Thursday, March 13, 2025

ʼಹೀಂಗಿರಬೇಕು, ಹಂಗ ಇದ್ರೇನೇ ಚೆಂದ'

 

ಖರ್ಗೆ ಮತ್ತೆ ಬಂದು ಹೇಳುವಷ್ಟು ಸಿದ್ದು, ಡಿಕೆಶಿಗೆ ಬೌದ್ಧಿಕ ಬಡಸ್ತಿಕೆಯೇ !?

ರಾಜ್ಯ ಕಾಂಗ್ರೆಸ್‌ನ ವಾತಾವರಣ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮುಖ್ಯಮಂತ್ರಿ ಹುದ್ದೆ ಹಂಚಿಕೆಗೆ ಸಂಬಂಧಿಸಿದಂತೆ ಆಂತರಿಕ ಭಿನ್ನಮತಕ್ಕೆ ಮತ್ತೆ ಹೈಕಮಾಂಡ್‌ ಮಧ್ಯಸ್ಥಿಕೆ ವಹಿಸುವಂತಾಗಿದೆ ಎಂದರೇ, ರಾಜ್ಯದಲ್ಲಿ ಬಿಜೆಪಿಯಂತೆಯೇ ಕಾಂಗ್ರೆಸ್‌ ಕೂಡ ಬೌದ್ಧಿಕ ಬಡತನದ ದಾರಿ ಹಿಡಿಯುತ್ತಿದೆ ಎಂದೇ ಸ್ಪಷ್ಟವಾಗಿ ಕಾಣಿಸುತ್ತಿದೆ.

ಮುಖ್ಯಮಂತ್ರಿ ಹುದ್ದೆಯ ಕಾದಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆ- ಪ್ರತಿ ಹೇಳಿಕೆಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಒಗ್ಗಟ್ಟಿನ ಬಲ ಪ್ರದರ್ಶನದ ಹೈಡ್ರಾಮ ಮಾಡಿದ್ದ ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕರಿಗೆ, ಈಗ ಖರ್ಗೆ ಒಗ್ಗಟ್ಟಿನ ಪಾಠ ಹೇಳುವಂತಾಗಿದ್ದು ರಾಜ್ಯ ಕಾಂಗ್ರೆಸ್‌ ಪ್ರಭಾವಿ ನಾಯಕರ ಬೌದ್ಧಿಕ ಮಟ್ಟ ಯಾವ ಹಂತಕ್ಕೆ ಕುಸಿದಿದೆ ಎನ್ನುವುದು ತಿಳಿಯುತ್ತದೆ. ʼಒಗ್ಗಟ್ಟೇ ಬಲʼ, ಇಲ್ಲದೆ ಹೋದರೆ ನಮ್ಮನ್ನು ಜನ ತಿರಸ್ಕರಿಸುತ್ತಾರೆಂದು ಸಂದೇಶ ರವಾನಿಸುವುದರ ಮುಖೇನ ಮತ್ತೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಜೇವರ್ಗಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ಒಗ್ಗಟ್ಟಾಗಿರುವಂತೆ ಬಹಿರಂಗವಾಗಿಯೇ ತಾಕೀತು ಮಾಡಿರುವುದು ರಾಜ್ಯ ಕಾಂಗ್ರೆಸ್‌ ರಾಜಕಾರಣದ ವಾತಾವರಣ ಸರಿ ಹೋಗಿಲ್ಲ ಎನ್ನುವುದನ್ನು ಜಗಜ್ಜಾಹೀರು ಮಾಡಿದೆ. ಶಿವಕುಮಾರ್ ಅವರತ್ತ ಕೈ ಸನ್ನೆ ಮಾಡಿ, 'ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ʼಹೀಂಗಿರಬೇಕು, ಹಂಗ ಇದ್ರೇನೇ ಚೆಂದ' ಎಂದು ಮೈಕ್ ಪೋಡಿಯಂನಿಂದಲೇ ಖರ್ಗೆ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಸಿದ್ದರಾಮಯ್ಯ ಒಂದು ಕಡೆ, ಡಿ.ಕೆ ಶಿವಕುಮಾರ್‌ ಅವರು ಇನ್ನೊಂದು ಕಡೆ ಎನ್ನುವ ವಾತಾವರಣ ರಾಜ್ಯ ಕಾಂಗ್ರೆಸ್‌ ನಲ್ಲಿ ಇದೆ ಎನ್ನುವುದನ್ನು ಸ್ವತಃ ಕಾಂಗ್ರೆಸ್‌ ಒಪ್ಪಿಕೊಂಡಂತಿತ್ತು ಖರ್ಗೆ ಅವರ ಮಾತು.

