ಅತ್ತ ನಕ್ಷತ್ರ ಒಂದು ವಿನೂತನವಾದ ಕಿರು ಕಾದಂಬರಿ. ಈ ಹೊತ್ತಗೆ ಓದಿದಾಗ ವಿಶಿಷ್ಟವಾದ ಅನುಭವವಾಗುತ್ತದೆ. ಪ್ರೀತಿ ಪ್ರೇಮದಲ್ಲಿ ಮುಳುಗಿರುವ , ಸ್ವರ್ಗ ಲೋಕದ ಕನಸಿನಲ್ಲಿ ವಿಹರಿಸುತ್ತಿರುವ ಹುಡುಗಾಟದ ಮನಸ್ಸಿನ ಪ್ರೀತಿಯ ಕುರುಡಿನಲ್ಲಿ ನಿಶೆ ಏರಿ ತೇಲಾಡುವವರು ಓದಲೇ ಬೇಕಾದ ಕೃತಿರತ್ನವಿದು.
ಕಾವ್ಯ ಬೈರಾಗಿ ನಾಮದ ಯುವ ಪ್ರತಿಭೆ ಶ್ರೀರಾಜ್ ವಕ್ವಾಡಿಯವರ ಐದನೇ
ಹೊತ್ತಗೆಯಿದು. ಈಗಾಗಲೇ ಕವಿಯಾಗಿ ಗುರುತಿಸಿಕೊಂಡಿರುವ ಈ ಪ್ರತಿಭಾವಂತ ಗದ್ಯ ಬರಹದಲ್ಲೂ ಶ್ರೇಷ್ಠತೆಯನ್ನು
ಉಳಿಸಿಕೊಂಡಿದ್ದಾನೆ. ಇವರ ಕಾವ್ಯ ಮತ್ತು ಗದ್ಯ ಬರಹಗಳನ್ನು ಓದಿರುವೆ. ಇವರ ಬರಹಗಳು ನನಗೆ ಆಪ್ತವಾದವು.
ಇವರ ಬರಹಗಳನ್ನು ಎರಡೆರಡು ಬಾರಿ ಓದಿದಾಗ ಮಾತ್ರ ನಮಗೆ ಸರಿಯಾದ ಅರಿವು ಆಗುತ್ತದೆ.
ಅತ್ತ ನಕ್ಷತ್ರ – ಈ ಕಿರು ಕಾದಂಬರಿಯಲ್ಲಿ ಇವರ ಪರಾಕಾಯ ಪ್ರವೇಶ ಎದ್ದು
ಕಾಣುತ್ತದೆ. ಕಂಡು, ಕೇಳಿದ, ಅನುಭವಿಸಿದ, ಓದಿದ ವಿಚಾರಗಳನ್ನು ಸೂಕ್ತ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ
ಜೋಡಿಸಿ ಸಹೃದಯರಿಗೆ ತಾರ್ಕಿಕವಾಗಿ ಯೋಚಿಸಿ, ಯಾವುದು ಸರಿ, ಯಾವುದು ತಪ್ಪು ಎಂದು ಗೃಹಿಸಿ, ಜ್ಞಾನ
ಕಟ್ಟುವ ಕೆಲಸಕ್ಕೆ ಅಣಿ ಮಾಡುವುದು ಹೇಳಿದಷ್ಟು ಸುಲಭವಲ್ಲ. ಈ ಕಾರ್ಯದಲ್ಲಿ ಕಾವ್ಯ ಬೈರಾಗಿ ಯಶಸ್ವಿಯಾಗಿದ್ದಾರೆ.
