Thursday, November 2, 2023

ಯೋಜಿತ ಸೈದ್ಧಾಂತಿಕ ಪ್ರಚಾರಗಳಿಗೆ ಜನ ಮಣೆ ಹಾಕುವುದು ಹಳೆಯ ರಾಜಕಾರಣ

 

ಮೋದಿ, ರಾಹುಲ್‌ ವರ್ಚಸ್ಸನ್ನು ಮುಂದಿಟ್ಟು ಮಾಡುವ ರಾಜಕಾರಣದಿಂದ ಎಲ್ಲವೂ ಸಾಧ್ಯವಿಲ್ಲ !

ದೇಶದಲ್ಲಿ ಈಗ ಲೋಕಸಭೆಯದ್ದೇ ಕುತೂಹಲ. ಒಂದೆಡೆ ಆಡಳಿತಾರೂಢ ಎನ್‌ ಡಿಎ ಸರ್ಕಾರ ಇನ್ನೊಂದೆಡೆ ʼಇಂಡಿಯಾʼ ಮೈತ್ರಿಕೂಟ ಭರದಿಂದ ಚುನಾವಣೆಗೆ ಸಜ್ಜಾಗುತ್ತಿವೆ. ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ತೆಲಂಗಾಣ ಹಾಗೂ ಛತ್ತೀಸ್‌ ಗಢ ರಾಜ್ಯಗಳ ಚುನಾವಣೆ ಮುಗಿಯುವುದನ್ನೇ ಕಾಯುತ್ತಿರುವ ರಾಜಕೀಯ ಪಕ್ಷಗಳು, ಒಂದ ಹಂತದಲ್ಲಿ ಈ ಪಂಚರಾಜ್ಯ ಚುನಾವಣೆಗಳನ್ನು ಸೆಮಿಫೈನಲ್‌ ಅಖಾಡ ಎಂಬಂತೆ ಪರಿಗಣಿಸಿ ರಾಜಕೀಯ ಪರೀಕ್ಷೆಗೆ ಒಳಗೊಳ್ಳುತ್ತಿವೆ ಎನ್ನವುದು ಈ ಬಾರಿಯ ಲೋಕಸಭಾ ಚುನಾವಣೆ ಬಗೆಗಿನ ಆಸಕ್ತಿದಾಯಕ ವಿಷಯ.

ಲೋಕಸಭಾ ಚುನಾವಣೆ 2024ಕ್ಕೆ ಸಂಬಂಧಿಸಿ ರಾಜಕೀಯ ವಲಯದಲ್ಲಿ ಈಗಾಗಲೇ ಲೆಕ್ಕಾಚಾರ ಹರಿದಾಡುತ್ತಿವೆ. ಈ ನಡುವೆ,  ಇಂಡಿಯಾ ಟಿವಿ-ಸಿಎನ್‌ ಎಕ್ಸ್ ಚುನಾವಣಾ ಪೂರ್ವ ಸಮೀಕ್ಷೆಯೊಂದನ್ನು ಈತ್ತೀಚೆಗೆ ಹೊರಹಾಕಿದ್ದು, ಲೋಕಸಭಾ ಚುನಾವಣೆಯ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಈಗ ಲೋಕಸಭಾ ಚುನಾವಣೆ ನಡೆದರೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ (ಎನ್‌ ಡಿಎ) 543 ಲೋಕಸಭಾ ಕ್ಷೇತ್ರಗಳಲ್ಲಿ 315ಕ್ಷೇತ್ರಗಳೊಂದಿಗೆ ಸ್ಪಷ್ಟ ಬಹುಮತವನ್ನು ಗಳಿಸಬಹುದು ಎಂದು ಸಮೀಕ್ಷಾ ವರದಿ ಹೇಳಿದೆ. ಒಂದಡೆ ʼಇಂಡಿಯಾʼ ಮೈತ್ರಿ ಕೂಟ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ದೊಟ್ಟ ಮಟ್ಟದ ವಿಶ್ವಾಸದಲ್ಲಿದ್ದು, ಅದರಲ್ಲೂ ಉತ್ತರ ಭಾರತದಲ್ಲಿ ಹೆಚ್ಚು ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಆದರೇ, ಹೀಗೆ ನಿರೀಕ್ಷೆಯಲ್ಲಿರುವ ʼಇಂಡಿಯಾʼ  ಮೈತ್ರಿ ಕೂಟದ ಕಾರ್ಯಚಟುವಟಿಕೆ ಇನ್ನೂ ಚುರುಕುಗೊಂಡಂತೆ ಕಾಣಿಸುತ್ತಿಲ್ಲ. ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿತನಕ್ಕೆ ಅವ್ಯಾಹತವಾಗಿ ಶ್ರಮಿಸುತ್ತಿದ್ದಂತೆ ಕಾಣಿಸುತ್ತಿದೆ ಬಿಟ್ಟರೇ, ಮೈತ್ರಿಕೂಟದಿಂದ ವಿಶೇಷವಾಗಿ ಏನೂ ಕಾಣಿಸುತ್ತಿಲ್ಲ. ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧ ಜನರು ಧನಾತ್ಮಕ ಭಾರತವನ್ನು ಬಯಸುತ್ತಿರುವುದೇನೋ ಸರಿ, ಜನರ ಈ ಬಯಕೆಯನ್ನು ಪೂರೈಸುವುದಕ್ಕೆ ʼಇಂಡಿಯಾʼ ಕೂಟ ಸಮರ್ಥವಾಗಿದೇಯೇ ? ಎನ್ನುವುದು ಸದ್ಯಕ್ಕಿರುವ ಪ್ರಶ್ನೆ. 

ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು I.N.D.I.A ಕೂಟ 172 ಲೋಕಸಭಾ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಬಹುದು ಮತ್ತು ಪ್ರಾದೇಶಿಕ ಪಕ್ಷಗಳು ಮತ್ತು ಇಂಡಿಪೆಂಡೆಂಟ್ ಸೇರಿದಂತೆ 'ಇತರೆ' 56 ಕ್ಷೇತ್ರಗಳನ್ನು ಪಡೆಯಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಲೋಕಸಭೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಲವು ಈ ಬಾರಿ 303 ರಿಂದ 293ಕ್ಕೆ ಕುಸಿಯಬಹದು ಎಂದು ಹೇಳಲಾಗಿದೆ. ಮತ್ತೊಂದೆಡೆ, 52 ಕ್ಷೇತ್ರಗಳನ್ನು ಹೊಂದಿರುವ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈ ಬಾರಿ ತನ್ನ ಕ್ಷೇತ್ರವನ್ನು 70ಕ್ಕೆ ಹೆಚ್ಚಿಸಿಕೊಳ್ಳಬಹುದು ಎನ್ನಲಾಗಿದೆ. ಇಲ್ಲಿ, ಕಳೆದ ಲೋಕಸಭಾ ಚುನಾವಣೆ ಹಾಗೂ ಈ ಲೋಕಸಭಾ ಚುನಾವಣೆ ಅಂತರದಲ್ಲಿ ಬದಲಾದ ಜನರ ರಾಜಕೀಯ ದೃಷ್ಟಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕಾಂಗ್ರೆಸ್‌ ನಿರಂತರವಾಗಿ ಬಿಜೆಪಿ ವಿರುದ್ಧ ಪ್ರತಿಭಟನೆ, ಭ್ರಷ್ಟಾಚಾರ, ಹಣದುಬ್ಬರ, ನಿರುದ್ಯೋಗದಂತಹ ಸಮಸ್ಯೆಗಳನ್ನು ಎತ್ತಿ ತೋರಿಸಿಯೂ ಕಾಂಗ್ರೆಸ್‌ ಗೆ ಈಗ ಈ ಸಮೀಕ್ಷೆಯಿಂದ ಬಂದಿರುವ ಒಲವು ಹೇಳುವಷ್ಟೇನೂ ಪೂರಕವಾಗಿಲ್ಲ. ಇನ್ನು, ʼಇಂಡಿಯಾʼ ಕೂಟ ತಲುಪುವಲ್ಲಿ ತಲುಪುವುದಕ್ಕೆ ಇನ್ನೂ ಪ್ರಯತ್ನ ಮಾಡಿಲ್ಲ, ಬಿಜೆಪಿ ತನ್ನ ಮೊದಲಿನ ವರ್ಚಸ್ಸನ್ನು ಕಳೆದುಕೊಂಡಿದೆ ಎನ್ನುವುದಕ್ಕೆ ಇದೇ ಸಾಕ್ಷಿ.

