Thursday, August 17, 2023

ಸೌಜನ್ಯಳ ಕನಸುಗಳು ಹೂವಾಗುವಷ್ಟರಲ್ಲೇ ಚಿವುಟಿದವರ ಆತ್ಮಸಾಕ್ಷಿಯೇ ಶಿಕ್ಷಿಸಲಿ !

(ಸಾಂದರ್ಭಿಕ ಚಿತ್ರ)

ಮಾನವರಿಲ್ಲದ ಕಡೆ ನೈತಿಕ ಸಮಾಜದ ನಿರೀಕ್ಷೆ ಮಾಡುವುದಾದರೂ ಹೇಗೆ ?  

ನಾವು ಯಾರೂ ಮಾನವರಾಗಿಲ್ಲ. ಇನ್ನೂ ಮಾನವರಾಗುವ ಪ್ರಯತ್ನದಲ್ಲೇ ಇದ್ದೇವೆ ಅಂತನ್ನಿಸುತ್ತಿದೆ. ಆ ಪ್ರಯತ್ನದ ದಾರಿಯಲ್ಲಿ ಪದೆ ಪದೆ ಸೋಲುತ್ತಿದ್ದೇವೆ. ಪದೆ ಪದೆ ಧಾರ್ಷ್ಟ್ಯದಲ್ಲೇ ಮುಳುಗುತ್ತಿದ್ದೇವೆ. ಸತ್ಯದ ಮುಂದೆ ನಗ್ನಗೊಳ್ಳುವುದು, ನ್ಯಾಯದ ಮುಂದೆ ನಗ್ನಗೊಳ್ಳುವುದು. ಬರೀ ಇಂತವೇ ಆಗಿವೆ. ಸಮರ್ಥನೆಗೂ ಮಿತಿ ಇದೆ. ವಿರೋಧಕ್ಕೂ ಮಿತಿ ಇದೆ. ಆ ಮಿತಿಯ ಎಲ್ಲೆ ಮೀರಿದಾಗ ಆಗುವುದನ್ನು ಇವತ್ತು ಸಮಾಜ ಕಂಡು ಮರುಗುತ್ತಿದೆ. ಯಾವುದನ್ನು ಉದ್ದೀಪಿಸಬೇಕೋ ಅದನ್ನು ಮತ್ತಷ್ಟು ಅದುಮಿ ನಾಶ ಮಾಡುವ ಪ್ರವೃತ್ತಿ ಜಗತ್ತಿಗೆ ಕಳಂಕವೆಂಬತೆ ಅಂಟಿಕೊಂಡಂತಿದೆ. ನಾವೆಲ್ಲರೂ ಬದುಕುತ್ತಿರುವ ವ್ಯವಸ್ಥೆಯಲ್ಲಿ ಸೇರಿರುವ ʼಧ್ವನಿ ಅಡಗಿಸುವ ಧೋರಣೆʼ ಈ ಜಗತ್ತಿಗಿಂತಲೂ ಹಳೆಯದು ಎಂಬಂತಾಗಿದೆ. ನಾವು ಯಾರೂ ಮಾನವರಾಗುವ ಪ್ರಯತ್ನವೇ ಮಾಡಿಲ್ಲ. ಆಗುವ ಯೋಚನೆಯಲ್ಲಿಯೂ ಇಲ್ಲ. ಈ ಸಮಾಜದಲ್ಲಿ ಇರವುದಕ್ಕೆ ನಾಚಿಕೆ ಪಡಬೇಕೋ ? ಅಥವಾ ಇಲ್ಲಿ ಆಗುತ್ತಿರುವ ಎಲ್ಲದರಲ್ಲೂ ಒಳಗೊಂಡು ಬೆತ್ತಲಾಗಬೇಕೋ ? ಈ ಜಗತ್ತಿಗೇ ಆಗುತ್ತಿರುವ ಅವಮಾನಗಳನ್ನು, ಅವ್ಯಾಹತವಾಗಿ ನಡೆಯುತ್ತಿರುವ ನಾಚಿಕೆಗೇಡಿನ ಕೃತ್ಯಗಳನ್ನು ಈ ಸಮಾಜದ ಮೇಲಿನ ಪದರ ತನ್ನ ಧಾವಂತದಲ್ಲಿ ನಿರಾಯಾಸವಾಗಿ ಮರೆತುಬಿಡಬಹುದು. ಆದರೇ ಇದೇ ಸಮಾಜದ ಅಂತಃಕರಣ ಅಷ್ಟು ಸುಲಭವಾಗಿ ಮರೆತು ಬಿಡುವುದಕ್ಕೆ ಸಾಧ್ಯವಿದೆಯೇ ? ಈ ಸಮಾಜಕ್ಕೆ ಆತ್ಮಸಾಕ್ಷಿ ಎನ್ನುವುದು ಇಲ್ಲವೆ ?

