(ಸಾಂದರ್ಭಿಕ ಚಿತ್ರ)
2024ರಲ್ಲೂ ರಾಹುಲ್ ಗಾಂಧಿಗೆ
ಖರ್ಗೆ ಪರ್ಯಾಯವೇ ? | ಶೂನ್ಯ ತಂತ್ರಗಾರಿಕೆಯ ʼಇಂಡಿಯಾʼ !
ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನ ಹೆಚ್ಚಾಗುತ್ತಿದೆ.
ಲೋಕಸಭಾ ಚುನಾವಣೆಯ ಅಂತಿಮ ಹಂತದ ಪೂರ್ವ ಸಿದ್ಧತೆಯು ಅನೇಕ ಕುತೂಹಲಕಾರಿಯಾದ ಘಟನೆಗಳಿಗೆ ಸಾಕ್ಷಿಯಾಗುತ್ತಿವೆ.
ಇತ್ತೀಚೆಗೆ ಅಂದರೆ, ಡಿಸೆಂಬರ್ 19ರಂದು ನಡೆದ ʼಇಂಡಿಯಾʼ
ಮೈತ್ರಿಕೂಟದ ಚುನಾವಣಾ ಪೂರ್ವ ಸಿದ್ಧತೆಯ ಕುರಿತ ಸಭೆಯಲ್ಲಿ ಮಮತಾ ಬ್ಯಾನರ್ಜಿ
ಮತ್ತು ಅರವಿಂದ್ ಕೇಜ್ರಿವಾಲ್ ʼಇಂಡಿಯಾʼ ಮೈತ್ರಿಕೂಟದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್
ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಘೋಷಿಸಬೇಕು ಎಂದು ಸಲಹೆ ನೀಡಿರುವುದು ಇಡೀ ರಾಜಕೀಯ ವಲಯವನ್ನೇ
ಕಣ್ಣರಳಿಸಿ ನೋಡುವಂತೆ ಮಾಡಿದೆ.
ವರದಿಗಳ ಪ್ರಕಾರ ಮೈತ್ರಿಕೂಟ 26 ಪಕ್ಷಗಳ ಪೈಕಿ 12 ಪಕ್ಷಗಳು ಈ ವಿಚಾರಕ್ಕೆ
ಬೆಂಬಲಿಸಿವೆ. ಉಳಿದ ಪಕ್ಷಗಳು ಈ ವಿಚಾರಕ್ಕೆ ತಮ್ಮ
ಅಸಮಾಧಾನ ವ್ಯಕ್ತಪಡಿಸಿದವು ಎಂಬ ಮಾಹಿತಿ ಇದೆ. ಅದೇನೇ ಇರಲಿ, ಅಲ್ಲಿಯೂ ʼರಾಜಕೀಯʼ ಇದೆ ಎನ್ನುವುದನ್ನು
ನಾವು ಅರಿತುಕೊಳ್ಳಬೇಕಾಗಿರುವುದು ಸತ್ಯ. ಇನ್ನು, ಖರ್ಗೆ ಅವರೇ ಹೇಳುವಂತೆ
ʼಇಂಡಿಯಾʼ ಮೈತ್ರಿಕೂಟ ಮೊದಲು 2024ರ ಲೋಕಸಭಾ
ಚುನಾವಣೆಯಲ್ಲಿ ಗೆಲ್ಲುವತ್ತ ಗಮನಹರಿಸಬೇಕು, ಪ್ರಧಾನಿ ಅಭ್ಯರ್ಥಿ ಯಾರಾಗಬೇಕು
ಎನ್ನುವ ವಿಚಾರದ ನಿರ್ಧಾರವನ್ನು ಕಾಯ್ದಿರಿಸುವುದು
ಉತ್ತಮ ಎಂದು ಅವರು ಸಲಹೆ ನೀಡಿದರು. ಖರ್ಗೆ ಗಾಂಧಿ ಕುಟುಂಬದ ವಿದೇಯ ನಾಯಕ.
ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾದಾಗ ಸೋನಿಯಾ ನೆರಳಿನಂತೆ ಕಾರ್ಯ ನಿರ್ವಹಿಸಲಿದ್ದಾರೆ ಎನ್ನುವ ಮಾತುಗಳು
ಸ್ವತಃ ಕಾಂಗ್ರೆಸ್ ಪಾಳಯದಿಂದಲೇ ಕೇಳಿ ಬಂದಿತ್ತು.
