ಬ್ರಹ್ಮಾವರದ ಸಮಗ್ರ ಅಭಿವೃದ್ಧಿಗೆ
ಗಟ್ಟಿ ತಳಪಾಯ ಅಗತ್ಯ
ಬ್ರಹ್ಮಾವರ, ಉಡುಪಿ ಹಾಗೂ ಕುಂದಾಪುರಕ್ಕೆ ಸರಿಸಮ ಮಧ್ಯೆ ಇದೆ ಎಂದೇ
ಹೇಳಬಹುದು. ಜಿಲ್ಲಾಡಳಿತಕ್ಕೆ ಹೊಂದಿಕೊಂಡೇ ಇದ್ದಂತಿರುವ ಬ್ರಹ್ಮಾವರ ಕಳೆದ ಕೆಲವು ವರ್ಷಗಳಿಂದ ಶೀಘ್ರವಾಗಿ
ಬೆಳೆಯುತ್ತಿರುವ ನಗರ ಪ್ರದೇಶ ಎಂದೇ ಗುರುತಿಸಿಕೊಂಡಿದೆ. ಅತ್ತ ಕಾಪು ಪುರಸಭೆ, ಇತ್ತ ಕುಂದಾಪುರವೂ
ಪುರಸಭೆ. ಆದರೇ, ಬ್ರಹ್ಮಾವರ ಪುರಸಭೆ ಆಗುವ ಭಾಗ್ಯವನ್ನು ಇನ್ನೂ ಪಡೆದುಕೊಂಡಿಲ್ಲ. ಕಳೆದ ಕೆಲವು ವರ್ಷಗಳ
ಹಿಂದೆ ಬ್ರಹ್ಮಾವರವನ್ನು ಅಗತ್ಯವಾಗಿ ಪುರಸಬೆಯನ್ನಾಗಿ ಪರಿವರ್ತಿಸಬೇಕು ಎಂಬ ಒತ್ತಾಯ ಸಾರ್ವಜನಿಕ
ವಲಯದಿಂದ ಕೇಳಿ ಬಂದಿತ್ತು. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಅದು ಆಗಿರಲಿಲ್ಲ. ಪಟ್ಟಣ ಪಂಚಾಯತ್
ಆಗುತ್ತದೆ ಎಂಬ ಮಾತುಗಳಿತ್ತು. ಅದಕ್ಕೆ ಸ್ಥಳೀಯರು ಮತ್ತು ಹಿಂದಿನ ಶಾಸಕರು ನಿರಾಸಕ್ತಿ ತೋರಿದ್ದರು.
ಆಡಳಿತ ವಿಕೇಂದ್ರೀಕರಣದ ನೆಲೆಯಲ್ಲಿ ಬ್ರಹ್ಮಾವರ ತಾಲೂಕು ರಚನೆಗೊಂಡು
ಹಲವು ವರ್ಷಗಳೇ ಕಳೆದಿದೆ. ತ್ವರಿತವಾಗಿ
ಬೆಳೆಯುತ್ತಿರುವ ಬ್ರಹ್ಮಾವರ,
ಸಕಾರಾತ್ಮಕ ಅಭಿವೃದ್ಧಿ ದೃಷ್ಟಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರುವುದು ಅನಿವಾರ್ಯವಿದೆ
ಎನ್ನುವ ಅಭಿಪ್ರಾಯ ಮತ್ತೆ ನಿಧಾನಕ್ಕೆ ಮೇಲ್ಪಂಕ್ತಿಗೆ ಬರಲಾರಂಭಿಸಿದೆ.
ಜನ ಸಾಂದ್ರತೆಯ ಆಧಾರದಲ್ಲಿ ಕಳೆದ ಬಾರಿ ಪುರಸಭೆ
ಆಗುವ ಭಾಗ್ಯ ಕಳೆದುಕೊಂಡ ಬ್ರಹ್ಮಾವರದ ಸಮಗ್ರ ಅಭಿವೃದ್ಧಿಗೆ ಗಟ್ಟಿ ತಳಪಾಯ ಅಗತ್ಯವಿದೆ.