“ಸತ್ಯ ಮತ್ತು ಸದಾಚಾರಗಳಷ್ಟೇ ದೇವರು.  ಅದನ್ನು ಹೊರತಾಗಿ ಬೇರೆ ದೇವರನ್ನು ನಾನು ಒಪ್ಪಿಕೊಳ್ಳುವುದಿಲ್ಲ. ರಾಮರಾಜ್ಯ ಅಂದರೇ ಹಿಂದೂ ರಾಜ್‌ ಎಂದು ಅರ್ಥವಲ್ಲ. ನನ್ನ ಪ್ರಕಾರ, ರಾಮರಾಜ್ಯ ಅಂದರೇ ದೇವರ ರಾಜ್ಯ. ರಾಮ, ರಹೀಮ ಎಲ್ಲರೂ ನನಗೆ ಒಂದೇ ಆಗಿದ್ದಾರೆ. ನನ್ನ ಕಲ್ಪನೆಯ ರಾಮ ಈ ಭೂಮಿಯ ಮೇಲೆ ಬದುಕಿದ್ದರೂ, ರಾಮಾಯಣದ ಆದರ್ಶವು ನಿಸ್ಸಂದೇಹವಾಗಿ ನಿಜವಾದ ಪ್ರಜಾಪ್ರಭುತ್ವದಲ್ಲಿ ಒಂದಾಗಿದೆ” ಎಂದು  ೧೯೨೯ ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ತಮ್ಮ ʼಯಂಗ್‌ ಇಂಡಿಯಾʼ ಪತ್ರಿಕೆಯಲ್ಲಿ ಹೀಗೆ ಬರೆಯುತ್ತಾರೆ. ಮತ್ತೊಂದು ಕಡೆ “ರಾಮ ಸೀತೆಯನ್ನು ಹೇಗೆ ಪ್ರೀತಿಸುತ್ತಿದ್ದನೋ, ಹಾಗೆ ನಾವು ಪ್ರೀತಿಸುವುದನ್ನು ಕಲಿಯಬೇಕು” ಅಂತ ಗಾಂಧೀಜಿ ಹೇಳುತ್ತಾರೆ. ಗಾಂಧೀಜಿ ಇಲ್ಲಿ ಇದನ್ನು ನಾವು ಹೇಗೆ ಆದರ್ಶ ದಂಪತಿಗಳಾಗಬೇಕು ಎಂಬುವುದರ ಬಗ್ಗೆ ಉಪದೇಶ ಕೊಟ್ಟಿದ್ದಲ್ಲ. ಸಮಾಜದಲ್ಲಿ ನಾವು ಹೇಗೆ ಪ್ರೀತಿಯಿಂದ ಇರಬೇಕು ಎಂಬುವುದನ್ನು ಹೇಳಿರುವುದು. ಗಾಂಧೀಜಿ ಹೇಳಿದ ರಾಮರಾಜ್ಯ, ಗಾಂಧೀಜಿ ಹೇಳಿದ ಪ್ರೀತಿ ಈ ದೇಶ ಕಂಡುಕೊಂಡಿದೆಯೇ ಎಂಬ ಪ್ರಶ್ನೆಗೆ ಬಹುಶಃ ಹೆಚ್ಚೆಂದರೇ ಉತ್ತರವಿಲ್ಲದ ಮೌನ ಸಿಗಬಹುದೇನೋ ಅಷ್ಟೆ.  

