Thursday, February 20, 2025

ಇನ್ನೂ ಬಗೆಹರಿಯದ ʼಕೈʼ ನೋವು !

 

ರಾಜ್ಯ ಕಾಂಗ್ರೆಸ್‌ ರಾಜಕೀಯ ಅನಿಶ್ಚಯತೆ | ಹೈಕಮಾಂಡ್‌ಗೆ ಸಂಕಟ

ರಾಜ್ಯ ಕಾಂಗ್ರೆಸ್‌ನಲ್ಲಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಪದೆ ಪದೆ ಸ್ಪಾಟ್‌ಲೈಟ್‌ ಆಗುತ್ತಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಹೊಸ ಚರ್ಚೆಯನ್ನು ಎಬ್ಬಿಸಿದ್ದು ಯಾರೆ ಆದರೂ, ಚರ್ಚೆಯ ವಿಷಯ ಡಿ.ಕೆ. ಶಿವಕುಮಾರ್‌. ಇನ್ನು, ಈಗ ಕಾಂಗ್ರೆಸ್ ಸರ್ಕಾರದಲ್ಲಿ ಚರ್ಚೆಗಳೆಲ್ಲವೂ ಹೈಕಮಾಂಡ್‌ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿರುವುದು ಕೂಡ ಅದೊಂಥರ ನಿಗೂಢ ಹಾಗೂ ಜಾಣ ನಡೆಯಂತೆಯೇ ಕಾಣಿಸುತ್ತಿದೆ. 

ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುವುದು ಬೇಡ ಎಂದು ಸ್ವತಃ ಡಿ.ಕೆ. ಶಿವಕುಮಾರ್‌ ಮಾಧ್ಯಮ ಹೇಳಿಕೆ ನೀಡಿರುವುದರ ಹಿಂದೆ ಬಲವಾದ ಕಾರಣಗಳಿರಬಹುದು. ಸಿಎಂ ಸಿದ್ದರಾಮಯ್ಯ ನಮ್ಮ ಪಕ್ಷದ ಲೀಡರ್‌ ಹಾಗೂ ಪ್ರಶ್ನಾತೀತ ನಾಯಕ ಎಂದು ಡಿಕೆಶಿ ಮೇಲ್ನೋಟಕ್ಕೆ ಹೇಳಿರುವುದಾದರೂ ಪಕ್ಷದೊಳಗೆ ತನ್ನನ್ನು ಟಾರ್ಗೇಟ್‌ ಮಾಡುತ್ತಿರುವವರ ವಿರುದ್ಧ ಡಿಕೆಶಿ ಒಂದು ಕಣ್ಣಿಟ್ಟಿದ್ದಾರೆ ಎನ್ನುವುದು ಸತ್ಯ. ರಾಜ್ಯ ಕಾಂಗ್ರೆಸ್‌ ವಿಚಾರದಲ್ಲಿ ಡಿಕೆಶಿ ಪವರ್‌ ಬಗ್ಗೆ ಹೈಕಮಾಂಡ್‌ ಗೆ ಚೆನ್ನಾಗಿಯೇ ಗೊತ್ತಿದೆ. ಉಳಿದ ನಾಯಕರು ಎಷ್ಟೇ ಹೈಕಮಾಂಡ್‌ ಗೆ ಒತ್ತಾಯ ತಂದರೂ ತಮ್ಮ ಸ್ಥಾನಕ್ಕೆ ಏನೂ ಸಮಸ್ಯೆಯಾಗುವುದಿಲ್ಲ ಎನ್ನುವುದರ ಬಗ್ಗೆ ಡಿಕೆಶಿಗೆ ನಂಬಿಕೆ ಇದೆ. ಡಿಕೆಶಿ ಅವರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವವರಿಗೆ ಡಿಕೆಶಿ ಹೈಕಮಾಂಡ್‌ ಮುಂದೆ ಏನು ಬೇಡಿಕೆ ಇಟ್ಟಿದ್ದಾರೆ ಎನ್ನುವುದರ ಬಗ್ಗೆ ಅರಿವು ಇಲ್ಲ ಎಂದೇ ಕಾಣಿಸುತ್ತಿದೆ. ʼಕೆಪಿಸಿಸಿ ಅಧ್ಯಕ್ಷ ಸ್ಥಾನ ನಾನು ಬಿಟ್ಟುಕೊಡುತ್ತೇನೆ. ಮುಖ್ಯಮಂತ್ರಿ ಸ್ಥಾನ ನೀಡಿʼ ಎಂದು ಡಿಕೆಶಿ ಬೇಡಿಕೆ ಇಟ್ಟಿದ್ದರೆ ಹೈಕಮಾಂಡ್‌ ಆ ಬೇಡಿಕೆಯನ್ನು ಪೂರೈಸುತ್ತದೆಯೇ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಅವರನ್ನು ಕೆಳಗಿಳಿಸುವುದಕ್ಕೆ ಪ್ರಯತ್ನಿಸುತ್ತಿರುವ ನಾಯಕರು ಡಿಕೆಶಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಸ್ವೀಕರಿಸಲು ತಯಾರಿದ್ದಾರೆಯೇ ಎನ್ನುವುದು ಈಗಿರುವ ಪ್ರಮುಖ ಪ್ರಶ್ನೆಗಳು.

ಕೆಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಹಂತ ಹಂತವಾಗಿ ಬದಲಾವಣೆ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಎಐಸಿಸಿ ಅಧ್ಯಕ್ಷರು ನೀಡಿರುವ ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ತಾವು ಅಂದುಕೊಂಡಂತೆ ಎಲ್ಲವೂ ಆಗಿ ಬಿಡುತ್ತದೆ ಎಂದು ಕನಸು ಕಾಣುತ್ತಿರುವ ಕೆಲ ಕಾಂಗ್ರೆಸ್‌ ನಾಯಕರಿಗೆ, ಮುಂದಿನ ಪರಿಣಾಮದ ಬಗ್ಗೆ ಅರಿವಿಲ್ಲ ಎಂದೇ ಕಾಣಿಸುತ್ತಿದೆ. ರಾಜ್ಯದ ಜನ ಕಾಂಗ್ರೆಸ್‌ ಗೆ ಅಧಿಕಾರ ನೀಡಿರುವಾಗ, ಒಳ್ಳೆಯ ಆಡಳಿತ ನೀಡುವುದನ್ನು ಬಿಟ್ಟು, ಆಂತರಿಕ ವೈಷಮ್ಯ ಕಾರುತ್ತಿರುವುದು ರಾಜ್ಯ ಕಾಂಗ್ರೆಸ್‌ನ ಕೆಲ ಸಚಿವರ ಸಣ್ಣತನಕ್ಕೆ ಹಿಡಿದ ಕನ್ನಡಿ.

ಒಂದೆಡೆ ದಕ್ಷಿಣ ಭಾರತದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಬಲವಾಗಿ ಅಸ್ತಿತ್ವ ಕಂಡುಕೊಂಡಿದೆ. ಇನ್ನೊಂದೆಡೆ ಉತ್ತರ ಭಾರತದಲ್ಲಿ ಬಹುತೇಕ ಎಲ್ಲಾ ಕಡೆ ಕಾಂಗ್ರೆಸ್‌ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಹಾಗೆ ನೋಡುವುದಾದರೇ ದಿನೇ ದಿನೇ ಇಡೀ ದೇಶದಲ್ಲಿ ಕಾಂಗ್ರೆಸ್‌ ತನ್ನ ವಿಶ್ವಾಸ ಕಳೆದುಕೊಳ್ಳುತ್ತಿದೆ. ಅಧಿಕಾರ ಇರುವ ರಾಜ್ಯಗಳಲ್ಲಿಯೂ ಇಂತಹ ಸಮಸ್ಯೆಗಳಿಂದಲೇ ಬಳಲಿದರೆ ಮುಂದಿನ ಪರಿಣಾಮ ಬಹಳ ಆಘಾತಕಾರಿಯಾಗಿರಲಿದೆ ಎನ್ನುವುದನ್ನು ಕಾಂಗ್ರೆಸ್‌ ಮರೆತು ವರ್ತಿಸಿದಂತಿದೆ.  

