ಗ್ಯಾರಂಟಿಗಳಿಗೆ ರೌಂಡ್-ಅಪ್ ಅಂಕಿಅಂಶಕ್ಕಿಂತ ಇನ್ನೂ ೮,೦೦೦ಕೋಟಿಯಷ್ಟು ಅಗತ್ಯವಿದೆ !
ಇತ್ತೀಚೆಗೆ ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಷ್ಟು ರಾಜಕೀಯ ಮತ್ತು ಚುನಾವಣಾ ಮಹತ್ವವನ್ನು ಈವರೆಗಿನ ಯಾವುದೇ ರಾಜ್ಯ ಸರ್ಕಾರದ ಬಜೆಟ್ ಪಡೆದುಕೊಂಡಿಲ್ಲ. ತಮ್ಮ ೧೪ನೇ ಬಜೆಟ್ ಮಂಡಿಸುವುದರ ಮೂಲಕ ಮತ್ತೆ ಸಿದ್ದರಾಮಯ್ಯ ಒಬ್ಬ ಪರಿಣಿತ ಹಣಕಾಸು ಸಚಿವ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಸರ್ಕಾರ ಹೊರಡಿಸಿದ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸಿಕೊಳ್ಳುವ ಜವಾಬ್ದಾರಿಯ ಜೊತೆಗೆ ಬರುವ ಲೋಕಸಭೆಗೂ ಮುನ್ನ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಘಡ, ತೆಲಂಗಾಣ ಹಾಗೂ ಮಿಜೋರಾಂ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಕರ್ನಾಟಕದಲ್ಲಿ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿಕೊಳ್ಳುವ ದೊಡ್ಡ ಹೊಣೆಗಾರಿಕೆ ರಾಜ್ಯ ಕಾಂಗ್ರೆಸ್ ಮೇಲೆ ಇತ್ತು ಮಾತ್ರವಲ್ಲದೇ ಆ ಒತ್ತಡ ಸಿದ್ದರಾಮಯ್ಯ ಅವರ ಮೇಲೆ ಇತ್ತು ಎನ್ನುವುದು ಸತ್ಯ. ಒಟ್ಟಿನಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಹೊರಡಿಸಿರುವ ಗ್ಯಾರಂಟಿಗಳು ಮತ್ತು ಅವುಗಳ ಅನುಷ್ಠಾನ ಲೋಕಸಭಾ ಚುನಾವಣೆಯೊಳಗೆ ನಡೆಯಲಿರುವ ಐದು ರಾಜ್ಯಗಳ ಮೇಲೆ ಪ್ರಭಾವಿಸುವಂತೆ ಮಾಡುವುದು ಕಾಂಗ್ರೆಸ್ ಲೆಕ್ಕಾಚಾರ.