ಸೋನಿಯಾ ಹಾಗೂ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಖರ್ಗೆ, ಈ ವಿಚಾರವನ್ನು ಪಕ್ಷದಲ್ಲೇ
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೂತಿರುವಾಗ ʼಹ್ಹು ಸರಿ ಆಯ್ತುʼ ಎಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಯೂ
ಇಲ್ಲ. ಒಂದೆಡೆ ಗಾಂಧಿ ಕುಟುಂಬಕ್ಕೆ ನೋವಾಗದ ರೀತಿಯಲ್ಲಿಯೂ, ಇನ್ನೊಂದೆಡೆ ಮಿತ್ರ ಪಕ್ಷಗಳನ್ನು ಸಮಾಧಾನಿಸುವಂತೆಯೂ
ನೋಡಿಕೊಳ್ಳಬೇಕಿತ್ತು. ಏನೇ ಇರಲಿ, ಒಂದು ವೇಳೆ ಪವಾಡವೆಂಬಂತೆ ʼಇಂಡಿಯಾʼ ಮೈತ್ರಿ ಲೋಕಸಭೆಯಲ್ಲಿ ಗೆದ್ದು,
ಪ್ರಧಾನಿ ಆಗುವ ಆಫರ್ ಖರ್ಗೆಯರಿಗೆ ಬಂದರೇ, ಖರ್ಗೆಯವರು ಅದನ್ನು ಬಿಟ್ಟುಕೊಟ್ಟಾರೆಯೇ ? ಎಂಬ ಪ್ರಶ್ನೆಯೂ
ನಮ್ಮ ಮುಂದಿದೆ.
ಪ್ರಧಾನಿ ನರೇಂದ್ರ
ಮೋದಿ ʼಇಂಡಿಯಾʼ
ಮೈತ್ರಿಗೆ ನೀತಿ, ನಿಯತಿ ಮತ್ತು ನೇತೃತ್ವ (ನೀತಿ, ಉದ್ದೇಶ, ನಾಯಕತ್ವ) ಕೊರತೆಯಿದೆ ಎಂದು ಕಾಮೆಂಟ್ ಮಾಡಿ ಹಲವು ಬಾರಿ ವಾಗ್ದಾಳಿ ನಡೆಸಿದ್ದಾರೆ. ಒಂದು ಹಂತದಲ್ಲಿ ಅದು
ಹೌದು ಕೂಡ. ʼಇಂಡಿಯಾʼ ಮೈತ್ರಿಕೂಟದ ನೀತಿ, ಉದ್ದೇಶ ಹಾಗೂ ನಾಯಕತ್ವ ಏನು/ಯಾವುದು/ಯಾರು ? ಎಂಬುವುದರ
ಬಗ್ಗೆ ಸ್ವತಃ ಮೈತ್ರಿಕೂಟವೇ ಈವರೆಗೆ ಸ್ಪಷ್ಟಪಡಿಸಿಲ್ಲ. ಇಂತಹ ಸಂದರ್ಭದಲ್ಲಿ ಮೈತ್ರಿಕೂಟದ
ಉನ್ನತ ಶ್ರೇಣಿಯ ನಾಯಕರ ಪೈಕಿ ಮಮತಾ
ಬ್ಯಾನರ್ಜಿ ಮತ್ತು ಕೇಜ್ರಿವಾಲ್, ಹೆಚ್ಚುತ್ತಿರುವ ಕುತೂಹಲ
ಹಾಗೂ ರಾಜಕೀಯ ಒತ್ತಡಗಳ ನಡುವೆ ಲೋಕಸಭಾ ಚುನಾವಣೆಗೆ ʼಇಂಡಿಯಾʼ ಮೈತ್ರಿಕೂಟ
ತನ್ನ ನಾಯಕತ್ವದ ವರ್ಚಸ್ಸನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ತಿಳಿದಿದ್ದಾರೆ
ಅಂತನ್ನಿಸುತ್ತಿದೆ. ಆದರೂ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಮಲ್ಲಿಕಾರ್ಜುನ್ ಖರ್ಗೆ ಎಷ್ಟು ಸಮರ್ಥರು
ಹಾಗೂ ಎದುರಾಳಿ ನರೇಂದ್ರ ಮೋದಿಗೆ ಎಷ್ಟರ ಮಟ್ಟಿಗೆ ಸರಿಸಾಠಿಯಾಗಿ ನಿಲ್ಲಬಲ್ಲರು ಎನ್ನುವುದು ಸದ್ಯ
ಭಾರತೀಯ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯ.
