Friday, June 5, 2026

ರಾಜ್ಯ ಬಿಜೆಪಿಯ ಹಿಂದಿರುವ ದಿಲ್ಲಿ ಮಾಸ್ಟರ್ ಮೈಂಡ್ ಗಳಿಗೆ ಕೌಂಟರ್ ಬಿ.ಕೆ ಹರಿಪ್ರಸಾದ್ !?


"ಅಧಿಕಾರ ಇರಲಿ, ಇಲ್ಲದಿರಲಿ, ಸಿದ್ಧಾಂತ ಮುಖ್ಯ" ಎಂಬ ನಿಲುವುಳ್ಳ ಹರಿಪ್ರಸಾದ್ ಅವರಿಗೆ  ಕಾಂಗ್ರೆಸ್ ಪಕ್ಷ ನೀಡಿದ ಈ ಜವಾಬ್ದಾರಿ, ನೆಹರೂವಾದಿ ಜಾತ್ಯತೀತತೆ ಮತ್ತು ಸಮಾಜವಾದಿ ತತ್ವಗಳನ್ನು ಕಾಂಗ್ರೆಸ್‌ನಲ್ಲಿ ಮರುಸ್ಥಾಪಿಸಲು ನೆರವಾಗಲಿದೆ. ಇನ್ನು, ಹರಿಪ್ರಸಾದ್ ದಶಕಗಳ ಕಾಲ ದೆಹಲಿ ರಾಜಕಾರಣದಲ್ಲಿದ್ದವರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಸಂಸದೀಯ ಹಾಗೂ ಸಾಂಸ್ಥಿಕ ತಂತ್ರಗಳನ್ನು ಹತ್ತಿರದಿಂದ ನೋಡಿದವರು. ರಾಜ್ಯ ಬಿಜೆಪಿಯ ಹಿಂದಿರುವ 'ದಿಲ್ಲಿ ಮಾಸ್ಟರ್ ಮೈಂಡ್'ಗಳಿಗೆ ಕೌಂಟರ್ ಕೊಡಲು ಹರಿಪ್ರಸಾದ್ ಸಮರ್ಥರು ಎನ್ನುವುದರಲ್ಲಿ ಸಂಶಯವಿಲ್ಲ.

ಭಾರತೀಯ ರಾಜಕಾರಣ ಹಿಂದೆಂದೂ ಕಾಣದಷ್ಟು ಬಲಪಂಥೀಯ ಕೋಮುವಾದಿ ಅಲೆಗೆ ಸಿಲುಕಿರುವ ಈ ಹೊತ್ತಿನಲ್ಲಿ, ಕಾಂಗ್ರೆಸ್‌ಗೆ ಕೇವಲ ಚುನಾವಣಾ ತಂತ್ರಗಾರರಲ್ಲ, ಬದಲಿಗೆ ರಾಜಿರಹಿತ ಸೈದ್ಧಾಂತಿಕ ಬದ್ಧತೆಯುಳ್ಳ ನಾಯಕರ ಅಗತ್ಯವಿದೆ. ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲೂ, ರಾಜ್ಯ ಮಟ್ಟದಲ್ಲೂ ಪಕ್ಷ ಸಂಘಟನೆಯ ವಿಷಯದಲ್ಲಿ ಪರದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಸ್ಥಾನದಲ್ಲಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕೂರಿಸಿದೆ‌. ಅವರಿಗೆ ಪಕ್ಷದ ಸಂಘಟನಾತ್ಮಕ ಜವಾಬ್ದಾರಿ ಸಿಕ್ಕಿರುವುದು ಕೇವಲ ಒಂದು ರಾಜಕೀಯ ಜವಾಬ್ದಾರಿಯಲ್ಲ, ಇದು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಪುನರುತ್ಥಾನದ ಮುನ್ನುಡಿ ಎಂದರೇ ತಪ್ಪಿಲ್ಲ. 