ಕಾಂಗ್ರೆಸ್ ಪಕ್ಷದ 'ಐದು ಗ್ಯಾರಂಟಿʼಗಳಿಗೆ ಮಹತ್ವವನ್ನು ಒದಗಿಸುವ ಬಜೆಟ್ ಸಿದ್ಧಪಡಿಸುವ ಮಹತ್ತರ ಕಾರ್ಯವನ್ನು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ನಡೆಸಿದ್ದರಿಂದ ದೇಶದ ಕಣ್ಣು ರಾಜ್ಯ ಬಜೆಟ್ ನತ್ತ ನೆಟ್ಟಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಏಳನೇ ಬಜೆಟ್ ಮತ್ತು ಒಟ್ಟಾರೆಯಾಗಿ ಮಂಡಿಸಿದ 14ನೇ ಬಜೆಟ್ ನ ಅಂಶವೆಂದರೆ, ಕಾಂಗ್ರೆಸ್‌ನ ಐದು ಚುನಾವಣಾ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಕ್ರೋಢೀಕರಿಸುವುದು ಕೂಡ ಹೌದು. ಸಿದ್ದರಾಮಯ್ಯ ಮಂಡಿಸಿದ ಒಟ್ಟು ರೂ. ೩.೨೭ ಲಕ್ಷ ಕೋಟಿಯ ರಾಜ್ಯ ಬಜೆಟ್ ನಲ್ಲಿ ಗ್ಯಾರಂಟಿಗಳಿಗೆ ವಾರ್ಷಿಕ ಅಂದಾಜು ರೂ. ೫೨,೦೦೦ ಕೋಟಿ ಬೇಕಾಗುತ್ತದೆ. ಆದಾಯ ವೆಚ್ಚ ರೂ. ೨,೫೦,೯೩೩ ಕೋಟಿ, ಬಂಡವಾಳ ವೆಚ್ಚ ರೂ. ೫೪,೩೭೪ ಕೋಟಿ, ಸಾಲ ಮರುಪಾವತಿ ರೂ. ೨೨,೪೪೧ ಕೋಟಿ ಸೇರಿದಂತೆ ಒಟ್ಟು ರೂ. ೩,೨೭,೭೪೪ ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಈಗಾಗಲೇ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ನನ್ನು ಮಂಡಿಸಿತ್ತು. ರೂ. ಮೂರು ಲಕ್ಷ ಕೋಟಿ ಗಡಿ ದಾಟಿದ ಬಜೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಸಾಮಾನ್ಯವಾಗಿ, ಇಂತಹ ಸಂದರ್ಭಗಳಲ್ಲಿ, ಹೊಸ ಸರ್ಕಾರವು ಹೊಸ ಬಜೆಟ್ ನನ್ನು ಮಂಡಿಸುವ ಸಂದರ್ಭದಲ್ಲಿ ಒಟ್ಟು ಬಜೆಟ್ ನ ತೂಕದಲ್ಲಿ ಹೆಚ್ಚೇನೂ ವ್ಯತ್ಯಾಸಗಳಿರುವುದಿಲ್ಲ. ʼಇಟ್ ಈಸ್ ಲೈಕ್ ಓಲ್ಡ್ ವೈನ್ ಇನ್ ಅ ನ್ಯೂ ಬಾಟಲ್ʼ (ಇದು ಹೊಸ ಬಾಟಲಿಯಲ್ಲಿ ಹಳೆಯ ವೈನ್ )ನಂತೆ ಇರುತ್ತದೆ. ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವು ಈಗಾಗಲೇ ಕಳೆದಿರುವುದರಿಂದ ನೂತನ ರಾಜ್ಯ ಸರ್ಕಾರದ ಬಜೆಟ್ ಹೆಚ್ಚು ಕಡಿಮೆ ಒಂಬತ್ತು ತಿಂಗಳುಗಳ ಅವಧಿಗಷ್ಟೇ ಕಾರ್ಯನಿರ್ವಹಿಸುತ್ತದೆ ಎನ್ನುವುದು ಗಮನಾರ್ಹ.
ಕರ್ನಾಟಕದಲ್ಲಿ ಹೊಸ ಸರ್ಕಾರ ಮತ್ತು ಕಾಂಗ್ರೆಸ್ ನ ವಿಶ್ವಾಸಾರ್ಹತೆಗಾಗಿ (ದೇಶದ ಉಳಿದ ಭಾಗಗಳಲ್ಲಿಯೂ ಕೂಡ), ಈ ಬಜೆಟ್ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ, ಚುನಾವಣಾ ಪೂರ್ವ ಭರವಸೆಯನ್ನು ಉಳಿಸಿಕೊಳ್ಳುವ ಅವರ ಮತ್ತು ಪಕ್ಷದ ಬದ್ಧತೆಯನ್ನು ಬಜೆಟ್ ನಲ್ಲಿ ತೋರಿಸಬೇಕಾಗಿತ್ತು. ಅನುಷ್ಠಾನ ಎಂದರೆ ಹಣ ಹಂಚಿಕೆ. ಅವರು ಸೂಕ್ತವಾಗಿ ಹಂಚಿಕೆ ಮಾಡಲು ಸಾಧ್ಯವಾಗದಿದ್ದರೆ, ಲೋಕಸಭೆಗೂ ಮುನ್ನ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರವಲ್ಲದೇ, ಲೋಕಸಭೆಗೆ ನೈತ್ಯಾತ್ಮಿಕ ಪರಿಣಾಮ ಬೀರಬಾರದೆಂಬ ಉದ್ದೇಶ ಸಿದ್ದರಾಮಯ್ಯ ಬಜೆಟ್ ನ ಉದ್ದೇಶವಾಗಿತ್ತು.
