತ್ತು ಅವಕಾಶವಾದಿಗಳು ಎಂದು ಬಿಂಬಿಸುವಂತೆ ಮಾಡುವಲ್ಲಿ ಸುರಿದ ʼಸರ್ಕಾರಿ ಭಿಕ್ಷೆʼ, ಹೀಗೆ ಒಂದೇ ಎರಡೇ, ರಾಜಕೀಯವಾಗಿ ಉಸಿರುಗಟ್ಟಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಂಸತ್ತಿನಲ್ಲಿ ಮಾತನಾಡಲೂ ಬಿಡದ ಸ್ಥಿತಿ ತಲುಪಿದೆ. ಅವರು ಮಾತನಾಡಿದರೆ, ಅವರ ಭಾಷಣವನ್ನು ಹೊರಹಾಕಲಾಗುತ್ತದೆ ಅಥವಾ ಸಂಸತ್ತಿನಿಂದ ತೆಗೆದುಹಾಕಲಾಗುತ್ತದೆ. ಅದಕ್ಕೆ ರಾಹುಲ್ ಗಾಂಧಿಯೇ ಉದಾಹರಣೆ.
ಈ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಒಂದೆಡೆ ಸೇರದೇ ಇದ್ದಿದ್ದರೆ ಕಷ್ಟವಿತ್ತು. ಇದು ತುಂಬಾ ಸರಾಗವಾಗಿ ಮತ್ತು ವೇಗವಾಗಿ ನಡೆಯುತ್ತದೆ ಎಂದು ಆಡಳಿತ ಪಕ್ಷ ಬಹುಶಃ ಊಹಿಸಿರಲಿಲ್ಲ. ಇನ್ನು, ಬಹಳ ಮುಖ್ಯವಾಗಿ ಪ್ರತಿಪಕ್ಷಗಳು ಒಗ್ಗೂಡಿದಾಗಲೆಲ್ಲಾ ಅಧಿಕಾರದಲ್ಲಿರುವ ಪಕ್ಷಕ್ಕೆ ತೊಡಕು ಉಂಟಾಗಿದೆ ಎಂದು ಬಿಜೆಪಿಯು ಅಗತ್ಯವಾಗಿ ತಿಳಿದುಕೊಳ್ಳಬೇಕಿದೆ. ೧೯೬೭, ೧೯೭೭ ಮತ್ತು ೧೯೮೯ರ ಉದಾಹರಣೆಗಳು ನಮ್ಮ ಮುಂದಿವೆ. ಇದು ಕಾಂಗ್ರೆಸ್ ಭಾರತದ ರಾಜಕೀಯದಲ್ಲಿ ಮೇರು ಸ್ಥಾನದಲ್ಲಿದ್ದ ಕಾಲ. ವಿರೋಧ ಪಕ್ಷಗಳು ಕಾಂಗ್ರೆಸ್ ನನ್ನು ಎದುರಿಸಲು ಚಿಕ್ಕದಾಗಿತ್ತು, ಆದರೆ ಒಟ್ಟಾರೆಯಾಗಿ ಅಂದು ಕಾಂಗ್ರೆಸ್ ಗೆ ದೊಡ್ಡ ಆಘಾತವನ್ನೇ ಪ್ರತಿಪಕ್ಷಗಳು ಕೊಟ್ಟಿದ್ದವು. ಇಲ್ಲಿ ಈಗ, ೨೦೨೪ ಭಿನ್ನವಾಗಿದೆ ಎಂಬ ವಾದ ಏಳಬಹುದು. ಆದರೆ ಅಂತಹ ವಾದಗಳು ೧೯೬೭, ೧೯೭೭ ಮತ್ತು ೧೯೮೯ ರಲ್ಲಿ ಉಲ್ಟಾ ಹೊಡೆದಿತ್ತು ಎನ್ನುವುದು ಗಮನಾರ್ಹ. ಇಂದು, ರಾಜಕೀಯ ವಲಯದ ಸಾಮಾನ್ಯ ಗ್ರಹಿಕೆಯನ್ನು ಮೀರಿ, ವಿರೋಧ ಪಕ್ಷಗಳ ಮೈತ್ರಿ ಹಿಂದೆಂದಿಗಿಂತಲೂ ಬಲವಾಗಿ ಹೊರಹೊಮ್ಮಿದೆ. ಮಾತ್ರವಲ್ಲದೇ, ವಿರೋಧ ಪಕ್ಷವು ೧೧ ರಾಜ್ಯಗಳಲ್ಲಿ ಸರ್ಕಾರಗಳನ್ನು ಹೊಂದಿವೆ. ಹೀಗೆ ಹಿಂದೆಂದೂ ಇರಲಿಲ್ಲ ಎಂಬುವುದು ಇಲ್ಲಿ ಮುಖ್ಯ.
