ಮಹಿಳೆಯರ ಮೇಲೆ ಬೇರೂರಿರುವ ಧಾರ್ಮಿಕ ಅಸಂಬದ್ಧ ಕಾನೂನುಗಳು ಮತ್ತು ಯುಸಿಸಿ !
ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಅಗತ್ಯತೆಯ ಕುರಿತು ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಗಳು ಈಗ ಮತ್ತೆ ಚರ್ಚೆಗೆ ಕಾರಣವಾಗಿದೆ.
ಈ ಪರಿಕಲ್ಪನೆಯು "ಟ್ರೀಟೈಸ್ ಆನ್ ಟಾಲರೆನ್ಸ್"ನಲ್ಲಿ ವೋಲ್ಟೇರ್ ಅವರ ತತ್ವವನ್ನು ಪ್ರತಿಧ್ವನಿಸುತ್ತದೆ, ಅವರು ಒಂದು ಉತ್ತಮ ಆಡಳಿತದ ರಾಜ್ಯದಲ್ಲಿ, ಪ್ರತಿಯೊಬ್ಬರ ವೈಯಕ್ತಿಕ ನಂಬಿಕೆಗಳನ್ನು ಪಾಲಿಸುವಾಗ ಅದು ಇತರರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತಿರಬೇಕೆಂದು ಒತ್ತಿ ಹೇಳುತ್ತಾರೆ. ಇನ್ನು, ಭಾರತದಲ್ಲಿ ಯುಸಿಸಿಯ ಅನುಷ್ಠಾನವು ಕಾನೂನು ಏಕರೂಪತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಕಾನೂನಿನ ಅಡಿಯಲ್ಲಿ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಎತ್ತಿಹಿಡಿಯುವುದರೊಂದಿಗೆ, ತಮ್ಮ ವೈಯಕ್ತಿಕ ನಂಬಿಕೆಗಳನ್ನು ಯಥಾವತ್ತಾಗಿ ಇನ್ನೊಬ್ಬರಿಗೆ ಧಕ್ಕೆಯಾಗದಂತೆ ಪಾಲಿಸುವ ಹಕ್ಕುಗಳನ್ನು ಎತ್ತಿಹಿಡಿಯುವ ಕಲ್ಪನೆಯದ್ದಾಗಿದೆ.
ಯುಸಿಸಿ ಪರ, ವಿರೋಧ ವಾದಗಳಿಗೆ ತೆರಳುವ ಮೊದಲು, ಅದು ಏನೆಂದು ನಾವು ಮೊದಲು ಅರ್ಥಮಾಡಿಕೊಳ್ಳೋಣ. ಮದುವೆ ಮತ್ತು ವಿಚ್ಛೇದನ, ಅಪ್ರಾಪ್ತ ವಯಸ್ಕರು ಮತ್ತು ಶಿಶುಗಳಿಗೆ ಸಂಬಂಧಿಸಿದ ವಿಷಯಗಳು, ದತ್ತು, ಉತ್ತರಾಧಿಕಾರ, ಅವಿಭಕ್ತ ಕುಟುಂಬ ಮತ್ತು ವಿಭಜನೆ, ಮತ್ತು ಮೊದಲು ವೈಯಕ್ತಿಕ ಕಾನೂನಿಗೆ ಒಳಪಟ್ಟಿರುವ ಎಲ್ಲಾ ವಿಷಯಗಳು ಸೇರಿದಂತೆ ಯುಸಿಸಿಯ ಬಹುತೇಕ ಎಲ್ಲಾ ಅಂಶಗಳು ಕಾನ್ಕರೆಂಟ್ ಲಿಸ್ಟ್ ನಲ್ಲಿ ಎಂಟ್ರಿ ನಂ. ೫ರ ಅಡಿಯಲ್ಲಿ ಬರುತ್ತದೆ. ಪರಿಣಾಮವಾಗಿ, ರಾಜ್ಯಗಳ ಅಸೆಂಬ್ಲಿಗಳು ಮತ್ತು ಕೇಂದ್ರ ಸರ್ಕಾರವು ಬಯಸಿದಲ್ಲಿ ಯುಸಿಸಿಯನ್ನು ಅನುಷ್ಟಾನಕ್ಕೆ ತರುವ ಅಧಿಕಾರವನ್ನು ಹೊಂದಿವೆ. ಗುಜರಾತ್, ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳು ಯುಸಿಸಿ ಅನುಷ್ಠಾನಕ್ಕೆ ದಾಪುಗಾಲು ಹಾಕುತ್ತಿವೆ ಎಂದು ವರದಿಯಾಗಿದೆ.
