ಕಾಂಗ್ರೆಸ್, ಬಿಜೆಪಿ ನೇತೃತ್ವದ ಮೈತ್ರಿ ಸಮರ । ಬಿಜೆಪಿಯತ್ತ ಒಲವು ತೋರಿದ ಹಿರಿಗೌಡರ ಪಕ್ಷ !
೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕೆನ್ನುವುದೇ ಎಲ್ಲಾ ವಿಪಕ್ಷಗಳ ಗುರಿಯಾಗಿದೆ. ಅದಕ್ಕಾಗಿಯೇ ಮೋದಿ ವಿರೋಧಿ ಪಕ್ಷಗಳ ಐ.ಎನ್.ಡಿ.ಐ.ಎ(ಇಂಡಿಯಾ = ಇಂಡಿಯನ್ ನ್ಯಾಶನಲ್ ಡೆವಲಪ್ಮೆಂಟಲ್ ಇನ್ಕ್ಲೂಸಿವ್ ಅಲಯನ್ಸ್) ಮೈತ್ರಿ ಸಜ್ಜಾಗಿದೆ. ವಿಪಕ್ಷಗಳ ಮೈತ್ರಿಯ ಪ್ರಯತ್ನ ಹಲವಾರು ಬಾರಿ ಏಳು ಬೀಳುಗಳನ್ನು ಕಂಡು ಈಗ ‘ಯುನೈಟೆಡ್ ವಿ ಸ್ಟ್ಯಾಂಡ್’ ಎಂಬ ಮಂತ್ರ ಜಪಿಸಿವೆ. ೨೦೨೪ಕ್ಕೂ ಮೊದಲಾಗಿ ಮೋದಿ ಮತ್ತು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಸರ್ವ ರೀತಿಯಲ್ಲಿ ಸಜ್ಜಾದಂತಿದೆ. ಕಾಂಗ್ರೆಸ್, ಕರ್ನಾಟಕದಲ್ಲಿ ಬಿಜೆಪಿ ಸೋತು ಮಕಾಡೆ ಮಲಗಿರುವುದನ್ನೇ ದೇಶವ್ಯಾಪಿ ಬಿಜೆಪಿಯ ಸರ್ವನಾಶಕ್ಕೆ ಇದೇ ನಾಂದಿ ಎಂದು ನಂಬಿ ಅತಿಯಾದ ವಿಶ್ವಾದಲ್ಲಿದೆ ಎಂಬಂತೆ ಕಾಣುತ್ತಿದೆ.
ಮತ್ತೊಂದೆಡೆ ಮೋದಿ ವಿದೇಶ ಪ್ರವಾಸಕ್ಕೆ ಹೋದಲ್ಲೆಲ್ಲಾ ಅಲ್ಲಿನ ಅನಿವಾಸಿ ಭಾರತೀಯರು ಗೌರವಿಸುತ್ತಿರುವುದನ್ನು, ಮೋದಿ ವೈಭವೀಕರಿಸಿ ಆಡಿದ ಮಾತಿಗೆ ಅಲ್ಲಿನ ಜನರು ತಟ್ಟಿದ ಚಪ್ಪಾಳೆಯನ್ನೇ ಇಟ್ಟುಕೊಂಡು ಮೋದಿಗೆ ವಿಶ್ವಗುರು ಪಟ್ಟ ಕಟ್ಟುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಇದು ಇಲ್ಲಿ ದೇಶದಲ್ಲಿ ಮೋದಿ ಮತ್ತು ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಮುಚ್ಚಿಸುವ ಪ್ರಯತ್ನವೂ ಹೌದು. ರಾಹುಲ್ ಗಾಂಧಿ ಇಂಗ್ಲೆಂಡ್, ಅಮೇರಿಕಾ ಪ್ರವಾಸದಲ್ಲಿ ಮೋದಿ ಮತ್ತು ಬಿಜೆಪಿ ಸರ್ಕಾರದ ಆಡಳಿತವನ್ನು ಜರೆದು ಬಂದಿದ್ದಾರೆ. ಹೀಗೆ ಆರೋಪ, ಪ್ರತ್ಯಾರೋಪ ವಿದೇಶ ಮಟ್ಟದಲ್ಲಿಯೂ ದೇಶದ ಪ್ರಭಾವಿ ನಾಯಕರುಗಳು ಮಾಡಿಕೊಂಡಿರುವುದು ಬರುವ ಲೋಕಸಭಾ ಚುನಾವಣೆಯ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.