ರಾಜ್ಯದ ಎಲ್ಲಾ ಕುಟುಂಬದ ಯಜಮಾನಿಗೆ ಮಾಸಿಕ ರೂ. ೨,೦೦೦ ನೆರವು (ಗೃಹಲಕ್ಷ್ಮಿ), ಎಲ್ಲಾ ಮನೆಗಳಿಗೆ ಉಚಿತ ೨೦೦ಯೂನಿಟ್ ವಿದ್ಯುತ್ (ಗೃಹಜ್ಯೋತಿ), ಪದವೀಧರ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ರೂ. ೩,೦೦೦(ಯುವನಿಧಿ), ೧೦ಕೆ.ಜಿ. ಪ್ರತಿ ವ್ಯಕ್ತಿಗೆ ತಿಂಗಳಿಗೆ ಅಕ್ಕಿ(ಅನ್ನಭಾಗ್ಯ) ಮತ್ತು ರಾಜ್ಯ ಸಾರ್ವಜನಿಕ ಸಾರಿಗೆ ಬಸ್ ಗಳಲ್ಲಿ (ಶಕ್ತಿ) ಮಹಿಳೆಯರಿಗೆ ಉಚಿತ ಪ್ರಯಾಣದಂತಹ ಬಿಟ್ಟಿ ಗ್ಯಾರಂಟಿಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬ ಅಭಿಪ್ರಾಯವನ್ನು ಮೂಡಿಸಲಾಗಿದೆ. ಅಧಿಕಾರಕ್ಕೆ ಬಂದಾಗ, ಬಿಟ್ಟಿಗಳನ್ನು ಜಾರಿಗೆ ತಂದರೆ, ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಬಹುದು ಮತ್ತು ಹಣಕಾಸು ಸ್ಥಿತಿ ಹಳಿತಪ್ಪಬಹುದು ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದರು.
ಬಜೆಟ್ ಸೂಚಿಸಿದ್ದೇನು ? :
ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಗಳನ್ನು ಜಾರಿಗೆ ತರಲು ಸಿದ್ದರಾಮಯ್ಯ ಸರ್ಕಾರ ಅಪಾರ ಒತ್ತಡದಲ್ಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಅವರ ಈ ಸಾಲಿನ ಬಜೆಟ್ ನಿಂದ ಸರ್ಕಾರವು ಅನುಷ್ಠಾನದ ಅವಶ್ಯಕತೆಗಳ ಬಗ್ಗೆ ಅಥವಾ ಅನುಷ್ಠಾನಕ್ಕೆ ಬೇಕಾಗುವ ಹಣ ಇನ್ನೂ ಬಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೇ, ಬಜೆಟ್ ಭಾಷಣದ ಆರಂಭದಲ್ಲಿ ಸಿದ್ದರಾಮಯ್ಯ ಅವರು, ಅನುಷ್ಠಾನಕ್ಕೆ ವಾರ್ಷಿಕ ಅಂದಾಜು ರೂ.೫೨,೦೦೦ ಕೋಟಿ ಬೇಕಾಗುತ್ತದೆ ಎಂಬುವುದನ್ನು ವಿವರಿಸಿದ್ದರು ಎನ್ನುವುದು ಉಲ್ಲೇಖಾರ್ಹ.