ಇವತ್ತಿನ ಬಹುಪಾಲು ಕಾಂಗ್ರೆಸ್ ನಾಯಕರು ಸಾಫ್ಟ್ ಹಿಂದುತ್ವ (Soft Hindutva) ಅಥವಾ ತಟಸ್ಥ ನಿಲುವುಗಳ ಮೂಲಕ ಬಹುಸಂಖ್ಯಾತ ಮತಬ್ಯಾಂಕ್ ಓಲೈಸಲು ಹೆಣಗಾಡುತ್ತಿದ್ದಾರೆ. ಆದರೆ, ಬಿ.ಕೆ. ಹರಿಪ್ರಸಾದ್ ಈ ಧೋರಣೆಗೆ ವಿರುದ್ಧವಾಗಿ ನಿಲ್ಲುವವರು. ನೆಹರೂ ಆಡಳಿತದ ಪ್ರಬಲ ಸಮರ್ಥಕರಾಗಿ, ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ, ಪಕ್ಷದ ಸಿದ್ಧಾಂತಗಳಿಗೆ ನಿಷ್ಠೆಯಿಂದ, ಗಾಂಧಿ ಕುಟುಂಬಕ್ಕೆ ವಿದೇಯರಾಗಿದ್ದುಕೊಂಡು ಪ್ರಗತಿಪರ ಚಿಂತನೆಯ ಮೂಲಕ ಸಮಸಮಾಜವನ್ನು ನೋಡುವ ಹರಿಪ್ರಸಾದ್ ಪಕ್ಷ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ತರಬಲ್ಲರು ಎನ್ನುವ ನಿರೀಕ್ಷೆ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿದೆ.  

ಸಂಘ ಪರಿವಾರ ಮತ್ತು ಬಿಜೆಪಿಯ ಕೋಮುವಾದಿ ಅಜೆಂಡಾವನ್ನು ಯಾವುದೇ ಮುಲಾಜಿಲ್ಲದೆ, ನೇರ ನುಡಿಗಳಲ್ಲಿ ಟೀಕಿಸುವ ಕೆಲವೇ ಕೆಲವು ನಾಯಕರಲ್ಲಿ ಹರಿಪ್ರಸಾದ್ ಮುಂಚೂಣಿಯಲ್ಲಿದ್ದಾರೆ. ಅವರ ಈ ರಾಜಿರಹಿತ ಜಾತ್ಯತೀತ ನಿಲುವು, ರಾಜ್ಯದ ಸಮಸಮಾಜ ಚಿಂತನೆಯ ಮತ್ತು ಪ್ರಗತಿಪರ ಶಕ್ತಿಗಳು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲು ಒಂದು ಭದ್ರವಾದ ಸೇತುವೆಯಾಗಬಲ್ಲರು ಎನ್ನುವುದರಲ್ಲಿ ಸಂಶಯವಿಲ್ಲ. 

ಕಾಂಗ್ರೆಸ್ ಪಕ್ಷದ ದುರಿತ ಕಾಲದಲ್ಲಿ ಸಿಕ್ಕ ಸೈದ್ಧಾಂತಿಕ ಬಲ : 

ಕಾಂಗ್ರೆಸ್ ಸದ್ಯ ಅಧಿಕಾರ ಮತ್ತು ಅಸ್ತಿತ್ವದ ಹೋರಾಟದಲ್ಲಿದೆ. ಇಂತಹ "ದುರಿತ ಕಾಲ"ದಲ್ಲಿ ಪಕ್ಷಕ್ಕೆ ಬೇಕಿರುವುದು ಚುನಾವಣಾ ಗಿಮಿಕ್‌ಗಳಲ್ಲ, ಬದಲಿಗೆ ಕಾರ್ಯಕರ್ತರಲ್ಲಿ ಸೈದ್ಧಾಂತಿಕ ಸ್ಪಷ್ಟತೆ ತುಂಬುವ ನಾಯಕತ್ವ. "ಅಧಿಕಾರ ಇರಲಿ, ಇಲ್ಲದಿರಲಿ, ಸಿದ್ಧಾಂತ ಮುಖ್ಯ" ಎಂಬ ನಿಲುವುಳ್ಳ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಪಕ್ಷ ನೀಡಿದ ಈ ಜವಾಬ್ದಾರಿ, ನೆಹರೂವಾದಿ ಜಾತ್ಯತೀತತೆ ಮತ್ತು ಸಮಾಜವಾದಿ ತತ್ವಗಳನ್ನು ಕಾಂಗ್ರೆಸ್‌ನಲ್ಲಿ ಮರುಸ್ಥಾಪಿಸಲು ನೆರವಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. "ಪ್ರತಿರೋಧದ ರಾಜಕಾರಣ"ಕ್ಕೆ ಪ್ರಾಥಮಿಕವಾಗಿ ಇದು ಕರ್ನಾಟಕದ ಮಟ್ಟಿಗೆ ಹೊಸ ಚೈತನ್ಯ ನೀಡಿ, ಮುಂದೆ ರಾಷ್ಟ್ರೀಯ ಮಟ್ಟಕ್ಕೆ ಮಾದರಿಯಾಗಬಹುದು. 