ಭಾರತದಲ್ಲಿ ಯುಸಿಸಿಯನ್ನು ಏಕೆ ಪರಿಚಯಿಸಬೇಕು? ಯುಸಿಸಿ ಇಲ್ಲದಿದ್ದರೇ ವೈಯಕ್ತಿಕ ಕಾನೂನುಗಳು ಮಹಿಳೆಯರ ಮೇಲೆ ಪರಿಣಾಮ ಬೀರುವ ನಿದರ್ಶನಗಳಿಗೆ ಕಾರಣವಾಗಬಹುದು. ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಅವರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲು ನ್ಯಾಯಾಲಯಕ್ಕೆ ಮೊರೆ ಹೋಗಲು ಪ್ರೇರೇಪಿಸುತ್ತದೆ. ವೈಯಕ್ತಿಕ ಕಾನೂನುಗಳಲ್ಲಿ ಅಂತರ್ಗತವಾಗಿರುವ ಲಿಂಗ ತಾರತಮ್ಯವನ್ನು ತೊಡೆದುಹಾಕಲು ಯುಸಿಸಿ ಸಹಾಯ ಮಾಡುತ್ತದೆ, ಆ ಮೂಲಕ ಲಿಂಗ ಸಮಾನತೆ ಮತ್ತು ಮಹಿಳೆಯರ ಘನತೆಯನ್ನು ಉತ್ತೇಜಿಸುತ್ತದೆ.
ಸಮಸ್ಯೆಯೆಂದರೆ ಎಲ್ಲಾ ವೈಯಕ್ತಿಕ ಕಾನೂನುಗಳಲ್ಲಿ, ಕೆಲವು ಅಂಶಗಳು ಮಹಿಳೆಯರ ಮೇಲೆ ಅನ್ಯಾಯವಾಗಿ ಪರಿಣಾಮ ಬೀರುತ್ತವೆ. ಉದಾಹರಣೆಗೆ, ವಂಶಪಾರಂಪರ್ಯ. ಮಹಿಳೆಯರ ಉತ್ತರಾಧಿಕಾರ ಹಕ್ಕುಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿನ ಧಾರ್ಮಿಕ ವೈಯಕ್ತಿಕ ಕಾನೂನುಗಳಲ್ಲಿನ ಅಸಮಾನತೆಗಳು ಇರುವುದರಿಂದ ಯುಸಿಸಿ ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತದೆ.
ಹಿಂದೂ ಕೋಡ್ ಬಿಲ್ :
ವಿಚ್ಛೇದನವನ್ನು ಕಾನೂನುಬದ್ಧಗೊಳಿಸಿದ, ಬಹುಪತ್ನಿತ್ವವನ್ನು ವಿರೋಧಿಸಿ, ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಹಕ್ಕುಗಳನ್ನು ನೀಡುವ ಹಿಂದೂ ಕಾನೂನುಗಳನ್ನು ಸುಧಾರಿಸಲು ಡಾ. ಬಿ. ಆರ್. ಅಂಬೇಡ್ಕರ್ ಅವರು ಮಸೂದೆಯನ್ನು ರಚಿಸಿದರು. ಹಿಂದು ಕೋಡ್ ಬಿಲ್ ಮುಖ್ಯವಾಗಿ ಏಳು ಅಂಶಗಳನ್ನು ಒಳಗೊಂಡಿತ್ತು. ಆಸ್ತಿಯ ಹಂಚಿಕೆ, ಆಸ್ತಿಗೆ ವಾರಸುದಾರರನ್ನು ಪಟ್ಟಿ ಮಾಡುವುದು, ಜೀವನಾಂಶ, ಮದುವೆ, ವಿಚ್ಛೇಧನ, ದತ್ತು ಸ್ವೀಕಾರ, ಅಪ್ರಾಪ್ತ ವಯಸ್ಕರ ಮದುವೆ. ಒಟ್ಟಾರೆ ಹೀಗೆ ಮಹಿಳೆಯರ ರಕ್ಷಣೆಯ ನಿಟ್ಟಿನಲ್ಲಿ ಆಮೂಲಾಗ್ರ ಬದಲಾವಣೆಗೊಂಡ ಮಸೂದೆಯನ್ನು ಅಂಬೇಡ್ಕರ್ ರೂಪಿಸಿ ಸಂಸತ್ತಿನಲ್ಲಿ ಮಂಡಿಸಿದರು. ಈ ಕಾನೂನುಗಳು ಬಗ್ಗೆ ತೀವ್ರ ವಿರೋಧದ ನಂತರ ಅಂಬೆಡ್ಕರ್ ತಮ್ಮ ಆ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡುವಂತಹ ಸ್ಥಿತಿ ತಂದೊಡ್ಡಿತು. ಅಂಬೇಡ್ಕರ್ ರಾಜೀನಾಮೆ ನೀಡಿದರು ಕೂಡ. ಅಂತಿಮವಾಗಿ ೧೯೫೫-೫೬ರ ಸಮಯದಲ್ಲಿ ಅಂಬೇಡ್ಕರರು ರಾಜೀನಾಮೆ ಕೊಟ್ಟ ೪ ವರ್ಷಗಳ ನಂತರ ಮಹಿಳೆಯರ ಹಕ್ಕುಗಳ ರಕ್ಷಣೆಗೆಂದು ರೂಪಿಸಿದ ಆ ಮಸೂದೆಗಳನ್ನು ಅಂಗೀಕರಿಸಲಾಯಿತು.
ಉತ್ತರಾಧಿಕಾರ ಕಾಯಿದೆ :
ಹಿಂದೂ ಉತ್ತರಾಧಿಕಾರ ಕಾಯಿದೆ ೧೯೫೬, ಮೂಲತಃ ಹೆಣ್ಣು ಮಕ್ಕಳಿಗೆ ಪೂರ್ವಜರ ಆಸ್ತಿಯಲ್ಲಿ ಪಿತ್ರಾರ್ಜಿತ ಹಕ್ಕುಗಳನ್ನು ನೀಡಿರಲಿಲ್ಲ. ಅವರು ಅವಿಭಕ್ತ ಹಿಂದೂ ಕುಟುಂಬದಿಂದ ಜೀವನಾಂಶದ ಹಕ್ಕನ್ನು ಮಾತ್ರ ಕೇಳಬಹುದು. ಆದರೆ ಈ ಅಸಮಾನತೆಯನ್ನು ಸೆಪ್ಟೆಂಬರ್ ೯, ೨೦೦೫ ರಂದು ಕಾಯಿದೆಗೆ ತಿದ್ದುಪಡಿ ಮಾಡುವ ಮೂಲಕ ತೆಗೆದುಹಾಕಲಾಯಿತು.
ಹಿಂದೂ ವಿವಾಹ ಕಾಯಿದೆ, ಅಲ್ಪಸಂಖ್ಯಾತ ಮತ್ತು ರಕ್ಷಕ ಕಾಯಿದೆ, ದತ್ತುಗಳು ಮತ್ತು ನಿರ್ವಹಣೆ ಕಾಯಿದೆ, ವಿವಾಹ ಕಾಯಿದೆ. ಇವನ್ನು ೧೯೫೪ ರಲ್ಲಿ ಜಾರಿಗೊಳಿಸಲಾಯಿತು. ಈ ಎಲ್ಲಾ ಕಾನೂನಿನುಗಳಿಗೆ ಸಂಬಂಧಿಸಿದಂತೆ ಪ್ರಮುಖ ನ್ಯಾಯಾಂಗ ಮಧ್ಯಸ್ಥಿಕೆಗಳನ್ನು ಗಮನಿಸುವುದಾದರೇ,
ಶಾ ಬಾನೋ ಪ್ರಕರಣ (೧೯೮೫) :
ಶಾ ಬಾನೋ ಎಂಬ ೭೩ ವರ್ಷದ ಮಹಿಳೆಯನ್ನು ಆಕೆಯ ಪತಿ ʼತ್ರಿವಳಿ ತಲಾಖ್ʼ ಬಳಸಿ ವಿಚ್ಛೇದನ ನೀಡಿದ್ದಾನೆ ಮತ್ತು ಜೀವನಾಂಶವನ್ನು ನಿರಾಕರಿಸಲಾಯಿತು. ಆಕೆ ನ್ಯಾಯಾಲಯದ ಮೆಟ್ಟಿಲೇರಿದಳು ಮತ್ತು ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಆಕೆಯ ಪರವಾಗಿ ತೀರ್ಪು ನೀಡಿತು. ಈ ಕಾರಣದಿಂದಾಗಿ ಆಕೆಯ ಪತಿ ಇಸ್ಲಾಮಿಕ್ ಕಾನೂನಿಡಿಯಲ್ಲಿ ತನ್ನ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿರುವುದಾಗಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದನು.