ಭಾರತದ ರಾಜಕೀಯ ವಿರೋಧವು ಇಲ್ಲಿಯವರೆಗೆ ಆಪ್ ನ ಅರವಿಂದ್ ಕೇಜ್ರಿವಾಲ್, ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್‌ನ ರಾಹುಲ್ ಗಾಂಧಿ, ಹಾಗೂ ಇತರೆ ಪ್ರಮುಖ ಪ್ರಾದೇಶಿಕ ಪಕ್ಷಗಳ ನಾಯಕರ ಹೇಳಿಕೆಯಿಂದಷ್ಟೇ ಅಳೆಯಲಾಗುತ್ತಿತ್ತು. ಆದರೇ, ಆ ವಲಯ ಈಗ ವಿಸ್ತರಿಸಿದಂತೆ ಕಾಣಿಸುತ್ತಿದೆ. ಹಾಗಾದರೆ, ವಿಪಕ್ಷಗಳ ವಿರುದ್ಧ ಗೆಲ್ಲುವುದಕ್ಕೆ ಮೋದಿ ಲೆಕ್ಕಾಚಾರವೇನು ? ವಿಪಕ್ಷಗಳ ಮೈತ್ರಿ ಪರಿಕಲ್ಪನೆಯನ್ನು ಅಥವಾ ಅದರ ಸಿದ್ಧಾಂತವನ್ನು ಈ ದೇಶದ ಜನ ಒಪ್ಪುತ್ತಾರೆಯೇ, ಕಾಂಗ್ರೆಸ್ ಸೇರಿದಂತೆ ೨೬ ಪಕ್ಷಗಳ ಒಕ್ಕೂಟದೊಂದಿಗೆ ತಯಾರಾದ ಮೈತ್ರಿಯ ನೇತೃತ್ವ ಯಾರ ಹೆಗಲಿಗೇರಲಿದೆ ? ಮೈತ್ರಿಯ ನೇತಾರ ಯಾರು ? ಎನ್ನುವುದೆಲ್ಲದರ ಮೇಲೆಯೇ ಸದ್ಯಕ್ಕಿರುವ ಕುತೂಹಲ.
ಮೈತ್ರಿಗೂ ಮುನ್ನ ಪ್ರಮುಖ ಪಕ್ಷಗಳ ಪ್ರಮುಖ ಹೇಳಿಕೆಯನ್ನು ಗಮನಿಸೋಣ, ಕಾಂಗ್ರೆಸ್ ತನ್ನ ಭದ್ರಕೋಟೆಗಳಾದ ದೆಹಲಿ ಮತ್ತು ಪಂಜಾಬ್ ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೋರಾಡದಿದ್ದರೇ ಮಾತ್ರ ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಈ ವರ್ಷದಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಆಪ್ ಹೇಳಿತ್ತು. ಅದೇ ರೀತಿ, ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡಲು ಹೋಗುವುದಿಲ್ಲ, ಸಿಪಿಎಂ ಜೊತೆಗೆ ಮೈತ್ರಿ ಮಾಡುಕೊಳ್ಳುವುದಾದರೆ ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಒಲ್ಲೆ ಎಂದಿದ್ದರು. ನಿತೀಶ್ ಅವರು ೨೦೨೪ರಲ್ಲಿ ಬಿಜೆಪಿಯ ಪ್ರತಿ ಮುಖಕ್ಕೂ ಎಲ್ಲ ಮೋದಿ ವಿರೋಧಿ ಶಕ್ತಿಗಳ ಬೆಂಬಲದೊಂದಿಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಪ್ರಸ್ತಾಪಿಸಿದ್ದರು. ಪ್ರಾದೇಶಿಕ ಭದ್ರಕೋಟೆಯನ್ನು ಬಿಟ್ಟುಕೊಡುವುದಕ್ಕೆ ಯಾವ ಪ್ರಾದೇಶಿಕ ಪಕ್ಷವೂ ತಯಾರಿರಲಿಲ್ಲ ಎನ್ನುವುದು ಇದರ ಅರ್ಥ. ಇವೆಲ್ಲವನ್ನೂ ಮೀರಿ, ಒಳ ಒಪ್ಪಂದವನ್ನೂ ಮೀರಿ ೨೦೨೪ರ ಲೋಕಸಭೆಗಾಗಿ ಮೈತ್ರಿ ರಚನೆಯಾಗಿದೆ.