ಬ್ರಹ್ಮಾವರವನ್ನು ಕಾಡುವ
ಸಮಸ್ಯೆಗಳು :
ಸಮಗ್ರವಾಗಿ ಇತರೆ ರಾಜ್ಯಗಳನ್ನು ಬೆಸೆಯುವ
ರಾಷ್ಟ್ರೀಯ ಹೆದ್ದಾರಿ ಬ್ರಹ್ಮಾವರ ಪೇಟೆಯನ್ನೇ ಹಾದು ಹೋಗಿದೆ. ಮೇಲ್ನೋಟಕ್ಕೆ ಬ್ರಹ್ಮಾವರ ಅಭಿವೃದ್ಧಿಯ
ನಾಗಾಲೋಟದಲ್ಲಿ ಇದ್ದಂತೆ ಕಾಣಿಸಿದರೂ, ಇನ್ನೂ ಬ್ರಹ್ಮಾವರವನ್ನು ಬಿಡದೇ ಕಾಡುವ ಸಮಸ್ಯೆಗಳು ಅನೇಕ
ಇವೆ. ಒಳಚರಂಡಿ ವ್ಯವಸ್ಥೆ ಬ್ರಹ್ಮಾವರ ಪೇಟೆಯಲ್ಲೇ ಇಲ್ಲ. ಸಮರ್ಥವಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡುವ
ವ್ಯವಸ್ಥೆ ಇಲ್ಲ. ತಾಲೂಕು ಆಡಳಿತ ಸೌಧದ ವಠಾರದ ಸುತ್ತಮುತ್ತಲಲ್ಲೇ ಕಸದ ರಾಶಿ ಬಿದ್ದಿದೆ. ಸಮುದಾಯ
ಆರೋಗ್ಯ ಕೇಂದ್ರದ ಸುತ್ತಮುತ್ತ ಗಿಡಗಂಟಿಗಳು ಬೆಳೆದುಕೊಂಡಿವೆ. ಸಂಪರ್ಕ ರಸ್ತೆಗಳ ಅಭಿವೃದ್ಧಿ ಪೂರ್ಣವಾಗುವುದಕ್ಕೆ
ಕೇಳುತ್ತಲೇ ಇಲ್ಲ ಎಂಬಂತೆ ಕಾಣಿಸುತ್ತಿದೆ. ಬ್ರಹ್ಮಾವರ ಭಾಗದಲ್ಲಿ ಬೇಸಿಗೆ ಬಂತೆಂದರೇ ನೀರಿನ ಸಮಸ್ಯೆ
ದೊಡ್ಡ ಗೋಳು ಎಂಬಂತಹ ವಾತಾವರಣ ಇನ್ನೂ ಅಲ್ಲಲ್ಲಿ ಇದೆ. ಕುಂಟುತ್ತಾ ಕುಂಟುತ್ತಾ ಅಂತೂ ವಾರಾಹಿ ಯೋಜನೆ
ಬ್ರಹ್ಮಾವರಕ್ಕೆ ಬಂದು ತಲುಪಿದೆ. ಸಂಚಾರಿ ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕಿದೆ. ಆಕಾಶವಾಣಿ, ಬಸ್
ಸ್ಟಾಂಡ್, ಮಹೇಶ್ ಆಸ್ಪತ್ರೆಯ ಬಳಿ ಇರುವ ಡಿವೈಡರ್ ಅತ್ಯಂತ ಅಪಾಯಕಾರಿಯಾಗಿದೆ.
ಆಡಳಿತಾತ್ಮಕ ಬೆಳವಣಿಗೆಗಾಗಿ ಬ್ರಹ್ಮಾವರ ಪುರಸಭೆ ಆಗಿ
ಪರಿವರ್ತನೆಯಾಗುವುದು ಅತ್ಯಂತ ಅವಶ್ಯಕ ಎನ್ನುವ ಅಭಿಪ್ರಾಯ
ಈಗ ಮತ್ತೆ ಕೇಳಿ ಬರುತ್ತಿದೆ. ಜನ ಸಾಂದ್ರತೆಯ ಸಬೂಬು ಹೇಳುವ ಬದಲು ಆರೂರು, ನೀಲಾವರ ಪಂಚಾಯತ್‌ಗಳನ್ನು ಸೇರಿಸಿಕೊಳ್ಳುವುದರಿಂದ ಇದಕ್ಕೆ
ಪೂರಕವಾಗಲಿದೆ.