ಆಗಸ್ಟ್‌ ೧೫ ಈ ದೇಶ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತದೆ. ನಾವೆಲ್ಲರೂ ವಿಜೃಂಭಿಸುತ್ತೇವೆ. ಹಾಗೆ ವಿಜೃಂಭಿಸಬೇಕಾಗಿರುವುದು ನಮ್ಮ ಕರ್ತವ್ಯ, ಜವಾಬ್ದಾರಿಯೂ ಹೌದು. ಅದು ನಮ್ಮ ಹೆಮ್ಮೆ. ಅದು ನಮ್ಮ ದೇಶಭಕ್ತಿ. ಅದರಲ್ಲಿ ಕಿಂಚಿತ್ತೂ ಅನುಮಾನವೇ ಇಲ್ಲ. ಆದರೇ, ಈ ʼಸ್ವಾತಂತ್ರ್ಯʼ ಎನ್ನುವುದು ತೋರಿಕೆಗೆ ಅಷ್ಟೇ ಆಗಬಾರದು ಅಲ್ವಾ ? ಕಾನೂನಿನ ಪುಸ್ತಕಗಳಿಗಷ್ಟೇ ಸೀಮಿತವಾಗಬಾರದು ಅಲ್ವಾ ? ನಾವೆಲ್ಲರೂ ಸ್ವಾತಂತ್ರ್ಯ, ಸಂವಿಧಾನ, ಕಾನೂನು ಅಂತೆಲ್ಲಾ ಬೊಬ್ಬೆ ಹಾಕುತ್ತೇವೆ. ಇವು ನಿಜವಾದ ರೀತಿಯಲ್ಲಿ ಈ ನೆಲದ ಮೇಲೆ ಬಳಕೆಯಲ್ಲಿವೆಯೇ ? ಸರ್ವಸ್ವತಂತ್ರದ ಬೇಡಿಕೆ ಅಲ್ಲ ಇದು ಅಥವಾ ಆ ಕಲ್ಪನೆಯೂ ಅಲ್ಲ. ಈ ದೇಶ ಮತ್ತೊಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುವುದುರೊಳಗಾಗಿ ಎಷ್ಟೆಲ್ಲಾ ದುಃಖದ ಮಡುವಿನಲ್ಲಿ ಬಿದ್ದು ಮುಳುಗಿದೆ ? ಎಷ್ಟೆಲ್ಲಾ ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿವೆ ? ಎಂತಹ ಘೋರ ಘಟನೆಗಳು ಆಗಿ ಹೋಗಿವೆ ? ಕಾನೂನು ಎಷ್ಟು ಸುಧಾರಿಸಿದೆ ? ಎಷ್ಟು ಸತ್ಯ ಸಾಕ್ಷಿಗಳ ನಾಶವಾಗಿವೆ ? ಎಷ್ಟು ಸತ್ಯ ಶೋಧನೆಯ ವರದಿಗಳು ಸುಳ್ಳನ್ನು ಮೆರೆದಾಡಿಸಿವೆ ? 

ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶಕ್ಕೆ ಒಂದು ಕಪ್ಪು ಚುಕ್ಕೆ. ದೇಶದ ಕಾನೂನು ವ್ಯವಸ್ಥೆಗೆ ಒಂದು ದೊಡ್ಡ ಸವಾಲಾಗಿ ಕಂಡ ಪ್ರಕರಣವಿದು. ಸೌಜನ್ಯಳೆಂಬ ಒಬ್ಬ ಅಪ್ರಾಪ್ತ ಯುವತಿ ಅತ್ಯಂತ ಬೀಭತ್ಸವಾಗಿ ಅತ್ಯಚಾರವಾಗಿ ಕೊಲೆಯಾಗಿ ಬರೋಬ್ಬರಿ ಹನ್ನೊಂದು ವರ್ಷಗಳಾದರೂ ಅಪರಾಧಿಗಳು ಯಾರೆಂದು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಿಲ್ಲ. ಈಗ ಪರ, ವಿರೋಧ ಚರ್ಚೆಗಳಾಗುತ್ತಿವೆ. ಚರ್ಚೆಗಳು ಪ್ರಕರಣದ ದಿಕ್ಕನ್ನೇ ಬದಲಾಯಿಸುವ ಮಸಲತ್ತಿನಲ್ಲಿ ಇದ್ದಂತಿವೆ. ಈ ಪ್ರಕರಣ ಈ ದೇಶದ ಕಾನೂನು ವ್ಯವಸ್ಥೆಯ ಅವ್ಯವಸ್ಥೆಯನ್ನು ಬೆತ್ತಲು ಮಾಡಿದೆ. ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು, ಬೇಜವಾಬ್ದಾರಿಯನ್ನು, ಹೊಣೆಗೇಡಿತನವನ್ನು ಬಟಾಬಯಲುಗೊಳಿಸಿದೆ. ಈ ನೆಲದಲ್ಲಿ ಆಗಾಗ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಂತಹ ಪ್ರಕರಣಗಳು ಹಲವು ನಡೆದಿವೆ. ಇಂತಹ ನಾಚಿಕೆಗೇಡಿನ ಕೃತ್ಯಗಳು ನಡೆದಾಗಲೆಲ್ಲಾ ಈ ದೇಶ ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸಿದೆ. ಅಂದರೆ, ಈ ದೇಶದ ಕಾನೂನು ಸುಧಾರಣೆ ಆಗಬೇಕಿದೆ ಎನ್ನುವ ಅರ್ಥ, ಕಾನೂನು ಕಠಿಣವಾಗಿಲ್ಲ ಎಂದರ್ಥ. ತನಿಖೆ, ಕಾನೂನುಗಳು ಅಂತೆಲ್ಲಾ ಎಷ್ಟು ಪ್ರಕರಣಗಳು ದಶಕಗಳನ್ನು ಮೀರಿ ಹೋಗಿಲ್ಲ  ? ಕಾಲೇಜಿಗೆ ಹೋಗಿ ಬರ್ತೇನೆ ಅಂತ ಹೇಳಿ ಹೋದ ಒಬ್ಬ ಹೆಣ್ಣುಮಗಳು ಎಲ್ಲೋ ಕಾಡಿನಲ್ಲೋ, ಯಾವುದೋ ನದಿಯಲ್ಲೋ ಅಥವಾ ಇನ್ನೆಲ್ಲೋ ನಿಗೂಢವಾಗಿ ವಿವಸ್ತ್ರವಾಗಿ ಹೆಣವಾಗಿ ಸಿಗುತ್ತಾಳೆ ಎಂದರೆ ಏನಿದರ ಅರ್ಥ ? ಸಾಮಾಜಿಕ ಸುರಕ್ಷತೆ ಎಲ್ಲಿದೆ ? ಭದ್ರತೆ ಎಲ್ಲಿದೆ ? ಸೌಜನ್ಯಳಂತಹ ಅದೆಷ್ಟು ಹೆಣ್ಣು ಮಕ್ಕಳು ಹೀಗೆ ಆಗಿ ಹೋಗಿದ್ದಾರೆ ? ಸೌಜನ್ಯಳಂತಹ ಒಬ್ಬ ಹೆಣ್ಣು ಮಗಳಿಗೆ ಹನ್ನೊಂದು ವರ್ಷಗಳಾದರೂ ಇನ್ನೂ ನ್ಯಾಯ ದೊರಕಿಸಿ ಕೊಡುವುದಕ್ಕೆ ಸಾಧ್ಯವಾಗಿಲ್ಲ ಅಂತಾದರೇ, ನೊಂದ ಕುಟುಂಬದ ಕಣ್ಣೀರನ್ನು ಒರೆಸದೆ ಸ್ವಾತಂತ್ರ್ಯೋತ್ಸವವನ್ನು ಎಷ್ಟು ವಿಜೃಂಭಣೆಯಿಂದ ಆಚರಿಸಿದರೇನು ಫಲ ? 