ಇನ್ನು, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಲೋಕಸಭೆಯಲ್ಲಿ ಈ ಬಾರಿ 30 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡು ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು, ಈ ಲೆಕ್ಕದಲ್ಲಿ ನೋಡುವುದಾದರೇ ಕಳೆದ ಬಾರಿಗಿಂತ ಎಂಟು ಕ್ಷೇತ್ರಗಳನ್ನು ಹೆಚ್ಚಿಸಿಕೊಳ್ಳಲಿದೆ. ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 21 ಕ್ಷೇತ್ರಗಳೊಂದಿಗೆ ನಾಲ್ಕನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.  

ಇನ್ನು, ಪ್ರಧಾನಿ ಮೋದಿಯವರಿಗೆ ದೊಡ್ಡ ಗೆಲುವು ಉತ್ತರ ಪ್ರದೇಶದಿಂದ ಆಗಲಿದ್ದು, ಈಗ ಚುನಾವಣೆ ನಡೆದರೆ ಎನ್‌ ಡಿಎ 80 ಕ್ಷೇತ್ರಗಳಲ್ಲಿ 73 ಕ್ಷೇತ್ರಗಳನ್ನು ಗೆಲ್ಲಬಹುದು. 73 ರಲ್ಲಿ, ಬಿಜೆಪಿ 71 ಕ್ಷೇತ್ರಗಳನ್ನು ಗೆಲ್ಲಬಹುದು ಮತ್ತು ಅದರ ಮಿತ್ರ ಪಕ್ಷ ಅಪ್ನಾ ದಳ ಎರಡು ಕ್ಷೇತ್ರಗಳನ್ನು ಗೆಲ್ಲಬಹುದು. ಯುಪಿಯಲ್ಲಿ ಉಳಿದ ಏಳು ಕ್ಷೇತ್ರಗಳನ್ನು ಪ್ರತಿಪಕ್ಷದ ಮೈತ್ರಿಕೂಟ ʼಇಂಡಿಯಾʼ ಗೆಲ್ಲಬಹುದು ಎಂದು ಸಮೀಕ್ಷೆ ಹೇಳುತ್ತದೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು ಲೋಕಸಭೆಗೆ ನಿರ್ಣಾಯಕ ಚುನಾವಣೆ ಎಂದು ಹೇಳಲಾಗುತ್ತದೆ. ಬಿಜೆಪಿ ಅಧಿಕಾರದಲ್ಲಿದೆ. ಸಹಜವೆಂಬಂತೆ ಎನ್‌ ಡಿಎ ಮೈತ್ರಿಕೂಟ ಇಲ್ಲಿ ಹೆಚ್ಚು ಕ್ಷೇತ್ರಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.