ಇನ್ನು, ವಿದ್ಯಾರ್ಥಿ ದೆಸೆಯಿಂದಲೇ ಪಕ್ಷ ಕಟ್ಟಿದ ಹರಿಪ್ರಸಾದ್ ಅವರಿಗೆ ದೇಶದ ಮೂಲೆ ಮೂಲೆಗಳ ರಾಜಕೀಯ ನಾಡಿಮಿಡಿತ ಗೊತ್ತಿದೆ. ರಾಜ್ಯಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ಅವರು ಸಂಸತ್ತಿನಲ್ಲಿ ತೋರಿದ ಆಕ್ರಮಣಕಾರಿ ಶೈಲಿ ಶ್ಲಾಘನೀಯ. ಈಗ ಅವರಿಗೆ ಸಿಕ್ಕಿರುವ ಸಾಂಘಿಕ ಜವಾಬ್ದಾರಿ, ಪಕ್ಷದ ಸಡಿಲಗೊಂಡಿರುವ ತಳಪಾಯವನ್ನು ಭದ್ರಪಡಿಸಲು ಸಹಕಾರಿಯಾಗಲಿದೆ. 

ಬಿಜೆಪಿಗೆ ಸಿದ್ದರಾಮಯ್ಯರಿಗಿಂತಲೂ ದೊಡ್ಡ ಸವಾಲಾಗಬಲ್ಲರೇ ಬಿ.ಕೆ. ಹರಿಪ್ರಸಾದ್?

ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ ಎಂದರೆ ಸಮಾಜವಾದಿ ಹಿನ್ನೆಲೆಯ, ಜನಸಾಮಾನ್ಯರ ನಾಡಿಮಿಡಿತ ಬಲ್ಲ ಮಾಸ್ ಲೀಡರ್ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಇವತ್ತಿನ ಆಕ್ರಮಣಕಾರಿ, ಸೈದ್ಧಾಂತಿಕ ಮತ್ತು ಸಾಂಸ್ಥಿಕ ಶಕ್ತಿಯನ್ನು ವೃದ್ಧಿಸಿಕೊಂಡಿರುವ ಬಿಜೆಪಿಯನ್ನು ಎದುರಿಸಲು ಕೇವಲ ಜನಪ್ರಿಯತೆ (Populism) ಸಾಕಾಗುವುದಿಲ್ಲ, ಅಲ್ಲಿ ಬೇಕಿರುವುದು ರಾಜಿರಹಿತ ಸೈದ್ಧಾಂತಿಕ ಕಠಿಣತೆ ಮತ್ತು ದೆಹಲಿ ಮಟ್ಟದ ತಂತ್ರಗಾರಿಕೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ, ಬಿ.ಕೆ. ಹರಿಪ್ರಸಾದ್ ಅವರು ರಾಜ್ಯ ಬಿಜೆಪಿಗೆ ಸಿದ್ದರಾಮಯ್ಯ ಅವರಿಗಿಂತಲೂ ದೊಡ್ಡ ಸವಾಲಾಗಿ ಪರಿಣಮಿಸುತ್ತಾರೆ ಎಂಬ ವಿಶ್ಲೇಷಣೆಯನ್ನು ತಳ್ಳಿಹಾಕುವಂತಿಲ್ಲ. ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವ, ರಾಜಕೀಯ ಠೀವಿ ಬೇರೆಯಾದರೇ, ಹರಿಪ್ರಸಾದ್ ಅವರ ರಾಜಕೀಯ ಶೈಲಿಯೇ ಬೇರೆ. ಸಿದ್ದರಾಮಯ್ಯ ಅವರನ್ನು ಆಡಳಿತದಲ್ಲಿ ಸೋಲಿಸಲು ಬಿಜೆಪಿಗೆ ಸವಾಲಾಗಿತ್ತು. ಈಗ ಬಿ.ಕೆ ಹರಿಪ್ರಸಾದ್ ಅವರ ಪ್ರಬಲ ಪ್ರತಿರೋಧದ ಧ್ವನಿ ಮತ್ತು ಸಂಘಟನೆಯ ಚತುರತೆ ಬಿಜೆಪಿಗೆ ಇನ್ನೂ ದೊಡ್ಡ ಸವಾಲಾಗಿ ಎದುರಾಗಬಹುದು. 