ಹದಿರಹರೆಯರು ಓದಲೇಬೇಕಾದ ಕೃತಿ ಇದು. ಅಭಿಜ್ಞ, ಸಾಕ್ಷಿ, ಅನುಪ್ರಭ,
ಡಾ. ನೇಹಿಗ ಈ ಪಾತ್ರಗಳ ಮೂಲಕ ಪ್ರೇಮಿಗಳಿಗೆ ಏನು ಹೇಳಬೇಕೋ ಅದನ್ನು ಲೇಖಕರು ಸ್ಪಷ್ಟವಾಗಿ ಬರಹದ ಮೂಲಕ
ಅಭಿವ್ಯಕ್ತಿಗೊಳಿಸಿದ್ದಾರೆ. ಕೃತಿಯಲ್ಲಿ ಆಪ್ತ ಸಮಾಲೋಚಕರ ಮಾತುಗಳು ನೈಜತೆಗೆ ಪುಷ್ಟಿ ನೀಡುತ್ತದೆ.
ಪ್ರೇಮಿಗಳ ತಳಮಳ, ಮಾನಸಿಕ ತೊಳಲಾಟ, ಒಂದಿಷ್ಟು ಪ್ರೀತಿ, ಕೋಪ, ಮಿತ ಮಾತು, ಸಮಧಾನ, ಘರ್ಷಣೆ, ಸಂದಿಗ್ದ
ಪರಿಸ್ಥಿತಿ, ನೋವು, ಯೋಚನೆ, ಚಿಂತನೆ, ಆರಾಧನೆ ಇವುಗಳೆಲ್ಲದರ ಮೂರ್ತ ರೂಪವೇ ಅತ್ತ ನಕ್ಷತ್ರ.
ಇಲ್ಲಿ ಕಾಣಸಿಗುವ ಒಂದು ಕವನವೊಂದು ತುಂಬಾ ಇಷ್ಟವಾಯಿತು.
ಬದುಕು ಕಾವ್ಯ
ಕಾವ್ಯವೇ ಬದುಕು
ಕಣ್ಹನಿಯೊಡನೆ
ಹರಿದು ಬಂದ
ಭಾವಗಳೆಲ್ಲಾ
ಪುಟಗೊಳ್ಳುತ್ತಿವೆ !
ಒದ್ದೆ ಪುಟಗಳಲ್ಲಿ
ಶಾಹಿ ಹರಡಿದ
ವಿಷಾದ ಕವನ
ಓದುವವರೂ ಇಲ್ಲ
ಕೇಳುವವರೂ ಇಲ್ಲ.
ಬರೆಯದೇ ಇದ್ದರೂ ಓದಿದಾಗ ಕೇಳಿಸುವಂತದ್ದು ಧ್ವನಿ. ಅಂತಹ ʼಧ್ವನಿʼಯುಕ್ತವಾದ
ಕವನವಿದು. ʼಧ್ವನಿಯೂ ಕಾವ್ಯದ ಆತ್ಮʼ. ಎಂಬ ಮಾತಿಗೆ ಪೂರಕವಾಗಿದೆ ಈ ಕವನ. ಈ ಕೃತಿ ಬಹಳ ವಿಶೇಷವಾಗಿದ್ದು
ಯಾಕೆಂದರೇ, ಇಲ್ಲಿ ಗದ್ಯವೂ ಕಾವ್ಯಾಂಶವನ್ನು ಒಳಗೊಂಡಿದೆ. ಪ್ರೀತಿ-ಪ್ರೇಮದ ಸುತ್ತ ಹೆಣೆದ ಈ ಕೃತಿ
ವಾಸ್ತವಕ್ಕೆ ಹತ್ತಿರವಾಗಿದೆ. ೪೭ನೇ ಪುಟದಲ್ಲಿ ಬರುವ ಈ ಸಾಲನ್ನು ಗಮನಿಸಿ. ʼನೀನು ಅನುಭವಿಸಿದ್ದೆಲ್ಲಾ
ನಿನ್ನದಲ್ಲ, ನಿನ್ನೊಳಗಿನ ದುಃಖ ನಿನ್ನದಲ್ಲ, ಕಾಡುವ ನೆನಪು ನಿನ್ನದಲ್ಲ. ನಿನ್ನೊಳಗಿನ ನಿಡುಸುಯ್ಯುವಿಕೆ
ನಿನ್ನದಲ್ಲ, ನಿನ್ನೊಳಗೆ ಅವಿತಿಟ್ಟಿರುವ ಶಕ್ತಿ ನೀನು, ಅದನ್ನು ಹೊರಹಾಕಿ ಮುನ್ನಡೆಯುವ ಧೈರ್ಯ ನೀನುʼ
ತುಂಬಾ ಅರ್ಥಪೂರ್ಣವಾದ ಸಾಲುಗಳಿವೆ. ನಿನ್ನೊಳಗೆ ಅವಿತಿಟ್ಟುಕೊಂಡಿರುವ ಶಕ್ತಿ ನೀನು ಎನ್ನುವ ಬದಲಿಗೆ
ʼಶಕ್ತಿ ನಿನ್ನದಲ್ಲʼ ಎಂದು ಸೂಕ್ತ ಮಾರ್ಪಾಡು ಮಾಡಿದ್ದರೆ ಇನ್ನೂ ಹೆಚ್ಚಿನ ಜೀವದ್ರವ ಬರುತ್ತಿತ್ತು.