ಹೌದು, 2019ರ ಲೋಕಸಭಾ
ಚುನಾವಣೆಯಲ್ಲಿ ಮತದಾರರು ತಮ್ಮ ಮತ ಚಲಾಯಿಸುವಾಗ ʼಪ್ರಧಾನ ಮಂತ್ರಿʼ ಯಾರು ಎಂಬುವುದನ್ನು ಪ್ರಮುಖವಾಗಿ ಪರಿಗಣಿಸಿದ್ದಾರೆ
ಎಂದು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ ಹೇಳುತ್ತದೆ. ಈ ವಿಚಾರಕ್ಕೆ
ಸಂಬಂಧಿಸಿ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ. 37ರಷ್ಟು
ಮಂದಿ ʼನಾವು ಪ್ರಧಾನಿ ಮುಖ ನೋಡಿ ಓಟ್ ಹಾಕಿದ್ದೇವೆʼ
ಎಂದು ಹೇಳಿಕೊಂಡಿದ್ದಾರೆ. ಹೌದು, ಶೇ. 37ರಷ್ಟು
ಮಂದಿ ಪ್ರಧಾನಿ ಯಾರು ಎಂದು ನೋಡಿ ತಮ್ಮ ಮತ ಚಲಾಯಿಸಿದ್ದಾರೆ
ಎಂದಾದರೇ ಅದು ಸಣ್ಣ ವಿಚಾರವಲ್ಲ ಎನ್ನುವುದನ್ನು ʼಇಂಡಿಯಾʼ ಮೈತ್ರಿಕೂಟ ಅರಿತುಕೊಳ್ಳಬೇಕಿದೆ. ಖರ್ಗೆಯವರು
ಹಿರಿಯ ನಾಯಕರಾಗಿರಬಹುದು ಆದರೇ, ಮೋದಿ ವರ್ಸಸ್ ಖರ್ಗೆ ಆದರೇ, ʼಇಂಡಿಯಾʼ ಮೈತ್ರಿಕೂಟಕ್ಕೆ ಲಾಭವಾದಿತೇ
ಎನ್ನುವುದು ಸದ್ಯಕ್ಕಿರುವ ಪ್ರಶ್ನೆ. ಪ್ರಬಲ ಹಾಗೂ ಸಮರ್ಥ ನಾಯಕನೋರ್ವನನ್ನು ತನ್ನ ಪ್ರಧಾನಿ ಅಭ್ಯರ್ಥಿ
ಎಂದು ತುರ್ತಾಗಿ ಘೋಷಣೆ ಮಾಡದೇ ಇದ್ದರೇ, ʼಇಂಡಿಯಾʼ ದೊಡ್ಡ ಸಂಖ್ಯೆಯ ಮತದಾರರನ್ನು ನಿರಾಯಾಸವಾಗಿ
ಕಳೆದುಕೊಳ್ಳಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆಯೇ
ಯಾಕೆ ? :
ಖರ್ಗೆಯವರನ್ನು ʼಇಂಡಿಯಾʼ ಮೈತ್ರಿಯ ಪ್ರಧಾನಿ
ಅಭ್ಯರ್ಥಿಯಾಗಿ ಘೋಷಣೆಯಾಗಬೇಕು ಎಂಬ ವಾದ ಅಥವಾ ಚರ್ಚೆಯ ಹಿಂದೆ ಬಹಳ ದೊಡ್ಡ ವಿಷಯವಿದೆ ಎನ್ನುವುದನ್ನು
ಮರೆಯುವುದಕ್ಕೆ ಖಂಡಿತ ಸಾಧ್ಯವಿಲ್ಲ. ದೇಶದ ಜನಸಂಖ್ಯೆಯ ಶೇ. 17ರಷ್ಟಿರುವ ದಲಿತ ಸಮುದಾಯಕ್ಕೆ ಸೇರಿರುವ
ಖರ್ಗೆ, ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು ಎನ್ನುವುದು ಮಮತಾ ಬ್ಯಾನರ್ಜಿ ಹಾಗೂ ಅರವಿಂದ ಕೇಜ್ರೀವಾಲ್
ಅವರ ಸಮರ್ಥನೆ. ಖರ್ಗೆ ಹಿರಿಯ ನಾಯಕರೇನೋ ಹೌದು, ಆದರೇ ಅವರೊಬ್ಬ ಉತ್ತಮ ಸಂಸತ್ ಪಟುವಾಗಿಯೂ ಗುರುತಿಸಿಕೊಂಡವರಲ್ಲ,
ದೇಶಕ್ಕೆ ದೇಶವೇ ಗುರುತಿಸುವಂತಹ ನಾಯಕನಾಗಿಯೂ ಗುರುತಿಸಿಕೊಂಡವರಲ್ಲ.