ಎಐಸಿಸಿ ಅಧ್ಯಕ್ಷರಾಗಿದ್ದುಕೊಂಡು, ಸಿನಿಯರ್‌ ಮೋಸ್ಟ್‌ ಕಾಂಗ್ರೆಸ್‌ನ ನಾಯಕರಾಗಿದ್ದುಕೊಂಡು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರಿಗೆ ಖಡಕ್‌ ಆಗಿ ಹೇಳುವುದಕ್ಕೂ ಆಗದೆ, ಖಡಕ್‌ ಆಗಿ ಸೂಚನೆ ನೀಡುವುದಕ್ಕೂ ಆಗದೇ ಇರುವುದು ಖರ್ಗೆ ಅವರಿಗೆ ಒಂದು ರೀತಿಯಲ್ಲಿ ಪ್ರಾಣ ಸಂಕಟವೇ ಸರಿ. ರಾಜ್ಯದ ನಾಯಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವ ವ್ಯವಸ್ಥೆ ಕಾಂಗ್ರೆಸ್‌ ನಲ್ಲಿ ಇಲ್ಲ ಎನ್ನುವುದೇ ಇದರ ಅರ್ಥ.

ಪಕ್ಷದ ಆಂತರಿಕ ಸಭೆಯೊಂದರಲ್ಲಿ ಖುದ್ದಾಗಿ ಹೇಳಬೇಕಿರುವ ವಿಷಯಗಳನ್ನೆಲ್ಲಾ ಖರ್ಗೆ ಬಹಿರಂಗ ಸಭೆಯೊಂದರಲ್ಲಿ ಹೇಳಿರುವುದು ತೀರ ಬಾಲಿಶ ಅನ್ನಿಸಿತು ಎನ್ನದೇ ಮತ್ತೆ ಏನು ಹೇಳುವುದಕ್ಕೆ ಸಾಧ್ಯವಿದೆ ? ʼರಾಜ್ಯದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಕೊಡಿ. ಅಭಿವೃದ್ಧಿ ಬಿಟ್ಟು ಮಾತನಾಡಿದರೆ ಜನ ನಮ್ಮನ್ನು ಖಂಡಿತ ಮೆಚ್ಚುವುದಿಲ್ಲʼ ಎಂದು ತಮ್ಮ ಬಹಿರಂಗ ಸಭೆಯೊಂದರ ಭಾಷಣದುದ್ದಕ್ಕೂ ಎಚ್ಚರಿಕೆಯ ಮಾತನಾಡಿದರು. ಇವೆಲ್ಲಾ ಕಾಂಗ್ರೆಸ್‌ ವರ್ಚಸ್ಸಿಗೆ ಧಕ್ಕೆ ಅಲ್ಲದೇ ಮತ್ತಿನ್ನೇನು ?