ಇಂತಹ ವಿಷಮ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯದ ಕಾಂಗ್ರೆಸ್‌ನ ಆಂತರಿಕ ವೈಷಮ್ಯ ಬೆಳವಣಿಗೆಗೆ ಮಹತ್ವ ಕೊಟ್ಟು ಹೈಕಮಾಂಡ್‌ ತುರ್ತಾಗಿ ಯಾವುದೇ ತೀರ್ಮಾನ ಕೈಗೊಂಡರೂ ಅದರಿಂದ ಪಕ್ಷಕ್ಕೆ ತೀವ್ರ ಸ್ವರೂಪದ ಧಕ್ಕೆ ಉಂಟಾಗಲಿದೆ ಎನ್ನುವುದಂತೂ ಸತ್ಯ. ಈ ಆಂತರಿಕ ವೈಷಮ್ಯದಿಂದ ಪಕ್ಷಕ್ಕಾಗುವ ಹಾನಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ನ ವರಿಷ್ಠರು ಗೌಪ್ಯವಾಗಿಯೇ ಮನವರಿಕೆ ಮಾಡಿಕೊಟ್ಟಂತಿದೆ. ಹಾಗಾಗಿಯೇ ಸಿಎಂ ಸಿದ್ದರಾಮಯ್ಯ ಅವರಿರಲಿ ಅಥವಾ ಡಿಸಿಎಂ ಡಿ.ಕೆ ಶಿವಕುಮಾರ್‌ ಇರಲಿ ಇಬ್ಬರೂ ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲು ಮುಂದಾಗುತ್ತಿಲ್ಲ.  

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಕೆ.ಸಿ. ವೇಣುಗೋಪಾಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಡಿ.ಕೆ.ಶಿವಕುಮಾರ್ ಪರ ಒಲವು ಹೊಂದಿದ್ದಾರೆ. ಸೋನಿಯಾ ಗಾಂಧಿಗೆ ಡಿಕೆಶಿ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದರೂ ಅದನ್ನು ನೇರವಾಗಿ ವ್ಯಕ್ತಪಡಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ರಾಹುಲ್‌ ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಅನುಭವ ಹಾಗೂ ಡಿಕೆಶಿ ಅವರ ಸಂಘಟನಾ ಶಕ್ತಿಯ ಬಗ್ಗೆ ಅರಿವಿದೆ. ಹಾಗಾಗಿ ಅವರ ನಿಲುವು ಯಾರ ಪರವಿದೆ ಎನ್ನುವುದು ಇನ್ನೂ ನಿಗೂಢ. 

ಬರುವ ಮೇ ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಪೂರ್ಣಗೊಳ್ಳಲಿದೆ. ಈ ಹಂತದಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಈ ಚರ್ಚೆಗಳು ಮೇಲೆದ್ದಿದ್ದು, ಹೈಕಮಾಂಡ್‌ ಗೆ ಸೂಕ್ಷ್ಮ ಎಚ್ಚರಿಕೆ ಎಂದೇ ಹೇಳಬಹುದು. ಅತೃಪ್ತ ಹಿರಿಯ ನಾಯಕರಿಗೆ ಸಚಿವ ಸ್ಥಾನವನ್ನು ನೀಡುವ ಸಲುವಾಗಿ ಸಂಪುಟ ಪುನರಚನೆ ಅಗತ್ಯ ಎನ್ನುವ ಅಭಿಪ್ರಾಯವೂ ಈ ನಡುವೆಯೇ ಕೇಳಿ ಬಂದಿದೆ. ಇನ್ನೊಂದೆಡೆ ಮಾರ್ಚ್ 7 ರಂದು, 2025-2026ನೇ ಸಾಲಿನ ಆಯವ್ಯಯ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