ಬಹಳ ಪ್ರಮುಖವಾಗಿ ಗಮನಿಸುವುದಾದರೇ , ಪ್ರಧಾನಿಯವರ ತವರು ಗುಜರಾತ್‌ ನಲ್ಲಿ ಬಿಜೆಪಿ ಎಲ್ಲಾ 26 ಲೋಕಸಭಾ ಕ್ಷೇತ್ರಗಳನ್ನು ಮತ್ತು ಉತ್ತರಾಖಂಡದಲ್ಲಿ ಎಲ್ಲಾ ಐದು ಕ್ಷೇತ್ರಗಳನ್ನು ಸ್ವೀಪ್ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ ಡಿಎ 18 ಕ್ಷೇತ್ರಗಳನ್ನು ಗೆಲ್ಲಬಹುದು, ಕಾಂಗ್ರೆಸ್ ಹತ್ತು ಕ್ಷೇತ್ರಗಳನ್ನು ಗೆಲ್ಲಬಹುದು ಎನ್ನಲಾಗುತ್ತಿದೆ. ಈ ಲೆಕ್ಕದಲ್ಲಿ ನೋಡುವುದಾದರೇ, ಬಿಜೆಪಿಗೆ ಈ ಭಾರಿ ಮೈನಸ್‌ ಆಗಲಿದ್ದು, ಕಾಂಗ್ರೆಸ್‌ ಗೆ ಕರ್ನಾಟಕದಲ್ಲಿ ಪ್ಲಸ್‌ ಆಗಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ ಗ್ಯಾರಂಟಿಗಳು ಇಲ್ಲಿ ಸ್ವಲ್ಪ ಈ ಬಾರಿ ಸಹಾಯ ಮಾಡಬಹುದು ಎನ್ನಲಾಗುತ್ತಿದೆ. ಮತ್ತೊಂದೆಡೆ, UDF ಮತ್ತು LDF ಅನ್ನು ಒಳಗೊಂಡಿರುವ I.N.D.I.A ಮೈತ್ರಿಕೂಟವು ಕೇರಳದ ಎಲ್ಲಾ 20 ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಳ್ಳಬಹುದು, ಆದರೆ ಪಶ್ಚಿಮ ಬಂಗಾಳದಲ್ಲಿ, TMC ನೇತೃತ್ವದ I.N.D.I.A ಮೈತ್ರಿಕೂಟವು ಒಟ್ಟು 42 ಕ್ಷೇತ್ರಗಳಲ್ಲಿ 32 ಕ್ಷೇತ್ರಗಳನ್ನು ಗೆಲ್ಲಬಹುದು, ಉಳಿದ 10 ಕ್ಷೇತ್ರಳನ್ನು NDA ಪಾಲಾಗಬಹುದು ಎನ್ನಲಾಗಿದೆ.

ಪ್ರಮುಖವಾಗಿ ಲೋಕಸಭಾ ಕ್ಷೇತ್ರಗಳು ಪಕ್ಷವಾರು ಹೇಗೆ ೨೦೨೪ರಲ್ಲಿ ವಿಭಜನೆಯಾಗುತ್ತದೆ ಎನ್ನುವುದನ್ನು ಸಮೀಕ್ಷಾ ವರದಿಯನ್ನು ಗಮನಿಸುವುದಾದರೇ, ಬಿಜೆಪಿ 293, ಕಾಂಗ್ರೆಸ್ 70, ಎಎಪಿ 6, ಟಿಎಂಸಿ 30, ಬಿಜೆಡಿ 13, ಶಿವಸೇನೆ (ಶಿಂಧೆ) 4, ಶಿವಸೇನೆ (ಯುಬಿಟಿ) 8, ಸಮಾಜವಾದಿ ಪಕ್ಷ 4, ಬಹುಜನ ಸಮಾಜ ಪಕ್ಷ 0, ರಾಷ್ಟ್ರೀಯ ಜನತಾ ದಳ 7, ಜನತಾದಳ-ಯು 7, ಡಿಎಂಕೆ 21, ಎಐಎಡಿಎಂಕೆ 6, ಎನ್‌ಸಿಪಿ (ಶರದ್) 3, ಎನ್‌ಸಿಪಿ (ಅಜಿತ್) 2, ವೈಎಸ್‌ ಆರ್ ಕಾಂಗ್ರೆಸ್ 15, ಟಿಡಿಪಿ 10, ಎಡರಂಗ 6, ಬಿಆರ್‌ಎಸ್ 8, ಇಂಡಿಪೆಂಡೆಂಟ್‌ ಅಭ್ಯರ್ಥಿಗಳು ಸೇರಿದಂತೆ ಇತರೆ 30 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಹೇಳಲಾಗಿದೆ. 