ಅಖಿಲ ಭಾರತ ಕ್ರಿಮಿನಲ್ ಕೋಡ್ ನ "ಹೆಂಡತಿಯರು, ಮಕ್ಕಳು ಮತ್ತು ಪೋಷಕರ ನಿರ್ವಹಣೆ" ನಿಬಂಧನೆ (ವಿಭಾಗ ೧೨೫) ಅಡಿಯಲ್ಲಿ ೧೯೮೫ರಲ್ಲಿ ಸುಪ್ರೀಂ ಕೋರ್ಟ್ ಆಕೆಯ ಪರವಾಗಿ ತೀರ್ಪು ನೀಡಿತು, ಇದು ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಅನ್ವಯಿಸುತ್ತದೆ. ಇದಲ್ಲದೆ, ಏಕರೂಪ ನಾಗರಿಕ ಸಂಹಿತೆ ಸ್ಥಾಪಿಸಲು ಶಿಫಾರಸು ಮಾಡಿತು.
ಪ್ರಮುಖ ಪ್ರಕರಣಗಳ ಸಂಗತಿಗಳು :
ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಇದ್ದತ್ ಅವಧಿಯವರೆಗೆ ಮಾತ್ರ ಜೀವನಾಂಶವನ್ನು ಪಾವತಿಸಬೇಕಾಗಿತ್ತು. (ಮೂರು ಚಂದ್ರನ ತಿಂಗಳುಗಳು - ಸರಿಸುಮಾರು ೯೦ ದಿನಗಳು).
ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ ೧೨೫ ಎಲ್ಲಾ ನಾಗರಿಕರಿಗೆ ಅನ್ವಯಿಸುತ್ತದೆ. ಈ ಐತಿಹಾಸಿಕ ನಿರ್ಧಾರದ ನಂತರ, ರಾಷ್ಟ್ರವ್ಯಾಪಿ ಚರ್ಚೆಗಳು, ಆಂದೋಲನಗಳು ನಡೆದವು. ಒತ್ತಡಕ್ಕೆ ಒಳಗಾದ ಅಂದಿನ ಸರ್ಕಾರವು ೧೯೮೬ರಲ್ಲಿ ಮುಸ್ಲಿಂ ಮಹಿಳೆಯರ (ವಿಚ್ಛೇದನದ ಮೇಲಿನ ರಕ್ಷಣೆಯ ಹಕ್ಕು) ಕಾಯಿದೆಯನ್ನು ಜಾರಿಗೊಳಿಸಿತು.