 ನಡುವೆ ಸಚಿವ ಸತೀಶ್‌ ಜಾರಕೀಹೊಳಿ, ನಾವು ಡಿಕೆಶಿ ಅವರನ್ನು ಕೆಪಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದಕ್ಕೆ ಹಠ ಹಿಡಿದಿಲ್ಲ. ಅವರಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವಂತೆ ವಿನಂತಿ ಮಾಡಿಕೊಂಡಿದ್ದೇವೆ ಎಂದು ಹೇಳಿಕೆ ನೀಡಿರುವುದು ಗಮನಿಸಿದರೆ, ಸಿಎಂ ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೂ ಮೌನ ವಹಿಸುವಂತೆ ಹೇಳಿದ್ದಾರೆಂದೆ ಕಾಣಿಸುತ್ತಿದೆ. ಇನ್ನೊಂದೆಡೆ ಬಹಿರಂಗವಾಗಿ ತೋರಿಸಿಕೊಳ್ಳದೇ ತಮ್ಮ ತಂತ್ರಗಳನ್ನು ಗೌಪ್ಯವಾಗಿಯೇ ಮುಂದುವರಸಿರುವ ಶಿವಕುಮಾರ್, ಸಹೋದರ ಡಿ.ಕೆ ಸುರೇಶ್‌ ಅವರನ್ನು ಪ್ರತಿರೋಧ ವ್ಯಕ್ತಪಡಿಸುವಂತೆ ಬಿಟ್ಟಿರುವಂತಿದೆ.

ಆದಾಗ್ಯೂ ಬಹಿರಂಗವಾಗಿ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುವುದನ್ನು ಜಾರಿಯಲ್ಲಿರಿಸಿಕೊಂಡರೆ, ಪಕ್ಷದಲ್ಲಿ ಮೂಲೆ ಗುಂಪಾಗುವ ಸಾಧ್ಯತೆಗಳಿವೆ. ಹಾಗಾಗಿ ಸಿಕ್ಕ ಅಧಿಕಾರವನ್ನು ಚೆನ್ನಾಗಿ ಬಳಸಿಕೊಳ್ಳುವ ಒಪ್ಪಂದಕ್ಕೆ ಎರಡೂ ಬಣಗಳ ನಾಯಕರು ನಿಧಾನಕ್ಕೆ ಒಲವು ತೋರಿದಂತೆ ಕಾಣಿಸುತ್ತಿದೆ. ಬಹುಶಃ ಅದು ಯಶಸ್ವಿಯಾದಲ್ಲಿ ರಾಜ್ಯದ ಜನರು ಒಳ್ಳೆಯ ಆಡಳಿತವನ್ನು ನಿರೀಕ್ಷಿಸಬಹುದಾಗಿದೆ.