ʼಇಂಡಿಯಾʼ ಹಿಂದಿನ ತಂತ್ರವೇನು ?
ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ತುಂಬಾ ದುರ್ಬಲವಾಗಿದೆ ಎಂದು ಕೂಡ ಆಗಾಗ್ಗೆ ಹೇಳಲಾಗಿತ್ತು/ಗುತ್ತದೆ. ಹಿಂದೆ, ಬಿಜೆಪಿ(ಜನಸಂಘ), ಎಡಪಂಥೀಯರು ಮತ್ತು ಸಮಾಜವಾದಿಗಳು ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿದ್ದರೂ, ರಾಷ್ಟ್ರ ಮಟ್ಟದಲ್ಲಿ ಅಸ್ತಿತ್ವ ಹೊಂದಿರಲಿಲ್ಲ. ಅಂದಿಗೂ ಇಂದಿಗೂ ಗಮನಿಸಿ ನೋಡೋಣ. ಬಿಜೆಪಿ, ೪ ಮಾರ್ಚ್ ೧೯೯೦ರಂದು ರಾಜಸ್ಥಾನದಲ್ಲಿ ತನ್ನದೇ ಆದ ಮೊದಲ ಸರ್ಕಾರವನ್ನು ರಚಿಸಿತು. ಭೈರೋನ್ ಸಿಂಗ್ ಶೇಖಾವತ್ ನೇತೃತ್ವ ವಹಿಸಿದ್ದರು. ಇಂದು ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರವಿದ್ದು, ಎರಡು ರಾಜ್ಯಗಳಲ್ಲಿ ಮೈತ್ರಿ ಸರ್ಕಾರ ಹೊಂದಿದೆ. ರಾಷ್ಟ್ರಮಟ್ಟದಲ್ಲಿ ಪಕ್ಷ ೧೨ಕೋಟಿ ಮತಗಳನ್ನು ಗಳಿಸಿದೆ. ಈಗ ಸರ್ಕಾರದಲ್ಲಿರುವ ಬಿಜೆಪಿ ೨೦೦೯ರಲ್ಲಿ ಏಳು ಕೋಟಿ ಮತಗಳನ್ನು ಗಳಿಸಿತ್ತು. ಹೀಗೆ ತುಲನೆ ಮಾಡುವುದಾದರೇ, ಕಾಂಗ್ರೆಸ್ ಉನ್ನತ ಮಟ್ಟದಲ್ಲಿಯೇ ಇದೆ. ಈ ರಾಜಕೀಯ ವಾಸ್ತವವನ್ನು ತಿಳಿಯದ ಮೋದಿ ತುಂಬಾ ʼಚಾಣಾಕ್ಷ ರಾಜಕಾರಣಿʼ.