ಇದು ನನ್ನ ಅನಿಸಿಕೆ. ಈ ಪ್ರಪಂಚದಲ್ಲಿ ನಾವೆಲ್ಲಾ ನಿಮಿತ್ತ ,ಮಾತ್ರ. ಮೇಲಿನ ಸಾಲುಗಳಲ್ಲಿ ಅಡಗಿರುವ
ಧ್ವನಿಯನ್ನು ಗಮನಿಸಿದಾಗ ಕಾವ್ಯ ಬೈರಾಗಿಯ ಬರಹದ ಶಕಿ ಏನೆಂದು ತಿಳಿಯುತ್ತದೆ.
ಪ್ರೇಮಿಗಳು ಮದುವೆಗೆ ಮುಂಚೆ ದೈಹಿಕ ಸಂಪರ್ಕ ಮಾಡುವಾಗ ಯೋಚಿಸಬೇಕು.
ಬದಲಾದ ಕಾಲಘಟ್ಟದಲ್ಲಿ ನೈತಿಕತೆಯನ್ನು ಉಳಿಸಿಕೊಳ್ಳುವುದು ಕೂಡ ಒಂದು ಸವಾಲಿನ ಕೆಲಸ. ಅಭಿಜ್ಞ ಮತ್ತು
ಸಾಕ್ಷಿ ಪ್ರೇಮ-ಪ್ರೀತಿಯಲ್ಲಿ ಮಾಡಿಕೊಂಡ ಎಡವಟ್ಟು ಅಭಿಜ್ಞನ ಮೇಲೆ ಸಾಕಷ್ಟು ನೋವು ತಂದಿದೆ. ಇದು
ಸಾಕ್ಷಿಗೂ ಅನ್ವಯಿಸುತ್ತದೆ. ಅನುಪ್ರಭ ಹಾಗೂ ಅಭಿಜ್ಞನ ಪಾತ್ರಗಳನ್ನು ಒಂದಕ್ಕೊಂದು ಹೋಲಿಸಿದಾಗ ಕೂಡ
ಹೊಸ ವಿಚಾರಧಾರೆ ತಿಳಿಯಬಹುದು.
ಉತ್ತಮ ನಿರೂಪಣೆ, ಭಾಷೆ, ಶೈಲಿ, ತಂತ್ರ ಎಲ್ಲದರಲ್ಲೂ ಹೊಸತನವಿದೆ.
ಕಾವ್ಯ ಬೈರಾಗಿ ಸಾಹಿತ್ಯ ಲೋಕಕ್ಕೆ ಒಂದು ಒಳ್ಳೆಯ ಕಿರು ಕಾದಂಬರಿಯನ್ನು ನೀಡಿದ್ದಾರೆ. ಜನಪ್ರತಿನಿಧಿ
ಪ್ರಕಾಶನ ಈ ಪುಸ್ತಕ ಪ್ರಕಟಿಸಿ ಶ್ಲಾಘನೀಯ ಕೆಲಸ ಮಾಡಿದೆ. ಪ್ರಕಾಶಕರಾದ ಮಿತ್ರ ಸುಬ್ರಹ್ಮಣ್ಯ ಪಡುಕೋಣೆ
ಹಾಗೂ ಯುವ ಬರಹಗಾರ ಆತ್ಮೀಯ ಶ್ರೀರಾಜ್ ಗೆ ಸದಾಕಾಲವೂ ಶುಭವಾಗಲಿ. ಇದು ನನ್ನ ಹರಕೆ ಹಾರೈಕೆಯಾಗಿದೆ.