ಇನ್ನು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಬೆಂಬಲಿಗ ಸಚಿವರ ಪೈಕಿ ಹೆಚ್ಚು ಮಾತನಾಡುತ್ತಿರುವವರೆಂದರೆ ಸಚಿವ ಕೆ.ಎನ್. ರಾಜಣ್ಣ. ಇತ್ತೀಚೆಗೆ ಅವರು ಬಹಿರಂಗವಾಗಿಯೇ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಹೈಕಮಾಂಡ್‌ ಕೂಡ ಅಸಮಾಧಾನಗೊಂಡಿದೆ ಎನ್ನಲಾಗುತ್ತಿದೆ. ಪಕ್ಷದಲ್ಲಿ ಸೀನಿಯರ್‌ ಲೀಡರ್‌ ಆಗಿ ರಾಜಣ್ಣ ಪಕ್ಷದ ಪರಿಸ್ಥಿತಿಯನ್ನು ಅರಿತುಕೊಂಡು ಪಕ್ಷದ ರಾಜಕೀಯ ವರ್ಚಸ್ಸಿಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕಿರುವುದು ಅನಿವಾರ್ಯವಿದೆ. ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸೇರಿದಂತೆ ಕೆಲವರಿಗೆ ಭವಿಷ್ಯದಲ್ಲಿ ಕಾಂಗ್ರೆಸ್ ನಲ್ಲೇ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆಗಳಿವೆ. ಅವರ್ಯಾರೂ ಇಲ್ಲಿ ಬಿಟ್ಟರೆ ಬಿಜೆಪಿ ಅಥವಾ ಇನ್ನೆಲ್ಲಿಗೋ ಹೋಗುವವರಲ್ಲ. ಅಥವಾ ಬಂಡಾಯ ಎದ್ದು ಸ್ವತಂತ್ರವಾಗಿ ಹೋರಾಡುತ್ತೇನೆ ಎನ್ನುವುದಕ್ಕೆ ಅವರಿಗೆ ಬೆಂಬಲಿಗರೂ ಹೆಚ್ಚಿನ ಮಟ್ಟದಲ್ಲಿಲ್ಲ. ಹಾಗಾಗಿ ಯಾರೋ ಒಬ್ಬರಿಂದ ಖಾಲಿ ಆಗುವ ಸ್ಥಾನಕ್ಕಾಗಿ ಇವರೆಲ್ಲಾ ಲಾಭಕ್ಕಾಗಿ ಕಾದು ಕುಳಿತಿರುವುದು ಸಹಜ.

ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಶಿವಕುಮಾರ್ ಅವರನ್ನು ಬದಲಿಸುವ ವಿಚಾರದಲ್ಲಿ ಹೈಕಮಾಂಡ್ ಆಸಕ್ತಿ ತೋರಿಸುತ್ತಿಲ್ಲ. ಕಾಂಗ್ರೆಸ್ ಪಾಲಿಗೆ ಸಂಜೀವಿನಿಯಂತಿರುವ ಶಿವಕುಮಾರ್, ವಿವಿಧ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ತಮ್ಮೆಲ್ಲ ಶಕ್ತಿಯನ್ನೂ ಪಣಕ್ಕಿಟ್ಟಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ನಿಧಾನವಾಗಿ ಸಂಘಟನಾತ್ಮಕವಾಗಿ ಕುಸಿಯುತ್ತಿರುವ ಸನ್ನಿವೇಶದಲ್ಲಿ ಒಕ್ಕಲಿಗರ ಪ್ರಮುಖ ನಾಯಕನಾಗಿ ಶಿವಕುಮಾರ್ ರೂಪುಗೊಳ್ಳುತ್ತಿದ್ದಾರೆ. ಈ ಹಂತದಲ್ಲಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಆ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವುದು ಹೈಕಮಾಂಡ್‌ ಗೆ ಚೆನ್ನಾಗಿ ತಿಳಿದಿದೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರನ್ನೂ ಕೆಳಗಿಳಿಸುವುದಕ್ಕೂ ಹೈಕಮಾಂಡ್‌ ತಯಾರಿಲ್ಲ. ಒಂದುವೇಳೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ʼಅಂಹಿಂದʼ ವರ್ಗದ ವಿರೋಧವೂ ಎದುರಾಗುತ್ತದೆ. ಹಾಗಾಗಿ ಈ ಅವಧಿಗೆ ಸಿಎಂ ಆಗಿ ಸಿದ್ದರಾಮಯ್ಯ ಅವರನ್ನೇ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಅವರನ್ನೇ ಮುಂದುವರಿಸುವಂತೆ ಮಾಡಿದರೇ ಉಳಿದವರನ್ನು ಹೇಗಾದರೂ ಸಮಧಾನ ಪಡಿಸಬಹುದೆಂಬ ಆಲೋಚನೆಯಲ್ಲಿ ಹೈಕಮಾಂಡ್‌ ಇದ್ದಂತಿದೆ. ಗೊತ್ತಿಲ್ಲ ʼಮೇʼ ಕಳೆದ ಮೇಲೆ ಏನೂ ಆಗಬಹುದು. ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ

 

No comments:

Post a Comment