ತರುವಾಯ, ಮುಖ್ಯಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿ ಪ್ರತಿ ಗ್ಯಾರಂಟಿಗಳನ್ನು ಕಾರ್ಯಗತಗೊಳಿಸಲು ಯೋಜಿಸಲಾದ ನಿಧಿಗಳ ಕೆಲವು ವಿವರಗಳನ್ನು ಒದಗಿಸಿದರು. ಆ ಪ್ರಕಾರ ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ ರೂ.೩೦,೦೦೦ ಕೋಟಿ, ಗೃಹಜ್ಯೋತಿಗೆ ರೂ.೧೩,೯೧೦ ಕೋಟಿ, ಅನ್ನಭಾಗ್ಯ ಯೋಜನೆಗೆ ರೂ. ೧೦,೦೦೦ ಕೋಟಿ, ಶಕ್ತಿ ಯೋಜನೆಗೆ ವಾರ್ಷಿಕ ರೂ.೪೦೦೦ ಕೋಟಿ ವೆಚ್ಚವಾಗಲಿದೆ. ಯುವನಿಧಿ ಯೋಜನೆ ಕುರಿತು ಯಾವುದೇ ನಿರ್ದಿಷ್ಟ ಅಂಕಿ ಅಂಶವನ್ನು ನೀಡದಿದ್ದರೂ, ಅವರ ಬಜೆಟ್ ದಾಖಲೆಗಳು ಹೇಳುವ ಪ್ರಕಾರ ವಾರ್ಷಿಕವಾಗಿ ಸುಮಾರು ರೂ. ೨೫೦ಕೋಟಿ ಅಗತ್ಯವಿದೆ ಎಂಬುವುದು ಅಂದಾಜು ಲೆಕ್ಕ. ಇವೆಲ್ಲವೂ ಸೇರಿ ವಾರ್ಷಿಕವಾಗಿ ಸುಮಾರು ರೂ. ೬೦,೦೦೦ ಕೋಟಿ ಅಗತ್ಯವಿದೆ. ಅಂದರೇ, ಮುಖ್ಯಮಂತ್ರಿಗಳು ನೀಡಿದ ರೂ. ೫೨,೦೦೦ಕೋಟಿ ರೌಂಡ್-ಅಪ್ ಅಂಕಿಅಂಶಕ್ಕಿಂತ ಸುಮಾರು ೮,೦೦೦ಕೋಟಿ ಹೆಚ್ಚು ಅಗತ್ಯವಿದೆ ಎಂಬುವುದು ಲೆಕ್ಕ.
ಆದಾಗ್ಯೂ, ಈ ಐದು ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ವಿವಿಧ ಸರ್ಕಾರಿ ಇಲಾಖೆಗಳಿಗೆ ಬೇಡಿಕೆಗಳು-ಅನುದಾನಗಳಿಗಾಗಿ ಒದಗಿಸಲಾದ ಬಜೆಟ್ ಹಂಚಿಕೆಗಳ ಒಟ್ಟು ಮೊತ್ತವು ಕೇವಲ ರೂ. ೩೭,೦೦೦ಕೋಟಿ. ಆದರೆ ಮುಖ್ಯಮಂತ್ರಿಗಳ ವಿವರಿಸಿದ ಹಾಗೆ ಅಂದಾಜು ಖರ್ಚುವೆಚ್ಚದ ಪ್ರಕಾರ ಗಮನಿಸುವುದಾದರೇ, ಈ ಆರ್ಥಿಕ ವರ್ಷದ ಉಳಿದ ೯ ತಿಂಗಳಿಗೆ ಸರ್ಕಾರಕ್ಕೆ ರೂ. ೪೫,೦೦೦ಕೋಟಿ ಅಗತ್ಯವಿದೆ.