ಖರ್ಗೆಯವರನ್ನು ಪ್ರಧಾನಿಯಾಗಿ ಘೋಷಿಸುವುದರಿಂದ ದಲಿತ ಸಮುದಾಯದ ಮತಗಳನ್ನು ಸೆಳೆಯಬಹುದು,
ವಿಶೇಷವಾಗಿ 2019ರಲ್ಲಿ ಭಾರತದಾದ್ಯಂತ ಶೇ. 3.7ರಷ್ಟು ಮತಗಳನ್ನು ಗಳಿಸಿದ ಮಾಯಾವತಿಯವರ ಬಿಎಸ್‌ಪಿ
ಗೆ ಸೆಡ್ಡು ಹೊಡೆಯಬಹುದು. ಲೋಕಸಭೆಯಲ್ಲಿ
ಎಂಭತ್ನಾಲ್ಕು ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ
ಮೀಸಲಿಡಲಾಗಿದೆ. ಈ ಪೈಕಿ ಕಳೆದ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ 54 ಕ್ಷೇತ್ರಗಳನ್ನು ಗೆದ್ದಿದೆ, ಕಾಂಗ್ರೆಸ್ ನೇತೃತ್ವದ ಯುಪಿಎ ಕೇವಲ 11 ಮತ್ತು ಪ್ರಾದೇಶಿಕ ಪಕ್ಷಗಳು ಒಟ್ಟು 19 ಕ್ಷೇತ್ರಗಳನ್ನು ಗೆದ್ದಿದ್ದವು.
2019ರಲ್ಲಿ
ಎನ್‌ಡಿಎ ಶೇ. 41ರಷ್ಟು ಪರಿಶಿಷ್ಟ ಜಾತಿಗಳ ಬೆಂಬಲವನ್ನು ಪಡೆದರೆ,
ಕಾಂಗ್ರೆಸ್ ನೇತೃತ್ವದ ಯುಪಿಎ ಶೇ. 28ರಷ್ಟು
ಮತಗಳನ್ನು ಗಳಿಸಿತ್ತು. ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸುವ ಮಮತಾ
ಮತ್ತು ಕೇಜ್ರಿವಾಲ್ ಅವರ ನಿರ್ಧಾರದಲ್ಲಿನ ರಾಜಕೀಯ ಒಳಾರ್ಥಗಳನ್ನು ಗಮನಿಸಬೇಕು. ಒಂದು ಮೆಸೇಜ್ ಪಾಸ್ ಮಾಡುವುದರ ಮೂಲಕ ಎರಡು ವಿಷಯಗಳನ್ನು ಮೈತ್ರಿಕೂಟದ ಮುಂದಿಡುವ
ಪ್ರಯತ್ನವಿದು. ಒಂದನೇಯದು ಕಾಂಗ್ರೆಸ್ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ
ಅವರ ಹೆಸರನ್ನು ಮೈತ್ರಿಕೂಟದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ
ಪ್ರಸ್ತಾಪಿಸುವ ಸಾಧ್ಯತೆಗಳನ್ನು ದೂರ ಸರಿಸುವುದು ಮತ್ತು ಎರಡನೆಯದಯ ಮೈತ್ರಿಕೂಟದಲ್ಲಿ ತಮ್ಮ ಪ್ರಭಾವವವನ್ನು ಬಲವಾಗಿ ಬೇರೂರುವುದಾಗಿತ್ತು.