ಇನ್ನು, ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಪ್ರಧಾನಿ ಮೋದಿ ರಾಜಕೀಯ ವರ್ಚಸ್ಸಿನಿಂದ ಎಲ್ಲವೂ ಸಾಧ್ಯ ಎಂಬ ರಾಜಕೀಯ ಟ್ರೆಂಡ್‌ ಈಗ ಬಹುತೇಕ ಕಡಿಮೆ ಆಗಿದೆ ಎನ್ನುವುದಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಒಳಗೊಂಡು ಇತ್ತೀಚೆಗೆ ನಡೆದ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಸಾಕ್ಷಿ. ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ, ದೆಹಲಿ, ಜಾರ್ಖಂಡ್, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ. ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಕೆಲವು ರಾಜ್ಯಗಳಲ್ಲಿ ಒಳ್ಳೆಯ ಪರಿಣಾಮವನ್ನೇ ಬೀರಿದೆ. ‘ಮೋದಿ ಹೈ ತೋ ಮಮ್ಕಿನ್ ಹೈ’(ಮೋದಿಯಿಂದ ಎಲ್ಲವೂ ಸಾಧ್ಯ) ಘೋಷಣೆಯನ್ನು ಜನರು ದೇಶದಾದ್ಯಂತ ಒಂದು ಹಂತದಲ್ಲಿ ತಿರಸ್ಕರಿಸುತ್ತಾ ಬಂದಿದ್ದಾರೆ. ಧರ್ಮ ರಾಜಕೀಯ ಒಂದೇ ಈಗ ದಾರಿ. ಧಾರ್ಮಿಕವಾಗಿ ಬಿಜೆಪಿ ಜನರನ್ನು ಸೆಳೆದುಕೊಳ್ಳಬೇಕಾಗಿರುವುದು ಅನಿವಾರ್ಯ ಎಂಬಂತೆ ಕಾಣಿಸುತ್ತಿದೆ. ಇತ್ತ ಕಾಂಗ್ರೆಸ್‌ ಕೂಡ ಅದೇ ಹಳೆಯ ತಂತ್ರಗಾರಿಕೆ, ಗಾಂಧಿ ಕುಟುಂಬದ ಮೇಲಿನ ವಿಧೇಯದ ರಾಜಕೀಯವನ್ನೇ ಮಾಡಿದರೇ ಪ್ರಯೋಜನವಿಲ್ಲ. ಕಾಂಗ್ರೆಸ್‌ ಔಟ್‌ ಡೇಟೆಡ್‌ ಪಕ್ಷ ಎಂಬ ಪಟ್ಟವನ್ನು ಆದಷ್ಟ ಬೇಗ ಕಳಚಿಕೊಳ್ಳಬೇಕಿದೆ. ಕಾಂಗ್ರೆಸ್‌ ಚುರುಕು ಸಾಕಾಗುತ್ತಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. 