ಹಾಗಾದರೇ, ಅಗತ್ಯವಿರುವ ಹಣ ಸರ್ಕಾರಕ್ಕೆ ಎಲ್ಲಿಂದ ಬರುತ್ತದೆ? ತೆರಿಗೆಗಳು, ಸುಂಕಗಳ ಸಂಗ್ರಹ ಮತ್ತು ಬೆಲೆ ಏರಿಕೆ ಮತ್ತು ಸಾಲ ಎರಡನ್ನೂ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ. ಈಗಾಗಲೇ ಬಸವರಾಜ ಬೊಮ್ಮಾಯಿ ಮಧ್ಯಂತರ ಬಜೆಟ್ ನಲ್ಲಿ ರೂ.೭೭,೦೦೦೦ ಕೋಟಿಯಷ್ಟು ದಾಖಲೆಯ ಸಾಲವನ್ನು ಪಡೆಯುವುದಾಗಿ ಪ್ರಸ್ತಾಪಿಸಿದ್ದು, ಈ ಸರ್ಕಾರ ಸಾಲದ ಹೊರೆಯನ್ನು ಗಣನೀಯವಾಗಿ ರೂ.೮೫,೦೦೦ ಕೋಟಿಗೆ ಏರಿಸಿದೆ.
ಬೆಂಗಳೂರಿನ ಇಸ್ಟಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ ನ ಮಾಜಿ ನಿರ್ದೇಶಕ ಆರ್.ಎಸ್.ದೇಶಪಾಂಡೆ ಹೇಳುವ ಪ್ರಕಾರ, "ಬಡ್ಡಿ ಪಾವತಿ ಸಾಕಷ್ಟು ಹೆಚ್ಚಾಗಿದೆ ಮತ್ತು ಆದ್ದರಿಂದ ವಿತ್ತೀಯ ಕೊರತೆ ಸುಮಾರು ರೂ.೬೬,೦೦೦ ಕೋಟಿಯಾಗಿದೆ. ಒಟ್ಟಾರೆ, ಸಾಲದ ಬಾಧ್ಯತೆಗಳನ್ನು ಪೂರೈಸುವುದರಿಂದ ಕರ್ನಾಟಕವು ಸಾಲದ ಬಲೆಯಲ್ಲಿ ಸಿಲುಕುವ ಸಾಧ್ಯತೆಯಿಲ್ಲ. ತನ್ನ ಸ್ವಂತ ಸಂಪನ್ಮೂಲಗಳಿಂದ ಕಷ್ಟವೇನಲ್ಲ. ಇದರ ಹೊರತಾಗಿ ಜಿಎಸ್ ಟಿಗೆ ಕರ್ನಾಟಕವು ಅತಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದೆ ಮತ್ತು ಕೇಂದ್ರದಿಂದ ಜಿಎಸ್ ಟಿಯ ರಾಜ್ಯದ ಪಾಲು ಸಾಲವನ್ನು ಸರಿದೂಗಿಸುತ್ತದೆ. ಜೊತೆಗೆ, ಸ್ಟೇಟ್ ಟ್ಯಾಕ್ಸ್ ಆದಾಯವೂ ಪೂರಕವಾದ ಸ್ಥಿತಿಯಲ್ಲಿದೆ. ಕಳೆದ ೩ ವರ್ಷಗಳಲ್ಲಿ ಜಿಎಸ್ ಟಿ ಸಂಗ್ರಹವು ಶೇ.೫೦ರಷ್ಟು ಹೆಚ್ಚಾಗಿದೆ. ಈ ವರ್ಷ ರಾಜ್ಯವು ಜಿಎಸ್ ಟಿ ಸಂಗ್ರಹವನ್ನು ರೂ.೧೦ ರಿಂದ ೧೨,೦೦೦ಕೋಟಿಗಳಷ್ಟು ಹೆಚ್ಚಿಸಲಿದೆ.