ಸೌಜನ್ಯ ಪ್ರಕರಣ ಇಂದಿಗೂ ನಿಗೂಢ. ಒಬ್ಬ ಅಪ್ರಾಪ್ತ ಹುಡುಗಿಯ ಅತ್ಯಚಾರ, ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳೇ ಯಾರದ್ದೋ ಪ್ರತಿಷ್ಠೆ, ಘನತೆ, ಗೌರವಗಳಿಗೆ ಧಕ್ಕೆ ಬಾರದಂತೆ ನೋಡಿಕೊಂಡಿರುವುದು ಅತ್ಯಂತ ದೊಡ್ಡ ವಿಷಾದನೀಯ ಸಂಗತಿ. ಧರ್ಮಸ್ಥಳದಂತಹ ಒಂದು ಧಾರ್ಮಿಕ ಪವಿತ್ರ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂತಹದ್ದೊಂದು ಹೇಯ ಕೃತ್ಯ ನಡೆದಿದೆ ಎನ್ನುವುದೇ ದೊಡ್ಡ ದುರಂತಗಳಲ್ಲೊಂದು. ಪ್ರಕರಣ ನಡೆದು ಹನ್ನೊಂದು ವರ್ಷಗಳು ಕಳೆದು ಹೋದರೂ ಇಂದಿಗೂ ಅಪರಾಧಿ ಯಾರೆಂದು ಕಂಡುಹಿಡಿಯುವುದಕ್ಕೆ ಸಾಧ್ಯವಾಗಿಲ್ಲ. ಈ ಪ್ರಕರಣದ ಸುತ್ತಲೂ ನಡೆದ ಎಲ್ಲಾ ಹಂತದ ತನಿಖೆಗಳಲ್ಲಿ ಸಾಕಷ್ಟು ಅನುಮಾನಗಳಿವೆ. ಪ್ರಕರಣದ ಸಾಕ್ಷ್ಯನಾಶ ಉದ್ದೇಶಪೂರ್ವಕವೇ ಮಾಡಲಾಗಿದೆ ಎಂಬಂತೆ ಹಲವು ಕಡೆಗಳಲ್ಲಿ ಕಾಣಸಿಗುತ್ತದೆ. ನಾಡಿನ, ದೇಶದ ಹೆಣ್ಣು ಮಕ್ಕಳ ರಕ್ಷಣೆ ಮಾಡುತ್ತೇವೆ ಎಂದವರು, ಧರ್ಮದ ರಕ್ಷಣೆಗಾಗಿ ನ್ಯಾಯಕ್ಕಾಗಿ ಹೋರಾಟ ಎಂದು ಬೀದಿಗಿಳಿದವುರು, ಈ ನಾಡಿನ ಹೆಣ್ಣು ಮಕ್ಕಳ ಮೇಲೆ ಜಿಹಾದಿ ಶಕ್ತಿಗಳು ಕಣ್ಣಿಟ್ಟಿವೆ ಎಂದು ಸಮಾಜದ ಸಾಮರಸ್ಯಕ್ಕೆ ಬೆಂಕಿ ಹಚ್ಚಿ ದೊಂಬಿ ಎಬ್ಬಿಸಿದವರು ಈ ಪ್ರಕರಣವನ್ನೂ ಒಳಗೊಂಡು ಇಂತಹ ಹಲವು ಪ್ರಕರಣಗಳ ಬಗ್ಗೆ ದಿವ್ಯ ಮೌನ ವಹಿಸಿರುವುದನ್ನು ಈ ನಾಡು, ದೇಶ ಕಂಡಿದೆ. ಬೇಟಿ ಬಚಾವೋ  ಬೇಟಿ ಪಡಾವೋ ಎನ್ನುತ್ತಲೇ ಅಧಿಕಾರಕ್ಕೇರಿದವರು ಸೌಜನ್ಯ ಪ್ರಕರಣಗಳಂತಹುದರಲ್ಲಿ ರಾಜಕೀಯದಲ್ಲಿ ಪಾಲ್ಪಡೆದಿದ್ದಾರೆ. ಅಧಿಕಾರವಿರುವ ಸರ್ಕಾರ ತನಿಖೆಗೆ ಚುರುಕು ಮುಟ್ಟಿಸದೇ ಪ್ರಕರಣವನ್ನು ನಿರ್ಲಕ್ಷ್ಯದಿಂದ ಕಾಣುತ್ತಿದೆ. ಭಾಗ್ಯಗಳ ಮಾಲೆಯನ್ನೇ ಕೊಟ್ಟವರು ಈ ಪ್ರಕರಣಕ್ಕೆ ನ್ಯಾಯ ಭಾಗ್ಯ ಕೊಡುವ ಪ್ರಯತ್ನ ಮಾಡುವುದಕ್ಕೂ ಮೀನಮೇಷ ಎಣಿಸಿದಂತೆ ಕಾಣುತ್ತಿದೆ. ನಾವು ಮಾನವರಾಗುವುದಕ್ಕೆ ಪ್ರಯತ್ನವೂ ಪಡುತ್ತಿಲ್ಲ ಎನ್ನನುವುದಕ್ಕೆ ಇದೆ ಸಾಕ್ಷಿ. ಇನ್ನೇನನ್ನು ಹೇಳೋಣ, ಸೌಜನ್ಯಳ ಆಸೆಕಂಗಳ ಕನಸುಗಳು ಹೂವಾಗುವಷ್ಟರಲ್ಲೇ ಚಿವುಟಿದವರಿಗೆ ಅವರವರ ಆತ್ಮಸಾಕ್ಷಿಯೇ ಶಿಕ್ಷಿಸಲಿ.            