ಜನರ ಸಮಸ್ಯೆಯನ್ನು ಮಾತನಾಡದೇ ಜನರ ಗ್ರಾಹ್ಯ ಕೇಂದ್ರವನ್ನು ಬೇರೆಡೆ ಎಳೆಯುವ ಪ್ರಯತ್ನಕ್ಕೆ ಜನ ಸೊಪ್ಪು ಹಾಕುವುದನ್ನು ನಿಲ್ಲಿಸಿದ್ದಾರೆ ಎನ್ನುವುದು ಹಲವು ರಾಜ್ಯಗಳ ಚುನಾವಣೆಯಲ್ಲಿ ಗೊತ್ತಾಗಿದೆ. ಜನರು ಯಾವಾಗಲೂ ತಮ್ಮ ಸಮಸ್ಯೆಯನ್ನು ಬಗೆಹರಿಸಿ ಎಂದು ಬಯಸುತ್ತಾರೆ. ಅಂತದರಲ್ಲಿ, ಇನ್ನ್ಯಾವುದೋ ವಿಷಯದ ಮೂಲಕ ಜನರನ್ನು ಸೆಳೆದುಕೊಳ್ಳುವ ಪ್ರಯತ್ನದ ರಾಜಕಾರಣಕ್ಕೆ ಜನರು ಒಪ್ಪಿಗೆ ಸೂಚಿಸುವುದಿಲ್ಲ. ಮೋದಿ ಅಥವಾ ರಾಹುಲ್‌ ಗಾಂಧಿ ವರ್ಚಸ್ಸನ್ನು ಮುಂದಿಟ್ಟು ರಾಜಕಾರಣ ಮಾಡುವುದನ್ನು ಬಿಟ್ಟರಷ್ಟೆ ಜನ ಒಪ್ಪುತ್ತಾರೆ ಎನ್ನುವುದು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಯಾವುದೇ ಸೈದ್ಧಾಂತಿಕ ಯೋಜಿತ ಪ್ರಚಾರಗಳಿಗೆ ಜನ ಮಣೆ ಹಾಕುವುದು ಹಳೆಯ ರಾಜಕಾರಣ ಎಂಬಂತೆ ಬದಲಾಗುತ್ತಿರುವುದು ರಾಜಕೀಯ ವಲಯದಲ್ಲಿನ ಹೊಸ ಬದಲಾವಣೆ ಮತ್ತು ಬದಲಾಗಲೇ ಬೇಕಾದ ಬದಲಾವಣೆ. ಮತದಾರರಿಂದ ಇಂತಹದ್ದೊಂದು ಬೆಳವಣಿಗೆ ತುರ್ತಾಗಿ ಆಗಬೇಕಾಗಿತ್ತು. ಅದೀ ನಿಧಾನಕ್ಕೆ ಆಗುತ್ತಿರುವುದು ಒಳ್ಳೆಯ ಲಕ್ಷಣ. ಅಧಿಕಾರದಲ್ಲಿದ್ದಾಗ ಕೆಲಸ ಮಾಡದೇ, ಚುನಾವಣೆ ಬಂದಾಗ ಹೇಗೋ ಜನರನ್ನು ತನ್ನತ್ತ ಸೆಳೆದುಕೊಂಡರೇ ನಡೆದು ಬಿಡುತ್ತದೆ ಎಂಬ ಮನೋ ಧೋರಣೆಯಲ್ಲಿ ಯಾವುದೇ ರಾಜಕೀಯ ಪಕ್ಷವಿದ್ದರೇ  ಆ ಪಕ್ಷ ಸೋಲಿಲ್ಲದೇ ಸುದೀರ್ಘ ಕಾಲ ಉಳಿಯುವುದಕ್ಕೆ ಖಂಡಿತ ಸಾಧ್ಯವಿಲ್ಲ ಎನ್ನುವುದು ಈ ಸಮೀಕ್ಷಾ ವರದಿ ಪರೋಕ್ಷವಾಗಿ ಹೇಳಿದೆ. ಇದನ್ನು ರಾಜಕೀಯ ಪಕ್ಷಗಳು ಅಗತ್ಯವಾಗಿ ಅರಿತುಕೊಳ್ಳಬೇಕಿದೆ. ಈ ಸಮೀಕ್ಷಾ ವರದಿ ಆಡಳಿತ ಪಕ್ಷ ಒಳಗೊಂಡು ಎಲ್ಲಾ ಪಕ್ಷಗಳಿಗೂ ಎಚ್ಚರಿಕೆ ನೀಡಿದೆ. ೨೦೨೪ರ ಲೋಕಸಭಾ ಚುನಾವಣೆ ಬರುವುದರೊಳಗೆ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದು ಸದ್ಯಕ್ಕೀಗ ಕುತೂಹಲ. ಬಹಳ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಈ ಲೋಕಸಭಾ ಚುನಾವಣೆ ಕೆಲವು ರಾಜಕೀಯ ಆಘಾತಗಳಿಗಂತೂ ಕಾರಣವಾಗಲಿದೆ ಅಂತನ್ನಿಸುತ್ತಿದೆ. ಕಾದು ನೋಡೋಣ

-ಶ್ರೀರಾಜ್‌ ವಕ್ವಾಡಿ

No comments:

Post a Comment