ಇಂಡಿಯನ್ ಮೇಡ್ ಲಿಕ್ಕರ್ (ಐಎಮ್ ಎಲ್) ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ೨೦ ಪ್ರತಿಶತದಷ್ಟು ಹೆಚ್ಚಿಸಲು ಸರ್ಕಾರವು ಪ್ರಸ್ತಾಪಿಸಿದೆ. ರಾಜ್ಯಾದ್ಯಂತ ಆಸ್ತಿ ನೋಂದಣಿ ಮೇಲಿನ ಮಾರ್ಗದರ್ಶಿ ಮೌಲ್ಯವನ್ನು ಹೆಚ್ಚಿಸಲಾಗಿದೆ. ಸ್ಟ್ಯಾಂಪ್ಸ್ ಅಂಡ್ ರಿಜಿಸ್ಟ್ರೇಶನ್ ಡಿಪಾರ್ಟ್ ಮೆಂಟ್ ಗೆ ೨೦೨೩-೨೪ನೇ ಹಣಕಾಸು ವರ್ಷಕ್ಕೆ ರೂ.೨೫,೦೦೦ಕೋಟಿ ಆದಾಯ ಸಂಗ್ರಹವನ್ನು ನಿಗದಿಪಡಿಸಲಾಗಿದೆ. ನಿರೀಕ್ಷೆಯಂತೆ ಸರಕಾರದಿಂದ ಯಾವುದೇ ಹೊಸ ಯೋಜನೆ ಘೋಷಣೆಯಾಗಿಲ್ಲ. "ಯಾವುದೇ ಹೊಸ ಕಾರ್ಯಕ್ರಮಗಳನ್ನು ಘೋಷಿಸಿಲ್ಲ. ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ರೂ.೪೫,೦೦೦ ಕೋಟಿ, ಗ್ಯಾರಂಟಿಗಳ ಅನುಷ್ಠಾನಕ್ಕೆ ರೂ.೫೨,೦೦೦ ಕೋಟಿ ಮೀಸಲಿಡಲಾಗಿದೆ".
ಕರ್ನಾಟಕದ 'ಗ್ಯಾರೆಂಟಿ ಮಾಡೆಲ್' ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೇರಿತು. ಲೋಕಸಭೆಗೂ ಮುನ್ನ ನಡೆಯಲಿರುವ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂಗಳಲ್ಲಿಯೂ ಕೂಡ ಈ ʼಕಾಂಗ್ರೆಸ್ ಗ್ಯಾರಂಟಿʼಗಳನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನದಲ್ಲಿದೆ. ಹಾಗಾಗಿಯೇ, ಈ ಗ್ಯಾರಂಟಿಗಳನ್ನು ಶೀಘ್ರದಲ್ಲೇ ಜಾರಿಗೊಳಿಸುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಕಾರ್ಯರೂಪಗೊಳಿಸುವಿಕೆಯಲ್ಲಿ ವಿಳಂಬ ಅಥವಾ ಅಸಮರ್ಪಕತೆ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರವಲ್ಲದೆ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ನು, ವೈಯಕ್ತಿಕವಾಗಿ, ಸಿದ್ದರಾಮಯ್ಯ ಅವರು ಮಾಸ್ ಲೀಡರ್ ಎಂಬ ತಮ್ಮ ವಿಶ್ವಾಸಾರ್ಹತೆಯನ್ನು ರಾಜ್ಯದಲ್ಲಿ ಉಳಿಸಿಕೊಂಡು ತನ್ನ ನೇತೃತ್ವದ ಸರ್ಕಾರದ ಸಾಮರ್ಥ್ಯ ಎಂತದ್ದು ಎಂಬ ಮೆಸೇಜ್ ಹೈಕಮಾಂಡ್ ಗೆ ರವಾನಿಸಬೇಕಿದೆ ಎನ್ನುವುದು ಸ್ಪಷ್ಟ.
-ಶ್ರೀರಾಜ್ ವಕ್ವಾಡಿ
.jpeg)
No comments:
Post a Comment