ಪ್ರಜಾಪ್ರಭುತ್ವದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಸೌಜನ್ಯ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಪ್ರಕರಣ. ಹೆಣ್ಣನ್ನು ಇಷ್ಟೊಂದು ನೀಚವಾಗಿ ಅತ್ಯಾಚಾರವೆಸಗಿ ಕೊಂದು ಪ್ರಕರಣದ ತನಿಖೆಯ ದಾರಿಯನ್ನೇ ತಪ್ಪಿಸಿ, ಯಾವನನ್ನೋ ಅಪರಾಧಿ ಎಂದು ಜೈಲಲ್ಲಿರಿಸಿ, ಸಾಕ್ಷಿಯೇ ಇಲ್ಲದೇ ಆತನನ್ನು ದೋಷಮುಕ್ತನೆಂದು ಬಿಡುಗಡೆಗೊಳಿಸಿದ್ದು, ಒಬ್ಬ ನಿರಪರಾಧಿಯನ್ನು ಜೈಲಲ್ಲಿರಿಸಿ ಆತ ಮತ್ತು ಆತನ ಕುಟುಂಬ ಮಾನಸಿಕವಾಗಿ ಈ ಸಮಾಜದಿಂದ ತೆಗಳಿಕೆಗೆ ಒಳಗಾಗುವಂತೆ ಮಾಡಿದ್ದೆಲ್ಲಾ ಕೂಡ ಈ ಸಮಾಜ ತಲೆತಗ್ಗಿಸುವಂತಹದ್ದಲ್ಲವೇ ?  ಇಂತಹದ್ದೆಲ್ಲಾ ನಡೆದಿರುವುದಕ್ಕೆ ಮತ್ತೆ ನಿರಂತರವಾಗಿ ನಡೆಯುತ್ತಿರುವುದನ್ನು ನೋಡಿಕೊಂಡು ನಾವು ನೈತಿಕ ಸಮಾಜದ ನಿರೀಕ್ಷೆ ಮಾಡುವುದಾದರೂ ಹೇಗೆ ? ನಾವಿನ್ನೂ ಮಾನವರಾಗುವ ಪ್ರಯತ್ನದ ಬಗ್ಗೆ ಯೋಚನೆ ಮಾಡುವುದಕ್ಕೂ ತಯಾರಿಲ್ಲ. 

ʼಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃʼ ಎಲ್ಲಿ ನಾರಿಯರನ್ನು ಗೌರವಿಸುತ್ತೇವೋ ಅಲ್ಲಿ ನಾವು ದೇವರ ಸಾನಿಧ್ಯವನ್ನು ನೋಡುತ್ತೇವೆ ಎಂಬುವುದನ್ನು ಶತಮಾನಗಳಿಂದ ಹೇಳುತ್ತಾ ಬಂದಿದ್ದೇವೆ. ಆದರೇ, ಇಲ್ಲಿ ನಡೆಯುತ್ತಿರುವುದೇ ಬೇರೆ. ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳ ತಾರ್ಕಿಕ ಮತ್ತು ತ್ವರಿತ ಇತ್ಯರ್ಥಕ್ಕೆ ವಿಶೇಷವಾದ ನ್ಯಾಯಾಲಯಗಳ ರಚನೆಯಾಗಬೇಕು. ಅತ್ಯಾಚಾರಿಗಳಿಗೆ ಉಗ್ರಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿ ಮಾಡಿ ಕಾನೂನು ಸುವ್ಯವಸ್ಥೆ ಮಾಡಿದ್ದಲ್ಲಿ, ತನಿಖಾ ಸಂಸ್ಥೆಗಳ ಮೇಲೆ ಜನ ಸಾಮಾನ್ಯರಲ್ಲಿ ವಿಶ್ವಾಸ ಮೂಡುವಂತಾದಲ್ಲಿ ಬಹುಶಃ ಒಬ್ಬ ಹೆಣ್ಣು ಮಗು ಭಯಮುಕ್ತಳಾಗಿ ಸಮಾಜದಲ್ಲಿ ಓಡಾಡುವುದಕ್ಕೆ ಸಾಧ್ಯವಾಗಬಹುದೇನೋ. ಮತ್ತು ನಾವು ನೀವು ಎಲ್ಲರೂ ಇನ್ನಾದರೂ ಮಾನವರಾಗುವ ಪ್ರಯತ್ನದತ್ತ ಗಮನ ಕೊಟ್ಟರೇ, ಸುಸ್ಥಿತಿಯ ನಾಳೆಗಳನ್ನು ಕಾಣಬಹುದೇನೋ.. ಏನಂತೀರಿ ? 

-ಶ್ರೀರಾಜ್‌ ವಕ್ವಾಡಿ  


No comments:

Post a Comment