ಇನ್ನು, ವಿಧಾನಸಭಾ ಚುನಾವಣಾ ಪೂರ್ವ ಪ್ರಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ಒಟ್ಟಿಗೆ ಕೂರಿಸಿ ಸ್ವಯಂಸಂದರ್ಶನ ಮಾಡಿಕೊಳ್ಳುವಂತೆ, ಚುನಾವಣೆಯ ಪೂರ್ವ ಸಮೀಕ್ಷೆಯ ಬಗ್ಗೆ ಚರ್ಚೆ ಮಾಡುವಂತೆ, ಹೆಗಲ ಮೇಲೆ ಕೈ ಹಾಕಿ ಒಬ್ಬರನ್ನೊಬ್ಬರು ತಬ್ಬಿ ನಿಲ್ಲಿಸಿ ನಾವು ಒಗ್ಗಟ್ಟಾಗಿದ್ದೇವೆ ಎನ್ನುವುದನ್ನು ತೋರಿಸುವುದಕ್ಕೆ ಕಾಂಗ್ರೆಸ್‌ ಪಾರ್ಟಿಯ ಪ್ರಚಾರ ತಂಡ ಹರಸಾಹಸ ಪಟ್ಟಿತ್ತು. ಚುನಾವಣೆಯ ಫಲಿತಾಂಶ ಬಂದ ಕೆಲಕ್ಷಣದಲ್ಲೇ ಅದು ಎಂಥಾ ಒಗ್ಗಟ್ಟು ಎನ್ನುವುದು ಇಡೀ ರಾಜ್ಯಕ್ಕೆ ಬಟಾಬಯಲಾಗಿತ್ತು. ಕೊನೆಗೆ ಹೈಕಮಾಂಡ್‌ನ ಸೂಚನೆಗೆ ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ಒಪ್ಪಿಕೊಂಡು ಸುಮ್ಮನಾದರು. ಈಗ ʼಒಗ್ಗಟ್ಟುʼ ಸಹಜವಾಗಿ ತುರ್ತಾಗಿ ಮೂಡಬೇಕಿದೆ.

ಇದೇ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ನಲ್ಲಿ ಒಂದು ಹೊಸ ಬದಲಾವಣೆ ಘಟಿಸಿಯೇ ಬಿಟ್ಟಿತ್ತು. ರಾಜ್ಯ ಕಾಂಗ್ರೆಸ್‌ ಪಕ್ಷ ಆಡಳಿತದಲ್ಲಿ ಹೊಸತೊಂದು ಪ್ರಸಂಗದ ಹುಟ್ಟಿಗೆ ಕಾರಣವಾಯಿತು. ಅದೇ ʼಪವರ್‌ ಶೇರಿಂಗ್‌ʼ ವಿಚಾರ. ಆಡಳಿತಾವಧಿಯ ಪೂರ್ವಾರ್ಧದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಉತ್ತರಾರ್ಧದಲ್ಲಿ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದಲ್ಲಿ ಸರ್ಕಾರ ಮುನ್ನಡೆಯಬೇಕು ಎಂಬ ಹೈಕಮಾಂಡ್‌ ಪ್ರೇರಿತ ನಾಟಕ ರಾಜ್ಯದ ತುಂಬಾ ಬಹಳ ದೊಡ್ಡ ಚರ್ಚೆಗೆ ಕಾರಣವಾಯಿತು. ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎನ್ನುವುದರ ಬಗ್ಗೆ ಯಾರಿಗೆ ಗೊತ್ತಿದೆ ? ಹೈಕಮಾಂಡ್‌ನ ಇಬ್ಬರೋ, ಮೂವರೋ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು. ಒಪ್ಪಂದ ಆಗಿದೆ ಎನ್ನುವುದಾದರೇ ಅದು ಗೊತ್ತಿರುವುದು ಆ ಐದಾರು ಮಂದಿಗಷ್ಟೇ ಹೊರತು, ಮತ್ಯಾರಿಗೂ ಅಲ್ಲ. ಸಿದ್ದರಾಮಯ್ಯ ಅಥವಾ ಡಿಕೆಶಿ ಅವರಲ್ಲಿ ಯಾರೋ ಒಬ್ಬರು ತಮ್ಮ ಅತ್ಯಾಪ್ತ ಬಳಗದಲ್ಲಿರುವವರಿಗೆ ಈ ಗುಟ್ಟನ್ನು ಹೇಳಿರಬೇಕು. ಅವರು ಹಬ್ಬಿಸಿರಬೇಕು. ಆದರೇ, ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದರ ರಹಸ್ಯದ ಬಗ್ಗೆ ತಿಳಿದಿರುವವರು ಮಾತೆತ್ತುತ್ತಿಲ್ಲ.