ಆದಾಗ್ಯೂ, ಈ ʼಇಂಡಿಯಾʼ ಮೈತ್ರಿಕೂಟ ರಚನೆಗೂ ಮುನ್ನಾ ಬ್ಯಾನರ್ಜಿ ಹಾಗೂ
ಕೇಜ್ರೀವಾಲ್ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ನೇತೃತ್ವವನ್ನು ತೆಗಳಿದವರೇ ಆಗಿದ್ದಾರೆ. ಭಾರತ್
ಜೋಡೋ ಯಾತ್ರೆಯ ನಂತರ ರಾಹುಲ್ ಜನಪ್ರಿಯತೆ
ಹೆಚ್ಚಳವಾಗಿರುವುದರಿಂದ ಕಾಂಗ್ರೆಸ್, ಪ್ರಧಾನಿ ಅಭ್ಯರ್ಥಿತನಕ್ಕೆ ರಾಹುಲ್ ಅವರನ್ನೇ ಸೂಚಿಸಬಹುದೆಂಬ
ಕಾರಣಕ್ಕೆ, ಪ್ರಧಾನಿ ಅಭ್ಯರ್ಥಿಯ ಚರ್ಚೆ ಬರುವುದಕ್ಕೆ ಮುನ್ನವೇ ಮಮತಾ ಹಾಗೂ ಕೇಜ್ರಿವಾಲ್ ಇಬ್ಬರೂ
ಖರ್ಗೆ ಹೆಸರನ್ನು ಮುಂದಕ್ಕೆ ತಂದು ಒಂದು ಚರ್ಚೆಯನ್ನು ನಿರೀಕ್ಷಿಸಿರಬಹುದು.
ಇನ್ನು, ಮಮತಾ
ಬ್ಯಾನರ್ಜಿ ಮತ್ತು ಕೇಜ್ರಿವಾಲ್ ಇಬ್ಬರೂ ಕೂಡ ನಿತೀಶ್ ಕುಮಾರ್ ಅಥವಾ
ಅಖಿಲೇಶ್ ಯಾದವ್ ಅವರಂತಹ ಪ್ರಾದೇಶಿಕ ನಾಯಕರಿಗೆ ದೊರಕುವ ಸಾಧ್ಯತೆಗಳಿದ್ದ ಮೈತ್ರಿಕೂಟದ ಸಂಚಾಲಕರ ಹುದ್ದೆ ಅಥವಾ ಪ್ರಧಾನ ಮಂತ್ರಿ ಅಭ್ಯರ್ಥಿತನದ
ಅವಕಾಶದಿಂದ ಅವರನ್ನು ದೂರತಳ್ಳಿದರು ಎನ್ನುವುದನ್ನು ನಾವಿಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿದೆ.
ʼಇಂಡಿಯಾ” ಮೈತ್ರಿಯ
ನಿತೀಶ್ ಕುಮಾರ್, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಶರದ್ ಪವಾರ್ ಮತ್ತು ಎಂ.ಕೆ
ಸ್ಟಾಲಿನ್ ಒಂದು ಸಮಾನ ಹುದ್ದೆಯ ನಿರೀಕ್ಷೆಯಲ್ಲಿರುವವರೇ ಆಗಿದ್ದಾರೆ. ಅನೇಕರು ಪ್ರಧಾನಿ ಹುದ್ದೆಯ ಆಕಾಂಕ್ಷಿಗಳೆ.
ಇವರೆಲ್ಲರೂ 1996ರ ಲೋಕಸಭಾ
ಚುನಾವಣೆಯ ನಂತರ ದೇವೇಗೌಡರಿಗೆ ಸಿಕ್ಕಂತಹ ಅನಿರೀಕ್ಷಿತ ತಿರುವಿನ
ನಿರೀಕ್ಷೆಯಲ್ಲಿಯೇ ಇದ್ದಾರೆ.