ಡೇನಿಯಲ್ ಲತೀಫಿ ಪ್ರಕರಣ :
ಮುಸ್ಲಿಂ ಮಹಿಳಾ ಕಾಯಿದೆ, ಇದು ಅನುಚ್ಛೇದ ೧೪ ಮತ್ತು ೧೫ರ ಅಡಿಯಲ್ಲಿ ಸಮಾನತೆಯ ಹಕ್ಕನ್ನು ಮತ್ತು ಆರ್ಟಿಕಲ್ ೨೧ರ ಅಡಿಯಲ್ಲಿ ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ಆಧಾರದ ಮೇಲೆ ಪ್ರಶ್ನಿಸಲಾಯಿತು. ಸುಪ್ರೀಂ ಕೋರ್ಟ್ ಕಾನೂನನ್ನು ಸಾಂವಿಧಾನಿಕವೆಂದು ಪರಿಗಣಿಸಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ ೧೨೫ನೊಂದಿಗೆ ಸಮನ್ವಯಗೊಳಿಸಿತು. ಮತ್ತು ಇದ್ದತ್ ಅವಧಿಯಲ್ಲಿ ಹೆಂಡತಿ ಪಡೆಯುವ ಜೀವನಾಂಶದ ಮೊತ್ತವು ಇದ್ದತ್ ಸಮಯದಲ್ಲಿ ಅವಳನ್ನು ರಕ್ಷಿಸಿಕೊಳ್ಳಲು ಮತ್ತು ಅವಳ ಭವಿಷ್ಯವನ್ನು ನಿಭಾಯಿಸುವುದಕ್ಕೆ ಬೇಕಾಗುವಷ್ಟರಿರಬೇಕು. ಹೀಗಾಗಿ ದೇಶದ ಕಾನೂನಿನ ಅಡಿಯಲ್ಲಿ, ವಿಚ್ಛೇದಿತ ಮುಸ್ಲಿಂ ಮಹಿಳೆಯು ಜೀವಮಾನದವರೆಗೆ ಅಥವಾ ಮರುವಿವಾಹಯಾಗುವವರೆಗೆ ಜೀವನಾಂಶವನ್ನು ಪಡೆಯಲು ಅರ್ಹಳಾಗಿದ್ದಾಳೆ.
ಸರಳಾ ಮುದಗಲ್ ಪ್ರಕರಣ :
ಈ ಸಂದರ್ಭದಲ್ಲಿ, ಹಿಂದೂ ಪತಿಯು ಹಿಂದೂ ಕಾನೂನಿನಡಿಯಲ್ಲಿ ಮದುವೆಯಾಗಿ, ಇಸ್ಲಾಂ ಧರ್ಮವನ್ನು ಸ್ವೀಕರಿಸುವ ಮೂಲಕ ಎರಡನೇ ಮದುವೆಯನ್ನು ಮಾಡಿಕೊಳ್ಳಬಹುದೇ ಎಂಬ ಪ್ರಶ್ನೆ ಉದ್ಭವಿಸಿತು. ಹಿಂದೂ ಕಾನೂನಿನಡಿಯಲ್ಲಿ ವಿವಾಹವಾದವನ್ನು ಹಿಂದೂ ವಿವಾಹ ಕಾಯಿದೆ ೧೯೫೫ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಆಧಾರದ ಮೇಲೆ ಮಾತ್ರ ವಿಸರ್ಜಿಸಬಹುದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಇಸ್ಲಾಂಗೆ ಮತಾಂತರಗೊಂಡ ನಂತರ ಎರಡನೇ ವಿವಾಹವು ಭಾರತೀಯ ದಂಡ ಸಂಹಿತೆಯ ಸೆಕ್ಷನ್(ಐಪಿಸಿ)೪೯೪ರ ಅಡಿಯಲ್ಲಿ ಅಪರಾಧವಾಗುತ್ತದೆ .
ಜಾನ್ ವಲ್ಲಮಟ್ಟಂ ಪ್ರಕರಣ :
ಈ ಸಂದರ್ಭದಲ್ಲಿ, ಕೇರಳದ ಪಾದ್ರಿ, ಜಾನ್ ವಲ್ಲಮಟ್ಟಮ್ ಭಾರತೀಯ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ ೧೧೮ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದರು, ಇದು ಭಾರತದಲ್ಲಿ ಹಿಂದೂಯೇತರರಿಗೆ ಅನ್ವಯಿಸುತ್ತದೆ. ಇದು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಅವರ ಆಸ್ತಿಯನ್ನು ಇಚ್ಛಾಫೂರ್ವಕವಾಗಿ ದಾನ ಮಾಡಲು ಅಸಮಂಜಸವಾದ ನಿರ್ಬಂಧಗಳನ್ನು ಹೇರುತ್ತದೆ, ಕ್ರಿಶ್ಚಿಯನ್ನರ ವಿರುದ್ಧ ತಾರತಮ್ಯ ಹೊಂದಿದೆ ಎಂದು ವಲ್ಲಮಾಟನ್ ವಾದಿಸಿದರು. ನಂತರ ನ್ಯಾಯಪೀಠವು ಅಸಂವಿಧಾನಿಕ ಸೆಕ್ಷನ್ ನನ್ನು ರದ್ದುಪಡಿಸಿತು.