ಡಿಕೆಶಿ ಇಂಗ್ಲೀಷ್‌ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದ ಆಗಿದೆ ಎನ್ನುವುದನ್ನು ಹೇಳಿಕೊಂಡರು. ಅದು ಚರ್ಚೆ ದೊಡ್ಡದಾಗುವುದಕ್ಕೆ ಮೂಲ ಕಾರಣವಾಯಿತು. ರಾಜಕೀಯ ಸಮೀಕರಣದಲ್ಲಿ ದೊಡ್ಡ ಗೊಂದಲ ಸೃಷ್ಟಿಗೆ ಮೂಲವಾಯಿತು. 

ರಾಜ್ಯ ಬಿಜೆಪಿಯಲ್ಲಿನ ಪಕ್ಷದ ಅಧ್ಯಕ್ಷ ಸ್ಥಾನದ ಬದಲಾವಣೆಯ ವಿಚಾರದಂತೆ ಕಾಂಗ್ರೆಸ್ಸಿನ ಇಬ್ಬರು ಪ್ರಭಾವಿ ನಾಯಕರಾದ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರನ್ನು ಬೆಂಬಲಿಸುವವರ ನಡುವೆ ಉದ್ಭವಿಸಿರುವ ಈ ಅಧಿಕಾರ ಹಂಚಿಕೆಯ ಒಪ್ಪಂದದ ವಿಚಾರ, ಇತ್ತೀಚೆಗೆ ಗಟ್ಟಿಧ್ವನಿಯಲ್ಲೇ ಕೇಳತೊಡಗಿದೆ. ಸಿದ್ದರಾಮಯ್ಯ ಅವರ ಪರ ಬೆಂಬಲಿಗರು ಶಿವಕುಮಾರ್‌ ಅವರ ವಿರುದ್ಧ ಎಷ್ಟೇ ಸವಾಲೆಸೆದರೂ ಶಿವಕುಮಾರ್‌ ತಮ್ಮ ಸ್ವಭಾವದಲ್ಲಿ ಸಂಯಮವನ್ನು ಯಥೇಚ್ಛವಾಗಿ ವೃದ್ಧಿಸಿಕೊಂಡಿದ್ದಾರೆ ಎನ್ನುವಂತೆ ವಿವೇಕಯುತ ಕಾರ್ಯತಂತ್ರ ಕಾಣಿಸುತ್ತಿದೆ. ಸಿದ್ದರಾಮಯ್ಯ ಅವರ ಮೌನವನ್ನು ಅರ್ಥೈಸಿಕೊಳ್ಳುವುದಕ್ಕೆ ದೊಡ್ಡ ಮಟ್ಟದ ಜಾಣತನವೇನೂ ಬೇಕಿಲ್ಲ. ಕಾಂಗ್ರೆಸ್‌ ಅಂತಹ ದೇಶದ ಅತ್ಯಂತ ಅನುಭವಿ ಮತ್ತು ಹಳೆಯ ಪಕ್ಷಕ್ಕೆ ತನ್ನಲ್ಲೇ ಆಗಿರುವ ಈ ಆಂತರಿಕ ಭಿನ್ನಮತವನ್ನು ಸರಿಪಡಿಸಿಕೊಳ್ಳುವುದು ಬಹಳ ದೊಡ್ಡದೇನಲ್ಲ. ಆದರೇ, ಕಾಂಗ್ರೆಸ್‌ ಈ ಕೆಲಸಕ್ಕೆ ವಿಳಂಬ ನೀತಿಯನ್ನು ಯಾಕೆ ಅನುಸರಿಸುತ್ತಿದೆ ಎನ್ನುವುದು ನಿಜಕ್ಕೂ ರಹಸ್ಯ.