ಮೋದಿ ಜನಪ್ರಿಯತೆ, ಹಿಂದುತ್ವ ಮತ್ತು ಆಡಳಿತದ ಬಿರುಸಿನ ಹೊರತಾಗಿ ಇದು ಒಂದು ಲೆಕ್ಕದಲ್ಲಿ ಬಿಜೆಪಿಗೆ ಲಾಭ ತಂದುಕೊಡುವ ವಿಚಾರ. ಮೋದಿ ನೇತೃತ್ವದ ಬಿಜೆಪಿ ದೇಶದಲ್ಲಿ ಮತ್ತೆ ಅಧಿಕಾರ ಹಿಡಿದರೇ ಮೋದಿ ದೇಶದ ದೀರ್ಘಾವಧಿಯ ಪ್ರಧಾನಿಯಾಗಲಿದ್ದಾರೆ ಎಂಬ "ಹೆದರಿಕೆ", ಜೊತೆಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ವಿಪಕ್ಷಗಳ ನಾಯಕರನ್ನು ಬಂಧಿಸುವುದಕ್ಕಾಗಿ ಬಿಜೆಪಿ ಮಾಡುತ್ತಿರುವ ಕಾನೂನಿನಾಚೆಗಿನ ಪ್ರಯತ್ನ ವಿಪಕ್ಷಗಳನ್ನು ಒಗ್ಗೂಡಿಸುವಂತೆ ಮಾಡಿದೆ.
ಇತ್ತ, ಬಿಜೆಪಿ ನೇತೃತ್ವದ ಎನ್ ಡಿ ಎಯಲ್ಲಿ ಮಿತ್ರಪಕ್ಷಗಳ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಹಾರಾಷ್ಟ್ರದಲ್ಲಿ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅದರ ದೊಡ್ಡ ಪಾಲುದಾರ ಪಕ್ಷ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರಿಗಿಂತ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಶಿವಸೇನೆ ನೀಡಿದ ವ್ಯಂಗ್ಯಭರಿತ ಜಾಹೀರಾತು ಬಿಜೆಪಿ ಅಸಮಾಧಾನಗೊಂಡಿದೆ. ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, “ತಮಿಳುನಾಡಿನ ಆಡಳಿತವು ಭ್ರಷ್ಟವಾಗಿದೆ. ಮಾಜಿ ಮುಖ್ಯಮಂತ್ರಿ (ಜಯಲಲಿತ) ಸಹ ದೂಷಿಯಾಗಿದ್ದರು. ಹಾಗಾಗಿ ತಮಿಳುನಾಡು ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಒಂದಾಗಿತ್ತು” ಎಂದು ನೀಡಿದ ಹೇಳಿಕೆ ಕೂಡ ಮಿತ್ರಪಕ್ಷ ಎಐಎಡಿಎಂಕೆಯನ್ನು ಅಸಮಾಧಾನಗೊಳಿಸಿದೆ. ಹೀಗೆ ಹತ್ತ ಹಲವು ಉದಾಹರಣೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಸಣ್ಣ ಸಣ್ಣ ಪ್ರಾದೇಶಿಕ ಪಕ್ಷಗಳು ಬಿಜೆಪಿ ಬಗ್ಗೆ ಅಸಮಾಧಾನಗೊಂಡಿವೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ ವಿಚಾರ.
ಇನ್ನು, ಬಿಜೆಪಿಯ ಆಂತರಿಕ ಸಮೀಕ್ಷೆಗಳು ಬಿಹಾರದಂತಹ ರಾಜ್ಯಗಳಲ್ಲಿ ತನ್ನ ಮಿತ್ರಪಕ್ಷ ಜೆಡಿಯು ಅನ್ನು ಕಳೆದುಕೊಂಡಿರುವ ರಾಜ್ಯಗಳಲ್ಲಿ ನಷ್ಟವನ್ನು ಅನುಭವಿಸಬಹುದು ಎಂದು ತೋರಿಸಿದೆ. ಮತ್ತು ಮಹಾರಾಷ್ಟ್ರದಲ್ಲಿ, ಶಿಂಧೆ, ಅನೇಕ ಸೇನೆಯ ಶಾಸಕರು ಮತ್ತು ಸಂಸದರು ಬಿಜೆಪಿಯೊಂದಿಗೆ ಕೈಜೋಡಿಸಿದರು. ಇನ್ನು ಕೆಲವು ನಿಷ್ಠಾವಂತರು ಈಗ ಎನ್ ಡಿಎಗೆ ವಿರುದ್ಧವಾಗಿದ್ದು, ಉದ್ಧವ್ ಠಾಕ್ರೆ ಬಣ ಐ.ಎನ್.ಡಿ.ಇ.ಎ ಗೆ ಸೇರಿಕೊಂಡಾಗಿದೆ.