ಅತ್ತ ನಕ್ಷತ್ರದ ಮೂಲಕ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕಾವ್ಯ ಬೈರಾಗಿ ದ್ರುವತಾರೆಯಾಗಿ
ಸದಾ ಪ್ರಜ್ವಲಿಸಲಿ ಎನ್ನುವುದೇ ನನ್ನ ಮನದಾಳದ ಶುಭ ಹಾರೈಕೆಯಾಗಿದೆ.
- - ನೀಲಾವರ
ಸುರೇಂದ್ರ ಅಡಿಗ
ಅಧ್ಯಕ್ಷರು, ಕಸಾಪ
ಉಡುಪಿ ಜಿಲ್ಲಾ ಘಟಕ.
____________________________________
ಒಂದು ಡಿಫರೆಂಟ್ ಪ್ರೀತಿಯ ಅವ್ಯಕ್ತ ನಿಡುಸುಯ್ಯುವಿಕೆ ಇದು. ಅಭಿಜ್ಞ, ಸಾಕ್ಷಿ, ಅನುಪ್ರಭ, ಸಹನಾಳಂತ ಪಾತ್ರಗಳು ಈ ಜಗತ್ತಿಗೆ ಹೊಸತೇನಲ್ಲ. ಆದರೇ, ಇವರುಗಳು ಜೀವಿಸಿಸಿದ್ದು ಬೇರೆ ಅಷ್ಟೇ. ಕುತೂಹಲದಿಂದ ಕಾಡುವ ಈ ಪಾತ್ರಗಳು ನಮ್ಮ ನಿಮ್ಮೊಳಗೆ ಒಂದಾಗುತ್ತವೆ. ದ್ಯಾಟ್ಸ್ ದಿ ಗ್ರೇಟ್ನೆಸ್ ಆಫ್ ದಿಸ್ ಸ್ಟೋರಿ.
ಮಾನವ ಸಂಬಂಧಗಳು ಸ್ಪಂದನೆಗೆ ಉಳಿಯುತ್ತವೆ, ಪ್ರೀತಿಗೆ ಬೆಳೆಯುತ್ತವೆ. ಅದಕ್ಕೋಸ್ಕರವೇ ಎಲ್ಲವನ್ನೂ ಸಹಿಸಿಕೊಳ್ಳುವ ಪರಮ ಶಕ್ತಿ ಸಂಬಂಧಗಳಿಗಿವೆ. ಪ್ರೀತಿಯ ಸುತ್ತ ಚಿತ್ರಗಟ್ಟುವ ಸಂಬಂಧಗಳು ಈ ಜಗತ್ತಿನ ಇಂಟ್ರೆಸ್ಟಿಂಗ್ ಸಬ್ಜೆಕ್ಟ್ ಗಳಲ್ಲೊಂದು. ಇಲ್ಲಿ ನೀವೇ ಇದ್ದೀರಿ, ನಿಮ್ಮೊಳಗಿನ ನೂರು ಕಥೆಗಳಲ್ಲೊಂದಿದೆ. ಈ ಕಥೆ ಇದೆ. ಇದು ನಿಮ್ಮನ್ನು ಆವರಿಸಲಿ.
#ಕಾವ್ಯಬೈರಾಗಿ
ಪ್ರತಿಗಳಿಗಾಗಿ ಜನಪ್ರತಿನಿಧಿ ಪತ್ರಿಕೆ ಯನ್ನು ಸಂಪರ್ಕಿಸಿ (8660786226) . ಕೃತಿಯ ಬೆಲೆ ರೂ. 100/(ಅಂಚೆ ವೆಚ್ಚವನ್ನು ಒಳಗೊಂಡು).


No comments:
Post a Comment