ಇನ್ನು, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ ಮಟ್ಟದಲ್ಲಿ ಹದಿನಾರನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದಾರೆ. ಬಜೆಟ್ ವಿಷಯದಲ್ಲಿ ವಿರೋಧ ಪಕ್ಷಗಳನ್ನು ಎದುರಿಸಲು ತಯಾರಿ ಮಾಡಬೇಕಿದ್ದ ಶಾಸಕಾಂಗ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳ ದೊಡ್ಡ ವಾಗ್ವಾದವೇ ನಡೆದು ಹೋಗಿದೆ‌. ಹೌದು, ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿವರು ಕೈಗೆ ಸಿಗುತ್ತಿಲ್ಲವೆಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಬಿಜೆಪಿ ಶಾಸಕರು, ಸರ್ಕಾರದ ಮಂತ್ರಿಗಳು ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ಆರೋಪ ಹೊರಿಸುವುದು ಸರಿ. ಆದರೇ, ಸ್ವಪಕ್ಷದ ಶಾಸಕರೇ, ಮಂತ್ರಿಗಳು ಕೈಗೆ ಸಿಗುವುದಿಲ್ಲ ಎಂದು ಆಕ್ರೋಶ ಹೊರಹಾಕಿರುವುದು ಸರ್ಕಾರಕ್ಕೆ ತೀವ್ರ ಮುಖಭಂಗವೇ ಸರಿ.

ಶಾಸಕರಿಗೆ ಸ್ಪಂದಿಸದ ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡಿ ಎಂಬ ಒತ್ತಾಯಯೂ ಕೇಳಿ ಬಂದಿದೆ. ಇಲಾಖಾ ಮಟ್ಟದಲ್ಲಿ ಆಗಬೇಕಿರುವ ಯಾವುದೇ ಕೆಲಸಕ್ಕೆ ಮಂತ್ರಿಗಳು ಸಿಗುತ್ತಿಲ್ಲ ಎನ್ನುವ ಆರೋಪವನ್ನು ಕೈ ಶಾಸಕರೇ ಹೊರಿಸಿರುವುದು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಮೇಲೆ ಅವಿಶ್ವಾಸ ಮೂಡುವುದಕ್ಕೆ ಮೂಲ ಕಾರಣವಾಗಬಹುದೇ ? ಸಿಎಂ ಪದವಿ ಹಂಚಿಕೆಯ ಭಿನ್ನಮತಗಳ ನಡುವೆ ಇವೆಲ್ಲಾ ಪರಸ್ಪರ ಘರ್ಷಣೆಯನ್ನು ಎಬ್ಬಿಸಿ ಆಟ ನೋಡುವುದು ʼಪ್ರಭಾವಿʼ ತಂತ್ರದ ಭಾಗವೇ ಎನ್ನುವ ಪ್ರಶ್ನೆಯನ್ನು ಎಬ್ಬಿಸುತ್ತಿದೆ. ಇಲ್ಲದಿದ್ದರೇ, ಶಾಸಕರಿಗೆ ತಮ್ಮ ಸರ್ಕಾರದ ಸಚಿವರ ಬಗ್ಗೆ ಮುಖ್ಯಮಂತ್ರಿಗಳ ಮುಂದೆಯೇ ಅಸಮಧಾನ ವ್ಯಕ್ತ ಪಡಿಸುವುದಕ್ಕೆ ಅಷ್ಟು ಸುಲಭದಲ್ಲಿ ಸಾಧ್ಯವಿದೆಯೇ ? ಗೊತ್ತಿಲ್ಲ. ಮುಂದೇನಾಗಲಿದೆ ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ

 

No comments:

Post a Comment