ಹರಿಪ್ರಸಾದ್ ಅವರು ಬಿಜೆಪಿಯ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್‌ನ ಸೈದ್ಧಾಂತಿಕ ಬೇರುಗಳನ್ನೇ ನೇರವಾಗಿ ಪ್ರಶ್ನಿಸುತ್ತಾರೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ಧ್ರುವೀಕರಣವನ್ನು ಅವರು ಸಂವಿಧಾನದ ಚೌಕಟ್ಟಿನಲ್ಲೇ ನಿಂತು ಬೆತ್ತಲೆಗೊಳಿಸುವುದರಿಂದ, ಬಿಜೆಪಿಗೆ ಇವರನ್ನು ಎದುರಿಸುವುದು ಸೈದ್ಧಾಂತಿಕವಾಗಿ ದಿಗಿಲು ಮೂಡಿಸುವ ವಿಷಯವಾಗಿದೆ. 

ಇನ್ನು, ಹರಿಪ್ರಸಾದ್ ದಶಕಗಳ ಕಾಲ ದೆಹಲಿ ರಾಜಕಾರಣದಲ್ಲಿದ್ದವರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಸಂಸದೀಯ ಹಾಗೂ ಸಾಂಸ್ಥಿಕ ತಂತ್ರಗಳನ್ನು ಹತ್ತಿರದಿಂದ ನೋಡಿದವರು. ದೇಶದ ವಿವಿಧ ರಾಜ್ಯಗಳಲ್ಲಿ ಎಡರಂಗ ಸೇರಿದಂತೆ ಮೈತ್ರಿಕೂಟದ ಪಕ್ಷಗಳನ್ನು ಒಗ್ಗೂಡಿಸಿದ ಅನುಭವ ಇವರಿಗಿದೆ. ಹೀಗಾಗಿ, ರಾಜ್ಯ ಬಿಜೆಪಿಯ ಹಿಂದಿರುವ 'ದಿಲ್ಲಿ ಮಾಸ್ಟರ್ ಮೈಂಡ್'ಗಳಿಗೆ ಕೌಂಟರ್ ಕೊಡಲು ಹರಿಪ್ರಸಾದ್ ಸಮರ್ಥರು ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಅಧಿಕಾರದ ರಾಜಕಾರಣ ಮತ್ತು ಆಡಳಿತಾತ್ಮಕ ಒತ್ತಡಗಳಿಂದಾಗಿ ಕೆಲವು ಸೈದ್ಧಾಂತಿಕ ರಾಜಿಗಳನ್ನು ಮಾಡಿಕೊಳ್ಳಬೇಕಾಗಿ ಬಂದಿತ್ತು. 

ಆದರೆ, ಹರಿಪ್ರಸಾದ್ ಸದ್ಯ ಯಾವುದೇ ಅಧಿಕಾರದ ಆಸೆಗೆ ಬಿದ್ದವರಲ್ಲ. ಅಧಿಕಾರವಿಲ್ಲದಿದ್ದರೂ ತಳಮಟ್ಟದ ದಲಿತ, ಶೋಷಿತ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಬಿಜೆಪಿಯ 'ಒಬಿಸಿ ಕಾರ್ಡ್ (OBC Card)' ಅನ್ನು ಸೈದ್ಧಾಂತಿಕವಾಗಿ ಸೋಲಿಸುವ ಶಕ್ತಿ ಅವರ ಸಮಾಜವಾದಿ ನಿಲುವುಗಳಿಗಿದೆ.

ಬಿ.ಕೆ ಹರಿಪ್ರಸಾದ್ ಮಾಧ್ಯಮಗಳಿಗೂ ಸವಾಲು !? 