ಇನ್ನೂ ಈಡೇರದ ಬೇಡಿಕೆ :
ಚಾಂತಾರು,
ವಾರಂಬಳ್ಳಿ, ಹಂದಾಡಿ ಗ್ರಾಮ ಪಂಚಾಯತ್ ಗಳ ಜೊತೆಗೆ ಹಾರಾಡಿ,
ಆರೂರು, ನೀಲಾವರ ಪಂಚಾಯತ್‌ಗಳನ್ನು ಸೇರ್ಪಡೆ
ಮಾಡಿಕೊಂಡರೇ ಬ್ರಹ್ಮಾವರವನ್ನು ಪುರಸಭೆಯನ್ನಾಗಿ ಮಾಡುವುದಕ್ಕೆ ಯಾವುದೇ
ಸಮಸ್ಯೆ ಇಲ್ಲ. ಪುರಸಭೆ ರಚಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ಬ್ರಹ್ಮಾವರ
ಸಾಮಾಜಿಕವಾಗಿ ಹಾಗೂ ಸ್ಥಳೀಯ ಆರ್ಥಿಕತೆಯಲ್ಲೂ ಅತ್ಯಂತ ವೇಗವಾಗಿ
ಬೆಳೆಯುತ್ತಿರುವುದರಿಂದ ಉಡುಪಿ-ಬ್ರಹ್ಮಾವರ ಅವಳಿ ನಗರಗಳಾಗಲಿವೆ ಎಂಬ ಅಬಿಪ್ರಾಯವೂ ಮೂಡಿದೆ. ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ.
ಶೈಕ್ಷಣಿಕವಾಗಿಯೂ ಬ್ರಹ್ಮಾವರ ಪ್ರಗತಿ :
ಎಸ್.ಎಂ ಎಸ್ ಹಾಗೂ ಜಿ.ಎಂ ವಿದ್ಯಾನಿಕೇತನ್
ಅಂತಹ
ಆಂಗ್ಲ ಮಾಧ್ಯಮ ಶಾಲೆಗಳು ಮತ್ತು
1,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ
ಸರಕಾರಿ ಬೋರ್ಡ್ ಶಾಲೆ ಬ್ರಹ್ಮಾವರದ ಹೃದಯ ಭಾಗದಲ್ಲಿಯೇ ಇದೆ. ಶೈಕ್ಷಣಿಕವಾಗಿಯೂ ಬ್ರಹ್ಮಾವರ
ಪ್ರಗತಿ ಸಾಧಿಸಿದೆ. ಸಮೀಪದ ಊರುಗಳಿಂದ ಇಲ್ಲಿನ ಪಬ್ಲಿಕ್ ಸ್ಕೂಲ್ ಗಳಿಗೆ ವಿದ್ಯಾರ್ಥಿಗಳು ದೊಡ್ಡ
ಸಂಖ್ಯೆಯಲ್ಲಿ ಬರುತ್ತಿದ್ದು. ಶೈಕ್ಷಣಿಕ ಕೇಂದ್ರವಾಗಿ ಬ್ರಹ್ಮಾವರ ಬೆಳೆಯುತ್ತಿದೆ.
ಸರಕಾರಿ ಕಚೇರಿಗಳ ಕೇಂದ್ರ ಬ್ರಹ್ಮಾವರ
ಮುಖ್ಯವಾಗಿ ವಾರ್ಷಿಕ 12-೧೫ ಕೋಟಿ ರೂ. ಹೆಚ್ಚು ಆದಾಯ ತಂದು ಕೊಡುವ ಉಪ ನೋಂದವಣಾಧಿಕಾರಿ ಕಚೇರಿ, ತಾಲೂಕು ಆಡಳಿತ ಸೌಧ, ಉಪ ಖಜಾನೆ ಕಚೇರಿ, ಪೊಲೀಸ್ ವೃತ್ತ ನಿರೀಕ್ಷಕರು, ಉಪನಿರೀಕ್ಷಕರ ಕಚೇರಿ, ಮೆಸ್ಕಾಂ, ಪಾಸ್‌ಪೋರ್ಟ್ ಕೇಂದ್ರ, ಶಿಕ್ಷಣಾಧಿಕಾರಿ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳು, 20ಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಬ್ರಹ್ಮಾವರ ಹೊಂದಿದೆ. ಗಾಂಧಿ ಮೈದಾನ ಕ್ರೀಡಾಂಗಣ ಅಭಿವೃದ್ಧಿಯಾಗಬೇಕಿದೆ. ಕೃಷಿ ಕಾಲೇಜು ವ್ಯವಸ್ಥಿತವಾಗಿ ನಡೆಯುವಂತೆ ಸರ್ಕಾರ ನೋಡಿಕೊಳ್ಳಬೇಕಿದೆ, ಅವಿಭಜಿತ ದ.ಕ. ಜಿಲ್ಲೆಯ ಏಕೈಕ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಈಗ ಬಹುಕೋಟಿ ಹಗರಣದಿಂದ ಮುಚ್ಚಲ್ಪಟ್ಟಿದೆ. ಮೊದಲಿನಷ್ಟು ಕಬ್ಬು ಬೆಳೆಯೂ ಈ ಭಾಗದಲ್ಲಿ ಆಗುತ್ತಿಲ್ಲ. ಸರ್ಕಾರ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದಕ್ಕೆ ಮನಸ್ಸು ಮಾಡಿದರೇ, ಸುತ್ತಮುತ್ತಲಿನ ಪರಿಸರದ ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹ ನೀಡಿದಂತೆಯೂ ಆಗುತ್ತದೆ.