ಹಾಗಾದರೆ ಬಿಜೆಪಿಯಲ್ಲಿ ಏನಾಗುತ್ತಿದೆ ? :
ಪ್ರತಿಪಕ್ಷಗಳ ಕೂಟ ಕೊನೆಗೂ ರಚನೆಯಾದರೇ, ಎನ್ ಡಿಎ ಸರಿಪಡಿಸಿಕೊಳ್ಳುವುದಕ್ಕೆ ಬಿಜೆಪಿ ಶ್ರಮಿಸುತ್ತಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆಯಿಂದಾಗಿ ೨೦೧೮ರಲ್ಲಿ ಎನ್‌ಡಿಎಯಿಂದ ಹೊರಬಂದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮತ್ತೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಮರಳಲು ಯೋಜಿಸುತ್ತಿದೆ. ಇತ್ತ, ಆಂಧ್ರದಲ್ಲಿ ಕಾಂಗ್ರೆಸ್ ವಿಶ್ವಾಸದಿಂದಿದೆ. ಟಿಡಿಪಿಯಿಂದಲೇ ಕಾಂಗ್ರೆಸ್ ಗೆ ಬಂದ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಭರವಸೆಯಿಂದ ನೋಡುತ್ತಿದೆ. ಗೆಲ್ಲುವ ವಿಶ್ವಾಸವೂ ಕಾಂಗ್ರೆಸ್ ಗೆ ಇದೆ.
ನಾಯ್ಡು ಅವರು ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ತೆಲಂಗಾಣ ಚುನಾವಣೆಗೆ ಮುಂಚಿತವಾಗಿ ಮೈತ್ರಿ ಕುರಿತು ಚರ್ಚಿಸಿದ್ದಾರೆ ಮತ್ತು ವಿವಾದಿತ ಕೃಷಿ ಕಾಯ್ದೆ ವಿರುದ್ಧ ಹೋರಾಡಿ ೨೦೨೦ರಲ್ಲಿ ಎನ್ ಡಿಎಯಿಂದ ಹೊರಬಂದ ಪಂಜಾಬ್ ನ ಶಿರೋಮಣಿ ಅಕಾಲಿದಳವನ್ನು ಮರಳಿ ಸ್ವಾಗತಿಸಲು ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ಟಿಡಿಪಿ ಮತ್ತು ಅಕಾಲಿಗಳು ಎನ್ ಡಿಎಯ ಸ್ಥಾಪಕ ಸದಸ್ಯ ಪಕ್ಷಗಳು. ಕರ್ನಾಟಕದಲ್ಲಿ ಜೆಡಿಎಸ್ ಕೇಸರಿ ಪಕ್ಷವನ್ನು ಸೇರಬಹುದು ಎಂಬ ವರದಿಗಳಿವೆ.
ಬಿಜೆಪಿಗೆ ಒಗ್ಗಿಕೊಳ್ಳಲಿದೆಯೇ ಹಿರಿಗೌಡರ ಜೆಡಿಎಸ್ ? :
ಲೋಕಸಭೆ ಚುನಾವಣೆಗೆ ಇನ್ನೂ ಒಂಬತ್ತು ಹತ್ತು ತಿಂಗಳು ಇರುವಾಗಲೇ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಮತ್ತು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎದುರಿಸಿದ ಸಂಕಷ್ಟವನ್ನು ಪರಾಮರ್ಶಿಸಿ ಹಿರಿಗೌಡರ ಜೆಡಿಎಸ್ ಪಕ್ಷ ಬಿಜೆಪಿಗೆ ಹತ್ತಿರವಾಗುವ ಮನಸ್ಸು ಮಾಡಿದಂತಿದೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಮೂಲಕ ಅಧಿಕಾರಕ್ಕೆ ಏರಿ, ಲೋಕಸಭಾ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಗೆದ್ದು ಬೀಗುವ ವಿಶ್ವಾಸದಲ್ಲಿರುವ ಕಾಂಗ್ರೆಸ್ ನನ್ನು ಸೋಲಿಸಲು ಬಿಜೆಪಿ, ಜೆಡಿಎಸ್ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ಚರ್ಚೆ ಎದ್ದಿದೆ.