ಬಿಜೆಪಿಯ ಸೈದ್ಧಾಂತಿಕ ರಾಜಕಾರಣದ ವಿರುದ್ಧ ಆಕ್ರಮಣಕಾರಿ ಧ್ವನಿ ಎತ್ತಲು ಶುರು ಮಾಡಿದರೋ, ಆಗಿನಿಂದಲೇ ಕನ್ನಡದ ಪ್ರಮುಖ ಮುಖ್ಯವಾಹಿನಿ ಮಾಧ್ಯಮಗಳು (Mainstream Media) ಅವರನ್ನು ಗುರಿ ಮಾಡುತ್ತ ಬಂದಿವೆ. ಇದನ್ನು ಸರಿಯಾಗಿ ಗುರುತಿಸಿರುವ ಹರಿಪ್ರಸಾದ್, ಇತ್ತೀಚೆಗೆ ಕನ್ನಡ ಮಾಧ್ಯಮಗಳ ಪಕ್ಷಪಾತ ಧೋರಣೆಯ ವಿರುದ್ಧ ಕಟು ಶಬ್ದಗಳಲ್ಲಿ ಎಚ್ಚರಿಸಿದ್ದರು. ಇದು ಕೇವಲ ಎಚ್ಚರಿಕೆ ಅಲ್ಲ, ಬದಲಿಗೆ ಇದು "ಗೋದಿ ಮೀಡಿಯಾ" (Godi Media) ಸಂಸ್ಕೃತಿಯ ವಿರುದ್ಧದ ಸೈದ್ಧಾಂತಿಕ ಯುದ್ಧ. 

ಇವತ್ತಿನ ಬಹುಪಾಲು ಕನ್ನಡ ದೃಶ್ಯ ಮಾಧ್ಯಮಗಳು ಮತ್ತು ಪತ್ರಿಕೆಗಳು ಬಂಡವಾಳಶಾಹಿಗಳ ಹಾಗೂ ಬಲಪಂಥೀಯ ಸಿದ್ಧಾಂತದ ಹಿತಾಸಕ್ತಿ ಕಾಯುವ ಸಾಧನಗಳಾಗಿವೆ ಎನ್ನುವುದು ಕಾಂಗ್ರೆಸ್ ನ ಗಂಭೀರ ಆರೋಪ. 

ಜನಸಾಮಾನ್ಯರ ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳಿಗಿಂತ ಧರ್ಮ, ಕೋಮು ಧ್ರುವೀಕರಣ ಮತ್ತು ನಕಲಿ ರಾಷ್ಟ್ರೀಯತೆಯ ವಿಷಯಗಳನ್ನೇ ಇಟ್ಟುಕೊಂಡು ಟಿಆರ್‌ಪಿ (TRP) ಹಿಂದೆ ಓಡುವ ಮಾಧ್ಯಮಗಳಿಗೆ ಹರಿಪ್ರಸಾದ್ ನೇರವಾಗಿಯೇ ಕನ್ನಡಿಯಾಗಬಲ್ಲರು. 

ಮಾಧ್ಯಮಗಳು ಕಾರ್ಪೊರೇಟ್‌ಗಳ ಮತ್ತು ಕೋಮುವಾದಿಗಳ ಕೈಗೊಂಬೆಯಾಗುವುದನ್ನು ನಿಲ್ಲಿಸಿ, ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ನಿಲ್ಲದಿದ್ದರೆ ತಮ್ಮ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತವೆ ಎಂಬ ಕಟು ಸತ್ಯದ ಮನವರಿಕೆಯನ್ನು ಮಾಧ್ಯಮಗಳ ಕೆಲವು/ಬಹುತೇಕ ಸೋ ಕಾಲ್ಡ್ ವರದಿಗಾರರಿಗೆ ತಮ್ಮ ಪ್ರತಿಕ್ರಿಯೆಯ ಮೂಲಕವೇ ಮಾಡಬಹುದು. 

ಹರಿಪ್ರಸಾದ್ ಮುಂದಿರುವ ಸವಾಲುಗಳೇನು !? 