ಪಟ್ಟಣವಾಗಿ ಬ್ರಹ್ಮಾವರ
ಬ್ರಹ್ಮಾವರ ಸುತ್ತಮುತ್ತ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು,
ಸಿಟಿ ಸೆಂಟರ್, ಹತ್ತಾರು ವಸತಿ ಲೇಔಟ್, ವಸತಿ ಸಮುಚ್ಛಯಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳಿವೆ. ಹಾಗಾಗಿ ಪುರಸಭೆ ರಚನೆ ಬಹಳಷ್ಟು
ಪ್ರಯೋಜನಕಾರಿಯಾಗಲಿದೆ. ಅಲ್ಲದೆ ಬ್ರಹ್ಮಾವರ ಪೇಟೆಯನ್ನು ಮೂರು ಪಂಚಾಯತ್‌ಗಳು ಹಂಚಿಕೊಂಡಿದ್ದು,
ಪುರಸಭೆಯಿಂದ ಗಡಿ ಸಮಸ್ಯೆಯೂ ನಿವಾರಣೆಯಾಗಲಿದೆ. ಆರೂರು ಮತ್ತು ನೀಲಾವರ ಪಂಚಾಯತ್ ಗಳನ್ನು ಸೇರ್ಪಡೆ ಮಾಡಿಕೊಂಡು ಬ್ರಹ್ಮಾವರ
ಪುರಸಭೆ ಮಾಡುವುದಕ್ಕೆ ಯೋಗ್ಯವಾಗಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಇನ್ನು, ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಾಗಿದ್ದ
ಜನಗಣತಿ ಈ ಬಾರಿ ನಡೆದಿಲ್ಲ. ಜನಗಣತಿ ನಡೆದರೇ ಆಗ ಜನಸಂಖ್ಯೆಯ ಸಾಂದ್ರತೆ ಹೆಚ್ಚಿಗೆ ಆಗುವ ಸಾಧ್ಯತೆಗಳಿವೆ.
ಆಗ ಪುರಸಭೆ ರಚನೆಗೆ ಬೇಕಾಗುವ ಮಾನದಂಡ ಸಿಗಬಹುದಾಗಿದೆ.
ಬ್ರಹ್ಮಾವರ ತ್ವರಿತ ಗತಿಯಲ್ಲಿ ನಗರವಾಗಿ
ಬೆಳೆಯುತ್ತಿದೆ. ಸುತ್ತಮುತ್ತಲಿನ ಗ್ರಾಮ ಪಂಚಾಯತ್ ಗಳನ್ನು ಕ್ರೋಢಿಕರಿಸಿಕೊಂಡು ಪುರಸಭೆ ಮಾಡುವುದು
ಸೂಕ್ತ. ಪುರಸಭೆ ಆದಲ್ಲಿ ಇಲ್ಲಿನ ಮೂಲಭೂತ ಸೌಕರ್ಯಗಳಿಗೆ ಅನುದಾನವೂ ಹೆಚ್ಚು ಲಭ್ಯವಾಗುತ್ತದೆ.
-ಕೋಟ ಶ್ರೀನಿವಾಸ ಪೂಜಾರಿ
ಸಂಸದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.
ಶೀಘ್ರದಲ್ಲೇ ಸ್ಥಳೀಯರೊಂದಿಗೆ
ಸಭೆ
ಈ ಹಿಂದೆಯೂ ಬ್ರಹ್ಮಾವರ ಪುರಸಭೆಯಾಗಬೇಕೆಂಬ ಬೇಡಿಕೆ ಇದ್ದಿತ್ತು. ಶೀಘ್ರದಲ್ಲೇ
ಸ್ಥಳೀಯರೊಂದಿಗೆ ಸಭೆ ನಡೆಸಿ, ಈ ಸಂಬಂಧಿಸಿದಂತೆ ಚರ್ಚೆ ನಡೆಸುತ್ತೇನೆ. ಸಾಧಕ ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು
ಬ್ರಹ್ಮಾವರವನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದಕ್ಕೆ ಬೇಕಾಗಿ ಎಲ್ಲಾ ಪ್ರಯತ್ನ ಮಾಡುತ್ತೇನೆ.
ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು.
-ಯಶಪಾಲ್ ಸುವರ್ಣ
ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ

No comments:
Post a Comment