ಇನ್ನು, ಮುಸ್ಲಿಂ ಸುನ್ನಿ ಮತ್ತು ಶಿಯಾ ಕಾನೂನಿನಲ್ಲಿ, ಒಂದು ವಿಶಿಷ್ಟವಾದ ಲಿಂಗ-ತಾರತಮ್ಯವಿದೆ, ಪುರುಷರು ಪಡೆಯುವ ಉತ್ತರಾಧಿಕಾರದ ಅರ್ಧದಷ್ಟು ಮಾತ್ರ ಮಹಿಳೆಯರಿಗೆ ಪಡೆಯುವ ಅರ್ಹತೆ ಇದೆ. ಅದೇ ರೀತಿ, ಕ್ರಿಶ್ಚಿಯನ್ ಮಹಿಳೆಯರು, ಭಾರತೀಯ ಉತ್ತರಾಧಿಕಾರ ಕಾಯಿದೆಯಡಿಯಲ್ಲಿ, ಆಸ್ತಿಯ ಮೂರನೇ ಒಂದು ಭಾಗದಷ್ಟು ಪಡೆಯಲು ಮಾತ್ರ ಅರ್ಹರು. ಆದರೂ ಪುತ್ರರು ಮತ್ತು ಹೆಣ್ಣು ಮಕ್ಕಳು ತಮ್ಮ ಹೆತ್ತವರ ಆಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ.
ಪಾರ್ಸಿ ಕಾನೂನಿಗೆ ನಮ್ಮ ಗಮನವನ್ನು ಹರಿಸೋಣ, ೧೯೯೧ರಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾದ ಉತ್ತರಾಧಿಕಾರವನ್ನು ಖಾತರಿಪಡಿಸುವ ತಿದ್ದುಪಡಿಗಳ ಹೊರತಾಗಿಯೂ, ತಾರತಮ್ಯದ ಆಚರಣೆಗಳು ಮುಂದುವರಿದಿದೆ. ತಮ್ಮ ಸಮುದಾಯವನ್ನು ಬಿಟ್ಟು ಬೇರೆ ಸಮುದಾಯದವರನ್ನು ಮದುವೆಯಾಗುವ ಪಾರ್ಸಿ ಮಹಿಳೆಯರು ಮತ್ತು ಪಾರ್ಸಿ ಸಮುದಾಯಕ್ಕೆ ಮದುವೆಯಾಗುವ ಪಾರ್ಸಿಯೇತರ ಮಹಿಳೆಯರು ನಿರ್ಬಂಧಗಳನ್ನು ಎದುರಿಸುತ್ತಾರೆ.
ಹಿಂದೂ ಉತ್ತರಾಧಿಕಾರ ಕಾಯಿದೆಯನ್ನು ಗಮನಿಸಿದರೆ, ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಪಾಲು ನೀಡುವ ಶಾಸನಾತ್ಮಕ ತಿದ್ದುಪಡಿಗಳೂ ಸಾಕಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಿಂದೂ ಮಹಿಳೆಯು ಮಕ್ಕಳಿಲ್ಲದೆ ಅಥವಾ ಸಂಗಾತಿಯಿಲ್ಲದೆ ಮರಣಹೊಂದಿದರೆ, ಆಕೆಯ ಆಸ್ತಿಯು ಆಕೆಯ ಗಂಡನ ವಾರಸುದಾರರಿಗೆ, ನಂತರ ಆಕೆಯ ತಂದೆಯ ಮತ್ತು ಅಂತಿಮವಾಗಿ, ಆಕೆಯ ತಾಯಿಯ ವಾರಸುದಾರರಿಗೆ ಆದ್ಯತೆ ನೀಡಲಾಗುತ್ತದೆ.
ಧಾರ್ಮಿಕ ಕಾನೂನುಗಳಾದ್ಯಂತ ಮಹಿಳೆಯರ ಮೇಲೆ ಬೇರೂರಿರುವ ಇಂತಹ ಅಸಮಂಜಸ ಕಾನೂನುಗಳು ಯುಸಿಸಿಯ ಅಗತ್ಯವನ್ನು ಒತ್ತಿಹೇಳುತ್ತವೆ ಎನ್ನುವುದು ಸ್ಪಷ್ಟ.
-ಶ್ರೀರಾಜ್ ವಕ್ವಾಡಿ

No comments:
Post a Comment