ಪಕ್ಷ ಮತ್ತು ಪಕ್ಷದ ವಿಚಾರದಲ್ಲಿ ರಾಜಿ ಇಲ್ಲದ ನಿಲುವು ಹರಿಪ್ರಸಾದ್ ಅವರದ್ದು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಹರಿಪ್ರಸಾದ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಅಹಿಂದ ಸಮಾವೇಶಗಳಲ್ಲಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೊಂದಿಗೆ ಈ ಹಿಂದಿನಿಂದಲೂ ಸಂಬಂಧ ಅಷ್ಟಕ್ಕಷ್ಟೇ ಎನ್ನುವುದು ಜಗಜ್ಜಾಹೀರು. ಕೆಪಿಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಬಿ.ಕೆ. ಹರಿಪ್ರಸಾದ್, "ಅಧಿಕಾರ ಬೇಕಾದವರು ಡಿಕೆಶಿ ಹಿಂದೆ ಹೋಗಿ, ಪಕ್ಷ ಬೆಳೆಸುವವರು ನನ್ನ ಜೊತೆ ಬನ್ನಿ" ಎಂದು ಖಡಕ್ ಹೇಳಿಕೆ ನೀಡಿ ಗಮನ ಸೆಳೆದಿದ್ದರು. ಇದು ಡಿಕೆಶಿಗೆ ಪರೋಕ್ಷ ಎಚ್ಚರಿಕೆಯೂ ಹೌದು. 

ಇನ್ನು, ಅವರು ಬಿಜೆಪಿ, ಮೋದಿ ವಿರುದ್ಧ ತೀವ್ರ ಸೈದ್ಧಾಂತಿಕ ವಾಗ್ದಾಳಿ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ಅವರಾಡಿದ ಮಾತುಗಳು ಬಿಜೆಪಿಗೆ ಅಸ್ತ್ರವಾಗಿದೆ. ಈ ಎಲ್ಲಾ ಸೂಕ್ಷ್ಮ ವಿಷಯಗಳ ಬಗ್ಗೆ ಎಚ್ಚರದಿಂದಲೇ ಹರಿಪ್ರಸಾದ್ ನಡೆದುಕೊಳ್ಳಬೇಕಿದೆ. 

ಸರ್ಕಾರ ಮತ್ತು ಸಂಘಟನೆಯ ನಡುವೆ ಸಮನ್ವಯ ಸಾಧಿಸಬೇಕಿದೆ. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಭಿನ್ನಮತ ಮತ್ತು ಬಣ ರಾಜಕಾರಣದ ಶಮನ ಮಾಡಬೇಕಿದೆ. ತಳಮಟ್ಟದಲ್ಲಿ ಸೈದ್ಧಾಂತಿಕ ಕೇಡರ್ (Cadre) ಶಕ್ತಿಯನ್ನು ಮರುಸ್ಥಾಪಿಸಬೇಕಿದೆ. ವಿರೋಧ ಪಕ್ಷಗಳ ಸಾಂಸ್ಥಿಕ ಹೋರಾಟಕ್ಕೆ ತೀಕ್ಷ್ಣ ಹಾಗೂ ಸೈದ್ಧಾಂತಿಕ ಪ್ರತಿಕ್ರಿಯೆ ನೀಡುವ ದೊಡ್ಡ ಸವಾಲಿನ ಜೊತೆಗೆ 2028ರ ಚುನಾವಣೆಗೂ ತಯಾರಿ ಮಾಡಿಕೊಳ್ಳಬೇಕಿದೆ. ತಮ್ಮ ವೈಯಕ್ತಿಕ ಖಡಕ್ ನಿಲುವುಗಳು ಪಕ್ಷಕ್ಕೆ ಮುಜುಗರ ತರದಂತೆ ನೋಡಿಕೊಳ್ಳುತ್ತಲೇ, ವಿರೋಧ ಪಕ್ಷಗಳ ಸೈದ್ಧಾಂತಿಕ ದಾಳಿಗೆ ಕೌಂಟರ್ ಕೊಡಬೇಕಿದೆ. 

ಒಟ್ಟಿನಲ್ಲಿ, ವಿರೋಧಿಗಳ ವೈಯಕ್ತಿಕ ದಾಳಿ ಮತ್ತು ಆಂತರಿಕ ಭಿನ್ನಮತವನ್ನು ಬದಿಗೊತ್ತಿ, ಅವರು ತಳಮಟ್ಟದಲ್ಲಿ ಸೈದ್ಧಾಂತಿಕ ಕೇಡರ್ ಕಟ್ಟಲು ಯಶಸ್ವಿಯಾದರೆ, ಅವರು ಕೇವಲ ಬಿಜೆಪಿಗೆ ಮಾತ್ರವಲ್ಲ, ಇಡೀ ಬಲಪಂಥೀಯ ಅಜೆಂಡಾಕ್ಕೆ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಸವಾಲಾಗಲಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. 

-ಶ್ರೀರಾಜ್ ವಕ್ವಾಡಿ

No comments:

Post a Comment