ವಿರೋಧ ಪಕ್ಷದ ನಾಯಕರ ಸಾಮೂಹಿಕ ಶಕ್ತಿಯನ್ನು ಸೋಲಿಸಲು ತಾನೊಬ್ಬನೇ ಸಾಕು ಎಂದು ಸಂಸತ್ತಿನಲ್ಲಿ ಘೋಷಿಸಿದ ಮೋದಿ, ಪ್ರತಿಪಕ್ಷಗಳ ಮೈತ್ರಿಗಿಂತ ಬಿಜೆಪಿಗೆ ಹೆಚ್ಚಿನ ರಾಜಕೀಯ ಪಕ್ಷಗಳ ಬೆಂಬಲವಿದೆ ಎಂದು ತೋರಿಸಲು ಪ್ರಯತ್ನ ಮಾಡಿಯೂ ಹತಾಶರಾಗಿರುವುದು ಯಾಕೆ ? ಈ ಬಾರಿ ಪ್ರತಿಪಕ್ಷಗಳು ಸಂಖ್ಯಾಬಲಕ್ಕೆ ಬೆದರಿದಂತಿಲ್ಲ. ತನ್ನ ಗ್ರೌಂಡ್ ವರ್ಕ್ ತುಂಬಾ ಚೆನ್ನಾಗಿ ಮಾಡಿದಂತೆ ಕಾಣಿಸುತ್ತಿದೆ. ವಿರೋಧ ಪಕ್ಷಗಳ ಮೈತ್ರಿಗೆ ನೀಡಿದ ಹೆಸರು ʼಇಂಡಿಯಾʼವೇ ಇದಕ್ಕೆ ಸಾಕ್ಷಿ.
ʼಇಂಡಿಯಾʼವನ್ನು ಯುಪಿಎ ಗೆ ಮಾಡಿದಂತೆ ಬಿಜೆಪಿ ಈಗ ದುರುಪಯೋಗಪಡಿಸಿಕೊಳ್ಳಬಹುದೇ? ʼಇಂಡಿಯಾʼ ಭಾರತದ ವಿರೋಧಿ ಅಥವಾ ʼಇಂಡಿಯಾʼ ಪಾಕಿಸ್ತಾನದ ಪರ ಎಂದು ಹೇಳಬಹುದೇ ? ಸಾಧ್ಯವಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಮೋದಿ ಎಂದರೇ ಇಂಡಿಯಾ ಎಂಬಷ್ಟರ ಮಟ್ಟಿಗೆ ರಾಜಕೀಯ ವರ್ಚಸ್ಸು ಸೃಷ್ಟಿಯಾಗಿತ್ತು. ಬಿಜೆಪಿ ಮತ್ತು ಮೋದಿ ಮೇಲಿನ ಯಾವುದೇ ಆರೋಪವನ್ನು ಇದು ಇಂಡಿಯಾ ಮೇಲಿನ ದಾಳಿ ಎಂದು ಬಣ್ಣಿಸುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು.(ಉದಾ : ಬಿಬಿಸಿ ಗುಜರಾತ್ ಹತ್ಯಾಕಾಂಡದ ಮೇಲೆ ನಿರ್ಮಿಸಿದ ಡಾಕ್ಯುಮೆಂಟರಿ, ʼಇಂಡಿಯಾ : ದಿ ಮೋದಿ ಕ್ವೇಶ್ಚನ್ʼ ಮತ್ತು ಅದಾನಿ ಗ್ರೂಪ್ ಆಫ್ ಕಂಪೆನಿ ಮೇಲೆ ವಂಚನೆ, ಮನಿ ಲ್ಯಾಂಡರಿಂಗ್, ಸೆಬಿ ನಿಯಮಗಳ ಉಲ್ಲಂಘನೆ, ನಕಲಿ ಆಮದು ರಫ್ತು ದಾಖಲೆಗಳು ಸೇರಿ ಇತ್ಯಾದಿ ಕಾನೂನು ಬಾಹೀರ ವಹಿವಾಟಿನ ವಿರುದ್ಧ ಹಿಂಡನ್ ಬರ್ಗ್ ರೀಸರ್ಚ್ ಸಂಸ್ಥೆ ತಯಾರಿಸಿದ ೪೧೩ ಪುಟಗಳ ತನಿಖಾ ವರದಿ).
ಮೋದಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೇಳಿಕೊಳ್ಳುತ್ತಾರೆ. ದೇಶದ ಅಭಿವೃದ್ಧಿ ಡಬಲ್ ಎಂಜಿನ್ ಕಿ ಸರ್ಕಾರ್ ಕಾರಣದಿಂದ ಎಂದು ಬಿಜೆಪಿ ಸದಾ ಕ್ರೆಡಿಟ್ಸ್ ತೆಗೆದುಕೊಳ್ಳುತ್ತದೆ. ʼಡೆವಲಪ್‌ಮೆಂಟಲ್ʼ ಪದವನ್ನು ವಿರೋಧ ಪಕ್ಷದವರು ತಮ್ಮ ಮೈತ್ರಿಯ ʼಇಂಡಿಯಾʼದಲ್ಲಿ ಬಳಸಿದ್ದು ಮೋದಿಯವರ ಈ ಮೇಲಿನ ಹೇಳಿಕೆಗೆ ಪ್ರತಿ ಉತ್ತರದಂತಿದೆ. ಮಾತ್ರವಲ್ಲದೇ, ಇದು ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ಸುಧಾರಣೆಗಳನ್ನು ಪ್ರಾರಂಭಿಸಿದ್ದು ಕಾಂಗ್ರೆಸ್ ಎಂದು ಮತದಾರರಿಗೆ ಹೇಳುವ ಪ್ರಯತ್ನವಾಗಿದೆ.
ಇದು ಕೇವಲ ಆರಂಭ. ಪ್ರತಿಪಕ್ಷಗಳ ಮೈತ್ರಿ “ಇಂಡಿಯಾ” ಇನ್ನೂ ದೊಡ್ಡ ಮಟ್ಟದಲ್ಲಿ ವಿಕಸನಗೊಳ್ಳಬೇಕು, ಮೋದಿ ಮತ್ತು ಬಿಜೆಪಿಗೆ ಆತಂಕಕಾರಿಯಾಗಿರುವಂತೆ ಹೊರಹೊಮ್ಮಬೇಕು. ಹಾಗಾದರೇ, ಮಾತ್ರ ಮುಂದಿನ ಲೋಕಸಭೆಯಲ್ಲಿ ಲಾಭ ನಿರೀಕ್ಷಿಸಬಹುದು. ಮೋದಿಯವರ ರಾಜಕೀಯ ಮತ್ತು ಅಧಿಕಾರ, ಅವರ ದೃಢತೆ, ಅವರ ಸೈದ್ಧಾಂತಿಕ ಬದ್ಧತೆಯ ಎದುರು ಪ್ರತಿಪಕ್ಷಗಳ ʼಇಂಡಿಯಾʼಗೆ ಮುಂದಿನ ಹಾದಿ ಅಷ್ಟೊಂದು ಸುಲಭವಿಲ್ಲ ಎಂಬವುದು ಅಕ್ಷರಶಃ ಸತ್ಯ. ಆದರೇ, ಮೋದಿಯವರ ಮೇಲಿನ ಪ್ರತಿಪಕ್ಷಗಳ ಯಾವುದೇ ದಾಳಿಯು ಇನ್ಮುಂದೆ ಹಿಂದೆಂದಿಗಿಂತಲೂ ಹೆಚ್ಚು ತೀವ್ರವಾಗಿರುತ್ತದೆ ಮತ್ತು ನೇರವಾಗಿರುತ್ತದೆ. ಬಿಜೆಪಿಗೆ ಮೋದಿಯವರ ಭಾಷಣವಷ್ಟೇ ಇನ್ನು ಮುಂದೆ ಸಾಲದು ಎನ್ನುವುದಂತೂ ಸತ್ಯ.
-ಶ್ರೀರಾಜ್ ವಕ್ವಾಡಿ

No comments:
Post a Comment