ಮಲ್ಲಿಕಾರ್ಜುನ ಖರ್ಗೆ : ಪ್ಲಸ್, ಮೈನಸ್ !
ʼಇಂಡಿಯಾʼ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿತನಕ್ಕೆ
ಈಗ ʼಖರ್ಗೆʼ ಮಿತ್ರಪಕ್ಷಗಳ ಆಯ್ಕೆಯಾಗಿದೆ. ಸುಮಾರು 50 ವರ್ಷಗಳಿಗಿಂತ ಹೆಚ್ಚು
ಸುದೀರ್ಘ ರಾಜಕೀಯ ಅನುಭವವುಳ್ಳ ಅವರು, ಮುತ್ಸದ್ಧಿ ರಾಜಕಾರಣಿ. ಪರಿಶಿಷ್ಟ ಜಾತಿ
ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಹೀಗಾಗಿ 2024ರ ಲೋಕಸಭಾ ಚುನಾವಣೆಗೆ ಒಬಿಸಿ (ಇತರ ಹಿಂದುಳಿದ ವರ್ಗ) ಮತಗಳನ್ನು
ಸೆಳೆಯಬಹುದು ಎಂಬುವುದು “ಇಂಡಿಯಾ” ಮಿತ್ರಪಕ್ಷಗಳ ಪ್ರಾಥಮಿಕ ಹಂತದ ತಂತ್ರಗಾರಿಕೆ ಎನ್ನುವ ಹಾಗೆ ಕಾಣಿಸುತ್ತಿದೆ.
ದಲಿತ ಮುಖ್ಯಮಂತ್ರಿ, ದಲಿತ ಪ್ರಧಾನಿ ವಿಚಾರ
ರಾಜಕೀಯದಲ್ಲಿ ಆಗಾಗ ಕೇಳಿಸುವ ವಿಷಯಗಳು. ಕಾಂಗ್ರೆಸ್ ಹಾಗೂ ಕಾಂಗ್ರೆಸ್‌ನ ಸೈದ್ಧಾಂತಿಕ ನಿಲುವನ್ನು
ಒಪ್ಪುವ ಅಥವಾ ಅದಕ್ಕೆ ಸಮನಾಗಿರುವ ಎಲ್ಲಾ ಪಕ್ಷಗಳು ಹಿಂದುಳಿದ ವರ್ಗಗಳಿಗೆ, ದಲಿತರ ಪರವಾಗಿಯೇ ಸದಾ
ನಿಲ್ಲುತ್ತವೆ ಎನ್ನುವುದನ್ನು ತೋರಿಸುವ ಯತ್ನವೂ ಈ ʼಖರ್ಗೆ ಮ್ಯಾಟರ್ʼ ನಲ್ಲಿ ಅಡಗಿದೆ ಎನ್ನುವುದು
ಅಕ್ಷರಶಃ ಸತ್ಯ.
ಖರ್ಗೆ ಯಾರಲ್ಲಿಯೂ ನಿಷ್ಠುರ ಮಾಡಿಕೊಂಡವರಲ್ಲ,
ಹಿರಿಯ ನಾಯಕ ಹಾಗೂ ಪಕ್ಷನಿಷ್ಠ ನಾಯಕ. ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದ ನಾಯಕ ಎನ್ನುವುದು ದೊಡ್ಡ
ಪ್ಲಸ್ ಪಾಯಿಂಟ್ ಆಗಿ ಕಾಣಿಸಿಕೊಂಡರೇ, ಹೊಸ ಮತದಾರರನ್ನು ತಲುಪುವಲ್ಲಿ ಖರ್ಗೆ ಸೋಲುತ್ತಾರೆ ಎನ್ನುವುದರಲ್ಲಿ
ಯಾವುದೇ ಸಂಶಯವಿಲ್ಲ. ರಾಹುಲ್ ಪ್ರಧಾನಿ ಅಭ್ಯರ್ಥಿತನವನ್ನು ನಿರ್ಲಕ್ಷ್ಯ ಮಾಡುವವರಿಗೆ ಉತ್ತರವಾಗಿ
ಖರ್ಗೆಯವರನ್ನು ಮುಂದಿಡುತ್ತೇವೆ ಎಂದು ಹೇಳಿದರೂ ಕೂಡ, ಖರ್ಗೆ ಅವರಿಗೆ ಮೋದಿಯವರಿಗಿರುವ
ವಾಕ್ ಚತುರತೆ ಇಲ್ಲ ಮತ್ತು ಪ್ಯಾನ್-ಇಂಡಿಯಾ ಲೀಡರ್ ಕೂಡ ಅಲ್ಲ.