ದೇಶವ್ಯಾಪಿ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಬಹುತೇಕ ಎಲ್ಲಾ ಪ್ರಾದೇಶಿಕ ಪಕ್ಷಗಳು ಸ್ನೇಹ ಹಸ್ತ ಚಾಚುತ್ತಿರುವ ಸಂದರ್ಭವನ್ನು ನಡುವೆ ಜೆಡಿಎಸ್ ಮಾತ್ರ ಎನ್ ಡಿಎ ಮೈತ್ರಿಯತ್ತ ಒಲವು ತೋರಿಸುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗುವ ದೊಡ್ಡ ಕನಸು ಕಂಡಿದ್ದ ಜೆಡಿಎಸ್, ಕೇವಲ ೧೯ ಕ್ಷೇತ್ರಗಳಲ್ಲಿ ಗೆದ್ದು ತೃಪ್ತಿ ಪಟ್ಟುಕೊಂಡಿತು. ಇಂತಹ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಗೆ ಬಂದು ತಲುಪಿದ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಾದರೂ ತನ್ನ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಂತಿದೆ. ಇನ್ನು, ೨೦೦೬ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಸರ್ಕಾರ ರಚಿಸಿದ್ದವು. ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್ ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ನಡೆಸಿದ್ದರು. ೨೦-೨೦ ಮೈತ್ರಿ ಒಪ್ಪಂದದಂತೆ ಬಿಎಸ್ ವೈಗೆ ಮುಖ್ಯಮಂತ್ರಿ ಸ್ಥಾನವನ್ನು ಕುಮಾರ ಸ್ವಾಮಿ ಬಿಟ್ಟುಕೊಡದ ಕಾರಣ, ಮೈತ್ರಿ ಸರ್ಕಾರ ಅಂತಿಮ ಚುಕ್ಕಿ ಇಟ್ಟಿತ್ತು. ಇದಾಗಿ ೧೮ ವರ್ಷಗಳಾದ ಮೇಲೆ ಜೆಡಿಎಸ್ ರಾಜ್ಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಕಡೆ ವಾಲುತ್ತಿರುವ ಸ್ಪಷ್ಟ ಸೂಚನೆಗಳು ಕಾಣಿಸುತ್ತಿವೆ. ಇತ್ತೀಚೆಗೆ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಬಹುತೇಕ ಎಲ್ಲಾ ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ನಿಂತಿದ್ದರೇ, ಹಿರಿಗೌಡರು ಸಮಾರಂಭದಲ್ಲಿ ಭಾಗವಹಿಸಿ ಮೋದಿಯನ್ನು ಶ್ಲಾಘಿಸಿದ್ದರು. ಇವೆಲ್ಲಾ ಈ ಮೈತ್ರಿ ಹಿಂದಿನ ಕಸರತ್ತು ಎಂದೇ ಕಾಣಿಸುತ್ತಿದೆ.
ಒಟ್ಟಿನಲ್ಲಿ ಯುಪಿಎ ಐ.ಎನ್.ಡಿ.ಇ.ಎ ಆಗಿ ಬದಲಾಗಿ ಲೋಕಸಭೆಗೆ ಒಂದು ಹಂತದಲ್ಲಿ ಸಜ್ಜಾಗಿದೆ. ಎನ್ ಡಿಎ ಮೈತ್ರಿಯೊಳಗಿನ ಬಿರುಕು ಸರಿಹೊಂದಬೇಕಿದೆ. ಐ.ಎನ್.ಡಿ.ಐ.ಎ ಇಂದ ಏನಾಗುತ್ತದೋ ಇಲ್ಲವೋ ಆದರೆ, ಉತ್ತರ ಭಾರತದಲ್ಲಿ ಈ ಲೋಕಸಭೆ ಚುನಾವಣೆಯಲ್ಲಿ ಬಿಗಿ ಹೋರಾಟ ಕೊಡುವುದಂತೂ ಬಹುತೇಕ ನಿಶ್ಚಿತ ಎಂದು ಕಾಣಿಸುತ್ತಿದೆ. ಗೊತ್ತಿಲ್ಲ, ಲೋಕಸಭೆಯೊಳಗೆ ದೇಶವ್ಯಾಪಿ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎಂದು ಕಾದು ನೋಡೋಣ.
-ಶ್ರೀರಾಜ್ ವಕ್ವಾಡಿ

No comments:
Post a Comment