ಖರ್ಗೆ ದಕ್ಷಿಣ ಭಾರತಕ್ಕೆ ಸೀಮಿತವಾಗಿದ್ದಾರೆ. 81 ವರ್ಷದ ಖರ್ಗೆ ಯುವಕರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದಿರಬಹುದು
ಎನ್ನುವ
ಮಾತುಗಳನ್ನು ಅಲ್ಲಗಳೆಯುವಂತಿಲ್ಲ.
ರಾಹುಲ್‌ಗೆ ಪರ್ಯಾಯವಂತೂ ಖರ್ಗೆ ಅಲ್ಲವೇ ಅಲ್ಲ. ರಾಹುಲ್ ಅವರನ್ನು
ಪ್ರಧಾನಿ ಅಭ್ಯರ್ಥಿಯಾಗಿ ಮಾಡಿದರೇ ಮೈತ್ರಿಕೂಟ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಮೈತ್ರಿ ತಿಳಿದಿದ್ದರೇ,
ಅದೇ ಮುಳುವಾಗಬಹುದೇನೋ. ರಾಹುಲ್ ಪ್ರಧಾನಿ ಅಭ್ಯರ್ಥಿತನಕ್ಕೆ ಅಸಮರ್ಥರಂತೂ ಅಲ್ಲವೇ ಅಲ್ಲ. ರಾಹುಲ್
ನಾಯಕತ್ವ ಒಪ್ಪಿಕೊಳ್ಳದ ಪಕ್ಷಗಳೆಲ್ಲಾ ಮೈತ್ರಿಯಾಗಿರುವುದೇ ಸಮಸ್ಯೆ ಅಷ್ಟೆ. ಇಲ್ಲಿ ಹಿರಿತನ, ವಯಸ್ಸಿನ
ಅನುಭವ, ರಾಜಕೀಯ ಅನುಭವ, ಪ್ರತಿಷ್ಠೆ, ನಾಯಕತ್ವ ಎಲ್ಲವೂ ʼರಾಹುಲ್ʼ ಆಯ್ಕೆ ಮಾಡುವಲ್ಲಿ ಅಡ್ಡಿಯಾಗುತ್ತಿದೆ
ಎನ್ನುವುದರಲ್ಲಿ ಅನುಮಾನವಿಲ್ಲ. ಮೈತ್ರಿ ಅಂತಿಮ ನಿರ್ಧಾರಕ್ಕೆ ಶೀಘ್ರವಾಗಿ ಬರಲೇ ಬೇಕಿದೆ. ಖರ್ಗೆ,
ರಾಹುಲ್ ಅಥವಾ ಇನ್ಯಾರು ಎನ್ನುವುದನ್ನು ನಿರ್ಧರಿಸಿ ಅವರ ರಾಜಕೀಯ ವರ್ಚಸ್ಸನ್ನು ವೃದ್ಧಿಸಿದರಷ್ಟೇ
ಒಂದಿಷ್ಟು ಬದಲಾವಣೆ ನಿರೀಕ್ಷಿಸಬಹುದು. ʼಇಂಡಿಯಾʼ ಶೂನ್ಯ ತಂತ್ರಗಾರಿಕೆಯಿಂದ ಮೊದಲು ಹೊರಬರಬೇಕಿದೆ.
ಇಲ್ಲವಾದರೇ, ದಕ್ಷಿಣ ಉತ್ತರಳ ಚುನಾವಣಾ ವಿಭಜನೆಗಷ್ಟೇ ಈ ಲೋಕಸಭೆ ಚುನಾವಣೆ ಸೀಮಿತವಾಗಿರಲಿದೆ ಎನ್ನುವುದು ನಿಶ್ಚಿತ.
-ಶ್ರೀರಾಜ್ ವಕ್ವಾಡಿ

No comments:
Post a Comment